Friday, June 01, 2018

ಕಸದಿಂದಲೇ ವಿರಸ

ಹೋಯ್, ವಿಷಲ್ ಊದಿದ ಶಬ್ದ.. ಕಸದವ್ರು ಬಂದಿದಾರೆ ಅನ್ಸುತ್ತೆ ನೋಡ್ರೀ ಅಂತ ಹೆಂಡತಿ ಕೂಗಿದಳು ಅದ್ರೆ ನಾನು ಮಾಡುತ್ತಿದ್ದ ಕೆಲಸವನ್ನು ಅಲ್ಲಿಗೇ ಬಿಟ್ಟು ಟೆರೇಸಿಗೆ ಓಡಬೇಕು ಅಂತ ಅರ್ಥ. ಇದು ನಮ್ಮ ಮನೆಯಲ್ಲಿ ಹೆಚ್ಚುಕಮ್ಮಿ ಪ್ರತಿದಿನ ಬೆಳಿಗ್ಗೆ ನಡೆಯುವ ಪ್ರಸಂಗ. ನಮ್ಮ ಮನೆ ಇರುವುದು ರಾಜಧಾನಿಯ ಜನನಿಬಿಡ ವಸತಿ ಪ್ರದೇಶಗಳೊಂದರಲ್ಲಿ, ಕಟ್ಟಡದ ಮೂರನೇ ಮಹಡಿಯಲ್ಲಿ. ಮನೆ ರಸ್ತೆಗೆ ಅಭಿಮುಖವಾಗಿ ಇರದೆ ಕಟ್ಟಡದ ಹಿಂಭಾಗದಲ್ಲಿರುವುದರಿಂದ ನಮಗೆ ರಸ್ತೆಯಲ್ಲಿ ಏನು ನಡೆಯುತ್ತಿದೆ ಅಂತ ನೋಡಬೇಕೆಂದರೆ ಕೆಳಗಿಳಿದು ರಸ್ತೆಗೇ ಬರಬೇಕು ಅಥವಾ ಟೆರೇಸಿಗೆ  ಹೋಗಿ ಬಗ್ಗಬೇಕು. ಮತ್ತೂ ಒಂದು ಸಮಸ್ಯೆಯೆಂದರೆ, ನಮ್ಮ ಮನೆಯ ಸುತ್ತಲೂ ಮೂರ್ನಾಲ್ಕು ರಸ್ತೆಗಳು ಹತ್ತತ್ತಿರದಲ್ಲೇ ಇರುವುದು. ಹೀಗಾಗಿ ಕಸದ ತಳ್ಳುಗಾಡಿಯವರು ಬಂದು ವಿಷಲ್ ಊದಿದಾಗ ಅವರು ನಮ್ಮ ಮನೆಯಿರುವ ರಸ್ತೆಯಲ್ಲೇ ಇದ್ದಾರೋ ಅಥವಾ ಹಿಂದಿನ / ಅಕ್ಕಪಕ್ಕದ ಯಾವುದಾದರೂ ರಸ್ತೆಯಲ್ಲಿದ್ದಾರೋ ಎಂಬುದು ತಿಳಿಯದೇ ಹೋಗುವುದು. ಈ ಕಾರಣದಿಂದ ಪ್ರತಿದಿನ ವಿಷಲ್ ಸದ್ದು ಕೇಳಿದಾಗಲೂ ನಾನು ಟೆರೇಸಿಗೆ ಓಡಿ, ಕಸದ ಗಾಡಿ ನಮ್ಮ ರಸ್ತೆಯಲ್ಲೇ ಇದೆ ಮತ್ತು ಅವರು ಹಸಿ /ಒಣ ಕಸವನ್ನೇ ಸ್ವೀಕರಿಸುತ್ತಿದ್ದಾರೆ ಅಂತ ಖಚಿತಪಡಿಸಿಕೊಂಡು ನಂತರ ಡಸ್ಟ್‌‍ಬಿನ್ನು ಹಿಡಿದು ಕೆಳಗೋಡಬೇಕು. ಹಾಗೆ ನೋಡದೇ ಕೇವಲ ಶಬ್ದವನ್ನಾಧರಿಸಿ ಶಬ್ದವೇಧಿ ಕಲಿತವನ ಗತ್ತಿನಲ್ಲಿ ನಮ್ ರೋಡಲೇ ಇದಾರೆ ಬಿಡು ಅಂದುಕೊಂಡು ಕೆಳಗಿಳಿದೆನೋ, ಖಾಲಿ ರಸ್ತೆ ನೋಡಿಕೊಂಡು, ವಾಸನೆ ಸೂಸುವ ಕಸದ ಬುಟ್ಟಿಯೊಂದಿಗೆ ವಾಪಸ್ ಮೆಟ್ಟಿಲು ಹತ್ತಬೇಕು. 
 
ಬೆಂಗಳೂರಿಗೆ ಬಂದಮೇಲೆ ನಾನು ಅನುಭವಿಸಲು ಶುರುಮಾಡಿದ ಮಹಾನ್ ಕಷ್ಟಗಳಲ್ಲಿ ಇದೂ ಒಂದು. ಊರಲ್ಲಾದರೆ ಈ ಕಸದ ವಿಲೇವಾರಿ ಇಷ್ಟೆಲ್ಲಾ ಕಷ್ಟ ಎಂದೂ ಆದದ್ದಿಲ್ಲ. ಯಾವ ಕಸವಿರಲಿ, ಅದು ಮಣ್ಣಲ್ಲಿ ಕರಗುವ ವಸ್ತು ಎಂದಾದರೆ ಬೀಸಾಡಲು ಗೊಬ್ಬರದ ಗುಂಡಿಯೊಂದು ಇದ್ದೇ ಇರುತ್ತಿತ್ತು. ಕರಗದ ವಸ್ತುವೋ, ಸುಡಲು ಬಚ್ಚಲೊಲೆ ಸಿದ್ಧವಿರುತ್ತಿತ್ತು. ಉಂಡು ಮಿಕ್ಕಿದ ಆಹಾರ ಪದಾರ್ಥ ನಮಗೆ ಎಂದೂ ವ್ಯರ್ಥವೆನಿಸಿದ್ದಿಲ್ಲ: ಅದನ್ನು ತಿನ್ನಲು ಕೊಟ್ಟಿಗೆಯಲ್ಲಿ ಜಾನುವಾರುಗಳು ಕಾಯುತ್ತಿರುತ್ತಿದ್ದವು. ಅನ್ನ ಮಿಕ್ಕರೆ ಹಿಂಡಿಯ ಜೊತೆ, ಸಾರು ಮಿಕ್ಕರೆ ಅಕ್ಕಚ್ಚಿನ ಜೊತೆ ಅವು ಜಾನುವಾರಿನ ಹೊಟ್ಟೆ ಸೇರುತ್ತಿದ್ದವು. ಮನೆ ಗುಡಿಸಿದಾಗ ಸಿಕ್ಕ ಧೂಳನ್ನಾಗಲೀ, ಅಂಗಳ ಗುಡಿಸಿದಾಗ ಸಂಗ್ರಹವಾದ ತರಗೆಲೆಗಳನ್ನಾಗಲೀ, ತಲೆ ಬಾಚಿದಾಗ ಉದುರಿದ ಕೂದಲನ್ನಾಗಲೀ, ಹಣ್ಣು ಬಿಡಿಸಿದಾಗ ಉಳಿದ ಸಿಪ್ಪೆಯನ್ನಾಗಲೀ ಎಲ್ಲಿಗೆಸೆಯಬೇಕು ಅಂತ ನಾವೆಂದೂ ಯೋಚಿಸುವಂತಾಗಿರಲಿಲ್ಲ. ಅವಕ್ಕೆಲ್ಲ ಬೇಕಾದಷ್ಟು ಜಾಗ ಮತ್ತು ಅವಕಾಶ ಹಳ್ಳಿಯ ಮನೆಯಲ್ಲಿರುತ್ತಿತ್ತು.

ಆದರೆ ಬೆಂಗಳೂರಿನ ಮನೆಯಲ್ಲಿ ಹಾಗಲ್ಲ. ಉಪ್ಪಿಟ್ಟಿನ ತಟ್ಟೆಯಲ್ಲಿ ಸಿಕ್ಕ ಒಂದು ಮೆಣಸಿನಕಾಯಿಯ ಚೂರೂ ಬೃಹತ್ ಕಸದಂತೆ ಕಾಣತೊಡಗಿತು. ಅದನ್ನು ತಟ್ಟೆಯಲ್ಲೇ ಬಿಡುವುದೋ ಅಥವಾ ತಿಂದುಬಿಡುವುದೋ? ಬಿಟ್ಟರೆ ಅದನ್ನು ಎಸೆಯುವ ಸಮಸ್ಯೆ; ಹಾಗಂತ ತಿಂದರೆ ಖಾರ ನೆತ್ತಿಗೇರಿ...  

ನಾನು ಮೊದಲಿಗೆ ಇದ್ದ ಬ್ಯಾಚುಲರ್ಸ್ ಬಿಡಾರದಲ್ಲಿ ಇದು ಭಯಂಕರ ಸಮಸ್ಯೆಯಂತೆ ಅನಿಸಿರಲಿಲ್ಲ. ಆ ಮನೆಯಿದ್ದುದು ಗ್ರೌಂಡ್ ಫ್ಲೋರಿನಲ್ಲಿ. ಅಲ್ಲದೇ ತುಂಬಿದ ಕಸದ ಬುಟ್ಟಿಯನ್ನು ಗೇಟಿನ ಹೊರಗೆ ಇಟ್ಟರೆ ಸಾಕು, ಕಸದವರೇ ಅದನ್ನು ಎತ್ತಿ ಗಾಡಿಗೆ ಸುರಿದುಕೊಂಡು ಹೋಗುತ್ತಿದ್ದರು. ಹಾಗೂ ಮರೆತರೂ ಕಸದ ಗಾಡಿಯವರು ಆಗ ಬಾರಿಸುತ್ತಿದ್ದ ಟಿಣಿಟಿಣಿ ಗಂಟೆ ನಮ್ಮ ಕಿವಿಗೇ ರಾಚುತ್ತಿದ್ದುದರಿಂದ ಓಡಿಹೋಗಿ ಕಸ ಸುರಿದು ಬರುವುದು ಸುಲಭವಿತ್ತು. 

ಆದರೆ ಮದುವೆಯಾಗಿ ಈ ಮೂರನೇ ಮಹಡಿಯ ಮನೆಗೆ ಬಂದಮೇಲೆ ಕಸದ ನಿವಾರಣೆಯೊಂದು ದೊಡ್ಡ ತೊಡಕಾಗಿಹೋಯಿತು. ಮೂರನೇ ಮಹಡಿಯಾದ್ರೆ ಏನಾಯ್ತು, ಮನೆ ಚನಾಗಿದ್ಯಲ್ಲ ಎಂದುಕೊಂಡು ಉತ್ಸಾಹದಲ್ಲಿ ಮನೆ ಬಾಡಿಗೆಗೆ ಪಡೆದದ್ದು ಎರಡೇ ತಿಂಗಳೊಳಗೆ ಅರವತ್ತು ಮೆಟ್ಟಿಲುಗಳನ್ನು ಹತ್ತಿಳಿಯುವುದು ಸುಸ್ತಿನ ಕ್ರಿಯೆಯೆನಿಸತೊಡಗಿತು. ದಿನಕ್ಕೆ ಒಂದೆರಡು ಸಲ ಮಾತ್ರ ಹತ್ತಿಳಿಯುವುದು ನಿಜವಾದರೂ, ಅಕಸ್ಮಾತ್ ಏನನ್ನಾದರೂ ಮರೆತು ಬಿಟ್ಟುಬಂದರೆ ಅದನ್ನು ತರಲು ಮತ್ತೆ ಅರವತ್ತು ಮೆಟ್ಟಿಲು ಹತ್ತಿಳಿಯುವುದು ದುಬಾರಿಯೆನಿಸುತ್ತಿತ್ತು. ಎಲ್ಲಕ್ಕಿಂತ ಕಷ್ಟವೆನಿಸಿದ್ದು ಈ ಕಸ ಒಗೆದು ಬರುವ ಪ್ರಕ್ರಿಯೆ. ಈ ಕಸದವರಾದರೂ ನಿಗಧಿತ ಸಮಯಕ್ಕೆ ಬರುತ್ತಾರೋ? ಇಲ್ಲ. ಅವರು ಬರುವ ಸಮಯಕ್ಕೆ ಕಾದು, ನಮ್ಮ ರಸ್ತೆಯಲ್ಲೇ ಇದ್ದಾರೆಂದು ಖಚಿತಪಡಿಸಿಕೊಂಡು, ಕಸದ ಬುಟ್ಟಿ ಹಿಡಿದು ಕೆಳಗೆ ಓಡುವುದು ಪ್ರಯಾಸದ ಕೆಲಸವೆನಿಸಿತು. ಎಷ್ಟೋ ಸಲ ನಾವು ಬೆಳಗಿನ ತಿಂಡಿ ತಿನ್ನುತ್ತಿರುವಾಗಲೋ, ಸ್ನಾನ ಮಾಡಿ ಪೂರ್ತಿ ರೆಡಿಯಾಗಿ ಆಫೀಸಿಗೆ ಹೊರಟಾಗಲೋ, ಅಥವಾ ನಾವಿಬ್ಬರೂ ಆಫೀಸಿಗೆ ಹೋದಮೇಲೆಯೋ ಈ ಕಸದವರು ಬರುತ್ತಿದ್ದುದರಿಂದ ನಮ್ಮ ಮನೆಯಲ್ಲಿ ಒಗೆಯದ ಕಸ ರಾಶಿರಾಶಿಯಾಗಿ ಶೇಖರವಾಗತೊಡಗಿತು. 

ಹೀಗಾಗಿ ನಾವು ಒಂದು ಉಪಾಯ ಕಂಡುಕೊಂಡೆವು. ಮನೆಯಿಂದ ಅನತಿ ದೂರದಲ್ಲಿ ಒಂದು ಖಾಲಿ ಸೈಟ್ ಇರುವುದನ್ನು ಪತ್ತೆ ಹಚ್ಚಿದೆವು. ಅಲ್ಲಿ ಬಹಳಷ್ಟು ಜನ ಕಸ ಒಗೆಯುತ್ತಿದ್ದುದರಿಂದ ಅದೊಂಥರಾ ಅಘೋಷಿತ ಡಂಪಿಂಗ್ ಯಾರ್ಡ್ ಆಗಿತ್ತು. ನಾವು ಎಷ್ಟೇ ಸಾಮಾಜಿಕ ಕಳಕಳಿ ಇರುವವರು, ನಗರವನ್ನು ಸ್ವಚ್ಛವಾಗಿಡುವಲ್ಲಿ ನಮ್ಮ ಪಾತ್ರವೇ ಮುಖ್ಯವೆಂಬ ಅರಿವು ಇರುವವರೂ ಆಗಿದ್ದರೂ, ಮನೆಯಲ್ಲಿ ಸಂಗ್ರಹವಾಗಿದ್ದ ಹೇರಳ ಕಸವನ್ನು ಹಾಗೇ ಇಟ್ಟುಕೊಂಡಿರಲು ಸಾಧ್ಯವಿರುತ್ತಿರಲಿಲ್ಲ. ನಮಗೇ ಖಾಯಿಲೆ ಬರಬಹುದಾದ ಸಾಧ್ಯತೆ ಇತ್ತು. ಆದ್ದರಿಂದ ನಮ್ಮ ಸಾಮಾಜಿಕ ಜವಾಬ್ದಾರಿಗಳಿಗೆಲ್ಲ ಆ ಸಂದರ್ಭದಲ್ಲಿ ತಿಲಾಂಜಲಿಯಿಟ್ಟು, ರಾತ್ರಿ ಹೊತ್ತು ಕಸವನ್ನೆಲ್ಲಾ ಒಂದು ಕವರಿನಲ್ಲಿ ತುಂಬಿಕೊಂಡು ಹೋಗಿ, ಯಾರಿಗೂ ಕಾಣದಂತೆ ಆ ಖಾಲಿ ಸೈಟಿನಲ್ಲಿ ಬೀಸಾಡಿ ಬಂದುಬಿಡುತ್ತಿದ್ದೆವು. ಆಮೇಲೆ ನಗರದ ಎಲ್ಲೆಡೆ ಕಸ ತುಂಬಿ ತುಳುಕ್ತಾ ಇದೆ.. ಜನ ಎಲ್ಲೆಂದರಲ್ಲಿ ಕಸ ಚೆಲ್ತಾರೆ. ಪಾಲಿಕೆಯವರು ಸರಿಯಾಗಿ ಕಾರ್ಯ ನಿರ್ವಹಿಸ್ತಾ ಇಲ್ಲ. ಸರ್ಕಾರ ನಿದ್ದೆ ಮಾಡ್ತಿದೆಯಾ?’ ಅಂತೇನಾದ್ರೂ ಟೀವಿಯಲ್ಲಿ ಸುದ್ದಿ ಬಂದರೆ ನಾವೂ, ಹೂಂ ಕಣ್ರೀ, ಹಾಗೆಲ್ಲಾ ಕಸವನ್ನ ಬೇಕಾಬಿಟ್ಟಿ ಬೀಸಾಡ್ಬಾರ್ದು. ಜನಕ್ಕೆ ಸ್ವಲ್ಪಾನೂ ರೆಸ್ಪಾನ್ಸಿಬಿಲಿಟಿ ಇಲ್ಲ ಅಂತ ನಾಲ್ಕು ಜನರೆದುರಿಗೆ ಅಮಾಯಕರಂತೆ ಹೇಳಿಕೊಳ್ಳುತ್ತಿದ್ದೆವು. 

ನಮ್ಮ ಈ ಗುಪ್ತ ಚಟುವಟಿಕೆ ಹೆಚ್ಚು ಕಾಲ ನಡೆಯಲಿಲ್ಲ. ಒಂದು ದಿನ ಆ ಖಾಲಿ ಸೈಟನ್ನು ಸ್ವಚ್ಛಗೊಳಿಸಿ ಅದರ ಮಾಲೀಕ ಮನೆ ಕಟ್ಟಿಸಲು ಶುರುವಿಟ್ಟರು.  ಹೆಚ್ಚುಕಮ್ಮಿ ಆ ಹೊತ್ತಿನಲ್ಲೇ ಮಾನ್ಯ ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಅಭಿಯಾನವೂ ಶುರುವಾಯಿತು. ಜನನಾಯಕರೂ, ಗಣ್ಯವ್ಯಕ್ತಿಗಳೂ, ಸೆಲೆಬ್ರಿಟಿಗಳೂ ಕಸ ಗುಡಿಸುವ ಚಿತ್ರಗಳು ಎಲ್ಲೆಲ್ಲೂ ರಾರಾಜಿಸತೊಡಗಿದವು. ಇದಕ್ಕೆ ಎಲ್ಲೆಡೆಯಿಂದ ಬೆಂಬಲವೂ ಪ್ರಶಂಸೆಗಳೂ ಕೇಳಿಬಂದವು. ನಗರ ಪಾಲಿಕೆಯವರೂ ಹಿಂದಿಗಿಂತ ಹೆಚ್ಚು ಚುರುಕಾದಂತೆ ನನಗೆ ಅನ್ನಿಸಿತು. ಒಣ ಕಸ ಹಸಿ ಕಸಗಳನ್ನು ಬೇರ್ಪಡಿಸಿ ಕೊಡಬೇಕು ಎಂಬ ನಿಯಮ ಬೇರೆ ಜಾರಿಯಾಯಿತು. ಒಣ ಕಸವನ್ನು ಕೆಂಪು ಬುಟ್ಟಿಯಲ್ಲೂ ಹಸಿ ಕಸವನ್ನು ಹಸಿರು ಬುಟ್ಟಿಯಲ್ಲೂ ಹಾಕಬೇಕು ಅಂತೆಲ್ಲ ಜಾಹೀರಾತು ಕೊಟ್ಟರು. ಅದನ್ನು ನೋಡಿ ನಾನು ಅಂಗಡಿಗೆ ಹೋಗಿ ಒಂದು ಕೆಂಪು - ಒಂದು ಹಸಿರು ಬಣ್ಣದ ಡಸ್ಟ್‌ಬಿನ್ ಕೊಡಿ ಅಂತ ಕೇಳಿದೆ. ಅದಕ್ಕವರು ಆ ಬಣ್ಣದ್ದು ಇಲ್ಲ ಸಾರ್, ಬೇರ್ಬೇರೆ ಇದಾವೆ, ಕೊಡ್ಲಾ?’ ಅಂದರು. ನಾನು ಇಲ್ಲ ಇಲ್ಲ, ಕೆಂಪು-ಹಸಿರೇ ಬೇಕು. ಅಡ್ವರ್ಟೈಜ್ ನೋಡ್ಲಿಲ್ವಾ?’ ಅಂದೆ. ಅಂಗಡಿಯವನಿಗೆ ರೇಗಿಹೋಯಿತು: ರೀ, ತಲೆ ಇಲ್ವೇನ್ರೀ ನಿಮ್ಗೆ? ಕೆಂಪು-ಹಸಿರೇ ಇರಕ್ಕೆ ಅದೇನು ಟ್ರಾಫಿಕ್ ಸಿಗ್ನಲ್ ಲೈಟಾ? ಬೇರೆ ಬಣ್ಣದ್ರಲ್ಲಿ ಹಾಕ್ಕೊಟ್ರೆ ಕಸದವ್ರೇನು ಒಯ್ಯಲ್ಲಾ ಅಂತಾರಾ? ಅವ್ರು ಹೇಳಿದ್ರಂತೆ, ಇವ್ರು ಕೇಳಿದ್ರಂತೆ. ಕಾಮನ್‍ಸೆನ್ಸ್ ಇಲ್ಲ ಜನಕ್ಕೆ. ಬೇಕಿದ್ರೆ ತಗಂಡೋಗಿ ಇಲ್ಲಾಂದ್ರೆ ಬಿಡಿಅಂತ ಗೊಣಗಿದ. ಈ ಕಸದ ರಾಶಿಯೊಳಗೆ ಮುಳುಗಿ ನನಗೂ ಸೆನ್ಸ್ ಕಮ್ಮಿಯಾಗಿದೆ ಅನ್ನಿಸಿತು. ಕೆಂಪು-ಹಸಿರು ಎಂಬುದನ್ನು ಕೇವಲ ಪ್ರಾತಿನಿಧಿಕವಾಗಿ ತೋರಿಸಿದ್ದಷ್ಟೇ ಅಲ್ವಾ ಅಂದುಕೊಂಡು, ಯಾವುದೋ ಬಣ್ಣದ ಡಸ್ಟ್‍ಬಿನ್ನುಗಳನ್ನು ಕೊಂಡು ತಂದೆ. 

ಈ ವಿಂಗಡನೆ ಒಂದು ರೀತಿಯಲ್ಲಿ ನಮಗೆ ಒಳ್ಳೆಯದನ್ನೇ ಮಾಡಿತು. ಒಣ-ಹಸಿ ಕಸಗಳನ್ನೆಲ್ಲಾ ಒಟ್ಟಿಗೇ ಒಂದೇ ಬುಟ್ಟಿಗೆ ಹಾಕಿ ಅದು ಆಳೆತ್ತರದ ರಾಶಿಯಾಗಿ ನಮಗೆ ಕಿರಿಕಿರಿಯಾಗುವುದು ತಪ್ಪಿತು. ಅಭ್ಯಾಸವಾಗಲು ಸ್ವಲ್ಪ ದಿನ ಹಿಡಿದರೂ, ಕೊಳೆತು ಹೋಗುವ ಹಸಿ ಕಸದಿಂದ ಬೇರೆಯಾಗಿರುವ ಒಣ ಕಸವನ್ನು ನಾವು ವಾರ-ಹತ್ತು ದಿನಕ್ಕೊಮ್ಮೆ ಬೀಸಾಡಿದರೂ ಸಮಸ್ಯೆಯಿರಲಿಲ್ಲ. ಆದರೆ ಈ ಕಸ ಸಂಗ್ರಹಿಸುವ ಕಾರ್ಮಿಕರೇ ಇದನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲವಾದ್ದರಿಂದ, ನಾವು ಎಷ್ಟೇ ಬೇರ್ಪಡಿಸಿ ಕೊಟ್ಟರೂ ಅವರು ಅದನ್ನೆಲ್ಲಾ ಒಟ್ಟಿಗೆ ಸೇರಿಸಿ ಗಾಡಿಗೆ ಸುರಿದುಕೊಳ್ಳುತ್ತಿದ್ದರು. ಒಂದಷ್ಟು ದಿನಗಳ ನಂತರ ಇನ್ಮೇಲೆ ವಾರಕ್ಕೆರಡು ದಿನ ಮಾತ್ರ ಒಣ ಕಸ ಒಯ್ತೀವಿ, ಅದಕ್ಕೆ ಬೇರೆ ಗಾಡೀನೇ ಬರ್ತದೆ ಎಂದರು. ಈಗ ನನ್ನ ಸಮಸ್ಯೆ ಬಿಗಡಾಯಿಸಿತು. ವಿಷಲ್ ಸದ್ದು ಕೇಳಿದಾಕ್ಷಣ ಟೆರೇಸಿಗೆ ಓಡಿ ಕಸದ ಗಾಡಿಯವರು ನಮ್ಮ ಬೀದಿಯಲ್ಲೇ ಇದ್ದಾರಾ ಅಂತ ಖಚಿತ ಪಡಿಸಿಕೊಳ್ಳುವುದರ ಜೊತೆಗೆ ಅವರು ಯಾವ ಕಸ ತೆಗೆದುಕೊಳ್ಳುತ್ತಿದ್ದಾರೆ ಅಂತಲೂ ನೋಡಿಕೊಂಡು ನಾನು ಕೆಳಗಿಳಿಯಬೇಕಿತ್ತು. ಏಕೆಂದರೆ ಒಣ ಕಸದವರು ಹಸಿ ಕಸ ಒಯ್ಯುತ್ತಿರಲಿಲ್ಲ; ಹಸಿ ಕಸದವರು ಒಣ ಕಸ ಒಯ್ಯುತ್ತಿರಲಿಲ್ಲ. ನಾನು ಕಿವಿಯನ್ನಲ್ಲದೇ ಕಣ್ಣನ್ನೂ ಚುರುಕಾಗಿಸಿಕೊಳ್ಳುವುದು ಅನಿವಾರ್ಯವಾಯಿತು. 

ಈ ನಡುವೆ, ಈ ಕಸದ ಉತ್ಪತ್ತಿಯ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆಯೇ ಅಂತ ನಾವು ಯೋಚಿಸಿದ್ದಿದೆ. ಅವರೆಕಾಯಿ ತಂದು, ಅದನ್ನು ಬಿಡಿಸಿ, ಸಿಪ್ಪೆಯನ್ನು ಬೀಸಾಡುವುದಕ್ಕಿಂತ ಬಿಡಿಸಿದ ಅವರೆ ಕಾಳುಗಳನ್ನೇ ತಂದರೆ? ಇಡೀ ಸ್ವೀಟ್‌ಕಾರ್ನ್ ಕುಂಡಿಗೆ ತರುವುದರ ಬದಲು ಬಿಡಿಸಿಟ್ಟ ಜೋಳವನ್ನೇ ತಂದರೆ? ಪಿಜ್ಜಾ ಆರ್ಡರ್ ಮಾಡಿದಾಗ ಅವರು ತಂದುಕೊಡುವ ರಟ್ಟಿನ ಪೆಟ್ಟಿಗೆಗಳನ್ನು ಅವರೊಂದಿಗೇ ವಾಪಸ್ ಕಳುಹಿಸಿದರೆ? ನಮ್ಮ ಈ ಯೋಜನೆಗಳು ಕೇಳಲಿಕ್ಕೆ ಚೆನ್ನಾಗಿದ್ದವೇ ಹೊರತು ಜಾರಿಗೆ ತರಲು ಕಷ್ಟವಿತ್ತು. ಒಂದು ಕಲ್ಲಂಗಡಿ ಹಣ್ಣು ಕತ್ತರಿಸಿದರೆ ಒಂದು ಬುಟ್ಟಿ ಸಿಪ್ಪೆ ಸಂಗ್ರಹವಾಗುತ್ತಿತ್ತು. ಸೀಜನ್ನಲ್ಲಿ ತಿನ್ಬೇಕು ಅಂತ ಆಸೆಪಟ್ಟು ಶೇಂಗ ತಂದು ಬೇಯಿಸಿದರೆ ಸಿಪ್ಪೆಯ ರಾಶಿಯೇ ದೊಡ್ಡದಾಯಿತು. ನಾಲ್ಕು ಜನರನ್ನು ಕರೆದು ಸಣ್ಣದೊಂದು ಪಾರ್ಟಿ ಮಾಡಿದೆವೆಂದರೆ ಎರಡು ಬುಟ್ಟಿ ಕಸ ತಯಾರಾಯಿತು ಅಂತಲೇ ಅರ್ಥ. ಎಷ್ಟೋ ದಿನ ಈ ಕಸದ ವಿಷಯವಾಗಿಯೇ ನಮ್ಮ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ವಾಗ್ವಾದಗಳಾಗುತ್ತಿದ್ದವು: ನಿನ್ನೆ ಬೆಳಿಗ್ಗೆ ಕಸದವ್ರು ಬಂದಾಗ ನೀವು ಹಾಕಿ ಬರ್ಬೇಕಿತ್ತು, ಈಗ ನೋಡಿ ಹುಳ ಆಗಿದೆ ಅಂತ ಅವಳೂ, ನೀನೇ ಹಾಕಿ ಬಂದಿದ್ರೆ ಗಂಟು ಹೋಗ್ತಿತ್ತಾ ಅಂತ ನಾನೂ ಗರಂ ಆಗುವೆವು. ಯಕಃಶ್ಚಿತ್ ಕಸ ನಮ್ಮಿಬ್ಬರ ನಡುವಿನ ವಿರಸಕ್ಕೆ ಕಾರಣವಾಗುತ್ತಿರುವುದು ನೋಡಿದರೆ ಅದಕ್ಕಿರುವ ಶಕ್ತಿಯ ಬಗ್ಗೆ ಆಶ್ಚರ್ಯವಾಗಿತ್ತಿತ್ತು.

ಊರಿನಿಂದ ಯಾರಾದರೂ ನೆಂಟರು ಬಂದರಂತೂ ಮುಗಿದೇಹೋಯಿತು. ನಮ್ಮ ಈ ಕಸ ನಿರ್ವಹಣೆಯ ಕಷ್ಟ ನೋಡಿ ಅವರಿಗೆ ಬಹುಶಃ ಯಾಕೆ ಬಂದೆವೋ ಅನ್ನಿಸುವಷ್ಟಾಗುತ್ತಿತ್ತು. ಸಂಜೆಯ ಹೊತ್ತಿಗೆ ವಿಷಲ್ ಸದ್ದು ಕೇಳಿದರೂ ಕಸದವ್ರು ಬಂದ್ರು ಅನ್ಸುತ್ತೆ ನೋಡಿ ಅನ್ನುತ್ತಿದ್ದರು. ಕವಳ ಹಾಕುವ ಚಟವಿರುವ ನೆಂಟರಿಗಂತೂ ಇಲ್ಲಿ ಉಗುಳುವುದಕ್ಕೆ ಜಾಗವೇ ಕಾಣದೇ ಒದ್ದಾಡಿಹೋದರು. ಸಿಂಕಿಗೆ ಉಗಿದರೆ ಪೈಪು ಕಟ್ಟಿಕೊಳ್ಳುತ್ತಿತ್ತು, ಕಮೋಡಿಗೆ ಉಗಿಯಲು ಹೇಸಿಗೆ, ಬಾಯ್ತುಂಬಿಕೊಂಡದ್ದನ್ನು ಉಗಿಯಲು ಅವರು ಮೂರು ಮಹಡಿ ಇಳಿದು ರಸ್ತೆಗೇ ಹೋಗಬೇಕಿತ್ತು. ಸಧ್ಯಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೆ ದಂಡ ಹಾಕುವ ಪದ್ಧತಿಯಿನ್ನೂ ಈ ನಗರದಲ್ಲಿ ಬಂದಿಲ್ಲವಾದ್ದರಿಂದ ಅವರು ಬಚಾವ್ ಆದರು.

