Tuesday, November 06, 2007

ದೀಪವಾಗಬೇಕಿದೆ...

ಜನಿಯ ನೆರವಿಗೆ ಅದೆಷ್ಟೊಂದು ಚಿಕ್ಕೆಗಳು..! ದಿಟ್ಟಿ ಹಾಯಿಸಿದಷ್ಟೂ ವಿಸ್ತರಿಸಿರುವ, ದಿಗಂತದಂತೆ ಕಂಡರೂ ಅಂತ್ಯವಲ್ಲದ ಈ ಅಗಾಧ ನಭದ ಅಧಿಪತಿ ಚಂದಿರನ ಒಡ್ಡೋಲಗದಲ್ಲಿ ಅದೆಷ್ಟು ಕೋಟಿ ಕೋಟಿ ತಾರೆಗಳ ಒಟ್ಟಿಲು..! ಸುತ್ತ ಕವಿದಿರುವ ತಿಮಿರದ ಕಣಗಳ ಅಪ್ಪುಗೆಗೆ ಸಿಲುಕಿ ಕುಳಿತಿರುವ ನನ್ನ ನೆರವಿಗೆ ಬರುವ ಯಾವ ಕರುಣೆಯನ್ನೂ ತೋರದೇ ಅಲ್ಲಲ್ಲೇ ತಮ್ಮ ತಮ್ಮ ಗ್ರಹಗಳಿಗೆ ಬೆಳಕು ನೀಡುತ್ತಾ ನಿಶ್ಚಿಂತೆಯಿಂದಿರುವ ನಕ್ಷತ್ರಗಳು..! ಚಂದ ತುಂಬಿದ ಚಂದ್ರಮ, ಚಿಕ್ಕೆ ತುಂಬಿದ ಗಗನ, ಕನಸು ತುಂಬಿದ ನಿದ್ರೆ ...ಎಂದೇನೇನೋ ಸುಳ್ಳೇ ಭರವಸೆಗಳನಿತ್ತು ಸಂಜೆಯಾಗುತ್ತಿದ್ದಂತೆಯೇ ಮತ್ಯಾವುದೋ ದೇಶದವರಿಗೆ ಬೆಳಗು ಮಾಡಲು, ಅಲ್ಲಿಯ ಹಕ್ಕಿಗಳನ್ನು ಗೂಡಿನಿಂದ ಪುರ್ರನೆ ಹಾರಿಸಲು ಓಡಿ ಹೋದ ಸೂರ್ಯ... ಬೇಗ ಬಾ ಭೂಪಾ, ಈ ಅಂಧಃಕಾರವ ಕಳೆ...

ಹತ್ತಿರದಲ್ಲೊಂದು ಹಣತೆ... ಈ ನಿಶೆಯ ಮೌನದಲ್ಲಿ ಏನೋ ಗೊಣಗುತ್ತಿದೆಯಲ್ಲ.. ಏನದು..? ನಾನು ಕಿವಿಗೊಟ್ಟು ಕೇಳುತ್ತೇನೆ: ಸೂರ್ಯನಿಗಾಗಿ ಕಾಯಬೇಡ. ಅವನ ಬೆಳಕನ್ನೇ ಪ್ರತಿಫಲಿಸುತ್ತಾ, ನಾಲ್ಕು ದಿನ ನಿನ್ನ ಮನಸೂರೆಗೊಳ್ಳುವಂತೆ ಕಂಗೊಳಿಸುತ್ತಾ, ಕೊನೆಗೆ ಅಮಾವಾಸ್ಯೆಯ ನೆಪವೊಡ್ಡಿ ಮಾಯವಾಗಿಬಿಡುವ ಚಂದ್ರನನ್ನು ನಂಬಬೇಡ. ಮಿನುಗು ತಾರೆಗಳ ಕಣ್ಮಿಣುಕನ್ನು ದೃಷ್ಟಿಸುತ್ತಾ ಏನನ್ನೋ ಹುಡುಕುತ್ತಾ ಹಂಬಲಿಸಬೇಡ. ಬಾ, ನನ್ನೊಡಲಿಗೆ ಒಂದೇ ಒಂದು ಮಿಳ್ಳೆ ಎಣ್ಣೆಯೆರೆ.. ಬತ್ತಿಯ ತುದಿಗೆ ಬೆಂಕಿ ಸೋಕಿಸು ಸಾಕು.. ನಿನ್ನ ಸುತ್ತ ಕವಿದಿರುವ ಈ ತಮಕ್ಕೆ ನಾನು ಬುದ್ಧಿ ಹೇಳುತ್ತೇನೆ.. ರಾತ್ರಿಯಿಡೀ ನಿನ್ನ ಮನೆಯನ್ನು ಬೆಳಗುತ್ತೇನೆ.. ದಾರಿ ತೋರುತ್ತೇನೆ.. ನಾಳೆಯೆಂಬ ಹೊಸ ಜಗತ್ತಿಗೆ ಕರೆದೊಯ್ಯುತ್ತೇನೆ...

ದೀಪದ ಸ್ಪೂರ್ತಿಭರಿತ ಮಾತುಗಳು ನನ್ನಲ್ಲೊಂದು ಅಂತಃಶಕ್ತಿಯನ್ನು ತುಂಬುತ್ತವೆ... ನಾನು ಎದ್ದುಹೋಗಿ ಎಣ್ಣೆ ತಂದೆರೆದು, ಬತ್ತಿಯ ಕುಡಿಗೆ ಬೆಂಕಿ ತಾಕಿಸುತ್ತೇನೆ.. ಮಂದ್ರದ ಸ್ವರದಂತೆ ಕೋಣೆಯನ್ನೆಲ್ಲಾ ತುಂಬಿಕೊಳ್ಳುತ್ತದೆ ಬೆಳಕು... ನನ್ನ ಕಣ್ಗಳಲ್ಲಿ ಉಲ್ಲಾಸದ ಲಾಸ್ಯ ಮಿನುಗಿದ್ದು ದೀಪದ ಎಣ್ಣೆಯಲ್ಲಿ ಪ್ರತಿಫಲಿಸುತ್ತದೆ... ಧನ್ಯತಾ ಭಾವದಿಂದ ದೀಪದೆಡೆಗೊಂದು ಮುಗುಳ್ನಗೆಯನ್ನು ಚೆಲ್ಲುತ್ತೇನೆ.

ಥಟ್ಟನೆ ಹಣತೆಯ ಬುಡ ಕಣ್ಣಿಗೆ ಬಿದ್ದರೆ ಅಲ್ಲಿ ಕತ್ತಲೆ! "ಏನಿದು ದೀಪಾ, ನಿನ್ನ ಬುಡದಲ್ಲೇ ಕತ್ತಲೆ?!" ನಾನು ಆತಂಕಗೊಂಡು ಕೇಳುತ್ತೇನೆ. ದೀಪದ್ದು ನಿರುಮ್ಮಳ ಉತ್ತರ: "ಹ್ಮ್..! ಅದರ ಬಗ್ಗೆ ನನಗೆ ಕಾಳಜಿಯಿಲ್ಲ. ನನ್ನ ತಳದ ತಮದ ಬಗ್ಗೆ ಚಿಂತಿಸುತ್ತಾ ಕೂರುವುದು ನನ್ನ ಕೆಲಸವಲ್ಲ. ಒಡಲಿನ ಎಣ್ಣೆ ಬತ್ತುವವರೆಗೆ, ಬತ್ತಿ ಸುಟ್ಟು ಭಸ್ಮವಾಗುವವರೆಗೆ ಪರರ ಮನೆಯನ್ನು ಬೆಳಗುವುದಷ್ಟೇ ನನ್ನ ಕರ್ತವ್ಯ... ನನ್ನ ಬೆಳಕಿನ ದೆಸೆಯಿಂದ ಯಾರೋ ನಲಿದಾಡುವುದನ್ನು ನೋಡುವುದೇ ನನ್ನ ಜ್ವಾಲೆಯ ಬಳುಕಿಗೆ ಹಿತದ ಆಮ್ಲಜನಕದ ಸೇಚನ... ಅಷ್ಟು ಸಾಕು ನನಗೆ... ನನ್ನ ಬಗ್ಗೆ ನಿನಗೆ ಚಿಂತೆ ಬೇಡ. ಹೋಗು, ನಿನ್ನ ಕೆಲಸ ಮಾಡಿಕೋ."

ಅಲ್ಲಿಂದ ಕದಲದೇ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ: ಸದಾ ನನಗೆ ಯಾರಾದರೂ ಬೆಳಕು ನೀಡುತ್ತಿರಬೇಕು. ಹಗಲಿಡೀ ಬೆಳಕಾಗಿದ್ದರೂ ಸಂಜೆ ಹೊರಟು ನಿಂತಾಗ ಸೂರ್ಯನೆಡೆಗೆ ಕೋಪ.. ಆಗಾಗ ಮರೆಯಾಗುತ್ತಾನೆಂದು ಚಂದ್ರನ ಮೇಲೆ ಆರೋಪ.. ಬೆಳಕನ್ನೇ ಕೊಡುವುದಿಲ್ಲವೆಂದು ನಕ್ಷತ್ರಗಳ ಬಗ್ಗೆ ಅಸಮಾಧಾನ.. ಎಲ್ಲಾ ಮುಗಿದಮೇಲೆ ಹಣತೆಯೆದುರು ನನ್ನ ದುಮ್ಮಾನ.. ಹೌದೂ, ನಾನ್ಯಾರಿಗೆ ಬೆಳಕಾಗಿದ್ದೇನೆ?

ಎಷ್ಟೊತ್ತಿಗೂ ನನ್ನ ಬಗ್ಗೆಯೇ ಚಿಂತೆ ನನಗೆ. ಎಲ್ಲಿ ಯಾರು ಅಳುತ್ತಿದ್ದರೂ ನನ್ನ ಮನೆಯಲ್ಲಿ ನಗುವಿರಬೇಕು. ಎಲ್ಲಿ ಯಾರು ಹಸಿವಿನಿಂದ ಸಾಯುತ್ತಿದ್ದರೂ ನನ್ನ ಬಾಳೆಯಲ್ಲಿ ಮೃಷ್ಟಾನ್ನವಿರಬೇಕು. ಎಲ್ಲಿ ಚಂಡಮಾರುತ ಬೀಸಿ ಎಲ್ಲಾ ನಿರಾಶ್ರಿತರಾಗಿದ್ದರೂ ನನ್ನ ಮನೆಯ ಫ್ಯಾನು ತಿರುಗುತ್ತಿರಬೇಕು. ಎಲ್ಲಿ ಯಾರು ಸತ್ತು ಉಳಿದವರ ಬದುಕು ಅಂಧಃಕಾರದಲ್ಲಿ ನರಳುತ್ತಿದ್ದರೂ ನನ್ನ ಸುತ್ತ ಬೆಳಕಿರಬೇಕು... ನಾನು ನನ್ನ ಸ್ವಾರ್ಥ ಬಿಟ್ಟು ಈ ದೀಪದಂತೆ ಬೇರೆ ಯಾರಿಗಾಗಿಯೋ ಬೆಳಗುವುದು ಯಾವಾಗ? ಜೋಪಡಿಯ ಮಕ್ಕಳೆಯಲ್ಲ ಕತ್ತಲ ಬಾಗಿಲಲ್ಲಿ ನಿಂತು ಮಿಕಮಿಕನೆ ನೋಡುತ್ತಿರುವಾಗ ನಾನು ಸುರುಸುರುಬತ್ತಿಯಿಂದ ಬಿರುಸಿನಕುಡಿಕೆಗೆ ಬೆಂಕಿ ತಾಗಿಸಿ ಗೆಳೆಯರೊಟ್ಟಿಗೆ ಕೇಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ?

ದೀಪಾವಳಿಯ ಎದುರಿನಲ್ಲಿ ಒಂದು ಹೊಸ ಸಂಕಲ್ಪ ಮಾಡಬೇಕಿದೆ. ಆರಿಹೋದ ಮನೆಗಳ ದೀಪಗಳನ್ನು ಬೆಳಗಬೇಕಿದೆ. ಕತ್ತಲೆ ತುಂಬಿದ್ದಲ್ಲಿ ಹಣತೆ ಒಯ್ದು ಹಚ್ಚಿಡಬೇಕಿದೆ. ಯಾರದೋ ಬಾಳಿನ ಕತ್ತಲೆಗೆ ನಾನೇ ದೀಪವಾಗುವ ಪ್ರಯತ್ನ ಮಾಡಬೇಕಿದೆ. ಕನಿಷ್ಟ, ಆ ಜೋಪಡಿಯ ಮಗುವಿನ ಕೈಗೊಂದು ಸುರುಸುರುಬತ್ತಿ ಕೊಟ್ಟು ಅದರ ಕಂಗಳಲ್ಲಾಗುವ ಭೀತ-ಸಂಭ್ರಮದ ನಕ್ಷತ್ರಪಾತವನ್ನು ಕತ್ತಲಲ್ಲಿ ನಿಂತು ನೋಡುತ್ತಾ ನಾನು ಕಳೆದುಹೋಗಬೇಕಿದೆ...

ನಿಮಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಷಯಗಳು...

12 comments:

ಸಿಂಧು sindhu said...

ಪ್ರೀತಿಯ ಸುಶ್ರುತ,

ಇಷ್ಟೊಳ್ಳೆಯ ಶುಭಾಶಯವನ್ನ ಆತ್ಮೀಯರಿಗೆ ಬೀರುವ ಬೆಳಕು ಎಣ್ಣೆ ನಿನ್ನಲ್ಲಿದೆ. ಇದು ಬೆಳಗಿದಷ್ಟೂ ತೀರದ ಎಣ್ಣೆ,ಮುಗಿಯದ ಬತ್ತಿ, ಆರದ ಬೆಳಕು.
ಈ ಬೆಳಕಿನ ದಾರಿಯಲ್ಲಿ ಮುಂದೆ ಸಾಗು. ಅಲ್ಲಲ್ಲಿ ಕತ್ತಲ ತಿರುವಿನಲ್ಲಿ ಕಣ್ಣ ಬೆಳಕನ್ನೇ ನೆಚ್ಚಿ ಕೂತ ಜೀವಗಳ ಕೆನ್ನೆಗೊಂದು ಮುತ್ತಿತ್ತು,ಬೆರಳ ಹಿಡಿ.. ಜೊತೆಗೆ ಬಂದಾರು.
ಒಳ್ಳೆಯದಾಗಲಿ.

ಕತ್ತಲೆಯ ಗುಡಿಸುವ (ಜಿ.ಎಸ್.ಎಸ್ ಅವರ) ದಿವ್ಯ ದೀಪಾವಳಿಯ ಶುಭ ಸಮಯದಲ್ಲಿ, ನಿನಗೆ ನನ್ನ ಪ್ರೀತಿ ಮತ್ತು ಶುಭಾಶಯಗಳು.

ಸಿಂಧು

Harsha Bhat said...

ಸುಶ್.....

ತು೦ಬ ಆತ್ಮೀಯ ದೀಪಾವಳಿಯ ಶುಭಾಷಯ ಹೇಳಿದ್ದಕ್ಕೆ ಧನ್ಯವಾದಗಳು. ನಿನಗೂ ನನ್ನಕಡೆಯಿ೦ದ ದೀಪಾವಳಿಯ ಶುಭಾಷಯಗಳು.

ರಂಜನಾ ಹೆಗ್ಡೆ said...

ಸುಶ್,
ಎಂಥಾ inspiring wordings ಕಣೋ ನಿಜಕ್ಕೂ ತುಂಬಾ ಚನ್ನಾಗಿ ಬರೆದ್ದೀಯಾ.

ನೀನೂ ಅಷ್ಟೂ ಸ್ವಾರ್ಥಿ ಆಗಿ ಯೋಚನೆ ಮಾಡಿದ್ದು ನಾನು ನೋಡೆ ಇಲ್ವಲ್ಲಾ.

ನಿನಗೂ ಮತ್ತು ನಿಮ್ಮ ಕುಟುಂಬಕ್ಕೂ ದೀಪಾವಳಿಯ ಶುಭಾಶಯಗಳು.

ಆ ಹಣತೆಯ ಬೆಳಕು ನಿನ್ನ ನನ್ನ ಎಲ್ಲರ ಬಾಳನ್ನೂ ಬೆಳಗಲಿ ಎಂದು ಹಾರೈಸುತ್ತೇನೆ.

Anveshi said...

ದೀಪ ಹಚ್ಚಿದರೆ ಉರಿದು ಹೋಗುತ್ತಲ್ಲಾ ಅನ್ನೋ ಕೊಂಕು ನುಡಿಯೊಂದಿಗೇ.... :)

"ಆರಿ ಹೋದ ಮನೆಗಳ ದೀಪ ಹಚ್ಚಬೇಕಿದೆ,ಕನಿಷ್ಟ, ಆ ಜೋಪಡಿಯ ಮಗುವಿನ ಕೈಗೊಂದು ಸುರುಸುರುಬತ್ತಿ ಕೊಟ್ಟು ಅದರ ಕಂಗಳಲ್ಲಾಗುವ ಭೀತ-ಸಂಭ್ರಮದ ನಕ್ಷತ್ರಪಾತವನ್ನು ಕತ್ತಲಲ್ಲಿ ನಿಂತು ನೋಡುತ್ತಾ ನಾನು ಕಳೆದುಹೋಗಬೇಕಿದೆ..." ಹಿತವಾದ ಆಶಯ. ನಿಜಕ್ಕೂ ಶುಭವಾದ ಆಶಯ.

ಎಲ್ಲರಿಗೂ ದೀಪಾವಳಿ ಶುಭಾಶಯಗಳು...

Anonymous said...

ದೀಪಾವಳಿಯ ಶುಭಾಶಯಗಳು.

-ರಾಗು

ಶಾಂತಲಾ ಭಂಡಿ (ಸನ್ನಿಧಿ) said...

ಸುಶ್ರುತ....
ತುಂಬಾ ಚೆನ್ನಾಗಿದೆ.
"ಏನಿದು ದೀಪಾ, ನಿನ್ನ ಬುಡದಲ್ಲೇ ಕತ್ತಲೆ!" ಎಂದು ನೀವು ದೀಪಕ್ಕೆ ಕೇಳಿದ ಪ್ರಶ್ನೆಗೆ ದೀಪ ನನಗೂ ಕೂಡಾ ಉತ್ತರಕೊಟ್ಟಂತಾಗಿ ಆ ಬಗ್ಗೆ ಯೋಚಿಸುತ್ತಿದ್ದೇನೆ.
ಮಕ್ಕಳಿಗೆ ಪಟಾಕಿ ಹಂಚುವಾಗ ನನ್ನ ಹೆಸರೂ ಹೇಳಿ ಕೊಟ್ಟುಬಿಡಿ. :-)
ಎಂತಹ ಸದುದ್ದೇಶ ತುಂಬಿದ ಶುಭಾಷಯ.
ಪುಟ್ಟಣ್ಣಾ, ನಿಂಗೂ ನನ್ನ ಶುಭಾಷಯಗಳು.

Sanath said...

ಸುಶ್,
ನಿನಗೂ ಸಹ ದೀಪಾವಳಿಯ ಶುಭಾಶಯಗಳು.
ಈ ದೀಪಾವಳಿ ಎಲ್ಲರ ಬಾಳಿಗೆ ಹೊಸ ಬೆಳಕು,ಸಂತಸ ,ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ

Anonymous said...

really beautiful!

Keep doing this good things.

Thank you for giving this article.

Wish you Happy Diwali to and your family.

Always,
Raghavendra T

Unknown said...

it's really good

happy deepavali

Harisha - ಹರೀಶ said...

ನಿಮಗೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಸುಶ್, ನನಗೆ ಹೋಗುವಾಗ, ಬರುವಾಗ ಕುಳಿತುಕೊಳ್ಳಲು ಸೀಟ್ ಸಿಗ್ತು... ಅದೂ ಮಧ್ಯ ಸೀಟ್ :)

Sushrutha Dodderi said...

ಶುಭಾಷಯ ಸ್ವೀಕರಿಸಿದ, ಮರು ಶುಭಾಷಯ ಹೇಳಿದ, ಶುಭಾಷಯ ಪತ್ರವನ್ನು ಮೆಚ್ಚಿದ ಎಲ್ರಿಗೂ ಶುಭಾಷಯಗಳು.
ಓಹ್ ಸಾರಿ, ಧನ್ಯವಾದಗಳು! :O

Anonymous said...

ದೀಪದ ಎಣ್ಣೆ ನಿನ್ನ ಬಳಿಯೇ ಇದೆ. ಹಾಗಾಗಿ ಆರಿ ಹೋಗುತ್ತದೆಂಬ ಭಯವಿಲ್ಲ. ಗಾಳಿ ಬೀಸದಿದ್ದರೆ ಸಾಕಷ್ಟೇ? ತಳದ ತಮದ ಬಗ್ಗೆ ದೀಪಕ್ಕೇ ಭಯವಿಲ್ಲದಾಗ ಗಾಳಿಯ ಭಯ ನಮಗೂ ಬೇಕಿಲ್ಲ. ಎಣ್ಣೆ ಬತ್ತುವ ವರೆಗೆ ಬೆಳಕ ನೋಡೋಣ..

-ತನ್ ಹಾಯಿ