ಯಾಮಿನಿಯ ಹಾಡಿನ್ನೂ ಮುಗಿದಿರಲಿಲ್ಲ. ದಿನಕರನ ಸ್ತುತಿ ಶುರುವಾಗುವುದರಲ್ಲಿತ್ತು. ನನ್ನನ್ನು ಮಲಗಿಸಿಕೊಂಡಿದ್ದ ಹಾಸಿಗೆಗೆ ಇನ್ನೂ ಪೂರ್ತಿ ತೃಪ್ತಿ ಸಿಕ್ಕಿರಲಿಲ್ಲ... "ಚುಚ್ಚುತಾ ಚುಚ್ಚುತಾ.." ಉಲಿ ಕೇಳಿ ಮಕಾಡೆ ಮಲಗಿದ್ದ ನಾನು ತಿರುಗಿ ನಿಧಾನಕ್ಕೆ ಕಣ್ಬಿಟ್ಟೆ:
ಕಿಟಕಿ ಸರಳ ಮೇಲೆ ಚುಂಚು!
"ಹೇ, ಏನೇ ಇಷ್ಟ್ ಬೆಳಗಾ ಮುಂಚೆ?" ಕೇಳಿದೆ.
"ಹ್ಯಾಪಿ ಬರ್ತ್ಡೇ ಕಣೋ" ಅಂತು.
ನನಗೆ ಆಘಾತ! "ಆಂ? ಇವತ್ತು ನನ್ನ ಬರ್ತ್ಡೇ ನಾ?" ಎದ್ದು ಕುಳಿತು ಕೇಳಿದೆ.
"ನಿಂದಲ್ವೋ ಬೆಪ್ಪೂ! ನಿನ್ ಬ್ಲಾಗಿನ ಬರ್ತ್ಡೇ ಇವತ್ತು!"
"ಓಹ್! ಏಪ್ರಿಲ್ ೨೬! ಹೌದಲ್ಲಾ! ಥ್ಯಾಂಕ್ಸ್ ಚುಂಚು!"
"ಬರೀ ಥ್ಯಾಂಕ್ಸಾ ಪಾರ್ಟಿ ಗೀರ್ಟಿ ಕೊಡಿಸ್ತೀಯಾ?"
"ಅಯ್ಯೋ..! ನಿಂಗೆ ಪಾರ್ಟಿ ಕೊಡಿಸ್ದೇ ಇರ್ತೀನಾ ಚಿನ್ನಾ? ಏನ್ ಬೇಕೋ ಹೇಳು.. ಕೊಡ್ಸೋಣಂತೆ.."
"ಊಂ.. ನಂಗೇ ನಂಗೇ.."
"ಹೂಂ, ಹೇಳು.."
"ಮತ್ತೇ.. ನಂಗೇ.. ನಂಗೇ..."
* * *
ಚುಂಚುವನ್ನು ಮೊನ್ನೆ ಊರಿಗೆ ಹೋಗುವಾಗ ನನ್ನೊಂದಿಗೆ ಕರೆದುಕೊಂಡು ಹೋಗಿದ್ದೆ. ತುಂಬಾ ದಿನದಿಂದ ನಿಮ್ಮೂರು ನೋಡ್ಬೇಕು, ನಿನ್ನ ಅಮ್ಮ-ಅಪ್ಪರನ್ನು ನೋಡ್ಬೇಕು, ದಟ್ಟ ಕಾಡು ನೋಡ್ಬೇಕು ಅಂತೆಲ್ಲ ಕಾಟ ಕೊಡ್ತಿತ್ತು. ಮೊದಲೆರಡು ದಿನ ತುಂಬಾ ಖುಶಿಯಿಂದ ಹಾರಾಡಿಕೊಂಡಿತ್ತು. ಆದರೆ ಆಮೇಲೆ ’ಅಪ್ಪ-ಅಮ್ಮ ಇಲ್ದೇ ಬೇಜಾರು, ಗೂಡಲ್ಲಿ ಬಂದಹಾಗೆ ಇಲ್ಲಿ ನಿದ್ರೆ ಬರಲ್ಲ, ವಾಪಾಸ್ ಹೋಗೋಣ’ ಅಂತ ಹಟ ಮಾಡ್ಲಿಕ್ಕೆ ಶುರು ಮಾಡ್ತು. ಕೊನೆಗೆ ಆ ರಾತ್ರಿ ಅದನ್ನು ಕರೆದುಕೊಂಡು ’ನಿಂಗೊಂದು ಕತೆ ಹೇಳ್ತೀನಿ ಬಾ’ ಅಂತ, ಒಂದು ಗಾಳ ತಯಾರು ಮಾಡಿಕೊಂಡು, ನಮ್ಮ ಮನೆ ಹತ್ತಿರದ ಹಳ್ಳವೊಂದರ ಬಳಿ ಕರೆದೊಯ್ದೆ. ’ರಾತ್ರಿ ಹೊತ್ತು ನಂಗೆ ಹೊರಗೆ ಕಣ್ಣು ಕಾಣಲ್ಲ’ ಅಂತು. ನನ್ನ ಹೆಗಲ ಮೇಲೇ ಕೂರಿಸಿಕೊಂಡು ಹೋದೆ.
ಹಳ್ಳದ ತಿಳಿ ನೀರಲ್ಲಿ ಆಗಸದ ನಕ್ಷತ್ರಗಳ ಪ್ರತಿಫಲನವಿತ್ತು. ಅದರಲ್ಲೇ ಯಾವುದಾದರೂ ’ನಕ್ಷತ್ರ ಮೀನು’ ಸಿಕ್ಕೀತೇನೋ ಎಂಬಾಸೆಯಿಂದ ಗಾಳವನ್ನು ಹಳ್ಳದಲ್ಲಿ ಇಳಿಬಿಟ್ಟು ಕೂತೆ. "ಏನೋ ಕತೆ ಹೇಳ್ತೀನಿ ಅಂದಿದ್ಯಲ್ಲ..?" ನೆನಪಿಸಿತು ಚುಂಚು.
"ಹ್ಮ್.. ಹೌದು. ಗೂಡು ಬಿಟ್ಟು ಬಂದು ಇನ್ನೂ ಎರಡು ದಿನ ಆಗಿದೆ, ಆಗಲೇ ಬೇಜಾರು, ಅಪ್ಪ-ಅಮ್ಮನ್ನ ಬಿಟ್ಟಿರಕ್ಕಾಗಲ್ಲ ಅಂತೀಯ.. ಗೂಡಲ್ಲಲ್ದೇ ಬೇರೆ ಕಡೆ ನಿದ್ರೆ ಬರಲ್ಲ ಅಂತೀಯ.. ರಾತ್ರಿ ಹೊತ್ತು ಹಾರಾಡಕ್ಕಾಗಲ್ಲ ಅಂತೀಯ.. ನಿಂಗೆ ನಾನು ಜೊನಾಥನ್ ಲಿವಿಂಗ್ಸ್ಟನ್ ಅನ್ನೋ ಬೆಳ್ಳಕ್ಕಿ ಕತೆ ಹೇಳ್ತೀನಿ ಕೇಳು.."
ನಾನು ಕತೆ ಶುರು ಮಾಡಿದೆ:
* * *
ಸಾಮಾನ್ಯವಾಗಿ ಎಲ್ಲಾ ಬೆಳ್ಳಕ್ಕಿಗಳಿಗೆ ಹಾರಾಡುವುದು ಎಂದರೆ ಅದು ಆಹಾರವನ್ನು ಹುಡುಕುವುದಕ್ಕಾಗಿ ಅಷ್ಟೇ. ಆದರೆ ನಮ್ಮ ಜೊನಾಥನ್ ಒಬ್ಬ ಸಾಮಾನ್ಯ ಬೆಳ್ಳಕ್ಕಿಯಲ್ಲ. ಆತನಿಗೆ ಹಾರಾಟವೆಂದರೆ ಬದುಕು. ಹಾರಾಟವೆಂದರೆ ಉಸಿರು. ಹಾರಾಟವೆಂದರೆ ಅನಿಕೇತನವಾಗುವುದು. ಮಾಯವಾಗುವುದು.
ಜೊನಾಥನ್ಗೆ ಎಲ್ಲ ಬೆಳ್ಳಕ್ಕಿಗಳಂತೆ, ತನ್ನ ಗೆಳೆಯರಂತೆ ಕೇವಲ ಆಹಾರ ಹುಡುಕುವುದಕ್ಕಾಗಿ, ಮೀನು ಹಿಡಿಯುವುದಕ್ಕಾಗಿ ಹಾರಾಡುವುದರಲ್ಲಿ ಏನೂ ಆಸಕ್ತಿಯಿಲ್ಲ. ಆತನಿಗೆ ಹಾರಾಟದ ಖುಶಿಯನ್ನು ಅನುಭವಿಸಬೇಕಿದೆ. ವೇಗವನ್ನು ಆಸ್ವಾದಿಸಬೇಕಿದೆ. ಆತ ಹಾರುತ್ತಾನೆ.. ಎತ್ತರ.. ಎತ್ತರಕ್ಕೇರುತ್ತಾನೆ. ಎಷ್ಟೆತ್ತರ? ಆತ ಏರಿದ ಎತ್ತರದಿಂದ ಕೆಳಗೆ ನೋಡಿದರೆ ಕಡಲ ನೀರ ಮೇಲೆ ತೇಲುತ್ತಿರುವ ದೋಣಿಗಳು ಅವನಿಗಿಂತ ಚಿಕ್ಕದಾಗಿ ಕಾಣುತ್ತವೆ. ಅಷ್ಟೆತ್ತರದಿಂದ ಆತ ಕೆಳಗೆ ಹಾರುತ್ತಾನೆ.. ವೇಗದೊಂದಿಗೆ.. ಶರವೇಗದೊಂದಿಗೆ.. ನಲವತ್ತು, ಎಂಬತ್ತು, ನೂರಿಪ್ಪತ್ತು ಮೈಲಿ ವೇಗದಲ್ಲಿ ಕೆಳಗಿಳಿಯುತ್ತಾನೆ.. ಇನ್ನೇನು ಕಡಲ ನೀರಿಗೆ ತಾಕಬೇಕು ಎನ್ನುವಷ್ಟರಲ್ಲಿ ದೇಹವನ್ನು ತಿರುಗಿಸಿ ಮತ್ತೆ ಮೇಲೇರುತ್ತಾನೆ.. ಮೊದಮೊದಲು ಹಿಡಿತ ದಕ್ಕುವುದಿಲ್ಲ.. ಆತ ಕಲಿಯುತ್ತಾನೆ.. ಕಲಿಯುತ್ತಾನೆ.. ಇನ್ನಷ್ಟು, ಮತ್ತಷ್ಟು ಎತ್ತರಕ್ಕೇರುತ್ತಾನೆ.. ಕಷ್ಟವಾಗುತ್ತದೆ..
ಯಾಕೆ ತನಗೆ ಸುಲಭವಾಗಿ ಹಾರಲಾಗುತ್ತಿಲ್ಲ? ಇಷ್ಟೇನಾ ತನ್ನ ವೇಗ? ಆತ ಯೋಚಿಸುತ್ತಾನೆ. ಹೊಳೆಯುತ್ತದೆ: ಬೆಳ್ಳಕ್ಕಿಗಳ ರೆಕ್ಕೆ ತುಂಬ ದೊಡ್ಡದು, ಭಾರವಾದ್ದು. ಅದನ್ನು ಹೊತ್ತು ಹಾರುವುದು ಕಷ್ಟ, ಬಡಿಯುವುದಕ್ಕೆ ಸಾಕಷ್ಟು ಶಕ್ತಿ ವ್ಯಯವಾಗುತ್ತದೆ. ಬಿಚ್ಚಿಟ್ಟುಕೊಂಡರೆ ಕೆಳಗಿಳಿಯುವಾಗ ವೇಗಕ್ಕೆ ತಡೆಯಾಗುತ್ತದೆ. ಹಾಗಾದರೆ ತಾನು ಮೇಲೇರಿದ ಮೇಲೆ ರೆಕ್ಕೆಗಳನ್ನು ಮಡಿಚಿಟ್ಟುಕೊಂಡು ಕೇವಲ ಪುಕ್ಕಗಳನ್ನಷ್ಟೇ ಅಗಲ ಮಾಡಿ ನೆಗೆಯಬೇಕು. ಆಗ ಜಾಸ್ತಿ ವೇಗ ದಕ್ಕುತ್ತದೆ. ಆತ ಕಲಿಯುತ್ತಾನೆ.. ನೂರಾ ಇಪ್ಪತ್ತು, ನೂರಾ ನಲವತ್ತು ಮೈಲಿಗಳ ವೇಗದಲ್ಲಿ ಕೆಳಗಿಳಿಯುವುದನ್ನು ಕಲಿಯುತ್ತಾನೆ.. ವೇಗದಲ್ಲಿನ ಸುಖವನ್ನು ಸವಿಯುತ್ತಾನೆ.. ಆಹಾರ ಹುಡುಕುವುದನ್ನೂ ಬಿಟ್ಟು ದಿನವಿಡೀ ಕಲಿಕೆಯಲ್ಲಿ ತೊಡಗುತ್ತಾನೆ. ಯಾವ ಬೆಳ್ಳಕ್ಕಿಯೂ ಮಾಡಲಾಗದ ಹೊಸದೇನನ್ನೋ ಸಾಧಿಸಿದ್ದರಿಂದ ತನಗೆ ಪ್ರಶಂಸೆ ಸಿಗಬಹುದೆಂದು ಭಾವಿಸಿ ಸಂಜೆ ವಾಪಸು ತನ್ನ ತಂಡವಿದ್ದಲ್ಲಿಗೆ ಧಾವಿಸಿದರೆ ಅವನಿಗೆ ಆಘಾತ ಕಾದಿರುತ್ತದೆ:
"ಜೊನಾಥನ್, ನೀನು ಬೆಳ್ಳಕ್ಕಿಗಳ ಜಾತಿಗೇ ಅವಮಾನ! ಬೆಳ್ಳಕ್ಕಿಗಳು ಹಾರುವುದು ಆಹಾರಕ್ಕಾಗಿ. ನಮ್ಮ ಸಂಪ್ರದಾಯವನ್ನೇ ಮುರಿದಿದ್ದೀಯ. ನಾವು ಹೇಗಿರಬೇಕೋ ಹಾಗಿರಬೇಕು. ನಿನ್ನ ಬೇಜವಾಬ್ದಾರಿತನಕ್ಕೆ ಕ್ಷಮೆ ಇಲ್ಲ. ನಿನ್ನನ್ನು ಜಾತಿಯಿಂದ ಹೊರಹಾಕಲಾಗಿದೆ!" ನಾಯಕ ಗರ್ಜಿಸುತ್ತಾನೆ."ಆದರೆ... ಇಲ್ಲಿ ಕೇಳಿ... ನಾವೇಕೆ ನಮ್ಮನ್ನು ಕೇವಲ... ...? ಇಲ್ಲಿ ಕೇಳಿ, ಅಣ್ಣಾ.." ಜೊನಾಥನ್ ಅಲವತ್ತುಕೊಳ್ಳುತ್ತಾನೆ.ಊಹೂಂ, ಯಾರೂ ಅವನ ಮಾತಿಗೆ ಕಿವಿಗೊಡುವುದಿಲ್ಲ. ಜೊನಾಥನ್ಗೆ ಬೆಳ್ಳಕ್ಕಿಗಳ ಜಾತಿಯಿಂದ ಬಹಿಷ್ಕಾರ ಹಾಕಲಾಗುತ್ತದೆ.
ಆಮೇಲವನು ಒಂಟಿಯಾಗುತ್ತಾನೆ. ಆದರೆ ಜೊನಾಥನ್ ನಿರಾಶನಾಗುವುದಿಲ್ಲ. ಧೈರಗುಂದುವುದಿಲ್ಲ. ಆತ ಅಲ್ಲಿಂದ ಹೊರಟು ಮತ್ತೆ ಹಾರತೊಡಗುತ್ತಾನೆ.. ಎತ್ತರ... ಅಮಿತ ಎತ್ತರ.. ಆಕಾಶ.. ಎಲ್ಲೆಯಿಲ್ಲದ, ಪರಿಧಿಯಿಲ್ಲದ ಅವಕಾಶಗಳಿಗೆ ಹಾರುತ್ತಾನೆ.. ಸಾವಿರ ಮೈಲಿ ಎತ್ತರದಿಂದ ಕೆಳಗೆ ಧುಮುಕುತ್ತಾನೆ.. ಹಿಂದೊಮ್ಮೆ "ಜಾನ್, ಇದು ತಪ್ಪು ಮರೀ.. ನಾವು ಪ್ರತಿದಿನ ಮೀನು ಹುಡುಕಿ ತಿನ್ನಲಿಕ್ಕೆ ಮಾತ್ರ ಹಾರಬೇಕು.. ಬೆಳ್ಳಕ್ಕಿಗಳೆಂದರೆ ಅಷ್ಟೇ" ಎಂದು ಅವನ ಅಪ್ಪ-ಅಮ್ಮ ಹೇಳಿದ್ದ ಬುದ್ಧಿಮಾತಿಗೆ ಶರಣಾಗಿ ಹಿಂದೆ ಸರಿದಿದ್ದ ಜೊನಾಥನ್, ಈಗ ಅದನ್ನೆಲ್ಲ ಮರೆಯುತ್ತಾನೆ. ಇಲ್ಲ, ಅಷ್ಟೇ ಅಲ್ಲ ಬದುಕು.. ಹಾರಬೇಕು.. ಎತ್ತರೆತ್ತರ.. ದೂರ ದೂರ.. ಹೊಸ ಲೋಕಗಳನ್ನು ಕಾಣಬೇಕೆಂದು ಹಾರುತ್ತಾನೆ.. ದಿನೇ ದಿನೇ ಕಲಿಯುತ್ತಾನೆ.. ತನ್ನ ದೇಹದ, ರೆಕ್ಕೆಗಳ ಮಿತಿಗಳನ್ನು ಮೀರುತ್ತಾನೆ.. ಗಾಳಿಯ ವೇಗದಲ್ಲಿ ಹಾರತೊಡಗುತ್ತಾನೆ.. ಆಗಸದಲ್ಲೇ ಸ್ಥಿರನಾಗುವುದನ್ನು ಕಲಿಯುತ್ತಾನೆ.. ಅಲ್ಲೇ ನಿದ್ರಿಸುತ್ತಾನೆ..
ಒಂದು ಸಂಜೆ, ಕಲಿಕೆ ಮುಗಿಸುತ್ತಿದ್ದ ಸಂದರ್ಭದಲ್ಲಿ, ಎರಡು ಬೆಳ್ಳಕ್ಕಿಗಳು ಅವನ ಬಳಿ ಬರುತ್ತವೆ: "ಜೊನಾಥನ್!"
ಜೊನಾಥನ್ ಕಕ್ಕಾಬಿಕ್ಕಿಯಾಗಿ, ತನಗಿಂತ ಬೆಳ್ಳಗಿರುವ, ಅಪಾರ ಕಾಂತಿಯಿಂದ ಮಿನುಗುತ್ತಿರುವ ಆ ಬೆಳ್ಳಕ್ಕಿಗಳನ್ನು ನೋಡುತ್ತಾನೆ. "ಯಾರು ನೀವು?" ಕೇಳುತ್ತಾನೆ.
"ನಾವು ನಿನ್ನ ಅಣ್ಣಂದಿರು.. ಜೊನಾಥನ್, ನೀನೀಗ ಒಂಟಿಯಲ್ಲ. ನೀನೀಗ ನಿನ್ನ ಮೊದಲ ಕಲಿಕೆಯ ಹಂತವನ್ನು ಪೂರೈಸಿದ್ದೀಯ. ನೀನೀಗ ಮುಂದಿನ ಕಲಿಕೆಗೆ ಶುರುಮಾಡಿಕೊಳ್ಳಬೇಕು. ಹೊಸ ಶಾಲೆ.. ಮುಂದಿನ ಹಂತಗಳು..!"
ಜೊನಾಥನ್ಗೆ ಆಶ್ಚರ್ಯವಾಗುತ್ತದೆ. ಆ ಬೆಳ್ಳಕ್ಕಿಗಳು ಜೊನಾಥನ್ನನ್ನು ಹೊಸದೊಂದು ಲೋಕಕ್ಕೆ ಕರೆದೊಯುತ್ತವೆ.
ಜೊನಾಥನ್ ಆ ಲೋಕವನ್ನು ಸ್ವರ್ಗವೇ ಸರಿ ಎಂದು ತೀರ್ಮಾನಿಸುತ್ತಾನೆ. ಅಲ್ಲಿ ಕೆಲವೇ ಹಕ್ಕಿಗಳಿರುತ್ತವೆ: ಇವನಂತೆಯೇ ಸಾಧನೆಗೈದು ಬಂದ ಕೆಲವೇ ಹಕ್ಕಿಗಳು. ಅವುಗಳ ರೆಕ್ಕೆಗಳು ಪಾರದರ್ಶಕವೇನೋ ಎಂಬತ್ತಿರುತ್ತವೆ. ಕಣ್ಗಳು ಬಂಗಾರದಂತೆ ಹೊಳೆಯುತ್ತಿರುತ್ತವೆ. ಅವು ಮಿಂಚಿನ ವೇಗದಲ್ಲಿ ಸಂಚರಿಸಬಲ್ಲವಾಗಿರುತ್ತವೆ... ಜೊನಾಥನ್ ಅಲ್ಲಿಯ ನಾಯಕನ ಬಳಿ ತೆರಳುತ್ತಾನೆ. ಆ ನಾಯಕ ಬೆಳಕಿನ ವೇಗದಲ್ಲಿ ಚಲಿಸಬಲ್ಲವ! ಕಣ್ಣು ಮಿಟುಕಿಸುವುದರೊಳಗೆ ಎದುರಿನಿಂದ ಅದೃಶ್ಯವಾಗಬಲ್ಲವ! ಅದೆಂತಹ ವೇಗ! "ಇದೇನಾ ಸ್ವರ್ಗ?" ಕೇಳುತ್ತಾನೆ ಜೊನಾಥನ್. "ಹಹ್! ಸ್ವರ್ಗ ಎಂಬುದು ಒಂದು ಸ್ಥಳವಲ್ಲ ಜಾನ್! ದೇಶ, ಕಾಲ ಎಂಬುದಕ್ಕೆಲ್ಲ ಅರ್ಥವೇ ಇಲ್ಲ.. ನೀನು ಎತ್ತರವನ್ನೇರಿದಂತೆಲ್ಲ ಜಗದ ವ್ಯಾಪ್ತಿ ವಿಶಾಲವಾಗುತ್ತಾ ಹೋಗುತ್ತದೆ.. ಕಲಿಕೆಯೆಂಬುದು ಮುಗಿದದ್ದೇ ಇಲ್ಲ! ಇದು ನಿನ್ನ ಎರಡನೇ ಹಂತ ಅಷ್ಟೇ! ಸ್ವರ್ಗ ಎಂದರೆ...." ಜೊನಾಥನ್ಗೆ ತಾನೂ ನಾಯಕನಂತಾಗಬೇಕೆಂಬ ಆಸೆ ಪುಟಿದೇಳುತ್ತದೆ. ತನ್ನ ಕಲಿಕೆಯ ಆಸೆಯನ್ನು ಹೇಳಿಕೊಳ್ಳುತ್ತಾನೆ. ನಾಯಕನಿಗೆ ಜೊನಾಥನ್ನ ಆಸಕ್ತಿಯನ್ನು ನೋಡಿ ಆನಂದವಾಗುತ್ತದೆ. ನಾಯಕ ತನ್ನನ್ನು ಪಾಲಿಸುವಂತೆ ಆದೇಶಿಸುತ್ತಾನೆ.. ಜೊನಾಥನ್ ಕಲಿಯತೊಡಗುತ್ತಾನೆ.. ಕಲಿಯುತ್ತಾನೆ..!
ಒಂದು ದಿನ ಅವನಿಗೆ ತಾನು ಹುಟ್ಟಿ ಬೆಳೆದಿದ್ದ ಭೂಮಿ ನೆನಪಾಗುತ್ತದೆ. ಅಲ್ಲಿನ ತನ್ನ ಗೆಳೆಯರ ನೆನಪಾಗುತ್ತದೆ. ಅವರಲ್ಲೂ ಯಾರೋ ಒಬ್ಬನಿಗೆ ತನ್ನಂತೆಯೇ ಆಸೆಯಾಗಿರಬಹುದು, ಹಾರಾಟ - ಹೊಸ ಆವಿಷ್ಕಾರದ ಕನಸುಗಳು ಮೈಗೂಡಿರಬಹುದು, ಜಾತಿಯಿಂದ ಬಹಿಷ್ಕೃತಗೊಂಡಿರಬಹುದು, ತಾನು ಅವನಿಗೆ ನೆರವಾಗಬೇಕೆಂಬ ಬಯಕೆಯಾಗುತ್ತದೆ. ನಾಯಕನ ಬಳಿ ಅನುಮತಿ ಪಡೆದು ಭುವಿಗೆ ಮರಳುತ್ತಾನೆ.
ಅಲ್ಲಿರುತ್ತಾನೆ ಫ್ಲೆಚರ್ ಲಿಂಡ್! ಜೊನಾಥನ್ನಂತೆಯೇ ಜಾತಿಯಿಂದ ಬಹಿಷ್ಕೃತಗೊಂಡ ಬೆಳ್ಳಕ್ಕಿ! ರೆಕ್ಕೆ ತುಂಬ ಕನಸ ತುಂಬಿಕೊಂಡ ಹಕ್ಕಿ! ತೆಕ್ಕೆ ತುಂಬ ಉತ್ಸಾಹ ಲೇಪಿಸಿಕೊಂಡ ಬಾನಾಡಿ! ಜೊನಾಥನ್ ಅವನ ಕೈ ಹಿಡಿಯುತ್ತಾನೆ. ಅವನ ಕನಸನ್ನು ನನಸು ಮಾಡುವಲ್ಲಿ ನೆರವಾಗುವುದಾಗಿ ಹೇಳಿಕೊಳ್ಳುತ್ತಾನೆ. "ಫ್ಲೆಚರ್.. ಕೇವಲ ಜಾತಿಯಿಂದ ಹೊರಹಾಕಲ್ಪಟ್ಟಿದ್ದಕ್ಕಾಗಿ ಚಿಂತಿಸುತ್ತ ಕೂರಬೇಡ.. ನಮ್ಮ ಗಮ್ಯಗಳೇ ಬೇರೆಯಿವೆ! ಬಾ, ನಾನು ನಿನಗೆ ಕಲಿಸುತ್ತೇನೆ! ಈ ಮಿತಿಗಳ ಮೀರುವುದನ್ನು ಹೇಳಿಕೊಡುತ್ತೇನೆ!
ಫ್ಲೆಚರ್ಗೆ ಕಲಿಕೆಯನ್ನು ಶುರು ಮಾಡುತ್ತಾನೆ. ಫ್ಲೆಚರ್ ಹಾರಾಟದ ಹೊಸ ತಂತ್ರಗಳನ್ನು, ರೆಕ್ಕೆಯನ್ನು ವಿವಿಧ ರೀತಿಯಲ್ಲಿ ಬಡಿಯುವುದನ್ನು, ದೇಹವನ್ನು ಬೇರೆ ಬೇರೆ ರೀತಿಯಲ್ಲಿ ಬಳುಕಿಸುವುದನ್ನು ಕಲಿಯುತ್ತಾನೆ.. ಮೊದಮೊದಲು ಈ ಇಬ್ಬರ ಹುಚ್ಚನ್ನು ಸಂಶಯದ, ಹಾಸ್ಯದ ದೃಷ್ಟಿಯಿಂದ ನೋಡುತ್ತಿದ್ದ ಸುಮಾರು ಹಕ್ಕಿಗಳಿಗೆ ದಿನಗಳೆದಂತೆ, ಸ್ಪೂರ್ತಿ ಬರುತ್ತದೆ.. ಮತ್ತೆಂಟು ಹಕ್ಕಿಗಳು ಮುಂದೆ ಬರುತ್ತವೆ.. ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಾಗುತ್ತದೆ.. ಶಾಲೆಯ ವ್ಯಾಪ್ತಿ ಅಪಾರವಾಗುತ್ತದೆ.. ಜೊನಾಥನ್ ಮತ್ತಷ್ಟು ಉತ್ಸಾಹದಿಂದ ಕಲಿಸತೊಡಗುತ್ತಾನೆ. ತಮಗೆ ತಲುಪಲಾಗದ ವೇಗವನ್ನು ಸಾಧಿಸಿರುವ ಜೊನಾಥನ್ನನ್ನು ಕೆಲ ಹಕ್ಕಿಗಳು "ನೀನು ದೇವರು" ಎಂದು ಸಂಬೋಧಿಸುತ್ತವೆ. ಜೊನಾಥನ್ ನಕ್ಕು "ಹಹ್ಹ.. ಹಾಗೆಲ್ಲ ಏನೂ ಇಲ್ಲ. ನಾನೂ ನಿಮ್ಮಂತೆ ಒಬ್ಬ ಬೆಳ್ಳಕ್ಕಿ ಅಷ್ಟೇ. ನಿಮಗೂ ನನ್ನಂತಾಗುವುದಕ್ಕೆ ಸಾಧ್ಯವಿದೆ. ಕಲಿಕೆ, ನಿಷ್ಠೆಯಿಂದ ಕಲಿಯಬೇಕಷ್ಟೇ. ಕನಸು ಬೇಕು. ನಂಬಿಕೆ ಬೇಕು. ಸ್ವತಂತ್ರರಾಗುವ ಹಂಬಲ ಬೇಕು. ಈಗ ಫ್ಲೆಚರ್ನನ್ನು ನೋಡಿ?" ಎನ್ನುತ್ತಾನೆ.
ಫ್ಲೆಚರ್ನನ್ನು ಕರೆದೊಯ್ಯುತ್ತಾನೆ.. ಗಿರಿಕಂದರಗಳಾಚೆ, ಮಳೆಮೋಡಗಳಾಚೆ ಹಾರಿಸಿಕೊಂಡು ಹೋಗುತ್ತಾನೆ.. ಫ್ಲೆಚರ್ ರೆಕ್ಕೆ ಬಡಿಯುತ್ತಾನೆ.. ನೂರು, ನೂರೈವತ್ತು, ಇನ್ನೂರು ಮೈಲಿಗಳ ವೇಗದಲ್ಲಿ ಚಲಿಸುವುದನ್ನು ಕಲಿಯುತ್ತಾನೆ.. ತನ್ನ ಗುರುವಿನ ವೇಗವನ್ನು ಸಮೀಪಿಸುತ್ತಾನೆ.. ಸ್ವರ್ಗದಂತಹುದೇ ಲೋಕವನ್ನು ಪ್ರವೇಶಿಸುತ್ತಾನೆ..
ಅದೊಂದು ಸಂಜೆ "ಫ್ಲೆಚರ್! ನೀನೀಗ ಮೊದಲ ಹಂತವನ್ನು ಪೂರೈಸಿದ್ದೀಯ! ನೀನೀಗ ಭುವಿಗೆ ಮರಳಬೇಕು. ನಿನ್ನ ಹಾಗೇ ಉತ್ಸಾಹಿಗಳಾಗಿರುವ ಬೆಳ್ಳಕ್ಕಿಗಳಿಗೆ ಕಲಿಸಬೇಕು.. ನೀನೇ ಮುಂದಾಳತ್ವ ವಹಿಸಿ ಅವರನ್ನು ಕರೆತರಬೇಕು.. ನೀನೂ ಕಲಿಯುತ್ತಿರಬೇಕು: ನನ್ನಂತೆ, ದಿನದಿನವೂ!" ಅಷ್ಟಂದು ಜೊನಾಥನ್ ಮಾಯವಾಗುತ್ತಾನೆ.
ಎಷ್ಟೋ ತಿಂಗಳ-ವರ್ಷಗಳ ಬಳಿಕ ನೋಡಿದರೆ, ಫ್ಲೆಚರ್ನಂತುಹುದೇ ಅದೆಷ್ಟೋ ಬೆಳ್ಳಕ್ಕಿಗಳು ಪರಿಪೂರ್ಣತೆಯೆಂಬುದೂ ಒಂದು ಹುಸಿ-ಮಿತಿ ಎಂಬುದನ್ನು ಅರಿತು, ಸ್ವರ್ಗದಂತಹ ಲೋಕದಲ್ಲಿ, ಬೆಳಕಿನ ವೇಗದಲ್ಲಿ ಹಾರಾಡುತ್ತಾ, ಮತ್ತೂ ಕಲಿಯುತ್ತಿರುವುದು ಕಾಣುತ್ತಿರುತ್ತದೆ..
* * *
ಕಣ್ಣು ಮಿಟುಕಿಸದೇ ಕತೆ ಕೇಳುತ್ತಿದ್ದ ಚುಂಚು "ಮತ್ತೆ ಈಗ ಜೊನಾಥನ್ ಎಲ್ಲಿ?" ಕೇಳಿತು.
"ಅವನೀಗ ನಮ್ಮ ಹೃದಯದಲ್ಲಿ ಕಣೇ!" ಎಂದೆ.
ಚುಂಚುವಿನ ಕಣ್ಣಲ್ಲಿ ಮಿಂಚು! ಅದು ಅನಿರ್ವಚನೀಯ ಬೆರಗಿನಲ್ಲಿ, ನಿರ್ಭಾರಗೊಂಡಂತೆ, ನನ್ನ ಹೆಗಲಿನಿಂದ ಹಾರಿ, ಸುತ್ತಲಿದ್ದ ಕತ್ತಲ ಕಣಗಳೆಲ್ಲ ಅತ್ತಿತ್ತ ಆಗುವಂತೆ ರೆಕ್ಕೆ ಬಡಿಯಿತು. "ನಾನೂ... ಜೊನಾಥನ್ನಂತಾಗಬೇಕು ಚುಚ್ಚುತಾ.." ಸ್ವಗತದಂತಹ, ಆದರೆ ದೃಢ ದನಿ.
"ಹಹ್! ನೀನಷ್ಟೇ ಅಲ್ಲ ಚುಂಚು; ನಾನೂ ಆಗಬೇಕು.. ಮೀರಬೇಕು ನಿಯಮಗಳ, ಎಲ್ಲೆಗಳ, ಮಿತಿಗಳ, ಅಸಾಧ್ಯಗಳ... ಆಗ ಗಾಳಕ್ಕೆ ಸಿಕ್ಕುವುದು ಮೀನಷ್ಟೇ ಅಲ್ಲ; ಏನು ಬೇಕಾದರೂ ಆಗಿರಬಹುದು! ಅಲ್ವಾ?" ಉಸುರಿದೆ.
ಹಳ್ಳದ ನೀರ ಕನ್ನಡಿಯಲ್ಲಿ ಈಗ ತಾನೂ ಪ್ರತಿಫಲಿಸುತ್ತಿದ್ದ ಚಂದಿರ ಹೌದೌದೆಂದು ತಲೆದೂಗಿದಂತೆನಿಸಿತು. ನೀರಲ್ಲಿ ಮುಳುಗಿದ್ದ ಗಾಳದ ದಾರವನ್ನು ಮೇಲಕ್ಕೆತ್ತಿ, ಕೋಲಿಗೆ ಸುತ್ತಿಕೊಂಡು, ಹೆಗಲ ಮೇಲಿಟ್ಟುಕೊಂಡು ಮನೆಯತ್ತ ಹೊರಟೆ. ಚುಂಚು, ನನಗಿಂತ ಮುಂದೆ ಮುಂದೆ!
