Friday, February 23, 2007

ಇರುವೆ... ನೀ ಎಲ್ಲಿರುವೆ?

ನನಗೊಂಥರಾ ತಿಕ್ಕಲು ಅಂತ ಈ ಮೊದಲೇ ಹೇಳಿದ್ದೆ ಅನ್ಸುತ್ತೆ ಅಲ್ವಾ? ಹೂಂ ಹೇಳಿದ್ದೆ. ಅದೇ ದೀಪಾವಳಿ ಸಮಯದಲ್ಲಿ... ನಿಮಗೊಂದು ಗ್ರೀಟಿಂಗ್ ಕಳ್ಸಿದ್ನಲ್ಲ, ಅವಾಗ ಹೇಳಿದ್ದೆ. ಈಗ ಅದ್ನೇ ಇನ್ನೊಂದ್ ಸ್ವಲ್ಪ ಡೀಟೇಲಾಗಿ ಹೇಳ್ತೀನಿ ಕೇಳಿ..! ಏನ್ಗೊತ್ತಾ? ಕೆಲವೊಮ್ಮೆ ರೂಮಿನಲ್ಲಿ ಏನೂ ಮಾಡದೇ ಸುಮ್ಮನೆ ಕುಳಿತಿರುತ್ತೇನೆ. ಬೇಕಷ್ಟು ಓದಲಿಕ್ಕಿರುತ್ತದೆ; ಆದರೆ ಓದುತ್ತಿರುವುದಿಲ್ಲ. ಬರೆಯುವುದಿರುತ್ತದೆ; ಬರೆಯುತ್ತಿರುವುದಿಲ್ಲ. ಮಾಡಬೇಕಾದ ಕೆಲಸವೂ ಇರುತ್ತದೆ; ಮಾಡುತ್ತಿರುವುದಿಲ್ಲ. ಮೂಡ್‍ಲೆಸ್‍ನೆಸ್ ಏನಲ್ಲ ಅದು; ಒಂಥರಾ ಏನೂ ಮಾಡಲಿಕ್ಕೆ ಬಾರದ ಮೂಡು. ಅಥವಾ ಸುಮ್ಮನೆ ಕೂರಬೇಕೆನಿಸುವ ಮೂಡು!

