Tuesday, November 17, 2009

ಇದು ಬರೀ ಮಕ್ಕಳಾಟವಲ್ಲ!

ದಿನವಿಡೀ ಚಡಪಡಿಕೆ. ಕಣ್ಮುಚ್ಚಿದರೂ ಅವವೇ ಚಿತ್ರಗಳು. ಆಫೀಸಿನ ಬಿಝಿಯಲ್ಲೂ ಅದೇ ಧ್ಯಾನ. ದಿನಕ್ಕೆರಡು ಬಾರಿ ಹೋಗಿ ನೋಡದಿದ್ದರೆ ಸಮಾಧಾನವಿಲ್ಲ. ನಿಮ್ಮ ಕಂಪ್ಯೂಟರಿನ ಹತ್ತಿರವೇ ಸುಳಿದಾಡುತ್ತಿರುವ ಮ್ಯಾನೇಜರಿನ ಬಗ್ಗೆ ಕೋಪ. ಮಧ್ಯರಾತ್ರಿಯ ಗಾಢ ನಿದ್ರೆಯಲ್ಲಿ ಏನೋ ಕನಸು ಬಿದ್ದಂತಾಗಿ ಎಚ್ಚರಾಗಿ ದಿಗ್ಗನೆ ಎದ್ದು ಕೂರುತ್ತೀರಿ.

ಇದ್ಯಾವುದಪ್ಪಾ ಹೊಸ ಕಾಯಿಲೆ ಅಂತ ಗಾಭರಿಯಾದಿರಾ? ಹೌದು, ವಿಶ್ವಾದ್ಯಂತ ಕೋಟ್ಯಂತರ ಜನರ ನಿದ್ದೆ ಕೆಡಿಸಿರುವ ಈ ಕಾಯಿಲೆಯ ಹೆಸರು ಫಾರ್ಮ್‌ವಿಲ್ಲೆ ಎಂಬ ಆಟದ ಅಡಿಕ್ಷನ್ನು! ಅಂತರ್ಜಾಲದ ಜನಪ್ರಿಯ ಸ್ನೇಹಸಂವಹನ ತಾಣವಾದ ಫೇಸ್‌ಬುಕ್‌ನಲ್ಲಿರುವ ಈ ಆಟದ ಮೋಡಿಗೆ ಒಳಗಾದಿರಾದರೆ ಈ ಕಾಯಿಲೆ ನಿಮಗೂ ತಗುಲಿಕೊಂಡಿತು ಅಂತಲೇ ಅರ್ಥ!

ಏನಿದು ಫಾರ್ಮ್‌ವಿಲ್ಲೆ? ಫೇಸ್‌ಬುಕ್ಕಿನಲ್ಲಿ ನಿಮ್ಮದೊಂದು ಖಾತೆ ಇದೆಯಾದರೆ ಈ ಆಟ ಆಡಬಹುದು. ಈ ಆಟಕ್ಕೆ ಸೇರಿಕೊಂಡ ತಕ್ಷಣ ನಿಮಗೆ ಒಂದಷ್ಟು ಜಮೀನನ್ನು ಕೊಡಲಾಗುತ್ತದೆ. ಈ ಜಮೀನಿನಲ್ಲಿ ನೀವು ಕೃಷಿ ಕಾರ್ಯ ಕೈಗೊಳ್ಳಬಹುದು. ಮೊದಲಿಗೆ ನೆಲವನ್ನು ಉಳುಮೆ ಮಾಡಬೇಕು. ನಂತರ ಮಾರುಕಟ್ಟೆಗೆ ಹೋಗಿ, ಅಲ್ಲಿ ಲಭ್ಯವಿರುವ ವಿವಿಧ ಬಗೆಯ ಬೀಜಗಳಲ್ಲಿ ನಿಮಗೆ ಬೇಕಾದ್ದನ್ನು ಕೊಂಡು ತಂದು ಉಳುಮೆ ಮಾಡಿದ ಜಾಗದಲ್ಲಿ ಬಿತ್ತಬೇಕು. ಹೀಗೆ ಬಿತ್ತಲ್ಪಟ್ಟ ಬೀಜ, ಒಂದು ನಿರ್ಧಿಷ್ಟ ಕಾಲಾವಧಿಯಲ್ಲಿ ಗಿಡವಾಗಿ ಬೆಳೆದು ಕೊಯ್ಲಿಗೆ ಅಣಿಯಾಗುತ್ತದೆ. ಸುಗ್ಗಿಯಿಂದ ಬಂದ ಹಣದಿಂದ ಮತ್ತೆ ಉಳುಮೆ ಮಾಡಿ ಬೀಜಗಳನ್ನು ಬಿತ್ತಬಹುದು. ಮಾರುಕಟ್ಟೆಯಲ್ಲಿ ಸ್ಟ್ರಾಬೆರಿ, ಬದನೆ, ಕುಂಬಳ, ಸೀತಾಫಲ, ಭತ್ತ, ಮುಂತಾದ ಬೀಜಗಳಿರುತ್ತವೆ. ಅವಕ್ಕೆ ನಿರ್ಧಿಷ್ಟ ಬೆಲೆಯೂ ನಿಗಧಿಯಾಗಿರುತ್ತದೆ. ಸ್ಟ್ರಾಬೆರಿಗೆ ಹತ್ತು ರೂಪಾಯಿಯಾದರೆ ಗೋಧಿಗೆ ಮೂವತ್ತೈದು ರೂಪಾಯಿ. ಸ್ಟ್ರಾಬೆರಿ ಕೇವಲ ನಾಲ್ಕು ತಾಸುಗಳಲ್ಲಿ ಬೆಳೆದು ಕೊಯ್ಲಿಗೆ ತಯಾರಾಗುತ್ತದೆ. ಗೋಧಿ ಬೆಳೆಯಲು ಮೂರು ದಿವಸ ಬೇಕು. ಬೆಳೆದ ಸ್ಟ್ರಾಬೆರಿಯ ಬೆಲೆ ಮೂವತ್ತೈದು ರೂಪಾಯಿಯಾದರೆ ಗೋಧಿಗೆ ನೂರಾ ಹದಿನೈದು ರೂಪಾಯಿ. ನಿರ್ಧಿಷ್ಟ ಸಮಯದೊಳಗೆ ಸುಗ್ಗಿ ಮಾಡದಿದ್ದರೆ ಬೆಳೆ ಒಣಗಿಹೋಗುತ್ತದೆ.

ನಿಮ್ಮ ಜಮೀನಿನಲ್ಲಿ ಬಾಳೆ, ಸೇಬು, ನಿಂಬೆ, ದಾಳಿಂಬೆ ಇತ್ಯಾದಿ ಮರಗಳನ್ನೂ ಬೆಳೆಸಬಹುದು. ಇವೂ ಮೂರ್ನಾಲ್ಕು ದಿನಗಳಿಗೊಮ್ಮೆ ಫಲ ಕೊಡುತ್ತವೆ. ಕತ್ತರಿಸಿ ಮಾರಾಟ ಮಾಡಿದ ಮೇಲೆ ಮತ್ತೆ ಮೂರ್ನಾಲ್ಕು ದಿನದಲ್ಲಿ ಹಣ್ಣು ಬಿಡುತ್ತದೆ. ಕೃಷಿಯಷ್ಟೇ ಅಲ್ಲದೆ, ಫಾರ್ಮ್‌ವಿಲ್ಲೆಯಲ್ಲಿ ಹೈನುಗಾರಿಕೆಯನ್ನೂ ಮಾಡಬಹುದು. ಹಸು, ಮೇಕೆ, ಕುದುರೆ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಸಾಕಬಹುದು. ಹಸುವಿನಿಂದ ಹಾಲು ಸಿಕ್ಕರೆ ಕೋಳಿಯಿಂದ ಮೊಟ್ಟೆ ಸಿಗುತ್ತದೆ.

ನೀವು ಕೃಷಿಯಲ್ಲಿ ನೈಪುಣ್ಯತೆ ಹೊಂದುತ್ತ ಹೋದಂತೆ ಹೆಚ್ಚು ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯಲಿಕ್ಕೆ ಮಾರುಕಟ್ಟೆಯಲ್ಲಿ ಬೀಜಗಳು ದೊರೆಯತೊಡಗುತ್ತವೆ. ಅವಶ್ಯಕತೆ ಜಾಸ್ತಿಯಾದಂತೆ ನೀವು ಟ್ರಾಕ್ಟರ್, ಸೀಡರ್, ಹಾರ್ವೆಸ್ಟರ್ ಇತ್ಯಾದಿ ಯಂತ್ರೋಪಕರಣಗಳನ್ನು ಕೊಳ್ಳಬಹುದು. ಇವುಗಳಿಂದಾಗಿ ಉಳುಮೆ, ಬಿತ್ತನೆ, ಕೊಯ್ಲುಗಳು ತ್ವರಿತ ಗತಿಯಲ್ಲಿ ಆಗುತ್ತವೆ. ಹಣ ಸಂಪಾದಿಸುತ್ತ ಹೋದಂತೆ ನೀವು ಜಮೀನನ್ನು ವಿಸ್ತರಿಸಬಹುದು, ಫಾರ್ಮ್‌ಹೌಸ್ ಕಟ್ಟಿಕೊಳ್ಳಬಹುದು, ಬಾವಿ ತೆಗೆಸಬಹುದು, ಕಾಂಪೌಂಡ್ ವಾಲ್ ಕಟ್ಟಿಸಬಹುದು, ತೋರಣಬಾಗಿಲು-ಏರ್‌ಬಲೂನುಗಳಂತಹ ವಸ್ತುಗಳಿಂದ ಜಮೀನನ್ನು ಅಲಂಕರಿಸಬಹುದು, ಹಸುಗಳು ಜಾಸ್ತಿಯಾದರೆ ಡೇರಿ ಕಟ್ಟಿಸಬಹುದು. ಅಷ್ಟೇ ಅಲ್ಲ, ನಿಮ್ಮ ಪಕ್ಕದ ಜಮೀನಿಗೆ ಹೋಗಿ ಅವರಿಗೆ ಸಹಾಯ ಮಾಡಬಹುದು (ಉದಾ: ಕಳೆ ಕಿತ್ತುಕೊಡುವುದು, ಕಾಟ ಕೊಡುವ ಕಾಗೆ-ನರಿಗಳನ್ನು ಓಡಿಸುವುದು, ಕೀಟನಾಶಕ ಸಿಂಪಡಿಸುವುದು, ಯಾವುದಾದರೂ ಸಸಿ ಅಥವಾ ಪ್ರಾಣಿಯನ್ನು ಉಡುಗೊರೆಯಾಗಿ ಕೊಡುವುದು). ಇದರಿಂದಾಗಿ ನಿಮಗೆ ಅನುಭವ ಜಾಸ್ತಿಯಾಗುತ್ತದಲ್ಲದೇ ಸ್ವಲ್ಪ ಹಣವೂ ಸಿಗುತ್ತದೆ. ಕೃಷಿಯಲ್ಲಿ ಸಾಧನೆ ಮಾಡುತ್ತ ಹೋದಂತೆ ನಿಮಗೆ ಹಲವು ಅವಾರ್ಡುಗಳು, ಬಿರುದುಗಳು ದೊರೆಯುತ್ತ ಹೋಗುತ್ತವೆ.

ಕೆಲವೇ ವರ್ಷಗಳ ಹಿಂದಿನ ನೆನಪು: ನಾನು ಯಾವುದೋ ಪತ್ರಿಕೆಯಲ್ಲಿ ಬಂದಿದ್ದ ಹೊಸರುಚಿಯ ಪುಟವನ್ನು ಹಿಡಿದು ಅಡುಗೆಮನೆಯಲ್ಲಿ ಅಮ್ಮನಿಗೆ ಅದನ್ನು ಮಾಡಿಕೊಡುವಂತೆ ಹಟ ಮಾಡುತ್ತಿದ್ದೆ. ಆಗ ಅಲ್ಲಿಗೆ ಬಂದ ಅಜ್ಜಿ, "ಅಪ್ಪೀ, ನೀ ಸುಮ್ನಿರು. ಪುಸ್ತಕದ ಬದನೇಕಾಯಿ ತಿನ್ನಕ್ಕೆ ಬರದಿಲ್ಲೆ" ಅಂತ ಹೇಳಿದ್ದಳು. ಅಂದರೆ, ಅಜ್ಜಿಯ ಪ್ರಕಾರ, ಭೌತಿಕವಲ್ಲದ, ಅನುಭವಜನ್ಯವಲ್ಲದ, ಕೈಯಾರೆ ಮಾಡದ ಯಾವ ಕೆಲಸ / ತಯಾರಾದ ವಸ್ತುವೂ ಉಪಯೋಗಕ್ಕೆ ಬಾರದ್ದು ಅಂತ. ಹಾಗಾದರೆ, ಇಲ್ಲಿ ನಾವೆಲ್ಲ ಹುಚ್ಚಿಗೆ ಬಿದ್ದವರಂತೆ ಮಾಡುತ್ತಿರುವುದು ಏನು? ಬಾಳೆಗಿಡದಲ್ಲಿ ಗೊನೆ ತೂಗಿದಾಗ ಬೀಗಿದ್ದು, ಸರಿಯಾದ ಸಮಯಕ್ಕೆ ಕೊಯ್ಲು ಮಾಡದಿದ್ದರೆ ಬೆಳೆ ಎಲ್ಲಿ ಹಾಳಾಗುತ್ತದೋ ಅಂತ ಟೆನ್ಷನ್ ಮಾಡಿಕೊಂಡದ್ದು, ಟ್ರಾಕ್ಟರ್ ಬಳಸಲಿಕ್ಕೆ ಇಂಧನ ಖಾಲಿಯಾಯ್ತಲ್ಲ ಅಂತ ಖಿನ್ನಗೊಂಡದ್ದು, ಕಲ್ಲಂಗಡಿ ಮಾರಿದಾಗ ಬಂದ ದುಪ್ಪಟ್ಟು ಹಣ ಕಂಡು ಖುಶಿಯಾದದ್ದು, ದಾರಿ ತಪ್ಪಿ ಬಂದಿದ್ದ ಆಮೆಗೆ ಮನೆ ಕಲ್ಪಿಸಿ ತೃಪ್ತಿ ಪಟ್ಟುಕೊಂಡದ್ದು, ಯಾವುದೋ ಕಾಡುಪ್ರಾಣಿ ಹೊಲಕ್ಕೆ ನುಗ್ಗಿದಂತೆ ಕನಸು ಕಂಡು ನಿದ್ದೆಯಿಂದ ಎಚ್ಚೆತ್ತದ್ದು.... ಇವಕ್ಕೆಲ್ಲ ಏನರ್ಥ? ಕೇವಲ ಕಂಪ್ಯೂಟರ್ ಪರದೆಯ ಮೇಲಣ ಹುಸಿ ಚಿತ್ರಗಳನ್ನು ನಿಜವೆಂದೇ ಭಾವಿಸಿ ಶ್ರದ್ಧೆಯಿಂದ, ಖಂಡಿತ ಮನಃಪೂರ್ವಕವಾಗಿ ಈ ಆಟದಂತಹ ಆಟದಲ್ಲಿ ನಮ್ಮನ್ನು ತೊಡಗಿಸಿಕೊಂಡಿರುವುದು ಇದ್ಯಾವ ಸೀಮೆಯ ಮರುಳು? ಊರಿನಲ್ಲಿರುವ ತೋಟ-ಗದ್ದೆಗಳಲ್ಲಿ ವ್ಯವಸಾಯ ಮಾಡುವುದು ಬಿಟ್ಟು, ನಗರಗಳಲ್ಲಿ ನೆಲೆಸಿರುವ ನಾವು ಕಂಪ್ಯೂಟರ್ ಮುಂದೆ ಕೂತು ಥೇಟ್ ರೈತನ ರೀತಿ ಆಲೋಚಿಸುತ್ತಿರುವುದು-ವರ್ತಿಸುತ್ತಿರುವುದು ವ್ಯಂಗ್ಯದ ಪರಾಕಾಷ್ಠೆಯೇ, ವಿಪರ್ಯಾಸದ ಪರಮಾವಧಿಯೇ ಅಥವಾ ಮೂರ್ಖತನದ ತುರೀಯ ಸ್ಥಿತಿಯೇ?

ಗೊತ್ತಿಲ್ಲ! ಆದರೆ, ಅಂತರ್ಜಾಲ ವಿಶ್ವಕೋಶ ವಿಕಿಪೀಡಿಯಾ ಪ್ರಕಾರ, ವಿಶ್ವದಾದ್ಯಂತ ಇದುವರೆಗೆ ಸುಮಾರು ಆರೂವರೆ ಕೋಟಿ ಜನ ಈ ಹುಚ್ಚಿಗೆ ಬಲಿಯಾಗಿದ್ದಾರೆ. ಸಧ್ಯದ ಫೇಸ್‌ಬುಕ್ಕಿನ ಅತ್ಯಂತ ಜನಪ್ರಿಯ ಆಟವೂ ಇದಾಗಿದೆ. ಇದಕ್ಕೆ ಬಲಿಯಾಗಿರುವ ವಿದ್ಯಾರ್ಥಿಗಳು ಪಠ್ಯಪುಸ್ತಕ ಬದಿಗಿಟ್ಟು ಬಂದು ಹಸುವಿನ ಹಾಲು ಕರೆಯುತ್ತಿದ್ದರೆ ಮುದುಕರು ಬೆನ್ನು ಬಗ್ಗಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ಅಷ್ಟೂ ಗಿಡಗಳಲ್ಲೂ ಹಣ್ಣು ಬಿಟ್ಟಿದ್ದು ನೋಡಿ ಹಿರಿಹಿರಿ ಹಿಗ್ಗುತ್ತಿದ್ದಾರೆ. ಕೆಲ ಗಂಡಸರು ಲಕ್ಷಗಟ್ಟಲೆ ಹಣ ಮಾಡಿ ಖುಶಿ ಪಡುತ್ತಿದ್ದರೆ, ಗೃಹಿಣಿಯರಿಗೆ ಹಣಕ್ಕಿಂತ ತಮ್ಮ ಜಮೀನನ್ನು ಅಲಂಕರಿಸುವುದರಲ್ಲೇ ಆನಂದ. ಜಮೀನಿನ ತುಂಬ ದ್ರಾಕ್ಷಿ ಬೆಳೆದಿದ್ದೇವೆ; ತಿನ್ನಲಿಕ್ಕೆ ಬರುತ್ತಿಲ್ಲ, ಕೆಚ್ಚಲ ತುಂಬ ಹಾಲು ತುಂಬಿ ನಿಂತಿದೆ ಹಸು; ಕುಡಿಯಲಿಕ್ಕೆ ಸಿಗುತ್ತಿಲ್ಲ, ಮನೆಯೆದುರಿನ ಅಂಗಳದ ತುಂಬ ಗುಲಾಬಿಯಿದೆ; ಮುಡಿಯಲಿಕ್ಕೆ ಆಗುತ್ತಿಲ್ಲ, ಜೇಬಿನ ತುಂಬ ಹಣವಿದೆ; ಕಂಪ್ಯೂಟರಿನ ಮುಂದಿಂದ ಎದ್ದು ಬಂದರೆ ಬಳಸಲಿಕ್ಕೆ ಬರುವುದಿಲ್ಲ!

