ಕೈಯಲ್ಲಿ ಅಕ್ಷರಗಳ ಮೂಟೆಯಿದೆ. ಅದನ್ನು ತೂಗಲಿಕ್ಕೆ, ಅದಕ್ಕೆ ಬೆಲೆ ಕಟ್ಟಲಿಕ್ಕೆ ಸಾಧ್ಯವೇ ಇಲ್ಲ. ಏ-ಫೋರ್ ಅಳತೆಯ, ಅತ್ಯುತ್ತಮ ಗುಣಮಟ್ಟದ ಹಾಳೆ ಬಳಸಿದ, ಮುನ್ನೂರಾ ಇಪ್ಪತ್ತು ಪುಟಗಳ ಈ ಬೃಹತ್ ಪುಸ್ತಕದ ಪುಟಗಳನ್ನು ತೆರೆದರೆ, ಕನ್ನಡ ಸಾರಸ್ವತ ಲೋಕದ ಅಷ್ಟೂ ಮುಂಚೂಣಿ ಮಂದಿ ಅಲ್ಲಿದ್ದಾರೆ. ಕುವೆಂಪು-ಬೇಂದ್ರೆ-ಮಾಸ್ತಿಯವರ ಕೈಬರಹಗಳನ್ನು ನೋಡಿ ತೆರೆದ ಪುಟದಲ್ಲೇ ಪುಳಕಗೊಂಡು ನಿಂತುಬಿಡುವ ಮನವನ್ನು ತಹಬಂದಿಗೆ ತಂದುಕೊಳ್ಳುತ್ತಾ ಮುಂದೆ ಹೋದರೆ, ಅನಂತಮೂರ್ತಿ, ಕಾರ್ನಾಡ, ಕಾಯ್ಕಿಣಿ, ಚಿತ್ತಾಲ, ಕಾಗಿನೆಲೆ, ರಶೀದ್, ಸುನಂದಾ, ಜೋಗಿ, ನುಗಡೋಣಿ, ವಸುಧೇಂದ್ರ, ವೈದೇಹಿ, ಪ್ರತಿಭಾ, ಕುಂವೀ, ಎಚ್ಚೆಸ್ವಿ, ಕಂಬಾರ, ಬಿಆರ್ಎಲ್.... ಹೀಗೆ ನೀವು ಅತಿ ಪ್ರೀತಿ ಪಟ್ಟು ಓದುವ ಅಷ್ಟೂ ಬರಹಗಾರರು ಇಲ್ಲಿ ಒಟ್ಟಿಗೇ ಎದುರುಗೊಂಡು ನಿಮಗೆ ಎಚ್ಚರ ತಪ್ಪುವಂತೆ ಮಾಡುತ್ತಾರೆ. ನಿಮಗೆ ಇಷ್ಟವಾಗುವ ಎಲ್ಲದೂ ಇಲ್ಲಿದೆ. ಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಪರಿಚಯ, ಚಿತ್ರ, ಸಂವಾದ, ಲೇಖನ.... ಯಾವುದೇ ಭಾಷೆಯ ಸಾಹಿತ್ಯ ಪ್ರಾಕಾರವೊಂದರಲ್ಲಿ ಏನೇನು ಇರಲಿಕ್ಕೆ ಸಾಧ್ಯವೋ ಅಷ್ಟೂ ಇಲ್ಲಿವೆ. ಪುಟಗಳ ಸಂಯೋಜನೆಯಂತೂ ಅದೆಷ್ಟು ಮುದ್ದಾಗಿದೆಯೆಂದರೆ, ಓದುವುದು ಹಾಗಿರಲಿ; ಈ ಪುಸ್ತಕವನ್ನು ನೋಡಿ ಮುಗಿಸಲಿಕ್ಕೇ ಒಂದು ತಾಸು ಬೇಕು! ಕಷ್ಟಸಾಧ್ಯವಲ್ಲ; ವರ್ಣಿಸುವುದು ಅಸಾಧ್ಯ ಎನ್ನುವಷ್ಟರ ಮಟ್ಟಿನ ಪುಸ್ತಿಕೆಯೊಂದನ್ನು ಕೈಗೆ ಬಂದಿದೆ. ಇಂಥದೊಂದು ಅದ್ಭುತ ಕೆಲಸವೊಂದು ಕನ್ನಡದಲ್ಲಿ ಆಗಿದೆ, ಅದರ ಬಿಡುಗಡೆಗೆ ನಾವು ಸಾಕ್ಷಿಯಾಗಿದ್ದೇವೆ, ಆ ಗ್ರಂಥವನ್ನು ಗರಿಗರಿಯಾಗಿ ಪಡೆಯುವಲ್ಲಿ - ಅದರ ಮೈ ಸವರುವಲ್ಲಿ - ಪುಟಗಳ ಹೊಸ ಪರಿಮಳದೊಂದಿಗೆ ಓದುವ ಆನಂದದಲ್ಲಿ ಭಾಗಿಯಾಗಿದ್ದೇವೆ ಎನ್ನುವುದು ಬಹುಶಃ ನಮ್ಮ ಭಾಗ್ಯ ಎಂತಲೇ ನನಗನಿಸುತ್ತದೆ. ಇಷ್ಟೊಂದು ಖುಶಿ-ಉದ್ವೇಗಗಳನ್ನು ನಮಗೆ ಕೊಟ್ಟಿರುವ, ಇಂಥದೊಂದು ಹೆಮ್ಮೆ ಪಡಬಹುದಾದ ಅಕ್ಷರಗುಚ್ಛವನ್ನು ಕೈಗಿಟ್ಟಿರುವ ವಿವೇಕ ಶಾನಭಾಗ್ ಮತ್ತು ಬಳಗದವರಿಗೆ ಹ್ಯಾಟ್ಸ್ ಆಫ್! ಇದು ‘ದೇಶ ಕಾಲ’ ಪತ್ರಿಕೆಯ ವಿಶೇಷ ಸಂಚಿಕೆ.
* * *
ಪ್ರತಿಯೊಂದರಲ್ಲೂ ಮನರಂಜನೆಯೇ ಮೂಲಮಂತ್ರವಾಗಿರುವ ಇಂದಿನ ಮನುಜ ಮನಸ್ಥಿತಿಯ ನಡುವೆ ಇಂಥ ಅಪರೂಪಗಳೇ ಇರಬೇಕು ನಮ್ಮನ್ನು ಇನ್ನೂ ಸೃಜನಶೀಲವಾಗಿ ಇಟ್ಟಿರುವ ಆಕರಗಳು. ಒಂದು ಕತೆ ಓದಿದಾಗ ಆಗುವ ಖುಶಿ, ಒಂದು ಕವಿತೆ ಓದುವಾಗ ಆಗುವ ಅನುಭವ, ಒಂದು ಕಾದಂಬರಿ ಓದಿ ಮುಗಿಸಿದಾಗ ಆಗುವ ಬದಲಾವಣೆ, ಒಂದು ಒಳ್ಳೆಯ ಸಿನೆಮಾ ನೋಡಿದಾಗ ಆಗುವ ಆನಂದ, ಒಂದು ಅತ್ಯುತ್ತಮ ಕಲಾಕೃತಿ ನೋಡುತ್ತಾ ಮೈಮರೆಯುವ ಸುಖ, ಒಂದ್ಯಾವುದೋ ಹಾಡು ಕೇಳುತ್ತಾ ಕಳೆದುಹೋಗುವುದರಲ್ಲಿನ ಮಜ... ಇವನ್ನು ಅನುಭವಿಸದ ಮನುಷ್ಯ ನಿಜಕ್ಕೂ ಅದೃಷ್ಟಹೀನ. ಇವು ಕೇವಲ ನಮ್ಮ ದಿನದ ಭವಗಳನ್ನು ಗೆಲ್ಲುವ ಮನರಂಜನೆಯ ಸಾಧನಗಳಾಗಿರದೆ ನಮ್ಮ ನಾಳೆಯ ನಡಿಗೆಗೆ ಕಿಂಚಿತ್ತು ಉತ್ಸಾಹ ತುಂಬುವ ಮಾನಸೋಲ್ಲಾಸದಾಯಕ ಔಷಧಿಗಳಾಗಿವೆ.
ಇವನ್ನು ನಮಗೆ ಕೊಡಮಾಡುವ ಮಂದಿ ನಮ್ಮಿಂದ ಆದಷ್ಟೂ ದೂರವಿದ್ದಷ್ಟೂ ಒಳ್ಳೆಯದು ಅಂತ ಗೆಳೆಯ ಕಾರ್ತಿಕ್ ಪರಾಡ್ಕರ್ ಬರೆದಿದ್ದ. ಎಷ್ಟು ಸತ್ಯ! ಲೇಖಕನಿರಬಹುದು, ನಟನಿರಬಹುದು, ಆಟಗಾರನಿರಬಹುದು, ಹಾಡುಗಾರನಿರಬಹುದು- ಆತ ನಮ್ಮಿಂದ ತುಸು ದೂರದ ವೇದಿಕೆಯ ಮೇಲೇ ನಿಂತು ಯಕ್ಷಿಣಿ ಮಾಡುತ್ತಿರಬೇಕು. ಆಗಲೇ ಅದು ಚಂದ. ಆಗಲೇ ಅದಕ್ಕೊಂದು ಮಾಂತ್ರಿಕ ಪುಳಕ. ಆಗಲೇ ಅದರೆಡೆಗೊಂದು ಕಾತರ. ಅದೇ ಆ ವ್ಯಕ್ತಿಯೊಂದಿಗೆ ನಾವು ಒಡನಾಡುತ್ತಿದ್ದೆವಾದರೆ ಅಥವಾ ಆತನ ವೈಯಕ್ತಿಕ ಬದುಕಿನ ಫ್ಯಾಂಟಸಿಗಳು ಜಾಹೀರಾಗಿಬಿಟ್ಟವೆಂದರೆ ಆಗುವ ನಿರಾಶೆಯಿದೆಯಲ್ಲ, ಅದು ಹೇಳತೀರದ್ದು.
ಮೊನ್ನೆ ರಾಜಾಜಿನಗರದ ಟಿವಿ ಶೋರೂಮ್ ಒಂದನ್ನು ಹಾದುಹೋಗುತ್ತಿದ್ದೆ. ಐಪಿಎಲ್ ಟ್ವೆಂಟಿಟ್ವೆಂಟಿಯ ಚಾಂಪಿಯನ್ಸ್ ಲೀಗ್ ಅರ್ಹತಾ ಸುತ್ತಿನ - ಆರ್ಸಿಬಿ ಮತ್ತು ಡೆಕ್ಕನ್ ಚಾರ್ಜರ್ಸ್ ನಡುವಿನ ಪಂದ್ಯ ನಡೆಯುತ್ತಿತ್ತು. ಶೋರೂಮಿನವನು ರಸ್ತೆಗೆ ಅಭಿಮುಖವಾಗಿ ಇಟ್ಟಿದ್ದ ದೊಡ್ಡ ಸ್ಕ್ರೀನಿನ ಟೀವಿಯಲ್ಲಿ ಈ ಪಂದ್ಯವನ್ನು ನೋಡುತ್ತ ಸುಮಾರು ಜನ ಫುಟ್ಪಾತಿನಲ್ಲಿ ನಿಂತಿದ್ದರು. ನಾನೂ ನಿಂತುಕೊಂಡೆ. ಹಿಂದಿನ ದಿನವಷ್ಟೇ ಐಪಿಎಲ್ನಲ್ಲಿನ ಹಗರಣಗಳು, ಮ್ಯಾಚ್ ಫಿಕ್ಸಿಂಗಿನ ಅವ್ಯವಹಾರಗಳು ಸುದ್ದಿಯಾಗಿದ್ದವಷ್ಟೇ? ಡೆಕ್ಕನ್ ಚಾರ್ಜರ್ಸ್ ತಂಡದ ವಿಕೆಟ್ಟುಗಳು ಒಂದರ ಹಿಂದೆ ಒಂದು ಬೀಳತೊಡಗಿದಂತೆ ಅಲ್ಲಿದ್ದ ಗುಂಪಿನಲ್ಲಿದ್ದವನೊಬ್ಬ "ಥೂ, ಎಲ್ಲಾ ಫಿಕ್ಸಿಂಗು ಕಣ್ರೋ.. ಎಲ್ಲಾ ಮೋಸ. ನಾವ್ ಒಳ್ಳೇ ಬಕರಾಗಳ ಥರ ಅವರ ವಿಕೆಟ್ ಹೋದ್ರೆ ಖುಶಿ ಪಡ್ತಾ ನಮ್ಮವರದ್ದು ಹೋದ್ರೆ ಬೇಜಾರ್ ಮಾಡ್ಕೊಳ್ತಾ, ಅವರು ಸೋತ್ರೆ ಪಟಾಕಿ ಹೊಡೀತಾ ನಮ್ಮವರು ಸೋತ್ರೆ ಸಿಗರೇಟು ಸೇದ್ತಾ ಮನಸಿಗೆಲ್ಲ ಹಚ್ಕೊಂಡು ಫೀಲ್ ಮಾಡ್ಕೊಳ್ತಾ ಇರ್ತೀವಿ. ಆದ್ರೆ ಅಲ್ಲಿ ನಡೆಯೋದು ಎಲ್ಲಾ ಮುಂಚೇನೇ ಡಿಸೈಡೆಡ್ಡು. ಕರ್ಮ, ನಮಗೆ ಬುದ್ಧಿ ಇಲ್ಲ" ಅಂತಂದು, ಗುಂಪಿನಿಂದ ಅಗಲಿ ದಢದಢನೆ ನಡೆದು ಹೋಗಿಬಿಟ್ಟ!
ಕ್ರೀಡೆ- ಆಡುವವನಿಗೆ ಮಾತ್ರ ಪಂದ್ಯ, ದುಡ್ಡು ತರುವ ಜಾಬ್; ನೋಡುವವನಿಗೆ ಯಾವತ್ತೂ ಮನರಂಜನೆ. ಸಿನೆಮಾ ಅಥವಾ ಧಾರಾವಾಹಿ- ಅಭಿನೇತ್ರುವಿಗೆ ಅದೊಂದು ವೃತ್ತಿ, ಅನ್ನ ಕೊಡುವ ಉದ್ಯಮ; ಅದೇ ನೋಡುವವನಿಗೆ ಅದರಲ್ಲಿನ ಕತೆ, ತಿರುವು, ಸಂಭಾಷಣೆ -ಎಲ್ಲಾ ನಿತ್ಯಸಂತೋಷ ಕರುಣಿಸುವ ಸಾಧನಗಳು. ಕತೆ, ಕವಿತೆ, ಹಾಡು- ಅವುಗಳ ಕರ್ತೃವಿಗೆ ತನ್ನ ಸೃಜನಶೀಲತೆಯನ್ನು ಹೊರಹಾಕುವ ಮಾರ್ಗಗಳು; ಅದೇ ಅವನ್ನು ಓದುವ-ಆಲಿಸುವ ಸಾಮಾನ್ಯ ಮನುಷ್ಯನಿಗೆ ಅವು ಮನಸ್ಸಂಪ್ರೀತಿಗೊಳಿಸುವ ಕೇಂದ್ರಗಳು. ಆದರೆ ನಮ್ಮನ್ನು ಮರುಳು ಮಾಡುವ ಇವೆಲ್ಲಕ್ಕೂ ಕೇವಲ ಯಕ್ಷಿಣಿಗಾರನ ಮೇಲೆ ಬೀಳುವ ಒಂದು ಕಲ್ಲು ಮಸುಕು ತೊಡಿಸಿಬಿಡುತ್ತದೆ. ನಮ್ಮನ್ನು ಎಚ್ಚರಗೊಳಿಸುತ್ತದೆ, ಆದರೆ ಅಷ್ಟೇ ಮಟ್ಟಿಗೆ ಅದರಿಂದಾಗಿ ನಾವು ಅನುಭವಿಸುತ್ತಿದ್ದ ಮುಗ್ಧಸುಖ ಇಲ್ಲವಾಗುತ್ತದೆ.
* * *
ಊರಲ್ಲಿದ್ದಾಗ, ಮನೆಗೆ ಬರುತ್ತಿದ್ದ ಪತ್ರಿಕೆಗಳಲ್ಲಿರುತ್ತಿದ್ದ ಕತೆಗಳು, ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳನ್ನು ಓದುವಾಗ ನನ್ನಲ್ಲಿ ಇರುತ್ತಿದ್ದ ಮುಗ್ಧತೆ ಈಗ ಇಲ್ಲವಾಗಿದೆ. ಅದಕ್ಕೂ ಮುಂಚೆ ಬಾಲಮಂಗಳ-ಚಂದಮಾಮ ಓದುತ್ತಿದ್ದಾಗಿನ ದಿನಗಳಂತೂ ಬಿಡಿ. ಡಿಂಗ, ಫಕ್ರು, ಲಂಬೋದರರು ನನ್ನ ಹೀರೋಗಳಾಗಿದ್ದರು. ಕಿಂಕಿಣಿ ಹಕ್ಕಿ ನನ್ನ ಫ್ರೆಂಡ್ ಆಗಿತ್ತು. ವಿಕ್ರಮಾದಿತ್ಯನ ರಾಜಧಿರಿಸು ಕಣ್ಮುಂದೆ ಬರುತ್ತಿತ್ತು. ಬೇತಾಳ ರಾತ್ರಿಯ ಕನಸಲ್ಲೂ ಬಂದು ಎಚ್ಚರಾಗಿಸುತ್ತಿತ್ತು. ಆಮೇಲೆ ಸ್ವಲ್ಪ ದೊಡ್ಡವನಾದಮೇಲೆ ಓದತೊಡಗಿದ ಕತೆಗಳೆಲ್ಲ ಸುಮ್ಮನೆ ಖುಶಿ ಕೊಡುತ್ತಿದ್ದವು. ಕಾದಂಬರಿಯೊಂದನ್ನು ಓದಿ ಅದರ ನಾಯಕ/ನಾಯಕಿಯ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ, ಹಾಗೆಯೇ ಆಗುವ ಕನಸು ಕಾಣುತ್ತಿದ್ದೆ. ಯಾವುದೋ ಪಾತ್ರವನ್ನು ನನ್ನೊಂದಿಗೆ ಹೋಲಿಸಿ ಖುಶಿಸಬಹುದಾದ-ದುಃಖಿಸಬಹುದಾದ ಸಾಧ್ಯತೆ ಇತ್ತು ಆಗ.
ಆದರೆ ದೊಡ್ಡವನಾಗುತ್ತ ಹೋದಂತೆ, ಮುಗ್ಧತೆಯನ್ನು ಕಳೆದುಕೊಳ್ಳುತ್ತ ಹೋದಂತೆ - ದಿನಗಳಲ್ಲಿದ್ದ ಸ್ವಾರಸ್ಯವೂ ಇಲ್ಲವಾಗತೊಡಗಿದೆ. ಬಹುಶಃ ಬದುಕೇ ಬೇರೆ ಕಲೆಯೇ ಬೇರೆ ಎಂಬ ಅರಿವೇ ಇದಕ್ಕೆ ಕಾರಣವಿರಬೇಕು. ಈಗ ಎಲ್ಲವೂ ಸ್ವಲ್ಪೇ ದಿನಕ್ಕೆ, ಸ್ವಲ್ಪೇ ಹೊತ್ತಿಗೆ ಬೇಸರ ಬರುತ್ತದೆ. ಬೆಂಗಳೂರು, ಕೆಲಸ, ಟ್ರಾಫಿಕ್ಕು, ಮಾಲುಗಳು, ಶಾಪಿಂಗು, ಪಾರ್ಟಿಗಳು, ಟಿವಿ, ಇಂಟರ್ನೆಟ್ಟು, ಮೊಬೈಲು, ಫ್ಲರ್ಟಿಂಗು, ಬ್ಲಾಗಿಂಗು, ಕಾರ್ಟೂನು, ಪಾರ್ನು.... ಎಲ್ಲವೂ ಬೇಸರ ಬಂದು - ಅಥವಾ ಕೇವಲ ಆ ಕ್ಷಣಕ್ಕೆ ಸುಖ ಕೊಡುವ, ಮುಗುಳ್ನಗೆ ಹೊಮ್ಮಿಸುವ ಸಾಧನಗಳಷ್ಟೇ ಆಗಿ ಉಳಿದುಬಿಟ್ಟಿರುವ ಈ ದಿನಗಳಲ್ಲಿ, ನನ್ನನ್ನು ಇನ್ನೂ ಆಶಾವಾದಿಯಾಗಿಯೇ ಉಳಿಸಲು ಇರುವ ಉಪಕರಗಳೇನು? ಹೆಚ್ಚೆಚ್ಚು ತಿಳಿದುಕೊಳ್ಳುತ್ತ ಹೋದಂತೆ ಹೆಚ್ಚೆಚ್ಚು ಗೊಂದಲಗಳಿಗೀಡಾಗುತ್ತಿರುವ ನನ್ನನ್ನು ಕೂರಿಸಿಕೊಂಡು ಸಮಾಧಾನ ಹೇಳುವ ಪ್ರವಾದಿ ಹಿಮಾಲಯದ ಯಾವ ತಪ್ಪಲಲ್ಲಿದ್ದಾನೆ?
ಕನಿಷ್ಟ ನನ್ನ ವಿಷಯದಲ್ಲಿ ಇನ್ನೂ ಸಾಹಿತ್ಯ ಈ ಕೆಲಸವನ್ನು ಮಾಡುತ್ತಿದೆ. ಮೊದಲಿನ ಮುಗ್ಧತೆಯಿಂದಲ್ಲದಿದ್ದರೂ, ಈಗಲೂ ಕತೆ ಓದಿ ಕಣ್ತುಂಬಿಸಿಕೊಳ್ಳುತ್ತೇನೆ. ಕವಿತೆಯ ಕಾಡುವಿಕೆಗೆ ಮನಸೋಲುತ್ತೇನೆ. ಪ್ರಬಂಧದ ಗುಂಗನ್ನು ಮನಸಾ ಅನುಭವಿಸುತ್ತೇನೆ. ಪ್ರವಾಸಕಥನದ ನಾಯಕನೊಂದಿಗೆ ಗುಡ್ಡವೇರುತ್ತೇನೆ. ಲಹರಿಗಳ ಝರಿಯಲ್ಲಿ ತೇಲುತ್ತೇನೆ.
ಈ ನನ್ನ ಸಂತೋಷವಾದರೂ ಚಿರವಾಗಿರಲಿ. ಯಕ್ಷಿಣಿಗಾರನ ಇಂದ್ರಜಾಲ ಮೋಡಿ ಮಾಡುತ್ತಿರಲಿ ಎಂಬುದಷ್ಟೇ ಸಧ್ಯದ ಪ್ರಾರ್ಥನೆ.
* * *
ಬ್ಲಾಗು ಶುರುಮಾಡಿ ನಾಲ್ಕು ವರ್ಷ ಆಗಿದೆ! ಎಲ್ಲದರಂತೆ ಇದರಲ್ಲೂ ಉತ್ಸಾಹ ಕಮ್ಮಿಯಾಗಿದ್ದು ನಿಜ. ಈ ವರ್ಷ ನಾನು ಮಾಡಿದ ಒಟ್ಟು ಪೋಸ್ಟುಗಳ ಸಂಖ್ಯೆ ಕೇವಲ ಮೂವತ್ತು. ಅದರಲ್ಲಿ ಕವಿತೆಗಳೇ ಹನ್ನೊಂದು. ಈಗಲೂ ಪೆನ್ನು ಹಿಡಿದರೆ ಯಾಕೋ ಕವಿತೆಯೇ ಮೂಡುತ್ತದೆ. ಉಳಿದಂತೆ ಆರು ಪ್ರಬಂಧ, ಮೂರ್ನಾಲ್ಕು ಲಹರಿ, ಒಂದಷ್ಟು ಸಾಂದರ್ಭಿಕ ಬರಹಗಳನ್ನು ಬರೆದಿದ್ದೇನೆ. ಈ ವರ್ಷ ಒಂದೇ ಒಂದೂ ಕತೆ ಬರೆಯಲಾಗಲಿಲ್ಲ ಎಂಬುದು ಸಾಧನೆ! ಹಾಗೆಯೇ ಈ ವರ್ಷ ಒಂದೇ ಒಂದು ಚಾರಣವನ್ನೂ ಮಾಡಲಿಲ್ಲ ಎಂಬುದೂ! ‘ಹೊಳೆಬಾಗಿಲು’ -ನನ್ನ ಮೊದಲ ಪ್ರಬಂಧ ಸಂಕಲನ ಹೊರಬಂದಿದ್ದು, ಸುಮಾರು ಜನ ಅದನ್ನೋದಿ ‘ಚನಾಗಿದೆ’ ಅಂದದ್ದು ಖುಶಿ ಕೊಟ್ಟ ಸಂಗತಿ. ‘ಪ್ರಣತಿ’ಯಿಂದಲೂ ಈ ವರ್ಷ ಹೆಚ್ಚು ಕಾರ್ಯಕ್ರಮ ಮಾಡಲಾಗಲಿಲ್ಲ. ನನ್ನ-ಶ್ರೀನಿಧಿಯ ಪುಸ್ತಕ ಬಿಡುಗಡೆ, ನಂತರದ್ದೊಂದು ಗಮಕ ಕಾರ್ಯಕ್ರಮ ಬಿಟ್ಟರೆ, ಆಮೇಲೇನೂ ನಡೆದಿಲ್ಲ. ಕನಿಷ್ಟ ನಮ್ಮ ಟೀಮ್ಗೆ ತಿಂಗಳಿಗೊಮ್ಮೆ ಒಟ್ಟಿಗೆ ಸೇರಲೂ ಆಗುತ್ತಿಲ್ಲವೆಂಬುದು ಕಹಿಸತ್ಯ.
ಆದರೂ ದಕ್ಕಿರುವ ಗೆಳೆಯರ ಪ್ರೀತಿ ಹಾಗೆಯೇ ಇದೆ ಎಂಬುದೊಂದು ಸಮಾಧಾನ. ಸಿಗುತ್ತಿರುವ ಹೊಸ ಗೆಳೆಯರು ಮತ್ತು, ನಾಳೆ ಏನಾದರೂ ಆಗಿಬಿಡಬಹುದೇನೋ ಎಂಬ ಕ್ಷೀಣ ಆಸೆಯೊಂದಿಗೆ ಬದುಕು ಮುಂದುವರೆದಿದೆ. ಬಿರುಬಿಸಿಲಿನ ದಿನಗಳಲ್ಲೇ ಸಂಜೆಹೊತ್ತಿಗೊಂದು ಸಣ್ಣಮಳೆ, ಕೆಲವೊಮ್ಮೆ ಗಾಳಿ - ಬೀಳುವ ಮರಗಳು, ಗುಡುಗಿಗೆ ನಡುಗುವ - ಮಿಂಚಿಗೆ ಹೊಳೆಯುವ ಭೂಮಿ. ತೇಲಿ ಬರುವ ಎಂಡಿ ಪಲ್ಲವಿ ಹಾಡು, ನೆನಪಾಗುವ ಜಯಂತ ಕಾಯ್ಕಿಣಿ ಕತೆ, ಬರೆಯಲು ಬೇಡುವ ಕವಿತೆ.
ಬದುಕು ಸಾಗಿದೆ. ನಿಮ್ಮ ಪ್ರೀತಿಗೆ ಕೃತಜ್ಞತೆ ಹೇಳಲು ನನ್ನಲ್ಲಿ ಶಬ್ದಗಳು ಇಲ್ಲವಾಗಿದೆ. ಥ್ಯಾಂಕ್ಯೂ. :-)
32 comments:
"ಈ ನನ್ನ ಸಂತೋಷವಾದರೂ ಚಿರವಾಗಿರಲಿ. ಯಕ್ಷಿಣಿಗಾರನ ಇಂದ್ರಜಾಲ ಮೋಡಿ ಮಾಡುತ್ತಿರಲಿ ಎಂಬುದಷ್ಟೇ ಸಧ್ಯದ ಪ್ರಾರ್ಥನೆ...."
ನಿಮ್ಮ ಸಂತೋಷ ಚಿರವಾಗಿರಲಿ ಅಂತ ನನ್ನ ಪ್ರಾರ್ಥನೆ ಕೂಡ...
ಶುಭವಾಗಲಿ.. :-)
"ಬಿರುಬಿಸಿಲಿನ ದಿನಗಳಲ್ಲೇ ಸಂಜೆಹೊತ್ತಿಗೊಂದು ಸಣ್ಣಮಳೆ, ಕೆಲವೊಮ್ಮೆ ಗಾಳಿ - ಬೀಳುವ ಮರಗಳು, ಗುಡುಗಿಗೆ ನಡುಗುವ - ಮಿಂಚಿಗೆ ಹೊಳೆಯುವ ಭೂಮಿ. ತೇಲಿ ಬರುವ ಎಂಡಿ ಪಲ್ಲವಿ ಹಾಡು, ನೆನಪಾಗುವ ಜಯಂತ ಕಾಯ್ಕಿಣಿ ಕತೆ, ಬರೆಯಲು ಬೇಡುವ ಕವಿತೆ"
ಬಹುಶಹ ಇಂಥ ವಾಕ್ಯಗಳಿಂದಲೇ, ಎಂಥ ಅರ್ಜಂಟನಲ್ಲಿದ್ದರೂ, ಮೌನಗಾಳ ಅಪ್ಡೇಟ್ ಆಗಿದೆ ಅಂದ್ರೆ ಒಂದು ಕ್ಷಣ ನೋಡದೇ ಹೋಗಲಿಕ್ಕೆ ಆಗದೇ ಇರೋದು. Keep it up. ಮತ್ತೆ ಮೊದಲಿನ ಹಾಗೆ ಗದ್ಯ ಮೋಡಿ ಬರಲಿ.
ಸುಶ್ರುತ ಅವರೆ ,
೪ ವರ್ಷ ಪೂರೈಸಿದಕ್ಕೆ ಅಭಿನ೦ದನೆಗಳು . ಹೀಗೆ ನೀವು ನಮ್ಮ ಮನಸಿಗೆ ನಿಮ್ಮ ಬರಹಗಳ ಮೂಲಕ ಮೌನ ವಾಗಿ ಗಾಳ ಹಾಕುತ್ತಾ ಇರಿ . ನಾವು ನಿಮ್ಮ ಗಾಳಕ್ಕೆ ಸಿಗುತ್ತಾ ಸ೦ತೋಷ ವನ್ನು ಅನುಭವಿಸುತ್ತೇವೆ.
ಬ್ಲಾಗಿನ ಚೆಂದ ನೋಡ್ತಾ ಹುಟ್ಟುಹಬ್ಬಕ್ಕೆ ವಿಶ್ ಮಾಡದೆ ಮರ್ತೋಗಿತ್ತು:) ಹ್ಯಾಪಿ ಹುಟ್ಟುಹಬ್ಬ ಬ್ಲಾಗ್ ಗೆ :)
Mounagalakke huttu habbadashubhashagaLu...... :)
ಸುಶ್ರುತ,
ಅಭಿನಂದನೆಗಳು.
Quantity ಕಡಿಮೆಯಾಗಿದೆ ಎನ್ನೋ ಅಳಕು ಬೇಡ.
Quality ತುಂಬ ಚೆನ್ನಾಗಿದೆ.
ಪುಟ್ಟಣ್ಣಾ,
ಬ್ಲಾಗ್ ಡಿಸೈನ್ ತುಂಬಾ ಚನ್ನಾಗಿ ಇದೆ.
ನಿನ್ನ ಬ್ಲಾಗಿಗೆ ಹುಟ್ಟುಹಬ್ಬದ ಶುಭಾಷಯಗಳು.
ನಿನ್ನ ಸಂತೋಷ , ಖುಷಿ ಯಾವಾಗ್ಲು ಇರಲಿ. ನಿನಗೆ ಒಳ್ಳೆಯದಾಗಲಿ, ನಿನ್ನ ಕನಸುಗಳು ನನಸಾಗಲಿ, ಮೌನಗಾಳಕ್ಕೆ ತುಂಬಾ ತುಂಬಾ ಮೀನು ಸಿಗಲಿ ಮತ್ತು ಅದನ್ನ ನೋಡುವ/ಕೇಳುವ/ಓದುವ ಭಾಗ್ಯ ನನ್ನದಾಗಲಿ ಅಂತಾ ಹಾರೈಸುತ್ತೇನೆ. ನಗುನಗುತಾ ಇರು.
very goodh....
ಸುಶ್ರುತ ,
ಶುಭಾಶಯಗಳು ! ಐದು ವರ್ಷಕ್ಕೆ ಕಾಲಿಡುತ್ತಾ ನಿನ್ನ ಬ್ಲಾಗ್ ಹಂಚಿಕೊಂಡ ಭಾವನೆಗಳು ತುಂಬಾ ಸೊಗಸಾಗಿವೆ. ಬಾಲ್ಯದ ಮುಗ್ಧತೆ ಕಳೆದು ಹೋಗುತ್ತಾ, ವಾಸ್ತವದ ಕಹಿ ಆವರಿಸಿಕೊಳ್ಳುತ್ತಾ , ಜೀವನದಲ್ಲಿ ಒಮ್ಮೊಮ್ಮೆ ವಿಷಾದ ತುಂಬಿಕೊಂಡು ಬಿಡುತ್ತದೆ ಎನಿಸುತ್ತದೆ .
ಎಂದಿನಂತೆ ಚೆಂದದ ಇನ್ನಷ್ಟು ಬರಹಗಳನ್ನು ನಿನ್ನ ಬ್ಲಾಗ್ ನಲ್ಲಿ ಎದುರು ನೋಡುತ್ತೇನೆ
all the best. keep writing.
ಸುಶ್ರುತ ಚಂದದ ಬರಹ . ಹಾಗೆ .. ಹ್ಯಾಪಿ ಬರ್ತಡೇ :)
ನಾಲ್ಕು ವರ್ಷ ತುಂಬಿದ್ದಕ್ಕೆ ಅಭಿನಂದನೆಗಳು. ಅದಕ್ಕೆ ಬ್ಲಾಗಿನ ವಿನ್ಯಾಸವೂ ಬದಲಾಗಿದೆಯೆಂದುಕೊಳ್ಳುತ್ತೇನೆ. ನನ್ನ ಕೈಗೂ ದೇಶಕಾಲ ಬಂದಿದೆ. ನಿನ್ನೆ ಒಂದು ಗಂಟೆ ಕುಳಿತು, ನಿಂತು ಮಲಗಿ ನೋಡಿದ್ದೇನೆ. ಇನ್ನೂ ಓದಿಲ್ಲ...ಓದಬೇಕು. ಇದು ಖಂಡಿತ ಇಂದಿನ ಮಾಲ್,ಆಧುನಿಕತೆ ನಡುವೆ....ಓದಿಸಿಕೊಳ್ಳುತ್ತಾ ಹೊಸ ಅನುಭವ ಕೊಡಬಹುದು..
Dhesha kaala odhalu aaguththo illavo gottilla :( aadre nimma blog odhuva avakaashavanthu iddE idhe. heege saagali blog payana :)
4 varushagaLannu pooraisidddakke congratsu :)
ಏನ್ರೀ ಸುಶ್ರುತ,
ನೀವೂ ಬೇಜಾರು ಬಂದಿದೆ ಅಂದು ಬಿಟ್ರೆ, ಭರ್ಜರಿ ನಾಲ್ಕು ವರ್ಷಗಳಿಂದ ನಿರಂತರ ಸಾಗಿ ಬರುತ್ತಿರುವ ನಿಮ್ಮಂಥವರ ಬ್ಲಾಗು, ಬತ್ತದ ಉತ್ಸಾಹವನ್ನೇ, ಸ್ಫೂರ್ತಿ ಆಗಿರಿಸಿಕೊಂಡವರು, ಏನು ಮಾಡಬೇಕು? :)
ಸಂತೋಷ, ಆಸಕ್ತಿ ನಿರಂತರವಾಗಿರಲಿ; ಮೌನ ಗಾಳದಲ್ಲಿ ಸದಾ ಸಾಹಿತ್ಯ ಸಲ್ಲಾಪವಿರಲಿ..
ಅಭಿನಂದನೆಗಳು!
ಸುಶ್ರುತ...
ನಿಮ್ಮ ಬ್ಲಾಗಿನ ಖಾಯಮ್ ಓದುಗರಲ್ಲಿ ನಾನೂ ಒಬ್ಬ...
ನಾಲ್ಕರ ಸಂಭ್ರಮದಲ್ಲಿ ನನ್ನ ಹೃದಯಪೂರ್ವಕ ಅಭಿನಂದನೆಗಳು...
ನಿಮ್ಮ ಗದ್ಯದ ಮೋಡಿಯನ್ನು ಬಹಳವಾಗಿ ಇಷ್ಟ ಪಡುತ್ತೇನೆ..
ದೇಶ ಕಾಲ" ಬಿಡುಗಡೆಗೆ ಬರಲಾಗಲಿಲ್ಲ..
ಬೇಸರವಾಗುತ್ತಿದೆ...
ನಿಮ್ಮ ಪ್ರತಿಭೆಗೆ ಇನ್ನಷ್ಟು ಯಶಸ್ಸು ಸಿಗಲಿ...
ಪ್ರಕಾಶಣ್ಣ..
ಸುಶ್ರುತ,
ಬ್ಲೋಗೂ ಹುಟ್ಟು ಹಬ್ಬಕ್ಕೆ ಹೊಸ ಅಂಗಿ ತೊಟ್ಟಿದೆ.ಚಂದದ ಅಂಗಿ !
ನಮ್ಮ ಮುಗ್ಧತೆಯನ್ನ ನೆನಪು ಮಾಡುವದಕ್ಕೂ ಆಗದ ವೇಗದಲ್ಲಿ ಜೀವನ ಓಡುತ್ತಿದೆ..ಏನನ್ನೋ ಹುಡುಕುತ್ತಾ ,ಕೆಲವನ್ನ ಕಳೆದುಕೊಳ್ಳುತ್ತ ಸಾಗುವ ಜೀವನದಲ್ಲಿ ಸಿಕ್ಕಷ್ಟು ,ಉಳಿದಷ್ಟು ಮಾತ್ರ ನಮ್ಮಪಾಲಿಗ?ಗೊತ್ತಿಲ್ಲ...
ಹುಟ್ಟುಹಬ್ಬದ ಶುಭಾಶಯಗಳು.
ಕನ್ನಡ ಬ್ಲಾಗ್ ಲೋಕದ ಸೀನಿಯರ್ ಬ್ಲಾಗಿಗರಲ್ಲೊಬ್ಬ ನೀನು. ನಮಗೆಲ್ಲಾ ಒಂಥರಾ ಪ್ರೇರಣೆ ನಿನ್ ಬ್ಲಾಗು. ಇವತ್ತಿಗೂ ನಿನ್ನ ಹಳೇ ಪೋಸ್ಟ್ ಗಳನ್ನು ಆಗಾಗ ಮತ್ತೆ ಮತ್ತೆ ಓದ್ತಾ ಇರ್ತೀನಿ ನಾನು ಅಂದ್ರೆ ನೀನು ನಂಬಲೇ ಬೇಕು.!
ಹೀಗೆ ಚಂದ ಬರೀತಾ ಇರು. ಉತ್ಸಾಹ ಇರಲಿ.
Dont worry much about quantity, ponder over more, may be you are looking for quality....
ಸೀನಿಯರ್ ಬ್ಲಾಗಿಸ್ಟನಾಗಿರೋ ನೀನೇ ಹಿಂಗೆ ಅಂದ್ರೆ ನಮ್ಮಗಳ ಕಥೆ ಎಂಗೆ ಗುರು?! ನಾಳೆಯಿಂದ ಔಷಧಿ ಒಂದೊಂದು ಚಮಚ ಜಾಸ್ತಿ ತಗೋ ಕಥೆ ಬರಿಯಕ್ಕೆ ಮೂಡು ಬರತ್ತೆ. ಹ್ಯಾಪಿ ಬರ್ತಡೆ ಬ್ಲಾಗ್ಗೆ...
ಚಂದದ ಬರಹ, ಬ್ಲಾಗಿಗೆ ಹುಟ್ಟುಹಬ್ಬದ ಶುಭಾಷಯಗಳು.
--
ಇಂದ,
ಆ ಕಾಲದ ಬ್ಲಾಗರ್ :)
ಅಭಿನಂದನೆಗಳು ಸುಶ್ರುತ :)
ಬ್ಲಾಗ್ ನಲ್ಲಿ ಉತ್ಸಾಹ ಕಮ್ಮಿಯಾಗಿದೆ/ಯಾಗುತ್ತಿದೆ ಅಂತ ಬೇಸರ ಬೇಡ. ನಿಮ್ಮ ಮೌನಗಾಳಕ್ಕೆ ಸಿಕ್ಕುವ ’ಮೀನು’ ಗಳಿಗೇನೂ ಬರಗಾಲವಿಲ್ಲ :)
01. Congratulations and best wishes :)
02. ಹೆಚ್ಚೆಚ್ಚು ತಿಳಿದುಕೊಳ್ಳುತ್ತ ಹೋದಂತೆ ಹೆಚ್ಚೆಚ್ಚು ಗೊಂದಲಗಳಿಗೀಡಾಗುತ್ತಿರುವ ನನ್ನನ್ನು ಕೂರಿಸಿಕೊಂಡು ಸಮಾಧಾನ ಹೇಳುವ ಪ್ರವಾದಿ ಹಿಮಾಲಯದ ಯಾವ ತಪ್ಪಲಲ್ಲಿದ್ದಾನೆ?
Nimmolage iddane, maathaadisi nodi....
ಸುಶ್ರುತ ಹುಟ್ಟುಹಬ್ಬದ ಶುಭಾಶಯಗಳು..
ಕಾಕಾ ಅವರ ಮಾತಿಗೆ ಅನುಮೋದನೆ ಇದೆ ಕ್ವಾಲಿಟಿಯಲ್ಲಿ ರಾಜಿ ಇಲ್ವಲ್ಲಾ ಅದೇ ಖುಷಿಯ ಸಂಗತಿ.
ನಾನು ಬ್ಲಾಗು ಶುರು ಮಾಡಲು ಕಾರಣವೇ ನಿನ್ನ ಬ್ಲಾಗು. ಇನ್ನೂ ನೆನಪಿದೆ ನಂಗೆ...
ನಿನ್ನ ಹಳೆ ಬರಹಗಳನ್ನ ಓದೋ ಖುಷೀ ನೇ ಬೇರೆ.ವಿಕಾಸ ಹೇಳಿದ ಹಾಗೆ, ನಾನು ಕೂಡ ನಿನ್ನ ಹಳೆ ಬರಹಗಳನ್ನ ಆವಾಗೀವಾಗ ಓದುತ್ತಲೇ ಇರುತ್ತೇನೆ.
ಬಹಳ ದಿನಗಳ ನಂತರ ಕೊಂಚ ಹೆಚ್ಚೇ ಗಂಭೀರವಾಗಿ ಬರೆದಿದ್ದೀಯ. ಇಷ್ಟವಾಯಿತು.
ಬರಹ ಯಾತ್ರೆ ಸಾಗಲಿ.
ಸುಶ್ರುತ ಅವರೇ
೪ ರ ಸಂಭ್ರಮಕ್ಕೆ ಅಭಿನಂದನೆಗಳು
ನಿಮ್ಮ ಬ್ಲಾಗ್ ನಲ್ಲಿ ಮುಂದೆಯೂ ಉತ್ತಮ ಲೇಖನಗಳು ಬರುತ್ತಿರಲಿ
Well, congratulations first on this occassion. I can just say "chennaagide" and shut, but I won't do it, as usual. Your earlier writings were pretty good and gave an impression that you have the potentiality to write effectively, however, your recent writings suffer from depth when compared to your earlier ones. I am not expecting you to write out of external pressure, but novel writing definitely needs lots of contemplation, inner vision and an unique approach. I strongly recon you please think along these lines.
In terms of resources, you have plenty, as you hail from a village. A caviet is, when you start writing in order to please somebody or some sect of people, then you deteriorate yourself. Does this make sense?
Demonstrably, you have a very good grip on language, keep up the good work.
D.M.Sagar ("original, not Vikas hegade's version!, LOL)
ನಾನು ಬ್ಲಾಗ್ ಶುರು ಮಾಡುವ ಹೊತ್ತಿಗೆ ‘ಸುಶ್ರುತನ ಮೌನಗಾಳ’ ನಮಗೆಲ್ಲ ಮಾದರಿ ಬ್ಲಾಗ್. ನಾಲ್ಕು ವರ್ಷಗಳನ್ನ ಯಶಸ್ವಿಯಾಗಿ ಪೂರೈಸಿದ್ದಕ್ಕೆ ಅಭಿನಂದನೆಗಳು.
ನಲ್ಮೆ,
ಚೇತನಾ
ಪುಟ್ಟಣ್ಣಾ...
ಶುಭಾಶಯ.
ಎಲ್ಲ ಘನಾದಾಗ್ಲಿ
ಹೊಳೆಬಾಗಿಲು ತೆಗ್ದಿಡು ನನಗೂ.
ನಿನ್ನ ಬರಹ ಹೊಸತಾಗೇ ಮತ್ತೆ ಮತ್ತೆ ಓದಿದಷ್ಟೂ. ಬರೀತಿರು.
ಪ್ರೀತಿಯಿಂದ,
-ಪುಟ್ಟಕ್ಕ
ಪ್ರತಿಕ್ರಿಯಿಸಿದ, ಶುಭಾಶಯ ಹೇಳಿದ ಎಲ್ಲರಿಗೂ ಧನ್ಯವಾದ.
D.M. Sagar,
ಥ್ಯಾಂಕ್ಸ್! You have been a great critic of my writings from day one.
ಚೆನ್ನಾಗಿದೆ.. ರಾಧೆಯ ಒಡಲ ಮಾತುಗಳೇ ಕವಿತೆಯಾಗಿ ಬಂದಂತಿದೆ.
ನೀವು ಹೇಳಿರುವುದು ನಿಜ. ನನಗು ಇದೇ ಅನುಭವ ಆಗಿದೆ ಆಸಕ್ತಿ ಕಳೆದುಕೊಳ್ಳುವುದು ಅನ್ನುವುದಕ್ಕಿಂತ ಸಣ್ಣ ಪುಟ್ಟ ವಿಷಯಗಳಲ್ಲಿ ಆಸಕ್ತಿ ಕಡಿಮೆಯಾಗಿ ಬೇರೆಯದೇ ವಿಷಯಗಳಲ್ಲಿ ಆಸಕ್ತಿ ಮೂಡಿದೆ. ನಮ್ಮ ತಂದೆ ತಾಯಿಯರ ಬಗ್ಗೆ ಹೇಳಬೇಕೆಂದರೆ. ಇಬ್ಬರು ಓದುತ್ತಿರುವಾಗ ಒಂದೊಂದು ಸಿನಿಮಾವನ್ನು ೯-೧೦ ಸಲ ನೋಡಿದ್ದರಂತೆ ಚೆನ್ನಗಿರುವವು ಬಂದರೆ. ಆಮೇಲೆ ಮದುವೆಯಾಗಿ ನಾವೆಲ್ಲ ಹುಟ್ಟಿದ ಮೇಲೆ ಆರಿಸಿ ನೋಡಿ ಒಳ್ಳೆಯ ಸಿನಿಮಾಗಳಿಗೆ ಪರೀಕ್ಷೆ ಇಲ್ಲದೆ ಇರುವಾಗ ಕದೆದುಕೊಂಡು ಹೋಗುತ್ತಿದ್ದರು. ಈಗೀಗ ಒತ್ತಾಯ ಮಾಡಿದರು ಒಂದು ಸಿನಿಮಾಕ್ಕೆ ಬರುವುದಿಲ್ಲ. ಮೊನ್ನೆ ಅಮೆರಿಕದಿಂದ ೨ ವರ್ಷ ಕಳೆದ ಮೇಲೆ ಹೋದರು ಒಂದು ಸಿನಿಮಾಕ್ಕೆ ಎಲ್ಲರು ಹೋಗೋಣ ಬನ್ನಿ ಅಂತ ಪಟ್ಟು ಹಿಡಿದರು ನಮ್ಮ ತಂದೆ ಹೇಯ್ ಬೇಡ ಲಾಲ್ ಬಾಗ್ಹ್ ನಲ್ಲಿ ಫ್ಲವರ್ ಶೋ ಇದೇ ಅಂತೆ ಅಲ್ಲಿಗೆ ಹೋಗೋಣ ಪಿಕ್ನಿಕ್ ಥರ ಅಂತ ಶುರು ಹಚ್ಚಿದ್ದರು. ಆಮೇಲೆ ನಾನು ಹೆಂಗೆಂಗೋ ಜೋರು ಮಾಡಿ ನಾನು ಕನ್ನಡ ಸಿನಿಮಾ ನೋಡೋಕ್ಕೆ ಆಗಲ್ಲ ಅಲ್ಲಿ ಅಂತ ಒತ್ತಾಯ ಮಾಡಿ ಕರೆದುಕೊಂಡು ಹೋಗಿದ್ದಾಯಿತು. ಈಗೀಗಂತೂ ಅಪ್ಪ ಅಮ್ಮ ಬಹಳ ಬದಲಾಗಿದ್ದಾರೆ ಅನಿಸುತ್ತೆ. ಒಂದು ವಿಷಯ ಮೊದಲಿನಿಂದಲೂ ಹಾಗೆ ಮುಂದುವರೆದಿರುವುದು ಪೇಪರ್, ಮ್ಯಾಗಜಿನ್ಸ, ಇತರ ಪುಸ್ತಕಗಳನ್ನು ಓದುವುದು, meditation ಪ್ರಾಣಾಯಾಮ ಹೀಗೆ. ನಿಮ್ಮ ಬ್ಲಾಗ್ ಅನಿವಾರ್ಸರಿ ಗೆ ಅಭಿನಂದನೆಗಳು. ನಮಗೆಲ್ಲ entertain ಮಾಡಿದ್ದಕ್ಕೆ ಧನ್ಯವಾದಗಳು. ಹೇಗೆಯೇ ಮುಂದುವರೆಸಿ. :-)
Post a Comment