ಬಿಸಿಲು.. ಹಂಸತೂಲಿಕಾತಲ್ಪದ ಮೇಲೆ ಮುದುಡಿ ಮಲಗಿದ್ದ ರಾಜಕುವರಿಯಂಥ ಚೆಲುವೆಯ ಕೆನ್ನೆ ಮೇಲೆ ಎಳೆಕಿರಣಗಳನ್ನು ಹೊಳೆಸಿ ಎಬ್ಬಿಸಿ ಬೆಳಗಾಗಿಸಿದ ಬಿಸಿಲು.. ಬೆಚ್ಚನೆಯ ಗೂಡಿನ ಮೆತ್ತನೆಯ ಹಾಸಿನ ಮೇಲೆ ಕಂದಮ್ಮಗಳೊಂದಿಗೆ ತಂಗಿದ್ದ ಅಮ್ಮ ಹಕ್ಕಿಗೆ ಕಾಳು ತರುವ ನೆನಪು ತರಿಸಿದ ಬಿಸಿಲು.. ರಾತ್ರಿಯಿಡೀ ಕತ್ತು ತಿರುಗಿಸಿ ತಿರುಗಿಸಿ ದಣಿದಿದ್ದ ಮುದಿ ಗೂಬೆ ಹಕ್ಕಿಗೆ ಬೆಳಗಾದ ಸುದ್ದಿ ಹೇಳಿ ವಿರಾಮ ಒದಗಿಸಿದ ಬಿಸಿಲು.. ಪ್ರತಿದಿನ ಬರುವ ಬಿಸಿಲು. ಪ್ರತಿ ರಾತ್ರಿಗೆ ಇತಿಶ್ರೀ ಹಾಡುವ ಬಿಸಿಲು. ಪ್ರತಿ ಪರ್ಣದಲ್ಲಿ ಪತ್ರಹರಿತ್ತು ತುಂಬುವ ಬಿಸಿಲು.
ಮಳೆಯ ಹಾಗಲ್ಲ ಬಿಸಿಲು. ಚಳಿಯ ಹಾಗಲ್ಲ ಬಿಸಿಲು. ಮಳೆ ಬಾರದೆ ಹೋಗಬಹುದು. ಚಳಿ ಬೀಳದೆ ಹೋಗಬಹುದು. ಆದರೆ ಬಿಸಿಲು ಹಾಗಲ್ಲ. ಅದು ಎಲ್ಲ ದಿನ ಬರುತ್ತದೆ ಕಿರಣಗಳನ್ನು ಹೊತ್ತು. ಅದು ಸೂರ್ಯನಿಷ್ಠೆ. ಕುವೆಂಪು ಹಾಡಿದಂತೆ: ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ..
ಸೂರ್ಯೋದಯಕ್ಕಿಂತ ಮೊದಲು ಅರುಣೋದಯ. ಮೂಡಲ ಮನೆಯ ಗೋಡೆಗೆ ಕೆಂಬಣ್ಣ ಬಳಿಯುತ್ತ ಬರುವ ಅವ.. ಆ ಕೆಂಪ ಹಿನ್ನೆಲೆಯಲ್ಲಿ ಗಿಳಿವಿಂಡು ಹಾರುತ್ತ ಹೋದಂತೆ, ತಾನ್ ಮೇಲೇರಿ ಬರುತ್ತಾನೆ ರವಿ.. ದಿನವರಳಿದ ಜಗದ ತುಂಬ ಅವಸರ ಈಗ. ಎಲ್ಲರಿಗು ತರಾತುರಿ. ಪೇಪರ್ ಹುಡುಗರು, ಹಾಲಿನ ಹುಡುಗರು, ಹೂವಿನ ಹುಡುಗಿಯರು ಒಬ್ಬರಿಗೊಬ್ಬರು ಡಿಕ್ಕಿ ಹೊಡೆದುಕೊಳ್ಳದಂತೆ ಕಾಯುತ್ತದೆ ಬಿಸಿಲು. ಪಾರ್ಕಿನ ಗಾರ್ಡುಗಳು ಜಾಗಿಂಗ್ಗೆ ಬರುವ ದಪ್ಪ ಮನುಷ್ಯರನ್ನು ಆಕಳಿಸುತ್ತ ಒಳಬಿಟ್ಟುಕೊಳ್ಳುವಾಗ ಅವರ ಬಾಯೊಳಗೂ ಪ್ರವೇಶಿಸುತ್ತದೆ ಬಿಸಿಲು. ದೊಡ್ಡ ಅಪಾರ್ಟ್ಮೆಂಟ್ ಬಿಲ್ಡಿಂಗಿನ ಬೇಸ್ಮೆಂಟ್ ಫ್ಲೋರಿನ ಕಾರ್ ಗರಾಜಿನಲ್ಲಿ ಮಲಗಿದ್ದ ಸೆಕ್ಯುರಿಟಿಯವನ ಮೈಮೇಲೂ ಬಿದ್ದು ಅವನನ್ನೂ ಎಚ್ಚರಿಸುತ್ತದೆ ಬಿಸಿಲು. ಕೋಲು ಹಿಡಿದ ಗೊಲ್ಲ ಕೂಗುತ್ತ ಹೋಗುತ್ತಾನೆ ಹಳ್ಳಿಯ ಮನೆ ಮನೆ ಮುಂದೆ: ದನ ಹೊಡಿರೋ...
