Friday, July 31, 2020

ಸಹಸ್ರಪದಿ

ಮೈ ಚಳಿ ಬಿಟ್ಟು ನಡೆದಿದ್ದರೆ
ಯಾವ ಉರಗಕ್ಕೂ ಕಮ್ಮಿಯಿಲ್ಲ
ಹತ್ತಿರದಿಂದ ನೋಡಿದರೆ
ಬೆಚ್ಚಿ ಬೀಳಿಸುವಂತಹ ಮೈಮಾಟ
ಕಪ್ಪು-ಕಂದು ಬಣ್ಣಗಳ ಹೊತ್ತು
ಸಾವಿರ ಪಾದಗಳ ಊರಿ
ನಡೆವೆ ನೋಡುತ್ತ ಅತ್ತ ಇತ್ತ ಸುತ್ತ ಮುತ್ತ
ಮೀಸೆಯಲ್ಲಾಡಿಸುತ್ತ ಲಯಬದ್ಧ

ಮೊಂಡಾಗಿ ಜಗತ್ತನ್ನೆದುರಿಸಲು
ಎಲ್ಲರಿಗೂ ಧೈರ್ಯವಿಲ್ಲವೈ
ಬೆಂಬಿಡದ ನಾಚಿಕೆ
ಏನು ಮಾಡಲೂ ಹಿಂಜರಿಕೆ
ಅಂತರ್ಮುಖಿಯಾಗಿ
ನೆಲವ ನೋಡುತ್ತ ನಡೆವೆ
ಸಿಕ್ಕ ಚಿಗುರು-ಸಸ್ಯಶೇಷಗಳನೇ
ಮೃಷ್ಟಾನ್ನವೆಂದು ತಿನ್ನುವೆ
ಅವರಾಗಿಯೇ ಬಂದು
ಯಾರಾದರೂ ಮೈ ಮುಟ್ಟಿದರೂ
ಚಕ್ಕುಲಿಯಂತೆ ಮುರುಟಿ
ಸುಮ್ಮನಾಗಿಬಿಡುವೆ
ನನ್ನೊಳಸರಿದುಬಿಡುವೆ

ಇಲ್ಲವೆಂದಲ್ಲ ನನಗೂ
ತಲೆಯೆತ್ತಿ ನಿಲ್ಲುವ ಹಂಬಲ
ಎಲ್ಲರೂ ತಾವೇ ಶ್ರೇಷ್ಠರೆಂದು ಬೀಗುವಾಗ
ಮೈಕೆತ್ತಿ ಭಾಷಣ ಬಿಗಿವಾಗ
ತಳುಕು ಬಳುಕು ಮೈಗೇರಿಸಿಕೊಂಡು
ನಡೆವಾಗ ವಂದಿ ಮಾಗಧರೊಡನೆ
ಒತ್ತಿ ಬರುತ್ತದೆ ಬಯಕೆ ಬಾಲದ ತುದಿಯಿಂದ:
ಭುಸುಗುಡುತ್ತ ಹೆಡೆಯೆತ್ತಿ ನಿಂತುಬಿಡಲೇ
ಯಾರಿಗೇನು ಕಮ್ಮಿ ನಾನು
ಈ ಭೂಮಿಯ ಇತಿಹಾಸವನೆಲ್ಲ ಬಲ್ಲೆ
ನೂರು ಮೊಟ್ಟೆಗಳನೊಟ್ಟಿಗೇ ಇಡಬಲ್ಲೆ
ಹೊಗದೆಯೇ ಅರಿತಿರುವೆ ಎಲ್ಲರೊಡಲ ಟೊಳ್ಳ

ಪಥ ಬದಲಿಸಲು ಎಷ್ಟು ಹೊತ್ತು
ಕ್ರಾಂತಿಯ ಬೆಂಕಿಗೆ ಸಾಕು ಸಣ್ಣ ಕಿಚ್ಚು
ಹಾಗೆಂದೇ ಮಾಡಿಕೊಳ್ಳುವೆ
ನನಗೆ ನಾನೇ ಸಮಾಧಾನ:
ನಿರ್ಮಿತಿಯ ಮಿತಿಗೆ ಮಣಿದು
ಸುಮ್ಮನಿರುವುದೇ ಸುಮ್ಮಾನ
ತಟಸ್ಥ ನಿಲುವೇ ಗೆಲುವು ಕೆಲವಕ್ಕೆ
ಸುತ್ತಿದ ದೇಹವ ಬಿಚ್ಚಿ ನಡೆವೆ-
ನನಗೆಂದೇ ಇರುವ ದಾರಿಯಲ್ಲಿ
ಇದ್ದರೆ ತಡೆಗೋಡೆ ಮುಂದೆ
ವಾಪಸು ಬರುವೆ ತುಸುವೂ ಬೇಸರಿಸದೆ.


No comments: