Monday, August 25, 2008

ಸಂಪಿಗೆ ಮರ

ನೀವು ಸಾಗರದಿಂದ ಗುಬ್ಬಗೋಡಿಗೆ ಹೋಗುವ ಟಾರ್ ರಸ್ತೆಯಲ್ಲಿ ಸುಮಾರು ಏಳು ಕಿಲೋಮೀಟರ್ ಸಾಗಿಬಂದ ನಂತರ, ರಸ್ತೆಯ ಎಡಗಡೆಗೆ ಒಂದು ತ್ರಿಕೋಣಾಕೃತಿಯ ಕಟ್ಟೆಯೂ, ಆ ಕಟ್ಟೆಯ ಗೋಡೆಯ ಮೇಲೆ ಕಪ್ಪಕ್ಷರದಿಂದ ಬರೆದ 'ಬೆಂಕಟವಳ್ಳಿ' ಎಂಬ ಬೋರ್ಡೂ ಕಾಣುತ್ತದೆ. ಅದೇ ನನ್ನ ಅಜ್ಜನ ಮನೆಯು. 'ಅದೇ' ಎಂದರೆ ಆ ಕಟ್ಟೆಯಲ್ಲ; ಆ ಕಟ್ಟೆಯ ಪಕ್ಕದ, ತಿರುವುಮುರುವಿನ, ಸೀದಾ ಇಳುಕಲಿನ, ಒಂದು ಕಡೆ ಬೆಟ್ಟವೂ ಇನ್ನೊಂದು ಕಡೆ ಪ್ರಪಾತವೂ ಇರುವ ಮಣ್ಣಿನ ರಸ್ತೆಯಲ್ಲಿ ಇಳಿದು ಹೋದರೆ ಸಿಗುವುದು ನನ್ನ ಅಜ್ಜನ ಮನೆ. ಅಜ್ಜನ ಮನೆಯ ಹಿಂದಿರುವ ಬೆಟ್ಟವನ್ನು ಈ ಕಡೆಯಿಂದ ಹತ್ತಿ ಆ ಕಡೆ ಇಳಿದರೆ ನೀವು ವರದಹಳ್ಳಿಯಲ್ಲಿರುತ್ತೀರಿ. ಹಿಂದೆಲ್ಲ ನನ್ನ ಅಮ್ಮ-ಮಾವಂದಿರೆಲ್ಲ ಪ್ರತಿ ಶನಿವಾರ-ಭಾನುವಾರ ಶ್ರೀಧರ ಸ್ವಾಮಿಗಳ ಪ್ರವಚನ ಕೇಳಲು ಇದೇ ಗುಡ್ಡ ಹತ್ತಿಳಿದು ವರದಹಳ್ಳಿಗೆ ಹೋಗುತ್ತಿದ್ದರಂತೆ. ಪ್ರವಚನ ಮುಗಿದ ನಂತರ ಶ್ರೀಧರ ಸ್ವಾಮಿಗಳು ಎಲ್ಲರಿಗೂ ಮಂತ್ರಾಕ್ಷತೆ ಕೊಡುತ್ತಿದ್ದರಂತೆ ಮತ್ತು ಅಮ್ಮ-ಮಾವರಂತಹ ಸಣ್ಣ ಮಕ್ಕಳಿಗೆ ತಮ್ಮ ಬಳಿಯಿದ್ದ ಹಣ್ಣು-ಹಂಪಲನ್ನೆಲ್ಲ ಕೊಡುತ್ತಿದ್ದರಂತೆ. "ಆವಾಗ ಪ್ರವಚನ ಎಲ್ಲಾ ನಮ್ಗೆ ಎಲ್ಲಿ ಅರ್ಥ ಆಗ್ತಿತ್ತು? ಹಣ್ಣು ಸಿಗ್ತಲಾ ಅಂತ ಗುಡ್ಡ ಹತ್ತಿಳ್ದು ವದ್ಧಳ್ಳಿಗೆ ಹೋಗ್ತಿದ್ಯ. ಈಗ ಹಣ್ಣು ಬಿಟ್ಟು ಏನು ಕೊಡ್ತಿ ಅಂದ್ರೂ ಗುಡ್ಡ ಹತ್ತಕ್ಕೆ ಹರಿಯದಿಲ್ಲೆ..!" ನೆನಪು ಮಾಡಿಕೊಳ್ಳುತ್ತಾ ಹೇಳುತ್ತಾಳೆ ಅಮ್ಮ.

ಅದಿರಲಿ, ನಾನಾಗ ಹೇಳಿದೆನಲ್ಲ, ಸಾಗರದಿಂದ ಏಳು ಕಿಲೋಮೀಟರ್ ಸಾಗಿಬಂದ ನಂತರ ಸಿಗುವ ಕಟ್ಟೆ, ಈ ಕಟ್ಟೆಯ ಬಾಜೂ, ಕಟ್ಟೆಗೆ ಸದಾ ನೆರಳಾಗಿ, ಒಂದು ಬೃಹತ್ ಸಂಪಿಗೆ ಮರವಿದೆ. ರಸ್ತೆಯ ಬಲಬದಿಗೆ ಲೋಕೋಪಯೋಗಿ ಇಲಾಖೆಯವರು ಕಟ್ಟಿಸಿದ ಬಸ್‌ಸ್ಟ್ಯಾಂಡ್ ಇದೆಯಾದರೂ ಯಾರೂ ಅದನ್ನು ಬಳಸುವುದಿಲ್ಲ. ಸದಾ ಅದರೊಳಗೆ ಹೇರಳ ಕಸ ಶೇಖರವಾಗಿರುತ್ತದೆ. ಬಿಂದಿಲು-ಬಲೆ ಕಟ್ಟಿಕೊಂಡಿರುತ್ತದೆ. ದನಕರುಗಳು ಅದನ್ನು ಕೊಟ್ಟಿಗೆ ಎಂದೇ ಭಾವಿಸಿ ಅಲ್ಲೇ ಮಲಗಿ ಮೆಲುಕು ಹಾಕುತ್ತಿರುವುದನ್ನೂ ಕಾಣಬಹುದು. ವರ್ಷ-ಎರಡು ವರ್ಷಕ್ಕೊಮ್ಮೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಬಸ್‌ಸ್ಟಾಂಡನ್ನು ನವೀಕರಣಗೊಳಿಸುವ ನೆಪದಲ್ಲಿ ಪೇಯಿಂಟ್ ಮಾಡಿಸಿ, ಒಡೆದ ಹಂಚುಗಳನ್ನು ಬದಲಿಸಿ, ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಾರೆ. ಬಸ್ಸಿಗೆ ಕಾಯುವ ಊರಿನ ಜನ ಯಾವಾಗಲೂ ನಿಲ್ಲುವುದು ಸಂಪಿಗೆ ಮರದ ಕೆಳಗೇ. ಬಸ್ ಬರುವುದು ತಡವಾಗಿ, ನಿಂತೂ ನಿಂತೂ ಸುಸ್ತಾದರೆ ಸಂಪಿಗೆ ಮರದ ಬುಡದಲ್ಲಿರುವ ತ್ರಿಕೋಣಾಕಾರದ ಕಟ್ಟೆಯ ಮೇಲೆ ಕೂರುತ್ತಾರೆ. ಕೆಲವರು ಮರದ ಬುಡದಲ್ಲೇ, ಮೇಲೆದ್ದು ಬಂದಿರುವ ಮರದ ಬೃಹತ್ ಬೇರುಗಳ ಮೇಲೇ ಅಂಡೂರುತ್ತಾರೆ. ಇನ್ನು ಕೆಲವರು ಟಾರ್ ರೋಡಿನ ಮೇಲೂ ಕೂರುವುದುಂಟು.

ಈ ಮರ ಯಾವುದೇ ಸಾಧಾರಣ ಸಂಪಿಗೆ ಮರದಂತೆ ಕಂಡರೂ ಇದಕ್ಕೊಂದು ಮಹತ್ವವಿದೆ. ಬೆಂಕಟವಳ್ಳಿ ಊರಿನ ಜನ ತಮ್ಮೂರಿನ ಬಸ್ ಇಳಿದು-ಹತ್ತುವ ಜಾಗವನ್ನು ಎಲ್ಲಾ ಊರಿನವರಂತೆ 'ಬಸ್‌ಸ್ಟ್ಯಾಂಡ್' ಎಂದು ಕರೆಯುವುದಿಲ್ಲ; 'ಸಂಪಿಗೆ ಮರ' ಅಂತ ಕರೆಯುತ್ತಾರೆ. ನಾವಾದರೆ 'ಬಸ್‌ಸ್ಟ್ಯಾಂಡಲ್ ಕಾದೂ ಕಾದೂ ಸಾಕಾಯ್ತು ಮಾರಾಯಾ, ಕೃಷ್ಣಾ ಬಸ್ ಬರಲೇ ಇಲ್ಲ!' ಎನ್ನುತ್ತೇವೆ. ಆದರೆ ಬೆಂಕಟವಳ್ಳಿಯ ಜನ 'ಬೇಗ್ ಬೇಗ ನಡೆ.. ಎರಡೂ ವರೆಗೆ ಕರೆಕ್ಟಾಗಿ ಬರತ್ತೆ ವರದಾ ಬಸ್ಸು ಸಂಪಿಗೆ ಮರದ ಹತ್ರ' ಎನ್ನುತ್ತಾರೆ. ಇವರು 'ಬಸ್‌ಸ್ಟ್ಯಾಂಡ್' ಶಬ್ದವನ್ನು ಬಳಸುವುದೇ ಇಲ್ಲ. ಅದರ ಜಾಗದಲ್ಲಿ ಸದಾ ಸಂಪಿಗೆ ಮರ ತೂಗುತ್ತಿರುತ್ತದೆ.

ವಸಂತ ಮಾಸದಲ್ಲಿ ನೀವೇನಾದರೂ ಇಲ್ಲಿಗೆ ಬಂದರೆ ಈ ಮರದ ಗೆಲ್ಲ ಮೇಲೆ ಕೋಗಿಲೆ ಕೂತು ಹಾಡುವುದನ್ನು ಕೇಳಬಹುದು. 'ಸಂಪಿಗೆಯೆಲ್ಲೋ ಕೋಗಿಲೆಯೆಲ್ಲೋ?' ಎಂಬ ಉದ್ಘಾರ ನಿಮ್ಮಿಂದ ಹೊರಬೀಳುವುದಂತೂ ಖಚಿತ. ಆದರೆ ಹಾಗೆ ಹಾಡು ಕೇಳಬೇಕೆಂದರೆ ನೀವು ಈ ಮರದಿಂದ ತುಸು ದೂರದಲ್ಲಿ, ಮರೆಯಲ್ಲಿ ನಿಂತಿರಬೇಕಾಗುತ್ತದೆ. ಮರದ ಕೆಳಗೇ ಇದ್ದರೆ ಕೋಗಿಲೆಗೆ ಸಂಕೋಚವಾಗಿ ಹಾಡುವುದಿಲ್ಲ. ಭಯಗೊಂಡು ಹಾರಿಹೋದರೂ ಹೋಗಬಹುದು. ನೀವು ದೂರದಲ್ಲಿ, ಅಗೋ, ಆ ಟ್ರಾನ್ಸ್‌ಫಾರ್ಮರ್ ಕಂಬದ ಬಳಿ ಒಂದು ಸಣ್ಣ ಗುಡ್ಡ ಇದೆಯಲ್ಲ, ಅದರ ಮೇಲೆ ಕುಳಿತುಕೊಳ್ಳಬೇಕು. ಆಗ ಈ ಕೋಗಿಲೆ, ವಧುವನ್ನು ನೋಡಲು ವರನ ಮನೆಯವರು ಹೋದಾಗ ತಲೆ ತಗ್ಗಿಸಿಕೊಂಡು ನಾಚುತ್ತಾ ಹಾಡುವ ಹುಡುಗಿಯಂತೆ, ಸುಮಧುರವಾಗಿ ಹಾಡುತ್ತದೆ. ಆ ಕೋಗಿಲೆ ಹಾಡು, ಪಕ್ಕದ ಗಹ್ವರದಲ್ಲಿಳಿದು, ಗಿರಿಗೆ ಬಡಿದು, ದೊಡ್ಡ ಮರಗಳ ಕಂಕುಳಲ್ಲಿ ಕಚಗುಳಿಯಾಗುವಂತೆ ಹಾದು ಪ್ರತಿಧ್ವನಿಸುವಾಗ ನಿಮಗದು ಹತ್ತಿರದಲ್ಲೆಲ್ಲೋ ಮತ್ತೊಂದು ಕೋಗಿಲೆ ಇದೆಯೇನೋ ಎಂಬ ಭ್ರಮೆ ತರಿಸುತ್ತದೆ. ಎರಡು ಕೋಗಿಲೆಗಳ ಜುಗಲ್‌ಬಂದಿಯಂತೆ ಭಾಸವಾಗುತ್ತದೆ.

ಸಂಪಿಗೆ ಮರ ವರ್ಷಕ್ಕೊಮ್ಮೆ ಹೂ ಬಿಡುತ್ತದೆ. ಆಗ ಈ ಮರದ ಸುತ್ತೆಲ್ಲ ಸಂಪಿಗೆಕಂಪು ಪೂಸಿಕೊಂಡಿರೊತ್ತೆ. ಬಸ್ಸಿಗೆ ಹೋಗಲೆಂದು ಬೆಂಕಟವಳ್ಳಿಯ ಮಣ್ಣು ರಸ್ತೆಯ ಏರು ಹತ್ತುತ್ತಿರುವವರು ಕೊನೆಯ ತಿರುವಿನಲ್ಲಿರುವಾಗಲೇ ಇದರ ಘಮ ಮೂಗಿಗಡರಿ ಅವರ ಏದುಸಿರೂ ಆಪ್ಯಾಯಮಾನವಾಗುತ್ತದೆ. ತಮ್ಮ ತಮ್ಮ ವಾಹನಗಳಲ್ಲಿ ಟಾರು ರಸ್ತೆಯಲ್ಲಿ ಗುಬ್ಬಗೋಡಿನ ಕಡೆ ಹೊರಟವರು, ಗುಬ್ಬಗೋಡಿನಿಂದ ಸಾಗರಕ್ಕೆ ಹೊರಟವರು ಸಂಪಿಗೆ ಮರ ಹೂ ಬಿಡುವ ಕಾಲದಲ್ಲಿ ಇಲ್ಲಿ ಐದು ನಿಮಿಷ ನಿಲ್ಲಿಸಿ, ಬಡಿಗೆಯಿಂದ ಬಡಿದು, ಒಂದೆರಡಾದರೂ ಹೂವುದುರಿಸಿಕೊಂಡು, ಅದರ ಪರಿಮಳ ಹೀರುತ್ತಾ ಮುಂದೆ ಸಾಗುತ್ತಾರೆ.

ನನ್ನ ಅಜ್ಜನ ಮನೆ ಊರಿನಲ್ಲಿ ಸಾಗರದ ಕಾಲೇಜಿಗೆ ಹೋಗುವ ಅತಿ ಚಂದದ ಹುಡುಗಿಯರು ಇದ್ದಾರೆ ಎಂದು ನಾನು ಹೇಳಿದರೆ ನೀವದನ್ನು ಆತ್ಮಪ್ರಶಂಸೆ ಎಂದು ಭಾವಿಸಬಾರದು. ಏಕೆಂದರೆ, ಹಾಗೆ ಹೇಳಿಕೊಳ್ಳುವುದರಿಂದ ನನಗೇನೂ ಲಾಭವಿಲ್ಲ. ಲಾಭವೇನಿದ್ದರೂ ಇರುವುದು ಬೆಂಕಟವಳ್ಳಿ ಮತ್ತು ಅಕ್ಕಪಕ್ಕದ ಊರಿನ ಹುಡುಗರಿಗೆ! ಬಸ್ಸು ಬರುವುದಕ್ಕೂ ಕನಿಷ್ಟ ಅರ್ಧ ಗಂಟೆ ಮುಂಚಿತವಾಗಿಯೇ ಇಲ್ಲಿಗೆ ಬಂದು ಸೇರುವ ಹುಡುಗರು, ಹುಡುಗಿಯರಿಗಾಗಿ ಕಾಯತೊಡಗುತ್ತಾರೆ. ಬೆಂಕಟವಳ್ಳಿಯ ಹಿಂದು-ಮುಂದಿನ ಊರಿನ ಹುಡುಗರೂ ಸಹ ಇಲ್ಲಿಗೇ ಬಂದು ಬಸ್ಸು ಹತ್ತುತ್ತಾರೆಂದರೆ ಅದರ ಹಿಂದೊಂದು ಗುಟ್ಟಿರಬೇಕಲ್ಲವೇ? ಅದು ಮತ್ತೇನೂ ಅಲ್ಲ: ಬಿಳಿ ಚೂಡಿದಾರು, ಮುಖಕ್ಕೆ ಕ್ರೀಮು-ಪೌಡರು, ಚಂದ ಬಾಚಿದ ಕೂದಲು, ಮ್ಯಾಚಿಂಗ್ ಕಲರ್ ಸ್ಲಿಪ್ಪರು -ಧರಿಸಿ ಚಂದದ ಬೊಂಬೆಗಳಂತೆ ತಯಾರಾಗಿ ಕಾಲೇಜಿಗೆ ಹೊರಟಿರುವ ಈ ಹುಡುಗಿಯರಿಗೆ ಸಂಪಿಗೆಯ ಪರಿಮಳ ಕೇಳಿ ಅದನ್ನು ಮುಡಿಯಬೇಕೆಂಬ ಆಸೆಯಾಗುತ್ತದಾದರೂ, ಬಡಿಗೆ ಹುಡುಕಿ, ಎತ್ತಿ ಎಸೆದು, ಹೂವು ಬೀಳಿಸಿ ಮುಡಿದುಕೊಳ್ಳಲಿಕ್ಕೆ -ತಮ್ಮ ಅಲಂಕಾರವೆಲ್ಲಾ ಎಲ್ಲಿ ಹಾಳಾಗುತ್ತದೋ ಎಂಬ ಹಿಂಜರಿಕೆ. ಇದನ್ನರಿತಿರುವ ಚಾಣಾಕ್ಷಮತಿ ಹುಡುಗರು, ಮುಂಚೆಯೇ ಇಲ್ಲಿಗೆ ಬಂದು ಹೂವನ್ನೆಲ್ಲಾ ಹುಡುಕಿ ಬಡಿದು ಕೆಡವಿ ಗುಡ್ಡೆ ಮಾಡಿ, ಹುಡುಗಿಯರು ಬರುವಷ್ಟರಲ್ಲಿ ಬೊಗಸೆ ತುಂಬ ಹೂ ಹಿಡಿದು ನಿಂತಿರುತ್ತಾರೆ. ಹೀಗಾಗಿ, ಸಂಪಿಗೆ ಹೂ ಬಿಡುವ ಕಾಲದಲ್ಲಿ ನೀವು ಈ ಕಡೆ ಬಂದರೆ, ಇನ್ನೂ ಮಂಜು ಮುಸುಕಿದ ಮುಂಜಾವಿನಲ್ಲಿ, ಮೊದಲ ಬಸ್ಸಿನ್ನೂ ಬರುವುದಕ್ಕೆ ಸಮಯವಿರಲು, ಬೆಂಕಟವಳ್ಳಿಯ ಸಂಪಿಗೆ ಮರದ ಕೆಳಗೆ ಹುಡುಗರು ಹುಡುಗಿಯರಿಗೆ ಹೂ ಕೊಟ್ಟು ಪ್ರತಿದಿನವೂ 'ಪ್ರಪೋಸ್' ಮಾಡುವ ಅಮೋಘ ಸಿನಿಮಾ ದೃಶ್ಯವನ್ನು ಕಾಣಬಹುದು!

ಹಾಂ, ಸಿನಿಮಾ ಎಂದಾಕ್ಷಣ ನೆನಪಾಯಿತು. ಪುಟ್ಟಣ್ಣ ಕಣಗಾಲರ 'ಅಮೃತ ಘಳಿಗೆ' ಸಿನಿಮಾ ಇದೆಯಲ್ಲಾ, ಆ ಸಿನಿಮಾ ಚಿತ್ರೀಕರಿಸಲ್ಪಟ್ಟಿರುವುದು ಇದೇ ಸಂಪಿಗೆ ಮರದ ಸುತ್ತಲಿನ ಪ್ರದೇಶದಲ್ಲಿ. ಈ ಸಂಪಿಗೆ ಮರವೂ ಆ ಚಿತ್ರದಲ್ಲಿ ಹಸಿರು ಸೀರೆ ಉಟ್ಟು ಚಂದ ಪೋಸ್ ಕೊಟ್ಟಿರುವುದನ್ನು ನೋಡಿದರೆ ಇದಕ್ಕೆ ಅಭಿನಯದಲ್ಲಿ ಆಸಕ್ತಿಯಿತ್ತೇ ಎಂಬ ಅನುಮಾನ ಬರುತ್ತದೆ. ಈ ಸಂಪಿಗೆ ಮರದಿಂದ ಸುಮಾರು ಒಂದೂ ವರೆ ಮೈಲಿ ದೂರದಲ್ಲಿರುವ 'ತುಂಬೆ' ಎಂಬ ಊರಿನಲ್ಲಿ ಒಬ್ಬ ಭಾರೀ ಶ್ರೀಮಂತರ ಮನೆಯಿದೆ. 'ತುಂಬೆ ಹೆಗ್ಡೇರು' ಅಂತಲೇ ಅವರು ಜನಜನಿತರು. ಅವರ ಮನೆಯಲ್ಲೇ ನಡೆದದ್ದು 'ಅಮೃತ ಘಳಿಗೆ'ಯ ಮುಕ್ಕಾಲು ಪಾಲು ಚಿತ್ರೀಕರಣ. ಅದು ನಡೆಯುವಾಗ ಅಮ್ಮ ತನ್ನ ಗೆಳತಿಯರೊಡಗೂಡಿ ಅಲ್ಲಿಗೆ ಹೋದದ್ದು, ಅಲ್ಲಿ ಶ್ರೀಧರ್, ರಾಮಕೃಷ್ಣ, ಪುಟ್ಟಣ್ಣ -ಮುಂತಾದವರನ್ನು ನೋಡಿದ್ದನ್ನು ನೆನಪಿಟ್ಟುಕೊಂಡಿದ್ದಾಳೆ. 'ಅಮೃತ ಘಳಿಗೆ' ಸಿನಿಮಾ ನಮ್ಮೂರ ಡಾ| ವೆಂಕಟಗಿರಿ ರಾವ್ ಅವರ 'ಅವಧಾನ' ಕಾದಂಬರಿಯನ್ನು ಆಧರಿಸಿದ್ದು ಎಂದೆಲ್ಲ ಹೇಳಿದರೆ ನಾನು ಸಂಪಿಗೆ ಮರ ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತಿದ್ದೇನೆ ಎಂದು ನೀವು ಆಪಾದಿಸಬಾರದು. ಏನು ಮಾಡಲಿ? ಸಂಪಿಗೆ ಮರ ಎಂದಾಕ್ಷಣ ನನಗೆ ಅವೆಲ್ಲ ನೆನಪಾಗುತ್ತದೆ.

ಬೆಂಕಟವಳ್ಳಿ ಬಸ್‌ಸ್ಟ್ಯಾಂಡ್‌ನ ಹತ್ತಿರದಲ್ಲಿ ಯಾವುದೇ ಮನೆಯಾಗಲೀ, ಅಂಗಡಿಯಾಗಲೀ ಇಲ್ಲವಾದ್ದರಿಂದ - ಅದೊಂದು ನಿರ್ಜನ ಪ್ರದೇಶವಾದ್ದರಿಂದ, ಅದರ ಸುತ್ತ ಕೆಲವೊಂದು ನಿಗೂಢ ಘಟನೆಗಳೂ ನಡೆದ ಸುದ್ಧಿಗಳಿವೆ. ಉದಾಹರಣೆಗೆ, ಸಂಪಿಗೆ ಮರದ ಕೆಳಗೆ ಬಸ್ಸಿಗೆ ಕಾಯುತ್ತಿದ್ದ ಸುಜಾತಕ್ಕನನ್ನು ಯಾರೋ ಬೆದರಿಸಿ ದುಡ್ಡು ಕಿತ್ತುಕೊಂಡರಂತೆ ಎಂಬುದು; ಬಸ್‌ಸ್ಟ್ಯಾಂಡ್ ಒಳಗೆ ಪ್ರಕಾಶಣ್ಣ ಒಂದು ಮೂಟೆ ಕಂಡನೆಂದೂ - ಅದು ಕಳ್ಳಸಾಗಣೆದಾರರು ಬಚ್ಚಿಟ್ಟಿದ್ದ ಗಂಧವೆಂದೂ - ಮರುದಿನ ನೋಡುವಷ್ಟರಲ್ಲಿ ಇರಲಿಲ್ಲವೆಂದೂ; ಬಸ್‍ಸ್ಟ್ಯಾಂಡ್ ಪಕ್ಕದಲ್ಲಿರುವ ಟ್ರಾನ್ಸ್‌ಫಾರ್ಮರ್ ಪದೇ ಪದೇ ಹೋಗುವುದಕ್ಕೆ ಕಾರಣ ಸಂಪಿಗೆ ಮರದಲ್ಲಿರುವ ಯಾವುದೋ ಕ್ಷುದ್ರಶಕ್ತಿಯೆಂದೂ -ಹೀಗೆ. ಮತ್ತೆ, ಇವೆಲ್ಲಕ್ಕಿಂತಲೂ ಆಸಕ್ತಿಕರವಾದ ಮತ್ತೊಂದು ಘಟನೆಗೆ ಕಣ್ಣು-ಕಿವಿಯಾಗುವ ಅವಕಾಶ ನನಗೊದಗಿ ಬಂತು.

ಈ ಸಂಪಿಗೆ ಮರದ ಬಳಿ ಒಬ್ಬ ಬೆತ್ತಲೆ ಹುಡುಗಿ ಓಡಾಡುತ್ತಿದ್ದಳು ಎಂಬ ಸುದ್ಧಿ ಸ್ಪೋಟವಾದದ್ದು ಬಿರುಬೇಸಿಗೆಯ ಸಂಜೆಯೊಂದರಲ್ಲಿ. ನಾನು ಬೇಸಿಗೆ ರಜೆಗೆಂದು ಅಜ್ಜನ ಮನೆಗೆ ಹೋಗಿದ್ದೆ. ಅದಾಗ ತಾನೆ ಆರೂವರೆ ಬಸ್ಸಿಗೆ ಸಾಗರದಿಂದ ಬಂದ ನನ್ನ ಮಾವನಿಗೆ, ಮಾವನೊಂದಿಗೇ ಬಸ್ಸಿಳಿದ ರಾಘವೇಂದ್ರಣ್ಣ ಬೆಳಗ್ಗೆ ತಾನು ಕಂಡ ದೃಶ್ಯವನ್ನು ವಿವರಿಸಿದನಂತೆ: "ಚಾಲಿ ಸುಲ್ಸಿದ್ದು ನಾಕು ಚೀಲ ಆಗಿತ್ತಾ.. ಮಂಡಿಗೆ ಸಾಗ್ಸಲೆ ಆನಂದ್ ಗೌಡನ ರಿಕ್ಷಾಕ್ಕೆ ಬರಕ್ ಹೇಳಿದಿದ್ದಿ.. ಅಂವ ಒಂಭತ್ ಗಂಟಿಗೆ ಬಂದ.. ಚೀಲ ಹೇರ್ಕ್ಯಂಡು, ಆನೂ ಹೊಂಟಿ ರಿಕ್ಷಾದ್ ಮೇಲೇ ಹೇಳ್ಯಾತು.. ಸಂಪ್ಗೆ ಮರದ್ ಬುಡಕ್ ಬಪ್ಪ ಹೊತ್ತಿಗೆ ಅಲ್ಲೊಂದು ಹೆಂಗ್ಸು ಮಾರಾಯಾ.. ಎಂಥಾ? ದುಂಡಗೆ!! ಫುಲ್ ದುಂಡಗ್ ನಿಂತಿದ್ಲಪಾ..! ಕೈ ಮಾಡಿದ ಯಂಗ್ಳ ರಿಕ್ಷಾಕ್ಕೆ.. ಯಂಗಂತು ಹೆದ್ರಿಕೆ ಆಗೀ.. ಆನಂದ ಜೋರಾಗ್ ಹೊಡ್ದ ನೋಡು ರಿಕ್ಷಾನಾ.. ಕರ್ಕಿಕೊಪ್ಪದ್ ಇಳುಕ್ಲು ಇಳಿಯಹೊತ್ತಿಗೆ ಇಬ್ರಿಗೂ ಬೆವ್ರು ಇಳ್ದ್ ಹೋಗಿತ್ತು! ಎಂಥಾ- ದುಂಡಗೆ ಮಾರಾಯಾ..!"

ಮಾವ, ರಾಘವೇಂದ್ರಣ್ಣ ತನಗೆ ಹೇಳಿದ್ದನ್ನು ಹಾಗೇ ಹೇಳಿದ. ಕೇಳಿದ ನಮಗೆಲ್ಲರಿಗೂ ಆಶ್ಚರ್ಯವಾಯಿತು. ಸಂಪಿಗೆ ಮರದ ಬಳಿ! ಬೆತ್ತಲೆ ಹುಡುಗಿ! "ಯಾರೂಂತ ಏನಾರು ಗೊತ್ತಾತನಾ?" ಎಂದು ಮಾವ ರಾಘವೇಂದ್ರಣ್ಣನ ಬಳಿ ಕೇಳಿದನಂತೆ. ರಾಘವೇಂದ್ರಣ್ಣ "ಎಂಥೇನ, ಸರಿಯಾಗ್ ನೋಡಕ್ ಆಗಲ್ಲೆ. ಆದರೆ ನಮ್ಮ ಕಡೆಯೋರಂತೂ ಯಾರೂ ಅಲ್ಲ ನೋಡು" ಎಂದನಂತೆ. ಅದರಲ್ಲಿ 'ಸರಿಯಾಗಿ ನೋಡಕ್ಕಾಗಲ್ಲೆ' ಎಂಬ ಮಾತು ನನಗೆ ಮೋಟುಗೋಡೆಯಾಚೆಗಿನ ಆಲೋಚನೆಗಳಿಗೆ ಕೊಂಕಾಯಿತಾದರೂ, ದೇವರ ಮನೆಯಿಂದ ಬಂದ ಅಜ್ಜಿ "ಮಾಣೀ, ಮೂರ್ ಸಂಜೆ ದೀಪ ಹಚ್ಚೋ ಹೊತ್ತಿಗೆ ಎಂಥೆಂತೆಲ್ಲಾ ಹೇಳಡ.. ಮೊದ್ಲು ಕೈಕಾಲ್ ತೊಳ್ಕಂಡ್ ಬಂದು ಕಾಪಿ ಕುಡಿ" ಎಂದದ್ದರಿಂದ ನನ್ನ ಆಲೋಚನೆಗಳಿಗೆ ಕಡಿವಾಣ ಹಾಕಬೇಕಾಯಿತು. ಆದರೆ ಅಂತಹ ರೋಚಕ ಸುದ್ಧಿ ಪ್ರಕಟಗೊಂಡಾಗ ಅದರ ಬಗ್ಗೆ ನಾಲ್ಕು ಮಾತಾಡದೇ, ಚರ್ಚಿಸದೇ ಅಲ್ಲಿಗೇ ನಿಲ್ಲಿಸಲಿಕ್ಕೆ ಬರುತ್ತದೆಯೇ? ಮಾವ ಹಾಗೆ ಕಥೆ ಹೇಳುವಾಗ ಅಲ್ಲಿ ಏಳು ಗಂಟೆ ವಾರ್ತೆ ನೋಡಲಿಕ್ಕೆಂದು ಬಂದು ಕೂತಿದ್ದ ಅಕ್ಕಪಕ್ಕದ ಮನೆಯವರನೇಕರೂ ಇದ್ದರು. ಹೀಗಾಗಿ, ಅಜ್ಜಿಯ ಕಿವಿಮಾತು ಯಾರ ಕಿವಿಗೂ ಬೀಳಲಿಲ್ಲ. "ಅಲ್ದಾ, ಬದ್ಧನಡನಾ?" ಎಂದು ಅನಂತಣ್ಣ ಬಾಯಿ ಹಾಕಿದರೆ, "ಇಶೀ, ಅದು ಹೆಂಗ್ ಸಾಧ್ಯನಾ? ರಾಘವೇಂದ್ರಣ್ಣ ಏನ್ ನೋಡಿ ಏನ್ ತಿಳ್ಕಂಡ್ನಾ ಎಂಥೇನ!" ಎಂದು ಯಶೋಧಕ್ಕ ರಾಘವೇಂದ್ರಣ್ಣನ ಲೌಕಿಕ ಜ್ಞಾನದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದಳು.

"ರಾಘವೇಂದ್ರಣ್ಣ ಒಬ್ನೇ ಏನು ಅಲ್ದಲಾ? ಆನಂದ್ ಗೌಡನೂ ನೋಡಿದ್ದ.. ರಿಕ್ಷಾದ ಹಿಂದಕೇ ಅದು ಸುಮಾರ್ ದೂರ ಓಡ್ಯೂ ಬಂತಡ.. ಕನ್ನಡೀಲಿ ಕಾಣ್ತಿತ್ತಡ ಆನಂದಂಗೆ.." ಎಂದ ಮಾವ. ನಾನಾಗ ಇನ್ನೂ ಮೊದಲ ವರ್ಷದ ಕಾಲೇಜು ಹುಡುಗನಾಗಿದ್ದರಿಂದ 'ಇಂತಹ' ವಿಷಯದ ಬಗ್ಗೆ ಆಸಕ್ತಿ ಇರುವವನಂತೆ ನಡೆದುಕೊಳ್ಳುವುದು ಉಚಿತವಲ್ಲೆಂದರಿತು ಸುಮ್ಮನಿದ್ದೆ. ಏಕೆಂದರೆ, ನಾನೇನಾದರೂ ಬಾಯಿ ಬಿಟ್ಟಿದ್ದರೆ, ತಕ್ಷಣ ಎಲ್ಲರೂ ನನ್ನೆಡೆಗೆ ನೋಡುತ್ತಿದ್ದರು ಮತ್ತು ಅಜ್ಜಿ "ಅಪ್ಪೀ ನಿಂಗೆ ಇವೆಲ್ಲ ಎಂಥೂ ಗೊತ್ತಾಗ್ತಲ್ಲೆ; ನೀ ಸುಮ್ಮನ್ ಕೂತ್ಗ" ಎಂದು ಬಾಯಿ ಮುಚ್ಚಿಸುತ್ತಿದ್ದಳು. ನಮ್ಮ ಮನೆಗೆ ಫೋನ್ ಮಾಡಿದಾಗ ಅಮ್ಮನ ಬಳಿ ಸೂಕ್ಷ್ಮವಾಗಿ 'ಅಪ್ಪಿಯ ಬಗ್ಗೆ ಒಂದು ಕಣ್ಣಿಟ್ಟರಲು' ಅಜ್ಜಿ ಸೂಚನೆ ಕೊಟ್ಟರೂ ಕೊಡುವ ಸಾಧ್ಯತೆ ಇತ್ತು. ಹೀಗಾಗಿ, ನಾನು ಏನೂ ಅರಿಯದವನಂತೆ ಸುಮ್ಮನಿದ್ದುಬಿಟ್ಟಿದ್ದೆ. ಒಟ್ಟಿನಲ್ಲಿ ಮರುದಿನ ಬೆಳಗಾಗುವುದರೊಳಗಾಗಿ ಈ ಪ್ರಕರಣ ಬೆಂಕಟವಳ್ಳಿ ಊರಲೆಲ್ಲ ಗುಸುಗುಸು ಸುದ್ಧಿಯಾಗಿತ್ತು. ರಾಘವೇಂದ್ರಣ್ಣನ ಹೆಂಡತಿ ಮಾತ್ರ ಯಾಕೋ ಸೆಟಗೊಂಡ ಮುಖದಲ್ಲಿ ಓಡಾಡುತ್ತಿರುವುದನ್ನೂ ನಾನು ಗಮನಿಸದಿರಲಿಲ್ಲ.

ಅದಾಗಿ ಮೂರ್ನಾಲ್ಕು ದಿನಗಳ ನಂತರ, ಕಲ್ಲುಕೊಪ್ಪದ ಬಳಿ ಹೀಗೇ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂದು ಸುದ್ಧಿಯಾಯಿತು. ಕಲ್ಲುಕೊಪ್ಪವೆಲ್ಲಿ ಬೆಂಕಟವಳ್ಳಿಯೆಲ್ಲಿ? ಕಲ್ಲುಕೊಪ್ಪ ಬೆಂಕಟವಳ್ಳಿಗೆ ಹದಿನೈದಿಪ್ಪತ್ತು ಮೈಲಿ ದೂರದಲ್ಲಿರುವ ಹಳ್ಳಿ. ಹಾಗಾದರೆ ಇದೂ ಅದೇ ಹುಡುಗಿಯೇ? ಅಥವಾ ಬೇರೆ ಹುಡುಗಿಯೇ? ಅರಳಿಕಟ್ಟೆ ಬಳಿ, ಅಡಿಕೆ ಸುಲಿಯುವಲ್ಲಿ, ರಸ್ತೆ-ತೋಟದಲ್ಲಿ ಯಾರಾದರೂ ಎದುರು ಸಿಕ್ಕಾಗ -ಹೀಗೆ ಎರಡು ಬಾಯಿ ಸೇರಿತೆಂದರೆ ಅಲ್ಲಿ ಬೆತ್ತಲೆ ಹುಡುಗಿ ಕಾಣಿಸಿಕೊಂಡ ಬಿಸಿಬಿಸಿ ಸುದ್ಧಿ ಚರ್ಚೆಯಾಯಿತು. 'ಜೋಗದಲ್ಲಿ ಯಾವುದೋ ಸಿನಿಮಾದ ಶೂಟಿಂಗ್ ನಡೆಯುತ್ತಿದೆಯಂತೆ. ಅಲ್ಲಿಂದೊಬ್ಬ ನಟಿ ಕಾಣೆಯಾಗಿದ್ದಾಳಂತೆ. ಪೋಲೀಸರು ಹುಡುಕುತ್ತಿದ್ದಾರಂತೆ' ಎಂದು ಸಹ ಯಾರೋ ಹೇಳಿಬಿಟ್ಟರು. ಈ ಎಲ್ಲ ಸುದ್ಧಿಗಳು ಹವೆಗೆ ಭಯವನ್ನು ಬೆರೆಸಿಬಿಟ್ಟವು. ಜನ ಸಂಪಿಗೆ ಮರದ ಬಳಿ ಒಬ್ಬರೇ ಹೋಗುವುದಕ್ಕೆ ಹೆದರತೊಡಗಿದರು. ಹೆಂಗಸರನ್ನು ಬಸ್ ಹತ್ತಿಸಲಿಕ್ಕೆ ಜೊತೆಗೆ ಯಾರಾದರೂ ಗಂಡಸರು ಬರಬೇಕಾದಂತಹ ಪರಿಸ್ಥಿತಿ ಬಂತು. ಬಸ್ಸು ಹತ್ತಿದ ಹೆಂಗಸರು ತಮ್ಮ ಗಂಡಂದಿರಿಗೆ 'ಬೇಗ ಮನೆ ಮುಟ್ಕ್ಯಳಿ' ಎಂದು ಎಚ್ಚರಿಕೆ ನೀಡುವುದನ್ನೂ ಮರೆಯುತ್ತಿರಲಿಲ್ಲ.

ನಾನು ಈ ವಿದ್ಯಮಾನವನ್ನೆಲ್ಲಾ ಕಂಡೂ-ಕೇಳಿಯೂ ಸುಮ್ಮನೆ ಓಡಾಡಿಕೊಂಡಿದ್ದೆ. ಯಾರಿಗೂ ತಿಳಿಯದಂತೆ ನಾನೊಬ್ಬನೇ ಸಂಪಿಗೆ ಮರದ ಬಳಿ ಹೋಗಿ ಸುಮಾರು ಒಂದು ತಾಸು ಅಡ್ಡಾಡಿಕೊಂಡು ಬಂದಿದ್ದೆ. ಇದರ ಹಿಂದಿರುವ ರಹಸ್ಯವನ್ನು ಒಂಟಿಯಾಗಿ ಭೇದಿಸಿ ಭೇಷ್ ಎನಿಸಿಕೊಳ್ಳಬೇಕೆಂಬ ಇರಾದೆಯೂ ನನಗಿತ್ತೋ ಏನೋ ಈಗ ನೆನಪಿಲ್ಲ. ಆದರೆ ನನ್ನ ದುರಾದೃಷ್ಟಕ್ಕೆ ಆಗ ಯಾವ ನಗ್ನ ಸುಂದರಿಯ ದರ್ಶನವೂ ನನಗಾಗಲಿಲ್ಲ.

ಈ ಬಿಸಿಬಿಸಿ ಸುದ್ಧಿಯ ಗುಸುಗುಸು-ಪಿಸಪಿಸಗಳು ನಿಲ್ಲಬೇಕಾದರೆ ಮತ್ತೊಂದು ಗರಮಾಗರಂ ಸುದ್ಧಿ ಬರಬೇಕಾಯಿತು: ಸಂಪಿಗೆ ಮರದಿಂದ ಮೂವತ್ತು ಮೈಲಿಗೂ ಹೆಚ್ಚು ದೂರದಲ್ಲಿರುವ ಕಾನುಬೈಲು ಎಂಬ ಊರಿನ ಕೆರೆಯಲ್ಲಿ ಒಂದು ಹೆಣ್ಣಿನ ಶವ ಸಿಕ್ಕಿತಂತೆ, ಜನ ಸೇರಿ, ಪೋಲೀಸರು ಬಂದು, ಪೋಸ್ಟ್‌ಮಾರ್ಟೆಮ್ ಮಾಡಿ, ಶವವನ್ನು ಯಾರೂ ಗುರುತಿಸದಿದ್ದರಿಂದ, ಅವರೇ ಗುಂಡಿ ತೋಡಿ ಹುಗಿದುಬಿಟ್ಟರಂತೆ ಎಂಬುದೇ ಆ ಸುದ್ಧಿ. ಆದರೆ ಬೆಂಕಟವಳ್ಳಿ ಸಂಪಿಗೆ ಮರದ ಬಳಿ ಕಾಣಿಸಿಕೊಂಡ ಬೆತ್ತಲೆ ಹುಡುಗಿಗೂ, ಕಲ್ಲುಕೊಪ್ಪದ ಬಳಿಯೂ ಬೆತ್ತಲೆ ಹುಡುಗಿ ಕಾಣಿಸಿಕೊಂಡಳಂತೆ ಎಂಬ ಸುದ್ಧಿಗೂ, ಕಾನುಬೈಲಿನ ಕೆರೆಯಲ್ಲಿ ಸಿಕ್ಕ ಅನಾಥ ಹೆಣ್ಣು ಶವಕ್ಕೂ ಅದು ಹೇಗೆ ತಳಕು ಕಲ್ಪಿಸಿಕೊಂಡರೋ ಗೊತ್ತಿಲ್ಲ; ಅಂತೂ 'ರಾಘವೇಂದ್ರಣ್ಣ ನೋಡಿದ ಬೆತ್ತಲೆ ಹೆಂಗಸು ಕೊಲೆಯಾಗಿ ಸತ್ತು ಹೋದಳಂತೆ' ಎಂದು ಜನ ಮಾತಾಡಿಕೊಂಡರು. ಅವರಲ್ಲಡಗಿದ್ದ ಭಯವೂ ಹೋದಂತನಿಸಿತು. ನಾನು ಅಜ್ಜನ ಮನೆ ಪ್ರವಾಸ ಮುಗಿಸಿ ವಾಪಸು ಊರಿಗೆ ಹೊರಟಾಗ, ಯಾಕೋ ಈ ಸಂಪಿಗೆ ಮರವನ್ನು ಮೂರ್ನಾಲ್ಕು ಸುತ್ತು ಸುತ್ತಿ ಬಂದು, ಅದರ ಕಾಂಡವನ್ನು ತಡವಿ, ಅದರ ಎದ್ದು ಬಂದಿರುವ ಬೇರುಗಳ ಮೇಲೆಲ್ಲ ಓಡಾಡಿ, ಕೆಳಗೆ ಬಿದ್ದಿದ್ದ ಒಂದೆರಡು ತರಗೆಲೆಯನ್ನೆತ್ತಿ ಮೂಸಿ, ಬಿಸಾಕಿ ಬಂದಿದ್ದೆ. ಸಂಪಿಗೆ ಮರ ಮಾತ್ರ ನಿರುಮ್ಮಳವಾಗಿ ನೆರಳು ಸೂಸುತ್ತ ನಿಂತಿತ್ತು.

ಮೊನ್ನೆ ಊರಿಗೆ ಹೋದವನು ಅಪ್ಪನ ಬೈಕೆತ್ತಿಕೊಂಡು ಅಜ್ಜನ ಮನೆಗೆ ಹೋಗಿದ್ದೆ. ವಾಪಸು ಬರುವಾಗ ಸಂಪಿಗೆ ಮರ ಕಣ್ಣಿಗೆ ಬಿದ್ದದ್ದೇ ಹಳೆಯದೆಲ್ಲ ಕ್ಷಣದಲ್ಲಿ ನೆನಪಾಗಿ, ಹಳೇ ಪ್ರಿಯತಮೆಯನ್ನು ಕಂಡಂತಾಗಿ, ಬೈಕು ನಿಲ್ಲಿಸಿ, ಆಫ್ ಮಾಡಿದೆ. ಫಕ್ಕನೆ ಮೌನ ಕವಿಯಿತು. ಈ ಮರದ ಬಗ್ಗೆ ಏನಾದರೂ ಬರೆಯಬೇಕು ಎನಿಸಿತು ನನಗೆ... ಮೇಲೆ ಸೊಂಪಾಗಿ ಚಪ್ಪರದಂತೆ ಒತ್ತರಿಸಿಕೊಂಡಿರುವ ಇದರ ಹಸಿರೆಲೆರಾಶಿಯನ್ನು ನೋಡುತ್ತಿದ್ದೆ...

ಯಾರೋ ಕಿಟಾರನೆ ಕಿರುಚಿಕೊಂಡಂತಾಯಿತು. ಹೆಂಗಸಿನ ಧ್ವನಿ. ನನಗೆ ಒಮ್ಮೆಲೇ ಭಯವಾಗಿ, ಮೈನಡುಗಿ, ಒಂದೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಮಾಡಿ, ಎಂಭತ್ತರ ವೇಗದಲ್ಲಿ ಓಡಿಸತೊಡಗಿದೆ.

22 comments:

Vijaya said...

paapa ... yaaro hengsu nijvaaglu thondre nalli idro eno? ... interesting ...

ರಂಜನಾ ಹೆಗ್ಡೆ said...

ಸುಶ್,
ಸಕತ್ ಆಗಿ ಇದೆ ಬರಹ. ಕೇವಲ ಒಂದು ಸಂಪಿಗೆ ಮರದ ಬಗ್ಗೆ ಇಷ್ಟು ಬರೆದ್ದಿದ್ದಿಯಲ್ಲಾ. ತುಂಬಾ ತುಂಬಾ ಇಷ್ಟ ಆಯಿತು.

keep it up.

Harisha - ಹರೀಶ said...

ನೀ ಹೇಳಿರ "ತುಂಬೆ ಹೆಗ್ಡೇರು" ನಂಗೆ ಅಜ್ಜ :-)

Sree said...

ಸುಶ್ರುತ, ನಾ ಇನ್ನುಮೇಲೆ ಮೌನಗಾಳದಲ್ಲಿ ಕಾಮೆಂಟಿಸೋದು ನಿಲ್ಲಿಸಬೇಕು ಅನ್ನಿಸುತ್ತೆ, ಚೆನ್ನಾಗಿದೆ, ತುಂಬಾ ಚೆನ್ನಾಗಿದೆ ಅನ್ನೋದು ಬಿಟ್ಟು ಬೇರೆ ಮಾತೇ ಹೊರಡಲ್ಲ ನಿಮ್ಮ ಬರಹಗಳನ್ನ ಓದಿದಾಗ!:)

ತೇಜಸ್ವಿನಿ ಹೆಗಡೆ said...

ಸುಶ್ರುತ,

ನಾ ಕಾಣದ ಸಂಪಿಗೆಮರದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಿ. ಸುಂದರ ನಿರೂಪಣೆ.

ಒಂದಂತೂ ಖರೆಯಾ ನೋಡು ನಿನ್ನೂರಿನ ಸಂಪಿಗೆ ಮರ ಬೆಂಗಳೂರಿನಲ್ಲೇನಾದರೂ ಇದ್ದಿದ್ರೆ ಯಾವ್ದಾದ್ರೂ ಹೊಸ ಯೋಜನೆಯಡಿಯಲ್ಲಿ ಇಷ್ಟೊತ್ತಿಗೆ ಮಾಯಾಗಿರ್ತಿತ್ತು!! :)

Parisarapremi said...

oLLe sampige mara.... "sampigeyellO... kOgileyellO..." sakkath idu.. :-)

sadhya aa hengsu sampige marada aasupaasalli ODaaDtaa idlu anthidiya... puNya.. nugge maraanO, huNasE maraanO anlilvalla... ;-)

anda haage, idu illi relavant alla, aadroo heLtini.. ee article Odhida mele nange "doDDa sampige" mara nenapaaytu.. poorvaghaTTada anchinalli ee mara (biggest sampige mara in the world-u..) sOligara pooje ge tanna mai oDDi ninthirO drushya kaNNu mundhe banthu.. innond sala hOgbeku anthideeni... 14km trekku.. barteeyEnu??? :-)

Jagali bhaagavata said...

ನನ್ನ ಅಜ್ಜನ ಮನೆ ಊರಿನಲ್ಲಿ ಸಾಗರದ ಕಾಲೇಜಿಗೆ ಹೋಗುವ ಅತಿ ಚಂದದ ಹುಡುಗಿಯರು ಇದ್ದಾರೆ.....


ನಿನ್ನ ಅಜ್ಜನ ಮನೆಗೆ ಯಾವಾಗ ಕರ್ಕೊಂಡ್ ಹೋಗ್ತಿ?

Sushrutha Dodderi said...

@ vijaya

yaro eno.. nODle illa.. :-(

ರಂಜನಾ,
ಥ್ಯಾಂಕ್ಸ್ ಡಿಂಕೂ..

ಹರೀಶ,
ಓಹೋ? ಹಂಗರೆ ನಾನು ಮುಂದಿನ್ ಸಲ ಆ ಕಡೆ ಹೋದ್ರೆ ಪರಿಚಯ ಹೇಳ್ಕ್ಯಳ್ಲಕ್ಕು.. :)

Sree,
:) ಕಷ್ಟ..! ಇದಕ್ಕೆ ಏನಾದ್ರೂ ಪರಿಹಾರ ಹುಡುಕ್ಬೇಕಿದೆ ಹಾಗಾದ್ರೆ.. :P

Sushrutha Dodderi said...

@ ತೇಜಸ್ವಿನಿ,

ಧನ್ಯವಾದಮು. :-)

ನೀ ಹೇಳಿದ್ದು ಅಕ್ಷರಶಃ ನಿಜ! ರೋಡ್ ಅಗಲ ಮಾಡೋ ನೆಪದಲ್ಲೋ, ಅಪಾರ್ಟ್‍ಮೆಂಟ್ ಕಟ್ಟೋ ನೆಪದಲ್ಲೋ, ಮತ್ತಿನ್ಯಾವುದೋ ನೆಪದಲ್ಲೋ ಅದನ್ನ ಯಾವತ್ತೋ ಕಡಿದು ಉರುಳಿಸಿರ್ತಿದ್ದ..

ಅರುಣ್,
ಹೆಹೆ.. ಸಧ್ಯ, ಹುಣಿಸೇಮರ - ನುಗ್ಗೇಮರ ಅಲ್ಲ.. :D

ಓವ್, ಇಂಟರೆಸ್ಟಿಂಗ್ ಆಗಿದೆ ಈ ವಿಷ್ಯ.. ಟ್ರೆಕ್‍ಗೆ ಬಿಟ್ ಹೋದ್ರೆ ಮತ್ತೇನಿಲ್ಲ.. :x

ಭಾಗ್ವತಣ್ಣ,
:D ದೇವ್ರಾಣೆ ಕರ್ಕಂಡ್ ಹೋಗಲ್ಲ.. ಸುಮ್ನೆ ನಂಗೆ ಕೆಟ್ ಹೆಸ್ರು.. :P

ಸುಧೇಶ್ ಶೆಟ್ಟಿ said...

Hi Sushrutha,

Even though I don't comment to your articles regularly, I read each and every article you post. I like the creativity in your writing most.
As always, this article is a nice article.

Keshav.Kulkarni said...

ಸುಶ್ರುತ,

ಸಂಪಿಗೆಮರ ತುಂಬ ಚೆನ್ನಾಗಿ ಬರೆದಿದ್ದೀಯಾ. ಕನ್ನಡದಲ್ಲಿ ಪ್ರಬಂಧ ಮಾಧ್ಯಮವೇ ಮಾಯವಾಗುವ ಹಾಗಿದೆ (ಬರೀ ಅಂಕಣಕರರೇ ತುಂಬಿಹೋಗಿದ್ದಾರೆ), ಅಂಥಹುದರಲ್ಲಿ ಈ ಸಂಪಿಗೆ ಅರಳಿದೆ. ಓದಿ ತುಂಬ ಖುಷಿಯಾಯಿತು.

"ಯಾರೋ ಕಿಟಾರನೆ ಕಿರುಚಿಕೊಂಡಂತಾಯಿತು. ಹೆಂಗಸಿನ ಧ್ವನಿ. ನನಗೆ ಒಮ್ಮೆಲೇ ಭಯವಾಗಿ, ಮೈನಡುಗಿ, ಒಂದೇ ಕಿಕ್ಕಿಗೆ ಬೈಕ್ ಸ್ಟಾರ್ಟ್ ಮಾಡಿ, ಎಂಭತ್ತರ ವೇಗದಲ್ಲಿ ಓಡಿಸತೊಡಗಿದೆ." -- ಕೊನೆಸಾಲಿನ ಈ ಸುಳ್ಳು ಅಥವಾ ಡ್ರಾಮಟೈಸೇಷನ್ ಬೇಡಿತ್ತು. ಇದು ಪ್ರಬಂಧ, ಕತೆಯಲ್ವಲ್ಲಾ, ಅದಕ್ಕೇ ಹೇಳಿದ್ದು.ಸಾಧ್ಯವಾದರೆ ಕೊನೆ ಪ್ಯಾರಾಗ್ರಾಫ್ ಕಿತ್ತಾಕು.

ಇನ್ನೂ ಬರೀತಾಯಿರು.

-ಕೇಶವ

Santhosh Ananthapura said...

ಹಾಯ್ ಸುಶ್ರುತ,
ಸಾಗರ ಸುತ್ತಾಡಿಸಿದ್ದಕ್ಕೆ, ವರದೆಹಳ್ಳಿಯನ್ನು ನೆನಪಿಸಿದ್ದಕ್ಕೆ ಥ್ಯಾಂಕ್ಸ್. ಈ ಬರಹದಲ್ಲಿ ಬರುವ ಸಂಭಾಷಣೆಗಳಿವೆಯಲ್ಲಾ... ಇವುಗಳೇ ಈ ಸಂಪಿಗೆ ಮರದ ಸುತ್ತಲೂ ಸುತ್ತಿ ಕಥೆಗೆ ರೋಚಕತೆಯನ್ನು ಕೊಡುತ್ತವೆ. " ಹೆಂಗಸರನ್ನು ಬಸ್ ಹತ್ತಿಸಲಿಕ್ಕೆ ಜೊತೆಗೆ ಯಾರಾದರೂ ಗಂಡಸರು ಬರಬೇಕಾದಂತಹ ಪರಿಸ್ಥಿತಿ ಬಂತು. ಬಸ್ಸು ಹತ್ತಿದ ಹೆಂಗಸರು ತಮ್ಮ ಗಂಡಂದಿರಿಗೆ 'ಬೇಗ ಮನೆ ಮುಟ್ಕ್ಯಳಿ' ಎಂದು ಎಚ್ಚರಿಕೆ ನೀಡುವುದನ್ನೂ ಮರೆಯುತ್ತಿರಲಿಲ್ಲ. " ಟಿಪಿಕಲ್ ಗ್ರಾಮ್ಯ.
ಆದರೆ ಕೊನೆಯ ಸಾಲು ಮಾತ್ರ ಯಾಕೋ ಇಷ್ಟವಾಗಿಲ್ಲ.
ಕೀಪ್ ರೈಟಿಂಗ್ ಆಂಡ್ ರಾಕಿಂಗ್.
ಅಚ್ಚ ಅಚ್ಚು ಬೆಲ್ಲದ ಅಚ್ಚು, ಅಲ್ಲಿ ನೋಡು ಇಲ್ಲಿ ನೋಡು, ಸಂಪಿಗೆ ಮರದಲಿ........ ಗುಂಪು ನೋಡು

Sushrutha Dodderi said...

ಸುಧೇಶ್,
Thank you very much boss..

ಕೇಶವ್ ಸರ್,
ಥ್ಯಾಂಕ್ಯೂ.
ನೀವು ಹೇಳಿದ್ದು ಸರಿ ಇರಬಹುದು. ಬರೆಯುವಾಗ ಗೊತ್ತಾಗಲಿಲ್ಲ. ಈಗ ಕಿತ್ತುಹಾಕಲು ಮನಸಾಗುತ್ತಿಲ್ಲ. ನನಗೆ ಇದಕ್ಕೆ ಏನಂತ ಲೇಬಲ್ ಮಾಡುವುದು ಅಂತ ಗೊತ್ತಾಗದೇ ಹಾಗೇ ಬಿಟ್ಟಿದ್ದೆ. ನೀವು 'ಪ್ರಬಂಧ' ಅಂತ ಕರೆದು ಒಳ್ಳೇ ಕೆಲಸ ಮಾಡಿದ್ರಿ.

ಸಂತೋಷ್,
ಅಲ್ಲಿ ನೋಡು.. ಅಹ ಇಲ್ಲಿ ನೋಡು..
ಧನ್ಯವಾದ. :-)

sunaath said...

ಸುಶ್ರುತ,
ಲೇಖನ ಸ್ವಾರಸ್ಯಕರವಾಗಿದೆ. ಆದರೆ I strongly object to slandering the PWD people.
ಎರಡನೆಯದಾಗಿ, ಕೋಗಿಲೆಯನ್ನು ನಾಚುತ್ತ ಹಾಡುವ ಹುಡುಗಿಗೆ ಹೋಲಿಸುವದು ಸರಿಯಾದ ಉಪಮೆ ಅಲ್ಲ. ಗಂಡು ಕೋಗಿಲೆಯೇ mating callಗೆ ಕರೆಯುವದರಿಂದ, ನಾಚುವ ಹುಡುಗಿ ಸರಿ ಅಲ್ಲ.

ಸುಧನ್ವಾ ದೇರಾಜೆ. said...

ಪ್ರಿಯ ಸುಶ್ರುತ, ನಿನ್ನ ಈ ತರಹದ ಗದ್ಯ ಯಾವಾಗಲೂ ಚೆನ್ನಾಗಿರುತ್ತದೆ. ಓದಿ ಖುಶಿಪಟ್ಟೆ. ಥ್ಯಾಂಕ್ಯು.

Sushrutha Dodderi said...

ಸುನಾಥ ಕಾಕಾ,
ಪ್ರಮಾದಮಾಯ್ತು! ಗಂಡು ಕೋಗಿಲೆ ಮಾತ್ರ ಕೂಗತ್ತೆ ಅಂತ ಗೊತ್ತೇ ಇರ್ಲಿಲ್ಲ ನಂಗೆ.. Thanks for the info. :-)
ಮತ್ತೆ PWD peopleನ ನಾನು slander ಏನೂ ಮಾಡಿಲ್ಲ ಕಾಕಾ.. They are doing considerably good work, I agree.. ಆದರೆ ನಮ್ಮ ಜನಗಳಿಗೂ ಅವರಿಗೂ ಸರಿ ಆಗಿದೆ ಅಂತ ಹೇಳಿದ್ದು.. ಅವ್ರು ಎಷ್ಟೇ ಸವಲತ್ತು ಒದಗಿಸಿಕೊಟ್ರೂ ಜನಗಳು ಅದನ್ನ ಹಾಳು ಮಾಡ್ಕೋತಾರೆ, ಕ್ಲೀನಾಗಿಟ್ಕೊಳಲ್ಲ.. ಏನ್ ಮಾಡೋಣ? :(

ಸುಧನ್ವ,
ಥ್ಯಾಂಕ್ಸಣ್ಣೋ..!

ಚಿತ್ರಾ ಸಂತೋಷ್ said...

ಚೆನ್ನಾಗಿದೆ ಬರೆಹ.
ಓಯ್..ಎಲ್ಲಾ ಕಡೆ 80ರ ವೇಗದಲ್ಲಿ ಬೈಕ್ ಓಡಿಸಿದ್ರೆ ದೇವ್ರೇ ಗತಿ ಕಣಯ್ಯಾ..
-ಚಿತ್ರಾ

Sushrutha Dodderi said...

ಹೆಹೆ.. ಹಂಗೆಲ್ಲಾ ಎಲ್ಲಾ ಕಡೆ ಓಡ್ಸಲ್ಲಮ್ಮಾ.. ಬೆಂಗ್ಳೂರಲ್ಲೆಲ್ಲ ಏನಿದ್ರೂ 90-100 ರ ಆಸುಪಾಸು ಅಷ್ಟೇ.. :P

ಥ್ಯಾಂಕ್ಸ್ ಚಿತ್ರಮ್ಮಾ...

ವಿನಾಯಕ ಕೆ.ಎಸ್ said...

ಸುಶ್ರುತ
ಸಂಪಿಗೆ ಮರದ ಹಸಿರೆಲೆ ದಡದಿ...ಲೇಖನ ಮಸ್ತ್‌ ಮಜಾ ಇದ್ದು ಮಾರಾಯ. ಆದ್ರೂ ಬೆಂಕಟವಳ್ಳಿ ಹುಡುಗರ ಮರ್ಯಾದೆ ಆ ತರ ತೆಗೆದಿದ್ದು ಇಷ್ಟ ಆಗಲ್ಲೆ! ಹುಡುಗರ ಮರ್ಯಾದೆ ಅನ್ನೋದಕ್ಕಿಂತ ಹುಡುಗಿಯರನ್ನು ಹೊಗಳಿದ್ದು ಚೂರು ಇಷ್ಟವಾಗಲ್ಲೆ!

Sushrutha Dodderi said...

ವಿನಾಯಕ,

:) ಯಾಕ್ ಗುರೂ ಅಸಮಾಧಾನ? ಹುಡ್ಗೀರ್ ಎಂಥ ಮಾಡಿದ್ದ? ಪಾಪ ಅಲ್ದಾ ಅವ್ವು? ;) ನೋಡಕ್ ಚನಾಗಿದ್ದ, (ನಿಜ್ವಾಗ್ಲೂ ಚನಾಗಿದ್ದ!), ಅದ್ಕೇ ಬರದ್ನಪ.
ಮತ್ತೆ ಹುಡುಗ್ರುದ್ ಮರ್ಯಾದಿ ಏನೂ ತೆಗಿಯಲ್ಲೆ.. ಹುಡುಗಿಯರಿಗಾಗಿ ಅವ್ರು ಎಷ್ಟು ಕಷ್ಟ ಪಡ್ತ, ಎಷ್ಟೊಂದು ಹೆಲ್ಪಿಂಗ್ ನೇಚರ್ ಇದ್ದು ಅವ್ರಲ್ಲಿ ಅನ್ನೋದನ್ನ ಹೈಲೈಟ್ ಮಾಡಿದ್ದಿ ಅಷ್ಟೇ! :P

ವಿನಾಯಕ ಕೆ.ಎಸ್ said...

ಏ ನಾನು ಓದಿದ್ದು ಕರ್ಕಿಕೊಪ್ಪ ಹೈಸ್ಕೂಲಿನಲ್ಲಿ ಮಾರಾಯ. ನಮ್ಮ ಕಾಲದಲ್ಲಿ ಬೆಂಕಟವಳ್ಳಿ, ಚೌಡಿಮನೆ ಹುಡುಗಿಯರು ಅಂದ್ರೆ ಜಗಳಗಂಟಿಯರು! ಆಗೆಲ್ಲಾ ಅಲ್ಲಿನ ಹುಡುಗಿಯರು ನೀ ಹೇಳಿದಷ್ಟು ಚೆನ್ನಾಗಿ ಇರ್ಲೆ ಬಿಡು! ಅದೇ ಪೂರ್ವಾಗ್ರಹ ಕಾಣ್ತು ನಂಗೆ!

Sushrutha Dodderi said...

ವಿ,
ಗೆಸ್ ಮಾಡಿದಿ ಬಿಡು.. :P ಇನ್ ಫ್ಯಾಕ್ಟ್, ಈಗಿನ್ ಹುಡುಗೀರೆಲ್ಲಾ ಬೆಂಗ್ಳೂರಲ್ಲಿದ್ದ. ಬೆಂಕ್ಟಳ್ಳಿ ಖಾಲಿ ಹೊಡಿತಾ ಇದ್ದು.. :(