Tuesday, April 06, 2010

ಬೆಳಕ ಹೆಜ್ಜೆಯನರಸಿ...

ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನನ್ನ ಕಥೆ ಓದಿ, ಅದು ಹೇಗೋ ವಿಳಾಸ ಪತ್ತೆ ಮಾಡಿ ಪತ್ರ ಬರೆದಿದ್ದ, ಸಿರಗುಪ್ಪದ ವಿ. ಹರಿನಾಥ ಬಾಬು ತಮ್ಮ ಚೊಚ್ಚಿಲ ಕವನ ಸಂಕಲನ 'ಬೆಳಕ ಹೆಜ್ಜೆಯನರಸಿ' ಕಳುಹಿಸಿಕೊಟ್ಟಿದ್ದಾರೆ. ಸಧ್ಯ ಗಂಗಾವತಿಯಲ್ಲಿ ಉಪ ಖಜಾನಧಿಕಾರಿಯಾಗಿರುವ ಬಾಬು ಅವರ ಕವಿತೆಗಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಲೇ ಇರುತ್ತವೆ. ಎಲ್ಲ ಉತ್ತರ ಕರ್ನಾಟಕದ ಕವಿಗಳಂತೆ ಬಾಬು ಅವರ ಕವಿತೆಗಳಲ್ಲೂ ಬಿಸಿಲು, ಕರಿಮಣ್ಣು, ಅವ್ವ, ರೊಟ್ಟಿ, ಬಡತನ, ಹಟ್ಟಿ, ಹಸಿವು, ಜಾತಿ, ಜೀತಗಳಿವೆ. ರಾಜಕಾರಣಿಗಳ ಭ್ರಷ್ಟತೆಯೆಡೆಗಿನ ಪ್ರತಿಭಟನೆಯಿದೆ. ಮತ-ಧರ್ಮಗಳಂಥ ವಿಷಯಗಳ ಮುಂದೆ ಮೌಲ್ಯ ಕಳೆದುಕೊಳ್ಳುತ್ತಿರುವ ಮಾನವೀಯತೆಯ ಬಗ್ಗೆ ತುಡಿತವಿದೆ. ದೊಡ್ಡ ದೇಶಗಳು ಯುದ್ಧದಂಥ 'ಆಟ' ಆಡಿಸುವುದರಿಂದ ಆಗುವ ಹಾನಿಗಳೆಡೆಗೆ ಬೆಳಕು ಚೆಲ್ಲುವ ಪ್ರಯತ್ನವಿದೆ.

