ಹಬ್ಬಕ್ಕೆಂದು ನಿನಗೆ ಹೊಸಬಟ್ಟೆ ಕೊಳ್ಳುವಾಗ
ಕೇಳಿದರೊಬ್ಬರು ಅಂಕಲ್ಲು: ಒಂದು ಫ್ರಾಕಿಗೆ ಅಷ್ಟೆಲ್ಲ
ಫ್ರಿಲ್ಸು ಯಾಕೆ? ಸಾಕು ಒಂದೋ ಎರಡೋ ಮೂರೋ.
ಅವರು ಎಂದಾದರೂ ಬಯಲಲ್ಲಿ ನಿಂತು
ಬಿಸಿಲುಮಳೆಯಲ್ಲಿ ತೋಯುತ್ತ
ಕಾಮನಬಿಲ್ಲನ್ನು ನೋಡಿದ್ದರೆ ಕೇಳುತ್ತಿರಲಿಲ್ಲ ಇಂತಹ ಪ್ರಶ್ನೆ
ಅಥವಾ ಆ ಮಳೆಗೂ ಮುಂಚಿನ ಮೇಘಾವೃತ ಸಂಜೆ
ಗರಿಬಿಚ್ಚಿದ ನವಿಲನ್ನು ನೋಡಿದ್ದರೂ ಸಾಕಿತ್ತು
ಬೇಡ, ಸಂಸಾರದೊಂದಿಗೆ ಥಿಯೇಟರಿಗೆ ಹೋಗಿ
ಚಂದದೊಂದು ಸಿನೆಮಾದ ಚಂದದೊಂದು ನಾಯಕಿಯ
ಪ್ರವೇಶವನ್ನಾದರೂ ನೋಡಬಹುದಿತ್ತು
ಅದೂ ಸಾಧ್ಯವಿಲ್ಲವಾದರೆ ಕಣ್ಮುಚ್ಚಿ ನಿದ್ರಿಸಿ
ಕನಸುಗಳಿಗೆ ಮುಕ್ತಾಹ್ವಾನ ನೀಡಿದ್ದರೂ
ಹೀಗೆ ಅಂಗಡಿಕಟ್ಟೆ ಮೇಲಿನ ಕಾಲಹರಣ ತಪ್ಪುತ್ತಿತ್ತು
ಹೆಚ್ಚು ಮಾತಾಡದೇ ಅವರಿಂದ ತಪ್ಪಿಸಿಕೊಂಡು ಬಂದಿರುವೆ
ಮಗಳೇ ನೀನೀಗ ಈ ಫ್ರಾಕು ಧರಿಸುವೆ
ಇದರ ನೂರು ಫ್ರಿಲ್ಲುಗಳ ನೀ ನಿನ್ನ
ಮೊಣಕಾಲಿಂದೊದ್ದು ಚಿಮ್ಮಿಸಿ ನಡೆವೆ
ನಾನದರ ವೀಡಿಯೋ ಮಾಡುವೆ
ಮುಂದೊಂದು ದಿನ ನೀನು ಫ್ರಾಕುಗಳಿಗೆ ಗುಡ್‌ಬೈ ಹೇಳಿ
ಜೀನ್ಸು ಚೂಡಿ ಗಾಗ್ರಾ ಇನ್ನೂ ನನಗೆ ಗೊತ್ತಿಲ್ಲದ ಹಲವು
ನಮೂನೆಯ ಬಟ್ಟೆಗಳ ತೊಡುವೆ
ಕೊನೆಗೊಮ್ಮೆ ಸೀರೆಯುಟ್ಟು ನೆರಿಗೆ ಚಿಮ್ಮಿಸುತ್ತ ಬಂದಾಗ,
ನಾನು ಈ ವೀಡಿಯೋ ತೋರಿಸಿ, ನೀನು ಚಿಕ್ಕವಳಿದ್ದಾಗ
ಕಾಮನಬಿಲ್ಲಿಗೆ ನೂರು ಬಣ್ಣಗಳಿದ್ದವು ಎಂದೂ
ಅವು ಗೆಜ್ಜೆಸದ್ದಿನೊಡನೆ ಹೆಜ್ಜೆಯಿಡುತ್ತಿದ್ದವು ಎಂದೂ ಹೇಳಿ
ನಿನ್ನನ್ನು ನಂಬಿಸಲು ಯತ್ನಿಸುವೆ. ಮತ್ತಾಗ ನಿನ್ನ ಅರೆನಂಬುಗೆ
ಮೊಗದಲಿ ಚಿಮ್ಮುವ ಕಾಂತಿಯಲಿ ಕಳೆದುಹೋಗುವೆ.
1 comment:
ಈ ಕವನವು ಅಪ್ಪನ ಮನದಲ್ಲಿ ಮೂಡಿದ ನೂರು ಬಣ್ಣಗಳ ಕಾಮನಬಿಲ್ಲು!
Post a Comment