Sunday, January 29, 2012

ಮತ್ತೆ ಬರೆದ ಕವಿತೆ


ಬರೆಯದೇ ಹಾಗೇ ಇದ್ದುಬಿಟ್ಟರೆ ಏನಾಗುತ್ತದೆ?
ಏನೂ ಆಗುವುದಿಲ್ಲ. ಖಾಲಿ ಹಾಳೆ. ತುಂಬು ಇಂಕಿನ ಪೆನ್ನು
ಕ್ಷಣಗಳನ್ನಾಚೀಚೆ ತಳ್ಳುತ್ತ ನಡೆದ ಲೋಲಕದ ಹೆಜ್ಜೆ ಸದ್ದು
ತಂತಿ ಬಿಗಿಹಿಡಿದೆಳೆದಷ್ಟೂ ಪ್ರವಹಿಸುವ ಸಿತಾರಿನ ಝರಿ
ಔಷಧಿ ನಿಲ್ಲಿಸಿದ್ದೇ ಮತ್ತೆ ಶುರುವಾಗುವ ವಾತ ಕಸ
ಹೇಗಿದ್ದ ಚಿನ್ನಾರಿಮುತ್ತನೂ ಬೆಳೆದು ಹೇಗೋ ಆಗಿಬಿಡುತ್ತಾನೆ.

ಹಿಡಿಯದೇ ಬಿಟ್ಟ ಮೀನುಗಳಿಗೋ, ತಮ್ಮ ಹೆಜ್ಜೆಯನ್ನೇ ಪತ್ತೆ-
ಹಚ್ಚಲಾಗದು ಎಂಬ ಜಂಬ. ಕಿವಿರುಗಳಲಿ ತುಂಬಿದ
ಬೆಚ್ಚನೆ ಉಸಿರಿನಲಿ ಗರ್ಭದಲ್ಲಡಗಿದ ಸಾವಿರ ಮೊಟ್ಟೆಗಳ ಗುಟ್ಟು.
ಭಾರ ಹೊಟ್ಟೆಯೆಳೆದು ಈಜಿದ್ದೇನು! ಇನ್ನೇನು ಕೆಲವೇ ದಿನ:
ಸಾವಿರ ಮರಿಗಳ ಈಜು ಸೃಷ್ಟಿಸಲಿರುವ ಪ್ರವಾಹದ ಮುನ್ಸೂಚನೆ
ಬೆಸ್ತನ ರೇಡಿಯೋದ ಹವಾ ವರ್ತಮಾನದಲ್ಲಿ ಬಂದೇ ಇಲ್ಲ.

ಅಕ್ವೇರಿಯಮ್ಮಿನ ನಕ್ಷತ್ರ ಮೀನು ಮನೆಯೆದುರಿಗೆ ತೂಗಿ
ಬಿಟ್ಟ ಆಕಾಶಬುಟ್ಟಿಯಲಿ ತನ್ನನೇ ಕಂಡು ದಿಗ್ಭ್ರಾಂತಗೊಂಡಿದೆ.
ಸಂತಾಪ ಸೂಚಕ ಸಭೆಯಲ್ಲಿ ಬೆಕ್ಕೊಂದು ಮ್ಯಾಂವ್‌ಗುಟ್ಟಿ
ಒಂದು ನಿಮಿಷದ ಮೌನದಲ್ಲಪಶೃತಿಯಾಗಿದೆ.
ಹತ್ತಂಗಡಿ ಹತ್ತಿಳಿದರೂ ಸರಿಯಾದ ಸೈಜಿನ ಉಂಗುರ ಸಿಗದೇ
ನಿಶ್ಚಿತಾರ್ಥ ನಿಗದಿಯಾದ ಜೋಡಿಗೆ ಕಳವಳವಾಗಿದೆ.

ಎಲ್ಲೂ ಸುದ್ದಿಯಾಗದ ಸಂಗತಿಗಳೇ ಬೇಕಿದೆ ಕವನಕ್ಕೆ
ಇನ್ನೂ ಮುದ್ದು ಮಾಡದ ಟೆಡ್ಡಿಯೇ ಬೇಕಿದೆ ಉಡುಗೊರೆಗೆ
ಮಶಿಯ ನಿಬ್ಬಿನಿಂದಕ್ಷರಗಳರಳರಳಿ ಬರುತ್ತಿವೆ ಉಕ್ಕಿ
ಮಶೀನಿನುಬ್ಬೆಯಲಿ ಬೆಂದರಳಿ ಬಂದ ಪಾಪ್‌ಕಾರ್ನ್
ಕೋನ ಪಾಕೀಟಿನಲಿ ಸಿದ್ದ ಕವಿತೆಯಂತೆಯೇ ಇದೆ
ಹಿಡಿ ಬೊಗಸೆ: ನಿನಗೂ ನಾಲ್ಕು ಕೊಡುವೆ.

19 comments:

ranjith said...

ಸಕ್ಕತ್ತಾಗಿದೆ ಸುಶ್ರುತ ಈ ಕವಿತೆ..

ಜ್ಯೋತಿ said...

Liked the last two lines most :-)

ISHWARA BHAT K said...

ಚೆನ್ನಾಗಿದೆ , ಹೊಸ ಮೌನದ ಗಾಳ !

umesh desai said...

good one sushruta

ಸಂಧ್ಯಾ ಭಟ್ said...

ತುಂಬಾ ದಿನ ಬರೆಯದೇ ಇರಬೇಡ...ಕವಿತೆಯ ಬಸಿರು ಭಾರ..

