ಅಲ್ಲೇ, ಮಂಟಪದ ಪಕ್ಕದಲ್ಲೇ ನಿಂತಿದ್ದೆ ನಾನು. ಯಾರೋ ಅಕ್ಷತೆಯ ಕಾಳುಗಳನ್ನು ಹಂಚಿ ಹೋದರು. ಮೊಳಗತೊಡಗಿದ ಗಟ್ಟಿಮೇಳದಲ್ಲಿ ಪುರೋಹಿತರ ‘ಮಾಂಗಲ್ಯಂ ತಂತು ನಾನೇನಾ..’ ಮುಳುಗುತ್ತಿದ್ದಹಾಗೇ ನಾನು ಅಕ್ಷತೆಯನ್ನು ಅವರತ್ತ ತೂರಿದೆ. ಪಟಪಟನೆ ಸದ್ದಾಯಿತು. ತಗ್ಗಿಸಿದ ಮೊಗದಲ್ಲಿನ ಅವಳ ಮುಗುಳ್ನಗೆಯನ್ನು ಕದ್ದು ನೋಡುತ್ತಾ ಅವನು ತಾಳಿ ಕಟ್ಟಿದ. ನನ್ನ ಅತ್ಯಾಪ್ತ ಗೆಳತಿ ಭಾವನಾ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಳು.
ಹಂಚಿದ ಸಿಹಿಯನ್ನು ಬಾಯಿಗಿಟ್ಟುಕೊಳ್ಳುತ್ತಾ ನಾನು ಕಲ್ಯಾಣ ಮಂಟಪದ ಸಭಾಂಗಣದ ಸಾಲು ಖುರ್ಚಿಗಳೆಡೆ ನಡೆದೆ. ಇದೇನು ಸೆಖೆ! ಹಹ್! ಬಾಗಿಲ ಬಳಿ ಪಾನಕ ಇಟ್ಟಿರಬೇಕು, ಕುಡಿಯಬೇಕೆಂದುಕೊಂಡೆ. ನಾನು ಪಾನಕ ತೆಗೆದುಕೊಳ್ಳುತ್ತಿರಬೇಕಾದರೆ ಯಾರೋ ಹೆಗಲಿನ ಮೇಲೆ ಕೈ ಹಾಕಿದಂತಾಗಿ ತಿರುಗಿ ನೋಡಿದರೆ ಚಂದ್ರು! ಚಂದ್ರು ಅಂದ್ರೆ ಚಂದ್ರಶೇಖರ, ನನ್ನ ಎಕ್ಸ್-ಕಲೀಗು. "ಅರೆ ವ್ಹಾ, ಈಗ ಬರ್ತಿದಿಯೇನೋ ದೇವ್ರೂ?" ಎನ್ನುತ್ತಾ ಅವನಿಗೊಂದು ಪಾನಕದ ಗ್ಲಾಸ್ ಕೊಟ್ಟು, ಇಬ್ಬರೂ ದೂರದ ಖುರ್ಚಿಯೊಂದರೆಡೆಗೆ ಹೋಗಿ ಕುಳಿತೆವು. ಮಂಟಪದಲ್ಲಿದ್ದ ಭಾವನಾ ಚಂದ್ರುವನ್ನು ನೋಡಿ ಮುಗುಳ್ನಕ್ಕಳು. ಚಂದ್ರು ಕೈ ಮಾಡಿದ.
"ಇದು ಹೇಗಯ್ಯಾ ಆಯ್ತು? ಆದ್ರೂ ನೀನು ಹೇಗೋ ಇಷ್ಟೊಂದು ಖುಶಿಯಿಂದ ಇದೀಯಾ? ನಾನೇನೋ ನೀನು ಮದುವೆಗೆ ಬರೋದೇ ಇಲ್ಲ ಅಂದ್ಕೊಂಡಿದ್ದೆ.. ರೂಮಲ್ಲಿ ಒಬ್ನೇ ದೇವದಾಸ್ ಥರ ಕುಡೀತಾ ಕೂತಿರೋ ಚಿತ್ರಾನಾ ಕಲ್ಪಿಸಿಕೊಂಡು ಬಂದಿದ್ದೆ" ಸಣ್ಣ ದನಿಯಲ್ಲಿ ಹೇಳಿದ ಚಂದ್ರು. ಚಂದ್ರುವಿನಿಂದ ನಿರೀಕ್ಷಿಸದ ಪ್ರತಿಕ್ರಿಯೆಯೇನು ಅಲ್ಲ ಇದು.. ಚಂದ್ರುವೇನು, ಬಹುಶಃ ನನ್ನ ಸ್ನೇಹಿತರೆಲ್ಲರನ್ನೂ ಕಾಡ್ತಿರೋ ಪ್ರಶ್ನೇನೂ ಹೌದು: "ಭಾವನಾ ಮತ್ತು ಅಂಶು ಲವರ್ಸ್ ಆಗಿರ್ಲಿಲ್ವಾ? ಅಷ್ಟೊಂದು ಕ್ಲೋಸ್ ಇದ್ರು ಮತ್ತೆ? ಯಾವಾಗ ನೋಡಿದ್ರೂ ಒಟ್ಟೊಟ್ಟಿಗೆ ಇರ್ತಿದ್ರು.. ಈಗ ಭಾವನಾ ಯಾರನ್ನೋ ಮದುವೆ ಆಗ್ತಿದಾಳೆ.. ಮತ್ತೆ ಅಂಶು ತಮ್ಮ ಮನೆಯದೇ ಮದುವೆಯೇನೋ ಅನ್ನೋ ಹಾಗೆ ಸಂಭ್ರಮದಿಂದ ಓಡಾಡ್ತಿದಾನೆ.. ಇದು ಹ್ಯಾಗೆ ಸಾಧ್ಯ?"
ಹೇಳಬೇಕು ಎಲ್ಲರಿಗೂ ಒಂದು ತಂಪು ಸಂಜೆಯಲ್ಲಿ ಕೂರಿಸಿಕೊಂಡು: ಭಾವನಾ ಎಂಬ ನನ್ನ ಪ್ರೀತಿಯ ಗೆಳತಿಯ ಬಗ್ಗೆ. ಭಾವನಾ ಎಂಬ ಪ್ರವಾದಿಯ ಬಗ್ಗೆ. ನನ್ನ ಭಾವಕೋಶದ ಶಕ್ತಿಯ ಬಗ್ಗೆ. ನನ್ನನ್ನು ಇಲ್ಲಿಯವರೆಗೆ ಕರೆತಂದ ಮಾಯಾಯುಕ್ತಿಯ ಬಗ್ಗೆ. ಧೃತಿಯ ಮತ್ತೊಂದಾವೃತಿಯ ಬಗ್ಗೆ. ಭಾವನಾ ಮತ್ತು ಅಂಶು ಪ್ರೇಮಿಗಳಾಗಿರಲಿಲ್ಲ. ಅವರು ಅಪ್ಪಟ ಸ್ನೇಹಿತರಾಗಿದ್ದರು. ಸ್ನೇಹವೆಂಬ ಶಬ್ದದ ಅರ್ಥವನ್ನು ಹೊಸ ಬಣ್ಣಗಳಲ್ಲಿ ಬರೆದಿದ್ದರು ಅಂತ.
ಕವಿಸಮಯ ಜಾರಿಗೆ ಬಂದ ಯಾವುದೋ ಕವಿ ‘ಕಾರಿರುಳ ಖಿನ್ನತೆಯಲ್ಲಿ ಬೆಳುದಿಂಗಳಿಳಿದಂತೆ, ಮುಂಗಾರು ಮೂಡಿದಂತೆ, ತಂಗಾಳಿ ತೀಡಿದಂತೆ...’ ಎಂದೆಲ್ಲ ಬರೆಯುತ್ತಿದ್ದ ಘಳಿಗೆಯಲ್ಲೇ ಇತ್ತ ನನ್ನ ಸ್ನೇಹಕ್ಷೇತ್ರದಲ್ಲಿ ಕಾಲಿಟ್ಟವಳು ಭಾವನಾ. ಇಂಟರ್ವ್ಯೂಗೆಂದು ನನ್ನ ಸರದಿಗಾಗಿ ಕಾಯುತ್ತ ಕೂತಿದ್ದ ಆ ರಿಸೆಪ್ಷನ್ ಹಾಲಿನ ಏಸಿಯ ಗಾಳಿಯ ಮೌನವನ್ನು ಒಮ್ಮೆಲೇ ಕಲಕುವಂತೆ "ನೀವೂ ಮಲ್ಲೇಶ್ವರಮ್ಮಾ?" ಅಂತ ಕೇಳಿದ್ದಳು. "ಹೂಂ, ನಿಮಗೆ ಹೇಗೆ ಗೊತ್ತಾಯ್ತು?" ಅವಳ ಮುಖವನ್ನು ನೇರವಾಗಿ ನೋಡದೇ ಕೇಳಿದೆ. "ನಿಮ್ಮ ಕೈಯಲ್ಲಿರೋ ರೆಸ್ಯೂಮ್ನಿಂದ ಗೊತ್ತಾಯ್ತು" ಉತ್ತರಿಸಿದಳು. ನನಗಿಂತ ಮೊದಲು ಅವಳಿಗೆ ಕರೆ ಬಂತು. ನನ್ನೆದುರಿಂದ ಎದ್ದು ಹೋಗುವಾಗ ಕಂಡ ಅವಳ ರೆಸ್ಯೂಮಿನಿಂದ ಹೆಸರು ಭಾವನಾ ಅಂತ ಗೊತ್ತಾಯ್ತು. ಹತ್ತು ನಿಮಿಷದ ನಂತರ ಹೊರಬಂದ ಭಾವನಾ, ಹೆದರಿಕೆಯಿಂದ ಚಡಪಡಿಸುತ್ತಾ ಕೂತಿದ್ದ ನನ್ನ ಬಳಿ ಬಂದು ಸಣ್ಣ ದನಿಯಲ್ಲಿ "ಏನೂ ನರ್ವಸ್ ಆಗ್ಬೇಡಿ.. ಇಂಟರ್ವ್ಯೂವರ್ ಇಸ್ ಟೂ ಕೂಲ್. ಸ್ವಲ್ಪಾನೂ ಟೆನ್ಷನ್ ಮಾಡಿಕೊಳ್ಳದೇ ಅಟೆಂಡ್ ಮಾಡಿ. ಆಲ್ ದಿ ಬೆಸ್ಟ್!" ಅಂದು ನಗೆಹೂವಿನೊಂದಿಗೆ ಹೊರಟು ಹೋಗಿದ್ದಳು.
ಆಮೇಲೆ ಆ ಕಂಪನಿಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿದ್ದು, ಕೆಲಸದ ಮೊದಲ ದಿನ ರಿಸೆಪ್ಷನ್ನಲ್ಲಿ ಮತ್ತೆ ಸಿಕ್ಕಿದ್ದು, ತೀರಾ ಹಳೆಯ ಪರಿಚಿತರಂತೆ ಒಬ್ಬರಿಗೊಬ್ಬರು ಕೈ ಕುಲುಕಿ ಪರಸ್ಪರ ‘ಕಂಗ್ರಾಟ್ಸ್’ ಹೇಳಿಕೊಂಡಿದ್ದು ...ಆಹ್, ಎಲ್ಲಾ ನಮ್ಮ ಸ್ನೇಹದ ಡಾಕ್ಯುಮೆಂಟರಿಯ ಅಡಿಯಲ್ಲಿ ನೆನಪಾಗಿ ಬೆಚ್ಚಗಿವೆ. ಮಧ್ಯಾಹ್ನ ಒಟ್ಟಿಗೇ ಕಾಫಿ ಕುಡಿಯುವಾಗ ಹೇಳಿದ್ದೆ: "ನೀವವತ್ತು ಹಾಗೆ ಹುರಿದುಂಬಿಸಿ ಹೋಗಿರದಿದ್ದರೆ ನಾನು ಇಂಟರ್ವ್ಯೂನ ಅಷ್ಟೊಂದು ನಿರ್ಭಯವಾಗಿ ಫೇಸ್ ಮಾಡ್ಲಿಕ್ಕೆ ಆಗ್ತಾನೇ ಇರ್ಲಿಲ್ಲ, ಇಲ್ಲಿವತ್ತು ಹೀಗೆ ಮತ್ತೆ ಸಿಗ್ತಾನೂ ಇರ್ಲಿಲ್ಲ" -ಅಂತ.
ಭಾವನಾ ಅತ್ಯಂತ ಚಟುವಟಿಕೆಯ, ಆತ್ಮವಿಶ್ವಾಸದ ಹುಡುಗಿ. ಆಕೆಯ ಚುರುಕು ನಡಿಗೆ, ಸೆಳೆಯುವ ಕಣ್ಣು, ಅಸ್ಖಲಿತ ಭಾಷೆ ಮತ್ತು ಯಾರೊಂದಿಗಾದರೂ ಅಷ್ಟು ಬೇಗನೆ ಬೆರೆಯುವ ರೀತಿ -ಎಲ್ಲಾ ಕೆಲವೇ ತಿಂಗಳಲ್ಲಿ ಕಂಪನಿಯ ಪ್ರಶಂಸೆಗೆ ಒಳಗಾದವು. ಹಾಗೆಯೇ ನನ್ನ ಸಂಕೋಚ, ಸೋಮಾರಿತನ, ಕೀಳರಿಮೆಯ ಸ್ವಭಾವ ಮತ್ತು ಹಳ್ಳಿಯಿಂದ ಬಂದ ಭಾಷೆಯ ದುರ್ಬಲತೆ -ಅಲ್ಲೇ ಉಳಿಯುವಂತೆ ಮಾಡಿದವು. ಭಾವನಾ ಸೀನಿಯರ್ ಆದಳು; ನಾನು ಹಿಂದೆಯೇ ಉಳಿದೆ.
ಅದೊಮ್ಮೆ ನಾನು ಮಾಡಿದ ಪುಟ್ಟ ತಪ್ಪಿನಿಂದಾಗಿ ಅನಾಹುತವೊಂದು ಆಗುವುದಿತ್ತು. ಎಮ್.ಡಿ. ಕೆಂಡಾಮಂಡಲವಾಗಿದ್ದರು. ಆದರೆ ಭಾವನಾ ಅದರ ಸಂಪೂರ್ಣ ಹೊಣೆಗಾರಿಕೆ ಹೊತ್ತು, ಜಾಣ್ಮೆಯಿಂದ ನಿರ್ವಹಿಸಿ, ನನ್ನನ್ನು ಸಂಕಷ್ಟದಿಂದ ಪಾರು ಮಾಡಿದಳು. ನನಗೆ ಒಂದೇ ಪ್ರಶ್ನೆ: ಇದ್ಯಾಕೆ ಈ ಪರಿ ನನ್ನನ್ನು ಹಚ್ಚಿಕೊಳ್ಳುತ್ತಾಳೆ ಈ ಹುಡುಗಿ? ಭಾವನಾ ಮತ್ತು ನಾನು ಪ್ರತಿದಿನ ಒಟ್ಟಿಗೇ ಊಟ ಮಾಡುವುದು, ಕಂಪನಿಯ ಬಸ್ಸಿನಲ್ಲಿ ಓಡಾಡುವಾಗ ಒಟ್ಟಿಗೇ ಕೂರುವುದು, ಇಬ್ಬರ ಮನೆಯೂ ಇರುವುದು ಒಂದೇ ಏರಿಯಾದಲ್ಲಾದ್ದರಿಂದ ಭಾನುವಾರಗಳಲ್ಲಿ ಸಹ ಸಿಗುವುದು. ಅವಳ ನನ್ನನ್ನು ತನ್ನ ಮನೆಗೆ ಕರೆಯುತ್ತಾಳೆ. ಮನೆಯಲ್ಲೆಲ್ಲರಿಗೂ ‘ಮೈ ಕಲೀಗ್ ಅಂಡ್ ಬೆಸ್ಟ್ ಫ್ರೆಂಡ್’ ಅಂತ ಪರಿಚಯಿಸಿದ್ದಾಳೆ. ನನ್ನ ರೂಮಿಗೆ ಬರುತ್ತಾಳೆ. ಪ್ರಪಂಚದ ಎಲ್ಲ ವಿಷಯವನ್ನೂ ಮಾತಾಡುತ್ತಾಳೆ. ನನ್ನಂತಹ ಮೌನಿಯನ್ನೂ ಮಾತಾಡುವಂತೆ ಮಾಡುತ್ತಾಳೆ. ಒಳ್ಳೆಯ ಪುಸ್ತಕಗಳನ್ನು ರೆಫರ್ ಮಾಡುತ್ತಾಳೆ. ಎಲ್ಲಾ ತರಹದ ಎಸ್ಸೆಮ್ಮೆಸ್ಸುಗಳನ್ನೂ ಫಾರ್ವರ್ಡ್ ಮಾಡುತ್ತಾಳೆ. ನಾನು ಒಬ್ಬ ಹುಡುಗಿಯೊಂದಿಗೆ ಇಷ್ಟು ಸಲಿಗೆಯಿಂದ ಬೆರೆಯುತ್ತಿದ್ದುದು ಇದೇ ಮೊದಲು... ಕೇಳಿಕೊಳ್ಳುತ್ತೇನೆ ಮತ್ತೆ: ಇದು ಪ್ರೀತಿಯಾ? ಅವಳೊಂದಿಗೆ ಶಾಪಿಂಗ್-ಗೀಪಿಂಗ್ ಅಂತ ಹೋದಾಗ ಎದುರಾಗುವ ಚಂದ ಹುಡುಗಿಯರನ್ನು ನನಗೆ ತೋರಿಸಿ ಕಿಚಾಯಿಸುವುದು.. "ಒಂದು ಗರ್ಲ್ಫ್ರೆಂಡ್ ಮಾಡ್ಕೊಳೋ ಬೇಗ" ಅನ್ನೋದು... ಏನು ಇವೆಲ್ಲಾ? ಏಕಾಂತದ ಕ್ಷಣಗಳಲ್ಲಿ ಕಾಡುತ್ತದೆ ತುಮುಲ: ಒಬ್ಬ ಹುಡುಗನೊಂದಿಗೆ ಒಬ್ಬ ಹುಡುಗಿ ಇಷ್ಟೊಂದು ಕ್ಲೋಸ್ ಆಗಿ ಇರಬಹುದಾ? ಇದು ಕೇವಲ ಸ್ನೇಹವಾ? ಕಲೀಗುಗಳ ಮಧ್ಯೆಯಂತೂ ನಮ್ಮ ಒಡನಾಟ ದೊಡ್ಡ ಗಾಸಿಪ್ಪು. ಹಾಗಾದರೆ ಅವರು ಹೇಳುವಂತೆ ಇದು ಪ್ರೇಮವಾ?
ಆದರೆ ಹಾಗಂದುಕೊಳ್ಳಲಿಕ್ಕೇ ನನಗೆ ಧೈರ್ಯವಾಗುತ್ತಿರಲಿಲ್ಲ.. ಬಹುಶಃ ಭಾವನಾಳ ಆ ಆತ್ಮವಿಶ್ವಾಸದ ಗಟ್ಟಿತನವೇ ನನಗೆ ಆಕೆಯನ್ನು ನನ್ನ ಪ್ರೇಯಸಿಯೆಂದು ಕಲ್ಪಿಸಿಕೊಳ್ಳಲಿಕ್ಕೆ ಹಿಂಜರಿಯುವಂತೆ ಮಾಡುತ್ತಿತ್ತು. ನನಗೆ ಭಾವನಾಳನ್ನು ಒಬ್ಬ ಫ್ರೆಂಡ್ ಅಂತ ಅಂದುಕೊಂಡರೇನೇ ಹೆಚ್ಚು ಹಿತವೆನಿಸುತ್ತಿತ್ತು. ನನ್ನ ದುಃಖಗಳನ್ನು ತನ್ನೊಂದಿಗೆ ಹಂಚಿಕೊಳ್ಳಬಲ್ಲವಳು, ನನ್ನ ಅಸಹಾಯಕತೆಯನ್ನು ಅರ್ಥ ಮಾಡಿಕೊಳ್ಳಬಲ್ಲವಳು, ನಾನು ಮೂಡಿನಲ್ಲಿಲ್ಲದಿದ್ದಾಗ ಹುರಿದೊಂಬಿಸಿ ನಗಿಸುವವಳು, ನನ್ನ ಸಣ್ಣ ಗೆಲುವುಗಳನ್ನು ತುಂಬು ಪ್ರೀತಿಯಿಂದ ಅಭಿನಂದಿಸುವವಳು ಮತ್ತು ನನ್ನಲ್ಲಿ ಹೊಸ ಕನಸುಗಳನ್ನು ಚಿಗುರಿಸಿ ಅವುಗಳನ್ನು ನನ್ನವಾಗಿಸಿಕೊಳ್ಳುವಂತೆ ಪ್ರೇರೇಪಿಸುವವಳು -ಇಂತಹ ಗೆಳತಿಯೊಬ್ಬಳು ನನಗೆ ಬೇಕಿದ್ದಳು. ಮತ್ತು ಭಾವನಾ ಅವೆಲ್ಲವೂ ಆಗಿದ್ದಳು. ನಾನೂ ಕಂಪನಿಯ ಕೆಲಸಗಳಲ್ಲಿ ಸಾಧನೆಗೈದಿದ್ದು, ನನಗೊಂದು ರೆಕಗ್ನಿಷನ್ ಸಿಗುವಂತಾದದ್ದು -ಎಲ್ಲಾ ಭಾವನಾಳ ಕೃಪೆಯಿಂದಲೇ. ಅದ್ಯಾವುದೋ ಮುಹೂರ್ತದಲ್ಲಿ ನಿರ್ಧರಿಸಿಬಿಟ್ಟಿದ್ದೆ: ನನಗೆ ಇದಕ್ಕಿಂತ ಹೆಚ್ಚಿನದೇನೂ ಬೇಡ ಭಾವನಾಳಿಂದ. ಇದನ್ನು ಯಾವುದೇ ಕಾರಣಕ್ಕೂ ನಾನು ಕಳೆದುಕೊಳ್ಳುವುದಿಲ್ಲ. ಇದು ಪ್ರೀತಿಯಾಗಿರಬೇಕಾದ ಅವಶ್ಯಕತೆಯೇ ಇಲ್ಲ. ಆಕೆ ನನ್ನ ಗೆಳತಿಯಾಗೇ ಇರಲಿ.
