ಸಿಗುವುದಿಲ್ಲ ನೀನೀಗ ಆಗಿನಂತೆ-
ಕಾಲೇಜಿನ ಕಾರಿಡಾರಿನಲ್ಲಿ ಒಂಟಿ
ಸಾಲು ನೀಲಗಿರಿ ಮರಗಳ ನೆರಳಲ್ಲಿ ನನಗಂಟಿ
ಜೋರು ಮಳೆಯ ದಿನ ಸೇರಿಕೊಂಡಂತೆ ಬಂದು ನನ್ನ ಛತ್ರಿಯಲ್ಲಿ
ಸಿಗುತ್ತೀ ನೀನೀಗ-
ನಾಲ್ಕು ರಸ್ತೆ ಸೇರುವ ಗಡಿಯಾರ ಗೋಪುರದ ಬಳಿ
ವಿಧಾನಸೌಧದೆದುರಿನ ಜನ ಜಂಗುಳಿಯಲ್ಲಿ
ಪಿವಿಆರ್ ಥೇಟರಿನ ಟಿಕೇಟ್ ಕ್ಯೂನಲ್ಲಿ
ಒಳ್ಳೆಯದೇ ಆಯಿತು ನನಗೆ-
ನೀನು ಭಯಗ್ರಸ್ಥ ಕಣ್ಣುಗಳಲ್ಲಿ ನನ್ನನ್ನು ನೋಡುತ್ತಿರುವಾಗ
ಜೊತೆಯಲ್ಲಿ ನಿಂತ ನಿನ್ನ ಹೊಸ ಗೆಳೆಯ
ಅನುಮಾನದ ಕಣ್ಣುಗಳಲ್ಲಿ ನಿನ್ನನ್ನೇ ನೋಡುತ್ತಿರುವಾಗ
ತಪ್ಪಿಸಬಹುದು ನಾನು ನನ್ನ ಕಣ್ಣ-
ಗೋಪುರದ ದೊಡ್ಡ ಗಡಿಯಾರದ ಮುಳ್ಳನ್ನು ನೋಡುತ್ತಾ
ವಿಧಾನಸೌಧದ ಮೇಲಿನ ಸಿಂಹ ಪುತ್ಥಳಿಯನ್ನು ನೋಡುತ್ತಾ
ಪಿವಿಆರಿನ ಚಲಿಸುತ್ತಿರುವ ಎಸ್ಕಲೇಟರನ್ನು ನೋಡುತ್ತಾ.
(೨೭.೦೪.೨೦೦೬)
Wednesday, January 17, 2007
Tuesday, January 16, 2007
ಅವಳು ಹೇಳಿದ್ದು
ನಿನ್ನ ಬಗ್ಗೆ ಒಂದು ಚಿಕ್ಕ ಅನುಮಾನ ಕಾಡಿ
ಮುನಿಸಿಕೊಂಡೆ ನೋಡು?
ನೀನು ಪ್ರಾಮಾಣಿಕ ಎಂದು ತೋರಿಸಲೋಸುಗ
'ನಿನ್ನ ಹೆಸರೇ ನನ್ನ ಪಾಸ್‍ವರ್ಡ್ ಕಣೇ,
ಬೇಕಾದ್ರೆ ಚೆಕ್ ಮಾಡ್ಕೋ ಇನ್‍ಬಾಕ್ಸು' ಎಂದದ್ದೇ,
ನಿನ್ನ ಪ್ರಾಮಾಣಿಕತೆಯ ಪ್ರವಾಹದಲ್ಲಿ
ನನ್ನ ಅನುಮಾನವು ಕೊಚ್ಚಿಹೋಗಿ,
ಅರೆ! ನಿನ್ನ ಐಡಿಯೇ ಮರೆತುಹೋಯ್ತಲ್ಲೋ ಗೆಳೆಯಾ...!
ನಿನ್ನೆಡೆಗಿನ ಪ್ರೀತಿಯ ಧ್ಯಾನದಲ್ಲಿ ಮುಳುಗಿಹೋಗಿ,
ಅರೆ! ನನ್ನ ಹೆಸರೇ ನನಗೆ ಮರೆತುಹೋಯ್ತಲ್ಲೋ ಮಿತ್ರಾ...!
ಈಗ ಹೇಗೆ ಲಾಗಿನ್ ಆಗಲಿ...?

Saturday, January 06, 2007
ಭಯ, ತಳಮಳಗಳ ನಡುವೆ ಬಂದ ಹೊಸವರ್ಷ
ಜಾಲಾಟ
ಎರಡುಸಾವಿರದ ಐದನೇ ಇಸವಿಯ ಇಯರೆಂಡಿಗೆ ನಾವು ಹೊಗೆನಕ್ಕಲ್ ಫಾಲ್ಸ್‌ಗೆ ಹೋಗಿದ್ದೆವು. ಅಲ್ಲಿ ಹೋಗಿದ್ದಾಗ ಮಾತಾಡಿಕೊಂಡಿದ್ದೆವು: ಪ್ರತಿವರ್ಷವೂ ಇಯರೆಂಡಿನ ದಿನ ಬೆಂಗಳೂರಿನಿಂದ ಹೊರಗಡೆ ಎಲ್ಲಿಗಾದರೂ ಟೂರ್ ಹೋಗಬೇಕು ಅಂತ. ಹಾಗಾಗಿ ಈ ವರ್ಷ, ಅಂದರೆ ಎರಡುಸಾವಿರದ ಆರನೇ ಇಸವಿಯ ಡಿಸೆಂಬರ್ ಹತ್ತಿರಾಗುತ್ತಿದ್ದಂತೆಯೇ ನನ್ನಿಬ್ಬರೂ ಗೆಳೆಯರೂ ಒಂದೇ ಸಮನೆ ಪೀಡಿಸಹತ್ತಿದ್ದರು: 'ಎಲ್ಲಿಗೆ ಹೋಗೋಣ ಈ ವರ್ಷ?' ಅಂತ. ಈ ಇಬ್ಬರು ಗೆಳೆಯರು -ರಾಘವೇಂದ್ರ ಮತ್ತು ಸಂತೋಷ ಅಂತ- ನನ್ನ ಕಾಲೇಜ್ ಕ್ಲಾಸ್‌ಮೇಟುಗಳು. ಅದಕ್ಕಿಂತ ಹೆಚ್ಚಾಗಿ, ನನ್ನ ಜೀವದ ಗೆಳೆಯರು. ನಾವು ಮೂವರೇ ಪ್ರತಿವರ್ಷವೂ ವರ್ಷದ ಕೊನೆಯ ದಿನ ಎಲ್ಲಿಗಾದರೂ ಟ್ರಿಪ್ ಹೋಗಬೇಕು ಎಂದು ತೀರ್ಮಾನಿಸಿದ್ದೆವು.
ಅಂತರ್ಜಾಲದಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರವಾಸೀ ತಾಣಗಳಿಗಾಗಿ ಜಾಲಾಡಿದಾಗ ದೇವರಾಯನದುರ್ಗ ಸಿಕ್ಕಿತು. ವಿವರಗಳೂ ಸಿಕ್ಕವು. ಎಲ್ಲರಿಗೂ ಇಷ್ಟವೂ ಆಯಿತು. ನಾವು ಪಯಣಕ್ಕೆ ತಯಾರಾಗತೊಡಗಿದೆವು.
ತಯಾರಿ
ಮಲ್ಲೇಶ್ವರಂನಲ್ಲಿ ಒಂದು ಕಡೆ ಚಪಾತಿ ಮಾಡಿ ಕೊಡ್ತಾರೆ ಅಂತ ಗೊತ್ತಾಯ್ತು. ಹುಡುಕಿಕೊಂಡು ಹೋಗಿ ಆರ್ಡರ್ ಕೊಟ್ಟು ಬಂದೆವು. ದೇವರಾಯನದುರ್ಗದಲ್ಲಿರುವ ಹೋಟೆಲ್ಲು, ಗೆಸ್ಟ್‍ಹೌಸ್‍ಗಳಲ್ಲಿ ರೂಮ್ ಬುಕ್ ಮಾಡಲಿಕ್ಕೆ ಪ್ರಯತ್ನಿಸಿದೆವಾದರೂ ಸಫಲವಾಗಲಿಲ್ಲ. ಹಾಗಾಗಿ, ಅಲ್ಲಿಗೆ ಹೋಗಿಯೇ ನೋಡೋದು ಎಂದಾಯಿತು. ಅಕಸ್ಮಾತಾಗಿ ರೂಮ್ ಸಿಗಲಿಲ್ಲ ಅಂದ್ರೆ ಇಡೀ ರಾತ್ರಿ ಹೊರಗಡೆಯೇ ಇರಲಿಕ್ಕೂ ಸೈ ಎಂದಾಯಿತು. ಜೈ ಎಂದೆವು. ಕಾರು ಮಾಡಿಸಿಕೊಂಡು ಹೋಗೋಣ ಎಂದುಕೊಂಡೆವು. ಮತ್ತೆ ನಾವು ಮೂವರಿಗೆ ಏನಕ್ಕೆ ಕಾರು; ಬಸ್ಸಿಗೆ ಹೋಗೋಣ, ಮಜಾ ಇರೊತ್ತೆ ಅಂತ ತೀರ್ಮಾನಿಸಿದೆವು.
ಪಯಣ
.jpg)
ಮೆಜೆಸ್ಟಿಕ್ಕಿಗೆ ಹೋಗಿ ರೂಟು ವಿಚಾರಿಸಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಹತ್ತಿದಾಗ ಮೂವತ್ತೊಂದನೇ ತಾರೀಖಿನ ಮಧ್ಯಾಹ್ನ ೩.೩೦. ಡಾಬಸ್‍ಪೇಟೆ (ದಬ್ಬಾಸ್‍ಪೇಟ್) ಎಂಬಲ್ಲಿಗೆ ಟಿಕೇಟ್ ತಗೊಂಡೆವು. ಕೊನೆಗೆ ಬಸ್ಸಿನಲ್ಲಿದ್ದವರಲ್ಲಿ ವಿಚಾರಿಸಿದಾಗ 'ಊರ್ಡಿಗೆರೆ'ಯಲ್ಲಿ ಇಳಕೊಂಡ್ರೆ ಹತ್ತಿರ ಅಂತ ಗೊತ್ತಾಯಿತು. ಹಾಗಾಗಿ ದಬ್ಬಾಸ್‍ಪೇಟೆಯಿಂದ ಮತ್ತೆ ಊರ್ಡಿಗೆರೆಗೆ ಟಿಕೀಟು ತಗೊಂಡೆವು. ಬಸ್ಸು ಊರ್ಡಿಗೆರೆ ತಲುಪಿದಾಗ ಐದೂ ವರೆಯಾಗಿತ್ತು. ಊರ್ಡಿಗೆರೆ ಒಂದಷ್ಟು ಅಂಗಡಿಗಳಿರುವ ಪುಟ್ಟ ಊರು. ಒಂದು ಮಿನಿ ಹೋಟೆಲಿತ್ತು. ಅಲ್ಲಿ ಮೂವರೂ ಕಾಫಿ ಕುಡಿದೆವು. 'ಇಲ್ಲಿಂದ ಐದು ಕಿಲೋಮೀಟರಾಗೊತ್ತೆ ದೇವರಾಯನದುರ್ಗದ ಬೆಟ್ಟ' ಎಂಬ ವಿವರ ಸಿಕ್ಕಿತು ಹೋಟಿಲಿನವನಿಂದ. ಬೆಟ್ಟ ಕಣ್ಣಿಗೆ ಹತ್ತಿರದಲ್ಲೇ ಇದ್ದಂತೆ ಕಾಣಿಸುತ್ತಿತ್ತಾದಾರೂ ನಡೆದುಕೊಂಡು ಹೋಗಲಿಕ್ಕೆ ದೂರ ಅನ್ನಿಸಿ, ಆಟೋ ಮಾಡಿಸಿಕೊಂಡು ಹೊರಟೆವು. ದೇವರಾಯನದುರ್ಗ ತಲುಪಿದಾಗ ಆರೂ ವರೆ. ಅದಾಗಲೇ ಕತ್ತಲಾಗುತ್ತಿತ್ತು.
ರೂಮಿಗಾಗಿ ಪರದಾಟ
ಹೋಗಿ ಮುಟ್ಟಿದಾಕ್ಷಣ ಅಲ್ಲಿದ್ದ ಪ್ರವಾಸಿ ಮಂದಿರಗಳಲ್ಲಿ ತಂಗಲು ರೂಮಿದೆಯಾ ಎಂದು ವಿಚಾರಿಸಿದೆವು. 'ಇಲ್ಲ' ಎಂಬ ಉತ್ತರ ರೆಡಿಮೇಡೇನೋ ಎಂಬಂತೆ ಬಂತು. 'ಬೆಟ್ಟದ ಮೇಲೂ ಒಂದು ಗೆಸ್ಟ್‍ಹೌಸ್ ಇದೆ; ಆದರೆ ಅಲ್ಲೂ ರೂಮು ಸಿಗುವುದು ಡೌಟು' ಎಂಬ ಮಾಹಿತಿ ಸಿಕ್ಕಿತು. ನಾವು ಹೊರಗಡೆ ತಂಗಲಿಕ್ಕೂ ತಯಾರಾಗಿಯೇ ಬಂದಿದ್ದರಿಂದ 'ಏನಾದರಾಗಲಿ' ಎಂದುಕೊಂಡು ಬೆಟ್ಟದ ಆರೋಹಣಕ್ಕೆ ಮುಂದಾದೆವು. ಹೊರಡುವಷ್ಟರಲ್ಲಿ ಯಾರನ್ನೋ ವಿಚಾರಿಸಿದಾಗ ಆ ಮೇಲ್ಗಡೆಯ ಗೆಸ್ಟ್‍ಹೌಸಿನವರೇ ಆದ ರಮೇಶ್ ಎಂಬುವವರೊಬ್ಬರ ಪರಿಚಯ ಆಯಿತು. ಅವರೆಂದರು, 'ನಿಮಗೆ ರೂಮ್ ಕೊಡಲಿಕ್ಕೆ ಆಗುವುದಿಲ್ಲ. ಆದರೆ ನಮ್ಮ ಆಫೀಸಿನಲ್ಲೇ ಬೇಕಾದರೆ ಮಲಗಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡಬಹುದು' ಅಂತ. ಅಷ್ಟಾದರೆ ಸಾಕಾಗಿತ್ತು ನಮಗೆ. 'ಥ್ಯಾಂಕ್ಯೂ ಸರ್!' ಎಂದೆವು.
.jpg)
ದೇವರಾಯನದುರ್ಗ
ದೇವರಾಯನದುರ್ಗ ತುಮಕೂರು-ಬೆಂಗಳೂರುಗಳ ನಡುವೆ ಇರುವ ಒಂದು ಬೆಟ್ಟ. ಬೆಂಗಳೂರಿನಿಂದ ಸುಮಾರು ೭೦ ಕಿಲೋಮೀಟರ್ ದೂರದಲ್ಲಿದೆ. ಈ ಬೆಟ್ಟ ಸುಮಾರು ೪೦೦೦ ಅಡಿಗಳ ಎತ್ತರವಿದೆ. ಇಲ್ಲಿ ಯೋಗನರಸಿಂಹ ಮತ್ತು ಭೋಗನರಸಿಂಹ ಎಂಬೆರಡು ದೇವಸ್ಥಾನಗಳು ಇವೆ. ಇಲ್ಲಿ ವಾಸವಾಗಿದ್ದ ಅಂಧಕ (ಲಿಂಗಕ) ಎಂಬ ಹೆಸರಿನ ದರೋಡೆಕೋರನನ್ನು ಮೈಸೂರಿನ ದೊರೆ ಹೇಮಚಂದ್ರನ ಪುತ್ರ ಸುಮತಿ ಕೊಂದುಹಾಕಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು ಎಂಬ ಪ್ರತೀತಿಯಿದೆ. ಹಳೆಯ ಕೋಟೆಯ ಅಳಿದುಳಿದ ಅವಶೇಷಗಳನ್ನೂ ಇಲ್ಲಿ ಕಾಣಬಹುದು. 'ನಾಮದ ಚಿಲುಮೆ' ಎಂಬ ಹೆಸರಿನ ಒಂದು ಪುಷ್ಕರಿಣಿ ಸಹ ಇಲ್ಲಿದೆ. ಶ್ರೀರಾಮ ಸೀತೆಯನ್ನು ಹುಡುಕಿಕೊಂಡು ಲಂಕೆಗೆ ತೆರಳುತ್ತಿದ್ದಾಗ ಇಲ್ಲಿಗೆ ಬಂದಿದ್ದ. ಆಗ ಅವನಿಗೆ 'ನಾಮ' ಹಚ್ಚಿಕೊಳ್ಳಲಿಕ್ಕೆ ಇಲ್ಲಿ ನೀರು ಸಿಗದಿದ್ದರಿಂದ, ನೆಲಕ್ಕೆ ಒಂದು ಬಾಣ ಬಿಟ್ಟು ನೀರು ತರಿಸಿದ ಎಂದು ನಂಬಲಾಗಿದೆ. ಆ ಕೊಳದ ಪಕ್ಕ ಇರುವ ಒಂದು ಪುಟ್ಟ ಗುಂಡಿಯೇ ರಾಮನ ಪಾದದ ಗುರುತು ಎಂದು ಸಹ ಗುರುತಿಸಿದ್ದಾರೆ ಜನ!
ದೇವರಾಯನದುರ್ಗದಲ್ಲಿ ಅರಣ್ಯ ಇಲಾಖೆ ನಡೆಸುವ ಒಂದು ವಸತಿ ಮಂದಿರವಿದೆ. ದೇವಸ್ಥಾನದವರ ಒಂದು ಪ್ರವಾಸೀ ಮಂದಿರವಿದೆ. ಬೆಟ್ಟದ ಮೇಲ್ಗಡೆ ಪೋಲೀಸ್ ಇಲಾಖೆಯವರ ಒಂದು ಗೆಸ್ಟ್‍ಹೌಸ್ ಇದೆ.
ಆ ಅಜ್ಜಿ..
ಬೆಟ್ಟ ಹತ್ತಲಿಕ್ಕೆ ಅಲ್ಲಲ್ಲಿ ಟಾರು - ಅಲ್ಲಲ್ಲಿ ಮಣ್ಣಿನ ಒಳ್ಳೆಯ ರಸ್ತೆಯೇ ಇತ್ತು. ತಿಂಗಳ ಬೆಳಕಂತೂ ಬೇಕಾದಷ್ಟಿತ್ತು. ಬ್ಯಾಗೇರಿಸಿ, ಶೇಂಗ ತಿನ್ನುತ್ತಾ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಒಂದು ಅಜ್ಜಿ ನಡೆದುಬರುತ್ತಿರುವುದು ಕಾಣಿಸಿತು. ಅಜ್ಜಿ ನಮ್ಮ ಬಳಿ ಬಂದದ್ದೇ, "ಈಗ ಮೇಲಕ್ಕೆ ಹೊಂಟೀರೇನಪ್ಪ? ನಾನು ಹೇಳ್ತಿದೀನಿ, ಹೋಗಬ್ಯಾಡ್ರಿ ಮೇಲಕ್ಕೆ. ಅಲ್ಲಿ ನರಹುಳಾನೂ ಇಲ್ಲ. ಉಳಕೊಳ್ಳಲಿಕ್ಕೆ ಅಲ್ಲಿ ನಿಮಗೇನೂ ಇಲ್ಲ. ಕಳ್ಳರು-ಕಾಕರು ಇದಾರೆ. ನೀವು ಹೋದದ್ದೇ ಆದ್ರೆ, ನಾನು ಹೇಳ್ತಿದೀನಿ, ವಾಪಸು ಬರಂಗಿಲ್ಲ ನೋಡ್ರಿ!" ಅಂತು. ನಾವು ಕಕ್ಕಾಬಿಕ್ಕಿಯಾದೆವು. ಇದೇನು ಹೊಸ ವರಾತ ಬಂತಲ್ಲ ಅನ್ನಿಸಿತು. ಅಜ್ಜಿ ತಮಾಷೆಗೆ ಹೇಳುತ್ತಿದೆಯೇ ಅನ್ನಿಸಿತು. ಆದರೆ ಮತ್ತೆ ಅಜ್ಜಿ, "ನೋಡ್ರಿ, ನಾನು ಹೇಳ್ತಿದೀನಿ, ಈಗ ಮೇಲಕ್ಕೆ ಹೋಗಬ್ಯಾಡ್ರಿ. ಇಲ್ಲೇ ಕೆಳಗಡೆ ದೇವಸ್ಥಾನದಾಗೆ ಉಳಕೊಂಡು ಬೆಳಗ್ಗೆ ಬೇಕಾದ್ರೆ ಹೋಗ್ರಿ" ಅಂದಿತು. ನಮಗೆ ಅಷ್ಟೊಂದು ಭಯವೇನಿರಲಿಲ್ಲ. ಅಲ್ಲದೇ ತುಂಬಾ ಜನ, ವೆಹಿಕಲ್ಲುಗಳು ಬೆಟ್ಟದಿಂದ ಇಳಿದುಬರುತ್ತಿದ್ದುದರಿಂದ ಹೆದರಬೇಕಾದ ಅವಶ್ಯಕತೆಯಿಲ್ಲ ಅನ್ನಿಸಿತು. ಆದರೂ ಅಜ್ಜಿ ಹಾಗೆ ಹೇಳಿದಮೇಲೆ ಹುಂಬತನ ಮಾಡಿ ಮುನ್ನುಗ್ಗುವುದಕ್ಕೆ ಮನಸ್ಸಾಗಲಿಲ್ಲ. ಹಾಗಾಗಿ, ಅಜ್ಜಿಯ ಜೊತೆಯೇ ನಾಲ್ಕು ಹೆಜ್ಜೆ ವಾಪಸು ಬಂದೆವು. ಅಜ್ಜಿಯ ಬಳಿ ಅವಳ ಬಗ್ಗೆ ವಿಚಾರಿಸಿದೆವು. ಅಜ್ಜಿ ಭಿಕ್ಷೆ ಬೇಡಲಿಕ್ಕೆ ಅಲ್ಲಿಗೆ ಹೋಗಿದ್ದು ಅಂತ ಗೊತ್ತಾಯಿತು. ಹಾಗಾದರೆ ಈ ಅಜ್ಜಿಗೆ ಬುದ್ಧಿಭ್ರಮಣೆಯಾಗಿರಲಿಕ್ಕೂ ಸಾಕು ಅನ್ನಿಸಿ, 'ಏ.. ಏನಾಗಲ್ಲ ಬರ್ರೋ..' ಅಂದುಕೊಂಡು ಮತ್ತೆ ಬೆಟ್ಟದತ್ತ ಮುಖ ಮಾಡಿದೆವು.
ಬೆಟ್ಟವೆಂದರೆ...
ದೇವರಾಯನದುರ್ಗದ ಈ ಬೆಟ್ಟ ಚಾರಣಪ್ರಿಯರಿಗೇನು ಅಷ್ಟೊಂದು ಇಷ್ಟವಾಗಲಾರದು. ಏಕೆಂದರೆ ಇಲ್ಲಿ ಚಾರಣ ಮಾಡಲಿಕ್ಕೆ ಅವಕಾಶವೇ ಇಲ್ಲ. ಬೆಟ್ಟದ ಮೇಲ್ತುದಿಯವರೆಗೂ ಒಳ್ಳೆಯ ರಸ್ತೆಯೇ ಇದೆ. ಅಷ್ಟಷ್ಟು ಕಲ್ಲು, ಅಷ್ಟಷ್ಟು ಮಣ್ಣು, ಅಷ್ಟಷ್ಟು ಗಿಡ-ಮರ-ಪೊದೆ ಬೆಟ್ಟವನ್ನಾವರಿಸಿವೆ.
ನಾವು ಹೊರಡುವಷ್ಟರಲ್ಲೇ ಕತ್ತಲಾಗಿತ್ತಾದರೂ ಚೆನ್ನಾಗಿ ಬೆಳದಿಂಗಳಿತ್ತು. ಕೈಯಲ್ಲಿ ಟಾರ್ಚನ್ನೂ ಹಿಡಿದಿದ್ದೆವು. ಸಾಕಷ್ಟು ಹೋಗುವ-ಬರುವ ವಾಹನಗಳಿದ್ದವು. ಹೀಗಾಗಿ, ನಮ್ಮ ಚಾರಣಕ್ಕೆ ಯಾವ ತೊಂದರೆಯೂ ಆಗಲಿಲ್ಲ.
ಮೇಲೆ
ತುದಿಯನ್ನು ಮುಟ್ಟಿದಮೇಲೆ ಅಲ್ಲಿನ ಗೆಸ್ಟ್‍ಹೌಸನ್ನು ಒಮ್ಮೆ ನೋಡಿ ಬಂದೆವು. ಸಣ್ಣದಾಗಿ ತೆರೆದಿದ್ದ ಬಾಗಿಲಿಂದ ಒಳಗಡೆ ಗುಂಡು ಹಾಕುತ್ತಾ ಕುಳಿತಿದ್ದ ಜನಗಳ ಪರಿವಾರ ಕಾಣಿಸಿತು. ಇಲ್ಲಿ ಪಬ್ಲಿಕ್‍ಗೆ ರೂಮುಗಳನ್ನು ಕೊಡುವುದೇ ಇಲ್ಲವಂತೆ. ಎಲ್ಲಾ ರೂಮುಗಳೂ ಪಿ.ಡಬ್ಲ್ಯೂ.ಡಿ. ಆಫೀಸರುಗಳಿಗೆ, ವಿ.ಐ.ಪಿ.ಗಳಿಗೆ, ಸರ್ಕಾರೀ ಅಧಿಕಾರಿಗಳಿಗೆ ಮೀಸಲಿರುತ್ತದೆ. ಅವರು ಹೀಗೆ ಆಗಾಗ ಬಂದು ಗುಂಡು ಹಾಕುತ್ತಾ, ಇಸ್ಪೀಟು ಆಡುತ್ತಾ ಕಾಲ ಕಳೆಯುತ್ತಾರೆ. ನಮಗಂತೂ ಅಲ್ಲಿನ ಆ ಗೆಸ್ಟ್‍ಹೌಸು ಅನೈತಿಕ ಚಟುವಟಿಕೆಗಳಿಗೆ ಆಶ್ರಯವಿತ್ತಂತೆಯೂ ಅನ್ನಿಸಿತು. ನಾವು ಅಲ್ಲಿ ತಂಗುವ ಆಸೆಯನ್ನು ಬಿಟ್ಟುಬಿಟ್ಟೆವು. ಹೊರಗಡೆಯೇ ಕಾಲ ಕಳೆಯೋಣ ಎಂದು ತೀರ್ಮಾನಿಸಿದೆವು.
ಫೈರ್‌ಕ್ಯಾಂಪ್!
ಇಯರೆಂಡಾದ್ದರಿಂದ, ಬೆಟ್ಟದ ಮೇಲೆ ಸಿಕ್ಕಾಪಟ್ಟೆ ಜನ ಇದ್ದರು. ಬೆಟ್ಟದಲ್ಲಿ ಅಲ್ಲಲ್ಲಿ ಒಲೆ ಹೂಡಿಕೊಂಡು, ಸಾಮಾನು-ಸರಂಜಾಮುಗಳನ್ನೆಲ್ಲಾ ತಂದುಕೊಂಡು, ಅಡುಗೆ ಮಾಡಿಕೊಂಡು, ಗುಂಡು ಹಾಕುತ್ತಾ ಕುಳಿತಿದ್ದ ಗುಂಪುಗಳಿದ್ದವು. ತುಂಬಾ ಗಲಾಟೆಯಿತ್ತು. ನಾವು ಇವರೆಲ್ಲರಿಂದ ಸ್ವಲ್ಪ ದೂರ ಇರಬೇಕು ಅನ್ನಿಸಿತು. ಪ್ರಶಾಂತ ಸ್ಥಳವನ್ನರಸಿ ಹೊರಟೆವು. ಒಂದು ಕಡೆ ಅಂತಹ ಜಾಗ ಸಿಕ್ಕಿತು. ಅಲ್ಲೇ ನಮ್ಮ ಬ್ಯಾಗುಗಳನ್ನು ಇಟ್ಟು, ಕಟ್ಟಿಗೆ ಒಟ್ಟುಮಾಡಿ ಬೆಂಕಿ ಹಚ್ಚಿ, ಫೈರ್‌ಕ್ಯಾಂಪ್ ಮಾಡಿದೆವು. ನಿಧಾನಕ್ಕೆ ಹೊತ್ತಿಕೊಂಡ ಬೆಂಕಿ ತನ್ನ ಶಾಖವನ್ನು ಸುತ್ತಲೂ ಸೂಸಲಾರಂಭಿಸಿತು. ಅದರ ಕೆಂಬಣ್ಣ ಬೆಳದಿಂಗಳ ಬಿಳುಪಿನೊಂದಿಗೆ ಗೊತ್ತೇ ಆಗದಂತೆ ಬೆರೆಯಲಾರಂಭಿಸಿತು. ಸುತ್ತಲೂ ಕುಳಿತು ಹರಟೆ ಶುರುಹಚ್ಚಿದೆವು.
ಹರಟೆ ಹರಟೆ ಹರಟೆ
ಪ್ಯಾಂಟು ಬಿಚ್ಚಿ, ಚಡ್ಡಿ ಧರಿಸಿ, ಮೈತುಂಬ ಕೋಟು/ಸ್ವೆಟರು ತೊಟ್ಟು, ಕಟ್ಟಿಕೊಂಡು ಹೋಗಿದ್ದ ಶೇಂಗ, ಬಟಾಣಿ, ಅದೂ-ಇದುಗಳನ್ನು ತಿನ್ನುತ್ತಾ ಕುಳಿತೆವು. ಉದ್ದುದ್ದ ಹರಟೆಯಲ್ಲಿ ತೊಡಗಿದೆವು. ಎರಡುಸಾವಿರದ ಆರು ಹೇಗಿತ್ತು? ಎರಡುಸಾವಿರದ ಏಳರಲ್ಲಿ ಸಾಧಿಸಬೇಕೆಂದಿರುವ ಗುರಿಗಳೇನು? -ಇತ್ಯಾದಿ ಚರ್ಚಿಸಬೇಕು ಎಂದುಕೊಂಡಿದ್ದೆವಾದರೂ ಅದು ಸಾಧ್ಯವಾಗಲಿಲ್ಲ. ಆ ವಿಷಯವನ್ನು ಎತ್ತಿಕೊಂಡಕೂಡಲೇ ಚರ್ಚೆ ಎತ್ತಲೋ ಸಾಗುತ್ತಿತ್ತು.
ಸಮಯ ಉರುಳುತ್ತಿತ್ತು. ಸುಮಾರು ಹತ್ತೂ ವರೆ ಆಗಿತ್ತು. ಬೆಳದಿಂಗಳ ಮಳೆ ಅವಿರತವಾಗಿ ಮುಂದುವರೆದಿತ್ತು. ಆಗಸದಲ್ಲಿ ಚಂದಿರ ತೇಲುತ್ತಿದ್ದ. ಇಬ್ಬನಿ ಬೀಳುತ್ತಿತ್ತು. ಬೆಂಕಿ ಉರಿಯುತ್ತಿತ್ತು. ಚರ್ಚೆ ಮುಂದುವರೆದಿತ್ತು.... ಆಗ ಬಂದ ಆತ!
ಮಂಜ ಬಂದ!
ಹರಟೆಯಲ್ಲೇ ಮುಳಿಗಿದ್ದ ನಮಗೆ ಹೊರಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದು ಬೇಕಿರಲಿಲ್ಲ. ಆದರೆ ನಾವು ಸಡನ್ನಾಗಿ ಎಚ್ಚರಾಗುವಂತೆ ಮಾಡುವಂತಹ ಘಟನೆ ಆಗ ನಡೆಯಿತು. ಕೈಯಲ್ಲಿ ಕತ್ತಿ ಹಿಡಿದಿದ್ದ ಒಬ್ಬ ವ್ಯಕ್ತಿ ನಮ್ಮೆದುರು ಪ್ರತ್ಯಕ್ಷನಾದ! 'ಏನಣ್ಣಾ.. ಎಲ್ಲಿಂದ ಬಂದಿದೀರಿ...? ಮೂವರೇನಾ..?' ಎನ್ನುತ್ತಾ ಬಂದವನು ತನ್ನ ಕತ್ತಿಯನ್ನು ನಮ್ಮ ಪಕ್ಕದಲ್ಲಿ ಬೀಳಿಸಿದಂತೆ ಇಟ್ಟು ತಾನೂ ಬೆಂಕಿ ಕಾಯಿಸಲಿಕ್ಕೆ ಕುಳಿತುಬಿಟ್ಟ! ಅವನ ರೂಪ, ಇದ್ದಕ್ಕಿದ್ದಂತೆ ಎರಗಿಬಂದ ಅವನ ರೀತಿ, ಕೈಯಲ್ಲಿದ್ದ ಕತ್ತಿ, ಕೇಳಿದ ಪ್ರಶ್ನೆ ಎಲ್ಲಾ ನೋಡಿದ ನಾವು ತಕ್ಷಣ ಅಲರ್ಟ್ ಆದೆವು. ಅಜ್ಜಿ ಹೇಳಿದ್ದು ಥಟ್ಟನೆ ನೆನಪಾಯಿತು.
ಸಣ್ಣಕೆ ಭಯವಾಗಲು ಶುರುವಾಯಿತು... ಆದರೂ ಧೃತಿಗೆಡಲಿಲ್ಲ. 'ಇಲ್ಲೇ ತುಮಕೂರಿನಿಂದ ಬಂದದ್ದು. ಮೂರಲ್ಲ; ಇನ್ನೂ ನಾಲ್ಕು ಜನ ಇದಾರೆ, ಇಲ್ಲೇ ಮೇಲ್ಗಡೆ ಹೋಗಿದಾರೆ...' ಎಂಬುದಾಗಿ ಸುಳ್ಳಿನ ಕಂತೆಯನ್ನು ಕಟ್ಟಲಾರಂಭಿಸಿದೆವು. 'ನಿಮ್ಮ ಹೆಸರೇನಣ್ಣ?' ಅಂದ ಅಂವ. 'ನನ್ನ ಹೆಸರು ಸುರೇಶ' 'ನಾನು ರಾಜು' 'ನಾನು ರಮೇಶ್' ಎಂಬುದಾಗಿ ಸುಳ್ಳು ಹೆಸರುಗಳನ್ನು ಹೇಳಿದೆವು. ಅವನ ಕಣ್ಣುಗಳು ನಮ್ಮೆಲ್ಲರನ್ನೂ ಗಮನಿಸುತ್ತಿದ್ದವು. 'ರೂಮ್ ಬುಕ್ ಮಾಡಿದೀರಾ ಸುರೇಶಣ್ಣ?' -ಕೇಳಿದ. ನಮ್ಮಲ್ಲಿ ಯಾರು ಸುರೇಶಣ್ಣ ಎಂಬುದು ಕನ್‍ಫ್ಯೂಸ್ ಆಯಿತು ಒಂದು ಕ್ಷಣ! ಆದರೂ ತಡವರಿಸದೆ, 'ಹೂಂ. ಮೇಲ್ಗಡೆ ಡಿ.ಐ.ಜಿ. ರಮೇಶ್ ಇದಾರಲ್ಲ, ಅವರು ನಮಗೆ ಪರಿಚಯ. ನಾವೂನೂ ಪೋಲೀಸ್ ಡಿಪಾರ್ಟ್‌ಮೆಂಟಿನವರೇ. ಹೀಗಾಗಿ ರೂಮ್ ಸಿಕ್ಕಿದೆ' ಎಂದೆವು -ಅವನಿಗೆ ಭಯ ಹುಟ್ಟಿಸಲೋಸುಗ.
ಆದರೆ ಅವನಿಗೆ ನಾವು ಅಲರ್ಟ್ ಆಗಿರುವುದು ಗೊತ್ತಾಗಿಹೋಯಿತು. ಇವರ ಹತ್ತಿರ ತನ್ನ ಆಟ ನಡೆಯಲಾರದು ಎನ್ನಿಸಿತೇನೋ. ಅವನು ಕೂಲ್ ಆಗತೊಡಗಿದ. ನಾವೂ ಅವನ ಬಳಿ ಅವನ ಬಗ್ಗೆ ವಿಚಾರಿಸಿದೆವು. ತನ್ನ ಹೆಸರು ಮಂಜು ಎಂದ. ಬೆಟ್ಟದ ಕೆಳಗಡೆ ತಾನೂ ಮತ್ತು ತನ್ನ ಅಣ್ಣನ ಅಂಗಡಿಯಿದೆ ಎಂದು ಹೇಳಿದ. 'ಎಣ್ಣೆ-ಗಿಣ್ಣೆ ಬೇಕಾ ಸಾರ್, ತಂದುಕೊಡ್ತೀನಿ' ಅಂದ. 'ಏನೂ ಬ್ಯಾಡಪ್ಪ' ಎಂದೆವು.
ನಮಗೆ ತುಂಬಾ ಭಯವೇನೂ ಆಗುತ್ತಿರಲಿಲ್ಲ. ಆದರೆ ಇವನನ್ನು ಹೀಗೆ ನಮ್ಮ ಜೊತೆ ಕೂರಿಸಿಕೊಂಡಿರುವುದು ಕ್ಷೇಮವಲ್ಲ ಅಂತ ಮಾತ್ರ ಅನ್ನಿಸುತಿತ್ತು. 'ಏನು ತಾನೇ ಮಾಡಿಯಾನು? ನಾವು ಮೂವರಿದ್ದೇವೆ, ಇವನು ಒಬ್ಬನೇ' ಎಂಬ ಧೈರ್ಯದ ಜೊತೆಗೇ 'ಇವನ ಜೊತೆ ಇನ್ನೂ ಎಷ್ಟು ಜನ ಇದ್ದಾರೋ ಏನೋ' ಅಂತಲೂ ಯೋಚನೆಯಾಯಿತು. ಹೇಗಾದರೂ ಮಾಡಿ ಇವನನ್ನು ಸಾಗಹಾಕಬೇಕು ಎಂದಾಲಾಚೋಸಿದೆವು.
'ಸರಿ, ಮೇಲ್ಗಡೆ ಹೋಗಿ ಊಟ ಮಾಡ್ಕೊಂಡು ಆಮೇಲೆ ಬರೋಣ ಬನ್ರೋ' ಅಂತ ನಮನಮಗೇ ಹೇಳಿಕೊಂಡು ಎದ್ದುನಿಂತೆವು. ನಮ್ಮ ಬ್ಯಾಗುಗಳನ್ನೆತ್ತಿಕೊಂಡು ಹೊರಟೇಬಿಟ್ಟೆವು. ಅವನನ್ನು ಪರಿಕಿಸಲೋಸುಗ, 'ನೀವೂ ಬನ್ನಿ ಮಂಜು, ನಮ್ಮ ಜೊತೇನೇ ಊಟ ಮಾಡುವಂತ್ರಿ' ಅಂತ ಕರೆದೆವು. ಆದರೆ ಆತ ಬರಲಿಕ್ಕೆ ಒಪ್ಪಲಿಲ್ಲ. 'ಇಲ್ಲ ಸುರೇಶಣ್ಣ, ನಾನು ಹೋಗ್ತೀನಿ ಸುರೇಶಣ್ಣ. ಕೆಳಗಡೆ ನಮ್ಮನೆ ಐತಣ್ಣ. ನಾನು ಹೋಗ್ತೀನಣ್ಣ' ಎಂದವನೇ ಅಲ್ಲಿಂದ ಕಾಲ್ಕಿತ್ತ.
ಕಳ್ಳನಿಗೇ ಚಳ್ಳೆಹಣ್ಣು!
ನಾವು ಕುಳಿತಿದ್ದ ಜಾಗ ಎಂಥದಿತ್ತೆಂದರೆ ಅವನೇನಾದರೂ ನಮ್ಮ ಮೇಲೆ ಎರಗಿ ಬಂದಿದ್ದರೆ ನಾವು ಓಡಿ ತಪ್ಪಿಸಿಕೊಳ್ಳಲಿಕ್ಕೂ ಆಗುತ್ತಿರಲಿಲ್ಲ. ಜನರ ಗೌಜಿನಿಂದ ದೂರವಿರಬೇಕು ಎಂದುಕೊಂಡು ನಾವು ಅರಸಿ ಆರಿಸಿದ್ದ ಈ ಸ್ಥಳ ನಮಗೇ ಕಂಟಕಕಾರಿಯಾಗಿತ್ತು. ಅವನು ಅತ್ತ ಹೋದದ್ದೇ ನಾವು ಜನಗಳು ಜಾಸ್ತಿ ಇರುವ ಕಡೆಗೆ ಧಾವಿಸಿದೆವು..jpg)
ನಾವು ಕೇಳಿದ ಪ್ರಶ್ನೆಗಳಿಗೆ ಅವನು ಹೇಳುತ್ತಿದ್ದ ಉತ್ತರಗಳು ಒಂದಕ್ಕೊಂದಕ್ಕೆ ಸಂಭಂದವಿರುತ್ತಿರಲಿಲ್ಲ. ಅಲ್ಲದೇ ಅವನ ಚಲನವಲನಗಳು, ಓರೆಗಣ್ಣಿನಿಂದ ನಮ್ಮನ್ನು ಗಮನಿಸುತ್ತಿದ್ದ ರೀತಿ, ಅವನ ಕತ್ತಿ... ಎಲ್ಲಾ ಕಂಡಿದ್ದ ನಾವು ನಿಸ್ಸಂಶಯವಾಗಿ ಅವನೊಬ್ಬ ದರೋಡೆಕೋರ ಎಂಬ ತೀರ್ಮಾನಕ್ಕೆ ಬಂದಿದ್ದೆವು. ಕಳ್ಳನಿಗೇ ಚಳ್ಳೆಹಣ್ಣು ತಿನ್ನಿಸಿದ ಖುಷಿಯಲ್ಲಿ ಹಿಗ್ಗಿದೆವು. ಆದರೆ 'ಅವನು ತನ್ನ ಮತ್ತಷ್ಟು ಸಂಗಡಿಗರನ್ನು ಕಟ್ಟಿಕೊಂಡು ಮತ್ತೆ ಬಂದುಬಿಟ್ಟರೆ?' ಎಂಬ ಭಯ ಮಾತ್ರ ಹಾಗೆಯೇ ಇತ್ತು.
ಮುಗಿಯದ ರಾತ್ರಿ
ಹೊಸ ವರ್ಷವನ್ನು ಹೊಸ ರೀತಿಯಲ್ಲಿ, ಸಂಭ್ರಮದಿಂದ ಸ್ವಾಗತಿಸಬೇಕೆಂದುಕೊಂಡು ಇಲ್ಲಿಗೆ ಬಂದಿದ್ದ ನಾವು ಭಯ, ತಳಮಳಗಳಲ್ಲಿ ತೊಳಲಾಡುವಂತಾಯಿತು. ಇನ್ನೂ ರಾತ್ರಿ ಹನ್ನೊಂದಾಗಿತ್ತು. ಹೊಸ ವರ್ಷ ಬರುವುದಕ್ಕೆ ಇನ್ನೂ ಒಂದು ಗಂಟೆ ಕಾಯಬೇಕಿತ್ತು. ಆದಷ್ಟು ಬೇಗ ಗಂಟೆ ಹನ್ನೆರಡಾಗಿ, ಹೊಸ ವರ್ಷ ಬಂದು, ಈ ಕಾವಳದ ರಾತ್ರಿ ಮುಗಿದು, ನಿಚ್ಛಳ ಬೆಳಕಿನ ಬೆಳಗು ಬಂದರೆ ಸಾಕಿತ್ತು. ನಾವು ಅಲ್ಲೇ ಬದಿಯಲ್ಲಿ ಕುಂತು, ಕಟ್ಟಿಕೊಂಡು ಹೋಗಿದ್ದ ಚಪಾತಿಯನ್ನು ತಿಂದು ಮುಗಿಸಿದೆವು. ಮತ್ತೆ ಒಂದಷ್ಟು ಕಟ್ಟಿಗೆಯನ್ನು ಒಟ್ಟುಹಾಕಿ ಸಮೀಪದಲ್ಲೇ ಬೆಂಕಿ ಮಾಡಿದೆವು. ಬೆಂಕಿ ಇಲ್ಲದೇ ಆ ಚಳಿಯ ರಾತ್ರಿಯನ್ನು ನಾವು ಕಳೆಯುವುದೂ ಕಷ್ಟವಿತ್ತು. ಅದೂ ಇದೂ ಮಾತನಾಡುತ್ತಾ ಹೊಸವರುಷದ ಆಗಮನಕ್ಕೆ ಚಾತಕದಂತೆ ಕಾಯತೊಡಗಿದೆವು.
ಬಂತು ೨೦೦೭
ವಾಚಿನ ಮುಳ್ಳು ಓಡುತ್ತೋಡುತ್ತ... ಹನ್ನೊಂದೂ ಕಾಲು..ಹನ್ನೊಂದೂ ವರೆ..ಹನ್ನೊಂದೂ ಮುಕ್ಕಾಲು.. ಹನ್ನೆರಡು.. ಹಾ! ಬಂದೇ ಬಿಟ್ಟಿತು ಹೊಸ ವರುಷ! ನೋಡನೋಡುತ್ತಿದ್ದಂತೆಯೇ ಗಂಟೆ ಹನ್ನೆರಡಾಗಿ ಎರಡು ಸಾವಿರದ ಆರನೇ ಇಸವಿಯಲ್ಲಿದ್ದ ನಮ್ಮನ್ನು ಎರಡು ಸಾವಿರದ ಏಳನೇ ಇಸವಿಯಲ್ಲಿ ಕೂರಿಸಿಬಿಟ್ಟಿತ್ತು. ಇಡೀ ಬೆಟ್ಟಕ್ಕೆ ಬೆಟ್ಟವೇ 'ಹೋ..' 'ಹ್ಯಾಪಿ ನ್ಯೂ ಇಯರ್..' ಎಂಬ ಚೀರಾಟದಿಂದ ತುಂಬಿಕೊಂಡಿತು. ಏನು ಮಾಡಬೇಕೆಂದು ತಿಳಿಯದೇ ನಾವೂ ಕೂಗಿಕೊಂಡೆವು. 'ಹ್ಯಾಪಿ ನಿವ್ವಿಯರ್.. ಹ್ಯಾಪಿ ನಿವ್ವಿಯರ್..!' ಒಬ್ಬರನ್ನೊಬ್ಬರು ಆಲಂಗಿಸಿಕೊಂಡೆವು, ಶೇಕ್-ಹ್ಯಾಂಡ್ ಮಾಡಿಕೊಂಡೆವು, ಸಿಗುತ್ತಿದ್ದ ಚೂರುಪಾರು ನೆಟ್‍ವರ್ಕ್ ಬಳಸಿಯೇ ಗೆಳೆಯರಿಗೆ ಮೆಸೇಜು ಕಳಿಸಿದೆವು. ಕೆಲವರಿಗೆ ಕಾಲ್ ಮಾಡಿದೆವು. ಓಹೋ... ಹೊಸ ವರ್ಷ... ಎರಡ್ಸಾವ್ರದೇಳು ಬಂದೇ ಬಿಟ್ಟಿತ್ತು!
ಕೋಳಿ ನಿದ್ರೆ
ರಾತ್ರಿ ಸುಮಾರು ಎರಡೂ ವರೆಯ ವರೆಗೆ ಹಾಗೇ ಬೆಂಕಿ ಕಾಯಿಸುತ್ತಾ ಕುಳಿತಿದ್ದ ನಾವು ಆಮೇಲೆ, ನಮಗೆ ಮಲಗಿಕೊಳ್ಳಲಿಕ್ಕೆ ಜಾಗ ಕೊಡುತ್ತೀನಿ ಎಂದಿದ್ದ ಆಸಾಮಿಯನ್ನು ಹುಡುಕಿಕೊಂಡು ಅವನ ಆಫೀಸಿನ ಕಡೆಗೆ ಹೊರಟೆವು. ಕನಿಷ್ಟ ಮೂರು ತಾಸಾದರೂ ನಿದ್ರೆ ಮಾಡದಿದ್ದರೆ ನಾಳೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ, ಒಂದು ಕೋಳಿ ನಿದ್ರೆ ತೆಗೆಯಲೇಬೇಕೆಂದು ತೀರ್ಮಾನಿಸಿದೆವು. ಅಲ್ಲದೇ ಬೆಳಗ್ಗೆ ಸೂರ್ಯೋದಯವನ್ನು ನೋಡಲು ಬೇಗನೆ ಏಳಬೇಕಿತ್ತು ನಾವು. ಆದರೆ ಆ ಮನುಷ್ಯ ತನ್ನ ಸ್ನೇಹಿತರೊಂದಿಗೆ ಕುಡಿಯುತ್ತಾ ಕುಳಿತಿರುವುದು ಕಾಣಿಸಿತು. ಅವನನ್ನು ಡಿಸ್ಟರ್ಬ್ ಮಾಡುವುದು ಬೇಡ ಅನ್ನಿಸಿತು. ಪಕ್ಕದಲ್ಲೇ ಇದ್ದ ಮತ್ತೊಂದು ಆಫೀಸಿಗೆ ವಿಶಾಲವಾದ ಕಟ್ಟೆಯಿತ್ತು. ಅನೇಕರು ಅಲ್ಲಿಯೇ ಮಲಗಿದ್ದರು. ನಾವೂ ಅಲ್ಲೇ, ನಮ್ಮ ಚಾಪೆ ಹಾಸಿ, ರಗ್ಗು ಬೆಡ್‍ಶೀಟುಗಳನ್ನು ಹೊದ್ದು ಮಲಗಿಬಿಟ್ಟೆವು. ಸುಸ್ತಿಗೆ ನಿದ್ರೆಯೂ ಬಂತು.
ಹೊಸ ಬೆಳಗು
ಆರು ಗಂಟೆಗೆ ಸರಿಯಾಗಿ ನಮ್ಮ ಮೊಬೈಲಿನ ಅಲಾರಾಂ ಹೊಡೆದುಕೊಂಡಿತು. ಕಣ್ಣುಬಿಟ್ಟು ನೋಡಿದರೆ ಇನ್ನೂ ಕತ್ತಲಿತ್ತು. ದಟ್ಟವಾಗಿ ಇಬ್ಬನಿ ಬೀಳುತ್ತಿತ್ತು. 'ಏಯ್, ಇಷ್ಟು ಮುಂಚೆ ಎದ್ದು ಏನ್ರೋ ಮಾಡೋದು? ಮಲಕ್ಕೊಳ್ರೋ' ಎಂದೆ ನಾನು ಗೆಳೆಯರ ಬಳಿ. ಆದರೆ ಅವರು ಬಿಡಲಿಲ್ಲ. ನಾನು ಹೊದ್ದಿದ್ದ ಬೆಡ್‍ಶೀಟನ್ನು ಕಿತ್ತುಹಾಕಿ 'ಏಳು ಸಾಕು, ಇನ್ನೇನು ಸ್ವಲ್ಪ ಹೊತ್ತಿಗೆ ಸೂರ್ಯ ಹುಟ್ಟುತ್ತಾನೆ. ಬೆಟ್ಟದ ತುದಿಗೆ ಹೋಗಬೇಕು. ಅಲ್ಲಿಗೆ ಹೋಗುವಷ್ಟರಲ್ಲಿ ಸರಿಯಾಗೊತ್ತೆ' ಅಂತಂದು ತಾವು ಬ್ಯಾಗು ರೆಡಿ ಮಾಡಲು ಶುರು ಮಾಡಿದರು. ನಿರುಪಾಯನಾಗಿ ನಾನೂ ಎದ್ದೆ. ಚಳಿಗೆ ಮೈ ಗಡಗುಟ್ಟುತ್ತಿತ್ತು. ತೊಟ್ಟಿದ್ದ ಜಾಕೀಟು ಏನಕ್ಕೂ ಸಾಲುತ್ತಿರಲಿಲ್ಲ. ಬೆಡ್‍ಶೀಟು, ರಗ್ಗುಗಳನ್ನು ಬ್ಯಾಗಿಗೆ ತುರುಕಿ ಅಲ್ಲಿಂದ ಹೊರಟೆವು.
ನಾವಿದ್ದ ಜಾಗದ ಪಕ್ಕದ ಬೆಟ್ಟದಲ್ಲಿ ಆ ದೇವಸ್ಥಾನವಿರುವುದು. ಪಕ್ಕದ ಬೆಟ್ಟವೆಂದರೆ ಇದೇ ಬೆಟ್ಟ; ಆದರೆ ಒಮ್ಮೆ ಇಳಿದು ಹತ್ತಬೇಕು. ಆ ದೇವಸ್ಥಾನದಿಂದಲೂ ಮೇಲೆ ಹೋದರೆ ಅಲ್ಲಿ 'ಸನ್‍ರೈಸ್ ವ್ಯೂ ಪಾಯಿಂಟ್' ಅಂತಲೇ ಇದೆ.
ನಾವು ಅಲ್ಲಿಗೆ ಮುಟ್ಟುವಷ್ಟರಲ್ಲೇ ಆಗಸದ ಪೂರ್ವ ದಿಗಂತದಲ್ಲಿ ಬಣ್ಣಗಳ ಓಕುಳಿ ಪ್ರಾರಂಭವಾಗಿತ್ತು. ಮೋಡಗಳ ಮೇಲಿನ ಕೆಂಬಣ್ಣ 'ದಿನಕರ ಸಧ್ಯದಲ್ಲೇ ಬರುತ್ತಿದ್ದಾನೆ' ಎನ್ನುತ್ತಿತ್ತು. ನಾವೆಲ್ಲಾ ಪೂರ್ವ ದಿಕ್ಕನ್ನೇ ನಿರುಕಿಸುತ್ತಾ ರವಿಯ ಆಗಮನಕ್ಕಾಗಿ ನಿರೀಕ್ಷಿಸತೊಡಗಿದೆವು. ಕೆಲವೇ ಕ್ಷಣಗಳಲ್ಲಿ ಸೂರ್ಯ ಮೂಡಿಬಂದ. ಇಷ್ಟಿಷ್ಟೇ ಇಷ್ಟಿಷ್ಟೇ ತನ್ನ ಮುಖವನ್ನು ತೋರಿಸುತ್ತಾ ಮೇಲೇರೇ ಬರುತ್ತಿದ್ದ. ಹೊಸ ವರುಷದ ಹೊಸ ಬೆಳಗಿನ ಹೊಸ ಸೂರ್ಯನ ಹೊಸ ಕಿರಣಗಳು ನಮ್ಮ ಮೈಮೇಲೆ ಬಿದ್ದು ಹೊಸದೇ ಆದ ಪುಳಕವುಂಟಾಯಿತು. ಮೊಬೈಲ್ ಕೆಮೆರಾದಿಂದ ಫೋಟೋ ಕ್ಲಿಕ್ಕಿಸಿಕೊಂಡೆವು. ಅದೆಷ್ಟೋ ಹೊತ್ತು ಅಲ್ಲೇ ಇದ್ದೆವು. ನಂತರ ನಿಧನಿಧಾನವಾಗಿ ಬೆಟ್ಟದಿಂದ ಕೆಳಗಿಳಿಯತೊಡಗಿದೆವು.
ಮತ್ತೆ ಮಂಜ!
ಭಕ್ತಿಯಿದ್ದವರು ಗುಡಿಗೆ ಹೋಗಿ ದೇವರ ದರುಶನ ಪಡೆದು ಬಂದರು. ಗುಡಿಯ ಎದುರಿನ ಪುಷ್ಕರಿಣಿಯಲ್ಲಿನ ನೀರು ಹಿಮದಷ್ಟು ತಣ್ಣಗಿತ್ತು. ಮಧ್ಯೆ ಒಂದು ಕಡೆ ನಲ್ಲಿ ಸಿಕ್ಕಿತು. ಮುಖ ತೊಳೆದು, ಹಲ್ಲುಜ್ಜಿ 'ಫ್ರೆಶ್' ಆದೆವು. ಮತ್ತೆ ಕೆಳಗಿಳಿಯತೊಡಗಿದೆವು. ಬೆಟ್ಟದ ತಪ್ಪಲನ್ನು ಮುಟ್ಟಿದೆವು. ಆಗ ಕಂಡ ಮಂಜ!
ಮತ್ತೆ ಮಂಜ! ಅದೇ ಮಂಜ! ನಿನ್ನೆ ರಾತ್ರಿ ನಮ್ಮನ್ನು ಭಯದ ಕೂಪದೊಳಕ್ಕೆ ನೂಕಿದ್ದ ಮಂಜ! ತನ್ನ ಅಣ್ಣನೊಂದಿಗೆ ಎಳನೀರಿನ ವ್ಯಾಪಾರದಲ್ಲಿ ತೊಡಗಿದ್ದ್. ನಮ್ಮನ್ನು ಕಂಡೊಡನೆ 'ಓ ಸುರೇಶಣ್ಣ... ಬನ್ನಿ ಸುರೇಶಣ್ಣ..' ಎಂದ. ನಮಗೋ ಪರಮಾಶ್ಚರ್ಯ! ಅದೇ ಮಂಜ, ರಾತ್ರಿ ನಮಗೆ ಅಷ್ಟೆಲ್ಲ ಟೆನ್ಶನ್ ಕೊಟ್ಟಿದ್ದ ಅದೇ ಮಂಜ, ಇಂದು ಈ ಮುಂಜಾವಿನಲ್ಲಿ ಹೊಸಬನೇ ಆಗಿ ಕಾಣುತ್ತಿದ್ದ. ಅವನ ಬಗ್ಗೆ ನಾವು ಕಲ್ಪಿಸಿಕೊಂಡಿದ್ದೆಲ್ಲವನ್ನೂ ನಮ್ಮ ಮನಸ್ಸು ಒಂದೇ ಕ್ಷಣದಲ್ಲಿ ತಳ್ಳಿಹಾಕಿಬಿಟ್ಟಿತು. 'ಎಳ್ನೀರು ಕುಡಿತೀರಾ ಅಣ್ಣಾ?' ಕೇಳಿದ. ಮಾತೇ ತೋಚದೆ ಬರೀ ಹೂಂಗುಟ್ಟಿದೆವು. ನಮಗೆ ತುಂಬಾ ಪ್ರೀತಿಯಿಂದ ಎಳನೀರು ಕೆತ್ತಿಕೊಟ್ಟ. ಕುಡಿಯುತ್ತಿದ್ದರೆ ಅಮೃತವನ್ನು ಕುಡಿದಂತೆನಿಸುತ್ತಿತ್ತು. ದುಡ್ಡುಕೊಟ್ಟು ಹೊರಟೆವು. 'ಮತ್ತೆ ಬನ್ರಣ್ಣ' ಎಂದು ಕೈಬೀಸಿದ ಮಂಜ.
.jpg)
ಹೊಸ ಆಶಾವಾದದೊಂದಿಗೆ ವಾಪಸ್
'ಸುಮ್‍ಸುಮ್ನೇ ಏನೇನೋ ಅಂದ್ಕೋಂಡ್ವಲ್ರೋ ಅವನ ಬಗ್ಗೆ ರಾತ್ರಿ' ಎಂದೆ ಗೆಳೆಯರ ಬಳಿ. 'ನಿಂಗೊತ್ತಿಲ್ಲ, ಇವ್ರು ಬೆಳಗ್ಗೆ ಹಿಂಗೆ ವ್ಯಾಪಾರ ಮಾಡ್ತಾರೆ. ರಾತ್ರಿ ಆ ಕೆಲಸಾನೂ ಮಾಡ್ತಾರೆ!' ಎಂದ ಸಂತೋಷ. 'ಸುಮ್ನಿರಪ್ಪ, ಹಾಗೆಲ್ಲಾ ಗೊತ್ತಿಲ್ಲದವರ ಬಗ್ಗೆ ಸುಳ್ಳು ಅಪಾದನೆ ಮಾಡಬಾರದು' ಎಂದೆ. 'ಆದ್ರೂ ಅವನು ನಿನ್ನೆ ರಾತ್ರಿ....' ಗೆಳೆಯನ ಅನುಮಾನ ಇನ್ನೂ ಹೋಗಿರಲಿಲ್ಲ. ಅದಕ್ಕೆ ನಾನು, 'ಇರಲಿ ಬಿಡ್ರೋ, ಅವನು ನಿಜವಾಗಿಯೂ ಏನಾಗಿದ್ರೆ ನಮಗೇನು? ನಾವು ಅವನನ್ನು ಒಳ್ಳೆಯವನು ಅಂತಲೇ ತೀರ್ಮಾನಿಸೋಣ. ಹೊಸವರ್ಷದಲ್ಲಿ ಮತ್ತಷ್ಟು ಹೆಚ್ಚು ಆಶಾವಾದಿಗಳಾಗೋಣ' ಎಂದೆ.
.jpg)
ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ನಿನ್ನೆ ಕಂಡಿದ್ದ ಅಜ್ಜಿ ಕಾಣಿಸಿತು. ಅಜ್ಜಿ ನಮ್ಮನ್ನು ಕಂಡದ್ದೇ ಕೈ ಮುಗಿಯಿತು. ನಾವು ಅಜ್ಜಿಯ ಬಳಿ 'ನೀನ್ಯಾಕೆ ಕೈ ಮುಗಿತೀಯಾ ಅಜ್ಜಿ.. ನಾವು ಮುಗೀಬೇಕು ನಿಂಗೆ' ಎಂದೆವು. ಅಜ್ಜಿಗೆ ಒಂದಷ್ಟು ದುಡ್ಡು ಕೊಟ್ಟೆವು. ಹೊಸ ಆಶಾವಾದದೊಂದಿಗೆ, ಹೊಸ ಹುರುಪಿನೊಂದಿಗೆ ಬೆಂಗಳೂರಿನ ಬಸ್ಸು ಹತ್ತಿದೆವು.
ಎರಡುಸಾವಿರದ ಐದನೇ ಇಸವಿಯ ಇಯರೆಂಡಿಗೆ ನಾವು ಹೊಗೆನಕ್ಕಲ್ ಫಾಲ್ಸ್‌ಗೆ ಹೋಗಿದ್ದೆವು. ಅಲ್ಲಿ ಹೋಗಿದ್ದಾಗ ಮಾತಾಡಿಕೊಂಡಿದ್ದೆವು: ಪ್ರತಿವರ್ಷವೂ ಇಯರೆಂಡಿನ ದಿನ ಬೆಂಗಳೂರಿನಿಂದ ಹೊರಗಡೆ ಎಲ್ಲಿಗಾದರೂ ಟೂರ್ ಹೋಗಬೇಕು ಅಂತ. ಹಾಗಾಗಿ ಈ ವರ್ಷ, ಅಂದರೆ ಎರಡುಸಾವಿರದ ಆರನೇ ಇಸವಿಯ ಡಿಸೆಂಬರ್ ಹತ್ತಿರಾಗುತ್ತಿದ್ದಂತೆಯೇ ನನ್ನಿಬ್ಬರೂ ಗೆಳೆಯರೂ ಒಂದೇ ಸಮನೆ ಪೀಡಿಸಹತ್ತಿದ್ದರು: 'ಎಲ್ಲಿಗೆ ಹೋಗೋಣ ಈ ವರ್ಷ?' ಅಂತ. ಈ ಇಬ್ಬರು ಗೆಳೆಯರು -ರಾಘವೇಂದ್ರ ಮತ್ತು ಸಂತೋಷ ಅಂತ- ನನ್ನ ಕಾಲೇಜ್ ಕ್ಲಾಸ್‌ಮೇಟುಗಳು. ಅದಕ್ಕಿಂತ ಹೆಚ್ಚಾಗಿ, ನನ್ನ ಜೀವದ ಗೆಳೆಯರು. ನಾವು ಮೂವರೇ ಪ್ರತಿವರ್ಷವೂ ವರ್ಷದ ಕೊನೆಯ ದಿನ ಎಲ್ಲಿಗಾದರೂ ಟ್ರಿಪ್ ಹೋಗಬೇಕು ಎಂದು ತೀರ್ಮಾನಿಸಿದ್ದೆವು.
ಅಂತರ್ಜಾಲದಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರವಾಸೀ ತಾಣಗಳಿಗಾಗಿ ಜಾಲಾಡಿದಾಗ ದೇವರಾಯನದುರ್ಗ ಸಿಕ್ಕಿತು. ವಿವರಗಳೂ ಸಿಕ್ಕವು. ಎಲ್ಲರಿಗೂ ಇಷ್ಟವೂ ಆಯಿತು. ನಾವು ಪಯಣಕ್ಕೆ ತಯಾರಾಗತೊಡಗಿದೆವು.
ತಯಾರಿ
ಮಲ್ಲೇಶ್ವರಂನಲ್ಲಿ ಒಂದು ಕಡೆ ಚಪಾತಿ ಮಾಡಿ ಕೊಡ್ತಾರೆ ಅಂತ ಗೊತ್ತಾಯ್ತು. ಹುಡುಕಿಕೊಂಡು ಹೋಗಿ ಆರ್ಡರ್ ಕೊಟ್ಟು ಬಂದೆವು. ದೇವರಾಯನದುರ್ಗದಲ್ಲಿರುವ ಹೋಟೆಲ್ಲು, ಗೆಸ್ಟ್‍ಹೌಸ್‍ಗಳಲ್ಲಿ ರೂಮ್ ಬುಕ್ ಮಾಡಲಿಕ್ಕೆ ಪ್ರಯತ್ನಿಸಿದೆವಾದರೂ ಸಫಲವಾಗಲಿಲ್ಲ. ಹಾಗಾಗಿ, ಅಲ್ಲಿಗೆ ಹೋಗಿಯೇ ನೋಡೋದು ಎಂದಾಯಿತು. ಅಕಸ್ಮಾತಾಗಿ ರೂಮ್ ಸಿಗಲಿಲ್ಲ ಅಂದ್ರೆ ಇಡೀ ರಾತ್ರಿ ಹೊರಗಡೆಯೇ ಇರಲಿಕ್ಕೂ ಸೈ ಎಂದಾಯಿತು. ಜೈ ಎಂದೆವು. ಕಾರು ಮಾಡಿಸಿಕೊಂಡು ಹೋಗೋಣ ಎಂದುಕೊಂಡೆವು. ಮತ್ತೆ ನಾವು ಮೂವರಿಗೆ ಏನಕ್ಕೆ ಕಾರು; ಬಸ್ಸಿಗೆ ಹೋಗೋಣ, ಮಜಾ ಇರೊತ್ತೆ ಅಂತ ತೀರ್ಮಾನಿಸಿದೆವು.
ಪಯಣ
.jpg)
ಮೆಜೆಸ್ಟಿಕ್ಕಿಗೆ ಹೋಗಿ ರೂಟು ವಿಚಾರಿಸಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಹತ್ತಿದಾಗ ಮೂವತ್ತೊಂದನೇ ತಾರೀಖಿನ ಮಧ್ಯಾಹ್ನ ೩.೩೦. ಡಾಬಸ್‍ಪೇಟೆ (ದಬ್ಬಾಸ್‍ಪೇಟ್) ಎಂಬಲ್ಲಿಗೆ ಟಿಕೇಟ್ ತಗೊಂಡೆವು. ಕೊನೆಗೆ ಬಸ್ಸಿನಲ್ಲಿದ್ದವರಲ್ಲಿ ವಿಚಾರಿಸಿದಾಗ 'ಊರ್ಡಿಗೆರೆ'ಯಲ್ಲಿ ಇಳಕೊಂಡ್ರೆ ಹತ್ತಿರ ಅಂತ ಗೊತ್ತಾಯಿತು. ಹಾಗಾಗಿ ದಬ್ಬಾಸ್‍ಪೇಟೆಯಿಂದ ಮತ್ತೆ ಊರ್ಡಿಗೆರೆಗೆ ಟಿಕೀಟು ತಗೊಂಡೆವು. ಬಸ್ಸು ಊರ್ಡಿಗೆರೆ ತಲುಪಿದಾಗ ಐದೂ ವರೆಯಾಗಿತ್ತು. ಊರ್ಡಿಗೆರೆ ಒಂದಷ್ಟು ಅಂಗಡಿಗಳಿರುವ ಪುಟ್ಟ ಊರು. ಒಂದು ಮಿನಿ ಹೋಟೆಲಿತ್ತು. ಅಲ್ಲಿ ಮೂವರೂ ಕಾಫಿ ಕುಡಿದೆವು. 'ಇಲ್ಲಿಂದ ಐದು ಕಿಲೋಮೀಟರಾಗೊತ್ತೆ ದೇವರಾಯನದುರ್ಗದ ಬೆಟ್ಟ' ಎಂಬ ವಿವರ ಸಿಕ್ಕಿತು ಹೋಟಿಲಿನವನಿಂದ. ಬೆಟ್ಟ ಕಣ್ಣಿಗೆ ಹತ್ತಿರದಲ್ಲೇ ಇದ್ದಂತೆ ಕಾಣಿಸುತ್ತಿತ್ತಾದಾರೂ ನಡೆದುಕೊಂಡು ಹೋಗಲಿಕ್ಕೆ ದೂರ ಅನ್ನಿಸಿ, ಆಟೋ ಮಾಡಿಸಿಕೊಂಡು ಹೊರಟೆವು. ದೇವರಾಯನದುರ್ಗ ತಲುಪಿದಾಗ ಆರೂ ವರೆ. ಅದಾಗಲೇ ಕತ್ತಲಾಗುತ್ತಿತ್ತು.
ರೂಮಿಗಾಗಿ ಪರದಾಟ
ಹೋಗಿ ಮುಟ್ಟಿದಾಕ್ಷಣ ಅಲ್ಲಿದ್ದ ಪ್ರವಾಸಿ ಮಂದಿರಗಳಲ್ಲಿ ತಂಗಲು ರೂಮಿದೆಯಾ ಎಂದು ವಿಚಾರಿಸಿದೆವು. 'ಇಲ್ಲ' ಎಂಬ ಉತ್ತರ ರೆಡಿಮೇಡೇನೋ ಎಂಬಂತೆ ಬಂತು. 'ಬೆಟ್ಟದ ಮೇಲೂ ಒಂದು ಗೆಸ್ಟ್‍ಹೌಸ್ ಇದೆ; ಆದರೆ ಅಲ್ಲೂ ರೂಮು ಸಿಗುವುದು ಡೌಟು' ಎಂಬ ಮಾಹಿತಿ ಸಿಕ್ಕಿತು. ನಾವು ಹೊರಗಡೆ ತಂಗಲಿಕ್ಕೂ ತಯಾರಾಗಿಯೇ ಬಂದಿದ್ದರಿಂದ 'ಏನಾದರಾಗಲಿ' ಎಂದುಕೊಂಡು ಬೆಟ್ಟದ ಆರೋಹಣಕ್ಕೆ ಮುಂದಾದೆವು. ಹೊರಡುವಷ್ಟರಲ್ಲಿ ಯಾರನ್ನೋ ವಿಚಾರಿಸಿದಾಗ ಆ ಮೇಲ್ಗಡೆಯ ಗೆಸ್ಟ್‍ಹೌಸಿನವರೇ ಆದ ರಮೇಶ್ ಎಂಬುವವರೊಬ್ಬರ ಪರಿಚಯ ಆಯಿತು. ಅವರೆಂದರು, 'ನಿಮಗೆ ರೂಮ್ ಕೊಡಲಿಕ್ಕೆ ಆಗುವುದಿಲ್ಲ. ಆದರೆ ನಮ್ಮ ಆಫೀಸಿನಲ್ಲೇ ಬೇಕಾದರೆ ಮಲಗಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡಬಹುದು' ಅಂತ. ಅಷ್ಟಾದರೆ ಸಾಕಾಗಿತ್ತು ನಮಗೆ. 'ಥ್ಯಾಂಕ್ಯೂ ಸರ್!' ಎಂದೆವು.
.jpg)
ದೇವರಾಯನದುರ್ಗ
ದೇವರಾಯನದುರ್ಗ ತುಮಕೂರು-ಬೆಂಗಳೂರುಗಳ ನಡುವೆ ಇರುವ ಒಂದು ಬೆಟ್ಟ. ಬೆಂಗಳೂರಿನಿಂದ ಸುಮಾರು ೭೦ ಕಿಲೋಮೀಟರ್ ದೂರದಲ್ಲಿದೆ. ಈ ಬೆಟ್ಟ ಸುಮಾರು ೪೦೦೦ ಅಡಿಗಳ ಎತ್ತರವಿದೆ. ಇಲ್ಲಿ ಯೋಗನರಸಿಂಹ ಮತ್ತು ಭೋಗನರಸಿಂಹ ಎಂಬೆರಡು ದೇವಸ್ಥಾನಗಳು ಇವೆ. ಇಲ್ಲಿ ವಾಸವಾಗಿದ್ದ ಅಂಧಕ (ಲಿಂಗಕ) ಎಂಬ ಹೆಸರಿನ ದರೋಡೆಕೋರನನ್ನು ಮೈಸೂರಿನ ದೊರೆ ಹೇಮಚಂದ್ರನ ಪುತ್ರ ಸುಮತಿ ಕೊಂದುಹಾಕಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು ಎಂಬ ಪ್ರತೀತಿಯಿದೆ. ಹಳೆಯ ಕೋಟೆಯ ಅಳಿದುಳಿದ ಅವಶೇಷಗಳನ್ನೂ ಇಲ್ಲಿ ಕಾಣಬಹುದು. 'ನಾಮದ ಚಿಲುಮೆ' ಎಂಬ ಹೆಸರಿನ ಒಂದು ಪುಷ್ಕರಿಣಿ ಸಹ ಇಲ್ಲಿದೆ. ಶ್ರೀರಾಮ ಸೀತೆಯನ್ನು ಹುಡುಕಿಕೊಂಡು ಲಂಕೆಗೆ ತೆರಳುತ್ತಿದ್ದಾಗ ಇಲ್ಲಿಗೆ ಬಂದಿದ್ದ. ಆಗ ಅವನಿಗೆ 'ನಾಮ' ಹಚ್ಚಿಕೊಳ್ಳಲಿಕ್ಕೆ ಇಲ್ಲಿ ನೀರು ಸಿಗದಿದ್ದರಿಂದ, ನೆಲಕ್ಕೆ ಒಂದು ಬಾಣ ಬಿಟ್ಟು ನೀರು ತರಿಸಿದ ಎಂದು ನಂಬಲಾಗಿದೆ. ಆ ಕೊಳದ ಪಕ್ಕ ಇರುವ ಒಂದು ಪುಟ್ಟ ಗುಂಡಿಯೇ ರಾಮನ ಪಾದದ ಗುರುತು ಎಂದು ಸಹ ಗುರುತಿಸಿದ್ದಾರೆ ಜನ!
ದೇವರಾಯನದುರ್ಗದಲ್ಲಿ ಅರಣ್ಯ ಇಲಾಖೆ ನಡೆಸುವ ಒಂದು ವಸತಿ ಮಂದಿರವಿದೆ. ದೇವಸ್ಥಾನದವರ ಒಂದು ಪ್ರವಾಸೀ ಮಂದಿರವಿದೆ. ಬೆಟ್ಟದ ಮೇಲ್ಗಡೆ ಪೋಲೀಸ್ ಇಲಾಖೆಯವರ ಒಂದು ಗೆಸ್ಟ್‍ಹೌಸ್ ಇದೆ.
ಆ ಅಜ್ಜಿ..
ಬೆಟ್ಟ ಹತ್ತಲಿಕ್ಕೆ ಅಲ್ಲಲ್ಲಿ ಟಾರು - ಅಲ್ಲಲ್ಲಿ ಮಣ್ಣಿನ ಒಳ್ಳೆಯ ರಸ್ತೆಯೇ ಇತ್ತು. ತಿಂಗಳ ಬೆಳಕಂತೂ ಬೇಕಾದಷ್ಟಿತ್ತು. ಬ್ಯಾಗೇರಿಸಿ, ಶೇಂಗ ತಿನ್ನುತ್ತಾ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಒಂದು ಅಜ್ಜಿ ನಡೆದುಬರುತ್ತಿರುವುದು ಕಾಣಿಸಿತು. ಅಜ್ಜಿ ನಮ್ಮ ಬಳಿ ಬಂದದ್ದೇ, "ಈಗ ಮೇಲಕ್ಕೆ ಹೊಂಟೀರೇನಪ್ಪ? ನಾನು ಹೇಳ್ತಿದೀನಿ, ಹೋಗಬ್ಯಾಡ್ರಿ ಮೇಲಕ್ಕೆ. ಅಲ್ಲಿ ನರಹುಳಾನೂ ಇಲ್ಲ. ಉಳಕೊಳ್ಳಲಿಕ್ಕೆ ಅಲ್ಲಿ ನಿಮಗೇನೂ ಇಲ್ಲ. ಕಳ್ಳರು-ಕಾಕರು ಇದಾರೆ. ನೀವು ಹೋದದ್ದೇ ಆದ್ರೆ, ನಾನು ಹೇಳ್ತಿದೀನಿ, ವಾಪಸು ಬರಂಗಿಲ್ಲ ನೋಡ್ರಿ!" ಅಂತು. ನಾವು ಕಕ್ಕಾಬಿಕ್ಕಿಯಾದೆವು. ಇದೇನು ಹೊಸ ವರಾತ ಬಂತಲ್ಲ ಅನ್ನಿಸಿತು. ಅಜ್ಜಿ ತಮಾಷೆಗೆ ಹೇಳುತ್ತಿದೆಯೇ ಅನ್ನಿಸಿತು. ಆದರೆ ಮತ್ತೆ ಅಜ್ಜಿ, "ನೋಡ್ರಿ, ನಾನು ಹೇಳ್ತಿದೀನಿ, ಈಗ ಮೇಲಕ್ಕೆ ಹೋಗಬ್ಯಾಡ್ರಿ. ಇಲ್ಲೇ ಕೆಳಗಡೆ ದೇವಸ್ಥಾನದಾಗೆ ಉಳಕೊಂಡು ಬೆಳಗ್ಗೆ ಬೇಕಾದ್ರೆ ಹೋಗ್ರಿ" ಅಂದಿತು. ನಮಗೆ ಅಷ್ಟೊಂದು ಭಯವೇನಿರಲಿಲ್ಲ. ಅಲ್ಲದೇ ತುಂಬಾ ಜನ, ವೆಹಿಕಲ್ಲುಗಳು ಬೆಟ್ಟದಿಂದ ಇಳಿದುಬರುತ್ತಿದ್ದುದರಿಂದ ಹೆದರಬೇಕಾದ ಅವಶ್ಯಕತೆಯಿಲ್ಲ ಅನ್ನಿಸಿತು. ಆದರೂ ಅಜ್ಜಿ ಹಾಗೆ ಹೇಳಿದಮೇಲೆ ಹುಂಬತನ ಮಾಡಿ ಮುನ್ನುಗ್ಗುವುದಕ್ಕೆ ಮನಸ್ಸಾಗಲಿಲ್ಲ. ಹಾಗಾಗಿ, ಅಜ್ಜಿಯ ಜೊತೆಯೇ ನಾಲ್ಕು ಹೆಜ್ಜೆ ವಾಪಸು ಬಂದೆವು. ಅಜ್ಜಿಯ ಬಳಿ ಅವಳ ಬಗ್ಗೆ ವಿಚಾರಿಸಿದೆವು. ಅಜ್ಜಿ ಭಿಕ್ಷೆ ಬೇಡಲಿಕ್ಕೆ ಅಲ್ಲಿಗೆ ಹೋಗಿದ್ದು ಅಂತ ಗೊತ್ತಾಯಿತು. ಹಾಗಾದರೆ ಈ ಅಜ್ಜಿಗೆ ಬುದ್ಧಿಭ್ರಮಣೆಯಾಗಿರಲಿಕ್ಕೂ ಸಾಕು ಅನ್ನಿಸಿ, 'ಏ.. ಏನಾಗಲ್ಲ ಬರ್ರೋ..' ಅಂದುಕೊಂಡು ಮತ್ತೆ ಬೆಟ್ಟದತ್ತ ಮುಖ ಮಾಡಿದೆವು.
ಬೆಟ್ಟವೆಂದರೆ...
ದೇವರಾಯನದುರ್ಗದ ಈ ಬೆಟ್ಟ ಚಾರಣಪ್ರಿಯರಿಗೇನು ಅಷ್ಟೊಂದು ಇಷ್ಟವಾಗಲಾರದು. ಏಕೆಂದರೆ ಇಲ್ಲಿ ಚಾರಣ ಮಾಡಲಿಕ್ಕೆ ಅವಕಾಶವೇ ಇಲ್ಲ. ಬೆಟ್ಟದ ಮೇಲ್ತುದಿಯವರೆಗೂ ಒಳ್ಳೆಯ ರಸ್ತೆಯೇ ಇದೆ. ಅಷ್ಟಷ್ಟು ಕಲ್ಲು, ಅಷ್ಟಷ್ಟು ಮಣ್ಣು, ಅಷ್ಟಷ್ಟು ಗಿಡ-ಮರ-ಪೊದೆ ಬೆಟ್ಟವನ್ನಾವರಿಸಿವೆ.ನಾವು ಹೊರಡುವಷ್ಟರಲ್ಲೇ ಕತ್ತಲಾಗಿತ್ತಾದರೂ ಚೆನ್ನಾಗಿ ಬೆಳದಿಂಗಳಿತ್ತು. ಕೈಯಲ್ಲಿ ಟಾರ್ಚನ್ನೂ ಹಿಡಿದಿದ್ದೆವು. ಸಾಕಷ್ಟು ಹೋಗುವ-ಬರುವ ವಾಹನಗಳಿದ್ದವು. ಹೀಗಾಗಿ, ನಮ್ಮ ಚಾರಣಕ್ಕೆ ಯಾವ ತೊಂದರೆಯೂ ಆಗಲಿಲ್ಲ.
ಮೇಲೆ
ತುದಿಯನ್ನು ಮುಟ್ಟಿದಮೇಲೆ ಅಲ್ಲಿನ ಗೆಸ್ಟ್‍ಹೌಸನ್ನು ಒಮ್ಮೆ ನೋಡಿ ಬಂದೆವು. ಸಣ್ಣದಾಗಿ ತೆರೆದಿದ್ದ ಬಾಗಿಲಿಂದ ಒಳಗಡೆ ಗುಂಡು ಹಾಕುತ್ತಾ ಕುಳಿತಿದ್ದ ಜನಗಳ ಪರಿವಾರ ಕಾಣಿಸಿತು. ಇಲ್ಲಿ ಪಬ್ಲಿಕ್‍ಗೆ ರೂಮುಗಳನ್ನು ಕೊಡುವುದೇ ಇಲ್ಲವಂತೆ. ಎಲ್ಲಾ ರೂಮುಗಳೂ ಪಿ.ಡಬ್ಲ್ಯೂ.ಡಿ. ಆಫೀಸರುಗಳಿಗೆ, ವಿ.ಐ.ಪಿ.ಗಳಿಗೆ, ಸರ್ಕಾರೀ ಅಧಿಕಾರಿಗಳಿಗೆ ಮೀಸಲಿರುತ್ತದೆ. ಅವರು ಹೀಗೆ ಆಗಾಗ ಬಂದು ಗುಂಡು ಹಾಕುತ್ತಾ, ಇಸ್ಪೀಟು ಆಡುತ್ತಾ ಕಾಲ ಕಳೆಯುತ್ತಾರೆ. ನಮಗಂತೂ ಅಲ್ಲಿನ ಆ ಗೆಸ್ಟ್‍ಹೌಸು ಅನೈತಿಕ ಚಟುವಟಿಕೆಗಳಿಗೆ ಆಶ್ರಯವಿತ್ತಂತೆಯೂ ಅನ್ನಿಸಿತು. ನಾವು ಅಲ್ಲಿ ತಂಗುವ ಆಸೆಯನ್ನು ಬಿಟ್ಟುಬಿಟ್ಟೆವು. ಹೊರಗಡೆಯೇ ಕಾಲ ಕಳೆಯೋಣ ಎಂದು ತೀರ್ಮಾನಿಸಿದೆವು.
ಫೈರ್‌ಕ್ಯಾಂಪ್!ಇಯರೆಂಡಾದ್ದರಿಂದ, ಬೆಟ್ಟದ ಮೇಲೆ ಸಿಕ್ಕಾಪಟ್ಟೆ ಜನ ಇದ್ದರು. ಬೆಟ್ಟದಲ್ಲಿ ಅಲ್ಲಲ್ಲಿ ಒಲೆ ಹೂಡಿಕೊಂಡು, ಸಾಮಾನು-ಸರಂಜಾಮುಗಳನ್ನೆಲ್ಲಾ ತಂದುಕೊಂಡು, ಅಡುಗೆ ಮಾಡಿಕೊಂಡು, ಗುಂಡು ಹಾಕುತ್ತಾ ಕುಳಿತಿದ್ದ ಗುಂಪುಗಳಿದ್ದವು. ತುಂಬಾ ಗಲಾಟೆಯಿತ್ತು. ನಾವು ಇವರೆಲ್ಲರಿಂದ ಸ್ವಲ್ಪ ದೂರ ಇರಬೇಕು ಅನ್ನಿಸಿತು. ಪ್ರಶಾಂತ ಸ್ಥಳವನ್ನರಸಿ ಹೊರಟೆವು. ಒಂದು ಕಡೆ ಅಂತಹ ಜಾಗ ಸಿಕ್ಕಿತು. ಅಲ್ಲೇ ನಮ್ಮ ಬ್ಯಾಗುಗಳನ್ನು ಇಟ್ಟು, ಕಟ್ಟಿಗೆ ಒಟ್ಟುಮಾಡಿ ಬೆಂಕಿ ಹಚ್ಚಿ, ಫೈರ್‌ಕ್ಯಾಂಪ್ ಮಾಡಿದೆವು. ನಿಧಾನಕ್ಕೆ ಹೊತ್ತಿಕೊಂಡ ಬೆಂಕಿ ತನ್ನ ಶಾಖವನ್ನು ಸುತ್ತಲೂ ಸೂಸಲಾರಂಭಿಸಿತು. ಅದರ ಕೆಂಬಣ್ಣ ಬೆಳದಿಂಗಳ ಬಿಳುಪಿನೊಂದಿಗೆ ಗೊತ್ತೇ ಆಗದಂತೆ ಬೆರೆಯಲಾರಂಭಿಸಿತು. ಸುತ್ತಲೂ ಕುಳಿತು ಹರಟೆ ಶುರುಹಚ್ಚಿದೆವು.
ಹರಟೆ ಹರಟೆ ಹರಟೆ
ಪ್ಯಾಂಟು ಬಿಚ್ಚಿ, ಚಡ್ಡಿ ಧರಿಸಿ, ಮೈತುಂಬ ಕೋಟು/ಸ್ವೆಟರು ತೊಟ್ಟು, ಕಟ್ಟಿಕೊಂಡು ಹೋಗಿದ್ದ ಶೇಂಗ, ಬಟಾಣಿ, ಅದೂ-ಇದುಗಳನ್ನು ತಿನ್ನುತ್ತಾ ಕುಳಿತೆವು. ಉದ್ದುದ್ದ ಹರಟೆಯಲ್ಲಿ ತೊಡಗಿದೆವು. ಎರಡುಸಾವಿರದ ಆರು ಹೇಗಿತ್ತು? ಎರಡುಸಾವಿರದ ಏಳರಲ್ಲಿ ಸಾಧಿಸಬೇಕೆಂದಿರುವ ಗುರಿಗಳೇನು? -ಇತ್ಯಾದಿ ಚರ್ಚಿಸಬೇಕು ಎಂದುಕೊಂಡಿದ್ದೆವಾದರೂ ಅದು ಸಾಧ್ಯವಾಗಲಿಲ್ಲ. ಆ ವಿಷಯವನ್ನು ಎತ್ತಿಕೊಂಡಕೂಡಲೇ ಚರ್ಚೆ ಎತ್ತಲೋ ಸಾಗುತ್ತಿತ್ತು.
ಸಮಯ ಉರುಳುತ್ತಿತ್ತು. ಸುಮಾರು ಹತ್ತೂ ವರೆ ಆಗಿತ್ತು. ಬೆಳದಿಂಗಳ ಮಳೆ ಅವಿರತವಾಗಿ ಮುಂದುವರೆದಿತ್ತು. ಆಗಸದಲ್ಲಿ ಚಂದಿರ ತೇಲುತ್ತಿದ್ದ. ಇಬ್ಬನಿ ಬೀಳುತ್ತಿತ್ತು. ಬೆಂಕಿ ಉರಿಯುತ್ತಿತ್ತು. ಚರ್ಚೆ ಮುಂದುವರೆದಿತ್ತು.... ಆಗ ಬಂದ ಆತ!
ಮಂಜ ಬಂದ!
ಹರಟೆಯಲ್ಲೇ ಮುಳಿಗಿದ್ದ ನಮಗೆ ಹೊರಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದು ಬೇಕಿರಲಿಲ್ಲ. ಆದರೆ ನಾವು ಸಡನ್ನಾಗಿ ಎಚ್ಚರಾಗುವಂತೆ ಮಾಡುವಂತಹ ಘಟನೆ ಆಗ ನಡೆಯಿತು. ಕೈಯಲ್ಲಿ ಕತ್ತಿ ಹಿಡಿದಿದ್ದ ಒಬ್ಬ ವ್ಯಕ್ತಿ ನಮ್ಮೆದುರು ಪ್ರತ್ಯಕ್ಷನಾದ! 'ಏನಣ್ಣಾ.. ಎಲ್ಲಿಂದ ಬಂದಿದೀರಿ...? ಮೂವರೇನಾ..?' ಎನ್ನುತ್ತಾ ಬಂದವನು ತನ್ನ ಕತ್ತಿಯನ್ನು ನಮ್ಮ ಪಕ್ಕದಲ್ಲಿ ಬೀಳಿಸಿದಂತೆ ಇಟ್ಟು ತಾನೂ ಬೆಂಕಿ ಕಾಯಿಸಲಿಕ್ಕೆ ಕುಳಿತುಬಿಟ್ಟ! ಅವನ ರೂಪ, ಇದ್ದಕ್ಕಿದ್ದಂತೆ ಎರಗಿಬಂದ ಅವನ ರೀತಿ, ಕೈಯಲ್ಲಿದ್ದ ಕತ್ತಿ, ಕೇಳಿದ ಪ್ರಶ್ನೆ ಎಲ್ಲಾ ನೋಡಿದ ನಾವು ತಕ್ಷಣ ಅಲರ್ಟ್ ಆದೆವು. ಅಜ್ಜಿ ಹೇಳಿದ್ದು ಥಟ್ಟನೆ ನೆನಪಾಯಿತು.
