‘ಫಸ್ಟ್ ಇಂಪ್ರೆಷನ್ ಈಸ್ ದ ಬೆಸ್ಟ್ ಇಂಪ್ರೆಷನ್’ ಎಂಬ ಅದ್ಯಾವುದೋ ಪುಣ್ಯಾತ್ಮ ಮಾಡಿದ ಗಾದೆ ನಮ್ಮೂರ ಬಸ್ಸುಗಳಿಗೂ ಅನ್ವಯಿಸುತ್ತದೆ. ಕಿತ್ತುಹೋಗಿರೋ ಟಾರು ರಸ್ತೆಯಲ್ಲಿ ಗಂಟೆಗೊಂದರಂತೆ ಹಾರನ್ ಮಾಡಿಕೊಂಡು ಚಲಿಸುವ ನಮ್ಮೂರ ಬಸ್ಸುಗಳು ಜನಮನ ಪ್ರೀತಿ ಗಳಿಸಿರುವುದು ತಮ್ಮ ಮೂಲ ಹೆಸರುಗಳೊಂದಿಗೆ. ಹಾಳಾದ ರಸ್ತೆಯಿಂದಾಗಿ ಪದೇಪದೇ ರಿಪೇರಿಗೆ ಬಂದು ಜೇಬಿಗೆ ಸಂಚಕಾರ ತರುವುದಕ್ಕೋ, ಜನರೆಲ್ಲ ಶ್ರೀಮಂತರಾಗಿ ತಮ್ಮ ಸ್ವಂತ ವಾಹನಗಳಲ್ಲಿ ಓಡಾಡತೊಡಗಿ ಕಲೆಕ್ಷನ್ ಸರಿಯಾಗಿ ಆಗದಿರುವುದಕ್ಕೋ ಅಥವಾ ಗ್ರಹಚಾರ ಸರಿಯಿಲ್ಲದೆ ಮತ್ತೆಮತ್ತೆ ಅಪಘಾತಗಳಿಗೆ ಈಡಾಗುವುದಕ್ಕೋ ಬೇಸತ್ತು, ಯಾಕೋ ಈ ರೂಟೇ ಸರಿಯಿಲ್ಲ ಅಂತ ಅದರ ಓನರ್ರು ತೀರ್ಮಾನಿಸಿ ಬಸ್ಸಿನ ಸಮೇತ ರೂಟಿನ ಲೈಸೆನ್ಸನ್ನೂ ಮತ್ಯಾರಿಗೋ ಮಾರಾಟ ಮಾಡಿ ಕೈ ತೊಳೆದುಕೊಳ್ಳುವುದು ಒಂದು ವಾರ್ಷಿಕ ವಾಡಿಕೆಯೇ ಆಗಿತ್ತು. ಆದರೆ ಈ ಅರಿವೇನು ಪ್ರಯಾಣಿಕರಿಗೆ ಆಗುತ್ತಿರಲಿಲ್ಲ. ಬಸ್ಸು ಬರಬೇಕಾದ ಸಮಯಕ್ಕೆ ಬರುತ್ತಿತ್ತು, ಕೈ ಮಾಡಿದಲ್ಲಿ ನಿಲ್ಲುತ್ತಿತ್ತು, ಹತ್ತಿಸಿಕೊಂಡು ಹೋಗುತ್ತಿತ್ತು. ಕಾಲು-ಅರ್ಧಗಂಟೆ ಹೆಚ್ಚುಕಮ್ಮಿಯಾಗುವುದಕ್ಕೆಲ್ಲ ಪ್ರಯಾಣಿಕರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.
ಈ ಓನರ್ ಬದಲಾದಾಗ ಬಸ್ಸಿನ ಬಣ್ಣ ಮತ್ತು ಹೆಸರೂ ಬದಲಾಗುತ್ತಿತ್ತು. ‘ಶ್ರೀ ಲಕ್ಷ್ಮೀ ಟ್ರಾವೆಲ್ಸ್’ ಇದ್ದುದು ‘ಶ್ರೀ ಶಿವಪ್ರಕಾಶ್ ಮೋಟಾರ್ಸ್’ ಆಯಿತು, ‘ಶ್ರೀ ಮಲ್ಲಿಕಾರ್ಜುನ ಎಕ್ಸ್‌ಪ್ರೆಸ್’ ಇದ್ದುದು ‘ಶ್ರೀ ಗಣೇಶ್ ಪ್ರಸಾದ್’ ಆಯಿತು, ‘ಶ್ರೀ ಕೃಷ್ಣಾ ಟ್ರಾನ್ಸ್‌ಪೋರ್ಟ್ಸ್ ಸರ್ವೀಸಸ್’ ಇದ್ದುದು ‘ಶ್ರೀ ವೆಂಕಟೇಶ್ವರ ಟ್ರಾನ್ಸ್‌ಪೋರ್ಟ್ಸ್’ ಆಯಿತು. ಆದರೆ ಜನ ಮಾತ್ರ ಅವುಗಳ ಮೂಲ ಹೆಸರನ್ನು ಬಿಟ್ಟುಕೊಡಲಿಲ್ಲ. ಲಕ್ಷ್ಮೀ ಬಸ್ಸು, ಮಲ್ಲಿಕಾರ್ಜುನ ಬಸ್ಸು, ಕೃಷ್ಣಾ ಬಸ್ಸು -ಹೀಗೆ ಅವು ತಮ್ಮ ಒರಿಜಿನಲ್ ಹೆಸರುಗಳಿಂದಲೇ ಕರೆಯಲ್ಪಡುತ್ತಿದ್ದವು. ಇದೇ ಸಾಲಿಗೆ ಸೇರುವ ಮತ್ತೊಂದು ಬಸ್ಸು ‘ಎಮ್ಮೆಬಸ್ಸು’.
ಈ ಎಮ್ಮೆಬಸ್ಸಿನ ನಿಜವಾದ ಹೆಸರು ‘ಶ್ರೀ ಎಮ್.ಎಮ್.ಎಸ್. ಅಂಡ್ ಎಸ್.ಟಿ.ಎ.’ ಎಂದು. ಇದರ ಲಾಂಗ್‌ಫಾರ್ಮು ಕಂಡುಹಿಡಿಯಲು ನಾವೊಂದಷ್ಟು ಹುಡುಗರು ಆಗ ಜಾಸೂಸಿ ಮಾಡಿದ್ದುಂಟು. ಎಮ್.ಎಮ್.ಎಸ್. ಎಂದರೆ ಮಲ್ಲಿಕಾರ್ಜುನ ಮೋಟಾರ್ ಸರ್ವೀಸಸ್ ಎಂದೇನೋ ಕಂಡುಹಿಡಿದೆವು. ಆದರೆ ಈ ಎಸ್.ಟಿ.ಎ. ಎಂದರೇನೆಂದು ತಿಳಿಯಲೇ ಇಲ್ಲ. ಕಂಡಕ್ಟರ್ ಬಳಿ ಕೇಳಿದರೆ, ಇನ್ನೂ ಶಾಲಾಬಾಲಕರಾಗಿದ್ದ ನಮ್ಮನ್ನು ‘ಅದೆಲ್ಲ ನಿಮಗ್ಯಾಕ್ರೋ?’ ಅಂತ ಹೆದರಿಸಿಬಿಟ್ಟರು. ಜನ ಮಾತ್ರ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗದೆ ಶಿಸ್ತಾಗಿ, ಸಿಂಪಲ್ಲಾಗಿ ಅದನ್ನು ‘ಎಮ್ಮೆಬಸ್ಸು’ ಅಂತ ಕರೆದುಬಿಟ್ಟರು! ಅದರ ಓನರ್ರೂ ಬದಲಾಗಿ, ಹೆಸರೂ ಅನೇಕ ಸಲ ಬದಲಾದರೂ ಜನರ ಬಾಯಲ್ಲಿ ಅದು ಇನ್ನೂ ಎಮ್ಮೆಬಸ್ಸಾಗಿಯೇ ಉಳಿದುಕೊಂಡಿದೆ.
ಈ ಎಮ್ಮೆಬಸ್ಸು ನಮ್ಮೂರಿಗೆ ಸಾಗರದಿಂದ ಬರುವ ಕೊನೆಯ ಬಸ್ಸು. ಪೇಟೆಗೆ ಹೋದವರೆಲ್ಲ ಅದೆಷ್ಟೇ ಕೆಲಸವಿದ್ದರೂ ಮುಗಿಸಿಕೊಂಡು ಈ ಎಮ್ಮೆಬಸ್ಸಿಗೆ ಹತ್ತಿಕೊಳ್ಳಬೇಕು. ಅದಿಲ್ಲದಿದ್ದರೆ ದೂರದ ಉಳವಿಯಿಂದ ಕತ್ತಲ ರಾತ್ರಿಯಲ್ಲಿ ನಡೆದುಕೊಂಡು ಬರಬೇಕಾಗುತ್ತದೆ. ಎಮ್ಮೆಬಸ್ಸು ಸಾಗರದಿಂದ ರಾತ್ರಿ ಎಂಟೂ ಮುಕ್ಕಾಲಿಗೆ ಹೊರಡುತ್ತದೆ. ಸಂತೆಗೆ ಹೋದವರು, ಮಂಡಿ ಕೆಲಸಕ್ಕೆ ಹೋದವರು, ನೆಂಟರ ಮನೆಗೆ ಹೋದವರು, ಸಿನೆಮಾಗೆ ಹೋದವರು -ಎಲ್ಲಾ ತರಾತುರಿಯಲ್ಲಿ ಓಡಿಬಂದು ಬಸ್ ಹತ್ತಿ ನಿಟ್ಟುಸಿರು ಬಿಡುವರು. ಮೇನ್ ಬಸ್‌ಸ್ಟಾಂಡಿನಿಂದ ಹೊರಟುಹೋಗಿದ್ದರೂ ಹೊಳೆ ಬಸ್‌ಸ್ಟಾಂಡ್ ಬಳಿ ಈ ಬಸ್ ಐದು ನಿಮಿಷ ನಿಲ್ಲುತ್ತಿದುದರಿಂದ ಜನ ಆಟೋ ಮಾಡಿಸಿಕೊಂಡಾದರೂ ಇಲ್ಲಿಗೆ ಬಂದು ಬಸ್ ಹಿಡಿಯುವರು. ಸಂತೆ ಮುಗಿಸಿ ಬಂದವರ ಚೀಲದಿಂದ ಮೂಲಂಗಿಗಿಡ, ಕೊತ್ತಂಬರಿ ಕಟ್ಟುಗಳು ಇಣುಕುತ್ತಿದ್ದರೆ, ಮಂಡಿಗೆ ಹೋಗಿಬಂದವರ ಜೇಬು ನೋಟಿನಿಂದ ಉಬ್ಬಿರುತ್ತಿತು. ನೆಂಟರ ಮನೆಯಿಂದ ಬಂದವರ ಚೀಲದಲ್ಲಿ ಸಿಹಿತಿಂಡಿಗಳಿದ್ದರೆ ಸಿನೆಮಾ ನೋಡಿ ಬಂದವರ ಮೊಗದಲ್ಲಿ ಭಾರಿ ಗಮ್ಮತ್ತು. ಈ ಎಮ್ಮೆಬಸ್ಸಿಗೆ ಸಾಗರದ ಅಂಗಡಿ, ಮಂಡಿ, ಬ್ಯಾಂಕುಗಳಿಗೆ ಕೆಲಸಕ್ಕೆ ಹೋಗುವ ಒಂದಷ್ಟು ಖಾಯಂ ಪ್ರಯಾಣಿಕರೂ, ಒಂದಷ್ಟು ಕುಡುಕರೂ ಇರುತ್ತಿದ್ದರು. ಬಾಯಿಂದ ಘಮ್ಮನೆ ಪರಿಮಳ ಹೊಮ್ಮಿಸುತ್ತ ಬಿ.ಎಚ್. ರೋಡಿನಲ್ಲಿ ಹತ್ತುತ್ತಿದ್ದ ಈ ಕುಡುಕರನ್ನು ಕಂಡಕ್ಟರು ಕೊನೆಯ ಸೀಟಿನಲ್ಲಿ ಕೂರಿಸುತ್ತಿದ್ದ. ಈ ಬಸ್ಸಿನ ತುಂಬ ದಿನವೆಲ್ಲ ಅಡ್ಡಾಡಿ ಸುಸ್ತಾದ ಪ್ರಯಾಣಿಕರೇ. ಇವರೆಲ್ಲ ಕೂತೋ, ನಿಂತೋ, ಜೋತಾಡುತ್ತಲೋ ತೂಕಡಿಸುತ್ತಿದ್ದರು. ತಮ್ಮೂರಿನ ಹೆಸರನ್ನು ಕ್ಲೀನರ್ ಹುಡುಗ ಜೋರಾಗಿ ಕೂಗುತ್ತಿದ್ದಂತೆಯೇ ಎಚ್ಚರಾಗಿ ಲಘುಬಗೆಯಿಂದ ತಮ್ಮ ಚೀಲದ ಸಮೇತ ಕೆಳಗಿಳಿಯುತ್ತಿದ್ದರು.
ಎಮ್ಮೆಬಸ್ಸಿಗೆ ಬರುವ ಪ್ರಯಾಣಿಕರಲ್ಲಿ ಸಾಗರದ ಸಂಪೂರ್ಣ ಸುದ್ದಿ ಇರುತ್ತಿತ್ತು. ಮಂಡಿಯಲ್ಲಿ ಅಡಿಕೆಯ ರೇಟು ಎಷ್ಟಾಯಿತು, ಈರುಳ್ಳಿ ರೇಟು ಕಮ್ಮಿಯಾಯಿತಾ, ಅದೇನೋ ಗಲಾಟೆಯಂತೆ ಹೌದಾ, ನಾಳೆ ಬಂದ್ ಮಾಡ್ತಾರಂತಾ, ಓಸಿ ನಂಬರ್ ಎಷ್ಟು -ಹೀಗೆ. ಅಡಿಕೆ ಬೇಯಿಸುತ್ತ ಅಲ್ಲೇ ಚಳಿ ಕಾಯಿಸುತ್ತ ಕೂತ ಮಂದಿಗೆ, ಕಣ ಕಾಯಲು ಲಾಟೀನು ಹಿಡಿದು ಹೊರಟವರಿಗೆ, ಪಕ್ಕದ ಮನೆಯಿಂದ ಟೀವಿ ನೋಡಿ ಹೊರಬೀಳುತ್ತಿದ್ದವರಿಗೆ -ಈ ಬಾತ್ಮೀದಾರ ಎಲ್ಲ ವರದಿ ನೀಡಿಯೇ ಮುಂದುವರೆಯಬೇಕು. ಸ್ಟ್ರೀಟ್‌ಲೈಟ್ ಬೆಳಕಿನಲ್ಲಿ ಕಂಗೊಳಿಸುತ್ತ, ಕಪ್ಪು ಭೂತದಂತೆ ಬ್ಯಾಟರಿ ಬಿಟ್ಟುಕೊಂಡು ನಡೆದು ಬರುತ್ತಿರುವ ಇಂತಹ ವಕ್ತಾರರಿಗಾಗಿಯೇ ಕಾಯುತ್ತ ಊರ ಜನ ಕಟ್ಟೆ ಮೇಲೆ ಕೂತಿರುವರು.
ಎಮ್ಮೆಬಸ್ಸಿಗೆ ಸಂಬಂಧಿಸಿದ ಮತ್ತೊಂದು ಮಜಾ ವಿಷಯವೆಂದರೆ, ಈ ಬಸ್ಸಿಗೆ ಹೆಂಗಸರೇನಾದರೂ ಬರುವವರಿದ್ದರೆ ಅವರನ್ನು ಕರೆದುಕೊಂಡು ಬರಲು ಬ್ಯಾಟರಿ ಹಿಡಿದು ಗಂಡಸರು ಹೋಗಬೇಕಿದ್ದುದು. ಈ ರಾತ್ರಿಹೊತ್ತು ಬ್ಯಾಟರಿ ಹಿಡಿದು ಬಸ್‌ಸ್ಟಾಂಡಿಗೆ ಹೋಗುವ ಕಲ್ಪನೆಯೇ ಥ್ರಿಲ್ಲಿಂಗ್ ಆಗಿರುತ್ತಿತ್ತು. ಚಿಕ್ಕವನಿದ್ದಾಗ ಅಜ್ಜನ ಮನೆಗೆ ಹೋಗಿರುತ್ತಿದ್ದ ನಾನು, ಅಮ್ಮನೊಂದಿಗೆ ವಾಪಸು ಈ ಬಸ್ಸಿಗೇ ಬರುವಂತಹ ಸಂದರ್ಭವೇನಾದರೂ ಬಂದರೆ, ಅಪ್ಪ ಬ್ಯಾಟರಿ ಹಿಡಿದು ಬಸ್‌ಸ್ಟಾಂಡಿಗೆ ಬಂದಿರುತ್ತಿದ್ದ. ಅಷ್ಟೊತ್ತಿನತನಕ ಬಸ್ಸಿನೊಳಗೆ ಬೆಳಕಿನಲ್ಲಿ, ಸ್ಪೀಕರಿನಿಂದ ತೇಲಿಬರುತ್ತಿದ್ದ ಯಾವುದೋ ಸಿನೆಮಾ ಹಾಡಿನ ಲಹರಿಯಲ್ಲಿ, ಅಮ್ಮನ ಪಕ್ಕ ಬೆಚ್ಚಗೆ ಕೂತಿರುತ್ತಿದ್ದ ನನಗೆ, ಊರು ಬಂದು ಬಸ್ಸಿಳಿಯುತ್ತಿದ್ದಂತೆ, ಎಲ್ಲಾ ಕಡೆ ಕತ್ತಲೆಯೇ ಆವರಿಸಿ ಹೆದರಿಕೆಯಾಗುತ್ತಿತ್ತು. ಕತ್ತಲ ಕೂಪದಲ್ಲಿ ನಮ್ಮನ್ನು ಬಿಟ್ಟು, ಕಂಡಕ್ಟರು ‘ರೈಟ್’ ಅಂದದ್ದೇ ಬೆಳಕಿನ ಪೆಟ್ಟಿಗೆಯಂತೆ ಮುಂದೆ ಸಾಗಿಹೋಗುತ್ತಿದ್ದ ಬಸ್ಸು, ನನಗೆ ಪುಷ್ಪಕ ವಿಮಾನದಂತೆ ಕಾಣಿಸುತ್ತಿತ್ತು. ಥೇಟರಿನಿಂದ ಹೊರಬಿದ್ದಾಗ ನಿಜಲೋಕಕ್ಕೆ ಹೊಂದಿಕೊಳ್ಳಲು ಆಗುವ ಕಷ್ಟದಂತೆ ಈ ಕತ್ತಲಿಗೆ ಹೊಂದಿಕೊಳ್ಳಲು ಕೆಲಕ್ಷಣಗಳೇ ಹಿಡಿಯುತ್ತಿದ್ದವು. ನಮ್ಮನ್ನು ಕರೆದುಕೊಂಡು ಹೋಗಲು ಬಂದಿರುತ್ತಿದ್ದ ಅಪ್ಪ, ಆಗ ನಮ್ಮ ಮುಖಕ್ಕೇ ಬ್ಯಾಟರಿ ಬಿಟ್ಟು ನಾವೇ ಹೌದು ಅಂತ ಕನ್‌ಫರ್ಮ್ ಮಾಡಿಕೊಂಡು, ನನ್ನ ಕೈಹಿಡಿದು ಊರಿನ ಇಳಕಲು ಇಳಿಸುತ್ತಿದ್ದ. ದೆವ್ವಭೂತಗಳು ಅಕ್ಕಪಕ್ಕದ ಮರ-ಮಟ್ಟಿಗಳಲ್ಲಿ ಕೂತು ಹಾಯ್ ಎನ್ನುತ್ತಿದ್ದ ಈ ಚಳಿಯ ರಾತ್ರಿ ನಾನು ಅಪ್ಪನ ಕೈ ಗಟ್ಟಿಯಾಗಿ ಹಿಡಿದು ನಡುಗುತ್ತಾ ಮನೆ ಸೇರುತ್ತಿದ್ದೆ. ಇದೇ ಎಮ್ಮೆಬಸ್ಸಿಗೆ ಬರುವ ಅತ್ತಿಗೆಯನ್ನು ಕರೆತರಲು ನಾನೊಬ್ಬನೇ ಯಾವತ್ತು ಬಸ್‌ಸ್ಟಾಂಡಿಗೆ ಹೋದೆನೋ ಅವತ್ತೇ ನಾನು ಭಯ ಗೆದ್ದ ಶೂರನಾದೆ. ನನಗೆ ನಾನೇ ‘ದೊಡ್ಡವನಾದೆ ಮಗನೇ’ ಎಂದುಕೊಂಡೆ.
ಹಿಂದೊಂದು ಕಾಲದಲ್ಲಿ, ನಮ್ಮೂರ ಕಡೆ ಕಾಡು ದಟ್ಟವಾಗಿದ್ದ ದಿನಗಳಲ್ಲಿ, ಈ ಕೊನೆಯ ಬಸ್ಸಿಗೆ ಬರಲು ಹೆಂಗಸರೇನು, ಗಂಡಸರೂ ಭಯ ಪಡುತ್ತಿದ್ದರಂತೆ. ‘ಇಲ್ಲೆಲ್ಲ ಇಷ್ಟೆಲ್ಲ ಮನೆ ಇರ್ಲೆ. ಊರಿಗೆ ಇದ್ದಿದ್ದು ಬರೀ ನಾಲ್ಕೇ ಮನೆ. ರಸ್ತೆ ಎಡಬಲಕ್ಕೂ ಎತ್ತೆತ್ತರದ ಮರಗಳು, ದಟ್ಟ ಮಟ್ಟಿ ಇದ್ದಿದ್ದ. ಹುಲಿ, ಕಾಡೆಮ್ಮೆ ಎಲ್ಲಾ ಓಡಾಡ್ತಿದ್ದ. ಒಂದ್ಸಲ ಹುಲಿ ಗುರ್‌ಗುಟ್ಟಿದ್ದು ಕೇಳ್ಚು ಅಂದ್ರೆ, ಎದೆಯೆಲ್ಲ ಥರಗುಟ್ಟಿಹೋಗ್ತಿತ್ತು. ಅಲ್ದೇ ಗುಡುಸ್ಲು ಮಾವಿನಮರದ ಹತ್ರ ಬರ್ತಿದ್ದಂಗೇ ಸಾಲಾಗಿ ಕೊಳ್ಳಿದೆವ್ವ ಹೋಗ್ತಿರೋದು ಕಾಣ್ತಿತ್ತು, ಹೆಂಗೆ ಗೊತಿದಾ? ಗಾಯತ್ರಿ ಬಲದಮೇಲೇ ಜೀವ ಹಿಡ್ಕಳಕ್ಕಾಗಿತ್ತು. ಗುಡುಸ್ಲು ಮಾರೆಮ್ಮಂಗೆ ಹಣ್‌ಕಾಯಿ ಹೇಳಿಕೊಂಡಮೇಲೇ, ಅವು ದಾರಿ ಬಿಟ್ಟುಕೊಡ್ತಿದ್ದದ್ದು’ ಅಂತ ಅಜ್ಜ ಹೇಳುವಾಗ, ಇಂತಹ ಅನುಭವಗಳಿಗ್ಯಾವುದಕ್ಕೂ ಫಕ್ಕಾಗದ ನನ್ನ ಬಗ್ಗೆ ನನಗೇ ಬೇಸರವಾಗುತ್ತಿತ್ತು. ಅಷ್ಟೇ ಅಲ್ಲ, ಆಗಿನ ಜನಗಳ ಮೌಢ್ಯವೋ, ನಂಬಿಕೆಯ ಪರಾಕಾಷ್ಠೆಯೋ ಅಥವಾ ಎಲ್ಲವನ್ನೂ ಉತ್ಪ್ರೇಕ್ಷಿಸಿ ಹೇಳುವ ಅವರ ಕಥೆಗಾರಿಕೆಯ ಬಗೆಯೋ, ಸಾಗರದಿಂದ ಬರುವ ಈ ಕೊನೇಬಸ್ಸು ಪಡವಗೋಡಿನ ಬಳಿಯ ಒಂದು ಭೂತದಕಲ್ಲಿನ ಬಳಿ ಪ್ರತಿದಿನ ಆಫ್ ಆಗಿ ನಿಂತುಬಿಡುತ್ತಿತ್ತಂತೆ! ಡ್ರೈವರೂ ಕಂಡಕ್ಟರೂ ಇಳಿದುಹೋಗಿ, ತೆಂಗಿನಕಾಯಿ ಒಡೆದು, ಉದ್ದಂಡ ನಮಸ್ಕಾರ ಹಾಕಿಬಂದಮೇಲೇ ಬಸ್ಸು ಮುಂದೆ ಹೋಗುತ್ತಿದ್ದುದಂತೆ! ಅದಿಲ್ಲವೆಂದರೆ ತಿಪ್ಪರಲಾಗ ಹೊಡೆದರೂ ಬಸ್ಸು ನಿಂತಲ್ಲಿಂದ ಕದಲುತ್ತಿರಲಿಲ್ಲವಂತೆ! ಅದೇ ನಂಬಿಕೆ ಮುಂದುವರೆದುಬಂದು, ಈಗ ಆ ಕಲ್ಲಿನ ಸುತ್ತ ಒಂದು ಗುಡಿಯನ್ನೇ ಕಟ್ಟಲಾಗಿದೆ. ಅದರ ಬಳಿ ಈಗಲೂ ಕೆಲ ಬಸ್ಸುಗಳನ್ನು ನಿಲ್ಲಿಸಿ ಪೂಜೆ ಸಲ್ಲಿಸಿ ಮುಂದುವರೆಯುತ್ತಾರೆ.
ಈ ಎಮ್ಮೆಬಸ್ಸಿಗೆ ಒಮ್ಮೊಮ್ಮೆ ಅಚಾನಕ್ ನೆಂಟರು ಬಂದುಬಿಡುತ್ತಿದ್ದರು. ಫೋನಿನ್ನೂ ನಮ್ಮ ಮನೆಗೆ ಬಂದಿಲ್ಲದ ಕಾಲದಲ್ಲಿ ಆಗಂತುಕರಂತೆ ಬಂದಿಳಿಯುತ್ತಿದ್ದ ಇವರು, ಶಾಲೆಗೆ ಧಾಳಿಯಿಡುವ ಇನ್ಸ್‌ಪೆಕ್ಟರಂತೆ ಭಾಸವಾಗುತ್ತಿದ್ದರು. ಆಗಷ್ಟೆ ಊಟ ಮುಗಿಸಿ, ಕಸಮುಸುರೆ ಮುಗಿಸಿ ಮಲಗಲಣಿಯಾಗುತ್ತಿದ್ದ ನಮಗೆ ಈಗ ಇವರನ್ನು ಉಪಚರಿಸಲೇಬೇಕಾದ ಅನಿವಾರ್ಯತೆ. ಅವರಾದರೂ, ತಮ್ಮ ಊರಿಗೆ ಹೋಗಬೇಕಿದ್ದ ಬಸ್ ಬಾರದೆಯೋ, ಕೆಟ್ಟುಹೋಗಿಯೋ, ತಪ್ಪಿಹೋಗಿಯೋ ಆಗಿ, ಮತ್ಯಾವುದೇ ಗತ್ಯಂತರವಿರದೇ ನಮ್ಮಲ್ಲಿಗೆ ಬಂದವರಾಗಿರುತ್ತಿದ್ದರು. ಇವರಿಗೆ ಅನೇಕ ಸಲ ಊಟವಾಗಿರುತ್ತಿರಲಿಲ್ಲ. ಆಗ, ಇವರಿಗಾಗಿ ನಾವು ಹೊಸದಾಗಿ ಅಡುಗೆ ಮಾಡಿ ಬಡಿಸಬೇಕಿತ್ತು. ಅಮ್ಮ ಅಸಹನೆಯಿಂದಲೇ ಮತ್ತೆ ಅಡುಗೆಮನೆ ಪ್ರವೇಶಿಸುತ್ತಿದ್ದಳು.
ಹೇಗೆ ಎಮ್ಮೆಬಸ್ಸಿಗೆ ಆಗಂತುಕರು ಬಂದಾಗ ಅಸಹನೆಯಾಗುತ್ತಿತ್ತೋ ಹಾಗೇ ಈ ಬಸ್ಸಿಗೆ ಬರಬೇಕಾದವರು ಬಾರದಿದ್ದರೆ ಆತಂಕವಾಗುತ್ತಿತ್ತು. ಪೇಟೆಗೆ ಹೋಗಿದ್ದ ಅಪ್ಪ, ತವರಿಗೆ ಹೋಗಿದ್ದ ಅಮ್ಮ, ಕಾಲೇಜಿಗೆ ಹೋಗಿದ್ದ ಅತ್ತಿಗೆ ಅಥವಾ ಬರುತ್ತೇನೆ ಎಂದು ಫೋನಿಸಿದ್ದ ಯಾರೋ ನೆಂಟರು -ಬಾರದೇ ಹೋದಾಗ ಮನೆಮಂದಿಗೆಲ್ಲ ಟೆನ್ಷನ್ ಶುರುವಾಗುತ್ತಿತ್ತು. ಎಮ್ಮೆಬಸ್ಸು ಮುಂಚೆಯೇ ಬಂತೇ, ಬಸ್ ತಪ್ಪಿಸಿಕೊಂಡರೇ, ಬಸ್ಸಿನಲ್ಲಿ ನಿದ್ರೆ ಬಂದು ಸ್ಟಾಪ್ ತಪ್ಪಿಹೋಯಿತೇ, ಆಗಲೇ ಸದ್ದು ಮಾಡುತ್ತ ಹೋದದ್ದು ಬಸ್ ಅಲ್ಲ ಲಾರಿಯೇ -ಹೀಗೆ ಒಬ್ಬೊಬ್ಬರೂ ತಮಗೆ ತಿಳಿದಂತೆ ಆಲೋಚಿಸುತ್ತ ಆತಂಕದ ಶಮನದಲ್ಲಿ ಮಗ್ನರಾಗಿರುತ್ತಿದ್ದೆವು.
ನಮ್ಮೆಲ್ಲರ ಚಿಂತೆಯನ್ನು ನಿವಾರಿಸುವಂತೆ ಎಮ್ಮೆಬಸ್ಸು ಅಂದು ತಡವಾಗಿ ಬರುತ್ತಿತ್ತು. ನಮ್ಮೂರ ಬಸ್‌ಸ್ಟಾಂಡ್ ಬಳಿ ರಾಗವಾಗಿ ಹಾರನ್ ಮಾಡುತ್ತಿತ್ತು. ನಮ್ಮ ಮನೆಗೆ ಬರಬೇಕಾದವರನ್ನು ಸುರಕ್ಷಿತವಾಗಿ ಇಳಿಸುತ್ತಿತ್ತು. ಕ್ಲೀನರ್ ಹುಡುಗ ಹೊಡೆದ ಶೀಟಿ ಇಲ್ಲಿಯವರೆಗೂ ಕೇಳಿಸುತ್ತಿತ್ತು. ನಿದ್ದೆಗಣ್ಣ ಪ್ರಯಾಣಿಕರನ್ನು ತೂಗುತ್ತಾ ಕತ್ತಲನ್ನು ಬದಿಗೆ ಸರಿಸುತ್ತಾ ಕಿಟಕಿ-ಕಿಟಕಿಗಳಿಂದ ಬೆಳಕು ಚೆಲ್ಲುತ್ತಾ ಮಾಯಾಪೆಟ್ಟಿಗೆಯಂತೆ ಮುಂದೆ ಸಾಗುತ್ತಿತ್ತು.
[ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ. ]
- - -
[ಈ ಪ್ರಬಂಧದಲ್ಲೊಂದು ತಪ್ಪಿದೆ. ಎಮ್.ಎಮ್.ಎಸ್.ನ ಲಾಂಗ್‌ಫಾರ್ಮು 'ಮಲ್ಲಿಕಾರ್ಜುನ ಮೋಟಾರ್ ಸರ್ವೀಸಸ್ ' ಅಲ್ಲ. 'ಮೊಹಮ್ಮದ್ ಮೀರ್ ಸಾಹೆಬ್' ಅಂತಲಂತೆ. ಮತ್ತು ಎಸ್.ಟಿ.ಎ. ಎಂದರೆ 'ಸಾಗರ-ತೀರ್ಥಹಳ್ಳಿ-ಆಗುಂಬೆ'. ಮೊಹಮ್ಮದ್ ಮೀರ್ ಎಂಬ ಸಾಗರದವರೊಬ್ಬರು ನಡೆಸುತ್ತಿದ್ದ ಈ ಬಸ್ಸು ಮೊದಲು ಸಾಗರ-ತೀರ್ಥಹಳ್ಳಿ-ಆಗುಂಬೆ ರೂಟಿನಲ್ಲಿ ಚಲಿಸುತ್ತಿತ್ತಂತೆ. ಬರೆದು ಕಳುಹಿಸಿಯಾದಮೇಲೆ ನನಗೆ ತಿಳಿದದ್ದು ಇದು.]
17 comments:
ತುಂಬಾ ಚೆನ್ನಾಗಿತ್ತು ನಿಮ್ಮ ಎಮ್ಮೆ ಪ್ರಯಾಣ :)
ಎಮ್ಮೆ ನಿನಗೆ ಸಾಟಿ ಇಲ್ಲ!
ಚೆನ್ನಾಗಿದೆ! ಕೊೞಿದೆವ್ವದ ಕಾಲದಲ್ಲೇ ನಿಮ್ಮೂರಿಗೆ ಬಸ್ಸು ಬರುತ್ತಿತ್ತಲ್ಲ ಮಾರಾಯ್ರೆ! ನಮ್ಮೂರಿನಲ್ಲಿ ನಮಗೆ ಬುದ್ದಿ ಬಂದಮೇಲೆ ಬಸ್ಸು ಬಂತು!
he he, maja ide... :-)
ಯಾವತ್ತಿನ ಹಾಗೆ..ಚೆಂದದ ಬರಹ
:-)
ಅಕ್ಕ
ಚೆನ್ನಾಗಿದ್ದು ಬರೆದದ್ದು :) ನಂಗೂ ನಮ್ಮೂರಿನ "ಲಟ್ ಲಕ್ಷ್ಮಿ" ಬಸ್ ನೆನಪಾತು.
"ಎಮ್ಮೆಬಸ್ಸು ಎಂಬ ಪುಷ್ಪಕ ವಿಮಾನ" ಇಟ್ಟ ಹೆಸರೇ ಕಥೆ ಹೇಳುವಂತಿದೆ.....
ಬರಹವೂ ಇಷ್ಟವಾಯ್ರು.....
ಊರ ಬಸ್ಸು ನೆನಪಿಸುವಂತೆ......
distant memory..
shimogadinda uLavi ajji manege obLe driver hindina seatnalli kootu hogtiddiddu..
ajji dina madyana Krishna bussu hodmele oota haaktiddiddu..adige vasane badidu, hasivu keraLi hasivagtide anta galate madidre..'tadiye, Krishna bus innu bandilla'..:)
ತು೦ಬಾ ಚೆನ್ನಾಗಿತ್ತು ಬರಹ ಸುಶ್ರುತ...
ಎಮ್.ಎಮ್.ಎಸ್ ಅ೦ದಾಗ ನಮ್ಮ ಊರಿನ ಬಸ್ಸು ನೆನಪಾಯಿತು. ನಾವು ಅದನ್ನು ಮೆಲ್ಲ ಮೆಲ್ಲ ಸರ್ವಿಸ್ ಅ೦ತ ಕಿಚಾಯಿಸುತ್ತಿದ್ದೆವು... ಅದು ತು೦ಬಾ ನಿಧಾನವಾಗಿ ಹೋಗುವ ಬಸ್ಸು :)
ಎಮ್ಮೆ ಬಸ್ಸಿನ ಅಂಬಾ! ಅಂದಾಗೆ ಕಂಗ್ರಾಟ್ಸ್!
A perfect blog........... MMS is the part of every one who lives in Ulavi -Hosabale strech. Perfectly narrated.
chennagide sir nimma baraha
sundara shaili endina haage
ಕೊನೆಗೆ ತಿದ್ದುಪಡಿ ಮಾಡಿದ್ದು ಒಳ್ಳೆದಾಯ್ತು.MMS ಏನಾದ್ರೂ ಆಗಿರ್ಲಿ STA ಮಾತ್ರ ಸಿಕ್ಕಾಪಟ್ಟೆ ತಲೆ ತಿನ್ನೋ ಅಂಥ short form!
ಒಳ್ಳೆಯ ಲೇಖನ.
:):)
nangu nenpaatu,iglu aa neeli bassu bartappa...
Almost after an yr i was reading articles in blog.....
So nimma"emme bassu emba pushpaka vimAna"thumba muda nidthu...sakkth enjoy madhe :)
ಅದ್ಭುತ - ಈ ಎಮ್ಮೆ ಬಸ್ಸಿಗೂ ಮೊದಲು ಗಾಯತ್ರೀ ಬಸ್ಸಿತ್ತು.
Emme bassu chennagide. Modamodalella ive bussugalalli odadi maja tegedukondidde. Car banda mele aa soubhagya illadagide.
Post a Comment