ನನ್ನ ರೂಂಮೇಟ್ ಹೇಳಿದ:
'ನಿನ್ನ ಬೆನ್ನಲ್ಲೊಂದು ಮಚ್ಚೆಯಿದೆ.'
ಇಷ್ಟರೊಳಗೆ ನಾನು ನನ್ನ ಬೆನ್ನನ್ನು ನೋಡಿಕೊಂಡೇ ಇಲ್ಲ ನೋಡಿ,
ಹಾಗಾಗಿ ಗೊತ್ತೇ ಇರಲಿಲ್ಲ ನನಗೆ ಇದು...
ಹಾಗಂತ ಅವನು ಹೇಳಿದ್ದನ್ನು ನಾನು ತಕ್ಷಣ ನಂಬಲಿಲ್ಲ;
'ಸಾಕ್ಷ್ಯ ಬೇಕು, ಪುರಾವೆ ಬೇಕು, ಹಾಗೆಲ್ಲ ಸುಲಭಕ್ಕೆ
ಏನನ್ನೂ ನಂಬುವುದಿಲ್ಲ ನಾನು' ಎಂದೆಲ್ಲ ದೊಡ್ಡದಾಗಿ ಹೇಳಿದೆ.
ನನ್ನನ್ನು ಒಂದು ನಿಲುವುಗನ್ನಡಿಯ ಮುಂದೆ ಅಂಗಿ ಬಿಚ್ಚಿ ನಿಲ್ಲಿಸಿದ ಅವನು
ಹಿಂದಿನಿಂದ ಮತ್ತೊಂದು ಕನ್ನಡಿ ಹಿಡಿದು ಏನೇನೋ ಕಸರತ್ತು ಮಾಡಿ
ನನಗೆ ನನ್ನ ಬೆನ್ನ ಮಚ್ಚೆಯನ್ನು ತೋರಿಸಲಿಕ್ಕೆ ಪ್ರಯತ್ನಿಸಿದ.
ಏನೇ ಮಾಡಿದರೂ ನನಗೆ ಕಾಣಿಸಲಿಲ್ಲ ಮಚ್ಚೆ.
ಬಗೆಬಗೆಯಾಗಿ ಅವನನ್ನು ಪ್ರಶ್ನಿಸಿ ಪೀಡಿಸಿದೆ:
'ಹೇಗಿದೆ ಅದು? ಎಷ್ಟು ಅಗಲಕ್ಕಿದೆ? ಬಣ್ಣ ಕಪ್ಪಾ? ಅಥವಾ ಜೇನು ಬಣ್ಣವಾ?
ಆಕಾರ ಯಾವುದು? ಎಲ್ಲಿದೆ ಮುಟ್ಟಿ ತೋರಿಸು..' ಇತ್ಯಾದಿ ಇತ್ಯಾದಿ.
'ತಾಳು ಮಾರಾಯ, ಒಂದು ಉಪಾಯ ಮಾಡ್ತೀನಿ' ಎಂದ ಅವನು
ತನ್ನ ಮೊಬೈಲ್ ಕೆಮೆರಾದಿಂದ ನನ್ನ ಬೆನ್ನಿನದೊಂದು ಫೋಟೋ ತೆಗೆದು
ನನ್ನ ಮುಂದೆ ಹಿಡಿದ.
ಹೇಳಿದೆನಲ್ಲ, ನಾನು ಹಾಗೆಲ್ಲಾ ಸುಲಭಕ್ಕೆ ಏನನ್ನೂ ನಂಬುವುದಿಲ್ಲ ಎಂದು,
ಹಾಗೆಯೇ ಇದನ್ನೂ ನಂಬಲಿಲ್ಲ..!
'ಇದು ನನ್ನ ಬೆನ್ನೇ ಅಲ್ಲ' ಎಂದು ವಾದಿಸಿದೆ.
ರೂಂಮೇಟ್ಗೆ ಸಿಟ್ಟು ಬಂತು:
'ನನ್ನ ಮೇಲೆ ಇಷ್ಟು ಅನುಮಾನವಾ ನಿಂಗೆ?
ನಾನ್ಯಾಕೆ ಸುಮ್ಮನೇ ಸುಳ್ಳು ಹೇಳಲಿ?
ಏನಾದರೂ ಮಾಡಿಕೊಂಡು ಸಾಯಿ' ಎಂದೆಲ್ಲಾ ಬೈದು
ಉಪ್ಪಿಟ್ಟಿಗೆ ಉಪ್ಪು ಜಾಸ್ತಿ ಹಾಕಿಟ್ಟು ಆಫೀಸಿಗೆ ಹೋಗಿಬಿಟ್ಟ.
'ಸರಿ ಬಿಡಪ್ಪ, ನಂಬ್ತೀನಿ' ಎಂದು
ರಾತ್ರಿ ಮನೆಗೆ ಮರಳಿದ ಅವನನ್ನು ಸಮಾಧಾನ ಮಾಡಿದೆ.
ಹಾಗಂತ ನಾನೇನು ನಂಬಲಿಲ್ಲ, ನಂಬಿದಂತೆ ನಟಿಸಿದೆ ಅಷ್ಟೆ!
ಇದೆಲ್ಲಾ ಆಗಿದ್ದು ಈಗ ಆರು ತಿಂಗಳ ಹಿಂದೆ.
ಮೊನ್ನೆ ಯಾರೋ ಯಾರ ಬಗ್ಗೆಯೋ 'ಅವನು ಹೇಗೆ?' ಅಂತ ಕೇಳಿದರು ನೋಡಿ,
ನನ್ನ ಬೆನ್ನ ಮೇಲಿನ ಮಚ್ಚೆಯ ಬಗ್ಗೆಯೇ ಗೊತ್ತಿಲ್ಲದ ನಾನು
ಇನ್ಯಾರದೋ ಬಗ್ಗೆ 'ಅವನು ಹೀಗೇ' ಅಂತ ಹೇಗೆ ಹೇಳಲಿ,
ಅಥವಾ ನಾನು ಹೇಳಿದರೂ ಅದನ್ನು ಅವರು ನಂಬುತ್ತಾರೆಯೇ,
ನಂಬದಿದ್ದರೆ ನನಗೆ ಖಂಡಿತ ಸಿಟ್ಟು ಬರುತ್ತದಲ್ಲವೇ,
-ಎಂದೆಲ್ಲಾ ಎನಿಸಿ, ಇದೆಲ್ಲಾ ನೆನಪಾಗಿ ಕಾಡಿ,
ಅನಿರ್ವಚನನಾಗಿ ನಿಂತುಬಿಟ್ಟೆ.
ಹೋಗಲಿ ಬಿಡಿ, ನೀವೂ ಇದನ್ನೆಲ್ಲ ನಂಬಲೇಬೇಕೆಂದೇನು ಇಲ್ಲ.
14 comments:
ಸು,
ಚೆನ್ನಾಗಿದೆ, ಇಷ್ಟವಾಯಿತು.
..ಅನಿರ್ವಚನನಾಗಿ ನಿಂತು ಬಿಟ್ಟಿದ್ದು
ಮತ್ತು
ನಾವು ನಂಬಲೇಬೇಕಿಲ್ಲದಿರುವುದು..
ಜಗತ್ತಿರುವ ರೀತಿಯನ್ನು ಸರಳವಾಗಿ ಬಿಡಿಸಿಟ್ಟಿದೀಯ ಸುಶ್, ಚೆನ್ನಾಗಿದೆ. ಒಂದು ಬೆರಳು ಬೇರೆಯವರಿಗೆ ತೋರಿಸುವಾಗ ಉಳಿದೈದು ಬೆರಳುಗಳು ನಮ್ಮ ಕಡೆಯಿರುತ್ತದೆಯೆಂಬುದು ನಾವೆಲ್ಲ ಮರೆಯುತ್ತೇವೆ...
"ಒಂದು ಬೆರಳು ಬೇರೆಯವರಿಗೆ ತೋರಿಸುವಾಗ ಉಳಿದೈದು ಬೆರಳುಗಳು...."-??????
ಜ್ಯೋತಿ, ಬಹುಶಃ ಶ್ರೀ ಅವರು ಕೈಯಲ್ಲಿ ಆರು ಬೆರಳುಗಳಿರುವ ಹೃತಿಕ್ ರೋಷನ್ನ ಬೀಸಣಿಗೆ (fan) ಇರಬೇಕು :)
ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ: http://enguru.blogspot.com
"ಅನಿರ್ವಚನನಾಗಿ ನಿಂತುಬಿಟ್ಟೆ"--
ವಚನ >< ನಿರ್ವಚನ >< ಅನಿರ್ವಚನ!?
ನೀವು 'ಅನಿರ್ವಚನ'ರಾದರೆ ನಮ್ಮ ಗತಿ?
oops..! ಸುಶ್ರುತನ ಮೌನಗಾಳದಲ್ಲಿ ನನ್ನ ತಲೆ ಸಿಕ್ಕಿಹಾಕಿಕೊಂಡು ಸಿಕ್ಕಿ ಕೈಗೆಷ್ಟು ಬೆರಳು ಆನ್ನೂದೇ ಲೆಕ್ಕ ತಪ್ಪಿತು, ಕ್ಷಮೆಯಿರಲಿ !
ಚೆನ್ನಾಗಿದೆ ಎಂದವರಿಗೆಲ್ಲರಿಗೂ ಥ್ಯಾಂಕ್ಸ್..
shree,
:) :) :) I cant help it.. :) ನಿಂಗೂ ಥ್ಯಾಂಕ್ಸ್ ಹೇಳ್ತಿದೀನಿ, ಇದ್ರಲ್ಲೇ ಸಮಾಧಾನ ಮಾಡ್ಕೋ. :)
suptadeepti,
ಊಹುಂ, ಅದು ಆ ಕ್ಷಣದಲ್ಲಿ ಆದದ್ದು ಅಷ್ಟೇ.. ಇನ್ನುಳಿದಂತೆಲ್ಲ ಓಕೇ.. ಭಯ ಪಡಬೇಕಿಲ್ಲ.. ಮೌನಿಯೂ ಸುಮಾರಿಗೆ ಮಾತಾಡ್ತಾನೆ.. :) :P
ಬೇಜಾರು ಮಾಡ್ಕೊಳ್ಬೇಡಿ... ನಾವಂತು ನಂಬ್ತೇವೆ... :)
@ gubbacchi
ಥ್ಯಾಂಕ್ಸ್ ಗುಬ್ಬಚ್ಚೀ.. At least ನೀವೊಬ್ರಾದ್ರೂ ನಂಬಿದ್ರಲ್ಲ.. ಅಥ್ವಾ ನಂಬಿದಂಗೆ ನಟಿಸಿದ್ದೋ? ನಂಗೇ ನಂಬ್ಕೆ ಬರ್ತಿಲ್ಲ...!!
ನಮ್ಮ ಬೆನ್ನ ಮೇಲಿನ ಮಚ್ಚೆಯನ್ನು ನಂಬದವರಿಗೆ ಬೇರೊಬ್ಬರ ಮುಖದ ಮೇಲಿನ ಮಸಿಯ ಮೇಲೆ ಅದೆಷ್ಟು ನಂಬಿಕೆ ಹುಟ್ಟಿಬಿಡುತ್ತದೆಯೋ.
ರೂಪಕಗಳ, ಸಂಕೇತಗಳ ಸಂಜ್ಞೆಗಳ ಭಾಷೆ ನನಗೀಗೀಗ ಅರ್ಥವಾಗುತ್ತಿದೆ. ಗದ್ಯಕ್ಕೂ ಕಾವ್ಯಕ್ಕೂ ಇರುವ ಅಂತರದ ಅರಿವಾಗುತ್ತಿದೆ...
@ ಸುಪ್ರೀತ್
ಥ್ಯಾಂಕ್ಸ್ ಸುಪ್ರೀತ್ ಪ್ರತಿಕ್ರಿಯೆಗೆ..
ಕಂಟೆಂಟ್ ಸರಿ ಇದೆ. ಆದ್ರೆ, ಅದನ್ನ ಕವಿತೆಯ ಥರಾ ಬರ್ದಿರೋದು, ಅದನ್ನ ಕವಿತೆ ಅಂಥಾ ಲೇಬಲ್ ಮಾಡಿರೋದು.. ಊಹ್ಞೂ..
@ ಹಿತೈಶಿ
ಪ್ರತಿಕ್ರಿಯೆಗೆ ಧನ್ಯವಾದ. ನಿಮ್ಮನಿಸಿಕೆ ಸರಿ ಇದ್ದೀತು. ಆದರೆ ನಾನು ಬರೆದ most of the poems (?) ಇದೇ ತರಹ ಇದೆ. ಅವು ಓದಲಿಕ್ಕೆ ಗದ್ಯದಂತಿರುತ್ವೆ, ಆದರೆ ಪೂರ್ತಿ ಗದ್ಯವಾಗಿರೊಲ್ಲ. ಪೂರ್ತಿ ಕವಿತೆಯೂ ಆಗಿರುವುದಿಲ್ಲ. ನನಗೆ ಪ್ರಾಸ-ಗೀಸ ಹುಡುಕಿ ಪೋಣಿಸಿ ಬರೆಯಲಿಕ್ಕೆ ಆಗುವುದಿಲ್ಲ. ಹೇಗೆ ಕಣ್ಮುಂದೆ ಬರುತ್ತದೋ ಹಾಗೆ ಬರೆದುಬಿಡುತ್ತೇನೆ. ಆದರೆ ಇಂಥವಕ್ಕೆ 'ಕವಿತೆ' ಅನ್ನೋ ಲೇಬಲ್ ಕೊಡದೆ ಬೇರೇನು ಕೊಡಬೇಕು ಎಂದು ಮಾತ್ರ ಅರ್ಥವಾಗುವುದಿಲ್ಲ... :(
Post a Comment