Friday, February 29, 2008

ಸಾಗರದ ಜಾತ್ರೆಯಲಿ...

ಸಾಗರದ ಜಾತ್ರೆಯಲಿ ಸಾಗರದಷ್ಟು ಜನ
ತಿರುಗುವ ತೊಟ್ಟಿಲು, ಬಳೆಯಂಗಡಿ, ಬತ್ತಾಸು ಬೆಂಡು
ಖಾರಾ ಮಂಡಕ್ಕಿ, ಪೀಪಳಿ ಶಬ್ದ, ಬಾವಿಯೊಳಗೆ ಬೈಕು
ಪ್ರತಿದಿನವು ತೆರಳುವಿವನು.

ಇಂದು ನಾಲ್ಕನೆಯ ದಿನ, ಇಂದೆಂದಿನಂತಲ್ಲ:
ಮಾರಮ್ಮನಾ ಕಣ್ಗೆಂಪು ತುಸು ಹೆಚ್ಚೆ ಇಹುದು;
ಆ ರೌದ್ರ ಭಯಬಣ್ಣ ಹಸಿರಾಗಲಿಹುದು:
ಇನ್ನೇನು ಬರಲಿಹಳು ಮಾವನಾ ಮಗಳು.

ನಿನ್ನೆ ಮುಸ್ಸಂಜೆಯೇ ಬಂದಿತ್ತು ದೂರವಾಣಿಯ ಕರೆ:
ಮುಂಜಾನೆ ಬಸ್ಸಿಗೆ ಬರುತಿಹಳು ಎಂದು;
'ಭಾವನೆಂದರೆ ಸಾಕು, ಅದೇನು ಪ್ರೀತಿಯೋ ಕಾಣೆ
ಗರಿಗೆದರಿ ಆಗುವಳು ತಾನೆ ನವಿಲು' -ಎಂದಿದ್ದರು ಅತ್ತೆ!

ಮೊದಲ ಬಸ್ಸಿದೋ ಬಂತು, ನೂಕು ನುಗ್ಗಲು, ಛೇ!
ಮುದುಡಿ ಹೋಗಿಹಳೋ ಏನೋ ನನ್ನ ನಲ್ಲೆ?
ಇಳಿದರೂ ಇಷ್ಟು ಜನ, ತೋರುತಿಲ್ಲವೇಕವಳ ಮುಖ
ತಪ್ಪಿಸಿಕೊಂಡಳೇ ಮೊದಲ ಗಾಡಿ ತಡವಾಗಿ ಹೊರಟು?

ಇಲ್ಲ ಇಲ್ಲ ಇಲ್ಲ, ಅಲ್ಲಿ ನೋಡಿ ಅಲ್ಲಿ:
ಸಿರಿಗಂಗೆ ಇಳಿದಂತೆ ಜರತಾರಿ ಉಟ್ಟು
ಮೆಟ್ಟಿಲಲ್ಲೇ ನಿಂತು ಅರಸುತಿರುವಳು ಎನಗೆ
'ಇಲ್ಲಿ ಇರುವೆನು ಏ, ಹೀಗೆ ಬಾರೇ.'

ತೇರದಾರಿಯಲಿರುವ ಅಂಗಡಿಗಳೆಲ್ಲ
ತಮಗಾಗಿಯೇ ತೆರೆದಿಹವು ಎನ್ನುವಂತೆ;
ನೋಡುತಿರುವವು ಇವಳ ಮಿಟುಕಿಸದ ಕಣ್ಣು
ಇದ ನೋಡುವುದರಲ್ಲೇ ನಿರತ ನನ್ನ ಕಣ್ಣು!

ಅಮ್ಮನಾ ಗುಡಿಯೆದುರು ಉದ್ದ ಜನ ಸಾಲು
ಮೆಲ್ಲ ಕರಗುವ ಮಂದಿ; ತುದಿಯಲೆಲ್ಲೋ ನಾವು
ಮುಂದೆ ನಿಂದವಳ ಮುಡಿಯ ಮಲ್ಲಿಗೆಯ ಪರಿಮಳವು
ಎನ್ನ ನಾಸಿಕಗೀಗ ಇಷ್ಟ ಇಷ್ಟ.

ನನ್ನ ಸಂಭ್ರಮಕಂತು ಪಾರವೇ ಇಲ್ಲ;
ಏಕೆ ಗೊತ್ತೆ? ಕಾಯ್ವೊಡೆದು ಬೇಡ್ವಾಗ
ನಸು ನಕ್ಕಿಹಳು ದೇವಿ ಹರಸುತ್ತ:
'ಮುಂದಿನ ವರ್ಷವೇ ಮದುವೆ; ಚಿಂತೆ ಬೇಡ' -ಎಂದು!

ಗದ್ದಲದ ಜಂಗುಳಿಯಲೂ ಇಬ್ಬರೇ ನಾವೀಗ
ಮಾರು ದೂರದ ಬಳಿಕ ಕೈ-ಕೈ ಬೆಸೆದು;
ಭಯವೆಲ್ಲ ದೂರಾಗಿ, ಮನವೆಲ್ಲ ಹಾಯಾಗಿ
ಜಾತ್ರೆಗೇ ಹೊಸ ಕಳೆಯು ಪ್ರಾಪ್ತವಾಗಿರಲು

ಚೆನ್ನಯ್ಯಗಂತೂ ಕರುಣೆಯೇ ಇಲ್ಲ ಸೈ,
ತೊಡಿಸುತಿರುವನಲ್ಲ ಬಳೆ, ನೋಯುತಿದ್ದರು ಇವಳ ಕೈ!
'ಯಾಕೆ ಬೇಕಿತ್ತೋ ನಿನಗಾದರು?' ಎಂದು ನಾ ಮುನಿದರೆ,
ಇವಳು, 'ನಿಮಗದೆಲ್ಲ ತಿಳಿಯದು' ಎನ್ವಳಲ್ಲ!

ಜಾತ್ರೆಯಾ ಗದ್ದಲದಿ ಈ ಬಳೆಯ ದನಿಯೀಗ
ತನ್ನದೇ ಸ್ವರಪಥದಿ ತೇಲುತಿಹುದು;
ಅಲ್ಲಿ ತೊಟ್ಟಿಲ ಮೇಲೆ, ಅಗೋ ದೋಣಿಯ ಮೇಲೆ
ಈ ಜೋಡಿ ಸಂಭ್ರಮದಿ ಪಾಲ್ಗೊಳ್ಳುತಿಹುದು.

[ಸಾಗರದಲ್ಲಿ ಜಾತ್ರೆ ನಡೆಯುತ್ತಿದೆ. ನನಗೆ ಹೋಗಲಾಗುತ್ತಿಲ್ಲ. :(]

25 comments:

Sandeepa said...

ಮೋಸ್ಟ್ಲಿ ನಂಗು ಹೋಪ್ಲಕ್ ಆಪ್ದಿಲ್ಲೆ.
ಸಿರ್ಸಿ ಜಾತ್ರಿಗ್ ಸ್ಕೆಚ್ ಹಾಕಿದ್ದಿ.
ಬರ್ತ್ಯನು??

btw, ಚೆನ್ನಾಗಿದ್ದು!

ತನ್ ಹಾಯಿ said...

ನಿನ್ನೆ ಬಹಳ ದಿನಗಳ ನಂತರ ಗಿರಗಿಟ್ಟಲೆ ಸಿಕ್ಕಿಬಿಟ್ಟಿತ್ತು. ನನಗೂ ಇದ್ದಕ್ಕಿದ್ದಂತೆ ನಮ್ಮೂರ ಜಾತ್ರೆ.. ಬಣ್ಣ ಬಣ್ಣದ ಗಿರಗಿಟ್ಟಲೆ.. ತಿರುಗುವ ತೊಟ್ಟಿಲು ಎಲ್ಲಾ ನೆನಪಾಗಿಬಿಟ್ಟಿತ್ತು. ಅಷ್ಟೊತ್ತಿಗೆ ಈ ಕವನ.. ಥ್ಯಾಂಕ್ಯೂ :)

Archu said...

oLLE chance miss maadkonde maharaya..che..che..adrroo parvagilla..devi vara kottidddaLalla.. aa hudugige..
nimage aa vadhu sikkida koodale namagoo swalpa VIVARA tilisi :D


'attigeyara ' (? )list udda aagta ide..ellroo obrena..? :D

kavana chennagi bardiddeeya..odi ishtella heLo thara maaditu :D

Sushrutha Dodderi said...

ಗಂಡಾಂತರಗಳಾಗುವ ಮುನ್ನ:
ಪ್ಲೀಸ್ ನೋಟ್: ಈ ಕವನದ ಹುಡುಗಿಗೂ, 'ಅತ್ಗೆ'ಗೂ;
ಹುಡುಗನಿಗೂ ನನಗೂ ಯಾವ ಸಂಬಂಧವೂ ಇಲ್ಲಾಆಆಆಆಆಆಆಆ!

ರಂಜನಾ ಹೆಗ್ಡೆ said...

ಹಿಂಗಾ ಕವನ ಬರೆಯೋದು.
ಥೋ ಥೋ ಎನೇನೋ ನೆನಪು ಆಯಿತು. :(

btw ಕವನ ಸಕತ್ ಆಗಿ ಇದೆ.

Unknown said...

Sush
Ninna kalpane(a) chennagide adaralli ee salu bahala chennagide
ತೋರುತಿಲ್ಲವೇಕವಳ ಮುಖ
ತಪ್ಪಿಸಿಕೊಂಡಳೇ ಮೊದಲ ಗಾಡಿ ತಡವಾಗಿ ಹೊರಟು?
heege baritha iru.

Harsha Bhat said...

Sushrutha,

kavana cholo iddu..

Koosu jothege ille andre jatrelli police ru baLe peetege hopale bidatwille heLadu sirsi jatre satya. Sagara jatrenu hangeya matte?

Unknown said...

ಸುಶ್ರುತ್,
ಜಾಸ್ತಿ ಬೇಜಾರ್ ಮಾಡ್ಕೊಬೇಡಿ. ಇನ್ನೇನು ನಮ್ಮೂರ ಜಾತ್ರೆ ಹತ್ತಿರದಲ್ಲೇ ಇದೆ. ಅಲ್ಲಿಗೆ ಹೋಗಿ ನಿಮ್ಮವಳ ಜೊತೆ !
ಬಹಳ ಚೆನ್ನಾಗಿದೆ ಕವನ.

ಸುಪ್ತದೀಪ್ತಿ suptadeepti said...

"ನೂಕು ನುಗ್ಗಲು, ಛೇ!
ಮುದುಡಿ ಹೋಗಿಹಳೋ ಏನೋ ನನ್ನ ನಲ್ಲೆ?"

"ಸಿರಿಗಂಗೆ ಇಳಿದಂತೆ ಜರತಾರಿ ಉಟ್ಟು
ಮೆಟ್ಟಿಲಲ್ಲೇ ನಿಂತು ಅರಸುತಿರುವಳು"

"ಜಾತ್ರೆಯಾ ಗದ್ದಲದಿ ಈ ಬಳೆಯ ದನಿಯೀಗ
ತನ್ನದೇ ಸ್ವರಪಥದಿ ತೇಲುತಿಹುದು"

ಇಷ್ಟವಾದ ಸಾಲುಗಳು, ಕಲ್ಪನೆಗಳು.
ಚಂದದ ಕವನ, ಕಥನ. ಬರೀತಾ ಇರು.

Sushrutha Dodderi said...

@ alpazna,

ಹೋಪನ ತಗ. ಹೋಗಕ್ಕಾಗಲ್ಲೆ ಅಂದ್ರೆ ಮತ್ತೊಂದ್ ಕವನ ಬರ್ದ್ರಾತು. :D
btw, ಥ್ಯಾಂಕ್ಸ್!

ತನ್ ಹಾಯಿ,

'ಗಿರಗಿಟ್ಲಿ'! ಆಹಾ! ಏನೇನನ್ನೋ ನೆನಪು ಮಾಡಿಕೊಟ್ಟು ತಿರಗಿಸ್ತೀರಲ್ರೀ ನನ್ನ ಗಿರಗಿರ! ಆಂ? :x
ಥ್ಯಾಂಕ್ಯೂ!

ಅರ್ಚನಾ,

ಮತ್ತೆ ಇಲ್ಲಿ 'ಅತ್ಗೆ' ಸುದ್ಧಿ ಎತ್ತಿದ್ಯಲ್ಲ! 'ವಿವರ'!! 'ಅತ್ತಿಗೆಯರು'!!!
ಇರು, ಮಾಡಿಸ್ತೀನಿ ನಿಂಗೆ.. ;P

Sushrutha Dodderi said...

@ ರಂಜನಾ,

ಹಿಂಗಲ್ಲ ಅಂತೀಯಾ? ;P
ನೆನ್ಪಾಗಿದ್ದು ಒಳ್ಳೇದೇ ಆಗಲ್ಯಾ?
;)

vinayaka,

ಥ್ಯಾಂಕ್ಯೂ ಪಾರ್ಟನರ್. ಲವ್ಯೂ. ;)

ಹರ್ಷ,

ಥೋ! ಎಲ್ಲಾ ಜಾತ್ರೆಲೂ ಹಂಗೇ ಸೈ ಬಿಡಾ! ಆದ್ರೆ ಸಾಗ್ರದ್ ಜಾತ್ರೆಲಿ ಬಳೆ ಅಂಗ್ಡಿ, ಆಟದ್ ಸಾಮಾನಂಗ್ಡಿ, ಪಾತ್ರೆ ಅಂಗ್ಡಿ ಎಲ್ಲ ಒಂದೇ ಸಾಲಲ್ಲಿ ಇದ್ದಂಗಿರ್ತು. ಅದ್ಕೇ ಓಡಾಡಲೆ ತೀರ ತೊಂದ್ರೆ ಏನಿಲ್ಲೆ. ಕೂಸಿಲ್ದೇ ಇದ್ರೂ ನೆಡಿತು. ;)

Sushrutha Dodderi said...

ಮಧು,

ಸರಿ ಬಿಡಿ. ಬೇಜಾರೇನಿಲ್ಲ.
'ನನ್ನವಳ ಜೊತೆ'???!

ಸುಪ್ತದೀಪ್ತಿ,

ಧನ್ಯವಾದ ಜ್ಯೋತೀಜಿ.

ಈ ತರಹದ ಕವನ ನಾನು ಇಷ್ಟರೊಳಗೆ ಬರೆದಿರಲೇ ಇಲ್ಲ. ಗದ್ಯವನ್ನಾದರೆ ಎಷ್ಟು ಬೇಕಾದರೂ ಬರೆದುಬಿಡುತ್ತೇನೆ; ಆದರೆ ಈ ಕವಿತೆ ಬರೆಯೋದಕ್ಕೆ ಮಾತ್ರ ನಾನು ತಿಣಕಾಡ್ತೇನೆ. ಯಾಕೇಂದ್ರೆ, ಈ ಛಂದಸ್ಸು, ಮಾತ್ರೆ, ಪ್ರಾಸ ಅಂತೆಲ್ಲ ಯೋಚಿಸುತ್ತ ತಡಕಾಡುತ್ತ ಸರಿ ಮಾಡುತ್ತ ತಾಳ್ಮೆಯಿಂದ ಕೂತು ಬರೆಯೋದು ನಂಗೆ ಸ್ವಲ್ಪ ಕಷ್ಟ. ನಿನ್ನೆ ಏನೋ ಮೂಡು ಸಿಕ್ಕಾಪಟ್ಟೆ ಬಂದೂ.. .. .. ;-)

ತಪ್ಪುಗಳನ್ನ ತಿದ್ದಿ ಪ್ಲೀಸ್..

Shree said...

Full KSN stylu!!! :) Chenaagide, keep it up. Antu "athge" elliyavru aMta clue sikthu biDu. :]

ಮೃಗನಯನೀ said...

ನೀನು ಶ್ರಿನಿಧಿನೂ ಮೆಂಟ್ಲಾಗಿರೋದಂತು ನಿಜ ಅದೇನ್ ಹಿಂಗೆಲ್ಲಾ ಬರ್ದು ನಮ್ ಜೀವ ತಿಂತಿರೋ... ಕವನ ಸೂಪರ್...;-)

ತೇಜಸ್ವಿನಿ ಹೆಗಡೆ said...

ಸುಶ್ರುತ,

ಸುಂದರ ಕವನ. ಶ್ರೀನಿಧಿ ಕವನದಲ್ಲಿದ್ದ ಹೊಸಜೋಡಿ ಗುರುತು ಸಿಕ್ಕಿತ್ತಿಲ್ಲೆ. ಇಲ್ಲಿ ಬಂದ ಮೇಲೇ ಗೊತ್ತಾತು ಆ ಜೋಡಿ ಯಾರದ್ದು ಹೇಳಿ. ಶುಭವಾಗಲಿ..;-) ಮತ್ತಷ್ಟು ಸುಂದರ ಕವನಗಳು ಬರಲಿ.

ಅಮರ said...

ಸೂಪರ್ ......... ಬಳೆಯ ಸಾಲುಗಳಲ್ಲಿ ನೆನೆಪಾದವರು ಕೆ ಎಸ್ ನ .. :)

raju hulkod said...

Hey jaathreli ondu round hakida anubhava. nice one.

ninna kawana odida mele " ANISUTIDE YAAKO INDU SAGARADA JAATRE MISS MADIKONDENA YENDU".


'ಯಾಕೆ ಬೇಕಿತ್ತೋ ನಿನಗಾದರು?' ಎಂದು ನಾ ಮುನಿದರೆ,
ಇವಳು, 'ನಿಮಗದೆಲ್ಲ ತಿಳಿಯದು' ಎನ್ವಳಲ್ಲ!

E SAALUGALU TUMBA ISTA AATU.

Sushrutha Dodderi said...

ಶ್ರೀ,

ಬ್ಯಾಡ.. ಹೇಳಿದ್ದಿ.. :x

ಮೃಗ,

ಯೋಯ್! ಮೆಂಟ್ಲು ಗಿಂಟ್ಲು ಅಂದ್ರೆ ಹುಷಾರ್!!! :D

ತೇಜಸ್ವಿನಿ,

ಗೊತ್ತಾಗೋತಾ?! ಯಾರಿಗೂ ಹೇಳಡ ಮತೆ..! ;) :P
ಥ್ಯಾಂಕ್ಸ್ ಅಕ್ಕೋ..!

ಅಮರ,

ಥ್ಯಾಂಕ್ಸ್ ಬ್ರದರೂ..!

raju,

ಇನ್ನು ನೆಡಿತಾ ಇದ್ದು ಜಾತ್ರೆ.. ಒಂದು ರೌಂಡ್ ಹೋಗ್ಬಂದ್ಬುಡು.. ಎಂಥಕ್ ಸುಮ್ನೆ ಗಣೇಶನ್ ಥರ ಹಾಡೇಳದು..! ;)

ಶಾಂತಲಾ ಭಂಡಿ (ಸನ್ನಿಧಿ) said...

Dearest ತಮ್ಮಾ...
ನಮಸ್ಕಾರ, ನಾನು ಚೆನ್ನಾಗಿದ್ದೇನೆ. ನೀನು ಕ್ಷೇಮವಾಗಿರುವೆಯೆಂದು ನಂಬಿದ್ದೇನೆ.
ನಿನ್ನ ಕರೆಯೋಲೆ ಓದಿ ನೀನು ಹಬ್ಬಕ್ಕೆ ಕರೆಯಲು ನಮ್ಮನೆಗೇ ಬಂದಷ್ಟು ಸಂತಸಪಟ್ಟೆ..
ನಿನ್ನ ಪ್ರೀತಿಯ ಆಹ್ವಾನಕ್ಕೆ ಧನ್ಯವಾದಗಳು. ನವ ಪ್ರಕಾಶನ ಸಂಸ್ಥೆ 'ಪ್ರಣತಿ'ಗೂ ವಂದನೆ-ಅಭಿನಂದನೆ.
ಅಂದ ಹಾಗೆ ಅಂದಿನ ಕಾರ್ಯಕ್ರಮವು, ಸೇರಲಿರುವ ನಿಮ್ಮೆಲ್ಲರಿಂದ ಚಂದಗಾಣಲಿ ಎಂದು ಹಾರೈಸುತ್ತೇನೆ.

ಎಷ್ಟೋ ಮೈಲುಗಳಾಚೆ ಜರುಗುತ್ತಲಿರುವ ಸುಂದರ ಸಂಜೆಯಲಿ ನಿಮ್ಮೆಲ್ಲರೊಡನೆ ಕಳೆಯಲಾಗದ ಅನಿವಾರ್ಯತೆಗೆ ಕ್ಷಮೆಯಾಚಿಸುತ್ತಾ...
ಇಂತಿ
ಅಕ್ಕ
-ಶಾಂತಲಾ ಭಂಡಿ.

Pramod P T said...

ಸಾಗರ ಜಾತ್ರೆ miss ಆಗಿದ್ದಕ್ಕೆ ಬೇಜಾರ್ ಮಾಡ್ಕೊಬೇಡಿ..ಸಿರ್ಸಿ ಜಾತ್ರೆಗೆ ಬನ್ನಿ...

ಚೆನ್ನಾಗಿದೆ ಕವನ..

sunaath said...

ಸುಶ್ರುತ,
ಕವನ ಚೆನ್ನಾಗಿದೆ. ಚೆನ್ನೆಗಾಗಿ ಬರೆದ ಕವನ ಚೆನ್ನಾಗಿರದೆ ಏನು!

ಪೂರ್ಣ ವಿ-ರಾಮ said...

ಅಲ್ಲಾ ಮಾರಾಯ್ನೆ ಆನು ಸಾಗರದ ಜಾತ್ರಿಗೆ ಈ ಸಾರ್ತಿ ಹೋಗಿದ್ದಿ. ಆದ್ರೆ ಮೊದ್ಲಿನ್ ಜೋರು ಈ ಸಾರಿ ಇಲ್ಲೆ ಮಾರಾಯಾ. ಹತ್ತು ವರ್ಷದ ಹಿಂದೆ ಅಪ್ಪಯ್ಯ ಅಮ್ಮನ್ ಜೊತಿಗೆ ಹೋದ ಖುಷಿಯೇ ಇರ್ಲೆ ಮಾರಾಯಾ. ಈಗ ಎಲ್ ನೋಡಿದ್ರೂ ಬರೀ ಗಿಜಿ ಗಿಜಿ..

