ಇದು, 2007 ಏಪ್ರಿಲ್ 21ರಿಂದ 29 ರ ವರೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಕೆಲ ಚಿತ್ರಗಳು. ಜಗತ್ತಿನಾದ್ಯಂತ ಗೋಹತ್ಯೆ ನಿಷೇಧಿಸಿ, ಗೋವಿನ ಉಪಯೋಗಗಳ ಬಗ್ಗೆ ಅರಿವು ಮೂಡಿಸುವ ಮಹಾನ್ ಕೈಂಕರ್ಯಕ್ಕೆ ಕೈ ಹಾಕಿದ್ದಾರೆ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು. ಅವರ ಸಂಕಲ್ಪದಂತೆ ನಡೆದ ಭರ್ಜರಿ ಸಮ್ಮೇಳನದ ಕೊನೆಂii ಎರಡು ದಿನಗಳ ಸಮಾರಂಭದಲ್ಲಿ ನಾನು ಭಾಗಿಯಾಗಿದ್ದೆ. ನನಗೆ ಕಂಡಂತೆ ಅದರ ವರದಿ:
೧
“ಗೋಮಾತಾಕೀ”
“ಜೈ”
“ವಂದೇ”
“ಗೋಮಾತರಂ”
“ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ರಾಘವೇಶ್ವರ ಭಾರತೀ ಸ್ವಾಮಿ ಮಹಾರಾಜ್ ಕೀ”
“ಜೈ”
೨
ಅಲ್ಲೊಂದು ಹದವಾದ ಕತ್ತಲಿತ್ತು. ಅಲ್ಲಲ್ಲಿ ಚುಮುಕಿಸಿದಂತೆ ಹಿತವಾದ ಬೆಳಕಿತ್ತು. ತೆಂಗಿನ ಗರಿಯ ಮೇಲೆ ಮಲಗಿ, ಆಗಸಕ್ಕೆ ಮುಖ ಮಾಡಿ, ಮೋಡಗಳ ಮಧ್ಯೆ ಓಡುತ್ತಿದ್ದ ಚಂದ್ರನನ್ನು ನೋಡುತ್ತಾ ನಾವು ಮಲಗಿದ್ದೆವು. ಪಕ್ಕದಲ್ಲಿ ಶ್ರೀನಿಧಿ. ಅವನ ಪಕ್ಕ ವಿಕಾಸ. ಆಚೆ ಗಿರಿ. ಈಚೆ ಮಧು. ಅತ್ತ ಗುರು. ಇತ್ತ ಗಣೇಶ. ಈ ಆಚೆ, ಈಚೆ, ಅಕ್ಕ, ಪಕ್ಕ, ಅತ್ತ, ಇತ್ತಗಳೆಲ್ಲವನ್ನೂ ಒಂದು ಮಾಡುತ್ತಿದ್ದುದ್ದು ಮೆಲು ವೇಣು ನಿನಾದ. ಈ ಕೊಳಲ ಇಂಪು ತೇಲಿಬರುವಾಗ ತನ್ನೊಂದಿಗೆ ತಂಗಾಳಿಯ ತಂಪನ್ನೂ, ತಳಿರ ಕಂಪನ್ನೂ, ದೀಪದ ಬೆಳಕ ಕೆಂಪನ್ನೂ ಹೊತ್ತು ತಂದು ನಮ್ಮ ಮೇಲೆ ಸುರಿಯುತ್ತಿದ್ದರೆ ನಮಗೆ ಅಲ್ಲೇ ಸಣ್ಣಗೆ ಜೋಂಪು. ಅದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ಬಂದು ಹೋಗಿದ್ದ ಮಳೆಯ ನೀರು ಇನ್ನೂ ನಮ್ಮ ಕೆಳಗಿನ ಭೂಮಿಯಲ್ಲಿ ಇಂಗುತ್ತಿತ್ತು. ಮಳೆನೀರು ಕುಡಿದ ಧಾರಿಣಿ ಗಂಧವತಿಯಾಗಿ ಕೊಳಲ ಕೊರಳ ದನಿಗೆ ಕಿವಿಗೊಟ್ಟು ನಮ್ಮೊಂದಿಗೆ ತಾನೂ ತೂಕಡಿಸುತಿತ್ತು. ರಾತ್ರಿ ಹಗಲಿನೆಡೆಗೆ ನಿಧನಿಧಾನವಾಗಿ ಸರಿಯುತಿತ್ತು.
೩
ಗುಡಿಸಲಿನಂತಹ ಮನೆಯಲ್ಲಿ ಪ್ರತಿದಿನವೂ ಭಜನೆ. ನಿರಂತರ ಭಜನೆ. ರಾಮಭಜನೆ. ಗೋಭಜನೆ. ತಾಳದ ಟಿಣ್ಟಿಣ್. ಹಾರ್ಮೋನಿಯಂನ ಗುಂಯ್. ಮಧ್ಯದಲ್ಲಿ ಸ್ಥಾಪಿತವಾಗಿದ್ದ ಬಣ್ಣದ ಗೋಮಾತೆಯ ಪ್ರತಿಮೆ. ಪರಿಕ್ರಮ ಪಥದಲ್ಲಿ ನಡೆದು ಬಂದ ಜನ ಹೊರಗೆ ಚಪ್ಪಲಿ ಬಿಟ್ಟು ಒಳಬಂದು ಅರೆನಿಮಿಷ ಇಲ್ಲಿ ನಿಂತು ಮುಂದೆ ಸಾಗುತ್ತಿದ್ದರು. ಹೊರಹೊರಟರೆ ಮತ್ತೆ ಪಾನಕವಿದೆ. ‘ಹರೇ ರಾಮ’ ಅಂದರಾಯಿತು. ಎಷ್ಟು ಬೇಕಿದ್ದರೂ ಕುಡಿಯಬಹುದು. ಬೆಲ್ಲದ ಪಾನಕ. ಎರಡು ಲೋಟ ಕುಡಿದರೆ ಸಾಕು: ದಣಿವೆಲ್ಲಾ ಮಾಯ. ಬಿಸಿಲಿನಲ್ಲೂ ತಂಪು. ‘ಹರೇ ರಾಮ’ ಅನ್ನಬೇಕು ಅಷ್ಟೇ.