ನಿನ್ನೆ ರಾತ್ರೀನೂ ಹಾಗೇ. ಏನನ್ನೋ ಯೋಚಿಸುತ್ತಾ ಕೂತಿದ್ದೆ. ನನ್ನ ಎದಿರುಗಡೆ ಗೋಡೆಯ ಅಂಚಿನಲ್ಲಿ ಒಂದು ಇರುವೆಯ ಸಾಲು. ನೂರಾರು ಪುಟ್ಟ ಪುಟ್ಟ ಇರುವೆಗಳು ತರಾತುರಿಯಿಂದ ಓಡಾಡುತ್ತಿವೆ. ಸುಮ್ಮನೆ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿವೆ. ಸಾಲಾಗಿ ಓಡುತ್ತಿವೆ. ಕೆಲವೊಂದು ಇರುವೆಗಳು ನಡೆದುಕೊಂಡು ಹೋಗುತ್ತಿವೆ. ಕೆಲವೊಂದು ಬಾಯಲ್ಲಿ ಏನನ್ನೋ ಕಚ್ಚಿ ಹೊತ್ತುಕೊಂಡು ಹೋಗುತ್ತಿವೆ. ಏನದು ಬಾಯಲ್ಲಿ? ನಾನು ಗಮನವಿಟ್ಟು ನೊಡಿದೆ. ಎಲ್ಲಿಂದ ಬರುತ್ತಿವೆ ಇವು ಅಂತ ಹುಡುಕುತ್ತಾ ಇರುವೆಯ ಸಾಲನ್ನೇ ಹಿಂಬಾಲಿಸುತ್ತಾ ಹೋದೆ. ಕೊನೆಗೂ ಪತ್ತೆಯಾಯಿತು: ಮೊನ್ನೆ ರಾತ್ರಿ ನಾನು ತಿನ್ನುತ್ತಾ ಅಲ್ಲೇ ಮರೆತಿದ್ದ ಬಿಸ್ಕೆಟ್ ಪ್ಯಾಕ್ ಒಂದಕ್ಕೆ ಮುತ್ತಿಕೊಂಡಿವೆ ಇರುವೆಗಳು. ಕೊನೆಯ ನಾಲ್ಕು ಬಿಸ್ಕೆಟ್ಟುಗಳು ಪ್ಯಾಕಿನಲ್ಲಿದ್ದವು ಕಣ್ರೀ. ಈ ಇರುವೆಗಳು ಅವನ್ನು ಕಥಂ ಮಾಡಲು ಬಂದಿದ್ದವು. ಚೂರು ಚೂರೇ ಬಿಸ್ಕೆಟ್ಟು ಮುರಿದುಕೊಂಡು ತಮ್ಮ ಗೂಡಿಗೆ ಸಾಗಿಸುತ್ತಿದ್ದವು. ಎದಿರುಗಡೆ ಸಿಕ್ಕ ತಮ್ಮ ಗೆಳೆಯರಿಗೆ 'ಮುತ್ತು' ಕೊಟ್ಟುಕೊಳ್ಳುತ್ತಾ, ಮುತ್ತಿನಲ್ಲೇ ಸಂದೇಶ ಹೇಳಿಕೊಳ್ಳುತ್ತಾ ಸಾಗುತ್ತಿದ್ದವು. ತುಟಿಗಳಿಗೆ ತುಟಿ ಸೇರಿಸುವುದೇ ಸಂದೇಶ ತಲುಪಿಸಲಿಕ್ಕೆ ಉತ್ತಮ ವಿಧಾನ ಎಂಬ ಅರಿವು ಇರುವೆಗಳಿಗೂ ಆಗಿದೆಯಲ್ಲಾ ಎಂದು ನಾನು ಸಂತಸಗೊಂಡೆ. ಕೆಲವೊಂದು ಇರುವೆಗಳು 'ಜಸ್ಟ್ ಕಿಸ್' ಕೊಟ್ಟು ಮುಂದಾಗುತ್ತಿದ್ದರೆ ಮತ್ತೆ ಕೆಲವು ಸುದೀರ್ಘ ಚುಂಬನದಲ್ಲಿ ತೊಡಗುತ್ತಿದ್ದವು. ಅವುಗಳ 'ಸ್ಮೂಚಿಂಗ್' ನೋಡುತ್ತಾ ನಾನು ಒಂದು ಕ್ಷಣ ಮೈಮರೆತೆ.

ಇರುವೆಗಳು ಕಷ್ಟ ಪಟ್ಟು ಎಷ್ಟೊಂದು ದೂರದಿಂದ ಈ ಬಿಸ್ಕೆಟ್‍ಗಾಗಿ ಬರುತ್ತಿವೆ. ನನಗೆ ಅವುಗಳ ಕಷ್ಟ ಕಂಡು ಕನಿಕರವಾಯಿತು. ಆ ಬಿಸ್ಕೆಟ್ ಪ್ಯಾಕನ್ನು ಅವುಗಳ ಗೂಡಿನ ಬಳಿಯೇ ಒಯ್ದು ಇಟ್ಟುಬಿಟ್ಟೆ. ನಂತರ ನನ್ನ 'ಬದುಕಿನ ಪುಟಗಳ'ನ್ನು ತಿರುವಿ ಹಾಕುತ್ತಾ ಕುಳಿತೆ.

ಈ 'ಬದುಕಿನ ಪುಟಗಳು' ಎಂಬುದು, ನಾನು ಬರೆದ ಹಾಳೆಗಳನ್ನೆಲ್ಲಾ ಜೋಡಿಸಿಟ್ಟ ಒಂದು ಫೈಲು. ಈ ಫೈಲಿನಲ್ಲಿ ನಾನು ಇದುವರೆಗೆ ಬರೆದ ಯಾವತ್ತೂ ಕವನ, ಚುಟುಕು, ಲಹರಿ, ಹನಿ, ಹಾಯಿಕು, ಮಿನಿ ಕಥೆ, ಅರ್ಧ ಬರೆದಿಟ್ಟ ಅದೆಷ್ಟೋ ಕತೆಗಳು, ಯಾರ ಬಳಿಯೂ ಹೇಳಿಕೊಳ್ಳಲಾಗದ ನನ್ನ ಖಾಸಗಿ ಮೌನದ ಮಾತುಗಳು ...ಎಲ್ಲಾ ಇವೆ. ಒಂದರ್ಥದಲ್ಲಿ ಇದು ನನ್ನ ಡೈರಿ. ಏಕೆಂದರೆ ಇಲ್ಲಿಯ ಎಲ್ಲಾ ಬರಹಗಳಲ್ಲಿ -ಒಂದಲ್ಲಾ ಒಂದು ರೂಪದಲ್ಲಿ- ನಾನಿದ್ದೇನೆ. ಅದಕ್ಕೇ ಈ ಫೈಲಿಗೆ 'ಬದುಕಿನ ಹಾಳೆಗಳು' ಅಂತ ಹೆಸರಿಟ್ಟಿದ್ದು. ಹಿಂದೆಂದೋ ಬರೆದಿಟ್ಟಿದ್ದನ್ನು ಇಂದು ಮತ್ತೆ ಓದುವಾಗ 'ಇದು ನಾನೇ ಬರೆದದ್ದಾ?' ಅಂತ ಅದೆಷ್ಟೋ ಬಾರಿ ನನಗನ್ನಿಸಿದ್ದುಂಟು.

ಬ್ಲಾಗಿನ ಬುಟ್ಟಿಗೆ ತುಂಬಬಹುದಾದ್ದಂತದ್ದು ಏನಾದರೂ ಇದೆಯೇ ಎಂಬ ಸದು(?)ದ್ಧೇಶದಿಂದ ನಿನ್ನೆ ಆ ಫೈಲಿನ ಪುಟಗಳನ್ನು ತಿರುವುತ್ತಿದ್ದಾಗ ಸಿಕ್ಕಿಬಿದ್ದವೇ ಈ ಮೂರು ಕವನಗಳು. ಅದರಲ್ಲೊಂದು ಪ್ರಕಟಿತ ಕವನ. ವಿಶೇಷ ಏನಪ್ಪಾ ಅಂದ್ರೆ, ಈ ಮೂರೂ ಕವನಗಳ ಪಾತ್ರಧಾರಿಯೂ 'ಇರುವೆ'! ನಿಮ್ಮ ಖುಷಿಗಲ್ಲ; ನನ್ನ ಖುಷಿಗಾಗಿ (ಮತ್ತೊಮ್ಮೆ!) ಇವನ್ನು ಇಲ್ಲಿ ಪಬ್ಲಿಷ್ ಮಾಡುತ್ತಿದ್ದೇನೆ.

ಇರುವೆ ಕಾಟ

ಇವತ್ತು ನಮ್ಮನೆ ಅಡುಗೆ ಮನೆಗೆ ಇರುವೆಗಳ ದಾಳಿ
ಹೀಗಾಗಿ ಅಮ್ಮನಿಗೆ ಲಕ್ಷ್ಮಣರೇಖೆ ಎಳೆಯುವ ಪಾಳಿ!

ಛೇ! ಹಬ್ಬಕ್ಕೇಂತ ಮಾವ ಬೇರೆ ಬಂದಿದ್ದಾನೆ, ನಾಚಿಕೆ
ಏನು ಮಾಡಿದ್ರೂ ಹೋಗೋಲ್ವೇ ಇವು ಸಾಯೋಕೆ!

ಮಾವ ಬಂದಿದ್ದಕ್ಕೆ ಇವತ್ತು ಅಮ್ಮ ಮಾಡಿದ್ದಾಳೆ ಹಲ್ವಾ
ಅದಕ್ಕೂ ಮುತ್ತಿಕೊಂಡಿವೆ ಇವು; ಇವಕ್ಕೇನು ಸತಾತರ ಇಲ್ವಾ?

ನಾನೆಂದೆ: 'ಅಮ್ಮಾ ಬೇಗ ಮಾವನಿಗೆ ಊಟಕ್ಕೆ ಬಡಿಸು'
ಅಮ್ಮ ಅಂದ್ಲು: 'ಮೊದ್ಲು ನೀನು ಈ ಇರುವೆಗಳನ್ನೆಲ್ಲ ಹೊರಗೆ ಓಡಿಸು'!

ಅಯ್ಯೋ! ಅಪ್ಪಾ, ಅಜ್ಜೀ ಅರಿಶಿಣ ಪುಡಿನಾದ್ರೂ ಹಾಕಿ
ಇನ್ನುಳಿದಿರೋದು ಅದೊಂದೇ ಬಾಕಿ!

ಮನೆ ಎಂದಮೇಲೆ ತಪ್ಪಿದ್ದಲ್ಲ ಇರುವೆ ಕಾಟ
ಆದರೆ ಅದಕ್ಕಾಗಿ ತಡವಾಗಬಾರದಿತ್ತು ಇವತ್ತಿನ ಊಟ!

[ಈ ಪದ್ಯ ಬರೆದಾಗ ನಾನು ಬಹುಶಃ ಒಂಭತ್ತನೇ ತರಗತಿಯಲ್ಲಿದ್ದೆ ಅನ್ಸುತ್ತೆ. ಯಾಕೇಂದ್ರೆ ಇದು ನಮ್ಮ 'ಹಳೇ ಮನೆ'ಯಲ್ಲಿ ನಡೆದ ಘಟನೆ. ನಾನು ಹತ್ತನೇ ತರಗತಿಯಲ್ಲಿದ್ದಾಗ ನಾವು ನಮ್ಮ ಈಗಿರುವ ಹೊಸ ಮನೆಗೆ ಬಂದದ್ದು. ಹಾಗಾಗಿ ಇದನ್ನು 'ಶಿಶುಪದ್ಯ'ಗಳ ಲಿಸ್ಟಿಗೆ ಸೇರಿಸಬಹುದು!]

* * *

ಶ್ರದ್ಧೆ

ಈಗ ರಾತ್ರಿ ಹನ್ನೆರಡು ಗಂಟೆ
ಓದುತ್ತಾ ಕುಳಿತಿದ್ದೇನೆ.
ಎದುರಿನ ಗೋಡೆಯಲ್ಲಿ
ಇರುವೆಯೊಂದು ಮೇಲೇರುತ್ತಿದೆ...
ಛೆ! ಅದು ಕೆಳಗೆ ಬಿದ್ದುಬಿಟ್ಟಿತು!
ನಾನಿನ್ನೂ ಓದುತ್ತಿದ್ದೇನೆ; ತೂಕಡಿಸುತ್ತಿದ್ದೇನೆ
ಅರೆ! ಇರುವೆ ಮತ್ತೆ ಮೇಲೇರುತ್ತಿದೆ...
ಥೂ! ಈ ಸಲವೂ ಬಿತ್ತು.
ಜೋರಾಗಿ ನಿದ್ರೆ ಬರುತ್ತಿದೆ ನನಗೆ...
ಆ ಇರುವೆ ಮತ್ತೆ ಮೇಲೇರುತ್ತಿದೆಯಲ್ಲಾ..?
ಊಹುಂ, ನನಗಿನ್ನು ಓದಲಾಗುವುದಿಲ್ಲ;
ಹೋಗಿ ಮಲಗಿಕೊಳ್ಳುತ್ತೇನೆ.

[ಈ ಕವಿತೆ 'ವಿಜಯ ಕರ್ನಾಟಕ' ಪತ್ರಿಕೆಯ 'ಯುವ ವಿಜಯ' ಪುರವಣಿಯಲ್ಲಿ ಆಗಸ್ಟ್ ೩೧, ೨೦೦೧ ರಂದು ಪ್ರಕಟಗೊಂಡಿತ್ತು.]

* * *

ಇರುವೆ

ಹ್ಯಾಂಗಾಶಿ ಬಂತೋ ಏನೋ, ಆಗಲಿಂದ
ಮೇಜಿನ ಮೇಲೆ ಓಡಾಡುತ್ತಲೇ ಇರುವ ಗೊದ್ದ
ಈಗ ನನಗೆ ಅತ್ಯಾಕರ್ಷಕ ವಸ್ತುವಾಗಿಬಿಟ್ಟಿದೆ.
ಎಷ್ಟೇ ಪುಸ್ತಕದ ಮೇಲೆ ಗಮನ ಹರಿಸಬೇಕೆಂದರೂ
ಮತ್ತೆ ಮತ್ತೆ ಕಣ್ಣು ಗೊದ್ದದ ಮೇಲೇ ಹೋಗುತ್ತದೆ.

ಕೆಂಪು-ಕಪ್ಪು-ಕಂದು ಬಣ್ಣಗಳಿಂದ ಕೂಡಿರುವ
ಈ ಸುಂದರ ಗೊದ್ದಕ್ಕೆ ಆರು ಕಾಲಿದೆ -ನನಗಿಂತ ನಾಲ್ಕು ಜಾಸ್ತಿ!
ಮೀಸೆಯ ಕೂದಲು ನನ್ನವುಗಳಿಗಿಂತ ಉದ್ದಕಿದೆ
ತಲೆ, ತಲೆಗಿಂತ ಚಿಕ್ಕದಾದ ದೇಹ, ಎಲ್ಲಕ್ಕಿಂತ ದೊಡ್ಡದಾದ
ಹಿಂದುಗಡೆ ಪಾರ್ಟು.

ನಾನು ಕಷ್ಟ ಪಟ್ಟು ಮುಖವನ್ನು ಪುಸ್ತಕದಲ್ಲಿ ನೆಟ್ಟು ಕೂತರೆ
ಗೊದ್ದ ಪುಸ್ತಕವನ್ನೇ ಹತ್ತಿ ಬಂದು
ಅಕ್ಷರಗಳ ಮೇಲೆಲ್ಲಾ ಓಡಾಡುತ್ತಾ, ಅಲ್ಲಲ್ಲಿ ನಿಲ್ಲುತ್ತಾ,
ತಲೆಯೆತ್ತಿ ನೋಡುತ್ತಾ, ವಯ್ಯಾರ ಮಾಡುತ್ತಾ,
ಮೀಸೆ ಅಲ್ಲಾಡಿಸುತ್ತಾ, ಘನಗಾಂಭೀರ್ಯದಿಂದ ರಾರಾಜಿಸುತ್ತಿದೆ.

ಒಂದು ನಿಮಿಷ ಸ್ಟ್ರಕ್ಕಾಯಿತೇನೋ ಎಂಬಂತೆ ನಿಂತೇ ಇದ್ದ ಗೊದ್ದ ಇದ್ದಕ್ಕಿದ್ದಂತೆ
ಯಾರಿಂದಲೋ ಕಾಲ್ ಬಂತೇನೋ ಎಂಬಂತೆ ಜೋರಾಗಿ ಓಡತೊಡಗುತ್ತದೆ.
ಸರಸರನೆ ನನ್ನ ದಪ್ಪಗಾತ್ರದ ಪುಸ್ತಕದಿಂದ ಇಳಿದು
ಪಕ್ಕದಲ್ಲಿರುವ ಟೇಬಲ್-ಫ್ಯಾನಿನ ಕಾಲುಗಳ ಮೂಲಕ ಏರುತ್ತಾ,
ಕವಚದ ತಂತಿಗಳ ಮೇಲೆ ಸರ್ಕಸ್‍ಮ್ಯಾನ್‍ನಂತೆ ನರ್ತಿಸುತ್ತಾ,
ಫ್ಯಾನಿನ ಶೃಂಗವನ್ನೇರಿದ ಇರುವೆ 'ಏಯ್ ನೋಡಿಲ್ಲಿ..
ನಾನೇ ನಿನಗಿಂತ ಮೇಲೆ' ಎಂಬಂತೆ ನನ್ನನ್ನೇ ನೋಡುತ್ತಿದೆ...!

ಅದು ಹೇಗೋ ಮಾಡಿ ಫ್ಯಾನಿನ ಪಂಕಗಳಿಗಿಳಿದ ಗೊದ್ದವನ್ನು ನೋಡಿದ ನನಗೆ
'ಫ್ಯಾನ್ ಆನ್ ಮಾಡಿದ್ರೆ ಹ್ಯಾಗೆ?' ಅನ್ನುವ
ದುಷ್ಟ ಆಲೋಚನೆ ಬಂತು.

[ನನ್ನ ಡಿಪ್ಲೋಮಾ ಕೊನೆಯ ವರ್ಷ (೨೦೦೩)ದಲ್ಲಿ ಬರೆದದ್ದು ಇದನ್ನು. ಹ್ಯಾಗೆ ಒಂದು ಇರುವೆ ಸಹ ಮನುಷ್ಯನ ತಾಳ್ಮೆಯನ್ನು ಪರೀಕ್ಷಿಸಬಲ್ಲದು, ಅದರ ಸಹಜ 'ಓಡಾಡುವಿಕೆ' ಸಹ ನನಗೆ ಹೇಗೆ 'ಸವಾಲ್'ನಂತೆ ಭಾಸವಾಯಿತು, ಕೊನೆಗೆ ಅದು ನನ್ನನ್ನು ಅಣಕಿಸಿದಂತೆ ಕಂಡು, ಅದನ್ನು ಕೊಂದುಬಿಡಬೇಕೆನ್ನುವ ದುರಂತಮಯ ಆಲೋಚನೆ ಬಂತು ಎಂಬುದನ್ನು ಈ ಕವಿತೆ ಹೇಳುತ್ತಿದೆ ಎಂಬ ಎಕ್ಸ್‍ಪ್ಲನೇಷನ್ನು ಇಲ್ಲಿ ಅಗತ್ಯವೇನು ಇರಲಿಲ್ಲವೇನೋ?]

ವಿಜ್ಞಾನ ಹೇಳುತ್ತೆ: ಇರುವೆ ತನ್ನ ತೂಕಕ್ಕಿಂತ ಎಪ್ಪತ್ತು ಪಟ್ಟು ಭಾರವನ್ನು ಎಳೆದುಕೊಂಡು ಸಾಗಿಸಬಲ್ಲದಂತೆ! ಆದರೆ ಮನುಷ್ಯ ತನ್ನ ತೂಕಕ್ಕಿಂತ ಏಳುನೂರು ಪಟ್ಟು ಹೆಚ್ಚು ಭಾರವನ್ನು ಕೇವಲ ತನ್ನ ಬುದ್ಧಿಶಕ್ತಿಯಿಂದ ಸಾಗಿಸಬಲ್ಲ ಅಂತೀರಾ? ನೀವು ಬಿಡಿ ಸ್ವಾಮಿ, ಬುದ್ಧಿವಂತರು. ನಿಮಗೇನು ಗೊತ್ತು ಇರುವೆ ಕಷ್ಟ? ಪಾಪ, ಅದರ ಕಷ್ಟ ಅದಕ್ಕೆ!

ಹೋಗ್ಲಿ ಬಿಡಿ, ಮತ್ತೇನು ವಿಶೇಷ?

16 comments:

ಶ್ರೀನಿಧಿ.ಡಿ.ಎಸ್ said...

ಸುಶ್,
ನಿನ್ನೆ ಮನೆಯಲ್ಲಿ ರೂಮ್ ಮೇಟು ವ್ಯಾಸ ತಂದಿಟ್ಟಿದ್ದ ರವೆ ಲಾಡನ್ನ, ಒಂದಿಷ್ಟು ಸಣ್ಣಿರುವೆಗಳು ಕೊರೆದಿಟ್ಟಿದ್ದವು. ಲಾಡಿನಲ್ಲಿ ಅಲ್ಲಲ್ಲಿ ಸುರಂಗವಾಗಿತ್ತು. ಆ ಕೆಂಪಿರುವೆಗಳನ್ನ ನೋಡಿ, ಅರೆ ಇವೆಲ್ಲಿಂದ ಬಂದವಪ್ಪಾ ಅಂತ ಆಶ್ಚರ್ಯವಾಗಿತ್ತು.ನಮ್ಮ ಹೊಸ ಮನೆಯಲ್ಲಿ ಇರುವೆ ಕಾಟ ನಿನ್ನೆ ತನಕ ಇರಲಿಲ್ಲ! ಅದೇ ಸಂದರ್ಭದಲ್ಲಿ ಬಿ.ಆರ್ ಛಾಯಾ ಹಾಡಿರುವ ಶಿಶುಗೀತೆಯೂ ನೆನಪಾಗಿ ಅದನ್ನ ಗುನುಗಿದ್ದೆ..
"ಇರುವೆ ಇರುವೆ ಬಾ ಇಲ್ಲಿ,
ಯಾವ್ಯಾವ್ ಊರು ನೋಡಿದ್ದಿ?
ಯಾವ್ಯಾವ್ ಊರಲ್ ಏನೇನ್ ಕಂಡಿ,
ಈಗ ಎಲ್ಲಿಗೆ ಹೊರಟಿದ್ದಿ"

ಅಂತ..

ಪ್ರಾಯಶ: ಅದೇ ಹೊತ್ತಿಗೆ ನೀನು ಬದುಕಿನ ಹಾಳೆಗಳನ್ನ ಮಗಚುತ್ತಿದ್ದೆ!

ಬರಹ ಚೆನ್ನಾಗಿದೆ, ಎಂದಿನಂತೆ.

ಜ್ಯೋತಿ said...

"ಶ್ರದ್ಧೆ" ಕವನ ಬಹಳ ಹಿಡಿಸಿತು. ಸರಳವಾಗಿದೆ, ಗಾಢ ಅರ್ಥ ಹೇಳತ್ತೆ. ಧನ್ಯವಾದಗಳು.

ಮನಸ್ವಿನಿ said...

ನಿನ್ನ ಖುಶಿಗೆ ಬರ್ದು ನಮಗೆಲ್ಲ ಖುಶಿ ಕೊಡ್ತೀಯ..ಮುಂದುವರಿಲಿ

Shiv said...

ಸುಶ್ರುತ,

ಸುಮ್ಮನೆ ಇರಲಾರದೇ ಬ್ಲಾಗ್‍ನಲ್ಲಿ ಇರುವೆ ಬಿಟ್ಟಕೊಂಡರಂತೆ !

ಚೆನ್ನಾಗಿದೆ ಮಾರಾಯ ನಿನ್ನ ಇರುವೆ ಲವ್..ಹಿಂಗೆ ಹೋದರೆ ಇರುವೆಗಳ ಮೇಲೆನೇ ಒಂದು ಕವನಸಂಕಲನ ಬರೆದುಬಿಡ್ತೀಯಾ..

>ತಲೆ, ತಲೆಗಿಂತ ಚಿಕ್ಕದಾದ ದೇಹ, ಎಲ್ಲಕ್ಕಿಂತ ದೊಡ್ಡದಾದ
ಹಿಂದುಗಡೆ ಪಾರ್ಟು
ಹಿಹೀ..

ಸುಶ್ರುತ ದೊಡ್ಡೇರಿ said...

@ ಶ್ರೀನಿಧಿ...

ಧನ್ಯವಾದಗಳು. ವ್ಯಾಸ ಎಲ್ಲಿ, ಲಾಡು ಎಲ್ಲಿ, ಇರುವೆ ಎಲ್ಲಿ, ಛಾಯಾ ಎಲ್ಲಿ, ನಾನೆಲ್ಲಿ, ನೀನೆಲ್ಲಿ...? ಎಲ್ಲರನ್ನೂ ಬೆಸೆಯುವ ಈ ಬಂಧಕ್ಕೆ ಋಣಿ.

ಸುಶ್ರುತ ದೊಡ್ಡೇರಿ said...

@ ಜ್ಯೋತಿ

ಹಾಂ, ಶ್ರದ್ಧೆ ನನ್ನ ಎರಡನೇ ಪ್ರಕಟಿತ ಕವನ. Actually ನಂಗೂ ಇಷ್ಟ ಅದು (ಇರುವೆಯಷ್ಟೇ!) :)

ಸುಶ್ರುತ ದೊಡ್ಡೇರಿ said...

@ ಮನಸ್ವಿನಿ

ಹಾಗಾದ್ರೆ 'ನಿಮ್ ಖುಷೀನೇ ನಮ್ ಖುಷಿ' ಅನ್ನೋ ನನ್ನ ಡೈಲಾಗನ್ನು 'ನನ್ ಖುಷೀನೇ ನಿಮ್ ಖುಷಿ' ಅಂತ ಬದಲಾಯಿಸ್ಬೇಕಾಂತ....?!

ಸುಶ್ರುತ ದೊಡ್ಡೇರಿ said...