ದನದ ಮಂದೆ ಬೆಟ್ಟದ ಹುಲ್ಲುಗಾವಲಿನತ್ತ ಸಾಗುತ್ತ ಸಾಗುತ್ತ ಹೋದಹಾಗೆ ಬಿಸಿಲು ಏರುತ್ತ ಏರುತ್ತ ಹೋಗುತ್ತದೆ. ಸೂರ್ಯ ಮೇಲೇರಿದಷ್ಟೂ ಬಿಸಿಲಿನ ಪ್ರಖರತೆ ಹೆಚ್ಚು. ಅಮ್ಮ ಈಗ ಸಂಡಿಗೆ ಹಚ್ಚಿದ ಚಾಪೆಯನ್ನು ಅಂಗಳದಲ್ಲಿ ತಂದು ಹಾಸುತ್ತಿದ್ದಾಳೆ. ತೊಳೆದ ಬಟ್ಟೆಗಳನ್ನು ತಂದು ಟೆರೇಸಿನಲ್ಲಿ ಒಣಗಿಸುತ್ತಿದ್ದಾಳೆ ಕೆಲಸದವಳು. ತನ್ನ ಕ್ಯಾಬಿನ್ನಿನ ಎ.ಸಿ. ಆನ್ ಮಾಡುವಂತೆ ಹೇಳುತ್ತಿದ್ದಾನೆ ಬಾಸ್ ಆಫೀಸ್ ಬಾಯ್ಗೆ. "ಅರೆ, ಇದೇನಣ್ಣ ಬಿಸಿಲು ಹಿಂಗೆ ಏರ್ತಿದೆ?" ಕೇಳುತ್ತಾನೆ ದಾರಿಹೋಕ ಎಳನೀರಿನವನಿಗೆ. ದೊಡ್ಡ ರಾಶಿಯಿಂದ ಸರೀ ಸೀಯಾಳ ಹುಡುಕಿ ತೆಗೆಯುತ್ತ ಉತ್ತರಿಸುತ್ತಾನೆ ಎಳನೀರಿನವ: "ಬೇಸಿಗೆ ಅಲ್ವೇನಣ್ಣೋ.."
ಬಿಸಿಲಿಗೆ ಬೇಸಗೆಯಲ್ಲಿ ಹಬ್ಬ. ಎಲ್ಲರೂ ತನಗೆ ಹೆದರುವವರೇ! ಮೀಸೆ ತಿರುವುತ್ತಾನೆ ಸೂರ್ಯ. ಆತ ವರ್ಷ, ಶರದ್, ಹೇಮಂತ, ಶಿಶಿರ -ಅಂತ ಹೆಚ್ಚುಕಮ್ಮಿ ನಾಲ್ಕು ಋತು ಕಾದಿದ್ದಾನೆ. ಇದೀಗ ತನ್ನ ಮಹಿಮೆಯನ್ನು ತೋರಿಸುವ ಸಮಯ. "ಈ ಸಲ ಮಳೆ ಸರಿಯಾಗಿ ಆಗ್ಲೇ ಇಲ್ಲ", "ಯಾಕೋಪ್ಪ, ಈ ವರ್ಷ ಚಳೀನೇ ಬೀಳ್ಲಿಲ್ಲ" ಇತ್ಯಾದಿ ದೂರುಗಳು ಅವನಿಗೂ ಕೇಳಿಸಿವೆ. ಹಾಗಂತ ಆತ ಹಿಂಜರಿದು ಕೂತಾನೆಯೇ? ಇಲ್ಲ.. ಮಳೆಗಾಲದಲ್ಲಿ ಮಳೆ ಬರಲಿ ಬಾರದಿರಲಿ, ಚಳಿಗಾಲದಲ್ಲಿ ಚಳಿ ಬೀಳಲಿ ಬೀಳದಿರಲಿ; ಆದರೆ ಬೇಸಗೆಯಲ್ಲಿ ಬಿಸಿಲು ಮಾತ್ರ ಇರಲೇಬೇಕು. ಅದು ಸೂರ್ಯನಿಷ್ಠೆ!
ವಾಚು ನೋಡಿಕೊಳ್ಳುತ್ತಿರುವ ಸೂರ್ಯ, ಗಂಟೆ ಹನ್ನೆರಡು ದಾಟಿದ್ದೇ ಈಗ ಸೀದ ನೆತ್ತಿಗೆ ಬಂದಿದ್ದಾನೆ. ಕಟ್ಟಿಗೆ ಒಡೆಯುತ್ತಿರುವ ಆಳಿನ ಬರಿಮೈಯಿಂದ ಅದೇನದು ಹಾಗೆ ದಂಡಿದಂಡಿ ಇಳಿಯುತ್ತಿರುವುದು? ಬಸ್ಸಿಗಾಗಿ ಗಂಟೆಯಿಂದ ಕಾಯುತ್ತಿರುವ ಗೃಹಿಣಿ ಅದೇನದು ನಿಮಿಷಕ್ಕೊಮ್ಮೆ ಕರ್ಚೀಫಿನಿಂದ ಒರೆಸಿಕೊಳ್ಳುತ್ತಿರುವುದು? ಬೈಕಿನಲ್ಲಿ ಊರೆಲ್ಲ ಸುತ್ತಿದ ಸೇಲ್ಸ್ಬಾಯ್ನ ಅಂಗಿಯೇಕೆ ಹಾಗೆ ಒದ್ದೆಮುದ್ದೆಯಾಗಿದೆ? ಎಲ್ಲಕ್ಕು ಉತ್ತರ ಬೆವರು! ಎಲ್ಲಕ್ಕು ಕಾರಣ ಅಗೋ, ಅಲ್ಲಿ ನೆತ್ತಿಯಲ್ಲಿ ಉರಿಯುತ್ತಿರುವ ಬೆಂಕಿಯುಂಡೆ. ಕಣ್ಬಿಟ್ಟು ನೋಡಲೂ ಆಗದಷ್ಟು ಪ್ರಜ್ವಲತೆ.
ಜ್ಯೂಸ್ ಅಂಗಡಿಯವನ ಮಿಕ್ಸರುಗಳಿಗೀಗ ಬಿಡುವೇ ಇಲ್ಲ. ಒಂದಾದ ತಕ್ಷಣ ಮತ್ತೊಂದು ಜಾರ್ ತೊಳೆದು, ಕತ್ತರಿಸಿದ ಹಣ್ಣು ಹಾಕಿ ಗುರ್ಗುಡಿಸುತ್ತಾರೆ ಹುಡುಗರು. ಐಸ್ಕ್ಯಾಂಡಿಯವನ ನೀಲಿಡಬ್ಬಿ ನೋಡನೋಡುತ್ತಲೇ ಖಾಲಿಯಾಗಿದೆ. ರಸ್ತೆಬದಿಯಲ್ಲಿ ಹಾಕಿಕೊಂಡಿರುವ ಕಲ್ಲಂಗಡಿ ರಾಶಿ ಮುಂದೆ ಜನವೋ ಜನ. ನಂದಿನಿ ಕೌಂಟರಿನವನು ನಿನ್ನೆಯೇ ಹೇಳಿ ತರಿಸಿದ್ದಾನೆ ನೂರು ಪ್ಯಾಕ್ ಎಕ್ಸ್ಟ್ರಾ ಮಸಾಲಮಜ್ಜಿಗೆ. "ಕೋಲ್ಡ್ ಬಿಸ್ಲೇರಿ ಖಾಲಿಯಾಗಿದೆ" ಅಂದಿದ್ದಕ್ಕೆ "ಇಟ್ಸೋಕೆ. ವಾರ್ಮೇ ಕೊಡಿ" ಅಂತ ಇಸಕೊಂಡು, ಅಲ್ಲೇ ಬಾಟಲಿಯ ಮುಚ್ಚಳವನ್ನು ಕರಕರನೆ ತಿರುಗಿಸಿ ತೆರೆದು ಕುಡಿಯುತ್ತಿದ್ದಾನೆ ಗ್ರಾಹಕ. ಐಪಿಎಲ್ ಟ್ವೆಂಟಿಟ್ವೆಂಟಿಯ ಟೈಮ್ಔಟಿನಲ್ಲಿ ಸ್ಲೈಸು, ಮಾಜಾಗಳನ್ನು ‘ಸರ್ ಉಠಾಕೆ’ ಕುಡಿಯುತ್ತಿದ್ದಾರೆ ಕ್ರೀಡಾಪಟುಗಳು. ಆದರೂ ಹಿಂಗುತ್ತಿಲ್ಲವಲ್ಲ ದಾಹ, ಇದೆಂತಹ ಬಿಸಿಲು..
ಪಾರ್ಕಿನಲ್ಲಿ ಚಿಮ್ಮುತ್ತಿರುವ ಕಾರಂಜಿಯಲ್ಲಿ ರೆಕ್ಕೆಗಳನ್ನು ಫಡಫಡಿಸುತ್ತ ಮೀಯುತ್ತಿದೆ ಯಾವುದೋ ಒಂದು ಹಕ್ಕಿ. ಆ ತುಂತುರಿಂದ ಹಾದ ಬೆಳಕು ಪಕ್ಕದ ಮರದ ಗೆಲ್ಲುಗಳ ಮೇಲೆ ಮೂಡಿಸಿರುವ ಸಣ್ಣ ಕಾಮನಬಿಲ್ಲು ಯಾರ ಕಣ್ಣಿಗೂ ಬೀಳದೆಹೋಗುತ್ತಿದೆ. ಮಕ್ಕಳೆಲ್ಲ ಹಾರಿಕೊಂಡಿದ್ದಾರೆ ಈಜುಕೊಳದಲ್ಲಿ. ಬಿಂದಿಗೆ ಬಿಂದಿಗೆ ತಣ್ಣೀರನ್ನು ಮೈಮೇಲೆ ಹೊಯ್ದುಕೊಳ್ಳುತ್ತ ಕುಣಿದಾಡುತ್ತಿದ್ದಾನೆ ರಜೆಯ ಮಜದಲ್ಲಿರುವ ಯುವಕ. ಕಾಗೆ ಹಾರಿಸಲು ಬಂದಿದ್ದ ಗೃಹಿಣಿ ಒಂದೆರಡು ಹಪ್ಪಳ ಮುಟ್ಟಿನೋಡಿ ಇವತ್ತು ಸಂಜೆಯೇ ತೆಗೆಯಬಹುದು ಅಂತ ತೀರ್ಮಾನಿಸಿದ್ದಾಳೆ. ಕತ್ತಲ ಒಳಮನೆಯಲ್ಲೀಗ ನೆಲದಿಂದ ಸೂರಿನ ಗವಾಕ್ಷಿಯವರೆಗೆ ಒಂದು ಬೆಳಕಕೋಲು ನೆಟ್ಟುನಿಂತಿದೆ. ಸ್ನಾನ ಮಾಡಿ ಮಲಗಿಸಿದ್ದ ಹಸಿಗೂಸಿಗೆ ಎಚ್ಚರಾಗಿ ಅಂಬೆ ಹರಿದುಕೊಂಡು ಬಂದು ಈ ಬಿಸಿಲಕೋಲನ್ನು ಕೈಚಾಚಿ ಅಚ್ಚರಿಯಿಂದ ಮುಟ್ಟುತ್ತಿದೆ. ಬತ್ತುತ್ತಿರುವ ಈ ನದಿಯಿಂದ ಬೇರೆ ದೊಡ್ಡ ನದಿಗೆ ಆದಷ್ಟು ಬೇಗ ಸೇರಿಕೊಳ್ಳುವ ತವಕದಲ್ಲಿ ಈಜುತ್ತಿದೆ ಒಂದು ಒಂಟಿಮೀನು. ವಿಧಾನಮಂಡಳದ ಕಲಾಪದ ನಡುವೆಯೇ ದಣಿವಿಗೆ ನಿದ್ರೆ ಹೋಗಿದ್ದಾರೆ ಯಾರೋ ಸಚಿವರು. ಇದೇ ಅವಕಾಶ ನೋಡಿ ಅವರ ಫೋಟೋ ತೆಗೆಯುತ್ತಿದ್ದಾನೆ ಫೋಟೋ ಜರ್ನಲಿಸ್ಟ್.
