Tuesday, September 22, 2009

ಡಬ್ಬಿ ಪ್ರೀತಿಯ ಅಮ್ಮ

ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಪ್ಪನನ್ನು ವಾಪಸು ಕಳುಹಿಸುವ ರಾತ್ರಿ ಅಮ್ಮನಿಗೆ ಫೋನಿನಲ್ಲಿ “ಅಪ್ಪನ್ ಹತ್ರ ಏನಾದ್ರೂ ಕೊಟ್ ಕಳ್ಸವಾ ಅಮ್ಮಾ?” ಅಂತ ಕೇಳಿದರೆ ಅವಳು ನಿರಾಳವಾಗಿ “ಏನೂ ಬ್ಯಾಡ. ಆದ್ರೆ ಹೋದ್ಸಲ ನೀನು ಉಪ್ಪಿನ್‌ಕಾಯಿ, ತುಪ್ಪ ತುಂಬಿಕೊಂಡು ಹೋಗಿದ್ದ ಡಬ್ಬಿ ವಾಪಸ್ ಕಳ್ಸು. ಹೊತ್ಗಂಬರ್ಲಿ ಅಪ್ಪ!” ಎಂದಳು. ಮೊಬೈಲಿನ ವಾಲ್ಯೂಮು ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಅವಳು ಹೇಳಿದ್ದು ಅಪ್ಪನಿಗೂ ಕೇಳಿಸಿತಿರಬೇಕು, “ನೋಡು, ನಾನು ಆರಾಮಾಗ್ ಬರವು ಅನ್ನೋದು ಸ್ವಲ್ಪನೂ ಇಲ್ಲೆ ಅವ್ಳಿಗೆ. ಯಾವಾಗ್ ನೋಡಿದ್ರೂ ಡಬ್ಬೀದೇ ಚಿಂತೆ!” ಎಂದ ಅಪ್ಪ. ನಾನು ಜೋರಾಗಿ ನಕ್ಕೆ.

ನಾನು ಪ್ರತಿ ಸಲ ಊರಿಗೆ ಹೊರಡುವ ಹಿಂದಿನ ದಿನ ಅಮ್ಮನಿಗೆ ಫೋನ್ ಮಾಡಿ ಇಲ್ಲಿಂದ ಏನಾದ್ರೂ ತರಬೇಕಾ ಅಂತ ಕೇಳಿದರೆ ಅವಳು ಹೇಳುವುದು ಒಂದೇ: “ಡಬ್ಬಿ ವಾಪಸ್ ತಗಂಬಾ ಸಾಕು”. ನನ್ನ ಅಮ್ಮನಿಗೆ ಡಬ್ಬಿಗಳ ಮೇಲೆ ಪ್ರೇಮ! ಹಾಗೆ ನೋಡಿದರೆ ಈ ಡಬ್ಬಿಯೆಂಬುದು ಎಲ್ಲಾ ಗೃಹಿಣಿಯರ ಪ್ರೀತಿಗೆ, ಪೊಸೆಸಿವ್‌ನೆಸ್‌ಗೆ ಒಳಗಾಗಿರುವ ವಸ್ತು. ಅಡುಗೆಮನೆಯ ಶೆಲ್ಫು-ನಾಗಂದಿಗೆಯ ಮೇಲೆ ಬೆಪ್ಪಣ್ಣಗಳಂತೆ ಸಾಲಾಗಿ ಕುಳಿತುಕೊಂಡಿರುವ ಇವುಗಳಲ್ಲಿ ಅದೆಂತಹ ಆಕರ್ಷಣೆಯಿದೆಯೋ, ಯಾರಿಗೆ ಏನನ್ನೇ ತುಂಬಿ ಕಳುಹಿಸುವುದಿದ್ದರೂ ಕೊಡುವಾಗ “ಡಬ್ಬಿ ಒಂದು ವಾಪಸ್ ಕಳ್ಸೋದು ಮರೀಬೇಡಿ” ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

ಮೊದಲೆಲ್ಲ ನಮ್ಮ ಮನೆಯಲ್ಲಿ ತಗಡಿನ ಡಬ್ಬಿಗಳಿದ್ದವು. ನಾನು ಮಗುವಾಗಿದ್ದಾಗ ತಂದಿದ್ದ ಒಂದು ನೆಸ್ಟಮ್ಮಿನ ಡಬ್ಬಿಯಂತೂ ಅದೆಷ್ಟು ವರ್ಷಗಳ ಕಾಲ ಇತ್ತು ಎಂದರೆ, ನಾನು ದೊಡ್ಡವನಾಗಿ, ಇಂಗ್ಲೀಷ್ ಓದಲು-ಬರೆಯಲು ಕಲಿತು, ಆ ಡಬ್ಬಿಯ ಮೇಲೆ ಬರೆದಿದ್ದ ‘ನೆಸ್ಟಮ್’ ಎಂಬ ಶಬ್ದವನ್ನು ಓದಿದಾಗ ಅಮ್ಮ “ಹೂಂ, ಅದು ನೀ ಪಾಪು ಆಗಿದ್ದಾಗ ತಂದಿದ್ದು. ಒಂದು ಚಮಚ ನೆಸ್ಟಮ್ ತಿನ್ಸಕ್ಕರೆ ಎಷ್ಟ್ ಕಾಟ ಕೊಡ್ತಿದ್ದೆ ಗೊತ್ತಿದಾ? ದನವಿನ್ ಕರ, ಬೆಕ್ಕಿನ್ ಮರಿ, ಚಂದ್ರ, ಪೋಲೀಸು -ಎಲ್ಲವಕ್ಕೂ ಒಂದೊಂದು ಚಮಚ ತಿನ್ಸಿದ್ ಮೇಲೇ ನೀನು ತಿಂತಿದ್ದಿದ್ದು!” ಎನ್ನುತ್ತಿದ್ದಳು. ಮಗುವಾಗಿದ್ದ ನನ್ನನ್ನೆತ್ತಿಕೊಂಡು ಅಮ್ಮ, ಒಂದು ಕೈಯಲ್ಲಿ ನೆಸ್ಟಮ್ ಖಾದ್ಯದ ಬಟ್ಟಲನ್ನು ಹಿಡಿದು, ಕೊಟ್ಟಿಗೆ, ಅಂಗಳ, ರಸ್ತೆಯನ್ನೆಲ್ಲಾ ಸುತ್ತುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಂಡು ನಾನು ಖುಶಿ ಪಡುತ್ತಿದ್ದೆ. ಅದೇ ಚಿತ್ರದ ನೆನಪಿನ ಲಹರಿಯಲ್ಲಿರುತ್ತಿದ್ದ ಅಮ್ಮ, “ಅರ್ಧ ನೆಸ್ಟಮ್ ಡಬ್ಬಿ ನಿನ್ನ ಮುಖ-ಮುಸುಡಿಗೆ ಬಡಿಯಕ್ಕೇ ಆಯ್ದು ಬಿಡು!” ಎಂದು ನಗುತ್ತಿದ್ದಳು. ಹೀಗೆ, ನಮ್ಮನೆಯ ಅಡುಗೆ ಮನೆ ನಾಗಂದಿಗೆ ಮೇಲೆ ಕೊತ್ತುಂಬರಿ ಕಾಳನ್ನು ಅರ್ಧದವರೆಗೆ ತುಂಬಿಸಿಕೊಂಡು ಮುಗುಮ್ಮಾಗಿ ಕೂತಿದ್ದ ಆ ನೆಸ್ಟಮ್ ಡಬ್ಬಿ, ಆಗಾಗ ಅಮ್ಮನಿಗೆ ಸಿಹಿಸಿಹಿ ನೆನಪನ್ನೂ ನನಗೆ ಕಲ್ಪನೆಯನ್ನೂ ತುಂಬಿಕೊಡುವಲ್ಲಿ ಯಶಸ್ವಿಯಾಗುತ್ತಿತ್ತು.

ಈ ತಗಡಿನ ಡಬ್ಬಿಗಳ ಸಮಸ್ಯೆಯೆಂದರೆ, ಇವುಗಳ ಒಡಲಲ್ಲಿ ಏನಿದೆ ಅಂತ ಪ್ರತಿ ಸಲ ಮುಚ್ಚಳ ತೆಗೆದೇ ನೋಡಬೇಕು. ಹೀಗಾಗಿ ನಾನು, ಆಯಾ ಡಬ್ಬಿಗಳ ಮೇಲೆ ಆಯಾ ವಸ್ತುವಿನ ಹೆಸರನ್ನು ಬರೆದ ಪಟ್ಟಿ ಅಂಟಿಸಿರುತ್ತಿದ್ದೆ. ಆದರೆ ಪಟ್ಟಿ ಕಿತ್ತು ಹೋದ ಡಬ್ಬಿಗಳದೇ ಸಮಸ್ಯೆ. ಅಮ್ಮನಾದರೆ ಕೈಯಲ್ಲಿ ಹಿಡಿದು ಕುಲುಕಿದಾಗ ಬರುವ ಶಬ್ದದಿಂದಲೇ ಒಳಗಿರುವುದು ಕಡಲೆ ಬೇಳೆಯೋ ಉದ್ದಿನ ಬೇಳೆಯೋ ಅಂತ ಪತ್ತೆ ಮಾಡುತ್ತಿದ್ದಳು. ಆದರೆ ಅಮ್ಮ ‘ರಜೆ’ಯಲ್ಲಿದ್ದಾಗ ಅಡುಗೆ ಮಾಡುವ ಪಾಳಿಯನ್ನು ವಹಿಸಿಕೊಳ್ಳುತ್ತಿದ್ದ ಅಪ್ಪನಿಗೆ ಇದು ಗೊತ್ತಾಗುತ್ತಿರಲಿಲ್ಲ. ಸಾಸಿವೆ ಕಾಳಿಗೂ ತೊಗರಿ ಬೇಳೆಗೂ ವ್ಯತ್ಯಾಸ ಗುರುತಿಸುವುದು ಸುಲಭ; ಆದರೆ ಒಂದೇ ಸೈಜಿನ - ಒಂದೇ ತೂಕದ ಬೇಳೆಗಳ ನಡುವಿನ ಶಬ್ದವ್ಯತ್ಯಾಸ ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಹೆಚ್ಚುಕಮ್ಮಿ ಶಬ್ದವೇದಿ ಕಲಿತವರಷ್ಟೇ ಜಾಣ್ಮೆ ಬೇಕು.

ಈ ಸಮಸ್ಯೆ ದೂರವಾದದ್ದು ಪಾರದರ್ಶಕ ಪ್ಲಾಸ್ಟಿಕ್ ಡಬ್ಬಿಗಳು ಬಂದಮೇಲೆ. “ಎಲ್ಲಾರ್ ಮನೇಲೂ ಈಗ ಪ್ಲಾಸ್ಟಿಕ್ ಡಬ್ಬಿ. ಬೇಳೆ-ಕಾಳು ತುಂಬಿಸಿ ನಾಗಂದಿಗೆ ಮೇಲೆ ಇಟ್ರೆ ನೀಟಾಗಿ ಎಲ್ಲಾ ಕಾಣ್ತು. ಈ ಸಲ ಸಾಗರಕ್ಕೆ ಹೋದಾಗ ನಮ್ಮನಿಗೂ ಐದಾರು ಡಬ್ಬಿ ತಗಂಬನ್ನಿ” ಎಂಬ ಅಮ್ಮನ ಚಿತಾವಣೆಯನ್ನು ಪಾಲಿಸಿದ ಅಪ್ಪ, ಆ ಸಲ ಸಾಗರದಿಂದ ಬರುವಾಗ ವಿನಾಯಕ ರಾಯರ ಅಂಗಡಿಯಿಂದ ಆರು ಚಾಕ್ಲೇಟ್ ಡಬ್ಬಿ ತಂದ. ಈ ಚಾಕ್ಲೇಟ್ ಡಬ್ಬಿಗಳ ಮೇಲಿದ್ದ ಆಲ್ಫೆನ್ಲೀಬೇ, ಇಕ್ಲೇರ್ಸ್, ಹಾಜ್‌ಮುಲಾ ಇತ್ಯಾದಿ ಸ್ಟಿಕ್ಕರುಗಳನ್ನು ಕಿತ್ತು ತೆಗೆಯುವ ಕೆಲಸ ನನಗೆ ಬಂತು. ಮತ್ತೆ ಇವುಗಳಲ್ಲಿ ಇನ್ನೂ ಆಯಾ ಚಾಕ್ಲೇಟಿನ ಫ್ಲೇವರಿನ ಪರಿಮಳ ಇರುತ್ತಿತ್ತು. ಮುಚ್ಚಳ ತೆರೆದರೆ ಸಾಕು, ಆ ಚಾಕ್ಲೇಟಿನ ರುಚಿಯೇ ನೆನಪಾಗಿ ಬಾಯಲ್ಲಿ ನೀರು ಬರುತ್ತಿತ್ತು. ಅದಕ್ಕೇ, ತುಂಬಾ ಬೇಜಾರಾಗಿ ನಾನು, “ಖಾಲಿ ಡಬ್ಬಿ ತರೋದಕ್ಕಿಂತ ತುಂಬಿದ್ದೇ ತರ್ಲಾಗಿತ್ತು” ಅಂತ ಅಪ್ಪನಿಗೆ ಹೇಳಿದೆ. ಅಪ್ಪನಿಗೆ ಇದ್ಯಾಕೋ ದುಬಾರಿ ವ್ಯವಹಾರ ಆಯ್ತಲ್ಲಾ ಅನಿಸಿರಬೇಕು, “ವಿನಾಯಕ ರಾಯರ ಅಂಗಡೀಲಿ ಇದ್ದಿದ್ದು ಅಷ್ಟೂ ಖಾಲಿ ಚಾಕ್ಲೇಟ್ ಡಬ್ಬಿ! ಇದೇ, ಇದೊಂದರಲ್ಲಿ ಎರಡು ಉಳಿದಿತ್ತು, ಜೇಬಲ್ ಇಟ್ಕಂಡ್ ಬೈಂದಿ” ಎನ್ನುತ್ತಾ, ಎರಡು ಚಾಕ್ಲೇಟ್ ತೆಗೆದು ಕೊಟ್ಟ. ಅವನು ಸುಳ್ಳು ಹೇಳುತ್ತಿದ್ದಾನೆ ಅಂತ ಗೊತ್ತಾದರೂ ನಾನು ಅದನ್ನು ಇಸಕೊಂಡು, ಖುಶಿಯಿಂದ ಸ್ಟಿಕರ್ ಕೀಳುವುದನ್ನು ಮುಂದುವರೆಸಿದೆ. ಈಗ ಬೇಡವಾದ ಹಳೆಯ ತಗಡಿನ ರೌಂಡು ಡಬ್ಬಿಗಳಿಗೆ ತೂತು ಮಾಡಿ, ಮಧ್ಯೆ ದಾರ ಪೋಣಿಸಿ ಬುಲ್ಡೇಜರ್ ಮಾಡಿ ಮನೆ ತುಂಬಾ ಶಬ್ದ ಮಾಡುತ್ತಾ ಓಡಾಡಿಸಿದೆ.

ಆ ಚಾಕ್ಲೇಟ್ ಡಬ್ಬಿಗಳು ನಮ್ಮ ಮನೆಯಲ್ಲಿ ಸುಮಾರು ವರ್ಷ ಕಾಲ ಚಲಾವಣೆಯಲ್ಲಿದ್ದವು. ಉದ್ದು, ಹೆಸರು, ತೊಗರಿ, ಕಡಲೆ, ಕೊತ್ತಂಬರಿಯಾದಿಯಾಗಿ ಅನೇಕ ಬಣ್ಣಬಣ್ಣದ ದವಸ ಧಾನ್ಯಗಳನ್ನು ಇವು ತಮ್ಮೊಡಲಲ್ಲಿಟ್ಟುಕೊಂಡು ಸಂರಕ್ಷಿಸುತ್ತಿದ್ದವು. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ವರ್ಷಕ್ಕೊಮ್ಮೆ, ಮಳೆಗಾಲಕ್ಕೆ ಮುನ್ನ, ಕಾಳು-ಬೇಳೆಗಳನ್ನು ತರಿಸಿ, ಹಸನು ಮಾಡಿ ಡಬ್ಬಿಗಳಲ್ಲಿ ತುಂಬಿಡುತ್ತಿದ್ದೆವು. ಹಾಗೆ ತುಂಬಿಡುವ ಮುನ್ನ ಡಬ್ಬಿಯನ್ನು ತೊಳೆದು, ಬಿಸಿಲಲ್ಲಿ ಒಣಗಿಸಿ, ಒರೆಸಿ ಇಡಬೇಕಿತ್ತು. ಪ್ರತಿ ವರ್ಷವೂ ಮೆಂತೆಕಾಳನ್ನೇ ತುಂಬಿಸಿಕೊಂಡಿರಬೇಕೆಂದು ಸಣ್ಣ ಡಬ್ಬಿಯ ಮುಖ ಕಹಿಯಾಗುವುದನ್ನೂ, ಪ್ರತಿ ವರ್ಷವೂ ಒಣಮೆಣಸಿನ ಕಾಯಿ ತುಂಬಿಸಿಕೊಂಡಿರಬೇಕೆಂದು ದೊಡ್ಡ ಡಬ್ಬಿ ಮಾಡಿದ ಸಿಟ್ಟಿಗೆ ಅದರ ಮುಖ ಕೆಂಪಾಗುವುದನ್ನೂ ನಾನು ಗಮನಿಸುತ್ತಿದ್ದೆ. ಇವೆಲ್ಲವುಗಳಿಗಿಂತ ಭಿನ್ನವಾಗಿದ್ದು ತಮ್ಮದೇ ಗತ್ತಿನಿಂದ ಮೆರೆಯುತ್ತಿದ್ದುದು ಉಪ್ಪಿನಕಾಯಿಯ ಪಿಂಗಾಣಿ ಜಾಡಿ ಮತ್ತೆ ತನ್ನೊಳಗೆ ಅಮ್ಮನ ಚಿಲ್ಲರೆ ಕಾಸನ್ನು ಅಡಗಿಸಿಟ್ಟುಕೊಂಡಿರುತ್ತಿದ್ದ ಸಾಸಿವೆಕಾಳಿನ ಡಬ್ಬಿ -ಎರಡೇ.

ನಮ್ಮ ಮನೆಯಲ್ಲಿ ಒಂದಷ್ಟು ಗಾಜಿನ ಡಬ್ಬಿಗಳೂ ಇದ್ದವು. ಕಡಗಾಯಿ, ಕುಚ್ಚುಮಾವಿನಕಾಯಿ, ಸಕ್ಕರೆ, ಇತ್ಯಾದಿ ವಸ್ತುಗಳನ್ನು ಅವುಗಳಲ್ಲಿ ತುಂಬಿಸಿ ಅಡುಗೆಮನೆ ಪಕ್ಕದ ಚಿಕ್ಕ ಕಾಲುದಾರಿಯಲ್ಲಿದ್ದ ಕಪಾಟಿನಲ್ಲಿ ಅಮ್ಮ ಅವನ್ನು ಇಟ್ಟಿರುತ್ತಿದ್ದಳು. ಒಮ್ಮೆ ನನ್ನ ಅತ್ತಿಗೆ ಅದರ ಮೇಲ್ಗಡೆ ಅರೆಯಲ್ಲಿ ತಾನೇ ಅಡಗಿಸಿಟ್ಟುಕೊಂಡಿದ್ದ ಚಾಕ್ಲೇಟುಗಳನ್ನು ತೆಗೆದುಕೊಳ್ಳಲೆಂದು ಕಪಾಟಿನ ಕೆಳಾಗಡೆ ಅರೆಯ ಮೇಲೆ ಕಾಲಿಡುತ್ತಿದ್ದಂತೆಯೇ ಇಡೀ ಕಪಾಟೇ ಅವಳ ಮೇಲೆ ಮಗುಚಿ ಬಿದ್ದು, ಗಾಜಿನ ಡಬ್ಬಿಗಳೆಲ್ಲ ಒಡೆದುಹೋದವು. ಸದ್ದು ಕೇಳಿ ಓಡಿ ಬಂದ ನಾನು, ಆವರಣದ ತುಂಬಾ ಚೆಲ್ಲಿದ್ದ ಬಣ್ಣಬಣ್ಣದ ದ್ರವದ ಮಧ್ಯೆ ಅತ್ತಿಗೆ ಬಿದ್ದುಕೊಂಡಿರುವ ದೃಶ್ಯ ಕಂಡು, ಹೆದರಿ ಕಿಟಾರನೆ ಕಿರುಚಿಕೊಂಡಿದ್ದೆ. ಪುಣ್ಯಕ್ಕೆ ಸ್ವಲ್ಪ ಕೈಗೆ ಗಾಯವಾಗಿದ್ದು ಬಿಟ್ಟರೆ ಮತ್ತಿನ್ನೇನೂ ಆಗಿರಲಿಲ್ಲ ಅವಳಿಗೆ. ಸ್ಥಳಕ್ಕೆ ಧಾವಿಸಿದ ಅಮ್ಮ ವರ್ಷಕ್ಕಾಗುವಷ್ಟು ಸಂಗ್ರಹಿಸಿಟ್ಟುಕೊಂಡಿದ್ದ ಕುಚ್ಚುಮಾವಿನಕಾಯಿ ನೆಲದ ಪಾಲಾದುದಕ್ಕೆ ತೀವ್ರವಾಗಿ ಬೇಸರ ಪಟ್ಟುಕೊಂಡಳು. ವಾರದವರೆಗೂ ಆ ವಾತಾವರಣದಲ್ಲಿ ಕುಚ್ಚುಮಾವಿನಕಾಯಿಯ ಪರಿಮಳ ಸುಳಿದಾಡುತ್ತಿತ್ತು.

ನಾವು ಹೊಸ ಮನೆಗೆ ಬಂದಮೇಲೆ, ಅಲ್ಲಿಯ ಶೆಲ್ಫಿನಲ್ಲಿ ಈ ಚಾಕ್ಲೇಟ್ ಡಬ್ಬಿಗಳು ತುಂಬಾ ಹಳತಿನಂತೆ ಕಾಣತೊಡಗಿದವು. ಇವು ಒಂದೊಂದೂ ಬೇರೆ ಬೇರೆ ಸೈಜು, ಬೇರೆ ಬೇರೆ ಆಕಾರದಲ್ಲಿದ್ದವು. ಆಗಲೇ ಪಾಲಿಶ್ ಕಳೆದುಕೊಂಡು, ಒಂಥರಾ ಬೆಳ್ಳಬೆಳ್ಳಗಾಗಿ ಮುದುಕಿಯರಂತೆ ಕಾಣುತ್ತಿದ್ದವು. ಮತ್ತೆ ಊರಲ್ಲಿ ಈಗ ಎಲ್ಲರ ಮನೆಗೂ ಬಂದುಬಿಟ್ಟಿದ್ದ ಟಪ್ಪರ್‌ವೇರಿನ ಆಕರ್ಷಕ ಪೆಟ್-ಜಾರ್‌ಗಳು ಅಮ್ಮನ ಕಣ್ಣನ್ನು ಕುಕ್ಕುತ್ತಿದ್ದವು. ಫೇಶಿಯಲ್ ಮಾಡಿಸಿಕೊಂಡ ಸ್ಲೀವ್‌ಲೆಸ್ ನಟಿಯರಂತೆ ಥಳಥಳಿಸುತ್ತ, ಒಂದೇ ಬಣ್ಣದ ಮುಚ್ಚಳಗಳನ್ನು ಹೊಂದಿ ಚಂದಗೆ ನಳನಳಿಸುತ್ತಿದ್ದ ಇವನ್ನು ನಮ್ಮ ಮನೆಯ ಶೆಲ್ಫಿನ ಮೇಲೆ ಕಲ್ಪಿಸಿಕೊಂಡು ಅಮ್ಮ ಹಿರಿಹಿಗ್ಗಿದಳು. ಅದಾಗಲೇ ಬೆಂಗಳೂರಿಗೆ ಸೇರಿಕೊಂಡಿದ್ದ ನನ್ನ ಬಳಿ ಫೋನಿನಲ್ಲಿ “ಅಪ್ಪೀ, ಈ ಸಲ ಬರಕ್ಕರೆ ಒಂದು ಕೆಜಿ ಸೈಜಿಂದು ಒಂದಷ್ಟ್ ಬಾಕ್ಸ್ ತಗಂಬಾ” ಅಂತ ಸಣ್ಣಗೆ ಹೇಳಿದಳು. ನಾನು ಅಮ್ಮನಿಗೆ ಖುಶಿಯಾಗಲಿ ಅಂತ, ಮೂರು ಸೈಜಿನ ಆರರಂತೆ ಒಟ್ಟು ಹದಿನೆಂಟು ಟಪ್ಪರ್‌ವೇರ್ ಡಬ್ಬಿ ಒಯ್ದು ಕೊಟ್ಟೆ. ಅಷ್ಟೇ ಅಲ್ಲ, ಅವಳನ್ನು ಸಾಗರಕ್ಕೆ ಕರೆದುಕೊಂಡು ಹೋಗಿ ಐದಾರು ದೊಡ್ಡ ದೊಡ್ಡ ಸ್ಟೀಲ್ ಡಬ್ಬಿಗಳನ್ನೂ ಕೊಡಿಸಿದೆ. ಅಷ್ಟನ್ನೆಲ್ಲಾ ಒಟ್ಟಿಗೆ ಮನೆಗೆ ತಂದುಕೊಂಡ ಅಮ್ಮ ಮುಗ್ದವಾಗಿ ಕೇಳಿದ್ದು ಒಂದೇ ಪ್ರಶ್ನೆ: “ಈಗ ಈ ಚಾಕ್ಲೇಟ್ ಡಬ್ಬೀನೆಲ್ಲ ಎಂಥ ಮಾಡದು?!”

ಅಷ್ಟೆಲ್ಲಾ ಡಬ್ಬಿ ಮನೆಯಲ್ಲಿದ್ದರೂ ಪ್ರತಿ ಸಲ ಮನೆಗೆ ಹೊರಟಾಗಲೂ ‘ಡಬ್ಬಿ ತಗಂಬಾ’ ಎಂದು ನೆನಪಿಸುವ ಅಮ್ಮನ ಬಗ್ಗೆ ನನಗೆ ಪ್ರೀತಿಲೇಪಿತ ಕೋಪ ಬಂದು ಕೊನೆಗದು ಮುದ್ದಾಗಿ ಪರಿವರ್ತಿತವಾಗಿ “ಅಯ್ಯೋ ಅಡ್ಡಿಲ್ಲೆ ಮಾರಾಯ್ತೀ” ಎಂದು ನಗುತ್ತಾ ಫೋನಿಡುವಂತೆ ಮಾಡುತ್ತದೆ. ಬೆಂಗಳೂರಿನ ಪುಟ್ಟ ಮನೆಯ ಪುಟ್ಟ ಕಿಚನ್ನಿನ ಪುಟ್ಟ ನಾಗಂದಿಗೆಯ ಮೇಲೆ ಬಿದ್ದುಕೊಂಡಿರುವ ಖಾಲಿ ಡಬ್ಬಿಗಳನ್ನು ಚೀಲದೊಳಗೆ ತುಂಬಿ ಊರಿನ ಬಸ್ಸಿನ ರಶ್ಶಿನೊಳಗೆ ತೂರಿಸುವಾಗ ರೂಮ್‌ಮೇಟ್ ರೇಗಿಸುತ್ತಾನೆ: ‘ಥೂ, ಡಬ್ಬಾ ನನ್ ಮಗನೇ!’. ನಾನು ತಕ್ಷಣ ಸರಿ ಮಾಡುತ್ತೇನೆ: ‘ಡಬ್ಬಾ ನನ್ ಮಗ ಅಲ್ಲ; ಡಬ್ಬಿಪ್ರೀತಿಯ ಅಮ್ಮನ ಮಗ’ ಅಂತ.

[ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ.]

41 comments:

Vishwas Krishna said...

tumba chennagi bardidira. ಡಬ್ಬಾ ನನ್ ಮಗ line sakkatagide.

Annapoorna Daithota said...

ಚೆನ್ನಾಗಿದೆ ಸುಶ್ರುತ :) ಲೇಖನ ಓದ್ತಾ, ವಸುಧೇಂದ್ರರ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ನೆನ್ಪಾಯ್ತು.

ಹೇ! ಡಬ್ಬಿ ವಾಪಾಸ್ ಕಳ್ಸ್ದೇ ಇದ್ರೆ, ಮತ್ತೆ ನಿಮ್ಗೆ ಅದೂ ಇದೂ ಅಂತ, ಕಳ್ಸ್ಬೇಕಾಗಿರೋದ್ನ ಏನ್ರಲ್ಲ್ ಹಾಕ್ ಕಳ್ಸೋಕಾಗುತ್ತೆ ? ಅದೂ ಅಲ್ದೆ, ಬೇರೆ ಯಾರಿಗಾದ್ರೂ ಹಾಕ್ ಕೊಡೋಕ್ಕೂ ಡಬ್ಬಿ ಬೇಕಲ್ಲ :)

ರಾಜೀವ said...

ಹಳೆಯ ನೆನಪುಗಳು ಕಣ್ಣ ಮುಂದೆ ಸಾಗಿದಂತಾಯಿತು. ತಗಡಿನ ದಬ್ಬಿಗಳಲ್ಲಿ ಇರುವ ನೆನಪುಗಳು ಈಗಲೂ ತುಟಿಯಂಚಲಿ ನಗು ಮೂಡಿಸುತ್ತದೆ. ತಗಡಿನ ಡಬ್ಬಿಗಳು ಹಳೆಯದಾದಂತೆ ಅದರ ಮುಚ್ಚಳ ಬಿಗಿಯಾಗುತ್ತದೆ. ಸಕ್ಕರೆ ಇಟ್ಟಿದ್ದ ಡಬ್ಬಿಯನ್ನು ಕೈಯಲ್ಲಿ ತೆಗೆಯಲು ಪ್ರಯತ್ನಿಸಿ, ಆಗದೆ, ಒಂದು ಚಮಚವನ್ನು ಮುಚ್ಚಳದ ಒಂದು ಬದಿಯಲ್ಲಿ ನೆಲೆಗೊಳಿಸಿ ಅದನ್ನು ಊರಿ ಡಬ್ಬಿಯನ್ನು ತೆಗೆಯುವಷ್ಟರಲ್ಲಿ ಒಲೆಯ ಮೇಲೆ ಇಟ್ಟಿದ್ದ ಕಾಫಿ ಕುದ್ಧೋಗಿರತ್ತೆ ;-)

ಸುಮ said...

ಉತ್ತಮ ಲೇಖನ ಸುಶ್ರುತ. ನನಗೆ ನನ್ನ ಅಮ್ಮ,ಅತ್ತೆ ಇಬ್ಬರು ನೆನಪಾದರು.ಅವರೂ ಕೂಡ ನಾನು ಊರಿಗೆ ಹೊರಡುವಾಗ ಏನು ಬೇಕು ಎಂದು ಕೇಳಿದರೆ ಉಪ್ಪಿನಕಾಯಿ,ತುಪ್ಪಗಳ ಡಬ್ಬಿ ತಗಂಬಾ ಅಂತಾನೆ ಹೇಳುವುದು.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಸುಶ್, ಚಂದ ಬರಹ :-)
ಅಮ್ಮ- ಅತ್ತೆಯರ ಕತೆ ಬಿಡು, ಡಬ್ಬಿ ಪ್ರೀತಿ ನನಗೂ ಇದೆ. ಮೊನ್ನೆ ಮಾಡಿದಾಗ ಉಳಿದ ಇಡ್ಲಿ ಸಾಂಬಾರ್ ಆಫೀಸಿಗೆ ಒಯ್ದು ಕಲೀಗ್ ಗೆ ಕೊಡುತ್ತೇನೆ ಅಂತ ಗಂಡ ಹೇಳಿದಾಗ ‘ಅದಕ್ಕೇನೂ ತೊಂದರೆ ಇಲ್ಲ - ಆದ್ರೆ ಹಾಕಿಕೊಟ್ಟ ಡಬ್ಬಿ ಮಾತ್ರ ಮರೀದೆ ತಗೊಂಡ್ ಬಾ’ ಅಂತ ನಾ ಬಾಯೆಳೆದಿದ್ದೆ ನಿನ್ನೆ ತಾನೇ...

ವಿ.ರಾ.ಹೆ. said...

Super Dabba article :)

PARAANJAPE K.N. said...

ಡಬ್ಬ ನನ್ಮಗ - ಚೆನ್ನಾಗಿದೆ ಕಣ್ರೀ ಸುಶ್

ಮಧು said...

ಈಗೆಲ್ಲಾ ಎಷ್ಟೇ ಕಲರ್ ಕಲರ್ರಿನ ಪೆಟ್ ಜಾರ್ ಗಳು ಬಂದ್ರೂ ಹಳೇ ತಗಡಿನ ಡಬ್ಬಿಗಳೇ ಎಷ್ಟೊ ಚೊಲೋ ಇದ್ದವು ಅನ್ನಿಸ್ತು. ನಾವು ಊರಿಗೆ ಹೋಗಬೇಕಾದ್ರೆ ಮುಕ್ಕಾಲು ಬ್ಯಾಗ್ ಖಾಲಿ ಡಬ್ಬನೇ ಇರ್ತು ನೋಡು. ಒಳ್ಳೇ ಲೇಖನ.

sunaath said...

ಸುಶ್ರುತ,
ನಿಮ್ಮ ಈ ಡಬ್ಬಿಯಲ್ಲಿ ಏನಿದೆ ಹೇಳಲೆ?
-----ಉಕ್ಕಿ ಹರಿಯುವ ಪ್ರೀತಿ!

ದಿನಕರ ಮೊಗೇರ said...

ಹಾಯ್,
ನನ್ನಮ್ಮ ತಿಂಡಿಯನ್ನ ಡಬ್ಬಾದಲ್ಲಿತ್ತು ಹೋಗುತಿದ್ದರು, ನಾವು ಅದನ್ನ ತೆಗೆದುಕೊಂಡು ಬರಲು ' ಫೋನ್ ಬಂತು ' ಎಂಬ ಕೋಡ್ ವರ್ಡ್ ಉಪಯೋಗಿಸುತಿದ್ದೆವು.... ಅದೆಲ್ಲಾ ನಿಮ್ಮ ಬರಹದಿಂದ ನೆನಪಾಯಿತು.... ಥ್ಯಾಂಕ್ಸ್....

Divya Mallya - ದಿವ್ಯಾ ಮಲ್ಯ said...

ತುಂಬಾ ಚಂದದ ಬರಹ... ಯಃಕಶ್ಚಿತ್ ಡಬ್ಬಿಯ ಬಗ್ಗೆ ಕೂಡ ಅದೆಷ್ಟು ರಮ್ಯವಾಗಿ ಬರೆದಿದ್ದೀರಾ! ಓದಿ ಖುಷಿಯಾಯಿತು :)

ಶಾಂತಲಾ ಭಂಡಿ said...

ಪುಟ್ಟಣ್ಣಾ...
ಡಬ್ಬಿ ಪ್ರೀತಿಯ ಅಮ್ಮನ ಬಗ್ಗೆ ಬರೆದ ಬರಹ ಸೊಗಸಾಗಿದೆ.
ನನ್ನ ಅತ್ತೆಮಾವ ಇಲ್ಲಿಂದ ಹೊರಟಾಗ ಆಮ್ಮಂಗೆ ಫೋನಾಯಿಸಿ ಮಾತಾಡೋವಾಗ ಈ ವಿಷ್ಯದ ಬಗ್ಗೆ ಬರೀಲೇಬೇಕು ಅಂತ ತುಂಬ ಅನ್ಸಿತ್ತು :-)
ಆಗ ಬರ್ಯಕ್ಕೆ ಟೈಮ್ ಸಿಕ್ಕಿರ್ಲೆ.
ಆಗ್ಲೇ ನೀನು ಇದನ್ನೇ ಬರ್ದಾಗೋತು. ಓದಿ ಖುಷಿಯಾತು.
ಆದ್ರೂ ನಾನು ಯಾವತ್ತಾದ್ರೂ ಆ ಡಬ್ಬಿ ಮತ್ತು ನನ್ನ ಅಮ್ಮನ ಬಗ್ಗೆ ಬರೀಲೇಬೇಕು ಕಣೋ :-)
ಹಾಗಂತ ನನಗೆ ಡಬ್ಬಿಮೇಲೆ ಪ್ರೀತಿ ಇಲ್ಲೆ ಅಂತಲ್ಲ. ಆ ಡಬ್ಬಿನೇ ಪ್ರೀತ್ಸೋ ಅಮ್ಮನ ಮೇಲೆ ಜಾಸ್ತಿ, ಹಂಗಾಗಿ ಸಧ್ಯದಲ್ಲೇ ಬರಿತಿ ಆ ಬಗ್ಗೆ.

ತೇಜಸ್ವಿನಿ ಹೆಗಡೆ- said...

ಸುಶ್ರುತ,

ನೀ ಹೇಳಿದ್ದು ಹದಿನಾರಾಣೆಗೂ ಸತ್ಯ. ನನ್ನಮ್ಮ/ಅತ್ತೆ ಇಬ್ರೂ ಫೋನ್‌ನಲ್ಲಿ ಹೇಳುದು ಒಂದೇಯಾ.. ನಾ ಕಳ್ಸಿದ್ದ ಡಬ್ಬಿಗಳನ್ನು ಹಿಂದೆ ಕಳ್ಸಿಕೊಡು. ನಿನ್ನ ಖಾಲಿ/ಬೇಡ್ದೇ ಹೋದ ಡಬ್ಬಿಗಳನ್ನ ಗುಜರಿಗೆ ಕೊಡಡ ಇಲ್ಲಿಗೆ ಕಳ್ಸು ಹೇಳಿ..:) ಕೇಳಿ ಕೇಳಿ ನಂಗೆ ಈಗ ಡಬ್ಬಿ ಅಂದ್ರೆ ನೆನ್ಪು ಬಪ್ಪದು ನನ್ನಮ್ಮ/ಅತ್ತೆಯರ ಪ್ರೀತಿತುಂಬಿಕೊಂಡು ಇಲ್ಲಿಗೆ ಬರುವ ಸಿಹಿ ತಿಂಡಿಗಳದ್ದು :)

ಹಾಂ.. ಡಬ್ಬಿ ಜೊತೆಗೆ ಪ್ಲಾಸ್ಟಿಕ್‌ಗಳದ್ದೂ ಕಾಟ ಇದ್ದು ನಂಗೆ.. ಬಿಗ್‌ಬಾಜಾರ್‌ನಿಂದ ಸಾಮಾನು ತಂದ ಕೊಟ್ಟೆ ಎಲ್ಲಾ ಕಟ್ಟಿಟ್ಟು ಮಂಗಳೂರು, ಶಿರಸಿಗೆ ಕಳ್ಸಿಕೊಡವು ನಾನು :D :)

ಸವಿಯಾದ ಬರಹ. ರಾಶಿ ಖುಶಿಕೊಡ್ತು.

ಚಕೋರ said...

ಆಪ್ತವಾದ ಬರಹ. ಅಮ್ಮಂದಿರ ಪಾತ್ರೆಗಳ ಮೋಹದ ಬಗ್ಗೆ ವಸುಧೇಂದ್ರ ಬರೆದಿದ್ದರು. ಆ ಬರಹ ನೆನಪಾದರೂ ಒಟ್ಟಾರೆ ಬರವಣಿಗೆ ಸೊಗಸಾಗಿದೆ.

ಸಾಗರದಾಚೆಯ ಇಂಚರ said...

ಸುಶ್ರುತ,
ತುಂಬಾ ಚೆನ್ನಾಗಿದೆ ಬರಹ, ಓದಿ ಖುಷಿಯಾಯಿತು , ಹಳೆಯ ನೆನಪುಗಳ ನೆನಪು ಪದೇ ಪದೇ ಬಂತು

Harish - ಹರೀಶ said...

ನಿಂಗೆ ಡಬ್ಬಿ ಪ್ರೀತಿಯ ಅಮ್ಮ.. ನಂಗೆ ಬಾಟಲಿ ಪ್ರೀತಿಯ ಅಮ್ಮ.. :-)

dileephs said...

ಸುಶ್ರುತ..
ಮನೆ ಬಿಟ್ಟು ದೂರ ಊರಲ್ಲಿ ಇರ ಎಲ್ಲರ ಕಥೆನೂ ಇದೆಯಾ.. ಎಂತಾ ತರವು ಬೆಂಗಳೂರಿಂದ ಹೇಳಿ ಕೇಳಿರೆ... ಡಬ್ಬಿ ವಾಪಸ್ ತಗ ಬಾ..ಮತ್ತೆಂತದೂ ಬ್ಯಾಡಾ... ಹೇಳೇ ಹೇಳ್ತು.. ನನ್ನ ಅಮ್ಮ... ಡಬ್ಬಿ ಮೇಲೆ ಅದು ಯಾವ ರೀತಿ ಪ್ರೀತಿ, ವ್ಯಾಮೋಹ ಹೇಳಿ ಗೊತ್ತಾಗ್ತಿಲ್ಲೆ....

"ನಾವು ಹೊಸ ಮನೆಗೆ ಬಂದಮೇಲೆ, ಅಲ್ಲಿಯ ಶೆಲ್ಫಿನಲ್ಲಿ ಈ ಚಾಕ್ಲೇಟ್ ಡಬ್ಬಿಗಳು ತುಂಬಾ ಹಳತಿನಂತೆ ಕಾಣತೊಡಗಿದವು. ಇವು ಒಂದೊಂದೂ ಬೇರೆ ಬೇರೆ ಸೈಜು, ಬೇರೆ ಬೇರೆ ಆಕಾರದಲ್ಲಿದ್ದವು. ಆಗಲೇ ಪಾಲಿಶ್ ಕಳೆದುಕೊಂಡು, ಒಂಥರಾ ಬೆಳ್ಳಬೆಳ್ಳಗಾಗಿ ಮುದುಕಿಯರಂತೆ ಕಾಣುತ್ತಿದ್ದವು. ಮತ್ತೆ ಊರಲ್ಲಿ ಈಗ ಎಲ್ಲರ ಮನೆಗೂ ಬಂದುಬಿಟ್ಟಿದ್ದ ಟಪ್ಪರ್‌ವೇರಿನ ಆಕರ್ಷಕ ಪೆಟ್-ಜಾರ್‌ಗಳು ಅಮ್ಮನ ಕಣ್ಣನ್ನು ಕುಕ್ಕುತ್ತಿದ್ದವು. ಫೇಶಿಯಲ್ ಮಾಡಿಸಿಕೊಂಡ ಸ್ಲೀವ್‌ಲೆಸ್ ನಟಿಯರಂತೆ ಥಳಥಳಿಸುತ್ತ, ಒಂದೇ ಬಣ್ಣದ ಮುಚ್ಚಳಗಳನ್ನು ಹೊಂದಿ ಚಂದಗೆ ನಳನಳಿಸುತ್ತಿದ್ದ ಇವನ್ನು ನಮ್ಮ ಮನೆಯ ಶೆಲ್ಫಿನ ಮೇಲೆ ಕಲ್ಪಿಸಿಕೊಂಡು ಅಮ್ಮ ಹಿರಿಹಿಗ್ಗಿದಳು"

ಇದನ್ನ ಓದಿ ನಗು ತಡೆಯಲಾಗಲಿಲ್ಲ....
ಸೂಪರ್ ಲೇಖನ.. Cheers...!!

umesh desai said...

ಸುಶ್ರುತ ನಾ ಆಗಾಗ ಹೇಳ್ತೇನಿ ನಿಮ್ಮ ಕೈಯಾಗ ಜಾದೂ ಅದ.ನೋಡ್ರಿ ಡಬ್ಬಿ ಅದರ ಜೊತೆಗೆ ಹೆಣೆದ ನೆನಪು ಎಷ್ಟು ಸುಂದರಅವ. ನಾ ಸಣ್ಣಾವಿದ್ದಾಗ ನಮ್ಮ ಮನ್ಯಾಗ ಹಿತ್ತಾಳಿ ಡಬ್ಬಿ ಇದ್ವು ಈಗ ಕಿಚನನ್ಯಾಗ( ಈ ಬೆಂಗಳೂರ್ನಾಗ ಅಡಿಗಿಮನಿ ಎಲ್ಲಿ ಅವ) ಗೋದ್ರೇಜ್ ಅವರದು "ಚಾಯಿಹೌಸ್" ಡಬ್ಬಿ ಕೂತಾವ.

ಇನ್ನೊಮ್ಮೆ ಹೇಳ್ತೇನಿ ಅದ್ಭುತ ಲೇಖನ..

ಸುಶ್ರುತ ದೊಡ್ಡೇರಿ said...

ವಿಶ್ವಾಸ್,
;) ಥ್ಯಾಂಕ್ಸ್!

ಅನಾ,
ನಿಜ, ಅದೆಲ್ಲ ಅಲ್ಲ ಅನ್ನಲ್ಲಾ.. ಆದ್ರೂ... .. ;-)

ರಾಜೀವ,
ಚಂದ ಪ್ರತಿಕ್ರಿಯೆ. ನೀವು ಹೇಳಿದ್ದು ಸತ್ಯಸ್ಯ ಸತ್ಯ.

ಸುಮ, ಪೂರ್ಣಿಮಕ್ಕ, ವಿರಾಹೆ, ಪರಾಂಜಪೆ,
ಹ್ಮ್.. ಥ್ಯಾಂಕ್ಯೂ.. :-)

ಮಧು,
ಅದೂ ಹೌದು.. ಅವೇ ಒಂಥರಾ ಚನಾಗಿತ್ತು.

ಸುಶ್ರುತ ದೊಡ್ಡೇರಿ said...

ಸುನಾಥ ಕಾಕ,
ಸರಿಯಾಗಿ ಗುರುತಿಸಿದ್ದೀರಿ. ಸಲಾಮು!

ದಿನಕರ,
ಹೆಹೆ.. ’ಫೋನ್ ಬಂತು’.. ಮಜಾ ಇದೆ! :D

ದಿವ್ಯಾ,
ಥ್ಯಾಂಕ್ಸ್!

ಪುಟ್ಟಕ್ಕ,
ಬರಿ ಬರಿ.. ಎಷ್ಟು ಬರೆದ್ರೂ ಮುಗಿಯದಿಲ್ಲೆ ಡಬ್ಬಿ ಬಗ್ಗೆ, ಅಮ್ಮಂದಿರ ಬಗ್ಗೆ, ಪ್ರೀತಿ ಬಗ್ಗೆ..

ತೇಜಕ್ಕ,
ಎಷ್ಟ್ ರೂಪಾಯಿಗೆ ಹದಿನಾರಾಣೆ? :P

ಹಾಂ, ಪ್ಲಾಸ್ಟಿಕ್ ಕವರ್ಸ್ ಕಾಟ ನಂಗೂ ಇದ್ದು ಮಾರಾಯ್ತಿ..!

ಸುಶ್ರುತ ದೊಡ್ಡೇರಿ said...

ಚಕೋರ,
ಥ್ಯಾಂಕ್ಯೂ. ನಂಗೂ ಇದನ್ನ ಬ್ಲಾಗಿಗೆ ಪೋಸ್ಟ್ ಮಾಡ್ಬೇಕಾದ್ರೆ ವಸುಧೇಂದ್ರರ ’ಸ್ಟೇನ್‌ಲೆಸ್ ಪಾತ್ರೆಗಳು’ ಪ್ರಬಂಧವೇ ನೆನಪಾಗ್ತಿದ್ದದ್ದು.

ಇಂಚರ,
ಧನ್ಯವಾದ ಗುರೂ..

ಹರೀಶ,
’ಬಾಟಲಿ ಪ್ರೀತಿಯ ಅಮ್ಮ’?! ಇಶೀ, ಅದೆಂತಾ ಅದು ಅಭಾಸ? :P ಸ್ವಲ್ಪ ಎಕ್ಸ್‌ಪ್ಲೇನ್ ಮಾಡು.

ದಿಲೀಪ,
ನೀ ಹೇಳಿದ್ದು ನಿಜ. ಎಲ್ಲರ ಕಥೆಯೂ ಇದೇ. ಥ್ಯಾಂಕ್ಸ್, ಪ್ರತಿಕ್ರಿಯೆಗೆ.

ಉಮೇಶ್,
ಏನೇನೋ ಹೇಳ್ಬೇಡ್ರೀ ದೇಸಾಯೀಜೀ.. ಜಾದೂ ಗೀದೂ ಏನೂ ಇಲ್ಲ.. ಮಾಮೂಲಿ ಕೈಯಿ ನಂದು. :)

Keshav Kulkarni said...

ವಸುಧೇಂದ್ರರ ಸ್ಟೇನ್‍ಲೆಸ್ ಸ್ಟೀಲ್ ಡಬ್ಬಗಳ ಮಾದರಿಯಲ್ಲೇ ಇದ್ದರೂ ತುಂಬ ಚೆನ್ನಾಗಿದೆ ಪ್ರಬಂಧ.
- ಕೇಶವ

Anonymous said...

ಹೌದು ಮಾರಾಯ. ಬೆಲ್ಲ, ಉಪ್ಪಿನಕಾಯಿ ಡಬ್ಬಿಯದೇ ಚಿಂತೆ ಅಮ್ಮನಿಗೆ! ಪುಳಿಯೋಗರೆ ಹಾಳಾಗಿ ಡಬ್ಬಿ ತೊಳೆಯಲಾಗದ ಸ್ಥಿತಿ ತಲುಪಿದ್ದು. ಈ ಸಲ ದೀಪಾವಳಿಗೆ ಆ ಡಬ್ಬಿ ಮನೆ ತಲುಪಲೇ ಬೇಕು! ಆ ದೇವರೇ ನನ್ನ ಕಾಪಾಡಬೇಕು! ಬೆಲ್ಲ ತಿನ್ನಕ್ಕೆ ಬಹಳ ರುಚಿ, ಡಬ್ಬಿ ತೊಳೆಯಕ್ಕೆ...?!!!
ಕೋಡ್ಸರ

Anonymous said...

ಭಾರಿ ಛಲೋ ಬರ್ದಿರಿ, ಡಬ್ಬಿ ತರೂಮುಂದ ಭಾರಿ ಖುಷಿ ಇರ್ತದ, ಆದ್ರ ಅಮ್ಯಾಲೆ ಖಾಲಿ ಡಬ್ಬಾ ಹೋತ್ಕೊಂಡು ಊರಿಗೆ ಹೋಗಬೇಕಾದ್ರ ಬಲು ಕಷ್ಟ.

ವಸುಧೆಂದ್ರರ ಕಥಿ ನೆನಪಾಯ್ತ ನೋಡ್ರಿ.

-ಶೆಟ್ಟರು

ಗೌತಮ್ ಹೆಗಡೆ said...

:):):)

Anonymous said...

Sushruta,

tumbaa ishTa aaytu. Nanna 23 varshada maganige maneyinda enaadru kaLuhistaa irteeni. My one request will always be "bartaa dabbi mareede taa" anta. Thanks for a very lighthearted article.

Meena Jois

GURU said...

Vasudhendrara stainless steel patregala nenapaatu...Andahaage Vinaayaka rayara angaDi eega yelliddu?

ಸುಶ್ರುತ ದೊಡ್ಡೇರಿ said...

ಕೇಶವ್,
ಯು ಆರ್ ರೈಟ್ ಸರ್.. ಥ್ಯಾಂಕ್ಯೂ..

ಕೋಡ್ಸರ,
ವಿಷ್ಯ ಕರೆಕ್ಟು!

ಶೆಟ್ರು,
ಥ್ಯಾಂಕ್ಸರೀ.. :)

ಗೌತಮ್,
:)

ಮೀನಾ,
:-) ಧನ್ಯವಾದ..

ಗುರು,
ವಿನಾಯಕ ರಾಯರ ಅಂಗಡಿ ಅಲ್ಲೇ ಇದ್ದು ಮಾರ್ಕೆಟ್ ರೋಡಲ್ಲಿ. ಆದ್ರೆ ವಿನಾಯಕ ರಾಯರು ಈಗ ಬೆಂಗಳೂರಲ್ಲಿ ಇದ್ದ ಮಕ್ಕಳ ಜೊತೆ. ಅಂಗಡೀನ ಅವರ ಭಾವ ನಡೆಸ್ತಾ ಇದ್ದ. ;-)

AntharangadaMaathugalu said...

ಸುಶ್ರೂತ್ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ. ೩ ದಿನ ಮೊದಲೇ ಓದಿದರೂ ವಿದ್ಯುತ್ ಕೈ ಕೊಟ್ಟಿದ್ದರಿಂದ ತಕ್ಷಣ ಪ್ರತಿಕ್ರಿಯಿಸಲಾಗಲಿಲ್ಲ. ಹೌದು ರೀ... ಎಲ್ಲರ ಮನೆಯಲ್ಲೂ ಇದೇ ಹಾಡು ದಿನ ಬೆಳಿಗೆದ್ದರೆ. ದಿನಾ ಸಾಯಂಕಾಲ ನನ್ನವರು ತೆಗೆದುಕೊಂಡು ಹೋದ ಡಬ್ಬಿಗಳೆಲ್ಲಾ ವಾಪಸ್ಸು ತಂದಿದ್ದಾರೋ ಇಲ್ಲವೋ ಎಂದು ನೋಡುವುದು ಒಂದು ಅಭ್ಯಾಸ ಆಗಿಬಿಟ್ಟಿದೆ ನನಗೆ... ಮತ್ತೆ ಏನಾದರು ಹಾಕಿ ಕೊಡಲು ಡಬ್ಬಿ ಬೇಕೇ ಬೇಕಲ್ಲಾ... ಲೇಖನ ನಿಜವಾಗಿ ತುಂಬಾ ಚೆನ್ನಾಗಿದೆ. ಎಲ್ಲದಿಕ್ಕಿಂತ ಡಬ್ಬಿಯ ಹಿಂದಿರುವ ಅಮ್ಮನ ಪ್ರೀತಿ ಕಣ್ಣಂಚಲಿ ಹನಿ ನೀರು ಬರಿಸುತ್ತೆ. ಅವಳು ಡಬ್ಬಿಯ ಕೇಳುವುದು ಮತ್ತೆ ಮತ್ತೆ ತುಂಬಿಸಿಕೊಡಲೇ ಅಲ್ಲವಾ ?

ಶ್ಯಾಮಲ

ಜಗದೀಶಶರ್ಮಾ said...

ನಾನ್ ತಡವಾಗಿ ಓದಿದೆ. ಎಲ್ಲರ ಅನುಭವಕ್ಕೆ ಮಾತಾಗಿದ್ದೆ. ಬೆಲ್ಲದ್ ಡಬ್ಬಿಗೆ ಸಕ್ರೆ ಹಾಕ್ದಾಂಗ್ ಆಯ್ದು.

ಮನಸ್ವಿ said...

ಬಸ್ ನವ ಕಡ್ಮೆ ರೇಟ್ ಗೆ ಡಬ್ಬದ ಲಗೇಜ್ ಚಾರ್ಜ್ ಹಾಕ್ತ್ನ? ಪ್ರತಿ ಸಲ ಹೊಗ್ತ ಬರ್ತಾ ಒಂದಾರು ಡಬ್ಬ ತಂದೇ ತತ್ತೆ ಅಂತ ಆತಲ :)
ಅಮ್ಮನ ಡಬ್ಬಿ ಪ್ರೀತಿಯ ಬಗ್ಗೆ ಬರ್ತಿ ಚನಾಗಿ ಬರದ್ದೆ.

ಸುಪ್ತದೀಪ್ತಿ said...

ಸುಶ್, ನಿನ್ನಮ್ಮ ಹೀಗೇ ನಿನಗೆ ‘ಕಾಟ’ ಕೊಡುತ್ತಿರಲಿ ಅಂತ ನನ್ನ ಹಾರೈಕೆ. ಇದನ್ನೋದಿ ನಿನ್ನಮ್ಮನ ಕಾಲು ಮುಟ್ಟೋ ಆಸೆಯಾಗಿದೆ.

Anonymous said...

highly enjoyable -from the beginning to the end
nice read after a long long time
:-)
malathi S
(comment cutted and pastedu from Avadhi)
:-)
smiley is fresh
ms

ಕೆನೆ Coffee said...

Super!


ನಮ್ಮನೇಲೂ ಇದೇ ಕಥೆನೇಯಾ ! :) :)

- ವೈಶಾಲಿ

chukkichittaara said...

nimma dabbakathe nammellara anubhava koodaa....!

sughosh s. nigale said...

ವೆರಿ ಟಚಿಂಗ್...ಟಚಿಂಗ್...ಮತ್ತು ಟಚಿಂಗ್...

Santosh Haveri said...

Super adan e dabba nanmaga

Rashmi said...

soooooooper.....ammange dabbi,plastic cover inthadra mele raashi preethi..

Naveen said...

Rashi cholo iddu article...:-)

Greeshma said...

Excellent!
E sala barakkaare onderad tupperware dabbi tagand baa amma heLidda. id odidmelantu maritnalle :)

shashank said...

dabbi tagandu ba... e line nange rashi ista atu..