ಐವತ್ತು ವರ್ಷಗಳ ಹಿಂದೆ ನಮ್ಮೂರಲ್ಲಿ ಇದ್ದುದು ಐದೋ ಆರೋ ಮನೆಗಳಂತೆ. ಮೂಲ ಮನೆಯಿಂದ ಬೇರಾಗಿ ಬಂದ ನನ್ನ ಅಜ್ಜ ಒಂದು ಪುಟ್ಟ ಸ್ವಾಂಗೆಮನೆ ಕಟ್ಟಿಕೊಂಡು ಸಂಸಾರ ನಡೆಸುತ್ತಿದ್ದ. ನಮ್ಮ ಮನೆಗೆ ಬಾವಿ ಇರಲಿಲ್ಲ. ಬಾವಿ ತೆಗೆಸುವಷ್ಟು ದುಡ್ಡೂ ಅಜ್ಜನ ಬಳಿ ಇರಲಿಲ್ಲ. ಅಜ್ಜಿ ಹತ್ತಿರವಿದ್ದ ಸರ್ಕಾರಿ ಬಾವಿಯಿಂದ ನೀರು ಹೊತ್ತು ತರುತ್ತಿದ್ದಳಂತೆ. ಸೊಂಟದಲ್ಲೊಂದು, ಕೈಯಲ್ಲೊಂದು ಕೊಡಪಾನ ಹಿಡಿದು ಗಂಡ-ಮೂರು ಮಕ್ಕಳ ಮನೆಗೆ ಒದಗಿಸುವಷ್ಟರಲ್ಲಿ ಸಾಕುಸಾಕಾಗುತ್ತಿತ್ತು. ನನ್ನ ಅಪ್ಪ-ಅತ್ತೆಯರು ಸ್ವಲ್ಪ ನೀರು ದಂಡ ಮಾಡಿದರೂ ಅಜ್ಜಿಯ ದಾಸವಾಳ ಬರಲಿನ ಹೊಡೆತಕ್ಕೆ ಒಳಗಾಗಬೇಕಿತ್ತು. ಊರ ಯಾರ ಮನೆಯಲ್ಲೂ ಇಲ್ಲದಷ್ಟು ಸಣ್ಣ ಚೊಂಬು, ಮಗ್ಗುಗಳು ನಮ್ಮ ಮನೆಯಲ್ಲಿದ್ದವಂತೆ. ದೊಡ್ಡ ಚೊಂಬು ಇದ್ದರೆ ಜಾಸ್ತಿ ನೀರು ಖರ್ಚಾಗುತ್ತದೆಯಲ್ಲವೇ? ‘ನಿನ್ನ ಅಜ್ಜಿಯ ಹೆದರಿಕೆಗೆ ಎಷ್ಟೋ ಸಲ ನಾವು ಬರೀ ಎರಡೇ ಚೊಂಬು ನೀರಲ್ಲಿ ಸ್ನಾನ ಮಾಡಿ ಮುಗಿಸ್ತಿದ್ಯ’ ಅಂತ ಅಪ್ಪ ಆಗೀಗ ನೆನಪು ಮಾಡಿಕೊಂಡು ಹೇಳುತ್ತಾನೆ. ‘ಬಿಂದಿಗೆ ಹೊತ್ತ ನಾರಿ’ ಎಂಬುದು ರೂಪಕಕ್ಕಷ್ಟೇ ಚೆಂದ, ಹೊರುವ ಕಷ್ಟ ನಾರಿಗಷ್ಟೇ ಗೊತ್ತು ಅಂತ ನಾನು ಅಂದುಕೊಳ್ಳುತ್ತಿದ್ದೆ.