ನೀ ಏನೇ ಹೇಳು. ನಿನ್ನ ಪದ್ಯ ಎಂಗ್ ಭರ್ತಿ ಇಷ್ಟಾ ಆತು. ಮತ್ತೆ ಮುನ್ನೂರೈವತ್ತು ಕಿ. ಮಿ. ದೂರ ಪುಕ್ಕಟೆ ಕರ್ಕಂಡ್ ಹೋತು.

Prasanna L.M said...

hey sushrutha, kavana chanagiddu..naanu ee sala jaatrege hogiddi. ninna kavna odi, matte jaatreli odadiddalla nenapathu.. good work.. keep it up..

bhadra said...

೧೯೬೪-೬೫ ರಲ್ಲಿ ನನ್ನ ಅಪ್ಪನ ಹೆಗಲ ಮೇಲೇರಿ ಸಾಗರದ ಮಾರಿ ಜಾತ್ರೆ ನೋಡಿದ್ದೆ. ಅಲ್ಲಿ ಒಂದು ಹೊಟೆಲ್‍ನಲ್ಲಿ ಸಿಹಿಯನ್ನು ತಿಂದದ್ದಷ್ಟೇ ನೆನಪು. ನಿಮ್ಮ ಕವನದಲ್ಲಿ ಚೊಕ್ಕದಾಗಿ ನಿರೂಪಿಸಿದ್ದೀರಿ.

ಓಹ್! ಕನ್ನಡದಲ್ಲಿ ೩೨೫ ಬ್ಲಾಗುಗಳಿವೆಯಾ? ಮೂರು ವರುಷಗಳ ಹಿಂದೆ ಕೈ ಬೆರಳಿನಲ್ಲಿ ಎಣಿಸುವಷ್ಟು ಮಾತ್ರ ಬ್ಲಾಗುಗಳಿದ್ದವು

ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ಅಪ್‍ಡೇಟಿಸಿದ ಪಟ್ಟಿಯನ್ನು ನನಗೆ ಅಂಚೆಯಲ್ಲಿ ಕಳುಹಿಸಲಾದೀತೇ?

Srikanth - ಶ್ರೀಕಾಂತ said...

iDee kavana tumbaa chennaagide... vishEshavaagi ee saalugaLu nange tumba ishta aaytu

ತೇರದಾರಿಯಲಿರುವ ಅಂಗಡಿಗಳೆಲ್ಲ
ತಮಗಾಗಿಯೇ ತೆರೆದಿಹವು ಎನ್ನುವಂತೆ;
ನೋಡುತಿರುವವು ಇವಳ ಮಿಟುಕಿಸದ ಕಣ್ಣು
ಇದ ನೋಡುವುದರಲ್ಲೇ ನಿರತ ನನ್ನ ಕಣ್ಣು!

ಗದ್ದಲದ ಜಂಗುಳಿಯಲೂ ಇಬ್ಬರೇ ನಾವೀಗ
ಮಾರು ದೂರದ ಬಳಿಕ ಕೈ-ಕೈ ಬೆಸೆದು;
ಭಯವೆಲ್ಲ ದೂರಾಗಿ, ಮನವೆಲ್ಲ ಹಾಯಾಗಿ
ಜಾತ್ರೆಗೇ ಹೊಸ ಕಳೆಯು ಪ್ರಾಪ್ತವಾಗಿರಲು

ಜಾತ್ರೆಯಾ ಗದ್ದಲದಿ ಈ ಬಳೆಯ ದನಿಯೀಗ
ತನ್ನದೇ ಸ್ವರಪಥದಿ ತೇಲುತಿಹುದು;
ಅಲ್ಲಿ ತೊಟ್ಟಿಲ ಮೇಲೆ, ಅಗೋ ದೋಣಿಯ ಮೇಲೆ
ಈ ಜೋಡಿ ಸಂಭ್ರಮದಿ ಪಾಲ್ಗೊಳ್ಳುತಿಹುದು.

(3 para saaku! heege copy-paste maaDtaa hodre mikka ellaa para haakbekaagatte!)