Tuesday, June 19, 2007

ಬದುಕು ಸುಂದರವಾಗಿದೆಯೇ??

ಲಹರಿಯ ಝರಿಯಲಿ ಮಿಂದವರು ಎಂದರು:
ಬದುಕು ಸುಂದರವಾಗಿದೆ; ಎಲ್ಲಾ ನೋಡುವ ಕಣ್ಣಿನಲ್ಲಿದೆ.
ನಾನೂ ಹೌದೆಂದುಕೊಂಡುಬಿಟ್ಟೆ.
ದೃಷ್ಟಿದೋಷ ಬಂದಿರಬೇಕೆಂದುಕೊಂಡು
ಕನ್ನಡಕದಂಗಡಿಯತ್ತ ತೆರಳಿದೆ.

'ಹೂ ಕೂತಿದೆ, ಪಾಯಿಂಟು ಬಂದಿದೆ, ಅದಾಗಿದೆ, ಇದಾಗಿದೆ'
ಎಂದಿತ್ಯಾದಿ ಪಾಯಿಂಟು ಹಾಕಿದ ಅಂಗಡಿಯವ
ಸರಿಯಾಗಿ ದುಡ್ಡಿಸಕೊಂಡು, ದಪ್ಪ ಗಾಜಿನ,
ತೆಳು-ಚಂದ ಫ್ರೇಮಿನ ಮಸೂರ ತೊಡಿಸಿ
ನನ್ನನ್ನು ಕಳುಹಿಸಿದ.

ಪರಿಣಾಮವೂ ಆಯಿತು; ಆದರೆ ಉಲ್ಟಾ ಅಷ್ಟೇ!
ಇಷ್ಟು ಹೊತ್ತು ಮಂಜುಮಂಜಾಗಿ ಕಾಣುತ್ತಿದ್ದ ಚಿತ್ರಗಳೆಲ್ಲ
ಈಗ ಸ್ಪಷ್ಟವಾಗಿ ಕಾಣಿಸತೊಡಗಿದವು:

ದಾರಿಯಲೊಂದು ಭಿಕ್ಷುಕನ ಮಗು.
ಯಾರೋ ತಿನ್ನುತ್ತಿದ್ದ, ಅರ್ಧ ಮುಗಿದಿದ್ದ ಐಸ್‍ಕ್ಯಾಂಡಿಯನ್ನು
ತಾನು ಬೇಡಿ ಪಡೆದು ಚೀಪತೊಡಗಿತು.
ಚೀಪಿ ಮುಗಿಯುವ ಮೊದಲೇ,
ಐಸು ಕರಗಿ ಖಾಲಿಯಾಗುವ ಮೊದಲೇ
ಕಡ್ಡಿಯಿಂದ ಜಾರಿದ ಕ್ಯಾಂಡಿಯ ತುಂಡು
ಫುಟ್‍ಪಾತಿನ ಸಣ್ಣ ಕಿಂಡಿಯಿಂದಲೂ ತೂರಿ
ಚರಂಡಿ ಸೇರಿಬಿಟ್ಟಿತು.
ಭಿಕ್ಷುಕನ ಮಗುವಿನ ದಾಹವನ್ನೂ ತಣಿಸಲಾಗದ
ಆ ಕೆಂಪು ಐಸ್‍ಕ್ಯಾಂಡಿಯ ತುಂಡು
ಮುಂದೆ ನನ್ನ ಮನಸಿನಲ್ಲಿ ಕರಗತೊಡಗಿತು.

ಮುಂದೊಂಡು ಪ್ರತಿಭಟನೆ.
ಸುಮಾರು ಮೂವತ್ತು-ನಲವತ್ತು ಜನ ರೈತರು
ತಾವು ಬೆಳದ, ರೇಟಿಲ್ಲವಾದ ಟೊಮಾಟೋ ತಂದು
ರಸ್ತೆಯಲ್ಲಿ ಸುರಿದು ಧಿಕ್ಕಾರ ಕೂಗುತ್ತಿದ್ದರು.
ಜನರೆಲ್ಲಾ ನೋಡನೋಡುತ್ತಿದ್ದಂತೆಯೇ
ಅವರಲ್ಲೊಬ್ಬ ಒಂದು ಕ್ಯಾನು ಪೆಟ್ರೋಲನ್ನು ಮೈಗೆಲ್ಲಾ ಸುರಿದುಕೊಂಡು,
ಕಡ್ಡಿ ಗೀರಿ ಬೆಂಕಿಯಿಟ್ಟುಕೊಂಡುಬಿಟ್ಟ.
ಏನಾಗುತ್ತಿದೆಯೆಂದು ಮಂದಿಗೆ ಸರಿಯಾಗಿ ಅರ್ಥವಾಗುವ ಮೊದಲೇ
ಹೊತ್ತಿ ಉರಿಯತೊಡಗಿದ ಬೆಂಕಿಯಲ್ಲಿ ಆತ ಭೂತದಂತೆ
ತೂರಾಡುತ್ತಿರಲು, ಜನರೆಲ್ಲಾ ಹೆದರಿ ದೂರ ಸರಿದರು.
ವಿಕಾರ ಶಬ್ದ ಮಾಡುತ್ತಾ ಬಂದ ಫಯರ್ ಎಂಜಿನ್
ಬೆಂಕಿ ನಂದಿಸಿ, ತನ್ನ ಹಿಂದೆಯೇ ಬಂದ ಕುರೂಪಿ
ಆಂಬುಲೆನ್ಸಿನಲ್ಲಿ ಕಪ್ಪು-ಕೆಂಪು ಮಾಂಸದ ತುಂಡುಗಳನ್ನು
ಹೇರಿ ಕಳುಹಿಸಿತು.
ಬೆಂಕಿ ಉರಿಯುವ ಚಿತ್ರ ಮಾತ್ರ ನನ್ನ ಮನಸಿನೊಳಗೆ ಸೇರಿಕೊಂಡು
ಈಗಾಗಲೇ ಅಲ್ಲಿ ಕರಗಿದ್ದ ಐಸಿನ ನೀರನ್ನು ಕುದಿಸತೊಡಗಿತು.

ಮನೆ ಬಾಗಿಲು ಮುಟ್ಟಿದಾಗ ಸಂಜೆ ಐದು.
ನಮ್ಮ ಮನೆಯ ಓನರ್ರಿನ ಹೆಂಡತಿ ವಾಕಿಂಗಿಗೆ
ಹೋಗಲೆಂದು ಮಲಗಿದ್ದ ಗಂಡನನ್ನು ಎಬ್ಬಿಸಲು ನೋಡಿದಾಗ
'ಅವರಿನ್ನು ಏಳುವುದೇ ಇಲ್ಲ' ಎಂಬ ಸತ್ಯದ ಅರಿವಾಗಿ
ಕಿಟಾರನೆ ಕಿರುಚಿಕೊಂಡ ಸದ್ದಿಗೆ
ಮೆಟ್ಟಿಲು ಹತ್ತುತ್ತಿದ್ದ ನಾನು ಬೆಚ್ಚಿಬಿದ್ದು,
ನನ್ನ ಕನ್ನಡಕ ಜಾರಿಬಿದ್ದು, ಗಾಜು ಒಡೆದುಹೋಗಿ,
ನಾನದನ್ನು ಮೆಟ್ಟಿ, ಅಂಗಾಲಿನಿಂದ ರಕ್ತ ಒಸರತೊಡಗಿತು.

ಆ ಕೆಂಪು-ಉಪ್ಪು ರಕ್ತವನ್ನು ನನ್ನ ಮನಸಿನಲ್ಲಿ ಕುದ್ದು
ತಯಾರಾಗಿದ್ದ ಐಸಿನ ನೀರಿನೊಂದಿಗೆ ಬೆರೆಸಿ
'ರುಚಿ ನೋಡಿರೆಂದು' ಹಂಚಲು ಹೋದರೆ
ಲಹರಿಯ ಝರಿಯಲಿ ಕೊಚ್ಚಿ ಹೋದವರಾದಿಯಾಗಿ
ಯಾರೂ ನನ್ನ ಹತ್ತಿರ ಬರಲೇ ಇಲ್ಲ...!!!

14 comments:

ಯಜ್ಞೇಶ್ (yajnesh) said...

ಸುಶ್ರುತ,

Super ಕಣೋ, ಚೆನ್ನಾಗಿ ಬರದ್ದೆ

ಹಷ೯ (Harsha) said...

Hey Sush..

ನೀನು ಕೊಟ್ಟ ಮೂರೂ ಉದಾಹರಣೆ "ಬದುಕು ಸುಂದರವಾಗಿದೆಯೇ ??" ಅನ್ನೋ ಪ್ರಶ್ನೆಗೆ ಉತ್ತರವಲ್ಲ. ಮೊದಲನೇಯದು ಭಿಕ್ಷೆ ಬೇಡುವವರು. ಯಾರು ದುಡಿಯಲು ಆಳಸಿಗಳೋ ಅವರು ಬೇಡುತ್ತಾರೆ, ಮಕ್ಕಳ ಕಯ್ಯಲ್ಲಿ ಬೇಡಿಸುತ್ತಾರೆ. ಅವರು ಬದುಕನ್ನ ಕಯ್ಯಾರೆ ಕೆಡಿಸಿಕೊ೦ಡವರು. ಅವರಬಗ್ಗೆ ವೃಥಾ ಕರುಣೆ ಸಲ್ಲ. ಇನ್ನು ರೈತರಲ್ಲಿನ ಸ೦ಘಟನೆಯ ಕೊರತೆ ಅವರು ಬೆಳೆದ ಟೊಮೆಟೋವನ್ನು ರಸ್ತೆಗೆ ಎಸೆವ೦ತೆ ಮಾಡುತ್ತದೆ ಇದು ಇನ್ನೊ೦ದು ರೀತಿಯಲ್ಲಿ ಬದುಕು ಕೆಡಿಸಿಕೊಳ್ಳುವವರ ಕಥೆ. ಅ೦ದಹಾಗೆ ಅವನು ನಿನ್ನೆದುರೇ ಬೆ೦ಕಿ ಹಚ್ಚಿಕೊ೦ಡಾಗ ನೀನೇನು ಮಾಡುತ್ತಿದ್ದೆ? (ಇದನ್ನು ನಿನ್ಗೇ ನೀನು ಕೇಳಿಕೊಳ್ಳಬೇಕಾಗಿದ್ದು) ಅದರ ಹೊರತಾಗಿ ಕೊಟ್ಟ ಇನ್ನೊ೦ದು ಉದಾಹರಣೆ ಸಾವಿನದು. ಸಾವು ಪ್ರತಿಯೊಬ್ಬನನ್ನೂ ಆವರಿಸುವ ನಿತ್ಯ ಸತ್ಯ. ನಿನ್ನೆ ಇನ್ಯಾರದ್ದೋ ಇ೦ದು ಬೇರೆಯಾರದ್ದೋ... ನಮ್ಮ ಸರದಿಯೂ ಇದ್ದಿದ್ದೇ. ಅದನ್ನು ಹೇಳಿ ನೀನು ಬದುಕು ಸು೦ದರವಾಗಿಲ್ಲ ಅನ್ನಲಾಗದು.

ಇಷ್ಟೆಲ್ಲ ಹೇಳಿದಮೇಲೆ ನನ್ನ ಥಿಯರಿ ಹೇಳುತ್ತೇನೆ. "ನೀನು ನೋಡುವಕಣ್ಣಿ೦ದ ನೋಡಿದರೆ ಬದುಕ್ಯಾಕೆ ಕೊಲ್ಲುವ ಬ೦ದೂಕು ಕೂಡಾ ಸು೦ದರವಾಗಿ ಕಾಣುತ್ತದೆ"


ನೀನೇನ೦ತೀಯಾ?

ಶ್ರೀನಿಧಿ.ಡಿ.ಎಸ್ said...

ಸುಶ್,

ಬದುಕು ಸುಂದರ ಕಣೋ,
ಮತ್ತೊಮ್ಮೆ ಹೇಳುತ್ತೇನೆ ಕೇಳು: ನೋಡುವ ಕಣ್ಣಿದ್ದರೆ.

ಭಿಕ್ಷುಕನ ಮಗುವಿಗೆ ಪಾಪ,
ನೀನಾದರೂ ಒಂದು ಐಸ್ ಕ್ಯಾಂಡಿ ಕೊಡಿಸಬಹುದಿತ್ತು!
ಮತ್ತೆ ಅದರ ಕಣ್ಣಲ್ಲಿ ನಗು ಮಿನುಗುತಿತ್ತು,
ನೋಡುವಾಸೆ ನಿನಗಿರಲಿಲ್ಲವೇ?

ಆ ಸಾವು ತಂದುಕೊಳುತ್ತಿರುವವನ ಮೇಲೆ
ಒಂದು ಕೊಡ ನೀರೆರೆಚಬಹುದಿತ್ತು , ತಣ್ಣಗೆ
ಸಾಯುತ್ತಿದ್ದನೇನೋ ಅವನು. ಯಾಕೆ ಹಾಗೆಯೆ ನಿಂತೆ?

ಗಂಡ ತೀರಿದಾಕೆಯ ಪಕ್ಕ, ಸುಮ್ಮಗೇ ನಿಂತು
ಒಂದು ಕಂಫರ್ಟು ಕೊಡಬಹುದಿತ್ತು,
ಮತ್ತೇನು ಮಾಡಲಾಗದಿದ್ದರೂ. ಅಲ್ಲವೇ?

ತಪ್ಪು ನಿನ್ನದಲ್ಲ ಬಿಡು, ಆ ಕನ್ನಡಕದಂಗಡಿಯವ
ನಿನಗೆ ಸರಿಯಾದ ಕನ್ನಡಕ ಕೊಟ್ಟಿರಲಿಲ್ಲ
ಒಡೆದದ್ದು ಒಳ್ಳೆಯದೇ ಆಯಿತು!

ಸುಶ್,
ನಿನ್ನ ಕವನ ಚೆನ್ನಾಗಿದೆ. ಭಾಷೆ, ನಿರೂಪಣಾ ವಿಧಾನ, ಶಬ್ದ ಪ್ರಯೋಗ,ಸುಲಲಿತ ಶೈಲಿ- ಎಲ್ಲವೂ. ಭಾವವೊಂದನ್ನ ಬಿಟ್ಟು. ನನ್ನ ಅಭಿಪ್ರಾಯ ಅಷ್ಟೇ. ಲೋಕೋ ಭಿನ್ನರುಚಿ.ಹಾಗಂತ ಆ ರಕ್ತ, ಉಪ್ಪುನೀರು - ಉಹುಂ, ಯಾರಿಗೂ ಸೇರಲಾರದು- ನಿನಗೂ!

Dayanand Bhat said...

ನಿನ್ನದು ಋಣಾತ್ಮಕ ಭಾವವೋ ಅಥವಾ ಹಾಗೆನ್ನುವುದು ನನ್ನ ಋಣಾತ್ಮಕ ಭಾವದ ಪ್ರತಿಫಲನವೋ .........
ನನಗೆ ತಿಳಿಯದು.

ನಿನ್ನ ಭಾವ ನಿರೂಪಣೆ........ ಅದ್ಭುತ...

ಭಾವ..?

SHREE said...

@ಶ್ರೀನಿಧಿ-
ರಕ್ತ, ಉಪ್ಪುನೀರು ಯಾರಿಗೂ ಸೇರುವುದಿಲ್ಲವೆನ್ನುವುದು ಸುಳ್ಳು. ಅದನ್ನೇ ತಿಂದು ಬದುಕುವ ಕ್ಯಾನಿಬಾಲ್ಸ್ ಇವಾಗಲೂ ಜಗತ್ತಿನ ಕೆಲಕಡೆ ಇದ್ದಾರೆ.
ಅಷ್ಟ್ಯಾಕೆ, ಮನುಷ್ಯರ ಬೆವರು ರಕ್ತ ಮಾಂಸ ತಿಂದು ಬದುಕುವವರು ಎಷ್ಟು ಜನ ಬೇಕು ಹೇಳಿ, ತೋರಿಸುತ್ತೇನೆ. ನಿಮಗೆ ಸೇರದಿರಬಹುದು, ಸುಶ್-ಗೂ ಸೇರದಿರಬಹುದು, ಆದ್ರೆ ಅದು ಸೇರುವವರು ಕೂಡಾ ಇರ್ತಾರೆ..

ಚಿರವಿರಹಿ said...

ಹರ್ಷ ಬದುಕು ಎಲ್ಲರ ವಿಷಯದಲ್ಲೂ ಕರುಣಾಮಯಿಯಾಗಿರುವದಿಲ್ಲಾ,ನೀ ಹೇಳಿರುವ ಕೆಟಗರಿಯ ಬಿಕ್ಷುಕರ ಸಂಘ್ಯೆ ತುಂಬ ಕಡಿಮೆ.ಕೈಲಾದ ಸಹಾಯ ಮಾಡುವದು ಬಿಟ್ಟು ಆದರ್ಶದ ನೆಪದಲ್ಲಿ ಮಾನವೀಯತೆಯಿಂದ ವಿಮೂಖವಾದರೆ ಏನು ಸಾಧಿಸಿದಂತಾಯ್ತು?
ಸಂಘಟನೆ,ಕ್ರಾಂತಿ ಇತ್ಯಾದಿ ಪದಗಳು ನಿನ್ನಂತಹ ಸುಶಿಕ್ಷಿತನಿಗೆ ಇಂಪಾಗಿ ಕೇಳಬಹುದು ಆದರೆ ಬಹುಪಾಲು ರೈತರು ಅಶಿಕ್ಷಿತರು ಕಣಯ್ಯಾ! ಹಸಿದವನಿಗೆ ನಿನ್ನ ಬ್ರಹ್ಮೋಪದೇಶ ರುಚಿಸುವದಿಲ್ಲಾ.ಸುಶಿಕ್ಶಿತರ ಸಂಖ್ಯೆ ಹೆಚ್ಚಿರುವ, ಹೆಚ್ಚು ಸಂಘಟಿತರಾಗಿರುವ ಅಡಿಕೆ ಬೆಳೆಗಾರರು ಏನು ಮಾಡಲು ಸಾದ್ಯವಿದೆ? ಅರಚಿಕೊಳ್ಳುವದನ್ನು ಬಿಟ್ಟು.ಅವರ ಕಷ್ಟ ನಿಂಗರ್ಥವಾಗಲ್ಲ ಮಾರಾಯ! ಅವರಿಗೆ ಕತ್ತೆ ತರ ದುಡಿಯುವುದ್ನ್ನು ಬಿಟ್ಟು ಸಂಘಟನೆ ಹಾಳೂ ಮುಳು ತಿಳಿಯುವದಿಲ್ಲಾ!...ಎನೋಪಾ ಬಂದುಕಲ್ಲೂ ಬದುಕು ಸವಿಯುತ್ತೆನಿ ಅನ್ನುವ ನಿನ್ನ ರಸಿಕತನಕ್ಕೆ ಏನು ಹೇಳಲಾಗದು.
ಶ್ರೀ,ಸಮಸ್ಯೆಯ ಮೂಲವನ್ನು ಬಿಟ್ಟು, ಎಷ್ಟು ಜನಕ್ಕೆ ಅಂತ ಐಸ್ ಕ್ಯಾಂಡಿ ಕೊಡಿಸ್ತೀರಾ?.ಹೇಳಲೂ ಆಗದೆ, ಅನುಭವಿಸಲೂ ಆಗದೆ ಒಳಗೋಳಗೆ ಬೇಯುತ್ತಿರುವರಿಗೆ ಎಲ್ಲಿಂದ ನೀರು ಹಾಕ್ತಿಯಾ?,ನಿಮ್ಮ ಕ್ಷಣಿಕ ಕಂಫರ್ಟು ಎಷ್ಟೊತ್ತಿರಲು ಸಾದ್ಯ?

ಸುಶ್, ಬದುಕನ್ನು ಹೇಗಿದೆಯೋ ಹಾಗೆ ನೋಡಿದರೆ ಚೆನ್ನ,ಬೇರೆ ಕೋನದಲ್ಲಿ ನೋಡ ಹೋದರೆ ಕೃತಕ ಅನಿಸುತ್ತೆ.ಸೂಪರ್ ಅಭಿವ್ಯಕ್ತಿ ಮಾರಾಯ..ನಂಗಂತೂ ತುಂಬ ತುಂಬ ಹಿಡಿಸ್ತು..

Anonymous said...

ಸುಶ್,
ಬದುಕು ಸುಂದರವಾಗಿದೆಯೇ? ಉತ್ತರ ಹುಡುಕುವುದು ತುಂಬಾ ಕಷ್ಟ. ಉತ್ತರ ಸಿಗಲಿಲ್ಲ ಅಂದ ಮಾತ್ರಕ್ಕೆ ಬದುಕು ಸುಂದರ ಅಂಥ ಒಪ್ಪಬಹುದೇ?
ಟೊಮ್ಯಾಟೋಗೆ ಬೆಲೆ ಇಳಿದಾಗ ರಸ್ತೆಗೆ ಎಸೆದ ಜನ ಅದಕ್ಕೆ ಬೆಲೆ ಇದ್ದಾಗ ನಕ್ಕಿರಬಹುದಲ್ಲವೇ ಆಗ ಬದುಕು ಸುಂದರ ವಾಗಿತ್ತಲ್ಲವೇ?
ಗಂಡ ಸತ್ತ ಅಂದ ಮಾತ್ರಕ್ಕೆ ಜೀವನ ನರಕ ಅಲ್ಲ. ಮಕ್ಕಳು ಇರಬಹುದಲ್ಲ. ಜೀವನದಲ್ಲಿ ಯಾವುದು ಸಾಶ್ವತ ಅಲ್ಲ. ಮಕ್ಕಳು ಜೀವನವನ್ನು ಸ್ವರ್ಗ ಮಾಡಬಹುದಲ್ಲ. ಹೌದು ಗಂಡನ ಜಾಗ ಯಾರ ಹತ್ತಿರವು ತುಂಬಲು ಸಾದ್ಯವಿಲ್ಲ. ಸತ್ಯ. ಮತ್ತೆ ಜೀವನ ಒಂದು ಹೊಂದಾಣಿಕೆ.

ಲಹರಿಯ ಜರಿಯಲ್ಲಿ ಮಿಂದವರು ಬದುಕು ಸುಂದರ ವೆಂದರು....
ಇಲ್ಲಿ ಗಂಡ ಹೆಂಡತಿಯನ್ನು ತಟ್ಟಿ ಮಲಗಿಸಿದರೆ ಮತ್ತೆಲ್ಲೋ ಒಬ್ಬ ಗಂಡ ಹೆಂಡತಿಗೆ ಕುಡಿದು ಹೊಡೆಯುತ್ತಿರಬಹುದು ಬದುಕು ಸುಂದರವೇ?
ನನ್ನ ಪ್ರಕಾರ ಬದುಕು ಸುಂದರ ಮತ್ತು ಸುಂದರವಾಗಿ ಇಲ್ಲದ (ಕೂರುಪತೆ) ಯ ಸಮ್ಮಿಳನ. ಒಂದೆರೆಡು ಊದಾಹರಣೆಗಳೊಂದಿಗೆ ಬದುಕು ಸುಂದರ ಅಥವಾ ಸುಂದರವಾಗಿಲ್ಲ ಅಂಥಾ ನಿರ್ದರಿಸಲಾಗದು. ಬದುಕಲ್ಲಿ ಸುಖ ದುಃಖ ಎರೆಡು ಇರುತ್ತೆ.

ಸಿಂಧು Sindhu said...

ಸು..

ವಿಶಿಷ್ಟ ನೋಟಗಳು..

ನೋಡುತ್ತ ನಿಂತಾಗ ಇದಿಷ್ಟೇ ಅಂತ ಅಂದುಕೊಳ್ಳದೆ ಕೆಲಸಮಯ ಮೌನದಿ ಸುಮ್ಮನಿದ್ದರೆ ಸನ್ನಿವೇಶ,ಸ್ವಪ್ನ,ನೋಟ ಎಲ್ಲ ಹೊಸತಾಗಿ ಹೊಳೆಯುತ್ತವೆ. ಕಾಲದ ಲೆನ್ಸಿಗೆ ಫ್ರೇಮ್ ಹಾಕದೇ ನೋಡಿದರಾಯಿತು.

ಲಹರಿಯ ಝರಿಯಲ್ಲಿ ಕೊಚ್ಚಿಹೋದವರಿಗೆ ಸಾವರಿಸಿಕೊಂಡು ನಿಂತು ಬೇರೆಯವರು ಹೇಳುವುದನ್ನು ಕೇಳುವುದು, ಬೇರೆಯವರು ತೋರಿಸಿದ್ದನ್ನು ನೋಡುವುದು ಕಷ್ಟ.

"ಐಸ್ ಕ್ಯಾಂಡಿಯ ತುಂಡು ಮನದಲ್ಲಿ ಕರಗುವುದು,
ರಸ್ತೆಯ ಬೆಂಕಿ ಮನಸ್ಸಿನ ತಂಪನ್ನು ಕುದಿಸುವುದು,
ಗಾಯದ ರಕ್ತ, ಮನದ ರಸಕ್ಕೆ ಉಪ್ಪು ಹಿಂಡುವುದು.."
ಅಪರೂಪದ ಗ್ರಹಿಕೆ. ತುಂಬ ಚೆನ್ನಾಗಿದೆ.

ಬದುಕಿನ ಹಳವಂಡ ನೋಡಿ ಕಂಗೆಟ್ಟು ಕೂತರೇ ಚಂದದ ವಿಷಯಗಳು ಕಣ್ಣಿಗೆ ಕಟ್ಟುವುದು. ಕಳೆದುಕೊಂಡರೇ ಇದ್ದಿದ್ದರ ಮಹತ್ವ ಅರಿವಾಗುವುದು.

ಪ್ರೀತಿಯಿರಲಿ,
ಅಕ್ಕ.

dayanand said...
This comment has been removed by the author.
dayanand said...

Dear Sushruta/Chiravirahi,
Its true that life is not so ಕರುಣಾಮಯಿ,Does it mean that life is not beautiful?
There is difference between these two.
Dear chiravirahi,
Double standard is very much visible in your comment, You ask harsha to do “ಕೈಲಾದ ಸಹಾಯ”, at the same time you are asking Shreenidhi ಶ್ರೀ,ಸಮಸ್ಯೆಯ ಮೂಲವನ್ನು ಬಿಟ್ಟು, ಎಷ್ಟು ಜನಕ್ಕೆ ಅಂತ ಐಸ್ ಕ್ಯಾಂಡಿ ಕೊಡಿಸ್ತೀರಾ?" What shreenidhi says/ may not be complete solution, But its Fire fighting, OR as you said “Kailada sahaya” .
Hope you have seen people sitting idle/chatting from morning till afternoon, from evening till night in your/our village at “Haratekatte/Road junctions”. Problem is with them, who grow Tomato thinking last year they had good price for that, will not the production go above the requirement? If aricnut gets good price, and people spend money without control, what harsha can do?
ಸಾವಿನ ನೋವು ಸಹಾ ಕ್ಷಣಿಕವೇ!
ಅಜಾದರಿಗೆ ತಮ್ಮದೇ ಬಂದೂಕಿನ ತುದಿಯಲ್ಲಿ ಕಂಡದ್ದು ಸುಂದರ, ಸ್ವತಂತ್ರ ಭಾರತದ ಚಿತ್ರಣವೇ!
Every problem has a/many solutions,
We have to search them out.
Life may be difficult.But it is really beautiful.
As you also KNOW or SAY
"ಕಾಮಾಲೆ ಕಣ್ಣೊರಿಗೆ ಕಾಣೋದೆಲ್ಲಾ ಹಳದಿಯಂತೆ"
Alvenri ?

Sushruthare, ooooooooooo sushrutare………
Ellidiri?

Your presence/comments are required, right?


Dayanand

condumdots said...

Sushruth and others,
When looked through the window of poetry, life may always look beautiful, however, Poem/poetry is a sweet lie. Poetry never reveal a truth, rather the so-called disease schezophrenia is a "hights" of poetry, which imagines everything that is not actually there, it is basically an illusion.
So, life , as depicted by Sushruth is a raw truth and is devoid of poetry. Poetry is like a wine/vodka (excuse me, i am a non drinker, only coffee, tea and horlicks), which when goes in, brings our lots of illusions.

I agree with Sushruth that what he has seen and written in his semi-text is a raw truth.

Now, people can have their own choises, some may choose the poetic view of life and miss the raw truth, on the other hand, some others may choose "not to choose the poetry" and willing to see the raw truth. It is in their choise.

Again, poetry shades away when time goes on, it is like getting undrunk as time goes by, whereas, raw truths of life persists, prevails.
As far as myself is concerned, I always choose the truth over poetry.

Regards
Dr.D.M.Sagar
Canada

Anonymous said...

Hi Sushrutha,

nimma baravanige chennagide, maateilla. Jotege nimage comments baredavaru nimagondistu prashne bittu hogiddare...... adakke nimma uttara heeli. Yake summanagiddira?

--
RG Hegde

ಸುಶ್ರುತ ದೊಡ್ಡೇರಿ said...

@ all

ಎಲ್ಲರಿಗೂ ನಮಸ್ಕಾರ. ಕವಿತೆಯ ಭಾವದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ನಾನು ತಡವಾಗಿ enter ಆಗುತ್ತಿರುವುದಕ್ಕೆ ಕ್ಷಮಿಸಿ.

ನನ್ನಿಂದ ಒಂದಷ್ಟು ಕ್ಲಾರಿಫಿಕೇಶನ್ನುಗಳು:

-ನನಗೂ ಸಹ ಬದುಕು ಸುಂದರವಾಗಿದೆ ಅಂತ ಅನ್ನಿಸಿದೆ, ಬಹಳ ಸಲ. ನಾನೂ ಭಾವಜೀವಿ, ನನ್ನ ಕಣ್ಣೂ ಬದುಕಿನಲ್ಲಿ ಸುಂದರವಾದದ್ದನ್ನೇ ನೋಡಲು ಬಯಸುತ್ತವೆ. ಆದರೆ ಹೀಗೆ ಅವಾಗಿವಾಗ ಕಾಣುವ ಸುಂದರವಲ್ಲದ ದೃಶ್ಯಗಳು ನನ್ನ ಧೃತಿಯನ್ನು ಕೆಡಿಸುತ್ತವೆ.
-ನನಗೂ ಮನುಷ್ಯತ್ವ ಇದೆ, ನಾನೂ ಭಿಕ್ಷುಕರಿಗೆ ದುಡ್ಡು ಕೊಟ್ಟಿದ್ದೇನೆ, ಪೆಟ್ಟಾದವರನ್ನು ಆಸ್ಪತ್ರೆಗೆ ಸಾಗಿಸಿದ್ದೇನೆ, ಸಾವಿನ ಮನೆಯ ಮರುಕದಲ್ಲಿ ಪಾಲ್ಗೊಂಡದ್ದೇನೆ, ಮತ್ತು ಈಗಲೂ ಅವನ್ನೆಲ್ಲ ಮಾಡುತ್ತೇನೆ. ಆದರೆ ನಾನು ಹಾಗೆ ಮಾಡಿದ ಮಟ್ಟಿಗೆ ಅವರುಗಳ ಬದುಕು ಸುಂದರವಾದದ್ದು ನನಗೆ ಕಂಡಿಲ್ಲ.
-ನನ್ನ ಭಾವ ಋಣಾತ್ಮಕ ಖಂಡಿತಾ ಅಲ್ಲ; ಎಲ್ಲದರಲ್ಲೂ ಕ್ರೂರತೆಯನ್ನು ಹುಡುಕುವುದು ನನ್ನ ಜಾಯಮಾನ ಅಲ್ಲ. ಆದರೆ ಕಂಡ ಭಗ್ನ ದೃಶ್ಯಗಳಲ್ಲೂ ಸೌಂದರ್ಯವನ್ನು ಹುಡುಕುವುದು ಮಾತ್ರ ನನ್ನಿಂದ ( ಕೆಲವೊಮ್ಮೆ ) ಆಗುವುದಿಲ್ಲ.
-ನನ್ನ ಅಭಿಪ್ರಾಯ 'ಬದುಕು ಸುಂದರವಾಗಿಲ್ಲ' ಎಂದಲ್ಲವೇ ಅಲ್ಲ; ಆದರೆ 'ಬದುಕು ಸುಂದರವಾಗಿಯೇ ಇದೆ' ಎಂದರೆ ಮಾತ್ರ ಕಷ್ಟ ಒಪ್ಪುವುದು ಅಂತ..

ಹಾಗೆಯೇ,
-ಈ ಉದಾಹರಣೆಗಳ ಮೂಲಕ ನಾನೇನು ಬದುಕೆಂದರೆ ಕಷ್ಟಗಳ ಸರಮಾಲೆ, ಬದುಕು ಕ್ರೂರ, ಕರಾಳ, ಇಲ್ಲಿ ಸೌಂದರ್ಯವೇ ಇಲ್ಲ ಅಂತ ಘೋಷಿಸಲಿಕ್ಕೆ ಹೊರಟಿಲ್ಲ. ಆದರೆ ಈ ಇಂತಹ ದೃಶ್ಯಗಳನ್ನು ಕಂಡಾಗಲೆಲ್ಲ ನನಗೆ 'ಬದುಕಿನ ಸತ್ಯ'ಗಳನ್ನು ಕಂಡಂತಾಗುತ್ತದೆ.

ನಾನೇನೋ ಆ ಮಗುವಿಗೆ ಐಸ್‍ಕ್ಯಾಂಡಿ ಕೊಡಿಸಿ ತೃಪ್ತಿ ಭಾವ ಹೊಂದಿಬಿಡಬಹುದು, ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನೀರು ಹುಡುಕಿ ತಂದು ಹೊಯ್ದು ನಂದಿಸಲು ಯತ್ನಿಸಿ ನಾನೂ ಮೈಸುಟ್ಟುಕೊಂಡು ಅವನ ಕಷ್ಟದಲ್ಲಿ ಭಾಗಿಯಾದೆನೆಂದು ಅಂದುಕೊಳ್ಳಬಹುದು, ಕಿರುಚಿಕೊಂಡ ಅಜ್ಜಿಯ ಪಕ್ಕ ಹೋಗಿನಿಂತು ಸಮಾಧಾನ ಹೇಳಿ 'ಸಾವು ಎಲ್ರಿಗೂ ಬರುತ್ತೆ' ಅಂದು ಕಣ್ಣೀರು ಒರೆಸಿ ಅವರಲ್ಲಿ ಹೊಸ ಭರವಸೆ ಚಿಗುರಿಸಿ ... ನನ್ನ ಭಾವದುರಿಯನ್ನು ತಣಿಸಿಕೊಳ್ಳಬಹುದು; ಆದರ್ಶ ವ್ಯಕ್ತಿಯೆನಿಸಿಕೊಳ್ಳಬಹುದು. (ಇಲ್ಲ, ಆದರ್ಶದ ಹಂಗಿಲ್ಲದೆಯೂ ಅದನ್ನೆಲ್ಲ ಮಾಡಬಹುದು, ಸರಿ) ...ಆದರೆ, ಹೀಗೆಲ್ಲಾ ಮಾಡಿದಾಕ್ಷಣ ಅವರ ಬದುಕು ಸುಂದರವಾಗುತ್ತದಾ? ಅವರ ಬದುಕಿನ ಸತ್ಯವನ್ನು ನನ್ನ ಸಹಾಯಗಳಿಂದ ಸುಳ್ಳಾಗಿಸಲಿಕ್ಕೆ ಸಾಧ್ಯವಾ?

ಬರಬಹುದು ಮುಂದೊಂದು ಕಾಲ: ಭಿಕ್ಷುಕನ ಮಗುವನ್ನು ಯಾರೋ ಮನೆಗೊಯ್ದು ಸಾಕಿ ಓದಿಸಿ ಶ್ರೀಮಂತನನ್ನಾಗಿ ಮಾಡುವ ಕಾಲ... ಸುಟ್ಟುಕೊಂಡವನ ಮೈಚರ್ಮ ಮತ್ತೆ ಬೆಳೆದು ಚೇತರಿಸಿಕೊಂಡು ಟೊಮ್ಯಾಟೋಗೆ ರೇಟ್ ಬಂದು ಅವನು ಕಾರಿನಲ್ಲಿ ಓಡಾಡುವ ದಿನ... ಗಂಡನ ಅಗಲಿಕೆಯ ದುಃಖ ಮರೆವಾಗಿ ಹೊಸ ನಲಿವಿನ ಗುಬ್ಬಚ್ಚಿ ಓನರ್ರಿನ ಮನೆಯಲ್ಲಿ ಚೀಂವ್‍ಗುಟ್ಟುವ ಕಾಲ... (ಬರಲಿ ಎಂದುದೇ ನನ್ನ-ನಿಮ್ಮೆಲ್ಲರ ಆಶಯ ಕೂಡ, i know).. ಆದರೆ ಫ್ರೆಂಡ್ಸ್, ಅವತ್ತಿನ ಆ ದೃಶ್ಯಗಳಲ್ಲಿ ಸೌಂದರ್ಯವಿತ್ತಾ? ಆ ಕ್ಷಣಗಳಲ್ಲಿ ಅವರಿಗೆ (ನನಗಲ್ಲ, ಅವನ್ನೆಲ್ಲಾ ತಂದು ಕವಿತೆ ಬರೆದ ನನ್ನ ಕತೆ ಬಿಟ್‍ಹಾಕಿ) ಬದುಕು ಸುಂದರ ಅನ್ನಿಸಿರಲಿಕ್ಕೆ ಸಾಧ್ಯವಿದೆಯಾ? ಹಹ್! Probably No.

ಫರ್ದರ್,
ಬದುಕಿನ ಯಾವುದೋ ಧಾಳಿಗೆ ಸಿಕ್ಕು ಕೈಕಾಲು ಕಳೆದುಕೊಂಡು, ತಾನು-ತನ್ನ ಮಗು ಎರಡೇ ಆಗಿ ಉಳಿದು ಹೋದ ಭಿಕ್ಷುಕ ತನ್ನ ಮಗುವಿಗೆ ಭಿಕ್ಷೆ ಬೇಡುವುದನ್ನಲ್ಲದೇ ಶಾಲೆಗೆ ಕಳುಹಿಸಬೇಕೆಂದೋ, ರಾಯರ ಮನೆಯ ಪಾತ್ರೆ ತೊಳೆಯಲಿಕ್ಕೆ ಕಳುಹಿಸಬೇಕೆಂದೋ;
ರೈತರು ಪ್ರಜ್ಞಾವಂತರೂ ಬುದ್ಧಿವಂತರೂ ಜಾಣರೂ ಆಗಬೇಕೆಂದೂ;
ಸಾವು ಸಹಜವಾದ್ದರಿಂದ 'take it easy' ಅಂದ್ಕೋಬೇಕೆಂದೂ;
-ಹೇಳುವುದು ಸುಲಭ... ಆದರೆ.. ಪ್ಚ್.. ಕಷ್ಟ ಕಷ್ಟವೇ; ಅನುಭವಿಸುವಾಗ ಮಾತ್ರ ಅರಿವಾಗಬಲ್ಲದ್ದು...:(

ಅಂತೆಯೇ, I should not forget to add-
ನಾನ್ಯಾಕೆ ಆ ಮಗುವಿಗೆ ಹೊಸ ಐಸ್‍ಕ್ಯಾಂಡಿ ಕೊಡಿಸಲಿಲ್ಲ; ಬೆಂಕಿ ಹೊತ್ತಿ ಉರಿಯುವಾಗ ನಾನ್ಯಾಕೆ ರಕ್ಷೆಗೆ ಮುಂದಾಗಲಿಲ್ಲ; ಗಂಡ ತೀರಿದಾಕೆಯ ಚೀರಿಗೆ ನಾನ್ಯಾಕೆ ತಕ್ಷಣ ಸ್ಪಂದಿಸಲಿಲ್ಲ... -ಇವೆಲ್ಲ ಆಕ್ಷೇಪಗಳಿಗೆ 'ಬದುಕು ಸುಂದರವಾಗಿದೆಯೇ?' ಎಂಬ ಪ್ರಶ್ನೆಯೇ ಉತ್ತರವಾಗಬಲ್ಲುದೇನೋ?!

ಬದುಕು ಸುಂದರವಾಗಿಯೇ ಇದೆ, ಬಂದೂಕಿನ ನಳಿಕೆಯಲ್ಲೂ ಸೌಂದರ್ಯ ಕಾಣಬೇಕು ಎಂಬುದೆಲ್ಲ ಕವಿಕಲ್ಪನೆ; ಲಹರಿಯ ಝರಿಯಲಿ ಮುಳುಗಿ ಕಳೆದುಹೋದವರ ಹುಚ್ಚು ಆಶಯ ಅಷ್ಟೇ. ಎಷ್ಟೋ ಸಲ ನಾನೂ ಹೀಗೇ ಅಂದುಕೊಂಡು ಮೂರ್ಖನಾಗಿದ್ದೇನೆ- ಬಹಳ ಸಲ ಮೂರ್ಖನಾಗುವುದೇ ಸರಿ ಅಂತಲೂ ಅಂದುಕೊಂಡಿದ್ದೇನೆ(!)- ಏಕೆಂದರೆ ಬದುಕು ಸುಂದರವಾಗಿದೆ ಎಂದುಕೊಂಡುಬಿಟ್ಟರೆ ಮನಸಿಗೆ ಎಷ್ಟು ಅರಾಮು ಅಲ್ವಾ?

ಕಂಡಹಾಗೆ ಸವಿಯೋಣ ಬದುಕನ್ನು; ಬಂದ ಹಾಗೆ ಅನುಭವಿಸೋಣ. ಕುರೂಪವನ್ನು ಸೌಂದರ್ಯ ಅಂತ ಒಪ್ಪಿಕೊಳ್ಳುವ, ದುಃಖವೂ ಸುಖ ಎಂದುಕೊಳ್ಳುವ, ಸತ್ಯವನ್ನು ಸುಳ್ಳು ಎನ್ನುವ ಹುಂಬತನ ಮಾಡುವುದು ಬೇಡ. ಏಕೆಂದರೆ, ಕುರೂಪ ಕುರೂಪವೇ, ದುಃಖ ದುಃಖವೇ ಮತ್ತು ಸತ್ಯ ಸತ್ಯವೇ -ಅವರವರ ಪಾಲಿಗೆ.

ಆದರೆ ಎಲ್ಲರ ಬದುಕೂ ಸುಂದರವಾ-ಗಿ-ರ-ಲಿ ಅಂತ ಆಶಿಸೋಣ.. (ಅಷ್ಟೇ ತಾನೇ ನಾವು ಮಾಡಬಹುದಾದ್ದು?)

ಧನ್ಯವಾದಗಳು.

ಸಿಂಧು Sindhu said...

ಸು,
ಬರಹದಲ್ಲಿ, ಪ್ರತಿಸ್ಪಂದನೆಯಲ್ಲಿ, ತೀವ್ರತೆಯನ್ನು ತುಂಬುವುದು ಸರಿಯಾದರೂ ತೀಕ್ಷ್ನತೆ ಒಳ್ಳೆಯದಲ್ಲ.
ನಿನ್ನ ಕವಿತೆಯ ಪ್ರಶ್ನೆಗೆ ನನ್ನ ಸೀಮಿತ ಅನುಭವ ಮತ್ತು ಗ್ರಹಿಕೆಗೆ ಹೊಳೆದ, ಮತ್ತು ಉತ್ತರವೆನ್ನಿಸಬಹುದಾದ ಒಂದು ವಾಕ್ಯ ಹೀಗಿದೆ.

"I cried because i had no shoes, till i saw a man with no feet.
Life is full of blessings. Some times we're just too blind to see them." - M.K.Gandhi.

ಗ್ರಹಿಕೆ ಮತ್ತು ಆಶಯಗಳು (ಕೆಟ್ಟದ್ದನ್ನು ಕಂಡು, ಒಳ್ಲೆಯದನ್ನು ಆಶಿಸುವ) ಪಾಸಿಟಿವ್ ಆಗಿರುವುದು ವ್ಯಕ್ತಿ ಮತ್ತು ಸಮಾಜ ಎರಡಕ್ಕೂ ಒಳ್ಳೆಯದು.

ನಿನ್ನ ಕವಿತೆ ಚೆನ್ನಾಗಿದೆ. ಭಾವ ಮತ್ತು ಗ್ರಹಿಕೆ ನಾವು ತಿಳಿದಷ್ಟೇ ಅಲ್ಲ, ನನಗೂ ನಿನಗೂ ಎಲ್ಲರಿಗೂ; ಎಲ್ಲ ನೋಟಗಳಲ್ಲೂ ವಿವಿಧ ಹೂರಣಗಳಿರುತ್ತವೆ. ಬೇರೆಯವರ ಲಹರಿ ತಪ್ಪೆನ್ನುವುದೇ ತಪ್ಪು- ಅನ್ನುವುದನ್ನು ಹೇಳಲು ಹೊರಟೆ ಅಷ್ಟೆ.

ಮತ್ತೆ ನನ್ನ ಮೊದಲಿನ ಕಾಮೆಂಟಿನಲ್ಲಿ ಲಹರಿಯ ಝರಿಯಲ್ಲಿ ತೇಲಿ ಹೋದವರು ಅಂತ ಸಂಬೋಧಿಸಿರುವುದು ತನ್ನ ಮೂಗಿನ ನೇರಕ್ಕೇ ನಡೆವ ಎಲ್ಲರಿಗೂ. ಇದು ಇನ್ಯಾವುದೇ ಬ್ಲಾಗಿಗೆ, ಬ್ಲಾಗೀದಾರರಿಗೆ ಉದ್ದೇಶಿಸಿದ್ದಲ್ಲ. ತಪ್ಪಾಗಿ ಅಂತಹ ತಿಳುವಳಿಕೆ ನೀಡಿದ್ದರೆ, ದಯವಿಟ್ಟಿ ಕ್ಷಮಿಸು, ಕ್ಷಮಿಸಿ ಓದಿದವರೆಲ್ಲ.

ಬಂದೂಕಿನ ತುದಿಯಲ್ಲಿ ಹೂವರಳುವುದೇ ಸೃಷ್ಟಿ ನಿಯಮ. ನಾವೆಷ್ಟೇ ಒಪ್ಪಲಿ ಬಿಡಲಿ, ಹೂವರಳುವುದಕ್ಕೆ ಮುಂಚೆ ಗೊಬ್ಬರಕ್ಕೆ ಮುರಿದು ಬಿದ್ದ ಕನಸು ಬೇಕು.