ಗಂಟೆಯೀಗ ಮೂರಾಗಿದೆ. ಪಶ್ಚಿಮದತ್ತ ಜಾರಲೋ ಬೇಡವೋ ಎಂದು ಯೋಚಿಸುತ್ತಿರುವ ಸೂರ್ಯನ ಬ್ಯಾಟಿಂಗ್ ಇನ್ನೂ ಬಿರುಸಿನಿಂದಲೇ ಸಾಗಿದೆ. ಗೊಲ್ಲರ ಹುಡುಗ ಈಗ ದನಕರುಗಳನ್ನೆಲ್ಲ ತಪ್ಪಲಲ್ಲಿ ಮೇಯಲು ಬಿಟ್ಟು ತಾನೊಂದು ಮರದ ತಣ್ಣೆಳಲ್ಲಿ ಮಲಗಿ ನಿದ್ದೆ ಹೋಗಿದ್ದಾನೆ. ಇಂದಾದರೂ ಮಳೆ ಬಂದೀತೆ ಎಂದು ಮುಗಿಲಿನತ್ತ ಕೈ ಅಡ್ಡ ಹಿಡಿದು ತಲೆಯಿತ್ತಿ ನೋಡುತ್ತಿದ್ದಾನೆ ಉತ್ತರ ಕರ್ನಾಟಕದ ರೈತ. ಊಹುಂ, ಮೋಡಗಳ ಸುಳಿವೇ ಇಲ್ಲ. ಮರದ ಒಂದೆಲೆಯೂ ಅಲ್ಲಾಡುತ್ತಿಲ್ಲ. ಮದುವೆಗೆ ಹೆದರಿದ ಕಪ್ಪೆಗಳು ಎಲ್ಲೋ ಕಲ್ಲಸಂದಿಯಲ್ಲಿ ಅಡಗಿ ಕೂತಿವೆ. ಆಫೀಸಿನಲ್ಲಿರುವವರಿಗೂ ತೂಕಡಿಕೆ ಬರುತ್ತಿದೆ. ಯಾಕೋ ಸುಮ್ಮನೆ ಸುಸ್ತು. ಮಧ್ಯಾಹ್ನ ಊಟ ಮಾಡಲೂ ಸೇರಲಿಲ್ಲ. ತುಂಬಿ ತಂದಿಟ್ಟುಕೊಂಡ ಬಾಟಲಿಯಲ್ಲಿನ ನೀರು ಇದ್ದಲ್ಲೇ ಬಿಸಿಯಾಗಿದೆ. ದೇವಸ್ಥಾನದ ಕಲ್ಲು ಹಾಸಿನಮೇಲೆ ಬರಿಗಾಲಲ್ಲಿ ನಡೆಯುತ್ತಿರುವ ದಂಪತಿಗಳ ಕಾಲು ಚುರುಕ್ ಎಂದಿದೆ. ಭಟ್ಟರು ಪರ್ಜನ್ಯ ಮಾಡಿಸುವ ಯೋಚನೆ ಮಾಡುತ್ತಿದ್ದಾರೆ. ಸ್ಕೂಲ್ ಮುಗಿಸಿ ಹೊರಟ ಹುಡುಗನ ಸೈಕಲ್ಲಿನ ಚಕ್ರಕ್ಕೆಲ್ಲ ಟಾರು ರಸ್ತೆಯ ಡಾಂಬರು ಕರಗಿ ಅಂಟಿದೆ. ರಸ್ತೆ ಬದಿಯಲ್ಲಿ ನಿಂತು ಬಗ್ಗಿ ನೋಡಿದರೆ ದೂರ, ಭುವಿಯೊಳಗಿನ ನೀರೇ ಆವಿಯಾಗುತ್ತಿರುವಂತೆ ಹಬೆಯಾಡುವುದು ಕಾಣಿಸುತ್ತದೆ.
ಸಂಜೆಯಾಗುವ ಲಕ್ಷಣಗಳು ಈಗ.. ಊಹುಂ, ಸೂರ್ಯನ ಪ್ರತಾಪವಿನ್ನೂ ಮುಗಿದಿಲ್ಲ. ಒಂದು ನಕ್ಷತ್ರದ ಒಡಲಲ್ಲಿ ಅದೆಷ್ಟು ಬೆಂಕಿ ಹಾಗಾದರೆ? ಅಳಿದುಳಿದ ಕಿರಣಗಳನ್ನೆಲ್ಲ ಬೀಸುತ್ತಿದ್ದಾನೆ ಸೂರ್ಯ.. ಉದುರಿದ ಎಲೆಗಳ ಮೇಲೆ ಭಾರ ಹೆಜ್ಜೆಗಳನ್ನಿಡುತ್ತ ನಡೆದಿರುವ ಮುದುಕನೇ, ಪಡುವಣ ಬಾನಂಚಿನಲ್ಲಿ ಹೊಳೆಯುತ್ತಿರುವ ದಿನಕರನನ್ನು ನೋಡದಿರು.. ಮೊದಲೇ ಮಂಜಾಗಿರುವ ನಿನ್ನ ಕಣ್ಣು ಸುಟ್ಟುಹೋದೀತು. ಒಂದು ಬೇಸಗೆಯ ಈ ಒಂದು ದಿನ ಅದೆಷ್ಟು ನೀರು ಕುಡಿದರು ಜನ? ಎಷ್ಟು ಬೆವರು ಹರಿಸಿದರು? ಅವರು ಹಾಕಿದ ಶಾಪಗಳೆಲ್ಲ ಸೂರ್ಯನ ಯಜ್ಞಕುಂಡಕ್ಕೆ ತುಪ್ಪವಾಯಿತೆ? ಅವರು ಬಿಟ್ಟ ನಿಟ್ಟುಸಿರೆಲ್ಲ ಉರಿವ ಬೆಂಕಿಗೆ ಧೂಪವಾಯಿತೆ? ಪ್ರಶ್ನೆಗಳು ಮುಗಿಯುವ ಮೊದಲೇ ಮರೆಯಾಗುತ್ತಿದ್ದಾನೆ ಸೂರ್ಯ..
ಕತ್ತಲಾವರಿಸಿದರೂ ಸೆಖೆಯೇನು ಕಮ್ಮಿಯಾಗಿಲ್ಲ.. ಕೊಟ್ಟಿಗೆಗೆ ಮರಳಿದ ಜಾನುವಾರು ಬಕೀಟುಗಟ್ಟಲೆ ನೀರು ಕುಡಿಯುತ್ತಿವೆ. ಕೆಲಸ ಮುಗಿಸಿ ಮನೆಗೆ ಬಂದವರೆಲ್ಲ ಬೆವರ ವಾಸನೆಯ ಬಟ್ಟೆ ಬಿಚ್ಚೊಗೆದು ಫ್ಯಾನಿನ ಕೆಳಗೆ ಅಂಗಾತ ಬಿದ್ದಿದ್ದಾರೆ. ಇಂದು ರಾತ್ರಿಯ ಊಟಕ್ಕೆ ನೀರುಮಜ್ಜಿಗೆ ಸಾಕು. ಹೆಚ್ಚೆಂದರೆ ಒಂದು ಹುಣಸೇಹಣ್ಣಿನ ಗೊಜ್ಜು. ಬಿಸಿಬಿಸಿಯ ಸಾರು-ಹುಳಿ ಯಾರಿಗೂ ಬೇಡ. ಜ್ವರ ಬರುತ್ತೆ ಅಂತ ಹೆದರಿಸಿದರೂ ಕೇಳುತ್ತಿಲ್ಲ, ಮಗಳು ಫ್ರಿಜ್ ವಾಟರೇ ಬೇಕೆಂದು ಹಟ ಮಾಡುತ್ತಿದ್ದಾಳೆ. ರಸ್ತೆಯ ಮೇಲೆ ಕಾರ್ಪೋರೇಶನ್ ನೀರಿಗೆ ಕಾದ ಸಾಲು ಕೊಡಗಳು. ಪಕ್ಕದ ಮನೆಯ ಬ್ಯಾಚುಲರ್ ಹುಡುಗರು ಟೆರೇಸಿನ ಮೇಲೆ ಚಾಪೆ ಹಾಸಿ ಮಲಗುತ್ತಿದ್ದಾರೆ. ಲೋಡ್ ಶೆಡ್ಡಿಂಗ್ ಅಂತೆ, ಕರೆಂಟ್ ಹೋಯ್ತು. ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಳೆ ಕೊಡಬೇಕಿರುವ ಲೆಕ್ಚರಿಗೆ ತಯಾರಾಗುತ್ತಿದ್ದ ಪ್ರೊಫೆಸರ್ ಉಫ್ ನಿಟ್ಟುಸಿರು ಬಿಡುತ್ತಿದ್ದಾರೆ. ಬಿಸಿಗಾಳಿ ಬೀಸುತ್ತಿದ್ದ ಫ್ಯಾನೂ ಇಲ್ಲ ಈಗ. ನಿದ್ರೆ ಬಾರದೆ ಹೊರಳಾಡುತ್ತಿರುವ ಎಲ್ಲ ಜೀವಗಳ ತಪನೆ ಒಂದೇ: ಬೀಸಿಬರಬಾರದೆ ಒಂದು ಹೊಯ್ಲು ತಣ್ಣನೆ ಗಾಳಿ? ಇದ್ದಕ್ಕಿದ್ದಂತೆ ಸುರಿಯಲು ಶುರುವಿಡಬಾರದೇ ಒಂದು ಅಡ್ಡಮಳೆ?
ಊಹುಂ, ಬೇಸಗೆಯ ಬವಣೆಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಮರುಮುಂಜಾನೆ ಮತ್ತೆ ಅದೇ ಹಾಳು ಸೂರ್ಯ ಹುಟ್ಟುತ್ತಿದ್ದಾನೆ. ಬಿದ್ದ ಇಬ್ಬನಿಯಿಂದ ಕೊಂಚ ತಣ್ಣಗಾಗಿದ್ದ ಭುವಿಯ ತಂಪು ಕಸಿಯಲು ಮತ್ತೆ ಬರುತ್ತಿದ್ದಾನೆ. ಇನ್ನೇನು, ಬಿಸಿಲ ಬಲೆ ಬೀಸಲಿದ್ದಾನೆ..
[ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ]
19 comments:
ಸುಶ್ರುತ,
ತುಂಬಾ ಚೆನ್ನಾಗಿದೆ ಬಿಸಿಲು ಕೋಯಿಲು....
ಬೇಸಿಗೆ ಈಗಷ್ಟೇ ಶುರುವಿಟ್ಟಿದೆ ... ಈಗಲೇ ಬೇಸಿಗೆಯ ಬವಣೆ ಮುಗಿವ ಲಕ್ಷಣ ಕಾಣುತ್ತಿಲ್ಲ ವೆಂದರೆ ಹೇಗೆ?
ಸುಶ್ರುತ ಸರ್
ಬೇಸಿಗೆಯ ಬಿಸಿಲು ಸುಡುತ್ತಿದೆ ಎಂದು ಕೇಳಿದ್ದೇನೆ
ಎಷ್ಟು ಎಂದು ಗೊತ್ತಿಲ್ಲ :)
ನಿಮ್ಮ ಬರಹ ಚೆನ್ನಾಗಿದೆ
ಬಿಸಿಲಿನ ಬಗ್ಗೆ ಮಂಡೆ ಬಿಸಿ ಮಾಡಿಕೊಂಡವರಿಗೆ ನಿಮ್ಮ ಲೇಖನ ಒಳ್ಳೇ ಸೀಯಾಳ ಕುಡಿದ ಹಾಗಿದೆ .ನಿಜಕ್ಕೂ ಬಹಳ ದಿನಗಳ ಮೇಲೆ ಒಂದು ಒಳ್ಳೆಯ ಲಲಿತ ಪ್ರಭಂದ ಓದುವ ಹಾಗಾಯಿತು .ಧನ್ಯವಾದಗಳು .
ಎಂಥಾ ಸುಡು ಬಿಸಿಲೂ ಕೂಡ, ಎಂಥಾ cool ಲೇಖನವನ್ನು ಪ್ರೇರೇಪಿಸಬಲ್ಲದು ಅಂದರೆ ಆಶ್ಚರ್ಯವಾಗುತ್ತದೆ!
ತು೦ಬ ಸಮರ್ಥವಾಗಿ ಬಿಸಿಲನ್ನು ಲೇಖನದ ಚೌಕಟ್ಟಿನಲ್ಲಿ ಹಿಡಿದಿಟ್ಟಿದ್ದೀರಿ. ಚೆನ್ನಾಗಿದೆ.
ಬಿಸಿಲು ಅದರ ಬೇಗೆ ಪಾವರ್ ಪ್ರಾಬ್ಲಮ್ ನಿಂದ ಆಫೀಸಿನ ಓಡದ ಏಸಿ, ಮೈಸೂರ್ಗಾದ್ರೂ ಹೋಗೋಣ ಅಂತ ಹೋದಾಗ
ಅಲ್ಲೂ ನೀರಿಳಿಸುವ ಸೂರ್ಯ ಎಲ್ಲ ನೆನಪಾದ್ರು ನಿಮ್ಮ ಈ ಕೂಲ್ ಕೂಲ್ ಲೇಖನ ಓದಿದಮೇಲೆ....!
ಸುಡುವ ಬಿಸಿಲೂ ಸಹ ಒಂದು ಉತ್ತಮ ಬರಹಕ್ಕೆ ನಾಂದಿಯಾಗಿದೆ.
ಸಕ್ಕತ್. ಈಗಿನ ಪರಿಸ್ತಿತಿಯಲ್ಲೂ ಸೂರ್ಯನನ್ನು ಹೊಗಳಿ ಬರಿತಾರೆಯೇ ಯಾರಾದ್ರೂ ;-)
ಇದನ್ನು ಓದುತ್ತಿರಬೇಕಾದರೆ ಮಳೆಯೋ ಮಳೆ. ಹೊರಗೆ ಮೇಘಗಳ ಆರ್ಭಟ. ಒಳಗೆ ರನ್ನಿನ ಮಳೆ, ಡ್ರಾವಿಡನ ಕೈಚಳಕ :)
ಬರ್ಲಿ ಬರ್ಲಿ. ಇನ್ನು ಮಳೆ ಬರ್ಲಿ. ನಿಮ್ಮ ಬರಹಗಳ ಮಳೆಯೂ ಬರ್ಲಿ.
ಆಹ್ ಪತ್ರ ಹರಿತ್ತು! ಶಾಲಾ ದಿನಗಳ ನಂತರ ಮರೆತ ಶಬ್ದ !
ಚೆನ್ನಾಗಿದೆ ಬರಹ :)
why do you write so well man?! just beautiful.. good start for the day..
ಸೂರ್ಯನ ಕೃಪೆ ಕಾಣೋ...
ಸೂರ್ಯೋದಯಕ್ಕಿಂತ ಮೊದಲು ಅರುಣೋದಯ
what is the difference ?!
-Rathan
ಬಿಸಿಲ ಬಗ್ಗೆ ನಾನೂ ಬರೆಯಬೇಕು ಅಂತ ಅನ್ಕೊತಿದ್ದೆ. ನೀವೂ ಬರೆದೇ ಬಿಟ್ಟೀದ್ದೀರಾ. ತುಂಬಾ ಚೆನ್ನಾಗಿತ್ತು.
ಬಿಸಿಲಿನ ಬಗ್ಗೆ ನಾನೂ ಬರೆಯಬೇಕು ಅನ್ಕೊಂಡಿದ್ದೆ. ನೀವು ಬರೆದೇಬಿಟ್ಟೀದ್ದೀರಾ. ತುಂಬಾ ಚೆನ್ನಾಗಿದೆ.
nice bro..
ಪ್ರತಿಕ್ರಿಯಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು.
@ Shweta,
ನಿಜ. :) ಇಷ್ಟಕ್ಕೇ ಸುಸ್ತಾಗಿದೀವಿ ನಾವು!
@ Rathan,
ಯೆಸ್! ಸಾಮಾನ್ಯವಾಗಿ ಸೋರ್ಯೋದಯ-ಅರುಣೋದಯ ಎರಡೂ ಶಬ್ದಗಳನ್ನು ಒಂದೇ ಅರ್ಥದಲ್ಲಿ ಬಳಸುತ್ತಾರಾದರೂ, ಅರುಣೋದಯ ಎಂದರೆ ಸೂರ್ಯ ಗೋಚರವಾಗುವುದಕ್ಕಿಂತ ಮೊದಲು ಕಾಣಿಸುವ ಬೆಳಕು-ಬಣ್ಣಗಳು. ಈ ಅರುಣ ಸೂರ್ಯನ ರಥದ ಸಾರಥಿ. ಹಾಗಾಗಿ ಆತ ಮೊದಲು ಕಾಣಿಸಿಕೊಳ್ತಾನೆ. ಆಮೇಲೆ ಹಿಂದಿನಿಂದ ಸೂರ್ಯನ ದರ್ಶನವಾಗುತ್ತದೆ. :-)
ಸುಶ್ರುತ ಅವರೇ ಚೆನ್ನಾಗಿ ಬರ್ದಿದಿರಾ. ಸಾಮನ್ಯವಗಿ ಮಳೆ,ಚಳಿಯ ಬಗ್ಗೆ ಬರಿಯುತ್ತಾರೆ.
ಇದೆ ಮೊದಲ ಬಾರಿಗೆ ಬಿಸಿಲ ಬಗ್ಗೆ ಬರ್ದಿರೊದನ್ನ್ ಓದ್ತಾ ಇದೀನಿ.
Nice.. :-)
ಇಷ್ಟವಾಯಿತು....ಮಳೆಯ ಬಯಕೆಯ ಬಿಸಿಲ ಭಾವ...
Post a Comment