ಇದನ್ನು ಬರೀಲಿಕ್ಕೆ ಕಾರಣ: (೧) ಶ್ರೀನಿಧಿ ಅವತ್ತೆಲ್ಲೋ ಮೆಸೇಜು ಮಾಡಿ 'ನೀನು ನಾರ್ತ್ ಬೆಂಗಳೂರಿನ ಹೋಟೆಲುಗಳ ಯಾಕೆ ಬರೀಬಾರ್ದು? ನಾನು ಸೌತ್ಸ್ ಬಗ್ಗೆ ಬರೀತೀನಿ' ಅಂತ ಹೇಳಿದ್ದು; (೨) ಸಾಮಾನ್ಯವಾಗಿ ಕರ್ತವ್ಯಲೋಪ ಮಾಡುವ ಅವನು, ಸೌತ್ ಬೆಂಗಳೂರಿನ ಹೋಟೆಲುಗಳ ಬಗ್ಗೆ ಮೊನ್ನೆ ಬರೆದೇಬಿಟ್ಟಿದ್ದು.
ನಾನಿದನ್ನು ಬರೆಯಲಿಕ್ಕೆ ಸಾಧ್ಯವಾಗುತ್ತಿರುವುದು: (೧) ನಾನಿರುವುದು ರಾಜಾಜಿನಗರದಲ್ಲಿ ಮತ್ತು ಆಫೀಸಿರುವುದು ಕುಮಾರ ಪಾರ್ಕ್ ಬಳಿ; (೨) ನನಗಿನ್ನೂ ಮದುವೆಯಾಗಿಲ್ಲ ಮತ್ತು ನಾನಿನ್ನೂ ಬ್ಯಾಚುಲರ್ರು (ಅಥವಾ ವೈಸಾ ವರ್ಸಾ); (೩) ನಾನು ಮನೆಯಲ್ಲಿ ಅಡುಗೆ ಮಾಡಬೇಕೆಂದರೆ ಅದಕ್ಕೆ ಸಿಕ್ಕಾಪಟ್ಟೆ ಫ್ರೀ ಟೈಮ್ ಇರಬೇಕು, ರೂಮ್‍ಮೇಟ್ ಇರಬೇಕು ಮತ್ತು ಮುಖ್ಯವಾಗಿ ಮೂಡ್ ಇರಬೇಕು -ಇವು ಪ್ರತಿದಿನ ಕೂಡಿಬರುವುದಿಲ್ಲ; (೪) ಹೋಟೆಲುಗಳಲ್ಲಿ ತಿನ್ನುವುದು ನನ್ನ ಸೋಮಾರಿತನಕ್ಕೆ ಒಳ್ಳೆಯ ಔಷಧಿ.
ರಾಜಾಜಿನಗರದ ನವರಂಗ್ ಸರ್ಕಲ್ಲಿನಿಂದ ಕುಮಾರ ಪಾರ್ಕ್‌ನ ಶಿವಾನಂದ ಸರ್ಕಲ್‌ವರೆಗಿನ ನನ್ನ ಇಷ್ಟದ ಹೋಟೆಲ್ಲುಗಳು ಅಥವಾ ಎಲ್ಲ ಹೋಟೆಲುಗಳಿಗಿಂತ ಸ್ವಲ್ಪ ಭಿನ್ನ/ವಿಶೇಷ ಉಪಹಾರ ಸಿಗುವ ಹೋಟೆಲುಗಳು ಹೀಗಿವೆ:
ಹೋಟೆಲ್ ನಳಪಾಕ, ನವರಂಗ್: ನವರಂಗ್ ಟಾಕೀಸಿನಿಂದ ಮೋದಿ ಆಸ್ಪತ್ರೆ ಕಡೆ ನಾಲ್ಕೇ ನಾಲ್ಕು ಹೆಜ್ಜೆ ಇಟ್ಟರೆ ಎಡಗಡೆಗೆ ತನ್ನ ಆಕಾಶನೀಲಿ ಬಣ್ಣದ ಬೋರ್ಡಿನೊಂದಿಗೆ ನಳನಳಿಸುವ ಈ 'ಈಟ್ ನ್ ಔಟ್' ಹೋಟೆಲ್ಲಿನಲ್ಲಿ ಸಿಗುವ ಸ್ಪೆಶಲ್ ಫುಡ್ಡುಗಳೆಂದರೆ: ಅವಲಕ್ಕಿ, ಪಡ್ಡು (ಗುಳಿಯಪ್ಪ ಅಥವಾ ಕುಣಿ-ಕುಣಿ-ದೋಸೆ), ಮಿರ್ಚಿ, ಗಿರ್‌ಮಿಟ್ಟಿ. ಬೆಣ್ಣೆದೋಸೆ ಸಹ ಚೆನ್ನಾಗಿರುತ್ತೆ.
ಹಳ್ಳಿಮನೆ, ಮಲ್ಲೇಶ್ವರಂ: 'ಆರೋಗ್ಯಕರ ಆಹಾರ' ಎಂಬ ಹಣೆಪಟ್ಟಿ ಇಲ್ಲಿಯ ಎಲ್ಲ ಐಟೆಮ್ಮುಗಳಿಗೆ ಇದೆ. ರವೆ ಇಡ್ಲಿ, ಪೂರಿ-ಪಲ್ಯ ಸೂಪರ್ರು. ಟೊಮ್ಯಾಟೋ ದೋಸೆ, ಅನಾನಸ್ ದೋಸೆ, ಪುದಿನಾ ದೋಸೆ, ಕ್ಯಾರೇಟ್ ದೋಸೆ ಅಂತೆಲ್ಲ ಸ್ಪೆಶಲ್ ದೋಸೆಗಳನ್ನು ಮಾಡುತ್ತಾರೆ. ಇಲ್ಲಿ ದೋಸೆ ಬೇಯಿಸಲಿಕ್ಕೆ ಎಣ್ಣೆ ಬಳಸುವುದಿಲ್ಲ. ಶುದ್ಧ ತುಪ್ಪ ಬಳಸುತ್ತಾರೆ. ಸೊಗದೆ ಬೇರು, ಕೋಕಮ್, ಗಸಗಸೆ -ಮುಂತಾದ ತಂಪು ಪಾನೀಯಗಳು ಲಭ್ಯ. ಕಾಫಿಯಂತೂ ನನ್ನಂತ 'ಕಾಫೀ-ಕುಡುಕ'ರಿಗೆ ಕಿಕ್ಕು!
ಶಕ್ತಿ ವೆಜಿಟೇರಿಯನ್, ಮಲ್ಲೇಶ್ವರಂ: ಸಂಪಿಗೆ ರಸ್ತೆಯಲ್ಲಿ, ಹಳ್ಳಿಮನೆ ಹೋಟೆಲ್ಲಿಗಿಂತ ಎರಡು ಕ್ರಾಸು ಹಿಂದೆ ಇದೆ. ಮೊದಲ ಮಹಡಿಯಲ್ಲಿರುವುದರಿಂದ ಕಣ್ಣು ತಪ್ಪಿಹೋಗುವ ಸಾಧ್ಯತೆ ಹೆಚ್ಚು. ಇಲ್ಲಿಯ ಮೃದು ಚಪಾತಿ, ಅದನ್ನು ಮುರಿಯುವಾಗಲೇ ಅದರಲ್ಲಿನ ಸ್ವಾದಿಷ್ಟತೆಯ ಅನುಭವ ಆಗುತ್ತದೆ. ಹಚ್ಚಿಕೊಳ್ಳಲಿಕ್ಕೆ ಸಬ್ಜಿಗಳೂ ಚೆನ್ನಾಗಿರುತ್ತವೆ. 'ಇಲ್ಲಿ ಎಷ್ಟು ಚಪಾತಿ ತಿಂದರೂ ತಿಂದದ್ದೇ ಗೊತ್ತಾಗೊಲ್ಲ ಮಾರಾಯಾ!' ಎನ್ನುವುದು ಇಲ್ಲಿ ತಿನ್ನುವಾಗಿನ ಪ್ರಶಂಸೆ ಮತ್ತು ಬಿಲ್ ಕೊಡುವಾಗಿನ ಆರೋಪ.
ಸಹ್ಯಾದ್ರಿ ದರ್ಶಿನಿ, ಮಲ್ಲೇಶ್ವರಂ: ಬೆಂಗಳೂರಿನ ಹೋಟೆಲ್ಲುಗಳಲ್ಲಿ ವಿರಳವಾಗಿ ಸಿಗುವ ಖಾಲಿ ದೋಸೆ ಮತ್ತು ಶ್ಯಾವಿಗೆ ಉಪ್ಪಿಟ್ಟು -ಇಲ್ಲಿ ಸಿಗುತ್ತೆ ಮತ್ತು ಸಖತ್ತಾಗಿರುತ್ತೆ. ವಿಳಾಸ: ಮಾರ್ಗೋಸಾ ರೋಡ್, ಹತ್ತನೇ ಕ್ರಾಸ್ ಹತ್ತಿರ.
ಹೋಟೆಲ್ ಜನತಾ, ಮಲ್ಲೇಶ್ವರಂ: ಜನನಿಭಿಡ ಏಯ್ಥ್ ಕ್ರಾಸಿನಲ್ಲಿದೆ. ಮಸಾಲೆ ದೋಸೆಗೆ 'ಕ್ಯೂ-ಫೇಮಸ್ಸು'. ವಡೆ-ಸಾಂಬಾರ್, ಕಾಫಿ ಸಖತ್. ಪಂಚೆ ಉಟ್ಟುಕೊಂಡ ಸರ್ವರುಗಳು ಊರ ಕಡೆ ಹೋಟೆಲು ನೆನಪಿಸಿ ಅರೆಕ್ಷಣ ಮೈಮರೆಸಿದರೆ ಅಚ್ಚರಿಯೇನಲ್ಲ.
ರಸ, ಮಲ್ಲೇಶ್ವರಂ: ಸಂಪಿಗೆ ರಸ್ತೆಯಲ್ಲಿ, ಶಕ್ತಿ ವೆಜಿಟೇರಿಯನ್‌ನ ಹಿಂದಿನ ಕ್ರಾಸಿನಲ್ಲಿದೆ. ದುಬಾರಿ ರೆಸ್ಟುರೆಂಟು, ಹೀಗಾಗಿ ಬಿಲ್ಲು ಪಾವತಿಸುವವರು ಬೇರೆಯವರು ಅಂತಾದರೆ ಕರೆದುಕೊಂಡು ಹೋಗಬಹುದು! ಮೂರು ಫ್ಲೋರುಗಳಲ್ಲಿದೆ. ಒಂದು ಫ್ಲೋರಿಗೆ 'ರಸ', ಇನ್ನೊಂದಕ್ಕೆ 'ಹೆಜ್ಜೆ', ಮತ್ತೊಂದಕ್ಕೆ 'ಶೀಶ' ಎಂಬುದಾಗಿ ಹೆಸರಿಡಲಾಗಿದೆ. ಇದು ಬಾರ್-ಕಮ್-ರೆಸ್ಟುರೆಂಟು ಮತ್ತೆ ವೆಜ್ ಅಂಡ್ ನಾನ್‌ವೆಜ್. ಇದರ ಬಗ್ಗೆ ಬರೆಯಲು ಕಾರಣ, ಇಲ್ಲಿ ಏನು ಬೇಕಾದರೂ ಸಿಗುತ್ತದೆ! ಬೆಂಗಳೂರು, ಮಂಗಳೂರು, ಮಲೆನಾಡು, ಚೈನೀಸು, ನಾರ್ತ್ ಇಂಡಿಯನ್ನು -ಹೀಗೆ ಎಲ್ಲಾ ಕಡೆಯ ತಿನಿಸುಗಳು ಸಿಗುತ್ತವೆ. ಅಂಬೊಡೆ, ಪತ್ರೊಡೆ, ಶಾವಿಗೆ-ಕಾಯಿಹಾಲು, ಪಕೋಡ -ಎಲ್ಲವೂ ತಿನ್ನುವಾಗ ರುಚಿಗೆ ಮತ್ತೊಂದು ಹೆಸರೇನೋ ಅನ್ನಿಸೊತ್ತೆ. 'ನಾನ್‍ವೆಜ್ ಐಟೆಮ್ಮುಗಳೂ ಅದ್ಭುತ' -ನನ್ನ ಕಲೀಗುಗಳ ಹೇಳಿಕೆ.
ಕೃಷ್ಣಾ ಭವನ, ಮಲ್ಲೇಶ್ವರಂ: ಸಂಪಿಗೆ ರಸ್ತೆಯಲ್ಲಿ, ಸಂಪಿಗೆ ಟಾಕೀಸ್ ಬಳಿ ಇದೆ. ಮಂಗಳೂರು ಬನ್ಸ್, ಶ್ಯಾವಿಗೆ ಸಿಗುತ್ತೆ. ಮತ್ತೆ 'ಬಟನ್ ಇಡ್ಲಿ' ಅಂತ ಕೊಡ್ತಾರೆ.. ಗೋಲಿಯಂತಹ ಪುಟ್ಟ ಪುಟ್ಟ ಇಡ್ಲಿಗಳು ಸಾಂಬಾರಿನಲ್ಲಿ ತೇಲುತ್ತಿರುತ್ತವೆ. ಇಡಿ ಇಡೀ ಇಡ್ಲಿಗಳನ್ನು ಸ್ಪೂನಿನಿಂದ ಬಾಯಿಗಿಟ್ಟುಕೊಂಡು ಗುಳುಂ ಮಾಡುವಾಗ ಮಜಾ ಬರುತ್ತೆ.
ಭೀಮಾಸ್, ಶೇಷಾದ್ರಿಪುರಂ: ಮಂಗಳೂರಿನ ಕಡೆಯವರ ಹೋಟೆಲ್ಲು. ಮಂಗಳೂರು ಭಜ್ಜಿ (ಗೋಳಿಭಜ್ಜಿ), ಆಲೂ ಪರೋಟಾ, ನಾನ್-ರೋಟಿ ಚೆನ್ನಾಗಿರುತ್ತವೆ. ವಿಶಾಲವೆನಿಸುವಂತಹ ಹೊರ ಆವರಣದಲ್ಲಿ ಮರದ ನೆರಳಲ್ಲಿ ಹಾಕಿದ ಖುರ್ಚಿಯಲ್ಲಿ ಕೂತು ತಿನ್ನಬಹುದು. ಇಲ್ಲಿಯ ಊಟ ವರ್ಷಗಳಿಂದ ನನ್ನ ಮತ್ತು ನನ್ನ ಕಲೀಗುಗಳ ಮಧ್ಯಾಹ್ನದ ಹಸಿವನ್ನು ತಣಿಸುತ್ತಿದೆ.
ಜನಾರ್ಧನ ಹೋಟೆಲ್, ಶಿವಾನಂದ ಸರ್ಕಲ್: ಸಾಗು ದೋಸೆ, ಮಸಾಲೆ ದೋಸೆ ಮತ್ತು ಕಾಫಿ -ರುಚಿ ನೋಡಲೇಬೇಕಾದವು. ಟೈಮಿಂಗ್ಸ್ ಇದೆ, ನೋಡಿಕೊಂಡು ಹೋಗಬೇಕು. ಬಾಗಿಲು ತೆರೆಯುವುದನ್ನೇ ಕಾಯುತ್ತಾ ಹೊರಗೆ ಜನ ಕೂತಿರುತ್ತಾರೆ. ಸಂಜೆ ಐದು ಗಂಟೆಗೆ ಓಪನ್ನು ಎಂದರೆ, ೦೫:೦೫ಕ್ಕೆ ಹೋದರೆ ನೀವು ವೇಯ್ಟಿಂಗ್ ಲಿಸ್ಟ್ ಸೇರುತ್ತೀರಿ! ಅನಾದಿ ಕಾಲದಿಂದಲೂ 'ಜನಾರ್ಧನ' ದೋಸೆಗೆ ಹೆಸರುವಾಸಿ.
ಸಧ್ಯಕ್ಕೆ ನೆನಪಾಗುತ್ತಿರುವುದು ಇಷ್ಟು. ಅಥವಾ ನಾನು 'ಟ್ರೈ' ಮಾಡಿರುವ, 'ಟ್ರೈ' ಮಾಡಿದಾಗ ಇಷ್ಟವಾದ ಹೋಟೆಲುಗಳು ಇವು. ಇವನ್ನು ಬಿಟ್ಟು ಬೆಂಗಳೂರಿನ ತುಂಬ ಇರುವ ಶಾಂತಿಸಾಗರಗಳು, ಅಡಿಗಾಸ್‍ಗಳು ನಮ್ಮ ಏರಿಯಾದಲ್ಲೂ ಇವೆ. ಕಾಫಿ ಡೇ, ಪಿಜಾ ಹಟ್‌ಗಳೂ ಇವೆ. ಆಯ್ಕೆ ನಿಮ್ಮ ಪಾಕೀಟು, ಸಮಯ, ನಾಲಿಗೆ ಮತ್ತು ಬಹಳ ಸಲ, ಸಂಗಾತಿಗೆ ಬಿಟ್ಟಿದ್ದು. :-)
29 comments:
ಪುಟ್ಟಣ್ಣ...
ಧನ್ಯವಾದ ಚೆಂದದ ಹೊಟೆಲ್ಲುಗಳ ಪರಿಚಯಕ್ಕೆ.
ಹೊಟೆಲ್ ಜನತಾ ಬಗ್ಗೆ ಓದಿದಾಗ ನಂಗೆ ಈ ಕಡೆ ಬುಲ್ ಟೆಂಪಲ್ ರೋಡಲ್ಲಿರ ಕಾಮತ್ ಬ್ಯೂಗಲ್ ರಾಕ್ ನೆನಪಾತು. ಜೋಳದ ರೊಟ್ಟಿ ಊಟಕ್ಕೆ ಹೋದ್ರೆ ಆರಾಮಾಗಿ ಸಂಗೀತ (ಲೈವ್) ಕೇಳ್ತಾ ಊಟ ಮಾಡಲ್ಲಾಗ್ತು. ಊಟನೂ ಚೆನಾಗಿರ್ತು. ಬಾಳೆಲೆ ಊಟ. ಮಳೆಗಾಲ ಆಗಿದ್ರೆ ಹೊರಗೆ ಸುರಿಯೋ ಮಳೆನೂ ಕಾಣಿಸ್ತಾ ಇರ್ತು.
ಒಳ್ಳೆ ಲೇಖನ.
ಮಹಾಲಕ್ಷ್ಮಿಯ ಹಾಗೆ ಜನತಾ ಹೋಟೆಲ್ಲು!!! ಸೂಪರ್... :-)
ಒಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ಅದ್ರೂ ನನ್ನ ಕಂಪ್ಲೇಂಟ್ ಅಂದ್ರೆ, ನನ್ನಂಥಾ ಹೊರನಾಡ ಕನ್ನಡಿಗರಿಗೆ , ಈ ಹೊಟೆಲ್ ನಲ್ಲಿ ಅದು ಚೆನಾಗಿದ್ದು, ಆ ಹೊಟೆಲ್ ನಲ್ಲಿ ಇದು ಚೆನಾಗಿದ್ದು ಅಂತ ಬರೆದು ಹೊಟ್ಟೆ ಉರಿಸಿಕ್ಯಳಹಾಂಗೆ ಮಾಡಿದ್ದೆ .ಈ ಪುಣೆಲಿ ಇಲ್ಲಿ ಅಪ್ಪಟ ದಕ್ಷಿಣ ಭಾರತೀಯ ಹೊಟೆಲ್ ಹುಡುಕದೇ ಕಷ್ಟ . ಇನ್ನು ರುಚಿ ರುಚಿ ಮಸಾಲೆ ದೋಸೆ , ಬಿಸಿ ಬಿಸಿ ಇಡ್ಲಿ .... ಎಲ್ಲಿಂದ ಮಾರಾಯ !
ಇನ್ನೊಂದು ಸಲ ಬೆಂಗಳೂರಿಗೆ ಹೋದಾಗ ನಿನ್ನ ಲಿಸ್ಟ್ ನ ಟ್ರೈ ಮಾಡ ಯೋಚನೆ ತಲೆಯೊಳಗೆ ಹೊಕ್ಕಿದ್ದು ಈಗ .
ಅಂದ ಹಾಗೆ , ಬೆಂಗಳೂರು ಪೂರ್ವ ಮತ್ತು ಪಶ್ಚಿಮದ ಹೋಟೆಲ್ ಮಾಹಿತಿ ಯಾರು ಕೊಡ್ತ?
ಸುಮಾರು ತಿರ್ಗಿದ್ಯಲೋ ಮಾರಾಯ. ನಾನು ಮಲ್ಲೇಶ್ವರಂ ಹಾಗು ರಾಜಾಜಿ ನಗರದಲ್ಲಿ ಇದ್ದಾಗ ಇಷ್ಟೆಲ್ಲಾ ತಿರ್ಗಲ್ಲೇ, ತಿನ್ನಲ್ಲೇ ಬಿಡು. ಒಳ್ಳೆ ಮಾಹಿತಿ ಹೊರಗಡೆ ತಿನ್ನೋವ್ರಿಗೆ. ಈಗ ಬೆಂಗಳೂರು ದಕ್ಷಿಣಕ್ಕೆ ಹಾರಿದ್ಮೇಲೆ ನಳಪಾಕ, ಹಳ್ಳಿಮನೆ ನೆನಪು ಆಗದೆ ಇರ್ತಲ್ಲೇ. ಆಕಡೆ ಬಂದಾಗ ನೀನು ಹೇಳಿದ್ ಜಾಗ ಎಲ್ಲ ಟ್ರೈ ಮಾಡಕ್ಕು. ಶ್ರೀ ಬರೆಯೋವರ್ಗೆ ಕಾಯಕ್ಕು ಇನ್ನು ದಕ್ಷಿಣದಲ್ಲಿ ಎನಿದ್ದು ನೋಡಲೆ :)
ಸುಶ್ರುತ,
ನೀವು ಹೇಳಿದ್ದು ಸ್ವಲ್ಪ confusing ಆಗ್ತಾ ಇದೆ:
I am unmarried and I am also bachelor!
ಹೌದಾ?
-ಕಾಕಾ
ಪುಟ್ಟಣ್ಣ...
ಅಲ್ಲಿ ಸಂಗೀತ ಇರ್ತು ನಿಜ. ಆದ್ರೆ ಯಾರಾದ್ರೂ ಸಂಗೀತಗಾರರು (ಶಾಸ್ತ್ರೀಯ) ಹಾಡ್ತಾ/ನುಡಿಸ್ತಾ ಇರಕಾದ್ರೆ ಹಾಡು ಕೇಳ್ತಾ ನಮ್ಮಷ್ಟಕ್ಕೆ ನಾವು ಊಟಮಾಡಲೆ ಕಷ್ಟ ಆಗ್ತು. ಸಂಗೀತದ ಬಗ್ಗೆ ತೀರ ಗೌರವ ಇಟ್ಗಂಡವ್ರಿಗೆ ಅಲ್ಲಿ ಊಟದ ಮಾಡಲೆ ಕಷ್ಟಾಗ್ಗು.
ಸುಶೃತ,
ಮಲ್ಲೇಶ್ವರಂ ೯-೧೦ ಕ್ರಾಸ್ ಗಳ ಮಧ್ಯ (ಅಲ್ಲೆಲ್ಲೋ ಒಂದ್ಕಡೆ) ಸೋನಾ ಕೆಟರರ್ಸ್ ಅಂತ ಇದೆ. ದ.ಕ. ಹಾಗೂ ಕೊಂಕಣಿ ಊತ- ತಿಂಡಿಗಳು ಬಾಯಿ ಚಪ್ಪರಿಸುವ ಹಾಗಿರತ್ತೆ. ಅರ್ಧ ಕೇಜಿ, ಕಾಲು ಕೇಜಿ ಲೆಕ್ಕದಲ್ಲಿ ಸಾಮ್ಬಾರು, ಪಲ್ಯ, ಅನ್ನವನ್ನೂ ಪಾರ್ಸೆಲ್ ಕೊಡ್ತಾರೆ. ಕೊಟ್ಟೆ ಕಡಬು, ಪತ್ರೊಡೆ, ಗಸಿ, ಉಸ್ಲಿ, ಕಳಲೆಯ ಐಟಮ್ ಗಳು... ಒಂದೆರಡಲ್ಲ. ಇದಂತೂ ನನ್ನ ಪಲಿನ ಆಪದ್ಬಾಂಧವ!
ಉಳಿದಂತೆ, ಗೋಪಿಕಾ (ನ್ಯೂ ಕೃಷ್ಣ ಭವನ್) ನನ್ನ ಪಾಲಿನ ಅಡುಗೆ ಮನೆ! :)
ಮಧ್ಯಾಹ್ನ ಇದನ್ನ ಓದ್ತಿದೇನೆ... ಹಸಿವು ಜೋರಾಗ್ತಿದೆ...
- ಚೇತನಾ
ಈ ಏರಿಯಾಗಳಲ್ಲಿನ ಐಸ್ ಕ್ರೀಮ್ ಪಾರ್ಲರ್ ಗಳು, ಮತ್ತೆ ಮಲ್ಲೇಶ್ವರಂ 8th ಕ್ರಾಸ್ ನ ಕೋಲ್ಡ್ ಕಾಫಿ ಬಗ್ಗೆನೂ ಬರೀಬಹುದಿತ್ತು ನೀವು.
ಚಲೋ ಮಾಹಿತಿ ಕೊಟ್ಟಿದ್ದೆ.
ಚಿತ್ರ ಅವರೇ...
ಬೆಂಗಳೂರು ಈಸ್ಟ್ ಮತ್ತು ವೆಸ್ಟಲ್ಲಿ ಅಷ್ಟೊಂದು ಒಳ್ಳೆ ಹೋಟ್ಲುಗಳು ಇಲ್ಲಾ.
ಬರೀ ಕಮರ್ಷಿಯಲ್ ಆಗಿ ಮಾಡ್ತಾರೆ. ನಿಮಗೆ ಟೆಸ್ಟು ಅಂತಾ ಸಿಗೋದಾದರೆ, ಅದು ಮಲ್ಲೇಶ್ವರಂ, ಶೇಷಾದ್ರಿಪುರಂ, ರಾಜಾಜಿ, ವಿಜಯನಗರ, ಮತ್ತು ನಮ್ಮ ಎವರ್ ಗ್ರೀನ್ ಸೌತ್ ಬೆಂಗಳೂರಲ್ಲಿ.
ಕಟ್ಟೆ ಶಂಕ್ರ
nange idralli yaavdoo gothilla :(
@ ಪುಟ್ಟಕ್ಕ,
ಯಾ.. ಬ್ಯೂಗಲ್ ರಾಕಲ್ಲಿ ನಾನೂ ಊಟ ಮಾಡಿದ್ದಿ. ಚನಾಗಿರ್ತು. ಆದ್ರೆ ನಾವ್ ಹೋದಾಗ ಮ್ಯೂಸಿಕ್ಕೆಲ್ಲ ಇರ್ಲೆ.
ಪಪ್ರೇ,
ಹಾಂ.. :) ಒಂಥರಾ ಹಂಗೇಯಾ!
ಚಿತ್ರಕ್ಕ,
ನಿಂಗೆ ಹೊಟ್ಟೆ ಉರೀಲಿ ಅಂತ್ಲೇ ಬರ್ದಿದ್ದು ನಾನು! ;) ಮತ್ತೆ ನೆಕ್ಸ್ಟ್ ಟೈಮ್ ಬೆಂಗ್ಳೂರ್ ಬಂದಾಗ ನಂಗೆ ಪಾರ್ಟಿ ಕೊಡ್ಸಕ್ಕೆ ಯಾವ ಹೋಟ್ಲು ಅಂತ ನೀನು ತಲೆ ಕೆಡಿಸ್ಕ್ಯಳದು ಬ್ಯಾಡ ಅಂತ ನಾನೇ ಲಿಸ್ಟ್ ಕೊಟ್ಬುಟಿ! :P
ಕಲ್ಮನೆ,
ಶ್ರೀನಿಧಿ ಆಲ್ರೆಡಿ ಬರದ್ದ. ನೋಡು.
ಕಾಕಾ,
ಹೌದು ಕಾಕಾ.. ನಿಜ್ವಾಗ್ಯೂ..! ಮೋಟುಗೋಡೆಯಾಣೆಗೂ! :P
ಚೇತನಕ್ಕ,
ಓಹೋ! ಸೋನಾ ಕೇಟರರ್ಸ್.. ಓಕೇ.. ನೋಡ್ಬೇಕಾಯ್ತು ಎಲ್ಲಿದೇಂತ.. ಥ್ಯಾಂಕ್ಯೂ :-)
ರಂಜು,
ಅದು ನಿಜ.. ಮರಿಯಪ್ಪನ ಪಾಳ್ಯದ ಐಸ್‍ಕ್ರೀಮ್ ಪಾರ್ಲರು, ಏಯ್ಥ್ ಕ್ರಾಸ್ ಕೋಲ್ಡ್ ಕಾಫಿ ಬಗ್ಗೆ ಬರೀಲೆ ಅಂದ್ರೆ ನಮ್ದು ಒಂಥರಾ ಋಣ ಉಳ್ಕಂಡಂಗೆ ಅಲ್ದಾ? ;)
ಶಂಕ್ರಣ್ಣ,
ಸರಿಯಾಗ್ ಹೇಳ್ದೆ ನೋಡು! ನಮ್ ಏರಿಯಾನೇ ಸೂಪರ್ರು! ಜೈ! :)
ಒಳ್ಳೆಯ ಕೈಪಿಡಿ. ನ ನಾ ತಿಂಡಿಗಳನ್ನು ಹೊರದೀಶದಲ್ಲಿ ಕುಳಿತು ನೆನಪಿಸಿಕೊಳ್ಳುವುದು ಒಂದುಬಗೆಯ ಆಂತರಿಕ ಸಂಕಟ!. ಅಲ್ಲಿ ಇದ್ದಾಗ ಇವನ್ನೆಲ್ಲ ಹುಡುಕಿ ರುಚಿ ನೋಡುವ ಅವಕಾಶ ಆಗಲಿಲ್ಲ, ಈಗ ದೇಶ ಬಿಟ್ಟಮೇಲೆ ವಯಸ್ಸು ಆರೋಗ್ಯ ಎರಡು ಸರಿ ಇಲ್ಲ.
ಅದಿರಲಿ, "ನಾನು ಬ್ಯಾಚಲೋರ್ ಹಾಗು ಅವಿವಾಹಿತ" ಎನ್ನುವುದು ಆಹ್ವಾನ ಪೂರಿತ ಉದ್ಗಾರ ಸುತ್ತಲಿನ ಸಮಾಜದ ಕುರಿತು ಮಾಡಿದ ಆಪಾದನೆಯ ಹಾಗಿದೆ.
ಶೀಘ್ರ ನಿನ್ನ ಅವಿವಾಹಿತತ್ವ ನಾಶವಾಗಲಿ!.-DMSagar(Original)
ಪುಟ್ಟಣ್ಣ...
ಸಂಗೀತ ಇರ್ತಿಲ್ಯನ ಹಂಗಾದ್ರೆ ಈಗ, ನಾನು ೨೦೦೬ ಮೇ ತಿಂಗಳಲ್ಲಿ ಹೋಗಿದ್ದಷ್ಟೇ. ಆಮೇಲೆ ಆ ಕಡೆ ಹೋಪಲ್ಲಾಜಿಲ್ಲೆ. ಆದ್ರೂ ಬೆಂಗಳೂರು ಹೋಟೆಲ್ಲುಗಳ ಬಗ್ಗೆ ನಿಂಗ ಬರೆದಾಗ ಕಡೇ ಪಕ್ಷ ಕಾಮೆಂಟಾದ್ರೂ ಬರ್ದು ಋಣ ತೀರಿಸ್ಗ್ಯಳನ ಅಂತ ನೆನಪಾದಷ್ಟು ಬರ್ದಿ :-) :-)
ಹೋಟೇಲ್ ಗಳ ವಿವರ ಕೊಟ್ಟಿದ್ದೀರಿ ಖುಷಿಯಾಯ್ತು. ಆದರೆ ಬರೇ ವೆಜಿಟೇರಿಯನ್ ಹೋಟೇಲುಗಳನ್ನ ಪಟ್ಟಿ ಮಾಡಿದ್ದೀರಲ್ಲ ಸರ್! ಚೂರು ನಾನ್ ವೆಜ್ ಹೋಟೇಲುಗಳ ಕಡೆಯೂ ಕಣ್ಣು ಹಾಯಿಸಿದ್ದರೆ ಚೆಂದವಿತ್ತು. :)
ಹೇ ಸುಶ್ , ನಮ್ಮ್ ಲೇಔಟ್ ಮಹಾಲಕ್ಷ್ಮೀ ರಿಫ್ಹ್ರೆಶ್ಮೆಂಟ್ಸ್ ಕೂಡಾ ಪರ್ವಾಗಿಲ್ಲಾ..ತಿಂಡಿಗೆ.
ಇವತ್ತು ಅಥ್ವಾ ನಾಳೆ "ರಸ" ಟ್ರಯ್ ಮಾಡ್ತೀವಿ.. thanx..
ಕೃಷ್ಣ ಭವನ..ಹ್ಮ್ಮ್.. ಯಾವ್ಯಾವ್ ತರ ತಿಂಡಿ ಕೇಳ್ತೀರಾ..? ಲಾಬೋರೇಟರಿ! :)
@ Vijaya madam,
ಅದಕ್ಕೇ ಹೇಳಿದ್ದು, ಒಂದಾದ್ರೂ ಮೀಟಿಂಗ್ ನಮ್ ಏರಿಯಾದಲ್ಲಿ ಮಾಡೋಣ ಅಂತ. ಕೇಳಿದ್ರಾ? :x
ಹೋಗ್ಲಿ ಬಿಡಿ, ನೆಕ್ಸ್ಟ್ ಮೀಟಿಂಗ್ ಮಾಡಿದ್ರಾಯ್ತು. ;)
DMS,
ಏನಣ್ಣಾ ಇಂತಹ ಉಗ್ರ ಶಾಪ ಕೊಟ್ಬಿಟ್ಟೆ? ಯಾಕಪ್ಪಾ ಎಲ್ರಿಗೂ ನನ್ನ ಬ್ರಹ್ಮಚಾರಿತ್ವದ ಮೇಲೇ ಕಣ್ಣು..? ಶಿವನೇ! :(
ಪುಟ್ಟಕ್ಕ,
ಸರಿಯಾತು ಬಿಡು! :)
ಹೇಮ,
ಏನ್ಮಾಡ್ಲಿ ಮೇಡಂ? ನಾನು- ವೆಜಿಟೇರಿಯನ್ನು. ಹೀಗಾಗಿ ನಾನ್-ವೆಜಿಟೇರಿಯನ್ ಹೋಟೆಲ್ಸ್ ಬಗ್ಗೆ ಅಷ್ಟ್ ಚನಾಗ್ ಗೊತ್ತಿಲ್ಲ. ಬೇರೆ ಯಾರಾದ್ರೂ ಬರೀತಾರೆ ಬಿಡಿ..!
ರಮೇಶ್,
ತುಂಬ ದಿನದಿಂದ ಅಂದ್ಕೋತಿದೀನಿ, ಮಹಾಲಕ್ಷ್ಮಿ ರಿಫ್ರೆಶ್‍ಮೆಂಟ್ಸ್ ಟ್ರೈ ಮಾಡ್ಬೇಕು ಅಂತ.. ಆಗ್ತಾನೇ ಇಲ್ಲ.. ಈ ವೀಕ್ ನೋಡ್ತೀನಿ. ಥ್ಯಾಂಕ್ಯೂ. :-)
ಇಷ್ಟೆಲ್ಲಾ ವೆರೈಟಿ ತಿಂದರೂ ಹೀಗೇ ಇದೀರಲ್ರಿ? ಛೆ!!
CTR(Sri Sagar) beNNe masale try maaDilva sushruta??? adu vidyarthi bhavanada doseginta skhattaagiratte(south bangaloreans nanna bayyo munche illi dose try maaDi;)) asha/agra sweetsnalli rasmalai superrru, matte asha food court kooda parvagilla...
ಸುಶ್ರುತ,
ನನ್ನ ಹೊಟ್ಟೆ ಉರಿಸಿದ್ರೆ , ನಿಂಗೆ ಹೋಟೆಲ್ ನಲ್ಲಿ ತಿಂದಕೂಡ್ಲೇ ಹೊಟ್ಟೆನೋವು ಬತ್ತು ಅಥವಾ ಬೇಗ ಮನೆ ಊಟಾನೇ (ರುಚಿ ಹ್ಯಾಂಗೇ ಇದ್ರೂ ) ತಿನ್ನೋ ಭಾಗ್ಯ ಬತ್ತು ನೋಡು!
ಏನಿದ್ರೂ , ಇಂಥಾ ಒಳ್ಳೊಳ್ಳೆ ಮಾಹಿತಿ ಕೊಟ್ಟಿದ್ದಕ್ಕೆ ನಿಂಗೆ ಖಂಡಿತಾ ಪಾರ್ಟಿ ಕೊಡ್ತಿ ಮುಂದಿನ ಸಲ ಬೆಂಗಳೂರಿಗೆ ಬಂದಾಗ. ಅಲ್ಲಿವರೆಗೆ ಇನ್ನಷ್ಟು ಹೊಟೆಲ್ ಹುಡುಕಿಡು.
ಹಂಗೇ ಇಬ್ರೂ ನಿಮ್ ನಿಮ್ ಏರಿಯಾಗಳ ಬಾರ್ ಗಳ ಬಗ್ಗೆನೂ ಬರೀರಿ :) ಡ್ರಿಂಕ್ಸ್ ಜೊತೆಗೆ ಮನೆ ತರ ಒಳ್ಳೇ ಫುಡ್ ಕೊಡುವಂತಹ ಬಾರ್ ಗಳು ಸುಮಾರು ಇವೆಯಂತೆ ಬೆಂಗಳೂರಲ್ಲಿ. ಗೊತ್ತಿಲ್ಲ ಅಂತ ಮಾತ್ರ ಸುಳ್ಳು ಹೇಳ್ಬೇಡ!
@ ಆಲಾಪಿನಿ,
ಏನ್ ಮಾಡ್ಲಿ ಹೇಳಿ! :(
Sree,
ಶ್ರೀ ಸಾಗರ್.. ಓಹ್ ಹೌದಾ? ಅದು ಯಾವಾಗ್ಲೂ ರಶ್ ಇರುತ್ತೆ ಕಣ್ರೀ.. ಕಾಯೋದೇ ತಲೆಬಿಸಿ. :x
ಆದ್ರೂ ನೀವ್ ಹೇಳಿದೀರಲ್ಲಾ ಅಂತ ಟ್ರೈ ಮಾಡ್ತೀನಿ.
ಚಿತ್ರಕ್ಕ,
’ಮನೆ ಊಟ’ ಅಂತಾನೂ ಒಂದು ಹೋಟೆಲ್ ಇದ್ದು ಬೆಂಗ್ಳೂರಲ್ಲಿ. ;)
ವಿಕಾಸ,
ಅದ್ನ ನೀ ಬರಿತೆ ಅಂತ ನಂಗ ಸುಮ್ನಾದ್ಯ. ಯಾವ್ಯಾವುದ್ನ ಯಾರ್ಯಾರು ಬರಿಯವೋ ಅವ್ರವ್ರು ಬರದ್ರೇನೆ ಚಂದ ಅಂತ.. ಯು ನೋ.. ಐ ಮೀನ್..
Sush,
oLLE list maharaya..
ondina adige manege raje kottu hogi barbeku nodu..baayalli neeroorisuva haage barediddi !!
preetiyinda,
archu
@ Archu,
ಅಡುಗೆ ಸ್ಪೆಶಲಿಸ್ಟೇ ಹೋಟೆಲ್ಲಿಗೆ ಹೋದ್ರೆ ಹಿಡ್ಸತ್ತೋ ಇಲ್ವೋ ಗೊತ್ತಿಲ್ಲ.. ಆದ್ರೂ ಟ್ರೈ ಮಾಡು ಒಮ್ಮೆ. ;P
ಅದ್ಕೂ ಮುಂಚೆ ಒಂದಿನ ನಂಗೆ ನಿಮ್ಮನೇಲಿ ಊಟ ಹಾಕು. :)
anna, innu sheshadripuarm akki rotti special prashanth matthe nataraj eduru samrat bittidiya, yaake try madilva,
ಸುಶ್ರುತ,
ಅರೆರೆ.....ಈ ಲೇಖನ ಹೇಗೆ ನನ್ನ ಕಣ್ಣು ತಪ್ಪಿ ಹೋಯಿತೋ ಗೊತ್ತಿಲ್ಲ...[ನನ್ನ ಬ್ಲಾಗಿನಲ್ಲಿ ಲಿಂಕ್ ತಪ್ಪಿರಬಹುದು ಮತ್ತೆ ಲಿಂಕಿಸಿಕೊಳ್ಳುತ್ತೇನೆ.]
ಇದೊಂದು ಉಪಯುಕ್ತ ಲೇಖನ...ಇಲ್ಲಿ ನೀವು ಹೇಳಿದ ಎಲ್ಲಾ ಹೋಟಲ್ಲುಗಳ ರುಚಿ ನೋಡಿದ್ದೇನೆ. ರಸ ಹೋಟಲ್ ಒಂದನ್ನು ಬಿಟ್ಟು...
ನಳಪಾಕದ ಬೆಣ್ಣೆ ದೋಸೆ, ಜನತಾದ ಮಸಾಲೆ ದೋಸೆ, ಹಳ್ಳಿ ಮನೆಯ ಎಲ್ಲಾ ತಿಂಡಿಗಳು ಅದರಲ್ಲೂ ಅಕ್ಕಿದೋಸೆ ಚೆನ್ನ...[ಬೆಳಗಿನ ಹೊತ್ತು ನೀವು ಸಿಗೋದು ಅಲ್ಲೇ ಅಲ್ಲವೇ!] ಸೊಗದೇ ಬೇರಿನ ಜ್ಯೂಸ್ ಸೂಪರ್, ಶಕ್ತಿಯ ಊಟ, ಸಹ್ಯಾದ್ರಿಯ ಟಿಫನ್, ಭೀಮಾಸ್ ನ ಪೂರಿಸಾಗು ನಾನ್-ರೋಟಿ, ಜನಾರ್ಧನ ಹೋಟಲ್ಲಿನ ಸಾಗುದೋಸೆ,ಕೃಷ್ಣಭವನದ ಬಟನ್ ಇಡ್ಲಿ, ನಿಜಕ್ಕೂ ಸೂಪರ್....ಇದೆಲ್ಲಾ ಸರಿ....ನೀವ್ಯಾಕೆ ಮಲ್ಲೇಶ್ವರಂ ೬ ನೇ ಕ್ರಾಸಿನ ಸಿ.ಟಿ ಆರ್.[ಸೆಂಟ್ರಲ್ ಟಿಫನ್ ರೂಂ] ಬಿಟ್ಟಿದ್ದೀರಿ.....ಇಲ್ಲಿ ಸಿಗುವ ಮಸಾಲೆ ದೋಸೆ ವಿದ್ಯಾರ್ಥಿ ಭವನದ ಮಸಾಲೆ ದೋಸೆಗೆ ಸಮ. ಇತ್ತೀಚೆಗೆ ರುಚಿಯಲ್ಲಿ ಅದು ವಿದ್ಯಾರ್ಥಿಭವನವನ್ನು ಮೀರಿಸುತ್ತದೆ...ನೀವೊಮ್ಮೆ ಪ್ರಯತ್ನಿಸಿ.....
ಇದೆಲ್ಲ ನನಗೆ ಗೊತ್ತಾದ್ದದ್ದು ನಾನು ಇರುವುದು ಮಲ್ಲೇಶ್ವರಂ ಬಳಿ ಮತ್ತು ನೀವು ಹೇಳಿದ ಈ ಬಡಾವಣೆಗಳಲ್ಲೇ ನನ್ನ ವೃತ್ತಿ ಇದೆ.....ಒಂದೇ ಬಾರಿಗೆ ಎಲ್ಲಾ ಹೋಟಲ್ಲುಗಳಲ್ಲಿ ತಿಂಡಿಗಳ ರುಚಿ ನೋಡಿದಂತಾಯಿತು.....ಥ್ಯಾಂಕ್ಸ್....
ನಿಮ್ಮ ಹೋಟೆಲ್ ಪ್ರೇಮಕ್ಕೆ ನಮೋ ನಮಃ . ಚೆಂದ ಬರೆದಿದ್ದೀರಿ
ಶಮ, ನಂದಿಬೆಟ್ಟ
ಹೋಟೆಲ್ ಗಳ ಪಟ್ಟಿ ಚೆನ್ನಾಗಿವೆ. ಮಲ್ಲೇಶ್ವರಂ ನ ಮಾರ್ಗೋಸ ರಸ್ತೆಯಲ್ಲಿರುವ ಹಳೆ ಹೋಟೆಲ್ (ಹೆಸರು ನೆನಪಿಲ್ಲ, ಆಟದ ಮೈದಾನದ ಎದುರಲ್ಲಿದೆ) ಮಸಾಲೆದೋಸೆ ರುಚಿಯಾಗಿದೆ.
ಒಳ್ಳೆ ಮಾಹಿತಿ, ನಾನು ನನ್ ಗೆಳತಿಯರು ಸಖತ್ ಫುಡ್ಡೀಗಳು ಎಲ್ರೂ ಸೇರಿ ಒಂದ್ ಕೈ ನೋಡೋದೇ....!
Post a Comment