ಈಗ್ಗೆ ಹಲ ವರುಷಗಳ ಹಿಂದೆ, ನಮ್ಮೂರ ಪಕ್ಕದೂರಿನ ಯುವಕರೊಬ್ಬರು ಆರೆಸ್ಸೆಸ್ ಸಂಘಟನೆಗೆ ಹುಡುಗರನ್ನು ಒಗ್ಗೂಡಿಸುವ ಸಲುವಾಗಿ ಊರೂರು ಸುತ್ತಿ, ಪ್ರತಿ ಊರಲ್ಲೂ ಅಷ್ಟಿಷ್ಟು ಜನರನ್ನು ಒಂದೆಡೆ ಕೂಡಿಸಿ, ಧ್ವಜವಂದನೆ ಮಾಡಿಸಿ, ‘ನಮಸ್ತೇ ಸದಾ ವತ್ಸಲೇ ಮಾತೃಭೂಮೇ..’ ಹಾಡಿಸಿ ಹೋಗಿದ್ದರು. ಆಗ ಅವರ ಜೊತೆ ನಾನೂ ಒಂದಷ್ಟು ಕಾಲ ಓಡಾಡಿಕೊಂಡಿದ್ದೆ. ಇದನ್ನು ನೋಡಿ ನನ್ನ ಅಪ್ಪ-ಅಮ್ಮ, ಇರುವ ಒಬ್ಬನೇ ಮಗ ಎಲ್ಲಿ ದೇಶಸೇವೆ-ಗೀಶಸೇವೆ ಅಂತ ಹೊರಟುಬಿಡುತ್ತಾನೋ ಎಂದು ವ್ಯಾಕುಲರಾಗಿ, ‘ಅದೆಲ್ಲ ನಮ್ಮಂಥವರಿಗಲ್ಲ, ಮನೇಲಿ ಇಬ್ರು-ಮೂವರು ಮಕ್ಕಳು ಇದ್ರೆ ಒಬ್ಬ ಮಗ ಹಿಂಗೆ ಹೋಗೋದು ಸರಿ. ನೀನು ಇನ್ಮೇಲೆ ಅವನ ಹಿಂದೆ ಓಡಾಡ್ಬೇಡ’ ಅಂತ ನನ್ನನ್ನು ಕೂರಿಸಿಕೊಂಡು ಹೇಳಿದ್ದರು. ನನಗಾದರೂ ಆರೆಸ್ಸೆಸ್ ಬಗೆಗಾಗಲೀ, ದೇಶದ ಬಗೆಗಾಗಲೀ, ದೇಶಸೇವೆ ಎಂದರೇನು ಅಂತಾಗಲೀ, ಪುತ್ರವಾತ್ಸಲ್ಯದ ಅರ್ಥವಾಗಲೀ ಆಗ ಗೊತ್ತಿರಲಿಲ್ಲ. ಅಪ್ಪ-ಅಮ್ಮ ಹೇಳಿದಮೇಲೆ ಹೌದಿರಬಹುದು ಅಂದುಕೊಂಡು ಆಮೇಲೆ ಅತ್ತಕಡೆ ತಲೆ ಹಾಕಲಿಲ್ಲ.
ಐದಾರು ತಿಂಗಳ ಹಿಂದೆ ಊರಿಗೆ ಹೋಗಿದ್ದಾಗ, ಮನೆಗೆ ಬಂದಿದ್ದ ಅತ್ತೆ ಮತ್ತು ಅವಳ ಮಕ್ಕಳೊಂದಿಗೆ ಉಪ್ಪು-ಖಾರ ತಿನ್ನುತ್ತ ಅದೂ-ಇದೂ ಹರಟೆ ಹೊಡೆಯುತ್ತ ಹಿತ್ಲಕಡೆ ಕಟ್ಟೆಯ ಮೇಲೆ ಕೂತಿದ್ದೆ. ಅಷ್ಟೊತ್ತಿನ ತನಕ ಹಳೇ ನೆನಪು, ಅವರಿವರ ಮನೆ ಕತೆ, ಗೋಳಿನ ಬೆಂಗಳೂರಿನ ಬಗ್ಗೆಯೆಲ್ಲ ನನ್ನ ಜೊತೆ ಲೋಕಾರೂಢಿ ಮಾತಾಡುತ್ತಿದ್ದ ಅತ್ತೆ ಇದ್ದಕ್ಕಿದ್ದಂತೆ ‘ಸರೀ, ಈ ವರ್ಷ ಮದುವೆ ಆಗ್ತ್ಯಾ?’ ಅಂತ ಕೇಳಿಬಿಟ್ಟಳು. ಈ ವಿಧಿಯ ಸಂಚೇ ಹಾಗೆ, ಯಾವಾಗ ಕೈ ಕೊಡುತ್ತೆ ಹೇಳಲಿಕ್ಕಾಗುವುದಿಲ್ಲ. ಆದರೂ ಧೃತಿಗೆಡದ ನಾನು, ‘ಅಯ್ಯೋ, ಇನ್ನೊಂದೆರ್ಡು ವರ್ಷ ತಡಿ ಮಾರಾಯ್ತಿ’ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಅತ್ತೆ ಮುಂದುವರಿದು, ‘ಹಂಗಲ್ಲಾ, ನೀನೇ ಬೆಂಗಳೂರಲ್ಲಿ ಯಾರನ್ನಾದ್ರೂ ನೋಡಿಕೊಂಡ್ರೂ ಅಡ್ಡಿ ಇಲ್ಲೆ. ಆದರೆ ಎಲ್ಲಾ ಸರಿ ಇದ್ದಾ ನೋಡಿ ಮಾಡ್ಕ್ಯ’ ಎಂದಳು. ‘ಎಲ್ಲಾ ಸರಿ ಇರದು ಅಂದ್ರೆ ಎಂತು?’ ನಾನು ಕೇಳಿದೆ. ‘ನಿಂಗ ಸಾಹಿತಿಗಳು ಆದರ್ಶ-ಗೀದರ್ಶ ಅಂತ ಹೊರಟುಬಿಡ್ತಿ. ನೀನು ಮಾಡಿಕೊಳ್ಳೋದಿದ್ರೆ ನಮ್ ಜಾತಿ ಕೂಸಿನ್ನೇ ಮಾಡ್ಕ್ಯ. ಹುಡುಗಿ ಮನೆ ಕಡೆಗೂ ಚನಾಗಿರವು. ಕುಂಟಿ, ಕಿವುಡಿ, ನಿನಗಿಂತ ದೊಡ್ಡೋರು, ಡೈವೋರ್ಸಿಗಳು, ಇಂಥವರನ್ನೆಲ್ಲಾ ಮಾಡಿಕೊಳ್ಬೇಡ. ಮೊದಮೊದಲು ಆದರ್ಶ ಅಂತ ಚೊಲೋ ಕಾಣ್ತು. ಆದರೆ ಆಮೇಲೆ ಅದೇ ಒಂದು ಕೊರಗು ಆಗ್ತು..’ ಅಂತೆಲ್ಲ ಹೇಳಿ, ‘ಆದರ್ಶಗಳೆಲ್ಲ ಬೇರೆಯವರಿಗೆ ಹೇಳೋದಿಕ್ಕೇ ವಿನಹ ನಾವೇ ಪಾಲಿಸಲಿಕ್ಕೆ ಅಲ್ಲ’ ಎಂದಳು.
ಅವಳ ಕೊನೆಯ ವಾಕ್ಯ ನನ್ನೊಳಗೇ ಉಳಿದುಕೊಂಡು ಬಿಟ್ಟಿತು: ‘ಆದರ್ಶಗಳು ನಾವು ಪಾಲಿಸಲಲ್ಲ; ಬೇರೆಯವರಿಗೆ ಬೋಧಿಸಲು.’ ಅದೆಷ್ಟೇ ವಿರೋಧಾತ್ಮಕವಾಗಿದ್ದರೂ, ನನ್ನ ಅತ್ತೆ ಹೇಳಿದ ಮಾತು ಅವಳ ಆ ಕ್ಷಣದ, ಪ್ರಾಮಾಣಿಕವಾಗಿ ಹೊರಬಂದ, ಅಂತಃಕರಣದ ಮಾತಾಗಿತ್ತು. ಅವಳ ಹೇಳಿಕೆಯನ್ನಿಟ್ಟುಕೊಂಡು ದಿನವಿಡೀ ವಾದಿಸಬಹುದಿತ್ತಾದರೂ ನಾನು ಸರಿಸರಿಯೆಂದು ತಲೆದೂಗಿದೆ. ಆದರೆ ಆ ವಾಕ್ಯ ಇವತ್ತಿನ ಈ ಕ್ಷಣದವರೆಗೂ ನನ್ನೊಂದಿಗೆ ಬರುತ್ತಿದೆ, ಮನಸಿನೊಂದಿಗೆ ಸೆಣಸುತ್ತಿದೆ.
ಬಹುಶಃ ನನ್ನ ಅತ್ತೆ ಬಾಯಿಬಿಟ್ಟು ಹೇಳಿದ ಆ ಮಾತು ನಾವೆಲ್ಲ ನಮ್ಮ ಆಪ್ತರಿಗೆ ಬಾಯಿಬಿಟ್ಟೋ ಬಿಡದೆಯೋ ಹೇಳುವ ಮಾತು. ‘ಯೋಧ ಜನಿಸಬೇಕು. ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ’ ಎಂಬ ಅಭಿಪ್ರಾಯ ೯೦ ಪ್ರತಿಶತ ಜನರದು. ನಿರ್ಧಾರದ ಗಳಿಗೆಗಳಲ್ಲೆಲ್ಲ ನಮ್ಮನ್ನು ಕಾಡಿದ ದ್ವಂದ್ವ ಅದೇ: ಧ್ಯೇಯವೋ? ಮೋಹವೋ? ಕವಲುದಾರಿಯಲ್ಲಿ ನಿಂತಾಗಲೆಲ್ಲ ನಮಗೆ ಎದುರಾಗುವ ಗೊಂದಲ ಅದೇ: ಜನ ಹೇಳಿದತ್ತ ಹೋಗಲೋ? ನನ್ನ ವಿವೇಕ ಹೇಳಿದತ್ತ ಹೋಗಲೋ? ಇಷ್ಟಕ್ಕೂ ಆದರ್ಶದ ಪಾಲನೆ ನಮ್ಮ ಸಂತೋಷಕ್ಕೋ ಅಥವಾ ಸಮಾಜ ನನ್ನನ್ನು ಪ್ರಶ್ನಿಸುವ ಕಣ್ಣುಗಳಿಂದ ನೋಡುತ್ತಿದೆ ಎಂಬ ಆತಂಕಕ್ಕೋ?
ಈ ಆದರ್ಶದ ಪರಿಕಲ್ಪನೆಯೂ ಒಬ್ಬರಿಂದೊಬ್ಬರಿಗೆ ಭಿನ್ನ. ಜಗತ್ತು ನಮ್ಮ ಮೇಲೆ ಹೇರುವ ಆದರ್ಶಗಳು ಒಂದು ತೂಕದವಾದರೆ ನಮ್ಮ ಮೇಲೆ ನಾವೇ ಹೇರಿಕೊಳ್ಳುವ ಆದರ್ಶಗಳು ಇನ್ನೊಂದು ತೆರನವು. ಬಹುಶಃ ನಮ್ಮ ಆದರ್ಶವನ್ನು ನಾವು ಮೊದಲೇ ಸೆಟ್ ಮಾಡಿಕೊಂಡಿದ್ದರೆ ಆಯ್ಕೆಯ ಕ್ಷಣಗಳಲ್ಲಿ ಗೊಂದಲಗಳಾಗುವುದಿಲ್ಲ. ‘ನನ್ನ ಆದರ್ಶದ ಮಿತಿ ಇಷ್ಟೇ’ ಅಂತ ಜಗತ್ತಿಗೆ ಉತ್ತರಿಸಬಹುದು. ಅಥವಾ ಜಗತ್ತಿಗೆ ಉತ್ತರಿಸುವ ದರ್ದಿಲ್ಲ ಎಂದರೆ ನನಗೆ ನಾನೇ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಅದು ‘ಬುದ್ಧಿವಂತಿಕೆ’ ಆಗಿಹೋಗುತ್ತದಾ? ಹಾಗಾದರೆ ಆದರ್ಶಗಳನ್ನು ಮೈಮೇಲೆ ಹೇರಿಕೊಳ್ಳುವುದೇ ತಪ್ಪಾ? ಬಿಡುಬೀಸಾಗಿ ನಡೆದು, ಮನಸಿಗೆ ತೋಚಿದತ್ತ ಸಾಗುವುದೇ ಸರಿಯಾದ ರೀತಿಯಾ? ಆ ಕ್ಷಣದಲ್ಲಿ ನನಗೆ ಏನನ್ನಿಸುತ್ತದೋ ಅದರಂತೆಯೇ ನಿರ್ಧರಿಸುವುದು ಸರಿಯಾದ ಮಾರ್ಗವಾ? ಗೊತ್ತಿಲ್ಲ.
* * *
ಜಯಂತ ಕಾಯ್ಕಿಣಿ ‘ಚಾರ್ಮಿನಾರ್’ ಎಂಬ ನೀಳ್ಗತೆಯೊಂದನ್ನು ಬರೆದಿದ್ದಾರೆ. ನನ್ನನ್ನು ಬಹಳವಾಗಿ ಕಾಡಿದ ಕತೆ ಅದು. ಯುನಿವರ್ಸಿಟಿಗೇ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾದ ನೈಋತ್ಯ ಗಾಂವಕರ ಎಂಬ ಯುವಕ, ಕೆಲಸ ಹಿಡಿದು ದುಡ್ಡು ಮಾಡುವುದು ಬಿಟ್ಟು, ಈ ಸಮಾಜಕ್ಕೆ ಒಳ್ಳೆಯದಾಗುವಂಥದ್ದೇನಾದರೂ ಮಾಡಬೇಕು ಎಂದುಕೊಂಡು, ಮನೆ ಬಿಟ್ಟು ಓಡಿ ಬಂದಂತಹ ಮಕ್ಕಳನ್ನು ಮರಳಿ ಮನೆ ಸೇರಿಸುವ ಕೈಂಕರ್ಯದಲ್ಲಿ ತೊಡಗಿಕೊಳ್ಳುತ್ತಾನೆ. ರೈಲುಗಳಲ್ಲಿ ಟೀ, ಮಜ್ಜಿಗೆ, ವಡೆ, ನ್ಯೂಸ್ಪೇಪರು, ತಿಂಡಿಯ ಪೊಟ್ಟಣಗಳನ್ನು ಹಿಡಿದು ಬರುವ ಮಕ್ಕಳಿಂದ ಹಿಡಿದು ಹೋಟೆಲ್ಗಳ ಕ್ಲೀನರ್ ಹುಡುಗರವರೆಗೆ, ಅವರ ಪೂರ್ವಾಪರ ವಿಚಾರಿಸಿ ಮತ್ತೆ ಸಾಮಾನ್ಯ ಮಕ್ಕಳನ್ನಾಗಿಸುವ, ಮಕ್ಕಳಿಗೆ ಸಿಗಬೇಕಾದುದನ್ನು ಕೊಡಿಸುವ ಪ್ರಯತ್ನ ಮಾಡುತ್ತಾನೆ. ಪುನರ್ವಸು ಎಂಬ ಹುಡುಗಿ ಅವನ ಈ ಕೆಲಸದಲ್ಲಿ ಸಾಥಿಯಾಗಿ, ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ. ಇನ್ನಾದರೂ ಇವರು ಹಳಿಗೆ ಬಂದಾರು ಎಂದುಕೊಂಡ ಉಭಯ ಪೋಷಕರೂ ನಿರಾಶೆಯಾಗುವಂತೆ ಇವರು ತಮ್ಮ ಸಮಾಜೋದ್ಧಾರದ ಕೆಲಸ ಮುಂದುವರೆಸುತ್ತಾರೆ. ವೈಯಕ್ತಿಕ ಸುಖ-ದುಃಖಗಳು ಗೌಣವಾಗುತ್ತವೆ. ರಸ್ತೆಬದಿ, ರೈಲು, ಬಸ್ಸ್ಟಾಂಡು, ಶಾಲೆಯ ಕಟ್ಟೆಗಳ ಮೇಲೇ ಮಲಗೆದ್ದು, ಎಲ್ಲೆಲ್ಲೋ ಏನೇನೋ ತಿನ್ನುತ್ತ, ಅವರು ಈ ಕೆಲಸದಲ್ಲೇ ಮುಳುಗಿಹೋಗಿರುತ್ತಾರೆ. ಆದರೆ ಯಾವಾಗ ಪುನರ್ವಸು ಗರ್ಭಿಣಿಯಾಗುತ್ತಾಳೋ ಆಗ ಅವರಿಗೂ ಒಂದು ‘ವೈಯಕ್ತಿಕ ಬದುಕು’ ಪ್ರಾಪ್ತವಾಗುತ್ತದೆ. ಬಸುರಿ ಹೆಂಡತಿಗಾಗಿ ಹಾಲು, ಒಳ್ಳೆಯ ಊಟ, ಮನೆ, ಬಟ್ಟೆ, ಆರೈಕೆ, ತಾನು, ತನ್ನದು -ಗಳಂತಹ ಸಂಸಾರದ ಚೌಕಟ್ಟಿಗೆ ಅವರೂ ಒಳಗಾಗಬೇಕಾಗುತ್ತದೆ. ‘ಹಣ’ಕ್ಕೊಂದು ಪ್ರಾಮುಖ್ಯತೆ ಬರುತ್ತದೆ. ಬೇರೆ ಸಂಸಾರಗಳನ್ನು, ಗೆಳೆಯರ ಮಕ್ಕಳನ್ನು ನೋಡಿದಾಗ ತಾನು ತೆಗೆದುಕೊಂಡ ನಿರ್ಧಾರಗಳು, ತನ್ನ ಆದರ್ಶಗಳು ಎಲ್ಲಾ ಸುಳ್ಳಾಗಿದ್ದವೇ ಎಂಬ ಗೊಂದಲಕ್ಕೆ ಬೀಳುತ್ತಾನೆ ನೈಋತ್ಯ.
ನಾವು ಪಾಲಿಸಿಕೊಂಡು ಬಂದ ಆದರ್ಶಗಳನ್ನು ಕೈಬಿಡುವ ಕ್ಷಣಗಳಲ್ಲಿ ಆಗುವ ಗೊಂದಲ ತೀವ್ರವಾದದ್ದು. ಬಹುಶಃ ಈ ‘ಆದರ್ಶದ ಪರಿಪಾಲನೆ’ ಎಂಬ ಸಂಗತಿಗೆ ‘ಯಾವುದೋ ಸುಖದ ತ್ಯಾಗ’ ಎಂಬ ಸಂಗತಿ ಲಿಂಕ್ ಆಗಿರಬೇಕು. ಮತ್ತು ಈ ‘ಯಾವುದೋ ಸುಖದ ತ್ಯಾಗ’ ಎಂಬುದು ಮತ್ತೊಬ್ಬರನ್ನು ನೋಡಿದಾಗ ನಮಗನಿಸುವ ಭಾವವಿರಬೇಕು. ಉದಾಹರಣೆಗೆ, ‘ಹಣ ಮಾಡುವುದಕ್ಕಾಗಿ ನಾನು ದುಡಿಯುವುದಿಲ್ಲ; ಸಧ್ಯಕ್ಕೆ ನನಗೆ ಬದುಕಲೆಷ್ಟು ಬೇಕೋ ಅಷ್ಟನ್ನು ಮಾತ್ರ ನಾನು ದುಡಿದುಕೊಳ್ಳುತ್ತೇನೆ’ ಎಂಬ ಧ್ಯೇಯವನ್ನು ನಾನು ಇಟ್ಟುಕೊಂಡರೆ, ಇಡೀ ಜಗತ್ತೇ ಹಣದ ಹಿಂದೆ ಬಿದ್ದಿರುವ ಈ ದಿನಗಳಲ್ಲಿ ನಾನು ಒಂಟಿಯಾಗಿಬಿಡುತ್ತೇನೆ. ನಾನೂ ನನ್ನ ಗೆಳೆಯರ, ಊರವರ, ಸಮಾಜದವರ ಸರಿಸಮಾನನಾಗಿ ಬದುಕಬೇಕು ಎಂಬ ಬಯಕೆಗೂ ನನ್ನ ಆದರ್ಶಕ್ಕೂ ಬೀಳುವ ಜಿದ್ದಾಜಿದ್ದಿ ಇದು. ಗೆಳೆಯ ಕಾರು ತಗೊಂಡ, ಸೈಟು ಖರೀದಿಸಲು ನೋಡುತ್ತಿದ್ದಾನೆ, ಫ್ಲಾಟ್ನಲ್ಲಿ ಇದ್ದಾನೆ, ಅಮೆರಿಕೆಗೆ ಹಾರುತ್ತಿದ್ದಾನೆ, ಎಷ್ಟು ಸುಂದರಿ ಹೆಂಡತಿ, ಫೈವ್ ಸ್ಟಾರ್ ಹೋಟೆಲಿಗೆ ಕರೆದೊಯ್ಯುತ್ತಾನೆ, ಮಲ್ಟಿಪ್ಲೆಕ್ಸಿನಲ್ಲೇ ಸಿನೆಮಾ ನೋಡುತ್ತಾನೆ, ಶಾಪಿಂಗ್ ಮಾಡುವುದೇನಿದ್ದರೂ ಮಾಲಿನಲ್ಲೇ -ಎಂಬಿತ್ಯಾದಿ ಬೇಡವೆಂದರೂ ನನ್ನನ್ನು ಚುಚ್ಚುವ ಶೂಲಗಳು; ‘ಬರೀ ಈಗಿನದಷ್ಟೇ ನೋಡಿಕೊಂಡ್ರೆ ಆಗ್ಲಿಲ್ಲ, ನಿನ್ನನ್ನಷ್ಟೇ ಸಂಭಾಳಿಸಿಕೊಂಡ್ರೆ ಆಗ್ಲಿಲ್ಲ; ಫ್ಯೂಚರ್ - ಫ್ಯೂಚರ್ ಬಗ್ಗೆ ಯೋಚಿಸು. ನಿನ್ನ ತಂದೆ-ತಾಯಿಯರನ್ನ ನೋಡ್ಕೋಬೇಕು, ಮದುವೆ ಮಾಡ್ಕೋಬೇಕು, ಆಮೇಲೆ ಮಕ್ಳು-ಮರಿ-ಶಾಲೆ-ಫೀಸು, ಸಂಸಾರವನ್ನ ಸುಖವಾಗಿಡಬೇಕು, ಕೊನೇಕಾಲದಲ್ಲಿ ನಿನಗೇ ಹಣದ ಜರೂರತ್ತು ಬೀಳಬಹುದು... ಇದನ್ನೆಲ್ಲ ಯೋಚಿಸು. ಕಮ್ ಔಟ್ ಆಫ್ ದಟ್ ಕಂಪನಿ ಅಂಡ್ ಜಾಯ್ನ್ ಅ ನ್ಯೂ ಜಾಬ್’ ಎಂದು ನನ್ನನ್ನು ಪ್ರೇರೇಪಿಸುವ ಶಕ್ತಿಗಳು; ‘ಈಗಿನ ಕಾಲದಲ್ಲಿ ಲಾಯಲ್ಟಿ, ಭಾವನೆ, ಆದರ್ಶ ಅಂತೆಲ್ಲ ಯೋಚಿಸ್ತಾ ಕೂತ್ರೆ ಅಷ್ಟೇ ಕತೆ. ದುಡ್ಡಿಗಾಗಿ ಏನು ಮಾಡಲಿಕ್ಕೂ ಹೇಸದ ಜನಗಳ ಮಧ್ಯೆ ನೀನಷ್ಟೇ ಸುಮ್ಮನಿದ್ದು ಏನು ಸಾಧಿಸ್ತೀಯಾ? ಹೇಳ್ತೀನಿ ಕೇಳು: ಮುಂದೆಮುಂದೆ ನಿನ್ನ ಆದರ್ಶಗಳ ಪಾಲನೆಗೂ ಹಣವೇ ಬೇಕಾಗತ್ತೋ ಮೂರ್ಖಾ!’ ಎಂದು ಹೆದರಿಸುವ ಆಪ್ತರು; ‘ಒಂದು ಸಲ ನಿಂಗೆ ಎಷ್ಟು ಬೇಕೋ ಅಷ್ಟು ಹಣ ಮಾಡಿಕೊಂಡು ಲೈಫಲ್ಲಿ ಸೆಟಲ್ ಆಗಿ ಕೂತುಬಿಟ್ರೆ ಮುಗೀತಪ್ಪ. ಆಮೇಲೆ ನಿಂಗೆ ಏನು ಬೇಕೋ ಅದು ಮಾಡ್ಕೋ. ಹ್ಯಾಗೆ ಬೇಕೋ ಹಾಗೆ ಬದುಕು’ ಎಂಬ ಹೊಸ ಆಯಾಮದ ಸಲಹೆ -ಇವೆಲ್ಲವುಗಳ ಮಧ್ಯೆ ನಾನು ನಾನಾಗಿ ಉಳಿಯುವುದು ಹೇಗೆ?
ಈ ಸುಖ ಎಂಬ ಊಹನೆಗೆ ಗರಿಷ್ಠ ಮಿತಿಯೇ ಇಲ್ಲದಿರುವುದು ಇವಕ್ಕೆಲ್ಲ ಕಾರಣವಿರಬಹುದು. ಏನೆಲ್ಲ ಇದ್ದೂ ಇವ್ಯಾವುದೂ ಬೇಡ, ಮತ್ತೇನೋ ಬೇಕು ಎಂದು ಹಂಬಲಿಸುವುದು ಅಧ್ಯಾತ್ಮ. ಆದರೆ ಇಷ್ಟೆಲ್ಲ ಇದ್ದರೂ ಇನ್ನೂ ಬೇಕೆಂಬುದಕ್ಕೆ, ಎಷ್ಟೇ ಅನುಭವಿಸಿದರೂ ಸಾಕೆನಿಸದೇ ಹೋಗುವುದಕ್ಕೆ, ಬರೀ ನಮಗಿಂತ ಮೇಲಿನವರೇ ನಮ್ಮ ಕಣ್ಣಿಗೆ ಚುಚ್ಚುವುದಕ್ಕೆ ತೃಪ್ತಿಯ ಅಳತೆಗೋಲು ಬೆಳೆಯುತ್ತಲೇ ಹೋಗುವುದೇ ಕಾರಣ. ಈ ಎಲ್ಲ ಏನೆಲ್ಲವನ್ನು ಗಳಿಸುವ ಭರಾಟೆಯಲ್ಲಿ ನಾನು ಮುರಿಯಬೇಕಿರುವ ನಿರ್ಧಾರಗಳಿಗೆ ಕೊಟ್ಟುಕೊಳ್ಳಬಹುದಾದ ಸಮರ್ಥನೆಯೇನು? ನಾನು ಬದುಕುತ್ತಿರುವ ಈ ವಾಸ್ತವಿಕ ಜಗತ್ತು ನನ್ನದಲ್ಲ, ನಾನು ಮಾಡುತ್ತಿರುವ ಈ ಕೆಲಸ ನನ್ನದಲ್ಲ, ಐಯಾಮ್ ನಾಟ್ ವ್ಹಾಟ್ ಐಯಾಮ್ -ಎಂಬ, ಆಗಾಗ ನನಗನಿಸುವ ಭಾವ, ಮತ್ತು ಹಾಗಿದ್ದಾಗ್ಯೂ ಇವ್ಯಾವುದನ್ನೂ ಬಿಡಲಾಗದ ಅನಿವಾರ್ಯತೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಕಾಲ ಸವೆಸುವುದೇ ಬದುಕೇ? ಗೊತ್ತಿಲ್ಲ.
* * *

ಭಾನುವಾರ ಬೆಳಬೆಳಗ್ಗೆ ಫೋನಿಸಿದ ಹುಡುಗಿ ಭೈರಪ್ಪನವರ ‘ನಿರಾಕರಣ’ ಓದುತ್ತಿರುವುದಾಗಿ ಹೇಳಿದಳು. ಅದ್ಯಾವುದೋ ಗುಂಗಿನಲ್ಲಿದ್ದ ನಾನು, ‘ಅದರಲ್ಲಿ ಬರುವ ಪಾತ್ರ ನರಹರಿಯ ಹಾಗೆ ನಂಗೂ ಆಗಾಗ ಹಿಮಾಲಯಕ್ಕೆ ಹೋಗಿಬಿಡಬೇಕು ಅಂತ ಅನ್ನಿಸುತ್ತೆ. ಒಂದಷ್ಟು ಕಾಲ ಸನ್ಯಾಸಿಯ ಥರ ಬದುಕಿ ಬರಬೇಕು ಅಂತ ಇದೆ’ ಎಂದುಬಿಟ್ಟೆ. ಅಷ್ಟೇ, ಫೋನ್ ಕಟ್! ಏನಾಯಿತು ಅಂತ ತಿಳಿಯಲು ಅರ್ಧ ಗಂಟೆಯ ನಂತರ ಬಂದ ಎಸ್ಸೆಮ್ಮೆಸ್ಸನ್ನೇ ಓದಬೇಕಾಯಿತು: ‘ನಿಂಗೆ ಸನ್ಯಾಸಿ ಆಗ್ಬೇಕು ಅಂತೆಲ್ಲ ಇದ್ರೆ ಮೊದಲೇ ಹೇಳ್ಬಿಡು. ನಾನು ನಿನ್ನ ಮದುವೇನೇ ಮಾಡ್ಕೊಳಲ್ಲ. ಆಮೇಲೆ ಸಂಸಾರ ಬಿಟ್ಟು, ಮಕ್ಕಳನ್ನ ಹರಾಜಿಗೆ ಹಾಕಿ ನೀನು ಹತ್ತಿ ಹೋಗೋದು ಎಲ್ಲಾ ನಂಗೆ ಸಹಿಸಲಿಕ್ಕೆ ಆಗಲ್ಲ. ಎಲ್ಲಾರ ಹಾಗೆ ಡೀಸೆಂಟಾಗಿ ಬದುಕೋ ಹುಡುಗ ಬೇಕು ನಂಗೆ.’ ಆಹ್! ಆಮೇಲೆ ‘ನಾನು ಹೇಳಿದ್ದು ಹಂಗಲ್ಲ, ಹಿಂಗೆ, ನಾನು ದೇವರಾಣೆ ಸನ್ಯಾಸಿ ಆಗಲ್ಲ, ಹೆಂಡತಿ-ಮಕ್ಕಳನ್ನ ಬಿಟ್ಟುಹೋಗುವಷ್ಟು ಬೇಜವಾಬ್ದಾರಿತನ ನಂಗಿಲ್ಲ’ ಅಂತೆಲ್ಲ ಹೇಳಿ ಸಮಾಧಾನ ಮಾಡಬೇಕಾಯ್ತು. ಮೂರು ದಿನ ಮಾತಿಲ್ಲ ಕತೆಯಿಲ್ಲ. ಕೊನೆಗೆ ದೇವರೇ ಡೈರಿಮಿಲ್ಕ್ ರೂಪದಲ್ಲಿ ಬಂದು ಈ ಪ್ರಕರಣಕ್ಕೆ ಸುಖಾಂತ್ಯ ಕೊಟ್ಟ. ಕ್ಯಾಡ್ಬರೀಸಿಗೆ ಥ್ಯಾಂಕ್ಸ್ ಹೇಳಿದೆ.
ಕನಸಿಗೂ, ಆದರ್ಶಕ್ಕೂ, ಹುಚ್ಚಿಗೂ ಸಿಕ್ಕಾಪಟ್ಟೆ ಸಂಬಂಧವಾ? ಕನಸು ಕಾಣುವುದು ಹಾಗೂ ಆದರ್ಶಗಳನ್ನು ಆವಾಹಿಸಿಕೊಳ್ಳುವುದು ಹುಚ್ಚಿನ ಲಕ್ಷಣವಾ? ಗೊತ್ತಿಲ್ಲ.
* * *

ಏನೇನೂ ಗೊತ್ತಿಲ್ಲದ ಕಾಲದಲ್ಲಿ ಶುರು ಮಾಡಿದ್ದು ಈ ಬ್ಲಾಗು. ಆದರೆ ಹೀಗೆಲ್ಲ ನಿಮ್ಮೊಂದಿಗೆ ಮಾತಾಡುತ್ತ ಐದು ವರುಷಗಳೇ ಕಳೆದುಹೋಗಿವೆ. ನಾನು ಬರೆದದ್ದೆಲ್ಲ ಓದಿದ ನಿಮ್ಮ ಪ್ರೀತಿ ದೊಡ್ಡದು. ನಿಮ್ಮ ಸ್ಪಂದನಗಳು ನನಗೆ ನೀಡಿದ ಆತ್ಮವಿಶ್ವಾಸ ಅಪಾರ. ಥ್ಯಾಂಕ್ಸ್, ಋಣಿ, ಕೃತಜ್ಞ, ಆಭಾರಿ -ಇತ್ಯಾದಿ ಶಬ್ದಗಳು ಈ ಸದ್ದಿಲ್ಲದ ಭಾವಗೀತದ ಬಣ್ಣನೆಗೆ ಏನೇನೂ ಸಾಲವು. ಆದರೂ ಈ ಕ್ಷಣಕ್ಕೆ ಹೊಳೆಯುತ್ತಿರುವವು ಅವೇ.
ದೈನಂದಿನ ಬದುಕಿಗೆ ಇಂಗ್ಲೀಷ್ ಕ್ಯಾಲೆಂಡರ್ ಇಯರ್, ಹಿಂದೂಗಳಿಗೆ ಸಂವತ್ಸರ, ವ್ಯವಹಾರ ಜಗತ್ತಿಗೆ ಫೈನಾನ್ಷಿಯಲ್ ಇಯರ್ -ಇರುವ ಹಾಗೆ ಬ್ಲಾಗಿಗರಿಗೆ ‘ಬ್ಲಾಗೀ ವರ್ಷ.’ ಈ ಬ್ಲಾಗೀ ವರ್ಷ ನನಗೆ ಒಂದಷ್ಟು ಬಹುಮತಿಗಳನ್ನು ತಂದುಕೊಟ್ಟಿತು: ನನ್ನ ‘ಹೊಳೆಬಾಗಿಲು’ ಕೃತಿಗೆ ಸಾಹಿತ್ಯ ಪರಿಷತ್ ಕೊಟ್ಟ ಅರಳು ಪ್ರಶಸ್ತಿ, ಕವಿತೆಗಳಿಗೆ ಟೋಟೋ ಕೊಟ್ಟ ಸರ್ಟಿಫಿಕೇಟು, ಮೊನ್ನೆಮೊನ್ನೆ ಕನ್ನಡ ಪ್ರಭ-ಅಂಕಿತ ಪುಸ್ತಕದ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಬಂದ ಬಹುಮಾನ ...ಹೀಗೆ ಹಂಚಿಕೊಳ್ಳಲು ಒಂದಷ್ಟು ಖುಶಿಗಳು. ನಿಮ್ಮೊಂದಿಗೇ ಯಾಕೆ ಹಂಚಿಕೊಳ್ಳಬೇಕು ಎಂದರೆ ಮೇಷ್ಟ್ರಿಗೆ ಯಾಕೆ ಗೌರವ ಕೊಡಬೇಕು ಎಂದಂತಾಗುತ್ತದೆ.
ಗಾಳ ಹಾಕಿ ಕುಳಿತವನಿಗೆ ಮೀನೇ ಸಿಗಬೇಕೆಂಬ ಹಟವಿಲ್ಲ. ಆಮೆಮರಿ, ಕಪ್ಪೆಚಿಪ್ಪು, ಉರೂಟು ಕಲ್ಲು, ಸಣ್ಣ ಶಂಕು, ಯಾರದೋ ಸಾಕ್ಸು, ನೀರುಳ್ಳೆ ಹಾವು, ಕನ್ನಡಕದ ಫ್ರೇಮು... ಬುಟ್ಟಿಗೆ ಬಿದ್ದುದೆಲ್ಲ ಕವಿತೆಯಾಗಲಿ; ಮರೆತ ಉಸಿರು ಕತೆಯಾಗಲಿ. ಸಾಗುತ್ತಿರುವ ಪಯಣದಲ್ಲಿ, ಜಾರುತ್ತಿರುವ ಕ್ಷಣಗಳಲ್ಲಿ, ಭಾರ ಭಾರ ಮನಸಿನಲ್ಲಿ ಹೀಗೊಂದು ಪುಟ್ಟ ಪ್ರಾರ್ಥನೆ:
ಜಗುಲಿಕಟ್ಟೆಯ ಮೇಲೆ ನಡೆಯುತ್ತಿದೆ ಜೋರುನಗೆಯಲಿ ಅಂತ್ಯಾಕ್ಷರಿ
ಹೊಸ ಹಾಡು ಹೊಳೆಯುತಿರಲಿ, ಆಟಕಂತ್ಯವಿಲ್ಲದಿರಲಿ
ಕಾದ ಧರಣಿಗೆ ಆಗುತ್ತಿದೆ ರಾತ್ರಿಯಿಡೀ ಮಳೆಯ ಮೇಜವಾನಿ
ಯಾವ ಗೋಡೆಯೂ ಕುಸಿಯದಿರಲಿ, ಮರದ ರೆಂಬೆ ಗಟ್ಟಿಯಿರಲಿ
ತಿರುಗುತ್ತಿರುವ ಆಲೆಮನೆಯ ಕೋಣಗಳಿಗೆ ತಲೆಸುತ್ತು ಬಾರದಿರಲಿ
ಅರಳುತ್ತಿರುವ ಎಲ್ಲ ಹೂವ ಕೊರಳಿಗೂ ದುಂಬಿಯುಸಿರು ತಾಕಲಿ
ಉಪ್ಪಿಟ್ಟು ವಾಕರಿಕೆ ತರಿಸುವ ಮುನ್ನ ಬ್ಯಾಚುಲರುಗಳಿಗೆ ಮದುವೆಯಾಗಲಿ
ವುಡ್ವರ್ಡ್ಸ್ ಕುಡಿದ ಮಗು ಅಳು ನಿಲ್ಲಿಸಲಿ, ಅಪ್ಪನಿಗೆ ತನ್ನಮ್ಮನ ನೆನಪಾಗಲಿ
ಬಿಸಿಲ ಬೇಗೆಗೆ ಇರಲಿ ಇಬ್ಬಟ್ಟಲ ಹಣ್ಣಿನ ಶರಬತ್ತು
ಚಳಿಯ ರಾತ್ರಿಗೆ ಇರಲಿ ತಬ್ಬಿ ಮುತ್ತಿಡುವಷ್ಟು ಮೊಹಬತ್ತು
ಸೂಜಿಯೊಳಗೆ ದಾರ ಪೋಣಿಸುತ್ತಿರುವಜ್ಜಿಗೆ ನೆರವಾಗಲಿ ಮೊಮ್ಮಗಳು
ಮರಳಿ ಬರಲಿ ವನಮಾಲಿ ರಾಧೆಯೆಡೆಗೆ, ಉಲಿಯಲಿ ಮತ್ತೆ ಕೊಳಲು
ಒತ್ತೆಯಲ್ಲಿಟ್ಟ ಹಣ್ಣು ಸಿಹಿಯಾಗಲಿ, ಒಳ್ಳೆ ಸುದ್ದಿಯೇ ಬರಲಿ ಕಾದವರಿಗೆ
ಆಸೆ ಪಟ್ಟ ಹುಡುಗಿಗೆ, ತಂದು ಮುಡಿಸಲಿ ಹುಡುಗ ಪರಿಮಳದ ಕೇದಿಗೆ
ಕಣ್ಣ ಕೆಂಪೆಲ್ಲ ತಿಳಿಯಾಗಲಿ, ಭಾಷ್ಪವೆಲ್ಲ ಮೀಸಲಿರಲಿ ಆನಂದಕೆ
ಅನ್ನವಿರಲಿ ಹಸಿದ ಹೊಟ್ಟೆಗಳಿಗೆ, ಕಾವಿರಲಿ ತಬ್ಬಲಿ ಮೊಟ್ಟೆಗಳಿಗೆ
ಒಲ್ಲದ ಒಪ್ಪಿಗೆಗಳ ನೀಡದಂತೆ ನನ್ನನ್ನು ಅಣಿಗೊಳಿಸು
ನಿರ್ಧಾರದ ಗಳಿಗೆಗಳಲಿ ಮನಸನ್ನು ಗಟ್ಟಿಗೊಳಿಸು
ಕನಸುಗಳನ್ನು ಗುರಿಗಳನ್ನಾಗಿಸುವ ಛಲ ತೊಡಿಸು
ಕವಿತೆಗಳನು ಕವಿಸಮಯಕೇ ಬಿಟ್ಟು ವಾಸ್ತವದಲ್ಲಿ ಬದುಕುವುದ ಕಲಿಸು
ತುಂಬು ಪ್ರೀತಿ,
-ಸುಶ್ರುತ ದೊಡ್ಡೇರಿ