Monday, February 05, 2007

ಹೊಳೆ ಬಾಗಿಲು

ಬಾಗಿಲೆಂದರೆ ಬಾಗಿಲೇ ಆಗಿರಬೇಕೆಂದಿಲ್ಲ. ಅದು ಮರ ಅಥವಾ ಕಬ್ಬಿಣ ಅಥವಾ ತಗಡು ಅಥವಾ ಫೈಬರ್ ಅಥವಾ ಗಾಜಿನಿಂದಲೇ ತಯಾರಾಗಿರಬೇಕೆಂದಿಲ್ಲ. ಅದಕ್ಕೆ ಅಗುಳಿ, ಚಿಲಕ, ಹಿಡಿಕೆ, ಬೀಗ ಇತ್ಯಾದಿಗಳು ಇರಲೇಬೇಕೆಂದಿಲ್ಲ. ಅದನ್ನು ತೆರೆಯಲು - ಮುಚ್ಚಲು ಬರಲೇ ಬೇಕೆಂದಿಲ್ಲ. ಬಾಗಿಲೆಂದರೆ ದ್ವಾರ. ಬಾಗಿಲೆಂದರೆ ಪ್ರವೇಶಸ್ಥಾನ; ಅಷ್ಟೆ. ಉದಾಹರಣೆಗೆ: ಹೊಳೆಬಾಗಿಲು.

ಮೊನ್ನೆ ಊರಿಗೆ ಹೋಗಿದ್ದಾಗ ಅತ್ತೆ ಮನೆಗೆ ಹೋಗಿದ್ದೆ. ಅತ್ತೆ ಎಂದರೆ ಅಪ್ಪನ ತಂಗಿ. ಅತ್ತೆ ಮನೆಗೆ ಹೋಗದೆ ಸುಮಾರು ಮೂರು ವರ್ಷಕ್ಕೆ ಬಂದಿತ್ತು. ಅವರಂತೂ ತುಂಬಾ ಬೇಸರ ಮಾಡಿಕೊಂಡಿದ್ದರು. 'ಒಂದ್ಸಲ ಬಂದುಹೋಗೋ, ದಾರಿ ಮರ್ತುಹೋಗ್ತು ಕೊನಿಗೇ..' ಅಂತ ಅಜ್ಜ ಹೆದರಿಸಿದ್ದ ಕೂಡ. ಹಾಗಾಗಿ ಈ ಸಲದ ಷೆಡ್ಯೂಲಿನಲ್ಲಿ ತಪ್ಪದೇ ಅತ್ತೆಯ ಮನೆಯ ಪ್ರವಾಸವನ್ನು ಸೇರಿಸಿದ್ದೆ. ಅತ್ತೆಯ ಮನೆ ಇರುವುದು ತುಮರಿ-ಸುಳ್ಳಳ್ಳಿಯ ಹತ್ತಿರ. ಸಾಗರದಿಂದ ಸುಮಾರು ಎಂಭತ್ತು ಕಿಲೋಮೀಟರ್ ಆಗುತ್ತದೆ. ಸಾಗರದಿಂದ ಹೊರಟರೆ ಅಲ್ಲಿಗೆ ಮುಟ್ಟಲಿಕ್ಕೆ ಐದು ಗಂಟೆ ತೆಗೆದುಕೊಳ್ಳುತ್ತದೆ ಬಸ್ಸು. ದಿನಕ್ಕೆ ಕೇವಲ ಎರಡೇ ಬಸ್ಸು ಇರುವುದು. ಅತ್ತೆ ಮನೆಗೆ ಹೋಗಬೇಕಾದರೆ ಹೊಳೆ ದಾಟಿ ಹೋಗಬೇಕು. ಹೊಳೆಯೆಂದರೆ ಶರಾವತಿ ನದಿಯ ಹಿನ್ನೀರು. ಸಾಗರದಿಂದ ಹೊರಟ ಬಸ್ಸು ಒಂದು ಗಂಟೆ ಸಮಯದಲ್ಲಿ ಹೊಳೆಬಾಗಿಲಿಗೆ ಬರುತ್ತದೆ.

ಹೊಳೆಬಾಗಿಲು. ಬಾಗಿಲೆಂದರೆ ಇಲ್ಲೇನು ಹೊಳೆಯ ಸುತ್ತ ಗೋಡೆ ಕಟ್ಟಿ ಕದವನ್ನಿಟ್ಟಿಲ್ಲ. ಹಾಗಂತ ಗೋಡೆಗಳಿದ್ದರೆ ಮಾತ್ರ ಬಾಗಿಲು ಇರಬೇಕು ಎಂದೇನಿಲ್ಲವಲ್ಲ? ಹೊಳೆಗೆಂಥಾ ಬಾಗಿಲು? ಇಲ್ಲಿ ಹೊಳೆಗೆ ಹೊಳೆಯೇ ಬಾಗಿಲು. ಅತ್ತೆಯ ಮನೆಗೆ ಹೋಗಬೇಕು ಎಂದರೆ ಹೊಳೆಯನ್ನು ದಾಟಿಯೇ ಹೋಗಬೇಕು. ಎಷ್ಟೇ ವೇಗವಾಗಿ ಬನ್ನಿ ನೀವು, ಇಲ್ಲಿಗೆ ಬಂದಾಕ್ಷಣ ಹೊಳೆ ನಿಮ್ಮನ್ನು ತಡೆದು ನಿಲ್ಲಿಸುತ್ತದೆ. ಅವಸರ ಸಲ್ಲ. ತಾಳ್ಮೆಯೇ ಎಲ್ಲ. ಲಾಂಚು ಇನ್ನೂ ಆಚೆಯ ದಡವನ್ನೇ ಬಿಟ್ಟಿಲ್ಲ. ಅಗೋ, ಹಾಂ, ಅಲ್ಲಿ, ಒಂದು ಬೆಂಕಿಪೊಟ್ಟಣದಂತೆ ಕಾಣಿಸುತ್ತಿದೆಯಲ್ಲ, ಅದೇ ಲಾಂಚು. ಅದು ಅಲ್ಲಿಂದ ಜನ, ವಾಹನಗಳನ್ನೆಲ್ಲಾ ಹತ್ತಿಸಿಕೊಂಡು ನಿಧನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಅಲ್ಲಿಯವರೆಗೆ ನೀವು ಏನು ಹಾರಾಡಿದರೂ ನಡೆಯುವುದಿಲ್ಲ.

ಬೇಕಿದ್ದರೆ ಈ ದಂಡೆಗುಂಟ ಅಡ್ಡಾಡುತ್ತಾ ಕಪ್ಪೆ ಚಿಪ್ಪು, ನುಣ್ಣನೆ ಉರೂಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ, ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿ ಬರುವುದನ್ನು ನೋಡುತ್ತಾ ಮೈಮರೆಯಬಹುದು. ಹೊಳೆಯಲ್ಲಿ ಸಾಕಷ್ಟು ಮೀನುಗಳಿವೆ. 'ಗೊಜಮಂಡೆ' ಎಂದು ಕರೆಯಲಾಗುವ ಕಪ್ಪೆಯ ಪೂರ್ವಜ ಜೀವಿಗಳಿವೆ. ಅವು ಆಗೀಗ ಗುಂಪಾಗಿ ಬಂದು ನೀರಿನ ಮೇಲ್ಗಡೆ ಒಮ್ಮೆ ಕತ್ತು ತೂರಿಸಿ ಮಾಯವಾಗುತ್ತವೆ. ಅತ್ತಿತ್ತ ಒಂದೇ ಸಮನೆ ಈಜಾಡುತ್ತಿರುವ ಮೀನುಗಳಂತೂ ಒಮ್ಮೊಮ್ಮೆ ಪೆದ್ದಣ್ಣಗಳಂತೆ, ಒಮ್ಮೊಮ್ಮೆ ಅತ್ಯಂತ ಕ್ರಿಯಾಶೀಲ ಜೀವಿಗಳಂತೆ, ಒಮ್ಮೊಮ್ಮೆ ಭಯಗ್ರಸ್ತ ಗಂಧರ್ವರಂತೆ ಭಾಸವಾಗುತ್ತವೆ. ನಿಮ್ಮ ಬಳಿ ಏನಾದರೂ ತಿಂಡಿಯಿದ್ದರೆ ಈ ಮೀನುಗಳಿಗೆ ಎಸೆಯಬಹುದು. ನೀವು ಎಸೆದ ತಿಂಡಿ ನೀರಿನೊಳಗೆ ಮುಳುಗುವುದರೊಳಗೆ ಅವು ಗುಂಪಾಗಿ ಬಂದು ಅಷ್ಟನ್ನೂ ಕಬಳಿಸಿಬಿಡುತ್ತವೆ. ಮೀನುಗಳ ಜೊತೆ ಆಟವಾಡುತ್ತಾ ನೀವು ಮತ್ಸ್ಯಲೋಕದಲ್ಲಿ ಒಂದಾಗುತ್ತೀರಿ.

ಲಾಂಚು ಈಗ ದಡಕ್ಕೆ ಸನಿಹವಾಗುತ್ತಿದೆ. ಮೊದಲ ಸಲ ಲಾಂಚು ಹತ್ತುವವರ ಸಂಭ್ರಮ, ಕುತೂಹಲಗಳಂತೂ ಹೇಳತೀರದ್ದು. ಅವರು ನೀರಿನ ಸಮೀಪಕ್ಕೆ ಹೋಗಿ ನಿಂತಿದ್ದಾರೆ. ಬಸ್ಸನ್ನೂ ಅದರೊಳಗೆ ಹಾಕುತ್ತಾರಾ? ಅದು ಹೇಗೆ? ಲಾಂಚು ಮಧ್ಯದಲ್ಲಿ ಕೆಟ್ಟುಹೋದರೆ ಗತಿಯೇನು? ಮುಳುಗಿ ಹೋಗುತ್ತಾ? ಅಯ್ಯಯ್ಯೋ! ನಂಗೆ ಈಜು ಬೇರೆ ಬರಲ್ವಲ್ಲಪ್ಪ... ಲಾಂಚಿನ ಡ್ರೈವರ್ ಎಲ್ಲಿ ಕುಳಿತಿರುತ್ತಾನೆ? ಇದೇ ಲಾಂಚನ್ನು ಇದೇ ಇದೇ ರೂಟಿನಲ್ಲಿ ಪ್ರತಿದಿನವೂ ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವುದಿಲ್ಲವಾ? ಪ್ರಶ್ನೆಗಳು ಜೇನ್ನೊಣದಂತೆ ಕಾಡುತ್ತಿರಲು.. ಅಗೋ ಲಾಂಚು ಹತ್ತಿರಾಗುತ್ತಿದೆ.. ದಾರಿ ಬಿಡಿ, ಇಲ್ಲಿಗೇ ಬರುತ್ತದೆ ಲಾಂಚು..

ಲಾಂಚು ಬಂದು ನಿಂತದ್ದೇ ಮೊದಲು ಜನರೆಲ್ಲ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ವಾಹನಗಳೆಲ್ಲ ಒಂದೊಂದೊಂದಾಗಿ ಬರುತ್ತಿವೆ. ಎಲ್ಲಾ ವಾಹನಗಳೂ ಹಿಡಿಸುವುದಿಲ್ಲ. ಒಂದು ಕಾರಿಗೆ ಮಾತ್ರ ಜಾಗ ಸಿಕ್ಕಿಲ್ಲ. ಸಿನಿಮಾಕ್ಕೆ ಟಿಕೇಟು ಸಿಗದಿರುವವನ ಪರಿಸ್ಥಿತಿ ಈ ಕಾರಿನದ್ದು. ಪಾಪ, ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕು. ಲಾಂಚು ಇನ್ನೇನು ಹೊರಟಿತು ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂದಿದೆ. ಅದನ್ನು ಸಹ ಹತ್ತಿಸಿಕೊಳ್ಳಲಾಗಿದೆ. ಬಂದವನು ಬೈಕಿನಲ್ಲೇ ಬಂದಿದ್ದರೂ ಓಡಿ ಬಂದು ಬಸ್ಸು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ.

ಲಾಂಚು ಹೊರಟಿದೆ ಈಗ. ಲಾಂಚಿನ ಸಿಬ್ಭಂದಿಯೊಬ್ಬ ಟಿಕೀಟು ಕೇಳುತ್ತಾ ಬರುತ್ತಿದ್ದಾನೆ. ಲಾಂಚಿನ ಪರಿಚಯವಿದ್ದವರೆಲ್ಲ ಧೀರರಂತೆ ಅಂಚಿಗೆ ಹೋಗಿ ಸರಳಿಗೆ ಒರಗಿ ನಿಂತಿದ್ದಾರೆ. ಮೊದಲ ಬಾರಿ ಲಾಂಚ್ ಪಯಣಕ್ಕೆ ಬಂದವರು ಒಳಗೆ ಹೋಗಿ ಕುಳಿತಿದ್ದಾರೆ. ಅವರಿಗೆ ಲಾಂಚು ಚಲಿಸುತ್ತಿದ್ದರೂ ನಿಂತಿದ್ದಂತೆ ಭಾಸವಾಗುತ್ತಿದೆ. ಅಜ್ಜಿಯೊಂದು ಕೈಮುಗಿದು ಕಣ್ಮುಚ್ಚಿ ಕುಳಿತಿದೆ: 'ದೇವರೇ, ಸುಖವಾಗಿ ಆಚೆ ದಡ ತಲುಪಿಸಪ್ಪಾ..' ಲಾಂಚು ಸ್ವಲ್ಪ ದೂರ ಹೋಗುತ್ತಿದ್ದಂತೆ ಒಳಗೆ ಕುಳಿತಿದ್ದ ಗಂಡಸರಿಗೆ ಸ್ವಲ್ಪ ಧೈರ್ಯ ಬಂದು, ಅಲ್ಲೇ ಕುಳಿತಿರಲು ಬೇಸರವಾಗಿ ಅವರು ಹೊರಬಂದಿದ್ದಾರೆ. ಕಂಬಿಗಳನ್ನು ಹಿಡಿದುಕೊಳ್ಳುತ್ತಾ ಓಡಾಡುತ್ತಿದ್ದಾರೆ. ಅರೆ! ಲಾಂಚಿನಲ್ಲಿ 'ಜಂಪ್ಸ್' ಆಗುವುದೇ ಇಲ್ಲ! ಈಗ ಅವರು ಕೈ ಬಿಟ್ಟು ನಡೆದಿದ್ದಾರೆ. ಅಪ್ಪನೊಂದಿಗೆ ಹೊರಬಂದ ಹುಡುಗನೊಬ್ಬ ಕೇಳುತ್ತಿದ್ದಾನೆ: "ಅಪ್ಪಾ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ..." ಅಪ್ಪನಿಗೂ ಈಗ ಯೋಚನೆಯಾಗಿದೆ: 'ಅರೆ! ಹೌದಲ್ಲಾ ಇಷ್ಟು ದೊಡ್ಡ ಲಾಂಚನ್ನು....' ಆದರೂ ಆತ ಎಲ್ಲಾ ತಿಳಿದವನಂತೆ "ಇದನ್ನು ದೂರದ ಸಮುದ್ರದಿಂದ ಡ್ರೈವ್ ಮಾಡಿಕೊಂಡು ಬಂದದ್ದು. ಈ ಹೊಳೆ ಹೋಗಿ ಸಮುದ್ರಕ್ಕೆ ಸೇರುತ್ತಲ್ಲ, ಅಲ್ಲಿಂದ ಬಂದದ್ದು ಇದು.." ಎಂದು ಏನೋ ಒಂದು ಸಮಜಾಯಿಷಿ ಕೊಟ್ಟಿದ್ದಾನೆ. ಆದರೂ ಅವನನ್ನು ಆ ಪ್ರಶ್ನೆ ಕಾಡುತ್ತಲೇ ಇದೆ: ಹ್ಯಾಗೆ ತಂದರು ಇದನ್ನು...? ಯಾರನ್ನಾದರೂ ಕೇಳೋಣವೆಂದರೆ, ಮುಜುಗರವಾಗಿ ಸುಮ್ಮನಾಗಿದ್ದಾನೆ.

ಪ್ರಶಾಂತ ಸಾಗರದಂತಹ ಹೊಳೆಯಲ್ಲಿ ನಿಧಾನವಾಗಿ ಸಾಗುತ್ತಿದೆ ಲಾಂಚು. ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಅಲೆಗಳ ಮೇಲೆ ತೇಲುತ್ತಾ ಸಾಗುತ್ತಿರಲು ಅಯಾಚಿತವಾಗಿ ನಿಮ್ಮ ನೆನಪಿನ ಕೋಶದಿಂದ ಹೊರಬರುತ್ತದೆ ಆ ಹಾಡು:

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ ||

ಹೊಳೆಬಾಗಿಲಿನಲ್ಲಿ ನಿಮ್ಮ ಮನದ ಬಾಗಿಲು ತೆರೆದುಕೊಳ್ಳುತ್ತದೆ. ಈ ಹೊಳೆಯ ಆಚೆ ದಡದಲ್ಲಿ ಒಂದು ಹೋಟೆಲ್ಲಿದೆ. 'ಹೋಟೆಲ್ ಶರಾವತಿ' ಅಂತ. ಸಾಗರಕ್ಕೆ ಹೋಗುವಾಗ-ಬರುವಾಗ ಪ್ರತಿ ಬಸ್ಸೂ ಇಲ್ಲಿ ಹತ್ತು ನಿಮಿಷ ನಿಲ್ಲುತ್ತದೆ. ಉಪ್ಪಿಟ್ಟು, ಚಿತ್ರಾನ್ನ, ಮೊಸರನ್ನ, ಭಜ್ಜಿ, ಬಿಸ್ಸಿಬಿಸಿ ಕಾಫಿ-ಟೀ-ಕಷಾಯ... ಎಲ್ಲಾ ಸಿಗುತ್ತದೆ. ಸುಮಾರು ಹದಿನೈದು ವರ್ಷಗಳಿಂದಲೂ ಇದೆ ಈ ಹೋಟೆಲ್ಲು. ಇದರ ಮಾಲೀಕರ ನಿಜವಾದ ಹೆಸರೇನೆಂಬುದು ಯಾರಿಗೂ ನೆನಪಿಲ್ಲ. ಎಲ್ಲರೂ ಅವರನ್ನು 'ಹೊಳೆ ಭಟ್ರು' ಅಂತಲೇ ಕರೆಯುವುದು. ಈ ಹೊಳೆಭಟ್ರು ಸುಮಾರು ಅರವತ್ತರ ಪ್ರಾಯದ ಬಲು ಗಟ್ಟಿ ಮನುಷ್ಯ. ಹತ್ತಿರದ ಯಾವುದೇ ಊರಿನಲ್ಲಿ ಕಾರ್ಯವಿದ್ದರೂ ಇವರಿಗೆ ಕರೆ ಬರುತ್ತದೆ. ಭಟ್ರು ತಪ್ಪದೇ ಹೋಗುತ್ತಾರೆ. ಊಟದ ನಂತರದ ಇಸ್ಪೀಟು ಕಂಬಳದಲ್ಲಿ ಹೊಳೆಭಟ್ರು ಇರಲೇಬೇಕು. ಯಾರ ಮನೆಯಲ್ಲಾದರೂ ತಿಥಿಯಿದ್ದರೆ ಇವರನ್ನು ವೈದಿಕರನ್ನಾಗಿ ಕರೆಯುತ್ತಾರೆ. ಹೆಚ್ಚಿಗೆ ಮಾತಾಡದ, ಮಿತಭಾಷಿ ಎಂದೇ ಜನಜನಿತರಾಗಿರುವ ಹೊಳೆಭಟ್ರು ಹಾಗಾಗುವುದಕ್ಕೆ ಕಾರಣ ಅವರ ಬಾಯಲ್ಲಿ ಸದಾ ಇರುವ ಕವಳವೇ ಹೌದಾ ಎಂಬುದು ಕೆಲವರ ಅನುಮಾನ.

ದಡ ಈಗ ಸಮೀಪಿಸುತ್ತಿದೆ. ಹೊಳೆಯ ಅಂಚು ದಡದ ಅಂಚಿಗೆ ಸೇರಿದ ಜಾಗ ಅಗೋ ಕಾಣುತ್ತಿದೆ. ಪಯಣ ಮುಗಿದಿದೆ. ಲಾಂಚು ತನ್ನ ಬಾಹುಗಳನ್ನು ದಡದತ್ತ ಹೊರಳಿಸುತ್ತಿದೆ. ದಡದಲ್ಲಿ ಲಾಂಚಿಗಾಗಿ ಕಾಯುತ್ತಾ ನಿಂತಿರುವ ಜೀವಿಗಳ ಮೊಗದಲ್ಲಿ ಹೊಮ್ಮಿದ ಮುಗುಳ್ನಗೆ ಇಲ್ಲಿಂದಲೇ ಕಾಣುತ್ತಿದೆ. ಬೈಕು, ಕಾರುಗಳು ಸ್ಟಾರ್ಟ್ ಆಗುತ್ತಿವೆ. ಲಾಂಚು ನಿಂತಿದ್ದೇ ಎಲ್ಲಾ ಆಚೆ ದಡಕ್ಕೆ ಜಿಗಿದಿದ್ದಾರೆ. ಬಸ್ಸು, ಕಾರು, ಬೈಕುಗಳು ಬುರಬುರನೆ ದಡ ಸೇರಿವೆ.

ಎಲ್ಲರೂ ಹೋಟೆಲ್ಲಿಗೆ ನುಗ್ಗಿದ್ದಾರೆ. 'ಮಾಣಿ, ಇವತ್ತು ಏನು ವಿಶೇಷ ಮಾಡಿದ್ರಾ?' ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ. ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಕಂಡಕ್ಟರ್ ಬಳಿ 'ಉಚ್ಚೆ ಹೊಯ್ದು ಬರ್ತೀನಿ' ಎಂದು ಹೇಳಿ ಹೋದ ಕಳಸವಳ್ಳಿ ಮಾಬ್ಲಣ್ಣ ಇನ್ನೂ ಬಂದಿಲ್ಲ. ಅಗೋ ಪಂಚೆ ಸುತ್ತಿಕೊಳ್ಳುತ್ತಾ ಓಡಿ ಬರುತ್ತಿದ್ದಾರೆ ಮಾಬ್ಲಣ್ಣ.. ಬಸ್ಸು ಹೊರಟಿದೆ.. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ ನಾಗಾಲೋಟದಲ್ಲಿ.

20 comments:

ಶ್ರೀನಿಧಿ.ಡಿ.ಎಸ್ said...

ಹ್ವಾ! ಚೊಲೋ ಬರದ್ಯೋ..

ಹೊಳೆಬಾಗ್ಲಿಗೆ ಮೊನ್ ಮೊನ್ನೆ ಅಷ್ಟೇ ಹೋಗಿದಿದ್ದಿ ನಾನೂವ..

Sushrutha Dodderi said...

@ ಶ್ರೀನಿಧಿ....

ಧನ್ಯವಾದಗಳು.

ಮರೆತುಹೋಗಿತ್ತು, ಮಧು ನೆನಪು ಮಾಡಿದ: ಹೊಳೆಬಾಗ್ಲು ಹೋಟ್ಲಲ್ಲಿ ಒಳ್ಳೇ ಶಂಕರಪೋಳೆ ಸಿಗ್ತು. ಪಯಣದ ಮಜಾಗಳಲ್ಲಿ ಅದೂ ಒಂದು. ಮಧು ಪ್ರಕಾರ ಅದೇ ಮುಖ್ಯ :)

ರಾಧಾಕೃಷ್ಣ ಆನೆಗುಂಡಿ. said...

ನಿಮ್ಮೋರಿನ ಪ್ರಯಾಣದ ವಿವರ ಚೆನ್ನಾಗಿತ್ತು.ನನಗೊಂದು ಸುದ್ದಿ ಹೇಳ ಬಾರದಿತ್ತೇ. ನಾನು ಬರುತ್ತಿದ್ದೆ.

Sushrutha Dodderi said...

@ ರಾಧಾಕೃಷ್ಣ ಆನೆಗುಂಡಿ.

ಧನ್ಯವಾದಗಳು. ನೀವು ಬರ್ತೀರಿ ಅಂತ ಗೊತ್ತಿದ್ರೆ ಖಂಡಿತ ಕರೀತಿದ್ದೆ... ;)

Raghavendra Korakodu said...

Ella Magne. Estu channagi baradidiya........

Nange holebagilige hogibanda thara ayatallo;......


Heege baritha iru

Sushrutha Dodderi said...

@ Raghavendra Korakodu

Thank you Raaghu. Ninna comment nodi ninnoo nanjothe karkondu hogi bandange aaythu.. :)

ಸಿಂಧು sindhu said...

ಹೊಳೆಬಾಗಿಲು…!
ಎಳವೆಯಲಿ ನೋಡಿದ್ದು,
ಹೆದರಿಕೊಂಡರೂ ಹೊಳೆ ದಾಟಿದ್ದು
ಲಾಂಚಿನ ಬಿರುಕುಗಳಲ್ಲಿ ಕಣ್ಣಿಟ್ಟು ನೀರಿನಾಳ ಅಳೆದಿದ್ದು.. :)
ಬರಲೇಬೇಕೆಂದುಕೊಂಡಿದ್ದು,ಹೋಗದೆ ಇದ್ದಿದ್ದು..
ಆಮ್ರುತ ಘಳಿಗೆಯ ಫೊಟೊಗ್ರಫರನ ಕಣ್ಣಲ್ಲಿ ಚೆಲುವಾಗಿ ಅರಳಿ ನಿಂತು,ಒಲುಮೆ ಹಾಡಾಗಿ ಹೊಮ್ಮಿದ್ದು...

ಎಲ್ಲ ನೆನಪಾಯಿತಲ್ಲ ಸು, ನಿನ್ನ ಬ್ಲಾಗ್ ಓದಿ…!

ಚೆಲುವಿನ ಚಿತ್ರಣವನ್ನ ಒಪ್ಪವಾಗಿ ಕಟ್ಟಿಕೊಟ್ಟಿದ್ದಕ್ಕೆ
ಧನ್ಯವಾದಗಳು..
ಮುಂದಿನ ಸಲ ಹೇಗಾದರು ಮಾಡಿ ಹೋಗಿಯೆ ತೀರುತ್ತೇನೆ..

Sushrutha Dodderi said...

@ ಸಿಂಧು

ಥ್ಯಾಂಕ್ಸ್ ಅಕ್ಕ. ಅಮೃತ ಘಳಿಗೆಯನ್ನು ನೆನಪಿಸಿದ್ದಕ್ಕೆ ಮತ್ತೊಂದು ಥ್ಯಾಂಕ್ಸ್. ಮಲೆನಾಡೇ ಹಾಗೇನೋ.. ಪ್ರಕೃತಿಯ ಸೊಬಗನ್ನು ಆಸ್ವಾದಿಸುತ್ತಾ ನೀರ ತೆರೆಗಳ ಮೇಲೆ ತೇಲುವ ಚಿತ್ರಣವೇ ತುಂಬಾ ಮುದ ನೀಡುತ್ತದೆ.. ಪ್ರಕೃತಿಯ ಬಗ್ಗೆ ಏನೇ ಓದಿದರೂ ಖುಷಿಯಾಗುತ್ತದೆ.. ಮನ ತುಂಬಿಕೊಳ್ಳುತ್ತದೆ..

Ultrafast laser said...

Hi Sushruth,
Looks like you are emerging as a good writer. Wish you goodluck.

Dr.D.M.Sagar
Montreal, CANADA

Sushrutha Dodderi said...

@ condumdots

Manjanna..! welcome to my blog..! Thank u very much for your wishes. Keep visiting. (hesaru nODi bhaya aathu ondsla..!)

ಮನಸ್ವಿನಿ said...

ಸುಶ್ರುತ,

ಮಸ್ತ್ ಲೇಖನ... ಓದಿ ಖುಶಿ ಆಯ್ತು :)

Pramod P T said...

chennaagideri....
onderaDu photos idre haakiri lekhanada jotege..

Sushrutha Dodderi said...

@ ಮನಸ್ವಿನಿ

ನಿಮ್ ಖುಶಿನೇ ನಮ್ ಖುಷಿ... :) ಥ್ಯಾಂಕ್ಸ್..

Sushrutha Dodderi said...

@ pramod p t

oohum, photos illa kanri. adakkE aksharagalalle chitragalannu heneyalikke prayatnisideeni... thanx..

bhadra said...

ಪ್ರವಾಸದ ಅನುಭವ ಲೇಖನ ಬಹಳ ಸುಂದರವಾಗಿ ನಿರೂಪಿತವಾಗಿದೆ. ನನ್ನನ್ನಂತೂ ಬಾಲ್ಯದ ದಿನಗಳಿಗೆ (೧೯೬೪-೬೬) ಕರೆದೊಯ್ದಿತು. ಹೊಳೆಮನೆ ಎಂದರೆ ಕಾರ್ಗಲ್ಲಿಗಿಂಗ ಮೊದಲು ಬರುವುದಾ? ಕಾರ್ಗಲ್ ಮತ್ತು ಲಿಂಗನಮಕ್ಕಿಯ ಮಧ್ಯದಲ್ಲಿ ಕಾಳ್ಮಂಜಿ ಅಂತ ಒಂದು ಪುಟ್ಟ ಕಾಡಿತ್ತು. ಈಗಿದೆಯೋ ಇಲ್ಲವೋ, ತಿಳಿಯದು. ಆಗ ಲಿಂಗನಮಕ್ಕಿಯಿಂದ ಜೋಗಕ್ಕೆ ಒಂದೇ ಬಸ್ಸಿದ್ದದ್ದು. ಮುಂದೆ ಅದು ಭಟ್ಕಳಕ್ಕೆ ಹೋಗುತ್ತಿತ್ತು. ಅದನ್ನು ಬಂಗಡಿ ಮೀನು ಅಂತ ಕರೆಯುತ್ತಿದ್ದರು. ಲಿಂಗನಮಕ್ಕಿ ಅಣೆಕಟ್ಟು ಕಟ್ಟುವಾಗ ಅದರ ಹತ್ತಿರದಲ್ಲಿದ್ದ ನಾರಾಯಣರಾವ್ ಅವರ ಪೇಪರ್ ಅಂಗಡಿ, ಪುಟ್ಟ ಹೊಟೆಲ್, ಕ್ಷೌರಿಕನ ಅಂಗಡಿ - ಅಲ್ಲಿಯ ರೇಡಿಯೋ ಉಲಿಯುತ್ತಿದ್ದ ಹಳೆಯ ತಮಿಳು ಹಾಡುಗಳು, ... ಈಗೆಲ್ಲಾ ಅವು ಕನಸುಗಳು.

ಹಿಂದಿನ ದಿನಗಳಿಗೆ ಕರೆದೊಯ್ದದ್ದಕ್ಕೆ ವಂದನೆಗಳು.

Sushrutha Dodderi said...

@ srinivas

ತವಿಶ್ರೀ ಸರ್, ಹೊಳೆಬಾಗಿಲು ಸಾಗರದಿಂದ ಸಿಗಂದೂರು-ತುಮರಿ-ಸುಳ್ಳಳ್ಳಿ ಕಡೆ ಹೋಗುವಾಗ ಸಿಗುತ್ತದೆ. In fact, ಇದೇ ಮಾರ್ಗವಾಗಿ ಮುಂದೆ ಸಾಗಿದರೆ ಕಾರ್ಗಲ್ ಸಿಗುತ್ತದೆ; ಆದರೆ ಇದು famous route ಅಲ್ಲ. ಹಿಂದೆ ಇದೇ ಮಾರ್ಗವಾಗಿ ಚಲಿಸುತ್ತಿದ್ದರೋ ಏನೋ ನನಗೆ ಗೊತ್ತಿಲ್ಲ. ನೀವು ಹೇಳಿದ 'ಹೊಳೆಮನೆ' ಬೇರೆ ಇರಬೇಕು. ಅದು ಎಲ್ಲಿದೇಂತ ನನಗೆ ಸಧ್ಯಕ್ಕೆ ನೆನಪಾಗುತ್ತಿಲ್ಲ... ಯಾರನ್ನಾದರೂ ಕೇಳಿ ನೋಡುತ್ತೇನೆ. ಧನ್ಯವಾದಗಳು.

Shiv said...

ಸುಶ್ರುತ,

ನಿನ್ನ ಜೊತೆ ಲಾಂಚಿನಲ್ಲಿ ಹೊಳೆ ದಾಟಿ, ಹೊಳೆಭಟ್ಟರನ್ನು ಕಂಡು ಬಂದಾಗೆ ಆಯ್ತು. ಕಣ್ಣಿಗೆ ಕಟ್ಟುವಂತೆ ಇದೆ ಲೇಖನ..ತುಂಬಾ ಮುದ ನೀಡ್ತು ಲೇಖನ..

Sushrutha Dodderi said...

@ shiv

ಥ್ಯಾಂಕ್ಸ್ ಶಿವು. ಅಂದ್‍ಹಾಗೆ, ಹೊಳೆಭಟ್ರು ನೀವು ನೋಡ್ದಾಗ್ಲೂ ಕವಳ ಹಾಕ್ಕೊಂಡೇ ಇದ್ರಾ?

ರಾಜೇಶ್ ನಾಯ್ಕ said...

ಸುಶ್ರುತರವರೆ,

ಮತ್ತೊಂದು ಮನಸ್ಸಿಗೆ ಮುದ ನೀಡಿದ ಲೇಖನ. ನಿಮ್ಮ ಬರವಣಿಗೆ ಶೈಲಿ ಬಹಳ ಖುಷಿ ನೀಡುತ್ತಿದೆ. ಬರೆಯುತ್ತಾ ಇರಿ. ಓದಲು ನಾವಿದ್ದೇವೆ.

ರಾಜೇಶ್ ನಾಯ್ಕ

Sushrutha Dodderi said...

@ ರಾಜೇಶ್ ನಾಯ್ಕ

ಓದಲು ನೀವಿರುವಾಗ ಬರೆಯಲಿಕ್ಕೆ ನನಗಿನ್ನೇನು, ಅಲ್ವಾ? ಬರೀತೀನಿ ಬಿಡಿ.. :) ಥ್ಯಾಂಕ್ಸ್...