ನನ್ನ ಮಹತ್ವದ ಯೋಜನೆಗಳಲ್ಲಿ ಇಂಥವು ಬಹಳ: ಹೇಗಾದರೂ ಮಾಡಿ, ಇನ್ನು ಯಾರೂ ‘ಕಡ್ಡಿ ಫೈಲ್ವಾನ್’ ಅಂತ ಕರೆಯದ ಹಾಗೆ ದಪ್‍ಪ್‍ಪ್ಪ ಆಗಬೇಕು (ಚಿಕನ್ ತಿನ್ನು, ಪ್ರತಿದಿನ ಒಂದೇ ಒಂದು ಪಿಂಟ್ ಬಿಯರ್ ಕುಡಿ -ಗೆಳೆಯರ ಸಲಹೆಗಳು). ಈ ತಿಂಗಳ ಒಂದನೇ ತಾರೀಖಿನಿಂದ ಜಿಮ್ಮಿಗೆ ಸೇರಿಕೊಂಡು ಬಿಡಬೇಕು (ಸುಮಾರು ಒಂದನೇ ತಾರೀಖುಗಳು ಕಳೆದುಹೋಗಿವೆ). ಇಷ್ಟರೊಳಗೆ ಯಾರಿಂದಲೂ ಕಂಡುಹಿಡಿಯಲಾಗದ ವಸ್ತುವೊಂದನ್ನು ಕಂಡುಹಿಡಿಯಬೇಕು (ಬಚಾವ್, ನಾನು ವಿಜ್ಞಾನಿಯಲ್ಲ). ಒಂದು ದಿನ, ಯಾರೆಂದರೆ ಯಾರಿಗೂ ಹೇಳದೇ, ಸಿಕ್ಕಿದ ಟ್ರೈನ್ ಹತ್ತಿ, ಗೊತ್ತೇ ಇಲ್ಲದ ಊರಿಗೆ ಹೋಗಿಬಿಡಬೇಕು. ಒಂದು ತಿಂಗಳು ಅಲ್ಲಿ ಭೂಗತನಾಗಿದ್ದು ವಾಪಸು ಬರಬೇಕು (ಇದನ್ನು ಮಾತ್ರ ಮಾಡಿಯೇ ತೀರುವವನಿದ್ದೇನೆ!).
ಇವುಗಳ ಸಾಲಿಗೇ ಸೇರುವ ನನ್ನ ಮತ್ತೊಂದು ಯೋಜನೆ ಎಂದರೆ, ‘ಒಮ್ಮೆ ಮೀಸೆ ಬೋಳಿಸಿ ನೋಡಬೇಕು’ ಎಂಬುದು! ನೀವು ಕೇಳಬಹುದು, ‘ಮೀಸೆ ತೆಗೆಯುವುದು ಅಂತಹ ಮಹತ್ವದ ಯೋಜನೆ ಹೇಗೆ? ಅದೇನು ಹಿಮಾಲಯ ಹತ್ತಿಳಿಯೋ ಹಾಗಾ?’ ಎಂದು. ನನ್ನ ಪ್ರಕಾರ ಅದು ಮಹತ್ವದ ಯೋಜನೆಯೇ. ಏಕೆಂದರೆ, ನನಗೆ ಬೋಳಿಸಬೇಕೆಂದಿರುವುದು ನನ್ನದೇ ಮೀಸೆ! (೧) ನೀವು ಯಾವಾಗಲೂ ಮೀಸೆ ತೆಗೆದಿರುವವರೇ ಆಗಿದ್ದರೆ ಅಥವಾ (೨) ನೀವು ಪದೇ ಪದೇ ಮೀಸೆ ತೆಗೆದು-ಮತ್ತೆ ಬಿಟ್ಟು-ಮತ್ತೆ ತೆಗೆದು -ನಿಮ್ಮ ಮುಖವನ್ನು ಫ್ರೆಂಚು, ಗಡ್ಡ, ಲಾಕು ಅಂತೆಲ್ಲ ಪ್ರಯೋಗಗಳಿಗೆ ಒಳಪಡಿಸುವ ಗುಂಪಿಗೆ ಸೇರಿದವರಾದರೆ ಅಥವಾ (೩) ನೀವು ಇನ್ನೂ ಮೀಸೆಯೇ ಬಂದಿಲ್ಲದ ಎಳೆಯ ಹುಡುಗನಾಗಿದ್ದರೆ ಅಥವಾ (೪) ನೀವು ಹೆಂಗಸಾಗಿದ್ದರೆ -ನಾನೀಗ ಹೇಳುತ್ತಿರುವುದು ಸರಿಯಾಗಿ ಅರ್ಥವಾಗದೇ ಹೋಗಬಹುದು. ಅಥವಾ ತಮಾಷೆ ಅನ್ನಿಸಬಹುದು. ಆದರೆ ನೀವು ‘ಮೀಸೆ ತೆಗೆದರೆ ನಾನು ಹೇಗೆ ಕಾಣುತ್ತೇನೋ’ ಎಂಬ ಭಯ ಇರುವ ನನ್ನಂಥವರ ಗುಂಪಿಗೆ ಸೇರಿದವರಾದರೆ ನನ್ನ ಕಷ್ಟ ನಿಮಗೆ ಅರ್ಥವಾಗುತ್ತದೆ.
ನನಗೆ ನನ್ನ ಮೂಗಿನ ಕೆಳಗೆ ಯಾವಾಗ ಈ ಕಪ್ಪು ಕೂದಲುಗಳು ಮೂಡಿದವೆಂಬ ದಿನಾಂಕ ನೆನಪಿಲ್ಲ. ನಮ್ಮ ಎಸ್ಸೆಸ್ಸೆಲ್ಸಿ ಬ್ಯಾಚಿನ ಗ್ರೂಪ್ ಫೋಟೋದಲ್ಲಿ ಹೌದೋ ಇಲ್ಲವೋ ಎಂಬಂತೆ ಕಾಣುವ ಇದು, ಕಾಲೇಜ್ ಗ್ರೂಪ್ ಫೋಟೋದಲ್ಲಿ ಸ್ವಲ್ಪ ಢಾಳಾಗೇ ಕಾಣುತ್ತೆ. ಬಹುಶಃ ನಾನು ಹೈಸ್ಕೂಲಿನ ಡೆಸ್ಕಿನ ಮೇಲೆ ಕೈವಾರದಿಂದ ಚಿತ್ರ ಕೊರೆಯುತ್ತಿದ್ದಾಗಲೇ ನನ್ನ ಮೇಲ್ದುಟಿಗಳ ಮೇಲೆ ಶುರುವಾದ ಈ ಶ್ಮಶ್ರುಬೆಳೆ, ಹಾಗೇ ಅವ್ಯಾಹತವಾಗಿ ಮುಂದುವರೆದು ಕಾಲೇಜಿನ ರಿಸಲ್ಟ್ ನೋಡಲು ಹೋಗುವ ವೇಳೆಗೆ ಕಟಾವಿಗೆ ಬಂದಿರಬೇಕು. ಅದಕ್ಕೇ ಮತ್ತೆ, ರಿಸಲ್ಟ್ ನೋಡಿ ವಾಪಸ್ ಬರುತ್ತಿದ್ದಾಗ ಸಿಕ್ಕ ಸದಾಶಿವನೆಂಬ ಹೈಸ್ಕೂಲು ಗೆಳೆಯ ನನ್ನನ್ನು ನಿಲ್ಲಿಸಿ ‘ಓಹ್, ಸುಶ್ರುತ ಅಲ್ಲೇ ನೀನು? ಗುರ್ತೇ ಸಿಕ್ಕದಿಲ್ಲಲಾ ಮಾರಾಯಾ! ಆವಾಗ ಸಣ್ಣಕ್ ಇದ್ದೆ; ಈಗ ಮೀಸೆ-ಗೀಸೆ ಬಂದು ಒಳ್ಳೇ ದೊಡ್ ಗಂಡ್ಸಿನ್ ಹಂಗೆ ಕಾಣ್ತಿದೀಯಾ’ ಅಂದದ್ದು!
ಮತ್ತು ಅವತ್ತೇ ನಾನು ಯಾರಿಗೂ ಕಾಣದಂತೆ ಅಪ್ಪನ ರೇಸರ್ ಸೆಟ್ಟಿನ ಜೊತೆಗಿದ್ದ ಪುಟ್ಟ ಕತ್ತರಿಯಿಂದ ಹಾಗೆ ಉದ್ದುದ್ದ ಬೆಳೆದಿದ್ದ ಮೀಸೆಯ ಕೂದಲುಗಳನ್ನು ಕತ್ತರಿಸಿ ‘ಟ್ರಿಮ್’ ಮಾಡಿಕೊಂಡದ್ದು! ಅಪ್ಪನಿಗೆ ಗೊತ್ತಾದರೂ ಸುಮ್ಮನಿದ್ದದ್ದು!
ಅದೆಲ್ಲಾ ಇರಲಿ, ಒಂದಂತೂ ಸತ್ಯ: ನನಗೆ ಬರಬೇಕಿದ್ದ ಕಾಲಕ್ಕೆ ಮೀಸೆ ಬಂದಿತ್ತು. ಕನ್ನಡಿ ನೋಡಿಕೊಂಡಾಗಲೆಲ್ಲ ‘ನೀನು ಗಂಡಸು ಕಣೋ’ ಅಂತ ಹೇಳುತ್ತಿತ್ತು. ಮತ್ತೆ, ಆವಾಗ ‘ಹವ್ಯಕ ಬ್ರಾಹ್ಮಣರಲ್ಲಿ ವಧುಗಳ ಕೊರತೆ’ ಇನ್ನೂ ಶುರುವಾಗಿರದಿದ್ದರಿಂದಲೋ ಏನೋ, ‘ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು’ ಎಂಬ ಕಾಶಿನಾಥನ ಚಿತ್ರಗೀತೆ ನನ್ನ ಗುನುಗುಗಳಲ್ಲೊಂದಾಗಿತ್ತು.
ನಾನು ನೀವಿದ್ದಕ್ಕೇ ಖುಶಿಯಾಯ್ತೋ ಎಂಬಂತೆ ಮೀಸೆ ಬೆಳೆಯುತ್ತಾ ಹೋಯ್ತು. ಬೆಂಗಳೂರಿನಲ್ಲಿ ವಿವಿಧ ರೀತಿಯ ಮೀಸೆ ಬಿಟ್ಟವರೆಲ್ಲ ಕಾಣುತ್ತಿದ್ದರು. ರಾಜ್‌ಕುಮಾರ್ ಥರ ಸಣ್ಣಮೀಸೆ, ವೀರಪ್ಪನ್ ಥರ ಹುರಿಮೀಸೆ, ಚಾಪ್ಲಿನ್ ಥರ ಪುಟ್ಟ ಮೀಸೆ (ಪ್ಲೀಸ್, ಉದಾಹರಣೆಗಾಗಿ ಹೇಳಿದ್ದು ಅಷ್ಟೇ), ಹಾಗೇ ಚೂಪುಮೀಸೆ, ಚುಪುರುಮೀಸೆ, ಬಿಲ್ಲಿನಂತಹ ಮೀಸೆ, ಇನ್ನೂ ಏನೇನೋ. ಆದರೆ ಇವರೆಲ್ಲರಿಗಿಂತ ನನಗೆ ಈ ಮೀಸೆ ತೆಗೆದವರೇ ಗ್ರೇಟ್ ಗಂಡಸರಂತೆ ಕಾಣುತ್ತಿದ್ದರು. ಅವರಂತೆ ನಾನೂ ಒಮ್ಮೆ ಮೀಸೆಯನ್ನು ಪೂರ್ತಿಯಾಗಿ ತೆಗೆದು ನೋಡಬೇಕು ಅಂತ ಅನ್ನಿಸುತ್ತಿತ್ತು. ಆದರೆ ಧೈರ್ಯ ಸಾಲುತ್ತಿರಲಿಲ್ಲ.
ನನ್ನ ಹಳೆಯ ಆಫೀಸಿನ ಕಲೀಗು ವಿಕ್ರಮ್, ನಾನು ಜಾಬ್ ಇಂಟರ್ವ್ಯೂಗಳಲ್ಲಿ ಆಯ್ಕೆಯಾಗದೇ ಇರುತ್ತಿದ್ದುದಕ್ಕೆ ಕಾರಣ ನನ್ನ ಮೀಸೆಯೇ ಅಂತ ವಾದಿಸುತ್ತಿದ್ದ. ಅವನ ಪ್ರಕಾರ ಮೀಸೆಯಿದ್ದವರು ಇನ್ನೂ ‘ಪ್ರೌಢತ್ವ ಪ್ರಾಪ್ತವಾಗದವರು’. ಮೀಸೆ ತೆಗೆದರೂ ಗಂಡಸಿನ ಹಾಗೆ ಕಾಣಿಸುವವನೇ ನಿಜವಾದ ಗಂಡಸು ಎಂಬುದವನ ತರ್ಕವಾಗಿತ್ತು. "ನೀವು ಒಮ್ಮೆ ಮೀಸೆ ತೆಗ್ದು ನೋಡಿ ಸುಶ್ರುತ್.. ಆಗ ಮುಖದಲ್ಲಿ ಸೀರಿಯಸ್‌ನೆಸ್ ಬರುತ್ತೆ. ಹ್ಯಾಗೆ ಪಟ್ಟಂತ ಸೆಲೆಕ್ಟ್ ಆಗ್ತೀರೋ ನೋಡಿ ಜಾಬ್‌ಗೆ!" ಅಂದಿದ್ದ ವಿಕ್ರಮ್.
ಆದರೆ ಮೀಸೆ ತೆಗೆದುಬಿಟ್ಟರೆ ನಾನೆಲ್ಲಿ ಹುಡುಗಿ ಥರ ಕಾಣ್ತೀನೋ ಎಂಬುದು ನನ್ನ ಭಯ. ಕನ್ನಡಿ ಮುಂದೆ ನಿಂತಾಗ ನನ್ನ ತೋರುಬೆರಳುಗಳಿಂದ ಮೀಸೆ ಮುಚ್ಚಿಕೊಂಡು ನಾನು ಮೀಸೆ ತೆಗೆದಾಗ ಹೇಗೆ ಕಾಣಬಹುದು ಅಂತ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ಕಲ್ಪನೆಯೇ ಸರಿಯಾಗಿ ಆಗುತ್ತಿರಲಿಲ್ಲ. ಕೊನೆಗೆ ಫೋಟೋಶಾಪಿನಲ್ಲಿ ನನ್ನ ಫೋಟೋದ ಮೀಸೆ ಅಳಿಸಿ ನೋಡಿದೆ. ಆಗ ಅದೊಂಥರಾ ಪ್ರೇತದ ಹಾಗೆ ಕಂಡಿತು. ನೋಡಿದ ನನ್ನ ಕಲೀಗುಗಳು ನಗಾಡಿಬಿಟ್ಟರು. ಇದರ ಸಹವಾಸವೇ ಬೇಡ ಅಂತ ಸುಮ್ಮನಾಗಿಬಿಟ್ಟೆ.
ಮೊನ್ನೆ ನನ್ನ ರೂಮ್‌ಮೇಟು ಊರಿಗೆ ಹೋಗಿದ್ದ ಭಾನುವಾರ ನಾನೊಬ್ಬನೇ ಮನೆಯಲ್ಲಿದ್ದೆ. ಮಾಡಲಿಕ್ಕೇನೂ ಕೆಲಸವಿರಲಿಲ್ಲ, ಮಧ್ಯಾಹ್ನ ಹನ್ನೆರಡರ ಹೊತ್ತಿಗೆ ಸ್ನಾನಕ್ಕೆ ಹೊರಟವನಿಗೆ ಕನ್ನಡಿ ಕಂಡಿದ್ದೇ ಅಪಶಕುನವಾಗಿಹೋಯಿತು. ಈ ಕನ್ನಡಿ ದಾಡಿ ಮಾಡದ ನನ್ನ ಮುಖವನ್ನು ಪ್ರಾಮಾಣಿಕವಾಗಿ ಹಾಗೇ ತೊರಿಸಿಬಿಟ್ಟಿತು. ತಕ್ಷಣ ‘ಓಹ್, ಶೇವಿಂಗ್ ಮಾಡ್ಕೋಬೇಕು’ ಎಂಬುದು ಹೊಳೆದುಬಿಟ್ಟಿತು. ಸರಿ, ಮುಖದ ತುಂಬ ಕ್ರೀಮ್ ಹಚ್ಚಿಕೊಂಡು, ‘ಜಿಲೆಟ್ಟಿ ಸಖತ್ತಾಗಿ ಬರುತ್ತೆ’ ಅಂದಿದ್ದ ಗೆಳೆಯನ ಮಾತು ಕೇಳಿ ತಂದುಕೊಂಡಿದ್ದ ರೇಸರಿನಿಂದ ಶೇವ್ ಮಾಡಿಕೊಳ್ಳತೊಡಗಿದೆ. ಈ ಏರ್?ಟೆಲ್ ಕಂಪನಿಯವರಿಗೆ ಭಾನುವಾರವೂ ರಜೆ ಇಲ್ಲವೋ ಅಥವಾ ಉಪೇಂದ್ರ ಮಾತಾಡಿದ ಕಾಲರ್‌ಟ್ಯೂನನ್ನು ನಾನು ಡೌನ್‌ಲೋಡ್ ಮಾಡಿಕೊಳ್ಳುವವರೆಗೆ ನಿದ್ದೆ ಮಾಡುವುದಿಲ್ಲ ಅಂತ ಹರಕೆ ಹೊತ್ತುಕೊಂಡಿದ್ದಾರೋ ಏನೋ, ಸರಿಯಾಗಿ ನನ್ನ ರೇಸರ್ ಕಪಾಳದಿಂದ ಕೆಳಕ್ಕಿಳಿಯುತ್ತಿದ್ದಾಗ ರಿಂಗ್ ಮಾಡಿದರು. ಅದ್ಯಾವಾಗ ಆ ಪರಿ ಹೈ ವಾಲ್ಯೂಮಿನಲ್ಲಿಟ್ಟುಕೊಂಡಿದ್ದೆನೋ ಏನೋ, ಒಳ್ಳೇ ಅಕ್ಕಚ್ಚಿಗೆ ಕೊಡದ ಜರ್ಸಿ ದನದ ಥರ ಕೂಗಿಕೊಂಡಿತು ನನ್ನ ಮೊಬೈಲು. ಬೆಚ್ಚಿಬಿದ್ದವನಂತೆ ತಿರುಗಿ ನೋಡಿದೆ, ಓಡಿ ಹೋಗಿ ಟೀಪಾಯಿಯ ಮೇಲಿದ್ದ ಮೊಬೈಲನ್ನು ಕ್ರೀಮ್ ಹತ್ತದಂತೆ ಹುಷಾರಾಗಿ ಕಿವಿಗಿಟ್ಟುಕೊಂಡೆ, ಉಪ್ಪಿ ಶುರುಮಾಡುತ್ತಿದ್ದಂತೆಯೇ ‘ಥೂ, ಈ ಏರ್‌ಟೆಲ್ ಮನೆ ಹಾಳಾಗ!’ ಅಂತ ಬೈದುಕೊಂಡು ಕಟ್ ಮಾಡಿದೆ, ತಿರುಗಿ ಬಂದು ಕನ್ನಡಿಯೆದುರು ನಿಂತೆ. ಜಿಲೆಟ್ಟಿ ಒಂದು ಮಹತ್ಕಾರ್ಯ ಮಾಡಿತ್ತು.
ನನಗೆ ಅದುವರೆಗೆ ಕಲ್ಪನೆಯೇ ಇರಲಿಲ್ಲ: ಈ ಜಿಲೆಟ್ಟಿ, ಮೊಬೈಲು, ಉಪೇಂದ್ರ, ಏರ್‌ಟೆಲ್ಲು, ಕನ್ನಡಿ ಎಲ್ಲರಿಗೂ ನನ್ನ ಮೀಸೆಯ ಮೇಲೆ ಅದೆಂತಹ ಹೊಟ್ಟೆಕಿಚ್ಚಿತ್ತು ಅಂತ. ಅಷ್ಟು ವರ್ಷಗಳಿಂದ ಒಬ್ಬ ಮುತ್ತೈದೆ ಹಣೆಯ ಕುಂಕುಮವನ್ನು ಜೋಪಾನವಾಗಿ ಕಾಯ್ದುಕೊಂಡು ಬರುವಂತೆ ನಿಗಾ ವಹಿಸಿಕೊಂಡು ಬಂದಿದ್ದ ನನ್ನ ಮೀಸೆಯ ಬಲಭಾಗವನ್ನು ಜಿಲೆಟ್ಟಿ ಕ್ಷಣದಲ್ಲಿ ಸವರಿಹಾಕಿತ್ತು! ಕರೆಂಟ್ ಹೊಡೆದವನಂತೆ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿ ನೋಡಿಕೊಂಡೆ. ನನ್ನ ಪ್ರತಿಬಿಂಬವೂ ಬಾಯಿ ಕಳೆದು, ಕಣ್ಣು ಮಿಟುಕಿಸಿ ದೊಡ್ಡದಾಗಿ ಮಾಡಿತೇ ಹೊರತು ಮೀಸೆಯ ಸವರಿದ ಜಾಗದಲ್ಲಿ ಏನೂ ಬದಲಾವಣೆ ಆಗಲಿಲ್ಲ. ನನಗೆ ಸಿಇಟಿ ಫೇಲಾದಷ್ಟು ಬೇಸರವಾಗಿ ಕುಸಿದು ಕುಳಿತೆ.
ಸಿನಿಮಾಗಳಲ್ಲಿ ಇಂತಹ ಪ್ರಕರಣ ನಡೆದದ್ದು ನೋಡಿ ಗೊತ್ತಿತ್ತೇ ಹೊರತು ನನಗೆ ಇಷ್ಟು ಹತ್ತಿರದಲ್ಲಿ ದುರ್ಘಟನೆಯೊಂದು ಸಂಭವಿಸಿದಾಗ ಏನು ಮಾಡಬೇಕೆಂದೂ ಗೊತ್ತಿರಲಿಲ್ಲ. ಮೀಸೆಯೆಂದರೆ ಮುಖದ ಮೇಲಿನ ಕಪ್ಪು ಕಾಮನಬಿಲ್ಲಿನಂತೆ. ಅದಿದ್ದರೇನೇ ಗಂಡಸಿನ ಮುಖಕ್ಕೊಂದು ಲಕ್ಷಣ. ಅದೇ ಇಲ್ಲದಿದ್ದರೆ?
ಪಾರ್ಶ್ವವಾಯು ಹೊಡೆದವನಂತೆ ಕೂತಿದ್ದ ನನ್ನನ್ನು ಕರೆದೊಯ್ಯಲು ಯಾವ ಆಂಬುಲೆನ್ಸೂ ಬರುವ ಲಕ್ಷಣ ಕಾಣಲಿಲ್ಲ. ಒಂದೆರಡು ಹನಿ ಕಣ್ಣೀರಾದರೂ ಉದುರಿಸೋಣವೆಂದುಕೊಂಡವನು ಸೀನ್ ಸ್ವಲ್ಪ ಜಾಸ್ತಿ ಆಗುತ್ತೇನೋ ಅನ್ನಿಸಿ ಸುಮ್ಮನಾದೆ. ಅರ್ಧ ಭಾಗ ಮಾತ್ರ ಉಳಿದಿದ್ದ ನನ್ನ ಮೀಸೆಯನ್ನು ಮತ್ತೊಮ್ಮೆ ಕಣ್ತುಂಬ ನೋಡಿಕೊಂಡೆ. ಜಿಲೆಟ್ಟಿಗೆ ಬಲಿಯ ಜೀವ ಪೂರ್ತಿ ತೆಗೆದುಕೊಳ್ಳುವಂತೆ ಸೂಚಿಸಿದೆ.
ಸ್ನಾನ ಮಾಡಿ ಹೊರಬರುವಾಗ ‘ಸಧ್ಯ, ಇವತ್ತು ರೂಮ್‌ಮೇಟ್ ಮನೇಲಿಲ್ಲ’ ಅಂತ ನಿಟ್ಟುಸಿರು ಬಿಟ್ಟೆ. ಒಬ್ಬನೇ ಇದ್ದಾಗ ಅವಮಾನವಾಗುವುದಕ್ಕೂ ನಾಲ್ಕು ಜನರ ಎದುರಿಗೇ ಆಗುವುದಕ್ಕೂ ವ್ಯತ್ಯಾಸವಿರುತ್ತದೆ. ಅವನಿದ್ದಿದ್ದರೆ ನನ್ನ ಶೇವಿಂಗ್ ಕಾರ್ಯ ಮುಗಿಯುತ್ತಿದ್ದಂತೆಯೇ ಉಗಿಯುತ್ತಿದ್ದ. ಈಗಾದರೆ ಹಾಗಲ್ಲ; ನಾನು ಮನುಷ್ಯಲೋಕವನ್ನು ಎದುರಿಸಲು ಮಾನಸಿಕವಾಗಿ ಸನ್ನದ್ಧನಾಗಲಿಕ್ಕೆ ಸಮಯವಿದೆ. ಹಾಗಂದುಕೊಂಡು, ಬಟ್ಟೆ ಧರಿಸಿ ಕನ್ನಡಿ ಮುಂದೆ ನಿಂತೆ. ಜಗತ್ತಿನ ಪೆಕರರ ಸಂಘದ ಅಧ್ಯಕ್ಷನೇ ನಾನಿರಬೇಕು ಅನ್ನಿಸಿತು. ಸಾವರಿಸಿಕೊಂಡೆ. ಸಮಾಧಾನ ಮಾಡಿಕೊಂಡೆ. ಒಂದಲ್ಲಾ ಒಂದು ದಿನ ಮೀಸೆ ತೆಗೆದು ನೋಡಬೇಕು ಅಂದುಕೊಂಡಿದ್ದ ನನ್ನ ಯೋಜನೆಯಂತೂ ಈಡೇರಿದೆ, ಇನ್ನು ಯಾರು ಏನೇ ಅಂದರೂ ಶಾಂತಚಿತ್ತದಿಂದ ಸ್ವೀಕರಿಸಬೇಕು ಅಂತ ತೀರ್ಮಾನಿಸಿದೆ. ನನಗೆ ನಾನೇ ‘ಬಾಲಿವುಡ್ ಹೀರೋ ಹಾಗೆ ಕಾಣ್ತಿದೀಯಾ ಬಿಡು’ ಅಂತ ಬೆನ್ತಟ್ಟಿಕೊಂಡೆ.
ದಿನವೂ ಹೋಗುವ ಹೋಟೆಲ್ಲಿಗೆ ಹೋಗಲು ಭಯವಾಗಿ ಹೊಸ ಹೋಟೆಲ್ಲಿಗೆ ಹೋದೆ. ಆದರೂ ಕ್ಯಾಶಿಯರ್ರಿನಿಂದ ಹಿಡಿದು ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿತು. ಆವತ್ತು ಯಾವ ಗೆಳೆಯರನ್ನೂ ಕಾಣಲು ಹೋಗಲಿಲ್ಲ. ಮರುದಿನ ಆಫೀಸಿಗೆ ಹಿಂಜರಿಯುತ್ತಲೇ ಹೋದೆ. ಕಲೀಗುಗಳ ಹೋ ನಗು. "ಗರ್ಲ್ ಫ್ರೆಂಡ್ ಚುಚ್ಚುತ್ತೆ ಅಂದ್ಲೇನ್ರೀ?"ಯಿಂದ "ಯಕ್ಷಗಾನದಲ್ಲಿ ಸ್ತ್ರೀಪಾತ್ರ ಮಾಡೋಕೆ ಹೋಗಿದ್ಯಾ?" ತನಕ ಪ್ರತಿಕ್ರಿಯೆಗಳು, ಹೀಯಾಳಿಕೆಗಳು, ಕಾಲೆಳೆಯುವಿಕೆಗಳು. ಅಷ್ಟು ದಿನ ಒಂದೂ ಮಾತಾಡದ ಕಲೀಗೊಬ್ಬಳು "ಐ ಲೈಕ್ ಗಯ್ಸ್ ವಿಥ್ ಮಸ್ಟಾಕ್" ಎಂದುಬಿಟ್ಟಳು. ಆದರೂ ‘ನೆನಪಿಗಿರಲಿ’ ಅಂತ ಒಂದೆರಡು ಫೋಟೋ ನಾನೇ ತೆಗೆದುಕೊಂಡೆ. ಧೈರ್ಯ ಮಾಡಿ ಆರ್ಕುಟ್ಟಿಗೂ ಹಾಕಿದೆ. ಕೆಲವರು ‘ಹಾರಿಬಲ್’ ಅಂದರು, ಕೆಲವರು ‘ಮದುವೆ ಯಾವಾಗ?’ ಕೇಳಿದರು, ಇನ್ನು ಕೆಲವರು ‘ಕೆಟ್ಟದಾಗಿ ಕಾಣ್ತೀಯ. ತಕ್ಷಣ ಛೇಂಜ್ ಮಾಡ್ದಿದ್ರೆ ಒದೆ ತಿಂತೀಯ’ ಅಂತ ಬೆದರಿಕೆ ಹಾಕಿದರು. ರೂಮ್‌ಮೇಟು ತಾನಿಲ್ಲದಾಗ ಇಂತಹ ಅಚಾತುರ್ಯವೊಂದು ಘಟಿಸಿದುದಕ್ಕಾಗಿ ವಿಷಾದ ವ್ಯಕ್ತಪಡಿಸಿದ. ಮೊನ್ನೆ ಮೇಫ್ಲವರಿಗೆ ಹೋಗಿದ್ದಾಗ ಮೋಹನ್ ಸರ್ ಕೈಕುಲುಕಿ ‘ಬೇಗ ಮೀಸೆ ಬರ್ಲಿ’ ಅಂತ ಹಾರೈಸಿಬಿಟ್ಟರು!
ಕಳೆದುಕೊಂಡಾಗಲೇ ಇದ್ದುದರ ನಿಜವಾದ ಬೆಲೆ ಗೊತ್ತಾಗೋದು ಅಂತಾರೆ.. ನನ್ನ ಮೀಸೆ, ಅದು ಇಲ್ಲವಾದಮೇಲೆ ಅದಕ್ಕೆ ಭಾರೀ ಡಿಮಾಂಡ್ ಶುರುವಾಗಿದೆ. ಆದಷ್ಟೂ ಬೇಗ ಬೆಳೆಯಲಪ್ಪಾ ಅಂತ ನಂಬದ ದೇವರಲ್ಲೆಲ್ಲಾ ಪ್ರಾರ್ಥಿಸುತ್ತಿದ್ದೇನೆ. ಮೊರೆ ಕೇಳಿದೆಯಿರಬೇಕು, ಈಗ ಈ ಮಾನಿಟರ್ ಆಫ್ ಮಾಡಿದರೆ ಕಾಣುವ ನನ್ನ ಬಿಳೀ ಮೋರೆಯ ಅಸ್ಪಷ್ಟ ಪ್ರತಿಬಿಂಬದಲ್ಲಿ, ಸಣ್ಣ ಸಣ್ಣ ಕಪ್ಪುಚುಕ್ಕಿಗಳು ಒತ್ತೊತ್ತಾಗಿ ಮೂಡಿರುವುದು ಗೋಚರಿಸುತ್ತಿದೆ. ರಾತ್ರಿಯ ಆಕಾಶವನ್ನು ‘ಇನ್ವರ್ಟ್ ಕಲರ್ಸ್’ ಮಾಡಿದ ಹಾಗೆ.
26 comments:
ಮೀಸೆ ಪುರಾಣ ಓದ್ತಾ ಓದ್ತಾ ಸಿಕ್ಕಾಪಟ್ಟೆ ನಗು ಬ೦ತು..ಸೂಪರ್ ಲೇಖನ ಸರ್
ಹ ಹ.. ಚೆನ್ನಾಗಿ ಬರೆದಿದ್ದೀಯ ಸುಶ್ರುತ.. ನಾನು ಹಾಸ್ಟೆಲ್ ಅಲ್ಲಿ ಇದ್ದಾಗ 'ಮಲಗಿದಾಗ ನಿನ್ನ ಮೀಸೆ ತೆಗಿತೀವಿ' ಅಂತ ನನ್ನ ಫ್ರೆಂಡ್ಸ್ ಸಿಕ್ಕಾಪಟ್ಟೆ ಹೆದರಿಸ್ತಿದ್ರು.. :) ಯಾವ ಜನ್ಮದ ಪುಣ್ಯನೋ ಏನೋ(ನಂದಲ್ಲ, ನನ್ನ ಮೀಸೆದು) ಇನ್ನೂ ಹಾಗೆ ಉಳ್ಕೊಂಡಿದೆ... :D
ಸಖತ್ತಾಗಿ ಬರದ್ದೆ, ಓದ್ತಾ ಹೋದಂಗೆ ನಗು ತಡಿಯಕ್ಕೆ ಆಗ್ಲೆ, ಯೋಜನೆಗಳು ಆದಷ್ಟು ಬೇಗ ಯಶಸ್ವಿಯಾಗಲಿ.
:-)
ಹಾಯ್ ಸುಶ್ರುತ,
ಲೇಖನ ತುಂಬಾ ಚೆನ್ನಾಗಿದೆ...ಮೀಸೆಯನ್ನ ತೆಗೆದಾಗ ಆದ ಅನುಭವ ನೆನಪಾಯಿತು...!!
ಅಭಿನಂದನೆಗಳು ..ಇಷ್ಟೊಂದು ನಗಿಸಿದ್ದಕ್ಕೆ...!!
ಪ್ರಶಾಂತ್ ಭಟ್
ಹ್ಹೆ ಹ್ಹೆ, ಮಜವಾಗಿದ್ದು....ಫೋಟೋನೂ ಹಾಕಿದ್ದಿದ್ರೆ ಭರ್ಜರಿ ಲೇಖನ ಆಗ್ತಿತ್ತು ನೋಡು!
ಚೆನ್ನಾಗಿ ಬಂದಿದೆ ಸುಶ್ರುತ ನಿನ್ನ ಮೀಸೆ ಪುರಾಣ. ಫೋಟೊ ಇದ್ರೆ ಇನ್ನೂ ಚೆನ್ನಾಗಿರ್ತಿತ್ತು.
ಮೂವತ್ತು ವರ್ಷದಿಂದ ಜೊತೆಲಿದ್ದ ಮೀಸೆ ನಾನು ಕಳೆದ ವರ್ಷ ಬೋಳಿಸಿದೆ. ಅಂದು ಸಿಕ್ಕ ಹಲವರು ಬದಲಾವಣೆ ಗಮನಿಸಲೇ ಇಲ್ಲ. ಆಗಾಗ ಕಾಣುವ ಕೆಲವರಿಗೆ ಗುರುತು ಸಿಗಲಿಲ್ಲ.
ಸುಶ್ರುತ ಸರ್,
ತುಂಬಾ ಚೆನ್ನಾಗಿ ಬರೆದಿದ್ದೀರ, ನಗು ಬರತ್ತೆ.
ಹ್ಹ ಹ್ಹ ಹ್ಹಾ... ಫೋಟೋ ಒಂದು ಕಡಿಮೆ ನೋಡು ಈ ಆರ್ಟಿಕಲ್ ಗೆ :)
Aa shreenidhige ondu dina hege agli devre... :)
Sush,
heege mast kanaste, matte bidada..
-Chin
ಹೌದೋ ಮಾರಾಯ... ಒಂದು ಫೋಟೋ ಹಾಕಬೇಕಿತ್ತು.
ನಾನು ಮೊದಲ ಬಾರಿ ಮೀಸೆ ತೆಗೆದಾಗ, ಅಪ್ಪನ ಕೈಲಿ ಸಮಾ ಬೈಸ್ಕೊಂಡಿದ್ದೆ.
ಅಮ್ಮ ನನ್ನ ಮುಖ ನೋಡಿ - ಶಂಕರ ಮೀಸೆ ತೆಗೆದು ಶಂಕರಿ ಆದ್ಯಲ್ಲೋ ಅಂತ ಅಂದಿದ್ರು.
ನನ್ ತಮ್ಮ ಅಂತೂ ಶಂಕ್ರಿ ಮುಂಡೆ ಅಂತ ಕರೀತಾ ಇದ್ದ. ಅದ್ಯಾಕೆ ಅಂತ ಗೊತ್ತಿಲ್ಲ..
ನನ್ದೊಂಥರಾ ಕಥೆ ಬಿಡು.. ಆರ್ಟಿಕಲ್ ನಲ್ಲಿ ಫೋಟೋ ಹಾಕದಿದ್ರೂ ಪರವಾಗಿಲ್ಲ, ನನ್ನ ಈ ಮೇಲಿಗೆ ಕಳ್ಸೋ ಮಾರಾಯ.
ಕಟ್ಟೆ ಶಂಕ್ರ
ಹ್ಹ ಹ್ಹ ಹ್ಹ ಹ್ಹ
'ಮೀಸೆಯೆಳೆದವನಿಗೆ ಮಿಠಾಯಿ' ಎಂದು ಒಂದು ಕಾಂಪಿಟೀಷನ್ನು ಮಾಡಿದ್ರೆ ನೀವೇ ಗೆಲ್ತಿದ್ರಲ್ಲಾ..
ಮೀಸೆಯ ಬಗ್ಗೆಯೂ ಇಷ್ಟೋಂದು ಚೆಂದಾಗಿ ಬರೆದಿದ್ದೀರಾ...
ಸೂಪರ್! :-) ಬಿಫೋರ್ ಮತ್ತೆ ಆಫ್ಟರ್ ಎರಡೂ ಫೋಟೋ ಹಾಕಿದ್ರೆ ಇನ್ನೂ ಮಜ ಇರ್ತಿತ್ತು ;-)
ಒಂದು ಸಣ್ಣ ಎಳೆ ಹಿಡಿದು ಅದೆಷ್ಟು ಚೆನ್ನಾಗಿ ಬರೆಯುತೀಯಾ! ಕೀಪಿಟಪ್! ಬರೆಯುತ್ತಲೇ ಇರು.
- ಕೇಶವ
ಶುಶ್ರುತಣ್ಣ..ಹ್ಲಾಂ..!
ಏನು ಎಡವಟ್ಟಪ್ಪ ಇದು...ಮೀಸೆ ತೆಗೆದಿದ್ದನ್ನು ಬ್ಲಾಗಲ್ಲೂ ಹಾಕಿಬಿಟ್ಟಿಯಾ ಮಾರಾಯ. ವೀರಪ್ಪನ್, ರಾಜ್ ಕುಮಾರ್ ಮೀಸೆಗಳ ಬಗೆಗಳನ್ನು ವಿವರಿಸಿದ್ದೀಯಾ? ನಿಂದು ಯಾವ ಥರದ ಮೀಸೆ ಅಣ್ಣಯ್ಯ? ನೀನೇನು ಕಡ್ಡ ಥರ ಇಲ್ಲ..ಸರಿಯಾಗಿ ಕನ್ನಡಿ ನೋಡಿಕೋ. ಮತ್ತೆ ನಿಂಗೆ ಮೀಸೆ ತೆಗೆದ್ರೆ ಚೆನ್ನಾಗ್ ಕಾಣಲ್ಲ ಮಾರಾಯ...ಹ್ಹ್ಹ್ಹ ! ಚೆನ್ನಾಗ್, ಹಾಸ್ಯಮಯವಾಗಿ ಬರೆದಿದ್ದೀಯಾ.
-ಧರಿತ್ರಿ
ನನ್ನ ಮೀಸೆ ಹೀಗೆ ಕಳೆದುಕೊಂಡ ನೆನಪಾಯಿತು..
@ Pramod
ಥ್ಯಾಂಕ್ಯೂ!
ಅನಂತ,
ಹೋದ ಜನ್ಮದ್ದಿರಬೇಕು ಪುಣ್ಯ. ಈ ಜನ್ಮದಲ್ಲಂತೂ ಅಂತದ್ದೇನೂ ನೀನೂ ಸಂಪಾದಿಸಿಲ್ಲ ಬಿಡು! :P
ಮನಸ್ವಿ,
ಹಾರೈಕೆಗೆ ಧನ್ಯವಾದ!
vijay,
:-)
ಪ್ರಶಾಂತ್,
ಥ್ಯಾಂಕ್ಸ್.. :-)
ಮಧು,
ಒಟ್ನಲ್ಲಿ ನನ್ ಮರ್ಯಾದಿ ಪೂರ್ತಿ ತೆಕ್ಕಳಕ್ಕಾಗಿತ್ತು ಅಂಬೆ?
ಗೋವಿಂದ್,
ಹಿಹಿ.. ಒಳ್ಳೇ ಚೆನ್ನಾಗಿದೆ ನಿಮ್ ಕಥೆ! :D
ಇಂಚರ,
ಹ್ಮ್.. ;)
ಪೂರ್ಣಕ್ಕ,
ಹಂಗಂಬೇ? :O
@ Chinmay,
ಹಿಹಿ.. ಕರೆಕ್ಟಾಗ್ ಹೇಳ್ದೆ ನೋಡು! ನಿಧಿಗೆ ಒಂದ್ಸಲ ಆಗವು ಹಿಂಗೆ. :P
(ಆದ್ರೆ ಚನಾಗ್ ಕಾಣ್ತು ಹೇಳ್ದಂವ ನೀ ಒಬ್ನೇಯ :( )
ಶಂಕ್ರಣ್ಣ,
ನಿನ್ ಕಥೆ ಒಳ್ಳೇ ಮಜಾ ಇದೆ! ಫೋಟೋ ಕಳುಸ್ತೀನಿ ನಿಂಗೊಬ್ನಿಗೇ. ಯಾರಿಗೂ ತೋರಿಸ್ಬೇಡ ಮತ್ತೆ. :O
MD,
ಅಯ್ಯೋ.. ಬ್ಯಾಡಪ್ಪಾ ಕಾಂಪಿಟಿಶನ್-ಗೀಂಪಿಟಿಶನ್ ಎಲ್ಲಾ..!
ಟಿಜಿಎಸ್,
ನಿಂಗೆ ನಾನು ಸಾರ್ವಜನಿಕವಾಗಿ ಅವಮಾನಕ್ಕೊಳಗಾಗಬೇಕು ಅಂತ ಆಗೋಗಿದೆ ಅನ್ಸುತ್ತೆ. ಬ್ಯಾಡ್ ಬಾಯ್. :x
ಕೇಶವ್,
ಥ್ಯಾಂಕ್ಯೂ ಸರ್..
ಧರಿತ್ರಿ,
ಹೂಂ ಕಣೇ.. ಇನ್ನು ಮೀಸೆ ತೆಗೆಯಲ್ಲ. :-(
ಶಿವು,
ಬರೀರಲ್ಲ ನಿಮ್ಮ ಅನುಭವಾನ?
ನಿಮ್ಮ ಮೀಸೆ ಪುರಾಣ ಓದಿ, ನಿಮ್ಮ orkut profile visit ಮಾಡ್ದೆ, ಆದ್ರೆ ಮೀಸೆ ಇಲ್ಲದ snap ಮಾತ್ರ ಕಾಣಲಿಲ್ಲ :(
ಸುಶ್ರುತ...
ತು೦ಬಾ ಚೆನ್ನಾಗಿ ಹಾಸ್ಯವಾಗಿ ಬರೆದಿದ್ದೀಯ...
ಅ೦ದ ಹಾಗೆ ಪ್ರತಿಯೊಬ್ಬ ಹುಡುಗನು ಮೊದಲ ಬಾರಿ ಮೀಸೆ ಬೋಳಿಸಿದಾಗ ಅನ್ನುವುದು ಬೈ ಮಿಸ್ಟೇಕ್ ಅರ್ಧ ಮೀಸೆ ಕತ್ತರಿಸಿಕೊ೦ಡೆ, ಮತ್ತೆ ಅಸಹ್ಯ ಕಾಣಿಸುತ್ತೆ ಅ೦ತ ಪೂರ್ತಿ ಮೀಸೆ ಕತ್ತರಿಸಿಕೊ೦ಡೆ ಅ೦ತ... ಇದನ್ನು ನಾನು ಮೊದಲ ಬಾರಿ ಮೀಸೆ ಬೋಳಿಸಿದಾಗ ನಾನು ಹೀಗೆ ಹೇಳಿದಾಗ ನನ್ನ ಭಾವ ನನಗೆ ಹೀಗೆ ತಮಾಷೆ ಮಾಡಿದ್ದರು. ನಿನ್ನ ಕೇಸಿನಲ್ಲೂ ಕೂಡ ಹೀಗೆ ಎನಾದರೂ ಇದ್ದಿರಬಹುದಾ?
sakhattaagide :)
Sushruth,
Firstly apologies for using english on your well crafted kannada blog.
I was wondering if you can throw some light on the recently concluded general elections in Shimoga?
What are the chances of Bangarappa and how you think would the result pan out in the future days if either bangarappa wins or looses.
Cheers
Ashwin
@ Vivek,
ಸಾರಿ, ಆರ್ಕುಟ್ಟಿನಿಂದ ಫೋಟೋ ತೆಗೆದಿದ್ದೇನೆ: ಬೆದರಿಕೆ ಕರೆ ಮೇರೆಗೆ!
ಸುಧೇಶ್,
ನೀವು ಜಾಣರು. ಅಷ್ಟು ಮಾತ್ರ ಹೇಳಬಲ್ಲೆ. ;)
ಅನಾ,
ಥಾಂಕೂ... :-)
Ashwin,
ನಂಗೆ ಪಾಲಿಟಿಕ್ಸ್ ಅರ್ಥ ಆಗಲ್ಲ. ನೋಡುವ, ಆದ್ರೂ ಬರೀಲಿಕ್ಕೆ ಟ್ರೈ ಮಾಡ್ತೀನಿ.
ಮಜಾ ಅಂದ್ರೆ ಈ ವರ್ಷವೇ ನಾನು ನನ್ನ ಮೊದಲ ಮತದಾನ ಮಾಡಿದ್ದು!
ಶುದೊಗೆ ಅಭಿನಂದನೆಗಳು,
ಮೀಸೆಯ ಮೀಮಾಂಸೆಗೆ ಮನಮಿಡಿತ ಮೂಡಿಸಿದ್ದಕ್ಕೆ, ನನ್ನ ಮೊದಲ ಮೀಸಾಹುತಿ ಪ್ರಕರಣವೂ ಹೀಗೇ ಆಗಿತ್ತು, ನಾನು ತೆಗೆದ ಕಾರಣ, ಊರಿನಲ್ಲಿ ರಾಮನವಮಿ ಪ್ರಯುಕ್ತ ‘ಕರ್ಣ‘ ನಾಟಕಕ್ಕಾಗಿ, ಆದರೆ ಆ ಪ್ರಥಮ ಹೆಚ್ಚು ಮುಜುಗರಕ್ಕೆ ಕಾರಣವಾಗಿದ್ದು ಅಷ್ಟಾಗಿ ನೆನೆಪಿಲ್ಲ ಆದ್ರೆ ಕಾಲೇಜಿನ ನಾಟಕಕ್ಕಾಗಿ ಮೀಮುಂಡನಾದಾಗ ...ಬಹು ವಿದಿತವಾಗಿತ್ತು. ಯಾಕೇಂದ್ರೆ ನಾನು ತಬಲಾ ಕ್ಲಾಸಿಗೆ ಸೇರಿದ್ದು ಅಲ್ಲಿ ಸಂಗೀತ ಕಲಿಯಲು ಬರಿತ್ತಿದ್ದ ಲತಳಿಗಾಗಿ..ಅವಳಿಗೆ ನನ್ನ ಮೀಸೆ ಇಷ್ಟ ಅಂದುಕೊಂಡಿದ್ದೆ..ಆದರೆ ಮೀಮುಂಡನಾದಾಗ ಅದನ್ನು ಅವಳು ಗಮನಿಸದೇ ಇದ್ದುದು, ನಂತರ ನನಗೆ ತಬಲ ಕ್ಲಾಸಿನಲ್ಲಿ ಆಸಕ್ತಿ ಹೋದದ್ದು..ಎಲ್ಲಾ ..ಈಗ..ಚರಿತ್ರೆ...
ನಿಮ್ಮ ಕವನ ತುಂಬಾ ಚನ್ನಾಗಿ ಮೂಡಿ ಬಂದಿದೆ
ಕುಹುಕುಹುವೆ ಹಾಡಿಲ್ಲಿ, ಪಕ್ಕವಾದ್ಯವೇ ಬೇಡ
ಶ್ರವಣಸ್ವರ್ಗದಿ ಸರಿದು ಸರಸರನೆ ಹೊತ್ತು ||
ಈ ಸಾಲುಗಳ ಆಳ ಮತ್ತು ಹರಿತ ಕವನದ ಆಳಕ್ಕೆ ಎಲೆದೊಯ್ಯುತ್ತದೆ, ಕೃಷಿ ಚನ್ನಾಗಿದೆ ಮುಂದುವರೆಸಿ...ನಮ್ಮ ಗೂಡಿಗೂ ಬನ್ನಿ,,,
ಸುಶ್ರುತ ನಿಮ್ಮ ಬ್ಲಾಗ್ ಗೆ ಇದು ನನ್ನ ಮೊದಲ ಭೇಟಿ ..ಮೀಸೆ ನಾನೂ ಮೊನ್ನೆ ಯುಗಾದಿಗೆ ತೆಗೆದೆ colleguesಉ,ಹೆಂಡತಿ,ಮಗಳು ಮೊದಲ ದಿನಾ ನಕ್ರು ಮೀಸೆ ಇಲ್ಲದ್ದರಿಂದ ನಾ ತರುಣನಾಗಿ ಕಾಣಸ್ತೇನಿ
ಅನ್ನೂ ಭ್ರಮಾ ಅದ...ಕೆಲವೊಮ್ಮೆ ಭ್ರಮಾ ಬೇಕಾಗ್ತಾವ ಅಲ್ಲ ಬದುಕಲಿಕ್ಕೆ...
ಥೂ ನನ್ ಮಗನೆ.. ನಿನ್ ಫೋಟೋ ನೋಡಕ್ಕೆ ಆರ್ಕುಟ್ ಎಲ್ಲ ಸುತ್ತಿದ್ನಲ್ಲೋ.. :-(
Post a Comment