ಒಂದು ಮಹಡಿಯನ್ನಿನ್ನೊಂದು ಹೋಲದ
ಆ ಮನೆಯ ಹದಿಮೂರನೇ ಮಹಡಿಯ
ಮೂಲೆಯಲ್ಲೊಂದು ಗುಬ್ಬಿ ಗೂಡು ಕಟ್ಟಿದೆ
ಅಷ್ಟು ದೊಡ್ಡ ಮನೆಯಲ್ಲಿ ಗುಬ್ಬಿಗೆಷ್ಟು ಜಾಗ ಬೇಕು?
ಅಥವಾ ಅದು ಕಟ್ಟುವ ಗೂಡಿಗೆ
ಜಗದ್ವಿಖ್ಯಾತ ವಾಸ್ತುಶಿಲ್ಪಿ ವಿರಚಿತ ನಕ್ಷೆ
ಭೂಕಂಪಕ್ಕೂ ಅದುರದ ವಿನ್ಯಾಸ
ಭದ್ರ ತಳಪಾಯ ಗಟ್ಟಿ ಸರಳು ಶ್ರೇಷ್ಠ ಗುಣ-
ಮಟ್ಟದ ಸಿಮೆಂಟು ಸಾಣಿಸಿದ ಮರಳು ಬೇಕೇ?
ನಾಲ್ಕು ಬಿಳಿಹುಲ್ಲಿನ ಎಸಳುಗಳನ್ನು
ಕೊಕ್ಕಿನಲ್ಲಿ ಕಚ್ಚಿ ತಂದು ಹಾಸಿ ಒಪ್ಪ ಮಾಡಿದ
ತಾನು ಒಳಹೊಗುವಷ್ಟೇ ಪುಟ್ಟ ಜಾಗದ ಮನೆ
ಪೂಜೆ ಪುನಸ್ಕಾರ ಸಮಾರಂಭ ಸಮಾರಾಧನೆ-
ಗಳ್ಯಾವುದೂ ಇಲ್ಲದೆ ಗೂಡು ಹೊಕ್ಕ ಗುಬ್ಬಿ
ಅದು ಹೇಗೆ ಅಷ್ಟು ಕೆಮೆರಾಗಳ ಕಣ್ಣು ತಪ್ಪಿಸಿ ಇದೆ
ಮಾಳಿಗೆ ತೋಟದಲದಕೆ ಕಾಳು ತೂರಿದವರಾರು
ಇಟ್ಟ ಮೊಟ್ಟೆಯ ನೆರಳಾಗಿ ಕಾದ ಕಂಬವಾವುದು
ಬಾಳಂತಿಗೆಣ್ಣೆನೀರೆರೆದ ಸೋರುಕೊಳಾಯಿಯೆಲ್ಲಿ
ಇಂದು ಒಳಗೇನೋ ಬಹುದೊಡ್ಡ ಸಮಾರಂಭ
ದೀಪಗಳ ಸಡಗರ ರೇಶಿಮೆ ಸೀರೆಗಳ ಸರಭರ
ಮೆಹಂದಿ ನೃತ್ಯ ಹಾಡು ಫ್ಲಾಶು ವಿಧವಿಧ ಅಡುಗೆ
ಹವೆಗೆ ನಶೆಯೇರಿದ ಈ ಸಂಜೆ
ಭೂಪನೊಬ್ಬ ತನ್ನ ಸೂಟಿಗೆ ತಾಕಿದ
ಶಾಹಿ ಕೂರ್ಮವ ಒರೆಸಲು
ಕತ್ತಲ ಮೂಲೆಗೆ ಬಂದಿದ್ದಾನೆ
ಕೈ ಚಾಚಿದಾಗ ಸಿಕ್ಕ ಬಿಳಿಹುಲ್ಲಿನೆಳೆ ಹಿಡಿದೆಳೆದಿದ್ದಾನೆ...
ಉಸಿರು ಬಿಗಿಹಿಡಿದಿರುವವರೆಲ್ಲ ಬೇಡಿಕೊಳ್ಳಿರಿ:
"ಮನೆಯೊಳಗೇ ದೇವಸ್ಥಾನವಿರುವ
ಸುವರ್ಣಖಚಿತ ಮಂಟಪದಲಿ ವಿರಾಜಮಾನನಾಗಿಹ
ವಿವಿಧಾಲಂಕಾರಭೂಷಿತ ದೇವರೇ,
ಇನ್ನೂ ರೆಕ್ಕೆ ಬಲಿಯದ ಈ ಮರಿಗುಬ್ಬಿಗಳ ಕಾಪಾಡು
ಓಂ ಓಂ ಓಂ.."
1 comment:
ಸೂಟ್ ಧಾರಿ ಪತ್ತೆಹಚ್ಚಿದ ಗುಬ್ಬಿಗೂಡು
ಅದೂ ಅಂಟೆಲಿಯಾದ ತುತ್ತತುದಿಯಲ್ಲಿ
ಗುಬ್ಬಚ್ಚಿಗಳು ಕೂತಿವೆ ಚಾನೆಲ್ಗಳ ಡಿಸ್ಕಷನ್ ಪಾನೆಲಿನಲ್ಲಿ
ಸೂಟ್ಧಾರಿ ಆಗಿದ್ದಾನೆ ಪ್ರಾಣಿ ಸಂರಕ್ಷಣೆ ಯ ಅಂಬಾಸಿಡರ್
ನ್ಯೂಸ್ ಚಾನೆಲ್ಗಳ ಸಂಭ್ರಮವಂತೂ ಹೇಳತೀರದು
ಗುಬ್ಬಚ್ಚಿಗಳಿಗೆ ಏನೋ ಟಾಗ್ ಫಿಕ್ಸ್ ಮಾಡಲಾಗಿದೆ ಎಂಬ ಸಂದೇಹ.
ವಿರೋಧಿ ಕಂಪೆನಿಗಳ ಹುನ್ನಾರವೇ
ಮುಂದಿನ ತನಿಖೆಗೆ ಸಿಬಿಐ.
ಇಲ್ಲ ಇಲ್ಲ ನಾವೇ ಅಲ್ಲಿ ಗುಬ್ಬಿಗೂಡು ಹಚ್ಚಿದ್ದು
ನಮಗ ಪರಿಸರವೆಂದರೆ ತುಂಬಾ ಇಷ್ಟ ನೋಡಿ
ನೀತಾ ಅಂಬಾನಿ ಉವಾಚ
ಹೌದು ನಿಮ್ಮ ಕಳವಳ ನಿಜವಾಗಿಯೇ ಇದೆ ಸಾರ್.
ಇನ್ನೂ ರೆಕ್ಕೆ ಬಲಿಯದ ಈ ಮರಿಗುಬ್ಬಿಗಳ ಕಾಪಾಡು
ಓಂ ಓಂ ಓಂ.
Post a Comment