ಅಪ್ಪ ಸಂಸಾರ ವಹಿಸಿಕೊಂಡಮೇಲೆ ಮೊದಲು ಮಾಡಿದ ಕೆಲಸ ಮನೆಯ ಆವರಣದಲ್ಲೊಂದು ಬಾವಿ ತೆಗೆಸಿದ್ದು. ನನ್ನ ದೊಡ್ಡತ್ತೆಯ ಬಾಣಂತನಕ್ಕೆ ಅಜ್ಜಿ ಸರ್ಕಾರಿ ಬಾವಿಯಿಂದ ನೀರು ಹೊರುವುದನ್ನು ಅವನಿಗೆ ನೋಡಲಾಗಲಿಲ್ಲವಂತೆ. ನನ್ನ ಅಜ್ಜಿಯ ತಮ್ಮ ರಾಘವೇಂದ್ರಜ್ಜ ಅಂತರ್ಜಲ ನೋಡುವ ಕಲೆಯಲ್ಲಿ ನಿಪುಣ. ಅವನನ್ನು ಕರೆಸಿ, ಮನೆಯ ಹತ್ತಿರ ಜಲ ನೋಡಿಸಿದ್ದು. ಸುಮಾರು ಹೊತ್ತು ತೆಂಗಿನಕಾಯಿಯನ್ನು ಅಂಗೈಯಲ್ಲಿಟ್ಟುಕೊಂಡು ಮನೆಯ ಸುತ್ತಮುತ್ತ ಓಡಾಡಿದ ರಾಘವೇಂದ್ರಜ್ಜ, ಬೀಡಿ ಮುಗಿಯುವುದರೊಳಗೆ ಮನೆಯ ಸ್ವಲ್ಪ ಹಿಂದೆ ನೀರ ನಿಕ್ಷೇಪ ಇರುವುದು ಪತ್ತೆ ಹಚ್ಚಿದ. ಅಲ್ಲಿಗೆ ಹೋಗಿ ಅಂವ ನಿಲ್ಲುತ್ತಿದ್ದಂತೆ ತೆಂಗಿನಕಾಯಿಯೂ ಜುಟ್ಟು ಮೇಲೆ ಮಾಡಿ ನಿಂತಿತಂತೆ! ಅವನ ಅಣತಿಯಂತೆ ಅಗೆಯಲು, ಐವತ್ತು ಅಡಿ ಆಳದಲ್ಲಿ ಅಂತೂ ನೀರು ಸಿಕ್ಕಿತು. ಬಾವಿಯ ಸುತ್ತ ಒಂದು ಕಟ್ಟೆ ಎದ್ದುನಿಂತಿತು. ಆ ಕಡೆಗೊಂದು - ಈ ಕಡೆಗೊಂದು ಕವಲುಕಂಬಗಳು ಹೂಳಲ್ಪಟ್ಟು, ಅದರ ಮೇಲೊಂದು ಮರದ ತುಂಡು ಹೇರಿ, ಮಧ್ಯದಲ್ಲಿ ಗಡಗಡೆ ಕಟ್ಟಿ, ಪೇಟೆಯಿಂದ ತಂದ ಅರವತ್ತಡಿ ಉದ್ದದ ಬಾವಿಹಗ್ಗಕ್ಕೆ ಕುಣಿಕೆ ಬಿಗಿದು, ಕೊಡಪಾನ ಇಳಿಸಿ, ಅಜ್ಜಿ-ಅತ್ತೆಯರೆಲ್ಲ ನಿಟ್ಟುಸಿರಾಗುವಂತೆ, ಗಂಗೆಯನ್ನು ಮೇಲೆತ್ತಿಯೇಬಿಟ್ಟರು!
ಆದರೆ ನಮ್ಮ ಮನೆಯ ಬಾವಿಯ ಜಲದ ಸೆಲೆ ಅಷ್ಟೊಂದು ಚೆನ್ನಾದ್ದಲ್ಲ. ಸರ್ಕಾರಿ ಬಾವಿಯಲ್ಲಿ ವರುಷವಿಡೀ ನೀರು ಕೈಗೆಟುಕುವಷ್ಟು ಸಮೀಪವಿರುತ್ತದೆ. ಊರಿನ ಐದಾರು ಮನೆಗಳಲ್ಲೂ ಹಾಗೆಯೇ. ನಮ್ಮ ಮನೆಯ ಬಾವಿ ಜೋರು ಮಳೆಗಾಲದಲ್ಲಿ ತುಂಬಲ್ಪಟ್ಟು ಕಟ್ಟೆಯಿಂದ ತುಸು ಕೆಳಗಿರುವ ಪೈಪಿನ ಮೂಲಕ ನೀರು ಹೊರಬರುತ್ತದಾದರೂ ಮೇ ತಿಂಗಳಿನ ಹೊತ್ತಿಗೆ ನೀರು ತಳ ಕಂಡಿರುತ್ತದೆ. ಪಂಪ್‌ಸೆಟ್ಟಿನ ಫೂಟ್‌ವಾಲ್ವ್‌ಗೆ ನೀರು ಸಿಗದೇ ಒದ್ದಾಡುತ್ತದೆ. ಪ್ರತಿವರ್ಷವೂ ಬೇಸಿಗೆಯ ಕಡೆಯ ಎರಡು ತಿಂಗಳು ಮೋಟರು ಕೆಲಸ ಮಾಡದೆ ನೀರು ಸೇದುವುದು ಅನಿವಾರ್ಯವಾಗುತ್ತದೆ. ಏಳೆಂಟು ವರ್ಷಗಳ ಕೆಳಗೆ ‘ಜಲ ಜಾಗೃತಿ’ ಎಂಬ ಬ್ಯಾನರ್ ಕಟ್ಟಿಕೊಂಡು ನಮ್ಮ ಸೀಮೆಯ ಒಂದಷ್ಟು ಪ್ರಗತಿಪರರು ಊರೂರಿನಲ್ಲಿ ಜಾತಾ ಮಾಡಿದ್ದರು. ‘ಬೇಸಿಗೆಯಲ್ಲಿ ಬಾವಿಯಲ್ಲಿ ನೀರು ಇಲ್ಲವಾಗುವುದಕ್ಕೆ ಮಳೆಗಾಲದಲ್ಲಿ ಜಲದ ಸೆಲೆಗಳು ಸರಿಯಾಗಿ ಭರ್ತಿಯಾಗದಿರುವುದೇ ಕಾರಣ. ಮಳೆಯ ನೀರು ಹರಿದು ಕೆರೆಕೋಡಿ ಸೇರುತ್ತದೆ, ನೆಲದಲ್ಲಿ ಇಂಗುತ್ತಲೇ ಇಲ್ಲ. ಹಾಗಾಗಿ ನಿಮ್ಮ ಬಾವಿಯ ಆವರಣದಲ್ಲಿ ಇಂಗುಗುಂಡಿಗಳನ್ನು ಮಾಡಿ ಮಳೆಗಾಲದಲ್ಲಿ ನೀರು ಇಂಗುವಂತೆ ಮಾಡಬೇಕು’ ಅಂತ ಕರೆ ಕೊಟ್ಟರು. ಅಮ್ಮ ಬೇಸಿಗೆಯಲ್ಲಿ ನೀರು ಸೇದೀ ಸೇದೀ ರಟ್ಟೆ ನೋವು ಮಾಡಿಕೊಂಡು ಅಮೃತಾಂಜನ ತಿಕ್ಕಿಕೊಳ್ಳುವುದನ್ನು ನೋಡಲಾರದ ನಾನೂ ನಮ್ಮ ಹಿತ್ತಿಲಿನಲ್ಲಿ ಗುದ್ದಲಿಯಿಂದ ಸುಮಾರು ಗುಂಡಿಗಳನ್ನು ತೋಡಿ ಬಂದೆ. ಅದರಿಂದ ಬಾವಿಯ ನೀರಿನ ಮಟ್ಟ ಏರಿತೋ ಇಲ್ಲವೋ ಗೊತ್ತಿಲ್ಲ, ಆದರೆ ಜಾನುವಾರಿಗೆ ಹುಲ್ಲು ಕೊಯ್ಯಲು ಹೋದ ಅಪ್ಪ ಆ ಗುಂಡಿಯಲ್ಲಿ ಕಾಲು ಹಾಕಿ ಸರಿಯಾಗಿ ಉಳುಕಿಸಿಕೊಂಡು ಬಂದ. ಒಟ್ಟಿನಲ್ಲಿ ಅಮೃತಾಂಜನದ ಕಂಪನಿಗೆ ಅಳಿವಿಲ್ಲ ಅಂತ ನಾನು ತೀರ್ಮಾನಿಸಿದೆ.
ವೀಣತ್ತೆಯ ಮಗಳು ವರ್ಷ ನಮ್ಮ ಮನೆಗೆ ಬಂದಾಗ ಅವಳನ್ನು ಕಾಯುವುದು ಒಂದು ಸಾಹಸವೇ ಆಗುತ್ತಿತ್ತು. ಏಕೆಂದರೆ ಅವಳೂರಿನಲ್ಲಿ ಅಬ್ಬಿ ನೀರು. ಬಾವಿ ಅವಳಿಗೆ ಹೊಸತು. ತನಗಿಂತ ಎತ್ತರದ ಕಟ್ಟೆಯನ್ನು ಸುತ್ತ ಕಟ್ಟಿಸಿಕೊಂಡು ಬಚ್ಚಲಮನೆಯ ಪಕ್ಕದಲ್ಲಿ ನಿಗೂಢವಾಗಿದ್ದ ಬಾವಿ ಅವಳಿಗೆ ಕುತೂಹಲಕಾರಿಯಾಗಿತ್ತು. ದೇವರ ಪೂಜೆ, ಕುಡಿಯುವ ನೀರು ಅಂತ ದಿನಕ್ಕೆ ಎರಡ್ಮೂರು ಬಾರಿಯಾದರೂ ನಾವು ನೀರೆತ್ತುವುದು, ಕೆಳಗಿಳಿಸುವಾಗ ಖಾಲಿಯಾಗಿದ್ದ ಸ್ಟೀಲಿನ ಕೊಡಪಾನ ಮೇಲೆ ಬರುವಷ್ಟರಲ್ಲಿ ತುಂಬಿಕೊಂಡಿರುವುದು, ಅವಳಿಗೆ ಆಶ್ಚರ್ಯವಾಗಿತ್ತು. ನಾವು ಸ್ವಲ್ಪ ಆಚೀಚೆ ಹೋದರೂ ಸಾಕು, ಅವಳು ಸೀದಾ ಬಾವಿಕಟ್ಟೆ ಹತ್ತಿ ಕೆಳಗಿಣುಕುವ ಸಾಹಸ ಮಾಡುತ್ತಿದ್ದಳು. ‘ಕೆಳಗಡೆ ಬಿದ್ರೆ ಮುಳುಗಿಹೋಗ್ತೆ ಅಷ್ಟೇ.. ಅಲ್ಲಿ ಹಾವು, ಮೊಸಳೆ, ಭೂತ ಎಲ್ಲಾ ಇದ್ದ’ ಅಂತ ಹೆದರಿಸಿದರೂ ಪುಟ್ಟಿ ಕೇಳುತ್ತಿರಲಿಲ್ಲ. ಕೊನೆಗೆ ನಾವೇ ಅವಳನ್ನೆತ್ತಿಕೊಂಡು ಚೂರೇ ಬಗ್ಗಿಸಿ ‘ನೋಡಿದ್ಯಾ? ಎಷ್ಟು ಆಳ ಇದ್ದೂ..?’ ಅಂತ ತೋರಿಸಬೇಕು, ಅವಳು ಹೆದರಿದಂತೆ ನಟಿಸಿ ‘ಹೂಂ, ನಾ ಇನ್ನು ಇದರ ಹತ್ರ ಬರದಿಲ್ಯಪಾ’ ಎನ್ನಬೇಕು.