ಪ್ರಾಜೆಕ್ಟೊಂದನ್ನು ಮುಗಿಸಲಿಕ್ಕಾಗಿ ಭಾವನಾ ಡೆಲ್ಲಿಗೆ ಹೋಗಬೇಕಾಗಿ ಬಂತು. ಆಕೆ ತನ್ನೊಬ್ಬಳಿಂದ ಡೆಡ್ಲೈನ್ ಒಳಗೆ ಇದನ್ನು ಮುಗಿಸಲು ಸಾಧ್ಯವೇ ಇಲ್ಲ ಅಂತ ನನ್ನನ್ನೂ ಜತೆಗೆ ಕರೆದೊಯ್ದಳು. ರೂಮ್ ಬುಕ್ ಮಾಡುವಾಗ ಒಂದೇ ರೂಮ್ ಸಾಕು ಎಂದಳು. ಐದು ದಿನಗಳ ಪ್ರಾಜೆಕ್ಟ್ ಮುಗಿಸಿ ವಾಪಸಾಗುವಾಗ ವಿಮಾನದ ಸೀಟಿಗೊರಗಿ ಮಾತಾಡಿದಳು ಭಾವನಾ:
"ನಿಂಗೆ ಆಶ್ಚರ್ಯ ಅಲ್ವಾ ನಾನು ನಿಂಜೊತೆ ಯಾಕೆ ಇಷ್ಟೊಂದು ಕ್ಲೋಸಾಗಿ ಇರ್ತೀನಿ ಅಂತ? ಅದರ ಜೊತೆಗೇ ಮನಸ್ಸಿನಲ್ಲಿ ನೂರಾರು ಅನುಮಾನದ ಪ್ರಶ್ನೆಗಳು ಅಲ್ವಾ? ಬಾಯಿಬಿಟ್ಟು ಕೇಳಲಿಕ್ಕೆ ಸಾಧ್ಯವೇ ಇಲ್ಲದಷ್ಟು ಹಿಂಜರಿಕೆ ಅಲ್ವಾ? ಹೂಂ..?" ಮಾತು ಬೆಳೆಯುವ ಮುನ್ನವೇ ಹೇಳಿಬಿಟ್ಟೆ: "ನೀನು ‘ಮೈ ಆಟೋಗ್ರಾಫ್’ ಸಿನಿಮಾ ನೋಡಿದೀಯಾ ಭಾವನಾ? ಅದರಲ್ಲಿನ ಮೀನಾಳ ಪಾತ್ರ ನಂಗೆ ತುಂಬಾ ಇಷ್ಟ.. ಆಕೆ ಸುದೀಪ್ನನ್ನು ಕೇವಲ ಸ್ನೇಹದ ಬಲದಿಂದ ಬೆಳೆಸೋ ರೀತಿ, ಫೆಂಟಾಸ್ಟಿಕ್! ಅವಳ ಬಿಹೇವಿಯರ್, ಅವಳ ಮ್ಯಾನರಿಸಂ, ಅವಳ ವ್ಯಕ್ತಿತ್ವದ ಉನ್ನತಿ... ಓಹ್! ಯು ನೋ ವ್ಹಾಟ್? ನಂಗೆ ನಿನ್ನಲ್ಲಿ ಮೀನಾ ಕಾಣ್ತಾಳೆ.. ನೀನು ಕೇಳಿದ ಪ್ರಶ್ನೆಗಳೆಲ್ಲಾ ಸತ್ಯ. ಆದರೆ ನಂಗೆ ಅದ್ಯಾವುದಕ್ಕೂ ಉತ್ತರ ಬೇಡ. ನೀನು ಕೇವಲ ನನ್ನ ಗೆಳತಿಯಾಗಿದ್ದರೆ ಸಾಕು.. ಮೈ ಬೆಸ್ಟ್ ಫ್ರೆಂಡ್, ಲೈಕ್ ನೌ!"
ಭಾವನಾಳಿಗಾದ ಖುಶಿಯನ್ನು ವ್ಯಕ್ತಪಡಿಸಲು ಅವಳ ಇಷ್ಟಗಲ ಅರಳಿದ ಮುಖಕ್ಕೂ ಸಾಧ್ಯವಾಗಲಿಲ್ಲ. "ಥ್ಯಾಂಕ್ಯೂ ಡಿಯರ್.. ಥ್ಯಾಂಕ್ಯೂ ವೆರಿ ಮಚ್! ನನ್ನ ಭಾರ ಕಡಿಮೆ ಮಾಡಿದೆ. ಜಗತ್ತು ಏನೇ ಆದ್ರೂ ನಾವಿಬ್ಬರೂ ಫ್ರೆಂಡ್ಸ್. ಮುಂದಿನ ತಿಂಗಳು ನನ್ನ ಮದುವೆ. ನಿನ್ನ ಬಳಿ ಹೇಳಿಕೊಳ್ಳದೇ ಮುಚ್ಚಿಟ್ಟಿದ್ದ ಸಂಗತಿ ಅಂದ್ರೆ ಇದೊಂದೇ, ಸಾರಿ.." ಅಂದು ಬ್ಯಾಗಿನಿಂದ ಇನ್ವಿಟೇಶನ್ ತೆಗೆದು ಕೊಟ್ಟಳು. ವಿಮಾನದ ಕಿಟಕಿಯಿಂದ ನೋಡಿದವನಿಗೆ ಮುಗಿಲು ಮುಗಿಯುವುದೇ ಇಲ್ಲವೇನೋ ಅನ್ನಿಸಿತು.
* * *
ಇಡೀ ಕಲ್ಯಾಣ ಮಂಟಪ ಸುತ್ತಾಡಿಕೊಂಡು ಬಂದ ಚಂದ್ರು ಯೋಚನಾಮಗ್ನನಾಗಿ ಕೂತಿದ್ದ ನನ್ನನ್ನು ತಟ್ಟಿ ಎಬ್ಬಿಸಿ ಕೇಳಿದ: "ಅಂತೂ ಈಗ ಶುರುವಾಯ್ತಾ ಡಿಪ್ರೆಶನ್ನು? ಎಲ್ಲಾ ಮುಗಿದ ಮೇಲೆ? ಆವಾಗ್ಲೇ ಒಂದು ಪ್ರಪೋಸ್ ಮಾಡೋ ಅಂದ್ರೆ ಕೇಳಲಿಲ್ಲ... ಇನ್ನು ಅವಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗೀ ಕೊರಗೀ.. .." ಚಂದ್ರುವಿನ ಅಭಿನಯಕ್ಕೆ ನಕ್ಕೆ ನಾನು. ಇವರಿಗೆ ನಂಬಿಕೆ ಬರುವಂತೆ ತಿಳಿಸಿ ಹೇಳಲಿಕ್ಕಾದರೂ ಆಗುತ್ತಾ ಇದನ್ನೆಲ್ಲಾ? ಸಾಧ್ಯವೇ ಇಲ್ಲವೆನಿಸಿತು.. ಮಂಟಪದತ್ತ ನೋಡಿದೆ. ಗಂಡನೊಂದಿಗೆ ಇನ್ನೂ ಏನೇನೋ ಪೂಜೆ, ಹವನಗಳಲ್ಲಿ ಮುಳುಗಿದ್ದಳು ಭಾವನಾ. ಅವಳು ಸೆಖೆಯಲ್ಲಿ ಬೆವರುತ್ತಾ ಕಷ್ಟ ಪಡುತ್ತಿದ್ದುದನ್ನು ಕಂಡು ಈ ಬೇಸಿಗೆ ಕಾಲದಲ್ಲೇ ಯಾಕೆ ಎಲ್ಲರೂ ಮದುವೆಯಾಗುತ್ತಾರೋ ಅನ್ನಿಸಿತು.
[ಪ್ರಕಟ: ಕನ್ನಡ ಪ್ರಭದ 'ಸಖಿ' ಪಾಕ್ಷಿಕ . ಟಾಪಿಕ್: Intimate friendship between a boy n girl]
^^^^^^^^^^^^
"..ಅವಳ ಸೌಂದರ್ಯಕ್ಕೆ ಆ ಅಪರಾತ್ರಿ ಕೂಡ ಬೆರಗಾದಂತಿತ್ತು. ಹಚ್ಚಿಟ್ಟ ದೀಪಕ್ಕೆ ಹಾಲು ಬೆರೆಸಿದಂಥ ಬಣ್ಣ. ತನಗಿರುವ ಶ್ರದ್ಧೆಯನ್ನೆಲ್ಲ ಬಳಸಿ ಅವಳ ರೂಪು ತಿದ್ದಿರಬೇಕು ಭಗವಂತ. ಅವಳ ಕಣ್ಣುಗಳಲ್ಲಿದ್ದುದು ಸಾತ್ವಿಕ ಚೆಲುವು. ನಕ್ಕರೆ ಅದೆಂಥದೋ ಸೌಮ್ಯ ಕಳೆ. ಒಂದು ಕೆನ್ನೆಯ ಮೇಲೆ ಮಾತ್ರ ಗುಳಿ ನೆಗ್ಗುತ್ತದೆ. ಮುಂದಲೆಯಲ್ಲಿ ಸುಳಿದಿರುಗಿದ ಮಿನ್ನಾಗರಗಳಂತಹ ದಟ್ಟ ಗುಂಗುರು ಕೂದಲು. ಅವಳ ಹುಬ್ಬುಗಳಲ್ಲಿ ಒಂದು ಕಾನ್ಫಿಡೆನ್ಸು ಸರಿದಾಡುತ್ತದೆ. ಕೆಳ ತುಟಿಗೆ ಮೆತ್ತಿಕೊಂಡಂತಿರುವ ಪುಟ್ಟ ಮಚ್ಚೆಯಲ್ಲಿ ಅದೆಂಥದೋ ಅಮಾಯಕತೆ..."
ನಾನು ಮೊದಲ ವರುಷದ ಕಾಲೇಜು ಹುಡುಗನಾಗಿದ್ದಾಗ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ‘ಹೇಳಿ ಹೋಗು ಕಾರಣ’ ಧಾರಾವಾಹಿ ಬರುತ್ತಿತ್ತು. ಡಾಕ್ಟರಾಗಬೇಕೆಂದು ಬೀದಿಯಲ್ಲಿ ನಿಂತು ಕನಸು ಕಂಡ ಹುಡುಗಿ ಪ್ರಾರ್ಥನಾಳನ್ನು ಮಿಠಾಯಿ ಅಂಗಡಿ ಹುಡುಗ ಹಿಮವಂತ ಚನ್ನರಾಯಪಟ್ಟಣದಿಂದ ಶಿವಮೊಗ್ಗದವರೆಗೆ ನಡೆಸಿಕೊಂಡು ಬಂದಿದ್ದ. ಮನೆಯನ್ನು ತಿರಸ್ಕರಿಸಿ, ಹಿಮವಂತನೆಂಬ ಹುಡುಗನೆಡೆಗೆ ಅದ್ಯಾವುದೋ ನಂಬಿಕೆ ಇರಿಸಿ ಬರಿಗೈಯಲ್ಲಿ ಹೊರಟ ಅವಳ ಬಲಗಾಲ ಹೆಬ್ಬೆರಳಿಗೆ ಎಡವಿ ಗಾಯವಾಗಿತ್ತು. ಶಿವಮೂರ್ತಿ ಸರ್ಕಲ್ಲಿನ ಬಳಿಯ ಒಂದೇ ಕೋಣೆಯ ಹಿಮವಂತನ ಗೂಡಿನೊಳಗೆ ದಾಖಲಾದ ಹುಡುಗಿ ಬೆಳಗ್ಗೆ ಎದ್ದು, ಸ್ನಾನ ಮಾಡಿ ಬಂದು, ಪದ್ಮಾಸನ ಹಾಕಿ ಕುಳಿತು ‘ಯಾಕುಂದೇಂದು ತುಷಾರ ಹಾರ ಧವಳಾ..’ ಅಂತ ಪ್ರಾರ್ಥನೆ ಮಾಡುತ್ತಿದ್ದಳು. ಹಿಮವಂತನೆಡೆಗೆ ಅವಳಿಗೊಂದು ದೈವೀಕ ಪ್ರೀತಿಯಿತ್ತು. ಆರಾಧನೆಯಿತ್ತು. ನಿಷ್ಠೆಯಿತ್ತು.
ಮತ್ತು ನನಗದು ಇಷ್ಟವಾಗಿತ್ತು! ಕಾಲೇಜಿನ ಹುಡುಗಿಯರಲ್ಲೆಲ್ಲಾ ಪ್ರಾರ್ಥನಾಳನ್ನು ಹುಡುಕುತ್ತಿದ್ದೆ. ಮನೆಗೆ ಬಂದು ಮತ್ತೆ ಪತ್ರಿಕೆ ತೆರೆದು ‘ಆ ಹುಡುಗಿ ಪ್ರಾರ್ಥನಾಳೊಂದಿಗೆ ಮ್ಯಾಚ್ ಆಗುತ್ತಾಳಾ?’ ಅಂತ ನೋಡುತ್ತಿದ್ದೆ. ಕಣ್ಣಲ್ಲಿ ಸಾತ್ವಿಕ ಚೆಲುವು, ನಗುವಿನಲ್ಲಿ ಸೌಮ್ಯ ಕಳೆ, ಒಂದೇ ಕೆನ್ನೆ ಮೇಲೆ ಗುಳಿ, ಹುಬ್ಬಿನಲ್ಲಿ ಕಾನ್ಫಿಡೆನ್ಸು, ಕೆಳತುಟಿ ಕೆಳಗಿನ ಮಚ್ಚೇಲಿ ಅಮಾಯಕತೆ! ಹಹ್! ಕೆನ್ನೆ ಮೇಲೆ ಗುಳಿ ಬೀಳೋ ಹುಡುಗಿಯರೇನೂ ಬಹಳ ಇದ್ದರು; ಆದರೆ ಈ ಮಚ್ಚೆ ಮಾತ್ರ ನಂಗೆ ಸಿಗಲೇ ಇಲ್ಲ! ಮತ್ತೆ ಇನ್ನುಳಿದ ಗುಣವಿಶೇಷಣಗಳನ್ನೆಲ್ಲಾ ಗುರುತಿಸುವುದು ಹೇಗೆಂದೇ ನನಗಾಗ ಗೊತ್ತಿರಲಿಲ್ಲ. ಹೀಗಾಗಿ, ನನ್ನ ಪ್ರಾರ್ಥನಾಳಂತಹ ಹುಡುಗಿಯ ಹುಡುಕಾಟ ಅವಿರತವಾಗಿಬಿಟ್ಟಿತು.
ಆದರೆ, ಅಂತಹ-ಹಾಗಿದ್ದ ಪ್ರಾರ್ಥನಾ, ದಾವಣಗೆರೆಗೆ ಮೆಡಿಕಲ್ ಓದಲಿಕ್ಕೆಂದು ಹೋಗಿ, ಅವಳಿಗೆ ಹೊರ ಪ್ರಪಂಚದ ಪರಿಚಯ ಆಗಿ, ಮನಸು ಹಕ್ಕಿಯಾಗಿ, ದೇಬಶಿಶು ಎಂಬ ಬುದ್ಧಿವಂತ ಫ್ಲರ್ಟ್ನ ಮೋಹಕ್ಕೆ ಬೀಳುತ್ತಾಳೆ. ತನ್ನನ್ನೇ ಪ್ರಪಂಚವೆಂದು ಭಾವಿಸಿದ್ದ, ಕೇವಲ ತನಗಾಗಿಯೇ-ತನ್ನ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿಯೇ ದೂರದೂರಿನಲ್ಲಿ ಹಗಲೂ-ರಾತ್ರಿ ದುಡಿಯುತ್ತಿದ್ದ ಹಿಮವಂತನಿಗೆ ವ್ಯವಸ್ಥಿತವಾಗಿ ಮೋಸ ಮಾಡುವ ಸಂಚು ಹೂಡುತ್ತಾಳೆ. ದೇಬುವಿನ ರೂಪ, ಬುದ್ಧಿ, ಶ್ರೀಮಂತಿಕೆಗಳ ಮುಂದೆ ಹಿಮವಂತ ಏನೂ ಅಲ್ಲ ಅಂತ ಅನ್ನಿಸುತ್ತದೆ. ‘ಹಿಮವಂತ ದೇವರಂಥವನು, ನಿಜ. ಆದರೆ ದೇವರನ್ನು ಯಾರಾದರೂ ಪ್ರೀತಿಸಲಿಕ್ಕೆ-ಮದುವೆಯಾಗಲಿಕ್ಕೆ ಆಗುತ್ತದಾ?’ ಅಂತ ತನ್ನ ತೀರ್ಮಾನವನ್ನು ಸಮರ್ಥಿಸಿಕೊಳ್ಳುತ್ತಾಳೆ. ಕೊನೆಗೆ ಕಾದಂಬರಿ ಏನೇನೋ ಆಗಿ ಮುಗಿಯುತ್ತದೆ.
ಈ ಮಧ್ಯೆ, ನನ್ನ ರಾತ್ರಿಯ ಕನಸುಗಳ ರ್ಯಾಂಪಿನ ಮೇಲೆ, ಕಾಲೇಜಿನ ಒಬ್ಬೊಬ್ಬ ಹುಡುಗಿಯೂ ತುಟಿ ಕೆಳಗೆ ಕಾಡಿಗೆಯಿಂದ ಕಪ್ಪು ಚುಕ್ಕಿ ಇಟ್ಟುಕೊಂಡು, ಮುಖಕ್ಕೆ ಫೇರೆಂಡ್ ಲವ್ಲೀ ಹಚ್ಚಿ ತಿಕ್ಕಿ ‘ಕಳೆ’, ‘ಸಾತ್ವಿಕ ಚೆಲುವು’ ಎಲ್ಲಾ ಹೆಚ್ಚಿಸಿಕೊಂದು, ಹುಬ್ಬಿನಲ್ಲಿ ಕಾನ್ಫಿಡೆನ್ಸಿನಂತಹದೇ ಏನನ್ನೋ ಕುಣಿಸುತ್ತಾ ಬಂದು ‘ಯಾಕುಂದೇಂದು..’ ಹೇಳಿ ಹೋಗುತ್ತಿದ್ದಳು. ಬಹುಶಃ ಆ ದಿನಗಳಲ್ಲಿ ನನ್ನನ್ನು ನಾನು ಹಿಮವಂತ ಅಂತ ಬಲವಾಗಿ ಕಲ್ಪಿಸಿಕೊಂಡಿದ್ದೆನಿರಬೇಕು! ಯಾವಾಗ ಪ್ರಾರ್ಥನಾ ಹಿಮವಂತನಿಗೆ ಮೋಸ ಮಾಡುವುದು ಖಚಿತ ಆಯಿತೋ, ಆ ಕನಸುಗಳೆಲ್ಲಾ ಸಡನ್ನಾಗಿ ಬಂದ್ ಆಗಿ ನಿದ್ರೆ ಖಾಲಿ ಹೊಡೆಯತೊಡಗಿತು.
[ಪ್ರಕಟ: ವಿಜಯ ಕರ್ನಾಟಕ ಸಾಪ್ತಾಹಿಕ. ಟಾಪಿಕ್: Crush at a novel character.]
14 comments:
Sush,
bhari chanda baradde :)
-Chin
:-) good ones.
good writings sushruth. already read it in sakhi and Vk. Still read it once again... very nice
ಸುಶ್ರುತ,
ಸ್ನೇಹದ ಬಗೆಗೆ ಇದು ಸುಂದರ ಬರಹ.
