Wednesday, May 09, 2007

ಗೋಸಮ್ಮೇಳನದ ನಂತರ...

ಸ್ವಲ್ಪ ಮುಂಚೆಯೇ ಎಚ್ಚರಾಯಿತು. ಇನ್ನೂ ಪೂರ್ತಿ ಬೆಳಗಾಗಿಲ್ಲ. ಆದರೆ ಆಗಲೇ ಸಾಕಷ್ಟು ಬೆಳಕಿದೆ. ಮಂದಣ್ಣ ಮೈಮುರಿದೆದ್ದು ಇನ್ನೂ ಮಲಗಿದ್ದ ತನ್ನ ಸಹಕೆಲಸಗಾರರನ್ನು ದಾಟಿ ಆ ಕೊಠಡಿಯಿಂದ ಹೊರಬಂದ. ಯಾಕೋ ಏನೋ? ಮಂದಣ್ಣನಿಗೆ ಹೀಗೆ ಬೆಳಗಾ ಮುಂಚೆ ಎದ್ದಾಗಲೆಲ್ಲ ಇಬ್ಬನಿ ಬೀಳುತ್ತಿದೆ ಎಂದೆನಿಸುತ್ತದೆ. ಮುಂಜಾನೆಯ ಪರಿಸರವೇ ಹಾಗಿರುತ್ತದೆ. ಹಕ್ಕಿಗಳ ಕಲರವವೂ ನಿಶ್ಯಬ್ದದ ಭಾಗವೇ ಆಗಿರುತ್ತದೆ. ಮಂದಣ್ಣ ಬಹಿರ್ದೆಸೆಗೆಂದು ಹೊರಟ.

ಮಂದಣ್ಣನ ಹೆಂಡತಿ ಬಿಟ್ಟುಹೋಗಿ ಆಗಲೇ ವರ್ಷಕ್ಕೆ ಬಂದಿತ್ತು. ಕರ್ವಾಲೋ ಸಾಹೇಬರು ಕೊಡಿಸುತ್ತೀನಿ ಎಂದಿದ್ದ ಕೆಲಸ ಸಹ ಇನ್ನೂ ಆಗಿರಲಿಲ್ಲ. ಬೀಮ್ಯಾನ್ ಆಗಿ ತೆಗೆದುಕೊಳ್ಳಲಿಕ್ಕೆ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ, ಅಲ್ಲಿ ಇಲ್ಲಿ ಜೇನು ಕಿತ್ತುಕೊಂಡು, ಶಿಕಾರಿ ಮಾಡಿಕೊಂಡು ಓಡಾಡಿಕೊಂಡಿದ್ದ ಮಂದಣ್ಣ ತೇಜಸ್ವಿ ತೀರಿಕೊಂಡಮೇಲೆ ಇತ್ತೀಚಿಗೆ ತುಂಬಾ ಮಂಕಾಗಿಬಿಟ್ಟಿದ್ದ. ಯಾರಾದರೂ 'ಯಾಕೋ?' ಎಂದು ಕೇಳಿದರೆ 'ಏನಿಲ್ಲ.. ಸುಮ್ನೇ' ಎನ್ನುತ್ತಿದ್ದ. ಮೂಡಿಗೆರೆ ಬಸ್‍ಸ್ಟಾಂಡಿನಲ್ಲಿ ಏನೂ ಕೆಲಸವಿಲ್ಲದೇ ಅಲೆಯುತ್ತಿದ್ದ ಮಂದಣ್ಣನನ್ನು ಯಾರೋ ಕರೆದು ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಗೋಸಮ್ಮೇಳನದ ಬಗ್ಗೆ ಹೇಳಿದ್ದರು. 'ಹ್ಯಾಗೂ ಏನೂ ಕೆಲಸ ಇಲ್ಲ. ಮಠಕ್ಕಾದ್ರೂ ಹೋಗು. ಒಂದಷ್ಟು ಕೆಲಸ ಮಾಡಿಕೊಂಡು ಊಟ ಮಾಡ್ಕೊಂಡು ಹಾಯಾಗಿರು. ನಿನಗೆ ದನ ಕಾಯೋ ಕೆಲಸ ಏನು ಹೊಸದಲ್ವಲ್ಲ.. ನಿನ್ನ ಇಷ್ಟದ ಕೆಲಸಾನೇ.. ಹೋಗಿ ಅಲ್ಲಿ ಯಾರನ್ನಾದ್ರೂ ಕಂಡು ಗೋಶಾಲೆಯಲ್ಲಿ ಕೆಲಸ ಕೊಡಿ ಅಂತ ಕೇಳು. ಖಂಡಿತ ಕೊಡ್ತಾರೆ' ಎಂದಿದ್ದರು. ಜೇಬಿನಲ್ಲಿದ್ದ ಮೂವತ್ತು ರೂಪಾಯಿ ಖರ್ಚು ಮಾಡಿಕೊಂಡು ಉಟ್ಟಬಟ್ಟೆಯಲ್ಲೇ ಮಠಕ್ಕೆ ಬಸ್ಸು ಹತ್ತಿ ಬಂದಿದ್ದ ಮಂದಣ್ಣ.

ಇಲ್ಲಿಗೆ ಬಂದಮೇಲೆ ಎಲ್ಲವೂ ಸರಾಗವಾಯಿತು. ಮಾಡಲಿಕ್ಕೆ ಸಿಕ್ಕಾಪಟ್ಟೆ ಕೆಲಸವಿದ್ದುದರಿಂದ 'ಎಷ್ಟು ಜನ ಇದ್ರೂ ಬೇಕು ಬಾರಪ್ಪಾ. ಕೆಲಸ ಮಾಡು, ಊಟ ಮಾಡು, ಆಮೇಲೆ ಕೂಲೀನೂ ಕೊಡ್ತೀವಿ' ಅಂತಂದು ಮಠದ ಕಾರ್ಯಕರ್ತರು ಅವನನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದರು. ಇನ್ನೂ ಗೋಸಮ್ಮೇಳನಕ್ಕೆ ಒಂದು ವಾರ ಇತ್ತು. ಚಪ್ಪರಕ್ಕೆ ಗುಂಡಿ ತೋಡುವುದು, ನೀರಿನ ಪೈಪು ಎಳೆಯುವುದು, ಅಲ್ಲೆಲ್ಲೋ ಕಟ್ಟೆ ಕಟ್ಟುವುದು, ಹೀಗೆ ಮಂದಣ್ಣ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡ. ತಾನು ಹಿಂದೆಲ್ಲೂ ಕಂಡಿರದಿದ್ದ ಅನೇಕ ಬಗೆಯ ಹೊಸ ಹಸುಗಳನ್ನು ಕಂಡು ಹಿರಿಹಿರಿ ಹಿಗ್ಗಿದ. ಅವುಗಳ ಮೈದಡವಿ ಹೊಸ ರೋಮಾಂಚನ ಅನುಭವಿಸಿದ.

ಒಂಭತ್ತು ದಿನಗಳ ಗೋಸಮ್ಮೇಳನ ಅದ್ಧೂರಿಯಾಗಿ ನಡೆಯಿತು. ದಿನವೂ ಬರುತ್ತಿದ್ದ ಲಕ್ಷಗಟ್ಟಲೆ ಜನಗಳ ಮಧ್ಯೆ ಮಂದಣ್ಣ ಕಳೆದುಹೋಗಿದ್ದ. ಅವನನ್ನು ತೋಟದಲ್ಲಿ ಕಟ್ಟಿಹಾಕಿದ್ದ ಮಲೆನಾಡು ಕಗ್ಗ ದನಗಳ ಉಸ್ತುವಾರಿ ನೋಡಿಕೊಳ್ಳಲಿಕ್ಕೆ ನಿಯಮಿಸಿದ್ದರು. ಅವುಗಳಿಗೆ ಹೊತ್ತುಹೊತ್ತಿಗೆ ಹಿಂಡಿ, ಹತ್ತಿಕಾಳು, ನೀರು, ಅಕ್ಕಚ್ಚು ಕೊಟ್ಟುಕೊಂಡು ಬರುವ ಜನಗಳನ್ನು ನೋಡುತ್ತಾ ಮಂದಣ್ಣ ಆರಾಮಾಗಿದ್ದ. ಆಗಲೇ ಬಂದು ಹದಿನೈದು ದಿನಗಳಾಗಿತ್ತಾದ್ದರಿಂದ ಅವನಿಗೆ ಇಲ್ಲಿನ ಕೆಲಸಗಾರರೆಲ್ಲರೂ ಹೆಚ್ಚೂಕಮ್ಮಿ ಪರಿಚಯವಾಗಿಬಿಟ್ಟಿದ್ದರು. ಕಾರ್ಗಡಿಯವಳೇ ಆದ ರಂಗಮ್ಮ ಎಂಬುವವಳು ಮಾತ್ರ 'ಮಂದಣ್ಣಾ ಮಂದಣ್ಣಾ' ಎಂದು ಕರೆಯುತ್ತಾ ಅದೇಕೋ ಇವನ ಹತ್ತಿರವೇ ಸುಳಿಯುತ್ತಿರುತ್ತಿದ್ದಳು. ದಪ್ಪ ಮೂಗುತಿಯ ರಂಗಮ್ಮ ಸುಮ್ಮನೇ ನಗುವಾಗ ಕಾಣುವ ಅವಳ ಹಳದಿ ಹಲ್ಲುಗಳ ನಡುವಿನ ಬಿರುಕುಗಳಲ್ಲಿ ಮಂದಣ್ಣನಿಗೆ ಹೊಸ ಆಸೆಗಳ ಬ್ರಹ್ಮಾಂಢ ಕಾಣಿಸುತಿತ್ತು.

ಈಗ ಗೋಸಮ್ಮೇಳನ ಮುಗಿದು ನಾಲ್ಕು ದಿನಗಳಾಗಿದ್ದರೂ ಮಂದಣ್ಣನಿಗೆ ವಾಪಸು ಊರಿಗೆ ಹೋಗುವ ಮನಸ್ಸಾಗದೇ ಇರುವುದಕ್ಕೆ ಕಾರಣ ರಂಗಮ್ಮನೆಡೆಗಿನ ಸೆಳೆತವಷ್ಟೇ ಆಗಿರದೆ ಈ ಮಠದ ಪರಿಸರವೂ ಆಗಿತ್ತು. ಈ ಪರಿಸರದಲ್ಲೇ ಏನೋ ಒಂದು ಆಕರ್ಷಣೆಯಿತ್ತು. ಅಲ್ಲದೇ ಊರಿಗೆ ಹೋಗಿ ಮಾಡಲಿಕ್ಕೆ ಕೆಲಸವೇನೂ ಇರಲಿಲ್ಲ. ಹೀಗಾಗಿ ಮಂದಣ್ಣ ನಿಶ್ಚಿಂತೆಯಿಂದ ಇಲ್ಲೇ ಉಳಿದುಬಿಟ್ಟಿದ್ದ. ಇವನಷ್ಟೇ ಅಲ್ಲದೇ ಇನ್ನೂ ಅನೇಕ ಕೆಲಸಗಾರರು ಇಲ್ಲಿಯೇ ತಂಗಿದ್ದರು. ಮಠದವರು ಇವರಿಗಾಗಿಯೇ ಗುರುಕುಲದ ಕೊಠಡಿಯೊಂದನ್ನು ಬಿಟ್ಟುಕೊಟ್ಟಿದ್ದರು. ಅಷ್ಟು ದೊಡ್ಡ ಸಮ್ಮೇಳನ ಮುಗಿದಿದೆ ಅಂದಮೇಲೆ ಅದು ಸೃಷ್ಟಿಸಿದ ತ್ಯಾಜ್ಯವೂ ಅಷ್ಟೇ ಇರುತ್ತದೆ. ಹಾಕಿರುವ ಚಪ್ಪರವನ್ನು ತೆಗೆಯಬೇಕು. ತಾತ್ಕಾಲಿಕ ವ್ಯವಸ್ಥೆಗಾಗಿ ಮಾಡಿದ್ದ ನಲ್ಲಿಗಳು, ಹಾಕಿದ್ದ ಶಾಮಿಯಾನಾಗಳು, ನಿರ್ಮಿಸಿದ್ದ ಜೋಪಡಿಗಳು, ಕಟ್ಟಿದ್ದ ಕಟ್ಟೆಗಳು, ನಿಲ್ಲಿಸಿದ್ದ ಕಂಬಗಳು ಎಲ್ಲವನ್ನೂ ಕಿತ್ತು ಮಟ್ಟ ಮಾಡಬೇಕಿತ್ತು. ಕಸ ವಿಲೇವಾರಿ ಮಾಡಬೇಕಿತ್ತು. ಜೋರು ಮಳೆ ಹಿಡಿಯುವುದರ ಒಳಗೆ ಸೋಗೆಯನ್ನೆಲ್ಲಾ ಸುರಕ್ಷಿತ ಜಾಗಕ್ಕೆ ಸಾಗಿಸಬೇಕು. ಇನ್ನೂ ಸಾಕಷ್ಟು ಕೆಲಸಗಳಿದ್ದವು. ಮಂದಣ್ಣ ಇತರೆ ಕೆಲಸಗಾರರೊಂದಿಗೆ ಈ ಕೆಲಸಗಳನ್ನು ಮಾಡಿಕೊಂಡು ಇದ್ದ.

ಬಹಿರ್ದೆಸೆಗೆಂದು ಮಂದಣ್ಣ ಟಾಯ್ಲೆಟ್ಟೊಂದನ್ನು ಹೊಕ್ಕ. ಈಗ ಮಠದ ಆವರಣದಲ್ಲಿ ಒಟ್ಟು ಮೂರು ಸಾವಿರ ಟಾಯ್ಲೆಟ್ಟುಗಳಿವೆ! ದಿನವೂ ಒಂದೊಂದಕ್ಕೆ ಹೋದರೂ ಎಲ್ಲಾ ಟಾಯ್ಲೆಟ್ಟುಗಳಿಗೆ ಹೋಗಲಿಕ್ಕೆ ಎಂಟು ವರ್ಷ ಬೇಕು! ಮಂದಣ್ಣನಿಗೆ ಈ ವಿಚಾರ ಹೊಳೆದು ನಗು ಬಂತು. ಇಷ್ಟಕ್ಕೂ ಎಂಟು ವರ್ಷ ತಾನು ಇಲ್ಲೇ ಇರುತ್ತೇನಾ? -ಕೇಳಿಕೊಂಡ ಮಂದಣ್ಣ. ಉತ್ತರ ಹೊಳೆಯಲಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಆ ಬಿಂಕದ ಸಿಂಗಾರಿ ರಂಗಮ್ಮನ ನಡವಳಿಕೆಯೇ ಮಂದಣ್ಣನಿಗೆ ಅರ್ಥವಾಗದ ಪ್ರಶ್ನೆಯಾಗಿತ್ತು.