ಬಾವಿಯೊಂದಿಗೆ ನಾವು ಅನುಭವಿಸಿದ ಪುಳಕಗಳನೇಕವನ್ನು ವರ್ಷ ಪುಟ್ಟಿ ಅನುಭವಿಸಲಿಲ್ಲವಲ್ಲಾ ಅಂತ ನಾನು ಅಂದುಕೊಳ್ಳುತ್ತಿದ್ದೆ. ಚಿಕ್ಕವರಿದ್ದಾಗ ಬಾವಿಯ ಬಳಿ ಹೋಗಲು ನಮಗೂ ದೊಡ್ಡವರ ತಡೆಯಿತ್ತಾದರೂ ನಮಗೆ ಬಾವಿಯೆಂದರೆ ಆಳವಿರುವ, ತುಂಬ ನೀರಿರುವ, ಅಕಸ್ಮಾತ್ ಬಿದ್ದರೆ ಮತ್ತೆ ಬರಲಾಗದ ಕೂಪ ಎಂಬ ಅರಿವಿತ್ತು. ಆದರೆ ತೋಟದ ಕಾದಿಗೆಯಲ್ಲಿ ಮೀನು ಹಿಡಿದು, ಹೊಂಬಾಳೆಯಲ್ಲಿಟ್ಟುಕೊಂಡು ಬಂದು ಮನೆಯ ಬಾವಿಗೆ ಬಿಡುವ ಸಂಭ್ರಮದಲ್ಲಿ ಮಾತ್ರ ಅವೆಲ್ಲ ನೆನಪಾಗುತ್ತಿರಲಿಲ್ಲ. ಮೀನು ಬಿಟ್ಟ ಮರುದಿನದಿಂದ ಯಾರೇ ನೀರು ಸೇದಲು ಬಂದರೂ ಅವರೊಂದಿಗೂ ನಾನೂ ನಿಂತು, ಮೇಲೆ ಬಂದ ಕೊಡಪಾನದಲ್ಲಿ ನಾವು ಬಿಟ್ಟ ಮೀನೇನಾದರೂ ಬಂದಿದೆಯಾ ಅಂತ ನೋಡುವ ಕುತೂಹಲಕ್ಕೆ ಪಾರವಿರಲಿಲ್ಲ. ಒಂದಲ್ಲಾ ಒಂದು ದಿನ ಮೀನು ಕೊಡಪಾನದಲ್ಲಿ ಬಂದೇ ಬಿಡುತ್ತಿತ್ತು. ಅಮ್ಮ ‘ಥೋ, ಇದ್ಯಾವಾಗ ತಂದು ಬಿಟ್ಟಿದ್ರಾ? ಕುಡಿಯೋ ನೀರು.. ಥೋ..’ ಎನ್ನುತ್ತಾ, ಹೆದರುತ್ತಾ ಆ ಮೀನನ್ನು ಎಡಗೈಯಿಂದ ತೆಗೆದು ಬಿಸಾಕುತ್ತಿದ್ದಳು. ನಾನು ಮತ್ತೆ ಅದನ್ನು ನೀರು ತುಂಬಿದ ಹಾಳೆಯಲ್ಲಿಟ್ಟುಕೊಂಡು ಬಂದು ತೋಟದ ಕಾದಿಗೆಯಲ್ಲಿ ಬಿಡುತ್ತಿದ್ದೆ.
ಒಮ್ಮೆ ಅಮ್ಮ ನೀರು ಸೇದುವಾಗ ಕುಣಿಕೆ ಸರಿಯಾಗಿ ಹಾಕದೆ ಕೊಡಪಾನ ಬಾವಿಯಲ್ಲಿ ಬಿದ್ದುಬಿಟ್ಟಿತು. ಅರ್ಧದವರೆಗೆ ಬಂದಿದ್ದ ಕೊಡ ಕಳಚಿ ಬಿದ್ದುದಕ್ಕೆ ಹಗ್ಗ ಹಿಡಿದು ಜಗ್ಗುತ್ತಿದ್ದ ಇವಳೂ ಆಯತಪ್ಪಿ ಹಿಂದೆ ಬಿದ್ದಳು. ಎರಡೆರಡು ಸದ್ದು ಕೇಳಿ ಮನೆಮಂದಿಯೆಲ್ಲ ಏನೋ ಅನಾಹುತವಾಯಿತೆಂದು ಓಡಿ ಬಂದೆವು. ಬಗ್ಗಿ ನೋಡಿದರೆ ಪ್ಲಾಸ್ಟಿಕ್ ಕೊಡಪಾನ ತೇಲುತ್ತಿತ್ತು. ತಕ್ಷಣ ಬುಟ್ಟಿ ಇಳಿಬಿಟ್ಟು ತಡಕಾಡಿದರೂ ಮೇಲೆತ್ತಲಾಗಲಿಲ್ಲ. ಬದಲಿಗೆ ಅದು ಪೂರ್ತಿ ಮುಳುಗಿಯೇ ಹೋಯಿತು. ಆಮೇಲೆ ಸೀತಾರಾಮಣ್ಣನ ಮನೆಯಿಂದ ಪಾತಾಳಗರುಡ ತಂದು ಹರಸಾಹಸ ಮಾಡಿದರೂ ಅದು ಸಿಗಲೇ ಇಲ್ಲ. ಮಣ್ಣಿನಲ್ಲಿ ಹೂತು ಹೋಗಿರಬಹುದೆಂದು ತೀರ್ಮಾನಿಸಿ, ಹೇಗೂ ಬಾವಿ ಸೋಸದೆ ಸುಮಾರು ವರ್ಷ ಆಗಿದ್ದುದರಿಂದ, ಯಾರಾದರೂ ಪರಿಣಿತರನ್ನು ಕರೆಸಿ ಸೋಸುವುದು ಅಂತ ಆಯಿತು. ಮಳಲಗದ್ದೆಯ ಕನ್ನಪ್ಪ ಎಂಬುವವ ಈ ಕೆಲಸದಲ್ಲಿ ಭಾರಿ ಜೋರಿದ್ದಾನೆ ಅಂತ ಯಾರೋ ಅಂದರು. ಕನ್ನಪ್ಪನಿಗೆ ಬುಲಾವ್ ಹೋಯಿತು.
ಈ ಕನ್ನಪ್ಪ ಬಂದವನೇ ಮೊದಲು ಒಂದು ಲಾಟೀನು ಹೊತ್ತಿಸಿ ಬಾವಿಗೆ ಇಳಿಸಿ ನೋಡಿದ. ಕೆಳಕೆಳಗೆ ಹೋಗುತ್ತಿದ್ದಂತೆ ಅದು ಆರಿಹೊಯ್ತು. ‘ಹೋಯ್, ಈ ಬಾವಿಗೆ ಇಳದ್ರೆ ನನ್ ಕತೆ ಪೋಂಯ! ಉಸುರೇ ಇಲ್ಲ ಇದ್ರಲ್ಲಿ. ಮೊದ್ಲು ಬಾಳೆದಿಂಡು ತಕಂಬನ್ನಿ’ ಅಂತ ಆಜ್ಞಾಪಿಸಿದ. ಸರಿ, ಬಾಳೆದಿಂಡು ಕಡಿದು ತಂದು ಏಳೆಂಟು ಸಲ ಇಳಿಸಿ ಏರಿಸಿ ಮಾಡಿ ಬಾವಿಯೊಳಗೊಂದಷ್ಟು ಆಮ್ಲಜನಕ ತುಂಬಿದ್ದಾಯ್ತು. ‘ಇನ್ನು ತೊಂದ್ರೆ ಇಲ್ಲ, ಇಳಿಯಪ್ಪಾ’ ಎಂದು ನಾವು ಹೇಳಿದರೆ, ಇಂವ ‘ಸರಿ, ಇಳಿಸಿ’ ಅಂದ. ನಮಗೆ ಅರ್ಥವಾಗಲಿಲ್ಲ. ಕೊನೆಗೆ ನೋಡಿದರೆ, ಕನ್ನಪ್ಪ ಬಾವಿ ಸೋಸುವುದರಲ್ಲಿ ಮಾತ್ರ ನಿಪುಣನಿದ್ದನೇ ವಿನಹ ಬಾವಿಗೆ ಇಳಿಯುವುದರಲ್ಲಾಗಲೀ ವಾಪಸು ಹತ್ತುವುದರಲ್ಲಾಗಲೀ ಅಲ್ಲ! ಇವನನ್ನು ಒಂದು ದೊಡ್ಡ ಬುಟ್ಟಿಯೊಳಗೆ ಕೂರಿಸಿ ಇಳಿಸಿ ನಾವೇ ಮೇಲೆತ್ತಬೇಕಿತ್ತು! ಹತ್ತತ್ತಿರ ಒಂದು ಕ್ವಿಂಟಾಲ್ ತೂಕವಿದ್ದ ಇವನನ್ನು ಇಳಿಸಿ-ಎತ್ತುವುದೆಂದರೆ! ಕನ್ನಪ್ಪನಿಗೆ ಮೊದಲೇ ದುಡ್ಡು ಕೊಟ್ಟು ಕರಕೊಂಡು ಬಂದ ತಪ್ಪಿಗೆ ಈಗ ಹಾಗೇ ಬಿಡುವಂತೆಯೂ ಇರಲಿಲ್ಲ. ಊರ ಐದಾರು ಜನರನ್ನು ಕರೆಸಿಕೊಂಡು, ದೊಡ್ಡ ಬುಟ್ಟಿಯಲ್ಲಿ ಇವನನ್ನು ಕೂರಿಸಿದ್ದಾಯ್ತು. ಪದ್ಮಾಸನ ಹಾಕಿ ದೇವರ ಥರ ಕನ್ನಪ್ಪ ಕೂತ. ಇವನನ್ನು ಕೆಳಗಿಳಿಸುವಾಗ ಎಲ್ಲಿ ಕಂಬವೋ ಗಡಗಡೆಯೋ ಹಗ್ಗವೋ ತುಂಡಾಗಿ ಧಡಾಲನೆ ಬೀಳುತ್ತಾನೋ ಅಂತ ನಾವೆಲ್ಲ ಭಯದಲ್ಲಿದ್ದಾಗ, ಸ್ಥಿತಪ್ರಜ್ಞ ಕನ್ನಪ್ಪ ಟಾಟಾ ಮಾಡಿದ. ದೇವರಾಣೆಗೂ ನಾವ್ಯಾರೂ ವಾಪಸು ಟಾಟಾ ಮಾಡುವ ಸ್ಥಿತಿಯಲ್ಲಿರಲಿಲ್ಲ ಮತ್ತು ನಮಗ್ಯಾರಿಗೂ ಮುಳುಗುವ ಸೂರ್ಯನ ಉಪಮೆ ನೆನಪಾಗಲಿಲ್ಲ. ಅಂತೂ ಕನ್ನಪ್ಪ ತಳ ತಲುಪಿ ಕೊಡಪಾನವೇ ಅಲ್ಲದೇ ಇನ್ನೂ ಬಿದ್ದಿದ್ದ ಅನೇಕ ವಸ್ತುಗಳನ್ನೂ, ಕೂತಿದ್ದ ಹೂಳುಮಣ್ಣನ್ನೂ ಮೊಗೆದು, ನಾವು ಇಳಿಬಿಟ್ಟ ಬುಟ್ಟಿಯಲ್ಲಿ ತುಂಬಿ ತುಂಬಿ ಮೇಲೆ ಕಳುಹಿಸಿ ಬಾವಿಯನ್ನು ಸ್ವಚ್ಚ ಮಾಡಿ, ಅರ್ಧಗಂಟೆಯ ನಂತರ ಮತ್ತದೇ ಬುಟ್ಟಿಯಲ್ಲಿ ಕೂತು ಜಗದೇಕವೀರನಂತೆ ಮೇಲೆ ಮೂಡಿಬಂದಾಗ, ಅವನಿಗೆ ಹಾಕಲಿಕ್ಕೆ ಒಂದು ಗೊಲ್ಟೆ ಹೂವಿನ ಹಾರವೂ ಇಲ್ಲವಲ್ಲಪ್ಪಾ ಅಂತ ನಾವು ಕೈ ಕೈ ಹಿಸುಕಿಕೊಂಡೆವು. ಆದರೆ ಅದಕ್ಕೇನು ಬೇಸರಿಸಿಕೊಳ್ಳದ ಕನ್ನಪ್ಪ ‘ಇನ್ನೊಂದು ಐವತ್ರುಪಾಯಿ ಜಾಸ್ತಿ ಕೊಡ್ರೀ ಹೆಗಡೇರೇ’ ಅಂತ ಹೇಳಿದ.
ನಮ್ಮ ಮನೆಯ ಬಾವಿಯಲ್ಲಿ ಒಂದು ಫ್ರಿಜ್ ಇತ್ತು. ‘ಅದು ಹ್ಯಾಗೆ ಬಿತ್ತು?’ ಅಂತ ಕೇಳಬೇಡಿ. ನೀವು ಅಂದುಕೊಂಡ ಎಲೆಕ್ಟ್ರಿಕ್ ರೆಫ್ರಿಜರೇಟರ್ ಅಲ್ಲ ಅದು. ನೈಸರ್ಗಿಕ ಶಿತಿಲೀಕರಣ ಯಂತ್ರ ಅದು. ಒಂದು ಕೈಚೀಲಕ್ಕೆ ಹಗ್ಗ ಕಟ್ಟಿ, ಅದನ್ನು ನೀರಿನ ಸಮೀಪದವರೆಗೆ ಇಳಿಬಿಟ್ಟು, ಹಗ್ಗದ ಈ ತುದಿಯನ್ನು ಮೇಲೆ ಕಂಬಕ್ಕೆ ಕಟ್ಟಿರುತ್ತಿದ್ದೆವು. ಈ ಚೀಲದೊಳಗೆ ನಿಂಬೆಹಣ್ಣು, ವೀಳ್ಯದೆಲೆ, ಕೊತ್ತಂಬರಿ ಕಟ್ಟು, ಇತ್ಯಾದಿ ವಸ್ತುಗಳನ್ನು ಹಾಕಿ ಬಾವಿಯೊಳಗೆ ಇಳಿಸಿಟ್ಟರೆ ವಾರಗಳವರೆಗೆ ಅವು ಹಾಳಾಗದೇ ಇರುತ್ತಿದ್ದವು. ಕವಳದ ತಬಕಿನಲ್ಲಿ ವೀಳ್ಯದೆಲೆ ಖಾಲಿಯಾಯಿತೆಂದರೆ ಮತ್ತೆ ತೋಟಕ್ಕೆ ಓಡುವ ಅಗತ್ಯವಿರುತ್ತಿರಲಿಲ್ಲ. ಬಾವಿಯ ಬಳಿ ಹೋಗಿ ಈ ಹಗ್ಗ ಎಳೆದರೆ ಸಾಕು, ತಾಜಾ ತಾಜಾ ಎಲೆ ಫ್ರಿಜ್ಜಿನಲ್ಲಿ ನಮ್ಮನ್ನೇ ಕಾಯುತ್ತಿರುತ್ತಿತ್ತು.
ಬಾವಿ, ಮೇಲ್ಚಾವಣಿ ಇಲ್ಲದ ಹೊರ ಆವರಣದಲ್ಲಿದ್ದರೆ ಚಂದ. ಆಗ ತುಂಬುಚಂದಿರನೂ ಮೋಹಗೊಂಡು ಇದರಲ್ಲಿ ಬಿದ್ದೇಬಿಡುತ್ತಾನೆ. ನೀರವ ರಾತ್ರಿಯಲ್ಲಿ, ನಿಶ್ಚಲ ನೀರಲ್ಲಿ, ತೇಲುತ್ತಿರುವ ಚಂದಿರನನ್ನು ಬಿಂದಿಗೆ ಇಳಿಬಿಟ್ಟು ಎತ್ತುವಾಗ ಹುಡುಗಿ, ಕವಿಗಳೆಲ್ಲ ನವಿಲುಗರಿ ಹಿಡಿದು ಸಜ್ಜಾಗುತ್ತಾರೆ. ಸುಂದರಿಯ ಸೊಂಟಪೀಟದಲ್ಲಿ ಕೂತ ಬಿಂದಿಗೆಯಲ್ಲಿ ಶಶಿ ಮುಗುಳ್ನಗುವಾಗ ಪರವಶರಾಗುತ್ತಾರೆ.
ಕೇರಿಗೊಂದೇ ಬಾವಿಯಾಗಿಬಿಟ್ಟರಂತೂ ಹೆಂಗಸರಿಗೆ ಇದು ಹರಟೆಕಟ್ಟೆಯಾಗಿಬಿಡುತ್ತದೆ. ನೀರು ತುಂಬಲು ಬಂದವರೆಲ್ಲ ಹಗ್ಗ ಇಳಿಬಿಟ್ಟು ಕತೆ ಹೊಡೆಯುವರು. ಪಾತಾಳದಲ್ಲೆಲ್ಲೋ ದುಡದುಡ ಸದ್ದು ಮಾಡುತ್ತಾ ಬಿಂದಿಗೆ ತುಂಬಿದ್ದು ಇವರ ಅರಿವಿಗೇ ಬರುವುದಿಲ್ಲ. ಅಂದಿನ ಅಡುಗೆ, ಮನೆಗೆ ಬಂದಿರುವ ನೆಂಟರು, ಯಾರದೋ ಮನೆಯ ಕತೆ, ಮತ್ಯಾರದೋ ಬಗೆಗಿನ ಗುಸುಗುಸುಗಳಿಗೆಲ್ಲ ಬಾವಿಕಟ್ಟೆಯೇ ವೇದಿಕೆ. ತುಂಬಿದ ಬಿಂದಿಗೆ ಮೇಲೆಳೆಯುವಾಗ ಇವಳಿಗೆ ಅವಳೂ ಅವಳಿಗೆ ಇವಳೂ ಸಹಾಯ ಮಾಡುವರು. ಅದನ್ನು ಸೊಂಟದಲ್ಲಿಟ್ಟುಕೊಂಡು ಮನೆ ತಲುಪುವವರೆಗೂ ಕತೆ ಮುಗಿಯುವುದೇ ಇಲ್ಲ.
ನಗರಗಳಲ್ಲಿ ಬಾವಿಯೇ ಇರುವುದಿಲ್ಲ. ಅಡಿ ಜಾಗವೇ ದುಬಾರಿಯಾಗಿರುವ ಕಾಲದಲ್ಲಿ ಅಷ್ಟು ದೊಡ್ಡ ಜಾಗವನ್ನು ಬಾವಿಗಾಗಿ ಮೀಸಲಿಡಲು ಸಾಧ್ಯವೂ ಇಲ್ಲ. ಅಂಗೈಯಷ್ಟು ಅಗಲದಲ್ಲಿ ಬೋರ್ ಕೊರೆದು ನೀರೆತ್ತಿಬಿಡುತ್ತಾರೆ. ಮಳೆಯ ಏರುಪೇರು, ಮರಗಳ ಹನನ, ಅತಿಯಾಗಿ ಬೋರ್‌ವೆಲ್ ಕೊರೆಯುವುದರಿಂದಾಗಿ ಹಳ್ಳಿಗಳಲ್ಲೂ ಅಂತರ್ಜಲದ ಪ್ರಮಾಣ ಇಳಿಕೆಯಾಗಿ ಸುಮಾರು ಬಾವಿಗಳು ಪಾಳಾಗುತ್ತಿವೆ. ಬೇಸಿಗೆ ಬಂತೆಂದರೆ ಮಲೆನಾಡಿನಲ್ಲೂ ಬರ. ಭವಿಷ್ಯದ ಬಗ್ಗೆ ಯೋಚಿಸಲು ಭಯ ಪಡುವ ಮನಸು ಮೌನದಲ್ಲೇ ಹಾರೈಸುತ್ತದೆ: ಎಲ್ಲ ಬಾವಿಯಲ್ಲೂ ಸದಾ ಸಿಹಿನೀರು ತುಂಬಿರಲಿ. ಬಿಂದಿಗೆಯ ನೀರು ತುಳುಕಿದರೆ ತರುಣಿ ಪುಳಕಗೊಳ್ಳಲಿ. ಬಾವಿಯ ಸುತ್ತ ಬೆಸೆದುಕೊಂಡಿರುವ ಭಾವಬಂಧ ಚಿರಂತನವಿರಲಿ.
[ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ.]
9 comments:
ತುಂಬಾ ಚನಾಗಿ ಬರೆದಿದ್ದೀರ. ಇಷ್ಟ ಆಯ್ತು
ಒಂದು ಉತ್ತಮ ಲಲಿತಪ್ರಬಂಧ..
ಚೆನ್ನಾಗಿದೆ.
sooper :)
ಪುಟ್ಟಣ್ಣಾ...
ಇಷ್ಟವಾಯ್ತು ಬಾವಿಯ ಸುತ್ತ ಭಾವಬಂಧ.
ಬರೀತಿರು.
ಪ್ರೀತಿಯಿಂದ,
-ಪುಟ್ಟಕ್ಕ
ಮುಂಬೈನಿಂದ ಬಂದ ನನಗೂ ಬಾವಿ ಬಗ್ಗೆ ತುಂಬ ಕುತೂಹಲ ಇತ್ತು. ಬಗ್ಗಿ ಬಗ್ಗಿ ನೋಡಿದ್ದೇ ನೋಡಿದ್ದು ಕೆಲವು ದಿನ. ಆಮೇಲೆ ಬಾವಿಯಿಂದ ನೀರು ಎತ್ತುವುದರಲ್ಲಿಯೂ ಎಕ್ಸ್ ಪರ್ಟ್ ಆದೆ ಅನ್ನಿ
ನೀವು ಫ್ರಿಜ್ ಬಗ್ಗೆ ಹೇಳಿದಿರಲ್ಲ. ನಾವು ಅಡಿಗೆಯಲ್ಲಿ ಕಳಲೆ (tender bamboo)ತುಂಬ ಉಪಯೋಗಿಸುತ್ತೇವೆ. ಅದರಲ್ಲಿನ cyanin ಎಂಬ ವಿಷ (toxin)ತೆಗೆಯಲು ಅದನ್ನು ಮಲ್ಲ ಪಂಚೆಯಲ್ಲಿ ಕಟ್ಟಿ,ರೋಪ್ (?) ನಿಂದ ಕಟ್ಟಿ ಬಾವಿಯಲ್ಲಿ ಬಿಡುತ್ತಿದ್ದರು. ನೆನಪು ಬಂತು...ಅಷ್ಟೆ
nice ಲೇಖನ
:-)
ಮಾಲತಿ ಎಸ್
ಓದುತ್ತ ಹೋದಂತೆ ನನಗೆ ನನ್ನ ಮನೆ ಮುಂದಿದ್ದ 'ದೇವರ ಬಾವಿ' ನೆನಪಾಯಿತು.
ಅಡೆತಡೆಯಿಲ್ಲದ ಕಾಡಿನ ತೊರೆಯಂತೆ ಓದಿಸಿಕೊಂಡು ಹೋಯಿತು ನಿಮ್ಮ ಬರಹ.
ಕಂಗ್ರಾಟ್ಸ್!
ಸುಶ್, ತು೦ಬಾ ಚೆನ್ನಾಗಿದೆ. ಪತ್ರಿಕೆಯಲ್ಲೇ ಓದಿದ್ದೆ.
ಓದುತ್ತ ಹೋದಂತೆ ನನಗೆ ನನ್ನ ಮನೆ ಮುಂದಿದ್ದ 'ದೇವರ ಬಾವಿ' ನೆನಪಾಯಿತು.
ಅಡೆತಡೆಯಿಲ್ಲದ ಕಾಡಿನ ತೊರೆಯಂತೆ ಓದಿಸಿಕೊಂಡು ಹೋಯಿತು ನಿಮ್ಮ ಬರಹ.
ಕಂಗ್ರಾಟ್ಸ್!
ಓದಿದ, ಇಷ್ಟ ಪಟ್ಟ, ಪ್ರತಿಕ್ರಿಯಿಸಿದ ಎಲ್ಲರಿಗೂ ಥ್ಯಾಂಕ್ಸ್!
ಮಾಲ್ತಕ್ಕ & ಜೋಶಿ,
ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದು ಖುಶಿಯಾಯ್ತು. :-)
Post a Comment