ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ... ಕೃಷ್ಣ ಗೋಗರೆಯುತ್ತಿದ್ದಾನೆ... ನೋಡಮ್ಮಾ, ಬೆಣ್ಣೆ ಗಡಿಗೆ ನೋಡಮ್ಮಾ: ಎಷ್ಟು ಮೇ...ಲೆ ಇದೆ. ನನ್ನ ಈ ಪುಟ್ಟ ಕೈಗಳು ಅಲ್ಲಿಗೆ ನಿಲುಕುತ್ತವೆಯೇ ಅಮ್ಮಾ...? ನಾನು ಕದ್ದಿಲ್ಲಮ್ಮ.. ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ...
ಮೊನ್ನೆ ಭಾನುವಾರ ಕಲಾಕ್ಷೇತ್ರದಲ್ಲಿ ಎಂ.ಡಿ. ಪಲ್ಲವಿ ಹಾಡುತ್ತಿದ್ದರೆ ನಾವೆಲ್ಲಾ ಮಂತ್ರಮುಗ್ಧರಂತೆ ಕುಳಿತಿದ್ದೆವು. ನಮ್ಮೆಲ್ಲರ ಕಣ್ಣ ಮುಂದೂ ಬೆಣ್ಣೆಯ ಮೆತ್ತಿದ ಬಾಯ ಮುದ್ದುಕೃಷ್ಣ ಓಡಾಡುತ್ತಿದ್ದ. ಅಮ್ಮ ಯಶೋಧೆ ಕೈಯಲ್ಲಿ ಬೆತ್ತ ಹಿಡಿದು ಕೃಷ್ಣನನ್ನು ಹೆದರಿಸುತ್ತಿದ್ದಳು. ಕೃಷ್ಣನ ಮುಗ್ಧ ಬೇಡಿಕೆಯ ಮುಂದೆ ಅವಳ ಕೋಪವೆಲ್ಲ ಇಳಿಯುತ್ತಿದ್ದುದು ನಮಗೆ ಕಾಣುತ್ತಿತ್ತು. ಕೊನೆಗೊಮ್ಮೆ ಅವಳು, ಇನ್ನೇನು ಅಳಲಿರುವ ಮುಖದ ಕಂದ ಕೃಷ್ಣನನ್ನು ನೋಡಲಾಗದೇ, ಬರಸೆಳೆದು ಅಪ್ಪಿ ಮುತ್ತಿಕ್ಕಿ ಎತ್ತಿಕೊಂಡಾಡುವಾಗ ನಾವೆಲ್ಲಾ ಚಪ್ಪಾಳೆ ತಟ್ಟುತ್ತಿದ್ದೆವು: ಹಾಡು ಮುಗಿದಿತ್ತು.
ಮಗು ಅಳುವುದನ್ನು ತಾಯಿ ಸಹಿಸಲಾರಳು. ತಡೆಹಿಡಿಯಲಾರದಷ್ಟು ಕೋಪ ಬಂದಾಗ ಒಂದೇಟು ಕೊಟ್ಟಾಳು: ಆದರೆ ಅದು ಅಳಲಾರಂಭಿಸಿದ ಮರುಕ್ಷಣ ಮತ್ತೆ ಅದನ್ನು ಎತ್ತಿ ಹೆಗಲ ಮೇಲೆ ಹಾಕಿಕೊಂಡು 'ಓಓಓ.. ಹೋಯ್ತು ಹೋಯ್ತು.. ಎಲ್ಲೀ..? ಎಲ್ಲಿ ಅಬ್ಬು ಆಗಿದ್ದು? ಇಲ್ಲಾ? ಏ.. ಹೋತು.. ಹುಸಿಕಳ್ಳ..!' ಎನ್ನುತ್ತಾಳೆ ಮತ್ತು ಮಗುವ ಅಳುವ ಕಡಲಲ್ಲಿ ನಗೆಯ ಹಾಯಿದೋಣಿ ತೇಲಿಬರುತ್ತದೆ. ಅಮ್ಮನ ಹೊಡೆತವನ್ನು ಅರೆಕ್ಷಣದಲ್ಲಿ ಮರೆತುಬಿಡುತ್ತದೆ ಮಗುವಿನ ಮುಗ್ದ ಮನಸು. ಅಮ್ಮನ ತೆಕ್ಕೆ ನೀಡುವಷ್ಟು ಸುಖವನ್ನು ಮತ್ತಿನ್ನೇನೂ ನೀಡಲಾರದೇನೋ?
ನನ್ನಮ್ಮನೂ ಹಾಗೇ. ನಮ್ಮನೆಯಲ್ಲಿ ನನಗೆ ಯಾರೂ ಹೊಡೆಯುತ್ತಿರಲಿಲ್ಲ. ಹೊಡೆತ ತಿನ್ನುವಂತಹ ತಪ್ಪನ್ನು ನಾನು ಮಾಡುತ್ತಲೇ ಇರಲಿಲ್ಲ! ನನ್ನ ಅಪ್ಪ-ಅಮ್ಮರಿಂದ ಇಷ್ಟರೊಳಗೆ ನಾನು ತಿಂದದ್ದು ಮ್ಯಾಕ್ಸಿಮಮ್ ಎಂದರೆ ಹದಿನೈದಿಪತ್ತು ಹೊಡೆತಗಳು. ಅದೂ ರಾಜನೆಲ್ಲಿ ಗಿಡದ ಸಣ್ಣ ಕೋಲಿನಿಂದ. ಹೊಡೆತ ತಿಂದದ್ದೂ ತಪ್ಪು ಮಾಡಿದ್ದಕ್ಕಲ್ಲ. ನಾನು ಚಿಕ್ಕವನಿದ್ದಾಗ ಊಟ ಸರಿಯಾಗಿ ಮಾಡುತ್ತಿರಲಿಲ್ಲ. ಅದಕ್ಕಾಗಿ ಅಮ್ಮ ಆ ಪುಟ್ಟ ಬರ್ಲು ಹಿಡಿದು ಎದುರು ನಿಂತು ಊಟ ಮಾಡಿಸುತ್ತಿದ್ದಳು. ನನ್ನ ಮುಖ ಸಿಕ್ಕಾಪಟೆ ಒಡೆಯುತ್ತಿತ್ತು. ಅದಕ್ಕೆ ಹಚ್ಚಿಕೋ ಅಂತ ಅಮ್ಮ ವ್ಯಾಸಲೀನ್ ಕೊಡುತ್ತಿದ್ದಳು. 'ಅದ್ನ ಹಚ್ಕೊಂಡ್ರೆ ಮುಂದೆ ಗಡ್ಡ-ಮೀಸೆ ಹುಟ್ಟೋದಿಲ್ವಂತೆ!' ಅಂತ ನನಗೆ ಯಾರೋ ಹೇಳಿಬಿಟ್ಟಿದ್ದನ್ನು ಬಲವಾಗಿ ನಂಬಿದ್ದರಿಂದ ನಾನು ಹಚ್ಚಿಕೊಳ್ಳುತ್ತಿರಲಿಲ್ಲ. ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ನನ್ನನ್ನು ಅಮ್ಮ ಹಿಡಿದು, ಎರಡು ಪೆಟ್ಟು ಕೊಟ್ಟು, ವ್ಯಾಸಲೀನ್ ಹಚ್ಚುತ್ತಿದ್ದಳು. ಈಗ ಕನ್ನಡಿಯ ಮುಂದೆ ನಿಂತರೆ ಒತ್ತಾಗಿ ಬಂದಿರುವ ಮೀಸೆ ಅಣಕಿಸುತ್ತದೆ: 'ಮಗನೇ ಶೇವ್ ಮಾಡ್ಕೋ' ಅಂತ!
ಮೊನ್ನೆ ಮಲ್ಲೇಶ್ವರಂನಲ್ಲಿ ಶಾಪಿಂಗಿನ ನೆಪದಲ್ಲಿ ಓಡಾಡುತ್ತಿದ್ದಾಗ ಚಂದ ಹುಡುಗಿಯರನ್ನು ನೋಡುತ್ತಾ ನನ್ನ ಗೆಳೆಯ 'ಕಣ್ಣಿಗೆ ತಂಪ್ ಆಗ್ತಾ ಇದೆ ಕಣಯ್ಯಾ..!' ಎಂದಾಗ ನನಗೆ ಹಳೆಯದೇನೋ ನೆನಪಾಯಿತು. ಚಿಕ್ಕವನಿದ್ದಾಗ ತಲೆಗೆ ಎಣ್ಣೆ ಹಾಕಿಕೊಳ್ಳಲಿಕ್ಕೆ ನನಗೆ ಅದೇಕೋ ತುಂಬಾ ಕಿರಿಕಿರಿಯಾಗುತ್ತಿತ್ತು. ಆದರೆ ಅಮ್ಮ ಬಿಡುತ್ತಿರಲಿಲ್ಲ. 'ಕಣ್ಣಿಗೆ ತಂಪು.. ದಿನಾನೂ ಹಾಕ್ಯಳವು..' ಎನ್ನುತ್ತಾ ಕೊಬ್ರಿ ಎಣ್ಣೆ ಗಿಂಡಿಯನ್ನು ಕೈಯಲ್ಲಿ ಹಿಡಿದು ಓಡಿಹೋಗುವ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಳು. ಕಟ್ಟೆಯ ಮೇಲೆ ಓಡುತ್ತೋಡುತ್ತಾ ಇಡೀ ಮನೆಯನ್ನು ಸುತ್ತು ಹೊಡೆಸುತ್ತಿದ್ದೆ ನಾನು. ಕೊನೆಗೆ ಸುಸ್ತಾಗುತ್ತಿದ್ದುದು ಅಮ್ಮನಿಗೇ. 'ಥೋ! ಎಂಥಾರು ಮಾಡ್ಕ್ಯ' ಎಂದು ಅಲ್ಲೇ ನಿಲ್ಲುತ್ತಿದ್ದಳು. ತಕ್ಷಣ ಅಮ್ಮನ ಬಳಿಗೆ ವಾಪಸು ಓಡಿ ನೆತ್ತಿಗೆ ಎಣ್ಣೆ ಹಾಕಿಸಿಕೊಂಡು ಬರುತ್ತಿದ್ದೆ. ಈಗ ಹುಡುಗಿಯರನ್ನು ನೋಡುವಾಗ ಸಿಗುವ ತಂಪಿಗಿಂತಲೂ ತಂಪು ಆ ಎಣ್ಣೆಯಲ್ಲಿರುತ್ತಿತ್ತು.
ಶಾಲೆಗೆ ಹೊರಟ ನನ್ನ ಯುನಿಫಾರಂನ್ನು ಅಮ್ಮ ಚಡ್ಡಿಯೊಳಗೆ ಸಿಕ್ಕಿಸಿ 'ಇನ್' ಮಾಡುತ್ತಿದ್ದಳು. ನಂಗೆ ಕಚಗುಳಿಯಾಗಿ 'ಅಯ್ಯೋ ಸಾಕು ಬಿಡಮ್ಮ' ಅನ್ನುತ್ತಿದ್ದೆ. ಅಮ್ಮ ಬಿಡುತ್ತಿರಲಿಲ್ಲ. ಕ್ರಾಪು ತಿದ್ದಿ ತಲೆ ಬಾಚಿ ಮುಖಕ್ಕೆ ಪೌಡರು ಬಳಿದು ಕೋತಿಮರಿಗೆ ಸಿಂಗಾರ ಮಾಡಿ ಕಳುಹಿಸುತ್ತಿದ್ದಳು. ಶಾಲೆಯಿಂದ ವಾಪಸು ಬಂದಕೂಡಲೇ ನನಗೆ ಅವಲಕ್ಕಿ-ಮೊಸರು ಕೊಡುತ್ತಿದ್ದಳು.
ಹಂಡೆಯಲ್ಲಿನ ಬಿಸಿನೀರನ್ನು ಚೊಂಬಿನಲ್ಲಿ ಮೊಗೆದುಕೊಳ್ಳಲು ನನಗೆ ಕೈ ಎಟುಕುತ್ತಿರಲಿಲ್ಲವಾದ್ದರಿಂದ ಅಮ್ಮನೇ ದಿನಾನೂ ಸ್ನಾನ ಮಾಡಿಸುತ್ತಿದ್ದುದು. ಅವಳು ಹಂಡೆಯ ಬಿಸಿನೀರನ್ನು ಮೊದಲು ಒಂದು ಬಕೆಟ್ಟಿಗೆ ಹಾಕಿ, ಅದಕ್ಕೆ ತಣ್ಣೀರು ಬೆರೆಸಿ, ಹೂಬೆಚ್ಚಗಿನ ನೀರು ಮಾಡಿ ನನಗೆ ಸ್ನಾನ ಮಾಡಿಸುತ್ತಿದ್ದಳು. ಮೈಮುಖಕ್ಕೆಲ್ಲಾ ಸೋಪು ಹಚ್ಚಿ, ಕಣ್ಣು ಮುಚ್ಚಿಕೊಂಡ ನನಗೆ ಏನೇನೂ ಕಾಣುತ್ತಿರಲಿಲ್ಲವಾಗಿರಲು, ಅಮ್ಮ ಎಲ್ಲೆಲ್ಲೆಲ್ಲ ತಿಕ್ಕಿ, 'ಸಾಕು ಅಮ್ಮಾ.. ಕಣ್ಣು ಉರಿತು.. ನೀರು ಹಾಕು...' ಎಂದು ನಾನು ಕೂಗಿಕೊಂಡಾಗ ಹೂಬೆಚ್ಚಗಿನ ನೀರನ್ನು ಹೊಯ್ಯುತ್ತಿದ್ದಳು. ಆ ಬಿಸಿಬಿಸಿ ಹಬೆಯಾಡುವ ಚೊಂಬ ನೀರುಗಳ ಮಧ್ಯೆ ಒಂದೇ ಒಂದೇ ಚೊಂಬು ತಣ್ಣೀರು ಹೊಯ್ದುಬಿಡುತ್ತಿದ್ದಳು ತುಂಟಿ ಅಮ್ಮ... ನನಗೆ ಆಗ ಮೈಯೆಲ್ಲಾ ರೋಮಾಂಚನವಾಗಿ, ಚಳಿಯಾಗಿ ನಡುಗಿ, ಮೈಪುಳಕದ ಖುಷಿಗೆ 'ಏ.... ಅಮ್ಮಾ.....' ಎನ್ನುತ್ತಾ ಬಚ್ಚಲ ತುಂಬಾ ತೈತೈ ಎಂದು ಕುಣಿದಾಡುತ್ತಿದ್ದೆ. ಅಮ್ಮನ ಸೀರೆಯೆಲ್ಲಾ ಒದ್ದೆಯಾಗುತ್ತಿತ್ತು. ತುಂಬಾ ಚಿಕ್ಕವನಿದ್ದಾಗ ದುಂಡಗೆ ನಿಂತು ಅಮ್ಮನ ಬಳಿ ಸ್ನಾನ ಮಾಡಿಸಿಕೊಳ್ಳುತ್ತಿದ್ದ ನಾನು ಆಮೇಲಾಮೇಲೆ ಅಂಡರ್ವೇರ್ ಬಿಚ್ಚಲಿಕ್ಕೆ ನಾಚಿಕೆ ಪಟ್ಟುಕೊಳ್ಳತೊಡಗಿದೆ. ಅಮ್ಮ, ತಲೆ, ಮೈ, ಕೈ, ಕಾಲು -ಎಲ್ಲಾ ತಿಕ್ಕಿ ಸ್ನಾನ ಮಾಡಿಸಿ, ಬಕೆಟ್ಟಿನಲ್ಲಿ ಕೊನೆಯ ನಾಲ್ಕು ಚೊಂಬು ನೀರು ಉಳಿಸಿ, 'ಚಡ್ಡಿ ಬಿಚ್ಚಿ ಅಲ್ಲೆಲ್ಲಾ ತೊಳ್ಕ ನೀನೇ' ಎಂದು ಬಾಗಿಲು ವಾರೆ ಮಾಡಿಕೊಂಡು ಹೋಗುತ್ತಿದ್ದಳು.
ಚಿಕ್ಕವನಿದ್ದಾಗ ನಾನು ಓದಿನಲ್ಲಿ ಚುರುಕಿದ್ದದ್ದರಿಂದ ನನಗೆ ಪಾಠ ಹೇಳಿಕೊಡುವ ಕಷ್ಟವೇನು ಅಮ್ಮ-ಅಪ್ಪ ಇಬ್ಬರಿಗೂ ಬರಲಿಲ್ಲ. ಆದರೂ ಮಗ್ಗಿ ಹೇಳುವಾಗ ತಪ್ಪಾದರೆ ಅಮ್ಮ ಎಚ್ಚರಿಸುತ್ತಿದ್ದಳು. ದಿನವೂ ಸಂಜೆ 'ಚೈತ್ರ ವೈಶಾಖ', 'ಪ್ರಭವ ವಿಭವ', 'ಮೇಷ ವೃಷಭ' ಇತ್ಯಾದಿ ಬಾಯಿಪಾಠ ಮಾಡಿಸುತ್ತಿದ್ದಳು. ತಪ್ಪದೇ ದೇವರಿಗೆ ನಮಸ್ಕಾರ ಮಾಡಿಸುತ್ತಿದ್ದಳು. ಊಟಕ್ಕೆ ಮುನ್ನ 'ಅನ್ನಪೂರ್ಣೆ ಸದಾಪೂರ್ಣೆ..' ಹೇಳಿಸುತ್ತಿದ್ದಳು. ಸಂಜೆ ದೀಪ ಹಚ್ಚಿದಾಕ್ಷಣ 'ದೀಪಂಜ್ಯೋತಿ ಪರಬ್ರಹ್ಮ..' ಹೇಳಿಸುತ್ತಿದ್ದಳು. ಬೆಳಗ್ಗೆ ಎದ್ದಕೂಡಲೇ 'ನಮಸ್ತೇ ನಾರಾಯಣಾಯ..' ಹೇಳಿಸುತ್ತಿದ್ದಳು. "ರಾತ್ರಿ ಮಲಗುವ ಮುನ್ನ 'ಹರೀ ಶಿವ ಮೃತ್ಯುಂಜಯ' ಹೇಳಿಕೊಂಡು ಮಲಗಿದರೆ ಕೆಟ್ಟ ಕನಸು ಬೀಳುವುದಿಲ್ಲ" ಎನ್ನುತ್ತಿದ್ದಳು. ಅವೆಲ್ಲವನ್ನೂ ನಾನು ಚಾಚೂ ತಪ್ಪದೇ ಮಾಡುತ್ತಿದ್ದೆ.
ಅದೊಂದು ರಾತ್ರಿ ನನಗೆ ನೂರಾಮೂರು ಡಿಗ್ರಿ ಜ್ವರ ಬಂದಿತ್ತು. ಅಪ್ಪ ಸೈಕಲ್ಲಲ್ಲಿ ಉಳವಿಗೆ ಹೋಗಿ ನಾರಾಯಣಮೂರ್ತಿ ಡಾಕ್ಟರನ್ನು ಎಬ್ಬಿಸಲು ನೋಡಿದರೆ ಅವರು ಬಾಗಿಲೇ ತೆರೆಯಲಿಲ್ಲವಂತೆ. ಕೊನೆಗೆ ಮೆಡಿಕಲ್ ಶಾಪಿನವರ ಮನೆಗೆ ಹೋಗಿ, ಅವರನ್ನು ಅಂಗಡಿಗೆ ಕರಕೊಂಡು ಬಂದು, ಎರಡು ಸ್ಟ್ರಾಂಗ್ ಮಾತ್ರೆ ಕೊಂಡುತಂದಿದ್ದ ಅಪ್ಪ. ಬೆಳಗಾಗುವ ವರೆಗೂ ಅಮ್ಮ ನಿದ್ರೆ ಮಾಡದೇ, ನನ್ನ ಬಳಿಯೇ ಕುಳಿತು, ವದ್ದಳ್ಳಿ ಶ್ರೀಧರ ಸ್ವಾಮಿಗಳಿಗೆ ಹರಕೆ ಹೊತ್ತುಕೊಂಡು, ನನ್ನ ಹಣೆಯ ಮೇಲೆ ಒದ್ದೆ ಬಟ್ಟೆ ಹಾಕುತ್ತಾ ಕುಳಿತಿದ್ದುದು ನನಗೆ ಆ ಮಂಪರಿನಲ್ಲೂ ಅರಿವಾಗುತ್ತಿತ್ತು. ಅಪ್ಪ ಉಳವಿಯಿಂದ ವಾಪಸ್ ಬಂದು ಸಮಾಧಾನ ಮಾಡುವವರೆಗೆ ಅಮ್ಮ ಸಣ್ಣಗೆ ಬಿಕ್ಕುತ್ತಿದ್ದುದು ನನ್ನ ಕಿವಿಯಲ್ಲಿ ಇನ್ನೂ ಇದೆ.
. . . . . . . .
ಹಾಗೇ ನೋಡುತ್ತಾ ಹೋದರೆ ಈ ಜಗದಲ್ಲಿ ಎಷ್ಟೊಂದು ತುಂಟ ಕೃಷ್ಣರು... ಅವರಿಗೆಲ್ಲಾ ಎಷ್ಟು ಒಳ್ಳೇ ಅಮ್ಮಂದಿರು... ಈಗ ನಾನು ಬೆಂಗಳೂರಿನಲ್ಲಿದ್ದೇನೆ. ಅಮ್ಮ ಊರಲ್ಲಿದ್ದಾಳೆ. ಕರುಳ ಬಳ್ಳಿಯ ಬಂಧ, ಹೌದು, ಬೆಸೆದುಕೊಂಡೇ ಇದೆ. ಆದರೆ ನಡುವೆ ಎಷ್ಟು ದೊಡ್ಡ ಶರಧಿಯಿದೆ..! ಈಗ ನನಗೆ ಅಮ್ಮ ಹೊಡೆಯುವುದಿಲ್ಲ, ಮುಖಕ್ಕೆ ವ್ಯಾಸಲೀನ್ ಹಚ್ಚುವುದಿಲ್ಲ, ತಲೆಗೆ ಎಣ್ಣೆ ಹಾಕುವುದಿಲ್ಲ, ಸ್ನಾನ ಮಾಡಿಸುವುದಿಲ್ಲ, ಬಾಯಿಪಾಠ ಮಾಡಿಸುವುದಿಲ್ಲ... ಈಗ ನಾನು ದೇವರಿಗೆ ನಮಸ್ಕಾರ ಮಾಡುವುದಿಲ್ಲ... ಈಗ ಜ್ವರ ಬಂದರೆ ನಾನೇ ಡಾಕ್ಟರ ಬಳಿಗೆ ಹೋಗಿ ಬರಬೇಕು... ಆದರೂ ದಿನವೂ ಫೋನ್ ಮಾಡಿ ನನ್ನ ಆರೋಗ್ಯ ವಿಚಾರಿಸಿಕೊಳ್ಳುತ್ತಾಳೆ, 'ಹೋಟೆಲ್ಲಿನಲ್ಲಿ ತಿನ್ನಬೇಡ, ಮನೆಯಲ್ಲೇ ಮಾಡ್ಕೊಳ್ಳಿ' ಅಂತಾಳೆ, 'ಸ್ಯಾಲರಿ ಜಾಸ್ತಿ ಮಾಡಿದ್ರಾ?' ಕೇಳ್ತಾಳೆ, 'ರೋಡ್ ಕ್ರಾಸ್ ಮಾಡ್ಬೇಕಾದ್ರೆ ಹುಷಾರಿ' ಎನ್ನುತ್ತಾಳೆ, 'ಯಾವಾಗ ಊರಿಗೆ ಬರ್ತೀಯಾ?' ಕೇಳ್ತಾಳೆ...
ಈ ವರ್ಷದ 'ಮದರ್ಸ್ ಡೇ'ಗೆ ಸ್ವಲ್ಪ ವಿಶೇಷವಿತ್ತು. 'ಮದರ್ಸ್ ಡೇ'ಯ ಹಿಂದಿನ ದಿನವೇ ನನ್ನ ಬರ್ಥ್ ಡೇ! ಅಮ್ಮನ ಹೊಟ್ಟೆಯೊಳಗಿಂದ ನಾನು ಕೊಸರಾಡಿ ಗುದ್ದಾಡಿ ಹೊರಬಂದು 'ಅಮ್ಮನನ್ನು ಅಮ್ಮನನ್ನಾಗಿ' ಮಾಡಿದ್ದ ದಿನ! ಹಿಂದಿನ ದಿನ ಅಮ್ಮ ಫೋನ್ ಮಾಡಿ ನನಗೆ ವಿಶ್ ಮಾಡಿದ್ದಳು. ಮರುದಿನ ಬೆಳಗ್ಗೆ ನಾನು ಫೋನ್ ಮಾಡಿ ಅವಳಿಗೆ ವಿಶ್ ಮಾಡಿದೆ! ನಾನು 'ಹ್ಯಾಪಿ ಮದರ್ಸ್ ಡೇ' ಅನ್ನುವುದಕ್ಕಿಂತ ಮುಂಚೆ ಅವಳು 'ನೀನು ಅರಾಮಿದೀಯಾ? ತಿಂಡಿ ಆಯ್ತಾ?' ಅಂತ ಕೇಳ್ತಾಳೆ... ಅಮ್ಮನ ಈ ಪ್ರೀತಿಗೆ, ಕಾಳಜಿಗೆ ನನ್ನ ಕಣ್ಣು ತುಂಬಿಕೊಳ್ಳುತ್ತವೆ.. ಕೃಷ್ಣನನ್ನು ಅಮ್ಮ 'ಏಯ್.. ಏನಾಯ್ತೋ' ಎನ್ನುತ್ತಾ ಎತ್ತಿಕೊಳ್ಳುತ್ತಾಳೆ...
27 comments:
ಸು,
ಪಲ್ಲವಿಯ ಹಾಡಿನ ಮೋಡಿಗಿಂತ ಆಕರ್ಶಕ ಬರಹ.. ನಾನು ದೊಡ್ಡೇರಿ ಮನೆಯ ಸುತ್ತು ಹೊಡೆದೆ, ನಿನ್ನ ಅಮ್ಮನ ನೆರಳು ಹಿಡಿದು.. ಸಚಿತ್ರ ಭಾವಲೋಕ.
ಅದರ ನೆರಳು ಮುಗಿವಾಗ, ನನ್ನಮ್ಮನ ಹೊರಳು, ದೂರದಲ್ಲಿ ಕೇಳುತ್ತಿರುವ ಅಂಬೆಗೊರಳು..
ಅಮ್ಮ - ಇದೇ, ಇಷ್ಟೇ ಅಂತ ಹೇಳಲಾಗದ್ದು. ಎಷ್ಟೂ ಹೇಳಬಹುದಾಗಿದ್ದು..
ಕರುಳ ಬಳ್ಳಿಯ ಬಂಧ - ಯಾಕೋ ಧಾರಾವಾಹಿಯ ಡೈಲಾಗ್ ನೆನಪಾಯಿತು. ;)
ಒಳ್ಳೆಯ ಬರಹಕ್ಕೆ, ಮಾಡಿದ ಮೋಡಿಗೆ.. ಧನ್ಯವಾದ.
ಚೆನ್ನಾಗಿದೆ, ಸುಶ್ರುತ ಓದುತ್ತಾ ಓದುತ್ತಾ ಭಾವುಕನಾದೆ...
ಥಾಂಕ್ಸ್ ಕಣೋ...
@ ಸಿಂಧು
ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಮುಗಿಯೊಲ್ಲ.. ಇಲ್ಲಿ ನಾನು ಹೇಳಿದ್ದು, ನಾನು ತುಂಬಾ ಚಿಕ್ಕವನಿದ್ದಾಗಿನ ಅಮ್ಮನ ಚಿತ್ರಣ.. ಇದನ್ನೇ ಮುಂದುವರೆಸಿದ್ರೆ ಕಾದಂಬರಿನೇ ಆಗ್ತಿತ್ತೇನೋ..!
ಉಂ? ಹೆಹ್ಹೆ! ನಾನು ಧಾರಾವಾಹಿ ನೋಡೊಲ್ಲ, ಸಾರಿ...!
ಥ್ಯಾಂಕ್ಸ್ ಅಕ್ಕಾ..
@ ಗುಹೆ
ಥ್ಯಾಂಕ್ಸ್ ಗುರುಗಣೇಶ್ ಸಾಯೇಬ್ರೇ.. ನಿಮ್ಮ ಬ್ಲಾಗಿನಲ್ಲಿ ಹಾಕಿರುವ ಭುಸ್ ಭುಸ್ ಹಾವಿನ ವೀಡಿಯೋ ಚೆನ್ನಾಗಿದೆ..:)
ಚೆನ್ನಾಗಿದೆ...
ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಮುಗಿಯದಷ್ಟು,, ಬೆಟ್ಟ ದಷ್ಟು ವಿಷ್ಯ ಇರುತ್ತೆ.
