Wednesday, January 13, 2010

ಮಲ್ಲೇಶ್ವರಂ -ಭಾಗ ೧

ನನ್ನ ಅತ್ತಿಗೆ ಭಾಗ್ಯ ಮೊನ್ನೆ ಕ್ರಿಸ್‌ಮಸ್ ರಜೆಗೆಂದು ಗಂಡ-ಮಗನೊಂದಿಗೆ ಬೆಂಗಳೂರಿಗೆ ಬಂದವಳು ನನ್ನ ಮನೆಯಲ್ಲೇ ಉಳಿದುಕೊಂಡಿದ್ದಳು. ಅವರಿಗೆ ಸುಮಾರೆಲ್ಲ ಬೆಂಗಳೂರು ಸುತ್ತಿಸಿ, ಮೂರು ದಿನದ ನಂತರ ವಾಪಸು ಕಳುಹಿಸಿಕೊಡಲು ಮಲ್ಲೇಶ್ವರಂ ರೈಲ್ವೇ ಸ್ಟೇಶನ್ನಿಗೆ ಬಂದಿದ್ದೆ ರಾತ್ರಿ. ರೈಲು ಬರುವುದು ತಡವಿತ್ತು, ಹಾಗೇ ಅತ್ತಿಗೆಯ ಬಳಿ ಹೇಳಿದೆ: "ಈ ಮಲ್ಲೇಶ್ವರಂ ರೈಲ್ವೇ ಸ್ಟೇಶನ್ನಿಗೂ ನಂಗೂ ಸುಮಾರೆಲ್ಲ ನೆನಪಿನ ತಳುಕು ಇದೆ.. ನಾನು ಪೀಜಿಯಲ್ಲಿ ಇರ್ಬೇಕಾದ್ರೆ ಪ್ರತಿ ರಾತ್ರಿ ಇಲ್ಲಿಗೆ ಬಂದು ಒಬ್ಬನೇ ಕೂತಿರ್ತಿದ್ದೆ. ಶರವೇಗದಲ್ಲಿ ಹಾಯೋ ಎಕ್ಸ್‌ಪ್ರೆಸ್ ಟ್ರೇನುಗಳು, ಅವುಗಳ ಕಿಟಕಿಯಿಂದ ಕಾಣ್ತಿದ್ದ ತರಹೇವಾರಿ ಜನಜೀವನದ ಚಿತ್ರಗಳನ್ನ ನೋಡುತ್ತಿರುತ್ತಿದ್ದೆ. ರೈಲಿನಿಂದ ಇಳೀತಿದ್ದ ವಿವಿಧ ಪೋಷಾಕಿನ ಜನಗಳನ್ನ ಸುಮ್ಮನೆ ನೋಡ್ತಿರ್ತಿದ್ದೆ. ಒಂಥರಾ ಮಜಾ ಇರೋದು.." ಹಾಗೆ ಹೇಳುತ್ತಿರುವಾಗಲೇ ನನಗನ್ನಿಸಿತು, ಮಲ್ಲೇಶ್ವರಮ್ಮಿನಲ್ಲಿ ನನಗೆ ರೈಲ್ವೇ ಸ್ಟೇಶನ್ ಅಷ್ಟೇ ಅಲ್ಲ; ಇನ್ನೂ ಹಲವು ಅಚ್ಚಳಿಯದ ನೆನಪುಗಳಿವೆ ಅಂತ.. ಅವನ್ನೆಲ್ಲ ಯಾಕೋ ಬರೆಯಬೇಕು ಅನ್ನಿಸಿತು.

* * *

ಮಲ್ಲೇಶ್ವರಂ ಎಂದರೆ ಕೆಲವರಿಗೆ ಸಂಪಿಗೆ ರಸ್ತೆ, ಕೆಲವರಿಗೆ ಸರ್ಕಲ್, ಕೆಲವರಿಗೆ ಸ್ಯಾಂಕಿ ಟ್ಯಾಂಕ್, ಕೆಲವರಿಗೆ ಹಳ್ಳಿಮನೆ-ಜನತಾ-ಸಿಟಿಆರ್. ಇನ್ನು ನನ್ನಂಥ ಕೆಲವರಿಗೆ, ಮಲ್ಲೇಶ್ವರಂ ಎಂದರೆ ಏಯ್ಥ್ ಕ್ರಾಸ್!

ಮಲ್ಲೇಶ್ವರಂ ಬಳಿ ಬಾಡಿಗೆ ಮನೆ ಮಾಡಿಕೊಂಡಿರುವುದಕ್ಕೆ ಸೌತ್ ಬೆಂಗಳೂರಿನಲ್ಲಿರುವ ನನ್ನ ಗೆಳೆಯರನೇಕರು "ಅಲ್ಲೇನು ರಾಗಿ ಬೆಳೀತೀಯೇನಯ್ಯಾ? ಏನಿದೆ ಅಲ್ಲಿ? ಈ ಕಡೆ ಬಾ. ಗಾಂಧಿ ಬಜಾರು, ಬ್ಯೂಗಲ್ ರಾಕು, ಲಾಲ್‌ಭಾಗು, ರಂಗಶಂಕರ, ಅಂಕಿತ ಪುಸ್ತಕ, ಜಯನಗರ ಫೋರ್ತ್ ಬ್ಲಾಕು... ಏನ್ ಬೇಕು ನಿಂಗೆ? ಕಲಾಕ್ಷೇತ್ರ-ಟೌನ್‌ಹಾಲುಗಳಿಗೂ ಇಲ್ಲಿಂದ ಹತ್ತಿರ. ಆ ಹಾಳು ಮಲ್ಲೇಶ್ವರಮ್ಮಲ್ಲಿ ಏನಿದೆ?" ಅಂತ ಬೈಯುತ್ತಾರೆ. ಅವರ ಪ್ರಕಾರ ಯೋಚಿಸಿದರೆ ಅದು ಸತ್ಯವೂ ಹೌದು. ಇಷ್ಟು ವಿಶಾಲವಾಗಿರುವ ಬೆಂಗಳೂರಿನಲ್ಲಿ, ಸಾಹಿತ್ಯ-ಸಂಸ್ಕೃತಿಗಳ ಪರಿಮಳ ಹೆಚ್ಚಿಗೆ ಇರುವುದು ಸೌತ್ ಬೆಂಗಳೂರಿನಲ್ಲೇ. ಅತಿ ಹೆಚ್ಚು ಪುಸ್ತಕ ಬಿಡುಗಡೆ ಸಮಾರಂಭಗಳು ಆಗುವುದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯ ಐಐಡಬ್ಲೂಸಿ ಸಭಾಂಗಣದಲ್ಲಿ ಅಥವಾ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಅಥವಾ ಕಾರ್ಪೋರೇಶನ್ ಸರ್ಕಲ್ ಬಳಿಯ ನಯನ ಸಭಾಂಗಣದಲ್ಲಿ. ಪ್ರತಿದಿನವೂ ನಾಟಕಗಳು ಪ್ರದರ್ಶಿತವಾಗುವುದು ಜೆ.ಪಿ. ನಗರದ ರಂಗಶಂಕರದಲ್ಲಿ. ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನಗಳು ಜರುಗುವುದು ರವೀಂದ್ರ ಕಲಾಕ್ಷೇತ್ರ ಮತ್ತು ಎ.ಡಿ.ಎ. ರಂಗಮಂದಿರಗಳಲ್ಲಿ. ಸಂಗೀತ ಕಾರ್ಯಕ್ರಮಗಳು ನಡೆಯುವುದು ಕೆ.ಆರ್. ರಸ್ತೆಯ ಗಾಯನ ಸಮಾಜ, ಉಪನ್ಯಾಸಗಳು ನಡೆಯುವುದು ಬುಲ್ ಟೆಂಪಲ್ ರಸ್ತೆಯ ಡಿವಿಜಿ ಸಭಾಂಗಣದಲ್ಲಿ. ಮಲ್ಲೇಶ್ವರಂ - ರಾಜಾಜಿನಗರಗಳಲ್ಲಿ ನೆಲೆಸಿರುವ ನಾವು ಏನೇ ಒಳ್ಳೆಯದು ಬೇಕು ಎಂದರೂ ಅಲ್ಲಿಯ ತನಕ ಉದೋ ಅಂತ ಟ್ರಾಫಿಕ್ಕಿನಲ್ಲಿ ಹೋಗಬೇಕು.

ಸಾಹಿತ್ಯ ಲೋಕದ ಮಂದಿಯೂ ಹೆಚ್ಚಾಗಿ ತಳವೂರಿರುವುದು ಅತ್ತ ಕಡೆಯೇ. ಹಳೆಯ ಕಾಲದ ಕವಿವರೇಣ್ಯರಿಗಂತೂ ಗಾಂಧಿ ಬಜಾರು ಅಡ್ಡಾ ಆಗಿಹೋಗಿತ್ತು. ಗಾಂಧಿ ಬಜಾರಿನ ಬಾರಿನಲ್ಲಿ ಕೂತು ಹರಟಿದ್ದೇನು, ಹರಟಿದ್ದನ್ನೇ ಬರೆದಿದ್ದೇನು, ಗಾಂಧಿ ಬಜಾರಿನಲ್ಲಿ ಸುರಿದ ಮಳೆಯ ಬಗ್ಗೆ ಕವಿತೆ ಹೊಸೆದಿದ್ದೇನು, 'ಮನಸೆಂಬ ಗಾಂಧಿಬಜಾರು' ಅಂತೆಲ್ಲ ರೂಪಕಗಳನ್ನು ಹೆಣೆದಿದ್ದೇನು, ಕವನ ಸಂಕಲನಕ್ಕೂ ಗಾಂಧಿ ಬಜಾರಿನ ಹೆಸರನ್ನೇ ಬಳಸಿಕೊಂಡಿದ್ದೇನು..! ಆಹಾ, ಓದಿದವರಿಗೆ ಗಾಂಧಿ ಬಜಾರು ಎಂದರೆ ಸಾಲು ಮರಗಳ ಹೂವು ಹಾಸಿದ ಬರೀ ಲಲನೆಯರೇ ನಡೆದಾಡುವ (ಜತೆಗೆ ಕವಿಗಳು!) ಹಕ್ಕಿಗಳ ಕಲರವ ತುಂಬಿದ ರಸ್ತೆಯಿರಬೇಕು ಎನಿಸಬೇಕು!

ಹಾಗಾದರೆ ಇಷ್ಟು ಸುಂದರವಾಗಿರುವ ನಮ್ಮ ಮಲ್ಲೇಶ್ವರಂ ಯಾಕೆ ನಿರ್ಲಕ್ಷ್ಯಕ್ಕೆ ಗುರಿಯಾಯಿತು? ಮಲ್ಲೇಶ್ವ'ರಂ'ನಲ್ಲೇ ಸಿಗುತ್ತಿರುವಾಗ ರಂ, ಇಲ್ಲೇ ಕೂತು ಯಾಕಿವರು ಟೈಟಾಗಲಿಲ್ಲ? ಚೌಡಯ್ಯ, ಅನನ್ಯ, ಗಾಂಧಿ ಸ್ಮಾರಕ ಭವನಗಳಂತಹ ಸಭಾಂಗಣಗಳ್ಯಾಕೆ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ? ಈ ದೆಸೆಯಲ್ಲಿ ಚಿಂತಿಸುತ್ತಿದ್ದ ನನಗೆ, ಮೇ ಫ್ಲವರ್ ಮೀಡಿಯಾ ಹೌಸ್ ಮಲ್ಲೇಶ್ವರಂ ಬಳಿ ಬಂದುದು ಒಂಥರಾ ಒಳಗೊಳಗೇ ಹೆಮ್ಮೆ ತಂದಿದ್ದ ಸಂಗತಿ! ಬರೀ ಆ ಕಡೆಗೇ ಇದ್ದ ಸಾಹಿತ್ಯ-ಮೀಡಿಯಾ ಲೋಕದ ಮಂದಿ ಫಿಶ್ ಮಾರ್ಕೆಟ್ ಕಾರ್ಯಕ್ರಮಗಳಿಗೆ ನಮ್ಮಲ್ಲಿಗೆ ದಾರಿ ಹುಡುಕಿಕೊಂಡು ಬರುವಂತಾಯ್ತಲ್ಲ ಎಂದು!

ಅದೆಲ್ಲ ಇರಲಿ. ನಾನು ಬರೆಯಲಿಕ್ಕೆ ಹೊರಟದ್ದು ಮಲ್ಲೇಶ್ವರಂ ಬಗ್ಗೆ. ಅದರಲ್ಲೂ ಏಯ್ಥ್ ಕ್ರಾಸ್ ಬಗ್ಗೆ.

ನಮ್ಮ ಮಲ್ಲೇಶ್ವರಮ್ಮಿನಲ್ಲಿ ಮೇನುಗಳಿಗಿಂತ ಕ್ರಾಸುಗಳೇ ಮೇನು. ಮೇನ್ ರೋಡುಗಳು ಇಲ್ಲಿ ಕೇವಲ ನೇಪಥ್ಯ (ಏಯ್ಥ್ ಮೇನ್ ಒಂದನ್ನು ಬಿಟ್ಟು). ವಿಳಾಸ ಹುಡುಕುವವರು, ದಿಕ್ಕು ತಪ್ಪಿದವರು 'ಫಿಫ್ತ್ ಮೇನ್ ಎಲ್ಲಿದೆ?' ಅಂತ ಯಾರನ್ನಾದರೂ ಕೇಳಿದರೆ ಅವರು ಮೇಲೆ-ಕೆಳಗೆ ನೋಡುವುದು ಖಂಡಿತ. ಅದೇ ಫಿಫ್ತ್ ಕ್ರಾಸ್ ಎಲ್ಲಿದೆ ಅಂತಲೋ, ಏಯ್ಥ್ ಕ್ರಾಸು, ಟೆನ್ತ್ ಕ್ರಾಸು, ಏಯ್‌ಟೀನ್ತ್ ಕ್ರಾಸು ಎಲ್ಲಿದೆ ಅಂತ ಯಾರನ್ನಾದರೂ ಕೇಳಿ ನೋಡಿ, ಕಣ್ಣು ಹೊಡೆಯುವುದರೊಳಗೆ ಹೇಳುತ್ತಾರೆ: 'ಹೀಂಗೆ ಸಂಪಿಗೆ ರೋಡಲ್ಲಿ ಸ್ಟ್ರೇಟಾಗಿ ಹೋಗಿ.. ಫಿಫ್‌ಟೀನ್ತು, ಸಿಕ್ಸ್‌ಟೀನ್ತು, ಸೆವೆಂಟೀನ್ತು ಆದ್ಮೇಲೆ ಏಯ್‌ಟೀನ್ತ್ ಕ್ರಾಸ್ ಸಿಗುತ್ತೆ' ಅಂತ!

ಮಲ್ಲೇಶ್ವರಂ ಸುಂದರಿಯರನ್ನಿಟ್ಟುಕೊಂಡು ಪರಮೇಶ್ವರ ಗುಂಡ್ಕಲ್ ಬಹಳ ಹಿಂದೆಯೇ ಒಂದು ಚಂದ ಕತೆ ಬರೆದಿದ್ದರು. ನಮ್ಮ ಮಲ್ಲೇಶ್ವರಂನ ಸುಂದರಿಯರು ಸೆಂಟ್ರಲ್, ಗರುಡ, ಫೋರಂ ಮಾಲ್‌ಗಳಲ್ಲಿ ಕಾಣಲ್ಪಡುವ ಸುಂದರಿಯರಂತಲ್ಲ. ಅಥವಾ ಜಯನಗರ ಫೋರ್ತ್ ಬ್ಲಾಕ್, ಬನಶಂಕರಿ ಕಾಂಪ್ಲೆಕ್ಸುಗಳಲ್ಲಿ ಕಾಣಸಿಗುವ ಹುಡುಗಿಯರಂತೆಯೂ ಅಲ್ಲ. ಎಂಜಿ ರೋಡು, ಬ್ರಿಗೇಡ್ ರೋಡು, ಕಮರ್ಶಿಯಲ್ ಸ್ಟ್ರೀಟುಗಳಲ್ಲಿ ಶಾಪಿಂಗ್ ಮಾಡುವ ಅರ್ಧಮರ್ಧ ಬಟ್ಟೆ ಧರಿಸಿದ ಹುಡುಗಿಯರ ಹಾಗಂತೂ ಅಲ್ಲವೇ ಅಲ್ಲ. ನೀವು ಫೋರಂ ಮಾಲ್, ಗರುಡ ಮಾಲ್, ಎಂಜಿ ರಸ್ತೆಗಳಲ್ಲಿ ಒಂದೇ ಒಂದು ಚೂಡಿದಾರ ಧರಿಸಿದ ಹುಡುಗಿಯನ್ನೋ ನೀಟಾಗಿ ಸೀರೆ ಉಟ್ಟುಕೊಂಡ ಗೃಹಿಣಿಯನ್ನೋ ಕಾಣುವುದು ಕಷ್ಟಸಾಧ್ಯ.

ಆದರೆ ಮಲ್ಲೇಶ್ವರಂ ಹಾಗಲ್ಲ. ಇಲ್ಲಿ ಅತ್ಯಂತ ಲಕ್ಷಣವಾಗಿ ಗರಿಗರಿ ಸೀರೆ ಉಟ್ಟುಕೊಂಡ ಗೃಹಿಣಿ, ಪಿಂಕ್ ಕಲರ್ ಚೂಡಿಯ ಮೇಲೆ ಹಳದಿ ದುಪಟ್ಟಾ ಹೊದ್ದ ತರುಣಿ, ತನ್ನ ಲೋ-ಹೀಲ್ಡ್ ಚಪ್ಪಲಿ ಧರಿಸಿದ ಕಾಲನ್ನೇ ನೋಡುತ್ತ ನಡೆಯುತ್ತಿರುವ ಹುಡುಗಿ -ಕಣ್ಣಿಗೆ ಬೀಳುತ್ತಾರೆ. ಇವರು ಬಿಎಂಟಿಸಿ ಬಸ್ಸು ಅಥವಾ ಆಟೋದಲ್ಲಿ ಬಂದಿರುತ್ತಾರೆ. ಕೈಚೀಲ ಹಿಡಿದುಕೊಂಡಿರುತ್ತಾರೆ. ಅಂಗಡಿಗಳವರ ಬಳಿ ಚೌಕಾಶಿ ಮಾಡುತ್ತಾರೆ. ಒಮ್ಮೆ ಬಂದರೆಂದರೆ, ತರಕಾರಿ, ಹಣ್ಣು, ಪೂಜೆಯ ಸಾಮಗ್ರಿ, ಬಿಂದಿ, ಬ್ಲೌಸಿನ ಬಟ್ಟೆ ಎಲ್ಲವನ್ನೂ ಕೊಂಡು ಹೋಗುತ್ತಾರೆ. ನವದಂಪತಿಗಳು ಇಲ್ಲಿ ಕೈಕೈ ಹಿಡಿದು ನಡೆಯುತ್ತಾರೆ. ಫುಟ್‌ಪಾತಿನಲ್ಲಿ ದಾಳಿಂಬೆ ಇಟ್ಟುಕೊಂಡವನ ಬಳಿ ರೇಟ್ ಕೇಳಿ ಸುಮ್ಮನೆ ಮುನ್ನಡೆಯುತ್ತಾರೆ. ಇವರ ಪರ್ಸಿನಲ್ಲಿ ನೋಟುಗಳು, ಅದರಲ್ಲೂ ಹತ್ತು-ಇಪ್ಪತ್ತು ರೂಪಾಯಿಗಳ ಹಳೆಯ ನೋಟುಗಳು ಇರುತ್ತವೆ. ಪಕ್ಕದ ಮನೆಯವಳೊಂದಿಗೆ ಬಂದ ಗೃಹಿಣಿ, ಜನತಾದಲ್ಲಿ ಕಾಫಿ ಕುಡಿದ ಬಿಲ್ಲು ಕೊಡುವಾಗ 'ನಾನು ಕೊಡ್ತೇನೆ ನಾನು ಕೊಡ್ತೇನೆ' ಅಂತ ಕಿರುಚುತ್ತಾಳೆ.

ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ ಮಲ್ಲೇಶ್ವರಂ ಎಂದರೆ ಮಲ್ಲೇಶ್ವರಂ ಸರ್ಕಲ್ ಅಷ್ಟೇ ಆಗಿತ್ತು ನನಗೆ. ಮಹಾಲಕ್ಷ್ಮಿ ಲೇಔಟಿನಲ್ಲಿದ್ದ ಕಸಿನ್ನಿನ ಮನೆಯಲ್ಲಿ ತಂಗಿದ್ದ ನಾನು, ದಿನವೂ ಬಸ್ ಹತ್ತಿ ಬಂದು ಮಲ್ಲೇಶ್ವರಂ ಸರ್ಕಲ್ಲಿನಲ್ಲಿ ಇಳಿದುಕೊಂಡು, ಅಲ್ಲಿಂದ ಶಿವಾಜಿನಗರಕ್ಕೆ ಹೋಗುವ ಬಸ್ ಹತ್ತಿ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿದ್ದ ಆಫೀಸಿಗೆ ಹೋಗುತ್ತಿದ್ದೆ. ಆಗ ನನಗೆ ಮಲ್ಲೇಶ್ವರಂ ಸರ್ಕಲ್ ಎಂಬುದು ಒಂಥರಾ ಬಸ್ ಛೇಂಜ್ ಮಾಡುವ ಜಂಕ್ಷನ್ ಆಗಿತ್ತು. ನವರಂಗ್ ಕಡೆಯಿಂದ ಬರುವ ಬಸ್‌ಗಳು, ಮಾರ್ಗೋಸಾ ರೋಡಿನಲ್ಲಿ ಬಂದು ಸರ್ಕಲ್ ಕಡೆ ತಿರುಗಿಕೊಳ್ಳುತ್ತಿದ್ದ ಬಸ್‌ಗಳು -ಎರಡರ ಕಡೆಗಷ್ಟೇ ನನ್ನ ಗಮನ ಕೇಂದ್ರೀಕೃತವಾಗಿರುತ್ತಿತ್ತು. ಯಾವುದೇ ರಾಜಕೀಯ ಸಮಾರಂಭಕ್ಕೆ ಸಾಕಾಗುವಷ್ಟು ಜನರನ್ನು ಹೇರಿಕೊಂಡು ಬರುತ್ತಿದ್ದ ಈ ಬಸ್ಸುಗಳಲ್ಲಿ, 'ಶಿವಾಜಿನಗರ' ಎಂಬ ಬೋರ್ಡ್ ಇರುವ ಬಸ್ ಕಂಡರೆ ಸಾಕು, ಓಡಿ ಹೋಗಿ ಫುಟ್‌ಬೋರ್ಡ್‌ನಲ್ಲಿ ನೇತಾಡಲು ಹವಣಿಸುತ್ತಿದ್ದೆ. ಬರೀ ಅದೇ ಗಡಿಬಿಡಿಯಲ್ಲಿರುತ್ತಿದ್ದ ನನಗೆ, ನಾನು ನಿಂತಿರುತ್ತಿದ್ದ ಜಾಗದಿಂದ ಮೂರೇ ಕ್ರಾಸುಗಳ ಹಿಂದೆ ಏಯ್ಥ್ ಕ್ರಾಸ್ ಎಂಬ, ಸುಂದರಿಯರು ನಡೆದಾಡುವ ಹಾದಿ ಇದೆ ಎಂಬ ಕಲ್ಪನೆಯೂ ಇರಲಿಲ್ಲ.

ಒಂದ್ಯಾವುದೋ ಶುಭ ಭಾನುವಾರ ಸಂಜೆ, ನನ್ನ ಕಸಿನ್ನು "ಮಲ್ಲೇಶ್ವರಮ್ಮಿಗೆ ಹೋಗ್ಬರನ ಬಾರಲೇ" ಎಂದು ನನ್ನನ್ನೆಳೆದುಕೊಂಡು ಹೊರಟ ನೋಡಿ, ನನ್ನ ಕಣ್ಗಳ ಭಾಗ್ಯದ ರೆಪ್ಪೆಗಳು ತೆರೆದುಕೊಂಡೇ ಬಿಟ್ಟವು! ಏಯ್ಥ್ ಕ್ರಾಸಿನಲ್ಲಿ ನಡೆಯುತ್ತಿದ್ದರೆ ಒಂಥರಾ ಸ್ವರ್ಗದಲ್ಲಿ ನಡೆಯುತ್ತಿರುವ ಅನುಭವ.. ಎಲ್ಲಿ ನೋಡಿದರೂ ಬಣ್ಣಬಣ್ಣದ ಲೈಟುಗಳು, ಮೈಕೈಗೆ ಒಡಾಯುವ ಗಿಜಿಗಿಜಿ ಜನ, ರಸ್ತೆಯ ಇಕ್ಕೆಲಗಳಲ್ಲೂ ವಿವಿಧ ರೀತಿಯ ಚಿತ್ತಾಕರ್ಷಕ ವಸ್ತುಗಳನ್ನಿಟ್ಟುಕೊಂಡು ಮಾರುತ್ತಿರುವವರ ಕೂಗು, ಫಳಫಳ ಹೊಳೆಯುತ್ತ ಆಕಾಶಕ್ಕೆ ಚಿಮ್ಮಿ ಮತ್ತೆ ಕೆಳಗಿಳಿಯುವ ಯಾವುದೋ ಆಟಿಕೆ... ಓಹ್! ಥೇಟ್ ಸಾಗರದ ಜಾತ್ರೆಯೇ ಆವಿರ್ಭವಿಸಿದಂತೆ! ಹುಡುಗಿಯರಂತೂ ಅದೆಷ್ಟು ಚಂದ ಅಲಂಕಾರ ಮಾಡಿಕೊಂಡು ಓಡಾಡುತ್ತಿದ್ದರೆಂದರೆ, ವರ್ಷದೆಲ್ಲ ಹಬ್ಬಗಳೂ ಒಂದೇ ದಿನ ಜರುಗಿದಂತೆನಿಸಿ ನಾನಂತೂ ಏಯ್ಥ್ ಕ್ರಾಸಿಗೆ ಫಿದಾ ಆಗಿಹೋದೆ.

ಆಮೇಲಿನ ನನ್ನ ವೀಕೆಂಡುಗಳಿಗೆ ಏಯ್ಥ್ ಕ್ರಾಸು ಹಾಟ್‌ಸ್ಪಾಟ್ ಆಗಿಹೋಯಿತು. ಯಾವಾಗ ಬಂದರೂ ತನ್ನ ಇಕ್ಕೆಲದ ವೈಭವಗಳನ್ನು ತೆರೆದು ಸ್ವಾಗತಿಸುತ್ತಿತ್ತು. ನಾನು ಏಯ್ಥ್ ಕ್ರಾಸಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಿದೆ, ಊರಿಗಿಂತ ಮೊದಲು ಬಂದ ಮಾವಿನಕಾಯಿ ಕೊಂಡೆ, ಜನತಾದಲ್ಲಿ ಮಸಾಲೆ ದೋಸೆ ತಿಂದೆ, ತಂಗಿ ಜೊತೆ ಕೋಲ್ಡ್ ಕಾಫಿ ಕುಡಿದೆ, ನಿರ್ಮಲ ಶೌಚಾಲಯದಲ್ಲಿ ಉಚ್ಚೆ ಹೊಯ್ದೆ.

ಊಹುಂ, ಅಸಂಖ್ಯ ಸಲ ಓಡಾಡಿದರೂ ಏಯ್ಥ್ ಕ್ರಾಸ್ ನನಗೆ ಬೇಸರ ತರಿಸಲಿಲ್ಲ. ಏನಾದರೊಂದು ಹೊಸತನ ಅಲ್ಲಿ ಇದ್ದೇ ಇರುತ್ತಿತ್ತು. ಮಲ್ಲೇಶ್ವರಂನ ಪಿಜಿಯೊಂದರಲ್ಲಿ ತಂಗಿದ್ದಾಗಲಂತೂ ಏಯ್ಥ್ ಕ್ರಾಸ್ ನನಗೆ ಸಂಜೆಯ ಹೊತ್ತಿನ ವಾಕಿಂಗ್ ವೇ ಆಗಿಬಿಟ್ಟಿತ್ತು. ಮಲ್ಲೇಶ್ವರಂ ನನಗೆ ಬೇಸರ ತರಿಸಿದ್ದು ಇಲ್ಲವೇ ಇಲ್ಲ. ಪ್ರತಿದಿನ ಅಲ್ಲಿಗೆ ನನ್ನ ಪಾದಸೇವೆ ನಡೆದೇ ಇರುತ್ತಿತ್ತು. ಅದೊಂದು ಘಟನೆ ಆಗುವ ತನಕ...

* * *

ಅತ್ತಿಗೆಯನ್ನು ಟ್ರೇನ್ ಹತ್ತಿಸಿ ಮನೆಗೆ ಬಂದು ಅಷ್ಟು ಬರೆದವನಿಗೆ ಆಮೇಲೆ ಸಿಕ್ಕಾಪಟ್ಟೆ ನಿದ್ದೆ ಬಂದು ಮಲಗಿಬಿಟ್ಟೆ. ಮರುದಿನ ಬೆಳಗ್ಗೆ ಇದನ್ನು ಮತ್ತೆ ಓದಿಕೊಂಡಾಗ, ಇದನ್ನು ಮುಂದುವರೆಸಬಾರದು, ಇಲ್ಲಿಗೇ ಬಿಟ್ಟುಬಿಡಬೇಕು, ಆ ಘಟನೆಯ ಬಗ್ಗೆ ಈಗಲೇ ಬರೆಯಬಾರದು ಅನ್ನಿಸಿತು. ಲ್ಯಾಪ್‌ಟಾಪ್ ಮುಚ್ಚಿ ಸುದೀರ್ಘ ನಿಟ್ಟುಸಿರು ಬಿಟ್ಟು ಮೇಲೆ ನೋಡಿದೆ. ತಿರುಗುತ್ತಿದ್ದ ಜೋರಿಗೆ ಫ್ಯಾನಿನ ಅಲಗುಗಳು ಮಾಯವಾಗಿದ್ದವು.

23 comments:

ರತನ್ ಜಾಜೂರು said...

ಬರಹ ನವಿರಾಗಿದೆ. ಆದರೆ ಹಳ್ಳಿಗಳಲ್ಲಿ ಬೆಳೆದುಬಂದವರ ಪ್ರಾಬ್ಲೆಮ್ ಇದಾ? ಅವರು ಇಷ್ಟೊಂದು ತರಹೇವಾರಿ ಜನರನ್ನು, ವಸ್ತುಗಳನ್ನು, ಅಂಗಡಿಗಳನ್ನು, ಸಂಗತಿಗಳನ್ನು , ಮನಸ್ಸುಗಳನ್ನು, ಹುಡುಗಿಯರನ್ನು ಹುಟ್ಟಿದಾಗಿನಿಂದ ಒಟ್ಟಿಗೇ ನೋಡಿರುವುದಿಲ್ಲ. ಸ್ವಲ್ಪ ಸೊಗಡು, ಸ್ವಲ್ಪ ಬೆರಗು, ಸ್ವಲ್ಪ ಥಳುಕು ಇರುವ ಮಲ್ಲೇಶ್ವರಂ, ಗಾಂಧೀಬಜಾರ್ ಗಳಂತಹ ಪ್ರದೇಶಗಳು ಅಪ್ಯಾಯಮಾನವಾಗುತ್ತವೆ. ನಗರದಲ್ಲಿ ಇವೆಲ್ಲವೂ ಅದ್ಭುತವಾಗಿ ಕಾಣಿಸುತ್ತವೆ. ನಿಮ್ಮ ಬರಹದ ಶೈಲಿ ಎಷ್ಟು ಆಪ್ತವಾಗಿದೆ ಎಂದರೆ ಸಂಕ್ರಾಂತಿ ಹಿಂದಿನ ದಿನದ ಸಡಗರ ಕಣ್ತುಂಬಿಕೊಳ್ಳಲು ಎಯ್ತ್ ಕ್ರಾಸಿಗೆ ಇವತ್ತು ಸಂಜೆ ಹೋಗೋಣ ಎನ್ನಿಸುತ್ತಿದೆ.

ಚಿತ್ರಾ said...

ಹ್ಮ್ಮ್.. ನೀ ಒಬ್ಬಂವ ಕಮ್ಮಿ ಆಗಿದ್ದೆ installment ಕಟ್ಟಲೆ ( ಕಂತಿನಲ್ಲಿ ಬರೆಯಲೆ ) !
ಮಲ್ಲೇಶ್ವರಂ ೮ನೇ ಕ್ರಾಸ್ ನಲ್ಲಿ ನಾನೂ ಸುಮಾರು ಸಲ ಓಡಾಡಿದ್ದಿ . ಆದರೆ ಸುಮಾರು ೧೫ ವರ್ಷಕ್ಕೂ ಹಿಂದಿನ ಮಾತು ಅದು. ಆಗ ಇನ್ನೂ ಬೆಂಗಳೂರು ಗಲ್ಲಿಗೊಂದು ' ಮಾಲ್' ಗಳನ್ನು ಕಂಡಿರಲಿಲ್ಲ !
ಹಾಗಾಗಿ, ಇದ್ದ ಕೆಲವೇ shopping hotspot ಗಳಲ್ಲಿ ೮ನೇ ಕ್ರಾಸ್ ಒಂದಾಗಿತ್ತು ಅಂತ ಹೇಳಲಕ್ಕು . ಎಂ ಜಿ ರೋಡ ಅಥವಾ ಕ್ಯಾಂಪ್ ನ ಯಾವುದೇ ಏರಿಯಾ ಕ್ಕೆ ಹೋಗಕ್ಕಿಂತ ನಂಗ ಹಳ್ಳಿಯಿಂದ ಬಂದ ಹುಡುಗಿಯರು ಮಲ್ಲೇಶ್ವರಂ ಗೋ , ಜಯನಗರ ಫೋರ್ತ್ ಬ್ಲಾಕಿಗೋ ಅಥವಾ ಗಾಂಧಿಬಜಾರಿಗೋ ಹೋಗದಾಗಿತ್ತು .
ದನ್ನೆಲ್ಲಾ ಮತ್ತೊಂದು ಸಲ . ನೆನಪು ಮಾಡಿಕ್ಯಳ ಹಾಂಗೆ ಮಾಡಿದ್ದಕ್ಕೆ ... ಥ್ಯಾಂಕ್ಸ್ !

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದಿರಾ
ಮಲ್ಲೇಶ್ವರಂ ಗೆ ಹಬ್ಬದ ಸಂದರ್ಭದಲ್ಲಿ ಹೋಗುವದೇ ಒಂದು ಸಂಭ್ರಮ ಎಂದು ನಂಗೆ ಅನ್ನಿಸುತ್ತದೆ
ಆ ಜನರು ಹಬ್ಬಕ್ಕಾಗಿ ಪೂಜಾ ಸಾಮಾಗ್ರಿ ಕೊಳ್ಳುವ ಪರಿ, ಸಣ್ಣ ಪುಟ್ಟ ಜಗಳ,
ಕಿರುಚಾಟ, ಒಟ್ಟಿನಲ್ಲಿ ಮಲ್ಲೇಶ್ವರಂ ಗೆ ಹೋದ ಹಾಗೆ ಮಾಡಿದಿರಿ ಒಮ್ಮೆ

Anonymous said...

ಎಯ್ತ್ ಕ್ರಾಸ್ ನ್ನು ಏಯ್ಡ್ಸ್ ಕ್ರಾಸ್ ರೀತಿ ಬರೆದು ಭಯ ಹುಟ್ಟಿಸ್ತೀರಲ್ರೀ..?:)

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಅಷ್ಟೆಲ್ಲಾ ಹೆದ್ರಿಕೆ, ಬೇಜಾರು, ನಿರಾಸೆ ಆಗಷ್ಟು ಎಂತಾ ಆಗೋತು..?!
ಸಂಜೆ ಹೊತ್ತಿಗೆ ಅಲ್ಲಿ ಓಡಾಡಿದ್ರೆ ಸಿರ್ಸಿ, ಸಾಗರ ಜಾತ್ರೆ ಪೇಟೆ ನೆನಪಾಗದು ಖಂಡಿತ!

ದಿವ್ಯಾ ಮಲ್ಯ ಕಾಮತ್ said...

ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುವ ಬರಹ.. Awesome :-)

Uma Bhat said...

ಮಲ್ಲೇಶ್ವರಂ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಚೌಡಯ್ಯ ಕಲಾ ಭವನ, ಅನನ್ಯ, ಹವ್ಯಕ ಕಲಾವೇದಿಕೆ, ಇವೆಲ್ಲಾ ಸಂಗೀತ ರಸಿಕರ ನೆಚ್ಚಿನ ತಾಣಗಳೇ ಸರಿ. ನಾನು ಪರದೇಶವಾಸಿಯಾಗಿ ಐದು ತಿಂಗಳವಾಯಿತು. ಇನ್ನೊಂದು ತಿಂಗಳಲ್ಲಿ ಮಲ್ಲೇಶ್ವರಂ ಸೇರುವ ಕನಸು ಕಾಣುತ್ತಿದ್ದೆ. ಆದರೆ ಅದಕ್ಕೂ ಮೊದಲೇ ಅದರ ದರ್ಶನ ಮಾಡಿಸಿದ್ದೀರಿ ದನ್ಯವಾದಗಳು.

