Wednesday, December 18, 2019

ವಿಮಲ್ ಚೀಲ

ಎಲ್ಲ ಕೆಟ್ಟದ್ದರ ಹಿಂದೆಯೂ ಒಂಚೂರು ಒಳ್ಳೆಯದ್ದೂ ಇರುತ್ತದೆ ಎಂಬ ಮಾತಿದೆ. ನಮ್ಮ ಮಹಾಕಾವ್ಯಗಳ ವಿಲನ್ಸ್ ರಾವಣ - ದುರ್ಯೋಧನರಲ್ಲೂ ಒಳ್ಳೆಯ ಗುಣಗಳನ್ನು ಕಂಡವರಿದ್ದಾರೆ. ಕತ್ತಲೆಯ ಆಚೆಕಡೆ ಬೆಳಕಿದೆ.

ಹಾಗೆಯೇ ಈ ವಿಮಲ್ ಚೀಲ! ಗುಟ್ಕಾ - ಪಾನ್ ಮಸಾಲಾ ಕೆಟ್ಟದು, ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗೊಂದಿಷ್ಟು ವರ್ಷಗಳ ಹಿಂದೆ ಸರ್ಕಾರ ಗುಟ್ಕಾವನ್ನು ಬ್ಯಾನ್ ಮಾಡಿದರೂ, ಆ ಬ್ಯಾನ್‌ನ ನಿಯಮಾವಳಿಗಳಲ್ಲಿದ್ದ ದೋಷದ ಲಾಭ ಪಡೆದ ಗುಟ್ಕಾ ತಯಾರಿಕಾ ಕಂಪನಿಗಳು ಪಾನ್ ಮಸಾಲಾ ಮತ್ತು ತಂಬಾಕುಗಳನ್ನು ಬೇರೆಬೇರೆ ಪೊಟ್ಟಣಗಳಲ್ಲಿ ಮಾರತೊಡಗಿದವು. ಹೀಗಾಗಿ ಗುಟ್ಕಾ ಜಗಿಯುವವರಿಗೆ ಎರಡು ಸ್ಯಾಚೆಗಳನ್ನು ಒಡೆದು ಮಿಕ್ಸ್ ಮಾಡಿಕೊಳ್ಳುವ ಕಷ್ಟ ಬಿಟ್ಟರೆ ಮತ್ತಿನ್ಯಾವ ಹಿನ್ನಡೆಯೂ ಆಗಲಿಲ್ಲ. ನಾವು ಸಿನೆಮಾ ನೋಡಲು ಥಿಯೇಟರಿಗೆ ಹೋದಾಗಲೆಲ್ಲ ವಿಕಾರ ಮುಖ-ದವಡೆಗಳನ್ನು ತೋರಿಸುತ್ತ ರಾಹುಲ್ ದ್ರಾವಿಡ್ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ವಿವರಿಸುವುದನ್ನು ನೋಡುವುದು ತಪ್ಪಲಿಲ್ಲ.

ಈ ವಿಮಲ್-ಸ್ಟಾರ್ ಮುಂತಾದ ಗುಟ್ಕಾ ಕಂಪನಿಗಳು ತಮ್ಮ ಪಾನ್ ಮಸಾಲಾ ಮತ್ತು ತಂಬಾಕುಗಳ ಸರಗಳ ಬಂಡಲುಗಳನ್ನು ಸಗಟು ವ್ಯಾಪಾರಿಗಳಿಂದ ಅಂಗಡಿಗಳಿಗೆ ತಲುಪಿಸಲು ಈ ಥರದ ದೊಡ್ಡದೊಡ್ಡ ಚೀಲಗಳಲ್ಲಿ ತುಂಬಿ ಕಳುಹಿಸುತ್ತವಷ್ಟೇ. ಹಾಗೆ ಅಂಗಡಿಗಳಿಗೆ ತಲುಪಿದ ಈ ಚೀಲಗಳ ಒಡಲ ವಸ್ತುಗಳು ಬರಿದಾದಮೇಲೆ ಖಾಲೀಚೀಲಗಳು ಮಾರಾಟಕ್ಕೊಳಗಾಗುತ್ತವೆ. ಸಾಗರ-ಸೊರಬದಂತಹ ಪೇಟೆಗಳ ಜನರಲ್ ಸ್ಟೋರುಗಳಲ್ಲೂ, ಸಿಗರೇಟ್-ಪಾನ್‌ಮಸಾಲಾಗಳ ಸಗಟು ವ್ಯಾಪಾರಿಗಳಲ್ಲೂ ಈ ಚೀಲಗಳು ಐವತ್ತು-ಅರವತ್ತು ರೂಪಾಯಿಗೆ ಸಿಗುತ್ತವೆ. ಗಟ್ಟಿ ಬಟ್ಟೆಯಿಂದ ಮಾಡಲ್ಪಟ್ಟ ಈ ಚೀಲಗಳು ಗಟ್ಟಿಮುಟ್ಟಾದ ಹಿಡಿಕೆಯನ್ನೂ ಹೊಂದಿ ಬಹುಪಯೋಗಿಯಾಗಿವೆ ಎಂಬುದು ಸತ್ಯ. ಕಣಕಣದಲ್ಲೂ ಕೇಸರಿಯ ಶಕ್ತಿ ಹೊಂದಿರುವ ಈ ಚೀಲಗಳು, ದಿನಸಿ ಸಾಮಾನು ಒಯ್ಯಲು, ಸಂತೆಗೆ ಹೋಗಲು, ಎಷ್ಟೇ ಭಾರವಾದ ವಸ್ತುಗಳನ್ನು ಸಾಗಿಸಲು ಮಹೋಪಕಾರಿಗಳು. ನೀವು ನಮ್ಮೂರ ಕಡೆ ಬಂದು ನೋಡಿದರೆ, ಪ್ರತಿ ಮನೆಯಲ್ಲೂ ಇಂತಹ ಒಂದೆರಡಾದರೂ ಚೀಲಗಳು ಕಾಣುತ್ತವೆ. ನಮ್ಮಂಥ 'ಹಳ್ಳೀಮೂಲ-ಪೇಟೆವಾಸಿ' ಹಣೆಪಟ್ಟಿಯ ಅಬ್ಬೇಪಾರಿಗಳು ಪ್ರತಿಸಲ ಊರಿನಿಂದ ಬರುವಾಗ ಬೆಲ್ಲ-ತುಪ್ಪ-ಉಪ್ಪಿನಕಾಯಿ-ತೆಂಗಿನಕಾಯಿ ಇತ್ಯಾದಿಗಳನ್ನು ತುಂಬಿ ತುಂಬಿ ಬಸ್ಸಿಗೇರಿಸಲು ಇವು ಮಾಡುವ ಸಹಾಯಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಊರಿನಿಂದ ಹೊರಡುವಾಗ ನಮ್ಮ ನಾಜೂಕಿನ ಏರ್‌ಬ್ಯಾಗುಗಳು ತುಂಬಿದವೋ, ಉಳಿದ ವಸ್ತುಗಳನ್ನು ತುಂಬಿಸಲು "ಏ, ವಿಮಲ್ ಚೀಲ ತಗಳಾ" ಅಂತ ಹೇಳುವುದು ಸಾಮಾನ್ಯ.

ನೋಡಿ, ಗುಟ್ಕಾ ಆರೋಗ್ಯಕ್ಕೆ ಎಷ್ಟೇ ಮಾರಕವಾಗಿರಬಹುದು, ಅದರ ಬಿಡಿಪೊಟ್ಟಣಗಳಿಂದ ಪರಿಸರ ನಾಶವಾಗುತ್ತಿರುವುದೂ ಸರಿ, ಆದರೆ ಗುಟ್ಕಾ ಚೀಲ ಮಾತ್ರ ಬಟ್ಟೆಯಿಂದ ತಯಾರಿಸಲ್ಪಟ್ಟು ಪರಿಸರಸ್ನೇಹಿಯಾಗಿದೆ! ಅಲ್ಲದೇ ಪ್ಲಾಸ್ಟಿಕ್ ಕೈಚೀಲಗಳ ನಿಷೇಧ ಭಾಗಶಃ ಜಾರಿಯಾಗಿರುವ ಈ ದಿನಗಳಲ್ಲಂತೂ ಇವು ಬಹು ಉಪಕಾರಿಯಾಗಿವೆ. ನಿನ್ನೆ ಬೆಂಗಳೂರಿನ ನಮ್ಮ ಮನೆ ಹತ್ತಿರದ ಒಂದು ಅಂಗಡಿಯಲ್ಲಿ ಸಂತೆಚೀಲ ನೇತಾಡುತ್ತಿರೋದು ನೋಡಿದೆ. ದಿನಸಿ-ತರಕಾರಿ ಕೊಳ್ಳಲು ಅನುಕೂಲವಾಗುತ್ತೆ, ಕೊಳ್ಳೋಣ ಅಂತ ಹೋಗಿ ಕೇಳಿದರೆ, ಅಂಗಡಿಯವ ಒಂದು ಚೀಲಕ್ಕೆ 150 ರೂಪಾಯಿ ಹೇಳೋದಾ! "ಏ ಹೋಗಯ್ಯಾ, ಮನೇಲಿ ಬೇಕಾದಷ್ಟು ವಿಮಲ್ ಚೀಲ ಇದಾವೆ, ನಿನ್ ಚೀಲ ಯಾವನಿಗ್ ಬೇಕು" ಅಂತ ಗೊಣಗಿಕೊಂಡು ಬಂದೆ.

No comments: