Tuesday, January 23, 2007

ಮಗುವಿನ ನಗು

ನಿನ್ನೆ ಸಂಜೆ ಹೀಗೇ.

ರಜಾದಿನವಾದ್ದರಿಂದ ರೂಮಿನಲ್ಲೇ ಇದ್ದೆ. ಕವಿತೆಯೊಂದು ಕೈಕೊಟ್ಟು ಕೂತಿತ್ತು. ಮೊದಲೆರಡು ಸಾಲುಗಳನ್ನೇನೋ ಸರಾಗವಾಗಿ ಬರೆದಿಟ್ಟಿದ್ದೆ. ಆದರೆ ಮುಂದಿನ ಸಾಲುಗಳು ಮಾತ್ರ ಅದೇನೇ ಕಸರತ್ತು ಮಾಡಿದರೂ ಮೂಡಿಬರದೇ ನನ್ನನ್ನು ಚಡಪಡಿಸುವಂತೆ ಮಾಡಿದ್ದವು. ಏನು ಬರೆಯಬೇಕೂಂತ ಗೊತ್ತು; ಆದರೆ ಅವು ಶಬ್ದಗಳಾಗಿ ಪಡಿಮೂಡುತ್ತಿರಲಿಲ್ಲ. ವಿಪರೀತ ಟೆನ್ಶನ್ನಿಗೆ ಒಳಗಾಗಿ, ತಲೆಬಿಸಿಯಾಗಿ, ರೂಮಿನಿಂದ ಹೊರಬಂದೆ.

ಟೆರೇಸು ಆಕಾಶಕ್ಕೆ ಮುಖ ಮಾಡಿ ನಕ್ಷತ್ರಗಳಿಗಾಗಿ ಕಾಯುತ್ತಿದ್ದಂತಿತ್ತು. ಸುಮ್ಮನೇ ಅದರ ಮೇಲೆ ಓಡಾಡಿದೆ. ನನ್ನ ಟೆನ್ಶನ್ನನ್ನು ಕಡಿಮೆ ಮಾಡುವಲ್ಲಿ ಆ ಟೆರೇಸಾಗಲೀ, ಆಗಸದ ಕೆಂಬಣ್ಣವಾಗಲೀ, ಆಗ ತಾನೇ ಹೊತ್ತಿಕೊಳ್ಳುತ್ತಿದ್ದ ಬೆಂಗಳೂರಿನ ಬೀದಿದೀಪಗಳಾಗಲೀ, ಪಕ್ಕದ ದೇವಸ್ಥಾನದ ಗಂಟೆಯ ನಿನಾದವಾಗಲೀ ಸಫಲವಾಗುವಂತೆ ಕಾಣಲಿಲ್ಲ. ಅಷ್ಟರಲ್ಲಿ ಪಕ್ಕದ ಮನೆಯ ಸ್ಟೇರ್‌ಕೇಸಿನಲ್ಲಿ ಬೀದಿನಾಯಿಯೊಂದು ಹತ್ತಿ ಬರುತ್ತಿರುವುದು ಕಾಣಿಸಿತು. ದುಡುದುಡನೆ ಹತ್ತುತ್ತಾ ಟೆರೇಸಿಗೆ ಬಂತು ನಾಯಿ. ನನಗೇಕೋ ಆ ನಾಯಿಯೂ ಟೆನ್ಶನ್ನಿನ್ನಲ್ಲಿರುವಂತೆ ಕಂಡಿತು. ಕೇಳಿದೆ ಅದರ ಬಳಿ: "ಏನಯ್ಯಾ, ಟೆನ್ಶನ್ನಿನಲ್ಲಿದ್ದಂಗಿದೆ?" ಅಂತ. ಅದಕ್ಕೆ ನಾಯಿ, "ಹೂಂ ಕಣಣ್ಣ, ದೊಡ್ಡ ತಲೆಬಿಸಿ ಆಗ್‍ಹೋಗಿದೆ. ಅದೆಲ್ಲೋ ವಿಜಯನಗರದಲ್ಲಿ ನಮ್ಮ ಕುಲಬಾಂಧವರು ಯಾವನೋ ಒಬ್ಬ ಮನುಷ್ಯನಿಗೆ ಕಚ್ಚಿ ಅವನು ಸತ್ತೇ ಹೋದನಂತಲ್ಲಾ? ಅವತ್ತಿಂದ ಈ ಮನುಷ್ಯರೆಲ್ಲರೂ ನಮ್ಮ ಮೇಲೆ ಕೆಂಡ ಕಾರಲಿಕ್ಕೆ ಶುರು ಮಾಡಿದಾರೆ. ಕಾರ್ಪೋರೇಶನ್ನಿನವರು ನಮ್ಮನ್ನೆಲ್ಲಾ ಕಿಡ್ನಾಪ್ ಮಾಡಲಿಕ್ಕೆ ಪ್ಲಾನ್ ಮಾಡಿದಾರಂತೆ. ಲಾರಿಯಲ್ಲಿ ಹೇರ್ಕೊಂಡು ಹೋಗ್ತಾರಂತೆ. ನಂಗಂತೂ ಅದೇ ಟೆನ್ಶನ್ನು. ಯಾವ ಲಾರಿ ಕಂಡರೂ ಯಮರಾಯನ ಮುಖದರ್ಶನ ಮಾಡಿದಂಗೆ ಆಗೊತ್ತೆ. ಈಗ್ಲೂ ಹಾಗೇ: ಯಾವುದೋ ಲಾರಿ ದೂರದಲ್ಲಿ ಬರ್ತಿರೋದು ಕಾಣಿಸ್ತು; ತಕ್ಷಣ ಓಡಿ ಟೆರೇಸಿಗೆ ಬಂದ್ಬಿಟ್ಟೆ!" ಅಂತು. ಮನುಷ್ಯನಿಗಷ್ಟೇ ಅಲ್ಲ, ನಾಯಿಗಳಿಗೂ ಇರೊತ್ತೆ ಟೆನ್ಷನ್ನು ಅನ್ನುವ ಹೊಸ ಜ್ಞಾನೋದಯದೊಂದಿಗೆ ನಗುತ್ತಾ ರೂಮಿನೊಳಬಂದೆ.

ಮತ್ತೆ ಬರೆಯಲು ಕುಳಿತೆ. ಆದರೆ ಅಕ್ಷರಗಳೇಕೋ ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದವು ಅನ್ನಿಸೊತ್ತೆ. ಏನಂದರೂ ಕವಿತೆ ಮುಂದುವರಿಯುವ ಲಕ್ಷಣ ಕಾಣಲಿಲ್ಲ. ಮತ್ತೇನು ಮಾಡುವುದು ಎಂದು ಯೋಚಿಸಿದೆ. ನನ್ನ ನೆಂಟರೊಬ್ಬರ ಮನೆಗೆ ಹೋಗದೇ ಬಹಳ ದಿನಗಳಾದವು ಎಂದು ನೆನಪಾಯಿತು. ಅವರಿಗೆ ಒಂದು ಗಂಡು ಮಗು ಹುಟ್ಟಿದ್ದ ಸುದ್ದಿ ನನಗೆ ತಿಳಿದಿದ್ದುದೇ ಆಗಿತ್ತು. ಫೋನ್ ಮಾಡಿ ವಿಶ್ ಮಾಡಿದ್ದೆ. ಪಾಪುವನ್ನು ನೋಡಲು ಬರುವುದಾಗಿ ಹೇಳಿದ್ದೆನಾದರೂ, ಹಾಗೆ ಹೇಳಿ ಈಗ ಆರು ತಿಂಗಳಿಗೆ ಬಂದಿದ್ದರೂ ಇನ್ನೂ ನನಗೆ ಹೋಗಲಿಕ್ಕೆ ಆಗಿರಲಿಲ್ಲ. ಈಗ ಹೀಗೆ ಸಡನ್ನಾಗಿ ನೆನಪಾದ್ದರಿಂದ, ಬೇರೆ ಏನೂ ಕೆಲಸವೂ ಇಲ್ಲದ್ದರಿಂದ, ಅಲ್ಲಿಗೇ ಹೋಗೋಣವೆಂದು ತೀರ್ಮಾನಿಸಿದೆ. ಫೋನಾಯಿಸಿ ವಿಚಾರಿಸಿದಾಗ ಅವರು ಮನೆಯಲ್ಲೇ ಇರುವುದು ತಿಳಿಯಿತು. ರಾತ್ರಿ ಊಟಕ್ಕೆ ಬರುತ್ತಿರುವುದಾಗಿ ತಿಳಿಸಿದೆ.

ಪ್ಯಾಂಟೇರಿಸಿ, ಕೆಳಗಿಳಿದು ಬಂದು, ನೆಂಟರ ಮನೆ ಕಡೆ ಹೋಗುವ ಬಸ್ಸು ಹತ್ತಿದೆ. ಬಸ್ಸಿನಲ್ಲಿ ಹಿಂದಿನ, ಗಂಡಸರ ಸೀಟುಗಳ್ಯಾವೂ ಖಾಲಿಯಿರಲಿಲ್ಲ. ಮುಂದಿನ, ಹೆಂಗಸರ ಸೀಟುಗಳಲ್ಲಿ ಒಂದೆರಡು ಸೀಟುಗಳು ಖಾಲಿಯಿದ್ದವು. ಸರಿ, ಮುಂದೆ ಯಾರಾದರೂ ಹೆಂಗಸರು ಹತ್ತಿದರೆ ಬಿಟ್ಟುಕೊಟ್ಟರಾಯಿತು ಅಂದುಕೊಂಡು ಅವುಗಳಲ್ಲೇ ಒಂದರಲ್ಲಿ ಆಸೀನನಾದೆ. ಕೂತದ್ದೇ ತಪ್ಪಾಗಿಹೋಯಿತು: ಮತ್ತೆ ಟೆನ್ಶನ್ ಶುರುವಾಯಿತು! ಸ್ಟಾಪ್ ಬಂದಾಗಲೆಲ್ಲಾ ಯಾರಾದರೂ ಹೆಂಗಸರು ಹತ್ತಿಬಿಡುತ್ತಾರೇನೋ, ಸೀಟ್ ಬಿಟ್ಟುಕೊಡಬೇಕಾಗುತ್ತದೇನೋ ಎಂದು ಚಡಪಡಿಸತೊಡಗಿದೆ. ಪ್ರತಿ ಸ್ಟಾಪಿನಲ್ಲಿ ಬಸ್ಸು ನಿಂತಾಗಲೂ ನಾನು ಕೂತಲ್ಲೇ ಬಗ್ಗಿ, ತಲೆ ಎತ್ತಿ, ಮಿಸುಕಾಡಿ, ಬಾಗಿಲ ಕಡೆ ನೋಡುವುದಾಯಿತು. ಸಾಯಲಿ, ಈ ಟೆನ್ಶನ್ನೇ ಬೇಡ, ಶಿಸ್ತಾಗಿ ಎದ್ದುನಿಂತುಬಿಡೋಣ ಅನ್ನಿಸಿತಾದರೂ ಹಿಂದಿನ ಸೀಟಿನವರು ಏನೆಂದುಕೊಂಡಾರೆಂದು ಭಾವಿಸಿ ಮತ್ತೆ ಸೀಟಿಗೊರಗಿದೆ. ಅಂತೂ ಮುಂದಿನ ಸ್ಟಾಪಿನಲ್ಲಿ ಐದಾರು ಮಹಿಳೆಯರು ಬಸ್ಸು ಹತ್ತಿ ನನ್ನ ಸೀಟಿಗೆ ಸಂಚಕಾರ ತಂದರು. ಅವರಿಗೆ ಸೀಟು ಬಿಟ್ಟುಕೊಟ್ಟು ನಾನು ಟೆನ್ಶನ್ನಿನಿಂದ ಅಷ್ಟರ ಮಟ್ಟಿಗೆ ಹೊರಬಂದೆನಾದರೂ, ಸೀಟು ಬಿಟ್ಟುಕೊಡುವಾಗ ಮಾತ್ರ ಒಬ್ಬ ರಾಜಕಾರಣಿಗೆ ಎಷ್ಟು ಬೇಸರ, ಅಪಮಾನಗಳು ಆಗಬಹುದೋ ಅವೆಲ್ಲವನ್ನೂ ನಾನು ಅನುಭವಿಸಿದ್ದೆ. ನಾನು ಎದ್ದು ನಿಂತು ಅವರಿಗೆ ಸೀಟು ಬಿಟ್ಟುಕೊಟ್ಟದ್ದೇ ನನ್ನ ಹಿಂದಿನ ಸೀಟಿನವರ ಮುಖಗಳನ್ನು ನೋಡದಾದೆ. ಅವರೆಲ್ಲಾ ನನ್ನನ್ನು ಅಪಹಾಸ್ಯದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ನನಗೆ ಭಾಸವಾಗಲಾರಂಭಿಸಿತು.

ನೆಂಟರ ಮನೆಯ ಬೆಲ್ಲು ಒತ್ತಿ ಹೊರಗೆ ಕಾಯತೊಡಗಿದೆ. ಒಂದು ನಿಮಿಷವಾದರೂ ಬಾಗಿಲು ತೆರೆಯದಿದ್ದುದರಿಂದ ಮತ್ತೆ ಟೆನ್ಶನ್ ಶುರುವಾಯಿತು. ಮತ್ತೆರಡು ಬಾರಿ ಬೆಲ್ ಒತ್ತಿದೆ. ಸುಮಾರು ಎರಡು ನಿಮಿಷಗಳ ಬಳಿಕ ಅತ್ತಿಗೆ ಬಂದು ಬಾಗಿಲು ತೆರೆದಳು. "ಓ, ಬಾ, ಸಾರಿ, ಪಾಪೂನ ಮಲಗಿಸ್ತಾ ಇದ್ದೆ, ಅದ್ಕೇ ಲೇಟಾಯ್ತು ಡೋರ್ ಓಪನ್ ಮಾಡ್ಲಿಕ್ಕೆ. ಒಳಗೆ ಬಾ. ಎಷ್ಟು ದಿವಸ ಆಯ್ತೋ ಮಹಾನುಭಾವ ಈ ಕಡೆ ಬರದೇ...?" ಎನ್ನುತ್ತಾ ಅತ್ತಿಗೆ ನನ್ನನ್ನು ಆದರದಿಂದ ಸ್ವಾಗತಿಸಿದಳು. ಸೀದಾ ಕಿಚನ್ನಿಗೆ ಕರೆದೊಯ್ದಳು. ಅತ್ಮೀಯವಾಗಿ ಮಾತನಾಡುತ್ತಾ ಕಾಫಿ ಮಾಡಿಕೊಟ್ಟಳು. ಅಷ್ಟರಲ್ಲಿ ಜಗದೀಶಣ್ಣ ಕೂಡ ಬಂದ. ಅವನೊಂದಿಗೆ ಹಾಲ್‍ಗೆ ಬಂದು ಮಾತನಾಡುತ್ತಾ ಕುಳಿತೆವು. ಆಫೀಸು, ವರ್ಕ್‍ಲೋಡು, ಸ್ಯಾಲರಿ, ಟ್ರಾಫಿಕ್ಕು, ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿದ್ದು, 'ಒಂದು ಗಾಡಿ ತಗೊಳ್ಳೋ ಮರಾಯಾ', ಇಂಡಿಯಾ-ಸೌತ್ ಆಫ್ರಿಕಾ ಮ್ಯಾಚು... ಹೀಗೆ ಅವ್ಯಾಹತವಾಗಿ ಮಾತಾಡಿದೆವು. ಅತ್ತಿಗೆ ಅಡುಗೆಯಲ್ಲಿ ತೊಡಗಿದ್ದಕ್ಕೆ ಸಾಕ್ಷಿಯಾಗಿ ಕಿಚನ್ನಿನಿಂದ ಮಿಕ್ಸಿ, ತುರಿಮಣೆ, ಸೌಟುಗಳ ಸದ್ದು ಕೇಳಿಬರುತ್ತಿತ್ತು. ವಗ್ಗರಣೆಯ ಶಬ್ದದೊಂದಿಗೇ ಪರಿಮಳವೂ ತೇಲಿಬಂತು.

ಅಷ್ಟೊತ್ತಿಗೆ ಮಲಗಿದ್ದ ಪಾಪುವಿಗೆ ಎಚ್ಚರವಾಗಿ ಕೋಣೆಯಿಂದ ಅಳು ಕೇಳಿಬಂತು. ಅತ್ತಿಗೆ 'ಹೂಂ ಬಂದೇ...' ಎನ್ನುತ್ತಾ ಕೋಣೆಗೆ ಹೋಗಿ ಮಗುವನ್ನು ಎತ್ತಿಕೊಂಡು ಬಂದಳು. ತಾಯಿಯ ತೋಳಿನಲ್ಲಿ ಕುಳಿತು ಮಿಕಮಿಕನೆ ನಮ್ಮನ್ನೇ ನೋಡುತ್ತಿದ್ದ ಮಗು ಮೊಲದ ಮರಿಯಂತೆ ಕಂಡಿತು. 'ಇಲ್ನೋಡು... ಇದು ಯಾರು ಗೊತ್ತಾ? ಮಾಮ.. ಮಾಮ ಇದು. ಹೋಗ್ತೀಯಾ ಮಾಮನ ಹತ್ರ?' ಅನ್ನುತ್ತಾ ಅತ್ತಿಗೆ ಪಾಪುವನ್ನು ನನ್ನ ಕೈಗೆ ವರ್ಗಾಯಿಸಿದಳು. ಆದರೆ ನನ್ನ ಕೈಗೆ ಬಂದದ್ದೇ ಪಾಪು ಅಳಲಿಕ್ಕೆ ಶುರುಮಾಡಿತು. 'ಏ.. ಸುಮ್ನಿರೂ... ಆ.. ವೂ..' ಎಂದು ಇತ್ಯಾದಿ ಏನೇನೋ ಬಡಬಡಿಸಿ ಮಗುವನ್ನು ಸುಮ್ಮನಿರಿಸಲು ನೋಡಿದೆನಾದರೂ ಅದು ಅಳುವನ್ನು ನಿಲ್ಲಿಸಲಿಲ್ಲ. ಒಂದು ಮುತ್ತು ಕೊಟ್ಟರೆ ಸಾಕು ಹಟ ನಿಲ್ಲಿಸುವ ನನ್ನ ಹುಡುಗಿ ಈ ಮಗುವಿಗಿಂತ ಸಾವಿರ ಪಾಲು ಬೆಟರು ಅನ್ನಿಸಿ ಮಗುವನ್ನು ಜಗದೀಶಣ್ಣನಿಗೆ ಒಪ್ಪಿಸಿದೆ. ಅವನು ನೆಲಕ್ಕೆ ಕುಳಿತುಕೊಂಡು, ಮಗವನ್ನು ತೊಡೆಯಮೇಲೆ ಕೂರಿಸಿಕೊಂಡು, 'ಆನೆ ಬಂತೊಂದಾನೆ' ಮಾಡತೊಡಗಿದ.

ಆನೆ ಬಂತೊಂದಾನೆ
ಯಾವೂರಾನೆ?
ಸಿದ್ದಾಪುರದಾನೆ
ಇಲ್ಲಿಗ್ಯಾಕ್ ಬಂತು?
ಹಾದಿ ತಪ್ಪಿ ಬಂತು
ಬೀದಿ ತಪ್ಪಿ ಬಂತು
ನಮ್ಮನೆ ಪಾಪಚ್ಚಿ ನೋಡಕ್ ಬಂತು..!

ಅಳು ನಿಲ್ಲಿಸಿ ಮಗು ಗಿಟಗಿಟನೆ ನಗಲಿಕ್ಕೆ ಶುರುಮಾಡಿತು. ಬೊಚ್ಚುಬಾಯಿ ಬಿಟ್ಟುಕೊಂಡು ನಿಷ್ಕಳಂಕವಾಗಿ ನಗುತ್ತಿದ್ದ ಈ ಮಗುವಿನ ಚೆಲುವಿಗೆ ನಾನು ಮಾರುಹೋದೆ. ಆ ನಗೆಯ ಶಬ್ದದ ಅಲೆಯಲ್ಲಿ ತೇಲಿಹೋದೆ.

ನಾನೂ ಜಗದೀಶಣ್ಣನ ಪಕ್ಕ ಹೋಗಿ ಕುಳಿತುಕೊಂಡೆ. ಪಕ್ಕದಲ್ಲೇ ಮಗುವನ್ನು ಆಡಿಸಲಿಕ್ಕೆಂದು ತಂದಿದ್ದ ಗಿಲಗಿಚ್ಚಿಯೊಂದಿತ್ತು. ಅದನ್ನು ಗಿಲಗಿಲನೆ ಅಲುಗಾಡಿಸುತ್ತಾ ನಾನು ಮಗುವಿನ ಸ್ನೇಹ ಸಂಪಾದಿಸಲು ನೋಡಿದೆ. ಸ್ವಲ್ಪ ಹೊತ್ತಿನ ನಂತರ ಮಗು ನನಗೆ ಹೊಂದಿಕೊಂಡಿತು. ಅದರ ಮುದ್ದು ಗಲ್ಲವನ್ನು ಚಿವುಟಿದೆ. 'ಛೀ ಕಳ್ಳ!' ಎಂದೆ. ಮಗು ಮತ್ತೆ ಗಿಟಗಿಟನೆ ನಕ್ಕಿತು.

ಯೋಚಿಸುತ್ತಿದ್ದೆ ನಾನು: ಯಾಕೆ ಹೀಗೆ ನಗುತ್ತದೆ ಮಗು? ನಾವು 'ಆನೆ ಬಂತೊಂದಾನೆ' ಮಾಡುವ ಮೊದಲು ಮಗುವಿಗೇನು ಆನೆಯನ್ನು ತೋರಿಸಿರುವುದಿಲ್ಲ. 'ಛೀ ಕಳ್ಳ' ಎನ್ನುವಾಗ ಕಳ್ಳ ಎಂದರೆ ಯಾರು ಎಂಬುದೇ ಗೊತ್ತಿರುವುದಿಲ್ಲ ಮಗುವಿಗೆ. ಆದರೂ ನಗುತ್ತದೆ. ಯಾಕೆ?

ಮಗುವಿನ ಕೈಗೆ ಗಿಲಗಿಚ್ಚಿಯನ್ನು ಕೊಟ್ಟು ಕೇಳಿದೆ ನಾನು: "ನಾವು 'ಆನೆ ಬಂತೊಂದಾನೆ' ಎನ್ನುತ್ತಾ ಬಾಗಿದರೆ-ತೂಗಿದರೆ, ಅಥವಾ 'ಛೀ ಕಳ್ಳ!' ಎಂದು ಗೋಣು ಕೊಡವಿದರೆ ನಿನಗೆ ಏನು ಕಾಣಿಸುತ್ತದೆ ಮಗುವೇ? ಅದರಲ್ಲಿ ಅಷ್ಟೆಲ್ಲಾ ನಗುವಂತದ್ದು ಏನಿದೆ? ನಾವೆಲ್ಲಾ ಚಿತ್ರಗಳೇ ನಿನ್ನ ಪಾಲಿಗೆ?"

ಕೈಯಲ್ಲಿ ಹಿಡಿದಿದ್ದ ಗಿಲಗಿಚ್ಚಿಯಿಂದ ಕಿಂಕಿಣಿ ನಾದ ಹೊಮ್ಮಿಸುತ್ತಾ ಹೇಳಿತು ಮಗು, "ಎಲ್ಲದಕ್ಕೂ ಕಾರಣ ಕೇಳಬೇಡವೋ ದಡ್ಡ ಮಾಮ! ಕಾರಣಗಳನ್ನೆಲ್ಲಾ ನೀನಿಟ್ಟುಕೋ. ಬೇಕಾದರೆ ಮತ್ತಷ್ಟು ಟೆನ್ಶನ್ ಮಾಡಿಕೋ. ಆನೆ ಎಂದರೆ ಏನು ಅಂತ ನನಗೆ ಬೇಕಿಲ್ಲ. ಆನೆ ಹೇಗಿರುತ್ತದೋ ನನಗೆ ಗೊತ್ತಿಲ್ಲ. ಆದರೂ ನಗಲಿಕ್ಕೇನು! ಕಳ್ಳ ಎಂದರೆ ಯಾರಾದರೂ ಆಗಿರಲಿ. ಅವನು ಬೇಕಾದರೆ ನಿನ್ನ ನಗೆಯನ್ನು ಕೊಳ್ಳೆ ಹೊಡೆದವನೇ ಆಗಿರಲಿ. ಆದರೆ ಆತ ನನ್ನ ನಗೆಯನ್ನು ಕಸಿಯಲಾರ. ನಾನು ಸುಮ್ಮನೇ ನಗುತ್ತೇನೆ! ನಿನಗೆ ಹೀಗೆ ನಗಲಿಕ್ಕಾಗುತ್ತದಾ? 'ಆನೆ ಬಂತೊಂದಾನೆ' ಮಾಡಿದರೂ ನೀನು ನಗುವಂತಿಲ್ಲ; 'ಛೀ ಕಳ್ಳ' ಎಂದರೂ ನಗುವಂತಿಲ್ಲ. ಆನೆ ಬಂದರೂ ಕಳ್ಳ ಬಂದರೂ ಹೆದರಿಕೊಂಡು ಓಡಿಹೋಗುತ್ತೀ ನೀನು! ದಿನವಿಡೀ 'ಟೆನ್ಶನ್ ಟೆನ್ಶನ್' ಎನ್ನುತ್ತಾ ಓಡಾಡುವ ನೀನು ನಗುವಿಗೂ ಕಾರಣ ಕೇಳುತ್ತೀಯ, ಅಳುವಿಗೂ ಕಾರಣ ಕೇಳುತ್ತೀಯ, ಪ್ರೀತಿಗೂ ಕಾರಣ ಕೇಳುತ್ತೀಯ... ಏಯ್ ಸುಮ್ನಿರೋ ದಡ್ಡ ಮಾಮ!" ಅಷ್ಟಂದು ಮತ್ತೆ ನಗಲಾರಂಭಿಸಿತು. ನಾನು ತಿರುಗಿ ಮಾತಾಡಲು ಏನೂ ತೋಚದೇ ಸುಮ್ಮನೆ ಮಗುವಿನ ಮುಖವನ್ನೇ ನೋಡುತ್ತಿದ್ದೆ.

ಅತ್ತಿಗೆ ಊಟಕ್ಕೆ ಕರೆಯುವವರೆಗೂ ನಾನು ಮಗುವನ್ನು ಆಡಿಸುತ್ತಲೇ ಇದ್ದೆ. ಊಹೂಂ, ಹಾಗನ್ನುವುದಕ್ಕಿಂತ 'ನಾನೇ ಮಗುವಾಗಿದ್ದೆ ಮಗುವಿನ ಜೊತೆ' ಎಂದರೆ ಹೆಚ್ಚು ಸರಿಯಾಗುತ್ತದೆ. ಒಳ್ಳೆಯದೊಂದು ಊಟ ಮಾಡಿ, ಸಾದಾ ಕವಳ ಹಾಕಿ ನಾನು ನೆಂಟರ ಮನೆಯಿಂದ ಹೊರಟೆ. ಅಷ್ಟೊತ್ತಿಗಾಗಲೇ ಮಗು ತೊಟ್ಟಿಲಿನ ಮೆತ್ತೆಯಲ್ಲಿ ಬೆಚ್ಚಗೆ ನಿದ್ದೆ ಹೋಗಿತ್ತು.

ರೂಮಿಗೆ ಮರಳುವ ಹಾದಿಯಲ್ಲಿ ಹೊಸದೇ ಆದ ಉಲ್ಲಾಸವೊಂದು ನನ್ನಲ್ಲಿ ತುಂಬಿಕೊಂಡಿರುವ ಭಾವವನ್ನು ಅನುಭವಿಸಿದೆ. ಅರ್ಧ ಬರೆದಿಟ್ಟು ಬಂದಿದ್ದ ಕವಿತೆಯ ಮುಂದಿನ ಸಾಲುಗಳು ಅದಾಗಲೇ ಕಣ್ಣ ಮುಂದೆ ನಿಲ್ಲತೊಡಗಿದ್ದವು. ಆ ಸಾಲುಗಳ ಹಿಂದೆ ಅದೇ ಮಗುವಿನ ಬೊಚ್ಚು ಬಾಯಿಯ ನಗುವಿನ ಚಿತ್ರ ಅಚ್ಚೊತ್ತಿತ್ತು.

17 comments:

ಮನಸ್ವಿನಿ said...

ಒಳ್ಳೆಯ ಲೇಖನ

Shiv said...

ಸುಶ್ರುತ,

ಬೀದಿ ನಾಯಿಗಳಿಂದ ಶುರುವಾದ ಟೆನ್ಯಷನ್ ಕತೆ ಮಗುವಿನೋಡನೆ ಮುಗಿತು!

ಹೌದಲ್ವಾ ನಾವೇಕೆ ಮಗು ತರ ಸುಮ್ಮನೆ ಸಂತೋಷವಾಗಿ ಇರೋಕೆ ಆಗಲ್ಲ?


>ಒಂದು ಮುತ್ತು ಕೊಟ್ಟರೆ ಸಾಕು ಹಟ ನಿಲ್ಲಿಸುವ ನನ್ನ ಹುಡುಗಿ ಈ ಮಗುವಿಗಿಂತ ಸಾವಿರ ಪಾಲು ಬೆಟರು ಅನ್ನಿಸಿ
:)))
ಲಗೇ ರಹೋ ಸುಶ್ ಬಾಯಿ :)

Anonymous said...

"ಕಳ್ಳ ಎಂದರೆ ಯಾರಾದರೂ ಆಗಿರಲಿ. ಅವನು ಬೇಕಾದರೆ ನಿನ್ನ ನಗೆಯನ್ನು ಕೊಳ್ಳೆ ಹೊಡೆದವನೇ ಆಗಿರಲಿ. ಆದರೆ ಆತ ನನ್ನ ನಗೆಯನ್ನು ಕಸಿಯಲಾರ. ನಾನು ಸುಮ್ಮನೇ ನಗುತ್ತೇನೆ! "

ಮನ ಸೆಳೆದ ಸಾಲುಗಳು! ಆ ಮಗು ದೊಡ್ಡವರ ದಡ್ದತನವನ್ನು ನೋಡಿ ನಕ್ಕಿರಬಹುದಾ?!

Anonymous said...

nimma "maguvina nagu"vige nanna "maguvina mana"da pratikriye:

kUsu-mana

aruNa ravi rAgakke hoLedu nartisutidda
hullaMca miMcannu toredevEke?
puTi-puTidu ELutta Agasake hArutta
araLi beLeyuva cigura maretevEke?

hAlugallada mEle iTTa beTTanu sarisi
diTTi sOkada boTTaniTTevEke?
koutukava sOjigava kaNNaMcinale savari
turaga paTTiyanaDDa koTTevEke?

biMbavillada guDige mUrtateya svAgatisi
aShTabaMdhagaLiMda bigidevEke?
staMBagaLa aramaneya tuMba tuMbide saraku
bahiraMtaraMgadali kOTeyEke?

anudinavu supraBeya hIruvele hasuraMte
kUsu-manaviralemage muppadEke?

*suptadIpti
24-AgasT-2004

Sushrutha Dodderi said...

@ ಮನಸ್ವಿನಿ

ಧನ್ಯವಾದಗಳು

Sushrutha Dodderi said...

@ shiv

ಥ್ಯಾಂಕ್ಯೂ ಶಿವು. 'ಲಗೇ ರಹೋ' ಅಂದಿದ್ದಕ್ಕೆ ಮತ್ತೊಂದು ಥ್ಯಾಂಕ್ಸ್ :)

Sushrutha Dodderi said...

@ sritri

ಇರಬಹುದೇನೋ ಮೇಡಂ.. ಮಗುವಿನ ನಗುವನ್ನು ನನಗೆ 'ಅರ್ಥ' ಮಾಡಿಕೊಳ್ಳಲಿಕ್ಕೆ ಆಗ ಆಗಿರಲಿಲ್ಲ; ಈಗ ಯೋಚಿಸಿದರೆ ಹೌದೇನೋ ಅನ್ನಿಸುತ್ತೆ: ಅದು ವ್ಯಂಗ್ಯಭರಿತವಾಗಿತ್ತಾ ಅಂತ!

ಧನ್ಯವಾದಗಳು.

Sushrutha Dodderi said...

@ jyothi m

ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ: ಮಗುವಿನ ನಗುವಿನಷ್ಟೇ, ಮಗುವಿನ ಮನದಷ್ಟೇ.

ನಿನ್ನೆ ಒಂದು ನುಡಿಮುತ್ತನ್ನು ಓದಿದೆ:
"ನಾವು ಹುಟ್ತಾ ನಗ್ನರಾಗಿ, ಹಸಿದುಕೊಂಡು, ತೊಯ್ದು ತೊಪ್ಪೆಯಾಗಿ ಹುಟ್ಟುತ್ತೇವೆ. ಆಮೇಲೆ ಪರಿಸ್ಥಿತಿ ಗಂಭೀರವಾಗುತ್ತಾ ಹೋಗುತ್ತದೆ" -ಅಂತ! Funny ಅನ್ನಿಸಿದರೂ ಅದೆಷ್ಟು ಸತ್ಯವಾಗಿದೆಯಲ್ಲವೇ?

ಧನ್ಯವಾದಗಳು.

Anveshi said...

ಮಗು ನಕ್ಕುಬಿಟ್ಟರೆ ನಮ್ಮ ಟೆನ್ಷನ್ ಎಲ್ಲಾ ಮಾಯ. ಅದೇನು ಮ್ಯಾಜಿಕ್ಕೋ...
ಚೆನ್ನಾಗಿರೋ ಲೇಖನ.
ನಮಗಂತೂ ಸಾಧ್ಯವಿಲ್ಲ, ನಮ್ಮ ಮನಸ್ಸಿಗಾದರೂ ಬಾಲ್ಯಕ್ಕೆ ಮರಳುವುದು ಸಾಧ್ಯವಿಲ್ವೇ?

Sushrutha Dodderi said...

@ ಅಸತ್ಯ ಅನ್ವೇಷಿ

ಧನ್ಯವಾದಗಳು. ನಮ್ಮ ಮನಸ್ಸಿಗಾದರೂ ಬಾಲ್ಯಕ್ಕೆ ಮರಳುವುದು ಸಾಧ್ಯವಿಲ್ವೇ? -ನಾನೂ ಅದನ್ನೇ ಯೋಚಿಸುತ್ತಿದ್ದೆ. ಮಗುವಿನ ಮನಸ್ಸು ಅಂತಾರಲ್ಲ, ಅದು ನಿಜಕ್ಕೂ ಇದೆಯಾ?

ರಾಧಾಕೃಷ್ಣ ಆನೆಗುಂಡಿ. said...

ಯಾಕೆ ಇತ್ತೀಚಿನ ದಿನಗಳಲ್ಲಿ ಬ್ಲಾಗಿಸುವುದನ್ನು ಕಡಿಮೆ ಮಾಡಿದ್ದೀರಿ.?

Sushrutha Dodderi said...

@ ರಾಧಾಕೃಷ್ಣ ಆನೆಗುಂಡಿ

ಹೂಂ ಸ್ವಾಮಿ, ಸ್ವಲ್ಪ ಬ್ಯುಸಿ. ಊರಿಗೆ ಹೋಗಿದ್ದೆ ಇನ್ ಬಿಟ್ವೀನ್. ಹಾಗಾಗಿ....

Anonymous said...

Hai,
Nimma lekhana thumba channagi iddu. naanu nimma blog ge hosa reader.

Bidi naayi en helthu ennuva nimma imagination thumba adbhutha vagi iddu. maguvina mathu ashte.

Nimma sumaru lekhana odida mele, nanna drusti nimma lekhana da mele thagthena annistu, plz drushti tegiskali ok.
Hinge baritha iri.

Sushrutha Dodderi said...

@ ranjana

hosa reader ge swagatha. mecchugege thumbaa thanx. drushti madidya? ayyo, eega drushti thegiyOru yaru maraythi..?

ಧರಿತ್ರಿ said...

ಸುಶ್ರುತಣ್ಣ..

ಮಗುವಿನ ನಗು..~!!! ಹೆಹೆ ನಾನು ನಿನ್ನೆ ರಾತ್ರಿ ಬರೆದ ಲೇಖನಕ್ಕೆ ನೀ ಪ್ರತಿಕ್ರಿಯೆ ಬರೆದಾಗಲೇ ಗೊತ್ತಾಗಿದ್ದು ಮಾರಾಯ. ನಾವಿಬ್ರೂ ಬರೆದದ್ದು ಸೇಮ್ ಸಬ್ಜೆಕ್ಟ್ಉ ಅಂತ! ಇರಲಿ ಬಿಡು..ನೀ ಒಳ್ಳೆ ಅಣ್ನ ಅಲ್ವಾ? ನೀನೂ ಚೆನ್ನಾಗ್ ಬರೆದಿಯಾ..ನಿನ್ನ ಆನೆ ಬಂತಾನೆ..ಹಾಡನ್ನು ನಮ್ಮ ಟೀಚರ್ರೂ ಹೇಳಿಕೊಟ್ಟಿದ್ದು ನೆನಪಾಯ್ತು. ನಮ್ದು ಸೇಮ್ ಸಬ್ಜೆಕ್ಟಯ ಅಂತ ಕೃತಿಚೌರ್ಯ ಅಂದ್ರೆ ಉಂಟು ನೋಡು ಮತ್ತೆ ಮಂಗಳಾರತಿ ನಿಂಗೆ ಹೆಹೆಹೆ!

-ಧರಿತ್ರಿ

Roopa said...

ಚೆಂದದ ಲೇಖನ!!

"ಮಗುವೆ ನೀನು ನಗುತಲಿರಲು
ಬದುಕು ಬೆಳಕು ಬೆಳದಿಂಗಳು" ಎಲ್ಲೋ ಓದಿದ್ದ ನೆನಪು!

’ನಗ” ಸಹಜ ಗುಣ, ಅದಕ್ಕೆ ಹುಟ್ಟಿದ ಕೆಲವೆ ದಿನಗಳಲ್ಲಿ ಮಗು ನಗಲು ಶುರುಮಾಡುತ್ತೆ.. ಆದ್ರೆ ಯಾಕೋ ಏನೋ ಬೆಳೆದಂತೆಲ್ಲಾ ಇದು ಮಾಯವಾಗುತ್ತೆ:(

ಜಲನಯನ said...

ಸುಶೃತ,
...............ಏನು..?? ಧರಿತ್ರಿ..ಪಿಕ್ಚರ್ ಹಾಕಿದ್ರೆ ನೀವು ಕಥೆ ಹೆಣಿದ್ರಿ...ನನ್ನ ಭಾವಮಂಥನದಲ್ಲಿ....ಧರಿತ್ರಿಯವರ ಫೋಟೊ ಒಂದಕ್ಕೆ ಭಾವಮಂಥಿಸಿ ಕವನ ಗೀಚಿದ್ದೀನಿ...ಎಲ್ಲ..ಕಾಕತಾಳಿಯವೋ...ಅಥವಾ ನಾವು..ತಾಳೀಯ..ಕಾಕಗಳೋ..??? ಹಹಹ
ಚನ್ನಾಗಿದೆ ನಿಮ್ಮ imagination ಮತ್ತೆ ಶೈಲಿ.