Saturday, April 13, 2019

ಹಿಟ್

ಹಿಟ್ ಹೊಡೆದುಬಿಡಬಹುದು
ಅದಕೆಷ್ಟು ಹೊತ್ತು?
ಇಲ್ಲೇ ರೂಮಿನ ಕಪಾಟಿನ ಬಾಗಿಲು ತೆಗೆದು
ಕೈ ಹಾಕಿ ಸ್ವಲ್ಪ ತಡಕಾಡಿದರೆ ಸಿಗುವುದು
ಕೆಂಪು ಬಾಟಲಿ ಬಾಂಬಿನ ಹಾಗೆ
ಅದಕೊಂದು ಊದ್ದ ಕಡ್ಡಿಮೂತಿ-
ಆನೆಯ ಸೊಂಡಿಲಿನ ಹಾಗೆ
ಒಮ್ಮೆ ಕುಲುಕಿ ಮನಸಲ್ಲೆ ಹೇಷಾರವಗೈದು
ಗಂಡು ಮೆಟ್ಟಿದ ನಾಡಲ್ಲಿ ನಡೆವವನಂತೆ ಠೇಂಕರಿಸಿ
ಠೀವಿಯಲ್ಲಿ ಕತ್ತಲ ಕೋಣೆಯ ಕತ್ತಲೆ ಮೂಲೆಗೆ ಸರಿದು

ಅಕೋ ಅಲ್ಲೇ ಇದೆ ಸಿಂಕಿನ ಕಟ್ಟೆಮೇಲೆ
ಮೀಸೆಯನ್ನತ್ತಿತ್ತ ಆಡಿಸುತ್ತ
ಎತ್ತ ಹೋಗಬೇಕೆಂದು ತಿಳಿಯದೆ ಮಿಸುಕಾಡುತ್ತ
ಆರೂ ಕಾಲುಗಳನೂರಿ ಮೇಲೆಕೆಳಗೆ ನೋಡುತ್ತ
ಒಂದು ದಷ್ಟಪುಷ್ಟ ಜಿರಲೆ
ರೆಕ್ಕೆ ಬಿಚ್ಚಿದರೆ ಹಾರಿಬಿಡಬಹುದು ತಿಳಿಯದ ಗಮ್ಯಕ್ಕೆ
ಗುರಿ ತಪ್ಪಿದರೆ ಬೀಳಲೂಬಹುದು
ಬಾಂಬು ಹಿಡಿದವನ ಮೈಮೇಲೇ
ಬಂದ ಉದ್ಧೇಶವನೇ ಮರೆತು ಗಲಿಬಿಲಿಯಲ್ಲಿ

ಹಿಟ್ ಹೊಡೆದುಬಿಡಬಹುದು
ಅದಕೇನು ಅರ್ಜುನಗುರಿ ಬೇಕಿಲ್ಲ
ಬಾಗಿಸಬಹುದು ಸೊಂಡಿಲನ್ನು ಬೇಕಾದತ್ತ
ಫಳಫಳ ಹೊಳೆವ ಮೈಯ ಕೀಟದತ್ತ ತಿರುಗಿಸಿ ಮೂತಿ
ಒಮ್ಮೆ ಚಶ್ಶ್ ಎನಿಸಿದರೆ ಆಯಿತು

ಶತ್ರು ನೆಲಕೆ ಬಿದ್ದು ಅಂಗಾತ
ಆರೂ ಕಾಲೂ ಮೇಲೆ ಮಾಡಿ ಬಡಿಯುತ
ವಿಲವಿಲ ಒದ್ದಾಡಿ ನಾಕು ಚಣ
ಆಮೇಲೆ ಎಲ್ಲಾ ನಿಶ್ಚೇಶ್ಟ
ಬೇಕಿದ್ದರೆ, ಮೌನವೇ ತುಂಬಿರುವ ಈ ನಡುರಾತ್ರಿ-
ಯಲಿ ಇನ್ನಷ್ಟು ಮೌನ: ಆತ್ಮಕೆ ಶಾಂತಿ ಸಿಗಲೆಂದು

ಹಿಟ್ ಹೊಡೆದುಬಿಡಬಹುದಿತ್ತು
ಹೆಂಡತಿ ಮನೆಯಲ್ಲಿಲ್ಲದ ಈ ನಟ್ಟಿರುಳು
ಹೀಗ ಸಿಂಕಿನ ಕಿಂಡಿಯಿಂದ ಸುಮ್ಮನೆ ಹೊರಬಂದು,
ನೀರು ಕುಡಿಯಲೆಂದು ಅಡುಗೆಮನೆಗೆ ಬಂದ ನನಗೆ
ಸಿಕ್ಕಿಬೀಳಬೇಕೆಂದು ಅದರ ಹಣೆಯಲ್ಲಿ
ಬರೆದಿದ್ದರೆ ಯಾರು ತಪ್ಪಿಸಲು ಸಾಧ್ಯ?
ಅವಳು ಇದ್ದಿದ್ದರೆ ಇದನ್ನವಳು ನೋಡಿದ್ದರೆ
ಕಿಟಾರನೆ ಕಿರುಚಿಕೊಂಡು ನಾನೋಡಿಬಂದು
ಕ್ಷಣಾರ್ಧದಲಿದನು ಕೊಂದು ಪೊರಕೆಯಲ್ಲೊತ್ತಿ
ಹೆಣ ಸಾಗಿಸಿ ದಫನು ಮಾಡಿ

ಆದರೀಗ ಅವಳು ಊರಿಗೆ ಹೋಗಿದ್ದಾಳೆ
ಜಿರಲೆ ದೈನೇತಿ ಭಾವದಿಂದ ನನ್ನನೇ ನೋಡುತಿದೆ
ಅದರ ನೋವು ನಲಿವು ಹಸಿವು ಕನಸು-
ಗಳೆಲ್ಲ ನನ್ನ ಕೈಲಿದೆ
ಕಪಾಟಿನೊಳಗೆ ದಾಸ್ತಾನಿದೆ ಕನಿಕರದರ್ಥ ಸಹ
ತಿಳಿದಿರದ ಕಾರ್ಕೋಟಕ ವಿಷ
ಕತ್ತಲೆಯಲ್ಲಿ ಸರಿಯುತಿದೆ ರಾತ್ರಿ-
ತನಗೆ ಮಾತ್ರ ತಿಳಿದಿರುವ ಪಥದಲ್ಲಿ
ಜಗ ಮಲಗಿದೆ-
ಎಂದೂ ಆಗಬಹುದಾದ ಪ್ರಳಯದರಿವಿರದೆ.

No comments: