Thursday, October 29, 2009

ಉಪ್ಪು-ಖಾರ

ಹಸಿರು ಸಮುದ್ರದಂತೆ ಅಂಗಳದ ತುಂಬೆಲ್ಲ
ಹಬ್ಬಿಕೊಂಡಿರುವ ಬಳ್ಳಿಯ ದೊಡ್ಡ ಎಲೆಗಳ
ಮರೆಯಲ್ಲೆಲ್ಲೋ ಅಡಗಿದೆ ಒಂದು
ಮಿಡಿ ಸೌತೆಕಾಯಿ ನಮಗಾಗಿಯೇ.
ಕಿತ್ತು ತರಬೇಕು, ಗೆಳೆಯಾ
ಜತೆಗೆ ಸೂಜಿಮೆಣಸು ಬೇಕು
ಮತ್ತಿಷ್ಟೇ ಉಪ್ಪು, ಇದ್ದರೆ
ವಾಟೆಪುಡಿ; ಇಲ್ಲವೇ ನಿಂಬೆಹುಳಿ

ಕೂರಬೇಕು ಸುತ್ತ, ಮಧ್ಯದಲ್ಲಿ ತಟ್ಟೆ
ಮೆಣಸಿನಕಾಯಿ ನುರಿದ ಉರಿಯ
ಭುಗುಭುಗು ಬೆರಳನ್ನು ಚಾಚಿ ಎತ್ತಿಕೊಳ್ಳಬೇಕು
ಹೋಳುಗಳನ್ನು ಒಂದೊಂದೇ
ಕರುಂಕುರುಂ ಸದ್ದಿನ ಬ್ರಹ್ಮಾನಂದದಲ್ಲಿ
ತೇಲಿ ಮುಳುಗಬೇಕು, ಗೆಳೆಯಾ
ಜೋರು ನಗೆಯನಾಡಬೇಕು

ಒಂಟಿಜೀವಿಗಳೆಲ್ಲ ಸೌತೆಕಾಯಿಯನ್ನು ಬರಿದೇ ತಿನ್ನುವರು
ದುಃಖಿಗಳು ಸಾರಿಗೆ ಕತ್ತರಿಸಿ ಹಾಕಿ ಬೇಯಿಸಿ ಬಿಡುವರು
ಉಪ್ಪು-ಖಾರ ಸವಿಯಲಿಕ್ಕೆ ಗೆಳೆಯರಿರಬೇಕು
ಖಾರಕ್ಕೆ ಬಾಯಿ ಸೆಳೆವಾಗ ನಲಿವು ಇರಬೇಕು
ನಕ್ಕು ನಕ್ಕು ನೆತ್ತಿಗೆ ಸಿಕ್ಕಾಗ ಖಾರ,
ಬೇಕು ಬೆನ್ನಿಗೆ ಗುದ್ದಲಿಕ್ಕೆ ನಿನ್ನದೊಂದು ಕೈ
ಕಣ್ಣಂಚಿಂದ ಹನಿಯುದುರಿದ್ದು
ಖಾರಕ್ಕೋ ಆನಂದಕ್ಕೋ ತಿಳಿಯದೆ ಹೋಗಬೇಕು

ಎಲ್ಲಿದ್ದೆ, ಏನಾಗಿದ್ದೆ, ಹೇಗೆ ಬಂದೆ, ಮುಂದೆ ಏನು-
ಅಂತೆಲ್ಲ ಕೇಳುವುದೇ ಇಲ್ಲ ನಾನು...
ಇರು ಇಲ್ಲೇ, ಉಳಿದಿದೆ ಮಸಾಲೆ ಇನ್ನೂ
ಬಳ್ಳಿಯಲ್ಲಿ ಇನ್ನೂ ಒಂದು ಸೌತೆಮಿಡಿ ಇದೆಯಂತೆ..
ಅದರ ತಿರುಳಿನಲ್ಲಿ ಅಸಂಖ್ಯ ಮುತ್ತಿನ ಹರಳುಗಳು
ಒತ್ತೊತ್ತಾಗಿ ಕೂತಿವೆಯಂತೆ ನೋಡಲು-
ನನ್ನ - ನಿನ್ನ.

