ಸಂಜೆಮಳೆಯ ದಿನಗಳಿವು..
ಕೊಚ್ಚಿ ಹೋಗುತ್ತಿರುವ ಚಿಂದಿ ಕನಸುಗಳನ್ನೆಲ್ಲ ಆಯ್ದು
ಒಂದು ಮಾಡಿ ತಿದ್ದಿ ತೀಡಿ ಒಪ್ಪ ಮಾಡುತ್ತಿರುವೆ,
ನೀನು ಅಡ್ಡ ಬರಬೇಡ..
ಯಾವುದೋ ಮರದ ಕರಿಯೆಲೆ ತೆಗೆದು ಹುಬ್ಬಿಗಿಟ್ಟಿದ್ದೇನೆ
ಯಾವುದೋ ಹೂವಿನ ಪಕಳೆ ಹಿಡಿದು ತುಟಿಗಿಟ್ಟಿದ್ದೇನೆ
ಹರಿದ ಸರದ ಮುತ್ತುಗಳು ಇಲ್ಲಿ ಒಡವೆಯಾಗಿವೆ
ಮುರಿದ ಮಂಟಪ ಕಂಬಗಳು ಕಾಲಾಗಿವೆ
ಸಂಪಿಗೆ ಸಿಗದ್ದಕ್ಕೆ ಬೋರೆಹಣ್ಣು ಇಡಲಿದ್ದೇನೆ ಮೂಗಿಗೆ-
ಈಗ ನೀನು ಅಡ್ಡ ಬರಬೇಡ..
ನಿನ್ನೊನಪು ಒಯ್ಯಾರ ಈಕೆಗಿಲ್ಲ,
ಹಾಗಂತ ನಾನು ವಿಚಲಿತನಾಗಿಲ್ಲ..
ಇವಳು ಹಲವು ಕನಸುಗಳಿಂದೊಡೆದ ಚೂರುಗಳ ಒಟ್ಟುರೂಪ
ನೂರು ನಿರ್ನಿದ್ರೆ ರಾತ್ರಿಗಳ ನಿಟ್ಟುಸಿರ ಶಾಪ
ಹೊಸಪ್ರೀತಿಯಿಂದಲೇ ತುಂಬಬೇಕಿದೆ ಜೀವಭಾವ
ಹಾರೈಸಲಣಿಯಾಗು ಅಥವಾ ದಾರಿಬಿಟ್ಟು ನಿಲ್ಲು..
ತೀಡುಗಾಳಿಗೆ ಕಾರುಮೋಡಗಳು ತೇಲಿಹೋಗಲಿ
ಮಿಂಚ ಹೊಳಪಲಿ ಗುಡುಗಿನಬ್ಬರ ಕ್ಷೀಣವಾಗಲಿ
ಮತ್ತೆ ಹೊಮ್ಮಿ ಅರಳಲಿ ಚಿಕ್ಕೆ ಹೂದೋಟ
ನನ್ನ ಕಿನ್ನರಿಗಾಗಲಿ ಚಂದ್ರಿಕೆಯ ಪ್ರಭಾತ.
12 comments:
ಕವನ ತುಂಬಾ ಇಷ್ಟ ಆಯ್ತು ಅದರಲ್ಲೂ "ನೀನು ಅಡ್ಡ ಬರಬೇಡ.." ಅನ್ನೋ ಕೊನೆಯಾ ಸಾಲು ತುಂಬಾ ಚನ್ನಾಗಿ ಮೂಡಿ ಬಂದಿದೆ ಶುಭವಾಗಲಿ
ಸುಶ್ರುತ
ಹುಡುಗಿ ಮೇಲೆ ಈ ರೀತಿ ದಾರಿ ಬಿಡು ಅನ್ನುವುದನ್ನು ನೋಡಿದರೆ ಬಹಳ ಬೇಜಾರಾಗಿರುವಾಗಿದೆ :)
ಎಲೆ,ಹೂವು,ಸರ ಎಲ್ಲಾ ಸೇರಿ ಕೋಲೆಜ್ ಬೇರೆ ಆಗ್ತಾ ಇದೆ..
ಚೆನ್ನಾಗಿದೆ ಕವನ !
ಇಂತಹ ಕನಸುಗಾರನನ್ನು ಎಲ್ಲೂ ಕಾಣೆ!
ಅರ್ಥ ಗರ್ಭಿತವಾದ ಕವನ ಸೊಗಸಾಗಿದೆ.
ಅರ್ಥಪೂರ್ಣ ಕವನ
ಕನಸುಗಾರನಿಗೆ ಜೈ ಎನ್ನಬೇಕು
ಹತಾಶಭಾವನೆಯ ನಿರೂಪಣೆ ಸೊಗಸಾಗಿ ಮೂಡಿಬ೦ದಿದೆ.
ಶುಭಾಶಯಗಳು
ಅನ೦ತ್
ಸುಶ್ರುತ,
ಒಡೆದ ಕನಸುಗಳ ಚೂರಿಂದ ಮೂಡಿದ ಚಂದದ ಕವನ .... ಆದರೆ ಎಲ್ಲಿಯೂ ಒಡಕಿನ ಗೆರೆಯೂ ಕಾಣದು !
ಸುಶ್ರುತ ಬಜ್ ನಲ್ಲೂ ಕೇಳಿದ್ದೆ ಆ ಕಿನ್ನರಿ ಯಾರು ಇಂತಹ ಚಂದದ ಕವಿತೆ ಬರೆಯಿಸಿಕೊಂಡವಳ ಮೇಲೆ ಹೊಟ್ಟೆಕಿಚ್ಚಿದೆ
chandhadha kavana... kavana kattidha reethige manasothe :)
ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳೂ... :-)
ದೇಸಾಯೀಜಿ,
ಆ ಕಿನ್ನರಿಗಿನ್ನೂ ಹೆಸ್ರಿಟ್ಟಿಲ್ಲ ಬಿಡ್ರಿ.. ಮತ್ತೇ, ತೀರ ಹಂಗೆಲ್ಲ ಅದ್ನೆಲ್ಲ ಇಲ್ಲೆಲ್ಲ ಹೇಳ್ಲಿಕ್ ಆಗಂಗಿಲ್ಲ.. ;)
Good One sirr...
ಸುಶ್ರುತ್, ನಿಮ್ಮ ಕವಿತೆಗಳಲ್ಲಿ ಇಷ್ಟವಾಗುವ ಗುಣವೆಂದರೆ ಹೇಳಬೇಕಾದುದನ್ನು ಕವಿತೆಯಾಗಿಯೇ ರೂಪಿಸುವಲ್ಲಿ ನೀವು ತೋರುವ ಶ್ರದ್ಧೆ. ಅಶೋಕ್ ಶೆಟ್ಟರ್
Post a Comment