ಮೊಟ್ಟೆಯೊಡೆದು ಹೊರಬಂದರೂ
ಚಿಪ್ಪಿನೊಳಗೆ ತೂರಿಕೊಳ್ಳುವ ಸವಲತ್ತು
ಸುಸ್ತಾದರೆ, ನಾಚಿಕೆಯಾದರೆ,
ನಿದ್ರೆ ಬಂದರೆ ಅಥವಾ ಬಂದರೆ ಆಪತ್ತು.
ಏಕೆ ಅರ್ಥವೇ ಆಗುವುದಿಲ್ಲ ನಿನಗೆ..?
ನನ್ನ ಕನಸುಗಳನ್ನು ನೀನೂ
ಕಾಣಬಲ್ಲೆಯಾದರೆ ಮಾತ್ರ
ನೀನು ನನ್ನವನು. ನಾವು ಒಂದು.
ಇಷ್ಟಕ್ಕೂ ಮೊಲದೊಂದಿಗೆ ನನಗೀಗ
ಸ್ಪರ್ಧೆಯೇ ಇಲ್ಲ. ಗೆದ್ದಾಗಿದೆ ಎಂದೋ.
ಮೊಲಕ್ಕೂ ಈಗ ಬುದ್ಧಿ ಬಂದಿದೆ;
ಹಾಗೆಲ್ಲ ನಿದ್ದೆ ಮಾಡುವುದಿಲ್ಲ.
ಇಬ್ಬರ ಭಾವವೂ ಒಂದಾಗಿದ್ದಾಗಷ್ಟೇ
ಸಂಯೋಜಿಸಬಲ್ಲೆ ನನ್ನ ಹಾಡಿಗೆ ನೀನು
ಸರಿ ಹೊಂದುವ ರಾಗ. ಎಲ್ಲೋ,
ಅಪರೂಪಕ್ಕೆ ಸಿಗುತ್ತದೆ ಇಂತಹ ಯೋಗ.
ಆಕಾಶದಲ್ಲಿದ್ದಾಗ ನೀನು
ಜನ ನಕ್ಕರೆಂದು ಸಿಡುಕಿ
ಕೆಳಗುರುಳಿದರೆ ಬಿಟ್ಟು ಕಚ್ಚಿದ ಕೊಕ್ಕೆ-
ಪಾಪ, ತಪ್ಪು ಹೊತ್ತೊಯ್ದ ಹಕ್ಕಿಗಳದಲ್ಲ.
ಎರಡು ಚಿಪ್ಪುಗಳನ್ನು ಒಂದಾಗಿಸಿದರೆ
ಅದೊಂದು ಗೋಲ. ಇರಬಹುದು ಒಳಗೆ ಸೆಖೆ.
ಸಹಿಸಬೇಕು ಮುತ್ತಾಗುವಾಗ ಹನಿ;
ಕಾಯಬೇಕು ಜೀವ ಬರುವವರೆಗೂ ಹೊರಗೆ.
19 comments:
ಬಹಳ ಚೆನ್ನಾಗಿದೆ.
ಒಂದು ಆಮೆಯು ಇಷ್ಟು ಚೆನ್ನಾದ ನವ್ಯ-ಭಾವ-ಗೀತೆಯನ್ನು ಹೊಸೆಯಬಲ್ಲದು ಎಂದು ಈಗ ಗೊತ್ತಾಯ್ತು. After all
ಮೊಲವೇ ಅಲ್ಲವೇ ಸೋತಿದ್ದು?
ಆದರೆ, ಈ ಆಮೆ-ಮೊಲ raceಉ, ರಾಗಸಂಯೋಜನೆಗೆ ಬೇಕಾದ ಏಕೋಭಾವ ಎನ್ನುವ ಪದಗಳನ್ನು ನೋಡಿದಾಗ, ಆಮೆಯ ಚಿಪ್ಪಿನೊಳಗೆ ಹುದುಗಿರುವ ಹುರುಳೇ ಬೇರೆ ಎನ್ನುವ ಅನುಮಾನ ಬರ್ತಾ ಇದೆ.
ಅದೇನು ಎಂದು ಒಡೆಯುವಿರಾ, ಸುಶ್ರುತ?
ಸುಶ್ರುತ,
ತುಂಬ ಚೆನ್ನಾಗಿದೆ. ಸರಳ ಪದಗಳು. ಮೊದಲ ನುಡಿಯನ್ನು ಕೊನೆಯ ನುಡಿಯಲ್ಲು ಪೂರ್ತಿಗೊಳಿಸುವ ಜಾಣ್ಮೆ, ನಡುವೆ ಎಲ್ಲರಿಗೂ ಗೊತ್ತಿರುವ ಆಮೆ-ಮೊಲದ ಕತೆಗೆ ಹೊಸ ರೂಪಕ, ಮುಂದೆ ಸಂಗೀತ, ಮತ್ತೆ ಮಳೆಹನಿ..ವಿವಿಧ ಸ್ತರಗಳ ಪ್ರತಿಮೆಗಳನ್ನು ಬಳಸಿ ಚೆನ್ನಾಗಿ ಹೆಣೆದಿದ್ದೀಯ ಈ ಕವಿತೆ. ಯಾಕೋ ಶೀರ್ಷಿಕೆ ಇಷ್ಟವಾಗಲಿಲ್ಲ.
ಕೇಶವ
ಅಣ್ಣಯ್ಯ ಭಾಳ ಫಾಸ್ಟು ಇದೀಯಾ..ಹಿಂಗೆ ಬೇಗ ಬೇಗ ಅಪ್ ಡೇಟು ಮಾಡು..ಚೆನ್ನಾಗೈತೆ ಕವನ . ಗುಡ್ಡು ಲಕ್ಕು!
-ಧರಿತ್ರಿ
ಸುಶ್ರುತ ಸ್ವಲ್ಪ ಕಠಿಣ ಅನಿಸ್ತು ನಿಮ್ಮ ಕವಿತಾ ಆದ್ರ "ಇಬ್ಬರ ಭಾವವೂ ಒಂದಾಗಿದ್ದಾಗಷ್ಟೇ
ಸಂಯೋಜಿಸಬಲ್ಲೆ ನನ್ನ ಹಾಡಿಗೆ ನೀನು
ಸರಿ ಹೊಂದುವ ರಾಗ. ಎಲ್ಲೋ,
ಅಪರೂಪಕ್ಕೆ ಸಿಗುತ್ತದೆ ಇಂತಹ ಯೋಗ."
ಎಂಥಾ ಅರ್ಥ ಅದ ಭೇಷ್....!
This is a good one!-D.M.Sagar
ಸುಶ್ರುತ,
ತುಂಬಾ ಒಳ್ಳೆಯ ಕವನ,
ಹೀಗೆ ಬರೆಯುತ್ತಿರು, ಬರುತ್ತಿರುತ್ತೇವೆ.
ಅರ್ಥ ಗರ್ಭಿತ ಕವನ....
ಚೆನ್ನಾಗಿದೆ
ಕವಿಯೇ ಅರ್ಥವಾಗುವುದಿಲ್ಲ
ಇನ್ನೂ ಕವಿತೆ ಹೇಗಾದಿತೂ?
ಪದ ಬಿಟ್ಟು
ಪದ ಹಿಡಿದು
ಮೌನಗಾಳದಲ್ಲಿ
ಇನ್ನೂ ಅದೇಷ್ಟು ಮೀನು
ಹಾಗೆಯ ಉಳಿದಿದೆಯೋ..!
ಚೆನ್ನಾಗಿದೆ
ಆರಾಧ್ಯ, ಮೈಸೂರು.
ಒಳ್ಳೇ ವೈಚಾರಿಕತೆ. ;-) ;-) ;-)
ಸುಶ್ರುತ
ಚೆನ್ನಾಗಿದೆ. ಯಾವ ಚಿಪ್ಪಿನೊಳಗೆ ಏನಡಗಿದೆಯೋ ? ಬಲ್ಲವರಿಲ್ಲ
ಆಮೆ ಮೊಲದ ರೂಪಕದ ಜೊತೆಗೆ ಮಳೆಹನಿ, ಸಂಗೀತ, ಇತ್ಯಾದಿಗಳಿಂದ ಹೆಣೆದ ಕವಿತೆ ಸುಂದರ...
ಸುಶ್ರುತ, ನಿಮ್ಮ ಬ್ಲಾಗಿಗೆ ಆಕಸ್ಮಿಕವಾಗಿ ಬಂದೆ. ದಾರಿ ತಪ್ಪಿತೆಂದು ಪರಿತಪಿಸುತ್ತಾ ಇದ್ದಾಗ ತಪ್ಪು ದಾರಿಯಲ್ಲೇ ಚೆಂದದೊಂದು ನವಿಲು ಕಂಡಂತಾಯ್ತು ನಿಮ್ಮ ಬ್ಲಾಗ್ ಕಂಡು.. ತುಂಬಾ ಚೆಂದ ಇದೆ.
ಚೆನ್ನಾಗಿದೆ.ಇನ್ನು ಒಳ್ಳೆ ಶೀರ್ಷಿಕೆ ಹುಡುಕಬಹುದಿತ್ತು.
ಸುಮ್ಮನೆ ಅಸೂಯೆಯಾಗುತ್ತಿದೆ..
ಮತ್ತೊಮ್ಮೆ ಓದುತ್ತಿದ್ದೇನೆ..
oLLoLLeya kavitegaLu.
chenAgive.
-Chetana
ಕವನವನ್ನು ಇಷ್ಟಪಟ್ಟ ಎಲ್ಲರಿಗೂ ಶರಣು.
heggere,
"ಪದ ಬಿಟ್ಟು
ಪದ ಹಿಡಿದು
ಮೌನಗಾಳದಲ್ಲಿ
ಇನ್ನೂ ಅದೇಷ್ಟು ಮೀನು
ಹಾಗೆಯ ಉಳಿದಿದೆಯೋ..!"
-ಇಷ್ಟ ಆಯ್ತು. :-) ಥ್ಯಾಂಕ್ಸ್!
ಮಿಂಚುಳ್ಳಿ,
ಧನ್ಯವಾದ.. ಬರ್ತಿರಿ..
ಹಾಯ್ ಸುಶ್,
ತುಂಬಾ ಚನ್ನಗಿ ಇದೆ ಕವಿತೆ.
ಮೊದಲ ಎರೆಡು ಪ್ಯಾರಾಗ್ರಾಫ್ ಅರ್ಥಾ ಆಗಿಲ್ಲಾ ಪೂರ್ತಿ ಓದಿದ ಮೇಲೆ ಅರ್ಥ ಆಯ್ತು.. ಚನ್ನಾಗಿ ಇದೆ...
ತಲೆಬರಹಕ್ಕೂ ಕವಿತೆಗೂ ಹೊಂದಿಕೆ ಆಕ್ತ ಇಲ್ಲಾ.
Post a Comment