"ಎಷ್ಟೊಂದು ತುಂಟ ಕೃಷ್ಣರು... ಅವರಿಗೆಲ್ಲಾ ಎಷ್ಟು ಒಳ್ಳೇ ಅಮ್ಮಂದಿರು... "
ಅದಕ್ಕೆ ಹೇಳಿರೋದು ಶಂಕರಾಚಾರ್ಯರು "ಕುಪುತ್ರೋ ಜಾಯೇತ ಕ್ವಚಿತ್ ಆಪಿ ಕುಮಾತಾ ನ ಭವತಿ " ಅಂತ
ಎಷ್ಟು ಅರ್ಥ ಗರ್ಭಿತ ಮಾತು.
ಸುಶ್,
ಈ ಲೇಖನ ನನ್ನ ಅಮ್ಮಂಗೆ dedicate ಮಾಡತ್ನಾ plz. ಸಿಂಧು ಅಕ್ಕ ನಿಮ್ಮನೆ ಹತ್ರ ಸುತ್ತಿದ್ರೆ ನಾನು ನಮ್ಮನೇ ಸುತ್ತದಿ ಕಣೋ.
ನನ್ನ ಅಮ್ಮಂಗೆ ಎಷ್ಟು ಗೋಳು ಹೋಯ್ಕ್ಯತ್ತಿದ್ದಿ ಗೊತ್ತಿದ್ದ. ರಾಶಿ ಕಿಲಾಡಿ ಮಾಡ್ತಿದ್ದಿ. ಹೋದಲ್ಲೆಲ್ಲಾ ಎನಾದ್ರು ಹಾಳು ಮಾಡಿಕ್ಕೆ ಬತ್ತಿದ್ದಿ. ದಿನಾ ಮನೆಗೆ ಕಂಪ್ಲೆಂಟು ಬತ್ತಿತ್ತು. ಅಮ್ಮ ದಿನ ಕಣ್ಣೀರು ಹಾಕ್ತಿದ್ದಾ ಈಗ ನೆನಸಿ ಕೊಂಡ್ರೆ ಕರುಳು ಚುರುಕ್ ಹೇಳ್ತು. ಶಾಲೆಲಿ ದಿನಾ ಜಗಳ ಮಾಡ್ಕ್ಯಂಡು ಬತ್ತಿದ್ದಿ. ಅಮ್ಮ ನಂಗೆ ಹೊಡ್ಕೆಂಡು ಅವಳು ಅಳ್ತಿದ್ದಾ.
ಅಮ್ಮನ ಪ್ರೀತಿಗೆ ಆ ಸ್ನೇಹಕ್ಕೆ ಅವಳಿಗೆ ಅವಳೆ ಸಾಟಿ.
ನೂರು ಜನ್ಮ ಬಂದ್ರು ಈ ನನ್ನ ಅಮ್ಮನೇ ನನ್ನ ಅಮ್ಮ ಆಗ್ಲಿ.ತುಂಬಾ miss ಮಾಡ್ಕ್ಯತ್ತಾ ಇದ್ದಿ ಅಮ್ಮಂಗೆ.
@ ಶ್ಯಾಮಾ
ಥ್ಯಾಂಕ್ಸ್... ಶಂಕರಾಚಾರ್ಯರ ಮಾತು ಅಕ್ಷರಶಃ ಸತ್ಯ. ಕೆಟ್ಟ ಅಮ್ಮಂದಿರು ಇರಲಿಕ್ಕೆ ಸಾಧ್ಯವೇ ಇಲ್ಲ..
@ ranju
Dedicate ಮಾಡಕ್ಕೆ ನಂದೇನು objection ಇಲ್ಲೆ. ಆದ್ರೆ ನಾನು ಈಗಾಗ್ಲೇ ಇದನ್ನ ನನ್ನಮ್ಮಂಗೆ dedicate ಮಾಡಿ ಆಯ್ದು. :) ಅಲ್ಲಾ, ಅಷ್ಟೊಂದು ಕೀಟ್ಲೆ ಹುಡುಗಿ ಆಗಿದ್ದ ನೀನು ಅದು ಹೆಂಗೆ ಇಷ್ಟೊಂದು ಒಳ್ಳೇ ಸಾಫ್ಟ್ ಹುಡುಗಿ ಆಗ್ಬುಟೆ ಅಂತ ಯೋಚಿಸ್ತಿದ್ದಿದ್ದಿ...! :)
ಅಮ್ಮನ ಪ್ರೀತಿಗೆ-ಸ್ನೇಹಕ್ಕೆ ಅಮ್ಮನೇ ಸಾಟಿ ಅಂದದ್ದು,
ನೂರು ಜನ್ಮ ಬಂದ್ರೂ ಈ ಅಮ್ಮನೇ ನನ್ನ ಅಮ್ಮ ಆಗಿರ್ಲಿ ಅಂದಿದ್ದು ಖುಷಿಯಾತು.. Nicely written. Thanx maa..
ಕಣ್ಣುಗಳು ತೊಯ್ದವು.... ಆಫೀಸ್ನಲ್ಲಿ ಕಷ್ಟ ಪಟ್ಟು ತಡೆ ಹಿಡಿದು ರೆಸ್ಟ್ ರೂಮ್ ನಲ್ಲಿ ಹೋಗಿ ಬಿಕ್ಕಿದೆ...
ಭಾರತೀಯ ಮಾಣಿಗಳು ಅಮ್ಮಂದಿರ ಮಕ್ಕಳು ಅನ್ನೋದು ತಪ್ಪಲ್ಲ ಅನ್ಸುತ್ತೆ
-ನಿಮ್ಮ ಋಣಿ
ಆಪ್ತ ಶೈಲಿಯ ನಿರೂಪಣೆ. ಚೇತೋಹಾರಿ ಲೇಖನ. ಅಂತರ್ಜಾಲದ ಮಾಹಿತಿ ಸಂಗ್ರಹಿಸಿ ಬರೆಯುವ ಒಣ ಬರಹಗಳಿಗಿಂತ, ಜೀವನಾನುಭವದ ಮೂಸೆಯಿಂದ ಬರುವ ಇಂಥ ಬರಹಗಳೇ ಆತ್ಮೀಯವೆನ್ನಿಸುತ್ತದೆ. ಕೃತಜ್ಞತೆಗಳು.