ಸಂದೀಪ್ ಕಾಮತ್ said...

"ಪ್ರತಿದಿನ ಅಲ್ಲಿಗೆ ನನ್ನ ಪಾದಸೇವೆ ನಡೆದೇ ಇರುತ್ತಿತ್ತು. ಅದೊಂದು ಘಟನೆ ಆಗುವ ತನಕ..."

ಅದೊಂದು ಘಟನೆ ಬಗ್ಗೆ ಭಾಗ ಎರಡರಲ್ಲಿ ಬರೀತೀಯ ಅಂದುಕೊಂಡಿದ್ದೀನಿ.

ಬರೆಯದೇ ಇದ್ರೆ ಮತ್ತೆ ಮಲ್ಲೇಶ್ವರಂ ಕಡೆ ತಲೆ ಹಾಕೋಕೂ ಬಿಡಲ್ಲ ಹುಷಾರ್.

umesh desai said...

ಸುಶ್ರುತ ಚೆನ್ನ ನಿನ್ನ ಬರಹ. ಆದ್ರೆ ಈ ಬೆಂಗಳೂರಿಗರಿಗೆ ಮಾತ್ರ ಇರೋ ಆಬ್ಸೇಷನ್ನು ನಿಂಗೂ ಇದೆಯಲ್ಲ...! ನಮ್ಮಂತಹವರಿಗೆ ಇಡೀ ಬೆಂಗಳೂರೇ ಒಂಥರಾ ಅಪರಿಚಿತ ಇಲ್ಲಿಯ ತಿನಿಸಾಗಲಿ.
ಮಂದಿಯಾಗಲಿ ಅವರು ಇನ್ನೂ ದೂರಾನೇ ಇದ್ದಾರೆ ಒಂದು ವೇಳೆ ಈ ಊರು ಹತ್ತಿರವಾದರೆ ಎದೆಯಲ್ಲಿ ಹುದುಗಿದ ಹುಬ್ಬಳ್ಳಿ ಕರಗಬಹುದು ಎಂಬ ಭಯ ಇದೆ.

Anonymous said...

malleshwaram 8th cross is our (me and my two daughters) favorite window shopping spot.
11 th cross ನಲ್ಲಿರೋ Venugopal swami temple ಅಂಗಳದಲ್ಲಿ ಕೂರೋದು ಇನ್ನೊಂದು favorite pass time.
ಹಾಗೇ ಮಂಗಳೂರು ಸ್ಟೋರ್ ಗೆ ಒಂದು ಭೇಟಿ. ಅ ಮೇಲೆ pizza corner/Doughtnut Baker (New). ಅಥವಾ ಊರಿನಿಂದ ಯಾರಾದ್ರು ಬಂದ್ರೆ ’ಜನತಾ ಹೋಟಲ್ ’ ಮಸಾಲೆ ದೋಸೆ
:-)
ಮಾಲತಿ ಎಸ್.

Anonymous said...

arere!!! the last paragraph escaped my notice. read it now

:-)

malathi S

Karthik Kamanna said...

ರೈಲ್ವೆ ಸ್ಟೇಷನ್ನಿನ ಸಾಲುಗಳು "ತೂಫಾನ್ ಮೇಲ್" ನೆನಪು ಮಾಡಿಕೊಟ್ಟಿತು. ಆದರೆ ಕೊನೇಲಿ ಸಶೇಷ ಅಂದ್ಬಿಟ್ಟು ತಲೆ ಕೆರ್ಕೊಳೋ ಥರ ಮಾಡ್ಬಿಟ್ರಿ! ಸುಂದರ ಬರಹ.

Shree said...

ಯಾಕೋ ಫುಲ್ ಸಸ್ಪೆನ್ಸ್ ಪಿಚ್ಚರ್ ಮೂಡಲ್ಲಿದ್ಯಾ? :-) ಇನ್ನೊಂದು ಭಾಗದಲ್ಲಿ ಏನಿರುತ್ತೋ ಏನೋ...!!!
ಎಯ್ತ್ ಕ್ರಾಸ್ ಡೆಡ್ ಎಂಡಿಗೆ ಮುಂಚೆ ಲೆಫ್ಟ್ ತಗೊಂಡ್ರೆ ಅಲ್ಲಿ ಕೊಡಿಯಾಲ್ ಅಂತ ಹೋಟೆಲ್ ಇದೆ, ಕೊಡೆಯಾಲದವರೆಲ್ಲರೂ ಹೋಗಲೇ ಬೇಕಾದ ಹೋಟೆಲ್... ನೀರ್ ದೋಸೆ, ಅಕ್ಕಿ ಶಾವಿಗೆ-ತೆಂಗಿನ್ ಕಾಯಿ ಹಾಲು, ಮಂಗ್ಳೂರ್ ಭಜ್ಜಿ, ಪುಂಡಿ, ಅಡ್ಯ ಇತ್ಯಾದಿ ಮಂಗ್ಳೂರ ತಿಂಡಿಗಳನ್ನೊಳಗೊಂಡ ಅನ್-ಲಿಮಿಟೆಡ್ ಭೋಜನ ಸವಿಯಲಿಷ್ಟವಿದ್ದರೆ ತಪ್ಪದೇ ಅಲ್ಲಿ ಹೋಗಬೇಕು...(ಸಾಗರದವ್ರೂ ಹೋಗ್ಬಹುದು, ಪರ್ವಾಗಿಲ್ಲ...:-) )

ಸಿಂಧು sindhu said...

ಸು,

:)

ಅಷ್ಟಲ್ಲದೆ ರಾಜಧಾನಿ ಅನ್ನಕ್ಕಾಗ್ತಾ? :)

ಏನೇ ಆದ್ರೂ ಬಸವನಗುಡಿ ಬಸವನಗುಡೀನೇ.. ಮನಸು ಗಾಂಧಿಬಜಾರೇ. :)
ಮಲ್ಲೇಶ್ವರಂ ಮಲ್ಲೇಶ್ವರಮ್ಮೇ.. :)
ನಮ್ಮನೇಲಿ ಒಬ್ಬಂವ ಸಾಗ್ರ ಹೋಟ್ಲು ಸರ್ಕಲ್ಲಿಗೆ ಸಮಾನವಾಗಿದ್ದು ಯಾವ್ದೂ ಇಲ್ಲೆ ಅಂತ ಹೇಳ್ತಾ ಇದ್ದ.

ನಿನ್ನ ಬರಹ ಎಂದಿನಂತೆ ನವಿರು ಭಾವಗಳ ಆಹ್ಲಾದದ ಮೆರವಣಿಗೆ.

ಪ್ರೀತಿಯಿಂದ
ಸಿಂಧು

Anonymous said...

ತುಂಬಾ ಚೆನ್ನಾಗಿ ಬರೆದಿದ್ದೀರಾ. ಎಯ್ಡ್ತ್ ಕ್ರಾಸ್ ನಲ್ಲಿ ಒಮ್ಮೆ ಓಡಾಡಿದ ಹಾಗಾಯಿತು. ಜನತಾ ಹೋಟೆಲ್, ಹತ್ತು ರುಪಾಯಿ ಪಿಡ್ಜಾ, ಕನ್ನಿಕ ಪರಮೇಶ್ವರಿ ದೇವಸ್ಥಾನ, ಸದಾ ಇರುವ ಹಬ್ಬದ ಸಡಗರ.... ನನ್ನ ಪ್ರಕಾರ ಜಯನಗರ ಮಲ್ಲೇಶ್ವರದ ಮುಂದೆ ತೀರಾ ಸಪ್ಪೆ. ಎರಡೂ ಕಡೆ ಪಾನಿಪುರಿ/ಚುರುಮುರಿ ಗಾಡಿಗಳ ರುಚಿ ನೋಡಿದ್ರೆ ಗೊತ್ತಾಗುತ್ತೆ:) ಊಟ, ನೋಟ, ಪಾಠ...ಎಲ್ಲಾತರಲ್ಲೂ ಮಲ್ಲೇಶ್ವರಂ ನಂ ೧.

ರಂಜನಾ ಹೆಗ್ಡೆ said...

aha sakatha alla puttanna...
idenu serial lla?

Unknown said...

ಉತ್ತಮ ಬರಹ , ಚೆನ್ನಾಗಿ ಓದಿಸಿಕೊಂಡು ಹೋಯಿತು

ಮನದಾಳದಿಂದ............ said...

ನಾನು ಬೆಂಗಳೂರಿನಲ್ಲಿ ಐದು ವರ್ಷ ಇದ್ದರೂ ಮಲ್ಲೇಶ್ವರಂಗೆ ಹೋಗಿದ್ದೇ ಇಲ್ಲ! ಅಲ್ಲಿಯ ಬಗ್ಗೆ ತುಂಬಾ ಚನ್ನಾಗಿ ವಿವರಿಸಿದ್ದೀರಾ. ನಿಮ್ಮ ಮನದಾಳದ ಮಾತುಗಳು ಮೂಡಿ ಬಂದ ಪರಿ ಸುಂದರವಾಗಿದೆ. ಆದರೂ ಅಲ್ಲೊಂದು ಸಸ್ಪೆನ್ಸ್ ಇಟ್ಟುಬಿತ್ರಲ್ಲ! ಇರಲಿ, ಕಾಯೋಣ. keep writing.

ಜಲನಯನ said...

ಸುಶ್ರೂತ, ನನ್ನನ್ನ ೧೯೭೫-೭೭ ಕ್ಕೆ ಎಳೆದು ಬಿಟ್ಟಿರಿ....ಮಲ್ಲೇಶ್ವರಂ...ಬಿಕೋ ಎನ್ನುವ ಸಮಯ...ಸಂಪಿಗೆ ನಂತರ ಮೈನ್ ರೋಡು ಅಕ್ಕ ಪಕ್ಕದ ಅಂಗಡಿಗಳು..೧೮ಥ್ ಕ್ರಾಸ್, ಇನ್ನೂ ಒಂದೆರಡು ಬಿಟ್ರೆ...ನಾವೆಲ್ಲಾ ಚಿಟ್ಟೆ ಹಿಡಿತಿದ್ದದ್ದು..ಬ್ರಿಗೇಡ್...ಲಾಲ್ ಬಾಗ್ ಹೀಗೆ...ಸಂಜಯ ಟಾಕೀಸ್..ಗಾಂಧಿ ಬಜಾರ್ ಜಾತ್ರೆ..ಶಂಕ್ರಯ್ಯ ಹಾಲ್ (ನನಗೆ ಪಿಯು ಪರೀಕ್ಷೆ ಸಮಯದಲ್ಲಿ ಪುಕ್ಕಟೆ ಕೋಚಿಂಗ್ ಕೊಡ್ತಿದ್ದ ಜಾಗ ಹೀಗೆ)....thanks..good description.

Anonymous said...

swaami, Malleshwaram Baga 1 antha baredu sumaru 15 dinagale kalitha banthu,innu namma talmeyannu kenakabedi mundina kantannu bega baredu haaki.Innu enadaru tada madidare enmunde malleshwaramge kaliduvadakke biduvudilla husharrrr!!!!!!!!!!

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. :-)

ಮೊದಲೇ ಹೇಳಿದಂತೆ, ಇದೊಂದು ಅರ್ಧ-ಬರಹ. ಇದಕ್ಕೆ ಭಾಗ-೨ ಇಲ್ಲ. ನೀವು ಅದೆಷ್ಟೇ ಕೋಪಗೊಳ್ಳಿ ನನ್ನ ಮೇಲೆ, ನಾನು ಬರೆಯೊಲ್ಲ. ;)

ಅನಿಕೇತನ ಸುನಿಲ್ said...

Adenu ghatane anta helbidappa saaku :-) Anyways aa kade hogi nodbeku annisuvante maadideeya ;-)

ಗಿರೀಶ ರಾಜನಾಳ said...

ಈ ಬರಹ ತುಮ್ಬಾ ಚೆನ್ನಾಗಿದೆ.. ಆದರೆ ಭಾಗ ಒನ್ದು ಅನ್ತ ಹಾಕಿ ತಪ್ಪು ಮಾಡಿಬಿಟ್ರಿ ಈಗ ನಮಗೆ ಎರಡನೆ ಕನ್ತು ಬೇಕು.
ಸಸ್ಪನ್ಸ್ ಇಡಬೇಡಿ ಹೇಳೀಬಿಡಿ.....