ಓಡುತ್ತಿರುವ ಬಸ್ಸುಗಳು ಕಾರುಗಳು ಬೈಕುಗಳು ಎಲ್ಲಾ ಕೆಂಪು ಸಿಗ್ನಲ್ಲು ಬೀಳುತ್ತಿದ್ದಂತೆ ಗಕ್ಕನೆ brake ಹೊಡೆದು ಒಂದು ಕ್ಷಣದ ಮಟ್ಟಿಗೆ ನಿಲ್ಲುತ್ತವೆ. ಹಾಗೆ ಅವು ನಿಲ್ಲುತ್ತಿದ್ದಂತೇ ಕೌಂಟ್ಡೌನ್ ಶುರುವಾಗುತ್ತದೆ. ಎಂಬತ್ತು, ಎಪ್ಪತ್ತೊಂಬತ್ತು, ಎಪ್ಪತ್ತೆಂಟು, ಎಪ್ಪತ್ತೇಳು, ಎಪ್ಪತ್ತಾರು.... ಅದು ಮೂರು, ಎರಡು, ಒಂದು, ಸೊನ್ನೆಯಾದ ಮೇಲೆ ಹಸಿರು ಬಣ್ಣದ ದೀಪ ಹೊತ್ತಿಕೊಳ್ಳುತ್ಥದೆ. ಅಷ್ಟರವರೆಗೆ ಕಾಯುವುದೇ ಇದೆ ರಗಳೆ.
ಕೆಲವರು ತಮ್ಮ ವೆಹಿಕಲ್ಲನ್ನು off ಮಾಡಿದ್ದಾರೆ. ಇನ್ನು ಕೆಲವರು ಹಾಗೇ ನಿಲ್ಲಿಸಿಕೊಂಡಿದ್ದಾರೆ. ಎಲ್ಲೈಸಿ ಏಜೆಂಟ್ ಕಾಮತ್ತರ ಗಾಡಿ ಅದೆಷ್ಟೇ brake ಹೊಡೆದರೂ ನಿಲ್ಲದೇ, ಸ್ಕೂಟರಿನ ಮುಂದಿನ ಗಾಲಿ ಎದುರುಗಡೆ ನಿಂತಿದ್ದ ಬಿಎಂಟೀಸಿ ಬಸ್ಸಿನ ಅಡಿಗೇ ಹೋಗಿಬಿಟ್ಟಿದೆ. 'ಇನ್ನೊಂದು ಸ್ವಲ್ಪ ಮುಂದೆ ಹೋಗಿದ್ದಿದ್ರೆ ಹ್ಯಾಂಡಲು ಹೋಗಿ ಬಸ್ಸಿಗೆ ಗುದ್ದೇ ಬಿಟ್ಟಿರೋದು, ಸಧ್ಯ!' ಅಂದ್ಕೊಂಡಿದಾರೆ ಕಾಮತರು. ಹಿಂದಕ್ಕಾದರೂ ತಗೊಳ್ಳಾಣಾಂದ್ರೆ ಕಾರೊಂದು ಬಂದು ಇವರ ಸ್ಕೂಟರಿನ ಹಿಂದೇ, ಒಂದೇ ಒಂದು ಇಂಚು ಗ್ಯಾಪು ಕೊಟ್ಟು ನಿಂತಿದೆ. 'ಅಯ್ಯೋ, ಈ ಬಸ್ಸಿನವನು ಸೀದಾ ಮುಂದೆ ಹೋದ್ರೆ ಸಾಕಿತ್ತು. ಒಂಚೂರು ಹಿಂದೆ ಬಂದ್ರೂ ನಂಗೆ ಗ್ರಾಚಾರ ತಪ್ಪಿದ್ದಲ್ಲ...' -ಕಾಮತರು ಮನಸ್ಸಿನಲ್ಲೇ ದೇವರನ್ನು ನೆನೆಯುತ್ತಿದ್ದಾರೆ.
ಮುಂದೆ, ಸಿಗ್ನಲ್ ಬ್ರೇಕ್ ಮಾಡಿ ಗಾಡಿ ಓಡಿಸಿದ್ದಕ್ಕಾಗಿ ಕಾಲೇಜು ಹುಡುಗನೊಬ್ಬನನ್ನು ಟ್ರಾಫಿಕ್ ಪೋಲೀಸ್ ಹಿಡಿದುಕೊಂಡು ದಂಡ ವಸೂಲಿ ಮಾಡುತ್ತಿದ್ದಾನೆ. ಅವನ ಬೆನ್ನಿಗೆ ಕಚ್ಚಿಕುಳಿತ ಹುಡುಗಿ ಬೆಪ್ಪುತಕಡಿಯಂತೆ ಆ ಪೋಲೀಸನ ಟೋಪಿಯನ್ನೇ ನೋಡುತ್ತಿದ್ದಾಳೆ.
ಜೀಬ್ರಾಲೈನಿಗೆ ಸರಿಯಾಗಿ brake ಹೊಡೆದು ನಿಲ್ಲಿಸಿಕೊಂಡಿರುವ ಗಾಡಿಯಲ್ಲಿ ಕುಳಿತ ಮಾರ್ಕೆಟಿಂಗ್ ವೃತ್ತಿಯಲ್ಲಿರುವ ಅಭಿಜಿತ್ ತನ್ನ ಹೆಲ್ಮೆಟ್ಟಿನ ಕಿಟಕಿಯಿಂದಲೇ ರೋಡ್ ಕ್ರಾಸ್ ಮಾಡುತ್ತಿರುವ ಹುಡುಗಿಯನ್ನು ನೋಡುತ್ತಿದ್ದಾನೆ. ಕೊಳಕಾದ, ಹರುಕು ಅಂಗಿಯ, ಕೈಯಲ್ಲೊಂದು ದೇವರ ಫೋಟೋ ಹಿಡಿದು ದುಡ್ಡು ಕೇಳಲು ಬರುತ್ತಿರುವ ಹುಡುಗನನ್ನು ಕಂಡದ್ದೇ, ಹಸಿರು ಲಾನ್ಸರ್ ಕಾರಿನ ಕಿಟಕಿಯ ಅಪಾರದರ್ಶಕ ಗಾಜು ಮೇಲಕ್ಕೆ ಸರಿದಿದೆ.
ಬಿಎಂಟೀಸಿ ಬಸ್ಸಿನಲ್ಲಿ ಕುಳಿತ ಜನ ಆಕಳಿಸುತ್ತಾ ಕಿಟಿಕಿಯಾಚೆಗೆ ತಲೆಹಾಕಿ ಇನ್ನೂ ಎಷ್ಟು ಸೆಕೆಂಡು ಬಾಕಿಯಿದೆ ಅಂತ ನೋಡುತ್ತಿದ್ದಾರೆ. ಇನ್ನೇನು ಮುಗೀತಾ ಬಂತು; ಆಗಲೇ ನಲವತ್ತೊಂಬತ್ತು, ನಲವತ್ತೆಂಟು, ನಲವತ್ತೇಳು... ಇನ್ನು ಸ್ವಲ್ಪ ಹೊತ್ತು; ಬಸ್ಸು start ಆಗಿ ಬಿಡುತ್ತದೆ.
ಕೈನೆಟಿಕ್ಕಿನ ಹುಡುಗಿ ತನ್ನ ಕೊರಳಲ್ಲಿ ನೇತುಹಾಕಿಕೊಂಡಿರುವ ಮೊಬೈಲನ್ನು ಕೈಗೆತ್ತಿಕೊಂಡು 'missed call' ಯಾರದ್ದು ಅಂತ ನೋಡುತ್ತಿದ್ದಾಳೆ. ಮೊಳಕೈ ತುಂಬಾ ಯಾವ್ಯಾವುದೋ ವೃತ್ತಪತ್ರಿಕೆ, ವಾರಪತ್ರಿಕೆ, ಮ್ಯಾಗಜೀನುಗಳನ್ನು ಜೋಲಿಸಿಕೊಂಡ ಕುಡಿಮೀಸೆಯ ಯುವಕ ಕಾರಿನ ಕಿಟಕಿ, ಆಟೊರಿಕ್ಷಾಗಳ ಅಕ್ಕಪಕ್ಕ ಎಲ್ಲಾ ಓಡಾಡುತ್ತಿದ್ದಾನೆ. ಇನ್ನೊಂದು ಸ್ವಲ್ಪ ಹೊತ್ತಿಗೇ ಇವತ್ತಿನ 'ಸಂಜೆವಾಣಿ' ರಿಲೀಸ್ ಆಗುತ್ತದೆ. ಆಗ ಈ ಯುವಕ, ಕೈ ತುಂಬಾ ಸಂಜೆವಾಣಿಗಳನ್ನೇ ತುಂಬಿಕೊಂಡು, 'ಬಿಸಿ ಬಿಸೀ ಸುದ್ಧಿ...' ಅಂತ ಕೂಗುತ್ತಾ ಓಡಾಡುತ್ತಾನೆ. ಅದರಲ್ಲಿದ್ದುದು ಬಿಸೀ ಸುದ್ಧಿಯೇ ಆಗಿದ್ದಲ್ಲಿ ಇವತ್ತು ರಾತ್ರಿ ಅವನ ಹೊಟ್ಟೆಗೆ ಊಟ ಸಿಕ್ಕುತ್ತದೆ; ಅದಿಲ್ಲದಿದ್ದರೆ ಇಲ್ಲ.
ಸಿಗ್ನಲ್ಲು ಮುಗಿಯುತ್ತಿದೆ: ಅಗೋ, ಆಗಲೇ ಹದಿನೆಂಟು, ಹದಿನೇಳು.... ಉಹೂಂ, ಇನ್ನೂ ಪಾಪ್ ಮ್ಯೂಸಿಕ್ ಹಾಕಿಕೊಂಡು ಕಾರೊಳಗೆ ಕುಳಿತಿರುವ software engineerನ ಸಿಗರೇಟು ಮುಗಿದಿಲ್ಲ. ಅವನು ಬಿಟ್ಟ ಹೊಗೆ ಕಾರೊಳಗೆಲ್ಲಾ ತುಂಬಿಕೊಂಡಿದೆ.
ಅರೆ! ಸಿಗ್ನಲ್ಲು ಮುಗಿಯುತ್ತಿದೆ.. ಒಂಬತ್ತು, ಎಂಟು, ಏಳು... ಎಲ್ಲಾ ತಮ್ಮ ವೆಹಿಕಲ್ಲನ್ನು ಸ್ಟಾರ್ಟ್ ಮಾಡುತ್ತಿದ್ದಾರೆ.. ಇಲ್ಲ, 'ತಾಯಿಯ ಆಶೀರ್ವಾದ' ಎಂಬ ಬೋರ್ಡಿರುವ ಆಟೋ ಅದೇಕೋ ಸ್ಟಾರ್ಟೇ ಆಗುತ್ತಿಲ್ಲ. ಡ್ರೈವರು ಈಗ ಪುಳಕ್ಕನೆ ಕೆಳಗಿಳಿದು, ಹಿಂದೆ ಬಂದು, ಅಡಿಷನಲ್ ಸಿಲಿಂಡರಿಗೆ ಕನೆಕ್ಟ್ ಮಾಡುತ್ತಿದ್ದಾನೆ. ಅಗೋ ಸಿಗ್ನಲ್ಲು ಮುಗಿಯಿತು.. ಎರಡು, ಒಂದು, ಸೊನ್ನೆ..... ಆಟೋ ಸ್ಟಾರ್ಟ್ ಆಗುತ್ತಿದೆ.. ಹಿಂದಿನಿಂದ ಒಂದೇ ಸಮನೆ ಹಾರನ್ನುಗಳ ಶಬ್ದ ಕೇಳಿಬರುತ್ತಿದೆ. ಅಬ್ಬ, ಆಟೋ ಹೊರಟಿತು. ಅದರ ಹಿಂದಿನಿಂದಲೇ, ಕಾಮತ್ತರ ಗಾಡಿಯೂ ಸೇರಿದಂತೆ, ಒಂದೊಂದೇ ವೆಹಿಕಲ್ಲುಗಳು ಭರಭರನೆ ಓಡಹತ್ತಿವೆ: ಬಿಡುಗಡೆಯ ಖುಷಿಯಲ್ಲಿ.
(ಬರೆದದ್ದು: ೨೬.೦೯.೨೦೦೪)
3 comments:
ತು೦ಬಾ interesting U ..ಆದರೆ ನಿನ್ನ ಕಲೆ ಯೆಲ್ಲಾ ಈ Traffic ನಲ್ಲಿ ಧೂಳ್ ಆಗೋ ಬದಲಿ , ಮಲೆನಾಡಿಗೆ ಮರಳಿ ಒಳ್ಳೆಯ ಸಾಹಿತ್ಯವನ್ನು ಬರಿ.
ಪ೦ಪ ಬನವಾಸಿಯಲ್ಲಿ ಕಾಯುತ್ತಿದ್ದಾನೆ.
ಪ೦ಪ ಪ್ರಿಯ - ಮುರಳಿ.
http://sampada.net/user/muralihr
@ murali
thanx for ur comment. ನಿಜ, ನಾನು ಬರೆಯಬೇಕಾದ್ದು ನಮ್ಮೂರಿನ ಬಗ್ಗೆ, ಮಲೆನಾಡಿನ ಬಗ್ಗೆ. ಆದರೆ ಈ ಬೆಂಗಳೂರಿನಲ್ಲಿ ನಮ್ಮೂರನ್ನು ಅರಸೀ ಅರಸಿ ಸುಸ್ತಾಗಿ, ಈಗ ನನ್ನಲ್ಲಿ ಊರಿನ ಚಿತ್ರಗಳು ಅಕ್ಷರಗಳಾಗುತ್ತಲೇ ಇಲ್ಲ. ಈ ಸಲ ಊರಿಗೆ ಹೋದಾಗ ಒಂದಷ್ಟು ತುಂಬಿಕೊಂಡು ಬರಬೇಕು!
ಇತ್ತೀಚೆಗೆ ಇಂತಹ ಬರಹಗಳ ಸುಶ್ರುತ ಕಾಣೆಯಾಗಿದ್ದಾನೆ, ನಮಗೆ ಈ ಬರಹದ ಹಿಂದಿರುವ ಸೂಕ್ಷ್ಮ ದೃ್ಷ್ಟಿಕೋನದ ಸಹೃದಯಿ ಸುಶೀ ಇಷ್ಟ ಆಗ್ತಾನೆ.ಬರೀ ಘಟನೆಗಳನ್ನು ಯಾರಾದರೂ ಅಕ್ಷ್ರರ ರೂಪಕ್ಕಿಳಿಸಿಯಾರು, ಅದರೆ ಹಿಂತವಕ್ಕೆ ಹಿಂತವರೆ ಆಗಬೆಬೇಕಿರುತ್ತೆ. ಅರ್ಥವಾಯ್ತು ಅಂತ ಅನ್ಕೊತ್ತೀನಿ..
Post a Comment