Wednesday, December 01, 2010

ಕಾರಿರುಳೊಳಾಗಸದಿ ತಾರೆ ನೂರಿದ್ದೇನು..

ಓಂಪಿ ಫೋನ್ ಮಾಡಿದ್ದಿದ್ದ, ಓಂಪ್ರಕಾಶ್. ಹೋಗೀ ಹೋಗಿ ಈ ಆಸಾಮಿಗೆ ಭಾನುವಾರ ಬೆಳಗಾಮುಂಚೆ, ಅದೂ ಅಜಮಾಸು ಎರಡು ವರ್ಷಗಳ ನಂತರ, ನನಗೆ ಫೋನಿಸುವ ತಲುಬಾದರೂ ಯಾಕೆ ಬಂತಪ್ಪಾ ಅಂತ ಗೊಣಗಿಕೊಳ್ಳುತ್ತಲೇ ಎತ್ತಿದ್ದೆ ಫೋನು, ಎರಡು ಮಿಸ್ಕಾಲುಗಳ ನಂತರ. “ಹಾಯ್ ಅಂಶು.. ಹೇಗಿದೀಯಾ? ಯಾರೂಂತ ಗೊತ್ತಾಯ್ತಾ?” ಕೇಳಿದ. ಅದೇ ಧ್ವನಿ. ಅಥವಾ, ಇನ್ನೂ ಸ್ಟೋರಾಗಿಯೇ ಇದ್ದ ಅವನ ಹೆಸರು ಮೊಬೈಲಿನ ಪರದೆಯಲ್ಲಿ ಡಿಸ್‌ಪ್ಲೇ ಆಗಿದ್ದರಿಂದ, ಇದು ಓಂಪಿ ಕಾಲ್ ಅಂತ ಗೊತ್ತಾಗಿಬಿಟ್ಟಿದ್ದರಿಂದ, ಮನಸು ಅವನ ಧ್ವನಿಯನ್ನು ಎದುರಿಸಲು ತಯಾರಾಗಿಬಿಟ್ಟಿದ್ದರಿಂದ ನನಗೆ ಹಾಗೆ ಅನ್ನಿಸಿದ್ದಿರಬೇಕು: ‘ಅದೇ ಧ್ವನಿ’ ಅಂತ. ಅದಿಲ್ಲದಿದ್ದರೆ, ಓಂಪಿ ಬೇರೆ ಯಾವುದಾದರೂ ನಂಬರಿನಿಂದ ಫೋನ್ ಮಾಡಿದಿದ್ದರೆ ನನಗೆ ಹಾಗೆ ಅನಿಸುತ್ತಿರಲಿಲ್ಲವೇನೋ. ಬಹುಶಃ ಗುರುತೂ ಸಿಗುತ್ತಿರಲಿಲ್ಲವೇನೋ. “ಹೇ ಓಂಪಿ.. ನಿನ್ ವಾಯ್ಸ್ ಮರೀಲಿಕ್ಕೆ ಆಗತ್ತೇನೋ? ಹೌ ಆರ್ ಯೂ ಮ್ಯಾನ್? ಇಷ್ಟು ಕಾಲದ ನಂತರ ನನ್ನ ನೆನಪಾದದ್ದು ಹೇಗೆ?” ತುಂಬಾ ಕಷ್ಟಪಟ್ಟು, ಆದಷ್ಟೂ ಆತ್ಮೀಯತೆ ನಟಿಸುತ್ತ ಕೇಳಿದೆ.

“ಅಯಾಮ್ ಫೈನ್ ಮ್ಯಾನ್.. ಇವತ್ತು ಬೆಳಗ್ಗೆ ನ್ಯೂಸ್‌ಪೇಪರಲ್ಲಿ ನಿನ್ನ ಹೆಸರು ನೋಡ್ತಿದ್ದ ಹಾಗೇ ನೆನಪಾಯ್ತು.. ಹಾಗೇ ಕಾಲ್ ಮಾಡ್ಬಿಟ್ಟೆ” ಅಂದ.

‘ನ್ಯೂಸ್‌ಪೇಪರಲ್ಲಿ? ನನ್ ಹೆಸರು??’ ಎರಡು ಕ್ಷಣದ ಮೇಲೆ ಹೊಳೆಯಿತು, ಓಹ್, ಈ ವಾರದ ಸಾಪ್ತಾಹಿಕದಲ್ಲಿ ನನ್ನ ಕತೆ ಬರುತ್ತೆ ಅಂತ ಸಂಪಾದಕರು ಮೇಲ್ ಮಾಡಿದ್ದರು. ಪಬ್ಲಿಷ್ ಆಗಿರಬೇಕು ಹಾಗಾದರೆ. “ಓಹ್ ಫೈನ್.. ನಿಜ ಹೇಳ್ಬೇಕೂಂದ್ರೆ ಇನ್ನೂ ನಾನೇ ನೋಡಿಲ್ಲ ಅದನ್ನ.. ಸಂಡೇ ಅಲ್ವಾ? ಈಗಷ್ಟೇ ಎದ್ದೆ. ಹೆಹ್ಹೆ! ಕತೆ ಬಂದಿದ್ಯಾ? ಓಕೆ ಓಕೆ..” ಮಾತಾಡುತ್ತಲೇ ವರಾಂಡಕ್ಕೆ ನಡೆದು, ಕಿಟಕಿ ಬಳಿ ಬಿದ್ದಿದ್ದ ಪೇಪರ್ ಎತ್ತಿಕೊಂಡೆ.

“ಯಾ.. ನಿನ್ನ ಬ್ಲಾಗ್ ನೋಡ್ತಿರ್ತೀನಿ ನಾನು.. ಆದ್ರೆ ನಮ್ ಆಫೀಸಲ್ಲಿ ಕಮೆಂಟ್ ಮಾಡ್ಲಿಕ್ಕೆ ಆಗಲ್ಲ.. ಅದೇನೋ, ಐಪಿ ಬ್ಲಾಕ್ ಮಾಡ್ಬಿಟ್ಟಿದಾರೆ. ತುಂಬಾ ದಿನದಿಂದ ಕಾಲ್ ಮಾಡ್ಬೇಕೂ ಅಂದ್ಕೋತಿದ್ದೆ; ಅಂತೂ ಇವತ್ತು ಮುಹೂರ್ತ ಸಿಗ್ತು” ನಗಾಡಿದ.

“ಇವತ್ತಾದ್ರೂ ಸಿಕ್ತಲ್ಲ!” ನಾನೂ ನಕ್ಕೆ. 

“ಹೇ, ಇವತ್ತು ಏನ್ ಪ್ರೋಗ್ರಾಂ ನಿಂದು? ಏನೂ ಇಲ್ಲಾಂದ್ರೆ ವೈ ಕಾಂಟ್ ವಿ ಮೀಟ್ ಟುಡೇ ಫಾರ್ ಲಂಚ್? ಎಲ್ಲಾದ್ರೂ ಇಬ್ರಿಗೂ ಹತ್ರ ಆಗೋಂತ ಪ್ಲೇಸಲ್ಲಿ? ಯಾಕೋ ತುಂಬಾ ಮಾತಾಡ್ಬೇಕು ಅನ್ನಿಸ್ತಿದೆ ನಿನ್ ಹತ್ರ” ಕೇಳಿದ.

ಇವತ್ತು ಏನು ಪ್ರೋಗ್ರಾಂ ಇದೆ ಅಂತ ಯೋಚಿಸಿದೆ, ಏನೂ ಹೊಳೆಯಲಿಲ್ಲ. ಓಂಪಿಗೆ ಸಿಗುವುದರಿಂದ ಏನಾದ್ರೂ ತೊಂದರೆ ಇದೆಯಾ ಅಂತ ಯೋಚಿಸಿದೆ, ಏನೂ ಇಲ್ಲ ಅನ್ನಿಸಿತು. “ಪ್ರೋಗ್ರಾಂ ಏನೂ ಇದ್ದಂತಿಲ್ಲ. ಯಾವ್ದಕ್ಕೂ ನಾನು ನಿಂಗೆ ಮೆಸೇಜ್ ಮಾಡ್ತೇನೆ. ಸಿಗೋದಾದ್ರೆ ಎಷ್ಟೊತ್ತಿಗೆ, ಎಲ್ಲಿ ಅಂತ. ರೈಟ್?” ಹೇಳಿದೆ.

“ಆಲ್ ರೈಟ್! ಸೀ ಯೂ ದೆನ್” ಅಂತಂದು ಕಾಲ್ ಡಿಸ್‌ಕನೆಕ್ಟ್ ಮಾಡಿದ.

ಈ ಓಂಪ್ರಕಾಶ್ ನನ್ನ ಎಕ್ಸ್-ಕಲೀಗು. ಮಂಗಳೂರಿನ ಹುಡುಗ. ಹಳೆಯ ಆಫೀಸಿನಲ್ಲಿ ನನ್ನ ಜೊತೆ ಕೆಲಸ ಹಂಚಿಕೊಂಡವ. ಪ್ರತಿ ತಿಂಗಳು ಇಪ್ಪತ್ತೈದನೇ ತಾರೀಖಿನ ಹೊತ್ತಿಗೆ ವ್ಯಾಲೆಟ್ಟು ಖಾಲಿ ಮಾಡಿಕೊಂಡು “ಅಂಶು, ಇನ್ನು ಸಂಬಳ ಆಗೋವರೆಗೆ ನೀನೇ ನನ್ನ ದೈವ” ಎಂದು ಕೈಚಾಚಿ ಕೂರುತ್ತಿದ್ದವ. “ಸಂಬಳ ಲೇಟಾಗಿ ಆದಷ್ಟೂ ಒಳ್ಳೇದು ನೋಡು. ಜಾಸ್ತಿ ದಿನಕ್ಕೆ ಬರುತ್ತೆ. ಅದಿಲ್ಲಾ, ಒಂದನೇ ತಾರೀಖೇ ಆಗಿಬಿಟ್ರೆ, ಹೀಗೆ ಮಂತ್ ಎಂಡ್ ಹೊತ್ತಿಗೆ ಕೈ ಖಾಲಿಯಾಗಿಬಿಡತ್ತೆ!” ಎನ್ನುತ್ತ ಪೇಲವ ನಗೆ ನಗುತ್ತಿದ್ದವ.

“ಅದು ಹ್ಯಾಗೆ ಓಂಪಿ? ನಮಗೆಲ್ಲ ತಿಂಗಳು ಅಂದ್ರೆ ಸಂಬಳದ ದಿನದಿಂದ ಸಂಬಳದ ದಿನದವರೆಗೆ. ಐದನೇ ತಾರೀಖು ಸಂಬಳ ಕೊಟ್ಟರೆ ಮುಂದಿನ ತಿಂಗಳ ಐದರವರೆಗೆ ತಿಂಗಳು; ಏಳನೇ ತಾರೀಖು ಕೊಟ್ಟರೆ ಮುಂದಿನ ಏಳರವರೆಗೆ ತಿಂಗಳು! ಒಂದನೇ ತಾರೀಖಿನಿಂದ ಮೂವತ್ತೊಂದು ಅನ್ನೋದು ಕ್ಯಾಲೆಂಡರಿನಲ್ಲಿ ಅಷ್ಟೇ” ನಾನು ವಾದಿಸುತ್ತಿದೆ.

“ಅದು ಹಾಗಲ್ಲ ಅಂಶು.. ನನ್ನ ಫ್ರೆಂಡ್ಸ್ ಎಲ್ಲರೂ ಸಾಫ್ಟ್‌ವೇರು-ಐಟಿಗಳಲ್ಲಿ ಕೆಲಸ ಮಾಡೋರು. ಅವರಿಗೆಲ್ಲ ಪ್ರತಿ ತಿಂಗಳೂ ಮೂವತ್ತನೇ ತಾರೀಖೇ ಸಂಬಳ ಅಕೌಂಟಿಗೆ ಕ್ರೆಡಿಟ್ ಆಗಿಬಿಡತ್ತೆ. ತಿಂಗಳ ಮೊದಲ ವೀಕೆಂಡು ಫುಲ್ ಪಾರ್ಟಿ. ನನ್ನೂ ಕರೀತಾರೆ, ಹೋಗದೇ ಇರ್ಲಿಕ್ಕೆ ಆಗಲ್ಲ. ಹೋದ್ರೆ ದುಡ್ಡು ಖರ್ಚಾಗತ್ತೆ. ಅದೇ ಸಂಬಳವೇ ಆಗಿರ್ಲಿಲ್ಲ ಅಂದ್ರೆ, ‘ನನ್ ಸ್ಯಾಲರಿ ಇನ್ನೂ ಇನ್ನೂ ಆಗಿಲ್ಲಪ್ಪ’ ಅಂತಂದು ಜಾರಿಕೊಳ್ಳಬಹುದು. ಅಷ್ಟು ದುಡ್ಡಾದ್ರೂ ಉಳಿಯುತ್ತೆ” ಅಂತ ತರ್ಕ ಮುಂದಿಡುತ್ತಿದ್ದ.

ಈ ವಕೀಲಿ ವೃತ್ತಿಯೇ ಹೀಗೆ. ಡಿಗ್ರಿ ಮುಗಿಯುತ್ತಿದ್ದಂತೆಯೇ ಒಳ್ಳೆಯ ಸಂಬಳದ ಕೆಲಸಕ್ಕೆ ಸೇರಿಕೊಳ್ಳಬೇಕು ಅಂತ ಇರುವವರು, ದುಡ್ಡುಮಾಡಬೇಕು ಅಂತ ಇರುವವರು ಈ ಫೀಲ್ಡಿಗೆ ಬರಲೇಬಾರದು. ತಂದೆಯೋ ತಾಯಿಯೋ ಲಾಯರ್ರೇ ಆಗಿದ್ದರೆ ಸರಿ; ಅದಿಲ್ಲದಿದ್ದರೆ ಯಾರೋ ಸೀನಿಯರ್ ಕೆಳಗೆ ಸೇರಿಕೊಂಡು, ಕೋಟ್ ಹಾಕಿಕೊಂಡು ಅವರ ಹಿಂದೆ ಪ್ರತಿದಿನ ಫೈಲ್ಸ್ ಹಿಡಿದು ಹೋಗುವುದಿದೆಯಲ್ಲ, ಥೇಟ್ ನಾಯಿ ಪಾಡು ಅದು. ತಿಂಗಳ ಕೊನೆಗೆ ಅವರು ಕೊಡುವ ಒಂದಿಷ್ಟು ದುಡ್ಡು -ಅದು ಈ ಬೆಂಗಳೂರಿನ ಬದುಕಿಗೆ ಒಂದು ವಾರಕ್ಕೂ ಸಾಲುವುದಿಲ್ಲ. ನಾವೂ ಒಂದಷ್ಟು ಕ್ಲೈಂಟುಗಳನ್ನು ಸಂಪಾದಿಸಿ, ಕೈಲೊಂದಿಷ್ಟು ಕಾಸು ಮಾಡಿಕೊಂಡು, ಸ್ವಂತ ಆಫೀಸು-ಗೀಫೀಸು ಅಂತ ಮಾಡಿಕೊಳ್ಳುವ ಹೊತ್ತಿಗೆ ಮೀಸೆ ಹಣ್ಣಾಗಿರುತ್ತೆ. ಆಮೇಲೆ ಎಷ್ಟು ಸಂಪಾದಿಸಿದರೆ ಏನು ಪ್ರಯೋಜನ?

ಆದರೆ ಈ ಕೆಲಸ ಬಿಟ್ಟು ಎಲ್‌ಪಿ‌ಒ ಒಂದಕ್ಕೆ ಸೇರಿಕೊಂಡಮೇಲೆ ಓಂಪಿಯ ರಿವಾಜೇ ಬದಲಾಗಿಹೋಯ್ತು. ನಾನು ತೆಗೆದುಕೊಳ್ಳುತ್ತಿದ್ದ ಸಂಬಳದ ಎರಡರಷ್ಟು ಅವನಿಗೆ ಅಲ್ಲಿ ಸೇರುವಾಗಲೇ ಸಿಕ್ಕಿಬಿಟ್ಟಿತು. ಮೊದಲ ಸಂಬಳದಲ್ಲಿ ಒಳ್ಳೆಯದೊಂದು ರೆಸ್ಟುರೆಂಟಿನಲ್ಲಿ ತನ್ನೆಲ್ಲ ಐಟಿ ಫ್ರೆಂಡುಗಳನ್ನೂ ಕರೆದು ಪಾರ್ಟಿ ಕೊಟ್ಟ. ಪಾರ್ಟಿ ತುಂಬ ಹುರುಪಿನಿಂದ ಓಡಾಡುತ್ತಿದ್ದ ಓಂಪಿಯನ್ನು ನೋಡಿ ‘ಬಚಾವಾಗಿಬಿಟ್ಟ ಹುಡುಗ’ ಅಂತ ಅಂದುಕೊಂಡೆ. ಆಮೇಲೆ ಒಂದೆರಡು ತಿಂಗಳು ಆಗೀಗ ಕಾಲ್ ಮಾಡ್ತಿದ್ದ. ಆರೇಳು ತಿಂಗಳ ನಂತರ ನಾನೇ ಒಮ್ಮೆ ಫೋನಿಸಿದರೆ, ರಿಸೀವ್ ಮಾಡದೇ ಕಟ್ ಮಾಡಿ, ‘ಡೆಲ್ಲಿಯಲ್ಲಿದ್ದೀನಿ. ರೋಮಿಂಗ್. ವಾಪಸ್ ಬಂದಮೇಲೆ ಕಾಲ್ ಮಾಡ್ತೀನಿ’ ಅಂತ ಎಸ್ಸೆಮ್ಮೆಸ್ ಮಾಡಿದ. ಆಮೇಲೆ ಅದೇನಾನಿಯಿತೋ, ಅವನೂ ಕಾಲ್ ಮಾಡಲಿಲ್ಲ, ನನಗೂ ಆಗಲಿಲ್ಲ; ಓಂಪಿಯೊಂದಿಗಿನ ಸಂಪರ್ಕವೇ ಕಡಿದುಹೋಗಿತ್ತು.

ಈಗ ಹೆಚ್ಚುಕಮ್ಮಿ ಎರಡು ವರ್ಷಗಳ ನಂತರ ಇದ್ದಕ್ಕಿದ್ದಂತೆಯೇ ಫೋನ್ ಮಾಡಿ ಊಟಕ್ಕೆ ಸಿಗೋಣ ಅಂತ ಕರೆದಿದ್ದ ಅವನ ಆಮಂತ್ರಣವನ್ನು ಯಾಕೋ ಬೇಡ ಅನ್ನಲಾಗಲಿಲ್ಲ. ಪತ್ರಿಕೆಯವರು ನಾನು ಕಳುಹಿಸಿದ್ದ ಕತೆಯನ್ನು ಎಲ್ಲೆಲ್ಲೋ ಎಡಿಟ್ ಮಾಡಿ ಪ್ರಕಟಿಸಿದ್ದರು. ಇವರಿಗೆ ಕಳುಹಿಸುವುದಕ್ಕಿಂತ ಸುಮ್ಮನೆ ಬ್ಲಾಗಿನಲ್ಲಿ ಹಾಕಿಕೊಳ್ಳುವುದು ಬೆಸ್ಟು ಅಂತ ಬೈದುಕೊಳ್ಳುತ್ತ ಪೇಪರನ್ನು ಟೀಪಾಯ್ ಮೇಲೆ ಎಸೆದೆ. ‘ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟ್, ಕನ್ನಿಂಗ್‌ಹ್ಯಾಂ ರೋಡ್’ ಅಂತ ಓಂಪಿಗೆ ಎಸ್ಸೆಮ್ಮೆಸ್ ಮಾಡಿದೆ.

* * *

ರೆಸ್ಟುರೆಂಟಿನ ರೂಫ್ ಗಾರ್ಡನ್ನಿನ ಅಂಗಣದಲ್ಲಿ ಗಿಜಿಗಿಜಿಯಿತ್ತು. ಪುಟ್ಟ ಪುಟ್ಟ ದ್ವೀಪಗಳಂತೆ ಅಲ್ಲಲ್ಲಿರಿಸಿದ ರೌಂಡ್ ಟೇಬಲ್ಲುಗಳ ಸುತ್ತ ಕೂತು ಅವರವರದೇ ಮಾತು-ನಗೆ-ತಿಂಡಿ-ತೀರ್ಥಗಳಲ್ಲಿ ಮುಳುಗಿದ್ದ ಕುಟುಂಬಗಳು, ಜೋಡಿಗಳು, ಗೆಳೆಯರ ಗುಂಪುಗಳು. ಹೊರಗೆ ಮಧ್ಯಾಹ್ನದ ಬಿಸಿಲಿದ್ದರೂ ಒಳಗೆ ಕತ್ತಲೆ ಸೃಷ್ಟಿಸಿ ದೀಪಗಳನ್ನು ಉರಿಸಿದ್ದರು. ಮೂಲೆಯಲ್ಲೆಲ್ಲೋ ಕೂತಿದ್ದ ಓಂಪಿ ಎದ್ದು ನಿಂತು ‘ಇಲ್ಲಿದ್ದೀನಿ’ ಅಂತ ಕೈ ಮಾಡಿದ. ಅತ್ತಲೇ ಹೋದೆ.

“ಸಾರಿ, ನಾನು ಬಂದು ಆಗಲೇ ಅರ್ಧ ಗಂಟೆ ಆಯ್ತು. ಸುಮ್ನೆ ಕೂರೋಕೆ ಆಗದೇ ಮುಂದುವರೆಸಿಬಿಟ್ಟೆ!” ಅಂತ, ಟೇಬಲ್ಲಿನ ತುದಿಯಲ್ಲಿದ್ದ ಎರಡು ಖಾಲಿ ಬಿಯರ್ ಬಾಟಲಿಗಳನ್ನು ತೋರಿಸಿದ.

“ಹೇ, ಸರಿಯಾಯ್ತು ಬಿಡು. ಮನೆ ಕ್ಲೀನ್ ಮಾಡ್ತಾ ಕೂತೆ, ಹೊರಡೋದು ಲೇಟ್ ಆಯ್ತು” ಎಂದು ಕೈ ಕುಲುಕಿದೆ.

“ಸೋ? ಬಿಯರ್?” ಕೇಳಿದ.

ಮಧ್ಯಾಹ್ನದ ಹೊತ್ತಿಗೆಲ್ಲಾ ಬಿಯರ್ ಕುಡಿಯುವುದು ನನಗೆ ಸಹ್ಯವೇ ಅಲ್ಲದಿದ್ದರೂ, ಕುಡಿಯದಿದ್ದರೆ ಓಂಪಿಯೊಂದಿಗೆ ಸರಿಯಾಗಿ ಪಾಲ್ಗೊಳ್ಳುವುದಕ್ಕೆ ಆಗುವುದಿಲ್ಲವೇನೋ ಎನ್ನಿಸಿ, “ಪಿಂಟ್ ಸಾಕು” ಎಂದೆ.

“ಎಂಥಾ ಪಿಂಟ್? ಒಂದು ಬಿಯರ್ ಕುಡಿ, ಏನೂ ಆಗಲ್ಲ” ಅಂತಂದು, ಅವನೇ ವೆಯ್ಟರ್‌ನನ್ನು ಕರೆದು ಆರ್ಡರ್ ಮಾಡಿದ. ಮೌನ ಕವಿಯಿತು.

“ಸೂಪರ್. ಇವತ್ತಿನ ಕತೆ ಚೆನ್ನಾಗಿತ್ತು” ಅವನೇ ಮಾತಿಗೆ ಶುರು ಮಾಡಿದ. “ನೀನು ಬರೀತಿರೋದು ನಂಗೆ ತುಂಬಾ ಖುಶಿ ನೋಡು.. ಆವಾಗ ನಾನು-ನೀನು ಒಟ್ಟಿಗೆ ಕೆಲಸ ಮಾಡ್ತಿರಬೇಕಾದ್ರೆ ನೀನು ಬರೀತಿರ್ಲಿಲ್ಲ ಅಲ್ವಾ? ತುಂಬಾ ಓದ್ತಿದ್ದೆ, ಅದು ನಂಗೊತ್ತು. ಮಾತಾಡ್ಬೇಕಾದ್ರೂ ಒಂಥರಾ ಸಾಹಿತಿ ಥರ ಮಾತಾಡ್ತಿದ್ದೆ. ಕೆಲವರು ವೇದಿಕೆಯಲ್ಲಿ ಬರೆದುಕೊಂಡು ಬಂದ ಭಾಷಣಾನಾ ಓದ್ತಾರಲ್ಲ, ಹಹ್ಹ, ಹಾಗೆ. ಆದ್ರೂ ಮಜಾ ಇತ್ತು ಆ ದಿನಗಳು.. ಕೈಯಲ್ಲಿ ಕಾಸಿಲ್ದಿದ್ರೂ ತುಂಬಾ ಖುಶಿಯಾಗಿ ಇರ್ತಿದ್ವಿ, ಅಲ್ವಾ?”

ವೇಯ್ಟರ್ ಬಂದು ನನ್ನ ಮುಂದೊಂದು ಗ್ಲಾಸ್ ಇಟ್ಟು ಬಿಯರ್ ಬಗ್ಗಿಸಿ ಹೋದ. ತಣ್ಣಗಿತ್ತು. ಓಂಪಿಯ ಬಿಯರು ಆಗಲೇ ಕೆಲಸ ಮಾಡುತ್ತಿತ್ತು, ಅವನು ಮುಂದುವರೆಸಿದ: “ಬದುಕು ಹೇಗೆಲ್ಲ ಬದಲಾಗಿಹೋಗತ್ತೆ ಅಂತ ಯೋಚಿಸಿದರೆ ಆಶ್ಚರ್ಯ ಆಗುತ್ತೆ ಅಲ್ವಾ ಅಂಶು..? ನಾನು ನಿನ್ ಜೊತೆ ಕೆಲಸ ಮಾಡ್ತಿರಬೇಕಾದ್ರೆ ಲೋಕಲ್ ಬಾರಿಗೆ ಹೋಗಲಿಕ್ಕೆ ದುಡ್ಡು ಇರ್ತಿರಲಿಲ್ಲ. ಸಾಲ ಮಾಡ್ತಿದ್ದೆ ನಿನ್ನ ಹತ್ರ.  ಈಗ ನೋಡು, ದುಬಾರಿ ರೆಸ್ಟುರೆಂಟಿನಲ್ಲಿ ಕೂತಿದೀನಿ. ಕಾರು ಇದೆ, ಸ್ವಂತ ಫ್ಲಾಟ್ ಖರೀದಿ ಮಾಡಿದೀನಿ, ಇನ್ನು ಎರಡು ವರ್ಷ: ನನ್ನದೇ ಕಂಪನಿ ಶುರು ಮಾಡ್ತೀನಿ..” ಓಂಪಿ ಹೇಳುತ್ತ ಹೋದ.

ಯೋಚಿಸುತ್ತಿದ್ದೆ: ತಪ್ಪುತಪ್ಪು ಇಂಗ್ಲೀಷ್ ಬಳಸುತ್ತಿದ್ದ, ಬಾಸ್ ಬಳಿ ಮಾತಾಡಲು ಹೆದರುತ್ತಿದ್ದ, ರೆಸ್ಯೂಮ್ ಮಾಡಿಕೊಡು ಅಂತ ನನ್ನ ಬಳಿ ದುಂಬಾಲು ಬೀಳುತ್ತಿದ್ದ, ತನ್ನ ಕಾಲೇಜ್ ದಿನಗಳ ಹುಡುಗಿಯನ್ನು ನೆನೆದು ಭಾವುಕನಾಗುತ್ತಿದ್ದ ಓಂಪಿ ಇವನೇನಾ ಅಂತ. ಹಣ ಕೊಡುವ ಆತ್ಮವಿಶ್ವಾಸ ಎಂದರೆ ಇದೇ ಇರಬೇಕು. ತನ್ನ ಅಪ್ಪ-ಅಮ್ಮನ ಬಗ್ಗೆ ನನ್ನೊಡನೆ ಹಂಚಿಕೊಂಡಿದ್ದ ಓಂಪಿ. ತನಗೊಬ್ಬ ತಂಗಿಯಿರಬೇಕಿತ್ತು ಅಂತ ಆಶೆ ಪಟ್ಟಿದ್ದ ಓಂಪಿ. ಪತ್ರಿಕೆಯೊಂದರಲ್ಲಿ ಬರುತ್ತಿದ್ದ ಪ್ರೇಮಪತ್ರದ ಅಂಕಣವನ್ನೆಲ್ಲ ಕತ್ತರಿಸಿ ಇಟ್ಟುಕೊಂಡಿದ್ದ ಓಂಪಿ. ತನ್ನ ರೂಂಮೇಟ್ಸ್‌ಗೆ ಹೇಗೆ ಅಡುಗೆ ಮಾಡಲಿಕ್ಕೇ ಬರುವುದಿಲ್ಲ ಅಂತ ಹೇಳಿಕೊಂಡು ನಗುತ್ತಿದ್ದ ಓಂಪಿ. ತಾನು ದುಡಿದ ದುಡ್ಡಲ್ಲಿ ಕೊಂಡ ಮೊಬೈಲನ್ನು ಅತ್ಯಂತ ಅಕ್ಕರಾಸ್ಥೆಯಿಂದ ಸವರಿದ್ದ ಓಂಪಿ. ಹಾಗಾದರೆ, ಶ್ರೀಮಂತನಾದ ನಿಟ್ಟಿನಲ್ಲಿ ಆ ದಿನಗಳ ಆ ಭಾವುಕತೆಯನ್ನೆಲ್ಲ ಕಳಕೊಂಡುಬಿಟ್ಟಿದ್ದಾನಾ ಇವನು ಅಂತ ನಾನು ಆಲೋಚಿಸುತ್ತಿರುವಾಗಲೇ ಓಂಪಿ ನನ್ನಾಲೋಚನೆಯನ್ನು ತುಂಡು ಮಾಡಿದ:

“ಆದರೆ ನಾನು ಮೊದಲಿನಷ್ಟು ಖುಶಿಯಾಗಿಲ್ಲ ಅನ್ನಿಸ್ತಿದೆ ಅಂಶು.. ಮೊದಲಾದರೆ ಸ್ಯಾಲರಿ ಯಾವಾಗ ಬರುತ್ತೆ ಅಂತ ಕಾಯಬೇಕಿತ್ತು. ಬರ್ತಿದ್ದ ಸ್ವಲ್ಪ ದುಡ್ಡಲ್ಲಿ ಲೈಫನ್ನ ಅಡ್ಜಸ್ಟ್ ಮಾಡೋದ್ರಲ್ಲಿ ಏನೋ ಥ್ರಿಲ್ ಇರ್ತಿತ್ತು. ಅವರಿವರ ಹತ್ರ ಸಾಲ ಮಾಡ್ಕೊಂಡು, ಅವರು ವಾಪಸ್ ಕೇಳ್ದಾಗ ‘ಕೊಡ್ತೀನಿ ಕೊಡ್ತೀನಿ’ ಅಂತ ಮುಂದಿನ ತಿಂಗಳವರೆಗೆ ಸಾಗಹಾಕೋದರಲ್ಲಿ ಮಜಾ ಇರ್ತಿತ್ತು. ರೂಂಮೇಟ್ಸ್ ಜೊತೆ ಜಗಳ ಮಾಡೋದರಲ್ಲಿ, ಭಿಕಾರಿಗಳ ಥರ ಕುಡಿದು ಬೀಳೋದರಲ್ಲಿ ವಿಲಕ್ಷಣ ಸುಖ ಇತ್ತು. ನೆನಪಿದೆಯಲ್ಲ ನಿಂಗೆ, ಬಿ‌ಎಂಟಿಸಿ ಬಸ್ಸಿಗೆ ಬಂದ್ರೆ ದುಡ್ಡು ಖರ್ಚಾಗುತ್ತೆ ಅಂತ, ವೈಯಾಲಿಕಾವಲ್‌ನಿಂದ ಆಫೀಸಿಗೆ ಮೂರು ಕಿಲೋಮೀಟರ್ ನಡೆದೇ ಬರ್ತಿದ್ದೆ. ಬೆಳಗ್ಗೆ ಬೇಗ ಹೊರಟು, ಲೇಟಾಯ್ತು ಅಂತ ಸರಸರ ಹೆಜ್ಜೆ ಹಾಕಿ ಬರೋದರಲ್ಲಿ ಎಂಥಾ ಟೆನ್ಷನ್ ಇರ್ತಿತ್ತು.. ಬಾಸ್ ಬೈದರೆ ಅನ್ನೋ ಹೆದರಿಕೆ..

“ಆದರೆ ಈಗ ನೋಡು, ದುಡ್ಡು ನಂಗೊಂದು ತಲೆಬಿಸಿಯ ಸಂಗತಿಯೇ ಅಲ್ಲ. ಸಂಬಳ ಯಾವತ್ತೋ ಅಕೌಂಟಿಗೆ ಕ್ರೆಡಿಟ್ ಆಗಿರುತ್ತೆ, ನನಗೆ ಅತ್ತಕಡೆ ಗಮನಿಸುವ ಗೋಜೂ ಇಲ್ಲ. ಜೇಬಲ್ಲಿ ಹಣ ಇಲ್ಲ ಅಂದಾಗ ಎಟಿ‌ಎಂಗೆ ಹೋಗಿ ಡ್ರಾ ಮಾಡ್ಕೋತೀನಿ. ಶಾಪಿಂಗ್ ಮಾಡ್ಬೇಕು ಅಂದ್ರೆ ಕಾರ್ಡುಗಳಿವೆ. ಅಷ್ಟು ದೊಡ್ಡ ಫ್ಲಾಟಲ್ಲಿ ನಾನು ಒಬ್ಬನೇ ಇರ್ತೀನಿ. ವೀಕೆಂಡುಗಳಲ್ಲಿ ಕಲೀಗುಗಳು, ಬ್ಯುಸಿನೆಸ್ ಪಾರ್ಟ್‌ನರ್‌ಗಳ ಜೊತೆ ಐಶಾರಾಮಿ ಕ್ಲಬ್ಬುಗಳಲ್ಲಿ ಪಾರ್ಟಿ. ಕುಡಿದದ್ದು ಜಾಸ್ತಿಯಾದರೆ ಡ್ರೈವರ್ ಇದಾನೆ, ಕಾರು ಮನೆ ಮುಟ್ಟಿಸುತ್ತೆ. ಒಂಥರಾ ವಿಚಿತ್ರ ನಿರಾಳತೆ.. ತಾಳು, ನಿಂಗೆ ಇನ್ನೊಂದು ಬಿಯರ್ ಹೇಳ್ತೀನಿ” ಓಂಪಿ ಮಾತಾಡಲಿಕ್ಕೇ ಬಂದವನಂತಿದ್ದ.

ನನಗೆ ಇಲ್ಲಿಗೆ ಬರುವ ಮುನ್ನ, ಓಂಪಿಯನ್ನು ಬಾಹ್ಯವಾಗಿ ಎದುರಿಸುವ ಮುನ್ನ ಕೊಂಚ ಹಿಂಜರಿಕೆಯಿತ್ತು. ಅದೇ ಆಫೀಸು, ಅದೇ ಮನೆ, ಓಂಪಿಗೆ ಯಾವ ರೀತಿಯಲ್ಲೂ ಸರಿಸಮವಲ್ಲದ ದುಡಿಮೆ, ಒಂದೇ ತರಹದ ಜೀವನಕ್ರಮ, ಅವವೇ ಕನಸುಗಳು, ಹುಚ್ಚುಚ್ಚು ಧ್ಯೇಯಗಳು, ನೂರಾರು ಗೊಂದಲಗಳನ್ನಿಟ್ಟುಕೊಂಡು ಬಾಳ್ವೆ ಮಾಡುತ್ತಿರುವ ನಾನು, ಈಗ ಪೂರ್ತಿ ಬದಲಾಗಿರಬಹುದಾದ ಓಂಪಿಯನ್ನು ಹೇಗೆ ಸ್ವೀಕರಿಸಲಿ ಎಂಬ ಅಳುಕಿತ್ತು. ಭವಿಷ್ಯದ ಬಗ್ಗೆ ಸ್ವಲ್ಪವೂ ಮುಂದಾಲೋಚನೆ ಇಲ್ಲದೆ, ನಾಳೆ ಬೆಳಗಾದರೆ ಏನು ಎಂಬ ಬಗ್ಗೆ ಕಲ್ಪನೆ ಸಹ ಇಲ್ಲದೆ, ಬದುಕು ಹೇಗೆ ಬರುತ್ತದೋ ಹಾಗೆ ಎದುರಿಸುವ ತೀರ್ಮಾನದೊಂದಿಗೆ ದಿನಗಳನ್ನು ಕಳೆಯುತ್ತಿರುವ ನಾನು, ಈಗ ಸುಭದ್ರ ನೆಲೆಯ ಮೇಲೆ ನಿಂತಿರಬಹುದಾದ, ಸ್ಪಷ್ಟ ನಿರ್ಧಾರಗಳ, ಪೂರ್ತಿ ಆತ್ಮವಿಶ್ವಾಸಗಳನ್ನು ರೂಢಿಸಿಕೊಂಡಿರಬಹುದಾದ ಓಂಪ್ರಕಾಶನೊಂದಿಗೆ ಏನು ಮಾತನಾಡಿಯೇನು ಎಂಬ ಆತಂಕವಿತ್ತು. ‘ಅರೆ ನೀನೇನೋ, ಇನ್ನೂ ಹಾಗೇ ಇದೀಯ?’ ಅಂತ ಅವನು ಕೇಳಿಬಿಟ್ಟರೆ ಕೊಡಲಿಕ್ಕೆ ನನ್ನ ಬಳಿ ಗಟ್ಟಿಯಾದ ಉತ್ತರ ಸಹ ಇರಲಿಲ್ಲ. ಆದರೆ ಓಂಪಿ, ಆರ್ಥಿಕ ಸ್ವಾತಂತ್ರ್ಯ ಗಳಿಸಿರುವುದೊಂದನ್ನು ಹೊರತುಪಡಿಸಿದರೆ, ನನ್ನ ತರಹುದೇ ಗೊಂದಲಗಳಿಂದ ಬಳಲುತ್ತಿರುವ ಮನುಷ್ಯನಂತೆ ಕಾಣತೊಡಗಿದ. ದೆಸೆಯಿಲ್ಲದ, ಅಂತ್ಯ ಗೋಚರಿಸದ ಸಾಗರದಲ್ಲಿ ದಿಕ್ಕುತಪ್ಪಿದ ಒಂಟಿದೋಣಿಯ ಅಂಬಿಗರೇ ಎಲ್ಲರೂ? ಬಿಯರ್ ಕಹಿ ಕಳೆದುಕೊಳ್ಳತೊಡಗಿತು.

“ಅಮೃತಾಗೆ ಮದುವೆ ಆಯ್ತು” ಥಟ್ಟನೆ ಹೇಳಿದ ಓಂಪಿ, “ಯು ಸೀ, ಈಗ ಕತೆ ಬರೀಬಹುದು ನೀನು ನನ್ನ ಲೈಫ್ ಬಗ್ಗೆ, ಹಹಹಾ, ಕತೆ!” ಬಿಯರಿಗೆ ಕಹಿ ಮರುಕಳಿಸಿತು. ಜೊತೆಗೆ ಕೆಲಸ ಮಾಡಬೇಕಾದರೆ ದಿನಕ್ಕೊಮ್ಮೆಯಾದರೂ ಪ್ರಸ್ತಾಪವಾಗುತ್ತಿದ್ದ ವಿಷಯ. ಕಾಲೇಜು ದಿನಗಳಿಗೆ ಅವನನ್ನು ಸವಿಸವಿ ನೆನಪಿನ ಮೆರವಣಿಗೆಯಲ್ಲಿ ಒಯ್ಯುತ್ತಿದ್ದ ವಿಷಯ. ಆಫೀಸಿನ ಬಿಜಿಯ ನಡುವೆ, ಟೀಯೊಂದಿಗಿನ ಸಿಹಿಸಿಹಿ ಬಿಸ್ಕೇಟಾಗುತ್ತಿದ್ದ ವಿಷಯ. ಗಿಜಿಗಿಜಿಗುಡುವ ಧಗೆಯ ಸಂತೆಯಲ್ಲಿ ಇದ್ದಕ್ಕಿದ್ದಂತೆ ಮಧುರ ಮಳೆಯೊಂದು ಸುರಿಯತೊಡಗಿ ಎಲ್ಲರನ್ನೂ ಇದ್ದಲ್ಲೆ ಮೋಹಕರನ್ನಾಗಿ ಮಾಡುವಂತೆ, ಓಂಪಿ ತನ್ನ ಹುಡುಗಿಯ ನೆನಪಾದೊಡನೆ ಈಗಷ್ಟೆ ಅರಳಿದ ಹೂವಾಗುತ್ತಿದ್ದ. ನನ್ನ ಬಳಿ ಕತೆ ಹೇಳುತ್ತಿದ್ದ. ಹೇಗಾದ್ರೂ ಮಾಡಿ ಫೋನ್ ನಂಬರ್ ಪತ್ತೆ ಮಾಡಿಕೊಡು ಅಂತ ದುಂಬಾಲು ಬೀಳುತ್ತಿದ್ದ.

ಅಮೃತಾ ಇವನ ಕಾಲೇಜಿನ ಕ್ಲಾಸ್‌ಮೇಟು. ಥೇಟು ಸಿನಿಮಾ ಶೈಲಿಯಲ್ಲಿತ್ತು ಪ್ರೇಮದ ಕತೆ. ಈ ಪ್ರೀತಿಯಲ್ಲಿ ನೋಡಿದ ತಕ್ಷಣ ಇಷ್ಟವಾಗಿಬಿಡುವುದು ಅಂತೊಂದು ಇರುತ್ತದಲ್ಲ, ಹಾಗೇ ಆಗಿತ್ತು ಓಂಪಿಗೂ. ತಾನು ಇಷ್ಟಪಟ್ಟಿದ್ದ, ಮನಸಲ್ಲೇ ಆರಾಧಿಸಿದ್ದ ಹುಡುಗಿಯನ್ನೇ ಗೆಳೆಯರು ಎತ್ತಿಕಟ್ಟಿದ್ದರು ಕಾಲೇಜಿನ ಗೆಟ್-ಟುಗೆದರ್ ಸಮಾರಂಭದಂದು. ಆವತ್ತು ಕಾಲೇಜಿನಲ್ಲಿ ಬಣ್ಣಬಣ್ಣದ ಸೀರೆಗಳ ಸರಭರ. ಎಷ್ಟೇ ಬೇಡವೆಂದರೂ ಕಣ್ಸೆಳೆವ ತರಳೆಗಳ ನಡುವೆ ಈ ಹಂಸಬಿಳುಪಿನ ಸೀರೆಯ ಹುಡುಗಿ ಸ್ಟೇಜಿಗೆ ಹೋದಳು. ಗಾನದೇವತೆ ಒಲಿದು ಬಂದಂತೆ, ದೂರದಲ್ಲಿ ಕೂತಿದ್ದ ಓಂಪಿ ಪರವಶನಾಗುವಂತೆ ಹಾಡಿದಳು:


ಕೋಟಿಪಲ್ಲವಿ ಹಾಡುವ ಕನಸು ಇದು
ಕನಸುಗಾರನ ಕಣ್ಣಿನ ಬೆಳಕು ಇದು ||

ಅಚಾನಕ್ ಎಂಬಂತೆ, ಪಕ್ಕದಲ್ಲಿದ್ದ ಹುಡುಗ ಇವನ ಕಿವಿಯಲ್ಲಿ ಉಸುರಿಬಿಟ್ಟ: “ಹೇ ನೋಡು, ನಾ ಹೇಳ್ತಿರ್ತಿದ್ದೆನಲ್ಲ, ನಿನ್ ಹಾಗೇ ಇದಾಳೆ ಪಕ್ಕದ ಡಿಪಾರ್ಟ್‌ಮೆಂಟಿನ ಹುಡುಗಿ ಒಬ್ಬಳು ಅಂತ, ಇವಳೇ ಅದು. ಫೇಸ್‌ಕಟ್ಟು, ನಡೆಯೋ ಸ್ಟೈಲು, ಮಾತಾಡೋ ರೀತಿ -ಎಲ್ಲಾ, ಥೇಟ್ ನಿನ್ ಥರಾನೇ. ನಿಂಗೆ ಹಾಗನ್ಸಲ್ವಾ?” ಹೌಹಾರಿಬಿಟ್ಟ ಓಂಪಿ. ಇಷ್ಟು ದಿನ ಯಾವ ಹುಡುಗಿಯನ್ನು ಮನಸಲ್ಲೇ ಅರಸಿಯಂತೆ ಭಾವಿಸಿ ಅರ್ಚಿಸಿದ್ದೆನೋ ಅವಳನ್ನೇ ಗೆಳೆಯರು ಸೇರಿ ತನಗೆ ಎತ್ತಿ ಕಟ್ಟಿದ್ದು ಕಂಡು ಓಂಪಿ ರೋಮಾಂಚಿತನಾದ. ಆಗ ಹೊಳೆದ ಅವನ ಕಣ್ಣ ಮಿಂಚೇ ಸಾಕಾಯಿತು ಕಾಲೇಜೆಲ್ಲ ಹಬ್ಬಲು: ಓಂಪ್ರಕಾಶ್-ಅಮೃತಾ ಪೂಜಾರ್ ಸೂಪರ್ ಜೋಡಿ. ಸ್ವಲ್ಪೇ ದಿನಗಳಲ್ಲಿ ಅದು ಅವಳಿಗೂ ಗೊತ್ತಾಯಿತು. ಮತ್ತಿನ್ನೇನು- ಕಣ್ಣ ಇಷಾರೆ, ಮಾತು, ಸಂಚಲನ, ಸುತ್ತಾಟ, ಪಬ್ಬಾಸ್ ಪಾರ್ಲರಿನಲ್ಲಿ ಐಸ್‌ಕ್ರೀಮು. ಮಂಗಳೂರಿನ ಪ್ರತಿ ಬೀಚಿನ ಮರಳ ಮೇಲೆ ಇವರು ಪರಸ್ಪರರ ಹೆಸರು ಬರೆದರು. ತೆರೆ ಬಂದು ಅಳಿಸಿ ಹೋದಂತೆ ಮತ್ತೆ ಮತ್ತೆ ಬರೆದರು.

“ಈಗಲೂ ನೆನಪಾಗ್ತಾಳೆ ಅಂಶು.. ಹಾಳಾದವಳು, ಯಾರನ್ನೋ ಮದುವೆ ಮಾಡ್ಕೊಂಡು ಹಾಯಾಗಿದಾಳೆ. ಐಟಿ - ಐಟಿ ಹುಚ್ಚಲ್ಲ ನಮ್ಮ ಜನಕ್ಕೆ- ಯಾರೋ ಸಾಫ್ಟ್‌ವೇರ್ ಇಂಜಿನಿಯರನ್ನೇ ಮದುವೆ ಆದಳು. ಆಗಷ್ಟೆ ಎಲ್‌ಎಲ್‌ಬಿ ಮುಗಿಸಿ ಎರಡು ಸಾವಿರ ರೂಪಾಯಿ ಸಂಬಳಕ್ಕೆ ಯಾರೋ ಸೀನಿಯರ್ ಕೆಳಗೆ ಚಾಕರಿ ಮಾಡ್ತಿರೋ ಬಡ ಲಾಯರ್‌ನ ಯಾರು ಒಪ್ತಾರೆ? ನೋ ನೋ, ಐ ಹ್ಯಾವ್ ನೋ ಕಂಪ್ಲೇಂಟ್ಸ್, ಸರಿಯಿತ್ತು ಅವಳು ಮಾಡಿದ್ದು ಆಗಿನ ಸಮಯಕ್ಕೆ. ಅಪ್ಪನ ದಬಾಯಿಸುವಿಕೆಯ ನಡುವೆ, ಅಳೋ ಅಮ್ಮನ ಮುಂದೆ ಯಾವ ಹುಡುಗಿಯೂ ಕಾನ್ಫಿಡೆನ್ಸ್ ಸಹ ಇಲ್ಲದ ಹುಡುಗನನ್ನ ನೆಚ್ಚಿಕೊಂಡು ಕನಸು ಕಾಣ್ತಾ ಕೂರಲ್ಲ. ಶಿ ವಾಸ್ ರೈಟ್. ಸರಿಯಿತ್ತು ಅವಳ ನಿರ್ಧಾರ. ಆದರೆ ಈಗ ಸಮಸ್ಯೆಯೇನಿದ್ರೂ ನಂದು ಅಷ್ಟೆ: ಇಷ್ಟೆಲ್ಲ ದುಡಕೊಂಡು ನಾನೇನು ಮಾಡ್ಲಿ ಅನ್ನೋದು” ಓಂಪಿಗೆ ನಾನು ಕತೆ ಬರೆಯಬೇಕಿತ್ತು, ಸಿಪ್ಪಿಗೊಂದು ಬಿಕ್ಕಿನ ಕತೆ ಹೇಳಿದ. ನನಗೆ ಹೇಳಬೇಕೆನಿಸುತ್ತಿತ್ತು: ‘ಇಲ್ಲ ಅಂಶೂ.. ಇವಿಷ್ಟನ್ನೇ ಇಟ್ಟುಕೊಂಡು ನಂಗೆ ಕತೆ ಬರೀಲಿಕ್ಕೆ ಆಗಲ್ಲ.. ಜಗತ್ತಿನ ತೊಂಬತ್ತು ಪ್ರತಿಶತ ಪ್ರೇಮವೈಫಲ್ಯದ ಕತೆಗಳೂ ಹೀಗೇ ಇರ್ತವೆ. ಅವನ್ನಾದರೂ ಎಷ್ಟು ಅಂತ ಓದ್ತಾರೆ ಜನ? ಪ್ರೀತಿಯ ಕತೆಗಳನ್ನ ನೋಡಿದರೆ ಸಾಕು, ವಾಕರಿಕೆ ಬರುತ್ತೆ -ಅಷ್ಟೊಂದು ಕತೆಗಳಾಗಿದಾವೆ ಆಗಲೇ. ಐ ಕಾಂಟ್ ರೈಟ್..’ ಊಹುಂ, ಆದರೆ ಓಂಪಿ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಸಧ್ಯ, ಅವನೇ ವಿಷಯ ಬದಲಿಸಿದ:

“ಹೋಗಲಿ, ಸಾರಿ, ನಿನ್ನ ಕತೆ ಹೇಳು. ಬಾಸ್ ಸರಿಯಾಗಿ ಸಂಬಳ ಕೊಡ್ತಿದಾರಾ? ಕ್ಲೈಂಟೇಲ್ ಹೇಗಿದೆ? ಹೇ, ಯಾವುದಾದರೂ ಹುಡುಗೀನ ಲವ್-ಗಿವ್ ಮಾಡಿದ್ಯೇನೋ? ನಿನ್ನ ಆರ್ಕುಟ್ ಫ್ರೆಂಡ್‌ಲಿಸ್ಟ್ ನೋಡಿದೆ.. ಬರೀ ಹುಡುಗೀರೇ ತುಂಬಿಕೊಂಡಿದಾರೆ. ಬಿಟ್ಟಿರಲ್ಲ ನೀನು, ಯಾರನ್ನಾದ್ರೂ ಸೆಟ್ ಮಾಡ್ಕೊಂಡಿರ್ತೀಯಾ. ಈಗಂತೂ ಸಾಹಿತಿ ಬೇರೆ, ಎರಡು ಕವಿತೆಯ ಸಾಲು ಹೇಳಿದ್ರೆ ಸಾಕು, ಹುಡುಗೀರು ಬಿದ್ದುಹೋಗ್ತಾರೆ. ಟೆಲ್ ಮಿ, ಏನು ವಿಷಯ?”

ಸಡನ್ನಾಗಿ ನನಗೆ ಸಿಕ್ಕ ಈ ಮಾತನಾಡುವ ಅವಕಾಶದಿಂದಾಗಿ ಅರೆಕ್ಷಣ ತಬ್ಬಿಬ್ಬಾದೆ. ಹೇಳಬೇಕಿನಿಸಿತು, ಹೇಳಿಬಿಟ್ಟೆ: “ನಿಜ ಹೇಳ್ತೀನಿ ಓಂಪಿ, ನಂಗೆ ಪ್ರೀತಿ-ಪ್ರೇಮಗಳಲ್ಲಿ ಒಂಥರಾ ನಂಬಿಕೆಯೇ ಹೊರಟುಹೋಗಿದೆ. ನನ್ನ ಫ್ರೆಂಡ್ಸ್ ಸರ್ಕಲ್ಲಿನಲ್ಲೇ ಅದೆಷ್ಟು ಲವ್ ಫೇಲ್ಯೂರ್ ಕೇಸುಗಳನ್ನ ನೋಡಿಬಿಟ್ಟೆ ಅಂದ್ರೆ, ಬಹುಶಃ ನಾನಿನ್ನು ಬದುಕಿನಲ್ಲಿ ಯಾರನ್ನಾದರೂ ಪ್ರಾಮಾಣಿಕವಾಗಿ-ಮನಸಾರೆ ಪ್ರೀತಿಸಿಯೇನಾ ಅಂತ ಅನುಮಾನ ಶುರುವಾಗಿಬಿಟ್ಟಿದೆ!  ಈ ‘ಲವ್ ಆಗೋದು’, ‘ಫಾಲಿಂಗ್ ಇನ್ ಲವ್’ ಅನ್ನೋದೆಲ್ಲ ಮೀನಿಂಗ್‌ಲೆಸ್. ಆ ಥರ ಎಲ್ಲ ಏನೂ ಇಲ್ಲ. ಈಗಿನ ಕಾಲದ ಯಾವ ಹುಡುಗಿಯೂ ಹುಡುಗನ ರೂಪ, ಹಣ, ಕೆಲಸ, ಬ್ಯಾಕ್‌ಗ್ರೌಂಡು, ಆಸಕ್ತಿಗಳನ್ನ ಸ್ಟಡೀ ಮಾಡದೆ ಪ್ರೀತಿಸಲಿಕ್ಕೆ ಶುರು ಮಾಡಲ್ಲ. ಹುಡುಗನೂ ಅಷ್ಟೇ, ಇವಳು ನನಗೆ ತಕ್ಕ ಜೋಡಿಯಾ, ಮನೆಗೆ ತಕ್ಕ ಸೊಸೆಯಾ, ನನ್ನ ಅಭಿರುಚಿಗಳಿಗೆ ಸರಿಸಾಟಿಯಾ ಅಂತೆಲ್ಲ ಯೋಚಿಸದೆ ಮುಂದುವರೆಯುವುದಿಲ್ಲ. ಮತ್ತೆ ಏನು ಗೊತ್ತಾ? ನಮಗೆಲ್ಲ ‘ಅಡ್ಜಸ್ಟ್‌ಮೆಂಟ್ಸ್’ ಅನ್ನೋ ಕಾನ್ಸೆಪ್ಟೇ ಇಲ್ಲವಾಗಿದೆ. ಅದು ಏನೇ ಇರ್ಲಿ, ಸ್ವಲ್ಪ ಸರಿಯಾಗ್ಲಿಲ್ಲ ಅಂದ್ರೂ ಬಿಸಾಕಿಬಿಡ್ತೀವಿ. ಪ್ರೀತಿ-ಬಾಂಧವ್ಯಗಳಿಗೂ ಅನ್ವಯಿಸುತ್ತೆ ಅದು. ಹುಡುಗ - ಹುಡುಗಿ ಇಬ್ಬರಿಗೂ ಆರ್ಥಿಕ ಸ್ವಾತಂತ್ರ್ಯ ಅನ್ನೋದು ಸಿಕ್ಕಿರುವಾಗ, ಪರಸ್ಪರ ಅವಲಂಬನೆಯ ಅವಶ್ಯಕತೆ ಇಲ್ಲದಿರುವಾಗ, ಇವನಿಲ್ಲದಿದ್ದರೆ ಮತ್ತೊಬ್ಬ ಅನ್ನೋ ಜಾಯಮಾನ ಬಂದುಬಿಟ್ಟಿದೆ ಅನ್ನಿಸುತ್ತೆ ನಂಗೆ..”

“ಯೆಸ್, ಯೂ ಆರ್ ಹಂಡ್ರೆಡ್ ಪರ್ಸೆಂಟ್ ರೈಟ್. ದಿಸ್ ಥಾಟ್ ಆಫ್ ಯುವರ್ಸ್ ಡಿಮಾಂಡ್ಸ್ ಒನ್ ಮೋರ್ ಚಿಯರ್ಸ್!” ಅಂತಂದು ನನ್ನ ಗ್ಲಾಸಿಗೆ ತನ್ನ ಗ್ಲಾಸು ತಂದು ಕುಟ್ಟಿದ ಓಂಪಿ. ನಾನೂ “ಚಿಯರ್ಸ್” ಎಂದೆ ನಗುತ್ತ.

ಎರಡು ನಿಮಿಷ ಇಬ್ಬರೂ ಮಾತಾಡಲಿಲ್ಲ. ನಮ್ಮ ಹಿಂದಿನ ಟೇಬಲ್ಲಿನವರು ಊಟ ಮುಗಿಸಿ ಹೊರಟಿದ್ದರು. ವೇಯ್ಟರ್ ಬಂದು ನಮಗೆ ಫುಡ್‌ಗೆ ಆರ್ಡರ್ ತೆಗೆದುಕೊಂಡು ಹೋದ. ಓಂಪಿ ಮುಂದುವರೆಸಿದ: “ಆದರೆ, ಇಷ್ಟೆಲ್ಲ ಆಧುನಿಕವಾಗಿರೋ - ಹಣವೊಂದಿದ್ದರೆ ಏನು ಬಯಸ್ತೀವೋ ಅದನ್ನು ಪಡೆಯುವ ವ್ಯವಸ್ಥೆಯಿರುವ ಈ ದಿನಗಳಲ್ಲಿ ಸಹ ಮನುಷ್ಯ ಅಂತರಾಳದಲ್ಲಿ ತುಂಬಾ ಡೆಲಿಕೇಟ್ ಆಗಿದಾನೆ ಅಂತ ನಂಗೆ ಅನ್ಸುತ್ತೆ. ನಾನು ನಿಂಗೆ ಮತ್ತೊಂದು ಘಟನೆ ಹೇಳ್ತೀನಿ, ತುಂಬಾ ಪರ್ಸನಲ್ ಆದದ್ದು. ಓಂಪಿ ಪೂರ್ತಿ ಹಾಳಾಗಿಹೋಗಿದಾನೆ ಅಂತ ಅಂದ್ಕೋಬೇಡ. ಈಗ ಮೂರು ತಿಂಗಳ ಹಿಂದೆ ನಾನು ಒಬ್ಬ ಹುಡುಗಿಯ ಪರಿಚಯ ಮಾಡ್ಕೊಂಡೆ. ಇಟ್ ವಾಸ್ ಫಾರ್ ಸೆಕ್ಸ್. ಎಲ್ಲಾ ಇಂಟರ್‌ನೆಟ್‌ನಲ್ಲಿ ಆಗಿದ್ದು ವ್ಯವಹಾರ. ಜ್ಯೋತಿ ಅಂತ ಅವಳ ಹೆಸರು. ಸೆಕ್ಸ್‌ಗಾಗಿ ಅಂತಲೇ ಮೀಟ್ ಆದ್ವಿ. ಅದು ಮೂರ್ನಾಲ್ಕು ವೀಕೆಂಡುಗಳಿಗೆ ಮುಂದುವರೀತು. ಕೇಳು, ಅವಳೊಬ್ಬ ಪ್ರೊಫೆಶನಲ್ ಎಸ್ಕಾರ್ಟ್ ಮತ್ತು ನಂಗೆ, ಲೆಟ್ ಮಿ ಬಿ ಫ್ರಾಂಕ್, ಇಟ್ ವಾಸ್ ನಾಟ್ ಮೈ ಫಸ್ಟ್ ಟೈಮ್. ಅಂತಹವಳ ಜೊತೆ, ಯು ಬಿಲೀವ್ ಮಿ, ನಂಗೆ ಪ್ರೀತಿ ಆಗಿಹೋಯ್ತು! ನಾನು ಅವಳನ್ನ ಮಿಸ್ ಮಾಡಲಿಕ್ಕೆ ಶುರು ಮಾಡಿದೆ. ಅದೆಷ್ಟು ಹಚ್ಚಿಕೊಂಡು ಬಿಟ್ಟೆ ಅವಳನ್ನ ಅಂದ್ರೆ, ಅವಳಿಗೆ ಈ ಮೊದಲೇ ಮದುವೆ ಆಗಿತ್ತು, ಈಗ ಡೈವೋರ್ಸ್ ಪ್ರೊಸೀಜರ್ ನಡೀತಾ ಇದೆ ಅಂತ ಗೊತ್ತಾದಮೇಲೂ, ನಂಗೆ ಅವಳನ್ನ ಬಿಟ್ಟಿರಲಿಕ್ಕೆ ಆಗಲಿಲ್ಲ. ಅಷ್ಟು ದಿನ ಮರೆತುಹೋಗಿದ್ದ ಆದರ್ಶಗಳೆಲ್ಲ ಮೈಮೇಲೆ ಅಡರಿಕೊಂಡವು. ಸೆಕೆಂಡ್ ಮ್ಯಾರೇಜು, ಇಂಥವಳನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು, ಬಾಳು ಕೊಡುಬೇಕು ಅಂತೇನೇನೋ ಚಿಂತನೆಗಳು! ಕೊನೆಗೆ ಅವಳೇ ಸಮಾಧಾನ ಮಾಡಿದಳು: ‘ನಿಂಗೆ ವಯಸ್ಸಾದ ಅಪ್ಪ-ಅಮ್ಮ ಇದಾರೆ.. ನಿನ್ನ ಕಂಪನಿಯಲ್ಲಿ, ನಿನ್ನ ಸ್ನೇಹವಲಯದಲ್ಲಿ, ನೀನು ವಾಸಿಸೋ-ವ್ಯವಹರಿಸೋ ಸಮಾಜದಲ್ಲಿ ನಿಂಗೊಂದು ಹೆಸರು ಇದೆ. ನಿಂಗೊಂದು ಬದುಕು-ಭವಿಷ್ಯ ಇದೆ, ಕನಸುಗಳು ಇವೆ. ಆದರೆ ನನಗೆ ಅದ್ಯಾವುದೂ ಇಲ್ಲ ಮತ್ತೆ ನಾನು ನಿನಗೆ ಯಾವ ಥರದಲ್ಲೂ ಜೋಡಿಯಾಗಲ್ಲ. ನಾನು ಇನ್ನು ಯಾವ ಸಂಬಂಧದ ಜೊತೆಗೂ ಬಾಳುವುದಿಲ್ಲ ಅಂತ ತೀರ್ಮಾನಿಸಿಯೇ ಈ ಗಂಡನಿಗೆ ಡೈವೋರ್ಸ್ ಕೊಡ್ತಿರೋದು... ನಾನು ಇಷ್ಟರೊಳಗೆ ನಿನ್ನೊಂದಿಗೆ ಹೇಳಿಕೊಂಡಿರುವ ನನ್ನ ಬಗೆಗಿನ ಬಹಳಷ್ಟು ಸಂಗತಿಗಳು ಸುಳ್ಳು. ನನ್ನ ನಿಜವಾದ ಹೆಸರು ಜ್ಯೋತಿ ಸಹ ಅಲ್ಲ’ ಅಂತೆಲ್ಲ ಕಪಾಳಕ್ಕೆ ಹೊಡೆದಂತೆ ಹೇಳಿ, ಆಮೇಲೆ ನನ್ನ ಸಂಪರ್ಕಕ್ಕೂ ಸಿಗದಹಾಗೆ ತಪ್ಪಿಸಿಕೊಂಡು ಹೋಗಿಬಿಟ್ಳು. ಹೆಹೆ, ಅದಿಲ್ಲದಿದ್ದರೆ ಇಷ್ಟೊತ್ತಿಗೆ ನಾನು ಏನಾಗಿರ್ತಿದ್ದೆನೋ?” ನಕ್ಕ ಓಂಪಿ. ಕ್ಷಣ ಬಿಟ್ಟು ಕೇಳಿದ: “ನಿಂಗೇನನ್ಸುತ್ತೆ ಇದನ್ನ ಕೇಳಿದಾಗ? ಹಹ್ಹಹ್ಹಾ, ಕತೆಗಾರ, ಹೇಳೋ ಫ್ರೆಂಡ್.. ನಿಂಗೇನಾದರೂ ಆಗಿದೆಯಾ ಇಂಥಾ ಅನುಭವ?”

ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟಿನ ನಾವು ಕುಳಿತಿದ್ದ ಟೇಬಲ್‌ನ ಪಕ್ಕದಲ್ಲೊಂದು ಕಿಟಕಿಯಿತ್ತು. ಅದರಿಂದ ಬೆಳಕು ಒಳಬರದಂತೆ ಪೂರ್ತಿ ದಪ್ಪ ಪರದೆ ಮುಚ್ಚಿದ್ದರು. ಕಿಟಕಿಯ ಕಟ್ಟೆಯ ಮೇಲೊಂದು ಹೂದಾನಿ. ಅದರೊಳಗೆ ನೀರಿರಬಹುದೇನೋ ಎಂಬ ಭ್ರಮೆ. ಅದರಲ್ಲಿಟ್ಟಿರುವ ಅರೆಗೆಂಪು ಗುಲಾಬಿ ನಿಜವಾದ್ದೋ ಪ್ಲಾಸ್ಟಿಕ್ಕಿನದೋ ಗುಮಾನಿ. ಆ ಹೂವಿನ ಮೇಲಿರುವ ನೀರಹನಿ ತಾಜಾನೋ ಅಥವಾ ಕೃತಕವಾದ್ದೋ -ಈ ಮತ್ತ ಕಣ್ಣುಗಳಿಂದ ಪತ್ತೆ ಹಚ್ಚಲಿಕ್ಕಾಗುತ್ತಿಲ್ಲ..

“ಓಕೆ. ಈಗ ಬಹಳ ಇಂಪಾರ್ಟೆಂಟ್ ಆದ ವಿಷಯ ಹೇಳ್ತೇನೆ ನಿಂಗೆ..” ಓಂಪಿ ಎಚ್ಚರಿಸಿದ, “ಈಗ ಒಂದು ತಿಂಗಳ ಕೆಳಗೆ ನನಗೆ ಆರ್ಕುಟ್ಟಿನಿಂದ ಒಬ್ಬ ಹುಡುಗಿ ಪರಿಚಯ ಆದ್ಲು. ವಿನಿಷಾ ಅಂತ ಹೆಸರು. ನನ್ನ ಪ್ರೊಫೈಲ್ ನೋಡಿ, ‘ನಿನ್ನ ಆಸಕ್ತಿಗಳು ಮತ್ತು ನನ್ನ ಆಸಕ್ತಿಗಳು ತುಂಬಾ ಸಿಮಿಲರ್ ಇವೆ ಅನ್ನಿಸ್ತು, ಅದಕ್ಕೇ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದೆ’ ಅಂತ ಅಂದ್ಲು.  ಚಾಟ್‌ನಲ್ಲಿ ಸಿಕ್ಕಾಗ ಏಕದಂ ಕ್ಲೋಸ್ ಆಗಿ ಮಾತಾಡಲಿಕ್ಕೆ ಶುರುವಿಟ್ಟಳು. ಎಷ್ಟರ ಮಟ್ಟಿಗೆ ಅಂತೀಯ, ತನ್ನ ಪೂರ್ವಾಪರಗಳನ್ನೆಲ್ಲ ನನ್ನ ಬಳಿ ಹೇಳಿಕೊಂಡುಬಿಟ್ಟಳು. ಅವಳ ಫ್ಯಾಮಿಲಿ ಬಗ್ಗೆ, ಅವಳ ಕೆಲಸದ ಬಗ್ಗೆ, ಆಸಕ್ತಿಗಳ ಬಗ್ಗೆ, ಈಗ ಇರೋ ಪಿಜಿಯ ಗೆಳತಿಯರ ಬಗ್ಗೆ, ನೋಡಿದ ಸಿನಿಮಾ ಬಗ್ಗೆ... ಏನೆಲ್ಲ. ಆದರೆ ನಾನು ಅವಳನ್ನ ನಂಬಲಿಲ್ಲ. ಅವಳು ಹೇಳ್ತಿರೋದು ನಿಜವೋ ಸುಳ್ಳೋ ಯಾರಿಗ್ಗೊತ್ತು? ಸುಳ್ಳೇ ನನ್ನ ಜೊತೆ ಫ್ಲರ್ಟ್ ಮಾಡ್ತಿರಬಹುದು. ಅಥವಾ ಅವಳಿಗೆ ಈಗ ಟೈಮ್‌ಪಾಸ್‌ಗೆ, ಜೊತೆಗೆ ಚಾಟ್ ಮಾಡೋಕೆ ಯಾರಾದರೂ ಬೇಕಿರಬಹುದು. ನನ್ನನ್ನ ಈ ಕಾರ್ಯಕ್ಕೆ ಬಳಸಿಕೊಳ್ತಿರಬಹುದು. ನಾನು ಈ ಸಲವೂ ಪೆಗ್ಗು ಬೀಳಬಾರದು ಅಂತ ಗಟ್ಟಿ ಮಾಡಿಕೊಂಡೆ. ಆದರೂ ಅವಳ ಜೊತೆ ಮೃದುವಾದಂತೆ ನಟಿಸಿದೆ. ನನ್ನ ಕತೆಗಳನ್ನೂ ಹಂಚಿಕೊಂಡಂತೆ ಮಾಡಿದೆ.

“ಆದರೆ ಈಗ ಒಂದು ವಾರದಿಂದ ಅನ್ನಿಸ್ತಿದೆ, ಅವಳದು ಸುಮ್ಮನೆ ಫ್ಲರ್ಟಿಂಗ್ ಅಲ್ಲ, ನಿಜವಾಗಿಯೂ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ ಅಂತ. ನಾನು ಚೆನ್ನಾಗಿ ಮಾತಾಡಿದ ದಿನ ಅವಳೂ ಖುಶಿಯಾಗಿರ್ತಾಳೆ. ನಾನು ಅಲಕ್ಷ್ಯ ಮಾಡಿದ ದಿನ ಬೇಜಾರಾಗಿರ್ತಾಳೆ. ಅವಳ ಸ್ಟೇಟಸ್ ಮೆಸೇಜುಗಳೆಲ್ಲ ನನಗಾಗಿಯೇನೇನೋ ಅಂತ ಅನ್ನಿಸುವಂತಿರುತ್ತೆ. ಹೊರಗೆ ಮೋಡ ಕಟ್ಟಿದ್ದರೆ ಅಲ್ಲಿ ‘ಗರಿಬಿಚ್ಚಿದ ನವಿಲಾಗಿದೀನಿ.. ಮಳೆ ಬಾರದಿದ್ದರೂ ನೀ ಬಾ’ ಅಂತ ಇರುತ್ತೆ, ಜೋರುಮಳೆ ಬಂತೆಂದರೆ ‘ನಿನ್ನ ಪ್ರೀತಿಮಳೆಯ ಮುಂದೆ ಇದು ತುಂತುರು’ ಅಂತ ಇರುತ್ತೆ, ನಾನು ಇನ್ವಿಸಿಬಲ್ ಆದರೆ ಸಾಕು, ‘ಸಣ್ಣ ಕಲ್ಲುಗಳ ಡೊಗರೇ, ಬಚ್ಚಿಟ್ಟುಕೊಳ್ಳುವ ಮೀನಿಗೆ ಏನು ಶಿಕ್ಷೆ?’ ಅಂತ ಹಾಕಿಕೊಂಡಿರುತ್ತಾಳೆ. ‘ನಂಗೆ ಆ ಮೂವಿಗೆ ಹೋಗಬೇಕು, ಒಬ್ಬಳೇ ಹೋಗಲಿಕ್ಕೆ ಆಗಲ್ಲ, ಕರ್ಕೊಂಡು ಹೋಗು’ ಅಂತ ಹೇಳ್ತಾಳೆ. ‘ನಿಂಗೆ ನನ್ನ ಬಗ್ಗೆ ಸ್ವಲ್ಪಾನೂ ಕೇರೇ ಇಲ್ಲ’ ಅಂತ ಕಂಪ್ಲೇಂಟ್ ಮಾಡ್ತಾಳೆ. ‘ಯಾಕೆ ನೀನು ನನ್ನನ್ನ ಅವಾಯ್ಡ್ ಮಾಡ್ತಿದೀಯಾ? ನಾವು ಮೀಟ್ ಆಗೋದು ನಿಂಗೆ ಇಷ್ಟ ಇಲ್ವಾ?’ ಅಂತೆಲ್ಲ ಥೇಟು ಸಿನೆಮಾ ಶೈಲಿಯಲ್ಲಿ ಕೇಳ್ತಿದಾಳೆ. ಆದರೆ ನನಗೆ ಇದು ನನ್ನ ಬದುಕಿನ ಮತ್ತೊಂದು ಸಿನಿಮಾ ಕತೆ ಆಗಲಿಕ್ಕೆ ಇಷ್ಟ ಇಲ್ಲ.

“ಈಗ ನೀನು ಹೇಳು ಅಂಶು, ನಾನೇನು ಮಾಡಲಿ? ಡು ಯು ಥಿಂಕ್ ಐ ಶುಡ್ ಗೋ ಅಹೆಡ್? ಹೇಳು ನೀನು.. ಇಂಥವನ್ನೆಲ್ಲ ನೀನು ಕರೆಕ್ಟಾಗಿ ಜಡ್ಜ್ ಮಾಡ್ತೀಯ. ಆವಾಗ ಒಟ್ಟಿಗಿದ್ದಾಗ ಹೀಗೆ ನಾನು ಸಮಸ್ಯೆ ಹೇಳ್ಕೊಂಡಾಗಲೆಲ್ಲ ಏನಾದರೂ ಪರಿಹಾರ ಹೇಳ್ತಿದ್ದೆ.. ಕಮಾನ್, ಏನು ಮಾಡಲಿ ನಾನೀಗ?”

ಒಂದು ಕೈಯಲ್ಲಿ ಕೊನೆಯ ಅರ್ಧ ಗ್ಲಾಸು ಬಿಯರು, ಇನ್ನೊಂದು ಕೈಯಲ್ಲಿ ಈಗಷ್ಟೆ ಸರ್ವರ್ ಬಡಿಸಿ ಹೋಗಿದ್ದ ಜೀರಾ ರೈಸ್ ತುಂಬಿದ್ದ ಚಮಚ ಹಿಡಿದು ನನ್ನೆದುರು ಮ್ಲಾನವಾಗಿ ಕೂತಿದ್ದ ಓಂಪ್ರಕಾಶನ ಮುಖವನ್ನೇ ನೋಡಿದೆ. ಮೂರು ವರ್ಷದ ಹಿಂದೆ ಒಂದು ಫೈಲ್ ಹಿಡಿದು ಇಂಟರ್‌ವ್ಯೂಗೆಂದು ನಮ್ಮ ಆಫೀಸಿಗೆ ಬಂದಿದ್ದ ಓಂಪಿ, ಕೆಲಸದ ಮೊದಲ ದಿನ ಕೈಕುಲುಕಿ ಪರಿಚಯ ಮಾಡಿಕೊಂಡಿದ್ದ ಓಂಪಿ, ಊಟಕ್ಕೆ ದುಡ್ಡು ಜಾಸ್ತಿಯೆಂದು ರೈಸ್‌ಬಾತ್ ತಿನ್ನುತ್ತಿದ್ದ ಓಂಪಿ, ಕೈಕೊಟ್ಟ ಹುಡುಗಿಯ ಕತೆ ಹೇಳುತ್ತ ಕಣ್ತುಂಬಿಸಿಕೊಂಡಿದ್ದ ಓಂಪಿ, ದೊಡ್ಡ ಸಂಬಳದ ಕೆಲಸ ಸಿಕ್ಕಾಗ ಖುಶಿಯಿಂದ ನನ್ನನ್ನು ತಬ್ಬಿಕೊಂಡಿದ್ದ ಓಂಪಿ -ಈಗ ಹಣವಂತ, ಸಕಲ ಸೌಕರ್ಯಗಳನ್ನೂ ಹೊಂದಿರುವ ಮನೆಯಲ್ಲಿ ವಾಸಿಸುತ್ತಿರುವವ, ಕಾರಿನಲ್ಲಿ ಜಮ್ಮಂತ ಓಡಾಡುವವ, ಐಷಾರಾಮಿ ಪಬ್ಬುಗಳಲ್ಲಿ ವೀಕೆಂಡುಗಳನ್ನು ಹರವಿಕೊಂಡವ... ಕೊನೆಗೂ ಹಂಬಲಿಸುತ್ತಿರುವುದು ಹಿಡಿ ಪ್ರೀತಿಗಾಗಿಯೇ? ಡಿವಿಜಿಯವರ ಮಂಕುತಿಮ್ಮನ ಕಗ್ಗ ನೆನಪಾಯಿತು.. ಏನ ಹೇಳಲಿ ಇವನಿಗೆ..? ‘ಪ್ರೀತಿ-ಪ್ರೇಮಗಳಲ್ಲಿ ನಂಬಿಕೆಯೇ ಹೋಗಿಬಿಟ್ಟಿದೆ’ ಅಂತ ಕೇವಲ ಅರ್ಧ ಗಂಟೆ ಮುಂಚೆ ಹೇಳಿದ್ದ ನಾನು ಈಗ ಹೇಗೆ ಇವನಿಗೆ ಸಮಾಧಾನ ಮಾಡಲಿ? ಕೊನೆಗೂ ಜಗತ್ತಿನ ಕಟ್ಟಕಡೆಯ ಜೀವಿಯ ಹೃದಯವೂ ತುಡಿಯುವುದು ಪ್ರೀತಿಸಖ್ಯವೊಂದರ ಸಾಂಗತ್ಯಕ್ಕಾಗಿಯೇ?

“ಎಕ್ಸ್‌ಕ್ಯೂಸ್ ಮಿ..” ಸಕಾಲಕ್ಕೆಂಬಂತೆ ಬಂದ ಯಾವುದೋ ಮೊಬೈಲ್ ಕಾಲ್ ಅಟೆಂಡ್ ಮಾಡಲೆಂದು ಓಂಪಿ ಎದ್ದು ರೆಸ್ಟ್‌ರೂಮ್ ಕಡೆ ನಡೆದ. ನಾನು ನೀಳ ನಿಟ್ಟುಸಿರು ಬಿಟ್ಟೆ. ಗ್ಲಾಸುಗಳು ಮುಗಿದಿದ್ದವು. ಕ್ಲೀನರ್ ಬಂದು ಖಾಲಿ ಬಾಟಲುಗಳನ್ನು ಎತ್ತಿಕೊಂಡು ಹೋದ. ಟೇಬಲ್ಲಿನ ತುಂಬ ಇದ್ದ ಗೋಬಿ ಮಂಚೂರಿ, ಚಿಕನ್ ಟಿಕ್ಕ, ಜೀರಾ ರೈಸ್, ಆಲೂ ಚಿಪ್ಸ್‌ಗಳ ಸಶೇಷಗಳ ಪ್ಲೇಟುಗಳು, ನೀರಿನ ಗ್ಲಾಸುಗಳು, ತಳದಲ್ಲಿ ಚೂರೇ ಉಳಿದಿದ್ದ ಬಿಯರಿನ ಗ್ಲಾಸುಗಳು, ಪುಟ್ಟ ಆಶ್ ಟ್ರೇ, ನಿಂಬೆಹಣ್ಣಿನ ಚೂರು ತೇಲುತ್ತಿದ್ದ ಫಿಂಗರ್‌ಬೌಲ್, ಈಗಷ್ಟೆ ತಂದಿಟ್ಟುಹೋಗಿದ್ದ ಬಿಲ್ ಕೆಳಗಿನ ಬಡೇಸೋಪಿನ ಬಟ್ಟಲು.. ಎಲ್ಲವುಗಳಲ್ಲಿ ಓಂಪಿ ಕೇಳಿದ ಪ್ರಶ್ನೆಗಳಿದ್ದವು. ಇವನ್ನೆಲ್ಲ ಇಲ್ಲೇ ಬಿಟ್ಟುಹೋಗಿಬಿಡಬಹುದು; ಆದರೆ ಪ್ರಶ್ನೆಗಳು? ಅಕ್ಕ-ಪಕ್ಕ-ಹಿಂದೆ-ಮುಂದಿನ ಟೇಬಲ್ಲುಗಳಲ್ಲಿ ಈಗ ಬೇರೆ ಬೇರೆ ಗುಂಪುಗಳು-ಜೋಡಿಗಳು ಕೂತು ಅವರವರದೇ ಲೋಕಗಳಲ್ಲಿ ಅವರವರದೇ ಸತ್ಯ-ಸುಳ್ಳುಗಳ ವಿನಿಮಯದಲ್ಲಿ ಮುಳುಗಿದ್ದರು. ಕೈ ಬೀಸಿ ನಡೆದ ಅಮೃತಾ, ಬುದ್ಧಿ ಹೇಳಿ ಹೋದ ಜ್ಯೋತಿ, ಪ್ರೀತಿಸು ಎನ್ನುತ್ತಿರುವ ವಿನಿಷಾ.. ಇವರೆಲ್ಲ ಏನು ಮಾಡುತ್ತಿರಬಹುದು ಇವತ್ತಿನ ಈ ಕ್ಷಣದಲ್ಲಿ?

“ಅಮ್ಮ ಫೋನ್ ಮಾಡಿದ್ದಳು.. ನೋಡದೆ ತಿಂಗಳಾಯ್ತು, ಊರಿಗೆ ಬಾ ಅಂತಿದಾಳೆ. ಇವತ್ತು ಸಂಜೆ ಬೇರೆ ವಿನಿಷಾಗೆ ಸಿಗಬೇಕು. ರಾತ್ರಿ ಬಸ್ಸಿಗೆ ಹೋಗಿಬಿಡಲಾ ಅಂತ ನೋಡ್ತಿದ್ದೇನೆ ಮಂಗಳೂರಿಗೆ.. ಈಗ ವಿನಿಷಾ-ಗಿನಿಷಾ ಅಂತ ಸುದ್ದಿ ಎತ್ತಿದ್ರೆ ಸಾಕು, ಹಾಂ, ಅವ್ಳುನ್ನೇ ಮದುವೆ ಮಾಡ್ಕೋ ಅಂತಾಳೆ! ಏಯ್, ಏನೋ ಯೋಚಿಸ್ತಾ ಕೂತಿದೀಯಾ? ನೀನು ತಲೆ ಕೆಡಿಸಿಕೋಬೇಡವೋ, ನಂಗೊತ್ತು, ನನ್ನ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರ ಇಲ್ಲ ಅಂತ. ಏನು ಹ್ಯಾಗೆ ಬರುತ್ತೋ ಹಾಗೆ ಸ್ವೀಕರಿಸೋದು. ಆ ಕ್ಷಣಕ್ಕೆ ಏನು ಅನ್ನಿಸುತ್ತೋ ಹಾಗೆ ಮಾಡೋದು. ಕಮಾನ್, ಲೆಟ್ಸ್ ಗೆಟ್ ಔಟ್ ಆಫ್ ಹಿಯರ್..” ಅಂತಂದು, ವೇಯ್ಟರಿಗೆ ಬಿಲ್ ಹಣ-ಟಿಪ್ಸು ಕೊಟ್ಟು, ನನ್ನ ಹೆಗಲ ಮೇಲೆ ಕೈ ಹಾಕಿ ಎಳೆದುಕೊಂಡು, ಕೋಸ್ಟಲ್ ಎಕ್ಸ್‌ಪ್ರೆಸ್ ರೆಸ್ಟುರೆಂಟಿನ ಮೆಟ್ಟಿಲುಗಳನ್ನು ಇಳಿಸತೊಡಗಿದ ಓಂಪಿ. ಓಂಪ್ರಕಾಶನನ್ನು ಈ ಭುವಿಗೆ - ಸಾಮಾನ್ಯ ಸ್ಥಿತಿಗೆ ತರಬಲ್ಲ ಏಕೈಕ ವ್ಯಕ್ತಿಯಾಗಿ ಅಲ್ಲೆಲ್ಲೋ ಇರುವ ಅವನ ಅಮ್ಮ ಕಂಡಳು ನನಗೆ.

“ಕಾರು ಎಲ್ಲಿ ಪಾರ್ಕ್ ಮಾಡಿದೀಯಾ?” ಕೇಳಿದೆ. 

“ಕಾರ್ ತರ್ಲಿಲ್ಲ. ಈ ಟ್ರಾಫಿಕ್ಕಲ್ಲಿ ಯಾರು ಡ್ರೈವ್ ಮಾಡ್ತಾರೆ ಮಾರಾಯಾ.. ಅಲ್ಲದೇ ಇವತ್ಯಾಕೋ ಹಿಂದಿನ ಥರ ಬಸ್ಸಲ್ಲಿ ಓಡಾಡೋಣ ಅನ್ನಿಸ್ತು, ಅದಕ್ಕೇ ಮಿಲ್ಲರ್ಸ್ ರೋಡ್‌ವರೆಗೆ ಬಸ್ಸಲ್ಲಿ ಬಂದು, ಅಲ್ಲಿಂದ ವಾಕ್ ಮಾಡ್ಕೊಂಡು ಬಂದೆ. ಕಾರಿನಲ್ಲಿ ಗ್ಲಾಸುಗಳನ್ನೆಲ್ಲ ಏರಿಸಿ ಕೂತಿದ್ದರೆ ನಾನು ತೀರ ಒಂಟಿ ಅನ್ನಿಸಲಿಕ್ಕೆ ಶುರು ಆಗುತ್ತೆ. ಆದರೆ ಇಲ್ಲಿ ರಸ್ತೆಯಲ್ಲಿ ನೂರಾರು ಜನರ ಮಧ್ಯೆ ನಡೀತಿದ್ರೆ ನಾನೂ ಎಲ್ಲರ ಹಾಗೆ ಅನ್ನೋ ಥರದ ಫೀಲು.. ಕಳೆದುಹೋಗಲಿಕ್ಕೊಂದು ಅವಕಾಶವೂ ಸಿಗತ್ತೆ ನೋಡು..!” ಅಂದು ಪೇಲವವಾಗಿ ನಕ್ಕ.

ಮನದುಂಬಿ ಬಂದಂತಾಗಿ ಓಂಪಿಯನ್ನು ತಬ್ಬಿಕೊಂಡೆ. “ತುಂಬಾ ಖುಶಿಯಾಯ್ತು, ಇಷ್ಟು ಕಾಲದ ನಂತರ ನಿನ್ನನ್ನ ಮೀಟ್ ಮಾಡಿ.. ಥ್ಯಾಂಕ್ಸ್, ಬಂದಿದ್ದಕ್ಕೆ..” ಅಂದವನು, “ಹೇ, ನೋಡು, ನೀನು ನನ್ನ ಮೇಲೆ ಕತೆ ಬರೆದರೆ ಅದಕ್ಕೊಂದು ಹ್ಯಾಪಿ ಎಂಡಿಂಗ್ ಕೊಡು. ಬೇಕಿದ್ರೆ ವಿನಿಷಾಳನ್ನೇ ಮದುವೆ ಆಗಿ ಆಮೇಲೆ ಸುಖವಾಗಿದ್ದ ಅಂತ ಬರೆ.  ಐ ಲೈಕ್ ಸ್ಟೋರೀಸ್ ವಿತ್ ಹ್ಯಾಪಿ ಎಂಡಿಂಗ್!” ಅಂತಂದು ಕಣ್ಣು ಹೊಡೆದ. ಮತ್ತೊಮ್ಮೆ ಕೈ ಕುಲುಕಿದವನು, ಹಿಂದೆ ಸರಿದು ವೇವ್ ಮಾಡಿ, ಸೀದಾ ಫುಟ್‌ಪಾತ್‌ಗುಂಟ ಬಿರಬಿರನೆ ನಡೆಯತೊಡಗಿದ. ನೋಡನೋಡುತ್ತಿದ್ದಂತೆಯೇ ಕನ್ನಿಂಗ್‌ಹ್ಯಾಂ ರಸ್ತೆಯ ಜನಜಂಗುಳಿಯ ನಡುವೆ ಕರಗಿಹೋದ.

[2010ರ 'ಅಕ್ಕ' ಕಥಾಸ್ಪರ್ಧೆಯಲ್ಲಿ ಆಯ್ಕೆಯಾಗಿ 'ದೀಪ ತೋರಿದೆಡೆಗೆ' ಸಂಕಲನದಲ್ಲಿ ಸೇರಿಕೊಂಡಿರುವ ನನ್ನ ಕತೆ.]

15 comments:

Pataragitti (ಪಾತರಗಿತ್ತಿ) said...

ಸುಶ್ರುತ,

ಓಂಪಿ ತೊಳಲಾಟ ಅದ್ಭುತವಾಗಿ ಮೂಡಿಸಿದ್ದೀಯಾ..
ಚೆನ್ನಾಗಿದೆ ಕತೆ.

ಅಭಿನಂದನೆಗಳು ಸಂಕಲನದಲ್ಲಿ ಪ್ರಕಟವಾಗಿದ್ದಕ್ಕೆ.

ಸುಮ said...

good story . ಈ ಕಾಲಘಟ್ಟದ ಯುವಜನರ ಮನಸ್ಸನ್ನು ಬಿಚ್ಚಿಟ್ಟಂತಿದೆ.

sunaath said...

ಶಿವೂ ಅವರ ಅಭಿಮತವೇ ನನ್ನದು.

Subrahmanya said...

ಹಾಂಮ್ಮ್.....ಕಿಟಕಿ ಏರಿಸಿ ಒಬ್ಬನೇ ಕೂರುವುದಾದರೆ ಎಷ್ಟು ಕಾರಿದ್ದರೇನು ? ! . "ನಮಗೆಲ್ಲಾ ಅಡ್ಜಸ್ಟ್ಮೆಂಟ್ ಅನ್ನೋದೇ ಮರೆತುಹೋಗಿದೆ (ಹೊಂದಾಣಿಕೆ) " ..ನಿಜ ಬಾಸ್, ಹಿಂದಿನ ಕಾಲದವರಂತೆ ಹೊಂದಿಕೊಂಡು ಬಾಳುವ ನಿಜವಾದ ಸಂಸಾರಗಳು ಇಂದೇ ತುಂಬಾ ಅಪರೂಪವಾಗಿತ್ತಿದೆ. ಶೀರ್ಷಿಕೆಗೆ ತಕ್ಕಂತಹ ಕತೆ, ಸಲೀಸಾಗಿ ಓದಿಸಿಕೊಂಡು ಹೋಯ್ತು.

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ,
Congrats :-)

ಚೆಂದ ಕತೆ.

-ಪುಟ್ಟಕ್ಕ

Ravi Hegde said...

ಸುಶ್ರುತರವರೆ,
ಓಂಪಿ ಪ್ರಿತಿಗಾಗಿ ಪಡುವ ತೊಳಲಾಟವನ್ನು ಅದ್ಭುತವಾಗಿ ಚಿತ್ರಿಸಿದ್ದೀರಿ.ಕತೆ ಸೂಪರ್ .ಅಭಿನಂದನೆಗಳು .
ನೀವು ಯಾವುದಾದರು ಪುಸ್ತಕ ಬಿಡುಗಡೆ ಮಾಡಿದ್ದೀರಾ ? ಇದ್ದರೆ ತಿಳಿಸಿ.
ರವಿ

ಸುಧೇಶ್ ಶೆಟ್ಟಿ said...

Chennagidhe kathe...

aadaroo yaako nimma shaili e katheyalli swalpa bhinnavaagidhe antha anisithu...

MD said...

ಸುಶ್ರುತ,

ಅಭಿನಂದನೆಗಳು ಸಂಕಲನದಲ್ಲಿ ಪ್ರಕಟವಾಗಿದ್ದಕ್ಕೆ.
ಕಥೆ ಇಷ್ಟ ಆಯ್ತು.
ನಿಮ್ಮ ಕಥೆ ಈ ಬಾರಿಯ ಅಕ್ಕ ಸ್ಪರ್ಧೆಯ ನಲ್ಲಿದ್ದದ್ದು ಗೊತ್ತಿತ್ತು. ನಿಮಗೆಯೇ ಬಹುಮಾನ ಬರಬಹುದೆಂದೂ ಆಶಿಸಿದ್ದೆ. ಇರಲಿ ನೀವಂತೂ ನಿಲ್ಲುವವರಲ್ಲ..ಆಗಾಗ ನಿಂತು ಸಾಗುವ ಬರಹಗಾರರಿಗೆ ಆ ಬಹುಮಾನ ಸ್ಪೂರ್ತಿ ನೀಡೀತು.

--ಎಮ್.ಡಿ

ashwath said...

ಸುಶ್ರುತ,
ಚಂದದ ಕಥೆ. ನಿಮ್ಮ ಕಥಾ ಸಂಕಲನಗಳು ಯಾವ ಪ್ರಕಾಶನದಲ್ಲಿ ಪ್ರಕಟವಾಗುತ್ತವೆ?ತಿಳಿಸಿ
ಕುಸುಮಾ ಸಾಯಿಮನೆ

ಶ್ವೇತ said...

ಕಥೆಯನ್ನು ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ಓದಿದೆ. ಕಥೆ ಬರೆದ ಶೈಲಿ ತುಂಬಾ ಇಷ್ಟವಾಯಿತು. ನಾನು ಹೈಸ್ಕೂಲಿನಲ್ಲಿರುವಾಗ ಓದುತ್ತಿದ್ದ ಸುಧಾ ತರಂಗದಲ್ಲಿ ಬರುತ್ತಿದ್ದ ಕಥೆಗಳ ಶೈಲಿ ಇದೆ ಅನಿಸಿತು. ಈ ರೀತಿ ಬರೆಯಲು ಅತಿ ಪ್ರಯತ್ನ ಮಾಡಿದರು ನನಗೆ ಆಗೋದಿಲ್ಲ :-) ನಿಮ್ಮ ಟ್ಯಾಲೆಂಟ್ ಮೆಚ್ಚಬೇಕಾದ್ದೆ. ಹೀಗೆ ಇನ್ನು ಬರೆಯಿರಿ.

ವಿನಾಯಕ ಕೆ.ಎಸ್ said...

ಸುಶ್‌,
ಕಥೆ ಹೇಳಿಕೊಂಡು ಹೋದ ರೀತಿ ಇಷ್ಟವಾಯ್ತು. ನಿನ್ನದೆ ಬದುಕಿನ ಕಥೆಯೇನೋ ಅನ್ನೊ ಹಾಗೆ ಹೇಳಿದ್ದಿಯ. ೨೪ ಗಂಟೆ ಇಂಟರ್‌ನೆಟ್‌ನಲ್ಲಿ ಪಿಎಚ್‌ಡಿ ಮಾಡಿದ್ದು ಕಥೆಗಾದ್ರು ಲಾಭ ಆಯ್ತು ಬಿಡು!

dr.ash said...

tamma shaili chennagide,,abhinandanegalu

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬಾ ಧನ್ಯವಾದ.

@ Ravi Hegde & Kusuma Sayimane,

ನನ್ನ ಕಥಾಸಂಕಲನ ಇನ್ನೂ ಬಂದಿಲ್ಲ. ಆದರೆ ಲಲಿತ ಪ್ರಬಂಧಗಳ ಸಂಕಲನ ಬಂದಿದೆ. ಹೆಸರು ’ಹೊಳೆಬಾಗಿಲು’. ನಮ್ಮದೇ ಸಂಸ್ಥೆ ಪ್ರಣತಿ ಅದನ್ನು ಪ್ರಕಟಿಸಿದೆ. ಅಂಕಿತ, ಮೇಫ್ಲವರ್, ಸ್ವಪ್ನಾ ಮಳಿಗೆಗಳಲ್ಲಿ ಸಿಗುತ್ತೆ. ಪ್ರಣತಿ ಅಥವಾ ನನ್ನನ್ನು ಸಂಪರ್ಕಿಸಿದರೂ ಪಡೀಬಹುದು. ಥ್ಯಾಂಕ್ಯೂ. :-)

ಆನಂದ said...

ಕಥೆ ಕಟ್ಟಿದ ರೀತಿ, ಪಾತ್ರಗಳ ತೊಳಲಾಟ ( ಕೆಲವೊಮ್ಮೆ ಕಥೆಗಾರನದ್ದೇ ಅನಿಸುತ್ತದೆ ) ಬಹಳ ಚೆನ್ನಾಗಿ ಮೂಡಿ ಬಂದಿದೆ.

Deepa said...

kate bahala natural aagittu.Ellaru bayasuvudu hidi preetiyannu,nijavada preeti sikkavaru bhagyavantaru.Intaha kategalnnu innastu bareyiri