Wednesday, May 18, 2011

ಹೊಸ ಭಾವ

‘ನಿನ್ನ ಜೀವನದಲ್ಲಿ ಅತಿ ಹೆಚ್ಚು ಉಪ್ಪಿಟ್ಟು ತಿಂದ ದಿನಗಳು ಯಾವುದು?’ ಅಂತ ಯಾರಾದರೂ ಕೇಳಿದರೆ, ನಾನು ಸುಲಭವಾಗಿ ‘ಅದು ನನ್ನ ಅಕ್ಕನಿಗೆ ಗಂಡು ಹುಡುಕುವ ದಿನಗಳಲ್ಲಿ’ ಅಂತ ಉತ್ತರಿಸುತ್ತೇನೆ.

ಅಕ್ಕ ಡಿಗ್ರಿಯಲ್ಲಿ ಡುಮ್ಕಿ ಹೊಡೆದದ್ದೇ ಮದುವೆಯಾಗಲಿಕ್ಕೆ ಅರ್ಹತೆ ಪಡೆದುಬಿಟ್ಟಳು. ‘ಶೇಷಭಟ್ರ ಮನೆ ಕೂಸಿಗೆ ಮದುವೆ ಮಾಡ್ತಾರಂತೆ. ಜಾತಕ ಹೊರಡಿಸಿದ್ದಾರಂತೆ’ ಎಂಬ ಸುದ್ದಿ ಊರಿನ ಬಾಯ್ಬಡುಕರ ಮುಂದಿನ ನೋಟೀಸ್ ಬೋರ್ಡಿನಲ್ಲಿ ತೂಗಾಡಿತು. ಆಮೇಲೆ ಆ ಸುದ್ದಿ ಹರಡಲಿಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಗಣಪತಣ್ಣನನ್ನು ಮೊದಲ್ಗೊಂಡು ಕೊನೇಮನೆ ಸೌಭದ್ರಕ್ಕನವರೆಗೆ ಎಲ್ಲರೂ ದೂರ್ವೆ ಕೊಯ್ಯುವ ನೆಪದಲ್ಲೋ, ಹೆಪ್ಪಿಗೆ ಮಜ್ಜಿಗೆ ಕೇಳುವ ನೆಪದಲ್ಲೋ, ಕುಡಗೋಲು ಮಸೆಯುವ ನೆಪದಲ್ಲೋ ನಮ್ಮನೆಗೆ ಬಂದು, ‘ಕೂಸಿನ ಜಾತಕ ಹೊಂಡ್ಸಿದ್ರಡ ಹೌದನೇ?’ ಅಂತ ಕೇಳಿಕೊಂಡು, ತಮ್ಮ ನೆಂಟರಿಷ್ಟರ ಪೈಕಿ ಮದುವೆಗೆ ಇರುವ ಗಂಡಿನ ಬಗ್ಗೆ ಒಂದು ಮಾತು ನಮ್ಮ ಕಿವಿಗೆ ಹಾಕಿ, ‘ನಿಮ್ಮನೆ ಕೂಸು ಬಿಡು, ಹೈಕ್ಲಾಸ್ ಇದ್ದು. ಅಲ್ದೇ ಮೊದಲೇ ಹುಡುಗಿಯರಿಗೆ ಬರ ಈಗ, ಯಾರರು ಫಾರಿನ್ನಗಿಪ್ಪವೇ ಹಾರ್‌ಸ್ಕ್ಯಂಡ್ ಹೋಗ್ತ ತಗ’ ಅಂತ ಹೊಗಳಿ ಹೋಗುತ್ತಿದ್ದರು.

ಒಂದೇ ಇದ್ದ ಅಕ್ಕನ ಜಾತಕ ಜೆರಾಕ್ಸ್ ಮಷೀನಿನ ಗಾಜುಗಳ ನಡುವೆ ಕೂತು ಮೂವತ್ತು ಕಾಪಿಯಾಯಿತು. ಯಶವಂತ್ ಸ್ಟುಡಿಯೋದ ಹಸಿರು ಉದ್ಯಾನದ ಪೋಸ್ಟರಿನ ಮುನ್ನೆಲೆಯಲ್ಲಿ ನಿಂತ ಸೀರೆಯುಟ್ಟ ಅಕ್ಕ ಕೆಮೆರಾದ ಫ್ಲಾಶಿನಲ್ಲಿ ಬೆಳಗಿದಳು. ಒಂದು ವಾರದೊಳಗೆ ಅಕ್ಕನನ್ನು ನೋಡುವುದಕ್ಕೆ ಗಂಡಿನ ಕಡೆಯವರು ಧಾಳಿ ಇಡಲು ಶುರು ಮಾಡಿದರು.

ಹುಡುಗಿಯರಿಗಿರುವ ಬೇಡಿಕೆಯ ಸಂಪೂರ್ಣ ಲಾಭ ಪಡೆದುಕೊಂಡ ಪೀಯೂಸಿ ಪಾಸಾಗಿದ್ದ ಅಕ್ಕ, ಹಳ್ಳಿಯಲ್ಲಿರುವ ಹುಡುಗ ಬೇಡವೇ ಬೇಡ ಅಂತ ಸಾರಾಸಗಟಾಗಿ ನಿರಾಕರಿಸಿಬಿಟ್ಟಿದ್ದಳು. ಆದರೆ ಆ ಕಂಡೀಶನ್ನು, ಜಾತಕ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ವರ್ಗಾವಣೆಯಾಗುವ ನಡುವೆ ಎಲ್ಲೋ ತಪ್ಪಿಹೋಗಿಬಿಟ್ಟಿರುತ್ತಿತ್ತು. ಹೀಗಾಗಿ ಮೊದಮೊದಲು ಅಕ್ಕನನ್ನು ನೋಡಲು ಬಂದವರು ಹಳ್ಳೀಹುಡುಗರ ಪೋಷಕರೇ. ಹಳ್ಳಿಯವರಾದರೇನು ದಿಲ್ಲಿಯವರಾದರೇನು, ಹುಡುಗಿ ನೋಡಲು ಬಂದವರನ್ನು ಹಾಗೇ ಕಳಿಸಲಿಕ್ಕೆ ಬರುತ್ತದೆಯೇ? ದೂರದ ಊರಿನಿಂದ ಬಜಾಜ್ ಎಮ್‌ಎಯ್ಟಿಯಲ್ಲಿ ಧೂಳು ಹಾರಿಸುತ್ತಾ ಬಂದ ಹುಡುಗನ ಕಡೆಯವರಿಗೆ ಉಪ್ಪಿಟ್ಟು-ಕಾಫಿ ಮಾಡುವುದು ಅಮ್ಮನಿಗೆ ಅನಿವಾರ್ಯ ಕರ್ಮವಾಯಿತು. ಹಳ್ಳಿಯವರಾದರೆ, ತನ್ನ ತಂದೆಯ ಜೊತೆಗೋ ಮಾವನ ಜೊತೆಗೋ ಹುಡುಗನೇ ಬಂದುಬಿಟ್ಟಿರುತ್ತಿದ್ದ. ಆದರೆ ಹುಡುಗ ಪರ ಊರಿನಲ್ಲಿರುವವನಾದರೆ, ಮೊದಲ ಭೇಟಿಯಲ್ಲಿ ಹುಡುಗನ ತಂದೆ ಮತ್ತು ಹುಡುಗನ ಮಾವ ಅಥವಾ ಹತ್ತಿರದ ಯಾರೋ ನೆಂಟ -ನೋಡಲು ಬರುತ್ತಿದ್ದುದು. ಜಾಗತೀಕರಣದ ಪರಿಣಾಮವೋ, ಪೇಟೆಯೆಡೆಗಿನ ಆಕರ್ಷಣೆಯೋ, ಟೀವಿ-ಗೀವಿಗಳಲ್ಲಿ ನೋಡಿದ ಸಿಟಿಲೈಫಿನ ಥಳುಕುಬಳುಕಿನ ಮೋಡಿಯೋ ಅಥವಾ ತನ್ನ ಓರಗೆಯ ಹುಡುಗಿಯರ ಗಂಡಂದಿರನ್ನು ನೋಡಿದ್ದ ಪ್ರಭಾವವೋ ಏನೋ, ಈ ಹಳ್ಳಿಯ ಹುಡುಗರೆಲ್ಲ ಅಕ್ಕನಿಗೆ ಬೆಪ್ಪುತಕ್ಕಡಿಗಳಂತೆ ಕಾಣಿಸುತ್ತಿದ್ದರು. ಬೆಂಗಳೂರಿನಲ್ಲಿರುವವ, ಅಮೆರಿಕೆಗೆ ಹೋಗಿಬಂದವ, ಸಾಫ್ಟ್‌ವೇರ್ ಇಂಜಿನಿಯರು, ಓನ್ ಫ್ಲಾಟು, ಸ್ವಿಫ್ಟ್ ಕಾರು -ಇತ್ಯಾದಿ ಶಬ್ದಗಳು ಅಡುಗೆಮನೆಯಲ್ಲೋ ರೂಮಿನಲ್ಲೋ ನಿಂತು ಜಗುಲಿಯಲ್ಲಿನ ಮಾತುಗಳನ್ನು ಕದ್ದು ಕೇಳುತ್ತಿದ್ದ ಅಕ್ಕನಿಗೆ ಖುಶಿ ತರುತ್ತಿದ್ದವು.

ವಿಷಯ ಎಂದರೆ- ಬಂದ ಅಭ್ಯಾಗತರೊಂದಿಗೆ ಒಳ್ಳೆಯ ಮಾತಾಡಿ ಸಂಭಾಳಿಸುವ ಸಂಕಷ್ಟಲ್ಲಿರುತ್ತಿದ್ದ ಅಪ್ಪ, ಉಪ್ಪಿಟ್ಟಿನ ರುಚಿ ಸರಿಯಾಗಿದೆಯೋ ಇಲ್ಲವೋ ಎಂಬ ಆತಂಕದಲ್ಲಿರುತ್ತಿದ್ದ ಅಮ್ಮ, ಮತ್ತೊಂದು ಹೊಸ ನಾಟಕ ಪ್ರದರ್ಶನಕ್ಕೆ ಸೀರೆಯಂತಹ ತನ್ನಿಷ್ಟದ್ದಲ್ಲದ ಉಡುಗೆ ತೊಡುತ್ತಿದ್ದ ಅಕ್ಕ -ಇವರೆಲ್ಲರ ನಡುವೆ ಈ ಸನ್ನಿವೇಷದ ನಿಜವಾದ ಮಜಾ ತೆಗೆದುಕೊಳ್ಳುತ್ತಿದ್ದುದು ನಾನು! ಈ ಹುಡುಗಿ ನೋಡಲಿಕ್ಕೆಂದು ಬಂದ ಹುಡುಗರೆಲ್ಲ ಒಂದು ತರಹದ ವಿಚಿತ್ರ ಸೋಗಿನಲ್ಲಿರುತ್ತಿದ್ದರು. ನೀಟಾಗಿ ಇಸ್ತ್ರಿ ಮಾಡಿದ ಪ್ಯಾಂಟು ಧರಿಸಿ, ಇನ್‌ಶರ್ಟ್ ಮಾಡಿಕೊಂಡು, ಫಳಫಳ ಹೊಳೆಯುವ ತೊಳೆದ ಚಪ್ಪಲಿ ಹಾಕಿಕೊಂಡು ಬಂದಿರುತ್ತಿದ್ದ ಇವರು ಟೈ ಒಂದು ಇದ್ದರೆ ಥೇಟ್ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೆ ಕಾಣುತ್ತಿದ್ದರು. ಇವರು ಧರಿಸಿದ ಬಿಳಿಯಂಗಿಯ ಮೇಲೆ ನಮ್ಮೂರ ರಸ್ತೆಯ ಧೂಳಿನ ಕಣಗಳು ಬಿಂದಾಸ್ ಕೂತು ರಾರಾಜಿಸುತ್ತಿದ್ದವು. ನಗೆಯೆಂಬುದು ಇವರ ತುಟಿಗಳಿಗೇ ಪೇಟೆಂಟ್ ಆಗಿಹೋಗಿರುತ್ತಿತ್ತು. ‘ನಾನೇ ಹುಡುಗಿ ಅಪ್ಪ, ಇವಳು ನಮ್ಮನೆಯವಳು, ಇಂವ ಹುಡುಗಿ ತಮ್ಮ’ ಅಂತೆಲ್ಲ ಅಪ್ಪ ಪರಿಚಯಿಸಿಕೊಡುವಾಗ ಈ ಬಕರಾ, ಅಪ್ಪ-ಅಮ್ಮರ ಜೊತೆಗೆ ನನಗೂ ‘ಹೆಹೆ, ನಮಸ್ಕಾರ’ ಅಂತ ಕೈ ಮುಗಿಯುತ್ತಿದ್ದ. ಬಹುಶಃ ನನಗಿಂತ ಹಿರಿಯವರಿಂದ ಅನೇಕ ನಮಸ್ಕಾರಗಳನ್ನು ನಾನು ಪಡೆದದ್ದೂ ಆ ದಿನಗಳಲ್ಲೇ ಇರಬೇಕು!

ಅಕ್ಕ ಅಡುಗೆಮನೆಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟ್ರೇಯಲ್ಲಿಟ್ಟುಕೊಂಡು ಬರುವಾಗ ನನ್ನೀ ಭಾವೀ ಭಾವಂದಿರ ಮುಖ ನೋಡುವ ಹಾಗಿರುತ್ತಿತ್ತು. ಸಿಗುತ್ತಿದ್ದ ಆ ಎರಡ್ಮೂರು ನಿಮಿಷಗಳಲ್ಲೇ ಹುಡುಗಿಯನ್ನು ಪೂರ್ತಿಯಾಗಿ ಅಳೆದುಬಿಡುವ ಸಾಮರ್ಥ್ಯವನ್ನು ಈಗಾಗಲೇ ತಮ್ಮ ಅನುಭವದಿಂದ ಸಂಪಾದಿಸಿಕೊಂಡಿರುತ್ತಿದ್ದ ಈ ಭಾವಂದಿರು, ಅಕ್ಕ ಟ್ರೇಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟೀಪಾಯಿಯ ಮೇಲಿಟ್ಟು, ಅಮ್ಮ ಹೇಳಿದ ‘ತಗಳಿ, ನಮ್ಮನೆ ಕೂಸೇ ಮಾಡಿದ್ದು ಉಪ್ಪಿಟ್ಟು’ ಎಂಬ ಶುದ್ಧ ಸುಳ್ಳಿನ ನುಡಿಗೆ ‘ಓಹೋ?’ ಎಂದು ಮುಗುಳ್ನಕ್ಕು ತಲೆಯಾಡಿಸಿ, ತಟ್ಟೆಗೂ ಸ್ಪೂನಿಗೂ ಕೈ ಹಾಕುವ ಈ ದೃಶ್ಯ, ಎಲ್‌ಬಿಡಬ್ಲೂ ಅಪೀಲನ್ನು ಮತ್ತೆಮತ್ತೆ ತೋರಿಸುವ ಕ್ರಿಕೆಟ್ಟಿನಾಟದ ರಿಪ್ಲೇಯಂತೆ ಪ್ರತಿ ವಧುಪರೀಕ್ಷೆಯಲ್ಲೂ ಸಾಮಾನ್ಯವಾಗಿರುತ್ತಿತ್ತು. ಈ ಹುಡುಗರು ತಮ್ಮ ಮಾವ-ಅತ್ತೆಯರ -ಅದಕ್ಕೂ ಹೆಚ್ಚಾಗಿ ಅಡುಗೆಮನೆಯಲ್ಲಿ ಕೇಳಿಸಿಕೊಳ್ಳುತ್ತಲೇ ಇರಬಹುದಾದ ಹುಡುಗಿಯ- ಮನ ಗೆಲ್ಲಲೆಂದು ಅನೇಕ ಕಸರತ್ತು ನಡೆಸುತ್ತಿದ್ದರು. ತಮ್ಮ ತಂದೆ ‘ಯಮ್ಮನೆ ಮಾಣಿಗೆ ಒಂದೇ ಒಂದು ಚಟ ಇಲ್ಲೆ. ತಪ್ಪಿ ಎಲೆ-ಅಡಿಕೆ ಸಹ ಹಾಕದಿಲ್ಲೆ. ಜಾಬಲ್ಲಿ ಇಲ್ದೇ ಇದ್ರೆ ಎಂತಾತು? ಆರು ಎಕರೆ ತೋಟ ಇದ್ದು. ಮನೇಲಿ ಸಕಲ ಸೌಕರ್ಯವೂ ಇದ್ದು. ಕೈಕಾಲಿಗೆ ಆಳು ಇದ್ದ. ಪ್ಯಾಟೆ ಮನೇಲಿ ಇದ್ದಂಗೇ ಆರಾಮಾಗಿ ಇರ್ಲಕ್ಕು ನಿಮ್ಮನೆ ಕೂಸು’ ಅಂತೆಲ್ಲ ಹೇಳುವಾಗ, ಅದಾಗಲೇ ನನ್ನಕ್ಕನ ಸೌಂದರ್ಯಕ್ಕೆ ಮರುಳಾಗಿರುತ್ತಿದ್ದ ಈ ಭಾವಿ ಭಾವ ಪ್ರತಿಯೊಂದಕ್ಕೂ ತಲೆಯಾಡಿಸುತ್ತಿದ್ದ. ಎಲ್ಲಾ ಮುಗಿದು, ‘ಸರಿ. ಹುಡುಗ-ಹುಡುಗಿ ನೋಡಿ ಆತು. ಇನ್ನು ನಿಂಗ್ಳ ನಿರ್ಧಾರ ಲಘೂ ತಿಳಿಸಿ’ ಅಂತ ಹೇಳಿ, ನಿರ್ಣಯವನ್ನು ಥರ್ಡ್ ಅಂಪೇರಿಗೆ ವರ್ಗಾಯಿಸಿ ಅವರು ಜಾಗ ಖಾಲಿ ಮಾಡುತ್ತಿದ್ದರು. ಅವರಿಗೂ ಗೊತ್ತಿತ್ತು: ಇಲ್ಲಿ ಆಟಗಾರಳೇ ಥರ್ಡ್ ಅಂಪೇರೂ! ಅವಳದೇ ಕೊನೆಯ ನಿರ್ಧಾರ! ಹುಡುಗ ಔಟೋ ನಾಟೌಟೋ ಎಂದು ತೀರ್ಮಾನಿಸುವ ಸಿಗ್ನಲ್ಲಿನ ಸ್ವಿಚ್ಚು ಅಕ್ಕನ ಕೈಯಲ್ಲೇ ಇರುತ್ತಿತ್ತು.