@ shiv

>ಇರುವೆ ಮೇಲೆ ಕವನ ಸಂಕಲನ... ಹಹ್ಹ, ಬರದ್ರೂ ಬರದ್ನೇ ನಾನು ಇದೇ ಥರ ಇರುವೆಗಳು ಕಾಟ ಕೊಡ್ತಾ ಇದ್ರೆ.. :)

Enigma said...

eruve eruve ellivruve ?
baleya thothadi adagiruve
amele marthuhothu :P

pavvi said...

ನನಗೆ ಚಿಕ್ಕ ವಯಸಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಇದ್ದ
ಒಂದು ಪದ್ಯ ಜ್ಞಾಪಕ ಬರುತ್ತದೆ.

" ಇರುವೆ ಇರುವೆ ಕರಿಯ ಇರುವೆ
ನಾನು ನಿನ್ನ ಜೊತೆ ಬರುವೆ
ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ
ತರುವೆ

ಇರುವೆ:- ಮಳೆಯ ಕಾಲ ಬರುತಲಿಹದು
ನನಗೆ ಸಮಯವಿಲ್ಲ .... ಹೀಗೆ ಮುಂದುವರೆಯುತ್ತದೆ.ಚಿಕ್ಕ ವಯಸ್ಸಲ್ಲಿ ನನಗೆ ಅತಿ ಹೆಚ್ಚು ಆಸಕ್ತಿ ಮೂಡಿಸಿದ್ದ ಜಂತುಗಳಲ್ಲಿ ಇರುವೆ ಕೂಡ ಒಂದು. Discovery/NG ವಾಹಿನಿಯಲ್ಲಿ ಇದರ ಬಗ್ಗೆ ಒಳ್ಳೆ ಕಾರ್ಯಕ್ರಮ ಬಂದಿತ್ತು ಕೂಡ.

ಸುಶ್ರುತ ದೊಡ್ಡೇರಿ said...

@ enigma, pavvi

ಪ್ರತಿಕ್ರಿಯೆಗೆ ಧನ್ಯವಾದಗಳು. ಇರುವೆಯ ಬಗ್ಗೆ ಎಷ್ಟೊಂದು ಸಾಹಿತ್ಯ ಇದೆಯಲ್ಲಾ ಅಂತ ಆಶ್ಚರ್ಯವಾಗುತ್ತದೆ. ನೀವೆಲ್ಲಾ ಹೇಳಿದ ಮೇಲೆ ನನಗೆ ನನ್ನ ಪಠ್ಯದಲ್ಲಿದ್ದ ಒಂದು ಪದ್ಯ ನೆನಪಾಗುತ್ತಿದೆ:

ಇರುವೆ ಇರುವೆ ಕಟ್ಟಿರುವೆ
ಎಲ್ಲೆಡೆಯಲ್ಲಿಯು ನೀನಿರುವೆ
ಬೆಲ್ಲವ ಕಂಡರೆ ನೀ ಬರುವೆ
ನಿನ್ನಯ ದಂಡನು ಕರೆತರುವೆ

-ಹೀಗೇ ಸಾಗುತ್ತದೆ. ಬರೆದದ್ಯಾರೋ ನೆನಪಿಲ್ಲ :(

Annapoorna Daithota said...
This comment has been removed by the author.
Annapoorna Daithota said...

ಶ್ರದ್ಧೆಯಲ್ಲಿ;
ಇರುವೆಯ `ಮರಳಿ ಯತ್ನವ ಮಾಡು' ವನ್ನೂ, ಮನುಷ್ಯನ `ಅಯ್ಯೋ ಆಗೋಲ್ಲಾಪ್ಪಾ, ಯಾರ್ ಮಾಡ್ತಾರೆ' ಯನ್ನೂ ಚೆನ್ನಾಗಿ ನಿರೂಪಿಸಿದ್ದೀರಿ.....
ಚೆನ್ನಾಗಿದೆ :)

ಸುಶ್ರುತ ದೊಡ್ಡೇರಿ said...

@ annapoorna daithota

ಧನ್ಯವಾದಗಳು ಮೇಡಂ.

ranjana said...

Hai,
Naanu thumba ereve nodiddi, ascharya pattiddi, adre nimmastu deep agi study madirle. simply super.

ಸುಶ್ರುತ ದೊಡ್ಡೇರಿ said...

ranjana,

nanna blogige swagatha. pratikriyege dhanyavadagalu. study enu madlyE, sumnE, hingE, lahari.. :)