ಬಹಿರ್ದೆಸೆ ಮುಗಿಸಿದ ಮಂದಣ್ಣ ಈ ಮುಂಜಾನೆಯ ಪರಿಸರದಲ್ಲಿ ಒಂದು ಸುತ್ತು ಓಡಾಡಿಕೊಂಡು ಬಂದರೆ ಚೆನ್ನಾಗಿರುತ್ತದೆ ಎಂದೆನಿಸಿ 'ಪರಿಕ್ರಮ ಪಥ'ದಲ್ಲಿ ಚಲಿಸತೊಡಗಿದ. ಸಮ್ಮೇಳನಕ್ಕೆಂದೇ ನಿರ್ಮಿಸಿದ ಹಾದಿ ಇದು. ಮಠದ ಮುಖ್ಯದ್ವಾರದಿಂದ ಶುರುವಾಗುವ ಈ ಹಾದಿಯಲ್ಲೇ ಸಾಗಿದರೆ ಮೊದಲು ಸಿಗುವುದು ಭಜನಾ ಮಂದಿರ. ಅದು ಈಗ ಖಾಲಿ ಹೊಡೆಯುತ್ತಿದೆ. ರಾತ್ರಿ ಬಂದುಹೋದ ಮಳೆಗೆ ಕಟ್ಟೆಯೆಲ್ಲಾ ಕಿತ್ತುಹೋಗಿದೆ. ಮುಂದೆ ಸಾಗಿದರೆ ಸಿಗುವುದು ವೃಂದಾವನೀ. ಒಂಭತ್ತು ದಿನಗಳ ಕಾಲ ಎಡಬಿಡದೆ ತೇಲುತ್ತಿತ್ತು ಕೊಳಲ ಗಾನ ಇಲ್ಲಿ... ಹುಲ್ಲು ಚಪ್ಪರ ಹೊದಿಸಿದ ಆ ಗುಡಿಸಲಿನಂತ ಕಟ್ಟೆಯ ಮಧ್ಯದಲ್ಲಿರುವ ಮರ ಇನ್ನೂ ತೂಕಡಿಸುತ್ತಿತ್ತು. ಇವನು ಹೋಗಿ ಕೆಮ್ಮಿದ್ದೇ ಅದಕ್ಕೆ ಎಚ್ಚರವಾಗಿಬಿಟ್ಟಿತು. ಮಂದಣ್ಣನಿಗೆ ಅದರ ಕಷ್ಟ ಅರ್ಥವಾಯಿತು. ಪ್ರಕೃತಿಯ ಮಾತು ಅರ್ಥ ಮಾಡಿಕೊಳ್ಳುವುದರಲ್ಲಿ ಮಂದಣ್ಣನಿಗಿಂತ ನಿಷ್ಣಾತರು ಮತ್ಯಾರಿದ್ದಾರೆ ಹೇಳಿ? ಮರ ಹೇಳಿತು: 'ರಾತ್ರಿಯಿಡೀ ನಿದ್ರೆಯಿಲ್ಲ ಕಣೋ ಮಂದಣ್ಣಾ... ಒಂಭತ್ತು ದಿನ ಕೊಳಲ ದನಿ ಕೇಳೀ ಕೇಳೀ ನನಗೆ ಹುಚ್ಚೇ ಹಿಡಿದುಬಿಟ್ಟಿದೆ. ಆ ವೇಣುವಾದನ ಹರಿದು ಬರುತ್ತಿದ್ದಾಗ ಎಂಥಾ ನಿದ್ರೆ ಬರುತ್ತಿತ್ತು ಅಂತೀಯಾ..? ಈಗ ಆ ದನಿಯಿಲ್ಲ.. ತುಂಬಾ ಬೇಸರವಾಗುತ್ತಿದೆ ಮಂದಣ್ಣಾ..' ಮಂದಣ್ಣ ಸುಮ್ಮನೆ ಒಮ್ಮೆ ಆ ಮರದ ಕಾಂಡವನ್ನು ತಬ್ಬಿ, ಸವರಿ ಮುಂದೆ ನಡೆದ.

ವಸ್ತು ಸಂಗ್ರಹಾಲಯವನ್ನು ಆಗಲೇ ತೆರವುಗೊಳಿಸಲಾಗಿತ್ತು. ಅಲ್ಲಿ ಈಗ ಕೇವಲ ಕಂಬಗಳು ಇದ್ದವು. ಪಕ್ಕದಲ್ಲಿದ್ದ ಗೋಲೋಕದಲ್ಲಿ ದನಗಳು ಇನ್ನೂ ಅಲ್ಲೇ ಇದ್ದರೂ ಅವುಗಳ ಎದುರಿನ ಬೋರ್ಡುಗಳನ್ನು ಕಿತ್ತುಹಾಕಿದ್ದರು. ಪಕ್ಕದ ದೇವಸ್ಥಾನದ ದೇವರು ಮಾತ್ರ ಇನ್ನೂ ಬರಬೇಕಿರುವ ಅರ್ಚಕರಿಗಾಗಿ ಕಾಯುತ್ತಿದ್ದಂತಿದ್ದ. ಗರ್ಭಗುಡಿಯ ಕತ್ತಲೆಗೆ ಒಂದು ಕೈಮುಗಿದು ಮಂದಣ್ಣ ಗೋಶಾಲೆಯತ್ತ ನಡೆದ.

ಪಕ್ಕದ ಊರಿನ ರಮೇಶ ಎಂಬುವವನು ಎದುರಾದ. "ಏನ್ಲಾ ಇಷ್ಟು ಬೇಗ ಎದ್ದು ಎಲ್ಲಿಗಯ್ಯಾ ಹೊರಟಿದೀಯಾ?" ಕೇಳಿದ ಮಂದಣ್ಣ. "ಸಾಗರಕ್ಕೆ ಹೋಗೋದಿತ್ತು ಮಂದಣ್ಣ. ಸ್ವಲ್ಪ ಕೆಲ್ಸ ಐತೆ" ಎಂದ ರಮೇಶ, "ಅಲ್ಲಾ ಮಂದಣ್ಣಾ, ನಿಂಗೆ ಗೊತ್ತೈತಾ? ಮಠದ ಸ್ವಾಮಿಗಳು ದುಡ್ಡು ತಿಂದಿದಾರೆ ಅಂತೆಲ್ಲಾ ಪೇಪರ್ನಾಗೆ ಬರ್ದಿದಾರೆ ಕಣಣ್ಣಾ.. ನೀನೇ ನೋಡಿದ್ಯಲ್ಲ, ಎಷ್ಟೊಂದು ಜನ ಎಷ್ಟೊಂದು ಹಣ ಕೊಟ್ಟವರೆ.. ಇಲ್ಲಿ ಖರ್ಚು ಮಾಡಿರೋದಕ್ಕಿಂತ ಡಬ್ಬಲ್ ಹಣ ಬಂದೈತಂತೆ ಮಠಕ್ಕೆ.. ಏನು ಮಾಡ್ತಾರೋ ಏನೋ..? ಆಮೇಲೇ.." ಮಾತನ್ನು ಮಧ್ಯದಲ್ಲೇ ತುಂಡರಿಸಿದ ಮಂದಣ್ಣ, "ಏಯ್ ಸುಮ್ನಿರೋ ರಮೇಶಾ.. ಏನೇನೋ ಹೇಳ್ಬೇಡ.. ಅವ್ರು ಬರೆದ್ರಂತೆ, ಇವ್ನು ಓದಿದ್ನಂತೆ.. ಸುಮ್ನಿರು ಸಾಕು.. ಹಾಗೆಲ್ಲಾ ಎಲ್ಲಾ ಕಡೆ ಹೇಳ್ಕೋಂತಾ ಹೋಗ್ಬೇಡಾ" "ಅಯ್ಯೋ ನಂಗೇನ್ ಗೊತ್ತು ಮಂದಣ್ಣ.. ನಾನೇನು ಕಂಡಿದೀನಾ? ಪೇಪರ್‌ನವ್ರು ಬರ್ದಿದಾರೆ ಅಂತ ಹೇಳ್ದೆ ಅಷ್ಟೇ. ಅಲ್ದೇ ಅದೇನೋ ವೈಜ್ಞಾನಿಕ ಸಂಶೋಧನೆ ಮಾಡಿದ್ರಂತಲ್ಲ ಹಿಂದಿನ ವರ್ಷ, ಅದೆಲ್ಲ ಸುಳ್ಳು ಅಂತನೂ ಬರ್ದಿದಾರೆ..! ಅದಿರ್ಲೀ, ನೀನು ಯಾವಾಗ ವಾಪಸ್ ಊರಿಗೆ ಹೋಗ್ತಿದೀಯಾ?" "ಹೋಗ್ಬೇಕು ರಮೇಶಾ.. ನಮ್ ತೇಜಸ್ವಿ ಸರ್ ಇದ್ದಿದಿದ್ರೆ ನನ್ನನ್ನ ಇಲ್ಲಿಗೆಲ್ಲ ಬರ್ಲಿಕ್ಕೇ ಬಿಡ್ತಿರ್ಲಿಲ್ಲ.. 'ಅವ್ಕೆಲ್ಲಾ ಏನಕ್ ಹೋಗ್ತೀಯ ಮುಂಡೇಮಗ್ನೇ, ತೋಟದಲ್ಲಿ ಒಂದು ಜೇನು ಕಟ್ಟಿದೆ. ಪೆಟ್ಟಿಗೆಗೆ ತುಂಬ್ಕೊಡು ಬಾ' ಅಂತಿದ್ರು.. ಅಲ್ದೇ ಈಗ ಕರ್ವಾಲೋ ಸಾಯೇಬ್ರೂ ಅದೇನೋ ಕೆಲ್ಸ ಅಂತ ಫಾರಿನ್ನಿಗೆ ಹೋದ್ರಲ್ಲ.. ನಂಗೆ ಅಲ್ಲಿ ಏನೂ ಕೆಲ್ಸ ಇಲ್ಲ.. ಅವ್ರು ಇದ್ದಿದಿದ್ರೆ ನೀನು ಅದೇನೋ ಅಂದ್ಯಲ್ಲ, ವೈಜ್ಞಾನಿಕ ಅಂತ, ಅದರ ಬಗ್ಗೆ ಕರೆಕ್ಟಾಗಿ ಹೇಳಿರೋರು.. ಕರ್ವಾಲೋ ಸಾಯೇಬ್ರು ಅಂದ್ರೆ ಏನು ಸಾಮಾನ್ಯ ಅಲ್ಲಪ್ಪಾ... ಆವಾಗ ಒಂದ್ಸಲ ನಾನೂ, ತೇಜಸ್ವಿ ಸರ್ರೂ, ಕರ್ವಾಲೋ ಸಾಯೇಬ್ರೂ ಸೇರಿ ಒಂದು ಓತಿಕ್ಯಾತ ಹಿಡಿಲಿಕ್ಕೇಂತ...." ಮಂದಣ್ಣ ಶುರುಮಾಡಿದ್ದ. ಅಷ್ಟರಲ್ಲಿ ರಮೇಶ "ಮಂದಣ್ಣ, ನಂಗೆ ನಿನ್ ಕಥೆ ಎಲ್ಲಾ ಕೇಳ್ಲಿಕ್ಕೆ ಟೈಮಿಲ್ಲ. ಬಸ್ಸು ಹೊಂಟೋಯ್ತದೆ. ನಾಳೆ ಸಿಗ್ತೀನಿ.." ಎಂದವನೇ ಕಾರ್ಗಡಿಯ ದಾರಿ ಹಿಡಿದ.

ಮಂದಣ್ಣ ಗೋಶಾಲೆಗೆ ಹೋಗುತ್ತಿದ್ದಂತೆಯೇ ಎತ್ತುಗಳು, ದನಗಳು ಅವುಗಳ ಪುಟ್ಟ ಕರುಗಳು ಎದ್ದುನಿಂತವು. ಅಮೃತಮಹಲ್ ದನ ಅದೇಕೋ ತುಂಬಾ ಉಚ್ಚಿಕೊಂಡಿತ್ತು. ಎಲ್ಲಾ ಜಾನುವಾರುಗಳದ್ದೂ ಮೈತೊಳೆಯಬೇಕು ಎಂದುಕೊಂಡ ಮಂದಣ್ಣ. ಗೋಸಮ್ಮೇಳನ ಮುಗಿದ ಎರಡು ದಿನಗಳಿಗೆ ಹುಟ್ಟಿದ್ದ ಕರುವೊಂದು ತನ್ನ ತಾಯಿಯೆಡೆಗೆ ಓಡಲು ಕಣ್ಣಿ ಜಗ್ಗುತ್ತಿತ್ತು. 'ತನ್ನ ತಾಯ ಹಾಲನ್ನು ಕರು ಕುಡಿಯದಂತೆ ಮಾಡುತ್ತೇವೆ ನಾವು.. ನಮ್ಮಷ್ಟು ಕೃತಘ್ನರು ಬೇರೆ ಯಾರಾದರೂ ಇದ್ದಾರಾ..?' -ಗುರುಗಳು ಹೇಳಿದ್ದು ಮಂದಣ್ಣನಿಗೆ ನೆನಪಾಯಿತು. ತಕ್ಷಣ ಆ ಕರುವಿನತ್ತ ಧಾವಿಸಿದ ಅವನು ಅದರ ಕಣ್ಣಿ ಕಳಚಿದ. ನಾಲ್ಕೇ ಹೆಜ್ಜೆಗೆ ಓಡಿ ತಾಯಿಯನ್ನು ಸೇರಿದ ಕರು ಕೆಚ್ಚಲಿಗೆ ಬಾಯಿ ಹಾಕಿತು. ಕರುವ ಬಾಯ ಜೊಲ್ಲು ತಗುಲಿದ ರೋಮಾಂಚನಕ್ಕೆ ತಾಯಿ ತಕ್ಷಣ ಸೊರೆಯಿತು. ಕತ್ತು ಹಿಂದೆ ತಿರುಗಿಸಿ ಕರುವಿನ ಮೈಯನ್ನು ನೆಕ್ಕತೊಡಗಿತು. ಕರು ಬಾಲವನ್ನು ನಿಮಿರಿಸಿಕೊಂಡು ಹಾಲು ಕುಡಿಯುತ್ತಿತ್ತು.. 'ಕುಡಿ ಕುಡಿ.. ನಿನಗೆ ತೃಪ್ತಿಯಾಗುವವರೆಗೆ ಕುಡಿ..' ಮಂದಣ್ಣ ಮನಸಿನಲ್ಲೇ ಅಂದುಕೊಂಡ. ಮೊಲೆಯ ತೊಟ್ಟಿನಿಂದ ಹೊರಚಿಮ್ಮಿದ ಹಾಲಿನಲ್ಲಿ ಮಂದಣ್ಣನಿಗೆ ರಂಗಮ್ಮನ ಮುಖ ಕಾಣಿಸತೊಡಗಿತು...

14 comments:

Anonymous said...

ಬರವಣಿಗೆ very nice maga.

ಆದರೂ ವಿಷ್ಯ ಪ್ರಸ್ತುತಿಯಲ್ಲಿ 'ಸುಶ್ರುತ'ನ ಛಾಪು ಇದ್ದೆ ಇದೆ :-)

ಯಾವ ಪೇಪರ್ನವ್ರು ಏನಾದ್ರೂ ಬರ್ಕಳ್ಲಿ.. ಅಲ್ಲಿಗೆ ಹೋಗಿ ಅನುಭವಿಸಿದವರಿಗೇ ಗೊತ್ತು ಅದರ ಹಿತ. ಆ ಜಾತ್ರೆಯಂತ ಜಾತ್ರೆಯಲ್ಲೂ ಸಿಕ್ಕಂತ comfort, ಎಲ್ಲಿಯೂ ನೋಡಿರದಂತ ಕಾರ್ಯಕರ್ತರ ಶ್ರದ್ಧೆ, ಉತ್ಸಾಹ, ಅಲ್ಲಿನ ವ್ಯವಸ್ಥೆ .... ನಿಜವಾಗಿಯೂ ನಮ್ಮೊಳಗಿನ "ಮಂದಣ್ಣ"ನಿಗೆ ಇನ್ನೂ ಅಲ್ಲಿಂದ ವಾಪಸ್ ಬರಕ್ಕಾಗ್ತಾ ಇಲ್ಲ.

ಸುಪ್ತದೀಪ್ತಿ suptadeepti said...

ಹಬ್ಬದ ಬಗ್ಗೆ, ಅದರ ತಯಾರಿಯ ಬಗ್ಗೆ ಎಲ್ಲರೂ ಬರೀತಾರೆ. ಆದರೆ, ತದನಂತರದ ಕಸ ಬಳಿಯುವ, ಮುಸುರೆ ತಿಕ್ಕುವ, ಚಪ್ಪರ ತೆಗೆಯುವ, ಸೋಗೆ ಜೋಡಿಸುವ ಕಥೆ ಅಪ್ರಸ್ತುತವಾಗೋದೇ ಹೆಚ್ಚು. ಅವಕ್ಕೆಲ್ಲ ಅಕ್ಷರರೂಪ ಕೊಟ್ಟದ್ದಕ್ಕೆ ಧನ್ಯವಾದಗಳು. ಮಂದಣ್ಣನಂಥವರು ಇಲ್ಲದಿದ್ದರೆ ನಮ್ಮ ಯಾವ ಜಾತ್ರೆ, ಊರ ಹಬ್ಬಕ್ಕೆ ರಂಗೇರುತ್ತದೆ? ರಂಗಮ್ಮನಲ್ಲಿಯೂ ಮಂದಣ್ಣನ ಬಿಂಬ ಮೂಡಲಿ, ಮಠಕ್ಕೆ ಮತ್ತಿಬ್ಬರು ನಿಷ್ಠರು ದೊರಕಲಿ.

Anonymous said...

ತುಂಬಾ ಚನ್ನಾಗಿ ಬರದ್ದೆ ಸುಶ್ರುತ. ಒಳ್ಳೆ imagination. ನಾನು miss ಮಾಡ್ಕ್ಯಂಡ್ಬಿಟ್ಟಿ ಅನ್ನಿಸ್ತಿದ್ದು. ಅದ್ರು ಮಠದ ಬಗ್ಗೆಯ ನಿನ್ನ ಎರೆಡು ಬರಹಗಳನ್ನು ಓದಿ ಸ್ವಲ್ಪ ಹೋಗಿ ಬಂದಂಗೆ ಆತು ಮತ್ತೆ ರಾಶಿ ಹೊಟ್ಟೇಲಿ ಉರುತ್ತು ನೀನು enjoy ಮಾಡಿದ್ದು ನೆನಸ್ಕ್ಯಂಡು. ಮುಂದಿನ ವರ್ಷ ಖಂಡಿತ ಹೋಕ್ತಿ.

ಸಿಂಧು sindhu said...

ಸು - ಚನಾಗಿದ್ದು..

ಮಂದಣ್ಣನ್ನ ಗೋಸಮ್ಮೇಳನಕ್ಕೆ ಕಳಿಸಿದ ಐಡಿಯಾ ಚೆನಾಗಿದೆ..ಬರವಣಿಗೆಯೂ ಚನಾಗಿದೆ.. ಆದ್ರೆ ಯಾಕೋ ಇಷ್ಟವಾಗಲಿಲ್ಲ.. :) ಅವನು ನಿಶ್ಚಿತವಾಗಿ ಹೀಗೇ ಅಂತ ಮಾಡುವ ಕೆಲಸಕ್ಕಿಂತ ತನ್ನ ಮನಸಿಗೆ ಬಂದಂಗೆ ಕಾಡಲೆದು ಕೆಲಸ ಕದ್ದು ಕತೆ ಕಟ್ಟುವ ಪಾತ್ರದಲ್ಲೇ ಹೆಚ್ಚು ಶೋಭಿಸುತ್ತಾನೆ..

ಬರಹ ಚನ್ನಾಗಿದ್ರಿಂದ ಅಡ್ಜಸ್ಟ ಮಾಡ್ಕೊಂಡು ಬಿಟ್ಟೆ. ಅದ್ರಲ್ಲೂ - ನಿನಗೆ ದನ ಕಾಯೋ ಕೆಲಸ ಏನು ಹೊಸದಲ್ವಲ್ಲ.. - ತುಂಬ ಇಷ್ಟವಾಯ್ತು..

ಸಮ್ಮೇಳನದ ಉದ್ದಿಶ್ಯ-ಆಂತರ್ಯಗಳ ಬಗ್ಗೆ ಏನು ಬರೆಯಲೂ ಮಾತಾಡಲೂ ಮನಸ್ಸಾಗುತ್ತಿಲ್ಲ.. ನಾವೆಲ್ಲ ಶಿಕಾರಿಯ ನಾಗಪ್ಪಗಳೇನೋ ಅಂತ ಅನಿಸುತ್ತಿದೆ.

ಅನುಭವಿಸಿದ ವಿಷಯಗಳನ್ನ ಭಾವದ ಅಲೆಗಳ ಮೇಲೆ ಹಾಯಿಸಿ ಹೊಸಾ ರೀತಿ ಬರೆದಿದ್ದೀಯ. ಚೆನ್ನಾಗಿದೆ.

Anonymous said...

busy scheduleನಲ್ಲಿ ಬರೆಯೊಕ್ಕೆ time ಸಿಕ್ಕಿದ್ದು ತುಂಬಾ ಸಂತೋಷ

ತುಂಬಾ ಚಂದದ ಕಥೆ ಇದು ಆದರೆ ಪೂರ್ಣ ಚಂದ್ರ ತೇಜಸ್ವಿ ಅವರ ಮಂದಣ್ಣ ಯಾಕೆ ಬಂದ??? ನಿಮಗೆ ನಿಮ್ಮದೇ ಉರಿನ ಸುಬ್ಬ, ಕರಿಯ, ಭೈರ, ಕಾಲ ಕಾಣಿಸಲಿಲ್ಲವೇ?

ಪೂರ್ಣ ಚಂದ್ರ ತೇಜಸ್ವಿ ಅವರ ಮಂದಣ್ನನನ್ನು ಎರವಲು ಪಡೆದಾಗ ಅದಕ್ಕೆ ಕಟ್ಟುಪಾಡುಗಳಿವೆ ಮಂದಣ್ನನನ್ನು ಅವರ ರೀತಿಯಲ್ಲೇ ತರಬೇಕು ಸ್ವಲ್ಪ ಆಚೆ ಈಚೆ ಹೋದರೂ ಅವನನ್ನು accept ಮಾಡ್‌ಕೋಲೊಕ್ಕೆ ಕಷ್ಟ ಆಗುತ್ತೆ ಊಹೂ..ಮಂದಣ್ಣ ಹೀಗಿಲ್ಲ ಅಂತ ಅನ್ಸುತ್ತೆ

ಆದರೆ ನಿಮ್ಮದೇ ಕಲ್ಪನೆಯ ಕರಿಯ, ಭೈರರಾದರೆ ಅವರಿಗೆ ನಿಮಗಿಷ್ಟವಾದ ವೈಕ್ತಿತ್ವ ಕೊಡಬಹುದಲ್ಲವೇ.. ಅವನು ಏನೇ ಆಗಿದ್ರು ನಾವು ಅಕ್ಸೆಪ್ಟ್ ಮಾಡ್ಟಿವಿ ಅಲ್ಲ್ವ??
ಮತ್ತೆ ಇನ್ನೊಂದು problem ಆಗುತ್ತೆ.. ಇವರೊಬ್ಬರೇ ಏನು ಮಂದಣ್ಣ ನನ್ನ ಬಳಸಿಕೊಳ್ಳುವುದು.. ನಾನು ಬಳಸಿಕೊಳ್ತೀನಿ ಅಂತ ಎಲ್ಲರೋ ಬಳಸಿಕೊಳ್ಳೋಕೆ ಶುರು ಮಾಡಿದ್ರೆ ತೇಜಸ್ವಿಯ ಮಂದಣ್ಣ ಕಳ್ಡೇ ಹೋಗ್ತಾನೆ..
ತೇಜಸ್ವಿಯವರ ಮಂದಣ್ಣ ನನ್ನು ನಾವು ಜ್ಞಾಪಿಸಿಕೊಳ್ಳುವಂತೆ ಸುಶ್ರುತ ದೊಡ್ಡೇರಿಯವರ ಸ್ವoತದ ಪಾತ್ರಗಳನ್ನು ಜ್ಞಾಪಿಸಿಕೊಳ್ಳುವಂತೆ ಆಗಲಿ ಎಂದು ಹಾರಿಸುತ್ತೇನೆ..

Anonymous said...

ಈ ಪ್ರಪಂಚನೇ ಹಾಗೆ.
ಏಲ್ಲಿ ತಮಗೆ ಉಪಯೋಗವಿದೆಯೋ ಅಲ್ಲಿ ತಮ್ಮ ಬೇಳೆ ಹೇಗೆ ಬೇಯಿಸ್ಕೊಳ್ಳೋಬೇಕು ಅಂತ ಕಾಯ್ತಾಯಿರ್ತಾರೆ.
ಇದರಲ್ಲಿ ಪತ್ರಿಕೆಯೂ ಒಂದು. ರಾಮಚಂದ್ರಾಪುರ ಮಠ ಪ್ರವರ್ದಮಾನಕ್ಕೆ ಬರ್ತಾಯಿರೋ ಮಠ. ಹಾಗಾಗಿ ತಮ್ಮ ಹೊಟ್ಟೆ ಹೊರಕೊಳ್ಳೋಕೋಸ್ಕರ ಏಷ್ಟೋ ಪತ್ರಿಕೆಗಳು ಮಠದ ಬಗ್ಗೆ ಬರಿತಾರೆ.

ಮಠ ಏನು, ಅದರ ಕಾರ್ಯವ್ಯಾಪ್ತಿ ಏನು, ಅದರ ಹಿಂದೆ ಏಷ್ಟು ಕಾರ್ಯಕರ್ತರಿದ್ದಾರೆ ಎಂದು ಗೊತ್ತಿರೋದು ಒಳ್ಳೇದು ಅನ್ಸತ್ತೆ. ಸಾವಿರಾರು ಕಾರ್ಯಕರ್ತರನ್ನು ಸೆಳೆಯೋದು ಅಂದ್ರೆ ಅಷ್ಟು ಸುಲಭದ ಕೇಲ್ಸ ಅಲ್ಲಾ. ಅಲ್ಲಿ ಯಾರು ದುಡ್ಡಿಗಾಗಿ ಕೆಲ್ಸ ಮಾಡಿಲ್ಲ. ಸೇವೆ ಎಂದು ಮಾಡಿದಾರೆ.

ವಿಕಾಸ ಹೇಳಿದ ಹಾಗೆ "ಯಾವ ಪೇಪರ್ನವ್ರು ಏನಾದ್ರೂ ಬರ್ಕಳ್ಲಿ......." ಅಲ್ವಾ?

Malnad hudgi ಹೇಳಿದ್ದು ಸರಿ ಅನ್ನಿಸ್ತಾ ಇದೆ.ಯಾಕೆಂದ್ರೆ ನಮಗೆ ಮಂದಣ್ಣ ಮತ್ತು ಅವನ ಪಾತ್ರ ಗೊತ್ತಿರೋವಾಗ ಇಲ್ಲಿ ಹೋಲಿಕೆ ಅಷ್ಟು ಸರಿ ಇಲ್ಲಾ ಅನ್ಸತ್ತೆ.

ಶ್ರೀನಿಧಿ.ಡಿ.ಎಸ್ said...

ಸುಶ್,

ತುಂಬ ಚಂದ ಬರೆದಿದ್ದೀಯಾ. ಗೋ ಸಮ್ಮೇಳನವನ್ನ ಮಂದಣ್ಣನ ಕಣ್ಣಲ್ಲಿ ನೋಡೋ ಕಲ್ಪನೆ ಬಂದಿದ್ದಾದರೂ ಹೇಗೆ ಮಹರಾಯ ನಿಂಗೆ?!

ತೇಜಸ್ವಿಯ ಮಂದಣ್ಣನನ್ನ ನೀನು ಬಳಸಿಕೊಂಡದ್ದು ಎಷ್ಟು ಸರಿ ಅನ್ನುವ ಪ್ರಶ್ನೆ ಬರಬಹುದು.ಸರಿಯೇ ಇದೆ ಬಿಡು. ಆ ಮಂದಣ್ಣನನ್ನ ಈಗಿನ ಕಾಲಕ್ಕೆ ತಂದು ನಿಲ್ಲಿಸಿ, ಅವನಗೆ ಹೊಸ ಜಗತ್ತು ತೋರಿಸಿದ್ದೀಯೆ ನೀನು. ಇಲ್ಲದಿದ್ದರೆ ಮೂಡಿಗೆರೆಯಲ್ಲೇ ಇನ್ನೂ ಇರುತಿದ್ದ ಅವನು. ( ಇದ್ದರೆ ತಪ್ಪೇನೂ ಇಲ್ಲ, ಹೊರ ಬಂದಿದ್ದು ಖುಷಿ!)

ಮೈಸೂರು ಮಲ್ಲಿಗೆಯ ಬಳೆಗಾರ ೫೦ ವರ್ಷಗಳಾದ ಮೇಲೆ ಮತ್ತೆ ಶಾನುಭೋಗರ ಬಂದಂತೆ, ಇವನು ಬಂದಿದ್ದಾನೆ. ಮತ್ತೆ ಮೂಡಿಗೆರೆಗೆ ಕಳಿಸಬೇಡ ಅವನ್ನ. ಅಥವಾ ಕಳಿಸಿದರೂ ಏನು ಮಾಡುತ್ತಿದ್ದಾನೆ ಅನ್ನೋದರ ಅಪ್ಡೇಟ್ ಕೊಡ್ತಿರು.

Parisarapremi said...

ಡಿಟೋ ಶ್ರೀನಿಧಿ!!

ತುಂಬಾ ಫ್ಯಾಂಟಸೈಸ್ ಮಾಡಿ ಸೊಗಸಾಗಿ ನಿರೂಪಣೆ ಮಾಡಿದ್ದೀರ.. :-)

Shiv said...

ಸುಶ್,

ಚೆನ್ನಾಗಿದೆ ಕಣೋ ಮಂದಣ್ಣನ ಕತೆ..
ತೇಜಸ್ವಿಯವರ ಪಾತ್ರವನ್ನು ಇಲ್ಲಿ ಉಪಯೋಗಿಸಿದ್ದು ಸರಿಯೋ ತಪ್ಪೋ ಅನ್ನೋದು ಗೊತ್ತಿಲ್ಲಾ, ಆದರೆ ಸಮ್ಮೇಳನ-ಕಾರ್ಯಕ್ರಮ-ಹಬ್ಬಗಳ ನಂತರದ ಸ್ಥಿತಿಯನ್ನು ತುಂಬಾ ಚೆನ್ನಾಗಿ ಹೇಳಿದೀಯಾ

Supreeth.K.S said...

ನಿಮ್ಮ ಬರಹ ಓದಿ. ನಿಜಕ್ಕೂ ನಾನು ದಂಗು ಬಡೆದುಹೋದೆ. ನಮ್ಮ ದಿನನಿತ್ಯದ ಬದುಕಲ್ಲಿ ಕಂಡ ಸಂಗತಿಗಳನ್ನು ಸಾಹಿತ್ಯದ ಮುಖಾಂತರ ವ್ಯಕ್ತಪಡಿಸಲು ಪ್ರಯತ್ನಿಸಿದರೆ ಎಷ್ಟು ಎಂಜಾಯ್ ಮಾಡಬಹುದಲ್ವಾ? ಯಾಕೋ ಇದನ್ನು ಓದಿ ನನ್ನ ಹೊಟ್ಟೆ ಉರಿಯುತ್ತಿದೆ. ಆಗಾಗ ಹೀಗೆ ಹೊಟ್ಟೆ ಉರಿಸುತ್ತಿರಿ.

ನಂದಕಿಶೋರ said...

ನಮಸ್ಕಾರ.
ತೇಜಸ್ವಿಯವರ ನಿರ್ಗಮನ ಮತ್ತು ಈಚಿನ ಗೋಸಮ್ಮೇಳನದ ಸಮಾರೋಪ ನಿಮ್ಮನ್ನು ಎಷ್ಟು ಆವರಿಸಿದ್ದವು ಅಂತ ಇದರಿಂದ ತಿಳಿಯುತ್ತದೆ. ಮಂದಣ್ಣನ ಮನದೊಳಗೆ ಹೊಕ್ಕು ಇಣುಕಿದ್ದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ’ಧರೆಯೊಳಗೆ ಫಣಿರಾಯ ತಿಣುಕುವಷ್ಟು’ ರಾಮಾಯಣಗಳು, ಮಹಾಭಾರತಾದಿಗಳು ಬಂದದ್ದೂ ಈ ರೀತಿಯ ಮರುಸೃಷ್ಟಿಯಿಂದಲೇ ಅಲ್ವಾ? ಹಿತವಾಗಿ ಬಳಸಿದಲ್ಲಿ ಇದೊಂದು ಉತ್ತಮ ಪ್ರಯೋಗ. ಗಾಳ ಹಾಕುವ ಕಾರ್ಯ ಮುಂದುವರೆಸುತ್ತಿರಿ; ನಕ್ಷತ್ರಮೀನುಗಳು ಸಿಗುತ್ತಿರಲಿ.

Anonymous said...

ಸುಶ್ರುತ, ಬೀಮ್ಯಾನ್ ಮಂದಣ್ಣನನ್ನು ಗೋ ಸೇವೆಗೆ ಕಳಿಸಿದ್ದು ಚೆನ್ನಾಗಿದೆ. ಇಲ್ಲಿ ನಾನು ದನಕಾಯೋ ಕೆಲಸ ಅಂದಿಲ್ಲ ಃ). ಯಾಕೆಂದ್ರೆ ಜನರಲ್ಲಿ ಮೊದಲಿಂದಲೂ ದನ ಕಾಯೋ ಕೆಲಸ ಅಂದ್ರೆ ಒಂದು ರೀತಿ ಕೀಳುಮಟ್ಟದ ಕೆಲಸ ಅಂತ ಅನಿಸಿದೆ. ಏಲ್ಲರಿಗೂ ತಮ್ಮ ಬಾಲ್ಯದಲ್ಲಿ ಅನುಭವವಾಗಿರಬೇಕು. ಸರಿಯಾಗಿ ಓದದೇ ಇದ್ರೆ ಮನೆಯಲ್ಲಿ "ಹೋಗಿ ದನ ಕಾಯೋಕೆ ಹೋಗು" ಅಂತಿದ್ರು. ಅದಕ್ಕೆ ಇಲ್ಲಿ ಗೋಸೇವೆ ಅಂದಿದ್ದು. ಆದರೆ ದನಕಾಯೋದ್ರಲ್ಲು ಒಂದು ರೀತಿ ಸುಖ ಇದೇ...

ಇದು ಗೋ ಸಮ್ಮೇಳನಕ್ಕೆ ಸಂಬಂದಿಸಿದ್ದರಿಂದ "ಗೋ ಶಕೆ" ಏನ್ನುವುದರ ಬಗ್ಗೆ ಕೆಲವು ಅನಿಸಿಕೆಗಳನ್ನು ನನ್ನ ಬ್ಲಾಗಿನಲ್ಲಿ ಹಂಚಿಕೊಂಡಿದ್ದೇನೆ. ಬಿಡುವಾದಾಗ ನೋಡಿ

Sushrutha Dodderi said...

@ all

ಎಲ್ಲರಿಗೂ ನಮಸ್ಕಾರ. ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕಾಯುತ್ತಿದ್ದವರು ಕ್ಷಮಿಸಿ. Full busy office! :(

ನನದೊಂದು view ಇತ್ತು. ಗೋಸಮ್ಮೇಳನದ ವರದಿಯ ನೆಪದಲ್ಲಿ ಕರ್ವಾಲೊವನ್ನು ಎಲ್ಲರಿಗೂ ಮತ್ತೊಮ್ಮೆ ನೆನಪಿಸಿದಂತಾಯ್ತು ಅಂತ. ಹಾಗಾಗಿ, ಬರೆಯುವ ಮುನ್ನ ನನಗೆ ಬಂದ 'ತೇಜಸ್ವಿಯವರ ಮಂದಣ್ಣನನ್ನು ನಾನು ಬಳಸಿಕೊಳ್ಳುವುದು ತಪ್ಪೇ?' ಎಂಬ ಆಲೋಚನೆಯನ್ನು ಹಾಗೇ ಹತ್ತಿಕ್ಕಿ ಬರೆಯಲು ಕುಳಿತೆ.

ಹೀಗೆ ಬಳಸಿಕೊಂಡ್ರೆ original ಮಂದಣ್ಣ ಕಳೆದುಹೋಕ್ತಾನೆ ಅನ್ನೋದರಲ್ಲಿ ತೀರಾ ಹುರುಳೇನು ನಂಗೆ ಕಾಣ್ತಿಲ್ಲ. ಮಂದಣ್ಣನಂತಹ ಮಂದಣ್ಣ, ಅದೂ ತೇಜಸ್ವಿಯಂತಹ ತೇಜಸ್ವಿ ಸೃಷ್ಟಿಸಿದ ಮಂದಣ್ಣ, ಅದು ಹ್ಯಾಗ್ರೀ ಕಳೆದುಹೋಗಲಿಕ್ಕೆ ಸಾಧ್ಯ? ಮತ್ತೊಂದು ಗಮನಿಸಬೇಕಾದ ಅಂಶ ಅಂದ್ರೆ, ನಾನೇನು ಅವತ್ತಿನ ಆ ಮಂದಣ್ಣನನ್ನು 'ಅವನು ಹಾಗಿರ್ಲಿಲ್ಲ; ಹೀಗಿದ್ದ' ಅಂತ ಹೇಳ್ಲಿಕ್ಕೆ ಹೊರಟಿಲ್ಲ. ಇದು ಆ ಮಂದಣ್ಣನ ಮುಂದುವರಿಕೆ. ಇವ್ನು, ಈಗಿನ ಮಂದಣ್ಣ. 'ಕರ್ವಾಲೊ' ಓದಿಕೊಂಡು ಇದನ್ನು ಓದಿದರೆ ತೀರಾ ವ್ಯತಿರಿಕ್ತ ಪರಿಣಾಮವೇನು ಆಗಲಾರದು ಅಂದುಕೊಂಡಿದ್ದೇನೆ.

ಇತ್ತೀಚಿಗೆ ಜನಪ್ರಿಯವಾಗಿರುವ 'ಮೈಸೂರು ಮಲ್ಲಿಗೆ' ಎಂಬ ನಾಟಕದಲ್ಲಿ ಬಳೆಗಾರ ಚೆನ್ನಯ್ಯ ಶಾನುಭೋಗರ ಮನೆಗೆ ಬಂದು ಮಲ್ಲಿಗೆಯ ಕತೆಯನ್ನೂ, ಕೆ.ಎಸ್.ನ.ರ ಬದುಕಿನ ವ್ಯತೆಯನ್ನೂ ಹೇಳುತ್ತಾನೆ. 'ಅದೇ ಚೆನ್ನಯ್ಯ ಈಗ ಹೇಗೆ ಬರಲಿಕ್ಕೆ ಸಾಧ್ಯ?' ಅಂತ ಯಾರೋ ಕೇಳಿದಾಗ ಚೆನ್ನಯ್ಯ ಹೇಳ್ತಾನೆ: 'ಅಯ್ಯೋ ನನ್ನಂಥವ್ರಿಗೆ ಸಾವೆಲ್ಲಿದೆ ಹೇಳಿ? ಕನ್ನಡ ಕುಲಕೋಟಿ ಜನ ನನ್ನನ್ನ ದಿನಾನೂ ಓದ್ತಾ, ಹಾಡ್ತಾ, ನೆನೀತಾ ಇರ್ಬೇಕಾದ್ರೆ..?' ಅಂತ! ಕೃತಿಯ ಪಾತ್ರಗಳಿಗೆ ಸಾವೇ ಇಲ್ಲ. ನೆನೆದಷ್ಟೂ ಹಸಿರಾಗಿರುತ್ತವೆ ಅವು: ಹುಲ್ಲಿನಂತೆ. ನಮ್ಮ ಮಂದಣ್ಣನೂ ಹಾಗೇ.

ಅಲ್ಲದೇ ನಾನೇನು ಮಂದಣ್ಣನನ್ನು ನಗರಕ್ಕೆ ಕರೆತಂದು ಬಾರು-ಪಬ್ಬುಗಳನ್ನು ತೋರಿಸಿಲ್ಲ. ಅವನನ್ನು ಪ್ರಕೃತಿಯ ಮಡಿಲಲ್ಲಿರುವ ರಾಮಚಂದ್ರಾಪುರಕ್ಕೆ ಕಳಿಸಿದ್ದೇನೆ ಅಷ್ಟೇ. ಅಲ್ರೀ, ಮಂದಣ್ಣ ಬರೀ ಕಾಡಲ್ಲೇ ಇರ್ಬೇಕು ಅಂದ್ರೆ ಹೆಂಗ್ರೀ? ಅವ್ನು ಒಂದು ರೌಂಡ್ ಮಠಕ್ಕೆ ಸಹ ಹೋಗ್ಬಾರ್ದು ಅಂದ್ರೆ? ಪಾಪ, ಅವನಿಗೂ ಹೊರಪ್ರಪಂಚ ನೋಡಬೇಕು ಅನ್ನೋ ಆಸೆ ಇರಲ್ವಾ? ದೇಶವಿದೇಶಗಳಿಂದೆಲ್ಲಾ ಮಠಕ್ಕೆ ಜನಗಳು ಬರುತ್ತಿರಬೇಕಾದರೆ ನಮ್ಮ ಮಂದಣ್ಣನೂ ಹೋದರೆ ತಪ್ಪೇನಿದೆ ಹೇಳಿ? ಗೋಸಮ್ಮೇಳನದಿಂದ ಪ್ರೇರೇಪಿತನಾಗಿ ಪ್ರಕೃತಿತಜ್ಞ ಮಂದಣ್ಣ ಪ್ರಗತಿಪರ ಹೋರಾಟಕ್ಕಿಳಿದರೆ ಇನ್ನೂ ಒಳ್ಳೆಯದೇ ಅಲ್ವಾ?!

ಇಲ್ಲಿ ನಾನು ಮಂದಣ್ಣನನ್ನು ಬಳಸಿಕೊಂಡಿದ್ದಕ್ಕೆ ಬಂದ ಆಕ್ಷೇಪಗಳಿಗೆ ಸರಿಸಮನಾಗಿ ಸಮರ್ಥನೆಗಳೂ ಬಂದಿವೆ. ಹೀಗಾಗಿ, ನಾನು ಹೆಚ್ಚು ಹೇಳುವುದೇನೂ ಬೇಕಿಲ್ಲ.

ಇಷ್ಟಕ್ಕೂ ಈ ನನ್ನ ಬರಹದಿಂದ ಯಾರಿಗಾದರೂ ತಮ್ಮಲ್ಲಿದ್ದ 'ಒರಿಜಿನಲ್ ಮಂದಣ್ಣನ ಚಿತ್ರ' ಕ್ಕೆ ಕುಂದುಂಟಾಗಿದ್ದರೆ ನನ್ನನ್ನು ಕ್ಷಮಿಸಿ. ಒಂದು ಹೊಸ ಪ್ರಯೋಗ ಮಾಡಲೋಸುಗ ಹೀಗೆ ಬರೆದದ್ದು ಅಷ್ಟೇ.

ಧನ್ಯವಾದಗಳು.

Lanabhat said...

ಏನು ಕಲ್ಪನೆ ... ಅದ್ಭುತ..
ನನಗಂತೂ ಪ್ರಾರಂಭದಲ್ಲಿ ಕಲ್ಪನೆ ಅಂತ ಗೊತ್ತೇ ಆಗಲಿಲ್ಲ
ಹಾಗಾಗಿ ಬ್ಲಾಗ್ ಓದಿ ಕಮೆಂಟ್ ಪೇಜಿಗೆ ಓಡಿ ಬಂದೆ :D