ಸಣ್ಣಕೆ ಭಯವಾಗಲು ಶುರುವಾಯಿತು... ಆದರೂ ಧೃತಿಗೆಡಲಿಲ್ಲ. 'ಇಲ್ಲೇ ತುಮಕೂರಿನಿಂದ ಬಂದದ್ದು. ಮೂರಲ್ಲ; ಇನ್ನೂ ನಾಲ್ಕು ಜನ ಇದಾರೆ, ಇಲ್ಲೇ ಮೇಲ್ಗಡೆ ಹೋಗಿದಾರೆ...' ಎಂಬುದಾಗಿ ಸುಳ್ಳಿನ ಕಂತೆಯನ್ನು ಕಟ್ಟಲಾರಂಭಿಸಿದೆವು. 'ನಿಮ್ಮ ಹೆಸರೇನಣ್ಣ?' ಅಂದ ಅಂವ. 'ನನ್ನ ಹೆಸರು ಸುರೇಶ' 'ನಾನು ರಾಜು' 'ನಾನು ರಮೇಶ್' ಎಂಬುದಾಗಿ ಸುಳ್ಳು ಹೆಸರುಗಳನ್ನು ಹೇಳಿದೆವು. ಅವನ ಕಣ್ಣುಗಳು ನಮ್ಮೆಲ್ಲರನ್ನೂ ಗಮನಿಸುತ್ತಿದ್ದವು. 'ರೂಮ್ ಬುಕ್ ಮಾಡಿದೀರಾ ಸುರೇಶಣ್ಣ?' -ಕೇಳಿದ. ನಮ್ಮಲ್ಲಿ ಯಾರು ಸುರೇಶಣ್ಣ ಎಂಬುದು ಕನ್‍ಫ್ಯೂಸ್ ಆಯಿತು ಒಂದು ಕ್ಷಣ! ಆದರೂ ತಡವರಿಸದೆ, 'ಹೂಂ. ಮೇಲ್ಗಡೆ ಡಿ.ಐ.ಜಿ. ರಮೇಶ್ ಇದಾರಲ್ಲ, ಅವರು ನಮಗೆ ಪರಿಚಯ. ನಾವೂನೂ ಪೋಲೀಸ್ ಡಿಪಾರ್ಟ್‌ಮೆಂಟಿನವರೇ. ಹೀಗಾಗಿ ರೂಮ್ ಸಿಕ್ಕಿದೆ' ಎಂದೆವು -ಅವನಿಗೆ ಭಯ ಹುಟ್ಟಿಸಲೋಸುಗ.ಆದರೆ ಅವನಿಗೆ ನಾವು ಅಲರ್ಟ್ ಆಗಿರುವುದು ಗೊತ್ತಾಗಿಹೋಯಿತು. ಇವರ ಹತ್ತಿರ ತನ್ನ ಆಟ ನಡೆಯಲಾರದು ಎನ್ನಿಸಿತೇನೋ. ಅವನು ಕೂಲ್ ಆಗತೊಡಗಿದ. ನಾವೂ ಅವನ ಬಳಿ ಅವನ ಬಗ್ಗೆ ವಿಚಾರಿಸಿದೆವು. ತನ್ನ ಹೆಸರು ಮಂಜು ಎಂದ. ಬೆಟ್ಟದ ಕೆಳಗಡೆ ತಾನೂ ಮತ್ತು ತನ್ನ ಅಣ್ಣನ ಅಂಗಡಿಯಿದೆ ಎಂದು ಹೇಳಿದ. 'ಎಣ್ಣೆ-ಗಿಣ್ಣೆ ಬೇಕಾ ಸಾರ್, ತಂದುಕೊಡ್ತೀನಿ' ಅಂದ. 'ಏನೂ ಬ್ಯಾಡಪ್ಪ' ಎಂದೆವು.
ನಮಗೆ ತುಂಬಾ ಭಯವೇನೂ ಆಗುತ್ತಿರಲಿಲ್ಲ. ಆದರೆ ಇವನನ್ನು ಹೀಗೆ ನಮ್ಮ ಜೊತೆ ಕೂರಿಸಿಕೊಂಡಿರುವುದು ಕ್ಷೇಮವಲ್ಲ ಅಂತ ಮಾತ್ರ ಅನ್ನಿಸುತಿತ್ತು. 'ಏನು ತಾನೇ ಮಾಡಿಯಾನು? ನಾವು ಮೂವರಿದ್ದೇವೆ, ಇವನು ಒಬ್ಬನೇ' ಎಂಬ ಧೈರ್ಯದ ಜೊತೆಗೇ 'ಇವನ ಜೊತೆ ಇನ್ನೂ ಎಷ್ಟು ಜನ ಇದ್ದಾರೋ ಏನೋ' ಅಂತಲೂ ಯೋಚನೆಯಾಯಿತು. ಹೇಗಾದರೂ ಮಾಡಿ ಇವನನ್ನು ಸಾಗಹಾಕಬೇಕು ಎಂದಾಲಾಚೋಸಿದೆವು.
'ಸರಿ, ಮೇಲ್ಗಡೆ ಹೋಗಿ ಊಟ ಮಾಡ್ಕೊಂಡು ಆಮೇಲೆ ಬರೋಣ ಬನ್ರೋ' ಅಂತ ನಮನಮಗೇ ಹೇಳಿಕೊಂಡು ಎದ್ದುನಿಂತೆವು. ನಮ್ಮ ಬ್ಯಾಗುಗಳನ್ನೆತ್ತಿಕೊಂಡು ಹೊರಟೇಬಿಟ್ಟೆವು. ಅವನನ್ನು ಪರಿಕಿಸಲೋಸುಗ, 'ನೀವೂ ಬನ್ನಿ ಮಂಜು, ನಮ್ಮ ಜೊತೇನೇ ಊಟ ಮಾಡುವಂತ್ರಿ' ಅಂತ ಕರೆದೆವು. ಆದರೆ ಆತ ಬರಲಿಕ್ಕೆ ಒಪ್ಪಲಿಲ್ಲ. 'ಇಲ್ಲ ಸುರೇಶಣ್ಣ, ನಾನು ಹೋಗ್ತೀನಿ ಸುರೇಶಣ್ಣ. ಕೆಳಗಡೆ ನಮ್ಮನೆ ಐತಣ್ಣ. ನಾನು ಹೋಗ್ತೀನಣ್ಣ' ಎಂದವನೇ ಅಲ್ಲಿಂದ ಕಾಲ್ಕಿತ್ತ.
ಕಳ್ಳನಿಗೇ ಚಳ್ಳೆಹಣ್ಣು!
ನಾವು ಕುಳಿತಿದ್ದ ಜಾಗ ಎಂಥದಿತ್ತೆಂದರೆ ಅವನೇನಾದರೂ ನಮ್ಮ ಮೇಲೆ ಎರಗಿ ಬಂದಿದ್ದರೆ ನಾವು ಓಡಿ ತಪ್ಪಿಸಿಕೊಳ್ಳಲಿಕ್ಕೂ ಆಗುತ್ತಿರಲಿಲ್ಲ. ಜನರ ಗೌಜಿನಿಂದ ದೂರವಿರಬೇಕು ಎಂದುಕೊಂಡು ನಾವು ಅರಸಿ ಆರಿಸಿದ್ದ ಈ ಸ್ಥಳ ನಮಗೇ ಕಂಟಕಕಾರಿಯಾಗಿತ್ತು. ಅವನು ಅತ್ತ ಹೋದದ್ದೇ ನಾವು ಜನಗಳು ಜಾಸ್ತಿ ಇರುವ ಕಡೆಗೆ ಧಾವಿಸಿದೆವು.
.jpg)
ನಾವು ಕೇಳಿದ ಪ್ರಶ್ನೆಗಳಿಗೆ ಅವನು ಹೇಳುತ್ತಿದ್ದ ಉತ್ತರಗಳು ಒಂದಕ್ಕೊಂದಕ್ಕೆ ಸಂಭಂದವಿರುತ್ತಿರಲಿಲ್ಲ. ಅಲ್ಲದೇ ಅವನ ಚಲನವಲನಗಳು, ಓರೆಗಣ್ಣಿನಿಂದ ನಮ್ಮನ್ನು ಗಮನಿಸುತ್ತಿದ್ದ ರೀತಿ, ಅವನ ಕತ್ತಿ... ಎಲ್ಲಾ ಕಂಡಿದ್ದ ನಾವು ನಿಸ್ಸಂಶಯವಾಗಿ ಅವನೊಬ್ಬ ದರೋಡೆಕೋರ ಎಂಬ ತೀರ್ಮಾನಕ್ಕೆ ಬಂದಿದ್ದೆವು. ಕಳ್ಳನಿಗೇ ಚಳ್ಳೆಹಣ್ಣು ತಿನ್ನಿಸಿದ ಖುಷಿಯಲ್ಲಿ ಹಿಗ್ಗಿದೆವು. ಆದರೆ 'ಅವನು ತನ್ನ ಮತ್ತಷ್ಟು ಸಂಗಡಿಗರನ್ನು ಕಟ್ಟಿಕೊಂಡು ಮತ್ತೆ ಬಂದುಬಿಟ್ಟರೆ?' ಎಂಬ ಭಯ ಮಾತ್ರ ಹಾಗೆಯೇ ಇತ್ತು.
ಮುಗಿಯದ ರಾತ್ರಿ
ಹೊಸ ವರ್ಷವನ್ನು ಹೊಸ ರೀತಿಯಲ್ಲಿ, ಸಂಭ್ರಮದಿಂದ ಸ್ವಾಗತಿಸಬೇಕೆಂದುಕೊಂಡು ಇಲ್ಲಿಗೆ ಬಂದಿದ್ದ ನಾವು ಭಯ, ತಳಮಳಗಳಲ್ಲಿ ತೊಳಲಾಡುವಂತಾಯಿತು. ಇನ್ನೂ ರಾತ್ರಿ ಹನ್ನೊಂದಾಗಿತ್ತು. ಹೊಸ ವರ್ಷ ಬರುವುದಕ್ಕೆ ಇನ್ನೂ ಒಂದು ಗಂಟೆ ಕಾಯಬೇಕಿತ್ತು. ಆದಷ್ಟು ಬೇಗ ಗಂಟೆ ಹನ್ನೆರಡಾಗಿ, ಹೊಸ ವರ್ಷ ಬಂದು, ಈ ಕಾವಳದ ರಾತ್ರಿ ಮುಗಿದು, ನಿಚ್ಛಳ ಬೆಳಕಿನ ಬೆಳಗು ಬಂದರೆ ಸಾಕಿತ್ತು. ನಾವು ಅಲ್ಲೇ ಬದಿಯಲ್ಲಿ ಕುಂತು, ಕಟ್ಟಿಕೊಂಡು ಹೋಗಿದ್ದ ಚಪಾತಿಯನ್ನು ತಿಂದು ಮುಗಿಸಿದೆವು. ಮತ್ತೆ ಒಂದಷ್ಟು ಕಟ್ಟಿಗೆಯನ್ನು ಒಟ್ಟುಹಾಕಿ ಸಮೀಪದಲ್ಲೇ ಬೆಂಕಿ ಮಾಡಿದೆವು. ಬೆಂಕಿ ಇಲ್ಲದೇ ಆ ಚಳಿಯ ರಾತ್ರಿಯನ್ನು ನಾವು ಕಳೆಯುವುದೂ ಕಷ್ಟವಿತ್ತು. ಅದೂ ಇದೂ ಮಾತನಾಡುತ್ತಾ ಹೊಸವರುಷದ ಆಗಮನಕ್ಕೆ ಚಾತಕದಂತೆ ಕಾಯತೊಡಗಿದೆವು.
ಬಂತು ೨೦೦೭
ವಾಚಿನ ಮುಳ್ಳು ಓಡುತ್ತೋಡುತ್ತ... ಹನ್ನೊಂದೂ ಕಾಲು..ಹನ್ನೊಂದೂ ವರೆ..ಹನ್ನೊಂದೂ ಮುಕ್ಕಾಲು.. ಹನ್ನೆರಡು.. ಹಾ! ಬಂದೇ ಬಿಟ್ಟಿತು ಹೊಸ ವರುಷ! ನೋಡನೋಡುತ್ತಿದ್ದಂತೆಯೇ ಗಂಟೆ ಹನ್ನೆರಡಾಗಿ ಎರಡು ಸಾವಿರದ ಆರನೇ ಇಸವಿಯಲ್ಲಿದ್ದ ನಮ್ಮನ್ನು ಎರಡು ಸಾವಿರದ ಏಳನೇ ಇಸವಿಯಲ್ಲಿ ಕೂರಿಸಿಬಿಟ್ಟಿತ್ತು. ಇಡೀ ಬೆಟ್ಟಕ್ಕೆ ಬೆಟ್ಟವೇ 'ಹೋ..' 'ಹ್ಯಾಪಿ ನ್ಯೂ ಇಯರ್..' ಎಂಬ ಚೀರಾಟದಿಂದ ತುಂಬಿಕೊಂಡಿತು. ಏನು ಮಾಡಬೇಕೆಂದು ತಿಳಿಯದೇ ನಾವೂ ಕೂಗಿಕೊಂಡೆವು. 'ಹ್ಯಾಪಿ ನಿವ್ವಿಯರ್.. ಹ್ಯಾಪಿ ನಿವ್ವಿಯರ್..!' ಒಬ್ಬರನ್ನೊಬ್ಬರು ಆಲಂಗಿಸಿಕೊಂಡೆವು, ಶೇಕ್-ಹ್ಯಾಂಡ್ ಮಾಡಿಕೊಂಡೆವು, ಸಿಗುತ್ತಿದ್ದ ಚೂರುಪಾರು ನೆಟ್‍ವರ್ಕ್ ಬಳಸಿಯೇ ಗೆಳೆಯರಿಗೆ ಮೆಸೇಜು ಕಳಿಸಿದೆವು. ಕೆಲವರಿಗೆ ಕಾಲ್ ಮಾಡಿದೆವು. ಓಹೋ... ಹೊಸ ವರ್ಷ... ಎರಡ್ಸಾವ್ರದೇಳು ಬಂದೇ ಬಿಟ್ಟಿತ್ತು!
ಕೋಳಿ ನಿದ್ರೆ
ರಾತ್ರಿ ಸುಮಾರು ಎರಡೂ ವರೆಯ ವರೆಗೆ ಹಾಗೇ ಬೆಂಕಿ ಕಾಯಿಸುತ್ತಾ ಕುಳಿತಿದ್ದ ನಾವು ಆಮೇಲೆ, ನಮಗೆ ಮಲಗಿಕೊಳ್ಳಲಿಕ್ಕೆ ಜಾಗ ಕೊಡುತ್ತೀನಿ ಎಂದಿದ್ದ ಆಸಾಮಿಯನ್ನು ಹುಡುಕಿಕೊಂಡು ಅವನ ಆಫೀಸಿನ ಕಡೆಗೆ ಹೊರಟೆವು. ಕನಿಷ್ಟ ಮೂರು ತಾಸಾದರೂ ನಿದ್ರೆ ಮಾಡದಿದ್ದರೆ ನಾಳೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ, ಒಂದು ಕೋಳಿ ನಿದ್ರೆ ತೆಗೆಯಲೇಬೇಕೆಂದು ತೀರ್ಮಾನಿಸಿದೆವು. ಅಲ್ಲದೇ ಬೆಳಗ್ಗೆ ಸೂರ್ಯೋದಯವನ್ನು ನೋಡಲು ಬೇಗನೆ ಏಳಬೇಕಿತ್ತು ನಾವು. ಆದರೆ ಆ ಮನುಷ್ಯ ತನ್ನ ಸ್ನೇಹಿತರೊಂದಿಗೆ ಕುಡಿಯುತ್ತಾ ಕುಳಿತಿರುವುದು ಕಾಣಿಸಿತು. ಅವನನ್ನು ಡಿಸ್ಟರ್ಬ್ ಮಾಡುವುದು ಬೇಡ ಅನ್ನಿಸಿತು. ಪಕ್ಕದಲ್ಲೇ ಇದ್ದ ಮತ್ತೊಂದು ಆಫೀಸಿಗೆ ವಿಶಾಲವಾದ ಕಟ್ಟೆಯಿತ್ತು. ಅನೇಕರು ಅಲ್ಲಿಯೇ ಮಲಗಿದ್ದರು. ನಾವೂ ಅಲ್ಲೇ, ನಮ್ಮ ಚಾಪೆ ಹಾಸಿ, ರಗ್ಗು ಬೆಡ್‍ಶೀಟುಗಳನ್ನು ಹೊದ್ದು ಮಲಗಿಬಿಟ್ಟೆವು. ಸುಸ್ತಿಗೆ ನಿದ್ರೆಯೂ ಬಂತು.
ಹೊಸ ಬೆಳಗು
ಆರು ಗಂಟೆಗೆ ಸರಿಯಾಗಿ ನಮ್ಮ ಮೊಬೈಲಿನ ಅಲಾರಾಂ ಹೊಡೆದುಕೊಂಡಿತು. ಕಣ್ಣುಬಿಟ್ಟು ನೋಡಿದರೆ ಇನ್ನೂ ಕತ್ತಲಿತ್ತು. ದಟ್ಟವಾಗಿ ಇಬ್ಬನಿ ಬೀಳುತ್ತಿತ್ತು. 'ಏಯ್, ಇಷ್ಟು ಮುಂಚೆ ಎದ್ದು ಏನ್ರೋ ಮಾಡೋದು? ಮಲಕ್ಕೊಳ್ರೋ' ಎಂದೆ ನಾನು ಗೆಳೆಯರ ಬಳಿ. ಆದರೆ ಅವರು ಬಿಡಲಿಲ್ಲ. ನಾನು ಹೊದ್ದಿದ್ದ ಬೆಡ್‍ಶೀಟನ್ನು ಕಿತ್ತುಹಾಕಿ 'ಏಳು ಸಾಕು, ಇನ್ನೇನು ಸ್ವಲ್ಪ ಹೊತ್ತಿಗೆ ಸೂರ್ಯ ಹುಟ್ಟುತ್ತಾನೆ. ಬೆಟ್ಟದ ತುದಿಗೆ ಹೋಗಬೇಕು. ಅಲ್ಲಿಗೆ ಹೋಗುವಷ್ಟರಲ್ಲಿ ಸರಿಯಾಗೊತ್ತೆ' ಅಂತಂದು ತಾವು ಬ್ಯಾಗು ರೆಡಿ ಮಾಡಲು ಶುರು ಮಾಡಿದರು. ನಿರುಪಾಯನಾಗಿ ನಾನೂ ಎದ್ದೆ. ಚಳಿಗೆ ಮೈ ಗಡಗುಟ್ಟುತ್ತಿತ್ತು. ತೊಟ್ಟಿದ್ದ ಜಾಕೀಟು ಏನಕ್ಕೂ ಸಾಲುತ್ತಿರಲಿಲ್ಲ. ಬೆಡ್‍ಶೀಟು, ರಗ್ಗುಗಳನ್ನು ಬ್ಯಾಗಿಗೆ ತುರುಕಿ ಅಲ್ಲಿಂದ ಹೊರಟೆವು.ನಾವಿದ್ದ ಜಾಗದ ಪಕ್ಕದ ಬೆಟ್ಟದಲ್ಲಿ ಆ ದೇವಸ್ಥಾನವಿರುವುದು. ಪಕ್ಕದ ಬೆಟ್ಟವೆಂದರೆ ಇದೇ ಬೆಟ್ಟ; ಆದರೆ ಒಮ್ಮೆ ಇಳಿದು ಹತ್ತಬೇಕು. ಆ ದೇವಸ್ಥಾನದಿಂದಲೂ ಮೇಲೆ ಹೋದರೆ ಅಲ್ಲಿ 'ಸನ್‍ರೈಸ್ ವ್ಯೂ ಪಾಯಿಂಟ್' ಅಂತಲೇ ಇದೆ.
ನಾವು ಅಲ್ಲಿಗೆ ಮುಟ್ಟುವಷ್ಟರಲ್ಲೇ ಆಗಸದ ಪೂರ್ವ ದಿಗಂತದಲ್ಲಿ ಬಣ್ಣಗಳ ಓಕುಳಿ ಪ್ರಾರಂಭವಾಗಿತ್ತು. ಮೋಡಗಳ ಮೇಲಿನ ಕೆಂಬಣ್ಣ 'ದಿನಕರ ಸಧ್ಯದಲ್ಲೇ ಬರುತ್ತಿದ್ದಾನೆ' ಎನ್ನುತ್ತಿತ್ತು. ನಾವೆಲ್ಲಾ ಪೂರ್ವ ದಿಕ್ಕನ್ನೇ ನಿರುಕಿಸುತ್ತಾ ರವಿಯ ಆಗಮನಕ್ಕಾಗಿ ನಿರೀಕ್ಷಿಸತೊಡಗಿದೆವು. ಕೆಲವೇ ಕ್ಷಣಗಳಲ್ಲಿ ಸೂರ್ಯ ಮೂಡಿಬಂದ. ಇಷ್ಟಿಷ್ಟೇ ಇಷ್ಟಿಷ್ಟೇ ತನ್ನ ಮುಖವನ್ನು ತೋರಿಸುತ್ತಾ ಮೇಲೇರೇ ಬರುತ್ತಿದ್ದ. ಹೊಸ ವರುಷದ ಹೊಸ ಬೆಳಗಿನ ಹೊಸ ಸೂರ್ಯನ ಹೊಸ ಕಿರಣಗಳು ನಮ್ಮ ಮೈಮೇಲೆ ಬಿದ್ದು ಹೊಸದೇ ಆದ ಪುಳಕವುಂಟಾಯಿತು. ಮೊಬೈಲ್ ಕೆಮೆರಾದಿಂದ ಫೋಟೋ ಕ್ಲಿಕ್ಕಿಸಿಕೊಂಡೆವು. ಅದೆಷ್ಟೋ ಹೊತ್ತು ಅಲ್ಲೇ ಇದ್ದೆವು. ನಂತರ ನಿಧನಿಧಾನವಾಗಿ ಬೆಟ್ಟದಿಂದ ಕೆಳಗಿಳಿಯತೊಡಗಿದೆವು.
ಮತ್ತೆ ಮಂಜ!
ಭಕ್ತಿಯಿದ್ದವರು ಗುಡಿಗೆ ಹೋಗಿ ದೇವರ ದರುಶನ ಪಡೆದು ಬಂದರು. ಗುಡಿಯ ಎದುರಿನ ಪುಷ್ಕರಿಣಿಯಲ್ಲಿನ ನೀರು ಹಿಮದಷ್ಟು ತಣ್ಣಗಿತ್ತು. ಮಧ್ಯೆ ಒಂದು ಕಡೆ ನಲ್ಲಿ ಸಿಕ್ಕಿತು. ಮುಖ ತೊಳೆದು, ಹಲ್ಲುಜ್ಜಿ 'ಫ್ರೆಶ್' ಆದೆವು. ಮತ್ತೆ ಕೆಳಗಿಳಿಯತೊಡಗಿದೆವು. ಬೆಟ್ಟದ ತಪ್ಪಲನ್ನು ಮುಟ್ಟಿದೆವು. ಆಗ ಕಂಡ ಮಂಜ!ಮತ್ತೆ ಮಂಜ! ಅದೇ ಮಂಜ! ನಿನ್ನೆ ರಾತ್ರಿ ನಮ್ಮನ್ನು ಭಯದ ಕೂಪದೊಳಕ್ಕೆ ನೂಕಿದ್ದ ಮಂಜ! ತನ್ನ ಅಣ್ಣನೊಂದಿಗೆ ಎಳನೀರಿನ ವ್ಯಾಪಾರದಲ್ಲಿ ತೊಡಗಿದ್ದ್. ನಮ್ಮನ್ನು ಕಂಡೊಡನೆ 'ಓ ಸುರೇಶಣ್ಣ... ಬನ್ನಿ ಸುರೇಶಣ್ಣ..' ಎಂದ. ನಮಗೋ ಪರಮಾಶ್ಚರ್ಯ! ಅದೇ ಮಂಜ, ರಾತ್ರಿ ನಮಗೆ ಅಷ್ಟೆಲ್ಲ ಟೆನ್ಶನ್ ಕೊಟ್ಟಿದ್ದ ಅದೇ ಮಂಜ, ಇಂದು ಈ ಮುಂಜಾವಿನಲ್ಲಿ ಹೊಸಬನೇ ಆಗಿ ಕಾಣುತ್ತಿದ್ದ. ಅವನ ಬಗ್ಗೆ ನಾವು ಕಲ್ಪಿಸಿಕೊಂಡಿದ್ದೆಲ್ಲವನ್ನೂ ನಮ್ಮ ಮನಸ್ಸು ಒಂದೇ ಕ್ಷಣದಲ್ಲಿ ತಳ್ಳಿಹಾಕಿಬಿಟ್ಟಿತು. 'ಎಳ್ನೀರು ಕುಡಿತೀರಾ ಅಣ್ಣಾ?' ಕೇಳಿದ. ಮಾತೇ ತೋಚದೆ ಬರೀ ಹೂಂಗುಟ್ಟಿದೆವು. ನಮಗೆ ತುಂಬಾ ಪ್ರೀತಿಯಿಂದ ಎಳನೀರು ಕೆತ್ತಿಕೊಟ್ಟ. ಕುಡಿಯುತ್ತಿದ್ದರೆ ಅಮೃತವನ್ನು ಕುಡಿದಂತೆನಿಸುತ್ತಿತ್ತು. ದುಡ್ಡುಕೊಟ್ಟು ಹೊರಟೆವು. 'ಮತ್ತೆ ಬನ್ರಣ್ಣ' ಎಂದು ಕೈಬೀಸಿದ ಮಂಜ.
.jpg)
ಹೊಸ ಆಶಾವಾದದೊಂದಿಗೆ ವಾಪಸ್
'ಸುಮ್‍ಸುಮ್ನೇ ಏನೇನೋ ಅಂದ್ಕೋಂಡ್ವಲ್ರೋ ಅವನ ಬಗ್ಗೆ ರಾತ್ರಿ' ಎಂದೆ ಗೆಳೆಯರ ಬಳಿ. 'ನಿಂಗೊತ್ತಿಲ್ಲ, ಇವ್ರು ಬೆಳಗ್ಗೆ ಹಿಂಗೆ ವ್ಯಾಪಾರ ಮಾಡ್ತಾರೆ. ರಾತ್ರಿ ಆ ಕೆಲಸಾನೂ ಮಾಡ್ತಾರೆ!' ಎಂದ ಸಂತೋಷ. 'ಸುಮ್ನಿರಪ್ಪ, ಹಾಗೆಲ್ಲಾ ಗೊತ್ತಿಲ್ಲದವರ ಬಗ್ಗೆ ಸುಳ್ಳು ಅಪಾದನೆ ಮಾಡಬಾರದು' ಎಂದೆ. 'ಆದ್ರೂ ಅವನು ನಿನ್ನೆ ರಾತ್ರಿ....' ಗೆಳೆಯನ ಅನುಮಾನ ಇನ್ನೂ ಹೋಗಿರಲಿಲ್ಲ. ಅದಕ್ಕೆ ನಾನು, 'ಇರಲಿ ಬಿಡ್ರೋ, ಅವನು ನಿಜವಾಗಿಯೂ ಏನಾಗಿದ್ರೆ ನಮಗೇನು? ನಾವು ಅವನನ್ನು ಒಳ್ಳೆಯವನು ಅಂತಲೇ ತೀರ್ಮಾನಿಸೋಣ. ಹೊಸವರ್ಷದಲ್ಲಿ ಮತ್ತಷ್ಟು ಹೆಚ್ಚು ಆಶಾವಾದಿಗಳಾಗೋಣ' ಎಂದೆ.
.jpg)
ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ನಿನ್ನೆ ಕಂಡಿದ್ದ ಅಜ್ಜಿ ಕಾಣಿಸಿತು. ಅಜ್ಜಿ ನಮ್ಮನ್ನು ಕಂಡದ್ದೇ ಕೈ ಮುಗಿಯಿತು. ನಾವು ಅಜ್ಜಿಯ ಬಳಿ 'ನೀನ್ಯಾಕೆ ಕೈ ಮುಗಿತೀಯಾ ಅಜ್ಜಿ.. ನಾವು ಮುಗೀಬೇಕು ನಿಂಗೆ' ಎಂದೆವು. ಅಜ್ಜಿಗೆ ಒಂದಷ್ಟು ದುಡ್ಡು ಕೊಟ್ಟೆವು. ಹೊಸ ಆಶಾವಾದದೊಂದಿಗೆ, ಹೊಸ ಹುರುಪಿನೊಂದಿಗೆ ಬೆಂಗಳೂರಿನ ಬಸ್ಸು ಹತ್ತಿದೆವು.
Friday, December 29, 2006
ಹೊಸ ವರ್ಷದ ಶುಭಾಶಯ

"ಏಯ್... ಎರಡ್ಸಾವ್ರದ ಆರು ಹೋಗುತ್ತಿದೆ.. ಟಾಟಾ ಮಾಡು ಬಾರೇ..."
"ಎಲ್ಲೇ?"
"ಅದೇ.... ಅಲ್ಲಿ....!"
"ಓಹ್... ಹೊರಟೇಬಿಡ್ತಾ? ನಿನ್ನೆ ಮೊನ್ನೆ ಬಂದಂಗಿತ್ತಲ್ಲೇ.."
"ಬಂದಿದ್ದೂ ಆಯ್ತು ಹೊರಟಿದ್ದೂ ಆಯ್ತು; ಬೇಗಬೇಗ ಟಾಟಾ ಮಾಡೇ..."
* * *
ಧಾನ್ಯ ದಾಸ್ತಾನಿನ ಗೋಡೌನಿನಲ್ಲಿ ಬಂದಿಯಾಗಿದ್ದ ಹೆಗ್ಗಣವೊಂದು ಗೋಡೆಯಲ್ಲಿ ದೊಡ್ಡದೊಂದು ಕನ್ನ ಕೊರೆಯುತ್ತಿದೆ.. ಬೇಗ ಬೇಗ ಕೊರೆ ದೊಡ್ಡಿಲಿಯೇ: ಹೊಸ ವರ್ಷ ಬರುತ್ತಿದೆ...
ಎರಡು ಬಾರಿ ಕೆಮ್ಮಿ, ಗಂಟಲನ್ನು ಶ್ರುತಿಗೊಳಿಸಿ, ಹಾಡಲು ಕುಳಿತಿದ್ದಾನೆ ಗಾಯಕ.. ಪಲ್ಲವಿ ಮುಗಿದು, ಅನುಪಲ್ಲವಿ ಮುಗಿದು, ಇದು ಎಷ್ಟನೇ ಚರಣ..? ಬೇಗ ಬೇಗ ಹಾಡು ಗೆಳೆಯಾ: ಹೊಸ ವರ್ಷ ಬರುತ್ತಿದೆ...
ಮಗುವನ್ನು ಕಾಲ ಮೇಲೆ ಹಾಕಿಕೊಂಡು, 'ಉಶ್‍ಶ್‍ಶ್‍ಶ್ಶ್...' ಎನ್ನುತ್ತಾ ಕುಳಿತಿದ್ದಾಳೆ ತಾಯಿ; ಉಚ್ಚೆಯನ್ನೇ ಮಾಡುತ್ತಿಲ್ಲ ಪಾಪು! ಬೇಗ ಬೇಗ ಉಚ್ಚೆ ಮಾಡು ಮಗೂ: ಹೊಸ ವರ್ಷ ಬರುತ್ತಿದೆ...
ದನದ ಕೆಚ್ಚಲಿಗೆ ನೀರು ಸೋಕಿ, ಮೊಲೆಗಳನ್ನು ತೊಳೆದು, ದೊಡ್ಡ ಕೌಳಿಗೆಯನ್ನಿಟ್ಟುಕೊಂಡು ಕುಳಿತಿದ್ದಾನೆ ಅಪ್ಪ.. ಸೊರೆಯುತ್ತಲೇ ಇಲ್ಲ ದನ! ಬೇಗ ಬೇಗ ಹಾಲು ಕೊಡು ದನವೇ: ಹೊಸ ವರ್ಷ ಬರುತ್ತಿದೆ...
ನ್ಯಾಲೆಯ ಮೇಲೆ ಬಟ್ಟೆಗಳನ್ನು ನೇತುಹಾಕಿ, ಒಣಗುವುದನ್ನೇ ಕಾಯುತ್ತಾ ಕುಳಿತಿದ್ದಾನೆ ರೂಂಮೇಟ್.. ಅಂಡರ್ ವೇರ್ ಒಣಗುವುದಂತೂ ಯಾವಾಗಲೂ ಲೇಟ್! ಬೇಗ ಒಣಗು ಚಡ್ಡಿಯೇ: ಹೊಸ ವರ್ಷ ಬರುತ್ತಿದೆ...
ಶಾಪಿಂಗಿಗೆ ಹೋದ ಗೆಳೆಯ ಸ್ವೀಟು, ಕೇಕು, ಪಟಾಕಿ.. ಎಲ್ಲಾ ತಂದಿದ್ದಾನೆ. ಆದರೆ ಹೊಸ ಕ್ಯಾಲೆಂಡರು ತರುವುದನ್ನೇ ಮರೆತುಬಿಟ್ಟಿದ್ದಾನೆ! ಮತ್ತೆ ಓಡಿಸಿಯಾಗಿದೆ ಪೇಟೆಯೆಡೆಗೆ. ಬೇಗ ಬಾ ಗೆಳೆಯಾ: ಹೊಸ ವರ್ಷ ಬರುತ್ತಿದೆ...
ಭಟ್ಟರು ಗಂಧ ತೇಯ್ದು, ದೇವರನ್ನು ತೊಳೆದು, ಹೂವೇರಿಸಿ, ಕುಂಕುಮ-ಅರಿಶಿನ ಹಚ್ಚಿ, ಊದುಬತ್ತಿ ಬೆಳಗಿ, ಕಾಯಿ ಓಡೆದು, ನೈವೇದ್ಯ ಮಾಡಿ.... ಅಯ್ಯೋ, ಅವೆಲ್ಲಾ ಇರಲಿ ಭಟ್ರೇ, ಬೇಗ ಮಂಗಳಾರತಿ ಮಾಡಿ: ಹೊಸ ವರ್ಷ ಬರುತ್ತಿದೆ...
* * *
ಅಗೋ.... ಹೊಸ ವರ್ಷ ಬಂದೇಬಿಟ್ಟಿತು..! ಕೊರೆದೂ ಕೊರೆದು ಕೊನೆಗೂ ಗೋಡೆಯಲ್ಲೊಂದು ಸಣ್ಣ ಕಿಂಡಿಯನ್ನು ಮಾಡಿಯೇಬಿಟ್ಟಿದೆ ಹೆಗ್ಗಣ. ಆ ಸಣ್ಣ ಕಿಂಡಿಯಿಂದಲೇ ತೂರಿ ಬರುತ್ತಿದೆ ಹೊಸ ವರ್ಷದ ಆಶಾಕಿರಣ; ಹೊಸ ಬೆಳಕು. ಮಗು ಹಾರಿಸಿದ ಉಚ್ಚೆ ಇಡೀ ಭುವಿಯನ್ನೇ ಒದ್ದೆ ಮಾಡಿದೆ. ಕೌಳಿಗೆ ತುಂಬಿದರೂ ಮುಗಿದಿಲ್ಲ ದನದ ಕೆಚ್ಚಲಿನ ಹಾಲು. ಅಪ್ಪ ಕೂಗುತ್ತಿದ್ದಾನೆ: 'ಏಯ್, ಇನ್ನೊಂದು ಗಿಂಡಿ ತಗಂಬಾರೇ..' ಅಮ್ಮ ಅಡುಗೆ ಮನೆಯಿಂದಲೇ ಉತ್ತರಿಸುತ್ತಿದ್ದಾಳೆ: 'ಸಾಕು ನಮಗೆ; ಉಳಿದಿದ್ದನ್ನು ಕರುವಿಗೆ ಬಿಡಿ.' ಒಣಗಿದ ಚಡ್ಡಿಯ ಮೇಲೆ ಹೊಸ ಪ್ಯಾಂಟೇರಿಸುತ್ತಿದ್ದಾನೆ ರೂಂಮೇಟ್. ಗೆಳೆಯನಂತೂ ಓಡೋಡಿ ಬರುತ್ತಿದ್ದಾನೆ. ಅವನ ಕೈಯಲ್ಲಿ ಪೂರ್ತಿ ಮುನ್ನೂರಾ ಅರವತ್ತೈದು ದಿನಗಳುಳ್ಳ ಕ್ಯಾಲೆಂಡರಿದೆ. ದೇವರಿಗೇ ಆಶ್ಚರ್ಯವಾಗುವಷ್ಟು ದಕ್ಷಿಣೆ ಬಿದ್ದಿದೆ ಭಟ್ಟರ ಮಂಗಳಾರತಿ ಹರಿವಾಣದಲ್ಲಿ.
ಎಲ್ಲರಿಗೂ ಖುಷಿ; ಎಲ್ಲರಿಗೂ ಸಂಭ್ರಮ; ಎಲ್ಲರಿಗೂ ಸಡಗರ.. ಏಕೆಂದರೆ, ಹೊಸ ವರ್ಷ ಬಂದಿದೆ! ಈ ಮಧ್ಯೆ, ಹಾಡುತ್ತಿರುವವನನ್ನು ಎಲ್ಲರೂ ಮರೆತೇ ಬಿಟ್ಟಿದ್ದಾರೆ. ಆತ ಹಾಡುವುದನ್ನು ಒಂದು ಕ್ಷಣ ನಿಲ್ಲಿಸಿಬಿಟ್ಟಿದ್ದಾನೆ. ತಕ್ಷಣ ಎಲ್ಲರಿಗೂ ಅರಿವಾಗಿದೆ. ಎಲ್ಲಾ ಅವನ ಬಳಿ ಹೋಗಿ ಹೇಳುತ್ತಿದ್ದಾರೆ:
"ಹಾಡು ಗೆಳೆಯಾ, ಮುಂದುವರೆಸು. ಹಾಡು ಹಳೆಯದಾದರೇನು, ಭಾವ ಹೊಸತಿದ್ದರೆ ಸಾಕು.."
ಹೊಸ ವರ್ಷದ ಹೊಸ ಕ್ಯಾಲೆಂಡರು ನಿಮ್ಮ ಬದುಕಿನ ಹಾಡಿಗೆ - ಹಾದಿಗೆ ಹೊಸ ಭಾವ ಬೆರೆಸಲಿ ಎಂದು ಹಾರೈಸುತ್ತೇನೆ.
ನೂತನ ವರ್ಷದ ಶುಭಾಶಯಗಳು.
Monday, December 18, 2006
ಹೊಸ ವರ್ಷದ ಆಶಯ
ನಿನ್ನೆ ರಾತ್ರಿಯ ಕನಸಿನಲ್ಲಿ ಹೊಸವರ್ಷ ಬಂದಿತ್ತು.
ನಾನು ಸುಳ್ಳು ಹೇಳ್ತಿದೀನಿ, ನಾಟಕ ಮಾಡ್ತಿದೀನಿ ಅಂದ್ಕೊಂಡ್ರೇನು? ಇಲ್ರೀ, ನಿಜವಾಗಿಯೂ ಬಂದಿತ್ತು. ನನಗೆ ಆನಂದಾಶ್ಚರ್ಯಗಳು ಒಟ್ಟಿಗೇ ಆದ್ವು. ಒಂಥರಾ ದಿಗ್ಭ್ರಮೆ. ಇದೇನು ನನಸೋ ಕನಸೋ ಅಂತ ಗೊಂದಲ.
ನಾನು ಹೊಸವರ್ಷದ ಬಳಿ ಕೇಳಿದೆ, 'ಇದೇನಿದು, ಇಷ್ಟು ಮುಂಚೆ ಬಂದ್ಬಿಟ್ಯಲ್ಲ?' ಅಂತ. ಅದಕ್ಕೆ ಹೊಸವರ್ಷ 'ಅದಕ್ಕೇನೀಗ? ಏನೋ ಒಂದೆರಡು ವಾರ ಮುಂಚೆ ಬಂದಿದೀನಿ. ಬೆಂಗಳೂರಿನಲ್ಲಿ ಭಯಂಕರ ಟ್ರಾಫಿಕ್ಕು ಅಂತ ಕೇಳಿದ್ದೆ. ಹಾಗಾಗಿ ಸ್ವಲ್ಪ ಮುಂಚೇನೇ ಹೊರಟುಬಿಟ್ಟೆ. ಆದ್ರೆ ಮಜಾ ನೋಡು, ನಂಗೆ ಎಲ್ಲೂ ಟ್ರಾಫಿಕ್ಕೇ ಸಿಗಲಿಲ್ಲ! ಹಾಗಾಗಿ... ಹೆಹ್ಹೆ! ಲೇಟಾಗಿ ಬರೋದಕ್ಕಿಂತ ಮುಂಚೆ ಬಂದಿರೋದು ಒಳ್ಳೇದಲ್ವಾ?' ಎಂದು ಹೇಳಿ ಪ್ಯಾಲಿ ನಗೆಯಾಡಿತು.
ಆದರೆ ನನಗೆ ಕೋಪ ಬಂತು. 'ಛೇ! ನೀನು ಇಷ್ಟು ಬೇಗ ಬರ್ತೀಯ ಅಂತ ಗೊತ್ತಿರ್ಲಿಲ್ಲ. ನಾನು ನಿನ್ನನ್ನು ಸ್ವಾಗತಿಸಲಿಕ್ಕೇಂತ ಎಷ್ಟು ತಯಾರಿ ಮಾಡ್ಕೊಂಡಿದ್ದೆ ಗೊತ್ತಾ? ಎಲ್ಲಾ ಹಾಳು ಮಾಡಿಬಿಟ್ಟೆ' ಅಂತ ಬೈದೆ. ಅದಕ್ಕೆ ಹೊಸವರ್ಷ, 'ಹೌದಾ? ಏನೇನು ತಯಾರಿ ಮಾಡ್ಕೊಂಡಿದ್ದೆ?' ಅಂತ ಕೇಳ್ತು. ನಾನೆಂದೆ: 'ಈ ವರ್ಷ ಇಯರೆಂಡನ್ನು ಗ್ರಾಂಡ್ ಆಗಿ ಆಚರಿಸ್ಬೇಕೂಂತ ಮೈಸೂರ್ ರೋಡಲ್ಲಿ ಒಂದು ರೆಸಾರ್ಟ್‍ಗೆ ಬುಕ್ ಮಾಡಿದ್ವಿ ನಾನೂ ನನ್ನ ಫ್ರೆಂಡ್ಸೂ. ಥರ್ಟಿಫಸ್ಟ್ ಇವನಿಂಗೇ ಅಲ್ಲಿಗೆ ಹೋಗಿ, ಎರಡು ಲಾರ್ಜ್ ವ್ಹಿಸ್ಕಿ ಆರ್ಡರ್ ಮಾಡಿ, ಅದರಳೊಗೆ ಐಸನ್ನು ಕರಗಿಸಿ, ನಿಧನಿಧಾನವಾಗಿ ಹೀರ್ತಾ... ತೇಲಿ ಬರೋ ವೆಸ್ಟರ್ನ್ ಮ್ಯೂಸಿಕ್ಕಿನಲ್ಲಿ ಒಂದಾಗ್ತಾ... ಸುಂದರ ಸ್ಲೀವ್‍ಲೆಸ್ ಹುಡುಗೀರ ಜೊತೆ ಡಾನ್ಸ್ ಮಾಡ್ತಾ... ಆಹಾ! ಅದರಲ್ಲಿರೋ ಮಜಾ ನಿಂಗೇನು ಗೊತ್ತು? ಗಡಿಯಾರದ ಮುಳ್ಳು ಹನ್ನೆರಡನ್ನು ಮುಟ್ಟುತ್ತಿದ್ದಂತೆಯೇ ಎಲ್ಲರೂ 'ಹೋ' ಎಂದು ಜೋರಾಗಿ ಕೂಗಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ, ಎಲ್ರೂ ಎಲ್ರಿಗೂ 'ಹ್ಯಾಪಿ ನ್ಯೂ ಇಯರ್' ಹೇಳಿ, ತಬ್ಕೊಂಡು..... ಓಹ್! ನಮ್ಮ ಯೋಜನೆಗಳನ್ನೆಲ್ಲಾ ಹಾಳು ಮಾಡಿಬಿಟ್ಟೆ' ಅಂದೆ.
ನನ್ನ ಮಾತನ್ನು ಕೇಳಿ ಹೊಸವರ್ಷ ನಸು ನಕ್ಕಿತು. ಅದರ ನಗು ನನಗೆ ವ್ಯಂಗ್ಯಭರಿತವಾಗಿದ್ದಂತೆ, ಒಂಥರಾ ನಿಗೂಢವಾಗಿದ್ದಂತೆ ಅನ್ನಿಸಿತು. 'ಅಲ್ಲಿಂದ ನಡಕೊಂಡು ಬಂದಿದೀನಿ. ಸುಸ್ತಾಗಿದೆ. ತಣ್ಣಗೆ ಒಂದು ಸ್ನಾನ ಮಾಡಿ ಬರ್ತೀನಿ. ನಿನ್ನ ಹತ್ರ ಸ್ವಲ್ಪ ಮಾತಾಡೋದಿದೆ, ಕೂತಿರು' ಅಂತಂದು ಹೊಸವರ್ಷ ನನ್ನ ಟವೆಲನ್ನು ಎತ್ತಿಕೊಂಡು ಬಾತ್‍ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿತು. ನಾನು ತಕ್ಷಣ ಮೊಬೈಲೆತ್ತಿಕೊಂಡು ಗೆಳೆಯರಿಗೆಲ್ಲ ಫೋನ್ ಮಾಡಿ 'ಅಯ್ಯೋ ಕೆಲಸ ಕೆಟ್‍ಹೋಯ್ತು ಕಣ್ರೋ.. ಹೊಸವರ್ಷ ಆಗಲೇ ಬಂದುಬಿಟ್ಟಿದೆ. ರೆಸಾರ್ಟಿಗೆ ಬುಕ್ ಮಾಡಿದ್ದೆಲ್ಲಾ ಕ್ಯಾನ್ಸೆಲ್ ಮಾಡ್ಸಿ. ಪಟಾಕಿ ತಗೋಳ್ಲಿಕ್ಕೆ ಹೋಗ್ಬೇಡಿ' ಅಂತೆಲ್ಲಾ ಅಂದೆ. ಗೆಳೆಯರು 'ಯಾಕೋ ಹುಚ್ಚು-ಗಿಚ್ಚು ಹಿಡಿದಿದೆಯೇನೋ?' ಅಂತ ಗೇಲಿ ಮಾಡಿ ನಕ್ಕುಬಿಟ್ಟರು. ಇವರಿಗೆ ಹೇಗೆ ಅರ್ಥ ಮಾಡಿಸಬಹುದು ಅಂತಲೇ ನನಗೆ ತಿಳಿಯಲಿಲ್ಲ. ಅಷ್ಟರಲ್ಲಿ ಹೊಸವರ್ಷದ ಸ್ನಾನ ಮುಗಿದು, ಬಾತ್‍ರೂಮಿನಿಂದ ಹೊರಬಂತು. ನಾನು ಫೋನ್ ಕಟ್ ಮಾಡಿ, ಹುಳ್ಳಹುಳ್ಳಗೆ ನಗೆಯಾಡುತ್ತಾ, ಯಥಾಸ್ಥಾನದಲ್ಲಿ ಕುಳಿತೆ.
ಹೊಸವರ್ಷ ನನ್ನ ಎದುರಿಗೆ ಬಂದು ಕುಳಿತುಕೊಂಡು ಮಾತನಾಡಲಾರಂಭಿಸಿತು: 'ನೋಡು ಗೆಳೆಯಾ, ಈ ತರಹದ ಆಡಂಭರಗಳೆಲ್ಲ ನಿಮ್ಮಂಥವರಿಗೆ ಮಾತ್ರ. ಫೂಟ್‍ಪಾತಿನ ಮೇಲೆ ಸೆಕೆಂಡ್ಸ್ ಮಾರುವವರು, ಮೆಜೆಸ್ಟಿಕ್ಕಿನ ಫ್ಲೈಓವರಿನ ಮೇಲೆ ಬ್ಯಾಟರಿ, ಕೀಚೈನು, ಮೊಬೈಲ್ ಕವರ್ರು, ಕರ್ಚೀಫು, ಬೂಟಿನ ಹಿಮ್ಮಡ, ಬೇಯಿಸಿದ ಮೊಟ್ಟೆ, ಕಡಲೆಕಾಯಿಗಳನ್ನು ಮಾರುವವರನ್ನು ಹೋಗಿ ನೋಡು. ಕೆ.ಆರ್. ಮಾರ್ಕೆಟ್ಟಿನ ಇಕ್ಕಟ್ಟಿನಲ್ಲಿ ತರಕಾರಿ ಮಾರುವವರನ್ನು ನೋಡು. ಹೋಟೆಲ್ಲುಗಳಲ್ಲಿ ಟೇಬಲ್ ಕ್ಲೀನ್ ಮಾಡುವ ಹುಡುಗರನ್ನು ನೋಡು. ಕಸ ಎತ್ತುವ, ಚರಂಡಿ ದುರಸ್ಥಿ ಮಾಡುವ ಕಾರ್ಪೋರೇಷನ್ ಕೆಲಸಗಾರನ್ನು ನೋಡು. ಅವರುಗಳ ಬಳಿ ಹೋಗಿ ಕೇಳು: 'ನೀವು ಹೊಸವರ್ಷವನ್ನು ಹೇಗೆ ಸ್ವಾಗತಿಸುತ್ತೀರಿ?' ಅಂತ. ಅವರು ಜೋರಾಗಿ ನಕ್ಕುಬಿಡುತ್ತಾರೆ. ಅವರು ನಿಮ್ಮಂತೆ ರೆಸಾರ್ಟುಗಳಲ್ಲಿ ಚಿಲ್ಡ್ ಬಿಯರ್ ಕುಡಿಯುವವರಲ್ಲ, ಕೇಕ್ ಕತ್ತರಿಸುವವರಲ್ಲ, ರಾಕೆಟ್ಟುಗಳನ್ನು ಹಾರಿಸಿ 'ಹೋ' ಎಂದು ಕೂಗುವವರಲ್ಲ. ಹೊಸವರ್ಷದ ದಿನ ಅವರ ಮನೆಯಲ್ಲಿ ಸ್ವೀಟ್ ಮಾಡುವುದಿಲ್ಲ. ಅವರು ಹೊಸವರ್ಷಕ್ಕೇಂತ ಕ್ಯಾಲೆಂಡರು ಸಹ ಕೊಳ್ಳುವುದಿಲ್ಲ. ನಿನಗೆ ಗೊತ್ತಾ ಬ್ರದರ್, ನೀನು ಹೊಸವರ್ಷದ ಸಂಭ್ರಮಕ್ಕೆಂದು ಖರ್ಚು ಮಾಡುವ ಹಣವನ್ನು ಒಬ್ಬೊಬ್ಬರಿಗೆ ಒಂದೊಂದು ರೂಪಾಯಿಯಂತೆ ಹಂಚುತ್ತಾ ಬಂದರೂ ಸಾಕಾಗದಷ್ಟು ಭಿಕ್ಷುಕರು ಬರೀ ಈ ಬೆಂಗಳೂರಿನಲ್ಲಿದ್ದಾರೆ...'
ನಾನು ಸುಮ್ಮನೆ ತಲೆ ತಗ್ಗಿಸಿ ಕುಳಿತಿದ್ದೆ. ಏನೋ ತಪ್ಪು ಮಾಡಲು ಹೊರಟಿದ್ದ ನನ್ನನ್ನು ತಡೆದಂತಾಯಿತು. ನನ್ನ ಕೋಪ, ಆವೇಶ, ಅಸಮಾಧಾನಗಳೆಲ್ಲಾ ತಣ್ಣಗಾಗಿದ್ದವು. 'ಹಾಗಾದರೆ ನನ್ನನ್ನು ಈಗ ಏನು ಮಾಡು ಅಂತೀಯಾ?' ತಗ್ಗಿದ ದನಿಯಲ್ಲಿ ಕೇಳಿದೆ.
'ಅದನ್ನೂ ನಾನೇ ಹೇಳಬೇಕಾ?' ಎಂದು ಹೊಸವರ್ಷ ಎದ್ದು ನಿಂತಿತು. 'ಅರೆ, ತಾಳು ಹೊರಡಬೇಡ...' ಅಂದೆ. 'ಇಲ್ಲ, ನಾನು ಹೊರಟೆ. ನಿನ್ನಂತಹ ಇನ್ನೊಂದಿಷ್ಟು ಜನರಿಗೆ ಇದೇ ಮಾತುಗಳನ್ನು ಹೇಳಬೇಕಿದೆ. ನೀನೂ ನಿನ್ನ ಗೆಳೆಯರಿಗೆ ತಿಳಿಹೇಳು. ಮತ್ತೆ ಸಿಗೋಣ. ಒಂದನೇ ತಾರೀಖು ಬರ್ತೀನಲ್ಲ!' ಎಂದು ಹೇಳಿ ಹೊರಟೇಬಿಟ್ಟಿತು. 'ಏ.. ನಿಲ್ಲು..' ಅಂತ ನಾನು ಕೂಗಿಕೊಂಡೆ.
ನನಗೆ ತಟ್ಟನೆ ಎಚ್ಚರಾಯಿತು. ದಢಬಡಿಸಿ ಎದ್ದು ಕುಳಿತೆ. ಕಿಟಕಿಯಲ್ಲಿ ಹೊಸ ಬೆಳಗಿನ ಬಿಸಿಲು ಕಾಣಿಸಿತು. ಕ್ಯಾಲೆಂಡರು ನೋಡಿದೆ: ಇನ್ನೂ ಡಿಸೆಂಬರಿನಲ್ಲಿಯೇ ಇತ್ತು. ಗಡಿಯಾರ ನೋಡಿದೆ: ಏಳು ಗಂಟೆಯನ್ನೂ ದಾಟಿ ಓಡುತ್ತಿತ್ತು ಮುಳ್ಳು.
[ಈ ಲೇಖ, 'ವಿಕ್ರಾಂತ ಕರ್ನಾಟಕ ' ಪತ್ರಿಕೆಯ ಈ ವಾರದ (22.12.2006) ಸಂಚಿಕೆಯಲ್ಲಿ ಪ್ರಕಟವಾಗಿದೆ. ಅವರಿಗೆ ನನ್ನ ಕೃತಜ್ಞತೆಗಳು.]

Subscribe to:
Posts (Atom)