* * *
ಈ ಎರಡು ವರ್ಷದ ಅವಧಿಯಲ್ಲಿ ಬ್ಲಾಗ ದಾರಿಯಲ್ಲಿ ಸಿಕ್ಕ, ಮೂವತ್ಮೂರೂ ಚಿಲ್ಲರೆ ಸಾವಿರ ಹಿಟ್ಟುಗಳಿಗೆ ಕಾರಣರಾದ, ಜೀವಗಳಿಗೆಲ್ಲ ಧನ್ಯವಾದ. ತಮ್ಮ ಸಲಹೆ, ಅಭಿಪ್ರಾಯ, ಪ್ರೀತಿ, ಮುನಿಸುಗಳಿಂದ ನನ್ನ ಬರಹಗಳನ್ನು ತಿದ್ದಿಕೊಳ್ಳಲಿಕ್ಕೆ ಮತ್ತು ಹೊಸ ಬರಹಗಳನ್ನು ಬರೆಯುವುದಕ್ಕೆ ನೆರವಾಗುತ್ತಿರುವ ಎಲ್ಲರಿಗೂ ಕೃತಜ್ಞ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಾನು ಪೋಸ್ಟ್ ಮಾಡಿದ ಬ್ಲಾಗುಗಳು ಕಡಿಮೆಯೇ. ಆದರೆ ಈ ವರ್ಷದಲ್ಲಿ ಬ್ಲಾಗೇತರವಾಗಿಯೂ ನನ್ನ ಬರಹಗಳು ಅಲ್ಲಲ್ಲಿ ಕಾಣಿಸಿಕೊಂಡವು. ’ಚಿತ್ರಚಾಪ’, ಪ್ರಣತಿಯ ಬ್ಲಾಗರ್ಸ್ ಮೀಟ್, ಎಲ್ಲಾ ಈ ವರ್ಷದ ಅಷ್ಟಿಷ್ಟು ಖುಶಿಯ ಖಾತೆಗೆ.
ಕಲಿತದ್ದು ಬಹಳ; ಕಲಿಯಬೇಕಾದ್ದು ಅಮಿತ. ನಿಮ್ಮ ಪ್ರೀತಿಗೆ ನಾನು ಮೂಕ.
ಥ್ಯಾಂಕ್ಸ್!
19 comments:
ಹ್ಯಾಪಿ ಬರ್ಥ್ ಡೇ, ನಿಮ್ಮ ಬ್ಲಾಗ್ ಮರಿಗೆ! ನಿಮ್ಮ ಬುಟ್ಟಿಯಿಂದ ಇನ್ನೂ ಲೇಖನಗಳು ಬರಲಿ.
~ಮಧು
ಶುಭಮಸ್ತು.
ನಾನು ಮೊದಲು ಓದಿದ ಬ್ಲಾಗು ನಿನ್ನದೇ.. ಆವತ್ತಿಗೂ, ಇವತ್ತಿಗೂ ನೀನು ಹಾಗೆ ಹಾಗೇ ಇದ್ದೀಯ! ಭಾವುಕ, ಆಶಾವಾದಿ ಮತ್ತು ಹಠಮಾರಿ!:)
ಮತ್ತೊಮ್ಮೆ, ಶುಭವಾಗಲಿ.
Happy Birthday to Mauna gaaLa.
nanaginta ondu varsha 3 tingaLu senior neevu!
shuru mADi varshadoLagE much haki biDuvA antidde nAnu... ninna asakti nanage mAdari.
blog nirantaravagirali....
nalme,
Chetanakka
ಪುಟ್ಟಣ್ಣಾ...
ಹುಟ್ಟುಹಬ್ಬದ ಶುಭಾಶಯಗಳು ನಿನ್ನ ಬ್ಲಾಗಿಗೆ.
ಹೀಗೆಯೇ ಬರೀತಾ ಇರು, ಓದುತ್ತಲಿರುತ್ತೇನೆ.
Happy birthday to MounagaaLa. :)
happy happy birthday "ಮೌನಗಾಳ"
ಇನ್ನು ಜಾಸ್ತಿ ಜಾಸ್ತಿ ಬರಿಬೇಕು ನೀನು .ನನ್ನ ಇಷ್ಟವಾದ ಮತ್ತು ಇಷ್ಟವಾಗುತ್ತಲೇ ಇರುವ ಬ್ಲಾಗ್.
ಪುಟ್ಟಣ್ಣ all the best.
ಹುಟ್ಟುಹಬ್ಬದ ಶುಭಾಶಯಗಳು. ಜೋನಾಥನ್ನ ಉತ್ಸಾಹ ನಮ್ಮೆಲ್ಲರಲ್ಲೂ ತುಂಬಲಿ ಎಂದು ಹಾರೈಸುವೆ.
ಸುಶ್,
ಬ್ಲಾಗ್ ಮರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಸಂತೋಷ. ಪಾರ್ಟಿ ಎಲ್ಲಿ? ಹೋದ ವರ್ಷದ್ದೇ ಬಾಕಿ ಇದೆ. ಮನೆಗೆ ಕರ್ಕೊಂಡು ಹೋಗಿ ಊಟ ಹಾಕಿಸ್ತೇನೆ ಅಂದಿದ್ದೆ. ಹೋಗ್ಲಿ, ಹೋಟೆಲ್ ಅಲ್ಲಿ ಒಂದು ಟೀ ಕೂಡ ಇಲ್ಲ :(
ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು :)
ಹೀಗೆ ಬರೀತಾ ಇರು. :)
ಬ್ಲಾಗಿನ ಹೊಸ ರೂಪ ಚೆನ್ನಾಗಿದೆ.
Good translation for JOnathan Livingsron Sagull a strory by Richard Bach.......... let more things come into Kannada,and Let more things be created in Kannada
ಜಾನಥನ್ ಲಿವಿಂಗ್'ಸ್ಟನ್ ಕಥೆಯನ್ನು ಸೊಗಸಾಗಿ ಕನ್ನಡೀಕರಿಸಿದ್ದೀ. ಬ್ಲಾಗ್ ಮರಿಗೆ ಶುಭಾಶಯಗಳೊಂದಿಗೆ ನಿನಗೂ ಶುಭ ಹಾರೈಕೆಗಳು.
ಜುಲೈ ಕೊನೆ ವಾರದಲ್ಲಿ ಪಾರ್ಟಿಗೆ ರೆಡಿಯಾಗು. ಸ್ನೇಹಿತೆಯೊಬ್ಬರ ಜೊತೆಗೂಡಿ ನಿಮ್ಮನ್ನೆಲ್ಲ ಭೇಟಿಯಾಗುವ ತವಕ.
ಮುಂದಿನ ಬ್ಲಾಗರ್ಸ್ ಮೀಟ್ ಜುಲೈ ೨೬-ಶನಿವಾರ ಅಥವಾ ೨೭-ಭಾನುವಾರವಾ? ನಾವಂತೂ ತಯಾರು!!
ಸುಶ್ರುತ,
ಜೊನಾಥನ್ ಕಥೆ ನಿಜಕ್ಕೂ ಸ್ಪೂರ್ತಿದಾಯಕ. ಹೊಸತರ ಸೃಷ್ಟಿಗಾಗಿ ನಿಯಮಗಳನ್ನು ಮುರಿಯುವ ಧೈರ್ಯ ನಮ್ಮೆಲ್ಲರಿಗೂ ಬರಲಿ.
ಎರಡು ವರ್ಷಗಳಲ್ಲಿ ನಿಮ್ಮದೇ ಶೈಲಿ ರೂಪಿಸಿಕೊಂಡಿದ್ದೀರಿ, ನಿಮ್ಮದೇ ಓದುಗ ಬಳಗ ಸೃಷ್ಟಿಸಿಕೊಂಡಿದ್ದೀರಿ. ವೇದಿಕೆಯಲ್ಲಿ ಉಪನ್ಯಾಸಕ್ಕಿಂತ ಎಷ್ಟೋ ಪಾಲು ದೊಡ್ಡದಿದು.ಶುಭಾಶಯಗಳು.
ಜೊನಾಥನ್ ಲಿವಿಂಗ್ಸ್ಟನ್ ಕಥೆ ರಾಶಿ ಚೆನ್ನಾಗಿ ಬರದ್ದೆ.. ಹಿಂಗೇ ಬರೀತಾ ಇರು...
ಮೌನಗಾಳ ಇನ್ನೂ ಚೆನ್ನಾಗಿ ಮೀನುಗಳನ್ನು ಹಿಡಿಯಲಿ! ಅದಕ್ಕೆ ಹುಟ್ಟುಹಬ್ಬದ ಶುಭಾಶಯಗಳು.
ಚುಂಚು ಇನ್ನಷ್ಟು ಕಥೆಗೆ ಹೀರೊಯಿನ್ ಆಗ್ಲಿ... ಶುಭವಾಗಲಿ :)
ಹ್ಯಾಪ್ಪಿ ಬರ್ಥ್ಡೇ ಟು ಮೌನಗಾಳ! ಹುಟ್ಟುಹಬ್ಬದ ಪೋಸ್ಟಿಗೆ ತುಂಬಾ ಒಳ್ಳೇ ಸೆಲೆಕ್ಶನ್ನು, ನಿರ್ವಹಿಸಿರೋ ರೀತಿಯಂತೂ ತುಂಬಾನೇ ಚೆನ್ನಾಗಿದೆ, ಬರೀತಿರಿ, ನಿಮ್ಮ ಗಮ್ಯದ ವಿಸ್ತಾರ ಹೆಚ್ಚುತ್ತಲೇ ಇರ್ಲಿ:)
ಥ್ಯಾಂಕ್ಸ್ ಎವೆರಿಬಡೀ..
ನಿಧಿ,
'ಹಠಮಾರಿ'??! ಬಹುಶಃ 'ನನ್ನ ಬಗ್ಗೆ' ಲಿಸ್ಟಿಗೆ ಇದ್ನೂ ಒಂದನ್ನ ಸೇರ್ಸಲಕ್ಕಾ ಹಂಗರೆ? ;)
ಮನಸ್ವಿನಿ,
ನೆಕ್ಸ್ಟ್ ಟೈಮ್ ಸಿಕ್ಕಿದಾಗ್ ನೆನ್ಪ್ ಮಾಡು ಅಕಾ? ಕೊಡುಸ್ತಿ ಎಲ್ಲಾ ಸೇರಿ ಒಂದೇ ಪಾರ್ಟಿ. ;-)
ಸುಪ್ತದೀಪ್ತಿ,
ಹೊಸ ಆಫರ್! ಅದ್ಕೇನಂತೆ? ಸಿಗೋಣ!
ಶ್ರೀ,
'ಜೊನಾಥನ್..' ಪುಸ್ತಕವನ್ನು ಗಿಫ್ಟಿಸಿದ್ದಕ್ಕೆ ನಿಂಗೊಂದು ಸ್ಪೆಶಲ್ ಥ್ಯಾಂಕ್ಸ್!
sorry for late comment. belated birthday wishes to mouna gaala. thanks for your writings.
hey ... nandoo ondu wishes ... heege bareetiru :-)
hi... i was searching for this tory in kannada. Good work. Its very easy to read the story but very difficult to digest. Very kind of you.
Hi Sushruta, I happy to see some one writting on Jonathan, the livingstone seagull. (I randomly enter into your site when searching for Nemichandra's write up on Jonathan).
I admire this book, and any samll effort to give that to readers in Kannada is good. Thanks for sharing this story in your own way
Post a Comment