Dileep Hegde said...

Bombat

ವನಿತಾ / Vanitha said...

wow!!! hats off to those words and baredavrigoo :)

ಶಾಂತಲಾ ಭಂಡಿ said...

ಯಾವಾಗ ಬರ್ದ್ರೂ ಚಂದಾಗೇ ಬರೀತೀಯಲ್ಲ ಪುಟ್ಟಣ್ಣಾ...
ಹೆಂಗದು? :-)

ಪ್ರೀತಿಯಿಂದ,
ಪುಟ್ಟಕ್ಕ

Anuradha said...

ತುಂಬಾ ಚೆನ್ನಾಗಿದೆ ..ಅಭಿನಂದನೆಗಳು

Anuradha said...

ತುಂಬಾ ಚೆನ್ನಾಗಿದೆ ..ಅಭಿನಂದನೆಗಳು

Manjula said...

ಚಂದದ ಭಾವ.. "ಎಲ್ಲೂ ಸುದ್ದಿಯಾಗದ ಸಂಗತಿಗಳೇ ಬೇಕಿದೆ ಕವನಕ್ಕೆ" ಅಪ್ಪಟ ಸತ್ಯ... :-)

ಸಿಂಧು Sindhu said...

ಪ್ರೀತಿಯ ಸು-ಶ್ರುತ,

Beauty!
ತುಂಬಾ ಚೆನಾಗಿದ್ದು. ರಾಶಿ ಇಷ್ಟ ಆತು.
ಬರಿ.. ತುಂಬಾ ಬರಿ ಅಂತೇನಲ್ಲ, ಬರೀತಿರು. ಹೀಗೆ ಚೆಂದಕೆ, ಒಪ್ಪಕೆ, ಆಳಕ್ಕೆ.. ಒಂದು ಈಜು, ಒಂದು ಜೀಕು, ಆದರೊಂದು ಜ್ಹಲಕ್ ನಮಗೆ ಓದೋವ್ರಿಗೆ..

ಪ್ರೀತಿಯಿಂದ
ಸಿಂಧು

Keshav Kulkarni said...

ಚೆನ್ನಾಗಿದೆ!

ಮೃತ್ಯುಂಜಯ ಹೊಸಮನೆ said...

"ಮಶಿಯ ನಿಬ್ಬಿನಿಂದಕ್ಷರಗಳರಳರಳಿ ಬರುತ್ತಿವೆ ಉಕ್ಕಿ
ಮಶೀನಿನುಬ್ಬೆಯಲಿ ಬೆಂದರಳಿ ಬಂದ ಪಾಪ್‌ಕಾರ್ನ್"
ತುಂಬಾ ಧ್ವನಿಪೂರ್ಣ ಕಲ್ಪನೆ.

ತೇಜಸ್ವಿನಿ ಹೆಗಡೆ said...

Sakat! I second ಮೃತ್ಯುಂಜಯ ಹೊಸಮನೆ :)

mruganayanee said...

ತುಂಬ ದೊಡ್ಡವನಾಗಿಬಿಟ್ಟೆಯೇನೋ? ಕವಿತೆ ಭಾರ ಭಾರ.

Soumya. B said...

very nice .. :) ಅಕ್ವೇರಿಯಮ್ಮಿನ ನಕ್ಷತ್ರ ಮೀನು ಮನೆಯೆದುರಿಗೆ ತೂಗಿ
ಬಿಟ್ಟ ಆಕಾಶಬುಟ್ಟಿಯಲಿ ತನ್ನನೇ ಕಂಡು ದಿಗ್ಭ್ರಾಂತಗೊಂಡಿದೆ.
ಅದೇನು lines ಮಾರಾಯ್ರೆ .... :)

Sushrutha Dodderi said...

ಧನ್ಯವಾದ ಎಲ್ಲರಿಗೂ. :-)

@ ಮೃಗನಯನೀ,
ಹೌದು ಅನ್ಸುತ್ತೆ ಕಣೇ! ಮದ್ವೆ ಫಿಕ್ಸ್ ಆಗಿದೆ. :)

kanaada raaghava said...

ಭಾಳ ಚೆನಾಗಿದೆ ಬಾಸೂ, ಇಶ್ಟ್ ದಿನ ನೋಡೇ ಇರ್ಲಿಲ್ಲ. ವಾ!ಹವಾಪ್ರವಾಹದ ಪಾಪ್ ಕಾರ್ನಿನ ಕೋನಪಾಕೀಟಿಗೆ ನಾಮಕರಣದ ವೈಭವ! :-) ರಶೀದ್ ಖಾನರ ದುರ್ಗಾ ಆಲಾಪದಲ್ಲಿ ತಂಬೂರ ತಾನೇ ಮೈ ಮರೆತು ಅಪಶ್ರುತಿಯನ್ನು ಮೀಂಟಿದಂತೆ, ಶೃತಿ ಎಂಬ ಶಬ್ದವನ್ನು ಪ್ರಯೋಗಿಸಿದ್ದೀ. ಇಡೀ ಕವಿತೆ, "ರೂಪ.. ಜೋಗನ..." ಎಂಬ ದುರ್ಗಾ ರಾಗದ ವಿಲಂಬಿತ್ ಖಯಾಲನ್ನು ಉಸ್ತಾದರ ಕಂಠದಲ್ಲಿ ಕೇಳಿದಂತೆ ಇದೆ!