ನಿನಗೆ ಬೇಜಾರಾಗಬಹುದು. ನಿನ್ನ ಬರಹ ಈ ಮಟ್ಟಕ್ಕಿಳಿದಿದ್ದು ಯಾವಾಗ? ಅಷ್ಟು ಚಂದದ "ಅಮ್ಮ" ಬರೆದವನು ಇಷ್ಟು ಬಾಲಿಷವಾಗಿಯೂ ಬರೆಯಬಹುದಾ ಎಂದುಕೊಂಡಿರಲಿಲ್ಲ. ಸಾರಿ, ಸುಶ್ರುತ, ಹೀಗಂತ ಬರೆಯದೇ ಇರಲು ಆಗಲಿಲ್ಲ.
- ಸುಶ್ರುತನ ಬರಹದ ಅಭಿಮಾನಿ
ಸುಶ್ರುತ ಬರಹ ಬಹಳೇ ಆತ್ಮೀಯ ಆಗಿತ್ತು ..ನಿಜವೇ ಬಯಸಿದ್ದು ಸಿಗದಿದ್ದವ ಮಾತ್ರ ಏನಾದರೂ ಸಾಧಿಸಬಲ್ಲ ಯಾಕಂದ್ರ
ಅವನೊಳಗೆ ಆ ಹಪಾಪಿತನ ಇರ್ತದ.
ಸುಶ್ರುತ.. ಚೆನ್ನಾಗಿ ಬರ್ದಿದಿಯಾ.. ’ಒಂದು ಸ್ನೇಹ’ ಇಷ್ಟ ಆಯ್ತು.. :)
ಒಂದು typo ಅನ್ಸುತ್ತೆ.. "ಮತ್ತೆ ಚಂದ್ರು ತಮ್ಮ ಮನೆಯದೇ ಮದುವೆಯೇನೋ ಅನ್ನೋ ಹಾಗೆ ಸಂಭ್ರಮದಿಂದ ಓಡಾಡ್ತಿದಾನೆ" ಇದು ಅಂಶು ಆಗಿರ್ಬೇಕಿತ್ತು ಅನ್ನಿಸ್ತು.. :)
ಸುಶ್ರುತ,
ಬರಹ ಇಷ್ಟ ಆಯ್ತು.
ಒಂದು ಹುಡುಗ ಮತ್ತು ಹುಡುಗಿಯ ನಡುವಿನ ಸ್ನೇಹವನ್ನು ಎಲ್ಲರೂ ಒಂದೇ ದೃಷ್ಟಿಯಲ್ಲಿ ನೋಡುವುದೇಕೋ! ಅವರಲ್ಲಿ ಕೇವಲ ಒಳ್ಳೆಯ ಸ್ನೇಹವಿರಲು ಸಾಧ್ಯವಿಲ್ಲವೆ? ಇದು ನನ್ನನ್ನು ಸದಾ ಕಾಡುವ ಪ್ರಶ್ನೆ.
ಲೇಖನ ಚೆನಾಗಿದ್ದು. ( ಒಂದು ಕಡೆ ಅಂಶು ಮತ್ತು ಚಂದ್ರು ಅದಲು ಬದಲಾದಂತಿದೆ)
ಧನ್ಯವಾದ ಪ್ರತಿಕ್ರಿಯಿಸಿದ ಎಲ್ಲರಿಗೂ. :-)
ಅನಂತ್ & ಚಿತ್ರಾ,
ತಪ್ಪು ತಿದ್ದಿದ್ದೇನೆ. ಥ್ಯಾಂಕ್ಯೂ. ;-)
ಅನಾನಿಮಸ್ ಅಭಿಮಾನಿ,
ಬೇಜಾರಿಲ್ಲ. ಇನ್ನೂ ಚೆನ್ನಾಗಿ ಬರೆಯಲಿಕ್ಕೆ ಪ್ರಯತ್ನಿಸುತ್ತೇನೆ. ಪ್ರತಿಕ್ರಿಯೆಗೆ ಧನ್ಯವಾದ.
ಬದುಕು ಎಂಬ ನಾಟಕ ರಂಗದಲ್ಲಿ ಬರುವ ಜನರೆಲ್ಲರೂ ಪಾತ್ರಧಾರಿಗಳು. ತಮ್ಮ ತಮ್ಮ ಪಾತ್ರ ಬಂದಾಗ, ಇರಬೇಕಾದಷ್ಟು ಹೊತ್ತು ಇದ್ದು, ಅಭಿನಯಿಸಿ ಮರೆಯಾಗುತ್ತಾರೆ.. ನೀನೂ ಈ ತತ್ತ್ವವನ್ನು ಅರಿತುಕೊ. ನಿನಗೆ ಪರಬ್ರಹ್ಮ ಸಾಕ್ಷಾತ್ಕಾರವಾದಂತೆ.
suSrata saar,
nimma laibreriyalli 2 pustaka mis aagide adu manassE!! rilaaks plis Baaga -1 haagu 2 . :-) :-) haagu sha0kaaraachaaryara bagge shiraka0llu Ishvara BaT ravaru baredaddu.
article is nice ....
ಎರಡನೇದು ಹಳಿ ತಪ್ಪಿದ ರೈಲಿನ ಥರ ಅನ್ಸ್ತು... ಮೊದಲನೇದು ಸೂಪರ್ :-)
The concept is an absolute bullshit man!, I use to feel the same when I was in your age. Later, figured that it's all due to body-chemistry. I know you guys hate me for saying this, but , sorry guys, I can't compromise on reality.-D.M.Sagar (Original)
Sushruta, Aravind here. Nija helavu andre naanu kannada blog first time oddtippudu. Bahala chennagiddhu. Idanella oddid myele nang ondhu aase aagthiddhu. naanu bariyovu antha... nanna badukina aagadha anubhava galu, kushi, novanella blog roopa dalli represent madavu antha. Barithe naana jeevanada kavithe.. Blog mukena...
Thanks
Post a Comment