Friday, April 29, 2016

ಸಂಭ್ರಮಿಸಲೊಂದು ನಿಮಿತ್ತ



ಯಾವಾಗ ಶುರುವಾಯಿತೋ ಬೆಳ್ಳಿಗೆರೆಗಳ ಅಟ್ಟಹಾಸ ಅಪ್ಪನ ಕೇಶರಾಶಿಯ ನಡುವೆ: ಈಗ ಕನ್ನಡಿ ಸ್ಟಾಂಡಿನ ಮೇಲೊಂದು ಪುಟ್ಟ ಬೋಗುಣಿ ಕತ್ತಲ ಕರಗಿಸಿ ಮಾಡಿದ ಕರೀ ಕಣಕ- ಜತೆಗೊಂದು ಕೆದರಿದ ಬ್ರಶ್ಶು. ಮೊದಮೊದಲು ಅಲಕ್ಷಿಸಿ, ಕೊನೆಗೆ ತುಸುವೇ ಮುತುವರ್ಜಿ ವಹಿಸಿ ಬಾಗಿಸಿ ವಾಲಿಸಿ ಎತ್ತರಿಸಿ ಕೈಯುದ್ದ ಮಾಡಿ ಸರೀ ಹಿಡಿದು ಕನ್ನಡಿ ಚೂರ್ಚೂರೆ ನಾಚಿಕೆ, ಚೂರ್ಚೂರೆ ಹಿಂಜರಿಕೆ, ಚೂರ್ಚೂರೆ ಅಂಜಿಕೆ- ವಯಸು ಮುಚ್ಚಿಡಲು ಮರೆಮಾಚಲು ಮುಂದೂಡಲು ಹರಸಾಹಸ. ನಿಧಾನಕೆ ಅಮ್ಮನಿಗೂ ವಯಸ್ಸಾದ ಹಾಗೆ ಭಾಸ... ಮೇಲ್ಮೆತ್ತಿನಲ್ಲಿ ಹಾಗೇ ಬಿಟ್ಟ ಹಳೆಯ ಕುರ್ಚಿಗೆ ಬಿಂದಿಲು ಹಿಡಿದು, ವರಲೆ ಹುಳುಗಳ ಸುಗ್ರಾಸ ಕೂಳಿಗೆ ಅಷ್ಟಷ್ಟೆ ಕರಗುವ ಕೋಳು. ಅಪ್ಪ ತೋಟಕ್ಕೆ ಹೋದ ಸಮಯ ನೋಡಿ ಅಮ್ಮನ ಮುಂಗುರುಳು ಸವರುವ ಕರಿಕುಸುಮಗಳು. ‘ಥೋ ಥೋ, ಸರಿಯಾಗಲ್ಯೇ, ಹಂಗಲ್ದೇ’ -ಅನುನಯದಿಂದಲೇ ಅಮ್ಮನಿಗೆ ಸಹಾಯ ಮಾಡುವ ಅಪ್ಪ. ಈಗಲೂ ಸಿಗ್ಗಿಗೆ ಕೆಂಪಡರುವ ಅಮ್ಮನ ಮುದ್ದುಮೊಗ. ಕನ್ನಡಿಗಂತೂ ಭೇದಭಾವವಿಲ್ಲ. ಮೊಸರಲ್ಲಿ ಕಲಸಿ ಚಪ್ಚಪ್ಪೆನಿಸುತ್ತ ಸವರುತ್ತಿದ್ದಾಳೆ ಹೆಂಡತಿ ನನ್ನದೇ ತಲೆಗೆ ಇಂದು ಮದರಂಗಿ. ಕೇಳಿದವರಿಗೆ ಕ್ಲೋರಿನ್ ನೀರಿನ ಸ್ನಾನದ ನೆಪ; ಸಿಟಿಲೈಫಿಗೆ ಶಾಪ. ಬೋರಿಗೆ ಬರುವ ಬೈಕಿನ ಎಂಜಿನ್ನು. ಸವೆಸವೆದೇ ಹರಿದ ಬನಿಯನ್ನು. ಅಂಚೆ ಕಚೇರಿಯ ಮುಂದಣ ಡಬ್ಬಿಗೆ ತುಕ್ಕು ಹಿಡಿಯದಂತೆ ಕೆಂಪು ಮಾಲೀಶು. ಇವತ್ತು ಊಟದ ತಟ್ಟೆಯಲ್ಲೊಂದು ಬಿಳಿಗೂದಲು ಸಿಕ್ಕು ಅಪ್ಪನದೋ, ಅಮ್ಮನದೋ, ನನ್ನದೋ ತಿಳಿಯದೇ ಜೋರು ನಗೆ. ಮೇಯಲು ಬೆಟ್ಟಕ್ಕೆ ಹೋಗಿ ಎಂದೋ ಕಳೆದುಹೋಗಿದ್ದ ದನವೊಂದು ಮನೆ ಹುಡುಕಿಕೊಂಡು ಬಂದು ಆಶ್ಚರ್ಯ, ಸಂತೋಷ, ಗೋಗ್ರಾಸ. ತಳಸಾರಿದ ಬಾವಿಯಲ್ಲಿ ಜಲವೊಡೆದ ಹಾಗೆ ಎಲ್ಲಿಲ್ಲದ ಉಲ್ಲಾಸ. ಸಂಭ್ರಮಿಸಲೊಂದು ಸಣ್ಣ ನಿಮಿತ್ತ. ಬಣ್ಣ ಬೇಗಡೆಯೆಲ್ಲ ಆಯಾ ಕ್ಷಣದ ಚಿತ್ತ. * * * ನನ್ನೀ ಬ್ಲಾಗು ‘ಮೌನಗಾಳ’ ಶುರುವಾಗಿ ಮೊನ್ನೆ 26ಕ್ಕೆ ಹತ್ತು ವರ್ಷ ಸಂದಿತು. ಅಂಬೆಗಾಲಲ್ಲಿ ಪ್ರಾರಂಭವಾದ ಈ ಗೀಚಿನ ನಡಿಗೆ ಕೆಲವೊಮ್ಮೆ ಬಿರುಸಾಗಿ, ಕೆಲವೊಮ್ಮೆ ಕುಂಟುತ್ತ, ಕೆಲವೊಮ್ಮೆ ಓಟವಾಗಿ, ಕೆಲವೊಮ್ಮೆ ಸಮವೇಗವಾಗಿ ಸಾಗಿ, ಒಮ್ಮೊಮ್ಮೆ ಮಾಗಿದಂತೆ ಮತ್ತೊಮ್ಮೆ ಮಾಸಿದಂತೆ ಎನಿಸಿ, ಆಗಾಗ ಬಣ್ಣ ಬೇಗಡೆ ಹಚ್ಚಿಕೊಂಡು ಅಲ್ಲೇ ಚಿಗುರಿ ಮೈತಳೆದು ಹೊಳೆದು ಬೆಳೆದು ಮತ್ಮತ್ತೆ ಸೊರಗಿ ಮತ್ಮತ್ತೆ ಎದ್ದು ನನಗೆ ಖುಷಿ ಕೊಡುತ್ತಾ ಮುಂದುವರೆದಿದೆ. ಈ ಪಯಣದಲಿ ಜತೆಗಾರರಾದ ನಿಮಗೆಲ್ಲಾ ಆಭಾರಿಯೆನ್ನುತ್ತಾ...

2 comments:

Pradeep H said...

Very nice. Enjoyed reading.

ಸುಮ said...

ಶುಭಾಶಯಗಳು, ನಿನ್ನ ಗೀಚಿನ ನಡಿಗೆ ಯಾವಾಗಲೂ ಬಿರುಸಾಗಿಯೇ ಇರಲಿ ಎಂಬುದು ನನ್ನ ಹಾರೈಕೆ :)