ಹಾಗೆ ನೋಡಿದರೆ, ನಾವು ಮನೆ ಬದಲಿಸಲು ತೀರ್ಮಾನಿಸಿದ್ದರ ಹಿಂದಿರುವ ಮುಖ್ಯ ಕಾರಣ ಈ ಕಸದ ನಿರ್ವಹಣೆಗೆ ಮುಕ್ತಿ ಕೊಡುವುದೇ. ನೆಲಮಹಡಿಯಲ್ಲೋ ಮೊದಲ ಮಹಡಿಯಲ್ಲೋ ಮನೆಯಿದ್ದು, ಅಲ್ಲಿಂದ ರಸ್ತೆ ಕಾಣುವಂತಿದ್ದರೆ ಅನುಕೂಲ ಎಂಬುದು ನಮ್ಮ ಭಾವನೆ. ಆದರೆ ನಾವು ಅಂದುಕೊಂಡ ತಕ್ಷಣ ಮನೆ ಸಿಗಬೇಕಲ್ಲ? ನಮಗೆ ಬೇಕಾದ ರೀತಿಯ, ನಮ್ಮ ಜೇಬಿಗೆ ಹೊಂದುವಷ್ಟು ಬಾಡಿಗೆಯ ಮನೆ ಈ ಮಹಾನಗರದಲ್ಲಿ ಸಿಗುವುದು ಸುಲಭವಲ್ಲ. ಅಲ್ಲದೇ ಒಂದು ಮನೆಗೆ ಹೊಂದಿಕೊಂಡಮೇಲೆ ಮತ್ತೊಂದು ಮನೆ ಪೂರ್ತಿಯಾಗಿ ಹಿಡಿಸುವುದು ಕಷ್ಟವೇ. ಒಂದಿಲ್ಲೊಂದು ಕೊರತೆ ಎದ್ದು ಕಾಣುತ್ತದೆ. ನೋಡಲು ಹೋದ ಮನೆಗಳಲ್ಲೆಲ್ಲಾ ನಾನು ಮರೆಯದೇ ಕೇಳುತ್ತಿದ್ದುದು ಒಂದೇ: ಈ ಏರಿಯಾದಲ್ಲಿ ಕಸ ಒಗೀಲಿಕ್ಕೆ ಸರಿಯಾದ ವ್ಯವಸ್ತೆ ಇದೆಯಾ?’ ಅಂತ. ನನ್ನ ಪ್ರಶ್ನೆಗೆ ಆ ಮನೆಯ ಮಾಲೀಕರು ಕಕ್ಕಾಬಿಕ್ಕಿಯಾಗುತ್ತಿದ್ದರು. ಬೋರ್‌ವೆಲ್ ಇದೆಯಾ, ಕಾವೇರಿ ನೀರು ಸರಿಯಾಗಿ ಬರುತ್ತಾ, ಸೆಕ್ಯುರಿಟಿ ಇದೆಯಾ ಅಂತೆಲ್ಲ ಕೇಳೋವ್ರನ್ನ ನೋಡಿದೀವಿ; ಇದೇನ್ರೀ ನೀವು ಕಸದ ಬಗ್ಗೆ ಕೇಳ್ತಿದೀರಾ! ಅಂತ ಕೆಲವು ಮಾಲೀಕರು ಕೇಳಿಯೂಬಿಟ್ಟರು.  ಅಲ್ಲ, ಅದು ಹಂಗಲ್ಲ, ಅದೂ ಇಂಪಾರ್ಟೆಂಟ್ ಅಲ್ವಾ?’ ಅಂತೇನೋ ಹೇಳಿ ನಾನು ಜಾರಿಕೊಂಡೆ.

ಅಂತೂ ಮೊನ್ನೆ ನೋಡಿದ ಒಂದು ಮನೆ ಇಬ್ಬರಿಗೂ ಇಷ್ಟವಾಗಿದೆ. ಮೊದಲ ಮಹಡಿಯಲ್ಲಿ ಮನೆಯಿದ್ದು, ರಸ್ತೆಗೆ ಅಭಿಮುಖವಾಗಿಯೇ ಮುಂಬಾಗಿಲು ಇರುವುದರಿಂದ ಕಸದ ಗಾಡಿಯವರು ಬಂದಿದ್ದು ಸುಲಭವಾಗಿ ತಿಳಿಯುತ್ತದೆ, ಬೀಸಾಡಿ ಬರಬಹುದು ಎಂದುಕೊಂಡಿದ್ದೇವೆ. ಇಲ್ಲಿ ಕಸದ ಗಾಡಿಯವ್ರು ದಿನಾಲೂ ಬರ್ತಾರೆ ಅಂತ ಬೇರೆ ಮಾಲೀಕರು ಹೇಳಿದ್ದಾರೆ.  ಇನ್ನು ಆ ಮನೆಗೆ ಸ್ಥಳಾಂತರವಾಗಿ, ದಿನದಲ್ಲಿ ಸಂಗ್ರಹವಾದ ಕಸವನ್ನು ಮರುದಿನವೇ ಒಗೆದು, ಸ್ವಚ್ಛ ಮತ್ತು ಜವಾಬ್ದಾರಿಯುತ ನಾಗರೀಕರಾಗಿರಲು ಪಣ ತೊಟ್ಟಿದ್ದೇವೆ. ಕಸದಿಂದಲೇ ನಮ್ಮಿಬ್ಬರ ನಡುವೆ ಶುರುವಾಗುತ್ತಿದ್ದ ವಿರಸವಾದರೂ ಕಮ್ಮಿಯಾಗಲಿ ಅಂತ ಮನಸಲ್ಲೇ ಅಂದುಕೊಳ್ಳುತ್ತಿದ್ದೇವೆ. 

[ಹೊಸ ದಿಗಂತ ಪತ್ರಿಕೆಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ]

1 comment:

sunaath said...

ಕಸದಿಂದ ಸರಸ ಪ್ರಬಂಧವೂ ಹುಟ್ಟಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದೀರಿ, ಸುಶ್ರುತ! ಅಭಿನಂದನೆಗಳು.