(ಹಕ್ಕಿ ಕತೆ ಮುಂದುವರೆದುದು...)
ಮರಿಹಕ್ಕಿಗಳ ಹಾರಾಟದ ಕಲಿಕೆ ಅವ್ಯಾಹತವಾಗಿ ನಡೆದಿತ್ತು. ಅಪ್ಪಹಕ್ಕಿ ಈಗ ಆಹಾರ ತರಲಿಕ್ಕೆ ಬೆಳಿಗ್ಗೆ ಸ್ವಲ್ಪ ತಡವಾಗಿ ಹೊರಡುತ್ತಿತ್ತು. ಕರೆಯಲು ಬಂದ ಗೆಳೆಯರನ್ನು 'ನೀವು ಮುಂದೆ ಹೋಗಿ, ನಾನು ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ' ಎಂದು ಹೇಳಿ ಮುಂದೆ ಕಳುಹಿಸಿ ತಾನು ಮಕ್ಕಳನ್ನು ಎಬ್ಬಿಸಿ ಹಾರಾಟ ಕಲಿಸುತ್ತಿತ್ತು. ಮರಿಗಳಿಗೆ ಅಷ್ಟು ಮುಂಚೆ ಏಳುವುದಕ್ಕೆ ಸೋಮಾರಿತನ... ಇನ್ನೂ ಮುಗಿಯದ ನಿದ್ದೆ... ಆದರೂ ಏಳುತ್ತಿದ್ದವು. ನನಗಂತೂ ಈ ಹಾರಾಟದ ಪ್ರಾಕ್ಟೀಸ್ ನೋಡುವುದೇ ಸಂಭ್ರಮವಾಗಿಬಿಟ್ಟಿತ್ತು. ಎಷ್ಟು ಖುಷಿಯಿಂದ ಅಪ್ಪಹಕ್ಕಿ ಹೇಳಿಕೊಡುತ್ತಿತ್ತು.. ಮರಿಹಕ್ಕಿಗಳು ಎಷ್ಟು ಶ್ರದ್ಧೆಯಿಂದ ಅದನ್ನು ಕಲಿಯುತ್ತಿದ್ದವು.. ಹಾರುವುದಕ್ಕೆ ಹೇಗೆ ದೇಹವನ್ನು ಅಣಿಗೊಳಿಸಿಕೊಳ್ಳಬೇಕು, ಒಮ್ಮೆಲೇ ಕಾಲಿನ ಮೇಲೆ ಭಾರ ಹಾಕಿ, ತಕ್ಷಣ ರೆಕ್ಕೆ ಬಿಚ್ಚಿ, ಪಟಪಟನೆ ಬಡಿದು ಮೇಲಕ್ಕೇರಬೇಕು... ಹಾಗೇ ಗಾಳಿಯಲ್ಲಿ ತೇಲುವಂತೆ ರೆಕ್ಕೆಯನ್ನು ಬಿಚ್ಚಿಟ್ಟುಕೊಂಡಿರಬೇಕು... ಕೆಳಗಿಳಿಯಬೇಕೆಂದರೆ ತಲೆಯನ್ನು ಬಗ್ಗಿಸಬೇಕು... ಮತ್ತೆ ಮೇಲೇರಬೇಕೆಂದರೆ ರೆಕ್ಕೆ ಬಡಿಯಬೇಕು... ಎಲ್ಲವನ್ನೂ ಹೇಳಿಕೊಡುತ್ತಿತ್ತು. ಮರಿಗಳಿಗೆ ಸ್ವಲ್ಪ ಹೊತ್ತು ರೆಕ್ಕೆ ಬಡಿದರೂ ಸಾಕು ಬಳಲಿ ಬಂದುಬಿಡುತ್ತಿತ್ತು. ಆಗ ಅಪ್ಪ 'ಈಗ ರೆಸ್ಟ್!' ಅಂತ ಘೋಷಿಸುವುದು. ಮರಿಗಳು ಒಳಗೆ ಹೋಗಿ ಅಮ್ಮ ಮಾಡಿದ್ದ ತಿಂಡಿ ತಿಂದು, ನೀರು ಕುಡಿದು ಮತ್ತೆ ಹೊರಬರುವುದು. ಮತ್ತೆ ಉತ್ಸಾಹದಿಂದ ರೆಕ್ಕೆ ಬಡಿಯುವುದು... ಮೇಲಿನಿಂದಲೇ ಆಹಾರವನ್ನು ಗುರ್ತಿಸುವುದು ಹೇಗೆ, ಬೇರೆ ಹಕ್ಕಿಗಳ ಕಣ್ಣಿಗೆ ಅದು ಬೀಳುವುದರೊಳಗೆ ಡೈವ್ ಹೊಡೆದು ಹೋಗಿ ಅದನ್ನು ಕಬಳಿಸುವುದು ಹೇಗೆ, ಕೊಕ್ಕಿನಲ್ಲಿ ಕಚ್ಚಿ ಹಿಡಿದುಕೊಂಡು ಗೂಡಿಗೆ ಮರಳುವುದು ಹೇಗೆ... ಎಲ್ಲವನ್ನೂ ಕಲಿಸಿಕೊಡುತ್ತಿತ್ತು ಅಪ್ಪಹಕ್ಕಿ. ಮರಿಗಳು ಬಲುಬೇಗನೆ ಎಲ್ಲವನ್ನೂ ಕಲಿತವು. ನಾನು ಗೆಳೆಯರಿಗೆ ಮೆಸೇಜಿಸಿದೆ:
ಮರಿಹಕ್ಕಿಗಳು ಈಗ ಸುಮಾರಿಗೆ ಹಾರಲು ಕಲಿತಿವೆ. ಹತ್ತಿರದ ಮರದ ರೆಂಬೆಗಳಿಗೆಲ್ಲ ಇವನ್ನು ತಮ್ಮ ಮೇಲೆ ಕೂರಿಸಿಕೊಂಡು ತೂಗುವ ಸಂಭ್ರಮ. ನಾನು ಮನೆಯಲ್ಲಿದ್ದರೆ ಇವು ಬಂದು ಕಿಟಕಿ ಸರಳ ಮೇಲೆ ಕೂತು ಪಟ್ಟಾಂಗ ಹೊಡೆಯುತ್ತವೆ..
'ಏನೋ ಮಾಡ್ತಿದೀಯಾ?' -ಕೇಳುತ್ತೆ ಮರಿ.
'ಕತೆ ಓದ್ತಿದೀನಿ'
'ನಮ್ಗೂ ಹೇಳು ಕತೆ..'
ಈ ಪುಟ್ಟ ಹಕ್ಕಿಗಳಿಗೆ ಯಾವ ಕತೆ ಹೇಳುವುದಪ್ಪಾ ಅಂತ ಯೋಚಿಸ್ತೇನೆ.. ಮತ್ತು ಶುರು ಮಾಡ್ತೇನೆ:
'ಒಂದು ಊರಲ್ಲಿ ಒಬ್ಬ ರಾಜ ಇದ್ನಂತೆ...'
ಏನು ನಿದ್ರೆ ಬರ್ತಿದೆಯಾ? ಹ್ಮ್, ಅಭ್ಯಾಸ ಬಲ! ಹಹ್ಹ! ಮಲಗಿ..
ನಮಗೆಲ್ಲಾ ಹಾಗೇ ಅಲ್ವಾ ಚಿಕ್ಕವರಿದ್ದಾಗ? ಅಜ್ಜನೋ ಅಜ್ಜಿಯೋ ಅಮ್ಮನೋ ಅತ್ತೆಯೋ ಕತೆ ಶುರು ಮಾಡುತ್ತಿದ್ದರು.. ಆ ಕತೆಗಳೆಲ್ಲ ಶುರುವಾಗುತ್ತಿದ್ದುದು 'ಒಂದೂರಲ್ಲಿ ಒಬ್ಬ ರಾಜ ಇದ್ನಂತೆ...' ಅಂತಲೇ! ಸ್ವಲ್ಪ ಹೊತ್ತು ಕೇಳುತ್ತಿದ್ದಂತೆಯೇ ನಿದ್ರೆ ಬರುತ್ತಿತ್ತು.. ಮರುದಿನ ಮತ್ತೆ ಅದೇ ಕತೆ ಮುಂದುವರೆಯುತ್ತಿತ್ತು.. ಅದೊಂಥರ ಎಂದೂ ಮುಗಿಯದ ಕತೆ. ಅದಕ್ಕೇ ನೋಡಿ, ಅದು ಎಂದೂ ಮರೆಯದ ಕತೆ..!
ಈ ಮರಿಹಕ್ಕಿಗಳಲ್ಲಿ ಒಂದು ಮರಿ ಭಾರೀ ಜೋರಿದೆ. 'ಚುಂಚು' ಅಂತ ಅದರ ಹೆಸರು. ಇವತ್ತು ಅದು ಕೇಳ್ತು: 'ನಿಂಗೆ ಲವ್ ಮಾಡಿ ಗೊತ್ತಿದ್ಯೇನೋ?' ಅಂತ! ನಾನು ಫುಲ್ ಶಾಕು! ಇಷ್ಟು ಚಿಕ್ಕ ಮರಿ ಆಡೋ ಮಾತಾ ಇದು? 'ಏಯ್ ಲವ್ ಅಂದ್ರೆ ಏನು ಅಂತನಾದ್ರೂ ಗೊತ್ತಿದ್ಯೇನೇ ನಿಂಗೆ?' ಗದರಿಸಿದೆ ನಾನು. ಅದಕ್ಕಿ ಮರಿ ಅಂತು: 'ಆಗ್ಲೆ ಪಾರ್ಕಿಗೆ ಹೋಗಿದ್ನಲ್ಲ, ಅಲ್ಲಿ ಒಂದು ಹುಡುಗ-ಹುಡುಗಿ ಲವ್ ಮಾಡೋದು ನೋಡ್ದೆ.. ಕೈ ಕೈ ಹಿಡ್ಕೊಂಡು.. ಅದೇನು ಮಾತಾಡ್ತಿದ್ರು ಅಂತೀಯಾ? ಬರೀ ಚ್ವೀತ್ ನಥಿಂಗ್ಸ್! ಸಕ್ಕತ್ತಾಗಿತ್ತು! ನೀನು ಯಾರನ್ನಾದ್ರೂ ಲವ್ ಮಾಡೋ.. ಮಜಾ ಇರೊತ್ತೆ..! ನಮ್ಗೂ ಅತ್ಗೆ ಜೊತೆ ಆಟ ಆಡ್ಬಹುದು..!' ನನಗೆ ನಗು ಬಂತು.. ಜತೆಗೇ ಕನಸ ತೇರು ತೇಲಿ ಬಂತು.. 'ಆಕೆ' ಕುಳಿತಿದ್ದಳು ರಥದಲ್ಲಿ..
ನಾನು ಈ ಮೆಸೇಜಿಂಗನ್ನು ಶುರು ಮಾಡಿದ್ದಾಗ ಎಲ್ಲರೂ ಇದನ್ನು ನಾನು ನನ್ನ ಕನಸ ತೇರ ಸಾರಥಿಗಾಗಿಯೇ ಸೃಷ್ಟಿಸುತ್ತಿರುವುದು ಎಂದು ತಿಳಿದಿದ್ದರು. ಕೆಲವರು ಫೋನಿಸಿ ಕೇಳಿದರು ಕೂಡ: 'ಏನೋ ಯಾವ್ದೋ ಹುಡುಗಿಗೆ ಬಲೆ ಬೀಸ್ತಿರೋ ಹಾಗಿದೆ?' ಅಂತ! 'ಏನ್ಸಾರ್ ಮಾಡೋದು? ಏನಾದ್ರೂ ಮಾಡ್ಬೇಕಲ್ಲ... ಲೈಫು..!!' ಅಂತಂದು ಹಾರಿಕೆಯ ಉತ್ತರ ಕೊಟ್ಟು ಸುಮ್ಮನಾಗಿಸಿದ್ದೆ. ನಾನು ಯಾವ ಉದ್ಧೇಶ ಇಟ್ಟುಕೊಂಡು ಶುರುಮಾಡಿದ್ದೆನೋ, ಈಗಂತೂ ಅದು ಅನೇಕ ಮನಸುಗಳ ನಡುವೆ ಹರಿದಾಡುವ, ಯಾರದೋ ಭಾವಕೋಶಕ್ಕೆ ಲಗ್ಗೆಯಿಡುವ, ಮತ್ಯಾರದೋ ಮನದ ಸುನೀತ ತಂತಿಯನ್ನು ಮೀಟುವ ಬೆರಳ ತುದಿಯ ಲಹರಿಯಾಗಿಬಿಟ್ಟಿತ್ತು.