@ sandeep aithal
ಸಂದೀಪ್, ನಿಮ್ಮ ಪ್ರತಿಕ್ರಿಯೆ ಓದಿ ಭಾವ ತುಂಬಿ ಬಂತು. ನನ್ನ ಬರಹವಷ್ಟೇ ಅಲ್ಲ, ನಿಮ್ಮ ಪ್ರತಿಕ್ರಿಯೆಯೂ ಅದನ್ನೇ ಹೇಳುತ್ತದೆ: ಭಾರತೀಯರು ಮಾಣಿಗಳು ಅಮ್ಮಂದಿರ ಮಕ್ಕಳು ಅಂತ. ಥ್ಯಾಂಕ್ಸ್ ಅ ಲಾಟ್ ಮ್ಯಾನ್...
@ jagali bhagavata
ಧನ್ಯವಾದಗಳು ಭಾಗವತರೇ. ನನಗೂ ಹಾಗೇ ಅನ್ನಿಸಿದೆ.
szenಅಮ್ಮಾ.. ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ...ಅನ್ನೋ ಹಾಡು ಜ್ಞಾಪಕಕ್ಕೆ ಬಂತು...ಸಿಂಧೂ ಅವರು ಹೇಳಿದ್ದು ನಿಜ.. ನಿಮ್ಮ ಮನೆ ಸುತ್ತಿ ಬಂದಹಾಗೆ ಆಯ್ತು..... nice article at right time
@ malnad hudugi
ಥ್ಯಾಂಕ್ಸ್ ಮ್ಯಾಮ್. ಅಮ್ಮ ಅನ್ನೋ ಮಾತಿಗಿಂಗ ಬೇರೇನೂ ಇಲ್ಲ ಮಂತ್ರ: ಹ್ಮ್, ದಟ್ಸ್ ರೈಟ್.
ಸುಶ್,
ಓದ್ತಾ ಹೋದಂಗೆ ಬಾಲ್ಯದ ನೆನಪಾಗಿ ಭಾವುಕನಾಗಿಬಿಟ್ಟೆ.
ಅದು ಹೇಗೆ ಅಮ್ಮ ಅನ್ನುವ ಜೀವ ನಮ್ಮನ್ನು ಸಹಿಸಿಕೊಳ್ಳುತ್ತಿತ್ತೋ ನಾ ಕಾಣೆ. ಅದು ನಿಜಕ್ಕೂ ಅದ್ಭುತ ಸೃಷ್ಟಿ ಹೌದು. ಆ ವಾತ್ಸಲ್ಯ ಅನ್ನೋದು ಹೆಣ್ಣಿನಲ್ಲಿ ಹುಟ್ಟಿನಿಂದನೇ ಬಂದಿರತ್ತೋ ಏನೋ !!
ಆದ್ರೂ ಇಂದಿನ ಹುಡ್ಗೀರಿಗೆ ಮೊದಲಿನ ಅಮ್ಮಂದಿರಷ್ಟು ಅರ್ಪಣಾ ಭಾವ ಇರಲ್ವೇನೋ ಅನಿಸ್ತಿದೆ. ನನ್ನ ಅಭಿಪ್ರಾಯ ತಪ್ಪಿರಿಬಹುದು. ಗೊತ್ತಿಲ್ಲ .
ಭಾವನೆಗಳನ್ನು ಗರಿಗೆದರಿಸಿದ ಸುಂದರ ಬರಹಕ್ಕೊಂದು ಚೆಂದದ ಥ್ಯಾಂಕ್ಸ್.
ಅಬ್ಬಾ... ಮದರ್ಸ್ ಡೇ ಗೆ ಇದಕ್ಕಿಂತ ಒಳ್ಳೇ ಉಡುಗೊರೆ ಇದೆಯೇ?
ಅಂದ ಹಾಗೆ ಇಂಥಾ ಬಾಲ್ಯವನ್ನು ನಾನು ಅನುಭವಿಸಿಯೇ ಇಲ್ಲ.. ಬರೀ ಓದಿರೋದು ಅಷ್ಟೇ..
ಸುಂದರವಾಗಿ ಬರೆದು ಬಾಲ್ಯದ ತುಂಟಾಟಗಳನ್ನು, ಅಮ್ಮನ ವಾತ್ಸಲ್ಯವನ್ನು ನೆನಪಿಸಿದಿರಿ. ಧನ್ಯವಾದಗಳು.
@ ವಿಕಾಸ್ ಹೆಗಡೆ
>>ಆ ವಾತ್ಸಲ್ಯ ಅನ್ನೋದು ಹೆಣ್ಣಿನಲ್ಲಿ ಹುಟ್ಟಿನಿಂದನೇ ಬಂದಿರತ್ತೋ ಏನೋ -ಮಾತು ಅಕ್ಷರಶಃ ಸತ್ಯ. ಸುಳ್ಳಲ್ಲವೇ ಅಲ್ಲ.
ಇಂದಿನ ಹುಡುಗಿಯರ ಬಗೆಗಿನ ನಿಮ್ಮ ಅನಿಸಿಕೆಗೆ ನನ್ನ ಸಪೋರ್ಟೇನೂ ಇಲ್ಲ, ಸಾರಿ :)
ಥ್ಯಾಂಕ್ಸ್ ವಿಕಾಸ್..
@ parisarapremi
ಥ್ಯಾಂಕ್ಸ್ ಅರುಣ್. ನಿಮ್ಮ ಬಾಲ್ಯ ಹೇಗೇ ಇದ್ದಿರಬಹುದು; ಆದರೆ ಅದರಲ್ಲೂ ಅಮ್ಮನ ಮಡಿಲ ಕಂಪ ಸುಳಿಗಾಳಿ ಇದ್ದೇ ಇರತ್ತೆ ಅಲ್ವಾ?
@ ರಾಜೇಶ್ ನಾಯ್ಕ
ಥ್ಯಾಂಕ್ಯೂ ವೆರಿ ಮಚ್ ಅಲೆಮಾರಿಗಳೇ
ಸುಶ್,
ಸುಂದರ ಬರಹ !
ನಾನು ಅಷ್ಟೇ ಓದ್ತಾ ಇದ್ದಾಗೆ ತುಂಬಾ ಭಾವುಕನಾಗಿಬಿಟ್ಟೆ..ತುಂಬಾ ಚೆನ್ನಾಗಿ ಬರಿದಿದೀಯಾ ಸುಶ್
ಓ ಸಾಹೇಬ್ರು ಚಿಕ್ಕವರಿದ್ದಾಗ ಊಟ ಸರಿ ಮಾಡ್ತಾ ಇದ್ದಿಲ್ಲವೇ :)
ನಂದೂ ಅದೇ ಕೇಸ್ :)
@ Shiv
ಥ್ಯಾಂಕ್ಸ್ ಶಿವು... ;)
ಹೂಂ ಕಣ್ರೀ, ಊಟ ಮಾಡ್ತಾನೇ ಇರ್ಲಿಲ್ಲ.. ಅದ್ಕೇ ಈಗ ಹೀಗೆ ತೆಳ್ಳಗೆ ಕಡ್ಡಿ ಥರಾ ಇರೋದು..! :)
ಏನು ಹೇಳಲಿ ಸುಶ್!
ಓದಿ ಮುಗಿದಾಗ ಕೆನ್ನೆಯ ಮೇಲೆ ನನಗೇ ಗೊತ್ತಿಲ್ಲದಂತೆ ಕಣ್ಣ ಹನಿಯೊಂದು ಜಾರಿ ಬಂದಿತ್ತು! ಆಫೀಸಿನಲ್ಲಿ ಯಾರಾದರೂ ನೋಡಿಯಾರೆಂದು ಬೇಗ ಒರೆಸಿಕೊಂಡೆ!
ಮನಸ್ಸೆಲ್ಲಾ ಭಾವುಕತೆಯಲ್ಲಿ ಒದ್ದೆಯಾಗಿ ಹೋಯ್ತು! ಅಮ್ಮನ ಅಂತಃಕರಣವೇ ಅಂತದು!
... ಸುಮಾರು ೧೫ ವರ್ಷ ಹಿಂದಿನ ಕಥೆ. ದೂರದ ಮಧ್ಯ ಪ್ರದೇಶದಲ್ಲಿ ಓದುತ್ತಿದ್ದೆ . ಆ ಸಮಯದಲ್ಲಿ ಮಲೇರಿಯಾ ಬಂದು ಎರಡುವಾರ ಮಲಗಿದ್ದೆ. ನನ್ನನ್ನು ಬಲವಂತವಾಗಿ ಅಲ್ಲಿಗೆ ಕಳಿಸಿದ್ದ ಅಪ್ಪನ ಮೇಲಿನ ಕೋಪದಿಂದ ನನ್ನ ಸಂಕಷ್ಟಗಳನ್ನೆಲ್ಲಾ ಕಾಗದದಲ್ಲಿ ಬರೆದು ಕಳಿಸಿದ್ದೆ. ಒಂದು ವಾರದಲ್ಲೆ ಅಪ್ಪನಿಂದ ಮಾರುತ್ತರ ಬಂದಿತ್ತು . ನನ್ನ ಪತ್ರ ನೋಡಿ ಅಮ್ಮ ಊಟ ಸಹ ಮಾಡದೆ ಅಳುತ್ತಾ ಕೂತಿದ್ದು ತಿಳಿಯಿತು. ನಾನು ಎಂತಹ ತಪ್ಪೆಸಗಿದ್ದೆ ಅಂತ ಅರಿವಾಯಿತು. ಅಂದಿನಿಂದ ಇಂದಿನವರೆಗೂ ಏನೇ ಅನಾರೋಗ್ಯವಿರಲಿ (ಎರಡು ಬಾರಿ ಬೈಕ್ ಆಕ್ಸಿಡೆಂಟ್ ಆದಾಗಲೂ) ಮನೆಯಲ್ಲಿ " ಹುಷಾರಾಗಿದ್ದೇನೆ " ಅಂದು ಮಾತ್ರ ಹೇಳುತ್ತೇನೆ!
ನೀವು ಬರೆದಿದ್ದನ್ನು ಓದಿ ಇದು ಹಾಗೆ ನೆನಪಾಯ್ತು!!
@ ಭಾವಜೀವಿ
ನಿಮ್ಮ ಕೆನ್ನೆಯ ಮೇಲೆ ಜಾರಿದ ಹನಿ ನಿಮಗೆ ನಿಮ್ಮಮ್ಮನ ಮೇಲಿರುವ ಪ್ರೀತಿಯ ಬಿಂದು. ಅದು ನೀವು ಹೇಳಿದ ಕತೆಯಲ್ಲಿ ಮತ್ತೆ ಪ್ರತಿಬಿಂಬಿಸಿದೆ. ಇಂಥ ಕೃಷ್ಣರಿರುವಾಗ ಅಮ್ಮಂದಿರು ಸುಖವಾಗಿರುತ್ತಾರೆ ಬಿಡಿ... ಥ್ಯಾಂಕ್ಸ್ ಶಂಕರ್..
muddu tamma
nenna anubhavave elli sumaragi ellaraddu,nanu akkanagi ninna hattirave ertinalla,adre nangu ommomme alu barutte,ammange cal madi helkondaga adella sariyagutte,ellara bavane ninna baraha,thanks
@ mahima sanjeev
Thanks akka.. illige bandiddakke, odiddakke, prathikriyisiddakke, mecchikondiddakke... houdoud, neevella ee bengaloorinalli nannanthavarige 'thaathkaalika amma' naagi biDuttheeri..! :)
Post a Comment