Saturday, September 09, 2006

ನಂಜುಳ್ಳೆ ಹೇಳಿದ್ದು


ನಾನು ನಿನಗೇನು ಮಾಡಿದ್ದೆ ಹೇಳು?
ಕೆಸರಿನಾಳದಲ್ಲಿ ನನ್ನ ಪಾಡಿಗೆ ನಾನು ಬೆಚ್ಚಗಿದ್ದೆ
ನೀನೇ ಮೀಟಿ ಹೊರತೆಗೆದೆ ನನ್ನ.

ಒಂದು ಉದ್ದ ಕೋಲಂತೆ
ಅದರ ಒಂದು ತುದಿಗೆ ದಾರವಂತೆ
ದಾರದ ತುದಿಗೆ ಮುಳ್ಳಂತೆ
ಆ ಮುಳ್ಳಿಗೆ ನನ್ನನ್ನು ಚುಚ್ಚುತ್ತಾರಂತೆ
-ಎಲ್ಲಾ ಕೇಳಿ ಗೊತ್ತಿತ್ತು ನನಗೆ;
ಅಂದು ನಿಜವಾಯ್ತು.

ಹೌದು, ಆಗಿನ್ನೂ ನನಗೆ ಜೀವವಿತ್ತು
ದೇಹಕ್ಕೆ ಚುಚ್ಚಿಕೊಂಡ ಮುಳ್ಳು
ನೀನು ನನ್ನನ್ನು ನೀರಿನಲ್ಲಿ ಮುಳು-
ಗಿಸಿದಾಗ ಹಿತವೆನಿಸಿತ್ತು.
ಎಲ್ಲಾ ಸಡಿಲಾಗಿ ನಾನು ಕೊಸರಾಡಿ...

ಆಗಲೇ ಕಂಡಿದ್ದು ಆ ಮೀನು
ಆಸೆ ಪಟ್ಟು ನನ್ನ ಬಳಿಗೆ ಬಂತು
ನನಗೆ ಭಯವಾಗುವ ಮೊದಲೇ
ಬಾಯಿ ಹಾಕಿಬಿಟ್ಟಿತ್ತು, ಪಾಪ
ನಿನ್ನ ಸಂಚಿಗೆ ಬಲಿಯಾಗಿಬಿಟ್ಟಿತ್ತು.

ಆ ಮೀನಿನ ಸಾವಿಗೆ ನಾನೇ ಕಾರಣವಾದೆನಾ ಅನ್ನಿಸಿ
ಪಾಪಪ್ರಜ್ಞೆಯಲ್ಲಿ ನರಳುತ್ತಿದ್ದೇನೆ
ಸತ್ತೂ ಬದುಕಿದ್ದೇನೆ.

ನಿನಗೇನೂ ಅನ್ನಿಸುವುದೇ ಇಲ್ಲವಾ?

ಮೀನಿಗೆ ಆಹಾರ ನಾನು;
ಅದನ್ನೇ ಬಲಿತೆಗೆದುಕೊಳ್ಳುವುದನ್ನು ಬಯಸಲಾರೆ.
ನಿನ್ನ ಆಹಾರ ಮೀನು;
ಅದಕ್ಕೇ, ಅದು ಸುಮ್ಮನೆ ಕಣ್ಮುಚ್ಚಿತು
ನೀನು ಯಾರಿಗೂ ಆಹಾರವಲ್ಲ ನೋಡು;
ಹಾಂ, ಗೊತ್ತಾಯಿತು, ಅದಕ್ಕೇ ನೀನು ಹೀಗಾಡುತ್ತೀ.

No comments: