ಮಳೆ ಮಳೆ ಮಳೆ ಮಳೆ ಮಳೆ... ಎಷ್ಟು ಮಳೆ..? ಹನಿ ಹನಿ ಹನಿ ಹನಿ ಹನಿ ಹನಿ... ಎಷ್ಟು ಹನಿ..? ಸುರಿ ಸುರಿ ಸುರಿ ಸುರಿ ಸುರಿ... ಅರೆ ಅರೆ, ಇದೇನಿದು ಸುರಿಯುತ್ತಲೇ ಇದೆಯಲ್ಲ? ಮಳೆಗಾಲ ಶುರುವಾಗಿ ಹೋಯಿತಾ? ಹೌದಲ್ಲಾ, ಬಿಸಿಲೇ ಇಲ್ಲ.. ರಜೆ ತೆಗೆದುಕೊಂಡಿತಾ ಹೇಗೆ? ರಸ್ತೆಯ ಮೇಲೆ ಹರಿಯುತ್ತಿರುವುದೇನದು ನದಿಯಾ? ಮನೆಯ ಸೂರಿನಿಂದ, ಕಾರಿನ ವೈಪರಿನಿಂದ, ಸ್ಕೂಟರ್‌ವಾಲಾನ ರೈನ್‍ಕೋಟಿನಿಂದ, ಅಜ್ಜನ ಛತ್ರಿಯಿಂದ, ಮರದ ಎಲೆಯಿಂದ... ಎಲ್ಲೆಲ್ಲಿಂದಿಲೂ ತೊಟ್ಟಿಕ್ಕುತ್ತಿದೆಯಲ್ಲ ಹನಿ ಹನಿ ಹನಿ ಹನಿ... ಇದ್ಯಾವ ಮೋಡದ ಮಾಯೆ? ಮುಂಗಾರು ಮಳೆಯ ಹನಿಗಳ ಲೀಲೆ?
ಒಳಗೆಲ್ಲೋ ನಾಗಂದಿಗೆಯ ಮೇಲೆ ಮಡಚಿಟ್ಟಿದ್ದ ಛತ್ರಿಯನ್ನು ನಾನು ಕೆಳಗಿಳಿಸುತ್ತೇನೆ. ಧೂಳು ಕೊಡವಿ ಅದನ್ನು ಬಿಡಿಸಿದರೆ ಮೇಲೆ ನನ್ನ ನೀಲಾಕಾಶ ಮುಚ್ಚಿಹೋಗಿದೆ. ಮೇಲೇನು ನಡೆಯುತ್ತಿದೆ? ನನಗೆ ತಿಳಿಯುತ್ತಿಲ್ಲ... ಮೇಲಿನ ಕತೆ ಹಾಳಾಯ್ತು; ಮುಂದೇನು ಎಂದು ಸಹ ಕಾಣುತ್ತಿಲ್ಲ. ಅಷ್ಟು ಜೋರು ಮಳೆ. ಮೋಡ ಕವಿದ ದಿಗಂತ. ಕೇವಲ ಹತಾಶೆಯ ಕೆಸರನ್ನಷ್ಟೇ ಎರಚುತ್ತಿರುವ ರಸ್ತೆಯ ವಾಹನಗಳು. ಏಕೆ ಹೀಗಾಯ್ತು? ನನ್ನ ಮುಂದಿನ ದಾರಿಯೇನು?
ಇವತ್ತು ನನಗೆ ಕೆಲಸಕ್ಕೆ ಹೋಗಲು ಮನಸಿಲ್ಲ. ಮನೆಯಲ್ಲೇ ಕುಳಿತಿದ್ದೇನೆ. ಏಕೆಂದರೆ, ಇವತ್ತು ಜೂನ್ ೧. ಶಾಲೆಗಳು ಶುರುವಾಗುತ್ತಿವೆ. ನನ್ನೆಲ್ಲ ಗೆಳೆಯರೂ ಪಾಟಿಚೀಲ ಬೆನ್ನಿಗೇರಿಸಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ನಾನು ಮಾತ್ರ ಹೋಗುವಂತಿಲ್ಲ. ನನ್ನ ಏಳನೇ ತರಗತಿಯ ಪರೀಕ್ಷೆಯ ಫಲಿತಾಂಶ ಕೈಕೊಟ್ಟುಬಿಟ್ಟಿತು. ನಾನೇನು ಪರೀಕ್ಷೆಗೆ ಓದಿರಲಿಲ್ಲವೆಂದಲ್ಲ. ಚೆನ್ನಾಗಿಯೇ ಓದಿದ್ದೆ. ಆದರೆ ಪರೀಕ್ಷೆಗೆ ನಾಲ್ಕು ದಿನ ಮುಂಚೆ ಬಂದು ಒಕ್ಕರಿಸಿದ ಜ್ವರ ನನ್ನ ಭವಿಷ್ಯವನ್ನೇ ಹಾಳು ಮಾಡಿಬಿಟ್ಟಿತು. ಮೊದಲೆರಡು ಪರೀಕ್ಷೆಗಳಿಗೆ ಹೋಗಲಿಕ್ಕೇ ಆಗಲಿಲ್ಲ. ಹಾಗಂತ ನಾನು ಪರೀಕ್ಷೆಯನ್ನು ಬರೆದು ಪಾಸಾಗಿದ್ದರೂ ನನ್ನ ಅಪ್ಪ ನನ್ನನ್ನು ಮುಂದೆ ಓದಿಸುತ್ತಿದ್ದುದು ಸಂದೇಹ. ಅದಕ್ಕೇ ಅವನು ನನ್ನನ್ನು ಈ ಬೇಸಿಗೆ ರಜೆಯಲ್ಲೇ ಗ್ಯಾರೇಜಿಗೆ ಸೇರಿಸಿಬಿಟ್ಟ. ಒಂದು ವಾರದಲ್ಲಿ ಅಜ್ಜನ ಮನೆ, ಅತ್ತೆ ಮನೆ, ಎಲ್ಲಾ ಸುತ್ತಿಕೊಂಡು ಬಂದು ಆಮೇಲೆ ಗ್ಯಾರೇಜಿಗೆ ಸೇರಿದ್ದು. ಮೊದಮೊದಲು ದೊಡ್ಡ ಬೈಕಿನ ಟೈರು ಕಳಚಲು ಶಕ್ತಿಯೇ ಸಾಲುತ್ತಿರಲಿಲ್ಲ. ಈಗೀಗ ಎಲ್ಲಾ ಸಲೀಸಾಗಿದೆ. ನನ್ನ ಕೈಗಳು ತಾವೇ ತಾವಾಗಿ ಸ್ಪ್ಯಾನರಿನಿಂದ ನಟ್ಟು ಬೋಲ್ಟುಗಳನ್ನು ತಿರುಗಿಸುತ್ತವೆ. ಎರಡು ತಿಂಗಳಲ್ಲೇ ಎಲ್ಲವನ್ನೂ ಕಲಿತಿದ್ದೇನೆ.
ನನ್ನ ಕೈಗೆ ಬಳಿದಿರುವ ಮಶಿ, ಕವಿದಿರುವ ಮುಂಗಾರು ಮಳೆಯ ಮೋಡಕ್ಕಿಂತ ಕಪ್ಪಿದೆ. ಊಟ ಮಾಡುವ ಮುನ್ನ ಎಷ್ಟು ತೊಳೆದರೂ ಹೋಗುವುದಿಲ್ಲ. ಮೊದಮೊದಲು ಇದೇ ಕೈಯಲ್ಲಿ ಊಟ ಮಾಡುವುದಕ್ಕೆ ಹೇಸಿಗೆಯಾಗುತ್ತಿತ್ತು. ಗ್ರೀಸಿನ ಕಂಪಿಗೆ ವಾಂತಿ ಬಂದಂತಾಗುತ್ತಿತ್ತು. ಈಗ ಎಲ್ಲವೂ ಅಭ್ಯಾಸವಾಗಿದೆ. ಹಸಿದ ಹೊಟ್ಟೆಗೆ ತನ್ನೊಳಗೆ ಆಹಾರವನ್ನು ತುರುಕುತ್ತಿರುವ ಕೈಯ ಬಣ್ಣದ ಪರಿಚಯವೇ ಇರುವುದಿಲ್ಲ. ಹೀಗಾಗಿ, ಅದು ಏನನ್ನು ಹಾಕಿದರೂ ಜೀರ್ಣ ಮಾಡುತ್ತದೆ.