ಅವರು ಅತ್ತ ಹೋದಮೇಲೆ ಅಕ್ಕ ಆ ಹುಡುಗ ಹೇಗೆ ಬೆಪ್ಪನಂತಿದ್ದನೆಂದು ನನ್ನ ಮತ್ತು ಅಮ್ಮನ ಬಳಿ ಹೇಳಿಕೊಂಡು ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದಳು. ಮಿಕ್ಕಿರುತ್ತಿದ್ದ ಉಪ್ಪಿಟ್ಟು ತಿನ್ನುತ್ತಾ ನಾನು, ಈ ಭಾವನೂ ಔಟ್ ಆದುದಕ್ಕೆ, ಆತನ ಪ್ರದರ್ಶನವೆಲ್ಲ ವೇಸ್ಟ್ ಆದುದಕ್ಕೆ ಅಯ್ಯೋ ಪಾಪ ಎಂದುಕೊಳ್ಳುತ್ತಿದ್ದೆ. ಅಮ್ಮ-ಅಪ್ಪಂದಿರು ಮಾತ್ರ, ಅಕ್ಕನಿಗೆ ಅದ್ಯಾವತ್ತು ಬುದ್ಧಿ ಬರುತ್ತದೋ, ಯಾವಾಗ ಗ್ರೀನ್ ಸಿಗ್ನಲ್ಲು ಕೊಡುತ್ತಾಳೋ ಎಂಬ ಚಿಂತೆಯಲ್ಲಿ ಕಾಫಿ ಕುಡಿಯುತ್ತಿದ್ದರು.

ಅಕ್ಕ ಕೊನೆಗೂ ಒಪ್ಪಿದ್ದು ಬೆಂಗಳೂರಿನ ಸಾಫ್ಟ್‌ವೇರ್ ಮಾಣಿಯನ್ನೇ. ಅಕ್ಕನನ್ನು ನೋಡಲು ಟೀಶರ್ಟ್ ಧರಿಸಿ ಪ್ಲೇಬಾಯ್ ಥರ ಬಂದಿದ್ದ ಈ ಹೊಸ ಭಾವ ಮೊದಲು ಸಂಪಾದಿಸಿದ್ದು ನನ್ನ ಗೆಳೆತನ! ಇವನ ಅಪ್ಪ ನನ್ನ ಅಪ್ಪನೊಂದಿಗೆ ಹುಡುಗನ ಗುಣಗಾನದಲ್ಲಿ ತೊಡಗಿದ್ದಾಗ ಅಲ್ಲಿಂದ ಮೆಲ್ಲನೆದ್ದುಬಂದ ಇವನು, ನನ್ನನ್ನು ಹೊರಕಟ್ಟೆಗೆ ಕರೆದೊಯ್ದು ‘ಯಾವ ಕಾಲೇಜು, ಏನು ಓದ್ತಿದೀ, ಮುಂದೇನು ಮಾಡಬೇಕು ಅಂತಿದೀಯಾ, ಜೂನಿಯರ್ ಕಾಲೇಜಿನಲ್ಲಿ ಈಗಲೂ ಆ ಲೆಕ್ಚರರ್ ಇದಾರಾ’ ಅಂತೆಲ್ಲ ಕೇಳಿ ಮೊದಲ ವಿಕೆಟ್ಟು ಗಳಿಸಿಬಿಟ್ಟ. ಅಪ್ಪ-ಅಮ್ಮಂದಿರಂತೂ ಇವರು ನೋಡಲು ಬರುತ್ತಿರುವ ಸುದ್ದಿ ಕೇಳಿಯೇ ಆಸ್ಟ್ರೇಲಿಯಾ ಎದುರಿನ ಕೀನ್ಯಾ ಆಟಗಾರರಂತೆ ಮೊದಲೇ ಶರಣಾಗಿಹೋಗಿದ್ದರು. ಇನ್ನು ಥರ್ಡ್ ಅಂಪೇರ್ ಡಿಸಿಷನ್ ಒಂದೇ ಪೆಂಡಿಂಗ್ ಇದ್ದುದು. ಕನ್ನಡಕದ ಭಾವ, ನಾವೆಲ್ಲ ನಿಬ್ಬೆರಗಾಗುವಂತೆ ಅಕ್ಕನನ್ನೂ ಹೊರಕಟ್ಟೆಗೆ ಕರೆದೊಯ್ದು ಅದೇನೇನೋ ಮಾತಾಡಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಆಟ ಮುಗಿಸಿಯೇಬಿಟ್ಟ!

ಧಾಮ್‌ಧೂಮ್ ಎಂದು ಮುಗಿದುಹೋದ ಮದುವೆಯ ನಂತರ ಈ ಹೊಸ ಭಾವ ನಮ್ಮ ಮನೆ ಅಳಿಯನಾಗಲು, ಎಲ್ಲರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಕಾಲವೇ ಹಿಡಿಯಿತು. ಮೂಲ ಹಳ್ಳಿಯವನೇ ಆದರೂ ಅದಾಗಲೇ ಬೆಂಗಳೂರಿನ ಗತ್ತುಗಳನ್ನು ಮೈಮೇಲೆ ಹಾಕಿಕೊಂಡಿದ್ದ ಭಾವ, ನಮ್ಮ ಮನೆಯ ಗಾರೆ ನೆಲ, ಕತ್ತಲೆಯ ನಡುಮನೆ, ಬೋಲ್ಟು ಕೂರದ ಬೆಡ್‌ರೂಮಿನ ಬಾಗಿಲು, ಜಾರುವ ಬಚ್ಚಲುಕಲ್ಲು, ಸುಳಿದಾಡುವ ನೆಂಟರ ನಡುವೆ ನುಣುಚಿಕೊಳ್ಳುವ ಹೆಂಡತಿ -ಇವುಗಳೊಂದಿಗೆ ಹೇಳಿಕೊಳ್ಳಲಾಗದ ಅಸಮಾಧಾನ ಅನುಭವಿಸುತ್ತಾ ಕಷ್ಟ ಪಡುತ್ತಿದ್ದುದು ನನಗೆ ಅರ್ಥವಾಗುತ್ತಿತ್ತು. ನಮಗೂ ಈ ಹೊಸ ಅಳಿಯದೇವನನ್ನು, ಬೀಗರನ್ನು, ಅವರ ಕಡೆಯ ನೆಂಟರನ್ನು ಸಂಭಾಳಿಸುವ, ಅವರಿಗೆ ಅಭಾಸವಾಗದಂತೆ ನಡೆದುಕೊಳ್ಳುವ ಕಷ್ಟ ಇತ್ತು. ಮಧ್ಯಾಹ್ನದ ಊಟದ ನಂತರ ‘ಸುಸ್ತಾಗಿದ್ದರೆ ರೂಮಿಗೆ ಹೋಗಿ ಮಲಗಿ’ ಅಂತ ಅಪ್ಪ ಕೇಳಿದರೆ, ಅದೆಷ್ಟೇ ನೇರ ನಡೆಯವನಾದರೂ ಭಾವ ‘ಅಯ್ಯೋ, ಎಂಥಾ ಸುಸ್ತೂ ಇಲ್ಲೆ’ ಅಂತ, ಜಗುಲಿಯ ಕಂಬಳಿಯ ಮೇಲೇ ಕೂತು ತೂಕಡಿಸುತ್ತಿದ್ದ. ಅಂತೂ ಭಾವ ದಿನ ಕಳೆದಂತೆ, ಹಬ್ಬಗಳಿಗೆ ಬಂದು-ಹೋಗಿ ಮಾಡುತ್ತ, ಫೋನಿನಲ್ಲಿ ಮಾತಾಡುತ್ತಾ ಹಳಬನಾದ. ಅವನ ಬೆಂಗಳೂರಿನ ಮನೆಗೆ ಹೋಗಿದ್ದಾಗ ನಮ್ಮ ಮನೆಯಲ್ಲಿ ಆತ ಅನುಭವಿಸಿದ್ದ ಧರ್ಮಸಂಕಟಗಳನ್ನೆಲ್ಲ ನಾವು ಇಲ್ಲಿ ಅನುಭವಿಸಿದೆವು. ಸರಳತೆಗೆ ಹೊಂದಿಕೊಳ್ಳುವುದಕ್ಕಿಂತ ಆಡಂಬರಕ್ಕೆ ಹೊಂದಿಕೊಳ್ಳುವ ಕಷ್ಟ ದೊಡ್ಡದು ಅಂತ ಅರಿತುಕೊಂಡೆವು.

ಓದು ಮುಗಿಸುವ, ಕೆಲಸ ಹುಡುಕುವ, ನಗರದಲ್ಲಿ ಸೆಟಲ್ ಆಗುವ ಜರೂರಿನಲ್ಲಿ ಮುಳುಗಿಹೋಗಿದ್ದ ನನಗೆ ಇವೆಲ್ಲ ನೆನಪಾದದ್ದು, ‘ಇಪ್ಪತ್ತೇಳು ವರ್ಷ ಆತು ನಿಂಗೆ. ಮನೆಗೆ ಸುಮಾರೆಲ್ಲ ಜಾತಕ ಬೈಂದು. ನಿನ್ನೆ ಬಂದಿದ್ದೋರು ಹೇಳಿದ, ಕೂಸಿಗೆ ಕಾನಸೂರು ಆತಡ. ಬೆಂಗಳೂರಲ್ಲೇ ಯಾವುದೋ ಕಂಪನೀಲಿ ಕೆಲಸ ಮಾಡ್ತಡ. ಮೊಬೈಲ್ ನಂಬರ್ ಕೊಡಸ್ತಿ. ಮೊದಲು ನಿಂಗನೇ ಎಲ್ಲಾದ್ರೂ ಮೀಟ್ ಆಗಿ ಮಾತಾಡಿ. ನಿಮಗೆ ಪರಸ್ಪರ ಒಪ್ಪಿಗೆ ಆತು ಅಂದ್ರೆ ನಾವು ಮುಂದುವರಿತ್ಯ. ಅಡ್ಡಿಲ್ಯಾ?’ ಅಂತ ಅಪ್ಪ ಫೋನ್ ಮಾಡಿ ಕೇಳಿದಾಗ.

ಅಪ್ಪ ಕೊಟ್ಟ ನಂಬರಿಗೆ ಫೋನ್ ಮಾಡಿದೆ. ಕಾಫಿ ಡೇಯ ಕುರ್ಚಿಯಲ್ಲಿ ವಿಕೆಟ್ಟು ಉದುರಿತು. ನಿಶ್ಚಿತಾರ್ಥದ ದಿನ ಅವರ ಮನೆಗೆ ಹೋದಾಗ, ಈಗಾಗಲೇ ಫೇಸ್‌ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿಹೋಗಿದ್ದ ಆಕೆಯ ಭೇಷ್ ತಮ್ಮ ಸಂಪತ್, ಬಿಳೀ ಜುಬ್ಬಾ ಧರಿಸಿ ‘ಇವನೇನಾ ಹೊಸ ಭಾವ?’ ಎಂಬಂತೆ ನನ್ನನ್ನು ನೋಡುತ್ತಿದ್ದ. ಇವನಿಗೊಂದು ಡೈರಿಮಿಲ್ಕ್ ಹಿಡಿದುಕೊಂಡು ಬರಬೇಕಿತ್ತು ಅಂತ ಅನಿಸಿತಾದರೂ ಈಗಾಗಲೇ ಬುಟ್ಟಿಗೆ ಬಿದ್ದವನಿಗೆ ಕಾಳು ಹಾಕುವುದ್ಯಾಕೆ ಅಂತ ಸುಮ್ಮನಾದೆ. ಆದರೆ, ಹುಡುಗಿಗೆ ಉಂಗುರ ತೊಡಿಸುವಾಗ ‘ಅವತ್ತು ನೋಡಿದ ಕೂಸು ಇವಳೇ ಸೈಯಾ ಕರೆಕ್ಟಾಗಿ ನೋಡಿಕೊಳ್ಳೋ. ಒಂದೇ ಸಲ ನೋಡಿದ್ದು, ಮರೆತು ಹೋಗಿರ್ತು’ ಅಂತ ಮಾವನ ಕಡೆಯವರ್ಯಾರೋ ಕಿಚಾಯಿಸುವಾಗ, ನಮ್ಮ ಮನೆಗಳಿಗೆ ತಿಳಿಸದಂತೆ ಲಾಲ್‌ಭಾಗ್, ಫೋರಮ್ ಮಾಲ್, ನಂದಿಬೆಟ್ಟ ಅಂತೆಲ್ಲ ಸುತ್ತಿದ್ದ ನಮ್ಮ ಜಂಟಿ ಫೋಟೋಗಳನ್ನು ಅಲ್ಬಮ್ಮಿನಲ್ಲಿ ನೋಡಿಬಿಟ್ಟಿರಬಹುದಾದ ಸಂಪತ್, ಅದನ್ನು ಈಗ ಬಾಯಿಬಿಡದಿರಲಪ್ಪಾ ಅಂತ ನಾನು ಪ್ರಾರ್ಥಿಸುತ್ತಿದ್ದೆ. ಹೊಸ ಭಾವನ ತಳಮಳ ಸಂಪೂರ್ಣ ಅರ್ಥವಾದವನಂತೆ, ಅವನು ಮುಗುಳ್ನಕ್ಕ. ನಾನು ಕಣ್ಣು ಹೊಡೆದೆ. ಸುಳ್ಳೇ ಸಂಕೋಚವನ್ನು ಆವಾಹಿಸಿಕೊಂಡು, ಹೊಸಬನಂತೆ ನಟಿಸುವ ಪ್ರಯತ್ನ ಮಾಡಿದೆ. ಉಪ್ಪಿಟ್ಟಿನ ಘಮ ಅಡುಗೆಮನೆಯಿಂದ ತೇಲಿಬರುತ್ತಿತ್ತು.


 [ಕನ್ನಡ ಪ್ರಭ - ಅಂಕಿತ ಪುಸ್ತಕ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯ ಯುವ ವಿಭಾಗದಲ್ಲಿ ಬಹುಮಾನ.]

27 comments:

Dr U B Pavanaja said...

ಅದು "ಹೊಸ ಬಾವ" ಆಗಬೇಕಿತ್ತಲ್ಲವೇ? ಅಥವಾ ಬಾವ ಎಂಬ ಅಲ್ಪಪ್ರಾಣಿಯನ್ನು ಮಹಾಪ್ರಾಣಿ ಮಾಡುವ ಯತ್ನವೇ?

Ananda_KMR said...

ನಮ್ಮ ಮನೇಲಿ ಕಳೆದ ಮೂರು ವರುಷದಿಂದ ಉಪ್ಪಿಟ್ಟಿನ ಪರಿಮಳ ಬರ್ತಾನೆ ಇತ್ತು ....ಈ ತಿಂಗಳ 24ಕ್ಕೆ ಅದಕ್ಕೆ ದೊಡ್ಡ ನಮಸ್ಕಾರ ಹಾಕಿ ಉಪ್ಪಿಟ್ಟನ್ನು ನಮ್ಮ ಮನೆಯಿಂದ ಗಡಿಪಾರು ಮಾಡಬೇಕು ಅಂತ ನಿಶ್ಚಯವಾಗಿದೆ :) :)

ಮನಸಿನ ಮಾತುಗಳು said...

sweet write up!...:-)

BTW.."ಅಪ್ಪ ಕೊಟ್ಟ ನಂಬರಿಗೆ ಫೋನ್ ಮಾಡಿದೆ. ಕಾಫಿ ಡೇಯ ಕುರ್ಚಿಯಲ್ಲಿ ವಿಕೆಟ್ಟು ಉದುರಿತು".. ಅದು ಯಾರು ಅಂತ ಸ್ವಲ್ಪ ನಮಗೂ ಹೇಳಿ...:-/

Dr U B Pavanaja said...

"ಭಾವ" ಸರಿ. ಈಗಷ್ಟೆ kanaja.in ನಲ್ಲಿ ಪರಿಶೀಲಿಸಿದೆ.

Dr U B Pavanaja said...

ಹುಡುಗಿ ನೋಡುವಾಗ ಉಪ್ಪಿಟ್ಟು ತಿನ್ನಲೇ ಬೇಕು (ಕೊಡಲೇ ಬೇಕು) ಅಂತ ನಿಯಮ ಮಾಡಿದ್ದು ಯಾರು?

Sushrutha Dodderi said...

@ Pavanaja,
ಇಲ್ಲ ಸರ್.. ’ಭಾವ’ವೇ ಸರಿ. ಸೋದರಿಯ ಗಂಡ ಎಂಬರ್ಥಕ್ಕೆ.

Anand,
ಓಹ್! ಹಾಗೋ ವಿಷಯ? ಕಂಗ್ರಾಟ್ಸ್ ಮತ್ತೆ! ;)

ದಿವ್ಯಾ,
Thanks divs.. ಇದೊಂದು ಸಂಪೂರ್ಣ ಕಾಲ್ಪನಿಕ ಪ್ರಬಂಧ (ಬಹುಶಃ ನಾನು ಮೊದಲ ಸಲ ಮಾಡಿದ ಪ್ರಯತ್ನ!). ನಂಗೆ ಅಕ್ಕನೂ ಇಲ್ಲ; ನಂಗೆ ಎಂಗೇಜ್‌ಮೆಂಟೂ ಆಗಿಲ್ಲ. ಲೈನ್ಸ್ ಆರ್ ಸ್ಟಿಲ್ ಓಪನ್. ;)

Unknown said...

Nice One.
ಸರಳತೆಗೆ ಹೊಂದಿಕೊಳ್ಳುವುದಕ್ಕಿಂತ ಆಡಂಬರಕ್ಕೆ ಹೊಂದಿಕೊಳ್ಳುವ ಕಷ್ಟ ದೊಡ್ಡದು ಅಂತ ಅರಿತುಕೊಂಡೆವು. nija nija :-)

Sushrutha Dodderi said...

@ Pavanaja,
:)
ಕರೆಕ್ಟ್ ನೋಡಿ! ನೀವು ಅಖಿಲ ಉಪ್ಪಿಟ್ಟು ವಿರೋಧಿ ಸಂಘದ ಅಧ್ಯಕ್ಷರು ಅಂತ ಎಲ್ಲೋ ಬರಕೊಂಡಿದ್ದಿರಿ. ಅದ್ಯಾರು ಆ ನಿಯಮ ಮಾಡಿದ್ದಾರೋ ಮೊದಲು ಕಂಡುಹಿಡೀಬೇಕು: ಜಂಟಿ ಕಾರ್ಯಾಚರಣೆ ನಡೆಸಿಯಾದರೂ!

ಸಾಗರದಾಚೆಯ ಇಂಚರ said...

sakattagide sir
tumbaa chennagi barediddiraa
ondu joke nenapytu

ಪ್ರಿಯ , ನಿನ್ನ ಮುಖವೇಕೆ ಕಪ್ಪಿಟ್ಟಿದೆ
ಪ್ರಿಯೆ, ಮನೆಯಲ್ಲಿ ಹೆಂಡತಿ ಮಾಡಿದ ಉಪ್ಪಿಟ್ಟಿದೆ :)

Keshav.Kulkarni said...

ಲಲಿತ ಪ್ರಬಂಧ ಎಂದರೂ ಸರಿ, ಕತೆ ಎಂದರೂ ಸರಿ. ಚೆನ್ನಾಗಿದೆ. ಮಜಾ ಬಂತು.

ಸುಧೇಶ್ ಶೆಟ್ಟಿ said...

Odhi congrats heLona antha bandhare idhu kaalpanika prabandha antha barediddeeri ;) anyway chennagittu lekahan :)

ತೇಜಸ್ವಿನಿ ಹೆಗಡೆ said...

Sush,

Simple and sweet write up.. liked it very much.

ಅಂದಹಾಗೆ ನಮ್ಮ ಕಾನಸೂರಲ್ಲಿ ಒಂದು ಒಳ್ಳೆ ಹುಡುಗಿ ಇಪ್ಪದಂತೂ ಹೌದು... ಲೈನ್ ಕ್ಲಿಯರ್ ಇದ್ರೆ ಫಿಕ್ಸ್ ಮಾಡ್ಲಾ? :)

ದುರಹಂಕಾರಿ said...

KonKreet Writeup ;) ಲೈನು ಇನ್ನೂ ಕ್ಲಿಯರ್ರು ಅಂತ ಕೇಳಿ ಕೆಲವರಾದರೂ ನಿರಾಳರಾಗಿರ್ಬೇಕು ;) ಮೊಗ್ಯಾಮ್ಬೋಗೆ ಮಜಾ ಬಂತು!

sunaath said...

ಸುಶ್ರುತ,
ಲೇಖನ ಮಸಾಲಾ ಉಪ್ಪಿಟ್ಟಿನಷ್ಟೇ ಚೆನ್ನಾಗಿದೆ.
ನಿಮಗೆ ಉಪ್ಪಿಟ್ಟಿನ ಬಹುಮಾನವನ್ನೇ ಕೊಡಬೇಕು!

ವೆಂಕಟೇಶ್ ಹೆಗಡೆ said...

ತುಂಬಾ ಚೆನ್ನಾಗಿದೆ ಸರ್ ... ನಂಗೂ ನಾಲ್ಕು ಅಕ್ಕಂದಿರು ... ಆದರೆ ಪೇಟೆಮನೆಯಲ್ಲಿ ಹೆಣ್ಣು ನೋಡುವ ಶಾಸ್ತ್ರ ಮಾಡಿದ್ದರಿಂದ ನಂಗೆ ಅಸ್ಟು ಉಪ್ಪಿಟ್ಟು ಸಿಕ್ಕಿಲ್ಲ

ಭಾವಜೀವಿ... said...

ಸುಶ್ರುತ್,

ಎಂದಿನಂತೆ ನವಿರಾಗಿದೆ! ನಮ್ಮ ಮನೆಯಲ್ಲಿಯೆ ನಡೆದಂತಿದೆ!
ಈಗ ಎಲ್ಲಾ ಕಡೆ ಹುಡುಗಿಯರಿಗೆ ಎಷ್ಟೆ ಬರ ಇದ್ರೂ, ಕತೆ (ಅದೂ ಅದ್ಭುತವಾಗಿ) ಬರೆಯುವವರಿಗೆ ಮೊದಲ ಕಾಫಿಗೆ ವಿಕೆಟ್‌ ಬೀಳೋದು ಕಷ್ಟ ಅಲ್ಲ ಬಿಡಿ! :)

Anonymous said...

ಅದ್ಭುತ, ನವಿರಾದ ಲೇಖನ :) ಊರಿನ ಮಸಾಲೆ ದೋಸೆ ತಿ೦ದ ಹಾಗೆ ಆಯಿತು, ಕಾ೦ಕ್ರೀಟ್ ಉಪ್ಪಿಟ್ಟಲ್ಲ :)

ಸುಮ said...

ಚೆನ್ನಾಗಿದ್ದು ಸುಶ್ರುತ ಲಲಿತಪ್ರಭಂದ . ಮನೆಗೆ ಹೋಗಿ ಉಪ್ಪಿಟ್ಟಾದರೂ ತಿನ್ನು .... ಕಾಫಿಡೇಯಲ್ಲಿ ಕಾಫಿನಾದ್ರೂ ಕುಡಿ.. ಒಟ್ಟಲ್ಲಿ ಈ ವರ್ಷ ಮದುವೆಊಟ ಹಾಕ್ಸು ಅಷ್ಟೇ :)

Unknown said...

Uppittu kathe thumba chennagide, namma kade uppittu badlu vaggrne kathe galu iratha idvu, egella coffee day, pub world wicket gale. :-))

Unknown said...

ಉಪ್ಪಿಟ್ಟು ಕಥೆ ತುಂಬ ಚೆನ್ನಾಗಿದೆ, ನಮ್ಮ ಕಡೆ ವಗ್ಗರ್ಣೆ ಕಥೆಗಳು ಇರ್ತಾ ಇದ್ವು, ಎಗೆಲ್ಲಾ ಕಾಫಿ ಡೆ, ಪಬ್ ವರ್ಲ್ಡ ವಿಕ್ಕೆಟ್ಟುಗಳೆ :-))

ದಿವ್ಯಾ ಮಲ್ಯ ಕಾಮತ್ said...

ಸುಂದರ ಬರಹ :) ಉಪ್ಪಿಟ್ಟು ತಿಂದಷ್ಟು ಖುಷಿಯಾಯ್ತು :) (ನಂಗೆ ಉಪ್ಪಿಟ್ಟು ಇಷ್ಟ!)

Gubbachchi Sathish said...

ಚೆನ್ನಾಗಿತ್ತು. ಅಭಿನಂದನೆಗಳು.

ಚಿತ್ರಾ said...

ಸುಶ್ರುತ,

ನಿನ್ನ ಭಾವ ಓದಿದ್ನ ಈ ಬರಹ ನ ಅಂತ ಕೇಳವಳಾಗಿದ್ದಿ , ಕಾಫಿ ಡೇ ಯಲ್ಲಿ ಎದುರಿಗೆ ಕೂತವರು ಯಾರೋ ಅಂತ ನೂ ಪ್ರಶ್ನೆ ಇತ್ತು , ನಿಶ್ಚಿತಾರ್ಥದ ಸುದ್ದಿ ಹೇಳಲ್ಲೇ ಅಂತ ಪುಕಾರಿತ್ತು ನಂದು .. ಆದರೆ ಕೊನೀಗೆ ... ಕಾಲ್ಪನಿಕ ಅಂತ ಬರೆದು ಉಪ್ಪಿಟ್ಟು ತಿನ್ಸಿದ್ಯಲ್ಲ !
ಇರಲಿ ಬಿಡು . ಬರಹ ಸಖತ್ತಾಗಿದ್ದು . ಪಕ್ಕಾ .. ಊರಬದಿಗೆ ನಡೀತಿರದನ್ನೇ ಎದುರಿಗೆ ತಂದು ಇಟ್ಟಂಗೆ. ನೀ ಏನು ಮದವಿದ್ದೆ? ಬರೀ ಕಾಫಿ ಡೇ ಕಾಫಿ ನ ಅಥವಾ ಉಪ್ಪಿಟ್ಟು , ಕೇಸರಿ ಭಾತು .. ?? ಏನಾದ್ರು ತಿನ್ದ್ಕ ..ಅಡ್ಡಿಲ್ಲೆ ಯಂಗಕ್ಕೆ ಜಿಲೇಬಿ ಊಟ ಹಾಕ್ಸು ಅಷ್ಟೇ !

AKSHAY HEGDE said...

chenagiddu antu neenu uppit tinkand banje.....:)

Bhat Chandru said...

ಚೊಲೋ ಮಾಡಿ ಬರ್ದಿದಿರ. ಚಂದನೆಯ ಹಾಸ್ಯ ಲೇಖನದಿಂದ ನಗು ತರ್ಸಿದ್ದಕ್ಕೆ ಥ್ಯಾಂಕ್ಸ್.

Unknown said...

ಉಪ್ಪಿಟ್ಟು ಹಾಗೂ ಮೊದಲ ನೋಟದ ರುಚಿ.. ಅನುಭವಿಸಿಯೇ ಅರಿಯಬೇಕು..

ಉಷಾ... said...

ಯಾಕೆ ಯಾವಾಗಲು ಹುಡುಗಿ ನೋಡ್ಲಿಕ್ಕೆ ಬಂದಾಗ ಉಪ್ಪಿಟ್ಟು ಮಾಡ್ತಾರೆ ಅಂತ ಗೊತ್ತಿಲ್ಲ.. ನನ್ನ ನೋಡ್ಲಿಕ್ಕೆ ಬಂದಾಗಲೂ ಉಪ್ಪಿಟ್ಟೇ ಮಾಡಿದ್ರು.. ಆದ್ರೆ ಒಂದೇ ಸರ್ತಿ :)

ಬರೆದದ್ದು ಒಳ್ಳೆದಾಗಿದೆ.... ಬೇಗ ಉಪ್ಪಿಟ್ಟು ತಿನ್ನೋ ಭಾಗ್ಯ ನಿಮಗೂ ಬರಲಿ :)