ಇರು ಇಲ್ಲೇ, ಕೊಯ್ದು ತರುತ್ತೇನೆ ಕ್ಷಣದಲ್ಲಿ.

[ಊರಿಂದ ಕಾಣೆಯಾಗಿದ್ದ ಗೆಳೆಯ ಗುಂಡ, ಮೂರು ವರ್ಷಗಳ ನಂತರ ಮರಳಿ ಬಂದಿದ್ದಾನಂತೆ ಎಂಬ ಸುದ್ದಿ ಕೇಳಿ..]

38 comments:

ತೇಜಸ್ವಿನಿ ಹೆಗಡೆ said...

ಸುಶ್ರುತ,

ಓದುತ್ತಿದ್ದಂತೆ ಬಾಯಲ್ಲಿ ನೀರೂರಿಬಂತು. ಮಿಡಿ ಸೌತೆಕಾಯಿ ಕವನದ ಸಾರಾಂಶ ಮನ-ಮಿಡಿಯುವಂತಿದೆ.

"ಕಣ್ಣಂಚಿಂದ ಹನಿಯುದುರಿದ್ದು
ಖಾರಕ್ಕೋ ಆನಂದಕ್ಕೋ ತಿಳಿಯದೆ ಹೋಗಬೇಕು"

ಈ ಸಾಲುಗಳಂತೂ ತುಂಬಾ ಇಷ್ಟವಾದವು.

ಉಪ್ಪು, ಖಾರ, ಮಿಡಿ ಸೌತೆಕಾಯಿ
ಇನ್ನೂ ಬಟಲಲ್ಲಿದ್ದರೆ ಹೇಳು ತಮ್ಮಾ,
ಜೊತೆನೀಡಲು ಬರುತಿವಿ
ನಾನೂ ನನ್ನ ಪುಟ್ಟ ಕಂದಮ್ಮ.. :)

Parisarapremi said...

maavina kaayannu kodree...

Shankar Prasad ಶಂಕರ ಪ್ರಸಾದ said...

ಚೆನ್ನಾಗಿದೆ ಗುರುವೇ..
ಮಿಡಿ ಸುತೆಕಾಯಿ ತಿಂದಹಾಗೆ ಆಯ್ತು. ಅರಿಚಯ ಇರೋ ಮಲೆನಾಡಿಗರು ಒಮ್ಮೆ ಇದನ್ನು ಮನೆಗೆ ತಂದು ಕೊಟ್ಟಿದ್ರು.
ಅವತ್ತೇ ಮೊದಲು ತಿಂದದ್ದು. ನಂತರ ಇನ್ನೊಮ್ಮೆ ತಿನ್ನುವ ಚಾನ್ಸ್ ಸಿಕ್ಕಿಲ್ಲ. ಇದ್ರೆ ಕೊಡೊ ಒಮ್ಮೆ.

ಕಟ್ಟೆ ಶಂಕ್ರ

ಸುಪ್ತವರ್ಣ said...

ಛೆ ! ಈಗಲೇ ತಿನ್ನಬೇಕೆನ್ನಿಸುತ್ತಿದೆ. ಇವತ್ತಿನ ತನಕ ಸೌತೇಕಾಯಿ ತಿನ್ನುತ್ತಿರುವಾಗ ಅದು ಖಾರ ಅನ್ನಿಸಿಲ್ಲ. ತಿಂದಾದ ಮೇಲೆ ಮಾತ್ರ ರಾಮ ರಾಮಾ! ಸೌತೆಕಾಯಿಯನ್ನು ಉಪ್ಪುಖಾರದ ಜೊತೆಗೆ ತಿನ್ನುವುದು 'ಹುಲಿಯ ಸವಾರಿ' ಎಂದು ನನಗೆ ತುಂಬಾ ಸಲ ಅನಿಸಿದೆ! ಒಳ್ಳೆಯ ಕವಿತೆ!

ರವಿಪ್ರಕಾಶ್ Raviprakash said...

ಗೆಳೆಯ ತಿರುಗಿ ಬಂದ ಸಂತೋಷವನ್ನು ಸೌತೆಕಾಯಿ ಉಪ್ಪು ಕಾರದ ಮೂಲಕ ಹಂಚಿಕೊಂಡ ರೀತಿ ಸೂಪರ್!
"ಒಂಟಿಜೀವಿಗಳೆಲ್ಲ ಸೌತೆಕಾಯಿಯನ್ನು ಬರಿದೇ ತಿನ್ನುವರು,
ಉಪ್ಪು-ಖಾರ ಸವಿಯಲಿಕ್ಕೆ ಗೆಳೆಯರಿರಬೇಕು" ಅಕ್ಷರಶಃ ಸತ್ಯ!

ದಿವ್ಯಾ ಮಲ್ಯ ಕಾಮತ್ said...

ವಾಹ್ ಸುಶ್ರುತ...
ತುಂಬಾ ಇಷ್ಟವಾಯ್ತು..
ಈ ಸಾಲುಗಳಂತೂ ಮನದಾಳಕ್ಕೆ ಇಳಿದು ಕೂತು ಬಿಡುತ್ತವೆ...
--
ಇರು ಇಲ್ಲೇ, ಉಳಿದಿದೆ ಮಸಾಲೆ ಇನ್ನೂ
ಬಳ್ಳಿಯಲ್ಲಿ ಇನ್ನೂ ಒಂದು ಸೌತೆಮಿಡಿ ಇದೆಯಂತೆ..
ಅದರ ತಿರುಳಿನಲ್ಲಿ ಅಸಂಖ್ಯ ಮುತ್ತಿನ ಹರಳುಗಳು
ಒತ್ತೊತ್ತಾಗಿ ಕೂತಿವೆಯಂತೆ ನೋಡಲು-
ನನ್ನ - ನಿನ್ನ.

ಇರು ಇಲ್ಲೇ, ಕೊಯ್ದು ತರುತ್ತೇನೆ ಕ್ಷಣದಲ್ಲಿ.
--

Anonymous said...

ಸವತೆಕಾಯಿ ತಿನ್ನುತ್ತಾ ಕುಳಿತವಳಿಗೆ ಈ "ಉಪ್ಪು ಖಾರ" ದ ಜೊತೆ ರುಚಿ ಹೆಚ್ಚಿಸಿತು...

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಆಹಾಹಾಹಾ.. ಬಾಯಲ್ಲೆಲ್ಲ ನೀರು.. ಜೊತೆಗೆ ಒಂದಷ್ಟು ಹಳೆಯ ನೆನಪು... ಈ ಸಂಜೆಗೆ ಜೇಜಾನಾಯ್ತು!

sunaath said...

ಗೆಳೆತನಕ್ಕೆ ಇದಕ್ಕಿಂತ ಹೆಚ್ಚಿನ ಮಾತು ಬೇಕೆ?
Beautiful poem.

Ultrafast laser said...

Oh ya!?, but beware of Gunda! -Sagar

Annapoorna Daithota said...

ಓದಿ ಬಾಯಿ ಚಪ್ಪರಿಸೋ ಹಾಗಾಯ್ತು,
ನಿಮ್ಮಿಬ್ಬರ ಮಧ್ಯೆ ಇರುವ ಸ್ನೇಹದ ಆಳ ಹೃದಯ ತಟ್ಟಿತು :-)

Raghu said...

odida nanthara bayannu omme chappariside..
ನಿಮ್ಮವ,
ರಾಘು.

ಸುಮ said...

ಸುಶ್ರುತ ಕವನ ಮಿಡಿಸೌತೆ,ಉಪ್ಪುಕಾರದ ಸವಿಯನ್ನೆ ನೀಡಿತು.

ಸುಧನ್ವಾ ದೇರಾಜೆ. said...

ನಿನ್ನ ಕಣ್ಣಿಗೆ ಅದು ಹಸಿರು ಸಮುದ್ರವಾಗಿ ಕಂಡಿತಲ್ಲ ಮಾರಾಯ ! ಆಹಾ ಚೆಂದದ ಪದ್ಯ.

Anonymous said...

aaha!

ಚಿತ್ರಾ said...

ಸುಶ್ರುತ
ಊರಿಗೆ ಹೋದಾಗ ಸೌತೆ ಮಿಡಿ ತಿನ್ನಲೇ ಆಗಲ್ಲೆ ಎಂದು ಬೇಜಾರು ಮಾಡ್ಕ್ಯಂಡವ ಇಷ್ಟು ಚೆನಾಗಿ , ಬಾಯಲ್ಲಿ ನೀರು ಬರ ತರ ಬರದ್ದೆ !
ಸಖತ್ತಾಗಿದ್ದು . ಸೌತೆ ಕಾಯಿಯೂ , ನಿಮ್ಮ ಸ್ನೇಹವೂ ! ನೀನು -ಗುಂಡ ಇಬ್ಬರೂ ಇನ್ನಷ್ಟು ಸೌತೆ ಮಿಡಿ ಹುಡುಕುತ್ತಾ, ಉಪ್ಪು- ಕಾರ ಹಚ್ಚಿಕೊಂಡು ತಿಂತಾ ಇರಿ ಯಾವಾಗಲೂ ಹೇಳಿ ನನ್ನ ಹಾರೈಕೆ !
ರಾಶಿ ಚಂದದ ಕವನ ! ( ಬಾಯಲ್ಲಿ ನೀರೂರಿಸುವ ಕವನ ಎನ್ನಲೇ? )

Anonymous said...

what a nice way to remember a friend.
very very nice.
ಸೂಜಿ ಮೆಣಸಿನ ಕಾಯಿ- ಬಾಯಲ್ಲಿ ನೀರು ಬಂತು.
:-)
malathi S

Anonymous said...

NICE..

ಕನಸು said...

ಕವಿತೆ ಮೊಹಕವಾಗಿದೆ

umesh desai said...

ಸುಶ್ರುತ ಕವಿತಾ ಸೂಪರ್ ಅಂದಹಾಗೆ ನಾವು ಅದನ್ನು ಛಬ್ಬಿ ಸೌತೆಕಾಯಿ ಅಂತ ಕರೀತೀವಿ ಈ ಬೆಂಗಳೂರಲ್ಲಿ ಅದು
ಸಿಗೋದೆ ಇಲ್ಲ ನೀ ಅಂದಂಗ ಅದಕ್ಕ ಖಾರಪುಡಿ ಉಪ್ಪು ಇರಬೇಕು ಜೋಡಿ. ಮತ್ತೊಮ್ಮೆ ಉತ್ತಮ ಕವಿತೆಗೆ ಅಭಿನಂದನೆಗಳು!

chethan said...

chennagide. ishtavaithu.

ಯಜ್ಞೇಶ್ (yajnesh) said...

ಸುಶ್ರುತ, ತುಂಬಾ ಚೆನ್ನಾಗಿ ಬರೆದಿದ್ದೀಯ. ಓದುವಾಗ ನಾವೇ ಪಾತ್ರದಾರಿಗಳಾಗಿ ಬಿಡುತ್ತೇವೆ. ಅಷ್ಟು ಮನಸ್ಸನ್ನು ಅದರಲ್ಲಿ ತಲ್ಲೀನವಾಗುವ ಹಾಗೆ ಬರೆದಿದ್ದೀಯ. ಇನ್ನೂ ಹತ್ತು ಹಲವು ನಿನ್ನಿಂದ ಬರಲಿ

Anonymous said...

nice one...

Sharath Akirekadu said...

ಬಳ್ಳಿಯಲ್ಲಿ ಇನ್ನೂ ಒಂದು ಸೌತೆಮಿಡಿ ಇದೆಯಂತೆ..
ಅದರ ತಿರುಳಿನಲ್ಲಿ ಅಸಂಖ್ಯ ಮುತ್ತಿನ ಹರಳುಗಳು!!
nice comparison..

olle kaavana

ಸಿಂಧು sindhu said...

ಸು,

ಚೆನಾಗಿದ್ದು.
ತುಂಬ ದಿನಗಳಿಂದ ಸರಿಯಾಗಿ ಓದಿ ಪ್ರತಿಕ್ರಿಯಿಸಲೇ ಆಗಿರಲ್ಲೆ. ಎಲ್ಲ ಬ್ಲಾಗುಗಳನ್ನೂ ಆತುರಾತುರವಾಗಿ ಓದಿ ಹೋಗ್ ಬಿಡ್ತಿದ್ದಿ.
ಈಗ ಸ್ವಲ್ಪ ಅಡ್ದಿಲ್ಲೆ. ಅದಕ್ಕೆ ಸರಿಯಾಗಿ ಒಳ್ಳೆ ಉಪ್ಪುಖಾರದ ಕವಿತೆ ಸೂಜಿಮೆಣಸಿನ ಹಂಗೇ ನುರದ್ದೆ ನೀನು. :)

ಗೆಳೆತನದ ಸುವಿಶಾಲ ಆಲದಡಿಯ ಆಹ್ಲಾದದ ಬರಹ.
ಪ್ರೀತಿಯಿಂದ
ಸಿಂಧು

Sushrutha Dodderi said...

@ ತೇಜಕ್ಸ್,
ಥ್ಯಾಂಕ್ಸ್. ಅದಿತಿಗೂ ಅದಿತಿ ಅಮ್ಮಂಗೂ ಸ್ವಾಗತ. :-)

ಅರುಣ್,
ಕೊಯ್ದ್ ಕೊಡಿ ನೀವು.

ಶಂಕ್ರಣ್ಣ,
ನೆಕ್ಸ್ಟ್ ಟೈಮ್ ತಂದಾಗ ಕೊಡ್ತೀನಿ ಬಿಡು. :)

ಸುಪ್ತವರ್ಣ,
Huh, 'ಹುಲಿಯ ಸವಾರಿ' ! :O

ರವಿಪ್ರಕಾಶ್, ದಿವ್ಯಾ,
:-) ಥ್ಯಾಂಕ್ಯೂ..

ನಿ.ಹು.,
ನಂಗ್ ಕೊಡ್ದೇ ತಿಂದ್ರೆ ಹೊಟ್ಟೆನೋವು ಬರ್ತು. ;)

ಪೂರ್ಣಿಮಕ್ಕ,
ಹ್ಮ್.. ಬೇಜಾನ್! :-) :-)

Sushrutha Dodderi said...

ಸುನಾಥ್,
ಯೆಸ್ ಕಾಕಾ!

Sagar,
U r right, in some way. :-)

ಅನಾ,
ಥ್ಯಾಂಕ್ಸ್ ಅಕ್ಕಾ...

ರಾಘು, ಸುಮ,
ಧನ್ಯವಾದಗಳೂ... :-)

ಸುಧನ್ವ,
ಹೆಹೆ.. ಒಂದೊಂದ್ ಸಲ ಒಂದೊಂದ್ ಥರ ಕಾಣತ್ತೆ ಮಾರಾಯಾ.. :D

ವೈಶಾಲಿ,
ಆಹಾ! :-)

ಚಿತ್ರಕ್ಕ,
ಹುಂ ಕಣಕ್ಕಾ.. ಈ ವರ್ಷ ತಿನ್ನಕ್ಕೇ ಆಗಲ್ಲೆ ಸೌತೆಕಾಯಿ.. :(
ಥ್ಯಾಂಕ್ಸ್, ಹಾರೈಕೆಗೆ. :-)

ಮಾಲತಿ,
:-) ಥ್ಯಾಂಕ್ಯೂ...

ಕಲ್ಲರೆ, ಕನಸು,
ಧನ್ಯೋಸ್ಮಿ. :-)

ದೇಸಾಯೀಜಿ,
ಒಮ್ಮೆ ತಂದ್ ಕೊಡ್ರೀ ನಂಗೂ ಛಬ್ಬಿ ಸೌತೆಕಾಯಿ..

Chetan,
Thanks boss..

Sushrutha Dodderi said...

ಯಜ್ಞೇಶಣ್ಣ,
ಧನ್ಯವಾದ ಬಾಸ್..

ಶ್ರೀ,
ಥ್ಯಾಂಕ್ಯೂ.. (ಬ್ಲಾಗ್ ಲೋಕಕ್ಕೆ ಬಂದ ಮತ್ತೊಬ್ಬ ಶ್ರೀ ನೀವು.. ಇನ್ನು ಕನ್‌ಫ್ಯೂಶನ್ನು ಮತ್ತೂ ಜಾಸ್ತಿ ಆಗುತ್ತೆ) ;)

ಶರತ್,
;) ಧನ್ಯವಾದ ಶರತ್..

ಚಿಂದಕ್ಕ,
ಅರ್ಥಾಗ್ತು ಬಿಡು.. ಪಾಪಚ್ಚಿ ಫೋಟೋ ನೋಡಿದಿ ನಿನ್ ಬ್ಲಾಗಲ್ಲಿ.. ಓಲೆ ಹಾಕ್ಯಂಡ್ ಚಂದ್ ಕಾಣ್ತಿದ್ದು.. ಇನ್ನು ಗೆಜ್ಜೆ ಸದ್ದಿನ ಜತೆ ಓಲೆ ಸದ್ದಿನ ಮಿಶ್ರ-ಮಾಧುರ್ಯ.. ಚಿಯರ್ಸ್..! :-)

ಮನಸಿನ ಮಾತುಗಳು said...

ಸುಶ್ರುತ,
ತುಂಬ ಸಕ್ಕತ್ತಾಗಿದೆ ನಿಮ್ಮ ಈ ಕವನ..
ಓದುತ್ತಿದ್ದಂತೆ ನಾವು ಚಿಕ್ಕವರಿದ್ದಾಗ ಗದ್ದೆಗಳಿಗೆ ಹೋಗಿ ಮಗೆಕಾಯಿ ,ಸವತೆಕಾಯಿ ಕದ್ದ ನೆನಪಾಯಿತು..;)
ಹಾಗೆ ಸಿಕ್ಕಾಪಟ್ಟೆ ಬಾಯಲ್ಲಿ ನೀರು ಕೂಡ ಬಂತು ....
ಸವತೆಕಾಯಿ ಉಪ್ಪು-ಖಾರ what a great combination ಅಲ್ವಾ?
ಧನ್ಯವಾದಗಳು ..:):)

Unknown said...

ಮೊನ್ನೆ ಇನ್ನು ಊರಿಗೆ ಹೋದಾಗ ಉಪ್ಪು ಕಾರ ತಿನ್ದಿದ್ದ್ನ್ಯ , ಈಗ ಇದನ್ನ ಓದಿ ಬರ್ತಿ ಕುಶಿ ಆತು. ಸೌತೆ ಕಾಯಿ ಉಪ್ಪುಕಾರ, ಇಬ್ಬಟ್ಳಣ್ಣು ಶರಬತ್ತು, ಮಜಾ ಇತ್ತು ಅವತ್ತು :-)

Siri said...

ಇಷ್ಟು ಮುದ್ದಾಗಿ ಮನಸ್ಸನ್ನು ಸವರಿಕೊಂಡು ಹೋಗುವಂತೆ ಬರೆಯಲು ನಿನಗೆ ಮಾತ್ರ ಸಾಧ್ಯ.. ಪ್ರತಿಕ್ರಯಿಸದೆ ಇರಲಾಗಲಿಲ್ಲ ಅಷ್ಟು ಇಷ್ಟವಾಯಿತು

VENU VINOD said...

SUPER....BAHALA DINA NANTRA ILLI BANDRE NANAGAAGI KAAYUTTIDDA MULLU SOUTHE SIKTHU...RUCHIYAAGITTHU :)

ದಿನಕರ ಮೊಗೇರ said...

ಸುಶ್ರುತ,
ತುಂಬಾ ತುಂಬಾ ತುಂಬಾ ಚೆನ್ನಾಗಿದೆ ಕವನ, ಕೆಲವೊಂದು ಸಾಲುಗಳಂತೂ ಸುಪ್ಪರ್.... ಮರಳಿ ಬಂದ ಗೆಳೆಯನ ದೆಸೆಯಿಂದಾಗಿ ನಮಗೆ ಇಂತ ಕವನ ಸಿಕ್ಕೆದೆ.... ಗೆಳೆಯ ಗುಂಡನಿಗೂ ಥ್ಯಾಂಕ್ಸ್....

ಚಕೋರ said...

ಸುಶ್ರುತ,

ಚೆನ್ನಾಗಿದೆ,

ಇನ್ನೂ ಸ್ವಲ್ಪ ಕ್ರಿಸ್ಪಿ ಆಗಿದ್ದಿದ್ರೆ ಚೆನ್ನಾಗಿತ್ತೇನೋ ಅಂತಾನೂ ಅನ್ನಿಸಿತು.

sharada narendra said...

ella adbuta.adre ondu imp item bitte !uppu karadalli!kobri enne ilde iddare henge.?ninna article odidamele,ondu sangti nenpatu.ondu sari malalagaddege hogiddya. alli devastanada timmapppanna avna hendti idda.nanu blorinda baindi heli.kesaribat madakke horata.na helidi.kandita byda.nimmane angaladage olle midi soutekai kantu.adanna kotre bari kushi anta.olle sujmenasu kobri enne uppukara innu nenapiddu,adre avribbaru eega ille.ade bejaru

Sushrutha Dodderi said...

@ Divya,

ಯೆಸ್! ಗ್ರೇಟ್ ಕಾಂಬಿನೇಷನ್! :-)

bulde,
’ಇಬ್ಬಟ್ಳ ಹಣ್ಣಿನ್ ಶರಬತ್ತು’ !! ಆಹಾ, ಯಮ್ಮೀ! :)

Siri,
ಥ್ಯಾಂಕ್ಸ್ ಹುಡ್ಗೀ..

ದಿನಕರ,
ಹೌದು, ನಂದೂ ಥ್ಯಾಂಕ್ಸ್ ಗುಂಡಂಗೆ. :-)

ಚಕೋರ,
ಊಹೂಂ? ಮೇ ಬಿ..

ಶಾರಕ್ಕ,
ಹೌದು ನೋಡು! ಮಸಾಲೆಗೆ ಕೊಬ್ರಿ ಎಣ್ಣೆ ಪರಿಮಳ ಇದ್ರೆ ಮತ್ತೂ ಮಸ್ತ್!

ಪ್ರತಿಕ್ರಿಯಿಸಿದ್ದಕ್ಕೆ, ದೇವಸ್ಥಾನದ ತಿಮ್ಮಪ್ಪಣ್ಣನ್ ಮನೆ ಪ್ರಸಂಗ ಹಂಚಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್. :-)

ಆನಂದ said...

ಸೌತೆಕಾಯಿ ಜೊತೆಗೆ ಗೆಳೆಯನ ನೆನಪಿನ ಗಂಟು.
ತುಂಬಾ ಚೆನ್ನಾಗಿದೆ... ಇಷ್ಟವಾಯ್ತು :)

ಅನಿಕೇತನ ಸುನಿಲ್ said...

Excellent sush....simply superb ;)