ಕನ್ನಡಿಯೊಳಗಿನ ಗಂಟು ಎಂದರೆ ಇದೇನಾ?!

[ವಿಜಯ ಕರ್ನಾಟಕದ ಸಾಪ್ತಾಹಿಕ ಲವಲvkಗಾಗಿ ಬರೆದದ್ದು]

14 comments:

ಚಿತ್ರಾ said...

ಸುಶ್ರುತ,
ಚೆನಾಗಿದ್ದು ಲೇಖನ. ನನ್ನದೂ facebook ನಲ್ಲಿ ಹೆಸರಿದ್ದು. ಆದರೆ ಬಳಸದು ಕಮ್ಮಿ. ಸ್ನೇಹಿತರೆಷ್ಟೋ ಜನ ಈ ಆಟದ ಅಪ್ ಡೇಟ್ ಹಾಕಿದ್ದನ್ನ ನೋಡಿದ್ದಿ. ಆದರೆ ಯಾಕೋ ಆಡಕ್ಕು ಅಂತ ಅನಿಸಲೇ ಇಲ್ಲೆ .
ಸುಮ್ಮನೆ ಹೊತ್ತು ಕಳೆಯಕೆ ok ಹೊರತು ಸೀರಿಯಸ್ ಆಗಿ ಸಾಧ್ಯ ಇಲ್ಲೆ ನಂಗೆ . ನಿನ್ನ ಬರಹ ಓದಕಾದ್ರೆ ಅನಿಸ್ತು , ಇಷ್ಟು ಸೀರಿಯಸ್ ಆಗಿ ಊರಲ್ಲಿ ಯಾರಾದ್ರು ಗದ್ದೆ-ತೋಟ ಮಾಡ ಹಂಗಿದ್ದಿದ್ರೆ ... ಅಂತ .

ನಿಜಕ್ಕೂ ವಿಚಾರ ಮಾಡ ಹಾಂಗೇ ಇದ್ದು

preeti said...

Shustuth
Good one :)
Ella eddanthe alinisidaru enu ellada aata..Unlike others I did not like this game.May be I am one among only few people who did not like this game.
My husband played this like mad till 4 am.Luckily he is also loosing interest on this formville.
Oralliro tota,gadde nodo vyavadhana ellade elli computer munde aadidarenu banthu alwa?


Thanks
Preeti

sunaath said...

ಸುಶ್ರುತ,
ಲವಲವಿಕೆಯ ಆಟವಿದು ಅಂತಾಯ್ತು. ಒಂದು ಪ್ರಶ್ನೆ ನನ್ನನ್ನು ಕೊರೆಯುತ್ತಿದೆ. ಇದೇನಾದರೂ Indian farmville
ಆಗಿದ್ದರೆ, ಕೊನೆಯಲ್ಲಿ ರೈತ ನೇಣು ಹಾಕಿಕೊಳ್ಳುತ್ತಿದ್ದನೇನೊ?

Sushrutha Dodderi said...

@ preeti,

One quick correction: My name is Sushrutha. I'm unable to pronounce the one you have addressed with. ;)

Thanks for the comment.

ಚಿತ್ರಕ್ಕ,

ನಿಜ.. ವಿಚಾರ ಮಾಡದೇಯ.

sunaath,

ಹಹಾ, ಚನಾಗಿದೆ ನೀವ್ ಹೇಳಿದ್ದು! :D ಆದ್ರೆ ಸಧ್ಯ, ಈ ಕಂಪ್ಯೂಟರ್ ತೋಟದಲ್ಲಿ ಮಳೆ-ಬರ ಎರಡೂ ಇಲ್ಲ. ಸಮಯಕ್ಕೆ ಸರಿಯಾಗಿ ಸುಗ್ಗಿ ಮಾತ್ರ ಮಾಡ್ಬೇಕು. ರೈತ ಬಚಾವ್! :-)

Parisarapremi said...

ಇಲ್ಲಿಯೂ ಓದಿದೆ, ವಿ.ಕ.ದಲ್ಲೂ ಓದಿದೆ. ಎರಡರಲ್ಲೂ ಚೆನ್ನಾಗಿತ್ತು ಓದೋಕೆ - ಮಜ್ವಾಗಿ.

ಅಂದಹಾಗೆ, "ಫಾರ್ಮ್ ವಿಲ್ಲೆ"ನ ಫಾರ್ಮ್ ವಿಲ್ ಅಂತ ಇಂಗ್ಲೀಷಿನಲ್ಲಿ ಉಚ್ಚರಿಸುತ್ತಾರೆ, ಫ್ರೆಂಚ್ ಅಲ್ಲಿ ville ಅಂತ ಬರೆದರೆ ಅದನ್ನು "ವೀ" ಅಂತ ಉಚ್ಚರಿಸುತ್ತಾರೆ. ವೀ ಎಂದರೆ ಮನೆ ಎಂದರ್ಥ! ಸುಮ್ನೆ ಇರ್ಲಿ ಅಂತ ಹೇಳ್ದೆ ಅಷ್ಟೆ.

Vijaya said...

monne luvlavik nalli nin hesru nodid thakshna khushyaagi odde pa ...naanu face book nallella ilde irodrinda artha aagodu kashta... lekhana chennagide :-)

ಸಾಗರದಾಚೆಯ ಇಂಚರ said...

ಸುಶ್ರುತ,
ಇದರ ಹುಚ್ಚು ನನಗೂ ಹಿಡಿದಿತ್ತು , ಈಗ ಸ್ವಲ್ಪ ಕಡಿಮೆಯಾಗಿದೆ
ಆದರೆ ಇದನ್ನು ಆದಲಾರಮ್ಬಿಸಿದ ಮೇಲೆ ಪ್ರಕ್ರತಿಯ ಮೇಲೆ ಇನ್ನಷ್ಟು ಒಲವು ಹೆಚ್ಚಾಗಿದೆ
ಮನೆಯಲ್ಲೇ ಕೆಲವು ಗಿಡ ನೆಟ್ಟಿದ್ದೇನೆ
ಯಾವುದೇ ಆಟವಾಗಲಿ, ಏನೇ ಆಗಲಿ ಅದನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದರಲ್ಲಿ ಅದರ ಒಳಿತು ಕೆಡಕು ಅವಲಂಬಿಸಿದೆ
ಅಲ್ಲವೇ?

umesh desai said...

ಆಡುವುದು ಹೆಂಗ ಗೊತ್ತಿಲ್ಲ ಎಲ್ಲಾದ್ರೂ ಟ್ಯೂಶನ್ ಹೇಳ್ತಾರೇನು

ಗೌತಮ್ ಹೆಗಡೆ said...

ಈ ಲೇಖನ ಪೇಪರ್ ಅಂಡ್ ಇಲ್ಲಿ ಎರಡೂ ಕಡೆ ನೋಡ್ಯಾತ್. ಬರಹದ ಬಗ್ಗೆ ಎರಡು ಮಾತಿಲ್ಲೆ. ಆದರೆ ಎಂಗೆ ಈ ಬರಹಕ್ಕಿಂತ ನೀನು ಸುನಾಥ್ ಸರ್ ಗೆ ಕೊಟ್ಟ ಉತ್ತರ ರಾಶಿ ಇಷ್ಟ ಆತು." ಈ ಕಂಪ್ಯೂಟರ್ ತೋಟದಲ್ಲಿ ಮಳೆ -ಬರ ಎರಡೂ ಇಲ್ಲ " ಈ ಲೈನ್ ಮಸ್ತಿದ್.ಅದನ್ನ ನೋಟ್ ಮಾಡಿ ಇಟ್ಗಂಜಿ ಬರದು.:):)

ಮನಸಿನ ಮಾತುಗಳು said...

Hi Sushrutha,
Ee nimma Lekhanavu blogige baruva muncheye Vijaya Karnataka Paper nalli voodidde. Tumba chennagide.
Even I was addicted for a while to this game.Now it has reached saturation and hav stopped playing.
Thanks,
Divya..:)

ನೀಲಾಂಜಲ said...

ಇದನ್ನು ಓದಿ ನಾನು ಆಡಲೇ ಶುರು ಮಾಡಿದ್ದಿ. ಸಕತ್ ಆಗಿದ್ದು ಆಟ , ಮಸ್ತ್ ಮಸ್ತ್. ಆದರೆ ನಿ ಹೇಳಿದಂಗೆ '..........ಕಂಪ್ಯೂಟರಿನ ಮುಂದಿಂದ ಎದ್ದು ಬಂದರೆ ಬಳಸಲಿಕ್ಕೆ ಬರುವುದಿಲ್ಲ!' ನಿಜ :(

Dileep Hegde said...

ಸುಶ್ರುತ..
ಈ ಆಟ ಕೆಲವು ದಿನಗಳ ಕಾಲ ನನ್ನ ಮಂಡೆಯನ್ನೂ ಕೆಡಿಸಿತ್ತು... ಹೋದಲ್ಲಿ ಬಂದಲ್ಲಿ ಈ ಆಟದ್ದೇ ಮಾತು... ಕುಂತಲ್ಲಿ ನಿಂತಲ್ಲಿ ಇದರದ್ದೇ ಚಿಂತೆ.. ಅಂತೂ ಇಂತೂ ಕಷ್ಟ ಪಟ್ಟು ಇದರ ತೆಕ್ಕೆಯಿಂದ ಹೊರಗೆ ಬಂದೆ... ಶುರು ಮಾಡಿದ ಹೊಸತರಲ್ಲಿ ನನ್ನ ಆಫೀಸ್ ನಲ್ಲಿ ಎಲ್ಲರಿಗಿಂತ ನಾನೇ ಮುಂದಿದ್ದೆ.. ಈಗ ಮಿತ್ರರೆಲ್ಲ ಬಂಗಲೆ ಕೊಂಡುಕೊಳ್ಳುವ ಲೆವೆಲ್ ಗೆ ಬಂದಿದ್ದಾರೆ.. ನನ್ನ ಹೊಲ ಯಜಮಾನನಿಲ್ಲದೆ ಬರಡಾಗಿದೆ... ನಿಮ್ಮ ಲೇಖನ ಸಕತ್ತಾಗಿದೆ.. :)

Anonymous said...

PRAPANCHADALLI KELASAVILLADA JANARU ELLIYAVAREGE IRTARO ALLIYAVAREGE E TARAHADA GAME GALUU CHALTIYALLI ERTAVE.jANA TIME PASIGE MODALU KADALEKAYI TINTHAEDDRU EEGA HOSA HOSA IDEAGALLANNU HUDUKTARE.EDE TARA BERE RACHANATMAKA FIELD NALLI ISTU BUDHI UPAYOGISIDARE NAVELLO IRTIDVI ALVA.

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಫಾರ್ಮ್‌ವಿಲ್ಲೆ ಹುಚ್ಚು ನಂಗೂ ಇಳಿದಿದೆ. ಈಗ ಏನೋ ಜಮೀನು ಇದೆಯಲ್ಲಾ ಅಂತ ನಾಲ್ಕು ದಿನಕ್ಕೆ ಬರೋ ಬೆಳೆಗಳನ್ನ ಬೆಳೀತಿದೀನಿ. ;)

Anonymous,

ನಿಮ್ಮ ಪ್ರತಿಕ್ರಿಯೆ 'ನೋಟ್' ಆಗಿದೆ, ಥ್ಯಾಂಕ್ಸ್. ಹೆಸರು ಹಾಕಿ ಬರೆಯಿರಿ ಮುಂದೆ.