ಈಗ ಹೊರಗೆ ಮಳೆ ಸ್ವಲ್ಪ ತೆರವು ಮಾಡಿಕೊಟ್ಟಿದೆ. ಸುಮ್ಮನೇ ಮನೆಯಲ್ಲಿ ಕುಳಿತಿರಲು ಬೇಸರವಾಗಿ ನಾನು ನಮ್ಮೂರ ಪ್ರೈಮರಿ ಶಾಲೆಯತ್ತ ಹೆಜ್ಜೆ ಹಾಕುತ್ತೇನೆ. ಇಲ್ಲ, ನನಗೆ ನಮ್ಮೂರ ಮುಖ್ಯದಾರಿಯಲ್ಲಿ ಓಡಾಡುವಷ್ಟು ಧೈರ್ಯವಿಲ್ಲ. ಕಟ್ಟೆಯ ಮೇಲೆ ಕುಳಿತ ಜನ ಕೇಳುತ್ತಾರೆ: 'ಏನೋ, ಇವತ್ತು ಕೆಲಸಕ್ಕೆ ಹೋಗಿಲ್ಲವೇನೋ? ಯಾಕೋ?' ಈ ಜನಗಳ ನಿಜವಾದ ಬಣ್ಣ ಗೊತ್ತಾಗುವುದು ನಾವು ಸೋತಾಗಲೇ ನೋಡಿ. ಕಟ್ಟೆಯ ಮೇಲೆ ಕುಳುತು ಕುಳಿತೇ ಇವರ ಅಂಡು ಸವೆದಿದ್ದರೂ ರಸ್ತೆಯ ಮೇಲೆ ಹೋಗಿಬರುವ ಜನಗಳನ್ನು ಹೀಯಾಳಿಸುವುದು ಬಿಡುವುದಿಲ್ಲ. ಅವರಿಗೆ ಅದರಲ್ಲೇ ಮನಸ್ಸಂತೋಷ. ಯಾರ್‍ಯಾರ ಮನೆಯಲ್ಲಿ ಏನೇನಾಯಿತು? ಯಾರ ಮನೆಯ ಹೆಣ್ಣು ಮಗಳು ತೌರಿಗೆ ವಾಪಸು ಬಂದಳು? ಯಾರ ಮನೆಯಲ್ಲಿ ಹಿಸೆ ಪಂಚಾಯಿತಿ? ಅತ್ತೆ-ಸೊಸೆ ಜಗಳ? ಇಸ್ಪೀಟಿನಲ್ಲಿ ಸೋತು ಪಾಪರ್ ಆದ್ನಂತೆ ಅವ್ನು ಹೌದಾ? ಛೇ! ಇವರಿಗೆ ತಮ್ಮ ಅಡುಗೆ ಮನೆಯಲ್ಲಿನ ಗ್ಯಾಸ್ ಸ್ಟೋವ್ ತುಕ್ಕು ಹಿಡಿದಿದ್ದರೂ ಪರವಾಗಿಲ್ಲ; ಬೇರೆಯವರ ಮನೆಯ ಪಾತ್ರೆ ಕಂದಿದರೂ ಅದು ಹಾಸ್ಯಕ್ಕೆ ವಸ್ತು. ನನಗೆ ಇಂಥವರ ಪ್ರಶ್ನೆಗಳಿಗೆ ಆಹಾರವಾಗಲಿಕ್ಕೆ ಇಷ್ಟವಿಲ್ಲ. ಅದಕ್ಕೇ ನಾನು ಹಿತ್ತಿಲ ದಾರಿ ಹಿಡಿದು, ಬೇಲಿ ಹಾರುತ್ತಾ ಶಾಲೆಯ ಹಿಂಭಾಗವನ್ನು ಸೇರುತ್ತೇನೆ.
ಈಗ ತಾನೇ ಮೇಷ್ಟ್ರು ಬಂದಿದ್ದಾರೆ. ಹುಡುಗನೊಬ್ಬನನ್ನು ಕರೆದು ಬೆಲ್ ಹೊಡೆಸಿದ್ದಾರೆ. ಟಿಣ್ ಟಿಣ್ ಟಿಣ್ ಟಿಣ್ ಟಿಣ್... ಮಕ್ಕಳೆಲ್ಲಾ ಹೊರಗೆ ಬಂದು ಕಟ್ಟೆಯ ಮೇಲೆ ಸಾಲಾಗಿ 'ಹೈಟ್ ಪ್ರಕಾರ' ನಿಂತಿದ್ದಾರೆ. 'ಸಾವಧಾನ್! ನಾಡಗೀತೆ ಶುರೂಕರ್!' ಈಗ ಪ್ರಾರ್ಥನೆ ಪ್ರಾರಂಭವಾಗಿದೆ... 'ಜೈ ಭಾರತ ಜನನಿಯ ತನುಜಾತೆ.. ಜಯಹೇ ಕರ್ನಾಟಕ ಮಾತೆ.. ಜೈ ಸುಂದರ ನದಿವನಗಳ ನಾಡೇ.. ಜಯಹೇ...' ಶಾಲೆಯ ಹಿಂದಿನ ಬೇಲಿಯ ಮರೆಯಲ್ಲಿ ನಿಂತ ನಾನೂ ಇಲ್ಲೇ ನೇರವಾಗಿ ನಿಂತು ಸಣ್ಣಗೆ ನಾಡಗೀತೆಯನ್ನು ಗುನುಗುತ್ತೇನೆ.. 'ಭೂದೇವಿಯ ಮಕುಟದ ನವಮಣಿಯೇ...' ಸಾಲಿನಲ್ಲಿ ನಿಂತ ಹುಡುಗರಲ್ಲಿ ಇನ್ನೂ ರಜೆಯ ತೂಕಡಿಕೆ ಇದೆ. ಅಗೋ, ಮೂರನೇ ಸಾಲಿನ ನಾಲ್ಕನೇ ಹುಡುಗ ಶಶಾಂಕ ಆಕಳಿಸುತ್ತಿದ್ದಾನೆ.. ನನಗೆ ನಗು ಬರುತ್ತಿದೆ.. ಈ ವರ್ಷ ಹೊಸದಾಗಿ ಒಂದನೇ ಕ್ಲಾಸಿಗೆ ಸೇರಿದ ಮಕ್ಕಳಿಗೆ ಪ್ರಾರ್ಥನೆ ಸರಿಯಾಗಿ ಬರುವುದಿಲ್ಲ. ಅವರು ಅಕ್ಕಪಕ್ಕದವರ ಬಾಯಿ ನೋಡುತ್ತಿದ್ದಾರೆ. ಮೇಷ್ಟ್ರು ಕಣ್ಣಲ್ಲೇ 'ನೀವೂ ಹಾಡಿ' ಎನ್ನುತ್ತಿದ್ದಾರೆ. ಕೆಲ ಮಕ್ಕಳು ಸುಮ್ಮನೇ ಬಾಯಿ ಪಿಟಿಗುಡುಸಿತ್ತಿದ್ದಾರೆ. ಎದಿರುಗಡೆ ಹುಡುಗಿಯ ತಲೆಯಲ್ಲಿ ಹೇನು ಹುಡುಕುತ್ತಿದ್ದಾಳೆ ಕಲ್ಪನ.. ಹೊರಡುವುದು ತಡವಾದ್ದರಿಂದ ತನ್ನ ಜೊತೆ ಅಪ್ಪನನ್ನೂ ಕರೆದುಕೊಂಡು ಬಂದಿರುವ ನಟರಾಜ ಆಗಲೇ ಶುರುವಾಗಿರುವ ಪ್ರಾರ್ಥನೆಯಲ್ಲಿ ಸೇರಿಕೊಳ್ಳುವುದೋ ಬಿಡುವುದೋ ಅರ್ಥವಾಗದೇ ಹಾಗೇ ದೂರದಲ್ಲಿ ನಿಂತಿದ್ದಾನೆ... ಪ್ರಾರ್ಥನೆ ಮುಗಿಯುತ್ತಿದೆ: '...ಕನ್ನಡ ತಾಯಿಯ ಮಕ್ಕಳ ಗೇಹ'.. ಕೊನೆಯಲ್ಲಿ ಎಲ್ಲರೂ 'ಜೈಹಿಂದ್' ಹೇಳಿ ಶಾಲೆಯ ಒಳನಡೆದಿದ್ದಾರೆ. ಈಗ ಆಗಸದಲ್ಲಿ ಮತ್ತೆ ಮಳೆಮೋಡಗಳು ಒಟ್ಟಾಗುತ್ತಿವೆ... ನಾನು ಕೈಯಲ್ಲಿರುವ ಛತ್ರಿಯ ಬಟ್ಟೆಯನ್ನೊಮ್ಮೆ ಸವರುತ್ತೇನೆ... ನನ್ನ ಮೆಡ್ಲಿಸ್ಕೂಲಿನ ದಿನಗಳ ನೆನಪಿಗೆ ಜಾರುತ್ತೇನೆ...
ನಾನು ನಾಲ್ಕನೇ ಕ್ಲಾಸು ಮುಗಿಸಿದ ಮೇಲೆ ಮುಂದೆ ಯಾವ ಶಾಲೆ ಎಂಬ ಗೊಂದಲವೇ ಇರಲಿಲ್ಲ ನಮ್ಮ ಮನೆಯಲ್ಲಿ. ಸೀದಾ ಹೋಗಿ ಉಳವಿಯ ಸರ್ಕಾರೀ ಶಾಲೆಗೆ ಸೇರಿಸಿದ್ದು ಅಪ್ಪ. ಸ್ವಲ್ಪ ಭಯವಿತ್ತು: ಹೊಸ ಶಾಲೆ, ಹೊಸ ಮೇಷ್ಟ್ರುಗಳು, ಹೊಸ ಗೆಳೆಯರು... ಈ ವರ್ಷದಿಂದ ಇಂಗ್ಲೀಷು ಬೇರೆ ಕಲಿಯಬೇಕಲ್ಲಪ್ಪಾ ಅಂತ.. ಒಂದು ತಿಂಗಳಲ್ಲಿ ಹೊಂದಿಕೊಂಡೆ. ಗೆಳೆಯರೆಲ್ಲರೂ ಒಳ್ಳೆಯವರಿದ್ದರು. ಒಳ್ಳೆಯವರು ಎಂದರೇನು? ನನ್ನಷ್ಟೇ ದಡ್ಡರೂ ನನ್ನಷ್ಟೇ ಬುದ್ಧಿವಂತರೂ ಆಗಿದ್ದರು ಅಂತ! ನಮಗಿಂತ ದಡ್ಡರು ನಮ್ಮ ಜೊತೆ ಸೇರುವುದೇ ಇಲ್ಲ; ನಮಗಿಂತ ಬುದ್ಧಿವಂತರು ನಮ್ಮನ್ನು ಸೇರಿಸಿಕೊಳ್ಳಲಿಕ್ಕೇ ಹಿಂಜರಿಯುತ್ತಾರೆ.. ಇಲ್ಲಿ ಹಾಗಿರಲಿಲ್ಲ. ಟೆಸ್ಟಿನಲ್ಲಿ ಒಬ್ಬರಿಗೊಬ್ಬರು ತೋರಿಸಿಕೊಂಡು, ಸನ್ನೆ-ಗಿನ್ನೆ ಮಾಡಿಕೊಂಡು, ಕಾಪಿಚೀಟಿ ವರ್ಗಾಯಿಸಿಕೊಂಡು ನಾವು ಅನ್ಯೋನ್ಯವಾಗಿದ್ದೆವು.
ಊರಿನಿಂದ ಎರಡು ಮೈಲು ನಡೆದೇ ಹೋಗುತ್ತಿದ್ದುದು ನಾನು. ನನ್ನ ಜೊತೆ ಅಣ್ಣಪ್ಪ, ಭೈರಪ್ಪ, ಗಿರೀಶ ಇತ್ಯಾದಿ ಗೆಳೆಯರು ಇರುತ್ತಿದ್ದರು. ಹೊರಬೈಲು ಬೋರ್ಡ್‍ಗಲ್ಲಿನಲ್ಲಿ ನಾಗಶ್ರೀ, ಹಾಲಮ್ಮರೂ ಸೇರಿಕೊಳ್ಳುತ್ತಿದ್ದರು. ಸುರಿಯುವ ಮಳೆಯಲ್ಲಿ ಛತ್ರಿ ಹಿಡಿದ ನಾವು ಒಬ್ಬರಿಗೊಬ್ಬರು ನೀರು ಹಾರಿಸಿಕೊಳ್ಳುತ್ತಾ, ರಸ್ತೆ ಪಕ್ಕದ ಬುಕ್ಕೆ ಮಟ್ಟಿಗಳನ್ನು ಶೋಧಿಸುತ್ತಾ, ಸಿಕ್ಕ ಕಲ್ಲುಗಳನ್ನು ಲೈಟುಕಂಬಗಳಿಗೆ ಎಸೆಯುತ್ತಾ ಸಾಗುತ್ತಿದ್ದೆವು. ಎದುರಿಗೆ ಬಂದ ಮಲ್ಲಿಕಾರ್ಜುನ ಬಸ್ಸಿನ ಡ್ರೈವರ್ರಿಗೆ ಕೈ ಮಾಡುತ್ತಿದ್ದೆವು. ಅದಕ್ಕೆ ಪ್ರತಿಯಾಗಿ ಡ್ರೈವರು ಹಾರನ್ನು ಮಾಡಿದರೆ ನಮಗೆ ಖುಷಿಯಾಗುತ್ತಿತ್ತು. ಏನೇನೋ ಮಾತು ಏನೇನೋ ಮಾತು... ದಾರಿ ಖರ್ಚಿಗೆ ಇಂಥದ್ದೇ ಬೇಕೆಂದೇನಿಲ್ಲವಲ್ಲ? ಮಾತಾಡುತ್ತಿದ್ದರೆ ಶಾಲೆ ಬೇಗ ಬರುತ್ತದೆ ಅಷ್ಟೆ.
ಶಾಲೆಯಲ್ಲಿ ಛತ್ರಿ ನೇತುಹಾಕಲಿಕ್ಕೆಂದೇ ಹೊರಗಡೆ ಒಂದು ಊದ್ದ ದಬ್ಬೆಯನ್ನು ಹೊಡೆದಿದ್ದರು. ನಾವೆಲ್ಲಾ ನಮ್ಮ ಛತ್ರಿಯನ್ನು ಮಡಚಿ, ಕೊಡವಿ ಅದಕ್ಕೇ ನೇತುಹಾಕುತ್ತಿದ್ದುದು. ಮೇಷ್ಟ್ರುಗಳೂ ತಮ್ಮ ಛತ್ರಿಯನ್ನು ಇಲ್ಲೇ ಇಡುತ್ತಿದ್ದುದು. ನಮ್ಮ ಕನ್ನಡ ಮೇಷ್ಟ್ರ ಉದ್ದ ಕೋಲಿನ ಛತ್ರಿ ಮಾತ್ರ ಯಾವಾಗಲೂ ನ್ಯಾಲೆಯ ಮೊದಲನೆಯದಾಗಿರುತ್ತಿತ್ತು. ನಮ್ಮ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ಇತ್ತು. ಒಂದನೇ ತರಗತಿಗೆ ಪಾಠ ಮಾಡಲು ಬರುತ್ತಿದ್ದುದು ಒಬ್ಬ ಮೇಡಂ. ಅನಿತಾ ಮೇಡಂ ಅಂತ. ಅವರು ಮಾತ್ರ ತಮ್ಮ ಛತ್ರಿಯನ್ನು ಇಲ್ಲಿ ನೇತುಹಾಕುತ್ತಿರಲಿಲ್ಲ. ಅವರ ಛತ್ರಿಗೆ ಮೂರು ಫೋಲ್ಡುಗಳು! ಅದನ್ನು ಅವರು ಒದ್ದೆಯಿದ್ದರೂ ತಮ್ಮ ವ್ಯಾನಿಟಿ ಬ್ಯಾಗಿನಲ್ಲಿಯೇ ಇಟ್ಟುಕೊಳ್ಳುತ್ತಿದ್ದುದು. ಅದೆಷ್ಟು ಒಳ್ಳೇ ಮೇಡಂ ಅಂತೀರಾ ಅವರು? ಒಮ್ಮೆ ನಾವು ಐದನೇ ತರಗತಿಯ ಹುಡುಗರಿಗೆ ಅವರು ಕ್ಲಾಸು ತೆಗೆದುಕೊಂಡಿದ್ದರು. ಪಾಠ ಇಲ್ಲವೇ ಇಲ್ಲ! ಬರೀ ಹಾಡು, ಕಥೆ, ಆಟ... ಏನೇನೋ ಆಡಿಸಿದ್ದು... ಅವರ ಕಂಠ ಎಷ್ಟು ಚೆನ್ನಾಗಿದೆ ಅಂತೀರಾ? ನನ್ನ ಅಮ್ಮನನ್ನು ಬಿಟ್ಟರೆ ಅಷ್ಟು ಚಂದ ಹಾಡುವವರು ಅನಿತಾ ಮೇಡಮ್ಮೇ ಸರಿ ಅಂತ ನಾನು ತೀರ್ಮಾನಿಸಿದ್ದೆ.
ಈಗ ಮಳೆಹನಿ ಬೀಳತೊಡಗಿದೆ... ಜೋರಾಗುತ್ತಿದೆ... ಶಾಲೆಯಿಂದ ಬರುತ್ತಿರುವ 'ಎರಡೊಂದ್ಲೆ ಎರಡು, ಎರಡೆರಡ್ಲೆ ನಾಕು, ಎರಡ್ಮೂರ್ಲೆ ಆರು..' ಮಗ್ಗಿಯ ಪ್ರಾಕ್ಟೀಸ್, ಮಳೆಯ ಹಾಡಿನೊಂದಿಗೆ ಬೆರೆಯುತ್ತಿದೆ... 'ಇನ್ನೂ ಜೋರಾಗಿ ಹೇಳ್ರೋ' ಮೇಷ್ಟ್ರು ಕೂಗಿದ್ದು ಕೇಳಿಸುತ್ತಿದೆ... ಛತ್ರಿ ಅಗಲಿಸಿ ನಿಂತಿರುವ ನಾನು ನಿಧಾನಕ್ಕೆ ಮನೆಯತ್ತ ವಾಪಸು ಹೆಜ್ಜೆ ಹಾಕುತ್ತೇನೆ...
ಮೆಡ್ಲಿಸ್ಕೂಲಿನ ದಿನಗಳು ತುಂಬಾ ಚೆನ್ನಾಗಿದ್ದವು. ಐದು-ಆರನೇ ಕ್ಲಾಸಿನ ಪರೀಕ್ಷೆಗಳನ್ನು ಪಾಸು ಮಾಡುವುದು ನಮಗೆ ತಲೆನೋವೇ ಆಗಲಿಲ್ಲ. ಪ್ರಶ್ನೆಪತ್ರಿಕೆಗಳು ಬಹಳ ಸುಲಭ ಇದ್ದವು. ಆರನೇ ಕ್ಲಾಸಿನಲ್ಲಿ ಕನ್ನಡ ಮತ್ತು ಸಮಾಜ ವಿಷಯಗಳಲ್ಲಿ ನನಗೇ ಹೈಯೆಸ್ಟ್ ಮಾರ್ಕ್ಸ್! ನನಗೆ ಅವು ಇಷ್ಟದ ವಿಷಯಗಳಾಗಿದ್ದವು. ಮತ್ತೇನಪ್ಪ ಅಂದ್ರೆ, ಕನ್ನಡ ಮತ್ತು ಸಮಾಜ -ಎರಡೂ ವಿಷಯಕ್ಕೆ ಪಾಠಕ್ಕೆ ಬರುತ್ತಿದ್ದವರು ಶಂಕ್ರಪ್ಪ ಮೇಷ್ಟ್ರು. ಎಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರೆಂದರೆ ನನಗೆ ಮನೆಗೆ ಹೋಗಿ ಓದುವ ಪ್ರಮೇಯವೇ ಬರುತ್ತಿರಲಿಲ್ಲ. ಅವರಿಗೂ ನನ್ನನ್ನು ಕಂಡರೆ ಏನೋ ಅಕ್ಕರೆ. 'ಬಡವರ ಮನೆ ಹುಡುಗ... ನೀನು ಓದಿ ಹೆಸರು ಮಾಡಬೇಕು... ಎಷ್ಟು ಖರ್ಚಾದರೂ ಸರಿ, ನಿನ್ನ ಅಪ್ಪನಿಗೆ ಓದಿಸಲಿಕ್ಕೆ ನಾನು ಹೇಳುತ್ತೇನೆ...' ಎಂದಿದ್ದರು. ನಮ್ಮ ಆರನೇ ಕ್ಲಾಸು ಮುಗಿಯುವಷ್ಟರಲ್ಲಿ ವರ್ಗವಾಗಿ ಹೋದರು. ಈಗ ಎಲ್ಲಿದ್ದಾರೋ? ಇಲ್ಲೇ ಇದ್ದಿದ್ದರೆ ನಾನು ಮತ್ತೊಮ್ಮೆ ಏಳನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿ, ಪಾಸು ಮಾಡಿಕೊಂಡು, ಹೈಸ್ಕೂಲಿಗೆ...... ಹುಂ! ಎಲ್ಲಾ ಭ್ರಮೆಯಷ್ಟೆ.
ಹಿತ್ತಿಲ ಹಾದಿಯಲ್ಲಿ ನಡೆಯುವಾಗ ಎಲ್ಲಾ ನೆನಪಾಗುತ್ತದೆ... ಈ ಮಳೆಯೇ ಹಾಗೆ: ಮಧುರ ಸ್ಮೃತಿಗಳನ್ನು ಸುರಿಸುತ್ತದೆ... ಏನೇನೋ ಭಾವನೆಗಳನ್ನು ಸ್ಪುರಿಸುತ್ತದೆ... ಹೊಸ ಸ್ವಪ್ನಲೋಕದ ತೆರೆಯನ್ನು ಸರಿಸುತ್ತದೆ... ನನ್ನನ್ನು ಹೊಸ ಕನಸುಗಳು ಆವರಿಸುತ್ತವೆ: ಇದೇ ಗ್ಯಾರೇಜಿನಲ್ಲಿ ನಾಳೆಯಿಂದ ಇನ್ನೂ ಜಾಸ್ತಿ ಕೆಲಸ ಮಾಡಿ, ಎಲ್ಲವನ್ನೂ ಕಲಿತು, ಮುಂದೊಂದು ದಿನ ನಾನೇ ಗ್ಯಾರೇಜು ತೆರೆಯುತ್ತೇನೆ.. ದುಡ್ಡು ಮಾಡುತ್ತೇನೆ.. ಊರ ಜನರೆದುರು ತಲೆಯಿತ್ತಿ ನಿಲ್ಲುತ್ತೇನೆ.. ಶಾಲೆ ಬಿಡಿಸಿದ ಅಪ್ಪನಿಗೇ ಅಚ್ಚರಿಯಾಗುವಂತೆ ಬೆಳೆದು ನಿಲ್ಲುತ್ತೇನೆ...
ಮನೆ ಸಮೀಪಿಸುತ್ತಿದೆ. ಅಮ್ಮ ಒಲೆಯ ಬುಡದಲ್ಲಿ ಕುಳಿತು ಇವತ್ತು ಮನೆಯಲ್ಲೇ ಇರುವ ಮಗನಿಗಾಗಿ ಹಪ್ಪಳ ಕರಿಯುತ್ತಿದ್ದಾಳೆ. ಈ ಮಳೆಯ ಜೊತೆ ಹಲಸಿನ ಕಾಯಿ ಹಪ್ಪಳ, ಅದರಲ್ಲೂ ನನ್ನಲ್ಲಿ ಸದಾ ಹೊಸ ಸ್ಪೂರ್ತಿ ತುಂಬುವ ಅಮ್ಮ ಕರಿದುಕೊಟ್ಟ ಹಪ್ಪಳ.. ಆಹ್! ಅದರ ರುಚಿಯೇ ರುಚಿ! ಛತ್ರಿಯನ್ನು ಕಟ್ಟೆಯ ಬದಿಯಲ್ಲಿ ಸಾಚಿ, ಸೂರಿನ ಒಗದಿಯಿಂದ ಬೀಳುತ್ತಿರುವ ನೀರಿಗೆ ನನ್ನ ಕಪ್ಪು ಬಳಿದ ಕೈಯೊಡ್ಡುತ್ತೇನೆ. ಬೊಗಸೆ ತುಂಬಾ ಶುದ್ದ, ಬಣ್ಣರಹಿತ, ಅಹಂಕಾರರಹಿತ, ಸ್ವಾಧಭರಿತ, ಭಾವಸಹಿತ ನೀರು ತುಂಬಿಕೊಳ್ಳುತ್ತದೆ... ನಾನು ಆ ನೀರಿನಲ್ಲಿ ನನ್ನ ಮುಖವನ್ನೇ ನೋಡಿಕೊಳ್ಳುತ್ತೇನೆ... ಹಿಂದಿನಿಂದ ಬಂದ ಅಮ್ಮ 'ಒಳಗಡೆ ಕನ್ನಡಿ ಇದೆ ಬಾ... ಹಪ್ಪಳ ತಿಂತಾ ನೋಡ್ತಾ ಕೂರುವಂತೆ..!' ಎಂದು ನಗುತ್ತಾಳೆ. ನಾನೂ ನಗುತ್ತಾ ಅಮ್ಮನ ಜೊತೆ ಒಳನಡೆಯುತ್ತೇನೆ.
ಸುರಿ ಸುರಿ ಸುರಿ ಸುರಿ ಸುರಿ ಮಳೆ... ಗರಿ ಗರಿ ಗರಿ ಗರಿ ಗರಿ ಹಪ್ಪಳ...
22 comments:
ಸುಶ್,
ಶಾಲಿಗೆ ಹೋಪಕಾದ್ರೆ ಕೊಡೆ ಕಳದು ಹೋಗದು,
ಮಳೆ ನೇರಳೆ ಹಣ್ಣು ತಿನ್ನದು ಬರಿಲೇ ಇಲ್ಯಲಾ?
ಕಾಪಿ ಮಾಡಕಾದ್ರೆ ಸಿಕ್ಕಿ ಹಾಕಿ ಕೊಂಡಿದ್ದು?
ಇದರಲ್ಲಿ ಯಾಕೋ ಸಿಂಧು ಅಕ್ಕನ ಲೇಖನದ ಪ್ರಭಾವ ಕಾಣ್ತಾ ಇದ್ದು ಯಾಕೆ ಅಂಥಾ ಗೊತ್ತಿಲ್ಲೆ.
ಆ ಹುಡುಗನ ಕನಸು ನನಸಾಗಲಿ ಅಂತ ಹಾರೈಸ್ತಿ.
ಚನ್ನಾಗಿ ಇದ್ದು ಅಂಥಾ ಹೇಳಿ ಹೇಳಿ ಬೇಜಾರಾಯ್ದು ನಂಗೂ.ಒಕೆ ಪರ್ವಾಗಿ ಇಲ್ಲೆ. ಎನೋ ಬರದ್ದೆ ಅಡಿಲ್ಲೆ ಅಪ್ಪಿ.
@ ranju
ಶಾಲಿಗೆ ಹೋಪಕಾದ್ರೆ ಕೊಡೆ ಕಳದು ಹೋಗದು, ಮಳೆ ನೇರಳೆ ಹಣ್ಣು ತಿನ್ನದು - ಹುಂ, ಒಳ್ಳೇ ಚಿತ್ರಗಳಾಗಿದ್ದಿದ್ದ; ಬರಿಯಕ್ಕೆ ಮರ್ತ್ ಹೋತು. :( ಕಾಪಿ ಹೊಡಿಯಕ್ಕಿದ್ರೆ ಸಿಕ್ಯಂಬೀಳೋ ಸನ್ನಿವೇಶ ನೆನಪಾತು; ಆದ್ರೂ ಬರಿಯಲ್ಲೆ.
ಸಿಂಧೂ ಅಕ್ಕನ ಪ್ರಭಾವಾ.... ಊಂ... ಎಂಥೇನಪ... ನಂಗೂ ಗೊತ್ತಿಲ್ಲೆ. :-)
ಚನಾಗಿದ್ದು ಅಂಥ ಹೇಳೀ ಹೇಳೀ ಬೇಜಾರಾದ್ರಿಂದ ಪರ್ವಾಗಿಲ್ಲೆ ಅಂದ್ಯಾ ಅಥ್ವಾ.....? Anyways, Thanx. ಇನ್ನೂ ಚನಾಗ್ ಬರಿಯಕ್ಕೆ try ಮಾಡ್ತಿ ಮುಂದೆ.
ಸು,
ಸುರಿ ಸುರಿ ಸುರಿ ಸುರಿ ಸುರಿ ಮಳೆ... ಗರಿ ಗರಿ ಗರಿ ಗರಿ ಗರಿ ಹಪ್ಪಳ... ಇಷ್ಟವಾಯ್ತು.
ಒಳ್ಳೆಯ ಬರಹ. ವಿಷಯ. ಅಪರೂಪದ ದೃಷ್ಟಿಕೋನ. ಆದ್ರೆ ಸಂಯೋಜನೆ ಸ್ವಲ್ಪ ಏರು ಪೇರು ಅನ್ನಿಸ್ತಿದೆ. ಶಾಲೆ ಬಿಟ್ಟು ಗ್ಯಾರೇಜ್ ಸೇರುವ ಪರಿಸ್ಥಿತಿ ಬರುವ ಪುಟ್ಟನ ಮನಸ್ಥಿತಿಯನ್ನ ಸುಶ್ರುತನ ಮನಸ್ಥಿತಿಗೆ ಹೋಲಿಸಿದೆಯಾ ಅಂತ ಅನುಮಾನ. i mean. - ಆ ಪುಟ್ಟ ಹುಡುಗ, ತುಂಬ ತಿಳಿವಳಿಕಸ್ಥ ಮತ್ತು ಪ್ರೌಢನ ಹಾಗೆ ಯೋಚಿಸಿಬಿಟ್ಟಿದ್ದಾನೆ.
however, ನಿನ್ನ ಪ್ರಯತ್ನ ಎಂದಿನ ಹಾಗೆ superb. ಶಾಲೆಯಲ್ಲಿ ನಾಡಗೀತೆ ಹೇಳುವ ಚಿತ್ರಣ ತುಂಬ ಹಿಡಿಸಿತು. ಎಂದಿನಂತೆ ಚಿತ್ರರೂಪಕ..
"ಕಟ್ಟೆಯ ಮೇಲೆ ಕುಳುತು ಕುಳಿತೇ ಇವರ ಅಂಡು ಸವೆದಿದ್ದರೂ ರಸ್ತೆಯ ಮೇಲೆ ಹೋಗಿಬರುವ ಜನಗಳನ್ನು ಹೀಯಾಳಿಸುವುದು ಬಿಡುವುದಿಲ್ಲ." ಎಲೆಮರೆಯಲ್ಲಿ ಉಳಿವ ಸತ್ಯ. ತೆರೆದಿಟ್ಟಿದ್ದಕ್ಕೆ ಧನ್ಯವಾದ.
ನಾವು ಎಲ್ಲೋ ಓದಿದ ಬರಹಗಳ ಪ್ರಭಾವದಲ್ಲೆ ನಮ್ಮ ಬರಹವೂ ರೂಪುಗೊಳ್ಳುವುದು. ಅವೆಲ್ಲ ಏನೇ ಇದ್ದರೂ ನನಗೆ ನಿನ್ನ ಬರಹದಲ್ಲಿಯ ಶೈಲಿಗಿಂತ ಹೆಚ್ಚು ನಿನ್ನ ಭಾವಬಿಂದುಗಳು, ನೀನು ಗಮನಿಸಿದ ನೋಟಗಳು ತುಂಬ ಇಷ್ಟವಾಗುತ್ತವೆ.
ನಮ್ಮೂರಿನ ಮಳೆ-ಶಾಲೆ-ಹಾದಿ-ಬಸ್ಸುಗಳನ್ನ ಸಚಿತ್ರವಾಗಿ ತೆರೆದಿಟಿದ್ದು ಹಿಡಿಸಿತು. ಒಂದು ರೋಮಾಂಚಕ ಪ್ರೇಮಕವಿತೆಯಾಗಿ ಚಲಾವಣೆಯಾಗುತ್ತಿರುವ ಮಳೆಗಿಂತ ಹೆಚ್ಚು ಆಪ್ತವಾದ ಮಳೆಯಲ್ಲಿ ನೆಂದು ಖುಷಿಯಾಯ್ತು.
ಪ್ರೀತಿಯಿರಲಿ.
ಅಬ್ಬಾ...ಒಂದೊಂದು ಚಿತ್ರವೂ ರಸಘಟ್ಟಿ. ಒಂದನ್ನು ಪೂರ್ತಿಯಾಗಿ ಅನುಭವಿಸದೇ ಇನ್ನೊಂದಕ್ಕೆ ಹೋಗುವುದು ಅಸಾಧ್ಯ.
ಎದುರಿನವಳ ತಲೆಕೂದಲಲ್ಲಿ ಹೇನು ಹುಡುಕುವವಳು, ಅವಳಂಥವರೆಲ್ಲ ಕಟ್ಟಿಕೊಂಡು ಬರುತ್ತಿದ್ದ ಕೆಂಪು ರಿಬ್ಬನು, ಅದರಲ್ಲಿ ಅಲ್ಲೊಂದು ಇಲ್ಲೊಂದು ನೇತಾಡುತ್ತಿರುವ ಅಬ್ಬಲಿಗೆಯ ಬಾಡುಹೂಗಳು, ಇನ್ನೊಬ್ಬಳು ಸಿಂಬಳಸುರುಕಿ, ಬಿಡಿಸಿಟ್ಟ ಕೊಡೆಗಳು, ಅವುಗಳಿಂದ ಒಮ್ಮತದ ಧಾರೆಯಾಗಿ ಹರಿದು ಬರುವ ನೀರು, ಹದಿಮೂರು ಹದಿನೇಳ್ಲಿ ಎಷ್ಟು ಅಂತ ಕೇಳಿದಾಗ ೧೩ ಏಳ್ಲಿ ೯೧, ಕೂಡಿಸು ೧೩೦ ಅಂತ ಲೆಕ್ಕ ಹಾಕುವಾಗ ’ನಿಂಗೆ ಗೊತ್ತಿಲ್ಲ ಹೋಗು’ ಅಂತ ಬೈಸಿಕೊಂಡದ್ದು - ಅಯ್ಯೋ ಎಲ್ಲವನ್ನೂ ನೆನಪಿಸಿಬಿಟ್ರಿ.
ಆದರೆ ಸುಶ್ರುತ, ಇದು ಮುಖ್ಯ ಲೇಖನದ ಉದ್ದೇಶವನ್ನು ಮಾಸಿಹಾಕಿದೆಯೋ ಎಂದನಿಸುತ್ತದೆ. ಶಾಲೆಯ ಹಿಂದೆ ನಿಂತು ಸುಖಿಸುತ್ತಿದ್ದವನಿಗೆ ಗ್ಯಾರೇಜಿನ ಯಜಮಾನ ಕೇಬಲ್ಲಿನ ಬೀಡ್‍ನಿಂದ ತಲೆಗೆ ಕುಟ್ಟಿದ್ದು, ಎಂಜಿನ್ ಆಯಿಲ್ ಚೆಲ್ಲಿದಾಗ ಎದೆ ಡವಗುಟ್ಟಿ ಧಣಿ ಬರುವ ಮೊದಲೇ ವೇಸ್ಟ್‌ಬಟ್ಟೆಯಿಂದ ತಿಕ್ಕಿದರೂ, ಅವನಿಗೆ ಆಯಿಲ್ ಕಡಿಮೆ ಆದದ್ದು ಗೊತ್ತಾಗಿ ಮತ್ತಷ್ಟು ಹೊಡೆಸಿಕೊಂಡದ್ದು - ಇವೆಲ್ಲ ಮನಸ್ಸಿಗೆ ಬಂದು ಕಣ್ಣೀರು ತರಿಸದೇ?
ಅಮ್ಮ ಮಾಡಿದ ಗರಿಗರಿ ಹಪ್ಪಳವನ್ನು ತಿನ್ನಲೆಂದು, ನಗುತ್ತಾ ಮನೆಯೊಳಹೋಗುವ ಮನಃಸ್ಥಿತಿಯಿರಲು ಸಾಧ್ಯವೇ? ಅವಳ ಮಡಿಲಲ್ಲಿ ತಲೆಯಿಟ್ಟು ಜೋರಾಗಿ ಅತ್ತುಬಿಡಬೇಕೆಂದೆಣಿಸದೇ?
ಆದರೂ, ನೀವು ಕೊಟ್ಟಿರುವ ತೀವ್ರತೆ ತುಂಬಿರುವ ಚಿತ್ರಣಗಳು ಅತ್ಯಂತ ಆಪ್ಯಾಯಕರ; ಓದುತ್ತಿದ್ದರೆ ಕೂತಲ್ಲೇ ಕುಸಿಯುತ್ತಿದ್ದೆ. ಇಂತಹ ಉಡುಗೊರೆಗಾಗಿ ಧನ್ಯವಾದ ಮತ್ತು ಅಭಿನಂದನೆಗಳು.
@ ಸಿಂಧು
ನೀನು ಹೇಳಿದ್ದು ನಿಜ. ಬರೀಲಿಕ್ಕೆ ಶುರು ಮಾಡ್ಬೇಕಾದ್ರೆ ಇದ್ರಲ್ಲಿ ಒಬ್ಬ ಗ್ಯಾರೇಜ್ ಹುಡುಗನನ್ನ introduce ಮಾಡೋ ಆಲೋಚನೆ ಇರ್ಲಿಲ್ಲ. ಮೊನ್ನೇನೆ ಬರ್ದಿಟ್ಟಿದ್ದೆ first para. ಆದ್ರೆ ನಿನ್ನೆ ಆಫೀಸಿಗೆ ಬರ್ಬೇಕಾದ್ರೆ ಗ್ಯಾರೇಜ್ ಕಾಣ್ತಾ, ಹುಡುಗ್ರನ್ನ ನೋಡಿದ್ನಾ, ತಕ್ಷಣ ಏನೋ ಹೊಳೆದು... ಹೀಗೆಲ್ಲಾ ಆಯ್ತು.
ಕರೆಕ್ಟ್! ಹುಡುಗ ತುಂಬಾ ದೊಡ್ಡವರ ಥರ ಯೋಚಿಸ್ಬಿಟ್ಟಿದಾನೆ. ಯಡವಟ್ಟಾಗಿದೆ ಸ್ವಲ್ಪ.. :( ಇದೇ ಕಥೆಯನ್ನ ನಾನು ನಿರೂಪಿಸುವ ಹಾಗೆ ಮಾಡಿದ್ದರೆ ಸರಿಯಾಗಿಬಿಡುತ್ತಿತ್ತು ಅಲ್ವಾ? ಹೊಳೀಲಿಲ್ಲ ಮಂಕು ತಲೆಗೆ, ಪ್ಚ್! :(
ಆದರೂ ಮೆಚ್ಚಿಕೊಂಡದ್ದಕ್ಕೆ ಥ್ಯಾಂಕ್ಸ್.
@ yaatrika
ಪ್ರತಿಕ್ರಿಯೆಗೆ, ಮೆಚ್ಚುಗೆಗೆ ತುಂಬಾ ಧನ್ಯವಾದಗಳು.
ಬರೆದು ಪೋಸ್ಟ್ ಮಾಡಿಯಾದಮೇಲೆ ನಂಗೂ ಹಾಗೇ ಅನ್ನಿಸ್ತು. ಇಲ್ಲಿ ನಾನು ಮೂರು ವಿಷಯಗಳನ್ನ ಬಳಸಿಕೊಂಡಿದೀನಿ: ಮಳೆಗಾಲದ ಪ್ರಾರಂಭ, ಶಾಲೆಯ ಪ್ರಾರಂಭ ಮತ್ತೆ ಗ್ಯಾರೇಜ್ ಹುಡುಗನ ಕನಸು. I would have written three different articles with these topics. ಇಲ್ಲಿ mix ಮಾಡ್ಲಿಕ್ಕೆ ಹೋಗಿ ಯಾವ್ದಕ್ಕೂ ನ್ಯಾಯ ಒದಗಿಸಿದಂತೆ ಆಗ್ಲಿಲ್ಲ ಅನ್ಸುತ್ತೆ.
ನಾನು ತೋರಿಸಿದ ಚಿತ್ರಗಳು advertisement ನಲ್ಲಿ ಸ್ವಲ್ಪ ಸ್ವಲ್ಪವೇ ತುಣುಕನ್ನು ತೋರಿಸಿದಂತಾಯಿತೇನೋ? ಆದರೂ ಆ ಚಿತ್ರಗಳು ನಿಮ್ಮ ಮನಸಿನಲ್ಲಿ ಬೆಳೆದದ್ದು ಖುಷಿಯ ವಿಷಯ. ಅವುಗಳ ಮುಂದುವರಿಕೆಯನ್ನ ನೀವಿಲ್ಲಿ ಹಂಚಿಕೊಂಡದ್ದಕ್ಕೆ ತುಂಬಾ ಥ್ಯಾಂಕ್ಸ್ ...
ನಿರೂಪಣೆ ನೀರಸ ಅನಿಸ್ತಪ್ಪ! ಬರೀಲೆಬೇಕು ಅಂತ ಹಟಕ್ಕೆ ಬಿದ್ದು ಬರೆದ ಹಾಗಿದೆ. ಕೆಲ ಸಾಲುಗಳು ನಿಜಕ್ಕೂ ಚೆನ್ನಾಗಿವೆ.ಅದ್ರೆ ನಿಮ್ಮ ವಿವರಗಳನ್ನು ಧಾಖಲಿಸುವ ದಾಟಿ ಮಾತ್ರ ಸೂಪರ್ಬ್.
ನಿಮ್ಮ ಬರಹಗಳನ್ನು ಓದುವಾಗ ಸಿಗುವ ಅನುಭೂತಿ, ಒಂದೊಂದು ವಿವವರಗಳನ್ನೂ ಸೋಸಿಕೊಂಡು ಮನಸ್ಸಿನಲ್ಲಿ ಚಿತ್ರವನ್ನು ಕಟ್ಟಿಕೊಳ್ಳುವಾಗಿನ ಖುಷಿ, ಸಾಮಾನ್ಯವಾಗಿ ಕಣ್ಣೆದುರೇ ನಡೆದ ಘಟನೆಯ ಹಿಂದೆ ಇರುವ ಭಾವವನ್ನು ಅನುಭವಿಸುವ ಸಂಭ್ರಮ ನನ್ನನ್ನಾಕರ್ಷಿಸುತ್ತದೆ.
ಆದರೆ ಸಂಪೂರ್ಣವಾಗಿ ಓದಿಯಾದ ನಂತರ ಮನಸ್ಸಿನಲ್ಲಿ ಏನೂ ಉಳಿಯೋದಿಲ್ಲ. ವಿಮರ್ಶಿಸುವಷ್ಟು ದೊಡ್ಡವ ನಾನಲ್ಲ.
ಸುಶ್, ಓದ್ತಾ ಓದ್ತಾ ನಿಜಕ್ಕೂ ಕಳ್ದು ಹೋದೆ.
ನಿನ್ ಬರಹಗಳ ವಿಶೇಷತೆನೆ ಅದು. ಓದ್ತಾ ಇದ್ರೆ ಇದು ನಮ್ಮದೇ ಅನುಭವವೇನೋ ಅಥವಾ ನಾವೇ ಕಣ್ಣಾರೆ ನೋಡ್ತಾ ಇದ್ದೀವೇನೋ ಅನ್ನುವಂತೆ. ಶಾಲೆ, ಮಳೆಗಾಲ.. ಹ್ಮ್.. ಇನ್ನೆಲ್ಲಿ ಬರ್ಬೇಕು ಆ ಜೀವನ. ಬರೀ ನೆನಪುಗಳಷ್ಟೆ :( ಇರ್ಲಿ.
ಬರವಣಿಗೆ ವಿಷ್ಯಕ್ಕೆ ಬಂದ್ರೆ , ಒಂಥರಾ ನಿನ್ನ ಬರಹಗಳೆಲ್ಲ ಒಂದೇ ತರ ಅನ್ಸ್ತಾ ಇದೆ. ಸ್ವಲ್ಪ ಏಕತಾನತೆ ಕಾಣ್ತಾ ಇದೆ. ನಾನು ಜಾಸ್ತಿ ಓದ್ತೀನಲ್ಲಾ ಅದಕ್ಕೇನೋ ಗೊತ್ತಿಲ್ಲ. ಇರಲಿ. ಬೇರೆ ತರದ್ದೂ ಪ್ರಯತ್ನ ಮಾಡು.
ಸುಶ್ರುತ,
ಮಳೆಗಾಲದಲ್ಲಿ ಶಾಲೆಗೆ ಹೊಪುದು ಅಂದ್ರೆ ನಮ್ಗೆಲ್ಲ ಮಳೆಲಿ ನೆನಿಯಕ್ಕೆ ಇದ್ದ official ಲೈಸನ್ಸ್.
ಯಾಕೊ office ಗೆ ಬರೊಕಾದ್ರೆ ಕೊಡೆ ಹಿಡ್ದು ಶಾಲೆಗೆ ಹೊಪ ಮಕ್ಕಳ ನೋಡಿದ್ರೆ "ನಂಗ ಎನೋ ಕಳ್ಕಂಡಿದ್ಯ" ಅಂತ ಅನ್ಸುತ್ತು.
@ ಚಿರವಿರಹಿ
ಊಂ... ಹಂಗಂತೀರಾ? ಹಟಕ್ಕೇನು ಬಿದ್ದಿರ್ಲಿಲ್ಲ... ಆದ್ರೆ ಬರೀಬೇಕು ಅಂತ ಬರ್ದಿದ್ದು ಹೌದು... ಹಾಗಂತ ನನಗೇನೋ ಮೊದಲ ಓದಿನಲ್ಲಿ ಇಷ್ಟವಾಯಿತಪ್ಪ ಬರಹ.. ಹಾಗೇ ಪೋಸ್ಟ್ ಮಾಡಿಬಿಟ್ಟೆ..
@ ಸುಪ್ರೀತ್
ಥ್ಯಾಂಕ್ಸ್ ಸುಪ್ರೀತ್.
>>ಬರಹವನ್ನು ಸಂಪೂರ್ಣವಾಗಿ ಓದಿಯಾದಮೇಲೆ ಏನೂ ಉಳಿಯುವುದಿಲ್ಲ... ಹ್ಮ್... ಇನ್ನೂ ಅಷ್ಟು ಚಂದ ಬರೆಯುವಷ್ಟು ದೊಡ್ಡವನಾಗಿಲ್ಲ ನಾನೂ... :)
@ ವಿಕಾಸ್ ಹೆಗಡೆ
ಥ್ಯಾಂಕ್ಸ್ ವಿಕ್ಕಿ.
ನಿನ್ನ ಅನಿಸಿಕೆಯನ್ನ ನಾನೂ ಒಪ್ತೀನಿ. ನಂಗೂ ಹಾಗೇ ಅನ್ನಿಸಿದೆ... Have to work on it.. ಹೊಸ ಥರ ಬರೀಲಿಕ್ಕೆ, ಹೊಸದನ್ನು ಬರೀಲಿಕ್ಕೆ ಮುಂದೆ ಪ್ರಯತ್ನಿಸ್ತೀನಿ... ಎಷ್ಟಂದ್ರೂ 'ಮೌನಗಾಳ' ಅಲ್ವಾ? ತೀರಾ track ಬಿಟ್ಟು ಬರೀಲಿಕ್ಕೆ ಹೋಗ್ಬಾರ್ದು ಅಂತಾನೂ ಅಂದ್ಕೊಂಡಿದೀನಿ... ನೋಡೋಣ, ಏನಾಗತ್ತೆ ಅಂತ...
@ sanath
>> ಮಳೆಗಾಲದಲ್ಲಿ ಶಾಲೆಗೆ ಹೊಪುದು ಅಂದ್ರೆ ನಮ್ಗೆಲ್ಲ ಮಳೆಲಿ ನೆನಿಯಕ್ಕೆ ಇದ್ದ official ಲೈಸನ್ಸ್. -ಹಹ್ಹ, ಚನಾಗ್ ಹೇಳ್ದೆ!
ಹೌದು ಮಾರಾಯಾ, ಈಗ ಎಲ್ಲಾ ಮಿಸ್ಸಿಂಗು.. ಪ್ಚ್.. :(
Sushruth and Supreeth,
I don't agree with Supreeth that nothing is persistent in the memory after reading this article. For instance, the mechanic going back to the primary school during the prayer is one of the deepest expression of his dream!. On the other hand, he is going to the school not using the usual road, but through various short-cuts : Makes the dream and consciousness even more intense. These two are definitely touching points for me, at least.
The fact that, he failed in the exam NOT because of his irresponsibility, but just due to his circumstantial inability to meet the opportunity is quite interesting and touching too. This has the following implications. This kind of unpleasent situation may arise in everybody's life. This depicts the inevitability of the circumstances in which one HAS no other go but only to compromise with the situation. An inner depth of feeling/vision that can be drawn here is, a balance between the desire/dream and the reality is seen.
Finally, Sushrutha has got a "hands on experience" in 'feeling' the character. For instance, the mechanic had difficulty in eating his food with his greese-smelling hands!, and eventually he gets used to it. This is the quality of 'feeling'/inner vision or the ability to 'feel' [Sushrutha being NOT a mechanic himself] his greese-filled hands.
Again, this depicts a balance between what one desires and what one gets.
All in all, Sushrutha may represent a quality writer in Havyaka community being a 'witness' of the community as an undercurrent in his writings.
Regards
Dr.D.M.Sagar
Canada
ಸುಶ್,
ವಿಕಾಸನಿಗೆ ಉತ್ತರಿಸಿದ, "ತೀರಾ track ಬಿಟ್ಟು ಬರೀಲಿಕ್ಕೆ ಹೋಗ್ಬಾರ್ದು ಅಂತಾನೂ ಅಂದ್ಕೊಂಡಿದೀನಿ" ಅನ್ನೋದನ್ನ ನಾನು ಬಲವಾಗಿ ಪ್ರತಿಭಟಿಸುತ್ತೇನೆ!
"ಇದೇ ತರಹದ ಶೈಲಿ ಮತ್ತು ವಸ್ತುವನ್ನು "ಇಟ್ಟುಕೊಂಡು ಬರೆಯುತ್ತೇನೆ ಅಂತ ಕೂರಬೇಡ, ಬರಹ ಬಡವಾಗುವ ಸಾಧ್ಯತೆ ಇರುತ್ತದೆ. ಯಾಕೆ ನೀನು track ಬಿಟ್ಟು ಹೋಗಬಾರದು? ಹೋದರೇನು ತಪ್ಪು?!
ಈ ಬರಹದಲ್ಲೇ ನೋಡು, ನಿನ್ನ ಛಾಪು ಇಲ್ಲ! ಹೆಚ್ಚಿನವರಿಗೆ ಇಷ್ಟ ಆಗಿದೆ ಬರಹ, ಅದು ಬೇರೆ ಮಾತು.ನಂಗೂ ಇಷ್ಟವಾಯಿತು, ಆದರೆ ಎಂದಿನಷ್ಟಲ್ಲ. ಹೊಸ ಪ್ರಯೋಗಗಳನ್ನ ಮಾಡು, ಹಿಂದೆ ಒಂದೆರಡು ಬಾರಿ ಯತ್ನಿಸಿದ ಹಾಗೆ.
@ condumdots
Thank you very much for your comment. I really don't know to what extent I can meet your appreciations; but promise to write more quality-writings in future. Thanx.
@ ಶ್ರೀನಿಧಿ ಡಿ.ಎಸ್.
ಪ್ರತಿಭಟನೆಯನ್ನು ದಯವಿಟ್ಟು ಹಿಂದೆ ತೆಗೆದುಕೊಳ್ಳಬೇಕಾಗಿ ವಿನಂತಿ. :)
ನನಗಿರುವುದು ಎರಡೇ ಆಪ್ಶನ್ಸು: ಒಂದು, ನನ್ನನ್ನು ನಾನು ಸಮರ್ಥನೆ ಮಾಡಿಕೊಳ್ಳುವುದು;ಎರಡು, ನೀ ಹೇಳಿದ್ದೇ ಸರಿ ಅಂತ ಒಪ್ಪಿಕೊಳ್ಳುವುದು. ಎರಡೂ ಅಪಾಯಕಾರೀ ಹೇಳಿಕೆಗಳಾದ್ದರಿಂದ (!) ಸಧ್ಯದ ಮಟ್ಟಿಗೆ ನಿನ್ನ ಈ ಕಮೆಂಟಿಗೆ ಕಮೆಂಟಿನಲ್ಲೇ ಉತ್ತರಿಸಲಿಕ್ಕೆ ಆಗುವುದಿಲ್ಲ. ಚಾಟಿಗೆ ಸಿಕ್ಕಾಗಲೋ, ಮಾತಿಗೆ ಸಿಕ್ಕಾಗಲೋ ಉತ್ತರಿಸಿಯೇನು. ಅಥವಾ, ನಾನು ಉತ್ತರಿಸುವ ಮೊದಲೇ ನನ್ನ ಮುಂದಿನ ಬ್ಲಾಗ್ ಬರಹಗಳಲ್ಲಿ ನಿನಗೇ ಉತ್ತರ ಸಿಕ್ಕರೂ ಸಿಗಬಹುದು. ಕಾದು ನೋಡು (ನೋಡೋಣ!) :)
@condumdots
ನಾನು ನನ್ನ ಅಭಿಪ್ರಾಯ ಹಾಗೂ ಅನುಭವವನ್ನು ಮಾತ್ರ ದಾಖಲಿಸಿದ್ದೇನೆ. ನಿಮ್ಮ ಹಾಗೆ ಅನುಭವಿಸಲು ನನ್ನ ಗ್ರಹಿಕೆ ಸಾಲದೇನೋ ಎನ್ನುವ ಅಭಿಪ್ರಾಯ ನನ್ನದು...
ಬರವಣಿಗೆಯ ಶೈಲಿಯಲ್ಲಿ ಸಹಜತೆ ಎದ್ದು ತೋರುತ್ತಿದೆ.
ಆಗುತ್ತದೆ. ದಾರಿ ತಪ್ಪುವುದು, ಹೇಳಬೇಕೆಂದಿರುವುದೇ ಮರೆತು ಮತ್ತೇನೋ ಆಗುವುದು. ಮುಖಕ್ಕಿಂತ ಮೀಸಿಯೇ ದೊಡ್ಡದಾಗಿಬಿಡುವುದೂ ಉಂಟು. ಜಾಣತನವೆಂದರೆ, ದಾರಿ ತಪ್ಪಿದರೂ ಗುರಿ ತಲುಪುವುದು. ಅದನ್ನು ನಾನು ಕಾಣುತ್ತಿದ್ದೇನೆ ಇಲ್ಲಿ.
ಗುರಿ ಮುಖ್ಯವೋ ಇಲ್ಲ ದಾರಿಯೋ ಎನ್ನುವುದು ವಯಕ್ತಿಕ ರುಚಿಗೆ ಸಂಬಂಧಪಟ್ಟಿದ್ದು. ಇಲ್ಲ, ಚರ್ಚಾರ್ಹವೆಂದರೂ ಸರಿಯೆ!
I am wondering what is this "condumdots" I responded in my legal login name, however, the heading shows this funny name, condumdots!!.
Dr.D.M.Sagar
Canada
Super agi baradya .. Nangu nan shale nenpu banthu... RK Narayan quality iddo... Keep it up...
Sikkapatte mele idu.. Thank you so much for the wonderfull article..
Post a Comment