Saturday, October 07, 2017

ಮಳೆ

ಈ ಮಳೆ ನಿಲ್ಲುವುದೇ ಇಲ್ಲ
ಹೀಗೇ ಇನ್ನೂ ನೂರಾರು ದಿವಸ ಮಾಸ
ಸಂವತ್ಸರಗಳವರೆಗೆ ಎಡಬಿಡದೆ ಸುರಿವುದು
ಋತುಗಳು ಲೆಕ್ಕ ತಪ್ಪಿ ಮಳೆನಕ್ಷತ್ರಗಳು ದಿಕ್ಕಾಪಾಲಾಗಿ
ಹಗಲು ರಾತ್ರಿ ಬಿಸಿಲು ಚಳಿ ಇಬ್ಬನಿ ಗಾಳಿಗಳೆಲ್ಲ
ಮಳೆಯೊಡಲೊಳಗೆ ಹುದುಗಿ ಕಳೆದುಹೋಗಿ

ನಗರದ ನೆಲಕ್ಕಂಟಿದ ಟಾರು-ಕಾಂಕ್ರೀಟೆಲ್ಲ ಸಂಪೂರ್ಣ ಕಿತ್ತುಬಂದು
ಮಣ್ಣಿನೆಷ್ಟೋ ಅಡಿಯಾಳದಲ್ಲಿ ಅದೆಷ್ಟೋ ವರ್ಷದ ಹಿಂದೆ
ಹುದುಗಿದ್ದ ಸಜೀವ ಬೀಜಗಳು ಮೊಳಕೆಯೊಡೆದು ಮೇಲೆದ್ದು
ಉದ್ಯಾನನಗರಿಯ ತುಂಬೆಲ್ಲ ಹಸಿರು ಮೇಳಯಿಸಿ
ನೀರಲ್ಲಿ ನಿಂತು ನಿಂತು ಫ್ಲೈ‌ಓವರಿನ ಕಾಲುಗಳು ಗ್ಯಾಂಗ್ರಿನ್ನಿಗೊಳಗಾಗಿ
ವಾಹನಗಳ ಟಯರುಗಳು ಜಲಪಾದಗಳಾಗಿ ಬದಲಾಗಿ
ಎತ್ತರದ ಕಟ್ಟಡಗಳು ಗುಡ್ಡಗಳೆಂದೂ
ಅಗಲ ಕಟ್ಟಡಗಳು ದ್ವೀಪಗಳೆಂದೂ ಹೆಸರು ಮಾಡಿ
ನೀರು ನಗರದೊಳಗೋ ನಗರ ನೀರೊಳಗೋ ಎಂಬಂತಾಗಿ

ಮನುಷ್ಯನೆಂಬ ಜೀವಿ ನೀರಲ್ಲೂ ದಡದಲ್ಲೂ ಬದುಕಬಲ್ಲ
ಉಭಯಚರವಾಗಿ ಪರಿವರ್ತಿತಗೊಂಡು
ಆಗೀಗ ತೇಲಿಬರುವ ನೋಟಿನ ಕಂತೆಗಳನ್ನೇ ತಿಂದು ಬದುಕುತ್ತ
ಹೊಟ್ಟೆ ಡೊಳ್ಳಾಗಿ ದೇಹ ತಿಮಿಂಗಿಲವಾಗಿ ಬೆಳೆದು
ಸಣ್ಣಪುಟ್ಟ ಜೀವಿಗಳ ಬೆದರಿಸಿ ಮೆರೆದು
ನೀರಲ್ಲು ಬಡಾವಣೆಗಳ ರಚಿಸಿ, ಜಾಗ ಸಿಕ್ಕಲ್ಲೆಲ್ಲ ದೊರಗು ಕೊರೆದು
ಗುಡ್ಡಬೆಟ್ಟಗಳನೊಂದೊಂದಾಗಾಕ್ರಮಿಸಿ ಹಕ್ಕು ಸ್ಥಾಪಿಸಿ
ಗದ್ದುಗೆಯ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕೂತು
ತಿರುವಿ ಒದ್ದೆ ಮೀಸೆಯ, ಕಪ್ಪು ಕನ್ನಡಕದೊಳಗಿಂದ ಮೇಲೆ ನೋಡುವನು

ಆಗ ಕೇಳುವುದು ಅಶರೀರವಾಣಿ, ಮೋಡದೊಳಗಿಂದ ಹೊರಟ
ಕಿರಣದಂತೆ: ಯದಾ ಯದಾಹಿ ಧರ್...

ದನಿ ಕೇಳಿದ್ದೇ ಥರಥರ ನಡುಗಿ
ನೀರೊಳಗೆ ಮುಳುಗಿ ತಲೆಮರೆಸಿಕೊಂಡು
ಬೆಮರುವನು ನೀರೊಳಗು ನೆನಪಾದಂತೆ ಹಳೆಯದೆಲ್ಲ
ಸುರಿವುದಾಗ ಸಂತಾಪ-ಪಶ್ಚಾತ್ತಾಪಗಳು ಥೇಟು ಮಳೆಯಂತೆ.

Thursday, September 21, 2017

ಆ ಹಕ್ಕಿಯಾಗಬೇಕೆಂದರೆ

ಮುಂದಿನ ಜನ್ಮವೊಂದಿದ್ದರೆ ನಾನು ಅಮೆಜಾನ್ ಮಳೆಕಾಡಿನಲ್ಲಿ
ನೇರಳೆ ಬಣ್ಣದ ರೆಕ್ಕೆಗಳ ಪಾರಿವಾಳವಾಗಿ ಹುಟ್ಟುವೆ
ಬಿಸಿಲಿನ ಕುಡಿಯೂ ತಲುಪದ ದಟ್ಟಾರಣ್ಯದ ನಡುವೆ ಹಬ್ಬಿದ
ಬಿದಿರುಮೆಳೆಗಳ ನಡುವೆ ಪರ್ಣಪಾತಕ್ಕಭಿಮುಖವಾಗಿ
ನನ್ನ ರೆಕ್ಕೆಗಳ ಪುಟುರ್ರನೆ ಬಡಿದು ಮೇಲೆ ಹಾರುವೆ
ನೆಲಕಾಣದ ಪರಿ ಎಲೆಹಾಸಿದ ಮೆತ್ತೆಯಲಿ ಕೂತು
ರಾಗವಾಗಿ ಗುಟುರು ಹಾಕಿ ಸಂಗಾತಿಯ ಕರೆವೆ
ಇಳಿಸಂಜೆಗೆ ಕಳೆಕಟ್ಟುವ ಜೀರುಂಡೆಯ ಸಂಗೀತಕೆ
ತುಸುನಾಚಿದ ಅವಳೆದೆಯಲಿ ಪ್ರೇಮದುಸಿರು ತುಂಬುವೆ
ದೊಡ್ಡ ಮರದ ಬುಡದಲಿ ಗೂಡೊಂದು ಕಟ್ಟಿ
ಅವಳಿಟ್ಟ ಮೊಟ್ಟೆಗಳ ಜತನದಿಂದ ಕಾಯುವೆ
ರೆಕ್ಕೆ ಬಲಿಯದ ಮರಿಗಳಿಗೆ ತೊದಲುಹೆಜ್ಜೆ ಕಲಿಸುವೆ
ಅಳಿವಿನಂಚಿನ ನಮ್ಮ ಸಂತತಿ ಮತ್ತೆ ಬೆಳೆವುದ ನೋಡುವೆ

ಇಂದಿನಿಂದಲೇ ದುಡಿಯಬೇಕಿದೆ ಅಂಥ ಕನಸಿನ ತುಡಿತಕೆ
ಬಿದಿರ ಹೂವನೆಲ್ಲ ಆಯ್ದು, ಒಡಲ ಬೀಜ ಸೋಸಿ ತೆಗೆದು
ಆ ಪಾರಿವಾಳದ ಗುಂಪನು ಹುಡುಕಿ ಹೊರಡಬೇಕಿದೆ
ಕಾಡ ಕಡಿವ ಕೊಡಲಿ ಹಿಡಿದ ಕೈಯ ತಡೆಯಬೇಕಿದೆ
ಮಾಡಬೇಕಿದೆ ಋಜುತ್ವದಿಂದ ಆ ಕಪೋತದಳಿವು
ನಮ್ಮ ಲೋಭದಿಂದ ಆಗದಂತೆ ತಡೆವ ನಿರ್ಧಾರ
ಪುನರವತರಿಸಲು ಹಕ್ಕಿಯಾಗಿ ಆಗಬೇಕೀಗಲೇ ನಿರ್ಭಾರ.

[ನೇರಳೆ ಬಣ್ಣದ ರೆಕ್ಕೆಗಳ ಪಾರಿವಾಳ (Purple-winged ground dove) ಎಂಬುದು ಅಮೆಜಾನ್ ಕಾಡಿನಲ್ಲಿ ವಿರಳವಾಗಿ ಕಾಣಸಿಗುವ, ಈಗ ಅಳಿವಿನಂಚಿನಲ್ಲಿರುವ ಒಂದು ಪಕ್ಷಿ. ಸಾಮಾನ್ಯವಾಗಿ ಬಿದಿರಿನ ಮೆಳೆಯಲ್ಲಿ ವಾಸಿಸುವ ಇವು, ಹೆಚ್ಚಾಗಿ ಬಿದಿರಿನ ಬೀಜವನ್ನು ತಿಂದು ಬದುಕುತ್ತವೆ. ಬಿದಿರು ಹೂ ಬಿಡುವುದು-ಬೀಜವಾಗುವುದು ಎಷ್ಟೋ ವರ್ಷಗಳಿಗೆ ಒಮ್ಮೆಯಾದ್ದರಿಂದ ಮತ್ತು ಅರಣ್ಯನಾಶದಿಂದ ಬಿದಿರು ವಿರಳವಾಗುತ್ತಿರುವುದರಿಂದ ಈ ಹಕ್ಕಿಗಳು ವಿನಾಶದಂಚಿನಲ್ಲಿವೆ ಎನ್ನಲಾಗಿದೆ.]

Friday, August 18, 2017

ಅಣಿಮಾ

ಟೆರೇಸಿನ ಮೇಲೊಂದು ಚಾಪೆ ಹಾಸಿ
ನಕ್ಷತ್ರಾಚ್ಛಾದಿತ ಆಕಾಶವನ್ನು ನೋಡುವುದು ಒಂದು ಕ್ರಮ
ಅದಕ್ಕೆ‌ ಎರಡು ಕಣ್ಣು ಸಾಕು
ಆದರೆ ಆಸ್ವಾದಿಸಲು ಹೃದಯ ಬೇಕು
ಮತ್ತದು ಆಕಾಶದಷ್ಟೇ ವಿಶಾಲವಿರಬೇಕು
ಪುಂಜಗಳ ಗುರುತು ನೆನಪಿಟ್ಟುಕೊಂಡು
ಅವು ರಾತ್ರಿ ಬೆಳಗಾಗುವುದರೊಳಗೆ ದಿಗ್ಪರ್ಯಟನ ಮಾಡುವಾಗ
ಬೆಂಬಿಡದೆ ಹಿಂಬಾಲಿಸಲು ಸಿದ್ಧವಿರಬೇಕು
ಉಲ್ಕೆಗಳು ಜಾರಿ ಬೀಳುವಾಗ ಅಂಗೈ ಚಾಚಿ
ಮುಷ್ಟಿಯೊಳಗೆ ಹಿಡಿವುದೂ ಒಂದು ಕಲೆ
ಇಲ್ಲದಿರೆ, ಅವು ಎದೆ ಹೊಕ್ಕು ದೊಡ್ಡ ರಂಧ್ರ ಮಾಡಿ,
ಅಯ್ಯೋ! ರಕ್ತ ರಾಮಾಯಣ!

'ಫೋಕಸ್! ಫೋಕಸ್ ಮುಖ್ಯ' ಅನ್ನುವರು ತಿಳಿದವರು.
ದಿಟವೇ. ಲೆನ್ಸಿನ ಮೂತಿಯನೆತ್ತ ತಿರುಗಿಸುತ್ತಿದ್ದೇನೆ,
ಹಿಂದೆರೆ ಮುಖ್ಯವೋ, ಹತ್ತಿರದ ವಸ್ತು ಮುಖ್ಯವೋ
ಎಂಬುದರ ಸ್ಪಷ್ಟ ಪರಿಕಲ್ಪನೆಯಿರದಿದ್ದರೆ ನೀನು
ಕೆಮೆರಾ ಹಿಡಿದಿದ್ದೂ ದಂಡ.
ದಂಡ ಕದಲದಂತೆ ಬಿಗಿಹಿಡಿದಿರುವುದೇ
ಇಲ್ಲಿ ಉತ್ಕೃಷ್ಟತೆಗೆ ಮಾನದಂಡ.

ಜೂಮ್ ಮಾಡಬೇಕು ಬೇಕಾದ್ದರೆಡೆಗೆ ಮಾತ್ರ.
ಹಾಂ, ಹಾಗೆ ಲಕ್ಷನಕ್ಷತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಾಗ
ಜ್ಯೋತಿರ್ವರ್ಷಗಳ ಬಗ್ಗೆಯೂ ಅರಿವಿರಬೇಕು.
ಲೆಕ್ಕಾಚಾರವಿಲ್ಲದೆ ಬರಿಕಾಂತಿಯ ಹಿಂಬಾಲಿಸಿ ಹೊರಟ
ಎಷ್ಟು ರಾಕೆಟ್ಟುಗಳು ಅಂತರಿಕ್ಷದಲ್ಲಿ ಕಳೆದುಹೋಗಿವೆಯೋ,
ಲೆಕ್ಕಕ್ಕಿಲ್ಲ!

ಅದಕ್ಕೇ ಹೇಳುತ್ತಿದ್ದೇನೆ, ಮೃದುಮನದ ಹುಡುಗನೇ, ಕೇಳು:
ನಕ್ಷತ್ರಗಳ ಅನುಸರಿಸುವುದು ಸುಲಭವಲ್ಲ.
ಇಕೋ, ಇಲ್ಲಿದೆ ಒಂದು ಅಮೀಬಾ. ಏಕಕೋಶ ಜೀವಿ.
ಈ ಸೂಕ್ಷ್ಮದರ್ಶಕವ ತೆಗೆದುಕೋ.
ತಲೆ ತಗ್ಗಿಸು. ಕಣ್ಣು ಕಿರಿದಾಗಿಸಿ ನೋಡು.
ಹೇಗದು ತನ್ನ ಕೈಕಾಲುಗಳನ್ನು ಚಾಚಿ ನಿನ್ನತ್ತಲೇ ಬರುತ್ತಿದೆ ಗಮನಿಸು.
ಉಸಿರು ಬಿಗಿಹಿಡಿ. ಅಂತರಂಗ ಬಹಿರಂಗಗಳ ಶುದ್ಧಿಗೊಳಿಸಿ
ಸೆಟೆದು ನಿಲ್ಲು. ತನ್ನ ಚಲನಕ್ರಮದಿಂದಲೇ ಅದು
ಹೊರಡಿಸುವ ಕಾಕಲಿಗೆ ಕಿವಿಯಾಗು.
ನವೀನ ನವಿರೋದಯವನನುಭವಿಸು.
ನಿಧಾನಕ್ಕದರಲೆ ಲೀನವಾಗು.

Tuesday, August 15, 2017

ನೆಪ್ಚೂನ್

ನಿಂತ ಗಡಿಯಾರ ತೋರಿಸಿದ ಸಮಯವೇ ಸರಿ
ಎಂದುಕೊಂಡರೂ ನೀನು ಬಂದಿದ್ದು ತಡವಾಗಿಯೇ.
ಹಾಗೆ ಇದ್ದಕ್ಕಿದ್ದಂತೆ ಕನ್ನಡಿಯಿಂದ ಹೊರಬಂದು
ಮುಖಕ್ಕೆ ಮೈಕು ಹಿಡಿದು ನಿಮ್ಮ ಟೂತ್‌ಪೇಸ್ಟಿನಲ್ಲಿ ಉಪ್ಪು ಇದೆಯೇ
ಎಂದು ಕೇಳಿದರೆ ಏನು ಹೇಳುವುದು?
ಉತ್ತರಿಸಲು ತಯಾರಾಗಿ ಬಂದ ಪ್ರಶ್ನೆಗಳನ್ನು ಎದುರಿಸುವುದೇ
ದುಸ್ತರವಾಗಿರುವಾಗ ಹೀಗೆ ಧುತ್ತನೆ ಎರಗಿದರೆ?
ಹಲ್ಲುಜ್ಜಿ ಯಾವ ಕಾಲವಾಯಿತೋ ಎನಿಸುತ್ತಿರುವ ಈ ಮುಂಜಾನೆ,
ಎಂದೋ ಕಾಡಿದ್ದ ಹಲ್ಲುನೋವು, ಮಾಡಿಸಿದ್ದ ರೂಟ್‌ಕೆನಾಲು,
ನುಂಗಿದ್ದ ಮಾತ್ರೆಗಳು, ನಿರ್ನಿದ್ರೆ ರಾತ್ರಿಗಳು
ಎಲ್ಲಾ ಒಟ್ಟಿಗೇ ನೆನಪಾಗಿ, ಇಡೀ ಜಗತ್ತೇ ಹಳದಿಗಟ್ಟಿದಂತೆನಿಸಿ..

