ಜರ್ಮನ್ ಗ್ರಾಸ್ ಎಂಬುದು ಹಸಿರಲ್ಲ
ಎಂದರೆ ಒಪ್ಪುವದೇ ಇಲ್ಲ ಇವಳು..
ಹಸಿರು ಎಂದರೆ ಕಳೆ, ಲಂಟಾನ, ಚದುರಂಗ,
ಹೂಗಿಡ, ತಬ್ಬುಬಳ್ಳಿ, ಅಡ್ಡಮರ,
ಪೊಟರೆಯಿಂದಿಣುಕುವ ಹಕ್ಕಿಮರಿ,
ಬೆಟ್ಟದ ಮೇಲೆ ಮೇಯುತ್ತಿರುವ ಗಿಡ್ಡ ದನ,
ತರಗೆಲೆಗಳ ಜೊತೆ ಕೊಳೆಯುತ್ತಿರುವ
ಯಾರೂ ತಿನ್ನದ ಹಣ್ಣು, ಅದರೊಡಲ
ಬೀಜದ ಕನಸು ಎಂದೆಲ್ಲ ಹೇಳಿದರೆ
ಹೋಗೆಲೋ ಎನ್ನುತ್ತಾಳೆ;
ಹೆಸರು ಮರೆತು ಮೊರೆತೆದ್ದದ್ದೇ ಹಸಿರು
ಎಂದರೆ ವಾದ ಮಾಡುತ್ತಾಳೆ.
ಕನಸು ಕಾಣದ ನೀನೊಂದು ಪುತ್ಥಳಿ
ಎಂದರೆ ಮೂಗು ಮುರಿಯುವಷ್ಟು ಮುನಿಸು.
ಅಂಚು ಒದ್ದೆಯಾದ ಲಂಗ ಹಿಂಡುತ್ತ ಲೋಭಾನದ
ಹೊಗೆ ಹರಿಸುತ್ತಿರುವ ತಾಯಿಯ ಬಳೆಯ ಕಿಂಕಿಣಿ
ಸದ್ದಿಗೇ ಮಗು ನಿದ್ದೆ ಹೋದ ಕತೆ ಹೇಳಿದರೆ
ಸಿಲ್ಲಿ ಅನ್ನುತ್ತಾಳೆ.
ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ
ಅಲೆಯೊಂದಿಗೆ ತೇಲಿ ಹೋಯಿತು ಎಂದರೆ
ನಿರ್ಭಾವುಕವಾಗಿ ಆಕಳಿಸುತ್ತಾಳೆ.
ನಾನು ಪಾಸಾದದ್ದೆಲ್ಲ ಥಿಯರಿಯಲ್ಲೇ,
ಪ್ರಾಕ್ಟಿಕಲ್ಲಿನಲ್ಲಿ ಸೊನ್ನೆ ಎಂದರೆ
ಥಟ್ಟನೆ ಈರುಳ್ಳಿಯ ರೇಟು ಹೇಳಿ ನನ್ನನ್ನು
ತಬ್ಬಿಬ್ಬು ಮಾಡಿ ತಾನು ಹೊಟ್ಟೆ ಹಿಡಿದುಕೊಂಡು
ನಗುತ್ತಾಳೆ.
ಇನ್ನೂ ಮಾವನ ಮನೆಯಲಿ ತುಂಬಿದ
ಮಲ್ಲಿಗೆ ಹೂಗಳ ಪರಿಮಳದ ಲಯದಲ್ಲೇ
ತೇಲುತ್ತಿರುವ ರಾಯರು;
ತಾನೇ ಬಂದು ಕಾಫಿ ಕೊಟ್ಟು ಸಕ್ಕರೆ
ಕರಗಿಸಿಕೊಳ್ಳಲು ಸ್ಪೂನು ಕೊಡುವ ಪದುಮ;
ನೀರಾಯಿತು ಅಂತ ಹೇಳಲು ನಾದಿನಿಯೂ ಇಲ್ಲ,
ಅಲ್ಲಿ ಒಳಮನೆಯೂ ಇಲ್ಲ.
ಈಗ ರಾಯರ ಕವಿತೆಗೆ ಪದುಮಳ ಟ್ವೀಟು
ಆಯುರ್ವೇದ ವೈದ್ಯರಿಗೆ ಅಲೋಪತಿಯ ಟ್ರೀಟು
ಅದೇನರ್ಥವಾಗುತ್ತೋ, ಮಾವನಿಗೆ ಇದಕ್ಕೂ ನಗು.
13 comments:
love this poem, last fe lines are fantatstic
ಸುಶ್ರುತ ,
ಚಂದ ಇದ್ದು " ರಸಿಕ ರಾಯರು ಮತ್ತು ಪ್ರಾಕ್ಟಿಕಲ್ ಪದುಮಳ " ಕಥೆ !!!
KSN reborn!
chanda idhe kavana :)
ಸುಶ್ರುತ,
ಲೋಭಾನದ ಹೊಗೆ, ನಿದ್ದೆ ಹೋದ ಮಗು,ಈರುಳ್ಳಿ ರೇಟು, ಟ್ವೀಟು..
ಸಿಂಪ್ಲಿ ಸೂಪರ್.
ಸುಶ್,
ನಿನ್ನ ಬರಹವೆಂದರೆ ನನಗೆ ಪ್ರೀತಿ ತುಂಬಿದ ಹೊಟ್ಟೆಕಿಚ್ಚು ;-)
ಹೇಗೆ ಬರೀತಿಯಲ್ಲೋ ಮಾರಾಯ.....;-)
ಈ ಪದ್ಯ ಓದಿ ಮುಗಿಸೋದ್ರೊಳಗೆ ಮತ್ತೊಬ್ಬ ಕೆ ಎಸ್ ನ ಅವತರಿಸಿದ್ದಾರೆ ಅನ್ನಿಸಿದ್ದು ಸುಳ್ಳಲ್ಲ....ಇದಕ್ಕೆ "ಅವಳೇ" "ಸಾಕ್ಷಿ" ;-)
ಪ್ರೀತಿಯಿಂದ,
ಸುನಿಲ್,
ಹೊಟ್ಟೆ ಉರಿಯೋಷ್ಟು ಚನ್ನಾಗಿ ಬರ್ದಿದಿಯ. ಓದಿ ಯಾಕೋ ಕಣ್ತುಂಬಿ ಬಂತು. (ಅಳುವಂಥದೇನಿಲ್ಲದಿದರೂ)
ಇನ್ನಷ್ಟು ಪದ್ಯಗಳನ್ನು ಓದಲು ಕೊಡು..
ಸಿರಿ
ಸುಶ್ರುತ ಎಂದಿನ ನಾಜೂಕು ಈ ಕವಿತೆಯಲ್ಲಿ ಕಾಣಸಿಗ್ತು. ಅಭಿನಂದನೆಗಳು
chanda iddo sushruta..
ಸುಶ್ರುತ,
ತುಂಬ ಇಷ್ಟ ಆತು ಕವಿತೆ.
ಅವತ್ತು ಗಡಿಬಿಡಿಯಲ್ಲಿ ಬಝ್ ಅಲ್ಲಿ ಓದಿದ್ದಿ ಅಷ್ಟೆ. ಈಗ ಮತ್ತೊಂದ್ಸಲ, ಓದನ ಅನ್ನುಸ್ತು. ಎಷ್ಟ್ ಚೆನಾಗಿ ಬರದ್ಯಲ ಮಾರಾಯ. ಮೊನ್ನೆ ೨೬ ಕೆ.ಎಸ್.ನ. ಜನ್ಮದಿನ. ಒಳ್ಳೆಯ ನೆನಪು.
ಆ ಹಳೆಯ ಕವಿತೆಗಳು ಹೊಳೆಹೊಳೆದು ಹೊಸ ಕವಿತೆಗಳ ಭಾವಸ್ಫೂರ್ತಿಯಾಗುವ ಪರಿಯೇ ಚೆನ್ನ.
ನಿನ್ನ ಕೈಯ ಈ ನವಿರನ್ನು ಕಳೆಯಬೇಡ.ಅಮೂಲ್ಯವಿದು.
ಪ್ರೀತಿಯಿಂದ
ಸಿಂಧು
ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ " - ಬಹುಷಃ ಇದು ಹೊಸ ರೂಪಕ. ರೂಪಕಗಳು ವೈವಿಧ್ಯಮಯ ಅರ್ಥಗಳನ್ನು ಹೊರಡಿಸಿ ಶಬ್ದ-ಲಾಲಿತ್ಯಕ್ಕೆ ಕವಿತೆಯ ರಿನ್ಗಣವನ್ನು ತಂದುಕೊಡುತ್ತವೆ.
ಹೌದು, ಒಳಮನೆಯೂ ಇಲ್ಲ, ನೀರಾಯಿತು ಎಂದು ಹೇಳಲು ನಾದಿನಿಯೂ ಇಲ್ಲ, ಮಾತ್ರವಲ್ಲ, ಬಹಳಷ್ಸ್ತು ಬಾರಿ ನೀರಾಗುವುದೇ ಇಲ್ಲ, ಇನ್ನು ಕೆಲವೊಮ್ಮೆ, ನೀರಾದದ್ದು ಹೊರ ಜಗತ್ತಿಗೆ ಗೊತ್ತಾಗುವುದೇ ಇಲ್ಲ!.
"ಅದೇನರ್ಥವಾಗುತ್ತೋ, ಮಾವನಿಗೆ ಇದಕ್ಕೂ ನಗು. " ಅಂದರೆ ಮಾವನಿಗೆ ಅದೆಂತಹ ಅಖಂಡ ಹಾರ್ದಿಕ ಭ್ರಷ್ಟತೆ ಇರಬಹುದು!.
chennagide...
ಓದಿದ, ಪ್ರತಿಕ್ರಿಯಿಸಿದ, ಶೇರ್ ಮಾಡಿದ, ಟ್ವೀಟಿಸಿದ ಎಲ್ಲರಿಗೂ ನಾನು ಆಭಾರಿ. :-)
ಈ ಪ್ರೀತಿಗೆ ಶರಣು.
-ಸು
Post a Comment