೪
ಶಾಮಿಯಾನದ ಕೆಳಗೆ ವೇದಿಕೆಯನ್ನೇ ನೋಡುತ್ತಾ ಕುಳಿತಿದ್ದ ಕೆಂಪು, ನೀಲಿ, ಬಿಳಿ, ಕಾಫಿ ಬಣ್ಣದ ಕುರ್ಚಿಗಳು. ಹಾದುಹೋಗುವ ಜನ ‘ರಾತ್ರಿ ಯಕ್ಷಗಾನ ನಡೆಯೋದು ಇಲ್ಲೇಯಂತೆ’ ಎಂದು ಮಾತಾಡಿಕೊಳ್ಳುವುದನ್ನು ಅವು ಕೇಳಿಸಿಕೊಳ್ಳುತ್ತಿದ್ದವು. ಹಿಂದಿನ ರಾತ್ರಿಯಿಡೀ ನಿದ್ರೆಗೆಟ್ಟು ಆಟ ನೋಡಿದ ಜನರನ್ನು ಕೂರಿಸಿಕೊಂಡಿದ್ದ ಸುಸ್ತು ಅವುಗಳ ಬೆನ್ನಲ್ಲಿತ್ತು. ಚಂಡೆ, ಮದ್ದಲೆ, ಜಾಗಟೆ, ಹಾರ್ಮೋನಿಯಂ ಶಬ್ದಗಳೊಂದಿಗೆ ಬೆರೆತು ಬರುತ್ತಿದ್ದ ಚಿಟ್ಟಾಣಿಯ ಗೆಜ್ಜೆಯ ಕಿರುದನಿ ಇನ್ನೂ ಈ ಕುರ್ಚಿಗಳ ಕಾಲಬುಡದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅರ್ಜುನ ಅಬ್ಬರಿಸಿದ ಸದ್ದಿಗೆ ಬೆಚ್ಚಿಬಿದ್ದ ನೀಲಿ ಕುರ್ಚಿ ಬಿಸಿಲಿಗೆ ಬಣ್ಣ ಕಳೆದುಕೊಳ್ಳುತಿತ್ತು. ರಾತ್ರಿ ಕುಳಿತಿದ್ದವನೊಬ್ಬ ತನ್ನ ಕೈಯಿಂದ ಒಂದೇ ಸಮನೆ ಬಡಿಯುತ್ತಲೇ ಇದ್ದ ಪರಿಣಾಮವಾಗಿ ಕೆಂಪು ಕುರ್ಚಿಯೊಂದರ ಕೈ ಇನ್ನೂ ನೋಯುತಿತ್ತು. ಈ ಕುರ್ಚಿಗಳಿಗೆ ಹೀಗೆ ಯಕ್ಷಗಾನ ನೋಡೀ ನೋಡೀ ಎಷ್ಟರಮಟ್ಟಿಗೆ ಅಭ್ಯಾಸವಾಗಿಬಿಟ್ಟಿತ್ತೆಂದರೆ ಅವುಗಳ ಮೇಲೆ ಸುಮ್ಮನೆ ಯಾರಾದರೂ ಕುಳಿತರೂ ಸಾಕು, ‘ಶ್ರೀ ಗುರುಗಣಾದಿಪತಯೇ ನಮಃ...’ ಎಂದು ಪದ್ಯವನ್ನು ಶುರುಹಚ್ಚಿಯೇಬಿಡುತ್ತಿದ್ದವು: ಕುಳಿತವರ ಮೆದುಳಿನಲ್ಲಿ.
೫
‘ಹರೇ ರಾಮ.. ಎಲ್ಲರೂ ಸಾಲಾಗಿ ಬನ್ನಿ...’ ‘ತಟ್ಟೆ ತಗೋಳಿ..’ ‘ಬಡಿಸ್ತೇವೆ, ನಿಮ್ಮ ಹತ್ರಾನೇ ಬರ್ತೇವೆ..’ ಹತ್ತು ನಿಮಿಷಕ್ಕೆ ಇಪ್ಪತ್ತು ಸಾವಿರ ಜನಕ್ಕೆ ಊಟ! ಎಷ್ಟು ಜನಕ್ಕೆ? ಇಪ್ಪತ್ತು ಸಾವಿರ ಜನಕ್ಕೆ! ತಮಾಶೆಯಲ್ಲ; ಮೈಕಿನಲ್ಲಿ ಕೂಗುತಿದ್ದುದು. ನಾನೇ ಕಿವಿಯಾರೆ ಕೇಳಿಸಿಕೊಂಡದ್ದು. ಹತ್ತು ನಿಮಿಷಕ್ಕೆ ಇಪ್ಪತ್ತು ಸಾವಿರ ಜನಕ್ಕೆ ಊಟ. ಒಂದು ದಿನಕ್ಕೆ, ಅಲ್ಲಲ್ಲ, ಒಂದು ಹೊತ್ತಿಗೆ ನಾಲ್ಕು ಲಕ್ಷ ಜನಗಳಿಗೆ ಊಟ. ಅನ್ನ-ಹುಳಿ-ಮಜ್ಜಿಗೆ-ಉಪ್ಪಿನಕಾಯಿ-ಪಾಯಸ: ಸಾಕೇ ಸಾಕು, ಮೃಷ್ಠಾನ್ನ ಭೋಜನ. ‘ಇನ್ನೊಂದ್ ಸ್ವಲ್ಪ ಹಾಕ್ಕೊಳಿ’ -ಒತ್ತಾಯ. ಊಟ ಮುಗಿದಾಕ್ಷಣ ಬಂದುನಿಲ್ಲುವ ವ್ಯಾನು. ಸ್ಟೀಲ್ ತಟ್ಟೆಯನ್ನು ಒಯ್ದು ಅದರಲ್ಲಿಟ್ಟರಾಯಿತು. ಕೈ ತೊಳೆದುಕೊಂಡರಾಯಿತು.
ಬಹುಶಃ ಎಲ್ಲರೂ ಮಾಡಿದ್ದು ಅಷ್ಟೇ! ಆದರೆ ನಾವು ಸ್ವಲ್ಪ ಅಡುಗೆಮನೆಯ ಒಳಗಡೆ ಹೋದೆವು. ದಿಗ್ಭ್ರಮೆ ಕಾದಿತ್ತು ನಮಗಲ್ಲಿ... ತೊಳೆಯಲಿಕ್ಕೆಂದು ತಂದು ಹಾಕಿದ್ದ ರಾಶಿ ರಾಶಿ ತಟ್ಟೆಗಳು... ಆಟೋದಲ್ಲಿ ತಂದು ತಂದು ಸುರಿಯುತ್ತಿದ್ದರು. ಹೆಣ್ಣುಮಕ್ಕಳು ಕುಕ್ಕರಗಾಲಲ್ಲಿ ಕುಳಿತು ಒಂದೊಂದೇ ತಟ್ಟೆಯನ್ನು ತೊಳೆಯುತ್ತಿದ್ದರೆ ಇದು ಯಾವತ್ತಿಗಾದರೂ ತೊಳೆದು ಮುಗಿಯುತ್ತದೆಯೋ ಎಂದೆನಿಸುವಂತಿತ್ತು ಆ ರಾಶಿ. ಮುಂದೆ ನಡೆದರೆ ಅನ್ನದ ರಾಶಿ. ಆಲೆಮನೆಯಲ್ಲಿ ಹೂಡಿರುತ್ತಾರಲ್ಲ, ಅಷ್ಟು ದೊಡ್ಡ ಒಲೆಯ ಮೇಲೆ ಬೇಯುತ್ತಿರುವ ಅನ್ನ-ಹುಳಿ. ಸ್ಟೀಮಿನಿಂದ ಹೊರಬಿದ್ದ ನೀರು ಹರಿದು ಹೋಗಲು ಚರಂಡಿಯಷ್ಟು ದೊಡ್ಡ ಒಗದಿ. ಸರಸರನೆ ಏನೇನೋ ತಡಕಾಡುತ್ತಾ ಓಡಾಡುತ್ತಿರುವ ಕಾರ್ಯಕರ್ತರು. ಆ ವ್ಯವಸ್ಥೆಯನ್ನು ನೋಡಿ ನಾವು ದಂಗು. ಕೈಮುಗಿದುಬಿಟ್ಟೆವು.
೬
ಟೀವಿಯ ಪರದೆಯಲ್ಲಿ ಹಿಡಿಯಲಾಗದಷ್ಟು ದೊಡ್ಡ ವೇದಿಕೆಯ ಮೇಲೆ ನಡೆಯುತ್ತಿದ್ದ ನಿರಂತರ ಕಾರ್ಯಕ್ರಮಗಳು. ಯಾವ್ಯಾವುದೋ ಊರು, ರಾಜ್ಯ, ದೇಶಗಳಿಂದ ಬಂದ ತರಹೇವಾರಿ ಸ್ವಾಮೀಜಿಗಳು; ಸ್ಥಳೀಯ, ರಾಜ್ಯ-ರಾಷ್ಟ್ರ ರಾಜಕೀಯದ ಪುಢಾರಿಗಳು; ಯಾವುದೋ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು; ಸಾಧುಗಳು; ಸಂತರು; ಸಜ್ಜನರು.... ಮೈಕು ಹಿಡಿದು ರಾಘವೇಶ್ವರರನ್ನು ಹೊಗಳುವವರು ಒಂದಷ್ಟು ಜನ, ಗೋವಿನ ಬಗ್ಗೆ ಗುಣಗಾನ ಮಾಡುವವರು ಒಂದಷ್ಟು ಜನ, ‘ಗೋಹತ್ಯೆಯನ್ನು ಸರ್ಕಾರ ನಿಷೇಧಿಸಬೇಕು’ ಎಂದು ಕೂಗಾಡುವವರು ಒಂದಷ್ಟು ಜನ, ‘ರಾಮಚಂದ್ರಾಪುರ ಇಂದು ಗೋವರ್ಧನ ಗಿರಿಯಾಗಿದೆ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸುವವರು ಒಂದಷ್ಟು ಜನ... ಇವರೆಲ್ಲರಿಗೂ ಜಾಗ ಮಾಡಿಕೊಡುತ್ತಾ, ಕರೆದು ಕೂರಿಸುತ್ತಾ, ಉಪಚಾರ ಮಾಡುತ್ತಿದ್ದ ಹಳದಿ ಸಮವಸ್ತ್ರದ ಕಾರ್ಯಕರ್ತರು...
ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ! ಅದು ಎರಡು ಎತ್ತುಗಳ ಹೆಸರು. ಎರಡನ್ನೂ ಸೇರಿಸಿ ಒಂದು ಹೆಸರಿರಬೇಕು. ಅದ್ಯಾವುದೋ ಸ್ವಾಮೀಜಿ ದೇಶಸಂಚಾರಕ್ಕೆ ಹೊರಟಿದ್ದರಂತೆ. ಅವರು ಹಾಗೆ ಸಂಚಾರ ಮಾಡುತ್ತಾ ಮಾಡುತ್ತಾ ಹಾವೇರಿಯ ಗುಡ್ಡದ ಮಲ್ಲಾಪುರ ಎಂಬಲ್ಲಿಗೆ ಬಂದು ದೇಹತ್ಯಾಗ ಮಾಡಿದರಂತೆ. ದೇಹತ್ಯಾಗ ಮಾಡುವ ಮುನ್ನ ತಮ್ಮದೆಲ್ಲವನ್ನೂ ಒಂದು ಎತ್ತಿಗೆ ಧಾರೆಯೆರೆದು, ಆ ಎತ್ತನ್ನು ತಮ್ಮ ‘ಮರಿ’ ಯನ್ನಾಗಿ ಘೋಷಿಸಿದರಂತೆ. ಅಂದಿನಿಂದ ಆ ಎತ್ತಿನ ಸಂತತಿಯನ್ನೇ ಗುರುವೆಂದು ಪೂಜಿಸಿಕೊಂಡು ಪಾಲಿಸಿಕೊಂಡು ಬರುತ್ತಿದ್ದಾರೆ ಅಲ್ಲಿಯ ಜನ. ಒಬ್ಬ ಸ್ವಾಮೀಜಿಗೆ ಸಲ್ಲುವ ಯಾವತ್ತೂ ಗೌರವ, ಪೂಜೆ, ಪುನಸ್ಕಾರಗಳು ಆ ಜೋಡಿ ಎತ್ತಿಗೆ ಸಲ್ಲುತ್ತದೆ. ಈ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ ಆ ಸಾಲಿನಲ್ಲಿ ಮೂವತ್ತೈದನೇ ಗುರು. ಇಂತಹ ‘ವಿಚಿತ್ರ’ ಎಂದೆನಿಸುವ ಅದೆಷ್ಟೋ ಸಂಗತಿಗಳು ಅಲ್ಲಿ ದಿನವೂ ಕಾದಿದ್ದವು.
೭
ಸಮಾರೋಪ ಸಮಾರಂಭದ ಕೊನೆಯಲ್ಲಿ ಇದ್ದುದು ಮೆರವಣಿಗೆ. ಮೊದಲು ಬಂದದ್ದು ಆರೇಳು ಗೋವುಗಳು. ಆಮೇಲೆ ಎಂಟು ಎತ್ತಿನ ಗಾಡಿಗಳು. ಆಮೇಲೆ ಎರಡು ಕುದುರೆಗಳು. ನಂತರ ವಿವಿಧ ಜನಪದ ತಂಡಗಳು. ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ನೂರಾರು ಜನಪದ ತಂಡಗಳು. ಮರಕಾಲುಗಳು, ಚಿತ್ರವಿಚಿತ್ರ ವೇಷಗಳು, ಛದ್ಮವೇಷಗಳು, ತಲೆಯ ಮೇಲಿನ ಕೊಡವನ್ನು ತಲೆಯಿಂದಲೇ ಬ್ಯಾಲೆನ್ಸ್ ಮಾಡುತ್ತಿದ್ದ ಕಲಾವಿದೆ ಮಹಿಳೆಯರು, ಸಾರೋಟುಗಳು, ಪ್ರತಿಮೆಗಳು.... ಓಹೋಹೋಹೋ..! ಕೊನೆಯಲ್ಲಿ ಕಾಮಧೇನುವನ್ನು ಹೊತ್ತ ರಥ. ಪಕ್ಕದಲ್ಲಿ ಆಸೀನರಾಗಿರುವ ರಾಘವೇಶ್ವರರ ಮುಖದಲ್ಲಿ ಎಂದೂ ಮಾಸದ ಮುಗುಳ್ನಗೆ. ತನ್ನ ಕರುವಿನೊಂದಿಗೆ ನಿಂತಿದ್ದ ಆ ಕಾಮಧೇನು ಬೆಳ್ಳಿ ಬೆಳಕಿನಲ್ಲಿ ಅದೆಷ್ಟು ಚೆನ್ನಾಗಿ ಕಾಣುತ್ತಿತ್ತೆಂದರೆ ಹಾಗೇ ನೋಡುತ್ತಿದ್ದರೆ ಎಲ್ಲಿ ಅದಕ್ಕೆ ದೃಷ್ಟಿಯಾಗಿಬಿಡುತ್ತದೋ ಎಂದೆನೆಸಿ ನಾವೇ ಕಣ್ಣು ಬೇರೆ ಕಡೆ ಹೊರಳಿಸಿದೆವು.
೮
ಮಠದ ಮುಖ್ಯದ್ವಾರದಿಂದ ಶುರುವಾಗಿದ್ದ ಮೆರವಣಿಗೆ ಪರಿಕ್ರಮ ಪಥದಲ್ಲಿ ಸಾಗಿಬಂದು ಮುಖ್ಯ ವೇದಿಕೆಯನ್ನು ಸೇರಿದ ಮೇಲೆ ಮಹಿಳಾಮಣಿಯರಿಂದ ಲಕ್ಷ ದೀಪಾರತಿ. ಉರಿಯುತ್ತಿದ್ದ ಎಲ್ಲಾ ವಿದ್ಯುದ್ದೀಪಗಳನ್ನೂ ಆರಿಸಲಾಯಿತು. ಕೇವಲ ಈ ಪುಟ್ಟ, ಆದರೆ ಲಕ್ಷ ದೀಪಗಳ ಬೆಳಕು. ಆ ಬೆಳಕಿನಲ್ಲಿ ಗುರುಗಳು ಭಾವುಕರಾಗಿ ಹೇಳಿದ್ದಿಷ್ಟು: ‘ಎಲ್ಲಾ ಮೌಢ್ಯದ, ಕೃತಕ ಬೆಳಕೂ ಆರಿವೆ. ಇಲ್ಲಿ ಈಗ ಇರುವುದು ಕೇವಲ ಜ್ಞಾನದ, ಧರ್ಮದ ಬೆಳಕು. ಇದು ಗೋಮಾತೆಯೆಡೆಗಿನ ಪ್ರೀತಿಯ ಬೆಳಕು. ಈ ಬೆಳಕು ಈಗ ಬೆಳಗಲು ಶುರುವಾಗಿದೆ. ಇನ್ನು ಇದು ಗೋವನ್ನು ರಕ್ಷಿಸುವ ದಾರಿದೀಪವಾಗಲಿದೆ. ಧರ್ಮಕ್ಕಾಗಿ ಯುದ್ಧ ಶುರುವಾಗಿದೆ.’
೯
ಹಾಗಾದರೆ ಅಲ್ಲಿದ್ದದ್ದು ಏನು? ಶ್ರದ್ಧೆಯೇ? ಗೌರವವೇ? ಭಕ್ತಿಯೇ? ಪೂಜೆಯೇ? ಆವೇಶವೇ? ಹುಚ್ಚೇ?
ನನ್ನ ಪ್ರಕಾರ ಇವೆಲ್ಲಕ್ಕಿಂತ ಹೆಚ್ಚಾಗಿ ಅಲ್ಲಿದ್ದದ್ದು ಪ್ರೀತಿ. ‘ಗೋಮಾತಾಕೀ ಜೈ’ ಎಂಬ ಮಾರ್ದವ ಉದ್ಘೋಷದಲ್ಲಿದ್ದುದು ಪ್ರೀತಿ. ಮುರಳಿಯ ನಾದದಲ್ಲಿದ್ದು ಗೋವುಗಳೆಡೆಗಿನ ಮಗ್ನ ಪ್ರೀತಿ. ಭಜನೆಯ ದನಿಯಲ್ಲಿದ್ದುದು ಭಕ್ತಿ ತುಂಬಿದ ಪ್ರೀತಿ. ಪಾನಕದಲ್ಲಿ ಕರಗಿದ್ದುದು ಬೆಲ್ಲದ ಪ್ರೀತಿ. ಬಡಿಸಿದ ಅನ್ನದ ಹಬೆಯಲ್ಲಿದ್ದುದು ಪ್ರೀತಿ. ಕಾರ್ಯಕರ್ತರ ನಿಷ್ಠೆಯಲ್ಲಿದ್ದುದು ಜನಗಳೆಡೆಗಿನ ಪ್ರೀತಿ. ಬಿಸಿಲಿಗೆ ಬಿದ್ದ ಬೆವರ ಉಪ್ಪಿನಲ್ಲಿದ್ದುದೂ ಪ್ರೀತಿ.
ಅಂಥದ್ದೊಂದು ದೊಡ್ಡ ಸಮಾರಂಭವನ್ನು ನಡೆಸಿದ್ದು ಪ್ರೀತಿ: ಗೋವಿನೆಡೆಗಿನ ಪ್ರೀತಿ. ಕೇವಲ ಭಕ್ತಿಯಿಂದ ಇವೆಲ್ಲಾ ಸಾಧ್ಯವಾಗುತ್ತಲೇ ಇರಲಿಲ್ಲ.
೧೦
ಇಷ್ಟಕ್ಕೂ ಗೋವು ಕೇಳುವುದು ಏನು? ಗುರುಗಳ ಪ್ರಕಾರ: ‘ನನ್ನನ್ನು ಸಹಜವಾಗಿ ಹುಟ್ಟಲು ಬಿಡಿ. ಸಹಜವಾಗಿ ಬದುಕಲು ಬಿಡಿ. ಸಹಜವಾಗಿ ಸಾಯಲು ಬಿಡಿ’. ಅಷ್ಟೇ. ಇಡೀ ಗೋಸಮ್ಮೇಳನದ ಉದ್ಧೇಶವೂ ಗೋವಿನ ಈ ಕೋರಿಕೆಯನ್ನು ಈಡೇರಿಸುವುದಕ್ಕೆ ಮೊದಲನೇ ಹೆಜ್ಜೆ ಇಡುವುದಷ್ಟೇ ಆಗಿತ್ತು. ಗೋಹತ್ಯೆಯ ನಿಷೇಧಕ್ಕೆ ಒಂದು ದೊಡ್ಡ ಕಹಳೆ ಮೊಳಗಿದೆ. ವಿಶ್ವ ಗೋ ಸಮ್ಮೇಳನ ಸಮಾರಂಭ ಯಶಸ್ವಿಯಾಗಿ ನೆರವೇರಿದೆ. ಇನ್ನು ಆಗಬೇಕಿರುವುದೇನಿದ್ದರೂ ಕ್ರಾಂತಿ. ಧರ್ಮಯುದ್ಧ. ನಮಗೆ ಏನೆಲ್ಲವನ್ನೂ ಕೊಡುವ ಗೋವಿಗೆ, ಪ್ರತಿಯಾಗಿ ನಾವು ಮಾಡಬೇಕಿರುವ ಕರ್ತವ್ಯಪಾಲನೆ. ವಿಶ್ವಾದ್ಯಂತ ಗೋವಿನ ಆರಾಧನೆ.
ಅಷ್ಟಾದರೆ ಇಷ್ಟು ಮಾಡಿದ್ದು ಸಾರ್ಥಕ. ವಂದೇ ಗೋಮಾತರಂ!
12 comments:
ಸುಶ್, ನಾನು ಅಲ್ಲಿರಲಿಲ್ಲ್ಲ ಅನ್ನುವ ಒಂದು ಅನಾಥ ಭಾವ, ಅಪರಾಧೀ ಭಾವ, ಏನನ್ನೋ ಕಳೆದುಕೊಂಡ ನೋವಿನ ಭಾವ... ಎಲ್ಲವೂ ಲಗ್ಗೆಯಿಟ್ಟವು. ನಿಮ್ಮ ವರ್ಣನೆ ಕಣ್ಣೊಳಗೆ ಚಿತ್ರ ಕಟ್ಟಿಕೊಳ್ಳುವುದರಲ್ಲಿ ಸಹಾಯ ಮಾಡಿದರೂ ಮನದೊಳಗೆ ಈ ಭಾವಗಳ ಹೊತ್ತಿಕೊಳ್ಳುವುದರಲ್ಲೂ ಪೂರಕವಾದವು. ಏನು ಮಾಡಲಿ? ಹೇಗೆ ತಣಿಸಲಿ?
ಸುಶ್ರುತ,
ನಾನು ಆ ಗೋಸಮ್ಮೇಳನದ ಬಗ್ಗೆ ಓದಿದ್ದೆ.ನಿನ್ನ ಪ್ರತ್ಯಕ್ಷ ವರದಿ ಓದಿದ ನಂತರ ಅದರ ಆಗಾಧತೆಯ ಅರಿವಾಯಿತು.
ಈ ಗೋಸಮ್ಮೇಳನ ಗೋವಿನ ರಕ್ಷಣೆಯ ಪಥದಲ್ಲಿ ಮೊದಲ ಹೆಜ್ಜೆಯಾಗಬಹುದೇ?
ವಿಶ್ವ ಗೋ ಸಮ್ಮೇಳನದ ಕೆಲವು ಛಾಯಾಚಿತ್ರಗಳು - http://vishvakannada.com/node/372
-ಪವನಜ
ಭೈರಪ್ಪನವರ ಜಲಪಾತ,ಮತ್ತು ತಬ್ಬಲಿ ನೀನಾದೆ ಮಗನೆ ಕಣ್ಣಮುಂದೆ ಸುಳಿದು ಹೋದವು artificial insemination,ಉಪಯೋಗಕ್ಕೆ ಬಾರದ ಗೋವುಗಳ ಮರಣ ಹೋಮ, ಇನ್ನೂ ಹೇಗೆ ಗೋವುಗಳ ಮೇಲೆ ನೆಡೆಯುತ್ತಿರುವ ದೌರ್ಜನ್ಯಕ್ಕೆ ಎದುರಾಗಿ ನಿಂತು ಹೊರಾಡುತ್ತಿರುವ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಚೈತನ್ಯ ದೊಡ್ಡದು ಗೋ ಸಮ್ಮೇಳನದಲ್ಲಿ ನೆಡೆದ ಕಾರ್ಯಕ್ರಮಗಳ ಚಿತ್ರಣ ಕೊಟ್ಟಿದ್ದಕ್ಕೆ ಧನ್ಯವಾದಗಳು. ಕೊಳಲಿನ ನೀನಾದ ಇನ್ನೂ ಅನುರನಿಸುತ್ತಿದೆಯೇ??
@ suptadeepti
ಅಂದ್ರೆ, ನನ್ನ ಉದ್ಧೇಶ ಸಫಲವಾಗಿದೆ ಎಂದಾಯ್ತು! ಏಕೆಂದರೆ ನಾನು ವರ್ಣಿಸಲು ತೊಡಗಿದ್ದೇ ನಿಮ್ಮಂತವರ ಹೊಟ್ಟೆ ಉರಿಸುವ ಉದ್ಧೇಶದಿಂದ!!
ಹಹ್ಹ, ಈಗ ಏನೂ ಮಾಡಬೇಡಿ. ಸಮ್ಮೇಳನದ ಆಶಯದಂತೆ ನೀವೂ ಒಂದು ಕೊಟ್ಟಿಗೆ ಕಟ್ಟಿಸಿ, ಒಂದು ಆಕಳನ್ನು ಕೊಂಡು, ಚೆನ್ನಾಗಿ ಸಾಕಿ. ನಿಮ್ಮ ಭಾವಕೋಶದಲ್ಲಿ ಆಕಳು ಮತ್ತು ಅದು ಹಾಕುವ ಕರು ನವೋಲ್ಲಾಸವನ್ನು ತುಂಬುತ್ತವೆ.. ಟ್ರೈ ಮಾಡಿ ನೋಡಿ...!