ಅದು ನಿಜವೇ. ಅರ್ಧ ತುಂಬಿದ ನೀರೋ, ಮಣ್ಣೊಳಗಿಳಿದ ಬೇರೋ
ಇದ್ದರಷ್ಟೇ ಅದಕೊಂದರ್ಥವೆಂದುಕೊಂಡಿದ್ದವಗೆ
ಬೆರಳಿಂದ ಬಡಿದರೆ ಠಣ್ಣೆನ್ನುವ ಪಿಂಗಾಣಿಯು
ತಾನು ಸ್ವಯಂಸುಂದರಿಯೆಂದು ಶೋಕೇಸಿನಿಂದ
ಪೋಸು ಕೊಡುವವರೆಗೆ ನನಗೂ ಗೊತ್ತಿರಲಿಲ್ಲ:
ಹೂಜಿ-ಹೂದಾನಿಗಳು ಬರಿ ಚಂದಕ್ಕೆಂದು.

ರ್ಯಾಪಿಡ್ ಫೈರ್ ರೌಂಡಿನ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಕೊಡುವ
ತಮಾಷೆಯ ಉತ್ತರಗಳೇ ವಿವಾದಗಳನ್ನೆಬ್ಬಿಸುವಾಗ,
ಕರೆ ಮಾಡಿ ಬಂದವರ ಉಪಚರಿಸುವ ಮುನ್ನ ಫ್ರಿಜ್ಜಿನಲ್ಲಿ
ಹಾಲಿದೆಯೇ ಇಲ್ಲವೇ ಎಂದು ಯೋಚಿಸಿ ನಂತರ
ಆಯ್ಕೆಗಳನಿಡುವ ಜಾಗರೂಕ ಸ್ಥಿತಿಗೆ ತಲುಪಿರುವ
ನನ್ನ ಮೇಲೆ ಹೀಗೆ ಏಕಾಏಕಿ ಎರಗಿದರೆ ಹೇಗೆ?

ಕಾದಿದ್ದಾಗ ಬಾರದೆ ಎಡಹೊತ್ತಿಗೆ ಬಂದು
ಆಗಲಿಂದ ಒಂದೇ ಸಮನೆ ಮಾತಾಡುತ್ತಿದ್ದೀ,
ಇಲ್ಲಸಲ್ಲದ ಪ್ರಶ್ನೆ ಕೇಳುತ್ತಿದ್ದೀ.
ಎಲ್ಲ ತಿಳಿದವ ನಾನಾಗಿದ್ದರೆ ಇನ್ನೆಲ್ಲೋ ಇರುತ್ತಿದ್ದೆ.
ಹೊರಡು ಸಾಕು. ಇದೇ ಸೌರಮಂಡಲದಲ್ಲಿ ನೆಪ್ಚೂನ್ ಎಂಬುದೊಂದು
ಗ್ರಹವಿದೆಯಂತೆ, ನಾನಿನ್ನೂ ಅದನ್ನು ನೋಡಿಯೇ ಇಲ್ಲ.

[ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ]

Tuesday, August 08, 2017

ಗುಡ್ಡೆಗರಕು

ಕ್ಯಾಲೆಂಡರಿನ ಮೇ ತಿಂಗಳ ಹಾಳೆ
ಅದೊಂದು ಧಗಧಗಗುಟ್ಟುವ ಉರಿಪುಳ್ಳೆ
ತೋಟ-ಗದ್ದೆಗಳಿಂದ ವಾಪಸಾಗುತ್ತಿರುವ ಜನರು
ರಜೆಯ ಮಜದಲಿ ಅಂಗಳದಲ್ಲಾಡುತ್ತಿರುವ ಚಿಣ್ಣರು
ಸಂಜೆಯಾದರೂ ಇಳಿಯುತ್ತಿರುವ ಬೆಮರು
ಜತೆಗೆ, ಎತ್ತಲಿಂದಲೋ ಮೂಗಿಗಡರುತ್ತಿರುವ ಬೆಂಕಿಯ ಕಮರು...

ಎಲ್ಲಿಂದ ಎಲ್ಲಿಂದ? ತೋಟದ ಆಚೆದಿಂಬದಿಂದಲೇ?
ಮೇಲುಹಿತ್ತಿಲ ಹಿಂದಣ ಬಂಡಿಹಾದಿಯ ಬಳಿಯಿಂದಲೇ?
ಮೈಲು ದೂರದ ಕರಡದ ಬ್ಯಾಣದಿಂದಲೇ?
ಇಳಿಸಂಜೆಗೆ ಆತಂಕವ ತುಂಬುತ್ತಿರುವ ಈ ಘಮದ ಗಮನವೆಲ್ಲಿಂದ?

ಕತ್ತು ಸುತ್ತ ತಿರುಗಿಸಿ ಮೂಗರಳಿಸಿ ಗ್ರಹಿಸಬೇಕು..
ಎತ್ತರದ ದಿಣ್ಣೆಯನ್ನೇರಿ ತುದಿಗಾಲಲ್ಲಿ ನಿಂತು ನೋಡಬೇಕು
ಸೂರ್ಯ ಮುಳುಗಿ ತಾಸು ಕಳೆದರೂ
ಪಡುವಣವಲ್ಲದ ಅಕೋ ಆ ದಿಗಂತದಲ್ಲೇನದು ಕೆಂಪುಕೆಂಪು?
ಓಹೋ, ಅಲ್ಲೇ ಅಲ್ಲೇ ಅಲ್ಲಿಂದಲೇ
ಗಾಳಿಯಲ್ಲಿ ಹಾರಿ ಬರುತ್ತಿರುವ ಬೂದಿಚೂರುಗಳು
ಹಿಡಿದರೆ ಅಪ್ಪಚ್ಚಿ, ಆದರಿನ್ನೂ ಇದೆ ಒಡಲಲ್ಲಿ ಸ್ವಲ್ಪ ಬಿಸಿ

ಕಂಡುಹಿಡಿದಾದಮೇಲೆ ಮೂಲ, ಇನ್ನು ಓಟ ಜರೂರು
ಊರವರೆಲ್ಲ ಹೌಹಾರಿ ಗದ್ದಲವೆಬ್ಬಿಸಿ ಕೈಗೆ ಸಿಕ್ಕಿದ
ಕೊಡ ಬಕೇಟು ಕೌಳಿಗೆ ಚೊಂಬು ಕ್ಯಾನು ದೊಡ್ಡ ಉಗ್ಗ ಹಿಡಿದು..
ತೊಟ್ಟಬಟ್ಟೆಯಲ್ಲೇ ಆತುರಾತುರವಾಗಿ ಓಡುವ ಗಂಡಸರು;
ತಾವೂ ನೆರವಿಗೆ ಬರುವೆವೆನ್ನುವ ಹೆಂಗಸರು
ಅಲ್ಲೇ ದಾರಿ ಬದಿ‌ ಬಗ್ಗಿದ ಮರದ ಹಸಿಹಸಿ ಸೊಪ್ಪಿನ ಚಂಡೆ
ಕತ್ತಿಯಿಂದ ಕಡಿದು, ಊರಿಗೂರೇ ವೀರಾವೇಷದಿಂದ
ಸೇನೆಯಂತೆ ನುಗ್ಗಿ ಆಕ್ರಮಿಸಿ ರಣರಂಗ

ಬ್ಯಾಣದ ಆಚೆತುದಿಯಿಂದ ಹಬ್ಬುತ್ತಿರುವ ಬೆಂಕಿ..
ಗಾಳಿಗೆ ಚುರುಕುಗೊಳ್ಳುತ್ತ ಪೊದೆಯಿದ್ದಲ್ಲಿ ಆಕಾಶದೆತ್ತರಕ್ಕೆದ್ದು
ನಡುವೆಲ್ಲೋ ಗುಪ್ತಗಾಮಿನಿಯಂತೆ ನೆಲಮಟ್ಟದಲಿ ಹರಿದು
ಬುಕ್ಕೆಗಿಡ-ಕೌಳಿಮಟ್ಟಿಗಳ ಹಸಿರೆಲೆಗಳ ದಳದಳ ಕೆಂಪಾಗಿಸುತ್ತ
ಊರತ್ತಲೇ ಧಾವಿಸುತ್ತಿರುವಂತೆನಿಸುತ್ತಿರುವ ಅಗ್ನಿಯಟ್ಟಹಾಸ

ಯಾರು ಬೀಡಿ ಹಚ್ಚಿ ಎಸೆದ ಕಡ್ಡಿಯೋ
ಯಾರು ಬೇಕಂತಲೇ ಎಸಗಿದ ದುಷ್ಕೃತ್ಯವೋ
ತಾನಾಗಿಯೇ ಹೊತ್ತಿಕೊಂಡ ಪ್ರಕೃತಿಮಾಯೆಯೋ
ಬೈದುಕೊಳ್ಳುತ್ತಲೇ ಕಾಣದ ಕೈಗಳ, ಶಪಿಸುತ್ತಲೇ ವಿಧಿಯ
ಹರಕೆ ಹೊರುತ್ತಲೇ ಆಗದಿರಲೆಂದು ಯಾವುದೇ ಅನಾಹುತ
ಪ್ರಾರ್ಥಿಸುತ್ತ ಅಗ್ನಿದೇವನ ಶಮನವಾಗಲೆಂದು ಕೋಪ

ಕೊಡ ಬಕೇಟು ಬಿಂದಿಗೆಗಳಿಂದ ಎರಚಿ ಎರಚಿ ನೀರು
ಹಸಿಸೊಪ್ಪ ಹೆಣಿಕೆಯಿಂದ ಬಡಿಬಡಿದು ಬೆಂಕಿಮೈಗೆ
ದೊಡ್ಡಮರಗಳಿಗೆ ತಗುಲದಂತೆ ಬುಡ ಬಿಡಿಸಿಕೊಡುತ
ಮಸಿಮೆತ್ತಿದ ಲುಂಗಿ-ಬನೀನುಗಳ ವೀರರು;
ಒದ್ದೆನೈಟಿ-ಸೀರೆಗಳ ರಣಚಂಡಿಯರು
ತಾಕುವ ಬಿಸಿಯ ಲೆಕ್ಕಿಸದೆ
ಸುಡುವ ಅಂಗಾಲುರಿಯ ನಿರ್ಲಕ್ಷಿಸಿ
ಅಪ್ಪಳಿಸುವ ಝಳಕ್ಕೆ ಬೆದರದೆ
ಸಮರೋಪಾದಿಯಲ್ಲಿ ಇಡೀ ಊರ ಜನ ಒಂದಾಗಿ
ಪರಸ್ಪರ ನೆರವಾಗುತ್ತ, ದಾರಿಹೋಕರೂ ಸೇರಿಕೊಳ್ಳುತ್ತ...

ಯಜ್ಞವನ್ನು ನಿಲ್ಲಿಸುವುದೂ ಒಂದು ಯಜ್ಞ.
ಬೇಕದಕ್ಕೆ ರಾಕ್ಷಸಬಲ. ನೂರಾರು ಕೈ.
ದೂರದ ಬಾವಿಯಿಂದ ನೀರ ಹೊತ್ತುತರಲು ಗಟ್ಟಿರಟ್ಟೆ.
ಏದುಸಿರು ಬಿಡುತ್ತಲೇ ಓಡಲು ಕಾಲಲ್ಲಿ ನೆಣ.
ಬಿಂದಿಗೆಯನು ಒಬ್ಬರಿಂದೊಬ್ಬರಿಗೆ ದಾಟಿಸಲು ಒಕ್ಕೂಟ ವ್ಯವಸ್ಥೆ.
ಎತ್ತಲಿಂದ ಎರಗಿದರೆ ಆಕ್ರಮಣವ ತಡೆಯಬಹುದೆಂಬುದ
ಅಂದಾಜಿಸಲು ಸಮರ್ಥ ತಂತ್ರ.
ಜ್ವಾಲೆಯ ಹೊಡೆತವನ್ನೆದುರಿಸಿ ನುಗ್ಗಲು ದಿಟ್ಟ ಗುಂಡಿಗೆ.

ಹಾಗೆಂದೇ, ಅಲ್ಲೀಗ ಯುದ್ಧ ಗೆದ್ದ ನಿರಾಳ..
ಗಂಟೆಗಟ್ಟಲೆ ಹೋರಾಟದ ತರುವಾಯ
ಕಪ್ಪುಬಯಲ ಹಿಂದೆಬಿಟ್ಟು ವಾಪಸಾಗುವಾಗ ನಿಟ್ಟುಸಿರು
ಊರನುಳಿಸಿಕೊಂಡ, ಹೊಲ-ಗದ್ದೆ-ತೋಟ-ಮನೆಗಳ
ಸುಡಗೊಡದೆ ಹೋರಾಡಿ ಜಯಿಸಿದ ನಿರುಮ್ಮಳ
ಮನೆಮನೆಗಳ ನಡುವಿನ ಸಣ್ಣಪುಟ್ಟ ಜಗಳಗಳ
ವೈಮನಸ್ಸುಗಳ ಮರೆತು ಒಂದಾಗಿ ಆಪತ್ತನೆದುರಿಸಿದ ಖುಷಿ
ತಬ್ಬಿಕೊಳ್ಳುತ್ತಿದ್ದಾರೆ ಒಬ್ಬರನ್ನೊಬ್ಬರು
ಬಾಷ್ಪಕೆ ಕಾರಣ ಕಣ್ಣಿಗೆ ಹೊಕ್ಕ ಹೊಗೆ ಎಂದು ಸುಳ್ಳೇ ಹೇಳುತ್ತಿದ್ದಾರೆ
ಎಂದೂ ಹೊಗದ ಮನೆ ಹೊಕ್ಕು ಹದಮಜ್ಜಿಗೆ ಬೆರೆಸಿ ಕುಡಿಯುತ್ತಿದ್ದಾರೆ
ಸುಮ್ಮಸುಮ್ಮನೆ ನಗುತ್ತಿದ್ದಾರೆ
ಮುಂದಿನ ವರ್ಷ ಬೇಸಿಗೆಗೂ ಮುನ್ನವೇ ಗುಡ್ಡೆಗರಕು
ತೆಗೆದುಬಿಡಬೇಕೆಂದು ಮಾತಾಡಿಕೊಳ್ಳುತ್ತಿದ್ದಾರೆ.

ಇನ್ನೂ ಸಣ್ಣಗೆ ಹೊಗೆಯಾಡುತ್ತಿರುವ ಬ್ಯಾಣದ
ಕಪ್ಪು ನೆಲದ ಮೇಲೀಗ ಸುರಿಯುತ್ತಿರುವ ಇಬ್ಬನಿ...
ನಾಲಿಗೆ ಚಾಚಿದರೆ ಅದಕ್ಕೆ ಸಕ್ಕರೆಯ ಸಿಹಿ
ಬೂರುಗದ ಮರದ ಪೊಟರೆಯಲ್ಲಿದ್ದ ಹಕ್ಕಿಯೊಂದು
ಈ ಅಪರಾತ್ರಿ ಹೊರಬಂದು ಹಾಡಲು ಶುರುಮಾಡಿದೆ:
ತಾನಿಟ್ಟ ಮೊಟ್ಟೆಗಳೊಡಲ ಮರಿಗಳಿಗಷ್ಟೇ ಅಲ್ಲ,
ಸಲುಹಿದ ಗ್ರಾಮಸ್ಥರಿಗೆಲ್ಲ ತಲುಪುವಂತಿದೆ ಈ ಕೂಜನ
ಗುಡಿಸಿದಂತಿದೆ ತರಗು ಚೆಲ್ಲಿ ಕೀರ್ಣವಾಗಿದ್ದ ಮನ.