ಸಂಜೆಯಾಗುತ್ತಿದ್ದಂತೆಯೇ ಒಂದು ಬಂಡೆಯ ಮೇಲೆ ಕೂರುತ್ತೀ-
ತುಂಗಭದ್ರೆಯ ಜುಳುಜುಳುವಿಗೆ ಕಾಲು ತಾಕಿಸಿ ಧ್ಯಾನಸ್ಥನಾಗಿ
ಕೈಯಲ್ಲಿ ಗಾಳವಿದ್ದರೂ ಪಕ್ಕದಲ್ಲಿ ಬುಟ್ಟಿಯಿಲ್ಲ
ಸಿಕ್ಕ ಮೀನುಗಳನೆಲ್ಲ ವಾಪಸು ನೀರಿಗೆ ಬಿಡುತ್ತೀ
ಊರ ಹುಡುಗರು ನಿನ್ನ ನೋಡಿ ಹೆದರಿ ಓಡುವರು
ಜನವೆಲ್ಲ ನಿನ್ನ ಬಗ್ಗೆ ಏನೇನೋ ಆಡಿಕೊಳ್ಳುವರು
ಆದರೂ ನಿನ್ನದು ನಿಷ್ಕಂಪಿತ ನಡೆ
ಕಿವಿಯಿಲ್ಲದ ನೀನು ಹೇಗೆ ಎಲ್ಲವನೂ ಕೇಳುತ್ತೀ
ಮೂಗಿಲ್ಲದ ನೀನು ಹೇಗೆ ಎಲ್ಲವನೂ ಗ್ರಹಿಸುತ್ತೀ
ತೆಂಬಕಸ್ವಾಮಿಯ ದೇಗುಲದ ಘಂಟೆನಿನಾದದ ಪ್ರತಿಧ್ವನಿಯಲಿ
ಕಂಡುಕೊಂಡೆಯೇ ನಿಮ್ಮೂರ ದೇಗುಲದ ಢಂಡಣ
ತುಂಗಭದ್ರೆಯ ಒಡಲ ತಂಪಲಿ ಸಿಕ್ಕಿತೇ
ನಿಮ್ಮೂರ ನದಿನೀರ ಸೇಚನ
ಇಲ್ಲಿ ಸುರಿಯುತ್ತಿರುವ ಧೋಮಳೆಗಿದೆಯೇ
ಕಡಲ ಮೇಲಿನ ಮಳೆಯ ಮರೆಸುವಷ್ಟು ಕಸುವು
ಹಾಗೆ ಯಾರದೋ ಕಥೆ ಕೇಳಿ ಕಣ್ಣೀರಾಗಲು
ನಮ್ಮೊಳಗೂ ಒಂದು ಕಣ್ಣೀರ ಕಥೆಯಿರಬೇಕೆ?
ಹಾಗೆ ಯಾರಿಗೋ ನಿರಪೇಕ್ಷೆಯಿಂದ ಹೆಗಲಾಗಲು
ನಮ್ಮನೂ ಹೆಗಲು ಕೊಟ್ಟು ಯಾರಾದರೂ ಎಬ್ಬಿಸಿರಬೇಕೆ?
ಹಾಗೆ ನುಡಿ ಹೊರಡದವರ ದನಿ ಅರಿಯುವಂತಾಗಲು
ನಮ್ಮೊಳಗೂ ಘನಿಗಟ್ಟಿದ ಮೌನವಿರಬೇಕೆ?
ಹೇ ವಿಜಯನಗರದ ಬಂಧುವೇ,
ಅಪರೂಪದ ಸುಂದರನೇ,
ಕೊನೆಗಾದರೂ ಸಿಕ್ಕಿತೇ ನಿನಗೆ
ನೀನು ಹುಡುಕುತ್ತಿದ್ದ ಮೀನು?
ನಿನ್ನಂತಃಕರಣಕ್ಕೊಪ್ಪುವ ಮೀನು?
[ವಸುಧೇಂದ್ರರ 'ತೇಜೋ ತುಂಗಭದ್ರಾ' ಓದಿ]
No comments:
Post a Comment