Wednesday, December 31, 2014

2014 ಎಂಬ ಡಾರ್ಕ್ ಚಾಕಲೇಟ್..


೨೦೧೪ ಎಂಬ ಡಾರ್ಕ್ ಚಾಕಲೇಟ್ ಬಾರ್ ಮುಗಿಯಲು ಬಂದಿದೆ. ಕಳೆದ ವರ್ಷ ಇದೇ ಹೊತ್ತಿಗೆ ಇಷ್ಟುದ್ದಕೆ ಕಂಡಿದ್ದ ಚಾಕಲೇಟ್, ಚೂರುಚೂರೇ ತಿನ್ನುತ್ತ ತಿನ್ನುತ್ತ ಈಗ ಕೊನೆಯ ಬೈಟ್ ಮಾತ್ರ ಉಳಿದಿದೆ. 2014 ಹೇಗಿತ್ತು? ಥೇಟ್ ಡಾರ್ಕ್ ಚಾಕಲೇಟಿನಂತೆಯೇ ಇತ್ತು: ಸ್ವಲ್ಪ ಸಿಹಿ, ಸ್ವಲ್ಪ ಕಹಿ, ಅಲ್ಲಲ್ಲಿ ಒಂದೆರಡು ದ್ರಾಕ್ಷಿ, ಗೋಡಂಬಿ! ಕೆಲವರಿಗೆ ಚಾಕಲೇಟ್ ಬಾರ್ ಜೊತೆ ಸರ್‌ಪ್ರೈಸ್ ಗಿಫ್ಟ್ ಐಟಮ್ ಸಹ ಸಿಕ್ಕಿದ್ದುಂಟು. ಇನ್ನು ಕೆಲವರ ಚಾಕಲೇಟ್ ತಿನ್ನುವಾಗಲೇ ಕೈಜಾರಿ ಬಿದ್ದು ಸಮಸ್ಯೆಗೆ ಸಿಲುಕಿದ್ದೂ ಉಂಟು.

ಕಳೆದ ವರ್ಷ ನಿಜಕ್ಕೂ ರಂಗುರಂಗಾಗಿತ್ತು. ಹಲವು ಬದಲಾವಣೆಗಳು, ಹೊಸತುಗಳು, ಹೆಮ್ಮೆ ಪಡಬಹುದಾದ ಸಾಧನೆಗಳು, ಗೆಲುವುಗಳು, ಪ್ರಶಸ್ತಿಗಳು, ಸಂತೋಷದ ಸುದ್ದಿಗಳು ಇದ್ದವು. ಹಾಗೆಯೇ, ಒಂದಷ್ಟು ಹಿನ್ನಡೆಗಳು, ಸೋಲುಗಳು, ಅವಮಾನಗಳು, ನೋವಿನ ಸಂಗತಿಗಳೂ ಇದ್ದವು.

2014ನೇ ಇಸವಿಯನ್ನು ಭಾರತದ ಮಹಾಚುನಾವಣಾ ವರ್ಷ ಅಂತಲೇ ಕರೆಯಲಾಗಿತ್ತು. ಒಂಭತ್ತು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಎನ್.ಡಿ.ಎ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಹೊಸ ಭರವಸೆ, ಅಪಾರ ನಿರೀಕ್ಷೆ ಮತ್ತೆ ಒಂದಷ್ಟು ಅನುಮಾನಗಳನ್ನು ಹೊತ್ತ ಹೊಸ ಸರ್ಕಾರದ ಆಡಳಿತ ಶುರುವಾಯಿತು. ವಿದೇಶಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ದನಿ ಮೊಳಗಿತು. ರಾಜಕೀಯ ಲೋಕದಲ್ಲಾದ ಬದಲಾವಣೆಯಿಂದ, ವಿಶ್ವದ ಬಲಾಡ್ಯ ರಾಷ್ಟ್ರಗಳು ದೊಡ್ಡ ಮಟ್ಟದಲ್ಲಿ ಭಾರತದ ಕಡೆ ದೃಷ್ಟಿ ಹರಿಸಿದ ವರ್ಷ ಇದು. ಹೊಸ ಸರ್ಕಾರದ ಯೋಜನೆ ಸ್ವಚ್ಛ ಭಾರತ ಅಭಿಯಾನ ಸಾಕಷ್ಟು ಸುದ್ದಿ ಮಾಡಿತು. ಕರ್ನಾಟಕದ ಸರ್ಕಾರವೂ ತನ್ನ ಕೆಲವು ಹೊಸ ಯೋಜನೆಗಳಿಂದ ಜನರ ಮೆಚ್ಚುಗೆ ಗಳಿಸಿತು. ಹಾಗೆಯೇ ಎರಡೂ ಸರಕಾರಗಳು ಕೆಲವು ವಿವಾದ, ಈಡೇರಿಸಲಾಗದ ಭರವಸೆಗಳಿಂದ ಮಾತಿಗೀಡಾದವು. ಆಂಧ್ರ ಪ್ರದೇಶವು ಇಬ್ಭಾಗವಾಗಿ ತೆಲಂಗಾಣವೆಂಬ ಹೊಸ ರಾಜ್ಯ ರಚನೆಯಾಯಿತು. ಮಂತ್ರಿ ಶಶಿ ತರೂರರ ಪತ್ನಿಯ ನಿಗೂಢ ಸಾವು ವರ್ಷಾರಂಭದಲ್ಲಿ ಸಾಕಷ್ಟು ಚರ್ಚೆಗೀಡಾಗಿತ್ತು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಸಂಬಂಧಿತ ಕೋರ್ಟ್ ಆದೇಶದಿಂದ ಬಂಧನಕ್ಕೊಳಗಾದರು. ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಕಾರು ಅಪಘಾತದಲ್ಲಿ ನಿಧನರಾದರು.

ಮಾಮ್ ನೌಕೆಯನ್ನು ಮಂಗಳ ಗ್ರಹದ ಕಕ್ಷೆ ಸೇರಿಸುವುದರ ಮೂಲಕ ಭಾರತ ಇತಿಹಾಸ ಸೃಷ್ಟಿಸಿತು. ಹಾಗೆಯೇ ಮಾನವಸಹಿತ ಬಾಹ್ಯಾಕಾಶ ಪಯಣಕ್ಕೆ ಮೊದಲ ಹೆಜ್ಜೆಯಾಗಿ ಮಾಡಿದ ಪ್ರಾಯೋಗಿಕ ಉಡಾವಣೆ ಸಹ ಯಶಸ್ವಿಯಾಗುವುದರೊಂದಿಗೆ ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತ ಸಾಧನೆ ಮೆರೆಯಿತು. ಈ ವರ್ಷದಲ್ಲಿ ವಿಶ್ವಾದ್ಯಂತ ಹಲವು ಹೊಸ ಆವಿಷ್ಕಾರಗಳು ಆದವು.  ಸ್ಮಾರ್ಟ್‍ಫೋನುಗಳು ಎಲ್ಲರ ಕೈಯಲ್ಲಿ ನಲಿದಾಡುವಷ್ಟು ಜನರೂ ತಂತ್ರಜ್ಞಾನಕ್ಕೆ ಹೊಂದಿಕೊಂಡರು. 240ಕ್ಕೂ ಹೆಚ್ಚು ಜನರಿದ್ದ ಮಲೇಶಿಯಾದ ವಿಮಾನವೊಂದು ಹೇಳಹೆಸರಿಲ್ಲದಂತೆ ಕಣ್ಮರೆಯಾದದ್ದು ಟೆಕ್ನಾಲಜಿ ಇಷ್ಟು ಮುಂದುವರೆದಿರುವ ಈ ಕಾಲದಲ್ಲೂ ಹೇಗೆ ಸಾಧ್ಯ ಅಂತ ಜನ ಕೇಳಿಕೊಳ್ಳುವಂತಾಯ್ತು.

ಭಯೋತ್ಪಾದನೆಯೆಂಬುದು ಈ ವರ್ಷವೂ ತನ್ನ ಕರಾಳ ಮುದ್ರೆಯನ್ನು ಛಾಪಿಸಿತು. ವಿಶ್ವದ ಹಲವೆಡೆ ಉಗ್ರರು ಅಟ್ಟಹಾಸ ಮೆರೆದರು. ಪೇಶಾವರದ ಶಾಲೆಯೊಂದರಲ್ಲೇ ನೂರಾರು ಅಮಾಯಕ ಮಕ್ಕಳ ರಕ್ತ ಹರಿದು ಜಗತ್ತೇ ಬೆಚ್ಚಿ ಬೀಳುವಂತಾಯಿತು.  ದೇಶದಲ್ಲಿ ಅನೇಕ ಭಾಗಗಳಲ್ಲಿ ನಕ್ಸಲ್ ದಾಳಿಗಳಾದವು. ದೇಶ-ದೇಶಗಳ, ರಾಜ್ಯ-ರಾಜ್ಯಗಳ ಗಡಿ ಗಲಾಟೆ ಅಂತ್ಯವನ್ನೇನು ಕಾಣಲಿಲ್ಲ.  ದೇಶದೆಲ್ಲೆಡೆ ದಾಖಲಾದ ಅತ್ಯಾಚಾರ ಪ್ರಕರಣಗಳು ಸಾರ್ವಜನಿಕರ ನಿದ್ದೆಗೆಡಿಸಿದ್ದಷ್ಟೇ ಅಲ್ಲ, ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನ ಬೀದಿಗಿಳಿದು ಪ್ರತಿಭಟಿಸಿದರು. ಮಹಿಳೆಯರ, ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಪಡುವಂತಹ ಸ್ಥಿತಿಗೆ ಕೊನೆ ಯಾವಾಗ ಎಂದು ಜನ ಮೇಲೆ ನೋಡುವಂತಾಯಿತು. ಕಾಶ್ಮೀರದಲ್ಲಿ ಉಂಟಾದ ಪ್ರವಾಹಕ್ಕೆ ನೂರಾರು ಜನ ಸಾವಿಗೀಡಾದರೆ ಸಾವಿರಾರು ಜನ ವಸತಿ-ವಸ್ತುಗಳನ್ನು ಕಳೆದುಕೊಂಡರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅನೇಕ ಬಹುಮತಿಗಳು, ಗೌರವಗಳು ಈ ವರ್ಷ ದೊರಕಿದವು. ಭೈರಪ್ಪನವರಿಗೆ ಘೋಷಣೆಯಾದ ರಾಷ್ಟ್ರೀಯ ಪ್ರಾಧ್ಯಾಪಕ ಗೌರವ, ನಾ. ಡಿಸೋಜಾರ ಅಧ್ಯಕ್ಷತೆಯಲ್ಲಿ ಮಡಿಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ, ಕುಂವೀಯವರಿಗೆ ಬಂದ ನೃಪತುಂಬ ಪ್ರಶಸ್ತಿ, ಕಿಞ್ಞಣ್ಣ ರೈರವರಿಗೆ ಸಿಕ್ಕ ಪಂಪ ಪ್ರಶಸ್ತಿ... ಹೀಗೆ ಹಲವು ಹಿರಿ-ಕಿರಿಯ ಸಾಹಿತಿಗಳಿಗೆ ಪ್ರಶಸ್ತಿ-ಮನ್ನಣೆಗಳು ದೊರೆತವು. ಹಾಗೆಯೇ ಯು.ಆರ್. ಅನಂತಮೂರ್ತಿ, ಯಶವಂತ ಚಿತ್ತಾಲರಂತ ಹಿರಿಯ ಸಾಹಿತಿಗಳ ನಿಧನ ಕನ್ನಡ ನಾಡಿಗೆ ದುಃಖ ತಂದಿತು. ದೇವರ ಕಲ್ಲಿನ ಮೇಲೆ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಹೇಳಿಕೆಯಂತಹ ಕೆಲವು ಮಾತುಗಳು ಸಭೆ-ಸಮಾರಂಭಗಳಲ್ಲಿ ಹೊರಬಿದ್ದು ವಿವಾದವನ್ನೂ ಸೃಷ್ಟಿಸಿದವು. ದೇವನೂರು ಮಹಾದೇವ ಅವರು ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡದ ಸರ್ಕಾರದ ನೀತಿಯನ್ನು ವಿರೋಧಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದರು. 

ಕನ್ನಡದಲ್ಲಿ ನೂರಾರು ಹೊಸ ಸಿನಿಮಾಗಳು ಬಿಡುಗಡೆಯಾದವು. ಕೆಲವು ರೀಮೇಕ್, ಕೆಲವು ಸ್ವಮೇಕ್. ಕೆಲವು ಗೆದ್ದವು, ಕೆಲವು ಸೋತವು. ‘ಉಳಿದವರು ಕಂಡಂತೆ’ ತರಹದ ಹೊಸ ಪ್ರಯತ್ನವನ್ನು ಜನ ಮೆಚ್ಚಿಕೊಂಡರು. ರಂಗಭೂಮಿಯಲ್ಲೂ ಅನೇಕ ಪ್ರಯೋಗಗಳಾದವು. ಸಿ.ಆರ್. ಸಿಂಹ, ವಿ.ಕೆ. ಮೂರ್ತಿ, ಮಾಯಾ ರಾವ್ ಸೇರಿದಂತೆ ಕೆಲವು ಕಲಾವಿದರು ನಮ್ಮನ್ನಗಲಿದರು. ಬಾಲಿವುಡ್ಡಿನಲ್ಲಿ ಹ್ಯಾಪಿ ನ್ಯೂ ಇಯರ್, ಬ್ಯಾಂಗ್ ಬ್ಯಾಂಗ್ ಮುಂತಾದ ಚಿತ್ರಗಳು ಸದ್ದು ಮಾಡಿದರೆ, ರಜನೀಕಾಂತ್ ತಮ್ಮ ಲಿಂಗಾ ಮೂಲಕ ಸೂಪರ್‌ಸ್ಟಾರ್‌ಗಿರಿ ಮೆರೆದರು.

ಇಲ್ಲಿ ಕ್ರಿಕೆಟ್ಟಿಗೆ ಮಾತ್ರ ಮನ್ನಣೆ, ಜನ ಕ್ರಿಕೆಟ್ ಬಿಟ್ಟು ಬೇರೆ ಏನೂ ನೋಡೋದೇ ಇಲ್ಲ ಈ ದೇಶದಲ್ಲಿ ಅನ್ನೋ ಮಾತಿಗೆ ಅಪವಾದದಂತೆ ಈ ವರ್ಷ ಕಬಡ್ಡಿ ಆಟ ಜನಪ್ರಿಯವಾಯಿತು. ಒಂದು ಕಡೆ ಭಾರತ ಕ್ರಿಕೆಟ್ ತಂಡ ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್‌ಗಳ ವಿರುದ್ಧದ ಏಕದಿನ ಸರಣಿಗಳನ್ನು ಗೆಲ್ಲುತ್ತಿದ್ದರೆ, ಇತ್ತ ಸ್ಪೋರ್ಟ್ಸ್ ಛಾನೆಲ್ಲುಗಳು ಪ್ರೊ-ಕಬಡ್ಡಿ ಸರಣಿಯನ್ನು ನಿರಂತರ ಪ್ರಸಾರ ಮಾಡಿದವು.  ಜನ ಎರಡನ್ನೂ ಮುಗಿಬಿದ್ದು ನೋಡಿದರು. ವರ್ಷಾಂತ್ಯದಲ್ಲಿ ಭಾರತದ ಪುರುಷ ಮತ್ತು ಮಹಿಳೆಯರ ತಂಡಗಳೆರಡೂ ಕಬಡ್ಡಿ ವಿಶ್ವಕಪ್ ಗೆದ್ದುಕೊಂಡವು. ಮೇರಿ ಕೋಮ್ ಏಶಿಯನ್ ಗೇಮ್ಸ್ ಬಾಕ್ಸಿಂಗಿನಲ್ಲಿ ಚಿನ್ನದ ಪದಕ ಗೆದ್ದರು. ಕಾಮನ್ವೆಲ್ತ್ ಗೇಮ್ಸಿನಲ್ಲಿ ಭಾರತ 64 ಪದಕಗಳನ್ನು ಬಾಚಿಕೊಂಡಿತು. ಸೈನಾ ನೆಹವಾಲ್, ಜೋಕೋವಿಕ್‌ರ ವಿಕ್ರಮಗಳನ್ನೂ ನಾವೆಲ್ಲ ನೋಡಿ ಖುಷಿಪಟ್ಟೆವು.

