ನಾವೆಲ್ಲ ನಮ್ಮ ಪಠ್ಯಪುಸ್ತಕದಲ್ಲಿ ಓದಿದ್ದೇ: “ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು ಬಳ್ಳಗಳಲ್ಲಿಟ್ಟು ರಸ್ತೆಯ ಇಕ್ಕೆಲಗಳಲ್ಲೂ ಕೂತು ಮಾರುತ್ತಿದ್ದರು” -ಎಂದು. ಅಂತಹ ವೈಭೋಗವನ್ನು ಕಣ್ಣಾರೆ ನೋಡುವ ಅದೃಷ್ಟವನ್ನಂತೂ ನಾವು ಪಡೆಯಲಿಲ್ಲ. ಚಿನ್ನ-ಬೆಳ್ಳಿ-ವಜ್ರಗಳೆಲ್ಲ ಅತ್ಯಮೂಲ್ಯ ದ್ರವ್ಯಗಳಾಗಿ ಮಾರ್ಪಟ್ಟು, ಗಾಜು ಹೊದಿಸಿದ ಹವಾನಿಯಂತ್ರಿತ ಜ್ಯುವೆಲರಿ ಅಂಗಡಿಗಳಲ್ಲಿ ಸ್ಥಾಪಿತವಾಗಿ, ರಸ್ತೆಯಲ್ಲಿ ನಡೆಯುವಾಗ ಅತ್ತ ನೋಡಲೂ ಭಯವಾಗುವಷ್ಟು ಬೆಲೆ ಹೊಂದಿರುವಾಗ, ಹಿಂದೊಮ್ಮೆ ಅವು ರಸ್ತೆ ಬದಿಗೆ ಮಾರಲ್ಪಡುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದಾಯಕ ವಿಷಯ. ಆದರೆ ಹೆಚ್ಚುಕಮ್ಮಿ ಚಿನ್ನದ ಬಣ್ಣವನ್ನೇ ಹೊಂದಿದ ಒಂದು ಬಗೆಯ ಹಣ್ಣುಗಳು ಏಪ್ರಿಲ್-ಮೇ-ಜೂನ್ ತಿಂಗಳಲ್ಲಿ ರಸ್ತೆ ಬದಿಯಲ್ಲಿ ವಿಕ್ರಯಗೊಳ್ಳುವುದನ್ನು ನೀವು ನೋಡಿರಬಹುದು. ತಳ್ಳುಗಾಡಿಗಳಲ್ಲೂ, ಹಣ್ಣಿನಂಗಡಿಗಳಲ್ಲೂ, ಸಂತೆಬುಟ್ಟಿಗಳಲ್ಲೂ, ಇವನ್ನು ಮಾರಲೆಂದೇ ಶುರುವಾದ ಮೇಳಗಳಲ್ಲೂ ಈ ಹಣ್ಣುಗಳು ರಾಶಿರಾಶಿ ಸಂಖ್ಯೆಯಲ್ಲಿ ಜಮೆಯಾಗಿ ಪಾದಚಾರಿಗಳ-ದಾರಿಹೋಕರ ಕಣ್ಮನಗಳನ್ನು ಸೆಳೆಯುವವು. ಅದೆಷ್ಟೇ ಗತ್ತಿನಿಂದ ಯಾವುದೋ ಯೋಚನೆಯಲ್ಲಿ ನೇರಮುಖಿಯಾಗಿ ನೀವು ಸಾಗುತ್ತಿದ್ದರೂ ಈ ಹಣ್ಣುಗಳು ತಮ್ಮ ಪರಿಮಳಮಾತ್ರದಿಂದ ನಿಮ್ಮ ಗಮನವನ್ನು ಸೆಳೆಯದೇ ಇರಲಾರವು. ಚಿನ್ನ-ಬೆಳ್ಳಿಗಳಂತಲ್ಲದೆ ಜನಸಾಮಾನ್ಯರೂ ಕೊಳ್ಳಬಹುದಾದ ಬೆಲೆಯನ್ನು ಹೊಂದಿದ್ದು, ಕೊಂಡು ತಿಂದರೆ ಯಾವ ಆಭರಣ ಧರಿಸಿದರೂ ಸಿಗಲಾರದಷ್ಟು ಆನಂದವನ್ನು ಜಿಹ್ವೆಯ ಮೂಲಕ ತನುಮನಗಳಿಗೆ ಕೊಡುವವು ಈ ಹಣ್ಣುಗಳು. ಇಷ್ಟೆಲ್ಲ ಹೇಳಿದಮೇಲೆ ಈ ಹಣ್ಣುಗಳು ಯಾವುವು ಎಂದು ರಸಪ್ರಜ್ಞೆ ಹೊಂದಿದ ಬುದ್ಧಿವಂತರಾದ ನಿಮಗೆ ತಿಳಿದೇಹೋಗಿರುತ್ತದೆ: ನೀವು ಊಹಿಸಿದಂತೆ, ನಾವು ಈಗ ಸವಿಯಲು ಹೊರಟಿರುವುದು ಹಣ್ಣುಗಳ ರಾಜ, ರಾಜಾಧಿರಾಜ, ರಾಜಮಾರ್ತಾಂಡ ಶ್ರೀಶ್ರೀಶ್ರೀ ಮಾವಿನಹಣ್ಣನ್ನು!
ಎಲ್ಲ ಬಹುಪರಾಕುಗಳಿಗೂ ಯೋಗ್ಯ ಈ ಮಾವಿನಹಣ್ಣು. ಜಗತ್ತಿನಲ್ಲಿ ಬೆಣ್ಣೆಹಣ್ಣು ಇಷ್ಟವಿಲ್ಲ ಎನ್ನುವವರು ಸಿಗಬಹುದು, ಹಲಸಿನಹಣ್ಣಿನ ಮೇಣಕ್ಕೆ ಅಂಜಿ ದೂರ ನಿಲ್ಲುವವರು ಕಾಣಬಹುದು, ಅನಾನಸ್ ತಿಂದರೆ ಉಷ್ಣ ಎಂದು ವರ್ಜಿಸಿದವರು ಇರಬಹುದು, ಆದರೆ ಮಾವಿನಹಣ್ಣು ಇಷ್ಟವಿಲ್ಲ ಎನ್ನುವವರು ವಿರಳ. ಅದರ ರುಚಿಯೇ ಹಾಗೆ! ಸುಮಾರು ಮೂವತ್ತಕ್ಕೂ ಹೆಚ್ಚಿನ ತಳಿಗಳಲ್ಲಿ ಲಭ್ಯವಿರುವ ಈ ಹಣ್ಣು ತನ್ನ ವಿಶಿಷ್ಟ ಒನಪು, ಕಂಪು ಮತ್ತು ಸ್ವಾದದಿಂದ ಹೆಸರು ಮಾಡಿದೆ. ನೀಳ ಅಥವಾ ಗುಂಡು ಮುಖ ಹೊಂದಿದ್ದು, ಗಲ್ಲದ ಬಳಿ ತುಸು ವಾರೆಯಾಗಿ ಚೂಪನೆ ಮೂತಿ ಹೊಂದಿರುವ, ಹಸಿರು-ಹಳದಿ-ಕೆಂಪು ಬಣ್ಣಗಳ ಮಿಶ್ರಣದಲ್ಲಿ ನಳನಳಿಸುವ ಈ ಹಣ್ಣನ್ನು ನೋಡಿದರೇ ಒಲವಾಗುವುದು; ಇನ್ನು ತಿಂದರೆ?
‘ಹಸಿದು ಹಲಸು, ಉಂಡು ಮಾವು’ ಎಂಬ ನಾಣ್ಣುಡಿಯಂತೆ ಮಾವಿನ ಹಣ್ಣನ್ನು ಊಟವಾದ ಬಳಿಕ ತಿನ್ನುವವರೇ ಹೆಚ್ಚು. ಮೊದಲೇ ತುಂಬಿರುವ ಹೊಟ್ಟೆ; ಇನ್ನು ಈ ಹಣ್ಣಿಗೆಲ್ಲಿ ಜಾಗ? –ಎಂಬುದೆಲ್ಲಾ ಸೌಜನ್ಯಕ್ಕೆ ಆಡುವ ಮಾತುಗಳು. ಮಾವಿನಹಣ್ಣನ್ನು ಸೇರಿಸಲು ಹೊಟ್ಟೆಯಲ್ಲಿ ಜಾಗ ಸದಾ ಇದ್ದೇ ಇರುತ್ತದೆ. ಅದಕ್ಕೆಂದೇ ದೇವರು ಜಟರದಲ್ಲಿ ಸೆಪರೇಟ್ ಕಂಪಾರ್ಟ್‌ಮೆಂಟ್ ಸೃಷ್ಟಿಸಿರುತ್ತಾನೆ. ಮತ್ತದು ಮಾವಿನ ಹಣ್ಣಿನ ಸೀಸನ್ನಿನಲ್ಲಿ ತೆರೆಯಲ್ಪಡುತ್ತದೆ. ನಿಮ್ಮ ಹಲ್ಲು, ನಾಲಿಗೆ, ಅನ್ನನಾಳ, ಜೀರ್ಣಾಂಗವ್ಯೂಹಗಳೆಲ್ಲ ಮಾವಿನಹಣ್ಣನ್ನು ಸೇವಿಸಲೆಂದೇ ತಯಾರಾಗುತ್ತವೆ. ಹೀಗಾಗಿ ಟೇಬಲ್ಲಿನ ಮೇಲಿನ ಬಾಸ್ಕೆಟ್ಟಿನಲ್ಲಿ ಕಮ್ಮಗೆ ಕುಳಿತಿರುವ ಮಾವಿನಹಣ್ಣನ್ನು ತಿನ್ನಲೊಲ್ಲೆ ಎಂದು ನಿರಾಕರಿಸಿವುದು ಎಂದಿಗೂ ಸಲ್ಲದು.
ಮಾವಿನಹಣ್ಣನ್ನು ತಿನ್ನುವ ಬಗೆ ಸಾಮಾನ್ಯವಾಗಿ ಅದರ ಗಾತ್ರ ಮತ್ತು ತಿನ್ನುವವರ ಫಲಪ್ರೀತಿಯನ್ನು ಅವಲಂಭಿಸಿರುತ್ತದೆ. ಗಾತ್ರ ಬಹಳ ದೊಡ್ಡದಿದೆಯೋ, ಅದನ್ನು ಕತ್ತರಿಸಿ ಹೋಳುಗಳನ್ನಾಗಿ ಮಾಡಿ ತಿನ್ನುತ್ತಾರೆ. ಗಾತ್ರ ಚಿಕ್ಕದಿದೆಯೋ, ‘ಏ, ಇಡೀ ಹಣ್ಣೇ ತಿನ್ನೋ ಮಾರಾಯಾ’ ಅಂತ ಪುಸಲಾಯಿಸುವವರು ಪಕ್ಕದಲ್ಲಿದ್ದಾರೋ, ಮತ್ತೆ ಯೋಚಿಸುವ ಗೊಡವೆಯೇ ಇಲ್ಲ. ಹಾಗೆ ಹಣ್ಣನ್ನು ಇಡಿಯಾಗಿ ತಿನ್ನುವುದರಲ್ಲೂ ಹಲವು ಬಗೆಯಿದೆ: ಕೆಲವರು ಒಂದು ಕಡೆಯಿಂದ ಶುರು ಮಾಡಿ ಸಿಪ್ಪೆ ಸಮೇತ ತಿನ್ನುತ್ತಾರೆ. ಇನ್ನು ಕೆಲವರು ಮೊದಲು ಸಿಪ್ಪೆಯನ್ನೆಲ್ಲ ಹಲ್ಲಿನಿಂದ ಕಚ್ಚಿ ಎಳೆದು ತೆಗೆದು, ಸಿಪ್ಪೆಗಂಟಿದ ಹಣ್ಣನ್ನು ಕೆರಚಿ ತಿಂದು, ನಂತರ ಸಿಪ್ಪೆರಹಿತ ಹಣ್ಣಿನ ಗುಳವನ್ನು ಆಸ್ವಾದಿಸಿ, ಕೊನೆಯಲ್ಲಿ ಓಟೆಯನ್ನು ಸೀಪುತ್ತಾರೆ. ಮತ್ತೆ ಕೆಲವರು ಹಣ್ಣಿನ ತಳದಲ್ಲಿ ಕಚ್ಚಿ ಸಣ್ಣ ರಂದ್ರ ಮಾಡಿ ಹಣ್ಣಿನೊಳಗಿನ ಸಾರಸತ್ವವನ್ನೆಲ್ಲ ಅಲ್ಲಿಂದಲೇ ಸೀಪಿ ಎಳೆದುಕೊಂಡು ಮುಗಿಸುತ್ತಾರೆ. ಹಣ್ಣಿನೊಳಗೆ ಹುಳಗಳಿದ್ದರೆ ಎಂಬ ಭಯವಿರುವ ಕೆಲವರು, ಹಣ್ಣನ್ನು ಎರಡ್ಮೂರು ಭಾಗವನ್ನಾಗಿ ಕತ್ತರಿಸಿ ಪರೀಕ್ಷಿಸಿ ನಂತರ ಎಲ್ಲವನ್ನೂ ತಿನ್ನುತ್ತಾರೆ.
ಮಾವಿನಹಣ್ಣನ್ನು ಇಡಿಯಾಗಿ ತಿನ್ನಲು ಎಂದಿಗೂ ಮುಜುಗರ ಪಟ್ಟುಕೊಳ್ಳಬಾರದು. ಅವರಿವರು ನೋಡುತ್ತಿದ್ದಾರೆ, ಸಿಪ್ಪೆಯನ್ನು ಹಲ್ಲಿನಿಂದ ಕಚ್ಚಿ ಎಳೆದರೆ ಚೆನ್ನಾಗಿ ಕಾಣುವುದಿಲ್ಲವೇನೋ, ಇಡೀ ಹಸ್ತ ರಸಮಯವಾಗುತ್ತದೆ, ಒಳಗೆ ಹುಳ ಇರಬಹುದೇನೋ, ತಿನ್ನುವಾಗ ರಸ ಮೊಣಕೈವರೆಗೂ ಇಳಿಯಬಹುದು, ಅದನ್ನು ನೆಕ್ಕಬೇಕಾಗಬಹುದು, ಒಂದೆರಡು ಹನಿ ನೆಲದ ಮೇಲೂ ಬೀಳಬಹುದು, ಧರಿಸಿದ ಬಟ್ಟೆ ಚೂರು ಕಲೆಯಾಗಬಹುದು, ಓಟೆಯನ್ನು ಚೀಪುತ್ತಾ ಕೂರುವುದು ‘ಚೀಪ್’ ಆಗತ್ತೋ... ಅಯ್ಯೋ, ಯೋಚಿಸುತ್ತಾ ಕುಳಿತರೆ ನೂರಾರು ತಲೆಬಿಸಿಗಳು! ಆದರೆ ಮಾವುಪ್ರಿಯರಾದ ನೀವು ಈ ಯಾವುದಕ್ಕೂ ಅಂಜಬಾರದು: ‘ಊಟ ತನ್ನಿಚ್ಚೆ, ನೋಟ ಪರರಿಚ್ಚೆ’ ಎಂಬ ಉಕ್ತಿಯೇ ಇದೆ. ಆ ಮಾತಿನಲ್ಲಿ ಗಟ್ಟಿಯಾದ ನಂಬಿಕೆಯಿಡಬೇಕು. ಹಣ್ಣುಗಳ ರಾಜನನ್ನೇ ಕೈಯಲ್ಲಿ ಹಿಡಿದಿದ್ದೀರಿ ಎಂಬುದನ್ನು ಮನಸಿಗೆ ತಂದುಕೊಳ್ಳಬೇಕು. ಹೊರಗೆ ನಡೆಯುತ್ತಿರುವ ನಾನಾ ಕ್ಷುದ್ರ ಸಂಗತಿಗಳನ್ನು ಮರೆಯಬೇಕು. ನೀವು ಮತ್ತು ಮಾವು –ಇಬ್ಬರೇ ಇರುವ ಈ ಲೋಕದಲ್ಲಿ ಕಣ್ಮುಚ್ಚಿ ಈ ಹಣ್ಣನ್ನು ಆಸ್ವಾದಿಸಬೇಕು: ಮಹದಾನಂದವು ನಿಮ್ಮದಾಗುವ ಪರಿಯನ್ನು ಅನುಭವಿಸಬೇಕು.
ಮಾವಿನಹಣ್ಣಿನ ಸೀಸನ್ನಿನಲ್ಲಿ ಒಂದಷ್ಟಾದರೂ ಹಣ್ಣುಗಳನ್ನು ತಿನ್ನದಿರುವುದು ಮಹಾಪರಾಧ. ಆಲ್ಫೋನ್ಸೋ, ರಸಪುರಿ, ಬಾದಾಮಿ, ಸಿಂಧೂರ, ಮಲಗೋವ, ಬೈಗನಪಲ್ಲಿ, ನೀಲಂ, ಮಲ್ಲಿಕಾ... ಹೀಗೆ ಹತ್ತಾರು ತಳಿಯ ಬೇರೆಬೇರೆ ಸ್ವಾದದ ಹಣ್ಣುಗಳು ಮಾರುಕಟ್ಟೆಯಲ್ಲಿ ಪ್ರತಿವರ್ಷವೂ ಸುಲಭವಾಗಿ ದೊರಕುತ್ತವೆ. ಈ ಕಾಲದಲ್ಲಿ ಏರ್ಪಡಿಸಲಾಗುವ ಮಾವುಮೇಳಗಳಿಗೆ ಹೋದರಂತೂ ಇನ್ನೂ ಹಲವು ವಿಧದ ಮಾವು ದೊರೆಯುವುದು. ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕ ವಿಧಾನದಲ್ಲಿ ಬೆಳೆದ ಹಣ್ಣುಗಳೆಂಬ ಲೇಬಲ್ಲೂ ಇಲ್ಲಿ ಕಾಣುವುದು. ನಿಮ್ಮ ಅಭಿರುಚಿ ಮತ್ತು ಹಣ ತೆರುವ ಸಾಮರ್ಥ್ಯಕ್ಕನುಗುಣವಾಗಿ ಹಣ್ಣುಗಳನ್ನು ಕೊಳ್ಳಬಹುದು. ಇನ್ನು ನಿಮ್ಮದೇ ತೋಪಿನಲ್ಲಿ ಬೆಳೆದ ಹಣ್ಣೋ: ಕೇಳುವುದೇ ಬೇಡ, ಮನಸೋ ಇಚ್ಛೆ ತಿನ್ನಬಹುದು. ನಿಮ್ಮ ನೆಂಟರಿಷ್ಟರೋ ಕಲೀಗುಗಳೋ ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದುಕೊಟ್ಟರೆ ಬೇಡ ಎನ್ನಬೇಡಿ. ‘ಒಳ್ಳೆಯದು ಎಲ್ಲಿಂದ ಬಂದರೂ ಪಡೆದುಕೋ’ ಅಂತ ಮಹಾಗ್ರಂಥಗಳಲ್ಲೇ ಹೇಳಿಬಿಟ್ಟಿದ್ದಾರೆ: ನಿಸ್ಸಂಕೋಚವಾಗಿ ಸ್ವೀಕರಿಸಿ.
ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೆ, ಕಾಡು-ಮೇಡು ಅಲೆದು ಗೊತ್ತಿದ್ದವರಿಗೆ, ಸ್ವಂತ ಮಾವಿನ ತೋಟ ಇರುವವರಿಗೆ ತಾಜಾ ಮಾವಿನಹಣ್ಣು ತಿನ್ನುವ ಅಭಿಯೋಗ ದೊರಕುವುದು. ಮರದಲ್ಲೇ ಬೆಳೆದು ಹಣ್ಣಾದ ಮಾವನ್ನು ಅಲ್ಲೇ ಕೊಯ್ದು ತಿನ್ನುವ ಮಜವೇ ಬೇರೆ. ಎತ್ತರದ ಮರವಾಗಿದ್ದರೆ, ಕಳಿತು ನೆಲಕ್ಕುದುರಿದ ಅಥವಾ ಬಡಿಗೆ ಎಸೆದು ಬೀಳಿಸಿದ ಅಥವಾ ದೋಟಿಯಿಂದೆಳೆದ ಅಥವಾ ಮರ ಹತ್ತಿ ಇಳಿಸಿದ ಹಣ್ಣನ್ನು ಅದೇ ಮರದ ನೆರಳಲ್ಲಿ ಕುಳಿತು ಸವಿಯುವುದು ಬೇರೆಯದೇ ಅನುಭೂತಿ. ಪುಟ್ಟಪುಟ್ಟ ಕಾಟುಮಾವಿನ ಹಣ್ಣುಗಳನ್ನು ಇಡಿಯಾಗಿ ಬಾಯಲ್ಲಿಟ್ಟು ಹುಳಿ-ಸಿಹಿ ರಸವನ್ನು ನುಂಗಿ ಓಟೆಯನ್ನು ಉಗುಳುವ ಖುಷಿ ಅನುಭವಿಸಿದವರಿಗಷ್ಟೇ ಗೊತ್ತು. ಕೆಲವು ಗಡ್ಡವಿರುವ ಕಸಿಮಾವಿನ ಹಣ್ಣುಗಳ ಓಟೆಯನ್ನು ಅದರ ಸಿಹಿಯಂಶ ಹೋಗುವವರೆಗೂ ಗಂಟೆಗಟ್ಟಲೆ ಸೀಪುತ್ತಾ ಕೂರುವುದು ಚಿಕ್ಕಮಕ್ಕಳಿಗೆ ಇಷ್ಟದ ಕೆಲಸ.
ಹಾಗಂತ ಮಾವಿನಹಣ್ಣನ್ನು ಕತ್ತರಿಸಿ ತಿನ್ನುವುದು ತಪ್ಪೇನಲ್ಲ. ಅದರಿಂದಲೂ ಹಲವು ಪ್ರಯೋಜನಗಳಿವೆ. ಬಹಳ ಮುಖ್ಯವಾಗಿ, ಹಣ್ಣಿನೊಳಗೆ ಹುಳುಗಳಿದ್ದರೆ ಅಥವಾ ಹಣ್ಣು ಒಳಗೊಳಗೇ ಕೊಳೆತಿದ್ದರೆ ಕತ್ತರಿಸಿದಾಗ ಕಣ್ಣಿಗೆ ಬೀಳುತ್ತದೆ. ಆಗ ಅದನ್ನು ‘ಸುಮ್ನೇ ದುಡ್ ದಂಡ’ ಅಂತ ಬೈದುಕೊಂಡು ಬೀಸಾಡಬಹುದು. ಮಲಗೋವಾದಂತಹ ದೊಡ್ಡಗಾತ್ರದ ಹಣ್ಣುಗಳನ್ನು ಕತ್ತರಿಸಿ, ಸಿಪ್ಪೆ ತೆಗೆದು, ಸಣ್ಣಸಣ್ಣ ಹೋಳುಗಳನ್ನಾಗಿ ಮಾಡಿ ತಟ್ಟೆಯಲ್ಲಿಟ್ಟುಕೊಂಡು, ಬೆಳದಿಂಗಳ ಟೆರೇಸಿನಲ್ಲಿ ಮೂರ್ನಾಲ್ಕು ಜನ ಸುತ್ತ ಕೂತು ಚಮಚದಲ್ಲೋ ಫೋರ್ಕಿನಲ್ಲೋ ತಿನ್ನುವುದು ಯಾವ ಪಾರ್ಟಿಗೂ ಕಮ್ಮಿಯಲ್ಲ. ಹಾಗೆ ಹೆಚ್ಚಿದಾಗ ಉಳಿದ ಓಟೆಗಂಟಿದ ಗುಳವನ್ನು ತಿನ್ನಲು ಮಕ್ಕಳಿಗೆ ಕೊಡಬಹುದು. ಉಳಿದ ಹೋಳುಗಳನ್ನು ಫ್ರಿಜ್ಜಿನಲ್ಲಿಟ್ಟು ಮರುದಿನ ಟಿಫಿನ್ ಬಾಕ್ಸಿನಲ್ಲಿ ಆಫೀಸಿಗೆ ಒಯ್ದು ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು.
ಮಾವಿನಹಣ್ಣು ಬಳಸಿ ಹಲವು ಖಾದ್ಯಗಳನ್ನು ತಯಾರಿಸುವುದು ಸಾಮಾನ್ಯ. ಹೀಗೆ ತಯಾರಿಸುವಾಗ, ಒಂದೆರಡು ಹೋಳುಗಳು, ಕೊನೆಯಲ್ಲಿನ ಓಟೆ ತಮಗೆ ಸಿಕ್ಕೇ ಸಿಗುತ್ತದೆ ಎಂಬ ಅರಿವಿರುವ ಮಕ್ಕಳು, ಅಡುಗೆಮನೆಯಲ್ಲೇ ಸುಳಿಯುತ್ತಿರುತ್ತಾರೆ. ಮಾವಿನಹಣ್ಣಿನ ಕಾಲ ಮಕ್ಕಳಿಗೂ ಖುಷಿಯ ಕಾಲ.
ಮಾವಿನ ಮರವೊಂದು ತನ್ನ ಎಲೆ, ಚಿಗುರು, ಹೂವು, ನೆರಳು, ಕೋಗಿಲೆಯುಲಿ, ಮಿಡಿ, ಕಾಯಿ, ಹಣ್ಣು –ಎಲ್ಲವುಗಳಿಂದ ಸಂಭ್ರಮವನ್ನು ಪಸರಿಸುವ ಪರಿಯೇ ಅದ್ಭುತ. ಎಲ್ಲ ಹಣ್ಣುಗಳನ್ನೂ ಅವುಗಳು ದೊರಕುವ ಕಾಲದಲ್ಲಿ ತಿಂದುಬಿಡಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಮಾವಿನಹಣ್ಣಿನ ಕಾಲ. ನೀವಿನ್ನು ತಡ ಮಾಡಬೇಡಿ. ಒಂದು ಕೈಚೀಲ ಹಿಡಿದು ಸಂತೆಗೋ ಮಾರುಕಟ್ಟೆಗೋ ಮಾವಿನತೋಪಿಗೋ ಧಾವಿಸಿ. ತಾಜಾ ಹಣ್ಣುಗಳನ್ನು ಕೈಯಲ್ಲಿ ಹಿಡಿಯಿರಿ. ಇಡಿಯಾಗಿ ತಿನ್ನಿ. ಓಟೆಯನ್ನು ಮಣ್ಣಿಗೆಸಿಯಿರಿ. ಬರುವ ಮಳೆಗಾಲದಲ್ಲಿ ಆ ಓಟೆ ಅಲ್ಲೇ ಬೇರು ಬಿಟ್ಟು ಮೇಲೆ ಹಸಿರಾಗಿ ಕುಡಿಯೊಡೆಯುವುದು. ಅದೇ ಮುಂದೆ ಗಿಡವಾಗಿ ಮರವಾಗಿ ಹೂಬಿಟ್ಟು ಕಾಯಾಗಿ ಹಣ್ಣಾಗಿ ನಿಮ್ಮ ಮೊಮ್ಮಕ್ಕಳು ಆ ಹಣ್ಣನ್ನು ‘ಆಹಾ’ ಎಂದು ತಿಂದು ಚಪ್ಪರಿಸುವರು. ಸಿಹಿಯ ಸಡಗರವು ಮುಂದಿನ ತಲೆಮಾರಿಗೆ ಹಾಗೆಯೇ ವರ್ಗವಾಗುವುದು.
[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ]
No comments:
Post a Comment