Monday, March 16, 2009

ಇವತ್ತು ಬರೆಯದೇ ಇರಲಾರೆ..

"ಭಾಗ್ಯನ್ನ ಮನೆ ತುಂಬಿಸ್ಕ್ಯಂಡಾತು" ಎಂದ ಅಮ್ಮನ ದನಿಯಲ್ಲಿ ಸಂಭ್ರಮವಿತ್ತು. 'ಇಪ್ಪತ್ತೈದು ವರ್ಷದ ಹಿಂದೆ ನೀನು ಈ ಮನೆ ತುಂಬಬೇಕಾದ್ರೂ ಇಷ್ಟೇ ಸಂಭ್ರಮವಿತ್ತಾ ಅಮ್ಮಾ?' ಅಂತ ಕೇಳಬೇಕು ಅಂದುಕೊಂಡೆ, ಅಷ್ಟೊತ್ತಿಗೆ "ಒಲೆ ಮೇಲೆ ಎಂತೋ ಇಟ್ಟಿಕ್ ಬೈಂದಿ.. ಅಪ್ಪನ್ ಹತ್ರ ಮಾತಾಡ್ತಿರು" ಅಂತಂದು, ಅಪ್ಪನಿಗೆ ಫೋನು ಕೊಟ್ಟು ಅಡುಗೆ ಮನೆಗೋಡಿದಳು ಅಮ್ಮ. ಏನೆಲ್ಲ ಕೇಳಬೇಕೆಂದುಕೊಂಡಿದ್ದೆ ಅಮ್ಮನ ಬಳಿ, ಕೇಳಲಾಗಲೇ ಇಲ್ಲ.

ಹಾಗೆ ಒಲೆ ಮೇಲಿಟ್ಟ ಪಾತ್ರೆ ನೆನಪಿಸಿಕೊಂಡು ಒಳಗೋಡಿದ್ದು ಅದೆಷ್ಟು ಸಲವೋ ನನ್ನಮ್ಮ... 'ಅಯ್ಯೋ ಉಕ್ಕಿದರೆ ಉಕ್ಕಿತು, ಸೀದರೆ ಸೀಯ್ತು, ಹೊತ್ತಿದರೆ ಹೊತ್ತಿತು, ಆಮೇಲ್ ನೋಡ್ಕೊಂಡ್ರಾಯ್ತು; ಫಸ್ಟು ಪಿಚ್ಚರ್ ನೋಡು, ಇಲ್ಲಿ ಬಾ ಕೂತ್ಕೋ' ಎಂಬ ನಮ್ಮ ಮಾತು ಅವಳು ಎಂದಾದರೂ ಕೇಳಿದ್ದಿದೆಯಾ? ಅವಳ ಕಾಳಜಿಗೆ ಎಣೆಯಿಲ್ಲ.. ಅಡುಗೆ ಮನೆಯಲ್ಲಿ ಹೊಳೆಯುವ ಪ್ರತಿ ದಬರಿ, ಪ್ರತಿ ಸೌಟು, ಪ್ರತಿ ಲೋಟ, ಪ್ರತಿ ಚಮಚಕ್ಕೂ ಗೊತ್ತು ಅದು. ಕೇಳಿ ನೋಡಿ ಬೇಕಿದ್ದರೆ.

ಆದರೂ... ಇಂಥದ್ದೊಂದು ಆಸ್ತೆಯನ್ನು, ಇಂಥದ್ದೊಂದು ಪ್ರೀತಿಯನ್ನು ಅದು ಹೇಗೆ ತಾನೆ ರೂಢಿಸಿಕೊಂಡೆ ಅಮ್ಮಾ? ಅಥವಾ, ಅದು ಹೆಣ್ಣುಮಕ್ಕಳ ರಕ್ತದಲ್ಲೇ ಇರುತ್ತದಾ? ಇದು ನಮ್ಮ ಮನೆ, ಇವು ನಮ್ಮ ಮನೆಯ ವಸ್ತುಗಳು, ಇವರು ನಮ್ಮವರು -ಎಂದೆಲ್ಲ ಗುರುತಿಸಿಕೊಂಡು, ಗಟ್ಟಿ ಮಾಡಿಕೊಂಡು, ಇವಕ್ಕೆಲ್ಲಾ ಹೊಂದಿಕೊಂಡು, ಇವನ್ನೆಲ್ಲ-ಇವರನ್ನೆಲ್ಲ ಸಲಹುವ ಈ ಗುಣ ಹೇಗೆ ಬಂತದು ನಿಂಗೆ? ಎಷ್ಟು ದಿನ ತಗೊಂಡೆ ಕಲಿಯಲು: ಈ ಮನೆಯ ಸಂಪ್ರದಾಯಗಳು, ಅಡುಗೆಯ ರುಚಿ, ಯಜಮಾನರ ಬೇಕು-ಬೇಡಗಳು, ಮಾವನ ಸಿಡಿಮಿಡಿಗೆ ಕಾರಣಗಳು, ಅತ್ತಿಗೆಯರ ಗಮನಿಸುವಿಕೆ - ಅತ್ತೆಯ ಜೋರುಬಾಯಿಗಳ ಜತೆಗೇ ನಿನ್ನನ್ನು ನೀನು ಸ್ಥಾಪಿಸಿಕೊಳ್ಳಬೇಕಾದ ಅನಿವಾರ್ಯತೆ... ಹೆಪ್ಪಿಗೆ ಎಷ್ಟು ಮಜ್ಜಿಗೆ ಬಿಡಬೇಕು, ಬೆಳಗ್ಗೆ ಬೆಡ್‍ಕಾಫಿಗೆ ಹಾಲೆಷ್ಟು ಎತ್ತಿಡಬೇಕು, ಸಾಕಿದ ನಾಯಿಯ ತಟ್ಟೆಗಿಷ್ಟು ಅನ್ನ ಹಾಕಬೇಕು, ಸದ್ದಾಗದಂತೆ ಹಾಕಿಕೊಳ್ಳಬೇಕು ಕೋಣೆಯ ಬಾಗಿಲ ಚಿಲಕ, ಏಳಬೇಕು ಎಲ್ಲ ಏಳುವ ಮುನ್ನ, ಬಳಿದ ಅಂಗಳದಲ್ಲಿ ದಿನಕ್ಕೊಂದು ಚುಕ್ಕಿರಂಗೋಲಿ, ಗುಡಿಸಿ ಪುಟ್ಟ ಮನೆ - ಜೋಡಿಸಿಟ್ಟು ಎಲ್ಲ ಅಚ್ಚುಕಟ್ಟಾಗಿ, ಎಷ್ಟೆಂದರೂ ತವರಿನದೆಂತನಿಸದ ಬಚ್ಚಲಿನಲ್ಲಿ ಸ್ನಾನ, ಪೂಜೆಯ ಸಮಯಕ್ಕೊಂದು ಹಾಡು, ಹೊತ್ತಿಗೆ ಸರಿಯಾಗಿ ಅಡುಗೆ, ಹೊಸ ಪರಿಚಯದ ಪಕ್ಕದ ಮನೆಯವಳ ಜೊತೆ ಕಳೆದೂ ಸಮಯ, ಇಳಿದರೆ ಸಂಜೆಯಲೆ ರಾತ್ರಿ -ಮೌನ ಸಮ್ಮತಿ.

ಎಷ್ಟು ಮಾಗಿ, ಎಷ್ಟು ಚಳಿ, ಎಷ್ಟು ಮಳೆಗಾಲ, ಅದೆಷ್ಟು ದಾಹ ನೀಗದ ಬೇಸಗೆ, ಇದ್ದಕ್ಕಿದ್ದಂತೆ ಬಂದ ಹಳೇಮಳೆ, ತವರ ನೆನಪು, ಗುಡುಗು, ಅಪ್ಪುಗೆ, ರಾತ್ರಿ, ಕತ್ತಲೆ, ಮುನಿಸು, ತಣಿಸು, ಬೆರಗು, ಕನಸು, ಬೆಳಗು.. ಮೊದಲ ಬಾರಿ ಸಾರಿಗೆ ಉಪ್ಪು ಜಾಸ್ತಿಯಾದಾಗ, ಅದು ಹೇಗೆ ಸಹಿಸಿಕೊಂಡೆ ಅಪ್ಪ ಸಿಡಿಗುಟ್ಟಿದ್ದು? ಮೊದಲ ಬಾರಿ ತನಗಾಗದವರಿಗೆ ನೀನೇನೋ ಕೊಟ್ಟೆ ಅಂತ ಅಜ್ಜಿ ಕೋಪ ತೋರಿದಾಗ ಬೆವರಿದ ನೀನು ಅದು ಹೇಗೆ ಕರಗದೇ ಉಳಿದೆ? ಮೊದಲ ಬಾರಿ ಪೂಜೆಯ ಸಮಯಕ್ಕೆ ದೇವರ ದೀಪ ಹಚ್ಚಿರಲಿಲ್ಲಾಂತ ಅಜ್ಜ ಬಾಯಿ ಮಾಡಿದಾಗ ನೀನು ಸುರಿಸಿದ ಕಣ್ಣೀರು ನೆಲದಲ್ಲಿ ಹಿಂಗಿ ಎಷ್ಟಾಳಕ್ಕೆ ಇಳಿದಿರಬಹುದು ಈಗ?

ಹೇಳು: ತಿಂಗಳು ನಿಂತು, ವಾಕರಿಕೆ ಶುರುವಾದಾಗ ನಿನ್ನ ಹೃದಯದಲ್ಲಿ ಮಿಡಿದ ಮೊದಲ ಭಾವ ಯಾವುದು..? ತುಂಬಾ ಕಷ್ಟ ಕೊಟ್ಟೆನಾ ಅಮ್ಮಾ ನಾ ನಿನ್ನ ಹೊಟ್ಟೆಯಲ್ಲಿದ್ದಾಗ? ಒದ್ದೆನಾ ನಿನಗೆ? ತಿಂದಿದ್ದೆಲ್ಲಾ ವಾಂತಿಯಾಗುತ್ತಿತ್ತಂತೆ.. ಹಣುಕಿದ ನನ್ನ ಅತ್ತೆ ನಕ್ಕಳಂತೆ.. ತವರಿಗೆ ಸುದ್ದಿ ಮುಟ್ಟಿಸಿದ್ಯಾರು? ಬಂದನಾ ಮಾವ ತಕ್ಷಣ ಓಡೋಡಿ- ತಂಗಿಯನ್ನು ಕಾಣಲು? ಅಣ್ಣ ಬಂದಿದ್ದಾನೆಂದು ಹೆಚ್ಚು ಸಂಭ್ರಮಿಸಲು ಹೋಗಿ ಅಜ್ಜಿಯ ದೊಡ್ಡ ಕಣ್ಣುಗಳ ನೋಟಕ್ಕೆ ಗುರಿಯಾದೆಯಾ? ಹೊಟ್ಟೆಯೊಳಗೆ ಬೆಳೆಯುತ್ತಿದ್ದಾಗ ನಾನು, ಕೆಮ್ಮಣ್ಣು ತಿನ್ನುವ ಬಯಕೆಯಾಯ್ತಾ? ಎಷ್ಟು ನೋವನುಭವಿಸಿದೆ ನನ್ನ ಭುವಿಗೆ ತರಲು? ಕೈತುತ್ತು ಬೇಡವೆಂದು ದೂಡಿದಾಗ ಚಂದಿರನ ಕರೆದದ್ದು ನೀನೇನಾ? ಎದೆಹಾಲ ಸವಿ, ನಿನ್ನ ಮಡಿಲ ಬೆಚ್ಚನೆ ಅನುಭವ, ಮೆತ್ತನೆ ತೊಟ್ಟಿಲ ತೂಗು, ಲಾಲಿಯ ಗಾನದ ಲಹರಿ, ನಿನ್ನ ಮೈಮೇಲೇ ಉಚ್ಚೆ ಹೊಯ್ದದ್ದು... ಊಹೂಂ, ಒಂದೂ ನೆನಪಿಲ್ಲ ನನಗೆ. ಗೌರಿ ಎಂಬ ಹೆಸರಿನ ಹುಡುಗಿ ಬೆಂಕಟವಳ್ಳಿ ಎಂಬ ಹೆಸರಿನ ಗ್ರಾಮದಲ್ಲಿ ಬಿರಿದರಳಿ ಹಸಿಗನಸುಗಳ ಕಂಡು ಮಾಗಿ ಬೆಳೆದು ದೊಡ್ಡೇರಿ ಎಂಬೂರಿನ ಶ್ರೀಧರಮೂರ್ತಿ ಎಂಬ ಹುಡುಗನಿಗೊಲಿದು ಲಗ್ನವಾಗಿ ಬಂದು ಇಂದಿಗೆ ಇಪ್ಪತ್ತೈದು ವಸಂತಗಳು ಆಗಿಹೋದವು -ಎಂಬ ಸಂಗತಿ ಇಷ್ಟೆಲ್ಲಾ ಕಲ್ಪಿಸಿಕೊಳ್ಳುವಂತೆ ಮಾಡುತ್ತಿದೆ ಅಷ್ಟೇ..

ಒಂದು ನಿಮಿಷ ಅಪ್ಪಾ, ಫೋನಿಡಬೇಡ.. ಮಾತನಾಡುವುದಿದೆ ನಿನ್ನ ಬಳಿಯೂ.. ಅಮ್ಮನೇ ಆಗಿದ್ದಳಾ ನಿನ್ನ ಕನಸು? ಹುಡುಗಿ ನೋಡಿ ಬಂದ ರಾತ್ರಿ ಕೂತು ಬರೆದೆಯಾ ಕವನ ಎದೆಯಲ್ಲಿ? ಅಕ್ಷತಾವರ್ಷದಲಿ ತೋಯುತ್ತ ಕಟ್ಟುವಾಗ ತಾಳಿ, ಓಲಗದ ದನಿ ಝೇಂಕಾರವಾಗಿತ್ತಾ? ಮನೆಗೆ ಬಂದ ಹುಡುಗಿ ಬಡತನದ ಚಾಪೆಗೂ ಹೊಂದಿಕೊಳ್ವೆನೆಂದಾಗ ಸೆರೆಯುಬ್ಬಿಬಂತಾ? ಹೌದು ಹೌದು, ಇವಳೇ ನನ್ನವಳು ಎನ್ನಿಸಿತಾ? 'ಅಮ್ಮ ಸ್ವಲ್ಪ ಜೋರು, ಏನಾದ್ರೂ ಅಂದ್ರೆ ಬೇಜಾರಾಗ್ಬೇಡ' ಅಂತ ಎಷ್ಟು ಸಣ್ಣ ದನಿಯಲ್ಲಿ ಹೇಳಿದೆ? ಪೇಟೆಯಿಂದ ತಂದು ಕದ್ದು-ಮುಚ್ಚಿ ಕೊಟ್ಟ ಮೊದಲ ವಸ್ತು ಯಾವುದು? ಥೇಟರಿಗೆ ಹೋಗಿ ಒಟ್ಟಿಗೆ ನೋಡಿದ ಮೊದಲ ಸಿನಿಮಾ ಯಾವುದು? ತವರಿಂದ ತಂದ ಹೂಗಿಡವನ್ನು ನೆಡಬೇಕೆಂದಾಗ ಬುಟ್ಟಿಯಲ್ಲಿ ಗೊಬ್ಬರ ಹೊತ್ತುತಂದು ಕೊಟ್ಟೆಯಂತೆ ಅಂಗಳಕ್ಕೆ? ಅದರಲ್ಲರಳಿದ ಮೊದಲ ಹೂವು ಮುಡಿದಾಗ ಮಡದಿ, ತುಂಬ ಚಂದವೆನಿಸಿದ್ದು ಅವಳೋ ಅಥವಾ ಅವಳ ನಾಚಿಕೆಯೋ? ಅವಳೊಳಗೂ ನಿನ್ನದೊಂದು ಹೂವರಳಿರುವ ಸುದ್ದಿ ತಿಳಿದಾಗ, ಆ ಮೊದಲ ಸಿನಿಮಾದಲ್ಲಿ ನಾಯಕ ಎತ್ತಿಕೊಂಡಂತೆಯೇ ಎತ್ತಿಕೊಳ್ಳಬೇಕಿನಿಸಿತಾ ಅಮ್ಮನನ್ನು?

ನಾನು ಹುಟ್ಟಿದಾಗ, ಯಾರೋ 'ಥೇಟ್ ಅಪ್ಪಂದೇ ಮುಖ' ಎಂದಾಗ, ಎಷ್ಟು ಅಪ್ಪ ಅಪ್ಪ ಅನ್ನಿಸಿರಬಹುದು ನಿನಗೆ.. ಮೊದಲ ಬಾರಿ ನಾನು 'ಪ್ಪ' ಅಂತ ತೊದಲಿದಾಗ ಹಿಗ್ಗಿ ಎಷ್ಟೆತ್ತರಕ್ಕೆ ಎತ್ತಿಕೊಂಡೆ ನನ್ನ? ನಿನಗಿಲ್ಲದಿದ್ದ ಸೌಭಾಗ್ಯವೆಲ್ಲ ನನಗೆ ದೊರಕಲಿ ಎಂದು ಎಲ್ಲೆಲ್ಲೋ ಸಾಲ ಮಾಡಿ ದುಡ್ಡು ಹೊಂದಿಸಿ ಯುನಿಫಾರಂ ಹೊಲಿಸಿ, ಜಾಮಿಟ್ರಿ ಬಾಕ್ಸ್ ಕೊಡಿಸಿ, ಶಾಲೆಗೆ ಸೇರಿಸಿದ ಶ್ರಮಕ್ಕೆ 'ನಿಮ್ ಮಗ ಓದೋದ್ರಲ್ಲಿ ಸಖತ್ ಜೋರಿದಾನೆ' ಎಂಬ ಟೀಚರ್ರ ಪ್ರಶಂಸೆ ಮತ್ತು ವರ್ಷದ ಕೊನೆಯ 'ಕ್ಲಾಸಿಗೇ ಫಸ್ಟ್' ಮಾರ್ಕ್ಸ್ ಕಾರ್ಡ್ ಸಾಟಿಯಾ? ಊಹೂಂ.. ನೀನು ನನಸು ಮಾಡಿಕೊಳ್ಳಲಾಗದ ಕನಸುಗಳನ್ನು ನನ್ನಲ್ಲಿ ಬಿತ್ತಿ ಚಿಗುರಿಸಿ ಅವು ಸಾಕಾರಗೊಳ್ಳುತ್ತಾ ಹೋಗುವುದನ್ನು ಕಂಡು ಖುಶಿಗೊಂಡೆಯಾ? ನನ್ನನ್ನು ಬೆಂಗಳೂರಿಗೆ ಕಳುಹಿಸುವಾಗ ನಿನಗಾದ ಕಳವಳವೆಷ್ಟು? 'ಕೆಲಸ ಸಿಗ್ತು' ಅಂತ ನಾ ಫೋನಲ್ಲಿ ತಿಳಿಸಿದಾಗ ನಿನಗಾದ ನಿರಾಳವೆಷ್ಟು? ನನ್ನ ಮೊದಲ ಕತೆ ಪ್ರಕಟವಾದಾಗ ಹೇಗೆ ಪ್ರತಿಕ್ರಿಯಿಸಿದೆ? ನನ್ನ ಮೊದಲ ಪುಸ್ತಕವನ್ನು 'ಮಗ ಬರ್ದಿದ್ದು' ಅಂತ ಎಷ್ಟು ಜನಕ್ಕೆ ತೋರಿಸಿದೆ?

ಅಮ್ಮಾ, ಹೊರಬೈಲಿನಿಂದ ಸೈಕಲ್ಲಿನಲ್ಲಿ ಬರುತ್ತಿದ್ದ ಅಪ್ಪ ದಾರಿಯಲ್ಲಿ ಎಚ್ಚರತಪ್ಪಿ ಬಿದ್ದಿದ್ದಾನೆ ಎಂಬ ಸುದ್ದಿ ಕೇಳಿ ಎಷ್ಟು ಜೋರಾಗಿ ಓಡಿದೆ ಅಲ್ಲಿಗೆ? ರಕ್ತ ಸೋರುವ ಅವನ ಹಣೆ ಕಂಡಾಗ ನಿನಗೂ ತಲೆಸುತ್ತಿ ಬಂತಲ್ಲ.. ಕೊಟ್ಟಿಗೆಮನೆಗೆ ಬೆಂಕಿ ಬಿದ್ದಾಗ ಮೊದಲು ಓಡಿ ದನಕರುಗಳ ಹಗ್ಗ ಕತ್ತರಿಸಿ ಅವನ್ನು ಹೊರಗೋಡಿಸಿ ಸಮಯಪ್ರಜ್ಞೆ ತೋರಿದ್ದೂ ನೀನೇ ಅಲ್ಲವಾ? ಅಜ್ಜಿ ಹಾಸಿಗೆ ಹಿಡಿದಾಗ ಅವಳ ಸೇವೆ ಮಾಡುವುದು ಸೊಸೆಯ ಕರ್ತವ್ಯ ಎಂಬಂತೆ ನಡೆದುಕೊಂಡೆಯಲ್ಲ.. ಅವಳು ತೀರಿಕೊಂಡಾಗ, ಇನ್ನು ನೀನೇ ಈ ಮನೆಯನ್ನು ಸಂಭಾಳಿಸಬೇಕು ಎಂಬ ಸತ್ಯವನ್ನು ಹೇಗೆ ಮನದಟ್ಟು ಮಾಡಿಕೊಂಡೆ? ಅಪ್ಪಾ, ಜೋರು ಜ್ವರ ಬಂದ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ತಾನೂ ಬರುತ್ತೇನೆಂದು ಅಂಜುಮೋರೆಯಲ್ಲಿ ಹೇಳಿದ ಅಮ್ಮನನ್ನು ಹೇಗೆ ಸಮಾಧಾನಿಸಿದೆ? ನೆಂಟರ ಮನೆ, ಯಕ್ಷಗಾನ ತಾಳಮದ್ದಲೆ, ಬೆಂಗಳೂರು -ಅಂತ ಎಲ್ಲೇ ಒಂದು ರಾತ್ರಿ ಹೊರಗೆ ಉಳಿಯಬೇಕಾದ ಸಂದರ್ಭ ಬಂದಾಗಲೂ ಅಮ್ಮನಿಗೆ ಫೋನ್ ಮಾಡಿ ತಿಳಿಸುವುದನ್ನು ಮರೆತೆಯಾ? ಒಮ್ಮೆಯಾದರೂ..?

ಕೆ‍ಎಸ್‍ನ ಬರೆದರು ಕವಿತೆ:

ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸ ಕಂಡು
ಮಾತಿಗೊಲಿಯದಮೃತವುಂಡು
ದುಃಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೇ?

ಇಪ್ಪತ್ತೈದು ವರ್ಷಗಳ ಹಿಂದೆ ಅಮ್ಮ ನಮ್ಮನೆಗೆ ಬಂದ ಹಾಗೇ, ಇವತ್ತು ಮತ್ತೊಬ್ಬಳು ಬಂದು ಸೇರಿದಳಂತೆ ನಮ್ಮನೆಗೆ.. ಹೆಸರು ಭಾಗ್ಯ.. ಅದು ಅಜ್ಜನ ಮನೆಯಿಂದ ನಮ್ಮನೆಗೆ ಬಂದ ದನವಿನ ಕರು.. ಈ ಇಪ್ಪತ್ತೈದು ವರ್ಷಗಳಲ್ಲಿ ನಮ್ಮಿಬ್ಬರ ಮನೆಗಳ ಮಧ್ಯೆ ಹೀಗೆ ಅದೇನೇನು ಬಂದು-ಹೋಗಿವೆಯೋ.. ವಿನಿಮಯಗಳಾಗಿವೆಯೋ.. ಪ್ರೀತಿಗೆ ಹೇಗೆ ಹಚ್ಚೋಣ ಲೆಕ್ಕ? ಮದುವೆಯೆಂಬುದು ಬರೀ ಒಂದು ಗಂಡು-ಹೆಣ್ಣಿನ ನಡುವಿನದಲ್ಲವಷ್ಟೇ? ದಾಂಪತ್ಯವೆಂಬುದು ಬಂಧವೇ ಆದರೂ ಅದರಲ್ಲಿ ಪ್ರೇಮವೊಂದು ಇದ್ದರೆ ಬಾಳೆಷ್ಟು ಸುಂದರ..

ಭಾಗ್ಯನನ್ನು ಮನೆತುಂಬಿಸಿಕೊಂಡ ಖುಶಿಯಲ್ಲಿದ್ದಾರೆ ಅಲ್ಲಿ ಅಮ್ಮ-ಅಪ್ಪ.. ಸುದ್ದಿ ಕೇಳಿದ ನನಗೂ ಏನೆಲ್ಲ ನೆನಪಾಗಿ ತುಂಬಿಬಂದಿದೆ ಮನಸು.. ಯಾಕೋ, ಕಣ್ಣೂ.

[15.03.2009; ಮಧ್ಯಾಹ್ನ 12:30]

41 comments:

Unknown said...

ಸುಶ್ರುತ,
ಬಹಳ ಚೆನ್ನಾಗಿದ್ದು, ಬಹಳ ದಿನದ ಮೇಲೆ ನಿನ್ನ ಬರಹ ಓದಿ ಬಹಳ ಖುಶಿಯಾತು. ಎಷ್ಟೊಂದು ಆಪ್ತ ಭಾವ!. ಥ್ಯಾಂಕ್ಸ್.

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
ನಿನ್ನ ಅಪ್ಪ-ಅಮ್ಮರ ಇಪ್ಪತ್ತೈದನೆಯ ಮದುವೆಯ ದಿನಕ್ಕೆ ನನ್ನದೂ ಶುಭಾಶಯ ತಿಳಿಸು.
ಜೊತೆಜೊತೆಗೆ ನಮಗೆಲ್ಲ ನಿನ್ನಂಥ ತಮ್ಮನನ್ನು ತಂದುಕೊಟ್ಟ ಅವರಿಗೆ ನನ್ನ ವಂದನೆಗಳನ್ನೂ.

ತೇಜಸ್ವಿನಿ ಹೆಗಡೆ said...

ಮೌನವಾಗಿ ಗಾಳ ಹಾಕ್ತ ಇದ್ದೆ ಹೇಳಿ ಗೊತ್ತಿತ್ತು.. ಅದ್ರೆ ಇಷ್ಟೊಳ್ಳೆ ಭಾವ ಪೂರ್ಣ ಬರದ ನಿನ್ನ ಗಾಳದಲ್ಲಿ ಸಿಕ್ಕಿ ಹೊರಬತ್ತು ಹೇಳಿ ಗೊತ್ತಿತ್ತಿಲ್ಲೆ. ನನ್ನ ಮನಸೂ ಏನೇನೋ ಭಾವಗಳು ತುಂಬಿ ಭಾರವಾಯಿತು. ನನ್ನ ಅಪ್ಪ-ಅಮ್ಮನ ದಾಂಪತ್ಯ ಪ್ರ್‍ಏಮ, ನಮ್ಮೆಲ್ಲರ ಬೆಳೆಸಲು ಅವರು ಮಾಡಿದ ತ್ಯಾಗಗಳೆಲ್ಲಾ ನೆನಪಿಗೆ ಬಂದವು. ನೆನಪಿಸಿದ್ದಕ್ಕೆ ಧನ್ಯವಾದಗಳು.

Anonymous said...

ಭಾವನೆಗಳು ತುಂಬಿ ಹರಿವ ಲೇಖನ... ಆತ್ಮೀಯವಾಯಿತು. ಮತ್ತು ಒಳ್ಳೆಯ ಸಂದೇಶವೂ ಇದೆಯಲ್ಲ.. ಚೆನ್ನಾಗಿದೆ.

Anonymous said...

ಇವತ್ತು ನಾನು ಓದಿಯೂ ಕಮೆಂಟ್ ಹಾಕದೇ ಇರಲಾರೆ.
ಅಪ್ಪ-ಅಮ್ಮನ ೨೫ ವರ್ಷದ ತುಂಬು ದಾಂಪತ್ಯ ಜೀವನಕ್ಕೆ ಮಗನ ಅಕ್ಕರೆಯ ಮಾತುಗಳು, ತುಂಬಾ ಹಿಡಿಸಿತು.

ಚಿತ್ರಾ said...

ಸುಶ್ರುತ,
ಮನಸ್ಸಿನಲ್ಲೆಲ್ಲಾ ಏನೋ ಒಂಥರಾ ಭಾವ. ರಾಶಿ ಚೆಂದ ಬರದ್ದೆ !ಅಪ್ಪ -ಅಮ್ಮನ ಮನಸ್ಸಿನಾಳಕ್ಕೆ ಗಾಳ ಹಾಕಲೆ ಬಂದಿದ್ರೆ , ಏನೆಲ್ಲ ನೆನಪುಗಳು ಸಿಕ್ತಿದ್ವೇನ ಅಲ್ದಾ?
ಓದ್ತಾ ಕಣ್ಣಂಚಲ್ಲಿ ಎರಡು ಹನಿ , ಗಂಟಲಲ್ಲಿ ಏನೋ ಸಿಕ್ಕಿದಂತೆ..
ನಿನ್ನಪ್ಪ -ಅಮ್ಮನ ಮದುವೆಯ ಇಪ್ಪತ್ತೈದು ವರ್ಷದ ವಾರ್ಷಿಕೋತ್ಸವದ ಸಂಭ್ರಮಕ್ಕೆ ನಂದೂ ಶುಭಾಶಯಗಳು !

Unknown said...

after a long time...! really good one. lots of memories-emotions-feelings....keep it up...
-Santhosh Ananthapura

Keshav.Kulkarni said...

ಸುಶ್ರುತ,
ಈ ಹಿಂದ ಕೂಡ ನೀನು ಅಮ್ಮನ ಬಗ್ಗೆ ಅಕ್ಕರೆಯಿಂದ ಬರೆದಿದ್ದೆ, ಆಗಲೂ ಓದುತ್ತಾ ಓದುತ್ತಾ ಭಾವುಕನಾಗಿದ್ದೆ, ಈಗ ಕೂಡ. ಮೊದಲ ಪ್ಯಾರಾ ನನ್ನನ್ನು ತುಂಬ ಕಾಡುತ್ತಿದೆ. ಮೊನ್ನೆ ತಾನೆ ವಸುಧೇಂದ್ರದ "ನನ್ನಮ್ಮ ಅಂದ್ರೆ ನಂಗಿಷ್ಟ" ಓದಿ ಆದ ತುಮುಲದಿಂದ ಇನ್ನೂ ಹೊರಬರಲಾಗದೇ ಒದ್ದಾಡುತ್ತಿದ್ದೇನೆ. ತುಂಬ ಆಪ್ತ ಬರಹ; ಕ್ಲೀಷೆಯಾದರೂ ಸರಿ, ಹ್ಯಾಟ್ಸ್ ಆಫ್ ಟು ಯು.
- ಕೇಶವ (www.kannada-nudi.blogspot.com)

sunaath said...

ಸುಶ್ರುತ,
ಅಪ್ಪ ಅಮ್ಮನ ದಾಂಪತ್ಯಕ್ಕೆ ಮಗ ಬರೆದ ಭಾಷ್ಯ!
ನಮ್ಮನ್ನೆಲ್ಲ ಭಾವುಕರನ್ನಾಗಿ ಮಾಡುತ್ತಿದೆ ಈ ಲೇಖನ.
ಇದನ್ನು ಬರೆದ ನಿನಗೂ, ನಿನ್ನನ್ನು ನಮಗೆ ನೀಡಿದ ನಿನ್ನ ತಂದೆ, ತಾಯಿಗೂ ನನ್ನ ಅಭಿನಂದನೆಗಳು.

ಸುಪ್ತದೀಪ್ತಿ suptadeepti said...

ಸುಶ್, ನಿನ್ನ ಬರಹಗಳಿಗೆ ನಾನು ಯಾವಾಗಲೂ ಸೋಲುವವಳೇ. ಅಷ್ಟೊಂದು ಸೊಗಸಾದ ಭಾವದ ಎಳೆಗಳನ್ನು ಅದೆಲ್ಲಿ ಗಾಳ ಹಾಕಿ ಹಿಡಿಯುತ್ತೀ, ಹೇಳು ಮರೀ.

ಹೌದು, ಓದುತ್ತಾ ಓದುತ್ತಾ ಕೊನೆಕೊನೆಗೆ ಕಣ್ಣು ಮಂಜಾಯ್ತು, ಸೆರೆಯುಬ್ಬಿ ಬಂತು, ಎದ್ದು ಹೋಗಿ ಮುಖ ತೊಳೆದುಕೊಂಡು ಬಂದು ಇದನ್ನು ಬರೆದೆ. ನಾನೂ ಒಂದು ಮನೆಯನ್ನು ಹೊಸದಾಗಿ ಹೊಕ್ಕು ಇಪ್ಪತ್ತೊಂದು ವರ್ಷಗಳೇ ಮಿಕ್ಕಿದವು. ಆಗಿನ ನೆನಪುಗಳು ಇನ್ನಷ್ಟು ಹಸಿಯಾದವು.

ನಿನ್ನ ಕನಸ ಕಿನ್ನರಿಯಾಗುವಾಕೆ (ಯಾರೇ ಆಗಿದ್ದರೂ, ಈಗೆಲ್ಲೇ ಇದ್ದರೂ)ತುಂಬಾ ಪುಣ್ಯ ಮಾಡಿದ್ದಾಳೆ ಕಣೋ. ಇಷ್ಟೆಲ್ಲ ನವಿರು ಭಾವಗಳನ್ನು ಹೊತ್ತವ ಅವಳನ್ನು ಹೂವಿನಂತೆಯೇ ಹೊರಬಲ್ಲೆ, ಇರಿಸಬಲ್ಲೆ.

sritri said...

ಸುಶೃತ, ನಾನು ಅಳುಬುರುಕಿ ಅಂತ ಗೊತ್ತಿತ್ತು. ಈ ಲೇಖನ ಓದಿ ಮತ್ತೆ ಪ್ರೂವ್ ಆಯಿತು. ಅಪ್ಪ-ಅಮ್ಮನ ಪ್ರೀತಿಯ ಬದುಕು ಚಿರಕಾಲ ಹೀಗೆ ಇರಲಿ ಎಂದು ಹಾರೈಸುವೆ.

ಆ ಮುಖ ಈ ಮುಖ
ಯಾವ ಗಂಡೋ ಯಾವ ಹೆಣ್ಣೋ
ಪ್ರೀತಿಯಿಂದ ಚುಂಬಕ! - ಬೇಂದ್ರೆ

Sushrutha Dodderi said...

@ ಮಧು,
ಥ್ಯಾಂಕ್ಸ್ ಮಾರಾಯಾ..

ಪುಟ್ಟಕ್ಕ,
ಧನ್ಯವಾದ -ಅಪ್ಪ ಅಮ್ಮನ ಪರವಾಗಿ. :-)

ತೇಜಕ್ಸ್,
ಹಾಂಗೆಲ್ಲಾ ಎಂಥೆತಲ್ಲ ಹೇಳಡ ಮಾರಾಯ್ತೀ..!

ಅವಿನಾಶ್,
ಧನ್ಯವಾದ ಗುರುಗಳೇ.. ಅಪರೂಪಕ್ಕೆ ಈ ಕಡೆ ಬಂದಿದ್ದಕ್ಕೆ.. ;)

ಜಲ,
;) ಥ್ಯಾಂಕ್ಸ್..

ಚಿತ್ರಕ್ಕ,
ನಿನ್ನ ಕಣ್ಣ ಹನಿಗಳಿಗೆ ನಾನು ಆಭಾರಿ..

Sushrutha Dodderi said...

ಅನಂತಪುರ,
Thanks boss!

ಕೇಶವ್,
ಧನ್ಯವಾದ. ಆದ್ರೂ.. ಕ್ಲೀಷೆಯೇ ಆಯ್ತು ಅನ್ಸುತ್ತೆ.. :| :|

ಕಾಕಾ,
ತುಂಬಾ ಥ್ಯಾಂಕ್ಸ್..

ಜ್ಯೋತಿ,
ಇಲ್ಲೂ ಕಿನ್ನರಿ ಸುದ್ದೀನಾ? ;) ಇರ್ಲಿ ಇರ್ಲಿ..
ತುಂಬಾ ಧನ್ಯವಾದ ಅಕ್ಕಾ ಚಂದ ಪ್ರತಿಕ್ರಿಯೆಗೆ..

ತ್ರಿವೇಣಿ ಮೇಡಂ,
ಹಾರೈಕೆಗೆ ಧನ್ಯವಾದ. ಬೇಂದ್ರೆ ಸಾಲು ಸೆಳೆದವು.

shivu.k said...

ಸುಶ್ರುತಾ,

ತುಂಬಾ ದಿನಗಳಾಗಿತ್ತು ನೀವು ಬರೆದು....ಬೇಟಿಯೂ ಕೂಡ....
ಅಪ್ಪ-ಅಮ್ಮನ ೨೫ ವರ್ಷದ ದಾಂಪತ್ಯಕ್ಕೆ ಶುಭಾಶಯಗಳು....ಇಬ್ಬರ ಬಗೆಗೂ ಲೇಖನ ತುಂಬಾ ಅಪ್ತವಾಗಿದೆ....ಅದರಲ್ಲೂ ಅಮ್ಮನ ಬಗ್ಗ್ good one... ಮುಂದುವರಿಸಿ....

Unknown said...

ಅದೆಲ್ಲಿಂದ ಹೀಗೆಲ್ಲಾ ಹೆಕ್ಕಿ ಬರೆಯುತ್ತೀ ನೀನು? ಹೊಟ್ಟೆಕಿಚ್ಚಾಗುತ್ತದೆ. ಮತ್ತೆ ಮತ್ತೆ ಓದಿ ಆರಿಸಿಕೊಳ್ಳುತ್ತೇನೆ ಕಿಚ್ಚನ್ನ
ಅಮ್ಮ-ಅಪ್ಪ ಧನ್ಯರು

ಶ್ರೀನಿಧಿ.ಡಿ.ಎಸ್ said...

ತೀರಾ ಆಫೀಸಲ್ಲಿ, ಕಂಪ್ಯೂಟರೆದ್ರಿಗೆ ಕಣ್ಣೀರ್ ಹಾಕ್ಸಡ ಮಾರಾಯ್ನೆ!

ಚೊಲೋ ಬರದ್ಯಲೆ ದೋಸ್ತಾ...

Annapoorna Daithota said...

ಮೊನ್ನೆಯಷ್ಟೇ ಕೇಳೋಣ ಅಂದ್ಕೊಂಡೆ, ನಿಮ್ಮ ಬ್ಲಾಗ್ನಲ್ಲೇಕೆ ಹೊಸ ಬರಹ ಕಾಣಿಸುತ್ತಿಲ್ಲ ಅಂತ, ಇದೀಗ
ಮತ್ತದೇ ಆತ್ಮೀಯ, ಭಾವುಕ ಬರಹ. ಚೆನ್ನಾಗಿದೆ ಸುಶ್ರುತ

Chin said...

Dosta,

Ati adbhutavagi baradde.. Heege barita iru..

teera officenalli kannu odde madisibityala..

-Chin

Sushrutha Dodderi said...

@ ಶಿವು,
ಧನ್ಯವಾದ ಶಿವು..

ಶರ್ಮ,
ಕಿಚ್ಚರಗಿಸಿಕೊಳ್ಳಲು ಮತ್ತೆ ಮತ್ತೆ ಓದೋದು -ನೈಸ್! :-)
ಥ್ಯಾಂಕ್ಸಣ್ಣಾ..

ಅನಾ,
:-) ಥ್ಯಾಂಕ್ಸ್.

ನಿಧಿ, ಚಿನ್ಮಯ,
ಕಣ್ಣಲ್ಲಿ ಹನಿ ತರಿಸಿದ ನಿಮ್ಮ ಒಳ್ಳೆಯ ಮನಸುಗಳಿಗೆ ಸಲಾಮು. ಧನ್ಯವಾದ.

Pramod P T said...

ವ್ಹಾ ವ್ಹಾ!.. ಸೂಪರ್ ಸುಶ್ರುತ.

ನನ್ನ ಕಡೆಯಿಂದ್ಲೂ ಅಭಿನಂದನೆಗಳು.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಸುಶ್, ಓದ್ತಾ ಓದ್ತಾ ನನ್ ಆಯಿ, ಮನೆ ಎಲ್ಲಾ ರಾಶಿ ನೆನಪಾತು.. :(
ಛೊಲೋ ಬರದ್ದೇ ತಮಾ..!

-Poornima

malavika said...

tumba hitavaada baraha....
nimmella barahagalu hrudayasparshiyagiruthave...
olleya baraha needidakke dhayavaadagalu...

- Malavika

Vijaya said...

:-)

Shrilatha Puthi said...

awesome!!!

ರಂಜನಾ ಹೆಗ್ಡೆ said...

ತುಂಬಾ ಚನ್ನಾಗಿ ಬರದ್ದೆ ಯಾವಾಗಿನಂತೆ....
ಅಪ್ಪ ಅಮ್ಮಂಗೆ ನನ್ನ ಶುಭಾಶಯಗಳು....
ನೂರು ವರುಷ ಹಾಯಾಗಿ ಇರಕು ಅಂಥಾ ಹಾರೈಸ್ತಿ.

Madhooo said...

ಬಹಳ ಬಹಳ ಇಷ್ಟವಾದ ಪೋಸ್ಟ್ ಇದು. ನನ್ನ ಮನಸ್ಸಿನಲ್ಲಿರುವದನ್ನು ನಿಮ್ಮ ಬರಹದಲ್ಲಿ ನೋಡಿದ ಹಾಗಾಯಿತು. ಸೂಕ್ಷ್ಮ ವಿಚಾರಗಳನ್ನು ಬಹಳ ಪ್ರೀತಿಯಿಂದ ಎಳೆ ಎಳೆಯಾಗಿ ಬಿಡಿಸಿದ್ದೀರಿ.
ಎಲ್ಲರಿಗೂ ಬರುವುದಿಲ್ಲ ಈ ತರಹ ಬರಹ. ಹೀಗೆ ನಿಮ್ಮ ಬರಹ ಹೃದಯಗಳನ್ನು ತಟ್ಟುತ್ತಾ, ಮನಸ್ಸುಗಳನ್ನು ಮುಟ್ಟುತ್ತಾ ಸಾಗಲಿ ಎಂದು ಹಾರೈಸುತ್ತೇನೆ.:)

Sushrutha Dodderi said...

@ Pramod, ಪೂರ್ಣಕ್ಕ, ಶ್ರೀಲತಾ, ರಂಜು,
ಧನ್ಯವಾದಾಆಆ..

malavika,
ಥ್ಯಾಂಕ್ಸ್! ನಿಮ್ಮ ಹೆಸರು ನನ್ನ ಇಷ್ಟದ ಹೆಸರುಗಳಲ್ಲೊಂದು.

vijaya,
:-)

ಮಧೂOOO,
ಹಾರೈಕೆಗೆ ಥ್ಯಾಂಕ್ಸ್ ಕಣ್ರೀ.. :)

Archu said...

sush,
ninna lekhanagaLe hage..tumbaa bhava poorNa ..manassannu tattuttave...

preetiyinda,
archana

Shweta said...

Sushruth,
ಹಳೆಯ ಮೇಲುಗಳ ರಾಶಿಯಿಂದ ಒಂದು ಹೆಕ್ಕಿ ತೆಗಿದಾಗ ಅದರಲ್ಲಿ ನನ್ನ ಸ್ನೇಹಿತರೊಬ್ಬರು ಕಳುಹಿದ ನಿಮ್ಮ ಬ್ಲಾಗಿನ ಲಿಂಕು ಇತ್ತು .ತುಂಬ ಕುಶಿ ಆಯಿತು .ಮನಕ್ಕೆ ತುಂಬ ಹತ್ತಿರ ವಾಗಿದೆ .ಧನ್ಯವಾದಗಳು .

Sushrutha Dodderi said...

@ Archu,
thanks kane..

Shweta,
ಧನ್ಯವಾದ.. ಬರುತ್ತಿರಿ..

ವಿನಾಯಕ ಕೆ.ಎಸ್ said...

ಸುಶ್ರುತ
ಇಷ್ಟುದಿನ ಹಿಡಿದಿಟ್ಟುಕೊಂಡ ಭಾವನೆಗಳನ್ನೆಲ್ಲ ಒಮ್ಮೆಗೆ ಹೊರಹಾಕಿದ್ದಂತೆ! ತುಂಬಾ ಉತ್ತಮ ಬರಹ. ಅಂದಹಾಗೆ ನಿನ್ನ ಬ್ಲಾಗಿನಲ್ಲಿ ಕಮ್ಮೆಂಟ್‌ ಮಾಡೋದು ಸ್ವಲ್ಪ ಕಷ್ಟ ಮಾರಾಯ. ಕಷ್ಟ ಅನ್ನೊದಕ್ಕಿಂತ ಚೊರೆ! ಕಮ್ಮೆಂಟನ್ನು ಸ್ವಲ್ಪ ಈಸಿಯಾಗಿ ಮಾಡುವಂತೆ ವ್ಯವಸ್ಥೆ ಮಾಡು...
ಕೋಡ್ಸರ

Sushrutha Dodderi said...

@ ಕೋಡ್ಸರ,
ಥ್ಯಾಂಕ್ಸ್ ಡಾ.. ಸರಿ ಮಾಡಿದ್ದಿ ಕಾಮೆಂಟ್ ಸೆಕ್ಷನ್ನು.

Ultrafast laser said...

ಅತಿ ಭಾವುಕತೆಯನ್ನು ಪಕ್ಕಕ್ಕಿಟ್ಟು ನೋಡಿದರೆ, ಅಂತಹ ತಣ್ಣಗಿನ ಹರಿವ ತೊರೆಯಂತಹ ದಾಂಪತ್ಯ ನಡೆಸಿದ ನಮ್ಮ ಪೂರ್ವಜರು ಅಭಿನಂದನಾರ್ಹರು. ಹಿಂದೆ ಸಾರ್ವತ್ರಿಕವಾಗಿ, ಈಗ ಸಂಸ್ಕೃತಿಯ ಪ್ರತೀಕಗಳಾಗಿ ಉಳಿದಿರುವ ಹಳ್ಳಿಗಳಲ್ಲಿ, ಕುಟುಂಬ ವ್ಯವಸ್ಥೆ ಒಂದು ಸುವ್ಯವಸ್ಥಿತ ರೀತಿಯಲ್ಲಿ ನಡೆದುಕೊಂಡು ಬಂದಿದೆ ಎಂದರೆ ಅದಕ್ಕೆ ಕಾರಣ - ಹಿಂದಿನವರ ತಾಳ್ಮೆ ಹಾಗು ಸಹಿಷ್ಣುತೆ ಜೊತೆಗೆ ಜಾನಪದೀಯವಾಗಿ ಬಂದ ಕೃಷಿಕ-ಕಾರ್ಯ ಕ್ಷಮತೆ.
ಸುನೀತ ಭಾವನೆಗಳ ಹಿಡಿತ ಚೆನ್ನಾಗಿರುವ ನಿನಗೆ ಅಂತಹುದೇ ಸಂಗಾತಿ ಸಿಗಲಿ ಎಂದು ಜ್ಯೋತಿ ಯವರು ಹಾರೈಸಿದ್ದಾರೆ, ಆದರೆ ನೆನಪಿರಲಿ, ಈವರೆಗೆ ನಾವು ಕಂಡ ಅತ್ಯಂತ ವಿಲಷಣ ವಿದೂಷಕ ಎಂದರೆ ಖುದ್ಧು ಭಗವಂತನೇ!. ಆದರೆ ನಿನ್ನ ವಿಚಾರದಲ್ಲಿ ಭಗವಂತ ಸಿರಿಯಸ್ ಆಗಿ ಆಲೋಚಿಸಲಿ ಎಂದು ಹಾರೈಸುತ್ತೇನೆ.
ಕೊನೆಗೆ, ಈ ಸದ್ಧಾಗದಂತೆ ಚಿಲುಕ ಹಾಕುವ ಕಲೆ !! - ಒಂದು ಕ್ಷಣ ಮನಸ್ಸು ಹೋಲಿಸಿ ನೋಡಿತು. ಅವಿಭಕ್ತ ಕುಟುಂಬಗಳಲ್ಲಿ ಸದ್ಧಾಗದೆ ಚಿಲುಕ ಹಾಕುವ ಕಲೆ ಗೊತ್ತಿರಲೀ ಬೇಕು, ಎನ್ನುವುದನ್ನು "ಇಲ್ಲಿ ವಿದೇಶದಲ್ಲಿ ಇಡೀ ಮನೆಯನ್ನೇ ಶಯನಾಗಾರವನ್ನಾಗಿಸಿಕೊಳ್ಳುವ " ಪರಿಸರದಲ್ಲಿ ಸ್ವಲ್ಪ ಸೋಜಿಗವಾಗಿ ತರಿಸಿತು. D.M.Sagar

ಭಾರ್ಗವಿ said...

ತುಂಬಾ ಆಪ್ತವಾದ ಬರಹ, ನಿಮ್ಮ ಬ್ಲಾಗ್ ಗೆ ನಾನು ಹೊಸಬಳಲ್ಲ. ಈ ಮೊದಲು ಕಮೆನ್ಟಿಸಿರಲಿಲ್ಲ. ತಂದೆ ತಾಯಿಯವರ ಬಗ್ಗೆ ಚೆನ್ನಾಗಿ ಅರ್ಥೈಸಿಕೊಂಡು ಬರೆದಿದ್ದೀರಿ. ನಿಮ್ಮ ತಂದೆ ತಾಯಿಯವರಿಗೆ ನನ್ನ ಶುಭಾಶಯಗಳನ್ನು ತಿಳಿಸಿ.ನನ್ನ ತಂದೆ ತಾಯಿ ಬಗ್ಗೆ ಓದಿದಂತಾಯಿತು. ಅವರ ಮದುವೆಯ ೨೫ನೆ ವರ್ಷ ನಾನು ಭಾರತದಲ್ಲೂ ಇರಲಿಲ್ಲ
:(.ನಿಮ್ಮ ಲೇಖನ ಓದಿ ಮತ್ತೊಮ್ಮೆ ಎಲ್ಲಾ ನೆನಪಿಸಿಕೊಂಡೆ.ಚಂದದ ಬರಹಕ್ಕೆ ಅಭಿನಂದನೆಗಳು:).

Nisha said...

Simply superb narration. Made me remember my parents who are no more on earth but who will always be in my heart.

Sushrutha Dodderi said...

DMS,
ಒಳ್ಳೆಯ ಪ್ರತಿಕ್ರಿಯೆಗೆ ಧನ್ಯವಾದ ಮಂಜಣ್ಣಾ..

ಭಾರ್ಗವಿ,
ಅಭಿನಂದನೆಗೆ ಧನ್ಯವಾದ..

Nisha,
Thanks a lot.. Keep coming.

Umesh Balikai said...

ಹೊಸದಾಗಿ ಬರೆಯ ಹೋರಾಟವರಿಗೆ ಹಚ್ಚಿಕೊಟ್ಟ ದೀವಿಗೆಯಂತಿದೆ ನಿಮ್ಮ ಬರಹ. ತುಂಬಾ ಇಷ್ಟವಾಯಿತು. ಭಾವನೆಗಳು ಎಲ್ಲರ ಮನದಲ್ಲೂ ಇರುತ್ತವೆ. ಅವುಗಳಿಗೊಂದು ಸುಂದರವಾದ ಅಕ್ಷರ ರೂಪ ಕೊಡುವ ವಿದ್ಯೆ ತುಂಬಾ ಕಡಿಮೆ ಜನಕ್ಕೆ ಸಿದ್ಧಿಸಿರುತ್ತದೆ. ನೀವೂ ಅಂಥವರಲ್ಲೊಬ್ಬರು.
-ಉಮೇಶ್

Sree said...

chweet!:)

Bhargavi Bhat said...

i am touched....**tears**....

Raghavendra Hegde said...

heart touching...

Parisarapremi said...

sakkath kaNayya.. keep it up.. :-)