"ಬತ್ತಿದ ಮೊಲೆಯ ತಾಯಂದಿರು ಬಂದೂಕುಗಳ ಹಿಡಿದು ಒಲೆ ಹಚ್ಚಿದರೆ / ಅನ್ನದ ಡಬರಿಯಲಿ ತಮ್ಮದೇ ಕೂಸುಗಳು ಕುದಿಯುತ್ತಿವೆ ಕೊತ ಕೊತ / ಸಣ್ಣ ಕರುಳು, ಬೋಟಿ, ಖಲೀಜ" -ದಂತಹ ಬೆಚ್ಚಿ ಬೀಳಿಸುವ ರೂಪಕಗಳನ್ನು ಕಟ್ಟುವ ಬಾಬು, "ಇನ್ನೆಷ್ಟು ದಿನ ಮಿಸುಕಾಡದ ದೇವರುಗಳ ಮುಂದೆ ಹರಕೆ ಹೊರುವುದು / ಹೊಲಸು ಹಾದಿಗಳ ಮೇಲೆ ಚಿಂದಿಯುಟ್ಟು ಉರುಳುವುದು / ತಲೆ ಬೋಳಿಸಿಕೊಳ್ಳುವುದು / ಸತ್ತ ಮೇಲೂ ಸಾಯುವುದು?" ಅಂತ ಪ್ರಶ್ನಿಸುತ್ತಾರೆ. "ನಮ್ಮವರ ಬಣ್ಣ ರೊಕ್ಕ ಇದ್ದ ಧಣಿಗಳ ತಾಕ ಜೀತಕ್ಕಿಟ್ಟೈತಿ / ಹುಟ್ಟಿದಾಗಿಂದ ಜಾತಿ ಒಲಿಯಾಗ ಬಡತನದ ಬೆಂಕ್ಯಾಗ ಸುಟ್ಟು ಕರಕಲಾಗೈತಿ / ಸಾಯೋಗಂಟ ಅದೇ ನಿಜ ಆಗೈತಿ" ಎಂದು ಬರೆಯುವಾಗ ಅವರಲ್ಲಿರುವ ವಿಷಾದ, "ಹೆಣ್ಣಾಗಿ ಹುಟ್ಟಿ ಭೂಮಿ ಎಂದು ಕರೆಸಿಕೊಳ್ಳುವುದು ಸಾಕು, ಸಿಡಿಯಬೇಕು ಇನ್ನಾದರೂ ಜ್ವಾಲಾಮುಖಿಯಾಗಿ" ಅಂತ ಬರೆವಾಗ ವಿಚಿತ್ರ ಆಶಾವಾದವಾಗುತ್ತದೆ. ಇಂತಹ, ಓದುಗನನ್ನು ಕೆರಳಿಸುವ, ಒರೆಗೆ ಹಚ್ಚುವ, ನಿಟ್ಟುಸಿರಿಡಿಸುವ ಕವನಗಳ ಜತೆಗೇ, ಬಾಬು ಚಂದಿರನಿಗೆ ಲಾಲಿ ಹಾಡಿ ತೂಗುತ್ತಾರೆ, ಮಗಳ ಹಾಡಿಗೆ ಕಿವಿಯಾಗುತ್ತಾರೆ, 'ಪ್ರೀತಿಯೇ ಬೆಟ್ಟವಾದ ನನ್ನಪ್ಪ'ನನ್ನು ಅನಾವರಣಗೊಳಿಸುತ್ತಾರೆ, ತಮ್ಮ ಕಾವ್ಯಕನ್ನಿಕೆಯನ್ನು 'ಬ್ಯಾಸಿಗಿ ಬಿಸಿಲಿಗೆ ತಂಪ ನೆಳ್ಳ ಆಗ್ಯಾಳ' ಎಂದು ಬಣ್ಣಿಸುತ್ತಾರೆ.

ಇಂತಹ ಬಾಬು ಅವರ ಕವನ ಸಂಕಲನದಿಂದ ಆಯ್ದ ಒಂದು ಕವಿತೆ, ಅವರ ಪ್ರೀತಿಗೆ; ನನ್ನ ಹಂಚಿಕೊಳ್ಳುವ ಖುಶಿಗೆ.

ಅಮ್ಮ ಸುಟ್ಟ ರೊಟ್ಟಿ
  • ವಿ. ಹರಿನಾಥ ಬಾಬು

ಅಮ್ಮ ಬೆಳಗೆದ್ದು ರೊಟ್ಟಿ ಸುಡುವುದೆಂದರೆ
ನಮಗೆ ಪಂಚಪ್ರಾಣ

ಕತ್ತಲು ತುಂಬಿದ ಗುಡಿಸಲಿಗೆ
ಒಲೆಯ ಬೆಂಕಿಯೇ ಬೆಳಕು
ಸುಟ್ಟು ಸುಟ್ಟು ಕರ್ರಗಾದ
ಬಿಳಿ ಮೂರು ಕಲ್ಲು,
ಮೇಲೊಂದು ಕರ್ರಾನೆ ಕರಿ ಹೆಂಚು
ಒಲೆಯೊಳಗೆ ಹಸಿ ಜಾಲಿ
ಮುಳ್ಳು ಕಟ್ಟಿಗೆ ಒಟ್ಟಿ
ಹೊಗೆಯೊಳಗೆ ಉಸಿರು ಕಟ್ಟಿ
ಮನೆಯೊಳಗೆ ಉಸಿರೆರೆದವಳು

ಅಮ್ಮ, ಕಾಲು ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಕೊಣಿಗೆಯಲಿ ಹಿಟ್ಟರವಿ
ಆಸೆಯ ಒಡ್ಡು ಕಟ್ಟಿ
ಹಗಲೆಲ್ಲ ದುಡಿದ ಮೈ ಬಸಿದ ಬೆವರು
ಹದಕೆ ಕಾಯಿಸಿದ ಎಸರು
ಸುರುವಿ ಒರೊಟೊರಟ ಕೈಯಿಲೆ
ಮೆತ್ತ ಮೆತ್ತಗೆ ಕಲಸಿ
ಗಾಲಿಯಂಗೆ ಗುಂಡಗೆ ನುಣ್ಣನೆಯ
ಮೂರ್ತಿ ಮಾಡಿದವಳು

ಅಮ್ಮ, ಕೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಎದೆಯ ತುಡಿತಗಳ ಮಿಡಿತ
ಹದವಾಗಿ ಮೆದುವಾಗಿ
ಲಯಬದ್ಧವಾಗಿ ಹಿಟ್ಟ
ತಟ್ಟಿದರೆ ದುಂಡ ದುಂಡಗೆ
ಹುಣ್ಣಿಮೆಯ ಚಂದಿರ
ಕಾದ ಕರಿಹೆಂಚಿನ ಮೇಲೆ
ಆಕಡೀಕಡೆ ಸುಟ್ಟು
ಹೊಟ್ಟೆಗಿಟ್ಟು
ರಟ್ಟೆಗೆ ಬಲವ ಕೊಟ್ಟವಳು

ಅಮ್ಮ, ಮೈಯಿ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಜೀವ ಜೀವದ ಸಾರ
ಕುಸಿವೆಣ್ಣೆ ಒಣಕಾರ
ಈರುಳ್ಳಿ ಹಸಿಮೆಣಸು
ಬೆಳ್ಳುಳ್ಳಿ ಉಂಚೆತೊಕ್ಕು
ದಿನಕೊಂದು ಹೊಸ ರುಚಿಯ
ರೊಟ್ಟಿಯೊಳಗೇ ಸುತ್ತಿ
ಉಣಬಡಿಸಿ
ಸುತ್ತೇಳು ಲೋಕವ ತೋರಿದವಳು

ಅಮ್ಮ, ಜೀವ ಒಲೆಯೊಳಗಿಟ್ಟು ಸುಟ್ಟ
ಬಿಸಿ ಬಿಸಿ ರೊಟ್ಟಿ

ಕಟ್ಟಿಗೆಯೊಟ್ಟಿಗೆ ಸುಟ್ಟು
ಹೊಗೆಯೊಳಗೆ ಕುದ್ದು
ಹೆಂಚಂತೆ ಕಾದು
ರೊಟ್ಟಿಯಾಗಿ ಬೆಂದ
ಒಲೆಯ ಮುಂದಿನ ಅಮ್ಮನ ಮುಖ
ನಿಗಿ ನಿಗಿ ಕೆಂಡ!

['ಬೆಳಕ ಹೆಜ್ಜೆಯನರಸಿ'; ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ.]

14 comments:

Anonymous said...

powerful haunting verses
good one
:-)
malathi S

Sandeepa said...

ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಹಾಗೆಯೆ,
ಪುಸ್ತಕವನ್ನು ಕೊಳ್ಳುವ ಬಗೆ ಹೇಗೆಂದು ತಿಳಿಸಿದರೆ ಅನುಕೂಲವಾಗುತ್ತದೆ.

Sushrutha Dodderi said...

@ Sandeepa Nadahalli,

Definitely. :-)

ಸಧ್ಯಕ್ಕೆ ಬೆಂಗಳೂರಿನ ಪುಸ್ತಕ ಮಳಿಗೆಗಳಲ್ಲಿ ಇದು ಲಭ್ಯವಿಲ್ಲವಂತೆ. ಪಲ್ಲವ ಪ್ರಕಾಶನದ ವಿಳಾಸ ಮತ್ತು ದೂರವಾಣಿ ಹೀಗಿದೆ, ಸಂಪರ್ಕಿಸಿದಲ್ಲಿ ಅವರು ಸಹಾಯ ಮಾಡುತ್ತಾರೆ:

K. Venkatesh,
Publisher- Pallava Prakashana,
Lecturer, Govt. First Grade Collage, Hosapete Taluk, Bellary Dist.
Mobile: 9480353507

ಲೇಖಕರ ಈಮೇಲ್: vharibabu2568 at gmail dot com

Anonymous said...

hrudayakka tattuvantide
nimma kavan
odisiddakke dhanyavadagalu

Mallikarjuna Barker

Subrahmanya said...

ನೀವಿಲ್ಲಿ ಹಂಚಿಕೊಂಡಿದ್ದು ಖುಷಿಯಾಯ್ತು.

sunaath said...

ಕಟು ವಾಸ್ತವತೆಯನ್ನು ಕವನವಾಗಿಸಿದ್ದಾರೆ.

ಮನದಾಳದಿಂದ............ said...

nice poem, thanks for sharing

V.R.BHAT said...

ಕವನ ಚೆನ್ನಾಗಿದೆ

ಸಾಗರದಾಚೆಯ ಇಂಚರ said...

ತುಂಬು ಚಂದನೆಯ ಕವನಗಳು
ಪರಿಚಯಿಸಿದ್ದಕ್ಕೆ ಧನ್ಯವಾದಗಳು

PARAANJAPE K.N. said...

ಅವರ ಕವಿತೆಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು, ನಿನ್ನೆ ತಾನೇ ಹಾಯ್ ಬೆ೦ಗಳೂರಿನಲ್ಲಿ ಅವರ ಕೆಲವು ಹಾಯ್ಕು ಗಳನ್ನೂ ಓದಿದೆ.

umesh desai said...

ಸುಶ್ರುತ ಒಳ್ಳೆ ಕವಿ ಹಾಗೂ ಅವರ ಕವಿತ ಎರಡೂ ಪರಿಯಿಸಿದ್ದಕ್ಕೆ ಧನ್ಯವಾದಗಳು. ಅನುಭವದ ಧಗೆಯಲ್ಲಿ ಅರಳಿದ ಕವಿತೆಗೆ ಅದರದೇ ಆದ ಸೊಗಸಿದೆ....

Parisarapremi said...

ಅಬ್ಬಬ್ಬಾ... ಸುಶ್ರುತ, ವಿಮರ್ಶೆ ಬೇರೆ ಬರೆಯೋಕೆ ಶುರು ಮಾಡಿದ್ದೀಯಲ್ಲಪ್ಪಾ... ಸೂಪರ್.. :-)

ಪತ್ರಿಕೆಯಲ್ಲಿ ಕವನ ಓದುವ ಜನರ ಸಂಖ್ಯೆ ತುಂಬ ಕಮ್ಮಿ ಅಂತ ಮೊನ್ನೆ ಮೊನ್ನೆ ತಾನೇ ನಾವು ಮಾತನಾಡಿಕೊಳ್ಳುತ್ತಿದ್ದೆವು. ಇನ್ನು ಮುಂದೆ ಜಾಸ್ತಿ ಆಗ್ತಾರೆ!

ತೇಜಸ್ವಿನಿ ಹೆಗಡೆ said...

ರಾಶಿ ಇಷ್ಟ ಆತು ಕವನ. ಪರಿಚಯಿಸಿ ಒಳ್ಳೇ ಕೆಲ್ಸ ಮಾಡಿದ್ದೆ. :)

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು -ನನ್ನ ಮತ್ತು ಬಾಬುರವರ ಪರವಾಗಿ. :-)