...ಹೀಗೇ ಹಿಂದೆ ನೋಡುತ್ತ ಹೋದರೆ ಅದೆಷ್ಟೋ ಖುಷಿಯ ಸುದ್ದಿಗಳು, ಹಿಗ್ಗಿನ ನಡೆಗಳು, ಗೆಲುವಿನ ಕುಣಿತಗಳು, ಕಳಿತು ಸಿಹಿಯಾದ ಫಲಗಳು, ಇಂಥದ್ದೂಂತ ಅರ್ಥೈಸಲಾಗದ ಘಟನೆಗಳು, ವಿಷಾದದ ಕ್ಷಣಗಳು, ಜರ್ಜರಿತರಾಗಿ ಕುಸಿದ ಗಳಿಗೆಗಳು, ಯಾರೋ ಹಿಡಿದೆತ್ತಿ ಕೂರಿಸಿದ ನಿಸ್ವಾರ್ಥ ಕ್ಷಣಗಳು, ಆವರಿಸಿದ ದಟ್ಟ ಕಾರ್ಮೋಡದ ನಡುವೆಯೂ ಹೊಳೆದ ಬೆಳ್ಳಿಗೆರೆಗಳು... ಪಾಕಿಸ್ತಾನದ ಮಲಾಲಾ, ಭಾರತದ ಕೈಲಾಶ್ ಸತ್ಯಾರ್ಥಿ ಇವರುಗಳಿಗೆ ಪ್ರತಿಷ್ಠಿತ ನೋಬೆಲ್ ಶಾಂತಿ ಪುರಸ್ಕಾರ ದೊರೆತಿದ್ದು ಈ ವರ್ಷದ ಬೆಳ್ಳಿಚುಕ್ಕಿಗಳಲ್ಲೊಂದು.

ಇವೆಲ್ಲ ಲೋಕದ ಸುಖ-ದುಃಖಗಳಾದವು. ನಾವು ನೋಡಿದ, ಕೇಳಿದ, ಓದಿದ ಸುದ್ದಿಗಳಾದವು. ನಮ್ಮೆದುರಿನವರ ಕತೆಯಾಯಿತು. ಆದರೆ ನಮ್ಮ ಬದುಕಿನಲ್ಲಿ ಏನಾಯಿತು? ನಮ್ಮ ವೈಯಕ್ತಿಕ ಬದುಕಿನಲ್ಲಿ ಮೇಲೇರಿದ್ದು, ಕೆಳಗಿಳಿದದ್ದು, ಸಂಭ್ರಮಾಚರಣೆ ಮಾಡಿದ್ದು, ಶೋಕದಲ್ಲಿ ಮಿಂದೆದ್ದದ್ದು, ನಕ್ಕಿದ್ದು, ಬಿಕ್ಕಳಿಸಿದ್ದು, ಮುಂದೇನೆಂದು ತೋಚದೆ ನಿಂತಿದ್ದು, ಮೌನದಲಿ ಆಲೋಚಿಸಿದ್ದು... ಕಾಣುವವರ, ಕಾಣದವರ ನಲಿವು-ನೋವುಗಳಿಗೆ ಸ್ಪಂದಿಸುತ್ತಾ ನಾವೂ ಒಂದು ವರ್ಷ ಹಳಬರಾದೆವು. ನಮ್ಮಿಷ್ಟದವರು ಗೆದ್ದಾಗ ನಾವೂ ಪ್ರಫುಲ್ಲಗೊಂಡೆವು, ಅವರ ನಗು ನೋಡಿ ನಾವೂ ಮುಖವರಳಿಸಿದೆವು; ನೋವು ಕಂಡಾಗ ನಾವೂ ಮುಗುಮ್ಮಾದೆವು, ಸಹಾಯ ಹಸ್ತ ಚಾಚಿದೆವು; ಅನ್ಯಾಯ ಕಂಡಾಗ ಪ್ರತಿಭಟಿಸಿದೆವು: ಕೆಲವೊಮ್ಮೆ ಬೀದಿಗಿಳಿದು, ಕೆಲವೊಮ್ಮೆ ಫೇಸ್‌ಬುಕ್ಕಿನ ಗೋಡೆಯಲ್ಲಿ, ಇನ್ನು ಕೆಲವೊಮ್ಮೆ ಮೌನದಲ್ಲಿ.

ಕಾಲದ ಹಕ್ಕಿ ಹಾರುತ್ತ ಹಾರುತ್ತ ಒಂದು ದೊಡ್ಡ ಯೋಜನವನ್ನೇ ದಾಟಿದೆ. ಈಗ ಮುಂದೆ ನೋಡಿದರೆ 2015 ಎಂಬ ಹೊಸದೇ ಆದ ಚಾಕಲೇಟ್ ಬಾರ್ ಚಂದದ ಝರಿ ಹೊದ್ದು ಫಳಫಳ ಹೊಳೆಯುತ್ತ ನಿಂತಿದೆ. ಹೊಸ ವರ್ಷದೆಡೆಗೆ ಆಶಾವಾದಿಗಳಾಗಿ ಹೆಜ್ಜೆ ಹಾಕಬೇಕಿದೆ. ಹೊಸ ಚಾಕಲೇಟಿನ ರ್ಯಾಪರ್ ಬಿಚ್ಚಿ ತೆರೆದು, ಹೊಸ ರುಚಿಯ ಆಸ್ವಾದಿಸಲು ತಯಾರಾಗಬೇಕಿದೆ. ಹೊಸ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ಹೊಸ ಕನಸು ಕಾಣಬೇಕಿದೆ.

‘ಹೊಸ ವರ್ಷವಾ, ಏನಿದೆ ಅದರಲ್ಲಿ, ಏನಿದೆ ಹೊಸತನ’ –ಎನ್ನದೇ, ಹೊಸ ಕ್ಯಾಲೆಂಡರ್ ತಂದು ಜಗುಲಿಯಲ್ಲಿ ನೇತುಹಾಕಬೇಕಿದೆ. ಹೊಸ ವರ್ಷ ಎಂದಾಕ್ಷಣ ಎಲ್ಲ ವಸ್ತು, ಊರು, ಕೆಲಸ, ಒಡನಾಡುವ ವ್ಯಕ್ತಿಗಳೂ ಹೊಸದೇ ಆಗಬೇಕಿಲ್ಲ. ಹೊಸತನಕ್ಕೆ ಹಂಬಲಿಸುವ ಮನಕ್ಕೆ ಮತ್ತೇನೂ ಬೇಡ: ಅದೇ ಹಳೇ ಪುಸ್ತಕಕ್ಕೆ ಒಂದು ಹೊಸ ಬೈಂಡ್, ಕಳೆದ ವರ್ಷದ ಆಕಾಶಬುಟ್ಟಿಗೆ ಬೇರೆ ಬಣ್ಣದ ಬಲ್ಬ್, ಹಳೆಯ ಕನ್ನಡಕಕ್ಕೆ ಹೊಸ ಫ್ರೇಮ್, ಮೊಬೈಲಿಗೊಂದು ಕಲರ್ ಕಲರ್ ಕವರ್, ಹೊಲದ ಬೇಲಿಯ ಗೂಟಗಳಿಗೆ ಹೊಸದಾಗಿ ಕಟ್ಟಿದ ದಬ್ಬೆ, ಒಗ್ಗರೆಣೆಗೆ ಸ್ವಲ್ಪ ವ್ಯತ್ಯಾಸ ಮಾಡಿ ಹಾಕಿದ ಸಂಬಾರ ಪದಾರ್ಥ, ದಿನಚರಿಯಲ್ಲಿ ಮಾಡಿಕೊಂಡ ಕೊಂಚ ಬದಲಾವಣೆ, ಡೆಸ್ಕ್‍ಟಾಪಿಗೆ ಹೊಸದೊಂದು ವಾಲ್‌ಪೇಪರ್ ಹಾಕಿದರೂ ಸಾಕು- ಏನೋ ಹೊಸತನ ನಮ್ಮನ್ನಾವರಿಸುತ್ತದೆ. ಹೊಸ ಉಲ್ಲಾಸದ ಹೂಮಳೆಯಾಗುತ್ತದೆ. ಹೊಸ ಉತ್ಸಾಹಕ್ಕದು ನಾಂದಿಯಾಗುತ್ತದೆ.

ಅಂತಹ ಸಣ್ಣಸಣ್ಣ ಹೊಸತನಗಳನ್ನು ಬೆರೆಸಿ ತಯಾರಿಸಿದ ಚಾಕಲೇಟನ್ನು ಹೊಸ ವರ್ಷವೆಂಬ ಬಣ್ಣದ ಬುಟ್ಟಿಯಲ್ಲಿಟ್ಟುಕೊಂಡು ತನ್ನ ಕೊಕ್ಕಿನಲ್ಲಿ ಕಚ್ಚಿಕೊಂಡು ಬರುತ್ತಿರುವ ಕಾಲದ ಹಕ್ಕಿಯನ್ನು ಪ್ರೀತಿಯಿಂದ ಬರಮಾಡಿಕೊಳ್ಳೋಣ. ಹೊಸ ಚಾಕಲೇಟಿನಲ್ಲಿ ಜಾಸ್ತಿ ಸಿಹಿಯಿರಲಿ, ಕಮ್ಮಿ ಕಹಿಯಿರಲಿ, ಹೆಚ್ಚೆಚ್ಚು ಗೋಡಂಬಿ-ದ್ರಾಕ್ಷಿಗಳು ಸಿಗಲಿ ಅಂತ ಹಾರೈಸೋಣ. ಹೊಸ ವರುಷದ ಶುಭಾಶಯಗಳು.

[ಉದಯವಾಣಿ  ಸಾಪ್ತಾಹಿಕಕ್ಕಾಗಿ ಬರೆದುಕೊಟ್ಟಿದ್ದು. 'ಹಕ್ಕಿ ಹಾರುತಿದೆ ನೋಡಿದಿರಾ? ಅದು ಕಾಲದ ಹಕ್ಕಿ' ಎಂಬ ಶೀರ್ಷಿಕೆಯಡಿ ಪ್ರಕಟವಾಗಿತ್ತು.]

4 comments:

Suma Udupa said...

Happy New Year to you!!

Vishwanatha Krishnamurthy Melinmane said...

Hi Sushrutha,
Chocolate Dark heLiddakke any specific reason ?

--
Vishwa

Sushrutha Dodderi said...

@Vishwanatha,

ಏನಿಲ್ಲ. ಡಾರ್ಕ್ ಚಾಕಲೇಟ್ ಕಹಿ ಮತ್ತು ಸಿಹಿಯಾಗಿರುತ್ತೆ ಅಲ್ವಾ, ಅದಕ್ಕೇ. ದಿನಗಳೂ ಹಾಗೇ ಅಂತ. ಆ ಉಪಮೆಯನ್ನ ಕೊಟ್ಟೆ.

ಅಪ್ಪ-ಅಮ್ಮ(Appa-Amma) said...

Belated Happy New Year !

Hope the dark chocolate was in the freezer and still edible even after almost a month :)