ಹೋಳಿಗೆ ಮಾಡುವುದು ಹೇಗೆ ಗೊತ್ತಾ?
ಮೊದಲು ಕಡಲೆ ಬೇಳೆಯನ್ನು ತೊಳೆದು, ನೆನೆಸಿಡಬೇಕು. ಆಮೇಲೆ ಅದನ್ನು ಬೆಲ್ಲದೊಂದಿಗೆ ಬೇಯಿಸಬೇಕು. ಅದು ಬೆಂದಾದಮೇಲೆ ಸಿದ್ದವಾಗುವ ಖಾದ್ಯವೇ ಹಯಗ್ರೀವ. ಆಮೇಲೆ ಅದನ್ನು ಬೀಸಬೇಕು. ಈಗ ಹೂರಣ ಸಿದ್ದ. ಈ ಮಧ್ಯೆ ಹೋಳಿಗೆ ರವೆ (ಅಥವಾ ಗೋಧಿ/ಮೈದಾ ಹಿಟ್ಟು) ಯನ್ನು ಎಣ್ಣೆ/ನೀರಿನೊಂದಿಗೆ ಕಲಸಿ, ಮೆದ್ದು, ಸರಿಯಾಗಿ ಹದ ಮಾಡಿಟ್ಟುಕೊಳ್ಳಬೇಕು. ರಬ್ಬರಿನಂತೆ flexible ಆಗಿರಬೇಕು ಅದು. ಈಗ ಕಣಿಕೆ ಸಿದ್ದ. ಈಗ ಏನು ಮಾಡಬೇಕೆಂದರೆ.. ಕಣಿಕೆಯನ್ನು ಪುಟ್ಟ ಪುಟ್ಟ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಆಮೇಲೆ ಹೂರಣವನ್ನೂ ಉಂಡೆ ಕಟ್ಟಬೇಕು. ಈ ಹೂರಣದ ಉಂಡೆಗಳು ಕಣಿಕೆ ಉಂಡೆಗಳಿಗಿಂತ ದೊಡ್ಡವು. ಕಣಿಕೆಯ ಉಂಡೆಗಳು ಮತ್ತು ಹೂರಣದ ಉಂಡೆಗಳು ಸಮಸಂಖ್ಯೆಯಲ್ಲಿರಬೇಕು. (ಕಣಿಕೆ ಸ್ವಲ್ಪ ಉಳಿದುಬಿಟ್ಟರೆ ಕೊನೆಯಲ್ಲಿ 'ಕಣಿಕೆ ರೊಟ್ಟಿ' ಮಾಡಬಹುದು, ಚಿಂತೆಯಿಲ್ಲ!). ಕಾವಲಿ ಕಾದಿದೆಯಾ ನೋಡಿ... ಹಾಂ, ಕಾದಿದೆ. ಈಗ ಕಾವಲಿಗೆ ಎಣ್ಣೆ ಸವರಿ. ಹಾಂ, ಇನ್ನು ಕಣಿಕೆಯನ್ನು ಒತ್ತಿ (ಅಥವಾ ತಟ್ಟಿ) ಚಪ್ಪಟೆ ಮಾಡಿ, ಅದರೊಳಗೆ ಹೂರಣದ ಉಂಡೆಯನ್ನು ಇಟ್ಟು, ಕಣಿಕೆಯಿಂದ ಮುಚ್ಚಿಬಿಡಿ. ಈಗ ಅದನ್ನು ಮಣೆಯ ಮೇಲಿಟ್ಟು, (ಮಣೆಯ ಮೇಲೆ ಕವರು ಹಾಸಿಕೊಂಡಿದ್ದೀರ ತಾನೆ?), ಲಟ್ಟಣಿಗೆಯಿಂದ ತೆಳ್ಳಗೆ ವರೆಯಬೇಕು... ಕಣಿಕೆ transparent ಆಗಿ ಒಳಗಿನ ಹೂರಣ ಎದ್ದುಬರುವಂತಾಗುವವರೆಗೆ ವರೆಯಬೇಕು. ಈಗ ಇದನ್ನು ಕಾದ ಕಾವಲಿಯ ಮೇಲೆ ಹಾಕಬೇಕು. ಹತ್ತಿ ಕರಕಲಾಗದಂತೆ ಆಗಾಗ ಮಗುಚಿಹಾಕುತ್ತಿರಬೇಕು. ಬೆಂದಮೇಲೆ ತೆಗೆದು ಪೇಪರ್ ಮೇಲೆ ಆರಲು ಹಾಕಬೇಕು... ಇಗೋ, ಇದೀಗ ಹೋಳಿಗೆ ತಿನ್ನಲು ಸಿದ್ದ! ನೋಡಿ, ಎಷ್ಟು ಕಷ್ಟ ಹೋಳಿಗೆ ಮಾಡುವುದು...!
ಮನುಷ್ಯನಿಗೆ ಬೇಳೆ, ಬೆಲ್ಲ, ರವೆ, ಹಿಟ್ಟುಗಳನ್ನು ಹಾಗ್-ಹಾಗೇ ತಿನ್ನಲಾಗುವುದಿಲ್ಲ ಅದಕ್ಕಾಗಿ ಇಷ್ಟೆಲ್ಲ ಕಷ್ಟ ಪಡುತ್ತಾನೆ! ಅದ್ಸರಿ, ಈ ಹೋಳಿಗೆ ಮಾಡುವುದನ್ನು ಕಂಡುಹಿಡಿದವರು ಯಾರು?
ಮರೆತದ್ದು: ಹಯಗ್ರೀವವನ್ನು ಬೀಸುವ ಮುಂಚೆ ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಬೆರೆಸಿದರೆ ಹೋಳಿಗೆಗೆ ಪರಿಮಳವೂ, ಜಾಸ್ತಿ ರುಚಿಯೂ ಲಭ್ಯವಾಗುತ್ತದೆ!
***
ಯಾಕೆ ಬರೆದೆ ಇದನ್ನ ಇಲ್ಲಿ ಅಂದ್ರೆ...
ಮೊನ್ನೆ ದೀಪಾವಳಿಗೆ ಊರಿಗೆ ಹೋಗಿದ್ದೆ. ನಮ್ಮ ಮನೆಯಲ್ಲಿ ಅಮ್ಮನನ್ನು ಬಿಟ್ಟರೆ ಬೇರೆ ಯಾರೂ ಹೆಣ್ಣುಮಕ್ಕಳು ಇಲ್ಲದ ಕಾರಣ ನಾನೇ ಅಮ್ಮನಿಗೆ ಹೋಳಿಗೆ ಮಾಡುವಲ್ಲಿ assist ಮಾಡುವುದು. ಕಳೆದ ವರ್ಷದವರೆಗೆ ಅಜ್ಜಿ ಇದ್ದಳು. ಅವಳಿಗೆ ಏನನ್ನೂ ಮಾಡಲು ಆಗುತ್ತಿರಲಿಲ್ಲವಾದರೂ, ಒಂದಷ್ಟು ಹೊತ್ತು ಒಲೆ ಬುಡದಲ್ಲಿ ಕೂತು ಹೋಳಿಗೆ ಮಗುಚಿಹಾಕುವ ಕೆಲಸವನ್ನು ಮಾಡುತ್ತಿದ್ದಳು. ಅವಳು ತೀರಿಕೊಂಡಮೇಲೆ ಈ ವರ್ಷ ಹೂರಣದ ಉಂಡೆ ಕಟ್ಟುವುದು, ಬೆಂಕಿಯ ಕಾವು ಹೆಚ್ಚುಕಮ್ಮಿಯಾಗದಂತೆ manage ಮಾಡುವುದು, ಹೋಳಿಗೆ ಮಗುಚಿಹಾಕುವುದು ಎಲ್ಲಾ ನಾನೇ. ಅಮ್ಮ ಕಣಿಕೆಯ ಉಂಡೆ ಕಟ್ಟುವುದು, ಹೂರಣದ ಉಂಡೆಯನ್ನು ಕಣಿಕೆಯ ಒಳಗಿಟ್ಟು ಹೋಳಿಗೆ ವರೆಯುವುದು, ಆಮೇಲೆ ಅದನ್ನು ಕೈಮೇಲೆ ಹಾಕಿಕೊಂಡು ಹರಿದುಹೋಗದಂತೆ ಕಾದ ಕಾವಲಿಯ ಮೇಲೆ ವರ್ಗಾಯಿಸುವುದು, ಹೋಳಿಗೆ ಬೆಂದಿತಾ ಅಂತ ಚೆಕ್ ಮಾಡುವುದು.. ಎಲ್ಲಾ ಮಾಡುತ್ತಾಳೆ.
ನನಗೆ ಮೊದಲಿನಿಂದಲೂ ಅಮ್ಮನಿಗೆ ಸಹಾಯ ಮಾಡುವ ಇಂತಹ ಕೆಲಸಗಳಲ್ಲಿ ಆಸಕ್ತಿ. ಏಕೆಂದರೆ ಒಲೆಯ ಹಳದಿ ಬೆಳಕು ಅಮ್ಮನ ಮುಖದ ಮೇಲೆ ಲಾಸ್ಯವಾಡುತ್ತಿರುವಾಗ ನಾನು ಉಂಡೆ ಕಟ್ಟಿಕೊಡುತ್ತಾ ಅದೆಷ್ಟು ಮಾತಾಡಬಹುದು...! ಊರ ಕಥೆಯನ್ನೆಲ್ಲಾ ಅಮ್ಮ ಹೇಳುತ್ತಾಳೆ. ಯಾರ್‍ಯಾರ ಮನೆಯಲ್ಲಿ ಏನೇನಾಯ್ತು, ಪಾರಕ್ಕ ಗಂಡ-ಹೆಂಡ್ತಿ ಕಾಶೀಯಾತ್ರೆಗೆ ಹೋಗಿಬಂದದ್ದು, ಹೊಸವರ್ಷದ ಹಿಂದಿನ ದಿನ ಊರವರೆಲ್ಲಾ ಸೇರಿ ಕಂಬಳ ಮಾಡಿದ್ದು, ಪ್ರಕಾಶಣ್ಣನ ಮನೆಯ ಹುಲ್ಲು ಗೊಣಬೆಗೆ ಬೆಂಕಿ ಬಿದ್ದುಬಿಟ್ಟದ್ದು, (ಬೆಂಕಿ ಹಾಕಿದ್ದು ಇಂಥವನೇ ಇರಬೇಕು ಅಂತ ಊರವರೆಲ್ಲ ಗುಸುಗುಸು ಮಾತಾಡಿಕೊಳ್ಳುತ್ತಿರುವುದು), ಸರೋಜಕ್ಕನೂ ಶ್ರೀಲಕ್ಷ್ಮಕ್ಕನೂ ಮಾಡಿಕೊಂಡ ಜಗಳ, ಗುಂಡ ಹೊಸ ಬೈಕಿನಿಂದ ಬಿದ್ದು ಕಾಲು ಮುರಿದುಕೊಂಡದ್ದು... ಎಲ್ಲ.
ಇವನ್ನೆಲ್ಲ ಫೋನಿನಲ್ಲಿ ಮಾತನಾಡಲು ಆಗುವುದಿಲ್ಲ. ಏಕೆಂದರೆ ಬಹಳ ಸಲ ನಮ್ಮನೆಯ ಫೋನಿನಲ್ಲಿ ಮಾತಾಡುತ್ತಿರುವುದನ್ನು ಬೇರೆಯವರ ಮನೆಯವರು ಫೋನೆತ್ತಿದರೆ ಕೇಳಿಸಿಕೊಳ್ಳಬಹುದು! ಆದ್ದರಿಂದ, ಇದಕ್ಕೆ ಹಿತ್ಲಕಡೆ ಲಾಯದಲ್ಲಿ ಹೋಳಿಗೆ ಮಾಡಲಿಕ್ಕೆಂದು ಹೂಡಿದ ವಿಶೇಷ ಒಲೆಯ ಎದುರೇ ಆಗಬೇಕು. ನಾನು ಹಿಂದಿನ ಸಲ ಊರಿಗೆ ಬಂದುಹೋದಂದಿನಿಂದ ಈ ಸಲ ಬರುವವರೆಗೆ ಊರಿನಲ್ಲಿ, ನಮ್ಮ ನೆಂಟರಿಷ್ಟರ ಕುಟುಂಬಗಳಲ್ಲಿ ಏನೇನಾಯ್ತೋ ಎಲ್ಲದರ ವರದಿ ಈ ಒಲೆಯ ಮುಂದೆ ನನಗೆ ಸಿಗುತ್ತದೆ ಅಮ್ಮನಿಂದ. ನಾನು ಹೂರಣದ ಉಂಡೆ ಕಟ್ಟಿಕೊಡುತ್ತಾ, ಆ ಉಂಡೆ ಅಮ್ಮನ ಪುಟ್ಟ ಕಣಿಕೆಯ ಉಂಡೆಯೊಳಗೆ ಬೆಚ್ಚಗೆ ಮುಚ್ಚಿಹೋಗುವುದನ್ನು ವಿಸ್ಮಯದಿಂದ ನೋಡುತ್ತಾ, ಈ ಕಥೆಯನ್ನೆಲ್ಲಾ ಕೇಳುತ್ತೇನೆ... ಆಗಾಗ ಬೆಂಕಿ ಮುಂದೂಡುತ್ತಾ, ಕಾವು ಜಾಸ್ತಿಯಾದರೆ ಕಟ್ಟಿಗೆಯನ್ನು ಹಿಂದಕ್ಕೆಳೆಯುತ್ತಾ, ಕಣಿಕೆಯ ಉಂಡೆ ಮತ್ತು ನನ್ನ ಹೂರಣದ ಉಂಡೆ -ಎರಡೂ ಸಮಸಂಖ್ಯೆಯಲ್ಲಿದೆಯಾ ಅಂತ ಲೆಕ್ಕ ಮಾಡುತ್ತಾ ನಾನು ಕುಳಿತಿರುವಾಗ ಲಟ್ಟಣಿಗೆಯ ಕೆಳಗೆ ಕಣಿಕೆಯೊಳಗಣ ಹೂರಣ ಅಗಲವಾಗುತ್ತಾ ಹೋಗುತ್ತದೆ. ಕಣಿಕೆ ತಾನು ಪಾರದರ್ಶಕವಾಗುತ್ತಾ, ಹೂರಣವನ್ನು ಅಗಲವಾಗಲು ಬಿಡುತ್ತದೆ. ಹೂರಣಕ್ಕೆ ಕಣಿಕೆಯನ್ನೂ ಮೀರಿ ಬೆಳೆಯುವ ಧೈರ್ಯ. ಆದರೆ ಅಷ್ಟರಲ್ಲಿ ಅಮ್ಮ ವರೆಯುವುದನ್ನು ನಿಲ್ಲಿಸಿಬಿಡುತ್ತಾಳೆ.
ನಾನು ಹುಟ್ಟಿದ್ದು, ಬೆಳೆದದ್ದು, ಓದಿದ್ದು, ಆಟವಾಡಿದ್ದು ಎಲ್ಲ ಈ ಹಳ್ಳಿಯಲ್ಲೇ, ಅಮ್ಮ-ಅಪ್ಪ-ಅಜ್ಜಿಯರ ಸಂಗಡವೇ. ನನ್ನ ಜೀವನದ ಮೊದಲ ಹದಿನೆಂಟು ವರ್ಷಗಳನ್ನು ಇಲ್ಲೇ ಕಳೆದುಬಿಟ್ಟೆ. ಓದಿನಲ್ಲಿ ಮುಂದಿದ್ದ ಕಾರಣ, ನಾನೇ ಊರಿಗೆಲ್ಲ ಹೀರೋ ಆಗಿದ್ದೆ. ಅಲ್ಲದೆ ಏನೇನೂ ಕೀಟಲೆ ಮಾಡದೆ, ಹೆಚ್ಚು ಮಾತೂ ಆಡದೆ, decent ಆಗಿ ಇರುತ್ತಿದ್ದೆನಾದ್ದರಿಂದ ನನಗೆ 'ತುಂಬಾ ಒಳ್ಳೇ ಮಾಣಿ' ಎಂಬ ಬಿರುದೂ ಬಂದುಬಿಟ್ಟಿತ್ತು! ಆದರೆ ಕೊನೆಕೊನೆಗೆ ಆ ಪಟ್ಟ ಬೇರೆಯವರಿಗೆ ವರ್ಗಾವಣೆಯಾಗುವ ಸಂಭವ ಬಂತು. ಓದುವುದರಲ್ಲಿ dull ಹೊಡೆಯಲು ಶುರು ಮಾಡಿದೆ. ನನ್ನ ಉಳಿದ ಸ್ನೇಹಿತರಿಗೆ ಬೇರೆಬೇರೆ ಕ್ಷೇತ್ರಗಳಲ್ಲಿ 'ಮನ್ನಣೆ' ಸಿಗಲಿಕ್ಕೆ ಪ್ರಾರಂಭವಾಗಿತ್ತು. ಹೀಗಾಗಿ ನಾನು ಏನೂ ಇಲ್ಲದೆ, ತೀರ ಪೇಲವನಂತಾಗಿಬಿಟ್ಟೆ. ಇಲ್ಲೇ ಇದ್ದರೆ ನಾನು ಇನ್ನು ಕೊಳೆತುಹೋಗಿಬಿಡುತ್ತೇನೆ ಅನ್ನಿಸಲು ಶುರುವಾಯಿತು ನನಗೆ... So, ನನ್ನ ಡಿಪ್ಲೋಮಾ ಮುಗಿದದ್ದೇ ಬೆಂಗಳೂರಿಗೆ ಹತ್ತಿಬಿಟ್ಟೆ.
ಇಲ್ಲಿಗೆ ಬರುವ ಮುನ್ನ ಕಟ್ಟಿದ ಕನಸುಗಳಿಗೆ ಲೆಕ್ಕವಿಲ್ಲ. ಆದರೆ ಅವನ್ನೆಲ್ಲಾ achieve ಮಾಡಿಕೊಳ್ಳಲು ಬೇಕಾದ ಸಮಯ ಮತ್ತು ಅವಕಾಶವನ್ನು ಈ ಬೆಂಗಳೂರಿನ busyನೆಸ್ಸು ತಿಂದುಹಾಕುತ್ತಿದೆ. ಮೆಜೆಸ್ಟಿಕ್ಕಿನ ಬಳಿಯ ಫ್ಲೈಓವರಿನ ಮೇಲೆ ನಿಂತು ಕೆಳಗೆ ನೋಡಿದರೆ ಜನಸಾಗರ. ಎಲ್ಲಾ ಸರಸರನೆ ಓಡಾಡುತ್ತಿದ್ದಾರೆ. ಇವರೆಲ್ಲ ಯಾರು? ಎಲ್ಲಿಗೆ ಹೋಗುತ್ತಿದ್ದಾರೆ? ಏನದು ತರಾತುರಿ? ಒಂದೂ ಅರ್ಥವಾಗುತ್ತಿಲ್ಲ. ಸುಮ್ಮನೇ ಎಲ್ಲರೂ ಓಡುತ್ತಿದ್ದಾರೆ. ಗಮನಿಸಿ ನೋಡಿದರೆ, ನಾನೂ ಓಡುತ್ತಿದ್ದೇನೆ -ಇವರಂತೆಯೇ, ಇವರೊಂದಿಗೇ. ಹೀಗೇ ಓಡುತ್ತಿದ್ದರೆ ಮುಂದೊಂದು ದಿನ ಎಲ್ಲಿಗೆ ಹೋಗಿ ಮುಟ್ಟುತ್ತೇನೋ ಅನ್ನಿಸಿದಾಗ ಭಯವಾಗುತ್ತದೆ.
***
I am sorry. ನಾನು ಬೆಂಗಳೂರಿಗೆ ಬಂದು ನಾಲ್ಕು ವರ್ಷಕ್ಕೆ ಬಂದರೂ, ಅದೆಷ್ಟೇ ನಗರೀಕೃತಗೊಂಡಿದ್ದೇನೆಂದರೂ, ಇನ್ನೂ ಊರಲ್ಲೇ ಇದ್ದೇನೆ ಅನ್ನಿಸುತ್ತದೆ. ಅಮ್ಮನನ್ನೂ, ಊರನ್ನೂ, ಬೆಚ್ಚನೆಯ ಆ ಒಲೆಯ ಎದುರನ್ನೂ ಬಿಟ್ಟಿರಲು ಆಗುವುದೇ ಇಲ್ಲ. ಅಮ್ಮ ಕೊಟ್ಟುಕಳುಹಿಸಿದ ಹೋಳಿಗೆಯನ್ನು ಮೆಲ್ಲುವಾಗ ಎಲ್ಲಾ ನೆನಪಾಗುತ್ತದೆ...
Tuesday, November 07, 2006
Saturday, November 04, 2006
ಮಳೆಗಾಲದ ನೆನಪು
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ, ಸಂಜೆ ಹೊತ್ತಿಗೆ ಮಳೆ. ಮನಸು ಪ್ರಫುಲ್ಲವಾಗಿರಬೇಕೆಂದರೆ ಆಗಸ ಶುಭ್ರವಾಗಿರಬೇಕು. ಬೆಳಗ್ಗೆ ಎದ್ದು ಹೊರಬಂದಾಗ ಶುಭ್ರ ಆಕಾಶ, ಆಗತಾನೇ ಮೂಡಿದ ಸೂರ್ಯನ ಎಳೇಬಿಸಿಲು ಕಂಡರೆ ಆ ದಿನವೆಲ್ಲಾ ಏನೋ ಹುಮ್ಮಸ್ಸು. ಬೆಳಗು ಚೆನ್ನಾಗಿ ಆಗಲಿಲ್ಲ ಆ ದಿನವೆಲ್ಲ mood out.
ಇವತ್ತು ಬೆಳಗ್ಗೆ ಎದ್ದಾಗ ಎಂಟೂ ಕಾಲು. ಮಬ್ಬು ವಾತಾವರಣವಾದ್ದರಿಂದ ಎಚ್ಚರೇ ಆಗಲಿಲ್ಲ. ಮೊಬೈಲಿನ ಅಲಾರಾಂ ಕೂಗಿದರೂ ಹಾಗೇ ಮುಸುಕು ಹಾಕಿ ಮಲಗಿಕೊಂಡಿರುವ ಮನಸು. ಆದರೂ ಆಫೀಸಿಗೆ ಹೋಗಬೇಕಾದ್ದರಿಂದ ಎದ್ದೆ. ಸ್ನಾನಕ್ಕೆ ಅಣಿ ಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಊರಿಗೆ ಹೋಗಿದ್ದ ಗೆಳೆಯ ಶ್ರೀನಿಧಿಯಿಂದ ಎಸ್ಸೆಮ್ಮೆಸ್ಸು ಬಂತು:
"ಗುಡ್ಡೆಗೆ ದನ ಕಟ್ಟಿ ಬರಲು ಹೋಗಿದ್ದೆ.
ಚೆನ್ನಾದ ಐದಾರು ನವಿಲುಗರಿಗಳು ಸಿಕ್ಕಿದವು.
ಕೈಗೆ ಖುಷಿಯೇ ವಸ್ತುರೂಪ ಧರಿಸಿ ಸಿಕ್ಕಂತಾಯ್ತು"
-ಅಂತ ಇತ್ತು. ಮೆಸೇಜು ಓದಿಯಾದಮೇಲೆ ಮನಸ್ಸು ಉಲ್ಲಾಸದಿಂದ ತುಂಬಿಕೊಂಡಿತು. ಆ ಕ್ಷಣದಲ್ಲಿ ನವಿಲು, ನವಿಲುಗರಿ, ಗುಡ್ಡೆ (ನಮ್ಮೂರಿನ ಕಡೆ ಅದು ಹಿತ್ಲು ಅಥವಾ ಹಕ್ಲು), ದನ, ಅದನ್ನು ಮೇಯಲು ಬಿಟ್ಟುಬರಲು ಹೋಗುವುದು ....ಎಲ್ಲಾ ಕಣ್ಣಮುಂದೆ ಬಂದು, ಊರು ನೆನಪಾಗಿ, ಓಹ್! ನನ್ನ ದಿನವನ್ನು ಹಸನುಗೊಳಿಸಲು ಒಂದು ಮೆಸೇಜು ಸಾಕು. ಶ್ರೀನಿಧಿಯ ಕೈಗೆ ಸಿಕ್ಕ 'ಖುಷಿ' ಮೊಬೈಲಿನ ಮೂಲಕ ನನ್ನ ಕೈಗೆ ವರ್ಗಾವಣೆಯಾಗಿತ್ತು!
ಆಗಸದ ಬಣ್ಣ ನಮ್ಮ ಮೂಡನ್ನು ಹೇಗೆ ನಿರ್ಧರಿಸುತ್ತದೋ ಊರಿನ ನೆನಪೂ ಹಾಗೇ. ಈ ಬೆಂಗಳೂರಿನಲ್ಲಿ ಮಳೆಗಾಲ, ಚಳಿಗಾಲ, ಬೇಸಿಗೆಕಾಲಗಳಿಗೆ ವ್ಯತ್ಯಾಸವೇ ಇಲ್ಲ. ಯಾವಾಗ ಬೇಕೆಂದರೆ ಅವಾಗ ಮಳೆ ಬರುತ್ತದೆ. ಮಳೆಗಾಲದಲ್ಲೂ ಬಿಸಿಲಿರುತ್ತದೆ, ಎಲ್ಲೋ ಸಂಜೆ ಹೊತ್ತಿಗೆ ಒಂದು ಮಳೆ ಬಂದು ಹೋಗುತ್ತದೆ. ಆದರೆ ಊರಿನಲ್ಲಿ ಮಳೆಗಾಲ ಎಂದರೆ ಹೀಗಲ್ಲ. ಊರಿನಲ್ಲಿ ಮಳೆಗಾಲ ಎಂದರೆ... ಧೋ ಎಂದು ದಿನವಿಡೀ ಸುರಿಯುತ್ತಿರುತ್ತದೆ ಮಳೆ.. ಮಳೆ ನೀರು ಕುಡಿದು ಕುಡಿದು ಧರೆ ತಣಿಯುತ್ತದೆ... ಎಲ್ಲೆಂದರಲ್ಲಿ ಜಲ ಒಡೆದು, ಜವಳಾಗಿ, ಕೆರೆ ತುಂಬಿ, ಕೋಡಿ ಬಿದ್ದು, ವಟರುಗಪ್ಪೆ ಕೂಗಿ, ಕಂಬಳಿಕೊಪ್ಪೆ ಹಾಕಿಕೊಂಡ ರೈತರು ಉಗ್ಗ ಹಿಡಿದು ಗದ್ದೆಗಳಿಗೆ ತೆರಳಿ, ತೋಟದಲ್ಲಿ ಕಳೆ ಹುಟ್ಟಿ, ಹಿತ್ತಿಲಲ್ಲಿ ಹುಲ್ಲು ಚಿಗುರಿ, ಅಪ್ಪ ಹುಲ್ಲು ಕೊಯ್ದು ತಂದು ಹಾಕಿ, ಅಮ್ಮ ಸೌತೆ-ಚೀನಿ-ಕುಂಬಳ ಬೀಜಗಳನ್ನು ಅಲ್ಲಲ್ಲಿ ಹಾಕಿ... ಓಹೋಹೋ..! ಊರಿನಲ್ಲಿ ಮಳೆಗಾಲ ಎಂದರೆ ಏನೆಲ್ಲ... ಹೊರಗೆ ಜೋರು ಮಳೆಯಾಗುತ್ತಿದ್ದರೆ ಒಳಗೆ ಹಲಸಿನಕಾಯಿ ಹಪ್ಪಳವನ್ನು ಕರಿದುಕೊಂಡೋ, ಗೇರುಬೀಜ ಸುಟ್ಟುಕೊಂಡೋ ಬೆಚ್ಚಗೆ ತಿನ್ನುವುದರಲ್ಲಿರುವ ಸ್ವರ್ಗಸುಖ ಈ ಬೆಂಗಳೂರಿನ ಯಾವ ಡಿಸ್ಕೋಥೆಕ್ಕಿನಲ್ಲಿದೆ?
ಅಂಥಾ ಸುಂದರ 'ಕೈಬರಹ'ದಂತಹ ಊರನ್ನು ಬಿಟ್ಟುಬಂದು ಈ 'ಪ್ರಿಂಟೆಡ್'ನಂತಹ ಬೆಂಗಳೂರಿನಲ್ಲಿ ಬದುಕುತ್ತಿರುವ ನಮ್ಮದು ಇದೆಂತಹ ದುರಾದೃಷ್ಟ... ಊರು, I miss you.

Thursday, November 02, 2006
ಹೆಸರು ಬದಲಾವಣೆ ಮತ್ತು ರಾಜ್ಯೋತ್ಸವ ಶುಭಾಷಯ
ನನ್ನ ಬ್ಲಾಗಾಭಿಮಾನಿಗಳೇ,
ನನ್ನ ಬ್ಲಾಗಿನ ಹೆಸರನ್ನು ಬದಲಿಸಿದ್ದೇನೆ. 'ಬರೆಯುವುದೆಲ್ಲಾ ಕನ್ನಡದಲ್ಲಿ, ಟೈಟಲ್ ಮಾತ್ರ ಯಾಕೆ ಇಂಗ್ಲಿಷಿನಲ್ಲಿ?' ಅಂತ ಕೆಲವು ಗೆಳೆಯರು ಆಕ್ಷೇಪಿಸಿದ್ದರು. ನಾನೋ, ಈ ಬ್ಲಾಗ್ ಶುರುಮಾಡುವಾಗ ಅಷ್ಟೊಂದು ಯೋಚಿಸಿರಲಿಲ್ಲ. ಆದರೆ ಇವರೆಲ್ಲಾ ಹೇಳಿದ ಮೇಲೆ ನನಗೂ ಹೌದು ಅನ್ನಿಸಿತು. ಅಲ್ಲದೇ ಸುವರ್ಣ ಕರ್ನಾಟಕದ ಸಂಭ್ರಮ ಬೇರೆ. ಈ ಸುಸಂದರ್ಭದಲ್ಲಿ ನನ್ನ ಬ್ಲಾಗಿನ ಹೆಸರನ್ನು ಕನ್ನಡೀಕರಿಸಲು ತುಂಬಾ ಖುಷಿಯಾಗುತ್ತಿದೆ.
ಅಂದಹಾಗೆ, ಈ ಟೈಟಲ್ 'ಮೌನಗಾಳ' -ನಾನು ತುಂಬಾ ಇಷ್ಟ ಪಡುವ ಕವಯತ್ರಿ ಪ್ರತಿಭಾ ನಂದಕುಮಾರರ ಕವನವೊಂದರಿಂದ ಆಯ್ದುಕೊಂಡದ್ದು. 'ಕವಿ ಕಾಲಾತೀತದಲ್ಲಿ ಗಾಳ ಹಾಕಿ ಕೂತ ಬೆಸ್ತ' ಎನ್ನುತ್ತಾರೆ ಎ.ಕೆ. ರಾಮಾನುಜನ್. ಕವಿತೆಗಳ ವಿಷಯದಲ್ಲಂತೂ ಇದು ಅಕ್ಷರಶಃ ಸತ್ಯ. ಕರೆದಾಗ ಬಾರದೇ, ತಡಕಾಡಿದಾಗ ಎಡತಾಕದೇ ಚಡಪಡಿಸುವಂತೆ ಮಾಡುತ್ತದೆ ಕವಿತೆ. ಮೂಡಿಲ್ಲದಾಗ ಮೂಡುವುದೇ ಇಲ್ಲ ಕವಿತೆ. ಅದು ಮೂಡಣ ಮನೆಯ ಮುತ್ತಿನ ನೀರನ್ನು ಆಕಸ್ಮಿಕವಾಗಿ ನೋಡಿದಾಗ ತನ್ನಿಂದ ತಾನೇ ಹೊಮ್ಮಿಬರುತ್ತದೆಯೇ ಹೊರತು, ಕವಿತೆ ಬರೆಯಲೆಂದೇ ಮನೆಯ ಮಾಡನ್ನು ಏರಿ ಮೂಡುತ್ತಿರುವ ಸೂರ್ಯನನ್ನು ನಿರೀಕ್ಷಿಸುತ್ತಾ ಕುಳಿತರೆ ಹತ್ತಿರವೇ ಸುಳಿಯದು. ನದಿಯ ತೀರದಲ್ಲಿ, ನೀರಿನಲ್ಲಿ ಕಾಲಿಳಿಸಿ ಕುಳಿತಿರಲು, ಪಕ್ಕದಲ್ಲೊಂದು ಜೀವವಿರಲು, ಮೀನಾಗಿ ಬಂದು ಕಾಲ್ತೊಡಕಾಗುತ್ತದೆ ಕವಿತೆ. ಗದ್ಯದ ವಿಷಯದಲ್ಲೂ ಇದು ಸತ್ಯ.
ಇದೇ ಹೆಸರನ್ನು ಆಯಲು ಮತ್ತೊಂದು ಕಾರಣವಿದೆ. ನಾನೊಬ್ಬ ಮೌನಿ. ಮಾತು ತುಂಬಾ ಕಮ್ಮಿ. ಗುಂಪಿನಲ್ಲಂತೂ ಮಾತೇ ಆಡುವುದಿಲ್ಲ. ನನ್ನ ಗೆಳೆಯರ ಆಕ್ಷೇಪವೂ ಅದೇ: ನೀನು ಹೀಗೆ ಮಾತೇ ಆಡದಿದ್ರೆ ಹ್ಯಾಗೆ? ಆದರೆ ನನಗೆ ಮಾತಿಗಿಂತ ಮೌನ ಇಷ್ಟ. ಯಾವುದೋ ಒಂದು ನಿರ್ದಿಷ್ಟ ವಿಷಯ ಕೊಟ್ಟರೆ ಮಾತಾಡಿಯೇನು, ಅಥವಾ ನನ್ನ ಜೊತೆ ಯಾರಾದರೂ ಒಬ್ಬರೇ ಇದ್ದಾಗ ಅವರೊಂದಿಗೆ ತುಂಬಾ ಮಾತಾಡುತ್ತೇನೆ, ಆದರೆ ಗುಂಪಿನಲ್ಲಿ ಮಾತ್ರ ನಾನು ಮಾತಾಡಲೊಲ್ಲೆ. ಮಾತಾಡಲು ಬರುವುದಿಲ್ಲ ಅಂತಲ್ಲ, (ಸ್ಕೂಲು, ಕಾಲೇಜುಗಳಲ್ಲಿ ಆಶುಭಾಷಣ, ಚರ್ಚಾಸ್ಪರ್ಧೆಗಳಲ್ಲಿ ನನಗೇ ಬರುತ್ತಿದ್ದುದು ಫಸ್ಟ್ ಪ್ರೈಜ್ ಕಣ್ರಪಾ!), ಆದರೆ 'ಆಡಬಾರದು' ಅಂತ ತೀರ್ಮಾನಿಸಿರುವಾಗ ಹೇಗೆ ಆಡಲಿ?! 'ಹೀಗಿದ್ದರೆ ನೀನು ಉದ್ಧಾರವಾಗೊಲ್ಲ' ಎಂಬ ಎಚ್ಚರಿಕೆಯನ್ನು ಮನೆಮಂದಿಯಿಂದಲೂ, ಸ್ನೇಹಿತರಿಂದಲೂ ಪದೇಪದೇ ಕೇಳುತ್ತಾ ಬಂದಿದ್ದೇನೆ, ಆದರೂ ನಾನು ನನ್ನ ನಿರ್ಧಾರ ಬದಲಿಸಿಲ್ಲ ಮತ್ತು ಆ 'ಉದ್ಧಾರ'ದತ್ತ ದಿನೇದಿನೇ ದಾಪುಗಾಲಿಡುತ್ತಲೇ ಇದ್ದೇನೆ. ಮಾತು ಬೆಳ್ಳಿ, ಮೌನ ಬಂಗಾರ ಅಲ್ವಾ?
ನಿನ್ನೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಸಮಾರಂಭದಲ್ಲಿ ಚೆನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾನು ಇದ್ದೆ. ತುಂಬಾ ಚೆನ್ನಾಗಿತ್ತು ಕಾರ್ಯಕ್ರಮ. ಸರ್ಕಾರದ ಕಾರ್ಯಕ್ರಮ ಎಂಬಂತೆ ತೋರಲೇ ಇಲ್ಲ. ಮೊದಲಿಗೆ ಹೆಲಿಕಾಪ್ಟರ್ ಎಲ್ಲರ ಮೇಲೂ ಗುಲಾಬಿಯ ಪುಷ್ಪವೃಷ್ಠಿಗೈದು ಹೋಯಿತು. ನಂತರ ಈ ಸಂಭ್ರಮಕ್ಕಾಗಿಯೇ ಎಂಬಂತೆ ಮೋಡಗಳು ಮಳೆ ಸುರಿಸಿದವು. ಬಿಸಿಲು-ಮಳೆ ಹೊಯ್ದಿದ್ದರಿಂದ ಆಗಸದಲ್ಲಿ ಕಾಮನಬಿಲ್ಲು ಮೂಡಿ ಸುವರ್ಣ ಕರ್ನಾಟಕ ರಾಜ್ಯೋತ್ಸವಕ್ಕೆ ಪ್ರಕೃತಿಯೇ ಸಿಳ್ಳೆ ಗಿಟ್ಟಿಸಿತು. ನಂತರ ಯಕ್ಷಗಾನ, ಡೊಳ್ಳುಕುಣಿತ, ಕರಡಿ ಮಜಲು, ಕೋಲಾಟ, ಅದೆಷ್ಟೋ ಸಾವಿರ ಮಕ್ಕಳಿಂದ ನೃತ್ಯ, ವೃಂದಗಾನ..... ಓಹೋಹೋ! ಒಂದೇ ಎರಡೇ? ರಾಜ್ಯೋತ್ಸವ, ಏಕೀಕರಣ ಪ್ರಶಸ್ತಿಗಳ ಪ್ರಧಾನವಾಯಿತು. ಮುಖ್ಯಮಂತ್ರಿಗಳು ಅದ್ಭುತವಾದ ಭಾಷಣವೊಂದನ್ನು ಓದಿ ಹೇಳಿದರು. ಕೊನೆಗೆ ಲೇಸರ್ ಬೆಳಕಿನ ಹೊಯ್ದಾಟ, ಬಾಣ-ಬಿರುಸುಗಳ ಢಾಂಢೂಂ... "ಕನ್ನಡಕ್ಕೇ" "ಕರ್ನಾಟಕಕ್ಕೇ" "ಕನ್ನಡಾಂಬೆಗೇ" ಎಂದು ಕೂಗಿದಾಗ ನಮ್ಮ ಎದೆಯಾಳದಿಂದ ಹೊಮ್ಮಿಬರುತ್ತಿದ್ದ "ಜೈ"ಕಾರದಲ್ಲಿ ಅದೆಷ್ಟು ಸಂಭ್ರಮವಿತ್ತು! ಅದೆಷ್ಟು ಹೆಮ್ಮೆಯಿತ್ತು!
ಓ ಕನ್ನಡಮ್ಮ, ನಿನಗೆ ನಾನು ಚಿರಋಣಿ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು. ಕನ್ನಡ ಬರುವವರೊಂದಿಗೆ ಕನ್ನಡದಲ್ಲೇ ಮಾತಾಡುವ ಪಣ ತೊಡೋಣ.
ಧನ್ಯವಾದಗಳು.

Wednesday, October 18, 2006
ದೀಪಾವಳಿಗೆ ಒಂದಷ್ಟು ಪ್ರಣತಿಗಳು
ಗೋಪೂಜೆ ಮಾಡಬೇಕಿದೆ..
ಇದು ಈ ವರ್ಷ ತಂದ ಹೊಸ ದನ..
ಕಳೆದ ವರ್ಷ ಇತ್ತಲ್ಲ, ಆ ದನ
ಕೆಚ್ಚಲುಬಾವು ಬಂದು ಮಧ್ಯದಲ್ಲೇ ಹಾಲು
ಕೊಡುವುದನ್ನು ನಿಲ್ಲಿಸಿಬಿಟ್ಟಿತು.
ನಮಗ್ಯಾಕಿದ್ದೀತು ರಗಳೆ ಎಂದು ಆಲೋಚಿಸಿ
ಒಳ್ಳೆಯ ರೇಟು ನೋಡಿ ಮಾರಿಬಿಟ್ಟೆವು.
ಈಗ ಆ ದನ ಎಲ್ಲಿದೆಯೋ ಗೊತ್ತಿಲ್ಲ
ಅದಕ್ಕೆ ಸರಿಯಾಗಿ ಅಕ್ಕಚ್ಚು, ಹಿಂಡಿ
ಕೊಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ
ಮೇಯಲು ಹೊರಗೆ ಬಿಡುತ್ತಾರೊ
ಅಥವಾ ಅವರೇ ಹುಲ್ಲು ಕೊಯ್ದು
ತಂದು ಹಾಕುತ್ತಾರೋ ಗೊತ್ತಿಲ್ಲ
ಅಪ್ಪನನ್ನು ಕೇಳಿದರೆ
'ಕೊಟ್ಟ ದನ ಕೊಟ್ಟಿಗೆಗೆ ಹೊರಗೆ,
ಸುಮ್ಮನಿರು' ಅನ್ನುತ್ತಾನೆ.
ಗೋಪೂಜೆ ಮಾಡಬೇಕಿದೆ..
ಕಳೆದ ವರ್ಷದ ದೀಪಾವಳಿಯಲ್ಲಿ
ಕೆಂಪು-ಹಸಿರು ಬಣ್ಣಗಳನ್ನು ಕೊಂಬು,
ಮೈಗೆಲ್ಲ ಸವರುವಾಗ ಆ ದನ
ಸ್ವಲ್ಪವೂ ತಿರುಗಾಡದೆ, ಹಾಯದೆ, ಒದೆಯದೆ
ನಿಂತಿರುತ್ತಿತ್ತು. ಅದರ ಕರು ಮಾತ್ರ ಚಿಗರೆಮರಿ.
ನನ್ನ ಹುಡುಗಿಗಿಂಥಾ ಜೋರು ಹಾರಾಟ-ಕುಣಿದಾಟ
-ಗುದ್ದುಮುರಿಯಾಟಗಳಲ್ಲಿ.
ಗೋಪೂಜೆ ಮಾಡಬೇಕಿದೆ..
ನನಗೋ ಹಳೆಯ ಗೋವಿನದೇ ನೆನಪು
ಈ ವರ್ಷ ಅದನ್ನು ಹಿಡಿದು ಕಟ್ಟಿ,
ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ, ಬಣ್ಣ ಹಚ್ಚಿ,
ಹೊಸ ಕಣ್ಣಿ ಕಟ್ಟಿ, ಪೂಜೆ ಮಾಡಿ,
ಗೋಗ್ರಾಸ ಕೊಟ್ಟು, ಕೊನೆಗೆ ಮರುದಿನ
ದೃಷ್ಟಿ ತೆಗೆದು... ಅದನ್ನೆಲ್ಲಾ ಮಾಡುವವರು ಯಾರು?
ಗೋಪೂಜೆ ಮಾಡಬೇಕಿದೆ..
ಅಪ್ಪನ ಬಳಿ ಹೇಳುತ್ತೇನೆ:
'ಅಪ್ಪಾ, ನಂಗ್ಯಾಕೋ ಆಗುತ್ತಿಲ್ಲ,
ನೀನೇ ಮಾಡು..'
***

ನನಗೆ ಹಾಗೇ, ಒಂಥರಾ ತಿಕ್ಕಲು.
ದೀಪ ಹಚ್ಚುವಾಗ
ಹಣತೆ ಮಾಡಿದ ಕೈಗಳು
ಬತ್ತಿ ಹೊಸೆಯುವಾಗ
ಹತ್ತಿಯನ್ನು ಬೀಜದಿಂದ ಬಿಡಿಸಿದ ಕೈಗಳು
ಹಣತೆಗೆ ಎಣ್ಣೆ ಎರೆಯುವಾಗ
ಆ ಎಣ್ಣೆಯನ್ನು ತಯಾರಿಸಿದ ಕೈಗಳು
ಹೋಳಿಗೆಗೆ ಉಂಡೆ ಕಟ್ಟಿಕೊಡುವಾಗ
ಬೇಳೆ ಬೆಳೆದವನ ಕೈಗಳು
ಹೊಸ ಕಣ್ಣಿಯನ್ನು ಕಟ್ಟುವಾಗ
ಅದನ್ನು ಹೊಸೆದ ಕೈಗಳು
ಪಟಾಕಿ ಹಚ್ಚುವಾಗ
ಅದರೊಳಗೆ ಮದ್ದು ತುಂಬಿದ ಕೈಗಳು
.....ಬಿಡದೇ ಕಾಡುತ್ತವೆ.
ಮಂದಿಯ ಪ್ರಕಾರ ನಾನು
ನಾಟ್ ಪ್ರಾಕ್ಟಿಕಲ್ಲು.
ನನಗೆ ಹಾಗೇ, ಒಂಥರಾ ತಿಕ್ಕಲು!
***
ಆದರೆ ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ ನೋಡಿ
ಹಣತೆ ಎಲ್ಲಿದೆ ಹುಡುಕಬೇಕು
ಬೆಂಕಿಪೊಟ್ಟಣವಂತೂ ಇಟ್ಟಲ್ಲಿ ಇರುವುದಿಲ್ಲ
ಹಣತೆಯಲ್ಲಿ ನಿನ್ನೆ ಸುರಿದಿಟ್ಟಿದ್ದ ಎಣ್ಣೆ ಆರಿಹೋಗಿದೆ
ಬತ್ತಿ ಕಟ್ಟು ಎಲ್ಲಿದೆ...?
ಓಹ್! ದೇವರ ಗೂಡಿನ ಮೇಲಿದೆ
ಎಲ್ಲವನ್ನೂ ಹುಡುಕಿ ತಂದು,
ಹಣತೆಗೆ ಎಣ್ಣೆ ಸುರಿದು,
ಬತ್ತಿಯನ್ನು ಎಣ್ಣೆಯಲ್ಲಿ ಅದ್ದಿ,
ಕಡ್ಡಿ ಗೀರಿ "ಚೊರ್ರ್"... ಬೆಳಕು.
ಹಾಗೆಲ್ಲಾ ಒಂದೇ ಕಡ್ಡಿಯಲ್ಲಿ ಹಚ್ಚಲಾಗುವುದಿಲ್ಲ
(ಇದೇನು ಸಿಗರೇಟಾ?)
ಮತ್ತೊಂದು ಕಡ್ಡಿ ಗೀರಬೇಕು.
ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ.
ಗಾಳಿಯಿದ್ದರಂತೂ ಮತ್ತೂ ಕಷ್ಟ.
***
ನಾನು ಚಿಕ್ಕವನಿದ್ದಾಗ
ಪಟಾಕಿ ಹಚ್ಚುವುದಕ್ಕೆ ಹೆದರುತ್ತಿದ್ದೆ.
ಈಗ ಏನಕ್ಕೂ ಹೆದರುವುದಿಲ್ಲ.
***
ದೀಪಾವಳಿಯೆಂದರೆ ದೀಪಗಳ ಹಬ್ಬ
ಅನ್ನುತ್ತಾರೆ.
ನಾನೀಗ ಕಷ್ಟ ಪಟ್ಟು
ಎರಡು ದೀಪಗಳನ್ನು ಹಚ್ಚಿಟ್ಟಿದ್ದೇನೆ.
ಅವು ಪರಸ್ಪರ ಮಾತಾಡಿಕೊಳ್ಳುತ್ತಿವೆ:
"ಹೇ, ನೀನು ಈಗ ಕಾಣಿಸುತ್ತಿದ್ದೀಯ"
"ಹೇ, ನೀನಿವತ್ತು ಚಂದ ಕಾಣಿಸುತ್ತಿದ್ದೀಯ".
"ಹೂಂ, ಇವತ್ತು ಹಬ್ಬ ಅಲ್ವಾ?"
"ಏನ್ ಹಬ್ಬ?"
"ದೀಪಾವಳಿ, ನಮ್ಮ ಹಬ್ಬ"
ಹಣತೆ ಹಣತೆಯನ್ನು ನೋಡುವುದಕ್ಕೂ
ಬೆಳಕು ಬೇಕು ನೋಡಿ.
***
ದೀಪದ ಬೆಳಕಿನಲ್ಲಿ ಕಂಡಷ್ಟು ಚಂದ
ಬೆಂಕಿಯ ಬೆಳಕಿನಲ್ಲಿ ಕಾಣುವುದಿಲ್ಲ
ನಲ್ಲೆಯ ಮುಖಾರವಿಂದ.
*** *** *** ***
ಎಲ್ಲೋ ಇರುವ ಆ ದನಕ್ಕೆ ಈ ವರ್ಷವೂ ಗೋಗ್ರಾಸ ಸಿಗಲಿ. ಎಲ್ಲೋ ಇದ್ದೂ ಇಲ್ಲಿ ನೆನಪಾಗುವ ಎಲ್ಲಾ ಕಷ್ಟಜೀವಿಗಳ ಅಗೋಚರ ಕೈಗಳು ಬೆಚ್ಚಗಿರಲಿ. ಕತ್ತಲೆಯಲ್ಲಿರುವವರಿಗೆ ದೀಪ ಬೇಗ ಸಿಗಲಿ. ಒಂದೇ ಬೆಂಕಿಕಡ್ಡಿಯಿಂದ ದೀಪ ಹತ್ತಿಕೊಳ್ಳಲಿ. ಪಟಾಕಿಯ ಸದ್ದಿಗೆ ಮಲಗಿದ ಮಗು ಎಚ್ಚರಗೊಳ್ಳದಿರಲಿ. ಹಣತೆಗಳು ಸದಾ ಮಾತಾಡಿಕೊಳ್ಳುತ್ತಿರಲಿ. ನಲ್ಲೆಯ ಮುಖದಲ್ಲಿ ದೀಪದ ಬೆಳಕು ಸದಾ ಲಾಸ್ಯವಾಡುತ್ತಿರಲಿ. ಮತ್ತು ದೀಪ ಎಂದೂ ಬೆಂಕಿಯಾಗದಿರಲಿ.
ಎಲ್ಲರಿಗೂ ದೀಪಾವಳಿಯ ಶುಭಾಷಯಗಳು.

Monday, October 09, 2006
ಪ್ರವಾಸ ಕಥನ: ಚುಕ್ಕಿಗಳ ಊರು ಶಿವನಸಮುದ್ರ
ಅಕ್ಟೋಬರ್ ಎರಡು, ಎರಡ್ಸಾವ್ರದ ಆರರ ಶುಭ್ರ ಮುಂಜಾನೆ ಬೆಂಗಳೂರಿನ ಯಾವ್ಯಾವುದೋ ಬಡಾವಣೆಗಳ ಯಾವ್ಯಾವುದೋ ಬೀದಿಗಳಲ್ಲಿನ ಮನೆಗಳಲ್ಲಿ ಕನಸುಗಳೊಂದಿಗೆ ನಿದ್ರಾಲೋಕದಲ್ಲಿ ಮುಳುಗಿಹೋಗಿದ್ದ ಎಂಟು ಜನ ಗೆಳೆಯರು ಅಲಾರಾಂ ಸದ್ದಿಗೆ ಎಚ್ಚೆತ್ತಾಗ ಆಕಾಶದಲ್ಲಿನ್ನೂ ಚುಕ್ಕಿಗಳ ಸರಭರ ಮುಗಿದಿರಲಿಲ್ಲ. ಆದರೆ ಆಗಲೇ ಚುಕ್ಕಿಗಳ ಊರು ಶಿವನಸಮುದ್ರ ಕರೆಯುತ್ತಿತ್ತು. ಇನ್ನೂ ಹುಟ್ಟಿರದ ಸೂರ್ಯ ದೊಡ್ಡ ಟೆರೇಸು ಮನೆಗಳ ಹಿಂಬದಿಯಿಂದ ಎದ್ದು ಬರಲು ಹೊಂಚು ಹಾಕಿ ಕುಳಿತಿದ್ದ. ಹಕ್ಕಿಗಳೆಲ್ಲಾ 'ತಮಗೆ ಇವತ್ತೂ ಆಫೀಸಿದೆ' ಎಂಬಂತೆ ಆಗಲೇ ಚಿಲಿಪಿಲಿಗುಡುತ್ತಾ ತಮ್ಮ ಗೂಡು ಬಿಟ್ಟು ಸ್ನೇಹಿತರೊಡಗೂಡಿ ಹಾರಟ ಹೊರಟಿದ್ದವು. ನೈಟ್‍ಶಿಫ್ಟ್ ಮುಗಿಸಿದ ನೌಕರರು ನಿದ್ದೆಗಣ್ಣಿನಲ್ಲಿ ಕ್ಯಾಬಿನಿಂದ ಇಳಿಯುತ್ತಿದ್ದರು. ಪೇಪರ್ ಹುಡುಗರು ಆಯುಧಪೂಜೆಯ ಮರುದಿನವಾದ್ದರಿಂದ ಯಾವ ಪೇಪರೂ ಹಂಚುವುದಿರಲಿಲ್ಲವಾದರೂ ಬೆಳಗ್ಗೆ ಮುಂಚೆಯೇ ಎಚ್ಚರಾಗಿ, 'ಥೋ, ಇವತ್ತು ರಜ!' ಅಂತ ಗೊಣಗಿಕೊಂಡು, ಮತ್ತೆ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದರು.
ಸ್ನಾನ ಗೀನ ಮಾಡಿ ರೆಡಿಯಾಗಿ, ಬಟ್ಟೆ ಗಿಟ್ಟೆ ತೊಟ್ಟು ತಲೆ ಬಾಚಿ, ನಿನ್ನೆ ತೊಳೆದಿದ್ದ ಬೈಕೆಳೆದುಕೊಂಡು, ತಮ್ಮ ಗೆಳೆಯನೊಬ್ಬನನ್ನು ಕೂರಿಸಿಕೊಂಡು, 'ಜೈ ಭಜಿರಂಗಬಲಿ!' ಅಂತ ಕಿಕ್ ಹೊಡೆದು ಸ್ಟಾರ್ಟ್ ಮಾಡಿ ಹೊರಟು, ನಾವು ಎಂಟು ಹುಡುಗರು ಬಿಎಚ್‍ಇಎಲ್ ಗೇಟ್ ಬಳಿ ಸೇರಿದಾಗ ಏಳು ಗಂಟೆ ಹತ್ತು ನಿಮಿಷ. ಅಲ್ಲೇ ಬದಿಯ ಚಾ-ದುಖಾನ್‍ನಲ್ಲಿ ಕಟಿಂಗ್ ಚಾಯ್ ಕುಡಿದು, ಬೈಕಿಗೆ ಪೆಟ್ರೋಲು ಕುಡಿಸಿ, ಮೈಸೂರು ರಸ್ತೆಯಲ್ಲಿ ಬೈಕು ಚಲಿಸತೊಡಗಿದರೆ, ಉಲ್ಲಾಸ-ಉತ್ಸಾಹ-ಉನ್ಮಾದಗಳು ಚಕ್ರದ ಪ್ರತಿ ಉರುಳುವಿಕೆಯಲ್ಲೂ ಇಮ್ಮಡಿಯಾಗಿದ್ದವು.

ಇಂಟರ್‍ನೆಟ್ಟಿನಲ್ಲಿ Orkut ಅಂತ ಒಂದು friendship building network. ಅದರಲ್ಲಿ 'ಹವ್ಯಕ' ಅಂತ ಒಂದು community. ಆ community ಯಿಂದ ಒಂದುಗೂಡಿದ, ಹತ್ತಿರಾದ ನಾವು ಎಂಟು ಜನ ಹುಡುಗರೇ ಈ ಟೂರಿಗೆ ಹೊರಟಿದ್ದ ಟ್ರೂಪು. ಮೊದಲೇ ಮಾತಾಡಿಕೊಂಡಿದ್ದಂತೆ ಕಾಮತ್ ರೆಸ್ಟುರಾದಲ್ಲಿ ಬೆಳಗಿನ ತಿಂಡಿಗೆ ನಿಲ್ಲಿಸಿದೆವು. ವಡೆ, ಮಸಾಲೆ ದೋಸೆ ಮತ್ತು ಕಾಫಿಯ ಜೊತೆಗೆ ಒಂದೊಂದು ಕೊಟ್ಟೆ ಇಡ್ಲಿಯೂ ಬಿದ್ದಾಗ ಹೊಟ್ಟೆ ಫುಲ್ಲಾಗಿತ್ತು. ತಿಂಡಿಗಿಂತಾ ಚೆನ್ನಾಗಿದ್ದದ್ದು ಕಾಮತ್ ರೆಸ್ಟುರಾ ಮತ್ತು ಅದಕ್ಕಿಂತಾ ಚೆನ್ನಾಗಿದ್ದದ್ದು ಪಕ್ಕದ ಕೊಳದಲ್ಲಿ ಈಜಾಡುತ್ತಿದ್ದ ಹಂಸಪಕ್ಷಿ.
ಅಲ್ಲಲ್ಲಿ ನಿಲ್ಲಿಸುತ್ತಾ, ಡ್ರೈವರ್ ಬದಲಿಸುತ್ತಾ, ದಾರಿ ವಿಚಾರಿಸುತ್ತಾ, ಕೆಟ್ಟ ರಸ್ತೆಯನ್ನು ಬೈದುಕೊಳ್ಳುತ್ತಾ ನಾವು ಶಿವನ ಸಮುದ್ರ ಮುಟ್ಟುವಷ್ಟರಲ್ಲಿ ಹನ್ನೊಂದೂ ಕಾಲು. ಕಾವೇರಿ ನದಿ ಇಲ್ಲಿ ಕವಲಾಗಿ ಒಡೆದು, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳನ್ನು ಉಂಟುಮಾಡಿದೆ. ಎರಡೂ ಜಲಪಾತಗಳೂ ಒಂದಕ್ಕೊಂದು ಎದುರು-ಬದುರು ಇವೆ. ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗಿ, ಮದ್ದೂರಿನಿಂದ ಎಡಕ್ಕೆ ಕೊಳ್ಳೇಗಾಲ ರಸ್ತೆಯಲ್ಲಿ ಸುಮಾರು ಎಪ್ಪತ್ತು ಕಿ.ಮೀ. ಚಲಿಸಿದರೆ, ನಿಮಗೆ ಮೊದಲು ಸಿಗುವುದು ಭರಚುಕ್ಕಿ ಜಲಪಾತ. ಅಲ್ಲಿಂದ ಐದು ಕಿ.ಮೀ. ಸುತ್ತುವರಿದುಕೊಂಡು ಬಂದರೆ ಗಗನಚುಕ್ಕಿ ಕಾಣುತ್ತದೆ. ಭರಚುಕ್ಕಿಯನ್ನು ನೋಡುವಾಗ ಗಗನಚುಕ್ಕಿ ನಿಮ್ಮ ಕಾಲಡಿಗೇ ಇರುತ್ತದೆ; ಆದರೆ ನೋಡಲಾಗುವುದಿಲ್ಲ. ಹಾಗೆಯೇ ಇಲ್ಲಿಂದ ಭರಚುಕ್ಕಿಯನ್ನು ನೋಡುವಾಗ ಅದರ ಭಾರೀ ಪ್ರಮಾಣದ ಅರಿವು ಆಗುವುದೇ ಇಲ್ಲ. ಇಲ್ಲಿದ್ದಾಗ ಗಮನ ಸೆಳೆಯುವುದು ದೂರದಲ್ಲಿನ ಮುದಿ ಒಂಟಿ ಮರ. ಈ ಮರ ಅದೆಷ್ಟೋ ವರ್ಷಗಳಿಂದ ಜಲಪಾತದ ಭೋರ್ಗರೆತವನ್ನು ಕೇಳುತ್ತಾ ಕೇಳುತ್ತಾ ಸರ್ವಸಂಗಪರಿತ್ಯಾಗಿಯಾದಂತೆ ತನ್ನ ಎಲೆಗಳನ್ನೆಲ್ಲಾ ಉದುರಿಸಿ ಬೋಳಾಗಿ ನಿಂತಿದೆ. ಪಕ್ಕದಲ್ಲಿನ ಚಿಕ್ಕಪುಟ್ಟ ಗಿಡ-ಮರಗಳ್ಯಾವೂ ಇದರ ಕಷ್ಟ ವಿಚಾರಿಸುವುದಿಲ್ಲ. ಅದು ಪ್ರವಾಸಿಗರಿಗೆಲ್ಲಾ ತನ್ನ ಕತೆಯನ್ನು ಹೇಳುತ್ತದೆ. ಈ ಮರ ಕಾವೇರಿ ವಿವಾದವಾದಾಗ ಸಹ ಇಲ್ಲೇ ಇತ್ತು. ಆಗ ಕಾವೇರಿ ಬೇಸರದಿಂದ ಇಲ್ಲಿ ಧುಮ್ಮಿಕ್ಕುವುದನ್ನು ಕಣ್ಣಾರೆ ಕಂಡನಂತರ, ಅದಕ್ಕೆ ಈ ಇಹಲೋಕದ ಬಗ್ಗೆ ಬೇಸರ ಮೂಡಿ, ಪ್ರತಿಭಟನೆ ವ್ಯಕ್ತಪಡಿಸಲೆಂದು ತನ್ನೆಲ್ಲಾ ಎಲೆಗಳನ್ನು ಉದುರಿಸಿದ್ದಂತೆ. ಆದರೆ ಮತ್ತೆ ಎಲೆಗಳು ಚಿಗುರಲೇ ಇಲ್ಲ.

ಭರಚುಕ್ಕಿಯನ್ನು ನೋಡಿ, ಮನಸಾರೆ ದಣಿದು, ಪೆಪ್ಸಿ ಕುಡಿದು, ಫೋಟೋ ಕ್ಲಿಕ್ಕಿಸಿಕೊಂಡು ನಾವು ಮತ್ತೆ ಬೈಕು ಹತ್ತಿ ಗಗನಚುಕ್ಕಿಯತ್ತ ಹೊರಟೆವು. ದಾರಿ ಮಧ್ಯೆ ಒಂದು ಕಡೆ ನಿಲ್ಲಿಸಿದೆವು. ಅಲ್ಲಿ ಕಾವೇರಿಯ ನೀರು backwaterನಂತೆ ನಿಂತಿದೆ. ಇಲ್ಲ, ನಿಂತಿಲ್ಲ, (ನದಿ ನಿಲ್ಲುವುದುಂಟೆ?), ಹರಿಯುತ್ತಿದೆ, ನಿಧಾನವಾಗಿ ಹರಿಯುತ್ತಿದೆ. ನಿಂತಲ್ಲೇ ಹರಿಯುತ್ತಿದೆ. ಅದರಲ್ಲೊಂದು ಬಕಪಕ್ಷಿ. ಕತ್ತನ್ನಷ್ಟೇ ಎತ್ತಿ ಸುತ್ತ ನೋಡಿ ಮತ್ತೆ ಮುಳುಗಿಬಿಡುತ್ತೆ ಗತ್ತಿನಲ್ಲಿ. ಇಲ್ಲಿ ಮುಳುಗಿ ಎಲ್ಲೋ ಏಳುತ್ತದೆ. ಅದರ ಫೋಟೊ ತೆಗೆಯುವಷ್ಟರಲ್ಲಿ ಸಾಕುಬೇಕಾಗಿತ್ತು ನಮಗೆ!
ಗಗನಚುಕ್ಕಿಯ ವೀಕ್ಷಣಾಸ್ಥಳವನ್ನು ನಾವು ಮುಟ್ಟಿದಾಗ ಮಧ್ಯಾಹ್ನದ ಒಂದೂ ವರೆ. ಹೋದಮೇಲೇ ಗೊತ್ತಾದದ್ದು: ನಾವು ಭರಚುಕ್ಕಿಯನ್ನು ನೋಡಲು ನಿಂತ ಜಾಗದ ಕೆಳಗೇ ಗಗನಚುಕ್ಕಿ ಇತ್ತು ಎಂಬುದು! ಭರಚುಕ್ಕಿಯ ಎದುರುಮನೆಯಲ್ಲೇ ಗಗನಚುಕ್ಕಿಯ ಭೋರ್ಗರೆತ. ಗಗನಚುಕ್ಕಿ ಸ್ಲಿಮ್ಮಾಗಿ ಆದರೆ ಬಲು ಎತ್ತರದಿಂದ ಧುಮುಕುತ್ತಾಳಾದರೆ, ಭರಚುಕ್ಕಿ ಅಗಾಧ ಪ್ರಮಾಣದ ನೀರಿನೊಂದಿಗೆ ಕಂದಕಕ್ಕಿಳಿಯುತ್ತಾಳೆ. ಕೆಳಗಿಳಿದ ಮೇಲೆ ಇಬ್ಬರೂ ಮತ್ತೆ ಒಂದಾಗಿ ಮುಂದೆ ಸಾಗುತ್ತಾರೆ. ಮುಸ್ಲಿಮರ ದರ್ಗಾ ಇರುವ ಪ್ರದೇಶವಾದ್ದರಿಂದಲೋ ಏನೋ, ಇಲ್ಲಿ ಸ್ವಲ್ಪವೂ cleanness ಇಲ್ಲ. ಕಾಲಿಡುವಾಗ ನೋಡಿಕೊಂಡು ಇಡಬೇಕು. ಅಲ್ಲೇ ದರ್ಗಾದ ಪಕ್ಕದಲ್ಲಿ ಹಾದುಹೋದರೆ, ಕೆಳಗಿಳಿಯಲಿಕ್ಕೆ ಒಂದು ಕಾಲ್ದಾರಿ ಇದೆ. ನಾವು ಅಲ್ಲೇ ನಿಂತು ಸ್ವಲ್ಪ ಹೊತ್ತು ವೀಕ್ಷಿಸಿ, ಕೆಳಗಿಳಿದು ಹೋದೆವು. ಮೊದಲು ಸ್ನಾನ ಮಾಡಬೇಕು ಎಂದಾಯಿತು. ಎಲ್ಲಿ ಸ್ನಾನ ಮಾಡುವುದು ಅಂತ ಹುಡುಕಿ ಹುಡುಕಿ, ಕೊನೆಗೆ ಸರ್ವಾನುಮತದಿಂದ ಒಂದು ಜಾಗಕ್ಕೆ ಹೋಗಿ, ಬಟ್ಟೆ ಬಿಚ್ಚಿ, ಬರ್ಮುಡಾ ತೊಟ್ಟು, ನೀರಿಗಿಳಿದರೆ.... ನೀರಿನ ತಂಪಿಗೆ ಆಹಾ! ಸ್ವರ್ಗಸುಖ! ನಾವು ನೀರಿನಲ್ಲೇ ಸುಮಾರು ಮೂರು ತಾಸು ಇದ್ದೆವು. ಮಧ್ಯೆ ಒಮ್ಮೆ ಹೊರಬಂದು ಚಕ್ಲಿ ಕಂಬಳದಲ್ಲಿ ಉಳಿದಿದ್ದ ಚಕ್ಲಿಯನ್ನೆಲ್ಲಾ ತಿಂದೆವು. ಪೆಪ್ಸಿ ಕುಡಿದೆವು. ಕತೆ ಹೊಡೆದೆವು. ಮತ್ತೆ ನೀರಿಗಿಳಿದೆವು. ಫೋಟೋ ತೆಗೆಸಿಕೊಂಡೆವು. ಒಬ್ಬರು ಮತ್ತೊಬ್ಬರಿಗೆ ನೀರು ಸೋಕಿಕೊಂಡೆವು. ಜೋಕು ಮಾಡಿಕೊಂಡೆವು.... ಹಾಗೆಯೇ ಸಮಯ ಕಳೆಯಿತು.

ವಾಪಸು ಹೊರಟೆವು. ಬಟ್ಟೆ ಧರಿಸಿ ಮೇಲೆ ಹತ್ತಿ ಬಂದೆವು. ಬಂದಮೇಲೆ ಕೆಳಗೆ ನೋಡಿದರೆ, ಬಹಳಷ್ಟು ಜನ ಭರಚುಕ್ಕಿ ಜಲಪಾತದ ಸಮೀಪದಲ್ಲೇ ನಿಂತು ವೀಕ್ಷಿಸುತ್ತಿರುವುದು ಕಂಡುಬಂತು. ನಾವೂ ಅಲ್ಲಿಗೆ ಹೋಗಬೇಕು ಅನ್ನಿಸಿತು. ತುಂಬಾ ಸುಸ್ತಾಗಿತ್ತಾದರೂ ಮತ್ತೆ ಕೆಳಗಿಳಿದೆವು. ಸಾಹಸ ಮಾಡಿ, 'ಜಂಪ್' ಮಾಡಿ, ಧೈರ್ಯವಿಲ್ಲದವರಿಗೂ ಧೈರ್ಯ ತುಂಬಿ, ಭರಚುಕ್ಕಿಯ ಸಮೀಪ ಹೋಗಿ ನಿಂತು ನೋಡುತ್ತೇವೆ: ಏನದು ಜಲರಾಶಿ.. ಅಲ್ಲಿ ನೀರಲ್ಲ, ಸಮುದ್ರವೇ ಧುಮ್ಮಿಕ್ಕುತ್ತಿತ್ತು. ನಾನಂತೂ ಒಂದು ಕ್ಷಣ ಮೂಕವಿಸ್ಮಿತನಾಗಿ ನಿಂತುಬಿಟ್ಟೆ. ಕಾವೇರಿ ಉನ್ಮತ್ತಳಂತೆ ಭರದಿಂದ ಎದುರಿಗಿನ ಗಗನಚುಕ್ಕಿ ನಾಚುವಂತೆ ರುದ್ರಾವತಾರ ತಾಳಿ ಧುಮುಕುತ್ತಿದ್ದಳು. ಕಿವಿಗಡಚಿಕ್ಕುವಂತಹ ಭೋರ್ಗರೆತ. ನೀರು ಕೆಳಗೆ ಬಿದ್ದು ಸಿಡಿದ ಹನಿಗಳು ಮೋಡದಂತೆ ಗಗನವನ್ನೇ ಮುಟ್ಟಿದ್ದವು.
ನಾನು ಯೋಚಿಸುತ್ತಿದ್ದೆ: ಅದೆಲ್ಲೋ ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ಹರಿಯುತ್ತಾ ಹರಿಯುತ್ತ ಇಲ್ಲಿಗೆ ಬಂದು ಹೀಗೆ ಧುಮ್ಮಿಕ್ಕುವ ಪರಿ... ಇದ್ಯಾವ ಸಂಕಲ್ಪ? ಅಷ್ಟು ದೂರದಿಂದ ಜೊತೆಯಾಗಿ, ಒಂದಾಗಿ (ಒಂದೇ ಆಗಿ) ಬಂದು ಇಲ್ಲಿ ಸ್ವಲ್ಪ ದೂರ ಬೇರ್ಪಟ್ಟು, ಬೇರ್ಪಟ್ಟಿದ್ದಕ್ಕೇ ಬೇಸರಗೊಂಡು, ಇಷ್ಟೆತ್ತರದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು, ಆದರೂ ಸಾಯದೆ, ಮತ್ತೆ ಒಂದಾಗಿ ಮುಂದೆ ಸಾಗುವ ವಿಸ್ಮಯ... ಇದ್ಯಾವ ಮಾಯೆ? ಏನು ಮರ್ಮ? ಪ್ರಕೃತಿಯ ಈ ರಮಣೀಯ ಸೌಂದರ್ಯಕ್ಕೆ ಎಣೆ ಎಲ್ಲಿದೆ? ಇದರ ಮುಂದೆ ನಾವೆಲ್ಲಾ ಚುಕ್ಕಿಗಳೇ ಅಲ್ಲವೆ?
ತುಂಬಾ ಹೊತ್ತು ಅಲ್ಲೇ ಇದ್ದು ನಾವು ಹೊರಟೆವು. ಅಷ್ಟು ಹೊತ್ತೂ ಇರದಿದ್ದ ಹಸಿವು ಆಗ ಕಾಣಿಸಿಕೊಂಡಿತ್ತು. ಏನನ್ನಾದರೂ ತಿನ್ನಬೇಕಿತ್ತು. ಮದ್ದೂರಿನವರೆಗೂ ಯಾವುದೇ ಒಳ್ಳೆಯ ಹೋಟಿಲಿರಲಿಲ್ಲವಾದ್ದರಿಂದ, ಮದ್ದೂರ್ ಟಿಫಾನೀಸ್‍ಗಾಗಿಯೇ ಕಾಯಬೇಕಾಯಿತು. ಜನಪ್ರಿಯ ಮದ್ದೂರು ವಡೆ ತಿಂದು, ಈರುಳ್ಳಿ ದೋಸೆ ತಿಂದು, ಕಾಫಿ ಕುಡಿದು, ಸಂಜೆ ಐದೂವರೆಗೆ 'ಮಧ್ಯಾಹ್ನದ ಊಟ' ಮುಗಿಸಿದೆವು. ಮತ್ತೆ ಬೈಕು ಹತ್ತುವಷ್ಟರಲ್ಲಿ ಕತ್ತಲಾವರಿಸುತ್ತಿತ್ತು.
ಹೆಡ್‍ಲೈಟ್ ಆನ್ ಮಾಡಿ ಹೊರಟರೆ ರಸ್ತೆಯ ತುಂಬಾ ಚುಕ್ಕಿಗಳೋ ಚುಕ್ಕಿಗಳು. ದೂರದ ರಸ್ತೆ ದೀಪಗಳೂ ಚುಕ್ಕಿಗಳು. ಕತ್ತೆತ್ತಿ ಮೇಲೆ ನೋಡಿದರೆ ಆಗಸದಲ್ಲೂ ಚುಕ್ಕಿಗಳು. ಮಧ್ಯೆ ಮಧ್ಯೆ ನಿಲ್ಲಿಸುತ್ತಾ, ಹಿಂದಿದ್ದವರು ಬರುವತನಕ ಕಾಯುತ್ತಾ, ಶರವೇಗದಲ್ಲಿ ಸಾಗುತ್ತಿದ್ದರೆ, ಮಧ್ಯೆ ಬಂದ ಸಣ್ಣ ಮಳೆ ಯಾವ ಲೆಕ್ಕ? ಬೆಂಗಳೂರಿನ ದೀಪಗಳು ಚುಕ್ಕಿಗಳಾಗಿ ಕಾಣುತ್ತಿತ್ತು. ಬೆಂಗಳೂರಿಗೆ ಪ್ರವೇಶಿಸುತ್ತಿದ್ದಂತೆಯೇ, ರಸ್ತೆಬದಿಯ ಟೀ ಅಂಗಡಿಯೊಂದರಲ್ಲಿ ಎಲ್ಲರೂ ಟೀ ಕುಡಿದು, ಅಲ್ಲೇ ಎಲ್ಲರಿಗೂ ಬೈಬೈ ಹೇಳಿ ಹೊರಟೆವು. ಮತ್ತು ಸಿಗ್ನಲ್ಲುಗಳ ಊರಿನ ಟ್ರಾಫಿಕ್ಕಿನಲ್ಲಿ ಕಳೆದುಹೋದೆವು.

Subscribe to:
Posts (Atom)