@ shiv
ಗೋಸಮ್ಮೇಳನ ನನ್ನಂತಹ ಪ್ರತ್ಯಕ್ಷದರ್ಶಿಗಳಿಗೆ ಒಂದು ಆಪ್ಯಾಯಮಾನ ಅನುಭವವನ್ನು ಕೊಟ್ಟು, ಗೋವುಗಳೆಡಿಗಿನ ನಮ್ಮ ಪ್ರೀತಿಯನ್ನು ಇಮ್ಮಡಿಗೊಳಿಸಿದ್ದರೆ, ಈಗೀಗ ಕೆಲ ಪತ್ರಿಕೆಗಳು ಈ ಸಮ್ಮೇಳನದ ಬಗ್ಗೆ ವ್ಯತಿರಿಕ್ತ ರೀತಿಯಲ್ಲಿ ವರದಿ ಮಾಡುತ್ತಿವೆ. ಓದಿದರೆ, ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲ ಉಂಟಾಗುತ್ತಿದೆ.
ಏನೇ ಆಗಲಿ, ಗೋಸಮ್ಮೇಳನ ಗೋರಕ್ಷಣೆಗೆ ನಾಂದಿಯಾಗಲಿ ಎನ್ನುವ ಆಶಯವನ್ನಿಟ್ಟುಕೊಳ್ಳೋಣ.
@ pavanaja,
ಸರ್, ಫೋಟೋಗಳು ತುಂಬಾ ಚೆನ್ನಾಗಿವೆ. ಮೊದಲೇ ಸಿಕ್ಕಿದ್ದರೆ ಈ ಪೋಸ್ಟ್ನೊಂದಿಗೆ ನಾನು ಬಳಸಿಕೊಳ್ಳುತ್ತಿದ್ದೆ..
@ ಮಲ್ನಾಡ್ ಹುಡುಗಿ
ನಿಮ್ಮ ಪ್ರತಿಕ್ರಿಯೆಗೆ, ಮೆಚ್ಚುಗೆಗೆ ಕೃತಜ್ಞತೆಗಳು. ಕೊಳಲಿನ ನಿನಾದದ ಮಾಯೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು.ನಿನ್ನೆ ಜಯನಗರದಲ್ಲಿ ಒಂದು ಕಾರ್ಯಕ್ರಮ ಇತ್ತು. ಅದರಲ್ಲಿ ಮತ್ತೆ ಮೋಹನ ಮುರಳಿಯ ಗಾನ. ಪುಟ್ಟ ಪುಟ್ಟ ಮಕ್ಕಳು ಪುಟ್ಟ ಕೊಳಲಿನ ಪುಟ್ಟ ಪುಟ್ಟ ಕಿಂಡಿಗಳ ಮೇಲೆ ತಮ್ಮ ಪುಟ್ಟ ಬೆರಳಾಡಿಸುತ್ತಿದ್ದರೆ ಆ ಕೊಠಡಿ ಕೃಷ್ಣನ ನಂದನವನವಾಗಿತ್ತು. ನಮಗೆ ಈ ಪರಿ ಮಾನಸೋಲ್ಲಾಸವನ್ನು ಕೊಡುವ ಆ ಬಿದಿರ ತುಂಡಿಗೆ ಶರಣು.
ತುಂಬಾ ಸಕ್ಕತ್ತಾಗಿ, ಕಣ್ಣೀಗೆ ಕಟ್ಟಿದಂತೆ ವರ್ಣಿಸ್ತೀರಾ...
ಇನ್ನೂ ಈ digicam ಗಳೆಲ್ಲಾ waste ಬಿಡಿ...ನಿಮ್ ಜೊತೆನೆ ಬಂದ್ರಾಯ್ತು :)
ಸು..
ಒಳ್ಳೆಯ ವರ್ಣನೆ.. ದಿನಗಟ್ಟಲೆ ತುಂಬಿಸಿದ ಟೀವಿ ಚಾನೆಲ್ಲುಗಳ ಸುದ್ದಿಗಿಂತ ಆಪ್ತವಾದ ವರದಿ.
ಎಲ್ಲ ಚಿತ್ರಣಗಳಲ್ಲು ಮನತುಂಬಿ ನಿಂತಿದ್ದು - ರಾಶಿ ರಾಶಿ ತಟ್ಟೆಗಳನ್ನು ತಮ್ಮ ಮನೆಯ ಸಮಾರಂಭದ ಹುರುಪಲ್ಲಿ ತೊಳೆದು ಹಾಕಿದ ಗಟ್ಟಿಗಿತ್ತಿಯರ ಬಗ್ಗೆ ಬರೆದೆಯಲ್ಲ ಅದು.
ಮನೆಗೊಂದು ಕೊಟ್ಟಿಗೆ ಕಟ್ಟಿ, ಗೋಪೂಜೆಯನ್ನು ಮಾಡುವುದು ಎಷ್ಟು ಪ್ರಾಕ್ಟಿಕಲ್ಲೋ ಗೊತ್ತಿಲ್ಲ. ಎಮ್ಮೆ,ದನ-ಕರು,ಎತ್ತು ಗಳಿಂದಲೇ ಬದುಕುವ ಜೀವಗಳಿಗೆ - ಇವು ಪೂಜ್ಯ ಎನ್ನಿಸುವ ಭಾವ ಬಂದರೆ ಅವುಗಳ ಮೇಲೆ ಹೇರುವ ಭಾರ ಅಷ್ಟು ಕಡಿಮೆಯಾಗುತ್ತೇನೋ! ನಾವು ಅವುಗಳ ಜೀವಜಲ ಉಂಡು ಬದುಕುವವರಿಗೆ ಇವು ಪೂಜ್ಯವೆಂಬ ಭಾವ ಬಂದರೆ ಯಾವಾಗಲೋ ದಾರಿಯಲ್ಲಿ/ಕೊಟ್ಟಿಗೆಯಲ್ಲಿ/ಬಯಲಲ್ಲಿ ಸಿಕ್ಕಿದಾಗ ಅವಕ್ಕೆ ಪ್ರೀತಿಯಿಂದ ಹತ್ತಿರವಾಗುತ್ತೇವೇನೋ! ಅಂತ ಅನ್ನಿಸಿದ್ದು ಹೌದು.
ಆ ಮೂಕ ಜೀವಿಗಳ ಕೊರಳ ಆರ್ತತೆಯನ್ನು ಮತ್ತು ಕೊರಳ ಗಂಟೆಯುಲಿಯನ್ನೂ ಕೇಳಿಸಿಕೊಳ್ಳುವ ಮನಸ್ಸು ಎಲ್ಲರದಾಗಲಿ ಅಂತ ಆಶೆ. ಬಿದಿರ ತುಂಡನೂದಿದ ಗೊಲ್ಲನ ಹಾಡದು. ನಾಡ ತುಂಬ ತುಂಬಲಿ.
@ pramod p t
ಡಿಜಿಕ್ಯಾಮ್.. ಹಹ್.. ಥ್ಯಾಂಕ್ಸ್ ಸ್ವಾಮೀ.. :)
@ ಸಿಂಧು
ಧನ್ಯವಾದಗಳು.
ಹೌದು, ನನಗೂ ತಟ್ಟಿದ್ದು ಸ್ವಲ್ಪವೂ ಬೇಸರಿಸಿಕೊಳ್ಳದೇ ಪಾತ್ರೆ ತೊಳೆಯುತ್ತಿದ್ದ ಕಪ್ಪು ಬ್ಲೌಸು, ಹಸಿರು ಹೂವುಗಳ ಸೀರೆಯ ಹೆಂಗಸಿನ ಚಿತ್ರ; ಕಪ್ಪು ಟಾಪು, ನೀಲಿ ದಾವಣಿಯ ಎಣ್ಣೆಗಪ್ಪು ಹುಡುಗಿಯ ಸುಸ್ತು ತುಂಬಿದ ಕಣ್ಣ ಚಿತ್ರ; ಅವರ ಕೈಯಲ್ಲಿದ್ದ ಸ್ಕ್ರಾಬರ್ರಿಗೆ ಮೆತ್ತಿದ್ದ ವ್ಹಿಮ್ ಸೋಪಿನ ನೊರೆಯ ಚಿತ್ರ...
ನಿಜ. ಸಮ್ಮೇಳನದ ಬಗ್ಗೆ ಅಲ್ಲಲ್ಲಿ ವಿರೋಧೀ ಮಾತುಗಳು ಕೇಳಿಬರುತ್ತಿವೆ. ಆದರೆ ನನ್ನ ಅನಿಸಿಕೆ ಇಷ್ಟೇ: ಗೋವನ್ನು ಊದುಬತ್ತಿ ಹಚ್ಚಿ, ಆರತಿ ಬೆಳಗಿ, ಹೂಹಾರ ಹಾಕಿ ಪೂಜಿಸಬೇಕು ಅಂತ ಅಲ್ಲ; ಅವುಗಳೆಡೆಗೆ ಒಂದು ಪ್ರೀತಿಹೂವನ್ನೆರಚುವ ಸದ್ಗುಣ ನಮ್ಮಲ್ಲಿ ಚಿಗಿತುಕೊಳ್ಳಲಿಕ್ಕೆ ಆ ಸಮಾರಂಭ ನೆರವಾಯಿತು ಎಂದಾದರೆ ಅಷ್ಟೇ ಸಾಕು ಎಂಬುದು. ಮೇವು ತಿಂದು ಅಮೃತದಂಥಾ ಹಾಲು ಕೊಡುವ, ಹಳಸಲು ಅನ್ನ ತಿಂದು ಫಲವತ್ತಾದ ಗೊಬ್ಬರ ಕೊಡುವ, ಹೊಡೆಸಿಕೊಂಡೂ ಜೀತವಾಗಿ ದುಡಿಯುವ, ತೊಳಕಲು ಕುಡಿದು ರೋಗನಿವಾರಕ(?) ಗೋಮೂತ್ರ ಕೊಡುವ ಗೋವಿನೆಡೆಗೆ ಒಂದು ಕೃತಜ್ಞತಾ ಮನೋಭಾವ ಜನರಲ್ಲಿ ಇದ್ದರೆ (ಸುಪ್ತವಾಗಿಯಾದರೂ) ಅಷ್ಟು ಸಾಕು.
>>ಬಿದಿರ ತುಂಡನೂದಿದ ಗೊಲ್ಲನ ಹಾಡದು. ನಾಡ ತುಂಬ ತುಂಬಲಿ. -ಹ್ಮ್.. ಇಷ್ಟವಾಯ್ತು..
ಈ ದೊಡ್ಡ ಕಾರ್ಯಕ್ರಮಕ್ಕೆ ನಾನೊಂದು ಚಿಕ್ಕ ಅಳಿಲು ಸೇವೆಯಾಗಿ vishwagou.org ವೆಬ್ ಸೈಟ್ ಡಿಸೈನ್ ಮಾಡಿದ್ದೇನೆ.
Sushrutha,
well narrated...
More over I liked "Dharmakkagi Yudhdha"...Nammantha Yuvakara munde iruvudu onde ondu challenge..."Dharma Rakshane".
--
Vishwa
ಸವಿವರವಾದ ವರದಿಗಾಗಿ ಧನ್ಯವಾದಗಳು..
Post a Comment