Wednesday, May 20, 2009

ರಿಂಗ್‌ರೋಡು

ಎಲ್ಲ ರಸ್ತೆಗಳೂ ನಗರಿಯ
ಕಣ್ಣು ಮೂಗು ಎದೆ ಹೊಕ್ಕುಳು ತೊಡೆ
ಸಂದಿ ಗೊಂದಿಗಳನ್ನು ಹೊಕ್ಕು ಹಾದು
ಹೋಗುತ್ತಿದ್ದರೆ ಇದು ಮಾತ್ರ ಹೊರಗೇ
ಉಳಿದಿದೆ. ಇಡೀ ನಗರಿಯನ್ನೇ
ತನ್ನ ಬಾಹುಗಳಿಂದ ಬಳಸಿ ನಿಂತಿದೆ.

ಇಲ್ಲಿ, ಇಲ್ಲಿಂದ ಹೊರಟರೆ ಇಲ್ಲಿಗೇ ಬರಬಹುದು..

ದಾರಿ ತಪ್ಪಿಸುವವರೇ ಹೆಚ್ಚಿರುವ ಈ ಊರಿನಲ್ಲಿ
ತಪ್ಪು ದಾರಿ ಹಿಡಿದರೂ ಮರಳಿ ಅಲ್ಲಿಗೇ ತಂದು
ಬಿಡುವ ಪುಣ್ಯಾತ್ಮ ಈ ರಸ್ತೆ.

ಮನೆಯಲ್ಲಿ ಅಮ್ಮ ಹೇಳಿ ಕಳುಹಿಸಿದ್ದಳು,
ಹಾಗೆ ಅಂತಹ ಒಳ್ಳೆಯವರ ಸಂಗ ಮಾಡು ಎಂದು..

ಆದರೆ ನನಗೆ ಜಯನಗರದಿಂದ ರಾಜಾಜಿನಗರಕ್ಕೆ
ಹೋಗಬೇಕಿದೆ,
ರಿಂಗ್‌ರೋಡು ಹಿಡಿದರೆ ಪ್ರಯೋಜನವಿಲ್ಲ.
ಎಂಜಿ ರೋಡಿನಲ್ಲಿ ಹೋದವರ್ಯಾರೂ ಮಹಾತ್ಮರಾಗಿಲ್ಲ;
ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಅಡ್ಡಾಡಿದವರು ದೊರೆಗಳಾಗಿಲ್ಲ.

ನಾಗರೀಕನಾಗ ಬಂದವನಿಗೆ ದಾರಿ ತಪ್ಪಿದರೂ ಚಿಂತಿಲ್ಲ;
ಹೊಸ ದಾರಿ ಸಿಕ್ಕಂತಾಗುತ್ತದೆ..
ಇದೇ-ಇಂಥದೇ ದಾರಿಯಲ್ಲಿ ಹೋಗಬೇಕೆನ್ನುವ ತಲೆಬಿಸಿಯೆಲ್ಲಾ
ಗುರಿಯಿದ್ದವನಿಗೆ.. ಅನಿಕೇತನನಿಗೆ ಯಾವ ದಾರಿಯಾದರೂ
ಆದೀತು: ರಿಂಗ್‌ರಸ್ತೆಯೊಂದನ್ನು ಬಿಟ್ಟು.

ತೀರಾ ತಪ್ಪಿಯೇ ಹೋದರೆ ದಾರಿ, ಮೆಜೆಸ್ಟಿಕ್ಕಿಗೆ ಹೋದರಾಯಿತು:
ಅಲ್ಲಿಂದ ಬದುಕನ್ನೇ ಪುನರಾರಂಭಿಸಬಹುದು.
ಗುಟ್ಟು: ಮೆಜೆಸ್ಟಿಕ್ಕಿಗೆ ರಿಂಗ್‌ರೋಡ್ ಇಲ್ಲ!

19 comments:

sunaath said...

ಸುಶ್ರುತ,
ವಿನೋದ,ತತ್ವಜ್ಞಾನ ಏನೆಲ್ಲ ಬೆರಸಿ, ಲಘುವಾದ ಶೈಲಿಯಲ್ಲಿ ಗಹನವಾದ ವಿಚಾರವನ್ನು ಮನನ ಮಾಡುವ ಈ ಕವನ ತುಂಬಾ ಸುಂದರವಾಗಿದೆ.
Keep it up!

Parisarapremi said...

ಆತ್ಮ ಬೇರೆ - ರಸ್ತೆಗೆ!!

Keshav.Kulkarni said...

ತುಂಬ ವ್ಯಾಚ್ಯವಾಯಿತು.

ಅನಂತ said...

ಸುಶ್ರುತ... ಸೂಪರ್ರ್... :)
ರಾಜಾಜಿನಗರ ಜಯನಗರದ ಉತ್ತರಕ್ಕಿದೆ ಮತ್ತು ನಿಂಗೆ ಅಲ್ಲಿ ಹೊಗ್ಬೇಕಾಗಿದೆ ಅನ್ನೋದಷ್ಟೆ ಗೊತ್ತಿದ್ರೆ ಸಾಕು, ಯಾವ ದಾರಿಯಾದ್ರೇನಂತೆ..? :)

PARAANJAPE K.N. said...

ಚೆನ್ನಾಗಿದೆ,

Lakshmi Shashidhar Chaitanya said...

ನಮ್ಮ ಏರಿಯಾ ಗೆ ಅವಮಾನ ಆಗಿದೆ ಈ ಕವನದಲ್ಲಿ.ಆದ್ದರಿಂದ, ನಾನು ಏನೂ ಮಾತಾಡಲ್ಲ ಈ ಕವನದ ಬಗ್ಗೆ.

Ittigecement said...

ಮೆಜೆಸ್ಟಿಕ್ ಗೆ ರಿಂಗ್ ರೋಡಿಲ್ಲ....

ಬದುಕು ಪುನರಾರಂಭಿಸಬಹುದು...

ಇಷ್ಟವಾಯಿತು...

Godavari said...

ಸುಶ್ರುತ,

ತುಂಬಾ ಚೆನ್ನಾಗಿದೆ ಕವನ..

Anonymous said...

ನನ್ನದೂ ಸುನಾಥ್ ಅವರದೇ ಮಾತು, ವಿನೋದ ಮತ್ತು ತತ್ವಜ್ಞಾನಗಳನ್ನು ಬೆರೆಸಿದ ಈ ಕವಿತೆ ತುಂಬ ಚನ್ನಾಗಿದೆ..

Ultrafast laser said...

Again, the concept is great, however, it fails in terms of satisfying the technical aspects of a poem. First, it is too "textual". a Poem may better look like a skirt. Few things should be "visible" few hidden, and the rest should trigger one's imagination together with body chemistry. -D.M.Sagar,Dr.

ಅಂತರ್ವಾಣಿ said...

ಇದು ಕವನಕ್ಕಿಂತ ಲೇಖನ ಅನ್ನ ಬಹುದು.

ರಂಜನಾ ಹೆಗ್ಡೆ said...

super aagi ide.....

Anonymous said...

Good One Sirrr...

ಧರಿತ್ರಿ said...

ಚೆನ್ನಾಗ್ ಬರ್ದಿದಿಯಾ ಅಣ್ಣಯ್ಯ..ಇಷ್ಟ ಆತು ಕಣೋ
-ಧರಿತ್ರಿ

ಜಲನಯನ said...

ಸುಶೃತ್
Ring Road ಬಗ್ಗೆ ಒಳ್ಲೆಯ ತರ್ಕ..ಚನ್ನಾಗಿದೆ..
ಇತರ ರೋಡುಗಳ ಬಗ್ಗೆ ಮೊದಲ ಪಂಕ್ತಿಗಳು ರಿಂಗ್ ರೋಡನ್ನು ಇತರ ರೋಡುಗಳಿಗಿಂತ ವಿಭಿನ್ನ ಎಂದು ತೋರಿಸುತ್ತವೆ.
ನಮ್ಮ ಗೂಡಿಗೂ ಬನ್ನಿ ಪ್ರತಿಕ್ರಿಯಿಸಿ

Anonymous said...

ಸುಶ್ರುತ
ಬರಹ ಚೆನ್ನಾಗಿದೆ. ಆದರೆ ಕವಿತೆ ಎನ್ನಲೂ ಮನಸ್ಸು ಒಪ್ಪುತ್ತಿಲ್ಲ. ಇದನ್ನ ಕವಿತೆ ಅಂತಾ ನೀನು ಕೂಡಾ ಎಲ್ಲೂ ಉಲ್ಲೇಖಿಸಿಲ್ಲ. ಹಾಗಾಗಿ ನಾವು ಏನು ಅಂದುಕೊಂಡರೂ ಅದೇ ಆಗತ್ತೆ ಅಲ್ವಾ?! ಛಂದಸ್ಸು, ಅಲಂಕಾರಗಳ ಪ್ರಯೋಗ ಬೇಕು ಅಂತಿಲ್ಲ. ಆದರೆ ಕವಿತೆಗೂ, ಲೇಖನಕ್ಕೂ ವ್ಯತ್ಯಾಸವಿದೆ ಅನ್ನಿಸುವಷ್ಟಾದರೂ ಕವಿತೆಯ ಮೂಲಗುಣ ಉಳಿಸಿಕೊಳ್ಳುವುದು ಅವಶ್ಯ ಎಂಬುದು ನನ್ನ ಭಾವನೆ...
ಕೋಡ್ಸರ

shivu.k said...

ಸುಶ್ರುತ,

ಕೊನೆಯಲ್ಲಿ ಮೆಜೆಸ್ಟಿಕ್ಕಿಗೆ ರಿಂಗ್ ರೋಡಿಲ್ಲ. ಅಲ್ಲಿಗೆ ನಾನು ಪ್ರತಿದಿನ ಹೋಗುತ್ತೇನೆ ಬರುತ್ತೇನೆ. ಆದ್ರೆ ಅಲ್ಲಿಂದ್ ಬದುಕು ಆರಂಭಿಸಬೇಕು ಅಂತ ನನಗೆ ಅನ್ನಿಸೋದೆ ಇಲ್ಲ...ಆಷ್ಟು ಬೇಸರವಾಗಿಬಿಟ್ಟಿದೆ...ಅದಕ್ಕಾಗಿ ನಾನೊಂದು ವಿಚಾರ ಮಾಡಿದ್ದೇನೆ...ಒಂದು ದಿನ ಬೇರೇನು ಕೆಲಸ ಮಾಡದೇ ಸುಮ್ಮನೇ ರಿಂಗ್ ರೋಡ್ ಸುತ್ತಿ ಅಲ್ಲಿಂದ ಹೊಸ ಬದುಕು ಆರಂಭಿಸಬಹುದೇ ಅಂತ ನೋಡುವುದು....ಹೊಸ ಬದುಕು ಆರಂಭಿಸದಿದ್ದರೂ ಖಂಡಿತ ಹೊಸ ಅನುಭವವಾಗಬಹುದು....ಅಂತ ಐಡಿಯಾ ನನ್ನ ತಲೆಯಲ್ಲಿ ಬರಲಿಕ್ಕೆ ನಿಮ್ಮ ಈ ಕವನ ಸ್ಪೂರ್ತಿ ನೀಡಿದೆ...ಅದಕ್ಕೆ ಧನ್ಯವಾದಗಳು...

ಕವನವೋ ಗದ್ಯವೋ ನನಗಂತೂ ಸ್ಫೂರ್ತಿಯಾಯಿತು.

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದ. ನಿಮಗೆಲ್ಲ ಏನನ್ನಿಸಿತೋ, ನನಗೇನೋ ಇದು ಕವಿತೆ ಅಂತಲೇ ಅನ್ನಿಸಿತು.. ಅದಕ್ಕೇ, ಇದು ’ನನ್ನ ಕವಿತೆ’. :)

ಥ್ಯಾಂಕ್ಯೂ, ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗಳಿಗೆ..

ಅನಿಕೇತನ ಸುನಿಲ್ said...

Excellent sushruth ;)