ನನಗೆ ಈ ಮರಿಗಳನ್ನು ಮತ್ತಷ್ಟು ಪರಿಚಯ ಮಾಡಿಸಬೇಕು ಅನ್ನಿಸಿತು: ನಿಮಗೆ ಈ ಮರಿಗಳ ಬಗ್ಗೆ ಸ್ವಲ್ಪ ಹೇಳ್ಬೇಕು. ಚುಂಚುವಿನ ಅಕ್ಕನ ಹೆಸರು ಮಿಂಚು. ತಮ್ಮ ಡಿಂಚು. ಅಕ್ಕ ತುಂಬಾ ಗಂಭೀರೆ. ತಮ್ಮ ನನ್ನಂತೆಯೇ ಮೌನಿ. ಈ ಮಧ್ಯದ ಚುಂಚು ಮಾತ್ರ ಸಿಕ್ಕಾಪಟ್ಟೆ ತರ್ಲೆ! ತಲೆ ಚಿಟ್ ಹಿಡೀಬೇಕು, ಅಷ್ಟು ಮಾತಾಡತ್ತೆ. ಆಗ್ಲೆ ಸಂಜೆ ಮಳೆ ಬರ್ತಿತ್ತಲ್ಲ, ತರಕಾರಿ ತರಲಿಕ್ಕೇಂತ ನಾನು ಕೊಡೆ ಹಿಡಿದು ಹೊರಟೆ. ಗೂಡಿನಿಂದ ಪುರ್ರನೆ ಹಾರಿಬಂದ ಇದು ನನ್ನ ಹೆಗಲ ಮೇಲೆ ಕೂರ್ತು. ದಾರೀಲಿ ಹುಡುಗೀರು ಕಂಡ್ರೆ ಸಾಕು, 'ಏಯ್ ಇವ್ಳಿಗೆ ಕಾಳು ಹಾಕೋ' ಅನ್ನೋದು ನನ್ ಹತ್ರ! (ಈ ಮೇಸೇಜು ಓದಿ ಕೆಲ ಹುಡುಗಿಯರು ತಮ್ಮನ್ನು ಚುಂಚುವಿಗೆ ಹೋಲಿಸಿಕೊಂಡರು!)
ಚುಂಚು ಹೀಗೆ ತರಲೆ ಮಾಡಿದಾಗಲೆಲ್ಲ ನಾನು ಬೈದು ಸುಮ್ಮನಾಗಿಸುತ್ತಿದ್ದೆ. ಆದರೆ ಈ ಮಾತು-ಕತೆಗಳಿಂದಾಗಿ ಚುಂಚು ನಂಗೆ ತುಂಬಾ ಆತ್ಮೀಯವಾಗಿಬಿಟ್ಟಿತ್ತು. ಪುಟ್ಟ ತಂಗಿಯಂತೆ ಕಾಣಿಸುತ್ತಿತ್ತು. ಏನಾದರೂ ಹಣ್ಣು ತಂದರೆ ತಪ್ಪದೇ ಅದಕ್ಕೆ ಒಂದು ಪಾಲು ಎಟ್ಟಿರುತ್ತಿದ್ದೆ. ಶನಿವಾರ, ಭಾನುವಾರಗಳ ಸಂಜೆ ವಿಹಾರಕ್ಕೆ ಚುಂಚುವನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದೆ:
'ಚುಂಚೂ ಚುಂಚೂ' -ಗೂಡಿನ ಕೆಳಗೆ ನಿಂತು ಕರೆದೆ ನಾನು. 'ಯಾರೂ?' ಎನ್ನುತ್ತಾ ಬಸುರಿ ಹಕ್ಕಿ ಗೂಡಿನಿಂದ ಹೊರಬಂತು. 'ಚುಂಚು ಇಲ್ವಾ?' -ಕೇಳಿದೆ. 'ಡ್ರೆಸ್ ಮಾಡ್ಕೊಳ್ತಾ ಇದಾಳೆ.. ತಾಳಿ, ಕರೀತೀನಿ.. ಏಯ್ ಚುಂಚೂ.. ಅಣ್ಣ ಕರೀತಿದಾನೆ ನೋಡೇ..' -ಅಮ್ಮನ ಕರೆಗೆ 'ಬಂದೇಮ್ಮಾ..' ಎನ್ನುತ್ತಾ ಚುಂಚು ಹೊರಬಂತು.
ಜುಟ್ಟಿಗೆ ರಿಬ್ಬನ್, ಹಣೆಯ ಮೇಲೊಂದು ಬಿಂದಿ, ಕಣ್ ಹುಬ್ಬಿಗೆ ಕಪ್ಪು, ಕೊಕ್ಕಿಗೆ ಲಿಪ್ಸ್ಟಿಕ್ -ಸಿಂಗರಿತ ಪುಟ್ಟ ಮರಿ 'ಏನೋ ಚುಚ್ಚುತಾ..?' ಎನ್ನುತ್ತಾ ಗೂಡಿನಿಂದ ಹೊರಬಂತು. 'ಚಂದ ಕಾಣ್ತಿದೀಯ!' ಎಂದೆ. ಮುಖ ಕೆಂಪೇರಿತು. 'ಥ್ಯಾಂಕ್ಸ್' -ಉಲಿ. 'ಬಾ ಸುತ್ತಾಡಿ ಬರೋಣ' -ನಾನು ಕರೆದು ಮುಗಿಯುವುದರ ಒಳಗೇ ಹೆಗಲ ಮೇಲಿತ್ತು ಚುಂಚು.
ಕೆಂಪು ಸಂಜೆ, ಬಿಸಿ ಗಾಳಿ, ಮುಳುಗೋ ಸೂರ್ಯ, ಚುಂಚು ಮಾತು, ನನ್ನ ಮೌನ...
...ಹಕ್ಕಿ ಕತೆ ಮುಂದುವರೆಯುತ್ತದೆ...!
3 comments:
ಕೆಂಪು ಸಂಜೆ, ಬಿಸಿ ಗಾಳಿ, ಮುಳುಗೋ ಸೂರ್ಯ, ಚುಂಚು ಮಾತು, ನನ್ನ ಮೌನ... ನಿಮ್ಮ ಚ್ವೀತ್ ಚ್ವೀತ್ ಬರಹ, ನನಗೆ ಕಚಕುಳಿ, ಬೆಚ್ಚನೆಯಪ್ಪುಗೆ, ಹಾಲುಗನಸು... ಆಹಾ...ಹಕ್ಕಿಗೂಡು-living in a perfect world. :)
ಹಕ್ಕಿ ಕತೆ ಮುಂದುವರಿಯಲಿ.
ಚೆಂಚು ಅಂತ "ಬಾಲಮಂಗಳ"ದಲ್ಲಿ ಒಂದು ಹಕ್ಕಿ ಬರುತ್ತದೆ. ನಿಮ್ಹಕ್ಕಿ ಚಂಚು :) ಚೆಂದ ಉಂಟು ಕಲ್ಪನೆ...ಹೀಗೆ ಮುಂದುವರಿಯಲಿ.....
@ yaatrika
ಚಂದದ ಪ್ರತಿಕ್ರಿಯೆಗೆ ಥ್ಯಾಂಕ್ಸ್..
ಹಾಂ, ಹಕ್ಕಿ ಕತೆ ಮುಂ.... ..
@ gubbacchi
ಬಾಲಮಂಗಳ ಓದದೇ ಸುಮಾರು ವರ್ಷ ಆಗ್ಹೋಯ್ತು ಮಾರಾಯ್ರೇ.. ನಾನು ಓದ್ತಿರ್ಬೇಕಾದ್ರೆ 'ಕಿಂಗಿಣಿ' ಅಂತ ಒಂದು ಹಕ್ಕಿ ಇತ್ತು..
Post a Comment